Tuesday, April 3, 2018

ಇಂದಿನ ಇತಿಹಾಸ History Today ಏಪ್ರಿಲ್ 02

ಇಂದಿನ ಇತಿಹಾಸ History Today ಏಪ್ರಿಲ್ 02
2018: ನವದೆಹಲಿ: ಸುಪ್ರೀಂಕೋರ್ಟ್ ತೀರ್ಪಿನ ಮೂಲಕ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ (ದೌರ್ಜನ್ಯ ನಿಗ್ರಹ) ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಆಪಾದಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.  ಉತ್ತರ ಭಾರತದಲ್ಲಿ, ವಿಶೇಷವಾಗಿ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ ರಾಜ್ಯಗಳಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ೮ ಮಂದಿ ಬಲಿಯಾದರು.  ಮಧ್ಯ ಪ್ರದೇಶದ ಗ್ವಾಲಿಯರ್, ಮೊರೆನಾ ಮತ್ತು ಭಿಂಡ್ ನಲ್ಲಿ ಹಿಂಸಾಚಾರಗಳಿಗೆ ಐವರು ಬಲಿಯಾಗಿದ್ದರೆ, ರಾಜಸ್ಥಾನದ ಆಳ್ವಾರ್ ನಲ್ಲಿ ಪೊಲೀಸ್ ಗೋಲಿಬಾರಿನಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶದ ಮುಜಾಫ್ಫರನಗರದಲ್ಲಿ ಹಿಂಸಾಚಾರದಲ್ಲಿ ಒಬ್ಬ ಅಸು ನೀಗಿದ್ದಾನೆ ಎಂದು ವರದಿಗಳು ತಿಳಿಸಿದವು. ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ (ದೌರ್ಜನ್ಯ ನಿಗ್ರಹ) ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ್ದ ತೀರ್ಪಿನ ವಿರುದ್ಧ ದೇಶಾದ್ಯಂತ ವಿವಿಧ ದಲಿತ ಸಂಘಟನೆಗಳು ಈದಿನ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದವು. ಪ್ರತಿಭಟನೆ ಉತ್ತರ ಭಾರತದ ಹಲವೆಡೆ ಹಿಂಸೆಗೆ ತಿರುಗಿತು ಎಂದು ವರದಿಗಳು ಹೇಳಿದವು.  ಪಂಜಾಬಿನ ಫಿರೋಜ್ ಪುರದಲ್ಲಿ ಪ್ರತಿಭಟನಕಾರರು ಬಹಿರಂಗವಾಗಿ ಖಡ್ಗಗಳನ್ನು ಝಳಪಿಸುತ್ತಾ ಪ್ರತಿಭಟಿಸಿದರೆ, ಉತ್ತರ ಪ್ರದೇಶದಲ್ಲಿ ಕಾರುಗಳಿಗೆ ಬೆಂಕಿ ಹಚ್ಚಲಾಯಿತು. ದೆಹಲಿಯ ಕನ್ಹಾಟ್‌ಪ್ಲೇಸಿನಲ್ಲಿ ಉದ್ರಿಕ್ತ ದಲಿತರು ರಸ್ತೆಗಳನ್ನು ಬಂದ್ ಮಾಡಿದರು. ದೆಹಲಿ ಪೊಲೀಸರು ಕೆಲವು ಪ್ರತಿಭಟನಕಾರರನ್ನು ಬಂಧಿಸಿದರು. ಕಾಯ್ದೆಯನ್ನು ದುರ್ಬಲಗೊಳಿಸಿದ್ದನ್ನು ವಿರೋಧಿಸಿ ದಲಿತರ ರಾಷ್ಟ್ರದಾದ್ಯಂತ ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಎನ್ ಡಿಎ ಅಂಗ ಪಕ್ಷಗಳು ಮತ್ತು ವಿರೋಧ ಪಕ್ಷಗಳ ತೀವ್ರ ಒತ್ತಡಕ್ಕೆ ಒಳಗಾದ ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು ಸರ್ಕಾರವು ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪುವುದಿಲ್ಲ, ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ  ಪ್ರಬಲ, ಸಮಗ್ರ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ ಎಂದು ಹೇಳಿದರು.   ಪ್ರತಿಭಟನೆ ಕಾಲದಲ್ಲಿ ನಡೆದ ಗೋಲಿಬಾರಿನಲ್ಲಿ ಗ್ವಾಲಿಯರಿನಲ್ಲಿ ಇಬ್ಬರು ಸಾವನ್ನಪ್ಪಿದರೆ, ಭಿಂಡ್ ಮತ್ತು ಮೊರೆನಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಅಸು ನೀಗಿದ್ದಾರೆ ಎಂದು ಭೋಪಾಲ್ ನಲ್ಲಿ ಇನ್ ಸ್ಪೆಕ್ಟರ್ ಜನರಲ್ (ಕಾನೂನು ಸುವ್ಯವಸ್ಥೆ) ಮಕರಂದ ದೇವಸ್ಕರ್ ನುಡಿದರು.  ಹಲವೆಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಭಿಂಡ್ ಜಿಲ್ಲೆಯಲ್ಲಿ ಸೇನೆಯನ್ನು ಕರೆಸಲಾಗಿದೆ. ಪಂಜಾಬಿನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ವರದಿಗಳು ಹೇಳಿದವು.  ಆಗ್ರಾದಲ್ಲಿ ಗಾಳಿಯಲ್ಲಿ ಗುಂಡು: ಪ್ರತಿಭಟನಕಾರರು ಕಾರುಗಳು, ಹೋಟೆಲ್‌ಗಳನ ನು ಧ್ವಂಸಗೊಳಿಸಿ, ಪೊಲೀಸರತ್ತ ಕಲ್ಲು ತೂರಾಟ ನಡೆಸಿದ ಬಳಿಕ ಆಗ್ರಾ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.  ೨೦೦ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಎಸ್ ಎಸ್ ಪಿ ಮಂಜಿಲ್ ಸನಿ ಹೇಳಿದರು. ಈ ಮಧ್ಯೆ ಬಿಎಸ್ ಪಿ ಮುಖ್ಯಸ್ಥ ಮಾಯಾವತಿ ಅವರು ಹಿಂಸಾಚಾರದಲ್ಲಿ ನಿರತರಾದ ಸಮಾಜವಿರೋಧಿ ಶಕ್ತಿಗಳ ವಿರುದ್ಧ ಪ್ರಬಲ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಆದರೆ ಈ ನೆಪದಲ್ಲಿ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವ ದಲಿತರು ಮತ್ತು ಬುಡಕಟ್ಟು ಜನರನ್ನು ದಮನಿಸಬಾರದು ಎಂದು ಅವರು ಹೇಳಿದರು.  ತಮ್ಮ ಹಕ್ಕು ಮತ್ತು ಘನತೆಗಾಗಿ ಬೀದಿಗಿಳಿದಿರುವ ದಲಿತರು ಮತ್ತು ಬುಡಕಟ್ಟು ಜನರನ್ನು ಹಿಂಸೆಗೆ ಬಲಿಪಶುಗಳನ್ನಾಗಿ ಮಾಡಿದರೆ ನಮ್ಮ ಪಕ್ಷವು ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಸಿದರು.  ನಾಗಪುರದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಪ್ರತಿಭಟನಕಾರರು ಧರಣಗಳನ್ನು ನಡೆಸಿದರು. ಪ್ರತಿಭಟನೆಗಳ ಪರಿಣಾಮವಾಗಿ ರೈಲು ಸೇವೆಗಳು ಮತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತು. ಕೆಲವು ಬಸ್ಸುಗಳು ಹಾನಿಗೊಂಡವು ಎಂದು ವರದಿಗಳು ಹೇಳಿದವು.  ಮ.ಪ್ರ., ಉ.ಪ್ರಗಳಲ್ಲಿ ಆರ್ ಎಎಫ್ ಗೆ ಕರೆ: ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಪ್ರತಿಭಟನಕಾರರನ್ನು ನಿಯಂತ್ರಿಸಲು ಕ್ಷಿಪ್ರ ಕಾರ್‍ಯಾಚರಣಾ ಪಡೆಯ (ಆರ್ ಎ ಎಂಟು ಕಂಪೆನಿಗಳನ್ನು ಕೇಂದ್ರವು ನಿಯೋಜಿಸಿತು. ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸಿರುವುದಾಗಿ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿತು.  ಬರ್ಮೆರ್ ನಲ್ಲಿ ಸೆಕ್ಷನ್ ೧೪೪: ಬರ್ಮೆರ್ ಮತ್ತು ಕರೌಲಿ ಜಿಲ್ಲೆಗಳಲ್ಲಿ ಹಿಂಸಾಚಾರ ಮತ್ತು ಘರ್ಷಣೆಗಳು ಸಂಭವಿಸಿದ್ದನ್ನು ಅನುಸರಿಸಿ ಸಿಆರ್ ಪಿಸಿ ಸೆಕ್ಷನ್ ೧೪೪ರ ಅಡಿ ನಿಷೇಧಾಜ್ಞ ವಿಧಿಸಲಾಯಿತು. ಏಪ್ರಿಲ್ ೩ರವರೆಗೆ ಅಂತರ್ಜಾಲ (ಇಂಟರ್ ನೆಟ್) ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.  ಮ.ಪ್ರ. ಗೋಲಿಬಾರಿಗೆ ೧ ಬಲಿ: ಮೊರೆನಾ ಜಿಲ್ಲೆಯಲ್ಲಿ ಗೋಲಿಬಾರಿಗೆ ವಿದ್ಯಾರ್ಥಿ ನಾಯಕ ರಾಹುಲ್ ಪಾಠಕ್ ಬಲಿಯಾಗುವುದರ ಜೊತೆಗೆ ಇತರ ಹಲವರು ಹಿಂಸಾಚಾರದಲ್ಲಿ ಗಾಯಗೊಂಡದ್ದನ್ನು ಅನುಸರಿಸಿ ಮಧ್ಯಪ್ರದೇಶದ ಮೊರೆನಾ, ಗ್ವಾಲಿಯರ್ ಮತ್ತು ಭೀಂಡ್ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಯಿತು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಉಮೇಶ ಶುಕ್ಲ ತಿಳಿಸಿದರು.
ಪೊಲೀಸ್ ಗೋಲಿಬಾರಿನಲ್ಲಿ ೬ ಮಂದಿ ಗಾಯಗೊಂಡಿರುವ ಭಿಂಡ್ ಜಿಲ್ಲೆಯಲ್ಲಿ ಸೇನೆಯನ್ನು ಕರೆಸಲಾಗಿದೆ ಎಂದು ಭಿಂಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಖರೆ ತಿಳಿಸಿದರು. ಬಿಹಾರದಲ್ಲಿ: ಬಿಹಾರ ಮತ್ತು ಜಾರ್ಖಂಡಿನ ಮೋತಿಹರಿ, ಸಾಸರಂ, ಸೀತಾಮಡಿ ಮತ್ತಿತರ ಕಡೆ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆಗಳು ನಡೆದವು ಎಂದು ವರದಿಗಳು ಹೇಳಿವೆ.  ಪಾಟ್ನಾದಲ್ಲಿ ಪ್ರತಿಭಟನೆಯನ್ನು ಬೆಂಬಲಿಸಿ ವಿಪಕ್ಷ ನಾಯಕರು ಮೆರವಣಿಗೆ ನಡೆಸಿದರು. ರಾಂಚಿಯಲ್ಲಿ ವಿದ್ಯಾರ್ಥಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಆಶ್ರುವಾಯು ಮತ್ತು ಬೆತ್ತ ಪ್ರಹಾರ ನಡೆಸಿದರು. ವಿಧಾನಸಭೆಯ ಹೊರಭಾಗದಲ್ಲಿ ಪಕ್ಷಭೇಧವಿಲ್ಲದೆ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  ಬಿಜೆಪಿ, ಆರೆಸ್ಸೆಸ್ ಹೊಣೆ- ರಾಹುಲ್: ದಲಿತರ ದುಃಸ್ಥಿತಿಗೆ ಆರೆಸ್ಸೆಸ್ ಮತ್ತು ಬಿಜೆಪಿ ಹೊಣೆ ಎಂಬುದಾಗಿ ದೂರಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ’ಮೋದಿ ಸರ್ಕಾರದಿಂದ ತಮ್ಮ ಹಕ್ಕುಗಳಿಗೆ ರಕ್ಷಣೆ ಬೇಕು ಎಂದು ಒತ್ತಾಯಿಸಿ ಬೀದಿಗಿಳಿದಿರುವ ಸಮುದಾಯದ ’ಸಹೋದರ, ಸಹೋದರಿಯರಿಗೆ ಸೆಲ್ಯೂಟ್ ಹೊಡೆಯುವುದಾಗಿ ಹೇಳಿದರು.   ಬಿಜೆಪಿ, ಆರೆಸ್ಸೆಸ್ ಡಿಎನ್ ಎ ದಲಿತರನ್ನು ಭಾರತೀಯ ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿ ಇರಿಸಿದೆ. ಈ ಚಿಂತನೆಗೆ ಸವಾಲು ಹಾಕುವ ಯಾರೇ ವ್ಯಕ್ತಿಯನ್ನು ಹಿಂಸೆಯ ಮೂಲಕ ದಮನಿಸಲಾಗುತ್ತಿದೆ. ನಮ್ಮ ದಲಿತ ಸಹೋದರ, ಸಹೋದರಿಯರು ಈದಿನ ಮೋದಿ ಸರ್ಕಾರದಿಂದ ತಮ್ಮ ಹಕ್ಕುಗಳಿಗೆ ರಕ್ಷಣೆಯನ್ನು ಆಗ್ರಹಿಸಿ ಬೀದಿಗಳಿಗೆ ಇಳಿದಿದ್ದಾರೆ. ನಾವು ಅವರಿಗೆ ಸೆಲ್ಯೂಟ್ ಹೊಡೆಯುತ್ತೇವೆ ಎಂದು ಅವರು ಟ್ವೀಟ್ ಮಾಡಿದರು.  ಕರ್ಣಿಸೇನಾ- ದಲಿತ ಘರ್ಷಣೆ: ರಾಜಸ್ಥಾನದ ಬರ್ಮೇರ್ ನಲ್ಲಿ ಕರ್ಣಿಸೇನಾ ಮತ್ತು ದಲಿತ ಚಳವಳಿಕಾರರ ನಡುವೆ ಘರ್ಷಣೆ ನಡೆದು ಸುಮಾರು ೨೦ ಮಂದಿ ಗಾಯಗೊಂಡರು. ಆಳ್ವಾರಿನಲ್ಲಿ ಬಂದ್ ಬೆಂಬಲಿಗರು ಮತ್ತು ವ್ಯಾಪಾರಿಗಳ ನಡುವಣ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡರು. ಮುಂಜಾಗರೂಕತಾ ಕ್ರಮವಾಗಿ ರಾಜಸ್ಥಾನ ರೋಡ್ ವೇಸ್ ಮತ್ತು  ಜೈಪುರದ ಸೆಂಟ್ ಬಸ್ ನಿಲ್ದಾಣಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು.  ಜೈಪುರದಲ್ಲಿ ರೈಲು ಸಂಚಾರವೂ ಅಸ್ತವ್ಯಸ್ತಗೊಂಡಿತು. ನವದೆಹಲಿ-ಅಜ್ಮೀರ್ ಶತಾಬ್ದಿ ಎಕ್ಸ್ ಪ್ರೆಸ್ ರೈಲನ್ನು ಖರಿಥಲ್ ಮತ್ತು ಆಳ್ವಾರ್ ಜಿಲ್ಲೆಯಲ್ಲಿ ತಡೆ ಹಿಡಿಯಲಾಯಿತು. ಜೈಪುರ-ದೆಹಲಿ ಡಬ್ಬಲ್ ಡೆಕ್ಕರ್ ಮೇಲೆ ಕಲ್ಲು ತೂರಲಾಯಿತು ಎಂದೂ ವರದಿಗಳು ತಿಳಿಸಿದವು.

2018: ನವದೆಹಲಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ (ದೌರ್ಜನ್ಯ ನಿಗ್ರಹ) ಕಾಯ್ದೆ ೧೯೮೯ರ ಅಡಿಯಲ್ಲಿ ದೂರು ದಾಖಲಾದಾಗ ಆರೋಪಿಯನ್ನು ತತ್ ಕ್ಷಣ ಬಂಧಿಸುವಂತಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಪೀಠವು ನೀಡಿದ ತೀರ್ಪನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿತು. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರವು ಸಮಗ್ರ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ ಎಂದು ಹೇಳುವ ಮೂಲಕ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ದೇಶಾದ್ಯಂತ ತೀವ್ರವಾಗಿ ಪ್ರತಿಭಟನೆಗೆ ಇಳಿದಿರುವ ದಲಿತ ಪ್ರತಿಭಟನಾಕಾರರನ್ನು ಸಂತೈಸಲು ಯತ್ನಿಸಿದರು.  ‘ನಾವು ಸುಪ್ರೀಂಕೋರ್ಟ್ ಆದೇಶವನ್ನು ಒಪ್ಪುವುದಿಲ್ಲ. ಹಿರಿಯ ವಕೀಲರು ಪ್ರಕರಣದಲ್ಲಿ ಪ್ರಬಲ ವಾದ ಮಂಡಿಸಲಿದ್ದಾರೆ ಎಂದು ಸರ್ಕಾರವು ಮರುಪರಿಶೀಲನಾ ಅರ್ಜಿ ಸಲ್ಲಿಸುವಲ್ಲಿ ವಿಳಂಬ ಮಾಡಿದೆ ಎಂಬ ತೀವ್ರ ಟೀಕೆ ಹಾಗೂ ಒತ್ತಡಗಳ ನಡುವೆ ಸಚಿವರು ಪ್ರತಿಪಾದಿಸಿದರು.  ಮಾರ್ಚ್ ೨೦ರಂದು ನೀಡಿದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಕಾಯ್ದೆಯ ಅಡಿಯಲ್ಲಿ ದೂರು ದಾಖಲಾದಾಗ, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುವ ಮುನ್ನ ಪೊಲೀಸರು ಅದರ ಸಾಚಾತನ ಬಗ್ಗೆ ತನಿಖೆ ನಡೆಸಬೇಕು, ಆರೋಪಿಯನ್ನು ತತ್ ಕ್ಷಣ ಬಂಧಿಸುವಂತಿಲ್ಲ ಎಂದು ಹೇಳಿತ್ತು. ಸುಪ್ರೀಂಕೋರ್ಟಿನ ಈ ತೀರ್ಪು ಕಾನೂನಿನ ಮೂಲ ಉದ್ದೇಶವನ್ನೇ ಅಲುಗಾಡಿಸಿದೆ. ಆದ್ದರಿಂದ ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಸರ್ಕಾರ ತನ್ನ ಮರುಪರಿಶೀಲನಾ ಅರ್ಜಿಯಲ್ಲಿ ಸುಪ್ರೀಂಕೋರ್ಟಿಗೆ ಮನವಿ ಮಾಡಿತು.  ‘ಸುಪ್ರೀಂಕೋರ್ಟ್ ತೀರ್ಪು ದೇಶದ ದೊಡ್ಡ ಗಾತ್ರದ ಜನಸಮುದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮತ್ತು ಸಂಸತ್ತಿನ ನೀತಿಗೆ ವಿರುದ್ಧವಾಗಿದೆ ಎಂದೂ ಅರ್ಜಿ ಹೇಳಿತು.  ‘ಕಾನೂನನ್ನು ದುರ್ಬಲಗೊಳಿಸಿದ್ದರಿಂದ ಆರೋಪಿಗಳು ಅದನ್ನು ದುರುಪಯೋಗಿಸಲು ಮತ್ತು ಬಲಿಪಶುಗಳನ್ನು ಬೆದರಿಸಲು ಬಳಸಬಹುದು. ಇದು ವಿಚಾರಣೆಯನ್ನು ತಡೆಯಬಹುದು. ಅಲ್ಲದೆ ಸಂವಿಧಾನದ ಅಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಸದಸ್ಯರ ಹಕ್ಕುಗಳಿಗೆ ನೀಡಲಾದ ಖಾತರಿಗೂ ಚ್ಯುತಿ ಉಂಟು ಮಾಡುತ್ತದೆ ಎಂದು ಅರ್ಜಿ ಹೇಳಿತು.  ಸರ್ಕಾರಿ ನೌಕರನ ವಿರುದ್ಧ ಆತ ಕರ್ತವ್ಯ ನಿರ್ವಹಣೆಯ ವೇಳೆಯಲ್ಲಿ ಏನಾದರೂ ಕಾರಣಕ್ಕೆ ಕಾಯ್ದೆಯ ಅಡಿಯಲ್ಲಿ ದೂರು ದಾಖಲಾದರೆ, ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಸಾಮಾನ್ಯರ ವಿಚಾರದಲ್ಲಿ ಜಿಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೂರನ್ನು ಪರಿಶೀಲಿಸಬೇಕು ಎಂದೂ ಸುಪ್ರೀಂಕೋರ್ಟ್ ತೀರ್ಪು ಹೇಳಿತ್ತು.

2018: ನವದೆಹಲಿ: ಎರಡು ವರ್ಷಗಳಷ್ಟು ಹಳೆಯದಾದ ’ಮಾನನಷ್ಟ ಮೊಕದ್ದಮೆಯನ್ನು ಇತ್ಯರ್ಥಗೊಳಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ದೆಹಲಿಯ ಕೋರ್ಟಿಗೆ ಜಂಟಿ ಮನವಿ ಸಲ್ಲಿಸಿದರು.  ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರು ಬಿಜೆಪಿ ನಾಯಕನ ಬಳಿ ತಮ್ಮ ಮಾನಹಾನಿಕರ ಹೇಳಿಕೆಗಾಗಿ ಕ್ಷಮೆ ಕೋರಿದ ಬಳಿಕ ಉಭಯ ನಾಯಕರೂ ನ್ಯಾಯಾಲಯಕ್ಕೆ ಅಫಿಡವಿಟ್ ಮೂಲಕ ಜಂಟಿ ಅರ್ಜಿ ಸಲ್ಲಿಸಿದರು.  ಕೇಜ್ರಿವಾಲ್ ಅವರು ಈ ಮುನ್ನ ಮಾನನಷ್ಟ ಖಟ್ಲೆ ದಾಖಲಿಸಿದ ಇತರ ಹಲವರ ಬಳಿಯೂ ಈಗಾಗಲೇ ಕ್ಷಮೆ ಕೋರಿರುವ ಹಿನ್ನೆಲೆಯಲ್ಲಿ ಅವರು ಜೇಟ್ಲಿ ಬಳಿ ಕ್ಷಮೆ ಕೋರಿದ್ದು ಅಚ್ಚರಿಯನ್ನೇನೂ ಉಂಟು ಮಾಡಲಿಲ್ಲ.  ನ್ಯಾಯಮೂರ್ತಿ ಮನಮೋಹನ್ ಅವರ ಮುಂದೆ ಕ್ರಮವಾಗಿ ಜೇಟ್ಲಿ ಮತ್ತು ಕೇಜ್ರಿವಾಲ್ ಅವರ ವಕೀಲರಾದ ಮಣಿಕ್ ಡೋಗ್ರ ಮತ್ತು ಅನುಪಮ್ ಶ್ರೀವಾಸ್ತವ ಅವರು ಜಂಟಿ ಅರ್ಜಿಯನ್ನು ಸಲ್ಲಿಸಿದರು.  ನ್ಯಾಯಾಲಯವು ಸೂಕ್ತ ಪೀಠದ ಮುಂದೆ ವಿಷಯವನ್ನು ಮಂಗಳವಾರ ವಿಚಾರಣೆಗೆ ಎತ್ತಿಕೊಳ್ಳಲು ಒಪ್ಪಿಗೆ ನೀಡಿತು.  ೨೦೧೫ರ ಡಿಸೆಂಬರಿನಲ್ಲಿ ಜೇಟ್ಲಿ ಅವರು ಕೇಜ್ರಿವಾಲ್ ಮತ್ತು ಆಪ್ ನಾಯಕರಾದ ರಾಘವ ಛಡಾ, ಕುಮಾರ ವಿಶ್ವಾಸ್, ಸಂಜಯ್ ಸಿಂಗ್, ಅಶುತೋಷ್ ಮತ್ತು ದೀಪಕ್ ಬಾಜಪೇಯಿ ವಿರುದ್ಧ ೧೦ ಕೋಟಿ ರೂಪಾಯಿಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.  ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ನಲ್ಲಿ ಜೇಟ್ಲಿ ಅವರು ಅದರ ಅಧ್ಯಕ್ಷರಾಗಿದ್ದಾಗ ಹಣಕಾಸು ಅಕ್ರಮಗಳು ನಡೆದಿವೆ ಎಂದು ಕೇಜ್ರಿವಾಲ್ ಮತ್ತು ಇತರರು ಆಪಾದಿಸಿದ್ದರು. ಬಿಜೆಪಿ ನಾಯಕ ಇದನ್ನು ನಿರಾಕರಿಸಿದ್ದಲ್ಲದೆ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು. ಕೇಜ್ರಿವಾಲ್ ಜೊತೆಗೆ ಇತರ ಆಪ್ ನಾಯಕರಾದ ಛಡಾ, ಸಂಜಯ್ ಸಿಂಗ್, ಆಶುತೋಷ್ ಮತ್ತು ಬಾಜಪೇಯಿ ಅವರೂ ಭೇಷರತ್ ಕ್ಷಮೆ ಯಾಚಿಸಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಯಿತು. ಕುಮಾರ ವಿಶ್ವಾಸ್ ಅವರು ಕ್ಷಮೆ ಯಾಚಿಸದೇ ಇರುವುದರಿಂದ ಅವರ ವಿರುದ್ಧ ಖಟ್ಲೆ ಮುಂದುವರೆಯುವ ಸಾದ್ಯತೆ ಇದೆ.  ಕೇಜ್ರಿವಾಲ್ ಮತ್ತು ಅವರ ಸಹೋದ್ಯೋಗಿ ಆಪ್ ನಾಯಕರು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಇದಕ್ಕೆ ಮುನ್ನ ಬರೆದಿದ್ದ  ಪತ್ರದಲ್ಲಿ ಕ್ಷಮೆಯಾಚಿಸುತ್ತಾ ”ನಮ್ಮ ವಿರುದ್ಧ ನೀವು  ದಿಲ್ಲಿ ನ್ಯಾಯಾಲಯದಲ್ಲಿ ದಾಖಲಿಸಿರುವ ಮಾನನಷ್ಟ ದಾವೆಯನ್ನು ದಯವಿಟ್ಟು  ಹಿಂಪಡೆಯಬೇಕು ಎಂದು ಕೋರಿದ್ದರು.  ಕೇಜ್ರಿವಾಲ್ ಅವರು ಈ ಪತ್ರದಲ್ಲಿ  "೨೦೧೫ರಲ್ಲಿ ನಾನು ನಿಮ್ಮ ವಿರುದ್ಧ ಕೆಲವೊಂದು ಆರೋಪಗಳನ್ನು ಮಾಡಿದ್ದೆ. ಅನಂತರ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿ) ಅಧ್ಯಕ್ಷರಾಗಿ ನಿಮ್ಮ ವಿರುದ್ಧ ಹಣಕಾಸು ಅಕ್ರಮಗಳ ಆರೋಪ ಮಾಡಿದ್ದೆ. ಈ ಆರೋಪಗಳು ನೀವು ನನ್ನ ವಿರುದ್ಧ ದಿಲ್ಲಿ ಹೈಕೋರ್ಟ್ ನಲ್ಲಿ ಮತ್ತು  ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ದಾಖಲಿಸಿರುವ ಮಾನನಷ್ಟ ದಾವೆಗಳ ವಿಷಯವಾಗಿವೆ. ಡಿಡಿಸಿಎ ಹಣಕಾಸು ಅಕ್ರಮಗಳ ಬಗ್ಗೆ ಮಾಹಿತಿ ಹೊಂದಿರುವುದಾಗಿ ಹೇಳಿಕೊಂಡ ಕೆಲವು ವ್ಯಕ್ತಿಗಳು ಒದಗಿಸಿದ್ದ ಮಾಹಿತಿ ಮತ್ತು ದಾಖಲೆ ಪತ್ರಗಳ ಆಧಾರದಲ್ಲಿ ನಾನು ನಿಮ್ಮ ವಿರುದ್ಧ ಆರೋಪಗಳನ್ನು ಮಾಡಿದ್ದೆ. ಆದರೆ ಇತ್ತೀಚೆಗೆ ನಾನು ಪರಿಶೀಲಿಸಿದಾಗ ಆ ಆರೋಪಗಳೆಲ್ಲವೂ ಸುಳ್ಳು ಮತ್ತು ನಿರಾಧಾರ ಎಂಬುದು ನನಗೆ ಗೊತ್ತಾಯಿತು. ನಿಮ್ಮ ವಿರುದ್ಧ ಆರೋಪ ಮಾಡುವಲ್ಲಿ ನನಗೆ ಈ ತಪ್ಪು ಮಾಹಿತಿಗಳೇ ಕಾರಣವಾದವು ಎಂದು ಕೇಜ್ರಿವಾಲ್ ಬರೆದಿದ್ದರು.

2018: ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ವರ್ಣನೀತಿ ವಿರೋಧಿ ಹೋರಾಟಗಾರ ಮತ್ತು ರಾಷ್ಟ್ರದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಮಾಜಿ ಪತ್ನಿ ವಿನ್ನೀ ಮಂಡೇಲಾ ಅವರು ಇಲ್ಲಿ ನಿಧನರಾದರು. ಅವರಿಗೆ ೮೧ ವರ್ಷ ವಯಸ್ಸಾಗಿತ್ತು.
ವಿನ್ನೀ ಮಂಡೇಲಾ ಅವರು ಜೋಹಾನ್ಸ್ ಬರ್ಗ್ ಆಸ್ಪತ್ರೆಯೊಂದರಲ್ಲಿ ದೀರ್ಘ ಕಾಲದ ಅಸ್ವಸ್ಥತೆ ಬಳಿಕ ನಿಧನರಾದರು ಎಂದು ಅವರ ವಕ್ತಾರ ವಿಕ್ಟರ್ ಡ್ಲಮಿನಿ ಹೇಳಿಕೆಯಲ್ಲಿ ತಿಳಿಸಿದರು. ೩೮ ವರ್ಷಗಳ ಜೊತೆ ನೆಲ್ಸನ್ ಮಂಡೇಲಾ ಜೊತೆ ದಾಂಪತ್ಯ ನಡೆಸಿದ್ದ ವಿನ್ನೀ ಮಂಡೇಲಾ ದಕ್ಷಿಣ ಆಫ್ರಿಕಾದಲ್ಲಿ ಅಲ್ಪಸಂಖ್ಯಾತ ಬಿಳಿಯರ ವರ್ಣೀಯ ಆಡಳಿತ ಕೊನೆಗೊಳಿಸಬೇಕೆಂದು ನೆಲ್ಸನ್ ಮಂಡೇಲಾ ನಡೆಸಿದ್ದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ವಿವಾದದಿಂದಾಗಿ ಇತಿಹಾಸದಲ್ಲಿ ಅವರ ಹೆಸರಿಗೆ ಕಪ್ಪು ಕಲೆ ಅಂಟಿಕೊಂಡಿತು.
2009: ಪ್ರಧಾನಿ ಮನಮೋಹನ ಸಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಇದೇ ಮೊದಲ ಬಾರಿಗೆ ಲಂಡನ್ನಿನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಜಿ 20 ಶೃಂಗಸಭೆ ಮುಕ್ತಾಯಗೊಂಡ ಕೂಡಲೇ ಆರಂಭವಾದ ಈ ಸಭೆಯಲ್ಲಿ, ಭಯೋತ್ಪಾದನೆ ಹಾಗೂ ಹವಾಮಾನ ವೈಪರೀತ್ಯದ ವಿರುದ್ಧ ಜಂಟಿಯಾಗಿ ಹೋರಾಡಲು ಇರುವ ಹೊಸ ಮಾರ್ಗೋಪಾಯಗಳ ಬಗ್ಗೆ ಉಭಯ ನಾಯಕರೂ ಚರ್ಚಿಸಿದರು. ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ನಿಗ್ರಹಕ್ಕೆ ದೃಢವಾದ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ಥಾನವನ್ನು ಉಭಯ ನಾಯಕರು ಒತ್ತಾಯಿಸಿದರು. ಕಳೆದ ಐದು ವರ್ಷಗಳಲ್ಲಿ ವೃದ್ಧಿಸಿರುವ ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗುವ ಭಾರತದ ಇಂಗಿತವನ್ನು ಪ್ರಧಾನಿ ಈ ಸಂದರ್ಭದಲ್ಲಿ ಅಮೆರಿಕದ ವರ್ಚಸ್ವಿ ನಾಯಕನಿಗೆ ಸ್ಪಷ್ಟಪಡಿಸಿದರು.

2009: ಜಾಗತಿಕ ಆರ್ಥಿಕ ಹಿಂಜರಿತವನ್ನು ಹತೋಟಿಯಲ್ಲಿಟ್ಟು, ವಿಶ್ವ ಆರ್ಥಿಕ ವ್ಯವಸ್ಥೆಗೆ ಚೈತನ್ಯ ತುಂಬಲು, ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮೂಲಕ ಒಂದು ಸಹಸ್ರಕೋಟಿ ಡಾಲರುಗಳನ್ನು ಒದಗಿಸುವ ಮಹತ್ವದ ನಿರ್ಧಾರವನ್ನು ಜಿ-20 ದೇಶಗಳು ಲಂಡನ್ನಿನಲ್ಲಿ ಕೈಗೊಂಡವು. ಐಎಂಎಫ್‌ನ ಲಭ್ಯ ಸಂಪನ್ಮೂಲವನ್ನು ತ್ರಿಗುಣಗೊಳಿಸಲು 570 ಶತಕೋಟಿ ಡಾಲರ್, ಹಣ ವಾಪಸು ಪಡೆಯುವ ನೂತನ ವಿಶೇಷ ಹಕ್ಕುಗಳನ್ನು (ಎಸ್‌ಡಿಆರ್) ಬೆಂಬಗಲಿಸಲು 250 ಶತಕೋಟಿ ಡಾಲರ್, ಬಹುರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕುಗಳಿಂದ ಹೆಚ್ಚುವರಿ ಸಾಲ ನೀಡಿಕೆಗೆ ಕನಿಷ್ಠ 100 ಶತಕೋಟಿ ಡಾಲರ್, ವಾಣಿಜ್ಯ ಹಣಕಾಸಿಗೆ ಬೆಂಬಲ ಖಾತ್ರಿ ಹಾಗೂ ಬಡ ರಾಷ್ಟ್ರಗಳಿಗೆ ರಿಯಾಯಿತಿ ಹಣಕಾಸು ನೆರವಿಗಾಗಿ 250 ಶತಕೋಟಿ ಡಾಲರುಗಳನ್ನು ಒದಗಿಸುವ ಒಪ್ಪಂದಗಳಿಗೆ ಜಿ-20 ರಾಷ್ಟ್ರಗಳ ನಾಯಕರು ಸಹಿ ಹಾಕಿದರು.

2009: 1984ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಹತ್ಯೆ ಅವರ ನಂತರ ನವದೆಹಲಿಯ ಗುರುದ್ವಾರವೊಂದರಲ್ಲಿ ನಡೆದಿದ್ದ ಮೂವರು ಸಿಕ್ಖರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಸಂಪೂರ್ಣ ನಿರ್ದೋಷಿ ಎಂದು ನ್ಯಾಯಾಲಯದಲ್ಲಿ ಸಿಬಿಐ ಹೇಳಿತು. ಇದರಿಂದ ಅತೃಪ್ತರಾದ ನೂರಾರು ಸಿಕ್ಖರು ನ್ಯಾಯಾಲಯದ ಹೊರಗಡೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಕಾಂಗ್ರೆಸ್ ಸರ್ಕಾರ, ಸಿಬಿಐ, ಟೈಟ್ಲರ್, ಕಾಂಗ್ರೆಸ್ಸಿನ ಮತ್ತಿಬ್ಬರು ಮುಖಂಡರಾದ ಸಜ್ಜನ್ ಕುಮಾರ್ ಮತ್ತು ಕಮಲ್‌ನಾಥ್ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. 'ನಿಜವಾಗಿಯೂ ಸಿಬಿಐ ನಾಚಿಕೆ ಪಡಬೇಕು. ಇದರಿಂದ ಈ ತನಿಖಾ ಸಂಸ್ಥೆ ಬಗ್ಗೆ ನಮಗಿದ್ದ ವಿಶ್ವಾಸ ಕುಗ್ಗಿಹೋಗಿದೆ. ಸಿಬಿಐ ಆರೋಪಿಗಳೊಂದಿಗೆ ಶಾಮೀಲಾಗಿದೆ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮೊಹರು ಮಾಡಿದ್ದ ಲಕೋಟೆಯಲ್ಲಿ ಇರಿಸಿದ್ದ ಸಿಬಿಐ ಅಂತಿಮ ವರದಿಯನ್ನು ಹೊರತೆಗೆದ ವಕೀಲರು, ಜಗದೀಶ್ ಟೈಟ್ಲರ್ ವಿರುದ್ಧ ಹೂಡಲಾಗಿರುವ ಮೊಕದ್ದಮೆ ರದ್ದುಗೊಳಿಸಬೇಕೆಂದು ನ್ಯಾಯಪೀಠದ ಮುಂದೆ ನಿವೇದನೆ ಮಾಡಿದರು. ಇದಕ್ಕೆ ಮುನ್ನ ಕಳೆದ ವಾರ ಮೊಹರು ಮಾಡಿದ್ದ ಲಕೋಟೆಯಲ್ಲಿ ಸಿಬಿಐ ತನ್ನ ತನಿಖಾ ವರದಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಮ್ ಲಾಲ್ ಮೀನಾ ಅವರ ಮುಂದೆ ಸಲ್ಲಿಸಿತ್ತು. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ ಸಾಕ್ಷಿದಾರ ಜಸ್‌ಬೀರ್ ಸಿಂಗ್ ಎಂಬವರ ವಿಚಾರಣೆ ನಂತರ ಸಿಬಿಐ ತನ್ನ ಈ ಅಂತಿಮ ವರದಿ ಸಲ್ಲಿಸಿತ್ತು.

2009: 'ಜಾನಪದ ಕಂಪ್ಯೂಟರ್' ಎಂದೇ ಖ್ಯಾತಿ ಪಡೆದ ಶತಾಯುಷಿ, ಜಾನಪದ ಹಾಡುಗಾರ್ತಿ ಸಿರಿಯಜ್ಜಿ (100) ಚಳ್ಳಕೆರೆ ಸಮೀಪದ ಸ್ವಗ್ರಾಮ ಚಿಕ್ಕೇನಹಳ್ಳಿ ಬಳಿಯ ಯಲಗಟ್ಟೆಗೊಲ್ಲರಹಟ್ಟಿಯಲ್ಲಿ ನಿಧನರಾದರು. ಎರಡು ಬಾರಿ ಬಿದ್ದು ಕಾಲು ಮುರಿದರೂ ಚೇತರಿಸಿಕೊಂಡಿದ್ದ ಅವರು, 7-8 ದಿನಗಳಿಂದ ತೀವ್ರ ಕೆಮ್ಮುಮತ್ತು ಕಫದಿಂದ ಬಳಲುತ್ತಿದ್ದರು. ಅಜ್ಜಿ ಇಬ್ಬರು ಗಂಡು ಮಕ್ಕಳು ಹಾಗೂ 14 ಮೊಮ್ಮಕ್ಕಳನ್ನು ಅಗಲಿದರು. ಚಿತ್ರದುರ್ಗ ಜಿಲ್ಲೆ ಕಾಡುಗೊಲ್ಲರ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಿರಿಯಜ್ಜಿಗೆ ಅಕ್ಷರ ಜ್ಞಾನದ ಅರಿವೇ ಇಲ್ಲದ್ದಿದರೂ ರಾತ್ರಿ ಹಗಲೆನ್ನದೆ ನಿರಂತರವಾಗಿ, ನಿರರ್ಗಳವಾಗಿ ಸಹಸ್ರಾರು ಜನಪದ ಹಾಡುಗಳನ್ನು ಹಾಡುವ ಅನನ್ಯ ಪ್ರತಿಭೆ ಇತ್ತು. ಬಾಲ್ಯದಲ್ಲಿ ಸಸಿ ನಾಟಿ ಮಾಡುವಾಗ, ಕಳೆ ಕೀಳುವಾಗ, ಧಾನ್ಯ ಕುಟ್ಟುವಾಗ, ಬೀಸುವಾಗ ಹಬ್ಬ-ಹರಿದಿನ ಹಾಗೂ ಮದುವೆ- ಮುಂಜಿಗಳಲ್ಲಿ ತಮ್ಮ ಅಜ್ಜಿ ಮತ್ತು ತಾಯಿ ಹಾಡುತ್ತಿದ್ದ ಹಾಡುಗಳನ್ನು ಅಜ್ಜಿ ತಮ್ಮ 'ಸಿರಿಕಂಠ'ದಲ್ಲಿ ಆಸ್ತಿಯೆಂಬಂತೆ ಜೋಪಾನವಾಗಿಟ್ಟುಕೊಂಡಿದ್ದರು. ಮದುವೆ ಸಂಪ್ರದಾಯ, ಜುಂಜಪ್ಪ, ಕ್ಯಾತಪ್ಪ, ಎತ್ತಪ್ಪ, ಚಿತ್ತಯ್ಯ, ಕಾಟಯ್ಯ, ಈರಣ್ಣ, ಕದರಿ ನರಸಿಂಹ, ಗೌರಸಮುದ್ರದ ಮಾರಮ್ಮ, ತಿರುಪತಿ ತಿಮ್ಮಪ್ಪ, ಕೊಂಡದ ಚಿತ್ತವ್ವ, ಕಾಟವ್ವ, ನಾಗಮ್ಮ ಮುಂತಾದ ಇಷ್ಟದೈವಗಳ ಮೇಲೆ ಪದ ಕಟ್ಟಿ ಹಾಡುವ ಕಲೆ, ಜ್ಞಾನ ಭಂಡಾರ ಸಿರಿಯಜ್ಜಿಗೆ ದೈವದತ್ತ ಕೊಡುಗೆಯಾಗಿತ್ತು. ತಮ್ಮ ಅಗಾಧ ಜ್ಞಾಪಕ ಶಕ್ತಿಯಿಂದ ಜಾನಪದ ಹಾಡುಗಳನ್ನು ಹಾಡುತ್ತಿದ್ದ ಅವರು, ಕಾಡುಗೊಲ್ಲರ ಆಚರಣೆ ಮತ್ತು ಸಂಪ್ರದಾಯಗಳಿಗೆ ಹೊಸ ಜೀವಂತಿಕೆ ನೀಡಿದ್ದರು. ಅಂತಾರಾಷ್ಟ್ರೀಯ ಖ್ಯಾತ ಜನಪದ ತಜ್ಞ ಡಾ.ಎ.ಕೆ. ರಾಮಾನುಜನ್, ಜೀಶಂಪ, ಡಾ.ಎಚ್.ಎಲ್. ನಾಗೇಗೌಡ, ಬೆಳಗೆರೆ ಕೃಷ್ಣಶಾಸ್ತ್ರೀ, ಡಾ.ತೀ.ನಂ. ಶಂಕರನಾರಾಯಣ, ಡಾ.ಕೃಷ್ಣಮೂರ್ತಿ ಹನೂರು, ಡಾ.ಎಂ. ಚಿದಾನಂದಮೂರ್ತಿ, ಡಾ.ಮಲ್ಲೇಪುರಂ ಜಿ. ವೆಂಕಟೇಶ್, ಮಾಜಿ ಮುಖ್ಯಮಂತ್ರಿಗಳಾದ ಗುಂಡೂ ರಾವ್, ರಾಮಕೃಷ್ಣ ಹೆಗ್ಗಡೆ, ಜೆ.ಎಚ್. ಪಟೇಲ್ ಹೀಗೆ ಆನೇಕರು ಅಜ್ಜಿಯನ್ನು ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದ್ದರು. ಜನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಅವರು ಸಿರಿಯಜ್ಜಿಯಿಂದ ಸಂಗ್ರಹಿಸಿದ್ದ ಜಾನಪದ ಕಥನ ಗೀತೆಗಳನ್ನು ಕನ್ನಡ ವಿವಿ 'ಸಾವಿರ ಸಿರಿ ಬೆಳಗು' ಹೆಸರಿನಲ್ಲಿ ಪುಸ್ತಕ ಪ್ರಕಟಿಸಿತ್ತು. ಸಿರಿಯಜ್ಜಿಯ 'ಬದುಕು ಮತ್ತು ಕಾವ್ಯ' (ಲೇಖಕ: ಡಾ.ಮೀರಾಸಾಬಿಹಳ್ಳಿ ಶಿವಣ್ಣ) ಕುರಿತ ಪುಸ್ತಕವನ್ನು ಬೆಂಗಳೂರು ವಿವಿ ಗಾಂಧಿ ಅಧ್ಯಯನ ಸಂಸ್ಥೆ ಪ್ರಕಟಿಸಿತ್ತು. ಪ್ರಶಸ್ತಿ-ಪುರಸ್ಕಾರ: 1982ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 1995ರಲ್ಲಿ ಜಾನಪದ ಸಮ್ಮೇಳನದ ರಾಜ್ಯ ಪ್ರಶಸ್ತಿ, 1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ 50ನೇ ಗಣ ರಾಜ್ಯೋತ್ಸವ ಪ್ರಶಸ್ತಿ, 2004ರಲ್ಲಿ 'ದುರ್ಗದ ಸಿರಿ' ಪ್ರಶಸ್ತಿ, 2005ರಲ್ಲಿ ಹಂಪಿ ಕನ್ನಡ ವಿವಿ 'ನಾಡೋಜ' ಪ್ರಶಸ್ತಿ, 2006 'ಜಾನಪದ ಶ್ರೀ' ಪ್ರಶಸ್ತಿ, 2008ರಲ್ಲಿ ಆಳ್ವಾಸ್ 'ನುಡಿಸಿರಿ' ಪ್ರಶಸ್ತಿ ಲಭಿಸಿದ್ದವು. ನನಸಾಗದ ಕನಸು: ಸಿರಿಯಜ್ಜಿ ಸಾಧನೆ ಹಾಗೂ ಶ್ರಮದ ಬದುಕನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಅಜ್ಜಿ ಹೆಸರಿನಲ್ಲಿ ದತ್ತಿ ಸ್ಥಾಪನೆ. ಅಜ್ಜಿಯ ಮನದಾಳದ ಕನಸಾದ ಸ್ವಗ್ರಾಮದಲ್ಲಿ ಆಕೆಯ ಹೆಸರಿನಲ್ಲಿ ಹೆರಿಗೆ ಆಸ್ಪತ್ರೆ, ಚಿತ್ತಯ್ಯ, ಎತ್ತಪ್ಪ, ಜುಂಜಪ್ಪ ದೇವರ ಮಂಟಪ ನಿರ್ಮಾಣ. ಆಕೆ ಹಾಡಿರುವ ಎಲ್ಲಾ ಜಾನಪದ ಹಾಡುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಕನಸಿನಲ್ಲೇ ಸಿರಿಯಜ್ಜಿ ಕೊನೆ ಉಸಿರೆಳೆದರು.

2009: ಆರ್ಥಿಕ ಬಿಕ್ಕಟ್ಟು ಹಾಗೂ ಜನರ ಅಭಿರುಚಿ ಬದಲಾದದ್ದರಿಂದ 72 ವರ್ಷಗಳಿಂದ ಪ್ರಸಾರವಾಗುತ್ತಿದ್ದ ಗೈಡಿಂಗ್ ಲೈಟ್ ಧಾರಾವಾಹಿಗೆ ತಡೆ ಹಾಕಲು ಅಮೆರಿಕದ ಸಿ.ಬಿ.ಎಸ್ ವಾಹಿನಿ ನಿರ್ಧರಿಸಿತು. ಈ ವರ್ಷದ 2009ರ ಸೆಪ್ಟೆಂಬರ 18ಕ್ಕೆ ಇದರ ಕೊನೆಯ ಕಂತು ಪ್ರಸಾರವಾಗುವುದು ಎಂದು ಈದಿನ ನ್ಯೂಯಾರ್ಕಿಲ್ಲಿ ಪ್ರಕಟಿಸಲಾಯಿತು. 1937ರ ಜನವರಿ 25ರಂದು ಇದರ  ಮೊದಲ ಕಂತು ಎನ್.ಬಿ.ಸಿ ರೇಡಿಯೋದಲ್ಲಿ ಪ್ರಸಾರವಾಗಿತ್ತು ನಂತರ 1952ರಲ್ಲಿ ಸಿ.ಬಿ.ಎಸ್. ಚಾನೆಲ್ ಈ ಧಾರಾವಾಹಿ ಪ್ರಸಾರ ಮಾಡಲಾರಂಭಿಸಿತು. ಇದರ ಬಹುಪಾಲು ವೀಕ್ಷಕರು ಮಹಿಳೆಯರಾಗಿದ್ದರು.

2009: ಕೃಷ್ಣಾ ಗೋದಾವರಿ ಪ್ರದೇಶದಲ್ಲಿ ನೈಸರ್ಗಿಕ ಅನಿಲ ಹೊರತೆಗೆಯುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಇತಿಹಾಸ ನಿರ್ಮಿಸಿತು. ದೇಶದ ತೈಲ ಹಾಗೂ ಅನಿಲ ಉತ್ಪಾದನಾ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು ಎಂದು ಬಣ್ಣಿಸಲಾಯಿತು. ಕೇವಲ ಏಳು ವರ್ಷಗಳ ಅವಧಿಯಲ್ಲಿ ಕೃತಿಗಿಳಿದ ಈ ಯೋಜನೆಯಿಂದ ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಹೊಂದಲು ಸಹಕಾರಿಯಾಗುವುದು. ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಗಡಿಮೊಗದಲ್ಲಿರುವ ರಿಲಯನ್ಸ್ ಘಟಕ ಬೆಳಿಗ್ಗೆ ಭೂಮಿಯ ಆಳದಿಂದ ನೈಸರ್ಗಿಕ ಅನಿಲವನ್ನು ಹೊರತೆಗೆಯಿತು. ಹಿಂದಿನ ಸಂಜೆ 5 ಗಂಟೆಗೆ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಈದಿನ ಬೆಳಗಿನ ವೇಳೆಗೆ ಅನಿಲ ಹೊರಗೆ ಬಂದಿತು. ಸಮುದ್ರ ಆಳದಿಂದ ಭೂಮಿ ಮೇಲ್ಮೈಗೆ ಬರಲು ಅನಿಲ 13-14 ಗಂಟೆಗಳ ಕಾಲಾವಕಾಶ ತೆಗೆದುಕೊಂಡಿತು ಎಂದು ಕಂಪೆನಿಯ ಮೂಲಗಳು ತಿಳಿಸಿದವು. ಈ ಘಟಕದಿಂದ ಪ್ರತಿದಿನ 2.5 ದಶಲಕ್ಷ ಕ್ಯುಬಿಕ್ ಮೀಟರುಗಳಷ್ಟು ನೈಸರ್ಗಿಕ ಅನಿಲ ಉತ್ಪಾದನೆಯಾಗುವುದು. ಕೃಷ್ಣಾ ಗೋದಾವರಿ ಪ್ರದೇಶದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಇರುವ ಬಗ್ಗೆ ಕಂಪೆನಿಯು ಏಳು ವರ್ಷಗಳ ಹಿಂದೆ ಪತ್ತೆ ಮಾಡಿತ್ತು. ಈ ಕಾರ್ಯಾಚರಣೆಗಾಗಿ ಕಂಪೆನಿಯು 44,175 ಕೋಟಿ ರೂಪಾಯಿ ವ್ಯಯ ಮಾಡಿತ್ತು.

2008: ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಇದರೊಂದಿಗೆ ಕ್ಷೇತ್ರ ಮರುವಿಂಗಡಣೆ ಅಡಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಯಿತು. ಮೇ ತಿಂಗಳ 10, 16 ಮತ್ತು 22ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 25ಕ್ಕೆ ಫಲಿತಾಂಶ ಪ್ರಕಟಣೆಯಾಗುವುದು. 28ಕ್ಕೆ ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರುವುದು ಮತ್ತು ಆರು ತಿಂಗಳ ಅವಧಿಯ ರಾಷ್ಟ್ರಪತಿ ಆಳ್ವಿಕೆ ಕೊನೆಗೊಳ್ಳುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಪ್ರಕಟಿಸಿದರು.

2008: ರಾಜ್ಯ ಸರ್ಕಾರಿ ನೌಕರರಿಗೆ ಶೇಕಡಾ 5.25ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಕೇಂದ್ರ ಸರ್ಕಾರ ಇತ್ತೀಚೆಗೆ ತನ್ನ ನೌಕರರಿಗೆ ಶೇ 6ರಷ್ಟು ಹೆಚ್ಚಿಸಿದ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಯಿತು.

2008: ತಮ್ಮ ಹೆಸರಿನ ಜೊತೆಗೆ ಅಂಟಿಕೊಂಡ `ಮಖ್ದೂಮ್' ಎಂಬ ಪದವನ್ನು ತೆಗೆದುಹಾಕಲು ಪಾಕಿಸ್ಥಾನದ ಪ್ರಧಾನಿ ಯೂಸಫ್ ರಾಜಾ ಜಿಲಾನಿ ನಿರ್ಧರಿಸಿದರು. ಹಿಂದಿನ ದಿನ ಝುಲ್ಫೀಕರ್ ಆಲಿ ಭುಟ್ಟೊ ಅವರ ಸಾಕ್ಷ್ಯಚಿತ್ರ ಬಿಡುಗಡೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಮಖ್ದೂಮ್' ಎಂಬ ಪದ ಜನರಿಂದ ಸೇವೆ ಪಡೆಯವವನು ಎಂಬ ಗೌರವ ಹೊಂದಿರುವಂತದ್ದು. ಆದರೆ ತಾನು ಈಗ ಜನ ಸೇವಕನಾಗಿರುವುದರಿಂದ ನನ್ನ ಹೆಸರಿನ ಮುಂದೆ ಈ ಪದ ಅನ್ವರ್ಥಕ ಎನಿಸುವುದಿಲ್ಲ. ನಾನೀಗ `ಖದೀಮ್' (ಸೇವಕ) ಎಂದು ಹೇಳಿದರು. ಯಾರು ಧಾರ್ಮಿಕ ಮುಖಂಡರಿರುತ್ತಾರೊ ಅಂಥವರನ್ನು `ಮಖ್ದೂಮ್' ಎಂಬ ವಿಶೇಷಣದೊಂದಿಗೆ ಗೌರವಪೂರ್ವಕವಾಗಿ ಕರೆಯಲಾಗುತ್ತದೆ. ಸೈಯ್ಯದ್ ರಾಜಾ ಜಿಲಾನಿ ಖ್ಯಾತ ಸೂಫಿ ಸಂತ ಮುಲ್ತಾನ್ ಪರಂಪರೆಯ ಅನುವಂಶೀಯರಾಗಿದ್ದರಿಂದ ಅವರ ಹೆಸರಿಗೆ ಈ ವಿಶೇಷಣ ಅಂಟಿಕೊಂಡಿತ್ತು.

2008: ವಿವಾಹಿತ ಮಹಿಳೆಯೊಬ್ಬಳು ಪರಪುರುಷನೊಂದಿಗೆ ವ್ಯಭಿಚಾರ ನಡೆಸಿದ್ದಾಳೆ ಎಂಬ ಆರೋಪದ ಮೇರೆಗೆ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಅಮಾನವೀಯ ಘಟನೆ ಪಾಕಿಸ್ಥಾನದಿಂದ ವರದಿಯಾಯಿತು. ತಾಲಿಬಾನ್ ಗಳ ಭದ್ರಕೋಟೆ ಎನಿಸಿದ ಅಘ್ಘಾನಿಸ್ಥಾನ ಗಡಿ ಭಾಗದ ಮೊಹಮಂದ್ ಬುಡಕಟ್ಟು ಪ್ರದೇಶದಲ್ಲಿ ಇಂತಹದೊಂದು ಖಾಜಿ ನ್ಯಾಯ ನೀಡಲಾಯಿತು. ತಾಲಿಬಾನ್ ಉಗ್ರವಾದಿಗಳು ಈ ಕ್ರೂರ ಕೃತ್ಯ ಎಸಗಿದರು. ಒಕ್ಕೂಟ ಆಡಳಿತ ವ್ಯವಸ್ಥೆಯಡಿ ನಿಯಂತ್ರಣದಲ್ಲಿದ್ದ ಈ ಗಡಿ ಭಾಗದಲ್ಲಿ ನಡೆದ ಮೊದಲ ಘಟನೆ ಇದು. ಮಹಿಳೆಯನ್ನು ಶಾನೊ ಎಂದು ಗುರುತಿಸಲಾಗಿದ್ದು ಈಕೆ ಮೊಹಮಂದ್ ಪ್ರದೇಶಕ್ಕೆ ಸೇರಿದವಳು. ಅನ್ಯ ಪುರುಷನ ಮೋಹಪಾಶಕ್ಕೆ ಸಿಲುಕಿದ್ದ ಈಕೆ ಬಾರಾ ಪ್ರದೇಶದ ಮಾಲಿಕ್ ದೀನ್ ಖೇಲ್ ನ ದೌಲತ್ ಖಾನ್ ಎಂಬುವನೊಂದಿಗೆ ಮಾರ್ಚ್ 15ರಂದು ಮನೆ ಬಿಟ್ಟು ಓಡಿ ಹೋಗಿದ್ದಳು. ಕಲ್ಲು ಹೊಡೆದು ಸಾಯಿಸಿದ ಪ್ರದೇಶದಲ್ಲೇ ಶಾನೊಳ ಅಂತ್ಯ ಸಂಸ್ಕಾರ ನಡೆಸಲಾಯಿತು.

2008: ಮಲೇಷ್ಯಾದ ರೊಸ್ಲಾನ್ ನಗಾಹ್ (44) ಎಂಬ ವ್ಯಾಪಾರಿಯೊಬ್ಬ ಕೇವಲ ಮೂರು ನಿಮಿಷದಲ್ಲಿ ತನ್ನ ಇಬ್ಬರು ಪತ್ನಿಯರಾದ ನಾರ್ಹಾಯತಿ ಇಸ್ಮಾಯಿಲ್ (46) ಮತ್ತು ಮಸ್ಟುರಾ ಅಹ್ಮದ್ (35) ಎಂಬವರಿಗೆ ವಿವಾಹ ವಿಚ್ಛೇದನ ನೀಡಿದ ಘಟನೆ ಕ್ವಾಲಾಲಂಪುರದ ಇಸ್ಲಾಮಿಕ್ ನ್ಯಾಯಾಲಯದಲ್ಲಿ ಹಿಂದಿನ ದಿನ ಘಟಿಸಿತು. ತನ್ನ ಪತ್ನಿಯರಿಗೆ ಪ್ರತ್ಯೇಕವಾಗಿ `ತಲಾಖ್' ಕೊಡುವ ಮೂಲಕ ಈತ ವಿಚ್ಛೇದನ ನೀಡಿದ ಎಂದು ಮಾಧ್ಯಮಗಳು ಈದಿನ ವರದಿ ಮಾಡಿದವು. ಪತಿಯಾಗಿ ಹಣಕಾಸಿನ ನೆರವು ಸೇರಿದಂತೆ ಯಾವುದೇ ಕರ್ತವ್ಯವನ್ನು ಸರಿಯಾಗಿ ಪಾಲಿಸದ ಕಾರಣಕ್ಕಾಗಿ ಈ ವ್ಯಾಪಾರಿಗೆ ಇಬ್ಬರೂ ಪತ್ನಿಯರು ವಿಚ್ಛೇದನದ ನೋಟಿಸ್ ಜಾರಿ ಮಾಡಿದ್ದರು.

2008: ಆರು ಜನರ ಸಾವಿಗೆ ಕಾರಣವಾದ ಅನಿಲ ಸ್ಫೋಟ ಘಟನೆಯೊಂದರ ಬಗ್ಗೆ ವರದಿ ಮಾಡದಿರಲು ಕಂಪೆನಿಯೊಂದರಿಂದ ಲಂಚ ಪಡೆದ ಆರೋಪಕ್ಕಾಗಿ ಇಬ್ಬರು ಚೀನಿ ಪತ್ರಕರ್ತರಿಗೆ ಸ್ಥಳೀಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತು. ಈ ಪತ್ರಕರ್ತರಿಗೆ ಕ್ರಮವಾಗಿ ಆರು ಮತ್ತು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಎರಡು ವರ್ಷಗಳ ಹಿಂದೆ ಮಂಗೋಲಿಯಾ ಸ್ವಾಯತ್ತಾಧಿಕಾರ ಪ್ರಾಂತ್ಯದಲ್ಲಿ ಈ ಸ್ಫೋಟ ಸಂಭವಿಸಿತ್ತು.

2008: ಹೊಗೇನಕಲ್ ಯೋಜನೆಯನ್ನು ಮುಂದುವರೆಸದಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಲು ಕೋರಿ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು. ಹೊಗೇನಕಲ್ ಬಳಿ ಗಡಿ ರೇಖೆ ಕುರಿತು ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ನಡೆಸಬೇಕಾಗಿದ್ದ ಜಂಟಿ ಸಮೀಕ್ಷೆಯನ್ನು ಕಳೆದ ಎರಡು ವರ್ಷಗಳಿಂದ ತಮಿಳುನಾಡು ಸರ್ಕಾರ ಒಂದಿಲ್ಲೊಂದು ಕಾರಣ ನೀಡಿ ಮುಂದೂಡುತ್ತಿದೆ. ಈ ಹಿನ್ನೆಲೆಯಲ್ಲಿ ಜಂಟಿ ಸಮೀಕ್ಷೆ ನಡೆಸುವವರೆಗೆ ಈ ಯೋಜನೆಯ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಬೇಕು ಎಂದು ಚಾಮರಾಜನಗರದ ಸಿ.ಎಸ್. ಗೋವಿಂದರಾಜು ಹಾಗೂ ಇತರರು ನ್ಯಾಯಾಲಯವನ್ನು ಕೋರಿದರು.

2007: ಸಾಲೊಮನ್ ದ್ವೀಪದಲ್ಲಿ ಸಂಭವಿಸಿದ ಸುನಾಮಿ ಹಾಗೂ ಜಲಪ್ರಳಯದಲ್ಲಿ ಹಲವು ಪಟ್ಟಣಗಳು ನಾಮಾವಶೇಷವಾಗಿ 15 ಮಂದಿ ಮೃತರಾದರು. ಬೆಳಗ್ಗೆ 7.40ಕ್ಕೆ (ಭಾರತೀಯ ಕಾಲಮಾನ ನಸುಕಿನ 2.10) ಸಾಗರಗರ್ಭದಲ್ಲಿ ರಿಕ್ಟರ್ ಮಾಪಕದಲ್ಲಿ 8 ಪಾಯಿಂಟ್ ತೀವ್ರತೆಯ ಭೂಕಂಪ ದೈತ್ಯ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಐದು ಮೀಟರ್ ಎತ್ತರದ ರಕ್ಕಸ ಅಲೆಗಳು ಪೂವ ತೀರಕ್ಕೆ ಅಪ್ಪಳಿಸಿ ಹಲವು ಹಳ್ಳಿ, ಪಟ್ಟಣಗಳನ್ನು ಹೇಳಹೆಸರಿಲ್ಲದಂತೆ ಕೊಚ್ಚಿ ಹಾಕಿದವು.

2007: ಆಂಧ್ರಪ್ರದೇಶದಲ್ಲಿ ಎರಡು ದಶಕಗಳ ಹಿಂದೆ ರದ್ದಾಗಿದ್ದ ವಿಧಾನ ಪರಿಷತ್ತಿಗೆ ಮತ್ತೆ ಚಾಲನೆ ನೀಡಲಾಯಿತು. ಬಿಗಿ ಭದ್ರತೆ ನಡುವೆ ನಡೆದ ಸಮಾರಂಭದಲ್ಲಿ 12 ಮಂದಿ ನಾಮಕರಣ ಸದಸ್ಯರೂ ಸೇರಿ 64 ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

2007: ಧಾರ್ಮಿಕ ವಲಯದಲ್ಲಿ ವಿವಾದದ ಅಲೆ ಎಬ್ಬಿಸಿದ್ದ ಕರ್ನಾಟಕ ಧಾರ್ಮಿಕ ದತ್ತಿ ಕಾಯಿದೆಯನ್ನು (1997) ರದ್ದುಗೊಳಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು.

2007: ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀರಾಮುಲು ಅವರು ಹಠಾತ್ ರಾಜೀನಾಮೆ ನೀಡುವುದರೊಂದಿಗೆ ಬಳ್ಳಾರಿ ನಗರಸಭೆಯ ಮಾಜಿ ಉಪಾಧ್ಯಕ್ಷ ಸೈಯದ್ ಮುಜೀಬ್ (40) ಹತ್ಯೆ ಪ್ರಕರಣವು ರಾಜಕೀಯ ತಿರುವು ತೆಗೆದುಕೊಂಡಿತು. ತಮ್ಮ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ ಎಂದು ಆರೋಪಿಸಿ ಶ್ರೀರಾಮುಲು ಅವರು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದರು.

2007: ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕನ್ನಡಿಗೆ ಎಸ. ರಾಜೇಂದ್ರ ಬಾಬು ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

2006: ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ 173 ವರ್ಷಗಳಷ್ಟು ಹಳೆಯ ಪ್ರಕರಣವೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾ (ಹಿಂದಿ ಕಲ್ಕತ್ತ) ನ್ಯಾಯಾಲಯದಲ್ಲಿ ಮರು ವಿಚಾರಣೆಗೆ ಬಂತು. 18ನೇ ಶತಮಾನದ ಅಂತ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಗವರ್ನರ್ ಜನರಲ್ ರಾಬರ್ಟ್ ಕ್ಲೈವ್ ಕೋಲ್ಕತ್ತಾ ನಗರದ ಉತ್ತರ ಭಾಗದ 1000ಕ್ಕೂ ಹೆಚ್ಚು ಎಕರೆ ಪ್ರದೇಶ ಬಂಗಾಳದ ರಾಜವಂಶಕ್ಕೆ ಸೇರಿದ್ದ ರಾಜ ನಭಕೃಷ್ಣ ದೇವ್ ಅವರ ಸ್ವಾಧೀನಕ್ಕೆ ಸೇರಿದೆ ಎಂದು ತೀರ್ಪು ನೀಡಿದ್ದ. ತೀರ್ಪಿನ ಜೊತೆಗೇ ಈ ಆಸ್ತಿಯ ಮೇಲೆ ರಾಜ ಒಂದು ರೂಪಾಯಿ ತೆರಿಗೆ ಕೊಡಬೇಕು ಎಂದು ಒಂದು ಕೊಕ್ಕೆಯನ್ನೂ ಇಟ್ಟಿದ್ದ. ದೇವ್ ಮತ್ತು ಅವರ ಮಗ ಜೀವಂತ ಇರುವವರೆಗೂ ಈ ತೆರಿಗೆ ಪಾವತಿಸಲಾಗಿತ್ತು. ಅವರು ಮೃತರಾದ ನಂತರ ಈ ಆಸ್ತಿ ಕುಟುಂಬ ಸದಸ್ಯರ ನಡುವೆ ಹಂಚಿಕೆಯಾಗಿ ನಂತರದ ದಿನಗಳಲ್ಲಿ ಅವರೆಎಲ್ಲರೂ ಐಷಾರಾಮೀ ಜೀವನಕ್ಕಾಗಿ ಮಾರಿಕೊಂಡಿದ್ದರು. ಆಗ ನ್ಯಾಯಾಲಯದ ಮೆಟ್ಟಲೇರಿದ್ದ ಈ ಆಸ್ತಿ ಸಂಬಂಧಿ ವಿವಾದ ಈದಿನವಿಚಾರಣೆಗೆ ಬಂದಿತು.!

2006: ಕನ್ನಡದಲ್ಲಿ ವಿವಿಧ ಮಾಹಿತಿಗಳು ಲಭ್ಯ ಇರುವ ಕನ್ನಡ ವಿಶ್ವಕೋಶ ಅಂತರ್ಜಾಲ ತಾಣ http://kn.wikipedia.org
ಇಲ್ಲಿ ಈಗ ಲಭಿಸುತ್ತದೆ ಎಂದು ಕನ್ನಡ ವಿಕಿಪೀಡಿಯಾ ಸದಸ್ಯ ಹರಿಪ್ರಸಾದ್ ನಾಡಿಗ್ ಬೆಂಗಳೂರಿನಲ್ಲಿ ನಡೆದ ಕನ್ನಡ ವಿಕಿಪೀಡಿಯಾ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.
2006: ದೇಶದಲ್ಲೇ ಮೊದಲ ಬಾರಿಗೆ ನಗರವಾಸಿಗಳ ಮನೆ ಬಾಗಿಲಿಗೆ ವಾಹನಗಳ ಮೂಲಕ ನರ್ಸರಿ ಗಿಡ ತಲುಪಿಸುವ ಪರಿಸರ ಮೈತ್ರಿ ಎಂಬ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ತಿಗಳರ ನರ್ಸರಿ ಅಸೋಸಿಯೇಷನ್ ಈ ಗಿಡಗಳ ಮಾರಾಟ ಜಾಲವನ್ನು ಆರಂಭಿಸಿತು.

2006: ಇಥಿಯೋಪಿಯಾದ ಮಧ್ಯಮ ದೂರದ ಓಟಗಾರ ಕೆನೆನಿಸಾ ಬೆಕೆಲೆ (23) ಜಪಾನಿನ ಫುಕುವೋಕದಲ್ಲಿ ನಡೆದ ಐಎಎಎಫ್ ವಿಶ್ವ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ಪುರುಷರ ವಿಭಾಗದ 12 ಕಿ.ಮೀ. ದೂರದ ಓಟದಲ್ಲಿಯೂ ಬಂಗಾರದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸ್ವರ್ಣ ಡಬಲ್ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ಒಲಿಂಪಿಕ್ ಹಾಗೂ ವಿಶ್ವಚಾಂಪಿಯನ್ ಶಿಪ್ ನಲ್ಲಿ ಪುರುಷರ 10 ಹಾಗೂ 5 ಸಾವಿರ ಮೀಟರ್ ಓಟದ ವಿಭಾಗದಲ್ಲಿ ವಿಶ್ವದಾಖಲೆಯೊಂದಿಗೆ ಅವರು ಬಂಗಾರದ ಪದಕ ಗೆದ್ದಿದ್ದರು.

2006: ತಮಿಳುನಾಡಿನ ಚೆನ್ನೈಯಲ್ಲಿ ಕ್ರೈಸ್ತ ಧರ್ಮಗುರು ಎರಡನೇ ಪೋಪ್ ಜಾನ್ ಪಾಲ್ ಅವರ 22 ಅಡಿ ಎತ್ತರದ ಪುತ್ಥಳಿಯನ್ನು ಅವರ ಪ್ರಥಮ ಪುಣ್ಯತಿಥಿ ಆಚರಣೆ ಅಂಗವಾಗಿ ಅನಾವರಣಗೊಳಿಸಲಾಯಿತು.

2006: ಕರ್ನಾಟಕ ಲೇಖಕಿಯರ ಸಂಘ ನೀಡುವ `ಅನುಪಮಾ ಪ್ರಶಸ್ತಿ'ಗೆ 2006ನೇ ಸಾಲಿನಲ್ಲಿ ಹಿರಿಯ ಲೇಖಕಿ ಮತ್ತು ಕಾದಂಬರಿಗಾರ್ತಿ ನುಗ್ಗೇನಹಳ್ಳಿ ಪಂಕಜಾ ಆಯ್ಕೆಯಾದರು. ಸುಮಾರು ಐದು ದಶಕಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಇವರು, ಇಂಗ್ಲಿಷಿನ ಹಲವು ನಾಟಕ ಹಾಗೂ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕವಿತೆ, ಕತೆ, ಕಾದಂಬರಿ ಇತ್ಯಾದಿ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಅವರ `ಬರಲೆ ಇನ್ನು ಯಮುನೆ' ಕಾದಂಬರಿ- `ಸಿಪಾಯಿ ರಾಮು' ಚಿತ್ರವಾಗಿ ಯಶಸ್ಸು ಕಂಡಿದೆ.

1982: ದಕ್ಷಿಣ ಅಟ್ಲಾಂಟಿಕ್ ನಲ್ಲಿ ಬ್ರಿಟಿಷರ ವಶದಲ್ಲಿದ್ದ ಫಾಕ್ಲೆಂಡ್ ದ್ವೀಪಗಳನ್ನು ಅರ್ಜೆಂಟೀನಾ ಪಡೆಗಳು ವಶಪಡಿಸಿಕೊಂಡವು.

1975: ರಷ್ಯದ ಅನಾತೊಲಿ ಕಾರ್ಪೊವ್ ಅವರನ್ನು ಜಾಗತಿಕ ಚೆಸ್ ಚಾಂಪಿಯನ್ ಎಂಬುದಾಗಿ ಘೋಷಿಸಲಾಯಿತು. ರಾಬರ್ಟ್ `ಬಾಬ್ಬಿ' ಫಿಶರ್ ತನ್ನ ಸಾಧನೆ ಉಳಿಸಿಕೊಳ್ಳದೇ ಹೋದ್ದರಿಂದ ಅದು ಅನಾತೊಲಿ ಅವರ ಪಾಲಾಯಿತು.

1957: ಖ್ಯಾತ ಪಿಟೀಲುವಾದಕಿ ಸಿ.ಎಸ್. ಉಷಾ ಅವರು ಸಿ.ಎಸ್. ಸುಂದರಂ- ಸೀತಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1933: ಭಾರತದ ಶ್ರೇಷ್ಠ ಕ್ರಿಕೆಟ್ ಪಟುಗಳಲ್ಲಿ ಒಬ್ಬರಾದ ನವನಗರದ ಮಹಾರಾಜ ಜಾಮ್ ಸಾಹಿಬ್ ರಣಜಿತ್ ಸಿನ್ಹಜಿ ವಿಭಾಜಿ ತಮ್ಮ 60ನೇ ವಯಸ್ಸಿನಲ್ಲಿ ಮೃತರಾದರು. 1899ರಲ್ಲಿ ಇವರು ಒಂದೇ ಋತುವಿನಲ್ಲಿ 3000 ಮತ್ತು ಅದಕ್ಕೂ ಹೆಚ್ಚು ರನ್ನುಗಳನ್ನು ಸ್ಕೋರ್ ಮಾಡಿದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿದ್ದರು. ಇವರ ನೆನಪಿಗಾಗಿಯೇ 1934ರಲ್ಲಿ ರಣಜಿ ಟ್ರೋಫಿಯನ್ನು ಆರಂಭಿಸಲಾಯಿತು.

1805: ಹ್ಯಾನ್ಸ್ ಕ್ರಿಸ್ಟಿಯನ್ ಆಂಡರ್ಸನ್ (1805-1875) ಹುಟ್ಟಿದ ದಿನ. ಡ್ಯಾನಿಷ್ ಭಾಷೆಯ ಕಟ್ಟು ಕಥೆಗಳ ಖ್ಯಾತ ಸೃಷ್ಟಿಕರ್ತನಾದ ಈತನ ಹಲವಾರು ಕೃತಿಗಳು ಇತರ ಭಾಷೆಗಳಿಗೂ ತರ್ಜುಮೆಗೊಂಡಿವೆ.

1679: ಮೊಘಲ್ ದೊರೆ ಔರಂಗಜೇಬ ಮುಸ್ಲಿಮೇತರರ ಮೇಲೆ `ಜೆಜಿಯಾ' ತೆರಿಗೆಯನ್ನು ಮತ್ತೆ ಜಾರಿಗೊಳಿಸಿದ. ಸುಮಾರು ನೂರು ವರ್ಷಕ್ಕೆ ಮೊದಲು ಈ ತೆರಿಗೆಯನ್ನು ಅಕ್ಬರ್ ರದ್ದುಗೊಳಿಸಿದ್ದ.

No comments:

Post a Comment