ನಾನು ಮೆಚ್ಚಿದ ವಾಟ್ಸಪ್

Wednesday, April 25, 2018

ಇಂದಿನ ಇತಿಹಾಸ History Today ಏಪ್ರಿಲ್ 24


        ಇಂದಿನ ಇತಿಹಾಸ History Today ಏಪ್ರಿಲ್ 24
2018: ಅಲಿಗಢ
: ಮುಸ್ಲಿಮರ ರಕ್ತದಿಂದ ಕಾಂಗ್ರೆಸ್ ಕೈ ಕಳಂಕಿತವಾಗಿದೆ ಎಂಬುದಾಗಿ ವಿವಾದಿತ ಹೇಳಿಕೆ ನೀಡುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದರು. ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ  ಮಾತನಾಡುತ್ತಿದ್ದ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಮುಜುಗರಕ್ಕೆ ಈಡಾಗಿರುವ ಕಾಂಗ್ರೆಸ್ ಪಕ್ಷವು ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತು.  ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ೧೯೮೪ರಲ್ಲಿ ನಡೆದ ಸಿಖ್ ವಿರೋಧಿ ಗಲಭೆಗಳು ಮತ್ತು ೧೯೯೨ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಸಂಭವಿಸಿದ ಹಿಂಸಾಚಾರಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಲ್ಮಾನ್ ಖುರ್ಷಿದ್ ಅವರು ವಿವಾದಾತ್ಮಕ ಹೇಳಿಕೆ ನೀಡಿದರು. ಇತಿಹಾಸ ಪುನರಾವರ್ತಿಸದಂತೆ ನೋಡಿಕೊಳ್ಳಲು ತಪ್ಪುಗಳಿಂದ ಪಾಠ ಕಲಿಯಬೇಕು ಎಂದು ಅವರು ಜನತೆಗೆ ಸೂಚಿಸಿದರು.  ನಾನು ಕಾಂಗ್ರೆಸ್ ಪಕ್ಷದ ಭಾಗ. ಆದ್ದರಿಂದ ನಮ್ಮ ಕೈಗಳ ಮೇಲೆ ಮುಸ್ಲಿಮರ ರಕ್ತದ ಕಲೆಗಳು ಅಂಟಿಕೊಂಡಿವೆ ಎಂದು ನಾನು ಅಂಗೀಕರಿಸುತ್ತೇನೆ. ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ: ನಮ್ಮ ಕೈಗಳಲ್ಲಿ ಇರುವ ರಕ್ತವನ್ನು  ನಿಮಗೆ ತೋರಿಸಲು ನಾವು ಸಿದ್ಧರಿದ್ದೇವೆ. ಏಕೆಂದರೆ ನಿಮ್ಮ ಕೈಗಳಿಗೆ ರೀತಿ ರಕ್ತ  ಅಂಟದಿರಲಿ ಎಂಬುದು ನಿಮಗೆ ಅರ್ಥವಾಗಲಿ ಎಂಬ ಕಾರಣಕ್ಕಾಗಿ ಎಂದು ಖುರ್ಷಿದ್ ಹೇಳಿಕೆಯನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿತು. ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆದರೆ, ಆಗ ಹಲ್ಲೆಕೋರರ ಕೈಗಳಲ್ಲಿ ಅವರ ರಕ್ತದ ಕಲೆ ಅಂಟಿಕೊಳ್ಳುತ್ತದೆ. ’ನೀವು ಅವರ ಮೇಲೆ ದಾಳಿ ಮಾಡಿದರೆ, ರಕ್ತದ ಕಲೆಗಳು ಅಂಟಿಕೊಳ್ಳುವುದು ನಿಮ್ಮ ಕೈಗಳ ಮೇಲೆಯೇ. ಇತಿಹಾಸದಿಂದ ಏನನ್ನಾದರೂ ಕಲಿಯಿರಿ.  ನಿಮಗೆ ನೀವೇ ಅಂತಹ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳಬೇಡಿ ಎಂದು ಹೇಳಿದ ಖುರ್ಷಿದ್, ’೧೦ ವರ್ಷಗಳ ಬಳಿಕ ನೀವು ಎಎಂಯುಗೆ ಬಂದಾಗ ನಿಮ್ಮಂತಹವರೇ ಒಬ್ಬ ವ್ಯಕ್ತಿ ನಿಮಗೆ ಇಂತಹುದೇ ಪ್ರಶ್ನೆ ಕೇಳುತ್ತಾರೆ ಎಂದು ನುಡಿದರು. ಸಂವಾದ ಕಾರ್ಯಕ್ರಮದಲ್ಲಿ ಆಮೀರ್ ಮಿಂಟೋಯೀ ಎಂಬ ವಿದ್ಯಾರ್ಥಿ, "ಕಾಂಗ್ರೆಸ್ ಪಕ್ಷದ ಆಡಳಿತದಲ್ಲೇ  ಅತ್ಯಧಿಕ ಕೋಮು ಗಲಭೆಗಳು ನಡೆದಿವೆಯಲ್ಲ ಎಂದು ಪ್ರಶ್ನಿಸಿದಾಗ ಖುರ್ಷಿದ್ ಅವರು "ಕಾಂಗ್ರೆಸ್ ಪಕ್ಷ ಮುಸ್ಲಿಮರ ರಕ್ತದಿಂದ ಕಳಂಕಿತವಾಗಿದೆ; ಪಕ್ಷದ ಒಬ್ಬ ನಾಯಕನಾಗಿ ನನ್ನ ಕೈಗಳು ಕೂಡ ರಕ್ತಸಿಕ್ತವಾಗಿವೆ ಎಂದು ನನಗನ್ನಿಸುತ್ತದೆ ಎಂದು ಹೇಳಿದರು.   "ಎಎಂಯು ಕಾಯಿದೆಯನ್ನು ೧೯೪೮ರಲ್ಲಿ ತಿದ್ದುಪಡಿ ಮಾಡಲಾಯಿತು. ೧೯೫೦ರಲ್ಲಿ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಪರಿಣಾಮವಾಗಿ ಮುಸ್ಲಿಮ್ ದಲಿತರು ಎಸ್ಸಿ/ಎಸ್ಟಿ ಕೋಟಾದಡಿ ಮೀಸಲು ವಂಚಿತರಾದರು. ಹಾಶೀಮ್ ಪುರ, ಮಲಯಾನಾ, ಮೀರತ್, ಮುಜಫರನಗರ, ಭಾಗಲ್ಪುರ, ಮೊರಾದಾಬಾದ್, ಆಲಿಗಢದಲ್ಲಿ ಮುಸ್ಲಿಂ ದಂಗೆಗಳು ನಡೆದವು; ಬಾಬರೀ ಮಸೀದಿ ಧ್ವಂಸವಾಯಿತು - ಇವೆಲ್ಲವೂ ಕಾಂಗ್ರೆಸ್ ಆಳ್ವಿಕೆಯ ವೇಳೆಯೇ ನಡೆಯಿತು. ಕಾಂಗ್ರೆಸ್ ಕೈಗಳಿಗೆ ತಗಲಿರುವ ಮುಸ್ಲಿಮರ ರಕ್ತದ ಕಲೆಯನ್ನು ಹೇಗೆ ತಾನೇ ತೊಳೆಯಲು ಸಾಧ್ಯ ಎಂದು ವಿದ್ಯಾರ್ಥಿ ಮಿಂಟೋಯಿ ಪ್ರಶ್ನಿಸಿದ್ದರು.   ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ: ಕಾಂಗ್ರೆಸ್ ಕೈಗೆ  ಮುಸ್ಲಿಮರ ರಕ್ತದ ಕಲೆ ಅಂಟಿದೆ ಎಂಬ ಸಲ್ಮಾನ್ ಖುರ್ಷಿದ್ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ, ಸಂಸತ್ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು, "ಕಾಂಗ್ರೆಸ್ ತನ್ನ ಪಾಪಗಳಿಗೆ ಬೆಲೆ ತೆರಬೇಕಾದ ಕಾಲ ಈಗ ಒದಗಿದೆ ಎಂದು ವ್ಯಂಗ್ಯವಾಡಿದರು.


2018: ನವದೆಹಲಿ : ಕ್ಯಾಸ್ಟಿಂಗ್ ಕೌಚ್ (ಹಾಸಿಗೆ ಸುಖ ನೀಡಿ ಅವಕಾಶ ಪಡೆಯುವ) ಸಂಸ್ಕೃತಿ ಕೇವಲ ಸಿನೆಮಾ ರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ; ಸಂಸತ್ತನ್ನು ಕೂಡ ಬಾಧಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೇಳಿದರು. ಸಿನೇಮಾ ತಾರಾಗಣದಲ್ಲಿ ಅವಕಾಶ ಪಡೆಯಲು ಹುಡುಗಿಯರು ಹಾಸಿಗೆ ಸುಖ ನೀಡುವ ಸಂಸ್ಕೃತಿಯೇ ಕ್ಯಾಸ್ಟಿಂಗ್ ಕೌಚ್ ಆಗಿ  ಕುಖ್ಯಾತಿ ಪಡೆದಿದೆ. ಪಿಡುಗು ಈಗ ಸಂಸತ್ತನ್ನೂ ಕಾಡುತ್ತಿದೆ ಎಂದು ರೇಣುಕಾ ಚೌಧರಿ ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಯಿತು.  ಸಿನೇಮಾ ರಂಗದಲ್ಲಿ  ಕ್ಯಾಸ್ಟಿಂಗ್ ಕೌಚ್ ಸಂಸ್ಕೃತಿಯು ಜೀವನೋಪಾಯವಾಗಿದೆ ಎಂದು ಪ್ರಖ್ಯಾತ ಕೋರಿಯೋಗ್ರಾಫರ್ ಸರೋಜ್ ಖಾನ್ ಹೇಳಿದ ಕೆಲವೇ ತಾಸುಗಳ ಒಳಗೆ ರೇಣುಕಾ ಚೌಧರಿ ಅವರಿಂದ ವಿವಾದಾತ್ಮಾಕ ಹೇಳಿಕೆ ಬಂದಿತು.  "ಕ್ಯಾಸ್ಟಿಂಗ್ ಕೌಚ್ ಸಂಸ್ಕೃತಿ ಕೇವಲ ಸಿನೇಮಾ ರಂಗಕ್ಕೆ ಸೀಮಿತವಾಗಿಲ್ಲ; ಅದು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಇದೆ ಎನ್ನುವುದು ಕಹಿ ಸತ್ಯ. ಪಾರ್ಲಿಮೆಂಟ್ ಅಥವಾ ಇತರ ಕಾರ್ಯಸ್ಥಳಗಳು ಇದರಿಂದ ಮುಕ್ತವಾಗಿವೆ ಎಂದು ಯಾರೂ ಭಾವಿಸಬೇಕಾಗಿಲ್ಲ; ಇದೊಂದು ಕಹಿಯಾದ ಸತ್ಯ ಎಂದು ರೇಣುಕಾ ಚೌಧರಿ ಹೇಳಿದರು.   ಚೌಧರಿ ಅವರು ಸಂದರ್ಭದಲ್ಲಿ "ಭಾರತವೇ ಎದ್ದು ನಿಂತು ನಾನು ಕೂಡ ಅದರ ಬಲಿಪಶು ಎಂದು ಹೇಳಬೇಕು ಎಂಬುದಾಗಿ ಕರೆ ನೀಡಿದರು.   ಖ್ಯಾತ ಕೊರಿಯೋಗ್ರಾಫರ್ ಸರೋಜ್ ಖಾನ್ ಅವರುಕ್ಯಾಸ್ಟಿಂಗ್ ಕೌಚ್ ಜೀವನೋಪಾಯವನ್ನು ಕಲ್ಪಿಸುತ್ತದೆ. ಹುಡುಗಿಯ ಒಪ್ಪಿಗೆ ಪಡೆದೇ ಆಕೆಯನ್ನು ಅನುಕೂಲಕ್ಕೆ ಬಳಸಿಕೊಳ್ಳಲಾಗುತ್ತದೆ. ಮಹಿಳೆಯರನ್ನು ಲೈಂಗಿಕವಾಗಿ ದುರುಪಯೋಗಿಸಿ ಎಸೆದು ಬಿಡಲಾಗುವುದಿಲ್ಲ. ಅವರಿಗೆ ಬದುಕು ಕಲ್ಪಿಸಿಕೊಡಲಾಗುತ್ತದೆ ಎಂದು ಸರೋಜ್ ಖಾನ್ ಹೇಳಿದ್ದರು.  ಸಂಸತ್ತಿನಲ್ಲಿ ಮಹಿಳೆಯರ ಬಗೆಗಿನ ತಾರತಮ್ಯದ ಬಗ್ಗೆ ರೇಣುಕಾ ಚೌಧರಿ ಅವರು ಪ್ರಸ್ತಾಪಿಸಿದ್ದು ಇದೇ ಮೊದಲೇ ಸಲವೇನಲ್ಲ.  ಮನೋಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಹಿಂದೆ ಆಗ್ರಹಿಸಿದ್ದ ರೇಣುಕಾಚೌಧರಿ, ಆದಷ್ಟು ಶೀಘ್ರ ಮಹಿಳಾ ಮೀಸಲಾತಿ ಕಾಯ್ದೆಯನು ಅಂಗೀಕರಿಸಿ ಎಂದು ಆಳುವ ಪಕ್ಷವನ್ನು ಆಗ್ರಹಿಸಿದ್ದರು.  ವರ್ಷದ ಆದಿಯಲ್ಲಿ ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ಗೊತ್ತುವಳಿ ಮೇಲಿನ ಚರ್ಚೆ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರುಆಧಾರ್ ಕಲ್ಪನೆ ೧೯೯೮ರಲ್ಲಿ ಅವರು ಸಾರ್ವತ್ರಿಕವಾಗಿ ಬಳಸಬಹುದಾದ ರಾಷ್ಟ್ರೀಯ ಗುರುತಿನ ಚೀಟಿ ಬಗ್ಗೆ ಮಾತನಾಡಿದ್ದ ಆಗಿನ ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರಿಂದಲೇ ಚಾಲನೆಗೆ ಬಂದಿತ್ತು ಎಂದು ಪ್ರತಿಪಾದಿಸಿದ್ದರು.  ಹಂತದಲ್ಲಿ ಚೌಧರಿ ಅವರು ದೊಡ್ಡದಾಗಿ ಸದ್ದು ಮಾಡಿ ನಗಾಡಿದ್ದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ವರ್ತನೆ ಸರಿಕಾಣಲಿಲ್ಲ. ಚೌಧರಿ ಅವರನ್ನು ಕರೆದ ಉಪರಾಷ್ಟ್ರಪತಿನಿಮಗೆ ಏನಾದರೂ ಸಮಸ್ಯೆ ಇದ್ದರೆ ದಯವಿಟ್ಟು ವೈದ್ಯರ ಬಳಿಗೆ ಹೋಗಿ ಎಂದು ಸೂಚಿಸಿದ್ದರು.  ಈ ಹಂತದಲ್ಲಿ ಮಧ್ಯಪ್ರವೇಶಿಸಿದ್ದ ಪ್ರಧಾನಿ ಮೋದಿರಾಮಾಯಣ ಸರಣಿಯ ಬಳಿಕ ಇಂತಹ ನಗುವನ್ನು ಆಲಿಸಲು ನಮಗೆ ಅವಕಾಶ ಲಭಿಸಿದ್ದು ನಮ್ಮ ಅದೃಷ್ಟ ಎಂದು ಛೇಡಿಸಿದ್ದರು.
ಪ್ರಧಾನಿ ಹೇಳಿಕೆಗೆ ಅಮಿತ್ ಶಾ ಸೇರಿದಂತೆ ಸದಸ್ಯರಿಂದ ಭಾರಿ ಕರತಾಡನದ ಸ್ವಾಗತ ಲಭಿಸಿತ್ತು.  ಒಂದು ಬಾರಿ ನಾಯ್ಡು ಅವರು ಚೌಧರಿ ಅವರಿಗೆ ತೂಕ ಕಡಿಮೆ ಮಾಡಿಕೊಂಡು ಪಕ್ಷದ ತೂಕ ಹೆಚ್ಚಿಸಲು ಪ್ರಯತ್ನಿಸಿ ಎಂದು ಸಲಹೆ ಮಾಡಿದ್ದರು.

2018: ನಾಗಪುರ: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಇಂದ್ರಾವತಿ ನದಿಯಲ್ಲಿ ಏಪ್ರಿಲ್ ೨೪ರ ಮಂಗಳವಾರ ಇನ್ನೂ ೧೫ ಮಂದಿ ಮಾವೋವಾದಿಗಳ ಶವಗಳನ್ನು ಭದ್ರತಾ ಪಡೆಗಳು ಪತ್ತೆ ಹಚ್ಚುವುದರೊಂದಿಗೆ ಕಳೆದ ೭೨ ಗಂಟೆಗಳಲ್ಲಿ ಹತರಾದ ಮಾವೋವಾದಿ ನಕ್ಸಲೀಯರ ಸಂಖ್ಯೆ ೩೭ಕ್ಕೆ ಏರಿತು. ಗಡಚಿರೋಲಿ ಜಿಲ್ಲೆಯ ಕಸನ್ಸೂರ್ ಪ್ರದೇಶದಲ್ಲಿ ಏಪ್ರಿಲ್ ೨೨ರ ಭಾನುವಾರ ನಡೆದ ಘರ್ಷಣೆಯ ಸ್ಥಳದಿಂದ ಸ್ವಲ್ಪ ದೂರದಲ್ಲಿ ಶವಗಳು ಪತ್ತೆಯಾಗಿವೆ. ಘರ್ಷಣೆಯಲ್ಲಿ ಭದ್ರತಾ ಪಡೆಗಳು ೧೬ ಮಂದಿ ಬಂಡುಕೋರರನ್ನು ಕೊಂದು ಹಾಕಿದ್ದವು.
ಇನ್ನೂ ೧೫ ಶವಗಳು ಈದಿನ ಬೆಳಗ್ಗೆ ಪತ್ತೆಯಾಗಿವೆ.  ಎಲ್ಲ ಶವಗಳೂ ಭಾನುವಾರ ಘರ್ಷಣೆ ನಡೆದ ಸ್ಥಳದಲ್ಲೇ ಪತ್ತೆಯಾಗಿವೆ. ಭಾನುವಾರದ ಘರ್ಷಣೆಯಲ್ಲಿ ಒಟ್ಟು ೩೧ ನಕ್ಸಲೀಯರನ್ನು ಹತ್ಯೆಗೈಯಲಾಗಿದೆ ಎಂದು ನಾವು ಈಗ ಹೇಳಬಹುದು ಎಂದು ಮಹಾರಾಷ್ಟ್ರ ಪೊಲೀಸ್ ಇಲಾಖೆಯ ನಕ್ಸಲೀಯ ನಿಗ್ರಹ ಕಾರ್ಯಾಚರಣೆಗಳ ಘಟಕದ ಇನ್ ಸ್ಪೆಕ್ಟರ್ ಜನರಲ್ ಶರದ್ ಶೇಲರ್ ನುಡಿದರು.  ಪ್ರತ್ಯೇಕ ಘಟನೆಯೊಂದರಲ್ಲಿ ಏಪ್ರಿಲ್ ೨೩ರ ರಾತ್ರಿ ತಡವಾಗಿ ಗಡಚಿರೋಲಿ ಜಿಲ್ಲೆಯ ಜಿಮಲ್ಗಟ್ಟ ಪ್ರದೇಶದಲ್ಲಿ ಭದ್ರತಾ ಪಡೆಗಳು ಮಂದಿ ಮಾವೋವಾದಿ ನಕ್ಸಲೀಯರನ್ನು ಕೊಂದು ಹಾಕಿದವು.  ಜಿಮಲ್ಗಟ್ಟದಲ್ಲಿ  ಹತರಾದ ಮಾವೋವಾದಿಗಳ ಪೈಕಿ ನಾಲ್ವರು ಮಹಿಳೆಯರು. ಸಿಪಿಐ (ಮಾವೋವಾದಿ) ವಿಭಾಗೀಯ ಸಮಿತಿಯ ಸದಸ್ಯ ನಂದು ಕೂಡಾ ಘರ್ಷಣೆಯಲ್ಲಿ ಹತನಾಗಿದ್ದಾನೆ. ಒಂದು ಎಸ್ ಎಲ್ ಆರ್, ಒಂದು ಇನ್ಸಾಸ್ ಮತ್ತು ಇತರ ಶಸ್ತ್ರಗಳು ಘರ್ಷಣೆಯ ಸ್ಥಳದಲ್ಲಿ ಪತ್ತೆಯಾಗಿವೆ ಎಂದು ಗಡಚಿರೋಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದರು. ೭೨ ಗಂಟೆಗಳ ಅವಧಿಯಲ್ಲಿ ೩೭ ಮಂದಿ ಮಾವೋವಾದಿಗಳನ್ನು ಕೊಂದಿರುವುದರಿಂದ ದಕ್ಷಿಣ ಗಡಚಿರೋಲಿಯಲ್ಲಿ ಮಾವೋವಾದಿ ಸಂಘಟನೆಯನ್ನು ಪರಿಣಾಮಕಾರಿಯಾಗಿ ಕಿತ್ತುಹಾಕಿದಂತಾಗಿದೆ. ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ಭಾನುವಾರ ನಡೆದ  ಎನ್ ಕೌಂಟರ್ ಕಾರ್ಯಾಚರಣೆಯನ್ನು  ಗಡಚಿರೋಲಿ ಪೊಲೀಸ್ ಪಡೆಗೆ ಸೇರಿದ ಸಿ-೬೦ ಕಮಾಂಡೋಸ್ ಹೆಸರಿನ ವಿಶೇಷ ಕದನ ಘಟಕವು ಕೈಗೊಂಡಿತ್ತು.  ಹದಿನಾರು ನಕ್ಸಲೀಯರು ಘರ್ಷಣೆಯಲ್ಲಿ ಹತರಾದರು. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಶರದ್ ಶೇಲರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದರು. ಮುಂಬೈಯಿಂದ  ೭೫೦ ಕಿಮೀ ದೂರದ ಬಮ್ರಾಗಡದಲ್ಲಿನ ತಡಗಾಂವ್ ಅರಣ್ಯದಲ್ಲಿ  ಏ.22ರ ಭಾನುವಾರ ಬೆಳಗ್ಗೆ ಆರಂಭವಾದ  ಶೋಧ ಕಾರ್ಯಾಚರಣೆ ರಾತ್ರಿಯಾದರೂ ಮುಂದುವರೆದಿತ್ತು.  ಸಾಯಿನಾಥ್ ಮತ್ತು ಸೈನ್ಯು ಎಂಬುದಾಗಿ ಗುರುತಿಸಲಾದ ನಕ್ಸಲೀಯ ಸಂಘಟನೆಯ ಇಬ್ಬರು ಜಿಲ್ಲಾಮಟ್ಟದ ಕಮಾಂಡರ್ ಗಳು ಘರ್ಷಣೆಯಲ್ಲಿ ಹತರಾದವರಲ್ಲಿ ಸೇರಿದ್ದರು.

2018: ನವದೆಹಲಿ: ಗುಂಡುಹೊಡೆದು ಕೊಲ್ಲುವುದು ಅಥವಾ ಮಾರಕ ಇಂಜೆಕ್ಷನ್ ಗಳ ಮೂಲಕ ಸಾಯಿಸುವುದಕ್ಕೆ ಹೋಲಿಸಿದರೆ ಗಲ್ಲಿಗೇರಿಸಿ ಕೊಲ್ಲುವುದು ಬರ್ಬರ, ಅಮಾನವೀಯ ಅಥವಾ ಕ್ರೂರವಲ್ಲ ಎಂದು ಕೇಂದ್ರ ಸರ್ಕಾರವು ಈದಿನ ಸುಪ್ರೀಂಕೋರ್ಟಿಗೆ ತಿಳಿಸಿತು. ಸಾಯುವವರೆಗೆ ಗಲ್ಲಿಗೇರಿಸುವುದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಪ್ರತಿ ಪ್ರಮಾಣಪತ್ರ (ಕೌಂಟರ್ ಅಫಿಡವಿಟ್) ಸಲ್ಲಿಸಿರುವ ಸರ್ಕಾರ ಮರಣದಂಡನೆಗೆ ಗುರಿಯಾದ  ಸೆರೆಯಾಳುಗಳನ್ನು ಅಮೆರಿಕದಲ್ಲಿ ೧೧೦ ವರ್ಷಗಳಿಂದ ಮಾರಕ ಇಂಜೆಕ್ಷನ್ ನೀಡಿ ಸಾಯಿಸುವ ಪದ್ದತಿ ಬಗೆಗಿನ ಮಾಹಿತಿಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ತನ್ನ ಪ್ರತಿಪಾದನೆಗೆ ಸಮರ್ಥನೆಯಾಗಿ ಸಲ್ಲಿಸಿತು.  ಮಾರಕ ಚುಚ್ಚುಮದ್ದು ನೀಡಿ ಕೊಲ್ಲುವುದರಿಂದ ಮರಣದಂಡನೆಗೆ ಗುರಿಯಾದ ಸೆರೆಯಾಳು ಪ್ರಶಾಂತ, ನೋವು ರಹಿತ ಸಾವು ಅನುಭವಿಸುತ್ತಾನೆ ಎಂಬುದು ಕೇವಲ ತೋರಿಕೆಯದು ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಿದ ಕೇಂದ್ರ, ’ ಮಾರಕ ರಾಸಾಯನಿಕ ಯಾವುದು ಎಂದು ಸಾರ್ವಜನಿಕರಿಗೆ ಗೊತ್ತಾದರೆ ಅದರು ದುರುಪಯೋಗುವ ಸಾಧ್ಯತೆಯೂ ಇದೆ ಎಂದು ಪ್ರತಿಪಾದಿಸಿತು.  ಇದೇ ರೀತಿ ಗುಂಡು ಹೊಡೆದು ಸಾಯಿಸುವುದರಲ್ಲಿನ ಭೀಕರತೆಗಳನ್ನು ಸರ್ಕಾರ ವಿವರಿಸಿದೆ. ಹೃದಯಕ್ಕೆ ಹೊಡೆಯುವ ಗುಂಡು, ಸ್ವಲ್ಪ ಗುರಿ ತಪ್ಪಿದರೂ ಸೆರೆಯಾಳುಗಳು ಸಾವಿನವರೆಗೂ ರಕ್ತಸ್ರಾವದ ನೋವಿನಿಂದ  ನರಳುತ್ತಾರೆ. ಇದಲ್ಲದೆ ರಾಷ್ಟ್ರದ ನಾಗರಿಕ ಪೊಲೀಸ್ ಪಡೆಯಿಂದ ಈರೀತಿ ಗುಂಡು ಹೊಡೆಯುವ ಸ್ವಯಂ ಸೇವಕರನ್ನು ಹುಡುಕುವುದು ಕಷ್ಟದ ಕೆಲಸ ಎಂದು ಪ್ರಮಾಣಪತ್ರ ಹೇಳಿತು.  ಮರಣದಂಡನೆ ಜಾರಿಗೊಳಿಸಲು ಗಲ್ಲಿಗೇರಿಸಿ ಕೊಲ್ಲುವ ವಿಧಾನದ ಸಂವಿಧಾನಿಕ ಸಿಂಧುತ್ವವನ್ನು ವಕೀಲರಾದ ರಿಶಿ ಮಲ್ಹೋತ್ರ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಅಪರಾಧ ದಂಡ ಸಂಹಿತೆಯ ಸೆಕ್ಷನ್ ೩೫೪() ಮರಣದಂಡನೆಗೆ ಗುರಿಯಾದ ವ್ಯಕ್ತಿಯನ್ನುಸಾಯುವವರೆಗೆ ನೇಣಿನ ಕುಣಿಕೆಯಲ್ಲಿ ತೂಗಾಡಿಸುವುದು ಕಡ್ಡಾಯ ಎಂದು ಹೇಳಿದೆ.  ಮಾರಕ ಚುಚ್ಚುಮದ್ದಿನಂತಹ ಇತರ ಹಲವಾರು ಸುರಕ್ಷಿತ ಆತ್ಯಾಧುನಿಕ ವಿಧಾನಗಳ ಮೂಲಕ ಸಾಯಿಸುವ ವಿಚಾರ ಹಾಗೂ ಯಾವ ವಿಧಾನವನ್ನು ಅನುಸರಿಸಬೇಕು ಎಂಬ ವಿಚಾರವು ಆರ್ಥಿಕ ಶಕ್ಯತೆ, ಕೌಶಲ್ಯ ಹೊಂದಿರುವ ವ್ಯಕ್ತಿಗಳು, ತಾಂತ್ರಿಕ ಸಿಬ್ಬಂದಿ, ಉಪಕರಣಗಳು ಮತ್ತು ಸಂಪನ್ಮೂಲಗಳ ಲಭ್ಯತೆ ಇತ್ಯಾದಿಗಳನ್ನು ಅವಲಂಬಿಸಿದೆ ಎಂದು ಪ್ರತಿ ಪ್ರಮಾಣಪತ್ರವು ವಿವರಿಸಿತು. ಮರಣದಂಡನೆ ಜಾರಿ ವಿಚಾರವುಶಾಸಕಾಂಗ ನೀತಿಯ ವಿಚಾರ ಎಂದೂ  ಕೇಂದ್ರ ತಿಳಿಸಿತು.  ಅತ್ಯಂತ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ವಿಧಿಸಲಾಗುತ್ತದೆ. ೨೦೧೨ರಿಂದ ೨೦೧೫ರ ನಡುವಣ ಅವಧಿಯಲ್ಲಿ ಕೇವಲ ಮೂರು ಮರಣದಂಡನೆಗಳನ್ನು ಜಾರಿಗೊಳಿಸಲಾಗಿದೆ. ಇತ್ತೀಚೆಗೆ ಭಾರತದ ಕಾನೂನು ಆಯೋಗವು ಭಯೋತ್ಪಾದನೆ ಮತ್ತು ರಾಷ್ಟ್ರದ ವಿರುದ್ಧ ಸಮರ ಸಾರುವ ಅಪರಾಧಗಳಿಗೆ ಮಾತ್ರ ಮರಣದಂಡನೆ ವಿಧಿಸಬೇಕು ಎಂಬ ಶಿಫಾರಸನ್ನು ಮಾಡಿದ್ದು ಅದು ಪರಿಶೀಲನೆಯಲ್ಲಿದೆ ಎಂದು ಸರ್ಕಾರ ಹೇಳಿತು. ಮರಣದಂಡನೆಗೆ ಗುರಿಯಾದ ಅಪರಾಧಿಯು ಶಾಂತಿಯಿಂದ ನೋವು ರಹಿತನಾಗಿ ಸಾಯಬೇಕು. ಮಾನವ ಜೀವಿಯು ಸಾವಿನಲ್ಲೂ ಘನತೆಗೆ ಅರ್ಹನಾಗಿದ್ದಾನೆ ಎಂದು ಸುಪ್ರೀಂಕೋರ್ಟ್ ತನ್ನ ಹಿಂದಿನ ವಿಚಾರಣೆ ಕಾಲದಲ್ಲಿ ಹೇಳಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಹಿಂದೆನೋವುರಹಿತವಾಗಿ ಕೊಲ್ಲುವ ವಿಧಾನವನ್ನು ಅನುಸರಿಸುವುದಕ್ಕಾಗಿ ಅಧುನಿಕ ವಿಜ್ಞಾನದಲ್ಲಿ ಮಾಡಲಾಗಿರುವ ಪ್ರಗತಿಯನ್ನು ಪರಿಗಣಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.  ಆದರೆ, ಮರಣದಂಡನೆಯ ಸಾಂವಿಧಾನಿಕ ಸಿಂಧುತ್ವವನ್ನು ತಾನು ಪ್ರಶ್ನಿಸುತ್ತಿಲ್ಲ, ವಿಚಾರವನ್ನು ದೀನಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮತ್ತು ಅದಕ್ಕೂ ಮುನ್ನ ಬಚನ್ ಸಿಂಗ್ ಪ್ರಕರಣದಲ್ಲಿ ೧೯೮೦ರಲ್ಲಿಯೇ ಸುಪ್ರೀಂಕೋರ್ಟ್ ಇತ್ಯರ್ಥ ಪಡಿಸಿದೆ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತ್ತು. 

2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ವಿರುದ್ಧ ಸಲ್ಲಿಸಲಾದ ದೋಷಾರೋಪ (ವಾಗ್ದಂಡನೆ) ಸೂಚನೆಯನ್ನು ತಿರಸ್ಕರಿಸಿದ ತಮ್ಮ ನಿರ್ಧಾರಸಕಾಲಿಕವಾದದ್ದು, ಅವಸರದ್ದಲ್ಲ ಮತ್ತು ಸುಮಾರು ಒಂದು ತಿಂಗಳ ಕಾಲದ ಅಧ್ಯಯನದ ಬಳಿಕ ಕೈಗೊಂಡದ್ದು ಎಂದು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಎಂ ವೆಂಕಯ್ಯ ನಾಯ್ಡು  ತಿಳಿಸಿದರು.  ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯ ಮತ್ತು ಸುಪ್ರೀಂಕೋರ್ಟಿನ ಘನತೆಯನ್ನು ರಕ್ಷಿಸಿದ್ದಕ್ಕಾಗಿ ತಮಗೆ ಧನ್ಯವಾದ ಅರ್ಪಿಸಿದ ಸುಪ್ರೀಂಕೋರ್ಟ್ ವಕೀಲರನ್ನು ಉದ್ದೇಶಿಸಿ ಮಾತನಾಡುತ್ತಾ ನಾಯ್ಡು ಅವರು ವಿಚಾರವನ್ನು ಹೇಳಿದರು.  ರಾಜ್ಯಸಭಾ ಸಭಾಪತಿಯ ಹುದ್ದೆ ಕೇವಲ ಅಂಚೆ ಕಚೇರಿಯಲ್ಲ. ಅದು ಸಂವಿಧಾನಬದ್ಧ ಅಧಿಕಾರ. ವಿರೋಧ ಪಕ್ಷಗಳು ಸಲ್ಲಿಸಿದ ದೋಷಾರೋಪ ಸೂಚನೆಯನ್ನು ತಿರಸ್ಕರಿಸಿದ ನಿರ್ಧಾರ ಸಕಾಲಿಕವಾದದ್ದು ಮತ್ತು ಅವಸರದಲ್ಲಿ ತೆಗೆದುಕೊಂಡದ್ದಲ್ಲ ಎಂದು ನಾಯ್ಡು ನುಡಿದರು. ಏ.23ರ ಸೋಮವಾರ ದೋಷಾರೋಪ ಸೂಚನೆಯನ್ನು ವಜಾಗೊಳಿಸಿದ ನಾಯ್ಡುವಿರೋಧ ಪಕ್ಷಗಳಿಗೆ ತಮ್ಮ ಪ್ರಕರಣದ ಬಗ್ಗೆ ತಮಗೇ ಖಚಿತತೆ ಇರಲಿಲ್ಲ ಎಂದು ಹೇಳಿದ್ದರು. ದೋಷಾರೋಪ ಸೂಚನೆಯನ್ನು ಸಲ್ಲಿಸುವಲ್ಲಿ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಉಪರಾಷ್ಟ್ರಪತಿಯವರ ನಿರ್ಧಾರವನ್ನುಅವಸರದ್ದು ಮತ್ತು ತಪ್ಪು ಸಲಹೆಯನ್ನು ಆಧರಿಸಿದ್ದು ಎಂದು ಟೀಕಿಸಿತ್ತು.  ಸಭೆಯಲ್ಲಿ ಹಾಜರಿದ್ದ ರಾಜ್ಯಸಭಾ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ ಸಂವಿಧಾನದ ವಿಧಿಗಳಿಗೆ ಸಂಬಂಧಿಸಿದಂತೆ ಮತ್ತು ನ್ಯಾಯಾಧೀಶರ ವಿಚಾರಣೆ ಕಾಯ್ದೆ ೧೯೬೮ಕ್ಕೆ ಸಂಬಂಧಿಸಿದಂತೆ ಸುಮಾರು ಒಂದು ತಿಂಗಳ ಕಾಲ ನಡೆಸಿದ ಅಧ್ಯಯನದ ಬಳಿಕ ನಿರ್ಧಾರ ಕೈಗೊಳ್ಳಲಾಗಿತ್ತು.  ಬರುಣ್ ಕುಮಾರ್ ಸಿನ್ಹ ಮತ್ತು ಇತರರ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ವಕೀಲರುಭಾರತದ ಮುಖ್ಯ ನ್ಯಾಯಮೂರ್ತಿಯ ಹುದ್ದೆ ಮತ್ತು ಸುಪ್ರೀಂಕೋರ್ಟಿನ ಘನತೆ ಉಳಿಸಿದ್ದಕ್ಕಾಗಿ ಉಪರಾಷ್ಟ್ರಪತಿಯವರನ್ನು ಅಭಿನಂದಿಸಿದರು. ಇಂತಹ ಸೂಚನೆ ಮಂಡಿಸುವ ಬಗ್ಗೆ ವಿಪಕ್ಷಗಳು ಸಮಾಲೋಚನೆ ಆರಂಭಿಸಿದಂದಿನಿಂದಲೇ ತಮ್ಮ ಕಚೇರಿಯು ವಿಷಯಕ್ಕೆ ಸಂಬಂಧಿಸಿದ ವಿಧಿಗಳು, ನಿಯಮಾವಳಿಗಳು, ಹಿಂದಿನ ಪ್ರಕರಣಗಳು ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಿತ್ತು ಎಂದು ನಾಯ್ಡು ಹೇಳಿದರು. ಪೀಠವು ವಾಗ್ದಂಡನಾ ನಿರ್ಣಯವನ್ನು ತಿರಸ್ಕರಿಸಿದ್ದು ಇದೇ ಮೊದಲನೆಯ ಬಾರಿ ಅಲ್ಲ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಸಿ.ಶಾ ಅವರ ವಿರುದ್ಧ ಸಲ್ಲಿಸಲಾಗಿದ್ದ ಇದೇ ಮಾದರಿಯ ವಾಗ್ದಂಡನಾ ಸೂಚನೆಯನ್ನು ಆಗಿನ ಲೋಕಸಭೆಯ ಸಭಾಧ್ಯಕ್ಷ ಜಿ.ಎಸ್. ದಿಲ್ಲೋನ್ ತಿರಸ್ಕರಿಸಿದ್ದರು. ನ್ಯಾಯಮೂರ್ತಿ ಶಾ ಅವರು ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರಿದ್ದರು.  ರಾಜ್ಯಸಭೆಯ ಸಭಾಪತಿಯವರು ವಿಷಯವನ್ನು ಅಂಗೀಕರಿಸುವ ಮುನ್ನ ಅಥವಾ ತಿರಸ್ಕರಿಸುವ ಮುನ್ನ ಮೇಲ್ನೋಟಕ್ಕೆ ಅದರಲ್ಲಿ ಹುರುಳಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸಂಬಂಧ ಪಟ್ಟ ಕಾನೂನು (ನ್ಯಾಯಾಧೀಶರ ವಿಚಾರಣಾ ಕಾಯ್ದೆ, ೧೯೬೮, ಸೆಕ್ಷನ್ ) ಹೇಳುತ್ತದೆ. ವಿಚಾರದಲ್ಲಿ ಸಭಾಪತಿಯ ಮೇಲೆ ಸ್ಪಷ್ಟವಾದ ಹೊಣೆಗಾರಿಕೆಯನ್ನು ಹೊರಿಸಲಾಗಿದೆ ಮತ್ತು ಸಭಾಪತಿಯ ಪಾತ್ರವನ್ನು ಕೇವಲ ಅಂಚೆ ಕಚೇರಿ ಪಾತ್ರದಂತೆ ಎಂದು ಆರ್ಥೈಸುವುದು ಸರಿಯಲ್ಲ. ಸಭಾಪತಿಯು ಸಂವಿಧಾನಬದ್ಧ ಪ್ರಾಧಿಕಾರಿಯಂತೆ ಕಾರ್ಯ ನಿರ್ವಹಿಸಬೇಕಾಗಿದ್ದು ಇದು ಅತ್ಯಂತ ಮಹತ್ವದ ಹೊಣೆಗಾರಿಕೆ ಎಂದು ನಾಯ್ಡು ಅವರು ವಕೀಲರಿಗೆ ತಿಳಿಸಿದರು ಎಂದು ಮೂಲಗಳು ಹೇಳಿದವು.  ನಿರ್ಧಾರ ಅವಸರದ್ದಲ್ಲ, ಸಕಾಲಿಕವಾದದ್ದು. ಸಂವಿಧಾನಬದ್ಧ ಪ್ರಾಧಿಕಾರಿಗಳು ಸಕಾಲದಲ್ಲಿ ತಮ್ಮ ಹೊಣೆಗಾರಿಕೆ ನಿಭಾಯಿಸದೇ ಹೋದರೆ ಪ್ರತಿಕೂಲ ಪರಿಣಾಮಗಳಾಗುವ ಸಾಧ್ಯತೆಗಳಿದ್ದವು ಎಂದೂ ನಾಯ್ಡು ಅವರು ಹೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿಯು ರಾಷ್ಟ್ರದ ಅತ್ಯುನ್ನತ ನ್ಯಾಯಾಂಗ ಅಧಿಕಾರಿ. ಅವರಿಗೆ ಸಂಬಂಧಿಸಿದ ಯಾವುದೇ ಸಾರ್ವಜನಿಕ ವಿಷಯವನ್ನು ನಿಯಮಗಳು ತಿಳಿಸಿದ ಪ್ರಕಾರ ಆದಷ್ಟೂ ಬೇಗನೆ ಇತ್ಯರ್ಥ ಪಡಿಸಬೇಕಾದ ಅಗತ್ಯವಿದೆ ಎಂದು ಅವರು ನುಡಿದರು.

2018: ನವದೆಹಲಿ: ಕಾಂಗ್ರೆಸ್ ಪಕ್ಷವು ದೋಷಾರೋಪ (ವಾಗ್ದಂಡನಾ) ಸೂಚನೆಯನ್ನು ಸಿಜೆಐ ಅವರ ವಿರುದ್ಧದ ರಾಜಕೀಯ ದಾಳವಾಗಿ ಬಳಸುತ್ತಿದೆ ಎಂದು ಹಿಂದೆ ಆಪಾದಿಸಿದ್ದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು,  ರಾಜಕೀಯ ಪಕ್ಷಗಳಲ್ಲಿ ಪಾಲುದಾರರೂ ಆಗಿರುವ ಖ್ಯಾತ ವಕೀಲರು ಕೋರ್ಟ್ಗಳ ಆಂತರಿಕ ವಿವಾದಗಳನ್ನು ಸಂಸದೀಯ ಪ್ರಕ್ರಿಯೆಯ ಒಳಕ್ಕೆ ತರುತ್ತಿದ್ದಾರೆ ಎಂದು ಆಪಾದಿಸಿದರು. ನಾಲ್ಕು ದಿನಗಳ ಅವಧಿಯಲ್ಲಿ ಫೇಸ್ ಬುಕ್ ನಲ್ಲಿ ಎರಡನೆಯ ಸುದೀರ್ಘ ಪೋಸ್ಟ್ ಪ್ರಕಟಿಸಿದ ಜೇಟ್ಲಿ ಅವರುವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ನಿರಂತರವಾಗಿ ಸಂಸದೀಯ ಪ್ರಕ್ರಿಯೆಗಳನ್ನು ಬಳಸಿಕೊಂಡು ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಾರೆ ಎಂಬ ಆಪಾದನೆಯಿದೆ. ಆದರೆ ಈಗ ವಕೀಲ ರಾಜಕಾರಣಿಗಳೂ ಇದೇ ವಿಧಾನಗಳನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.   ‘ಬಹಳಷ್ಟು ರಾಜಕೀಯ ಪಕ್ಷಗಳೂ ಇವರಲ್ಲಿ ಕೆಲವರಿಗೆ ನ್ಯಾಯಾಲಯ ಮತ್ತು ಸಂಸದೀಯ ಚರ್ಚೆಗಳಲ್ಲಿನ ಅವರ ವಾಕ್ಚಾತುರ್ಯವನ್ನು ಗಮನಿಸಿ ಅವರನ್ನು ನಾಮಕರಣ ಮಾಡಿವೆ. ಇದು ವಕೀಲ ಸದಸ್ಯರಲ್ಲಿ ಕೋರ್ಟಿನ ಆಂತರಿಕ ಜಗಳಗಳನ್ನು ಸಂಸದೀಯ ಪ್ರಕ್ರಿಯೆಯ ಒಳಕ್ಕೆ ತರುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿಯವರ ವಿರುದ್ಧ ಸಲ್ಲಿಸಲಾದ ದೋಷಾರೋಪ (ವಾಗ್ದಂಡನಾ) ಸೂಚನೆಯು ಇದಕ್ಕೆ ಒಂದು ಉದಾಹರಣೆ ಮಾತ್ರ ಎಂದು ಜೇಟ್ಲಿ ತಮ್ಮ ಪೋಸ್ಟಿನಲ್ಲಿ ಬರೆದರು. ಏ.21ರ ಶನಿವಾರ, ವಿರೋಧಿ ಸಂಸತ್ ಸದಸ್ಯರು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಸಿಜೆಐ ವಿರುದ್ಧದ ದೋಷಾರೋಪ ಸೂಚನೆಯನ್ನು ಸಲ್ಲಿಸಿದ್ದರು.  ದುರ್ವರ್ತನೆಯ ಐದು ನೆಲೆಗಳನ್ನು ಸೂಚನೆಗೆ ನೀಡಲಾಗಿತ್ತು.
ವಿರೋಧಿ ಸಂಸತ್ ಸದಸ್ಯರಿಗೆ ತಮ್ಮ ಪ್ರಕರಣದ ಬಗ್ಗೆ ತಮಗೇ ಖಾತರಿ ಇಲ್ಲ, ಅದು ಕೇವಲ ಗುಮಾನಿಗಳನ್ನು ಆಧರಿಸಿದೆ ಎಂದು ಪ್ರತಿಪಾದಿಸಿ ಸೂಚನೆಯನ್ನು ಸಭಾಪತಿಯವರು ಬಳಿಕ ತಿರಸ್ಕರಿಸಿದ್ದರು.  ದೋಷಾರೋಪ ನಿರ್ಣಯ ವಿಫಲಗೊಳ್ಳುವುದು ಅನಿವಾರ್ಯ ಏಕೆ?’ ಎಂಬ ಶೀರ್ಷಿಕೆಯ ತಮ್ಮ ಪೋಸ್ಟಿನಲ್ಲಿ ಜೇಟ್ಲಿ ಅವರು ಹಲವು ಹಂತಗಳಲ್ಲಿ ಅದು ಹೇಗೆ ತಪ್ಪಾಗಿತ್ತು ಎಂದು ವಿವರಿಸಿದರು.  ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಮತ್ತು ಉನ್ನತ ನ್ಯಾಯಾಂಗದ ಇತರ ನ್ಯಾಯಮೂರ್ತಿಗಳನ್ನು ಹೆದರಿಸುವ ಸಲುವಾಗಿ ಸಮರ್ಥಿಸಲಾಗದ ಐದು ನೆಲೆಗಳನ್ನು ಮುಂದಿಟ್ಟು ದೋಷಾರೋಪ ಸೂಚನೆಯನ್ನು ಸಲ್ಲಿಸಲಾಗಿತ್ತು ಎಂದು ಜೇಟ್ಲಿ ಹೇಳಿದರು.  ಪಕ್ಷಕ್ಕೆ ಆಸಕ್ತಿ ಇರುವ ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳ ನ್ಯಾಯಾಂಗ ಅಭಿಪ್ರಾಯಗಳು ತಮಗೆ ಅನುಕೂಲಕರವಾಗಿ ಇಲ್ಲದೇ ಇದ್ದಲ್ಲಿ ಅವರನ್ನು ವಿವಾದಕ್ಕೆ ಎಳೆಯಲು ಕಾಂಗ್ರೆಸ್ ಪಕ್ಷವು ಸಮರ್ಥವಾಗಿದೆ.  ನಿರ್ಣಯವನ್ನು ಅಂಗೀಕಾರವಾಗುವಂತೆ ಮಾಡುವುದು ತನ್ನ ಉದ್ದೇಶವಲ್ಲ, ಆದರೆ ಭಾರತದ ನ್ಯಾಯಾಂಗವನ್ನು ಬೆದರಿಸುವುದು ತನ್ನ ಉದ್ದೇಶ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾಗಿ ಗೊತ್ತಿತ್ತು ಎಂದು ಜೇಟ್ಲಿ ಬರೆದರು. ದೋಷಾರೋಪ ನೋಟಿಸನ್ನು ಅತ್ಯಂತ ದುರ್ಬಲವಾಗಿ ಸಿದ್ಧಪಡಿಸಲಾಗಿತ್ತು ಮತ್ತು ಅದು ನ್ಯಾಯಮೂರ್ತಿಯವರನ್ನು ಸಂಶಯಾತೀತವಾಗಿ ತಪ್ಪಿತಸ್ಥ ಎಂದು ಸಾಬೀತು ಮಾಡುವಲ್ಲಿ ವಿಫಲವಾಯಿತು ಎಂದು ಕೂಡಾ ಜೇಟ್ಲಿ ಹೇಳಿದರು. ನ್ಯಾಯಮೂರ್ತಿ ಮಿಶ್ರ ಅವರ ವಿರುದ್ಧ ದುರ್ವರ್ತನೆಯ ಐದು ಆರೋಪಗಳನ್ನು ಕಾಂಗ್ರೆಸ್ ಮಾಡಿದ್ದಂತೆಯೇ, ಅರ್ಜಿಯು ದುರುದ್ದೇಶದ್ದು ಮತ್ತು ಅಸಮರ್ಪಕವಾದದ್ದು ಏಕೆ ಎಂಬುದನ್ನು ವಿವರಿಸುವ ಐದು ಅಂಶಗಳನ್ನು ಜೇಟ್ಲಿ ಅವರೂ ತಮ್ಮ ಪೋಸ್ಟಿನಲ್ಲಿ ವಿವರಿಸಿದರು. ಸಭಾಪತಿಯವರ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸುವ ಕಾಂಗ್ರೆಸ್ ನಿರ್ಧಾರವನ್ನುಮಹಾ ಪ್ರಮಾದ (ಬ್ಲಂಡರ್) ಎಂಬುದಾಗಿ ಜೇಟ್ಲಿ ಬಣ್ಣಿಸಿದ್ದಾರೆ. ಶಾಸಕಾಂಗ ಪ್ರಕ್ರಿಯೆಯನ್ನು ನ್ಯಾಯಾಂಗ ಪರಿಶೀಲನೆಗೆ ಒಯ್ಯುವ ತಪ್ಪನ್ನು ಕಾಂಗ್ರೆಸ್ ಮಾಡುತ್ತಿದೆ. ಸಂಸತ್ತು ತನ್ನ ವ್ಯಾಪ್ತಿಯಲ್ಲಿ ಪರಮೋಚ್ಛವಾಗಿದೆ. ಅದರ ಪ್ರಕ್ರಿಯೆಗಳನ್ನು ನ್ಯಾಯಾಂಗ ವಿಮರ್ಶೆಗೆ ಗುರಿಪಡಿಸಲಾಗದು ಎಂದು ಜೇಟ್ಲಿ ಹೇಳಿದರು.
 

2007: ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದ ಸೇವ್ ದಿ ಚಿಲ್ಡ್ರನ್ ಇಂಡಿಯಾ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ವಿಪುಲ ಕದ್ರಿ (71) ಮುಂಬೈಯಲ್ಲಿ ನಿಧನರಾದರು. ಇವರ ಪುತ್ರಿ ಮನಾಶೆಟ್ಟಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪತ್ನಿ.

2007:
ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕು ನೀರಮಾನ್ವಿ ಗ್ರಾಮದಲ್ಲಿ ಮಧ್ಯಾಹ್ನ ಆಟವಾಡಲು ಹೊಲಕ್ಕೆ ಹೋದ ಸಂದೀಪ ಎಂಬ 8 ವರ್ಷದ ಬಾಲಕ ಕೊಳವೆ ಬಾವಿಯೊಳಕ್ಕೆ ಬಿದ್ದ.

2007:
ಬೆಂಗಳೂರು ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿಯು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯಿತು.

2007:
ವಿದೇಶೀ ಮತ್ತು ದೇಶೀಯ ಗೋ ತಳಿಗಳ ಜೀನುಗಳು ತೀರಾ ವಿಭಿನ್ನ ಗುಣಗಳನ್ನು ಹೊಂದಿದ್ದು, ವಿಭಿನ್ನ ತಳಿಗಳ ನಡುವೆ ಸಂಕರ ಸಲ್ಲದು, ಇದರಿಂದ ಮೂಲ ದೇಶೀಯ ಶುದ್ಧ ತಳಿಗಳಿಗೆ ಆಪತ್ತು ಬರುತ್ತದೆ ಎಂದು ಥಾಯ್ಲೆಂಡಿನ ಡಾ. ಡೇವಿಡ್ ಸ್ಟೀವ್ ಹೊಸನಗರದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಗೋ ವಿಚಾರ ಮಂಥನ ಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಾವಯವ ಕೃಷಿ ತಜ್ಞ ಸುಭಾಶ ಪಾಳೇಕರ್ ಅಧ್ಯಕ್ಷತೆ ವಹಿಸಿದ್ದರು.

2006:
ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಎಡಬಿಡದೆ ನಡೆದ ಚಳವಳಿಗೆ ನೇಪಾಳದ ರಾಜಸತ್ತೆ ಕೊನೆಗೂ ಮಣಿಯಿತು. ದಿನ ರಾತ್ರಿ ಟೆಲಿವಿಷನ್ನಿನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ದೊರೆ ಜ್ಞಾನೇಂದ್ರ 2002ರಲ್ಲಿ ತಾವು ವಿಸರ್ಜಿಸಿದ್ದ ಸಂಸತ್ತಿಗೆ ಮರುಜೀವ ನೀಡಿ ಮತ್ತೆ ಸಮಾವೇಶಗೊಳಿಸುವುದಾಗಿಯೂ, ಮುಷ್ಕರ ನಿರತ ಸಪ್ತಪಕ್ಷಗಳ ಮೈತ್ರಿಕೂಟ ಮಾತುಕತೆಗೆ ಬರಬೇಕು ಎಂದೂ ಆಹ್ವಾನ ನೀಡಿದರು. ಚಳವಳಿ ನಿರತ ಪಕ್ಷಗಳು ಪ್ರಕಟಣೆಯನ್ನು ಸ್ವಾಗತಿಸಿದವು.

2006:
ಲಾಭದ ಹುದ್ದೆ ಹೊಂದಿದ ಕಾರಣಕ್ಕಾಗಿ ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಸಮಾಜವಾದಿ ಪಕ್ಷದ ನಾಯಕಿ, ಹಿರಿಯ ಚಿತ್ರನಟಿ ಜಯಾ ಬಚ್ಚನ್ ಅವರು ತಮ್ಮ ವಿರುದ್ಧದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.

2006:
ಜಗತ್ತಿನ ಮೊತ್ತ ಮೊದಲ ತದ್ರೂಪಿ ನಾಯಿ ಸ್ನಪ್ಪಿ ಕೊರಿಯಾದ ಸೋಲ್ ನಲ್ಲಿ ತನ್ನ ಮೊದಲ ಹುಟ್ಟುಹಬ್ಬ ಆಚರಿಸಿತು. ಆದರೆ ನಾಯಿಯನ್ನು ಸೃಷ್ಟಿಸಿದ ವಿಜ್ಞಾನಿಗಳ ತಂಡ ಹಾಗೂ ಅದರ ನಾಯಕ ದಕ್ಷಿಣ ಕೊರಿಯಾದ ಹ್ವಾಂಗ್ ವೂ-ಸಕ್ ಅವರು ವಂಚನೆ ಮತ್ತು ನೈತಿಕತೆಯ ಉಲ್ಲಂಘನೆಗಾಗಿ ವಿಚಾರಣೆಗೆ ಗುರಿಯಾದರು. 2005ರಲ್ಲಿ ದಕ್ಷಿಣ ಕೊರಿಯಾದ ವಿಜ್ಞಾನಿಗಳ ತಂಡ ತದ್ರೂಪಿ ನಾಯಿ ಸೃಷ್ಟಿಯನ್ನು ಪ್ರಕಟಿಸಿದಾಗ ಟೈಮ್ ನಿಯತಕಾಲಿಕ ವರ್ಷದ ಅದ್ಭುತ ಸಂಶೋಧನೆಗಳಲ್ಲಿ ಇದು ಒಂದು ಬಣ್ಣಿಸಿತ್ತು. ಹ್ವಾನ್ ಅವರನ್ನು ಆಗ ಕೊರಿಯಾದ ಹೆಮ್ಮೆ ಎಂದು ಬಣ್ಣಿಸಲಾಗಿತ್ತು. ಆದರೆ ವರ್ಷಾಂತ್ಯದವೇಳೆಗೆ ಮಾನವ ಭ್ರೂಣ ಸಂಗ್ರಹಕ್ಕೆ ಸಂಬಂಧಿಸಿದಂತೆ ನೈತಿಕತೆಯನ್ನು ಉಲ್ಲಂಘಿಸಿದ ಆರೋಪಕ್ಕೆ ಹ್ವಾನ್ ಮತ್ತು ಅವರ ತಂಡ ಗುರಿಯಾಯಿತು.

2006:
ಖ್ಯಾತ ಹಿನ್ನಲೆ ಗಾಯಕ, ಐದು ಫಿಲ್ಮ್ ಫೇರ್ ಪ್ರಶಸ್ತಿಗಳ ವಿಜೇತ ಉದಿತ್ ನಾರಾಯಣ್ ಅವರಿಗೆ ಬಿಹಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಪ್ರಕಾಶ್ ಅವರು ನೋಟಿಸ್ ಕಳುಹಿಸಿ 15 ದಿನಗಳ ಒಳಗಾಗಿ ತಮ್ಮ ಮುಂದೆ ಹಾಜರಾಗಿ ರಂಜನಾ ನಾರಾಯಣ್ ಅವರನ್ನು ತನ್ನ ಪತ್ನಿ ಅಲ್ಲವೆಂದು ಹೇಳಿರುವುದು ಏಕೆ ಎಂದು ವಿವರಣೆ ನೀಡುವಂತೆ ಆಜ್ಞಾಪಿಸಿದರು. ವಾರದ ಹಿಂದೆ ಪಟ್ನಾದ ಐಶಾರಾಮಿ ಹೊಟೇಲ್ ಒಂದರಲ್ಲಿ ಉದಿತ್ ನಾರಾಯಣ್ ತನ್ನ ಪತ್ನಿ ದೀಪಾ ಮತ್ತು ಪುತ್ರ ಆದಿತ್ಯ ಜತೆ ಇದ್ದಾಗ ಅಲ್ಲಿಗೆ ರಂಜನಾ ನುಗ್ಗಿದ್ದರಿಂದ ಉದಿತ್ ನಾರಾಯಣ್ ಇಬ್ಬರನ್ನು ಮದುವೆಯಾದ ವಿಷಯ ಬೆಳಕಿಗೆ ಬಂದಿತ್ತು.

1973:
ಕೇಶವಾನಂದ ಭಾರತೀ ಪ್ರಕರಣದಲ್ಲಿ ಭಾರತದ ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ನೀಡಿದ್ದ ತನ್ನ ಹಿಂದಿನ ತೀರ್ಪನ್ನು ಬದಲಾಯಿಸಿ ಚಾರಿತ್ರಿಕ ತೀರ್ಪು ನೀಡಿತು. ಮೂಲಭೂತ ಹಕ್ಕುಗಳಿಗೆ ಸಂಸತ್ತು ತಿದ್ದುಪಡಿ ತರಲಾಗದು ಮತ್ತು ಅಂತಹ ಯಾವುದೇ ಬದಲಾವಣೆಗಳಿಗೆ ಹೊಸ ಸಂವಿಧಾನಬದ್ಧ ಶಾಸನಸಭೆಯ ರಚನೆಯಾಗಬೇಕು ಎಂಬುದಾಗಿ (ಗೋಲಕನಾಥ್ ಪ್ರಕರಣದಲ್ಲಿ) ಹಿಂದೆ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಬದಲಾಯಿಸಿತು. ಸಂವಿಧಾನದ ಕೆಲವು ಮೂಲಭೂತ ಲಕ್ಷಣಗಳನ್ನು ಮಾತ್ರ ಬದಲಾಯಿಸುವಂತಿಲ್ಲ ಎಂದು ಅದು ಹೇಳಿತು.

1973:
ಸಚಿನ್ ತೆಂಡೂಲ್ಕರ್ ಹುಟ್ಟಿದ ದಿನ.

1971:
ಕಲಾವಿದ ಶ್ರೀಧರ ಎಸ್. ಚವ್ಹಾಣ್ ಜನನ.

1962:
ಕಲಾವಿದೆ ನಿರ್ಮಲ ಕುಮಾರಿ ಜನನ.

1960:
ಕಲಾವಿದ ಕೆ.ವಿ. ಅಕ್ಷರ ಜನನ.

1958:
ಕಲಾವಿದ ರಾಮಾನುಜನ್ ಜಿ.ಎಸ್. ಜನನ.

1947:
ಕಲಾವಿದ ಅಚ್ಯುತರಾವ್ ಪದಕಿ ಜನನ.

1929: ಕನ್ನಡದ ವರನಟ ಡಾ. ರಾಜಕುಮಾರ್ (1929-2006) ಜನ್ಮದಿನ. ಮೂಲತಃ ಮುತ್ತುರಾಜ್ ಎಂಬ ಹೆಸರು ಇದ್ದ ಅವರು ಮುಂದೆ ಕನ್ನಡ ಚಲನಚಿತ್ರ ರಂಗದ ಮೇರು ನಟನಾಗಿ `ರಾಜಕುಮಾರ್' ಎಂಬ ಹೆಸರಿನಿಂದಲೇ ಮನೆ ಮಾತಾದರು. 2006 ಏಪ್ರಿಲ್ 12ರಂದು ತಮ್ಮ ಜನ್ಮದಿನಾಚರಣೆಗೆ 11 ದಿನ ಮೊದಲು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

1927:
ಖ್ಯಾತ ಗಾಯಕಿ ಜಯವಂತಿದೇವಿ ಹಿರೇಬೆಟ್ಟು ಅವರು ಪಡುಕೋಣೆ ರಮಾನಂದರಾಯರು- ಸೀತಾದೇವಿ ದಂಪತಿಯ ಮಗಳಾಗಿ ಮಂಗಳೂರಿನಲ್ಲಿ ಜನಿಸಿದರು. ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ ಪ್ರಶಸ್ತಿಯ ಪ್ರಥಮ ಪುರಸ್ಕೃತೆಯಾದ ಈಕೆ ಮಹಾತ್ಮ ಗಾಂಧೀಜಿವರ ಪ್ರಾರ್ಥನಾ ಸಭೆಯಲ್ಲಿ ವಂದೇ ಮಾತರಂ ಹಾಡಿದ್ದರು. ತ್ಯಾಗಯ್ಯ, ಕಲ್ಪನಾ ಚಿತ್ರಗಳಲ್ಲೂ ಹಿನ್ನೆಲೆ ಗಾಯಕರಾಗಿ ಹಾಡಿದ್ದರು. ಆಲ್ ಇಂಡಿಯಾ ರೇಡಿಯೋದಲ್ಲಿ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು ತುಂಬ ಹೆಸರುವಾಸಿ.

1889:
ಸರ್ ಸ್ಟಾಫರ್ಡ್ ಕ್ರಿಪ್ಸ್ (1889-1952) ಜನ್ಮದಿನ. ಭಾರತಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಇಂಗ್ಲೆಂಡ್ ಮತ್ತು ಭಾರತದ ಮಧ್ಯೆ ಮಾತುಕತೆ ನಡೆಸುವ ಸಲುವಾಗಿ ಈತನ ನೇತೃತ್ವದಲ್ಲಿ ಭಾರತಕ್ಕೆ ನಿಯೋಗವೊಂದು ಬಂದಿತ್ತು. ಅದಕ್ಕೆ `ಕ್ರಿಪ್ಸ್ ಮಿಷನ್' ಎಂದೇ ಹೆಸರು ಬಂದಿತು.

1800:
ಜಗತ್ತಿನಲ್ಲೇ ಅತ್ಯಂತ ದೊಡ್ಡದೆಂದು ಹೆಸರು ಪಡೆದಿರುವ ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್ ವಾಷಿಂಗ್ಟನ್ ಡಿ.ಸಿ.ಯಲ್ಲಿ ಸ್ಥಾಪನೆಯಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)
Posted 24th April 2008 by PARYAYA



No comments:

Post a Comment