ಇಂದಿನ ಇತಿಹಾಸ History Today ಏಪ್ರಿಲ್ 06
2018: ನವದೆಹಲಿ: ರಕ್ಷಣೆ, ಗೃಹ, ಕಾನೂನು ಮತ್ತು ಕಾರ್ಮಿಕ ಮತ್ತು ಯುವ ವ್ಯವಹಾರಗಳ
ಸಚಿವಾಲಯಗಳ ವೆಬ್ ಸೈಟುಗಳು ಸಂಜೆ ಹ್ಯಾಕ್ ಆಗಿ ವಿರೂಪಗೊಂಡವು.
ರಕ್ಷಣಾ ಸಚಿವಾಲಯದ ಹೋಮ್ ಪೇಜ್‌ನಲ್ಲಿ ಚೀನೀ ಅಕ್ಷರಗಳು
ಮತ್ತು ಎರರ್ ಮೆಸೇಜ್ ಕಂಡು ಬಂದದವು. ಸೈಬರ್ ಭದ್ರತಾ ಮುಖ್ಯಸ್ಥ ಗುಲ್ಶನ್ ರೈ ಅವರು ರಾಷ್ಟ್ರೀಯ ಮಾಹಿತಿ
ಕೇಂದ್ರ (ಎನ್ ಐಸಿ) ಜಾಲದ ಸಂಗ್ರಹ ವ್ಯವಸ್ಥೆಯಲ್ಲಿನ ಹಾರ್ಡ್‌ವೇರ್ ವೈಫಲ್ಯದ ಕಾರಣ ಈ ಸಮಸ್ಯೆ ಸಂಭವಿಸಿದೆ
ಎಂದು ಹೇಳಿದರು. ’ಹಾರ್ಡ್‌ವೇರನ್ನು ಬದಲಾಯಿಸಲಾಗುತ್ತಿದೆ.
ಆದಷ್ಟು ಶೀಘ್ರ ವ್ಯವಸ್ಥೆ ಸುಧಾರಿಸುತ್ತದೆ’ ಎಂದು ಅವರು ಹೇಳಿದರು. ಇದಕ್ಕೆ ಮುನ್ನ ರಕ್ಷಣಾ
ಸಚಿವ ನಿರ್ಮಲಾ ಸೀತಾರಾಮನ್ ಅವರು ’ರಕ್ಷಣ ಸಚಿವಾಲಯದ ವೆಬ್ ಸೈಟ್ (http://mod.nic.in) ಹ್ಯಾಕ್ ಆದ ಬಳಿಕ ಕ್ರಮ ಕೈಗೊಳ್ಳಲಾಗುತ್ತಿದೆ. ವೆಬ್
ಸೈಟ್ ಶೀಘ್ರದಲ್ಲೇ ಸರಿಯಾಗಲಿದೆ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಟ್ವೀಟ್ ಮಾಡಿದ್ದರು. ಕಾರ್ಮಿಕ, ಕಾನೂನು,
ಯುವ ವ್ಯವಹಾರಗಳು ಮತ್ತು ಗೃಹ ಇಲಾಖೆಯ ವೆಬ್ ಸೈಟ್ ಗಳೂ ವಿರೂಪಗೊಂಡವು. ವೆಬ್ ಸೈಟಿನಲ್ಲಿ ಚೀನೀ ಅಕ್ಷರಗಳು ಕಾಣಿಸುತ್ತಿದ್ದು, ವೆಬ್
ಸೈಟನ್ನು ವಿರೂಪಗೊಳಿಸುವಲ್ಲಿ ಚೀನೀ ಹ್ಯಾಕರುಗಳು ಶಾಮೀಲಾಗಿರುವ ಸೂಚನೆಗಳಿವೆ ಎಂದು ಸಚಿವಾಲಯ ಅಧಿಕಾರಿಗಳು
ತಿಳಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ
ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ ಐಸಿ) ವೆಬ್ ಸೈಟನ್ನು ನಿರ್ವಹಿಸುತ್ತದೆ. ಕೇಂದ್ರವು ಅದನ್ನು ಸುಸ್ಥಿತಿಗೆ
ತರಲು ಯತ್ನಿಸುತ್ತಿದೆ ಎಂದು ಸಚಿವಾಲಯದ ವಕ್ತಾರರು ಹೇಳಿದರು. ರಕ್ಷಣಾ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಆದ ಬೆನ್ನಲ್ಲೇ
ಗೃಹ ವ್ಯವಹಾರಗಳು ಮತ್ತು ಕಾನೂನು ಸಚಿವಾಲಯಗಳ ವೆಬ್ ಸೈಟುಗಳು ವಿರೂಪಗೊಂಡವು. ಗೃಹ ಸಚಿವಾಲಯದ ವೆಬ್
ಸೈಟಿನಲ್ಲಿ ’ಅಗತ್ಯ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅನಾನುಕೂಲಕ್ಕಾಗಿ ವಿಷಾದಗಳು. ಸೇವೆಗಳು
ಶೀಘ್ರದಲ್ಲೇ ಲಭಿಸಲಿವೆ’ ಎಂಬ ಸಂದೇಶ ಕಾಣಿಸಿತು.
ಕಾನೂನು ಸಚಿವಾಲಯದ ವೆಬ್ ಸೈಟಿನಲ್ಲೂ ಇಂತಹುದೇ ಸಂದೇಶ ಕಂಡಿತು. ’ವೆಬ್ ಸೈಟಿನಲ್ಲಿ ಅನಿರೀಕ್ಷಿತ ದೋಷ ಸಂಭವಿಸಿದೆ. ತಡವಾಗಿ ಪ್ರಯತ್ನಿಸಿ’ ಎಂಬ ಸಂದೇಶ ಕಾನೂನು ಸಚಿವಾಲಯ ವೆಬ್ ಸೈಟಿನಲ್ಲಿ
ಬಂತು. ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್
ಸೈಟನ್ನು ಕಳೆದ ವರ್ಷ ಕೂಡಾ ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ ಗೃಹ ಸಚಿವಾಲಯದ ಅಧಿಕಾರಿಗಳು
ಅದನ್ನು ನಿರಾಕರಿಸಿದ್ದರು. ನಿರ್ವಹಣೆ ಸಲುವಾಗಿ ವೆಬ್ ಸೈಟ್ ’ಡೌನ್ ಆಗಿದೆ’ ಎಂದು ಅವರು ಪ್ರತಿಪಾದಿಸಿದ್ದರು. ರಕ್ಷಣಾ ಸಚಿವಾಲಯದ ವೆಬ್ ಸೈಟಿಗೆ ಭೇಟಿ ನೀಡಿದವರಿಗೆ ’ವೆಬ್
ಸೈಟಿನಲ್ಲಿ ಅನಿರೀಕ್ಷಿತ ದೋಷ ಕಾಣಿಸಿದೆ. ದಯವಿಟ್ಟು ಆಮೇಲೆ ಪ್ರಯತ್ನಿಸಿ’ ಎಂಬ ಸಂದೇಶ ಎದುರಾಯಿತು. ಹಲವಾರು ಮಾಧ್ಯಮಗಳು
ವೆಬ್ ಸೈಟನ್ನು ಚೀನೀ ಹ್ಯಾಕರುಗಳು ಹ್ಯಾಕ್ ಮಾಡಿದ್ದು, ’ಜೆನ್’ ಎಂಬ ಅರ್ಥವನ್ನು ಕೊಡುವ
ಚೀನೀ ಅಕ್ಷರ ಕಾಣಿಸುತ್ತಿದೆ ಎಂದು ವರದಿ ಮಾಡಿದವು. ಕಳೆದ ವರ್ಷ ಗೃಹ ರಾಜ್ಯ ಸಚಿವೆ ಕಿರಣ್ ರಿಜಿಜು
ಅವರು ಲೋಕಸಭೆಗೆ ನೀಡಿದ್ದ ಲಿಖಿತ ಉತ್ತರ ಒಂದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ೭೦೦ಕ್ಕೂ ಹೆಚ್ಚು
ವೆಬ್ ಸೈಟುಗಳು ಕಳೆದ ೪ ವರ್ಷಗಳಲ್ಲಿ ಹ್ಯಾಕ್ ಆಗಿವೆ. ೭೦೭ರಲ್ಲಿ ೧೯೯ ವೆಬ್ ಸೈಟುಗಳನ್ನು ಕಳೆದ ವರ್ಷ
ಹ್ಯಾಕ್ ಮಾಡಲಾಗಿತ್ತು. ೨೦೧೫ರಲ್ಲಿ ೧೬೪, ೨೦೧೪ರಲ್ಲಿ ೧೫೫, ೨೦೧೩ರಲ್ಲಿ ೧೮೯ ವೆಬ್ ಸೈಟುಗಳನ್ನು
ಹ್ಯಾಕ್ ಮಾಡಲಾಗಿತ್ತು ಎಂದು ತಿಳಿಸಿದ್ದರು. ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು ೮,೩೪೮ ಮಂದಿಯನ್ನು
ಬಂಧಿಸಲಾಗಿದೆ ಎಂದು ರಿಜಿಜು ಅವರು ಇದಕ್ಕೆ ಮುನ್ನ ತಿಳಿಸಿದ್ದರು.
2018: ಜೋಧಪುರ: ೧೯೯೮ರ ಕೃಷ್ಣಮೃಗಗಳ
ಬೇಟೆ ಪ್ರಕರಣದಲ್ಲಿ ತಪ್ಪತಸ್ಥರಾಗಿ ಐದು ಸೆರೆವಾಸದ ಶಿಕ್ಷೆಗೆ ಗುರಿಯಾದ ನಟ ಸಲ್ಮಾನ್ ಖಾನ್ ಅವರ
ಜಾಮೀನು ಅರ್ಜಿಯ ವಿಚಾರಣೆಯನ್ನು ಮುಕ್ತಾಯಗೊಳಿಸಿದ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರು
ತೀರ್ಪನ್ನು ಏಪ್ರಿಲ್ ೭ರ ಶನಿವಾರಕ್ಕೆ ಕಾಯ್ದಿರಿಸಿದರು. ಹೀಗಾಗಿ ಜೋಧಪುರ ಕೇಂದ್ರೀಯ ಸೆರೆಮನೆಯಲ್ಲಿ
ಸಲ್ಮಾನ್ ಖಾನ್ ಅವರ ಸೆರೆವಾಸ ೨ ನೇ ದಿನವೂ ಮುಂದುವರೆಯಿತು. ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡುವ
ಮುನ್ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಉಭಯ ಕಡೆಗಳ ಅಹವಾಲನ್ನು ಆಲಿಸಿದರು. ತನಿಖೆಯಲ್ಲಿ
ಹಲವಾರು ಲೋಪದೋಷಗಳಿವೆ ಎಂದು ಸಲ್ಮಾನ್ ಪರ ವಾದಿಸಿದ ವಕೀಲ ಮಹೇಶ್ ಬೋರಾ ಅವರು ತಿಳಿಸಿದರು. ಬೇಟೆಗೆ
ಸಂಬಂಧಿಸಿದ ಯಾವುದೇ ಪ್ರಕರಣಗಳ ತನಿಖೆಯಲ್ಲಿಯೂ ಸಲ್ಮಾನ್ ಅವರು ಬಂದೂಕು ಬಳಸಿದ್ದನ್ನು ಸಾಬೀತು ಮಾಡಿಲ್ಲ
ಎಂದು ಅವರು ವಾದಿಸಿದರು. ಪ್ರಕರಣದಲ್ಲಿನ ಪ್ರತ್ಯಕ್ಷ
ಸಾಕ್ಷಿಗಳು ನಂಬಿಕೆಗೆ ಅರ್ಹರಲ್ಲ ಎಂದು ನಾವು ವಾದಿಸಿದೆವು ಎಂದು ಬೋರಾ ನುಡಿದರು. ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ ಜೋಶಿ ಅವರು ವಿಚಾರಣಾ
ನ್ಯಾಯಾಲಯದಿಂದ ಪ್ರಕರಣ ಕಡತ ತರಿಸುವಂತೆಯೂ ಸೂಚಿಸಿದರು. ಸಲ್ಮಾನ್
ಖಾನ್ ಅವರು ೧೯೯೮ರಲ್ಲಿ ಹಮ್ ಸಾತ್ ಸಾತ್ ಹೈ ಚಿತ್ರದ ಚಿತ್ರೀಕರಣ ಕಾಲದಲ್ಲಿ, ಅಕ್ಟೋಬರ್ ೧ರ ರಾತ್ರಿ
ಜೋಧಪುರ ಸಮೀಪದ ಕಂಕಣಿ ಗ್ರಾಮದಲ್ಲಿ ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದರು ಎಂದು ಪ್ರಾಸೆಕ್ಯೂಷನ್ ಆಪಾದಿಸಿತ್ತು. ಸಲ್ಮಾನ್ ಖಾನ್ ಅವರನ್ನು ತಪ್ಪಿತಸ್ಥ ಎಂಬುದಾಗಿ ತೀರ್ಮಾನಿಸಿದ್ದ
ನ್ಯಾಯಾಲಯ ಪ್ರಕರಣದ ಇತರ ಆರೋಪಿಗಳಾದ ಸಹನಟರಾದ ಸೈಫ್ ಅಲಿಖಾನ್, ಟಬು, ನೀಲಂ ಮತ್ತು ಸೋನಾಲಿ ಬೇಂದ್ರೆ
ಹಾಗೂ ಗ್ರಾಮಸ್ಥ ದುಷ್ಯಂತ್ ಸಿಂಗ್ ಅವರನ್ನು ಸಂಶಯದ ಲಾಭ ನೀಡಿ ಖುಲಾಸೆ ಮಾಡಿತ್ತು. ಈ ಮಧ್ಯೆ ಗುರುವಾರ ರಾತ್ರಿಯನ್ನು ಸಲ್ಮಾನ್ ಖಾನ್ ಸೆರೆಮನೆಯಲ್ಲಿ
ನಿದ್ರೆಯಿಲ್ಲದೆ ಕಳೆದರು ಎಂದು ತಿಳಿದು ಬಂದಿತು.
ಅವರಿಗೆ ಯಾವುದೇ ವಿಶೇಷ ಸವಲತ್ತುಗಳನ್ನು ನೀಡಲಾಗಿಲ್ಲ
ಎಂದು ಸೆರೆಮನೆ ಅಧಿಕಾರಿಗಳು ತಿಳಿಸಿದರು.
2018: ನವದೆಹಲಿ : ಇಪ್ಪತ್ತು ವರ್ಷಗಳ
ಹಿಂದೆ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದ ಅಪರಾಧಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ
ಜೋಧಪುರ ಸೆರೆಮನೆಯಲ್ಲಿ ಕೈದಿ ನಂಬರ್ ೧೦೬ ಆಗಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ
ಪಾಕಿಸ್ತಾನದ ಖ್ಯಾತ ನಟಿ, ಚೆಲುವೆ, ಮಾವ್ರಾ ಹೊಕೇನ್ ಸಾಮಾಜಿಕ ಮಾಧ್ಯಮ ಟ್ವಿಟ್ಟರಿನಲ್ಲಿ ಬೆಂಬಲ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ
ಹರಿದು ಬಂದಿತು. ಸಲ್ಮಾನ್ ಖಾನ್ ವ್ಯಕ್ತಿತ್ವವನ್ನು
ಹಾಡಿ ಹೊಗಳಿರುವ ಪಾಕ್ ನಟಿ ಮಾವ್ರಾ, "ಸಲ್ಮಾನ್ ಒಬ್ಬ ಒಳ್ಳೆಯ ಮನುಷ್ಯ’ ಎಂದು ಟ್ವೀಟ್ ಮಾಡಿದರು. ‘ಮಾನವ ಹಕ್ಕುಗಳೇ ಇಲ್ಲದ ಈ ಜಗತ್ತಿನಲ್ಲಿ ಹಲವು ವರ್ಷಗಳ
ಹಿಂದೆ ವನ್ಯ ಮೃಗವನ್ನು ಕೊಂದ ಕಾರಣಕ್ಕೆ ಒಬ್ಬ ಮಹೋನ್ನತ ವ್ಯಕ್ತಿಗೆ (ಸಲ್ಮಾನ್ ಅವರಿಗೆ) ವನ್ಯಮೃಗಗಳ
ಕಾಯ್ದೆಯಡಿ ಶಿಕ್ಷಿಸಲಾಗಿದೆ; ನನ್ನನ್ನು ನೀವು ಹೇಗೆ ಬೇಕಾದರೂ ಬೈದು ಖಂಡಿಸಿರಿ; ಆದರೆ ಹೀಗೆ ಒಬ್ಬ
ಒಳ್ಳೆಯ ಮನುಷ್ಯನನ್ನು ಶಿಕ್ಷಿಸುವುದು ಸಂಪೂರ್ಣವಾಗಿ ತಪ್ಪು. ಇಂತಹ ಒಳ್ಳೆಯ ಮನುಷ್ಯರು ನಮ್ಮ ಘನತೆ
ಗೌರವವನ್ನು ಉಳಿಸುವರಾಗಿದ್ದಾರೆ’ ಎಂದು ಮಾವ್ರಾ ಟ್ವಿಟ್ಟರ್
ಸಂದೇಶದಲ್ಲಿ ಬರೆದರು.
ಸಲ್ಮಾನ್
ಖಾನ್ ಅವರಿಗೆ ಪಾಕ್ ನಟಿ ಮಾವ್ರಾ ಬೆಂಬಲ ನೀಡಿರುವುದನ್ನು ಹಲವರು ಸ್ವಾಗತಿಸಿ ಮೆಚ್ಚಿದರೆ, ಹಲವರು
ಇದು ಮಾವ್ರಾ ಪಬ್ಲಿಸಿಟಿ ಸ್ಟಂಟ್ ಎಂದು ಟೀಕಿಸಿದರು.
2018: ನವದೆಹಲಿ: ಕೊಳಚೆ ಪುನರ್ ವಸತಿ
ಪ್ರಾಧಿಕಾರ (ಎಸ್ ಆರ್ ಎ) ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಮಹಡಿ ಜಾಗಕ್ಕಾಗಿ (ಫ್ಲೋರ್ ಸ್ಪೇಸ್ ಇಂಡೆಕ್ಸ್)
ನಕಲಿ ದಾಖಲೆಗಳನ್ನು ಬಳಸಿದ ಆಪಾದನೆಗೆ ಸಂಬಂಧಿಸಿದಂತೆ ಪಿರಮಿಡ್ ಡೆವಲಪರ್ಸ್‌ನ ೪೬೨ ಕೋಟಿ ರೂಪಾಯಿ
ಮೌಲ್ಯದ ೩೩ ಫ್ಲಾಟ್ ಗಳನ್ನು ಜಾರಿ ನಿರ್ದೇಶನಾಲಯವು (ಇಡಿ) ಮುಟ್ಟುಗೋಲು ಹಾಕಿಕೊಂಡಿತು. ಕಾಂಗ್ರೆಸ್ ನಾಯಕ ಬಾಬಾ ಸಿದ್ದಿಖ್ ಮತ್ತು ಇತರರ ವಿರುದ್ಧ
ಮುಂಬೈ ಪೊಲೀಸರು ದಾಖಲಿಸಿದ್ದ ಎಫ್ ಐಆರ್ ಆಧರಿಸಿ ೨೦೧೭ರ ಮಾರ್ಚ್ ತಿಂಗಳಲ್ಲಿ ಹಣ ವರ್ಗಾವಣೆ ಪ್ರಕರಣ
ದಾಖಲಾಗಿತ್ತು. ಶಂಕಿತ ವ್ಯಕ್ತಿಗಳು ನಕಲಿ ರೇಷನ್ ಕಾರ್ಡ್‌ಗಳು, ಫೊಟೋ ಪಾಸುಗಳು, ಅಂಗಡಿ, ಮುಂಗಟ್ಟು
ಪರವಾನಗಿಗಳನ್ನು ತಯಾರಿಸಿ ರಾಜ್ಯ ಸರ್ಕಾರವನ್ನು ವಂಚಿಸಿದ್ದಲ್ಲದೆ, ಮುಂಬೈಯ ಬಾಂದ್ರಾ (ಪಶ್ಚಿಮ)ದಲ್ಲಿನ
ಜಮಾತ್-ಇ-ಜಾಮ್ಹೂರಿಯಾ ಸಿಎಚ್ ಎಸ್ ಲಿಮಿಟೆಡ್ ಮರು ಅಭಿವೃದ್ಧಿಗೆ ಒಪ್ಪಿಗೆ ಪಡೆಯಲು ಈ ನಕಲಿ ದಾಖಲೆಗಳನ್ನೇ
ಎಸ್ ಆರ್ ಎಗೂ ಸಲ್ಲಿಸಿದ್ದರು ಎಂದು ಎಫ್ ಐ ಆರ್ ಆಪಾದಿಸಿತು. ‘ವಂಚನೆಯಿಂದ ಲಾಭಗಳಿಸಲು ಹೆಚ್ಚುವರಿ
ಎಫ್ ಎಸ್ ಐ ಪಡೆಯಲು ಕೂಡಾ ಬೋಗಸ್ ದಾಖಲೆಗಳನ್ನು ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿ
ತಿಳಿಸಿದರು. ಮರು ಅಭಿವೃದ್ಧಿಗಾಗಿ ಡೆವಲಪರ್ಸ್ ಆಗಿ
ಪಿರಮಿಡ್ ಡೆವಲಪರ್ಸ್‌ನ್ನು ಮತ್ತು ವಾಸ್ತುಶಿಲ್ಪಿಯಾಗಿ ನಿಯೋ ಮಾಡರ್ನ್ ಆರ್ಕಿಟೆಕ್ಟ್ ಅವರನ್ನೂ ನೇಮಿಸಲಾಗಿತ್ತು
ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಡೆವಲಪರ್ ಎಸ್ ಆರ್ ಎ ಮುಂದೆ ಪ್ರಸ್ತಾಪ ಸಲ್ಲಿಸುವ ಮೂಲಕ ಕೆಲಸವನ್ನು
ವಹಿಸಿಕೊಂಡಿದ್ದರು. ಯೋಜನೆಗಾಗಿ ೧.೮೭೫ ಎಫ್ ಎಸ್
ಐ ಮಂಜೂರು ಮಾಡಿ ೨೦೦೩ರ ಡಿಸೆಂಬರ್ ೪ರ ದಿನಾಂಕ ನಮೂದಿಸಿದ ಲೆಟರ್ ಆಫ್ ಇಂಟೆನ್ಷನ್ ನ್ನು ಎಸ್‌ಆರ್
ಎ ಬಿಡುಗಡೆ ಮಾಡಿತ್ತು. ಎಸ್ ಆರ್ ಎ ನಿರ್ದೇಶನ ಮೇರೆಗೆ
ಡೆವಲಪರ್ಸ್ ಪರಿಸರ ಸಚಿವಾಲಯವನ್ನು ಸಂಪರ್ಕಿಸಿ ಯೋಜನೆಗೆ ಒಪ್ಪಿಗೆ (ಕ್ಲಿಯರೆನ್ಸ್) ಕೋರಿದರು. ಎಫ್
ಎಸ್ ಐ ೧೯೯೧ರ ಫೆಬ್ರುವರಿಯ ಕಾಲಮಿತಿಯನ್ನು ಮೀರಬಾರದು ಎಂಬ ಷರತ್ತಿನೊಂದಿಗೆ ಪರಿಸರ ಸಚಿವಾಲಯ ಒಪ್ಪಿಗೆ ನೀಡಿತು. ೨೦೦೭ ಮತ್ತು ೨೦೧೦ರಲ್ಲಿ
ತಿದ್ದುಪಡಿಗಳನ್ನು ಮಾಡಲಾಯಿತು. ಕಟ್ಟಡ ನಿರ್ಮಾಣದಲ್ಲಿ
ಹಲವಾರು ಉಲ್ಲಂಘನೆಗಳು ಆದುದನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿತು. ಯೋಜನೆಗೆ ಸಿಗದೇ ಇದ್ದ ಹಲವಾರು
ವಿನಾಯ್ತಿಗಳು ಈ ಯೋಜನೆಗೆ ಲಭಿಸಿದ್ದು ಮತ್ತು ಎಫ್ ಎಸ್ ಐ ಮಿತಿಯನ್ನು ಮೀರಿದ್ದು ಬೆಳಕಿಗೆ ಬಂತು. ೧೬,೭೪೨
ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ನೀಡಲಾಗಿತ್ತು. ಆದರೆ ವಾಸ್ತವವಾಗಿ
೧೮,೬೬೨.೭೦ ಚದರ ಮೀಟರ್ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗಿತ್ತು.
ಡೆವಲಪರ್
ಇದೇ ಕಟ್ಟಡದಲ್ಲಿ ಮಾರಾಟಕ್ಕಾಗಿ ೮೧ ಫ್ಲಾಟ್ ಗಳನ್ನು ನಿರ್ಮಿಸಿ, ಅದನ್ನು ಪಿರಮಿಡ್ ಡೆವಲಪರ್ಸ್ ಮತ್ತು
ಸತ್ರಾ ಬಿಲ್ಡಕೋನ್ ಪ್ರೈವೇಟ್ ಲಿಮಿಟೆಡ್ ಗೆ ಸಮಾನವಾಗಿ ವಿಭಜಿಸಿ ಹಂಚಿದರು. ಪ್ರತಿಯೊಂದು ಫ್ಲಾಟಿನ
ಸರಾಸರಿ ಮಾರಾಟ ಮೌಲ್ಯ ೧೪ ಕೋಟಿ ಎಂದು ಜಾರಿ ನಿರ್ದೇಶನಾಲಯ ಹೇಳಿತು.
2018: ನವದೆಹಲಿ: ಅಯೋಧ್ಯಾ ಭೂ ವಿವಾದ
ಪ್ರಕರಣವನ್ನು ವಿಶಾಲ ಪೀಠಕ್ಕೆ ಒಪ್ಪಿಸಬೇಕು ಎಂಬುದಾಗಿ ಈದಿನ ಪ್ರಬಲ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್ ಅವರು ಸಂವಿಧಾನ
ಪೀಠಕ್ಕೆ ಒಪ್ಪಿಸಲಾಗಿರುವ ಮುಸ್ಲಿಮರಲ್ಲಿನ ಬಹುಪತ್ನಿತ್ವ/ ಬಹುಪತಿತ್ವ ವಿಷಯಕ್ಕಿಂತ ಅಯೋಧ್ಯಾ ವಿಷಯ
ಹೆಚ್ಚು ಮಹತ್ವದ್ದು ಎಂದು ಹೇಳಿದರು. ಮುಖ್ಯ
ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ಪೀಠದ ಮುಂದೆ ಮುಸ್ಲಿಮ್ ಕಕ್ಷಿದಾರರೊಬ್ಬರ ಪರವಾಗಿ ಹಾಜರಾಗಿದ್ದ
ರಾಜೀವ್ ಧವನ್ ಅವರು ಈ ವಾದ ಮಂಡಿಸಿದರು. ಖಟ್ಲೆಗೆ
ಸಂಬಂಧಿಸಿದ ಎಲ್ಲ ಕಕ್ಷಿದಾರರ ಅಹವಾಲುಗಳನ್ನೂ ಕೇಳಿದ ಬಳಿಕ ಪ್ರಕರಣವನ್ನು ವಿಶಾಲ ಪೀಠಕ್ಕೆ ಒಪ್ಪಿಸುವ
ಬಗ್ಗೆ ಪೀಠವು ನಿರ್ಧಾರ ಕೈಗೊಳ್ಳುವುದು ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಹೇಳಿತು. ‘ಮುಸ್ಲಿಮರಲ್ಲಿನ ಬಹುಪತ್ನಿತ್ವ/ ಬಹುಪತಿತ್ವಕ್ಕಿಂತ ಅಯೋಧ್ಯಾ
ಭೂಮಿ ವಿವಾದ ತುಂಬಾ ಹೆಚ್ಚು ಮಹತ್ವದ್ದು ಮತ್ತು ಇಡೀ ದೇಶವೇ ಈ ವಿಚಾರದಲ್ಲಿ ಉತ್ತರ ಬಯಸುತ್ತಿದೆ’ ಎಂದು ಧವನ್ ಪೀಠಕ್ಕೆ ತಿಳಿಸಿದರು. ಸುಪ್ರೀಂಕೋರ್ಟಿನ
ವಿಶೇಷ ಪೀಠವು ನಾಲ್ಕು ಸಿವಿಲ್ ಖಟ್ಲೆಗಳಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ
ವಿರುದ್ಧ ಸಲ್ಲಿಸಲಾದ ಒಟ್ಟು ೧೪ ಮೇಲ್ಮನವಿಗಳ ವಿಚಾರಣೆಯನ್ನು ನಡೆಸಿತು. ಇದಕ್ಕೆ ಮುನ್ನ ಸೂಕ್ಷ್ಮವಾದ
ಬಾಬರಿ ಮಸೀದಿ-ರಾಮ ಮಂದಿರ ಭೂಮಿ ವಿವಾದ ಪ್ರಕರಣದಲ್ಲಿ ಮಧ್ಯಪ್ರವೇಶ ಬಯಸಿದ್ದ ಶ್ಯಾಮ್ ಬೆನೆಗಲ್ ಮತ್ತು
ತೀಸ್ತಾ ಸೆಟಲ್ವಾಡ್ ಮತ್ತಿತರ ಸಾಮಾಜಿಕ ಕಾರ್ಯಕರ್ತರ ಅರ್ಜಿಗಳನ್ನು ತಿರಸ್ಕರಿಸಿದ್ದ ವಿಶೇಷ ಪೀಠವು,
ಮೂಲ ಅರ್ಜಿಗಳ ಕಕ್ಷಿದಾರರಿಗೆ ಮಾತ್ರವೇ ತಮ್ಮ ಅಹವಾಲುಗಳನ್ನು
ಮಂಡಿಸಲು ಅವಕಾಶ ನೀಡುವುದಾಗಿ ಹೇಳಿತ್ತು. ಅಲಹಾಬಾದ್
ಹೈಕೋರ್ಟಿನ ತ್ರಿಸದಸ್ಯ ಪೀಠವು ೨೦೧೦ರಲ್ಲಿ ನೀಡಿದ್ದ ತನ್ನ ೨:೧ರ ಬಹುಮತದ ತೀರ್ಪಿನಲ್ಲಿ ಭೂಮಿಯನ್ನು
ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮಲಲ್ಲಾ ಮಧ್ಯೆ ಸಮಾನವಾಗಿ ವಿಭಜಿಸಲಾಗುವುದು
ಎಂದು ತೀರ್ಪು ನೀಡಿತ್ತು.
2018: ನವದೆಹಲಿ: ವೈಎಸ್ ಆರ್ ಕಾಂಗ್ರೆಸ್ಸಿನ
ಐವರು ಸಂಸತ್ ಸದಸ್ಯರಾದ ವರ ಪ್ರಸಾದ ರಾವ್, ವೈ.ವಿ. ಸುಬ್ಬಾ ರೆಡ್ಡಿ, ಮಿಧುನ್ ರೆಡ್ಡಿ, ವೈ.ಎಸ್.
ಅವಿನಾಶ ರೆಡ್ಡಿ ಮತ್ತು ಮೇಕಪತಿ ಮೋಹನ್ ರೆಡ್ಡಿ ಅವರು ಸಂಸತ್ತಿನ ಮುಂಗಡಪತ್ರ ಅಧಿವೇಶನ ಕೊನೆಯ ದಿನವಾದ
ಈದಿನ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ
ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ಮಾರ್ಚ್
೨೭ರಂದು ಪಕ್ಷದ ಅಧ್ಯಕ್ಷ ಜಗನ್ ಮೋಹನ ರೆಡ್ಡಿ ಅವರು ಕೇಂದ್ರ ಸರ್ಕಾರವು ಆಂಧ್ರ ಪ್ರದೇಶಕ್ಕೆ ವಿಶೇಷ
ಸ್ಥಾನಮಾನ ನೀಡಲು ನಿರಾಕರಿಸಿದ್ದನ್ನು ಪ್ರತಿಭಟಿಸಿ ತಮ್ಮ ಪಕ್ಷದ ಸಂಸತ್ ಸದಸ್ಯರು ಏಪ್ರಿಲ್ ೬ರಂದು
ರಾಜೀನಾಮೆ ನೀಡುವರು ಎಂದು ಪ್ರಕಟಿಸಿದ್ದರು. ‘ಸಂಸತ್ತು
ಅನಿರ್ದಿಷ್ಟ ಅವಧಿಗೆ ಮುಂದೂಡಿಕೆಯಾದರೆ, ಮುಂದೂಡಿಕೆಯಾದ ದಿನವೇ ಅವರು ರಾಜೀನಾಮೆ ಸಲ್ಲಿಸುವರು. ನಮ್ಮ
ಹೋರಾಟದಲ್ಲಿ ಪಾಲ್ಗೊಳ್ಳುವಂತೆ ನಾವು ತೆಲುಗುದೇಶಂ ಪಕ್ಷಕ್ಕೆ (ಟಿಡಿಪಿ) ಮನವಿ ಮಾಡುತ್ತೇವೆ ಎಂದು
ಜಗನ್ ಮೋಹನ್ ರೆಡ್ಡಿ ಅವರು ಮುಪ್ಪಲ ಗ್ರಾಮದಲ್ಲಿ ಕರೆದಿದ್ದ ಸಂಸದರ ತುರ್ತು ಸಭೆಯಲ್ಲಿ ಹೇಳಿದ್ದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಬೆಂಬಲಿಸುವ
ಯಾವುದೇ ಪಕ್ಷದ ಜೊತೆಗೆ ಕೆಲಸ ಮಾಡಲು ತಮ್ಮ ಪಕ್ಷ ಸಿದ್ಧವಿದೆ. ರಾಜೀನಾಮೆ ನೀಡುವುದರಿಂದ ಹಿಡಿದು
ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವವರೆಗಿನ ಎಲ್ಲ ನಿರ್ಧಾರಗಳನ್ನು ಸ್ಪಷ್ಟ ಪ್ರಜ್ಞೆಯೊಂದಿಗೇ
ತೆಗೆದುಕೊಳ್ಳಲಾಗಿದೆ ಎಂದೂ ರೆಡ್ಡಿ ಹೇಳಿದ್ದರು. ಹಿಂದಿನ ದಿನ ರಾತ್ರಿ ೮ ಗಂಟೆಯವರೆಗೆ ರಾಜ್ಯಸಭೆಯಲ್ಲಿಯೇ
ಉಳಿದಿದ್ದ ತೆಲುಗು ದೇಶಂ ಪಕ್ಷದ ಸಂಸದರು ಈದಿನ ಲೋಕಸಭಾಧ್ಯಕ್ಷರ
ಕೊಠಡಿಯ ಒಳಗೆ ಧರಣಿ ನಡೆಸಿದರು. ಸಂಸತ್ತಿನ ಉಭಯ ಸದನಗಳೂ
ಅನಿರ್ದಿಷ್ಟ ಅವಧಿಗೆ ಮುಂದೂಡಿಕೆಯಾದ ಬಳಿಕ ಲೋಕಸಭೆಯ ಪಡಸಾಲೆಯಲ್ಲಿ ಟಿಡಿಪಿ ಸಂಸದರು ಧರಣಿ ಕುಳಿತರು.
ಮಹಾಜನ್ ಅವರು ಸಂಸತ್ ಸದಸ್ಯರ ಜೊತೆ ಮಾತನಾಡಬೇಕು ಎಂದು ಹೇಳಿ ಅವರಿಗೆ ಕರೆ ಕಳುಹಿಸಿದರು. ಸಂಸದರು ಮಹಾಜನ್ ಕಚೇರಿ ತಲುಪಿದಾಗ ಸಭಾಧ್ಯಕ್ಷರು ಅಲ್ಲಿಂದ
ಹೊರಟು ಆಗಿತ್ತು. ಆಗ ಸದಸ್ಯರು ಅವರ ಕೊಠಡಿಯಲ್ಲಿಯೇ ಧರಣಿ ನಡೆಸಲು ನಿರ್ಧರಿಸಿದರು.
2018: ನವದೆಹಲಿ: ಜನವರಿ ೨೯ರಂದು ಆರಂಭಗೊಂಡಿದ್ದ ಮುಂಗಡಪತ್ರ ಅಧಿವೇಶನದ ಎರಡನೇ ಹಂತ ೩೦ ಬೈಠಕ್‌ಗಳನ್ನು ನಡೆಸಿತು,
ಆದರೆ ಕೇವಲ ೪೪ ತಾಸುಗಳ ಕಲಾಪಕ್ಕೆ ಸಾಕ್ಷಿಯಾಗಿ ೧೨೧ ತಾಸುಗಳ ಅಕ್ಷಮ್ಯ ನಷ್ಟಕ್ಕೆ ಗುರಿಯಾಯಿತು. ೨೭ ದಿನಗಳ ಈ ಬೈಠಕ್‌ಗಳಲ್ಲಿ ಒಂದೇ ಒಂದು ತಾಸು ಕೂಡ ಪ್ರಶ್ನಾವಧಿಯನ್ನು
ಕಾಣಲಾಗಿಲ್ಲ; ನಿರಂತರ ಗದ್ದಲ, ಅಡಚಣೆಗಳಿಂದ ಪದೇ ಪದೇ ಮುಂದೂಡಿಕೆಗಳನ್ನು ಅಧಿವೇಶನ ಕಂಡಿತು ಎಂದು
ರಾಜ್ಯಸಭೆಯ ಸಭಾಪತಿ ಎಂ ವೆಂಕಯ್ಯ ನಾಯ್ಡು ವಿಷಾದದಿಂದ ಹೇಳಿದರು. ರಾಜ್ಯಸಭೆಯಲ್ಲಿ ವಿಪಕ್ಷೀಯರ ನಿರಂತರ
ಗದ್ದಲ, ಗಲಾಟೆ, ಕ್ಷೋಭೆಗೆ ಕಾರಣವಾದ ಕೆಲವು ಮುಖ್ಯ ವಿಷಯಗಳೆಂದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ,
ಬ್ಯಾಂಕ್ ಹಗರಣಗಳು, ಕಾವೇರಿ ಜಲ ನಿರ್ವಹಣಾ ಮಂಡಳಿ ಸ್ಥಾಪನೆಗೆ ಆಗ್ರಹ, ಪ್ರತಿಮೆಗಳ ನಾಶ,, ಎಸ್‌ಸಿ/ಎಸ್‌ಟಿ
ಕಾಯಿದೆ ಕುರಿತ ಸುಪ್ರೀಂ ಕೋರ್ಟ್ ಆದೇಶ ಮತ್ತು ಉತ್ತರ ಪ್ರದೇಶದ ಕಸ್‌ಗಂಜ್‌ನಲ್ಲಿನ ಕಾನೂನು ಮತ್ತು
ಸುವ್ಯವಸ್ಥೆ ವಿಚಾರ, ಎರಡನೇ ಹಂತದ ಮುಂಗಡಪತ್ರ ಅಧಿವೇಶನದ ನಾಲ್ಕನೇ ಮೂರಂಶ ಅವಧಿಯು ಕೇವಲ ಗದ್ದಲ,
ಗಲಾಟೆ, ಆಕ್ರೋಶ, ತಾರಕ ಸ್ವರದ ಪ್ರತಿಭಟನೆಗಳನ್ನು ಕಂಡಿತೇ ಹೊರತು ಯಾವುದೇ ಕಲಾಪವನ್ನು ಕಾಣಲಿಲ್ಲ. ರಾಜ್ಯಸಭೆಯ
೨೪೫ನೇ ಅಧಿವೇಶನದ ತನ್ನ ಸಮಾಪನಾ ಭಾಷಣದಲ್ಲಿ ಸಭಾಪತಿ ವೆಂಕಯ್ಯ ನಾಯ್ಡು ಅವರು ’ಇದೊಂದು ಪ್ರಮುಖವಾಗಿ
ಮರೆಯಲಾಗದ ಅಧಿವೇಶನ ಎಂಬುದು ನನಗೆ ಅತ್ಯಂತ ನೋವಿನ ವಿಷಯವಾಗಿದೆ. ಅತ್ಯಂತ ಮಹತ್ವದ ಸಂಸದೀಯ ಸಂಸ್ಥೆಯ
ಹೊಣೆಗಾರಿಕೆಗಳನ್ನು ಮತ್ತು ಜನಾದೇಶವನ್ನು ಸಂಪೂರ್ಣ ಅಗೌರವದಿಂದ ಕಂಡ ಕಳೆದ ಹೋದ ಅವಕಾಶಗಳ ಅಧಿವೇಶನ
ಇದಾಗಿರುವುದು ದುಃಖದ ಸಂಗತಿ’ ಎಂದು ಹೇಳಿದರು.
ರಾಜ್ಯಸಭಾ
ಕಲಾಪಗಳಿಗೆ ನಿರಂತರವಾಗಿ ಒಡ್ಡಲಾದ ತಡೆಯಿಂದಾಗಿ ಅತ್ಯಂತ ಮಹತ್ವದ ೨೦೧೮ರ ಹಣಕಾಸು ಮಸೂದೆಯು ಯಾವುದೇ
ಚರ್ಚೆಯನ್ನೂ ಕಾಣಲಿಲ್ಲ, ಆದರೂ ಗ್ರಾಚ್ಯುಟಿ ಕಾಯ್ದೆಯನ್ನು ಚರ್ಚೆ ಇಲ್ಲದೆ ಪಾಸು ಮಾಡಿದ್ದು ಒಂದು
ವಿಶೇಷ.
2009: ಲೋಕಸಭಾ ಚುನಾವಣೆಗಾಗಿ ಜಾತ್ಯತೀತ ಜನತಾ ದಳವು ತನ್ನ ಪ್ರಣಾಳಿಕೆಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿತು. ಸಣ್ಣ ಮತ್ತು ಅತಿ ಸಣ್ಣ ರೈತರು 1991ರಿಂದೀಚೆಗೆ ಪಡೆದುಕೊಂಡ ಸಾಲವನ್ನು ಸಂಪುರ್ಣ ಮನ್ನಾ ಮಾಡುವ ಭರವಸೆಯನ್ನು ಪಕ್ಷ ನೀಡಿತು. 'ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಣ್ಣ ಮತ್ತು ಅತಿ ಸಣ್ಣ ರೈತರು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದುಕೊಂಡ ಸಾಲವನ್ನು ಮನ್ನಾ ಮಾಡಲಿದೆ. ಕಂತುಗಳ ರೂಪದಲ್ಲಿ ಸರ್ಕಾರವು ಈ ಸಾಲದ ಹಣವನ್ನು ಬ್ಯಾಂಕ್‌ಗಳಿಗೆ ಪಾವತಿಸಲಿದೆ; ಇದರಿಂದ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕುವುದಿಲ್ಲ' ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಪ್ರಣಾಳಿಕೆ ಬಿಡುಗಡೆ ಮಾಡಿ ಅದರ ಸಾರಾಂಶವನ್ನು ವಿವರಿಸಿದರು..
2009: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ವೆಲಿಂಗ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ನಾಲ್ಕನೇ ದಿನದಾಟದಲ್ಲಿಯೇ ಆಸ್ಟ್ರೇಲಿಯಾದ ಮಾರ್ಕ್ ವಾ ಅವರ ಅತಿ ಹೆಚ್ಚು ಟೆಸ್ಟ್ ಕ್ಯಾಚ್‌ಗಳ ವಿಶ್ವ ದಾಖಲೆಯನ್ನು ಮುರಿದರು. ಜಹೀರ್ ಖಾನ್ ಬೌಲಿಂಗ್‌ನಲ್ಲಿ ಕಿವೀಸ್ ಪಡೆಯ ಟಿಮ್ ಮೆಕಂಟ್ಲೋಶ್ ಅವರ ಬ್ಯಾಟ್ ಜೊತೆಗೆ ಸರಸವಾಡಿದ ಚೆಂಡನ್ನು ರಾಹುಲ್ ಆಕರ್ಷಕವಾಗಿ ಹಿಡಿತಕ್ಕೆ ಪಡೆದರು. ಇದರೊಂದಿಗೆ ಟೆಸ್ಟ್ ಕ್ರಿಕೆಟಿನಲ್ಲಿ ಅವರು ಪಡೆದ ಕ್ಯಾಚ್‌ಗಳ ಸಂಖ್ಯೆ 182ಕ್ಕೆಏರಿತು. ಅದರೊಂದಿಗೆ ವಿಶ್ವ ದಾಖಲೆ ಶ್ರೇಯವೂ ಅವರದ್ದಾಯಿತು, ಮಾರ್ಕ್ ವಾ ದಾಖಲೆ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಸರಿದರು. ಕಾಂಗರೂಗಳ ನಾಡಿನ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಅವರು 181 ಕ್ಯಾಚ್ ತೆಗೆದುಕೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು. ಈಗ ದ್ರಾವಿಡ್ ಅವರು ಗರಿಷ್ಠ ಕ್ಯಾಚ್ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತರು. 2002ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಮಾರ್ಕ್ ಅವರು ಕೇವಲ 128 ಟೆಸ್ಟ್‌ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಅದನ್ನು ಮುರಿಯಲು ರಾಹುಲ್‌ಗೆ 134 ಟೆಸ್ಟ್ ಬೇಕಾಯಿತು. ಕರ್ನಾಟಕದ ಕ್ರಿಕೆಟಿಗ ಹೆಚ್ಚು ಕ್ಯಾಚ್‌ಗಳ ವಿಶ್ವ ದಾಖಲೆ ಬರೆಯುವ ನಿರೀಕ್ಷೆ ಹುಸಿಯಾಗಲಿಲ್ಲ. 'ಗೋಡೆ' ಖ್ಯಾತಿಯ ಆಟಗಾರ ರಾಹುಲ್ ಅವರು ನ್ಯೂಜಿಲೆಂಡ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ದಾಖಲೆ ಸಾಧಿಸಿದರು.
2009: ಇಟಲಿಯ ಮಧ್ಯಭಾಗದಲ್ಲಿನ ಅಬ್ರುಝೂ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ ನಾಲ್ಕು ಮಕ್ಕಳು ಸೇರಿ 90 ಮಂದಿ ಮೃತರಾದರು. ಅಬ್ರುಝೂದ ರಾಜಧಾನಿ ಅಕ್ವಿಲಾ ಮತ್ತು ಪ್ರಾಚೀನ ನಗರ ಎಂದೇ ಹೆಸರಾದ ಕ್ಯಾಸ್ಟೆಲ್ನೌವೊ ನಗರಗಳು ಭೂಕಂಪದಿಂದ ಸಾಕಷ್ಟು ಹಾನಿಗೊಳಗಾದವು.. ವಿದ್ಯಾರ್ಥಿ ನಿಲಯ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕಟ್ಟಡಗಳು ನಾಶವಾದವು. ಭೂಕಂಪದ ತೀವ್ರತೆ 5.8 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಯಿತು.
2009: ಅಮೆರಿಕ, ಜಪಾನ್ ಹಾಗೂ ದಕ್ಷಿಣ ಕೊರಿಯಾದ ತೀವ್ರ ಒತ್ತಾಯದ ನಡುವೆಯೂ ಯಾವುದೇ ಎಚ್ಚರಿಕೆಯನ್ನೂ ಲೆಕ್ಕಿಸದೆ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿದ ಉತ್ತರ ಕೊರಿಯಾದ ವಿರುದ್ಧ ತತ್ ಕ್ಷಣಕ್ಕೆ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆ ಭದ್ರತಾ ಮಂಡಲಿ ವಿಫಲವಾಯಿತು. ಜಪಾನ್ ಕೊರಿಕೆಯ ಮೇರೆಗೆ ಹಿಂದಿನ ರಾತ್ರಿ ಸುಮಾರು ಮೂರು ತಾಸು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಲಿ ಸಭೆಯಲ್ಲಿ 15 ಸದಸ್ಯ ರಾಷ್ಟ್ರಗಳ ಮಂಡಲಿಯು ಉತ್ತರ ಕೊರಿಯಾದ ವಿರುದ್ಧ ಶಸ್ತ್ರಾಸ್ತ್ರ ಮತ್ತು ಆರ್ಥಿಕ ದಿಗ್ಬಂಧನ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕರೆ ನೀಡಿದರೂ, ಈ ಬಗೆಗಿನ ಚರ್ಚೆ ಮುಂದುವರೆಸಲು ಮಾತ್ರ ಒಪ್ಪಿಗೆ ನೀಡಲಾಯಿತು. ರಷ್ಯಾ ಮತ್ತು ಚೀನಾ ಸೇರಿದಂತೆ ಕನಿಷ್ಠ ಐದು ರಾಷ್ಟ್ರಗಳು ಉತ್ತರ ಕೊರಿಯಾದ ಕ್ರಮವನ್ನು ಖಂಡಿಸುವ ಅಮೆರಿಕ ಹಾಗೂ ಮಿತ್ರ ದೇಶಗಳ ಅಭಿಪ್ರಾಯಕ್ಕೆ ಭಿನ್ನವಾದ ಅಭಿಮತ ವ್ಯಕ್ತಪಡಿಸಿದವು.
2009: ಐದಾರು ವರ್ಷಗಳ ಹಿಂದೆ ಕೇವಲ 10 ಕೋಟಿ ರೂಪಾಯಿ ಲೆಕ್ಕ ಸರಿದೂಗಿಸಲು ಆರಂಭವಾದ ಅವ್ಯವಹಾರ ಪ್ರತಿ ಹಂತದಲ್ಲೂ ಬೆಳೆಯುತ್ತ ಬೆಳೆಯುತ್ತ ಕೊನೆಗೆ 7,800 ಕೋಟಿ ರೂಪಾಯಿ ದೊಡ್ಡ ಮೊತ್ತಕ್ಕೆ ಬೆಳೆದು ನಿಂತಿತು ಈ ಸತ್ಯಂ ಹಗರಣ ಎಂದು ಲೆಕ್ಕಪರಿಶೋಧಕರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಐಸಿಎಐ (ಭಾರತೀಯ ಲೆಕ್ಕಪರಿಶೋಧಕರ ಸಂಘ) ಮುಂಬೈಯಲ್ಲಿ ಬಹಿರಂಗಪಡಿಸಿತು. ದೇಶದ ನಾಲ್ಕನೇ ದೊಡ್ಡ ಸಾಫ್ಟ್‌ವೇರ್ ಕಂಪೆನಿ ಹೈದರಾಬಾದ್ ಮೂಲದ ಸತ್ಯಂ ಕಂಪ್ಯೂಟರ್‌ನಲ್ಲಿ ನಡೆದ ಈ ಹಗರಣ ಸಾಫ್ಟ್‌ವೇರ್ ಲೋಕದಲ್ಲಿ ಅತಿದೊಡ್ಡ ಹಗರಣ ಎಂಬ ಕುಖ್ಯಾತಿಗೆ ಒಳಗಾದುದು ಇತಿಹಾಸ. ಸತ್ಯಂ ಕಂಪೆನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ. ಶ್ರೀನಿವಾಸ್ ಹಾಗೂ ಪ್ರೈಸ್‌ವಾಟರ್‌ಹೌಸ್-ಬೆಂಗಳೂರು ಶಾಖೆಯಿಂದ ವಜಾಗೊಂಡ ಇಬ್ಬರು ಅಧಿಕಾರಿಗಳ ವಿಚಾರಣೆ ನಡೆಸಿದ ನಂತರ ಈ ಮಾಹಿತಿಯನ್ನು ಐಸಿಎಐ ಬಹಿರಂಗಪಡಿಸಿತು. 'ಐದಾರು ವರ್ಷಗಳ ಹಿಂದೆ ಕೇವಲ 10 ಕೋಟಿ ರೂಪಾಯಿ ಲೆಕ್ಕ ಸರಿದೂಗಿಸಲು ತಪ್ಪು ಲೆಕ್ಕ ನೀಡಲಾಯಿತು. ನಂತರ ಪ್ರತಿ ತ್ರೈಮಾಸಿಕ ವರದಿಯಲ್ಲಿ ಇದು ಬೆಳೆಯುತ್ತಾ ಹೋಯಿತು. 2008ರ ಎರಡನೇ ತ್ರೈಮಾಸಿಕ ಅವಧಿ ವೇಳೆಗೆ ಈ ತಪ್ಪು ಲೆಕ್ಕ ಹತೋಟಿಗೆ ಬಾರದಷ್ಟು ಬೆಳೆದುನಿಂತಿತು' ಎಂದು ಮುಖ್ಯ ಸಿಎಫ್‌ಒ ವಿ. ಶ್ರೀನಿವಾಸ್ ವಿಚಾರಣೆ ವೇಳೆಗೆ ಬಹಿರಂಗಪಡಿಸಿದರು. ಈ ಮಾಹಿತಿಯನ್ನು ಐಸಿಎಐ ಅಧ್ಯಕ್ಷ ಉತ್ತಮ್ ಪ್ರಕಾಶ್ ಅಗರ್‌ವಾಲ್ ನೀಡಿದರು. 'ಕಂಪೆನಿಯ ಸಂಸ್ಥಾಪಕ ಬಿ.ರಾಮಲಿಂಗ ರಾಜು ಹಾಗೂ ಅವರ ಸಹೋದರ ಬಿ. ರಾಮರಾಜು ಅವರೇ ಈ ತಪ್ಪು ಲೆಕ್ಕ ಹಗರಣದ ರೂವಾರಿಗಳು' ಎಂದು ಅವರು ಹೇಳಿದರು.
2008: ಶ್ರೀಲಂಕೆಯ ಗಂಪಾ ಜಿಲ್ಲೆಯ ವೆಲಿವೆರಿಯಾದಲ್ಲಿ ಈದಿನ ಬೆಳಿಗ್ಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಲಂಕಾದ ಹೆದ್ದಾರಿ ಖಾತೆ ಸಚಿವ ಜಯರಾಜ್ ಫರ್ನಾಂಡೋಪುಲೆ ಸೇರಿ 12 ಮಂದಿ ಮೃತರಾದರು. ಸಿಂಹಳ ಮತ್ತು ತಮಿಳರ ಹೊಸ ವರ್ಷಾಚರಣೆಯ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ವೇಳೆಯಲ್ಲಿ ಈ ಬಾಂಬ್ ಸ್ಫೋಟಗೊಂಡಿತು.
2008: ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾದ ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತು ಮಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರಿ ನೌಕರರ ಸೇವಾ ನಿಯಮಕ್ಕೆ ತಿದ್ದುಪಡಿ ತರಲಾಯಿತು. ಇದರಿಂದಾಗಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ನಡೆಸುತ್ತಿದ್ದ ಲೋಕಾಯುಕ್ತಕ್ಕೆ ಮತ್ತಷ್ಟು ಬಲ ಬಂದಿತು. ಈ ವಿಷಯವನ್ನು ಸ್ವತಃ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಈದಿನ ಬಹಿರಂಗ ಪಡಿಸಿದರು. ಲಂಚ ಪಡೆಯುವಾಗ ಸಾಕ್ಷ್ಯ ಸಮೇತ ಸಿಕ್ಕಿ ಬಿದ್ದ ಅಧಿಕಾರಿಗಳನ್ನು ಮಾತ್ರ ಅಮಾನತು ಮಾಡಬಹುದು, ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದಿಸುವ ಆರೋಪಕ್ಕೆ ಒಳಗಾದ ನೌಕರರ ಅಮಾನತು ಅಸಾಧ್ಯ ಎಂಬ ನಿಯಮ ಈವರೆಗೆ ಜಾರಿಯಲ್ಲಿತ್ತು. ಈ ನಿಯಮಕ್ಕೆ ತಿದ್ದುಪಡಿ ತರುವಂತೆ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕೆಲ ತಿಂಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲು ಸರ್ಕಾರ ಆಸಕ್ತಿ ತೋರಿರಲಿಲ್ಲ. ಇದರಿಂದಾಗಿ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿ, ಅಕ್ರಮ ಆಸ್ತಿ ಪತ್ತೆ ಮಾಡಿದರೂ ಆರೋಪಿಗಳನ್ನು ಸೇವೆಯಿಂದ ಅಮಾನತು ಮಾಡಲು ಒತ್ತಡ ಹೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರು ಮಾಧ್ಯಮಗಳ ಮೂಲಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಕೋರಿದ್ದರು. ನೇರವಾಗಿ ಲಂಚ ಪಡೆಯುವುದು ಮತ್ತು ಅಕ್ರಮ ಆಸ್ತಿ ಸಂಪಾದನೆ ಎರಡನ್ನೂ ಒಂದೇ ರೀತಿ ನೋಡುವಂತೆ ಅವರು ಆಗ್ರಹಿಸಿದ್ದರು. ಹಿಂದಿನ ವಾರ ನಡೆದ ರಾಜ್ಯಪಾಲರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಿಢೀರನೆ ಈ ಪ್ರಸ್ತಾವಕ್ಕೆ ಅನುಮೋದನೆ ದೊರೆತಿತ್ತು. ನಿಯಮ ಬದಲಾವಣೆಯ ಕೆಲಸಕ್ಕೂ ಚಾಲನೆ ದೊರೆತಿತ್ತು. ಆದರೆ ಈ ವಿಷಯ ಕೆಲ ದಿನಗಳವರೆಗೂ ಗೋಪ್ಯವಾಗೇ ಉಳಿದಿತ್ತು. `ನಿಯಮಕ್ಕೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಅನುಮೋದನೆ ದೊರೆತಿರುವ ವಿಷಯವನ್ನು ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನನಗೆ ತಿಳಿಸಿದ್ದಾರೆ. ರಾಜ್ಯಪಾಲರ ಸಲಹೆಗಾರರಾದ ಪಿ.ಕೆ.ಎಚ್. ತರಕನ್ ಈ ಸಂಬಂಧ ಪತ್ರವೊಂದನ್ನೂ ಬರೆದಿದ್ದಾರೆ' ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.
2008: ಮಹಿಳೆಯರನ್ನು ಅವರ ಬಣ್ಣದ ಆಧಾರದಲ್ಲಿ `ಕಪ್ಪು ಮಹಿಳೆ' ಎಂದು ಜರಿದರೆ, ಅಥವಾ `ಕುರೂಪಿ' ಎಂದು ಹಳಿದರೆ ಅದು ಮಾನಸಿಕ ಮತ್ತು ಭಾವನಾತ್ಮಕ ಹಿಂಸೆಯಾಗುತ್ತದೆ. ಇಂತಹ ವರ್ತನೆ ಶಿಕ್ಷಾರ್ಹ ಅಪರಾಧ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿತು. ಮಹಿಳೆಯನ್ನು ಆಕೆಯ ರೂಪ ಮತ್ತು ಬಣ್ಣದ ನೆಲೆಯಲ್ಲಿ ಜರಿದು ಮಾನಸಿಕ ಹಿಂಸೆ ನೀಡುವುದು ಆಕೆಗೆ ದೈಹಿಕ ಹಿಂಸೆ ನೀಡುವುದಕ್ಕಿಂತಲೂ ದೊಡ್ಡ ಅಪರಾಧ ಎಂದು ಹೇಳುವ ಮೂಲಕ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಮತ್ತು ನ್ಯಾಯಮೂರ್ತಿ ಜೆ. ಎಂ. ಪಂಚಲ್ ಅವರನ್ನು ಒಳಗೊಂಡ ಪೀಠವು ಮದ್ರಾಸ್ ಹೈಕೋರ್ಟಿನ ತೀರ್ಪನ್ನು ಎತ್ತಿ ಹಿಡಿಯಿತು. ಫರೂಕ್ ಬಟ್ಚಾ ಎಂಬಾತ ತನ್ನ ಪತ್ನಿ ಕಪ್ಪಗಿದ್ದಾಳೆ ಎಂದು ಹೇಳಿ ನಿಂದಿಸಿದ್ದರಿಂದ ಆಕೆ ಮದುವೆಯಾದ ಎರಡು ತಿಂಗಳಲ್ಲೇ ಸಾವಿಗೆ ಶರಣಾಗಿದ್ದಳು. ಅದಕ್ಕೆ ಮೊದಲು ಆಕೆ ತನ್ನ ಸಾವಿಗೆ ಕಾರಣ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಆರೋಪಿ ಪತಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
2008: ಕೇಂದ್ರ ಸಚಿವ ಸಂಪುಟವನ್ನು ಪುನರ್ರಚನೆ ಮಾಡಲಾಯಿತು. ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಂ.ಎಸ್. ಗಿಲ್, ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಜಿತಿನ್ ಪ್ರಸಾದ್ ಅವರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಕೇಂದ್ರದ ಯೋಜನಾ ಖಾತೆ ರಾಜ್ಯ ಸಚಿವರಾಗಿದ್ದ ಎಂ.ವಿ. ರಾಜಶೇಖರನ್ ಅವರ ರಾಜೀನಾಮೆಯೊಂದಿಗೆ ಕೇಂದ್ರ ಸಂಪುಟದಲ್ಲಿ ಕರ್ನಾಟಕದ ಸ್ಥಾನ ಮೂರಕ್ಕೆ ಇಳಿದಂತಾಯಿತು.
2008: ಉಳಿಹಿಡಿದು ಕೆತ್ತಿದಂಥ ದವಡೆ, ಅಜಾನುಬಾಹು ಮತ್ತು ಅನುರಣಿಸುವಂಥ ಧ್ವನಿಯ ಮಹಾನಟ ಚಾರ್ಲಟನ್ ಹೆಸ್ಟನ್ ಲಾಸ್ ಏಂಜಲಿಸಿನಲ್ಲಿ (ಹಿಂದಿನ ದಿನ ಏಪ್ರಿಲ್ 5ರ ರಾತ್ರಿ) ನಿಧನರಾದರು. ಟೆನ್ ಕಮಾಂಡ್ ಮೆಂಟ್ಸ್ ಎಂಬ ಅದ್ಭುತ ಸಿನೆಮಾದಲ್ಲಿ ಹೆಸ್ಟನ್ ಅವರು ಮೊಸೆಸ್ ಪಾತ್ರ ನಿರ್ವಹಿಸಿದ್ದರು. ಜೀವನದ ಮುಸ್ಸಂಜೆಯಲ್ಲಿ ಮರೆಗುಳಿ ರೋಗಕ್ಕೆ ತುತ್ತಾದ ಈ 84ರ ಹಿರಿಯ ಜೀವ ತಮ್ಮ ನಿವಾಸದಲ್ಲಿ ಜೀವಬಿಟ್ಟಾಗ ಪಕ್ಕದಲ್ಲಿ ಪತ್ನಿ ಲಿದಿಯಾ ಕಂಗಳಲ್ಲಿ ನೀರಾಡುತ್ತಿತ್ತು. 1950ರ ದಶಕದಲ್ಲಿ ತೆರೆಗೆ ಬಂದ ಬೆನ್ ಹರ್ ಚಿತ್ರದಲ್ಲಿ ನೀಡಿದ ಇವರ ಸತ್ವಯುತ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ ಬಂದಿತ್ತು.
2008: ಅನಾರೋಗ್ಯದಿಂದ ಬಳಲುತ್ತಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಬಿ.ಎನ್. ಗೋಪಾಲಕೃಷ್ಣ ಬಂಗಾರಪೇಟೆಯಲ್ಲಿ ಹಿಂದಿನ ದಿನ ನಿಧನರಾದರು. ಬಿಇಎಂಎಲ್ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿದ್ದ ಇವರು, 1967ರಿಂದ 1996ರವರೆಗೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಮತ್ತು ವಾಲಿಬಾಲಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹಲವಾರು ಪ್ರಶಸ್ತಿ ಮತ್ತು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.
2008: ಆದಾಯ ತೆರಿಗೆ ಇಲಾಖೆ ಫುಟ್ ಬಾಲ್ ಕ್ಲಬ್ ತಂಡದ ಮಾಜಿ ಆಟಗಾರ ಆರ್. ಕೋಟಿಲಿಂಗಂ (ಚಿಟ್ಟಿ) (56) ಈದಿನ ನಿಧನರಾದರು. ಕೋಟಿಲಿಂಗಂ 1975-76ರಲ್ಲಿ ಕರ್ನಾಟಕ ರಾಜ್ಯ ಜೂನಿಯರ್ ಫುಟ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದರು.
2007: ಸಹ್ಯಾದ್ರಿ ಮಡಿಲಿನ ಹುಟ್ಟೂರು ಕುಪ್ಪಳಿ ಸಮೀಪದಲ್ಲಿ ಕುವೆಂಪು ಸ್ಮಾರಕ ಇರುವ ಕವಿ ಶೈಲದ ಮುಂದಿನ ಸಂದೇಶ ವನದಲ್ಲಿ ದಿವಂಗತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪಾರ್ಥಿವ ಶರೀರವು ಮಧ್ಯಾಹ್ನ 3.30ಕ್ಕೆ ಸರ್ಕಾರಿ ಗೌರವದೊಂದಿಗೆ ಅಗ್ನಿಯಲ್ಲಿ ಲೀನವಾಯಿತು.
2007: ಏಕೀಕರಣ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ಸಂಸದ ಅಳವಂಡಿ ಶ್ರೀನಿವಾಸಮೂರ್ತಿ ಸ್ವಾಮಿ (83) ಅವರು ಕಂಪ್ಲಿಯಲ್ಲಿ ನಿಧನರಾದರು. ವಂದೇಮಾತರಂ, ಲೋಕಸೇವಕ ಸಂಘ, ಅಖಿಲ ಭಾರತ ಮತದಾತಾ ಪರಿಷತ್ ಸಂಘಟನೆಗಳನ್ನು ಕಟ್ಟಿದ್ದ ಅಳವಂಡಿ, ಕರ್ನಾಟಕ ನಾಮಕರಣ ಚಳವಳಿ, ರೈತರ ಏಳಿಗೆಗಾಗಿ ಹೋರಾಟ, ಹೈದರಾಬಾದ್ ನಿಜಾಮನ ವಿರುದ್ಧ ಚಳವಳಿ -ಹೀಗೆ ಹತ್ತಾರು ಚಳವಳಿ, ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
2007: ವಿಶ್ವಕಪ್ ಕ್ರಿಕೆಟ್ಟಿನಲ್ಲಿ ಭಾರತ ತಂಡವು ವಿಫಲವಾದುದಕ್ಕೆ ತಾವೂ ಕೂಡಾ ಹೊಣೆಗಾರರು ಎಂದು ಕೋಚ್ ಗ್ರೆಗ್ ಚಾಪೆಲ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದೆ ತಪ್ಪೊಪ್ಪಿಕೊಂಡು ವರದಿ ನೀಡಿದರು. ಭಾರತದ ಸೋಲಿನ ಹಿನ್ನೆಲೆಯಲ್ಲಿ ಏಪ್ರಿಲ್ 4ರಂದು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
2007: ಉತ್ತರ ಪ್ರದೇಶದಲ್ಲಿ ಮುಸ್ಲಿಮರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸುವಂತಿಲ್ಲ ಎಂಬುದಾಗಿ ಅಲಹಾಬಾದ್ ಹೈಕೋರ್ಟಿನ ಏಕಸದಸ್ಯ ಪೀಠವು ನೀಡಿದ ತೀರ್ಪಿಗೆ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿತು.
2006: ಬಿಜೆಪಿಯ ಭಾರತ ಸುರಕ್ಷಾ ಯಾತ್ರೆ ಆರಂಭಗೊಂಡಿತು. ಪಕ್ಷದ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಅವರು ಗುಜರಾತಿನಲ್ಲಿ ಮತ್ತು ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಒರಿಸ್ಸಾದ ಪುರಿಯಲ್ಲಿ ಏಕಕಾಲಕ್ಕೆ ರಥಯಾತ್ರೆಗೆ ಚಾಲನೆ ನೀಡಿದರು.
2006: ಕೊಚ್ಚಿಯಲ್ಲಿ (ಕೋಚಿಯಲ್ಲಿ) ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತ ಏಳುದಿನಗಳ ಏಕದಿನ ಪಂದ್ಯಗಳಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿರುವಾಗಲೇ ಏಕದಿನ ಸರಣಿಯನ್ನು 4-0 ಅಂತರದಲ್ಲಿ ಗೆದ್ದುಕೊಂಡಿತು.
2006: ನೌಕಾಪಡೆಯ ರಹಸ್ಯ ಯುದ್ಧ ದಾಖಲೆಗಳನ್ನು ಕದ್ದು ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕಾಪಡೆಯ ಚೀಫ್ ಅಡ್ಮಿರಲ್ ಅರುಣ್ ಪ್ರಕಾಶ್ ಅವರ ಸಂಬಂಧಿ ರವಿ ಶಂಕರನ್ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಮೂವರು ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ ಐವರನ್ನು ಬಂಧಿಸಿದರು. ದೆಹಲಿ, ಗೋವಾ, ಚಂಡೀಗಢ, ಮುಂಬೈ ಸೇರಿದಂತೆ 17 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಯಿತು.
2001: ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೆಯ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತಮ್ಮ 100ನೇ ವಿಕೆಟ್ ಗಳಿಸಿದ್ದಲ್ಲದೆ, 10,000 ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.
1980: ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಥಾಪನೆಗೊಂಡಿತು.
1957: ಏಪ್ರಿಲ್ 5ರಂದು ಗಲ್ಲಿಗೆ ಹಾಕಬೇಕಾಗಿದ್ದ ಕೇರಳದ ಅಪರಾಧಿಗಳಿಗೆ ಮರಣದಂಡನೆ ತಪ್ಪಿಸಿ ಬೇರೆ ಶಿಕ್ಷೆ ವಿಧಿಸಿರುವುದಾಗಿ ಕೇರಳದ ಮುಖ್ಯಮಂತ್ರಿ ನಂಬೂದರಿ ಪಾಡ್ ತಿರುವಂತಪುರದಲ್ಲಿ ಪ್ರಕಟಿಸಿದರು. ಕಮ್ಯೂನಿಸ್ಟ್ ಕಾರ್ಯಕರ್ತ ವಾಸುಪಿಳ್ಳೈ ಅವರು ಮರಣದಂಡನೆಯಿಂದ ಮುಕ್ತಿ ಪಡೆದ ಅಪರಾಧಿಗಳಲ್ಲಿ ಒಬ್ಬರು.
1948: ಕಲಾವಿದ ಜ್ಞಾನಮೂರ್ತಿ ಎನ್. ಆರ್. ಜನನ.
1941: ಕಲಾವಿದ ಗುರುರಾಜದಾಸ್ ಜನನ.
1937: ಕಲಾವಿದ ರಾಮಮೂರ್ತಿ ಟಿ.ಎನ್. ಜನನ.
1930: ಬ್ರಿಟಿಷ್ ಸರ್ಕಾರ ಉಪ್ಪಿನ ಮೇಲೆ ಕರ ವಿಧಿಸಿದ್ದನ್ನು ಪ್ರತಿಭಟಿಸಿ ಬೆಳಿಗ್ಗೆ 8.30ರ ವೇಳೆಗೆ ಮಹಾತ್ಮಾ ಗಾಂಧೀಜಿಯವರು ದಂಡಿ ಸಮುದ್ರತೀರದಲ್ಲಿ ಸಾಂಕೇತಿಕವಾಗಿ ಉಪ್ಪು ತಯಾರಿಸಿದರು. ಅಹಮದಾಬಾದಿನ ಸಾಬರಮತಿ ಆಶ್ರಮದಿಂದ ತಮ್ಮ 79 ಮಂದಿ ಅನುಯಾಯಿಗಳೊಂದಿಗೆ ಅವರು ಮಾರ್ಚ್ 12ರಿಂದ ಪಾದಯಾತ್ರೆ ನಡೆಸಿ ಇಲ್ಲಿಗೆ ಆಗಮಿಸಿದ್ದರು. ಅವರ ಈ ಅಹಿಂಸಾತ್ಮಕ ಪ್ರತಿಭಟನೆ `ಉಪ್ಪಿನ ಸತ್ಯಾಗ್ರಹ' ಎಂದೇ ಖ್ಯಾತಿ ಪಡೆಯಿತು.
1907: ಗಮಕ ಕಲಾವಿದ ಹು.ಮ. ರಾಮಾರಾಧ್ಯ (6-4-1907ರಿಂದ 20-12-1973) ಅವರು ಮಲ್ಲಾರಾಧ್ಯ- ಪಾರ್ವತಮ್ಮ ದಂಪತಿಯ ಮಗನಾಗಿ ನಂಜನಗೂಡು ಬಳಿಯ ಹುಲ್ಲುಹಳ್ಳಿಯಲ್ಲಿ ಜನಿಸಿದರು.
1896: ಆಧುನಿಕ ಕಾಲದ ಮೊತ್ತ ಮೊದಲ ಒಲಿಂಪಿಕ್ಸ್ ಅಥೆನ್ಸಿನಲ್ಲಿ ಆರಂಭಗೊಂಡಿತು. 1572 ವರ್ಷಗಳ ಬಳಿಕ ಅಮೆರಿಕದ ಜೇಮ್ಸ್ ಕೊನ್ನೋಲಿ ಮೊದಲ ಒಲಿಂಪಿಕ್ಸ್ ಚಾಂಪಿಯನ್ ಎನ್ನಿಸಿಕೊಂಡ. ಕ್ರಿ.ಶ.369ರಲ್ಲಿ ಕುಸ್ತಿಪಟು ಅರ್ಮೇನಿಯಾದ ರಾಜಕುಮಾರ ವರ್ಸಡೇಟ್ಸ್ ಚಾಂಪಿಯನ್ ಶಿಪ್ ಪಡೆದಿದ್ದ.
1886: ಮೀರ್ ಉಸ್ಮಾನ್ ಅಲಿಖಾನ್ (1886-1967) ಜನ್ಮದಿನ. ಈತ ಹೈದರಾಬಾದಿನ ಕೊನೆಯ ನಿಜಾಮ ಹಾಗೂ ಆ ಕಾಲದ ಜಗತ್ತಿನ ಅತಿ ಶ್ರೀಮಂತರಲ್ಲಿ ಒಬ್ಬನೆಂದು ಕೂಡಾ ಖ್ಯಾತನಾಗಿದ್ದ.
1801: ಸರ್ ಹಗ್ ಹೆನ್ರಿ ರೋಸ್ (1801-1885) ಹುಟ್ಟಿದ ದಿನ. ಬ್ರಿಟಿಷ್ ಫೀಲ್ಡ್ ಮಾರ್ಷಲ್ ಆಗಿದ್ದ ಈತ 1857ರ ಸಿಪಾಯಿ ದಂಗೆ ಕಾಲದಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ವಿರೋಧಕ್ಕೆ ಕೊನೆ ಹಾಡಿದ.
No comments:
Post a Comment