ನಾನು ಮೆಚ್ಚಿದ ವಾಟ್ಸಪ್

Wednesday, April 4, 2018

ಇಂದಿನ ಇತಿಹಾಸ History Today ಏಪ್ರಿಲ್ 03

ಇಂದಿನ ಇತಿಹಾಸ History Today ಏಪ್ರಿಲ್ 03
 2018: ನವದೆಹಲಿ:  ಸುಳ್ಳು ಸುದ್ದಿ (ಫೇಕ್ ನ್ಯೂಸ್) ಕುರಿತ ಪತ್ರಿಕಾ ಪ್ರಕಟಣೆಯನ್ನು ಹಿಂತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ದೇಶನ ನೀಡಿದ್ದು, ಅದನ್ನು ಅನುಸರಿಸಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ‘ಪತ್ರಕರ್ತರ ಮಾನ್ಯತೆ’  ಕುರಿತ ಪತ್ರಿಕಾ ಪ್ರಕಟಣೆಯನ್ನು ಹಿಂತೆಗೆದುಕೊಂಡಿತು. ಸುಳ್ಳು ಸುದ್ದಿಗೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಈ ವಿಚಾರದ ಬಗ್ಗೆ ಭಾರತೀಯ ಪತ್ರಿಕಾ ಮಂಡಳಿ ಮಾತ್ರವೇ ವ್ಯವಹರಿಸಬೇಕು ಎಂದು ಪ್ರಧಾನಿ ಸೂಚಿಸಿರುವುದಾಗಿ ಪ್ರಧಾನ ಮಂತ್ರಿಯವರ ಕಚೇರಿ ಮೂಲಗಳು ತಿಳಿಸಿದವು.  ‘ಸುಳ್ಳು ಸುದ್ದಿ ಸೃಷ್ಟಿತ ಚರ್ಚೆಯ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿಯ ವಿವರಣೆ ನೀಡುವಂತೆ ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರೆಸ್ ಇನ್‌ಫಾರ್‍ಮೇಷನ್ ಬ್ಯೂರೋ (ಪಿಐಬಿ) ಮಾನ್ಯತಾ ಮಾರ್ಗದರ್ಶಿ ಸೂತ್ರಗಳು ಭಾರತೀಯ ಪತ್ರಿಕಾ ಮಂಡಳಿ ಮತ್ತು ಸುದ್ದಿ ಪ್ರಸಾರಕರ ಸಂಘಕ್ಕೆ ಸೂಚಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಸ್ಮೃತಿ ಇರಾನಿ ಅವರು ಟ್ವೀಟ್ ಮಾಡಿದ್ದರು.  ಇದಕ್ಕೆ ಸಂಬಂಧಿಸಿದಂತೆ ಧನಾತ್ಮಕ ಸಲಹೆಗಳನ್ನು ನೀಡಲು ಹಲವಾರು ಪತ್ರಕರ್ತರು ಮತ್ತು ಸಂಘಟನೆಗಳು ಮುಂದೆ ಬಂದಿವೆ ಎಂದೂ ಅವರು ಟ್ವೀಟ್ ಮಾಡಿದ್ದರು.  ‘ಸುಳ್ಳು ಸುದ್ದಿ ಹಾವಳಿಯ ವಿರುದ್ಧ ನಾವೆಲ್ಲರೂ ಜೊತೆಯಾಗಿ ಹೋರಾಡಲು ಸಾಧ್ಯವಾಗುವಂತೆ ಮಾಡಲು ಮತ್ತು ನೈತಿಕ ಪತ್ರಿಕೋದ್ಯಮವನ್ನು ಎತ್ತಿ ಹಿಡಿಯಲು ಸಲಹೆ ನೀಡುವ ಪತ್ರಕರ್ತರು, ಪತ್ರಕರ್ತ ಸಂಘಟಗಳ ಜೊತೆಗೆ ಕಾರ್ಯನಿರ್ವಹಿಸಲು ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಲು ಸಂತಸವಾಗುತ್ತದೆ. ಆಸಕ್ತ ಪತ್ರಕರ್ತರು ಮತ್ತು / ಅಥವಾ ಸಂಘಟನೆಗಳು ಈ ನಿಟ್ಟಿನಲ್ಲಿ ನನ್ನನ್ನು ಸಂಪರ್ಕಿಸಬಹುದು ಎಂದೂ ಇರಾನಿ ಟ್ವೀಟ್ ಮಾಡಿದ್ದರು.  ಆದದ್ದೇನು?  ಸ್ಮೃತಿ ಇರಾನಿ ಅವರು ಹಿಂದಿನ ದಿನ ಪತ್ರಕರ್ತರ ಮಾನ್ಯತಾ ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿ ಮಾಡಿದ್ದರು.  ತಿದ್ದುಪಡಿ ಪ್ರಕಾರ ಮುದ್ರಣ ಅಥವಾ ಟೆಲಿವಿಷನ್ ಪತ್ರಕರ್ತ ವರದಿ ಮಾಡಿದ ಸುದ್ದಿ ಸುಳ್ಳು ಎಂಬುದು ಕಂಡು ಬಂದರೆ ಆತನ ಮಾನ್ಯತೆಯನ್ನು ರದ್ದು ಪಡಿಸಬಹುದು ಎಂದು ಸಚಿವಾಲಯ ತಿಳಿಸಿತ್ತು.  ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಾವಳಿ ಹೆಚ್ಚುತ್ತಿರುವುದನ್ನು ಗಮನಿಸಿ, ಸರ್ಕಾರವು ಪತ್ರಕರ್ತರ ಮಾನ್ಯತಾ ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿ ತಂದಿದೆ ಎಂದು ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿತ್ತು.  ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಅವರು ಸುಳ್ಳು  ಸುದ್ದಿಯನ್ನು ನಿಗ್ರಹಿಸುವ ಸರ್ಕಾರದ ಯತ್ನವನ್ನು ಭಾನುವಾರ ಪ್ರಶ್ನಿಸಿದ್ದರು. ಆಡಳಿತಕ್ಕೆ ಸಹಿಸಲಾಗದ ಸುದ್ದಿಗಳನ್ನು ವರದಿ ಮಾಡದಂತೆ ಪತ್ರಕರ್ತರನ್ನು ತಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆಯೇ ಎಂದು ಅವರು ಪ್ರಶ್ನಿಸಿದ್ದರು.  ‘ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಯತ್ನವನ್ನು ನಾನು ಮೆಚ್ಚುತ್ತೇನೆ. ಆದರೆ ನನ್ನ ಕೆಲವು ಪ್ರಶ್ನೆಗಳಿವೆ: ಪತ್ರಕರ್ತನ ಮಾನ್ಯತೆ ಅಮಾನತುಗೊಳಿಸುವ ಸಲುವಾಗಿಯೇ ದೂರುಗಳು ದಾಖಲಾಗಲು ಸಾಧ್ಯವಿಲ್ಲವೇ? ಈ ಮಾರ್ಗದರ್ಶಿ ಸೂತ್ರಗಳೂ ಸುಳ್ಳು ಸುದ್ದಿಗಳನ್ನು ನಿಗ್ರಹಿಸುತ್ತವೆ ಎಂಬ ಖಾತರಿ ಏನು? ಅಥವಾ ಇದು ಆಡಳಿತಕ್ಕೆ ಅನುಕೂಲಕರವಲ್ಲದ ಸುದ್ದಿಗಳನ್ನು ಪ್ರಕಟಿಸದಂತೆ ನೈಜ ಪತ್ರಕರ್ತರನ್ನು ತಡೆಯುವ ಯತ್ನವೇ? ಎಂದು ಪಟೇಲ್ ಟ್ವೀಟ್ ಮಾಡಿ ಕೇಳಿದ್ದರು.  ಹಲವಾರು ಹಿರಿಯ ಪತ್ರಕರ್ತರೂ ಸರ್ಕಾರದ ಕ್ರಮವನ್ನು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಬಣ್ಣಿಸಿದ್ದರು.  ‘ತಪ್ಪು ಮಾಡಬೇಡಿ. ಇದು ಮುಖ್ಯ ಮಾಧ್ಯಮದ ಮೇಲಿನ ಹಲ್ಲೆ. ಇದು ರಾಜೀವ್ ಗಾಂಧಿ ಅವರು ’ಮಾನಹಾನಿ ನಿಗ್ರಹ ಮಸೂದೆ ತಂದಂತಹುದೇ ಕ್ಷಣ. ಎಲ್ಲ ಮಾಧ್ಯಮಗಳೂ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆದು ಇದನ್ನು ವಿರೋಧಿಸಬೇಕು ಎಂದು ಹಿರಿಯ ಪತ್ರ ಶೇಖರ ಗುಪ್ತ ಆಗ್ರಹಿಸಿದ್ದರು. ನಿಯಮ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್, ಸಿಪಿಎಂ ಮತ್ತಿತರ ಪ್ರತಿಪಕ್ಷಗಳು ಅಭಿಪ್ರಾಯಪಟ್ಟಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಕೇಂದ್ರದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.  ತನ್ನ ಈದಿನದ ಆದೇಶದೊಂದಿಗೆ ಸರ್ಕಾರವು ಮಾನ್ಯತೆ ಹೊಂದಿದ ಅಂದರೆ ಮುಖ್ಯ ಮಾಧ್ಯಮವನ್ನು ದಂಡಿಸಲು ಮಾತ್ರವೇ ಬಯಸಿದೆ ಎಂಬುದನ್ನು ಸ್ವತಃ ಸ್ಪಷ್ಟ ಪಡಿಸಿದೆ. ವಾರ್ತಾ ಮತ್ತು ಸಚಿವಾಲಯದ ಸುಳ್ಳು ಸುದ್ದಿ ಬೆದರಿಕೆಯು ಪತ್ರಿಕಾ ನೈತಿಕತೆಯನ್ನು ಬಹಿರಂಗವಾಗಿ ಉಲ್ಲಂಘಿಸಿತ್ತಿರುವ ವೆಬ್ ಸೈಟುಗಳಿಗೆ ವಿಸ್ತರಣೆಯಾಗಿಲ್ಲ. ಈ ವೆಬ್‌ಸೈಟುಗಳು ಕೆಲವೊಂದು ಬರಹಗಳನ್ನು ಸಚಿವರನ್ನು ಉಲ್ಲೇಖಿಸಿಯೇ ಬರೆಯುತ್ತಿವೆ ಎಂದು ಪತ್ರಕರ್ತೆ ಸುಹಾಸಿನಿ ಟ್ವೀಟ್ ಮಾಡಿದರು.

ಪ್ರಕಟಣೆಯಲ್ಲೇನಿತ್ತು?: ಸುಳ್ಳು ಸುದ್ದಿ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪ ಸಾಬೀತಾದರೆ, ಮೊದಲ ತಪ್ಪಿಗೆ ಆರು ತಿಂಗಳ ಮಟ್ಟಿಗೆ, ಎರಡನೇ ಬಾರಿಯ ತಪ್ಪಿಗೆ ಒಂದು ವರ್ಷದ ಮಟ್ಟಿಗೆ ಮತ್ತು ಮೂರನೇ ಬಾರಿಗೆ ತಪ್ಪು ಮಾಡಿದಲ್ಲಿ ಶಾಶ್ವತವಾಗಿ ಮಾನ್ಯತೆ ರದ್ದು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿತ್ತು.  ಮುದ್ರಣ ಮಾಧ್ಯಮಗಳಿಗೆ ಸಂಬಂಧಿಸಿ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಭಾರತೀಯ ಪತ್ರಿಕಾ ಮಂಡಳಿಗೆ (ಪಿಸಿಐ) ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಸುದ್ದಿ ಪ್ರಸಾರಕರ ಸಂಘಟನೆಗೆ (ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್/ಎನ್‌ಬಿಎ) ವಹಿಸಲಾಗುವುದು. ಈ ಸಂಸ್ಥೆಗಳು ೧೫ ದಿನಗಳ ಒಳಗೆ ನಿರ್ಣಯ ಕೈಗೊಳ್ಳಬೇಕೆಂದು ನಿರೀಕ್ಷಿಸಲಾಗಿದೆ. ಆರೋಪ ದಾಖಲಾದ ತಕ್ಷಣದಿಂದ ವಿಚಾರಣೆ ಪೂರ್ಣಗೊಳ್ಳುವವರೆಗೆ ಅನ್ವಯವಾಗುವಂತೆ ಆರೋಪಿ ಪತ್ರಕರ್ತರ ಮಾನ್ಯತೆಯನ್ನು ಅಮಾನತಿನಲ್ಲಿಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

2018: ನವದೆಹಲಿ: ೧೯೮೯ರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಮಾರ್ಚ್ ೨೦ರ ತೀರ್ಪಿಗೆ ತಾನು ಬದ್ಧವಾಗಿರುವುದಾಗಿ ಸುಪ್ರೀಂಕೋರ್ಟ್ ಇಲ್ಲಿ ಸ್ಪಷ್ಟ ಪಡಿಸಿತು. ಕಾಯ್ದೆಯ ಅಡಿಯಲ್ಲಿ ನಿರಂಕುಶ ಬಂಧನಗಳಿಗೆ ಮುಗ್ಧರು ಬಲಿಯಾಗದಂತೆ ರಕ್ಷಣೆಯನ್ನು ಒದಗಿಸುವ ಕೆಲಸವನ್ನು ಮಾತ್ರವೇ ಕೋರ್ಟ್ ಮಾಡಿದೆ ಎಂದು ಅದು ತಿಳಿಸಿತು.  ಎಫ್ ಐಆರ್ ದಾಖಲಿಗೆ ಮುನ್ನ ಪ್ರಾಥಮಿಕ ತನಿಖೆ ನಡೆಸಬೇಕು ಎಂಬ ಕೋರ್ಟ್ ನಿರ್ದೇಶನಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಸರ್ಕಾರ ತನ್ನ ಮರುಪರಿಶೀಲನಾ ಅರ್ಜಿಯಲ್ಲಿ ಕೋರಿದಾಗ ಹಾಗೆ ಮಾಡಲು ನ್ಯಾಯಮೂರ್ತಿ ಎ.ಕೆ. ಗೋಯೆಲ್ ನಿರಾಕರಿಸಿದರು. ೧೦ ದಿನಗಳ ಬಳಿಕ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ನ್ಯಾಯಾಲಯವು ಸೂಚಿಸಿತು.
ನ್ಯಾಯಮೂರ್ತಿಗಳಾದ ಗೋಯೆಲ್ ಮತ್ತು ಯು.ಯು. ಲಲಿತ್ ಅವರನ್ನು ಒಳಗೊಂಡ ಪೀಠವು ತನ್ನ ೮೯ ಪುಟಗಳ ತೀರ್ಪಿನಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ೧೯೮೯ರ ಸೆಕ್ಷನ್ ೧೮ರ ಅಡಿಯಲ್ಲಿ ಆರೋಪಿತ ವ್ಯಕ್ತಿಗಳಿಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಕಾಯ್ದೆಯ ಪ್ರಕಾರ ಸೆಕ್ಷನ್ ೧೮ ದಲಿತರ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರದಂತೆ ನಿಷೇಧಿಸಿತ್ತು. ಎರಡನೇಯದಾಗಿ ದೂರಿನಲ್ಲಿ ತಿರುಳು ಇದೆಯೇ ಎಂಬ ಬಗ್ಗೆ ಪರಿಶೀಲಿಸಲು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅವರು ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಮಾತ್ರವೇ ಎಫ್ ಐಆರ್ ದಾಖಲಿಸಬೇಕು ಎಂದು ಸುಪ್ರೀಕೋರ್ಟ್ ತೀರ್ಪು ನಿರ್ದೇಶಿಸಿತ್ತು. ತನ್ನ ನಿರ್ದೇಶನದ ಪಾಲನೆಯಾಗದೇ ಇದ್ದಲ್ಲಿ ಅದು ಸುಪ್ರೀಂಕೋರ್ಟ್ ನಿಂದನೆಯಾಗುತ್ತದೆ ಎಂದೂ ಪೀಠ ಎಚ್ಚರಿಕೆ ನೀಡಿತ್ತು.  ‘ರಸ್ತೆಗಳಲ್ಲಿ ಚಳವಳಿ ನಡೆಸುತ್ತಿರುವವರು ನಮ್ಮ ತೀರ್ಪನ್ನು ಓದದೇ ಇರಬಹುದು. ಕೆಲವೊಮ್ಮೆ ಸ್ಥಾಪಿತ ಹಿತಾಸಕ್ತಿಗಳೂ ಇಂತಹುದರಲ್ಲಿ ಶಾಮೀಲಾಗಿರುತ್ತವೆ. ನಮ್ಮ ಏಕೈಕ ಕಾಳಜಿ ಮುಗ್ಧರು ಕಂಬಿಗಳ ಹಿಂದಕ್ಕೆ ಹೋಗಬಾರದು ಎಂಬುದಷ್ಟೆ. ನಾವು ಕಾಯ್ದೆಯ ವಿರುದ್ಧ ಇಲ್ಲವೇ ಇಲ್ಲ, ಆದರೆ ಮುಗ್ಧರು ಏಕಪಕ್ಷೀಯವಾಗಿ ಶಿಕ್ಷೆಗೆ ಒಳಗಾಗಬಾರದು ಎಂಬುದಷ್ಟೇ ನಮ್ಮ ಕಳಕಳಿ. ಪರಿಶೀಲನೆಯೇ ಇಲ್ಲದೆ ಜನರನ್ನು ಬಂಧಿಸಬೇಕು ಎಂದು ಸರ್ಕಾರ ಏಕೆ ಬಯಸುತ್ತದೆ?’ ಎಂದು ಪೀಠ ಪ್ರಶ್ನಿಸಿತು.  ಸರ್ಕಾರವು ಮರುಪರಿಶೀಲನಾ ಅರ್ಜಿ ಸಲ್ಲಿಸಿರುವುದನ್ನು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ನ್ಯಾಯಮೂರ್ತಿ ಆದರ್ಶಕುಮಾರ ಗೋಯೆಲ್ ಅವರ ಪೀಠದ ಮುಂದೆ ಪ್ರಸ್ತಾಪಿಸಿದಾಗ, ಅದನ್ನು ಆಲಿಸಲು ಪೀಠ ಒಪ್ಪಿತು.   ಮನವಿ ಬಗ್ಗೆ ತುರ್ತು ವಿಚಾರಣೆ ನಡೆಸಲು ಮತ್ತು ಎಸ್ ಸಿ/ ಎಸ್‌ಟಿ ಕಾಯ್ದೆಗೆ ಸಂಬಂಧಿಸಿದ ತನ್ನ ಇತ್ತೀಚಿನ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಮತ್ತು ಅದನ್ನು ಮರುಪರಿಶೀಲಿಸಬೇಕು ಎಂದು ಕೋರಿದ ಅರ್ಜಿಯ ತುರ್ತು ವಿಚಾರಣೆಗೆ ಒಂದು ದಿನ ಹಿಂದೆ ಸುಪ್ರೀಂಕೋರ್ಟ್ ನಿರಾಕರಿಸಿತ್ತು.  ತೀರ್ಪು ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂಬುದಾಗಿ ಆಪಾದಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ನಡೆದ ರಾಷ್ಟ್ರವ್ಯಾಪಿ ಭಾರತ ಬಂದ್ ಪ್ರತಿಭಟನೆ ವೇಳೆ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಕನಿಷ್ಠ ೯ ಜನ ಸಾವನ್ನಪ್ಪಿ,  ನೂರಾರು ಮಂದಿ ಗಾಯಗೊಂಡಿದ್ದರು.. ಪೊಲೀಸರು ಸಹಸ್ರಾರು ಮಂದಿಯನ್ನು ಬಂಧಿಸಿದ್ದರು.  ಅಮಿತ್ ಶಾ ಪ್ರತಿಕ್ರಿಯೆ: ಹಿಂಸಾತ್ಮಕ ಭಾರತ ಬಂದ್ ಚಳವಳಿಯ ಒಂದು ದಿನದ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ’ಜನರಿಂದ ತಿರಸ್ಕೃತರಾದ ರಾಜಕೀಯ ಪಕ್ಷಗಳು ಮತ್ತು ಹಿಡಿಯಷ್ಟು ಮಂದಿ, ಜನರು ತೊಂದರೆಗೆ ಒಳಗಾಗುವಂತೆ ಮಾಡಿದರು ಎಂದು ಟೀಕಿಸಿದರು. ಸರಣಿ ಟ್ವೀಟ್ ಗಳ ಮೂಲಕ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದಲಿತ ಸಮುದಾಯವನ್ನು ಸಂಪರ್ಕಿಸಿದ ಶಾ, ದಲಿತ ಐಕಾನ್ ಭೀಮರಾವ್ ಅಂಬೇಡ್ಕರ್ ಅವರ ಬಗೆಗಿನ ಕಾಂಗ್ರೆಸ್ ವರ್ತನೆಯನ್ನೇ ಎತ್ತಿಹೇಳುವ ಮೂಲಕ ಕಾಂಗ್ರೆಸ್ ಪಕ್ಷವನ್ನೇ ಟೀಕಿಸಿದರು. ದಲಿತರ ಮೀಸಲಾತಿ ವಿಷಯದ ಬಗ್ಗೆ ಭಯದ ವಾತಾವರಣವನ್ನು ಸೃಷ್ಟಿಸುತ್ತಿರುವ ಸ್ಥಾಪಿತ ಹಿತಾಸಕ್ತ ಗುಂಪುಗಳನ್ನೂ ತರಾಟೆಗೆ ತೆಗೆದುಕೊಂಡ ಶಾ, ’ಚುನಾವಣೆ ಬಂದಾಗಲೆಲ್ಲ ಹೀಗೆ ಮಾಡಲಾಗುತ್ತದೆ. ಸರ್ಕಾರವು ಅವರ ಹಕ್ಕುಗಳ ರಕ್ಷಣೆಗೆ ಸರ್ವ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದು ಹೇಳಿದರು.  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಬಂದಂದಿನಿಂದಲೇ ಕೇಂದ್ರ ಸರ್ಕಾರವು ಕಾರ್‍ಯೋನ್ಮುಖವಾಗಿದ್ದು ದಲಿತರ ಹಕ್ಕುಗಳ ರಕ್ಷಣೆಗಾಗಿ ಪರಿಣಾಮಕಾರಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ ಎಂದು ಶಾ ನುಡಿದರು.  ’ನಾವು ಇದನ್ನು ನಿರೀಕ್ಷಿಸುತ್ತಿದ್ದೆವು. ಸರ್ಕಾರವು ತಿದ್ದುಪಡಿ ಮಾಡಬೇಕು ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯಿಸಿದರು.  ‘ಭಾರತ ಬಂದ್ ವೇಳೆಯಲ್ಲಿ ಸಂಭವಿಸಿದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಯಾವತಿ, ಹಿಂದುಳಿದವರಿಗೆ ಇನ್ನು ತಮ್ಮ ಸಂವಿಧಾನಬದ್ಧ ಹಕ್ಕುಗಳು ಲಭಿಸುತ್ತಿಲ್ಲ. ಬಿಜೆಪಿ ಯಾವಾಗಲೂ ಜಾತಿ ರಾಜಕೀಯ ಮಾಡುತ್ತದೆ. ಎಸ್ ಸಿ / ಎಸ್ ಟಿ ಕಾಯ್ದೆ ಕುರಿತ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರವು ಸಾಕಷ್ಟು ವಿಳಂಬ ಮಾಡಿತು. ಸಕಾಲದಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರೆ, ಯಾವುದೇ ಪ್ರತಿಭಟನಾ ಪ್ರದರ್ಶನಗಳು, ಭಾರತ ಬಂದ್ ನಡೆಯುತ್ತಿರಲೇ ಇಲ್ಲ ಎಂದು ಹೇಳಿದರು.  ಈ ಮಧ್ಯೆ ಮಧ್ಯ ಪ್ರದೇಶ ಪೊಲೀಸರು ಹಿಂಸಾಚಾರದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಸಂಬಂಧಿಸಿದಂತೆ ಭಿಂಡ್ ಜಿಲ್ಲೆಯಲ್ಲಿನ ಇಬ್ಬರು ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಿಸಿದರು.  ಗುಂಡೇಟು ತಗುಲಿದ ಬಳಿಕ ಸಾವನ್ನಪ್ಪಿದ ಮಹಾವೀರ್ ರಾಜ್ವತ್ ಸಾವಿಗೆ ಸಂಬಂಧಿಸಿದಂತೆ ಭಿಂಡ್ ನ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳ ವಿರುದ್ಧ ದೂರು ಬಂದಿದೆ ಎಂದು ಕಾನೂನು ಸುವ್ಯವಸ್ಥೆ ಐಜಿ ಮಕರಂದ ದೇವುಸ್ಕರ್ ಹೇಳಿದರು. ಮಹ್ಗಾಂವ್ ಪಟ್ಟಣದಲ್ಲಿ ಈದಿನ ಇನ್ನೊಂದು ಶವ ಪತ್ತೆಯಾಗಿದೆ. ಈ ವ್ಯಕ್ತಿಯನ್ನು ದಶರಥ ಜಾಧವ್ (೪೫) ಎಂಬುದಾಗಿ ಗುರುತಿಸಲಾಗಿದ್ದು, ಈತ ಲಾಠಿಯಂದ ಹೊಡೆದ ಗಾಯಗಳ ಪರಿಣಾಮವಾಗಿ ಈತ ಸತ್ತಿದ್ದಾನೆ ಎನ್ನಲಾಗಿದೆ ಎಂದು ಅವರು ನುಡಿದರು.

2018: ಜೈಪುರ: ರಾಜಸ್ಥಾನದ ಹಾಲಿ ಮತ್ತು ಮಾಜಿ ದಲಿತ ಶಾಸಕರ ಮನೆಗಳಿಗೆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿದ ಘಟನೆ ರಾಜ್ಯದ ಕರೌಲಿ ಜಿಲ್ಲೆಯ ಹಿಂದೌನ್ ಪಟ್ಟಣದಲ್ಲಿ ಮಧ್ಯಾಹ್ನ ಘಟಿಸಿದ್ದು, ಘಟನೆಯನು ಅನುಸರಿಸಿ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಯಿತು. ಹಿಂಸಾಚಾರದಲ್ಲಿ ಶಾಲೆಯೊಂದರ ಒಂದು ಡಜನ್ ಮಕ್ಕಳೂ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿತು. ಸುಮಾರು ೫೦೦೦ ಜನರ ಉದ್ರಿಕ್ತ ಗುಂಪು ಹಿಂದೌನ್ ಪಟ್ಟಣದಲ್ಲಿ ಹಾಲಿ ಶಾಸಕ ರಾಜಕುಮಾರಿ ಜಾತವ್ ಮತ್ತು ಮಾಜಿ ಶಾಸಕ ಭುರೋಸಿಲಾಲ್ ಜಾತವ್ ಅವರ ಮನೆಗಳಿಗೆ ಬೆಂಕಿ ಹಚ್ಚಿತು ಎಂದು ಕರೌಲಿ ಜಿಲ್ಲಾಧಿಕಾರಿ ಅಭಿಮನ್ನು ಕುಮಾರ್ ಹೇಳಿದರು.  ರಾಜಕುಮಾರಿ ಜಾತವ್ ಅವರು ಬಿಜೆಪಿಯ ಹಾಲಿ ಶಾಸಕರಾಗಿದ್ದರೆ, ಭರೋಸಿಲಾಲ್ ಜಾತವ್ ಅವರು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾಗಿದ್ದು, ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.  ದಲಿತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ವಿವಿಧ ರಾಜ್ಯಗಳಲ್ಲಿ ಹಿಂಸೆಗೆ ತಿರುಗಿದ ಒಂದು ದಿನದ ಬಳಿಕ ಈ ಘಟನೆ ಘಟಿಸಿತು. ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಗಣಿಸಿ ನಗರದಲ್ಲಿ ಕರ್ಫ್ಯೂ ವಿಧಿಸಲಾಯಿತು.  ಬೆಳಗ್ಗಿನಿಂದಲೇ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ ಎಂದು ಕುಮಾರ್ ನುಡಿದರು.  ಕಲ್ಲೆಸೆತ, ದೊಂಬಿಯಲ್ಲಿ ನಿರತವಾದ ಗುಂಪು ಬಳಿಕ ಶಾಸಕ ಹಾಗೂ ಮಾಜಿ ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿತು ಎಂದು ಅವರು ಹೇಳಿದರು.   ಹಿಂದೌನ್ ಪಟ್ಟಣದಲ್ಲಿ ವರ್ತಕರ ಸಂಘದ ಸದಸ್ಯರು ಮತ್ತು ಮೇಲ್ದರ್ಜೆಯ ಮಂದಿ ಉದ್ರಿಕ್ತಗೊಂಡಿದ್ದಾರೆ. ಅವರು ಈದಿನ ಮೆರವಣಿಗೆ ನಡೆಸಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನ ಹೆಚ್ಚಿರುವ ಪ್ರದೇಶಗಳಿಗೆ ಪ್ರವೇಶಿಸಲು ಯತ್ನಿಸಿದರು ಎಂದು ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಕಾನೂನು ಸುವ್ಯವಸ್ಥೆ) ಎನ್ ಆರ್ ಕೆ ರೆಡ್ಡಿ ತಿಳಿಸಿದರು.
ಉದ್ರಿಕ್ತರನ್ನು ಚದುರಿಸಲು ಪೊಲೀಸ್ ಪಡೆಗಳು ಆಶ್ರುವಾಯು ಮತ್ತು ಬೆತ್ತ ಪ್ರಹಾರದ ಜೊತೆಗೆ ರಬ್ಬರ್ ಗುಂಡುಗಳನ್ನೂ ಬಳಸಬೇಕಾಯಿತು ಎಂದು ಅವರು ನುಡಿದರು. ನಗರದ ಹಿಂದೆ, ದೊಂಬಿ ಮತ್ತು ಇತರ ಹಿಂಸಾಚಾರದ ಘಟನೆಗಳನ್ನು ಅನುಸರಿಸಿ ಹಿಂದೌನ್ ನಗರದಲ್ಲಿ ೪೦ ಜನರನ್ನು ಬಂಧಿಸಲಾಗದೆ ಎಂದು ಕರೌಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕಾಯಲ್ ತಿಳಿಸಿದರು.

2018: ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೧೮ರ ಸಾಲಿನಲ್ಲಿ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಗಳ ತನ್ನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟಾರೆ ಶ್ರೇಯಾಂಕದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ - ಐಐ ಎಸ್ ಸಿ) ಪ್ರಥಮ ಸ್ಥಾನವನ್ನು ಪಡೆಯಿತು.  ಭಾರತೀಯ ವಿಜ್ಞಾನ ಸಂಸ್ಥೆಯು ಒಟ್ಟಾರೆಯಾಗಿ ಪ್ರಥಮ ಶ್ರೇಯಾಂಕ ಪಡೆದಿದ್ದರೆ, ವಿಶ್ವವಿದ್ಯಾಲಯಗಳ ವಿಭಾಗದಲ್ಲೂ ೧ನೇ ಶ್ರೇಯಾಂಕಕ್ಕೆ ಪಾತ್ರವಾಯಿತು.  ಮ್ಯಾನೇಜ್ ಮೆಂಟ್ ಸಂಸ್ಥೆಗಳ ವಿಭಾಗದಲ್ಲಿ ಐಐಎಂ ಬೆಂಗಳೂರು ೨ನೇ ಶ್ರೇಯಾಂಕಕ್ಕೆ ಪಾತ್ರವಾಗಿದೆ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ೪ನೇ ಶ್ರೇಯಾಂಕಕ್ಕೆ ಪಾತ್ರವಾಯಿತು.  ಅತ್ಯುತ್ತಮ ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯನ್ನೂ ಮಾನವ ಸಂಪನ್ಮೂಲ ಸಚಿವಾಲಯ ಪ್ರಕಟಿಸಿದ್ದು ವಿವರ ಈ ಕೆಳಗಿನಂತಿದೆ.   ಒಟ್ಟಾರೆ:  ಶ್ರೇಯಾಂಕ ಶಿಕ್ಷಣ ಸಂಸ್ಥೆಗಳು:  ೧.     ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ೨ ಐಐಟಿ ಮದ್ರಾಸ್, ಚೆನ್ನೈ. ೩. ಐಐಟಿ ಬಾಂಬೆ,  ಮುಂಬೈ., ೪. ಐಐಟಿ ದೆಹಲಿ, ನವದೆಹಲಿ. ೫. ಐಐಟಿ ಖರಗಪುರ, ಖರಗಪುರ, ೬. ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯ, ನವದೆಹಲಿ. ೭.ಐಐಟಿ ಕಾನ್ಪುರ, ಕಾನ್ಪುರ. ೮. ಐಐಟಿ ರೂರ್ಕೀ, ರೂರ್ಕೀ, ೯. ಕಾಶಿ ಹಿಂದೂ ವಿಶ್ವ ವಿದ್ಯಾಲಯ, ವಾರಾಣಸಿ., ೧೦. ಅಣ್ಣಾ ವಿಶ್ವ ವಿದ್ಯಾಲಯ, ಚೆನ್ನೈ.  ಎಂಜಿನಿಯರಿಂಗ್ ಸಂಸ್ಥೆಗಳು:  ೧.         ಐಐಟಿ ಮದ್ರಾಸ್, ಚೆನ್ನೈ, ೨. ಐಐಟಿ ಬಾಂಬೆ, ಮುಂಬೈ, ೩. ಐಐಟಿ ದೆಹಲಿ, ನವದೆಹಲಿ, ೪. ಐಐಟಿ ಖರಗಪುರ, ಖರಗಪುರ, ೫. ಐಐಟಿ ಕಾನ್ಪುರ, ಕಾನ್ಪುರ,  ೬. ಐಐಟಿ ರೂರ್ಕೀ, ರೂರ್ಕೀ, ೭. ಐಐಟಿ ಗುವಾಹಟಿ, ಗುವಾಹಟಿ, ೮. ಅಣ್ಣಾ ವಿಶ್ವ ವಿದ್ಯಾಲಯ, ಚೆನ್ನೈ, ೯. ಐಐಟಿ ಹೈದರಾಬಾದ್, ಹೈದರಾಬಾದ್, ೧೦.ಇನ್ ಸ್ಟಿಟ್ಟೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ.  ಮ್ಯಾನೇಜ್ ಮೆಂಟ್ ಸಂಸ್ಥೆಗಳು:  ೧.         ಐಐಎಂ ಅಹಮದಾಬಾದ್, ಅಹಮದಾಬಾದ್, ೨. ಐಐಎಂ ಬೆಂಗಳೂರು, ಬೆಂಗಳೂರು, ೩. ಐಐಎಂ ಕಲ್ಕತ್ತ, ಕೋಲ್ಕತ, ೪. ಐಐಎಂ ಲಕ್ನೋ, ಲಕ್ನೋ, ೫. ಐಐಟಿ ಬಾಂಬೆ, ಮುಂಬೈ, ೬. ಐಐಎಂ ಕೋಳಿಕ್ಕೋಡ್, ಕೋಳಿಕ್ಕೋಡ್, ೭. ಐಐಟಿ ಖರಗಪುರ, ಖರಗಪುರ, ೮. ಐಐಟಿ ದೆಹಲಿ, ನವದೆಹಲಿ, ೯. ಐಐಟಿ ರೂರ್ಕೀ, ರೂರ್ಕಿ. ೧೦. ಎಕ್ಸ್ ಎಲ್ ಆರ್ ಐ, ಜೆಮ್ಶೆಡ್ ಪುರ.  ವಿಶ್ವ ವಿದ್ಯಾಲಯಗಳು:  ೧.       ಇಂಡಿಯನ್ ಇನ್ ಸ್ಟಿಟ್ಟೂಟ್ ಆಫ್ ಸೈನ್ಸ್, ಬೆಂಗಳೂರು, ೨. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ನವದೆಹಲಿ, ೩. ಕಾಶಿ ಹಿಂದು ವಿಶ್ವ ವಿದ್ಯಾಲಯ, ವಾರಾಣಸಿ, ೪. ಅಣ್ಣಾ ವಿಶ್ವ ವಿದ್ಯಾಲಯ ಚೆನ್ನೈ, ೫. ಹೈದರಾಬಾದ್ ವಿಶ್ವ ವಿದ್ಯಾಲಯ, ಹೈದರಾಬಾದ್, ೬. ಜಾಧವರಪುರ ವಿಶ್ವ ವಿದ್ಯಾಲಯ, ಕೋಲ್ಕತ, ೭. ದೆಹಲಿ ವಿಶ್ವವಿದ್ಯಾಲಯ, ನವದೆಹಲಿ, ೮. ಅಮೃತ ವಿಶ್ವವಿದ್ಯಾಪೀಠಮ್, ಕೊಯಮತ್ತೂರು, ೯. ಸಾವಿತ್ರಿಬಾಯಿ ಫುಳೆ ಪುಣೆ ವಿಶ್ವವಿದ್ಯಾಲಯ, ಪುಣೆ, ೧೦ ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯ, ಅಲಿಘಡ.  ವೈದ್ಯಕೀಯ ಶಿಕ್ಷಣ ಸಂಸ್ಥೆಗಳು:  ೧.            ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ನವದೆಹಲಿ, ೨ ಪೋಸ್ಟ್ ಗ್ರಾಜುಯೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ರೀಸರ್ಚ್, ಚಂಡೀಗಢ, ೩ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ವೆಲ್ಲೂರು, ೪ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ, ೫ ಕಿಂಗ್ ಆಫ್ ಜಾರ್ಜ್ಸ ಮೆಡಿಕಲ್ ಯುನಿವರ್ಸಿಟಿ, ಲಕ್ನೋ, ೬ ಜಿಐಪಿಎಂಇರ್ (ಜಿಪ್ಮೆರ್), ಪುದುಚೆರಿ, ೭ ಕಾಶಿ ಹಿಂದು ವಿಶ್ವವಿದ್ಯಾಲಯ, ವಾರಾಣಸಿ, ೮ ಇನ್ ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್, ನವದೆಹಲಿ, ೯ ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯ, ಅಲಿಘಡ, ೧೦ ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜ್ ಅಂಡ್ ರೀಸರ್ಚ್ ಇನ್ ಸ್ಟಿಟ್ಯೂಟ್, ಚೆನ್ನೈ.  ಕಾಲೇಜುಗಳು:   ೧.        ಮಿರಾಂಡ ಹೌಸ್, ನವದೆಹಲಿ., ೨ ಸೈಂಟ್ ಸ್ಟೀಫನ್ಸ್ ಕಾಲೇಜ್, ನವದೆಹಲಿ, ೩ ಬಿಷಪ್ ಹೆಬರ್ ಕಾಲೇಜು, ತಿರುಚಿ, ೪ ಹಿಂದು ಕಾಲೇಜ್, ನವದೆಹಲಿ, ೫ ಪ್ರೆಸಿಡೆನ್ಸಿ ಕಾಲೇಜ್, ಚೆನ್ನೈ, ೬ ಲೋಯೊಲಾ ಕಾಲೇಜು, ಚೆನ್ನೈ, ೭ ಶ್ರೀರಾಮ ಕಾಲೇಜ್ ಆಫ್ ಕಾಮರ್ಸ್, ನವದೆಹಲಿ, ೮ ಲೇಡಿ ಶ್ರೇರಾಮ ಕಾಲೇಜ್ ಆಫ್ ಕಾiರ್ಸ್ ನವದೆಹಲಿ,  ೯ ರಾಮಕೃಷ್ಣ ಮಿಷನ್ ವಿದ್ಯಾಮಂದಿರ, ಹೌರಾ, ೧೦ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್, ಚೆನ್ನೈ.

2018: ನವದೆಹಲಿ: ದೆಹಲಿ/ ಎನ್ ಸಿಆರ್ ಮತ್ತು ಹರಿಯಾಣ ಸೇರಿದಂತೆ ದೇಶದ ಯಾವುದೇ ಭಾಗದಲ್ಲೂ ಸಿಬಿಎಸ್‌ಇ ೧೦ನೇ ತರಗತಿಯ ಗಣಿತ ಪರೀಕ್ಷೆಯನ್ನು ಪುನಃ ನಡೆಸದಿರಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ ಇ) ನಿರ್ಧರಿಸಿದವು.  ಇದರೊಂದಿಗೆ ಸಹಸ್ರಾರು ವಿದ್ಯಾರ್ಥಿಗಳಿಗೆ ಭಾರೀ ದೊಡ್ಡ ರಿಲೀಫ್ ಸಿಕ್ಕಿತು.  ಕಳೆದ ಮಾರ್ಚ್ ೨೮ರಂದು ಸಿಬಿಎಸ್‌ಇ ೧೦ನೇ ತರಗತಿ ಗಣಿತ ಮತ್ತು ೧೨ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು.  "ಸಹಸ್ರಾರು ವಿದ್ಯಾರ್ಥಿಗಳ ಪರಮೋಚ್ಚ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಸಿಬಿಎಸ್‌ಇ ೧೦ನೇ ತರಗತಿ ಗಣಿತ ಪರೀಕ್ಷೆಯನ್ನು  ದಿಲ್ಲಿ ಎನ್ಸಿಆರ್ ಮತ್ತು ಹರಿಯಾಣದಲ್ಲಿ ಕೂಡ ಪುನರಪಿ ನಡಸದಿರಲು ನಿರ್ಧರಿಸಲಾಗಿದೆ ಎಂದು ಭಾರತ ಸರ್ಕಾರದ ಶಿಕ್ಷಣ ಕಾರ್ಯದರ್ಶಿ ಅನಿಲ್ ಸ್ವರೂಪ್ ಪ್ರಕಟಿಸಿದರು.  ಇದಕ್ಕೆ ಮೊದಲು ಸಿಬಿಎಸ್‌ಇ ಪುನರ್ ಪರೀಕ್ಷೆ ಬಗ್ಗೆ ಕೇರಳದ ವಿದ್ಯಾರ್ಥಿ ಮ್ಯಾಥ್ಯೂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ವಿಷಯವನ್ನು ಎ.೪ರಂದು ಪುನಃ ವಿಚಾರಣೆ ಎತ್ತಿಕೊಳ್ಳಲಾಗುವುದು ಎಂದು ಹೇಳಿತ್ತು.   ಆದರೆ ಈ ನಡುವೆ ಸಿಬಿಎಸ್‌ಇ ೧೦ನೇ ಗಣಿತ ಪರೀಕ್ಷೆಯನ್ನು ಪುನಃ ನಡೆಸದಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡು ಸಹಸ್ರಾರು ವಿದ್ಯಾರ್ಥಿಗಳಿಗೆ ಭಾರೀ ದೊಡ್ಡ ರಿಲೀಫ್ ನೀಡಿತು.  ೧೫ರ ಹರೆಯದ ವಿದ್ಯಾರ್ಥಿ ರೋಹನ್ ಮ್ಯಾಥ್ಯೂ ಅವರು ೧೦ನೇ ತರಗತಿಯ ಗಣಿತ ಪರೀಕ್ಷೆ ಪತ್ರಿಕೆ ಸೋರಿಕೆಯ ವರದಿಗಳನ್ನು ಆಧರಿಸಿ ಈ ವಿಷಯದ ಮರುಪರೀಕ್ಷೆ ನಡೆಸಲು ಸಿಬಿಎಸ್ ಇ ಕೈಗೊಂಡ ನಿರ್ಧಾರವನ್ನು ರದ್ದು ಪಡಿಸುವಂತೆ ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದರು.  ಕೇರಳದ ಶಾಲೆಯೊಂದರ ೧೦ನೇ ತರಗತಿಯ ವಿದ್ಯಾರ್ಥಿಯಾದ ಮ್ಯಾಥ್ಯೂ ಅವರು ’ದೆಹಲಿಯಲ್ಲಿನ ದೃಢಪಡಿಸಲಾಗದ ಊಹಾಪೋಹಗಳನ್ನು ಆಧರಿಸಿ ೧೦ನೇ ತರಗತಿಯ ಗಣಿತ ಪರೀಕ್ಷೆಯನ್ನು ರದ್ದು ಪಡಿಸಲು ಸಿಬಿಎಸ್ ಇ ಕೈಗೊಂಡ ನಿರ್ಧಾರ, ಭಾರತ ಮತ್ತು ವಿದೇಶಗಳಲ್ಲಿ ಮಾರ್ಚ್ ೨೮ರಂದು ಪರೀಕ್ಷೆಗೆ ಹಾಜರಾಗಿದ್ದ ೧೬ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ಮಸುಕುಗೊಳಿಸಿದೆ ಎಂದು ವಾದಿಸಿದ್ದರು.  ಪ್ರಶ್ನೆ ಪತ್ರಿಕೆಗಳ ವ್ಯವಸ್ಥಿತ ಮತ್ತು ವ್ಯಾಪಕ ಸೋರಿಕೆಯ ಸಾಕ್ಷ್ಯಾಧಾರ ಇಲ್ಲದೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಯನ್ನೇ ರದ್ದು ಪಡಿಸುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಮ್ಯಾಥ್ಯೂ ಅವರನ್ನು ಪ್ರತಿನಿಧಿಸಿದ ವಕೀಲರಾದ ಲಿಝ್ ಮ್ಯಾಥ್ಯೂ ಮತ್ತು ರಘೆಂತ್ ಬಸಂತ್ ವಾದಿಸಿದ್ದರು. ೧೯೮೪ರಲ್ಲಿ ’ದಿ ಕರಾಟೆ ಕಿಡ್ ಚಿತ್ರದಲ್ಲಿ ಯುವ ವಿದ್ಯಾರ್ಥಿಯೊಬ್ಬನ ಶಿಕ್ಷಕ ’ಕೆಟ್ಟ ವಿದ್ಯಾರ್ಥಿ ಎಂಬುದು ಇಲ್ಲ, ಆದರೆ ಕೆಟ್ಟ ಶಿಕ್ಷಕ ಮಾತ್ರ ಇರುತ್ತಾನೆ ಎನ್ನುತ್ತಾನೆ ಎಂಬುದನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಿದ ವಕೀಲ ಮ್ಯಾಥ್ಯೂ ಶಿಕ್ಷಕ ಎಷ್ಟೇ ಕೆಟ್ಟವನಿರಲಿ, ಒಳ್ಳೆಯವನಿರಲಿ ಅಂತಿಮವಾಗಿ ತನ್ನ ಸಾಧನೆಯನ್ನು ತೋರುವ ಹೊಣೆಗಾರಿಕೆ ವಿದ್ಯಾರ್ಥಿಯ ಮೇಲೆಯೇ ಬೀಳುತ್ತದೆ ಎಂದು ಹೇಳಿದ್ದರು.  ‘ಒಂದು ಕೇಂದ್ರದಲ್ಲಿ ಘಟಿಸಿದ ಘಟನೆಯೊಂದಕ್ಕಾಗಿ, ವ್ಯಾಪಕವಾಗಿ ಪರೀಕ್ಷಾ ವ್ಯವಸ್ಥೆಯೇ ಕೆಟ್ಟದ್ದಕ್ಕೆ ಸಾಕ್ಷ್ಯಾಧಾರ ಇಲ್ಲದಿರುವಾಗ ಇಡೀ ವಿದ್ಯಾರ್ಥಿ ಸಮುದಾಯವನ್ನೇ ಶಿಕ್ಷಿಸುವುದು ನಿರಂಕುಶ ಮತ್ತು ಅಕ್ರಮ ಎಂದು ಅರ್ಜಿ ಪ್ರತಿಪಾದಿಸಿತ್ತು.  ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು ಕೆಲವರನ್ನು ಬಂಧಿಸಲಾಗಿದೆ ಮತ್ತು ಕೆಲವು ಅಧಿಕಾರಿಗಳನ್ನು ಅಮಾನತಿನಲ್ಲಿ ಇರಿಸಲಾಯಿತು.


2017: ಶ್ರೀನಗರಭದ್ರತಾಪಡೆ ಸಿಬ್ಬಂದಿ ಇದ್ದ ವಾಹನದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್ಪಿಎಫ್ ಒಬ್ಬ ಯೋಧ ಹುತಾತ್ಮನಾಗಿ, ಹತ್ತು ವರ್ಷದ ಬಾಲಕಿ ಹಾಗೂ ಇಬ್ಬರು ನಾಗರಿಕರು ಸೇರಿದಂತೆ ಐವರು  ಗಾಯಗೊಂಡರು. ಲಷ್ಕರ್‌–ತೊಯಿಬಾ (ಎಲ್ಇಟಿ) ಸಂಘಟನೆ ದಾಳಿಯ ಹೊಣೆ ಹೊತ್ತಿತು. ಸಿಆರ್ಪಿಎಫ್ ಕಾವಲುಪಡೆಯ ವಾಹನದ ಮೇಲೆ ನಡೆದ ಗುಂಡಿನ ದಾಳಿಯನ್ನು ತಾನು ನಡೆಸಿದ್ದಾಗಿ ಲಷ್ಕರ್‌–ತೊಯಿಬಾ (ಎಲ್ಇಟಿಸಂಘಟನೆ ಹೊಣೆ ಹೊತ್ತುಕೊಂಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿತು. ಕಾಶ್ಮೀರದಲ್ಲಿ ಭದ್ರತಾಪಡೆಗಳ ಮೇಲೆ ಲಷ್ಕರ್ಉಗ್ರರು ದಾಳಿಯನ್ನು ತೀವ್ರಗೊಳಿಸುವುದಾಗಿ ಹೇಳಿದ ಲಷ್ಕರ್ ವಕ್ತಾರ ಅಬ್ದುಲ್ಲಾ ಗಜ್ನಾವಿ, ದಾಳಿ ನಡೆಸಿದ ಅಬು ಮೊಸಾ ಕೃತ್ಯವನ್ನು ಪ್ರಶಂಸಿಸಿದ. ಜತೆಗೆ, ಆತನನ್ನು ಸನ್ಮಾನಿಸುವುದಾಗಿ ಇಂಡಿಯಾ ಟುಡೆಗೆ ಮಿಂಚಂಚೆ ಕಳುಹಿಸಿದ ಎಂದು ವರದಿ ತಿಳಿಸಿತು. ಶ್ರೀನಗರದ ಪಂಥಚೌಕದಲ್ಲಿ ಮಧ್ಯಾಹ್ನ 97 ಬೆಟಾಲಿಯನ್ ಸಿಆರ್ಪಿಎಫ್ಯೋಧರು ತೆರಳುತ್ತಿದ್ದ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ದಾಳಿಯಲ್ಲಿ ಸಿಆರ್ಪಿಎಫ್ ಕಾನ್ಸ್ಟೆಬಲ್ಬಸಪ್ಪ ಅವರು ಹುತಾತ್ಮರಾದರು. ತೀವ್ರವಾಗಿ ಗಾಯಗೊಂಡಿರುವ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ವಾಗಿದೆ ಎಂದು ವರದಿ ತಿಳಿಸಿತು. ವಾಹನ ಚಾಲಕನೂ ಗಾಯಗೊಂಡಿದ್ದಾರೆ. ಸಿಆರ್ಪಿಎಫ್ ಯೋಧರು . 9ರಂದು ನಡೆಯುವ ಲೋಕಸಭೆ ಉಪ ಚುನಾವಣೆ ಕಾರ್ಯಕ್ಕೆ ಬಸ್ನಲ್ಲಿ ತೆರಳುತ್ತಿದ್ದರು. ವೇಳೆ ದಾಳಿ ನಡೆಯಿತು.
2017: ಸೈಂಟ್ ಪೀಟರ್ಸ್ಬರ್ಗ್: ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ನ  ಎರಡು ಕಡೆ ಸುರಂಗ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೆಟ್ರೋ ಟ್ರೈನುಗಳಲ್ಲಿ ಪ್ರಬಲವಾದ ಬಾಂಬುಗಳು ಸ್ಫೋಟಿಸಿ, 10ಕ್ಕೂ ಹೆಚ್ಚು ಪ್ರಯಾಣಿಕರು ಮೃತರಾಗಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸೆನ್ನಿಯಾ ಪ್ಲೋಶವಾದ್ ಮತ್ತು ಟೆಕ್ನಾಲಾಜಿಕ್ ಇನ್ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ಮಧ್ಯೆ ಸಂಚರಿಸುತ್ತಿದ್ದ ಟ್ರೈನುಗಳಲ್ಲಿ ಈ ಸ್ಫೋಟಗಳು ಸಂಭವಿಸಿದವು. ಸೈಂಟ್  ಪೀಟರ್ಸ್ಬರ್ಗ್ ನಗರಕ್ಕೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತು. ಸ್ಫೋಟಗಳು ಭಯೋತ್ಪಾದನೆಯ ಕೃತ್ಯಗಳೋ ಅಥವಾ ಅದಕ್ಕೆ ಬೇರೆ ಏನಾದರೂ ಕಾರಣವಿರಬಹುದಾ ಎಂಬುದನ್ನು ತನಿಖಾ ತಂಡಗಳು ಪತ್ತೆ ಹಚ್ಚಲಿವೆ ಎಂದು ಪುಟಿನ್ ಹೇಳಿದರು.

2017: ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಸೇರಿದ 27 ಕೋಟಿ ರೂ. ಮೌಲ್ಯದ ತೋಟದ ಮನೆಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತು. ಜಾರಿ ನಿರ್ದೇಶನಾಲಯವು ವೀರಭದ್ರ ಸಿಂಗ್ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿಯ ಮೆಹರೂಲಿಯಾ ಪ್ರದೇಶದಲ್ಲಿರುವ ಫಾರ್ಮ್ ಹೌಸ್ ಅವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಈ ಫಾರ್ಮ್ ಹೌಸ್ ಸರ್ಕಾರಿ ಮೌಲ್ಯ 6.61 ಕೋಟಿ ರೂ.  ಆದರೆ ಇದರ ಮಾರುಕಟ್ಟೆ ಮೌಲ್ಯ 27 ಕೋಟಿ ರೂ.   ಫಾರ್ಮ್ ಹೌಸ್ Maple Destinations & Dreambuild ಎಂಬ ಕಂಪನಿಯ ಹೆಸರಿನಲ್ಲಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತು.
2009: ಈ ಬಾರಿಯ ಲೋಕಸಭಾ ಚುನಾವಣೆಗಾಗಿ ಬಿಜೆಪಿ ನವದೆಹಲಿಯಲ್ಲಿ ಈದಿನ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು. ಹಿಂದುತ್ವಕ್ಕೆ ಅಂಟಿಕೊಂಡ ದ್ವಂದ್ವ ನಿಲುವಿನೊಂದಿಗೆ ಯುವಕರು ಮತ್ತು ಮಧ್ಯಮ ವರ್ಗದವರನ್ನು ಓಲೈಸುವ ಯತ್ನವನ್ನು ಈ ಪ್ರಣಾಳಿಕೆ ಮಾಡಿತು. ಆದಾಯ ತೆರಿಗೆ ಮಿತಿ 3 ಲಕ್ಷಕ್ಕೆ ಏರಿಕೆ, ಕಡು ಬಡವರಿಗೆ 2 ರೂಪಾಯಿಗೆ ಅಕ್ಕಿ -ಗೋಧಿ, ರಕ್ಷಣಾ ಸಿಬ್ಬಂದಿಗೆ ಆದಾಯ ತೆರಿಗೆಯಿಂದ ಮುಕ್ತಿ ಮಂತಾದ ಹಲವು ಜನಪ್ರಿಯ ಭರವಸೆಗಳನ್ನು ಪಕ್ಷ ನೀಡಿತು. ಇದೇ ವೇಳೆ ರಾಮಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯ ದುರ್ಗತಿ, ಭಯೋತ್ಪಾದನೆ ನಿಗ್ರಹಕ್ಕೆ 'ಪೋಟಾ'ದಂತಹ ಕಠಿಣ ಶಾಸನ ರಚನೆಯಂತಹ ತನ್ನ ಹಳೆಯ ವಿಷಯಗಳನ್ನೂ ಅದು ಸೇರಿಸಿಕೊಂಡಿತು. 11 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಬಿಜೆಪಿ ಎನ್‌ಡಿಎ ಪ್ರಣಾಳಿಕೆಯ ಬದಲಿಗೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು.. 1999 ಮತ್ತು 2004ರಲ್ಲಿ ಎನ್‌ಡಿಎ ಪ್ರಣಾಳಿಕೆಯ ಜತೆಯಲ್ಲೇ ಬಿಜೆಪಿ ಪ್ರಣಾಳಿಕೆಯೂ ಸೇರಿಕೊಂಡಿತ್ತು.

2009: ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಹುಲಿ ತಲೆಯ ರತ್ನಖಚಿತ ಶಿಖರಾಲಂಕಾರ ಲಂಡನ್ನಿನಲ್ಲಿ 3,89,600 ಪೌಂಡ್‌ಗೆ ಹರಾಜಾಯಿತು. 18ನೇ ಶತಮಾನದ ಅಮೂಲ್ಯವಾದ ಈ ಶಿಖರಾಲಂಕಾರವನ್ನು ಅನಾಮಧೇಯ ವ್ಯಕ್ತಿಯೊಬ್ಬರು ಖರೀದಿಸಿದರು.

2009: ಮೊಬೈಲ್ ತಯಾರಿಕೆಯ ಮೊಟೊರೋಲ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತೀಯ ಸಂಜಾತ ಸಂಜಯ ಝಾ ಅವರು ಅಮೆರಿಕದಲ್ಲೆ ಗರಿಷ್ಠ ವೇತನ ಪಡೆಯುವ ಸಿಇಒ ಎನ್ನುವುದು ಬೆಳಕಿಗೆ ಬಂದಿತು. ಇದೇ ವೇಳೆಗೆ ಉತ್ತೇಜನ ಪ್ಯಾಕೇಜ್ ಪಡೆದುಕೊಂಡ ಬ್ಯಾಂಕ್‌ಗಳಲ್ಲೇ ಅತ್ಯಂತ ಗರಿಷ್ಠ ವೇತನ ಪಡೆಯುತ್ತಿರುವ ಸಿಇಒ ಎನ್ನುವ ಅಗ್ಗಳಿಕೆಗೆ ಸಿಟಿಗ್ರೂಪ್ ಸಿಇಒ ವಿಕ್ರಮ್ ಪಂಡಿತ್ ಪಾತ್ರರಾದರು. ಪೆಪ್ಸಿಕೋ ಸಿಇಒ ಇಂದ್ರಾ ನೂಯಿ ಅವರು 13.98 ದಶಲಕ್ಷ ಡಾಲರ್ ಪ್ಯಾಕೇಜ್ ಪಡೆಯುವ ಮುಲಕ 36ನೇ ಸ್ಥಾನದಲ್ಲಿ ಗುರುತಿಸಿಕೊಂಡರು. 2008ನೇ ಸಾಲಿನಲ್ಲಿ ಒಟ್ಟಾರೆ ಸಿಇಒಗಳಿಗೆ 104 ದಶಲಕ್ಷ ಡಾಲರ್ ಪ್ಯಾಕೇಜ್ ನೀಡಲಾಯಿತು. ಅದರಲ್ಲಿ ಝಾ ಮಾತ್ರ ವಾರ್ಷಿಕ ಪರಿಹಾರ 100 ದಶಲಕ್ಷ ಡಾಲರ್ ಪಡೆಯುವವರೆನಿಸಿದರು. ಇವರ ನಂತರದ ಸ್ಥಾನದಲ್ಲಿ 49.9 ದಶಲಕ್ಷ ಡಾಲರ್ ಪಡೆಯುವ ಒಕ್ಸಿಡೆಂಟಲ್ಸ್ ಕಂಪೆನಿ ಸಿಇಒ ರೇ ಇರಾನಿ, ಮೂರನೇ ಸ್ಥಾನದಲ್ಲಿ ವಾಲ್ಟ್ ಡಿಸ್ನಿ ಕಂಪೆನಿಯ ರಾಬರ್ಟ್ ಐಗರ್ (49.7 ದಶಲಕ್ಷ ಡಾಲರ್) ಗುರುತಿಸಿಕೊಂಡರು.

2009: ಶತಮಾನಗಳಿಂದ ಬಂದಿದ್ದ ಶಿಷ್ಟಾಚಾರವನ್ನು ಬದಿಗೊತ್ತಿ ಬ್ರಿಟನ್ ರಾಣಿ ಎಲಿಜಬೆತ್ ಅಮೆರಿಕದ ಪ್ರಥಮ ಮಹಿಳೆ ಮಿಷೆಲ್ ಒಬಾಮ ಅವರನ್ನು ತಬ್ಬಿಕೊಳ್ಳಲು ಮುಂದಾದರು. ಇಂಗ್ಲೆಂಡಿಗೆ ಆಗಮಿಸಿದ ಒಬಾಮ ದಂಪತಿಗೆ ಲಂಡನ್ನಿನಲ್ಲಿ ನೀಡಲಾದ ಔಪಚಾರಿಕ ಸ್ವಾಗತದ ಸಂದರ್ಭದಲ್ಲಿ ಮಿಷೆಲ್ ಹಾಗೂ ರಾಣಿ ಪರಸ್ಪರ ತಬ್ಬಿಕೊಂಡಿರುವ ಚಿತ್ರಗಳು ಬ್ರಿಟನ್ ಪತ್ರಿಕೆಗಳಲ್ಲಿ ಭಾರಿ ಸುದ್ದಿ ಮಾಡಿದವು. ರಾಜಮನೆತನದ ಶಿಷ್ಟಾಚಾರದ ಪ್ರಕಾರ ರಾಣಿಯನ್ನು ಯಾರೂ ಮುಟ್ಟುವಂತಿಲ್ಲ. ಆದರೆ, ರಾಣಿಯೇ ಮೊದಲು ಮಿಷೆಲ್ ಸೊಂಟದ ಸುತ್ತ ಕೈಹಾಕಿ ತಬ್ಬಿಕೊಂಡರು. ಆನಂತರ ಮಿಷೆಲ್ ರಾಣಿಯನ್ನು ಅಪ್ಪಿಕೊಂಡರು. ಬಹಿರಂಗವಾಗಿ ಎಂದೂ ಭಾವನೆಗಳನ್ನು ಪ್ರದರ್ಶಿಸದ ಎಲಿಜಬೆತ್ ಕ್ರಮ ಚರ್ಚೆಗೆ ಕಾರಣವಾಯಿತು. ಈ ಹಿಂದೆ ರಾಣಿಯ ಕೈಕುಲುಕಿದ್ದ ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್, ಮಾಧ್ಯಮಗಳ ಕೆಂಗಣ್ಣು ಎದುರಿಸಿದ್ದರು. 1992ರಲ್ಲಿ ರಾಣಿಯ ಸೊಂಟ ಬಳಸಿದ್ದ ಅಂದಿನ ಆಸ್ಟ್ರೇಲಿಯಾ ಪ್ರಧಾನಿ ಪಾಲ್ ಕೀಟಿಂಗ್ ಅವರನ್ನು ಯದ್ವಾತದ್ವಾ ಟೀಕಿಸಲಾಗಿತ್ತು.

2009: ಮಲೇಷ್ಯಾದ ಆರನೇ ಪ್ರಧಾನ ಮಂತ್ರಿಯಾಗಿ ನಜೀಬ್ ಅಬ್ದುಲ್ ರಜಾಕ್ ಕ್ವಾಲಾಲಂಪುರದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇಲ್ಲಿನ ರಾಯಲ್ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭಲ್ಲಿ ರಜಾಕ್ ಅವರು ದೊರೆ ತ್ವಾಂಕು ಮಿಜಾನ್ ಝೈನಾಲ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಿರ್ಗಮನ ಪ್ರಧಾನಿ ಅಬ್ದುಲ್ಲಾ ಅಹಮದ್ ಬದಾವಿ ಹಾಗೂ ಮುಖ್ಯ ನ್ಯಾಯಾಧೀಶ ಝಕಿ ಅಜ್ಮಿ ಈ ಸಂದರ್ಭದಲ್ಲಿ ಹಾಜರಿದ್ದರು.

2008: ಶೀತಲೀಕರಿಸಿದ ಅಂಡಾಣುವನ್ನು ಬಳಸಿದ ಪ್ರನಾಳ ಶಿಶು ಬೆಂಗಳೂರಿನ ಅಡ್ವಾನಸ್ಡ್ ಫರ್ಟಿಲಿಟಿ ಸೆಂಟರಿನಲ್ಲಿ ಏಪ್ರಿಲ್ 1ರಂದು ಜನ್ಮ ತಾಳಿದ್ದು, ಇದು ನೂತನ ತಂತ್ರಜ್ಞಾನ ಬಳಸಿದ ರಾಜ್ಯದ ಮೊದಲ ಪ್ರನಾಳ ಶಿಶುವಾಗಿದೆ ಎಂದು ಸೆಂಟರಿನ ವೈದ್ಯಕೀಯ ನಿರ್ದೇಶಕ ಡಾ.ಆರ್. ನಿರ್ಮಲಾ ಪ್ರಕಟಿಸಿದರು. ಅಡ್ವಾನಸ್ಡ್ ಫರ್ಟಿಲಿಟಿ ಸೆಂಟರಿನ ಡಾ.ನಿರ್ಮಲಾ ಹಾಗೂ ವರ್ಷಾ ಸ್ಯಾಮಸನ್ ರಾಯ್ ಅವರು ಈ ತಂತ್ರಜ್ಞಾನವನ್ನು ಬಳಸಿ ಯಶಸ್ವಿಯಾದರು. ಅಂಡಾಣುವಿನ ಉತ್ಪತ್ತಿ ಸರಿಯಾಗಿ ಆಗದ ಸಂದರ್ಭದಲ್ಲಿ ಗರ್ಭಧಾರಣೆಯಾಗುವುದಿಲ್ಲ. ಅಂಡಾಣು ಉತ್ಪತ್ತಿಗೆ ಔಷದೋಪಚಾರ ನಡೆಸಿ, ಆರೋಗ್ಯಪೂರ್ಣ ಅಂಡಾಣುಗಳನ್ನು ಪಡೆದು ಶೀತಲೀಕರಿಸಲಾಗುತ್ತದೆ. ನಂತರ ವೀರ್ಯಾಣುವನ್ನು ಸೇರಿಸಿ ಭ್ರೂಣವನ್ನು ಮತ್ತೆ ಗರ್ಭಕೋಶಕ್ಕೆ ಸೇರ್ಪಡೆ ಮಾಡುವಂತಹ ತಂತ್ರಜ್ಞಾನ ಬಳಸಿ ಪ್ರನಾಳ ಶಿಶುವಿಗೆ ಜನ್ಮ ನೀಡುವಲ್ಲಿ ವೈದ್ಯರು ಯಶಸ್ವಿಯಾದರು. ಪ್ರಸಾದ್ ದಂಪತಿ ಈ ಮಗು ಪಡೆದವರು. ಪ್ರಥಮ ಬಾರಿಗೆ ವಿಶ್ವದಲ್ಲಿ 1978ರಲ್ಲಿ ಪ್ರನಾಳ ಶಿಶುವಿನ ಜನನವಾಗಿತ್ತು.

2008: ಕೊಯಮತ್ತೂರಿನಲ್ಲಿ ಮುಕ್ತಾಯಗೊಂಡ ಸಿಪಿಐ(ಎಂ)ನ ಹತ್ತೊಂಬತ್ತನೇ ರಾಷ್ಟ್ರೀಯ ಅಧಿವೇಶನದಲ್ಲಿ ಪ್ರಕಾಶ್ ಕಾರಟ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆ ಮಾಡಲಾಯಿತು. ಅಧಿವೇಶನದಲ್ಲಿ ಪಕ್ಷದ ಹಿರಿಯ ನಾಯಕರಾದ ಜ್ಯೋತಿ ಬಸು ಅವರನ್ನು ಪಾಲಿಟ್ ಬ್ಯೂರೋದ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಹರಿಕಿಶನ್ ಸಿಂಗ್ ಸುರ್ಜಿತ್ ಅವರನ್ನು ಕೇಂದ್ರ ಸಮಿತಿಗೆ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಿಸಲಾಯಿತು. ಬಸು ಹಾಗೂ ಸುರ್ಜಿತ್ ಅವರು 1964ರಿಂದ (44 ವರ್ಷಗಳಿಂದ) ಪಕ್ಷದ ಪಾಲಿಟ್ ಬ್ಯೂರೋದ ಸದಸ್ಯರಾಗಿದ್ದರು.

2008: ಹೊಗೇನಕಲ್ ಯೋಜನೆಯ ವಿವಾದ ಭುಗಿಲೆಬ್ಬಿಸಿ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡುವುದು ಸಲ್ಲದು ಎಂದು ಹೇಳಿದ ಕರ್ನಾಟಕ ಹೈಕೋರ್ಟ್, ಯೋಜನೆ ಮುಂದುವರಿಸದಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿತು.

2008: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಯಾಲ ಹಳ್ಳಿಯ ನಾನಾಗ್ರಾಮ್ (45) ಎಂಬಾತನನ್ನು ಕೊಲೆ ಮಾಡಿದ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜೈಪುರದ ತ್ವರಿತ ನ್ಯಾಯಾಲಯ ತೀರ್ಪು ನೀಡಿತು. 2007ರ ಏಪ್ರಿಲ್ 19 ರಂದು ಈ ಘಟನೆ ನಡೆದಿತ್ತು. ಅಪರಾಧಿಗಳು ನಾನಾಗ್ರಾಮನನ್ನು ಮನಬಂದಂತೆ ಥಳಿಸ್ದಿದರಿಂದ ಆತ ಮೃತಪಟ್ಟಿದ್ದ. ಪ್ರಮುಖ ಆರೋಪಿ ರಾಮಚಂದ್ರ ಸೇರಿದಂತೆ 11 ಮಂದಿಗೆ ನ್ಯಾಯಮೂರ್ತಿ ಮದನ್ ಲಾಲ್ ಭಾಟಿಯ ಜೀವಾವಧಿ ಶಿಕ್ಷೆ ವಿಧಿಸಿದರು.

2008: ವಿವಾದಿತ ಹೊಗೇನಕಲ್ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಕನ್ನಡಪರ ಸಂಘಟನೆಗಳು ಏಪ್ರಿಲ್ 10ರಂದು ಕರ್ನಾಟಕ ಬಂದ್ ಆಚರಿಸಲು ಕರೆ ನೀಡಿದವು. ಕರ್ನಾಟಕ ರಕ್ಷಣಾ ವೇದಿಕೆ, ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ರೈತಪರ ಸಂಘಟನೆಗಳು, ದಲಿತ ಸಂಘಟನೆಗಳು, ಸಮತಾ ಸೈನಿಕ ದಳ ಮತ್ತಿತರ ಕನ್ನಡಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದವು.

2008: ಕಾಂಡ ಜೀವ ಕೋಶಗಳನ್ನು ದೇಹದೊಳಗೆ ಕಸಿ ಮಾಡುವುದರಿಂದ ವಾಸಿಯಾಗದ ಅನೇಕ ಕಾಯಿಲೆಗಳನ್ನು ದೂರ ಮಾಡಬಹುದು ಎಂದು ಕಾಂಡ ಜೀವಕೋಶ ಕಸಿ ಮಾಡುವುದರಲ್ಲಿ ವಿಶ್ವದಲ್ಲೇ ಅಗ್ರಗಣ್ಯರಾದ ಅಮೆರಿಕದ ತಜ್ಞ ವೈದ್ಯ ಡಾ. ಮೈಕೇಲ್ ಮೊಲ್ನಾರ್ ಹೇಳಿದರು. ಏಷ್ಯ ಖಂಡದ ಜೀವಕೋಶ ಸಂಶೋಧನಾ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಪೊಲೀಸ್ ಜಿಮಖಾನಾದಲ್ಲಿ ಏರ್ಪಡಿಸಿದ್ದ 'ಕಾಂಡ ಜೀವಕೋಶ ಕಸಿ ಮಾಡುವಿಕೆ' ಕುರಿತಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ವೈದ್ಯಶಾಸ್ತ್ರದಲ್ಲಿ ಲಭ್ಯವಿರುವ ಯಾವುದೇ ಸೌಲಭ್ಯಗಳನ್ನು ಬಳಸಿದರೂ ಅನೇಕ ಕಾಯಿಲೆಗಳು ಇಂದಿಗೂ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿವೆ. ಮಾನವ ಅಥವಾ ಪ್ರಾಣಿಗಳ ಭ್ರೂಣದಲ್ಲಿ ಲಭ್ಯವಿರುವ ಜೀವಕೋಶಗಳನ್ನು ಸಂಸ್ಕರಿಸಿ, ವರ್ಧಿಸಿ ಮಾನವ ದೇಹದೊಳಗೆ ಕಸಿ ಮಾಡುವುದರಿಂದ ಅನೇಕ ಅಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದರು. ಸಕ್ಕರೆ ಕಾಯಿಲೆ ನಂತರ ಬರುವ ಮೂತ್ರಪಿಂಡದ ಸಮಸ್ಯೆ, ಕಣ್ಣಿನ ಸಮಸ್ಯೆ, ಹೃದಯ ಸ್ನಾಯು ಸಮಸ್ಯೆ, ನರಕೋಶ ಸಮಸ್ಯೆ, ಬಂಜೆತನ ಸಮಸ್ಯೆ, ವಾಸಿಯಾಗದ ಗಾಯಗಳು ಮುಂತಾದ ಸಮಸ್ಯೆಗಳಿಗೆ ಕಾಂಡ ಜೀವಕೋಶಗಳನ್ನು ಕಸಿಮಾಡುವುದರಿಂದ ಪರಿಹಾರ ಒದಗಿಸಬಹುದು. ನಿರ್ಜೀವ ದುರ್ಬಲ ಜೀವಕೋಶಗಳನ್ನು ಪುನರುಜ್ಜೀವನ ಗೊಳಿಸಬಹುದು. ಜಗತ್ತಿನಾದ್ಯಂತ ಈಗಾಗಲೇ ಸುಮಾರು 50 ಲಕ್ಷ ರೋಗಿಗಳು ಈ ರೀತಿಯ ಚಿಕಿತ್ಸೆಯ ಲಾಭ ಪಡೆದಿದ್ದಾರೆ ಎಂದು ಅವರು ವಿವರಿಸಿದರು.

2007: ಗಂಟೆಗೆ 574.8 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ಪ್ರಾನ್ಸಿನ ಗ್ರಾಂಡೇ ವಿಟೆಸ್ಸೇ ರೈಲು ನೂತನ ದಾಖಲೆ ನಿರ್ಮಿಸಿತು. ಇದಕ್ಕಾಗಿಯೇ ನಿರ್ಮಿಸಲಾದ ಹಳಿಯ ಮೇಲೆ ರೈಲು ಪರೀಕ್ಷಾರ್ಥ ಪ್ರಯಾಣ ನಡೆಸಿತು. 1990ರಲ್ಲಿ ಫ್ರಾನ್ಸಿನ ರೈಲೊಂದು ಗಂಟೆಗೆ 515.3 ಕಿ.ಮೀ. ವೇಗದಲ್ಲಿ ಚಲಿಸಿದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು.

2007: ದಾವಣಗೆರೆ ನಗರ ಹೊರವಲಯ ಕರೂರು ಬಳಿ ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸಿಂಗಿನಲ್ಲಿ ಸ್ಕಾರ್ಪಿಯೋ ವಾಹನ ರೈಲಿಗೆ ಸಿಕ್ಕಿ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪುಣ್ಯಾನಂದಪುರಿ ಸ್ವಾಮೀಜಿ (36) ಸೇರಿದಂತೆ ಮೂವರು ಮೃತರಾದರು.

2007: ಲಂಡನ್ನಿನ ವಿಶ್ವವಿಖ್ಯಾತ ಮೇಣದ ಪ್ರತಿಮೆಗಳ ಮೇಡಂ ಟುಸಾಡ್ ಸಂಗ್ರಹಾಲಯಕ್ಕೆ ಬಾಲಿವುಡ್ ಚಿತ್ರನಟ ಶಾರುಖ್ ಖಾನ್ ಪ್ರತಿಮೆ ಸೇರ್ಪಡೆಯಾಯಿತು. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಚಿತ್ರನಟಿ ಐಶ್ವರ್ಯ ರೈ, ಭಾರತದ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವಗಾಂಧಿ ಅವರ ಮೇಣದ ಪ್ರತಿಮೆಗಳು ಈಗಾಗಲೇ ಸಂಗ್ರಹಾಲಯದಲ್ಲಿದ್ದು, ಅವುಗಳ ಸಾಲಿಗೆ ಶಾರುಖ್ ಖಾನ್ ಪ್ರತಿಮೆಯೂ ಸೇರಿಕೊಂಡಿತು.

2007: ಬೆಂಗಳೂರಿನಲ್ಲಿ ರಾಜಭವನದಲ್ಲೇ ನಡೆದ ಸಮಾರಂಭ ಒಂದರಲ್ಲಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ಕಲಾವಿದರಾದ ನೂರ್ ಸಲ್ಮಾ ಭಾನು, ರಾಜೇಶ್ ಎಂ. ಪತ್ತಾರ ಮತ್ತು ಎನ್. ದಕ್ಷಿಣಾಮೂರ್ತಿ ಅವರಿಗೆ `ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವಕರ್ಮ' ಪ್ರಶಸ್ತಿ ಪ್ರದಾನ ಮಾಡಿದರು.

2007: ಉಕ್ರೇನಿನ ಅಧ್ಯಕ್ಷ ವಿಕ್ಟೊರ್ ಯಶ್ ಚೆಂಕೊ ಅವರು ಸಂಸತ್ತನ್ನು ವಿಸರ್ಜಿಸಿ ಮೇ 27ರಂದು ಚುನಾವಣೆ ನಡೆಸಲು ಕರೆ ನೀಡಿದರು.

2006: ನೇಪಾಳದ ಕಠ್ಮಂಡುವಿನಲ್ಲಿ ಮಾಂಸಕ್ಕಾಗಿ ಹಸುವನ್ನು ಕೊಂದ ಕೃಪಾ ಬೋಟಿನಿ (50) ಎಂಬ ಮಹಿಳೆಗೆ ಜಿಲ್ಲಾ ನ್ಯಾಯಾಲಯವು 12 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿತು.

2006: ಜಾಗತಿಕ ಇತಿಹಾಸದಲ್ಲಿಯೇ ಅತಿ ದೊಡ್ಡ ಹಬ್ಬ ಎಂದು ಹೇಳಲಾದ ರಾಮಾಯಣ ಮಹಾಸತ್ರದ ಮಾರ್ಗದರ್ಶಕರಾದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಪುರ ಪ್ರವೇಶ ಮತ್ತು ವಾಲ್ಮೀಕಿ ರಾಮಾಯಣ ಗ್ರಂಥದ ಮೆರವಣಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸನಗರದಲ್ಲಿ ವಿಜೃಂಭಣೆಯಿಂದ ನಡೆಯಿತು.

2006: ಹೈಕೋರ್ಟ್ ಸಂಚಾರಿ ಪೀಠವನ್ನು ಹುಬ್ಬಳ್ಳಿ ಧಾರವಾಡ ನಗರಗಳ ಮಧ್ಯಭಾಗದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿಯ ವಕೀಲರು ಕೋರ್ಟ್ ವೃತ್ತದಲ್ಲಿ ರಸ್ತೆತಡೆ ನಡೆಸಿದರು.

1984: ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮ ಭಾರತದ ಮೊತ್ತ ಮೊದಲ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ದಿನ ಅವರು ರಷ್ಯದ ಸೋಯುಜ್ ಟಿ-11 ಗಗನನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಏರಿದರು. ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತಿದೆ ಎಂದು ಪ್ರಧಾನಿ ಇಂದಿರಾಗಾಂಧಿ ಪ್ರಶ್ನಿಸಿದಾಗ `ಸಾರೇ ಜಹಾಂಸೆ ಅಚ್ಛಾ' ಎಂದು ಶರ್ಮ ಉತ್ತರಿಸಿದರು.

1933: ಮೌಂಟ್ ಎವರೆಸ್ಟ್ ಶಿಖರದ ಮೇಲಿನಿಂದ ಪ್ರಪ್ರಥಮ ಬಾರಿಗೆ ಹಾರುವ ಮೂಲಕ ಎರಡು ಬ್ರಿಟಿಷ್ ವಿಮಾನಗಳು ಇತಿಹಾಸ ನಿರ್ಮಿಸಿದವು.

1930: ಹೆಲ್ಮಟ್ ಕೊಹ್ಲ್ ಹುಟ್ಟಿದ ದಿನ. ಈತ ಏಕೀಕೃತ ಜರ್ಮನಿಯ ಮೊತ್ತ ಮೊದಲ ಚಾನ್ಸಲರ್.

1914: ಭಾರತದ ಮೊತ್ತ ಮೊದಲ ಫೀಲ್ಡ್ ಮಾರ್ಷಲ್ ಎಸ್. ಎಚ್. ಎಫ್. ಮಾಣಿಕ್ ಶಾ ಜನ್ಮದಿನ.

1904: ರಾಮನಾಥ್ ಗೋಯೆಂಕಾ (1904-1991) ಹುಟ್ಟಿದ ದಿನ. ಇವರು ಭಾರತದ `ಇಂಡಿಯನ್ ಎಕ್ಸ್ ಪ್ರೆಸ್' ಪತ್ರಿಕಾ ಸಮೂಹವನ್ನು ಕಟ್ಟಿದರು.

1898: ಹೆನ್ರಿ ರಾಬಿನ್ ಸನ್ ಲ್ಯೂಸ್ (1898-1967) ಹುಟ್ಟಿದ ದಿನ. ಅಮೆರಿಕಾದ ಮ್ಯಾಗಜಿನ್ ಪ್ರಕಾಶಕನಾದ ಈತ `ಟೈಮ್', `ಫಾರ್ಚೂನ್' `ಲೈಫ್' ಮ್ಯಾಗಜಿನ್ ಗಳ ಸಾಮ್ರಾಜ್ಯ ಕಟ್ಟಿದ. ಅಮೆರಿಕದ ಪತ್ರಿಕೋದ್ಯಮದಲ್ಲಿ ಈ ನಿಯತಕಾಲಿಗಳು ಪ್ರಮುಖ ಮೈಲುಗಲ್ಲುಗಳೆನಿಸಿದವು.

1888: ವೃತ್ತಿ ರಂಗಭೂಮಿಯ ಖ್ಯಾತ ಕಲಾವಿದ ಎಂ.ಎನ್. ಗಂಗಾಧರರಾಯ (3-4-1888ರಿಂದ 12-3-1961) ನರಸಿಂಹಯ್ಯ- ಸಾಕಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದರು.

1876: ಬಹುಭಾಷಾ ಕೋವಿದ ಸಾಹಿತಿ ಬೆನಗಲ್ ರಾಮರಾವ್ (1876-1943) ಅವರು ಈದಿನ ಮಂಗಳೂರಿನಲ್ಲಿ ಮಂಜುನಾಥಯ್ಯ ಅವರ ಪುತ್ರನಾಗಿ ಜನಿಸಿದರು. ಪತ್ರಕರ್ತ ಹಾಗೂ ಸಾಹಿತಿಯಾಗಿದ್ದ ಅವರನ್ನು ಕನ್ನಡದ ಜನತೆ 1925ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಿತ್ತು. 1943ರ ಮೇ 8ರಂದು ಅವರು ನಿಧನರಾದರು.

1885: ಹ್ಯಾರಿ ಕಾನ್ ವೇ `ಬಡ್' ಫಿಶರ್ (1885-1954) ಹುಟ್ಟಿದ ದಿನ. ಅಮೆರಿಕಾದ ವ್ಯಂಗ್ಯಚಿತ್ರಕಾರನಾದ ಈತ `ಮಟ್ ಅಂಡ್ ಜೆಫ್' ಕಾಮಿಕ್ ಸ್ಟ್ರಿಪ್ ನ ಸೃಷ್ಟಿಕರ್ತ.

1680: ಭಾರತದಲ್ಲಿ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ತನ್ನ 50ನೇ ವಯಸ್ಸಿನಲ್ಲಿ ರಾಯಘಡದಲ್ಲಿ ಮೃತನಾದ.

No comments:

Post a Comment