ನಾನು ಮೆಚ್ಚಿದ ವಾಟ್ಸಪ್

Friday, April 20, 2018

ಇಂದಿನ ಇತಿಹಾಸ History Today ಏಪ್ರಿಲ್ 19

ಇಂದಿನ ಇತಿಹಾಸ History Today  ಏಪ್ರಿಲ್ 19
2018: ನವದೆಹಲಿ:   ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶ ಬಿ.ಎಚ್.ಲೋಯಾ ಸಾವಿನ ಕುರಿತು ಎಸ್‌ಐಟಿ ತನಿಖೆ ನಡೆಸಬೇಕು ಎಂಬುದಾಗಿ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಈದಿನ ವಜಾ ಮಾಡಿತು.   ‘ನ್ಯಾಯಾಧೀಶ ಲೋಯ ಅವರದ್ದು ಸಹಜ ಸಾವು ಎನ್ನುವುದು ತನಿಖೆಯಿಂದ ಧೃಡಪಟ್ಟಿದೆ. ನ್ಯಾಯಾಧೀಶ ಲೋಯ ಜೊತೆಗಿದ್ದ ನಾಲ್ವರು ನ್ಯಾಯಾಧೀಶರ ಹೇಳಿಕೆಗಳನ್ನು ಅನುಮಾನಿಸಲು ಸಾಧ್ಯವಿಲ್ಲ. ನಿಷ್ಪ್ರಯೋಜಕ ಮತ್ತು ಪ್ರೇರೇಪಿತ ಅರ್ಜಿಗಳನ್ನು ಬೆಂಬಲಿಸಲಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.  ನ್ಯಾಯಮೂರ್ತಿ ದೀಪಕ್ ಮಿಶ್ರ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಖಾನ್‌ವಿಲ್ಕರ್  ಅವರ ತ್ರಿಸದಸ್ಯ ಪೀಠ ಮೇಲ್ಮನವಿ ಸಲ್ಲಿಸಿರುವ ಉದ್ದೇಶವನ್ನು ಪ್ರಶ್ನಿಸಿ, ಇದು ನ್ಯಾಯಾಂಗದ ಮೇಲಾಗಿರುವ ದಾಳಿ ಎಂದು ಅಭಿಪ್ರಾಯ ಪಟ್ಟರು.  ‘ಸಹಜ ಕಾರಣದಿಂದಾಗಿ ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯ ಸಾವು ಸಂಭವಿಸಿದೆ. ನ್ಯಾಯಾಧೀಶ ಲೋಯ ಅವರ ಸಾವಿಗೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆ ಅಂತಿಮಗೊಳಿಸಲಾಗಿದೆ. ಇದು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಎಂದು ಕೋರ್ಟ್ ಹೇಳಿತು.  ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ್ರ ನೇತೃತ್ವದ ತ್ರಿಸದಸ್ಯ ಪೀಠ, ‘ಪಿಐಎಲ್‌ಗಳು ನ್ಯಾಯಾಲಯದ ಪ್ರಕ್ರಿಯೆ ಹಾಗೂ ಸಮಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ವೈಯಕ್ತಿಕ ಕಾರಣಗಳು ಹಾಗೂ ರಾಜಕೀಯ ಎದುರಾಳಿಗಳನ್ನು ಮಟ್ಟಹಾಕಲು ಪಿಐಎಲ್ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಅಧಿಕಾರಿಗಳು ಹಾಗೂ ಬಾಂಬೆ ಹೈಕೋರ್ಟ್ ನ್ಯಾಯಾಧೀಶರ ಗೌರವಕ್ಕೆ ಧಕ್ಕೆ ಉಂಟು ಮಾಡಲು ಪಿಐಎಲ್‌ಗಳನ್ನು ಹಾಕಲಾಗಿದೆ ಎಂದು ಪೀಠ ಹೇಳಿತು.  ೨೦೦೫ರ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾಗಲೆ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್.ಲೋಯ ಮೃತರಾಗಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಯಾಗಿದ್ದರು. ನ್ಯಾ.ಲೋಯ ಅವರ ನಂತರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದಿಂದ ಅಮಿತ್ ಶಾ ಅವರನ್ನು ಆರೋಪಮುಕ್ತ ಎಂದು ಘೋಷಿಸಿದ್ದರು. 

2018: ನವದೆಹಲಿ:  ಭಾರತದ ಸುಪ್ರೀಂಕೋರ್ಟ್ ವೆಬ್ ಸೈಟನ್ನು ಹ್ಯಾಕ್ ಮಾಡಲಾಗಿದ್ದು, ಈ ಕೃತ್ಯದ ಹಿಂದೆ ಬ್ರೆಜಿಲ್ ಹ್ಯಾಕರುಗಳ ಕೈವಾಡ ಇರುವ ಬಗ್ಗೆ ಶಂಕಿಸಲಾಯಿತು. ವೆಬ್ ಸೈಟ್ supremecourtofindia.nic.in ನ್ನು ಈದಿನ  ಕ್ಲಿಕ್ ಮಾಡಿದಾಗ ’ಎಲೆಯಂತಹ ಆಕೃತಿ ಕಂಡುಬಂತು. ವೆಬ್ ಸೈಟಿನ ಮೇಲ್ಭಾಗದಲ್ಲಿ ’ಹ್ಯಾಕೆಡೊ ಪೋರ್ ಹೈಟೆಕ್ ಬ್ರೆಜಿಲ್ ಹ್ಯಾಕ್ ಟೀಮ್ ಎಂಬ ಬರಹವೂ ಕಾಣಿಸಿತು. ಬಳಿಕ ವೆಬ್ ಸೌಟ್ ಸಂಪೂರ್ಣ ಡೌನ್ ಆಯಿತು.  ರಕ್ಷಣಾ ಸಚಿವಾಲಯ ಮತ್ತು ಗೃಹ ಸಚಿವಾಲಯದ ವೆಬ್ ಸೈಟ್‌ಗಳು ಸೇರಿದಂತೆ ವಿವಿಧ ಸಚಿವಾಲಯಗಳ ವೆಬ್ ಸೈಟ್ ಹ್ಯಾಕ್ ಅದ ಕೆಲವೇ ದಿನಗಳ ಬಳಿಕ ಸುಪ್ರೀಂಕೋರ್ಟ್ ವೆಬ್ ಸೈಟ್ ಹ್ಯಾಕ್ ಆಯಿತು. ವಿವಿಧ ಸಚಿವಾಲಯಗಳ ವೆಬ್ ಸೈಟ್ ಹ್ಯಾಕ್ ಆದಾಗ ಹ್ಯಾಕ್ ಹಿಂದೆ ಚೀನೀ ಹ್ಯಾಕರುಗಳ ಕೈವಾಡ ಇರುವ ಬಗ್ಗೆ ಶಂಕಿಸಲಾಗಿತ್ತು. ’ಝೆನ್ಗೆ ಸಂಬಂಧಿಸಿದ ಚೀನೀ ಅಕ್ಷರಗಳು ಆಗ ವೆಬ್ ಸೈಟಿನಲ್ಲಿ ಕಂಡು ಬಂದಿದ್ದವು.  ರಕ್ಷಣಾ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಘಟನೆಯನ್ನು ಅನುಸರಿಸಿ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಅವರು ’ರಕ್ಷಣಾ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಆದ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಶೀಘ್ರದಲ್ಲೇ ವೆಬ್ ಸೈಟ್ ಸುಸ್ಥಿತಿಗೆ ಮರಳುವುದು. ಇಂತಹ ಘಟನೆ ಭವಿಷ್ಯದಲ್ಲಿ ನಡೆಯದಂತೆ ಎಲ್ಲ ಎಚ್ಚರಿಕೆಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತ್ಯೇಕ ಹೇಳಬೇಕಾದ ಅಗತ್ಯವಿಲ್ಲ ಎಂದು ನಿರ್ಮಲಾ ಹೇಳಿದ್ದರು.

2018: ಬೆಂಗಳೂರು: ರಾಜ್ಯದಲ್ಲಿ ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಚುನಾವಣಾ ಆಯೋಗ ಒಪ್ಪಿಗೆ ನೀಡಿತು.  ಹೀಗಾಗಿ ಏಪ್ರಿಲ್ ತಿಂಗಳಿನಿಂದಲೇ ಪರಿಷ್ಕೃತ ವೇತನ ಶ್ರೇಣಿ ಅನ್ವಯವಾಗಲಿದೆ.  ಆರನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಅನ್ವಯಿಸಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸಿದ್ದ ಸರ್ಕಾರ, ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಪರಿಷ್ಕೃತ ವೇತನ ಜಾರಿಗೆ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.  ಇದೀಗ ಪರಿಷ್ಕೃತ ವೇತನ ಜಾರಿಗೆ ಚುನಾವಣಾ ಆಯೋಗ ತನ್ನ ಒಪ್ಪಿಗೆ ನೀಡಿ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಅನ್ವಯಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಕೇಂದ್ರ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪತ್ರ ರವಾನಿಸಿದರು.  ಆದೇಶದ ಪ್ರಕಾರ, ೨೦೧೮ರ ಏಪ್ರಿಲ್ ೧ರಿಂದ ನೂತನ ವೇತನ ಶ್ರೇಣಿ ಅನ್ವಯವಾಗಲಿದೆ. ೫.೨೦ ಲಕ್ಷ ನೌಕರರು, ೫.೭೩ ಲಕ್ಷ ಪಿಂಚಣಿದಾರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ ೭೩,೦೦೦ ನೌಕರರಿಗೆ ಇದರಿಂದ ಪ್ರಯೋಜನ ಸಿಗಲಿದೆ.  ಆರಂಭಿಕ ಕನಿಷ್ಠ ಮೂಲ ವೇತನ ರೂ ೯,೬೦೦ ಇದ್ದುದನ್ನು ರೂ.೧೭,೦೦೦ಕ್ಕೆ ಹೆಚ್ಚಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ (ಬಿಬಿಎಂಪಿ) ನೌಕರರಿಗೆ ಶೇ ೨೪ರಷ್ಟು ಮನೆಬಾಡಿಗೆ ಭತ್ಯೆ (ಎಚ್‌ಆರ್‌ಎ) ಸಿಗಲಿದೆ. ಈ ರೀತಿ ಲೆಕ್ಕ ಹಾಕಿದರೆ ರೂ.೨೧,೦೮೦ ವೇತನ ಕೈಗೆ ಸಿಗಲಿದೆ. ಬೆಂಗಳೂರು ನಗರದಲ್ಲಿ ಎ ಗ್ರೂಪ್ ನೌಕರರಿಗೆ ರೂ೬೦೦, ಬಿ ಗೂಪಿಗಿಂತ  ಕೆಳಗಿನ ನೌಕರರಿಗೆ ರೂ.೫೦೦ ನಗರ ಪರಿಹಾರ ಭತ್ಯೆ ಹೆಚ್ಚುವರಿಯಾಗಿ ಸಿಗಲಿದೆ.  ನೌಕರ ನಿವೃತ್ತಿಯಾದರೆ ಅಥವಾ ಆಕಸ್ಮಿಕ ಮರಣ ಹೊಂದಿದರೆ ಇಲ್ಲಿಯವರೆಗೆ ಉಪದಾನ ರೂಪದಲ್ಲಿ ರೂ.೧೦ ಲಕ್ಷ ನೀಡಲಾಗುತ್ತಿತ್ತು. ಅದನ್ನು ರೂ.೨೦ ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಆದೇಶ ತಿಳಿಸಿತು.  ಎಚ್‌ಆರ್‌ಎ ಎಷ್ಟು?: ವೇತನ ಪರಿಷ್ಕರಿಸಿದ ಬಳಿಕ ಎಚ್‌ಆರ್‌ಎ ಪ್ರಮಾಣವನ್ನು ಇಳಿಸುವಂತೆ ಆಯೋಗ ಶಿಫಾರಸು ಮಾಡಿತ್ತು. ಅದರನ್ವಯ ೨೫ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳ ನೌಕರರಿಗೆ ಶೇ ೨೪, ೫ ಲಕ್ಷ ಮೇಲ್ಪಟ್ಟು ೨೫ ಲಕ್ಷದೊಳಗಿನ ಜನಸಂಖ್ಯೆ ಇರುವ ಅಥವಾ ಪಾಲಿಕೆ ವ್ಯಾಪ್ತಿಯ ನೌಕರರಿಗೆ ಶೇ ೧೬ ಹಾಗೂ ೫ ಲಕ್ಷದೊಳಗಿನ ಪ್ರದೇಶಗಳ ನೌಕರರಿಗೆ ಶೇ ೮ರಷ್ಟು ಎಚ್‌ಆರ್‌ಎ ನೀಡುವಂತೆ ಆಯೋಗ ಹೇಳಿತ್ತು.  ಎಚ್‌ಆರ್‌ಎ, ನಗರ ಪರಿಹಾರ ಭತ್ಯೆ ಕುರಿತ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿತ್ತು. ನಿವೃತ್ತರಿಗೆ ಅನುಕೂಲ: ನಿವೃತ್ತ ನೌಕರರು ಅಥವಾ ಕುಟುಂಬ ಪಿಂಚಣಿಯ ಮೊತ್ತವನ್ನು ಸರ್ಕಾರ ಹೆಚ್ಚಿಸಿದೆ.  ನಿವೃತ್ತ ನೌಕರರು ಕನಿಷ್ಠ ರೂ.೪,೮೦೦ ಹಾಗೂ ಗರಿಷ್ಠ ರೂ೩೯,೯೦೦ ಪಡೆಯುತ್ತಿದ್ದರು. ಅದನ್ನು ಕ್ರಮವಾಗಿ ರೂ.೮,೫೦೦ರಿಂದ ರೂ.೭೫,೩೦೦ರವರೆಗೆ ಹೆಚ್ಚಿಸಲಾಗಿದೆ. ಕುಟುಂಬ ಪಿಂಚಣಿ ಮೊತ್ತ ಕನಿಷ್ಠ ರೂ.೮,೫೦೦ ಕ್ಕಿಂತ ಕಡಿಮೆ ಇಲ್ಲದೇ, ಗರಿಷ್ಠ ರೂ.೪೫,೧೮೦ ಇರುವಂತೆ ಹೆಚ್ಚಿಸಬೇಕು ಎಂದು ಆದೇಶ ತಿಳಿಸಿದೆ.

2018: ನವದೆಹಲಿ: ವ್ಯಕ್ತಿಗಳ ಜಾತಿ, ಧರ್ಮ, ಜನಾಂಗ ಇತ್ಯಾದಿಗಳನ್ನು ಆಧಾರ ಕಾಯ್ದೆ ದಾಖಲಿಸುವುದಿಲ್ಲ. ತನ್ಮೂಲಕ ಈ ಜನಾಂಗ ಸ್ಥಿತಿ ಕುರಿತ ದಾಖಲೆಗಳು ನಾಗರಿಕರ ಮಧ್ಯೆ ತಾರತಮ್ಯ ಮಾಡಲು ಬಳಸದಂತೆ ಖಾತರಿ ನೀಡುತ್ತದೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ಆಧಾರ್ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠದ ಮುಂದೆ ಯುಐಡಿಎಐ ವಕೀಲರು ಮಂಡಿಸಿದ ಅಹವಾಲನ್ನು ಕ್ರೋಡೀಕರಿಸಿ ಹೇಳಿದರು.  ‘ಜನಾಂಗ, ಜಾತಿ, ಧರ್ಮ ಇತ್ಯಾದಿ ಜನಾಂಗ ಸ್ಥಿತಿ ಅಧ್ಯಯನಕ್ಕೆ ಬೇಕಾದ ಭಾಗವಲ್ಲ. ಈ ಅಂಶಗಳನ್ನು ತಾರತಮ್ಯ ಮಾಡಲು ಬಳಸಬಹುದು. ಅವುಗಳನ್ನು ಹೊರತು ಪಡಿಸುವ ಮೂಲಕ ಕಾಯ್ದೆಯು ಖಾಸಗಿತನವನ್ನು ನೀಡಿದೆ ಎಂದು ಆಧಾರ್ ಯೋಜನೆಯನ್ನು ಜಾರಿಗೊಳಿಸುವ ಯುಐಡಿಎಐ ವಕೀಲರ ಅಹವಾಲನ್ನು ಸಂಕ್ಷಿಪ್ತಗೊಳಿಸುತ್ತಾ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.  ೨೦೧೭ರ ಆಗಸ್ಟ್ ತಿಂಗಳಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ೯ ಸದಸ್ಯರ ಸಂವಿಧಾನ ಪೀಠದ ಪರವಾಗಿ ನೀಡಿದ್ದ ಚಾರಿತ್ರಿಕ ತೀರ್ಪಿನಲ್ಲಿ ’ಖಾಸಗಿತನವು ಸಂವಿಧಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೂಲಭೂತ ಹಕ್ಕುಗಳ ಅವಿಭಾಜ್ಯ ಅಂಗವಾಗಿದ್ದು, ಬದುಕು ಮತ್ತು ಸ್ವಾತಂತ್ರ್ಯಕ್ಕೆ ಸ್ವಭಾವಜನ್ಯವಾದಂತಹುದು ಎಂದು ಘೋಷಿಸಿದ್ದರು.  ಖಾಸಗಿತನವು ಮಾನವಜೀವಿಗಳಲ್ಲಿ ಇರುವ ಸಹಜ ಹಕ್ಕು ಎಂದು ತೀರ್ಪು ಹೇಳಿತ್ತು. ಖಾಸಗಿತನದಂತಹ ಸಹಜ ಹಕ್ಕುಗಳು ಎಲ್ಲ ವ್ಯಕ್ತಿಗಳಲ್ಲೂ  ವರ್ಗ, ಸ್ತರ, ಲಿಂಗ ಅಥವಾ ನೆಲೆಗಳ ಹೊರತಾಗಿಯೂ ಸಮಾನವಾಗಿ ಇರುತ್ತದೆ ಎಂದು ತೀರ್ಪು ಹೇಳಿತ್ತು.  ಆಧಾರ್ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಪಂಚಸದಸ್ಯ ಪೀಠವು ಪ್ರಕರಣವನ್ನು ಒಪ್ಪಿಸಿದ್ದ ಹಿನ್ನೆಲೆಯಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಖಾಸಗಿತನವು ಮೂಲಭೂತ ಹಕ್ಕೇ ಮತ್ತು ಉಲ್ಲಂಘಿಸಲಾಗದಂತಹುದೇ ಎಂಬ ಪ್ರಶ್ನೆಯನ್ನು ಪಂಚ ಸದಸ್ಯ ಪೀಠವು ಒಂಬತ್ತು ನ್ಯಾಯಮೂರ್ತಿಗಳ ಪೀಠಕ್ಕೆ ಒಪ್ಪಿಸಿತ್ತು.  ಯುಐಡಿಎಐ ಪರ ವಾದಿಸಿದ ಹಿರಿಯ ವಕೀಲರಾದ ರಾಕೇಶ್ ದ್ವಿವೇದಿಯವರು ಜನಾಂಗ ವಿವರಗಳಿಗೆ ಸಂಬಂಧಿಸಿದಂತೆ ನಾಗರಿಕರಿಗೆ ಖಾಸಗಿತನದ ಹಕ್ಕು ಇಲ್ಲ ಎಂದು ವಾದಿಸಿದರು. ಜನಾಂಗ ವಿವರಗಳೆಂದರೆ ವ್ಯಕ್ತಿಯ ಹೆಸರು, ವಯಸ್ಸು ಇತ್ಯಾದಿ.  ‘ಗುರುತಿಸುವಿಕೆಗೆ ಜನಾಂಗ ಮಾಹಿತಿ, ಐಚ್ಛಿಕ ಜನಸಂಖ್ಯಾ ವಿವರ, ಬಯೋಮೆಟ್ರಿಕ್ಸ್ ಮತ್ತು ಬೆರಳಗುರುತು, ಐರಿಸ್ ಸ್ಕ್ಯಾನಿನಂತಹ ಕೋರ್ ಬಯೋಮೆಟ್ರಿಕ್ಸ್ ಈ ನಾಲ್ಕು ಮಟ್ಟಗಳಿವೆ ಎಂಬುದು ನಿಮ್ಮ ಅರ್ಥ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ದ್ವಿವೇದಿ ಅವರ ಮಾತುಗಳನ್ನು ಸಂಕ್ಷೇಪಿಸಿದರು.  ‘ನೀವು ಏನು ಹೇಳುತ್ತಿದ್ದೀರಿ ಅಂದರೆ, ಕೋರ್ ಬಯೋಮೆಟ್ರಿಕ್ಸ್ ನಲ್ಲಿ ಖಾಸಗಿತನದ ನ್ಯಾಯೋಚಿತನದ ನಿರೀಕ್ಷೆ ಇರುತ್ತದೆ, ಆದರೆ ಕೋರ್ ಬಯೋಮೆಟ್ರಿಕ್ಸ್ ನಿಂದ ದೂರ ಹೋದಂತೆ ಖಾಸಗಿತನದ ನಿಮ್ಮ ನ್ಯಾಯೋಚಿತ ನಿರೀಕ್ಷೆ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ನಿಮ್ಮ ಮಾತಿನ ಅರ್ಥ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ದ್ವಿವೇದಿ ಅವರ ಮಾತುಗಳನ್ನು ಸಂಕ್ಷಿಪ್ತಗೊಳಿಸಿದರು.  ಯುಐಡಿಎಐ ಕೋರ್ ಬಯೋಮೆಟ್ರಿಕ್ಸ್ ನ್ನು ಎಂದಿಗೂ ಹಂಚಿಕೊಳ್ಳುವುದೇ ಇಲ್ಲ ಎಂದು ದ್ವಿವೇದಿ ನುಡಿದರು. ಏನಿದ್ದರೂ, ಕೇಂದ್ರೀಯ ಸಂಗ್ರಹಾಗಾರದಲ್ಲಿನ ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದೆಂಬ ಭೀತಿ ಅರ್ಜಿದಾರರಲ್ಲಿ ಇನ್ನೂ ಇದೆ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಬೊಟ್ಟು ಮಾಡಿದರು.  ‘ನಾವು ನೈಜ ಭೀತಿಗಳ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. ನೀರಿನ ಬಗ್ಗೆ ಹೆದರುವ ಜನರು ಎಂದಿಗೂ ಕೊಳಕ್ಕೆ ಇಳಿಯಲಾರರು, ಇದಕ್ಕೆ ನಾವೇನು ಮಾಡಲು ಸಾಧ್ಯ?’ ಎಂದು ದ್ವಿವೇದಿ ಪ್ರತಿಕ್ರಿಯಿಸಿದರು.

2018: ನವದೆಹಲಿ: ನ್ಯಾಯಾಧೀಶ ಬಿ.ಎಚ್. ಲೋಯ ಅವರು ಸಹಜ ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಸುಪ್ರೀಂಕೋರ್ಟ್ ಈದಿನ ತೀರ್ಪು ನೀಡಿದ್ದು, ಬೆನ್ನಲ್ಲೇ ಅರ್ಜಿಗಳ ಉದ್ದೇಶದ ಬಗ್ಗೆ ವಿರೋಧಿ ಕಾಂಗ್ರೆಸ್ ಮತ್ತು ಆಳುವ ಬಿಜೆಪಿ ಪರಸ್ಪರ ಕಾಲೆಳೆಯುವ ಕೆಲಸಕ್ಕೆ ಕೈಹಾಕಿದವು.  ಲೋಯ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ತನಿಖೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್ ’ಇದು ಬೇಸರದ ದಿನ ಎಂದು ಹೇಳಿತು.  ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಆಳುವ ಪಕ್ಷದ ವಿರುದ್ಧದ ಪ್ರಚಾರ ಹೊರತು ಬೇರೇನಲ್ಲ ಎಂದು ಬಿಜೆಪಿ ನಾಯಕರು ಆಪಾದಿಸಿದರು.  ಬಿಜೆಪಿ ನಾಯಕರಾದ ಮೀನಾಕ್ಷಿ ಲೇಖಿ ಮತ್ತು ಅಮನ್ ಸಿನ್ಹ ಅವರು ವಿಶೇಷ ಸಿಬಿಐ ನ್ಯಾಯಾಧೀಶ ಬಿ.ಎಚ್. ಲೋಯ ಅವರ ಸಾವಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಅಧಿಕಾರಸ್ಥ ಜನರಿಗೆ ಮಸಿ ಬಳಿಯುವ ಉದ್ದೇಶದ ’ಬ್ಲಾಕ್ ಮೇಲ್ ಮತ್ತು ಪ್ರಚಾರ ಯಂತ್ರ ಎಂದು ಹೇಳಿದರು. ಕಾಂಗ್ರೆಸ್ ನಾಯಕತ್ವವು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.  ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸುಪ್ರೀಂಕೋರ್ಟ್ ತೀರ್ಪನ್ನು ಶ್ಲಾಘಿಸಿದರು. ರಾಜಕೀಯ ಸೇಡನ್ನು ಆಧರಿಸಿದ ಆಪಾದನೆಗಳಿಂದ ನ್ಯಾಯಾಲಯವನ್ನು ದಾರಿ ತಪ್ಪಿಸಲಾಗದು ಎಂದು ಅವರು ನುಡಿದರು.  ಬಿಜೆಪಿ ಮತ್ತು ಅದರ ನಾಯಕರನ್ನು ’ನಕಲಿ ಪ್ರಕರಣಗಳ ಮೂಲಕ ಮಣಿಸಲು ಮಾಡಲಾಗುತ್ತಿರುವ ಹಲವಾರು ಪ್ರಕರಣಗಳನ್ನು ರಾಜನಾಥ್ ಸಿಂಗ್ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಮತ್ತು ಅದರ ಉನ್ನತ ನಾಯಕರ ಚಾರಿತ್ರ್ಯ ಹನನಕ್ಕಾಗಿ ನಕಲಿ ವಿಷಯಗಳನ್ನು ಆಧರಿಸಿದ ಪ್ರಕರಣಗಳನ್ನು ಸೃಷ್ಟಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಇಂತಹ ಪ್ರಯತ್ನಗಳು ಮತ್ತೊಮ್ಮೆ ದಯನೀಯವಾಗಿ ವಿಫಲಗೊಂಡಿವೆ ಎಂದು ಸಿಂಗ್ ಟ್ವಿಟ್ಟರಿನಲ್ಲಿ ಪ್ರತಿಕ್ರಿಯಿಸಿದರು.  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು ೨೦೧೪ರಲ್ಲಿ ಸಂಭವಿಸಿದ ನ್ಯಾಯಾಧೀಶ ಲೋಯ ಅವರ ಸಾವಿನ ಸಂದರ್ಭಗಳ ತನಿಖೆ ನಡೆಸಬೇಕು ಎಂಬುದಾಗಿ ಕೋರಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳನ್ನು ಈದಿನ ವಿಚಾರಣೆ ನಡೆಸಿದ ಬಳಿಕ ವಜಾಗೊಳಿಸಿತು.  ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದ್ದ ಗುಜರಾತಿನ ಸೊಹ್ರಾಬುದ್ದೀನ್ ಎನ್ ಕೌಂಟರ್ ಹತ್ಯೆ ಪ್ರಕರಣದ ತನಿಖೆಯನ್ನು ನ್ಯಾಯಾಧೀಶ ಲೋಯ ಅವರು ನಡೆಸುತ್ತಿದ್ದರು.  ಲೋಯ ಸಾವಿನ ತನಿಖೆ ಕೋರಿ ಸಲ್ಲಿಸಲಾದ ಅರ್ಜಿಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈವಾಡ ಇದೆ ಎಂಬ ಬಿಜೆಪಿ ಆಪಾದನೆಗೆ ಕಟುವಾಗಿ ಪ್ರತಿಕ್ರಿಯಿಸಿದ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲ ಅವರು ’ಇದು ಪಕ್ಷಕ್ಕೆ ಮಸಿ ಬಳಿಯುವ ಯತ್ನ ಮತ್ತು ಆಡಳಿತಾರೂಢ ಪಕ್ಷದ ದಿಗಿಲನ್ನು ತೋರಿಸಿದೆ ಎಂದು ಹೇಳಿದರು.  ‘ಇದು ಭಾರತದ ಇತಿಹಾಸದಲ್ಲಿ ಒಂದು ಬೇಸರದ ದಿನ. ಲೋಯ ಅವರು ನಿಧನರಾದ ಅನುಮಾನಾಸ್ಪದ ಸಂದರ್ಭಗಳು ನ್ಯಾಯಾಂಗದಲ್ಲಿ ವಿಶ್ವಾಸ ಇಟ್ಟಿದ್ದವರಿಗೆ ಅತ್ಯಂತ ಕಳವಳದ ವಿಷಯವಾಗಿದ್ದವು. ತೀರ್ಪಿನ ಪೂರ್ತಿ ಪ್ರತಿ ಇನ್ನೂ ಲಭಿಸಿಲ್ಲ. ಆದರೆ ನ್ಯಾಯಾಂಗವನ್ನು ಇನ್ನೂ ನಂಬುವವರ ಬಳಿ ಇನ್ನೂ ಪ್ರಶ್ನೆಗಳಿವೆ ಎಂದು ಸುರ್ಜಿವಾಲ ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.  ಪ್ರಕರಣಕ್ಕೆ ಸಂಬಂಧಿಸಿದಂತೆ ೧೦ ಪ್ರಶ್ನೆಗಳನ್ನು ಎತ್ತಿದ ಸುರ್ಜಿವಾಲ, ತೀರ್ಪನ್ನು ಟೀಕಿಸಿ, ಕ್ರಿಮಿನಲ್ ಸ್ವರೂಪವನ್ನು ತನಿಖೆಯ ಮೂಲಕ ಮಾತ್ರವೇ ನಿರ್ಧರಿಸಬಹುದು. ಅತ್ಯಂತ ಮಹತ್ವದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ಲೋಯ ಅವರ ಸಾವಿಗೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆದಿಲ್ಲ ಎಂದು ನುಡಿದರು.  ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರೂ, ’ಲೋಯ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂದು ಕೋರಿದ ಅರ್ಜಿಗಳನ್ನು ವಜಾ ಮಾಡಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇನ್ನಷ್ಟು ಪ್ರಶ್ನೆಗಳನ್ನು ಎತ್ತಿದ್ದು, ಅವುಗಳಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರವೇ ಸಿಗದೆ ಹೋಗಬಹುದು ಎಂದು ಹೇಳಿದರು.  ಇದಕ್ಕೆ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗ ಆದಿತ್ಯನಾಥ್ ಅವರು ಟ್ವೀಟ್ ಮೂಲಕ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದರು. ’ಗಾಂಧಿ ಕುಟುಂಬದ ಹೊರತಾಗಿ ಬೇರೆ ಯಾರೇ ವ್ಯಕ್ತಿ ದೇಶ ಮುನ್ನಡೆಸುವುದನ್ನು ರಾಹುಲ್ ಗಾಂಧಿ ಇಚ್ಛಿಸುವುದಿಲ್ಲ. ಕಾಂಗ್ರೆಸ್ ನಿಲುವು ಅನಾವರಣಗೊಂಡಿದೆ ಎಂದು ಪ್ರತಿಕ್ರಿಯಿಸಿದ್ದರು.  ನ್ಯಾಯಾಧೀಶ ಲೋಯ ಅವರ ಸಾವಿನ ತನಿಖೆ ನಡೆಸುವಂತೆ ರಾಷ್ಟ್ರಪತಿ ಅವರ ಬಳಿಗೆ ರಾಹುಲ್ ನೇತೃತ್ವದಲ್ಲಿ ನಿಯೋಗ ಒಯ್ದಿದ್ದುದನ್ನು ಮತ್ತು ವಿಷಯಕ್ಕೆ ಸಂಬಂಧಿಸಿದ ಕಾಂಗ್ರೆಸ್ ಪತ್ರಿಕಾಗೋಷ್ಠಿಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ’ವಿಸಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕಾಂಗ್ರೆಸ್ಸಿನ ಕೊಳಕು ಮುಖವನ್ನು ಅನಾವರಣಗೊಳಿಸಿದೆ ಎಂದು ಹೇಳಿದ್ದಾರೆ. ಪ್ರಕಾಶ ಜಾವಡೇಕರ್ ಸೇರಿದಂತೆ ಇತರ ಹಲವಾರು ಬಿಜೆಪಿ ನಾಯಕರು ಮತ್ತು ಹಿರಿಯ ಸಚಿವರು ವಿಷಯದ ಕುರಿತು ಮಾತನಾಡಿ ತೀರ್ಪನ್ನು ಸ್ವಾಗತಿಸಿದರು.  ರಾಜಕೀಯ ಪಕ್ಷಗಳು ಮಾತ್ರವೇ ಅಲ್ಲ, ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರೂ, ಸ್ಥಾಪಿತ ಹಿತಾಸಕ್ತಿಗಳು ಸರ್ಕಾರದ ಕಾರ್‍ಯನಿರ್ವಹಣೆಯ ಮೇಲೆ ದಾಳಿ ನಡೆಸುವ ಉದ್ದೇಶದಿಂದ ನ್ಯಾಯಾಧೀಶ ಲೋಯ ಅವರ ಸಾವಿನ ತನಿಖೆ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಆಪಾದಿಸಿದ್ದರು.
2018: ಅಹಮದಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಅನಿರ್ದಿಷ್ಟ ಉಪವಾಸ ಆರಂಭಿಸಿದ್ದ ವಿಶ್ವ ಹಿಂದೂ ಪರಿಷತ್ತಿನ (ವಿಎಚ್ಪಿ) ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಅವರು ತಮ್ಮ ಮೂರು ದಿನಗಳ ಉಪವಾಸವನ್ನು ಇಲ್ಲಿ ಮುಕ್ತಾಯಗೊಳಿಸಿದರು. ತಾವು ಇನ್ನು ’ಹಿಂದುತ್ವ ರಾಜಕೀಯ ಪುನಶ್ಚೇತನಕ್ಕಾಗಿ ರಾಷ್ಟ್ರವ್ಯಾಪಿ ಪ್ರವಾಸ ಆರಂಭಿಸುವುದಾಗಿ ಅವರು ಪ್ರಕಟಿಸಿದರು.  ೬೨ರ ಹರೆಯದ ತೊಗಾಡಿಯಾ ವೈದ್ಯರ ಸಲಹೆ ಮೇರೆಗೆ ಉಪವಾಸ ಕೊನೆಗೊಳಿಸುತ್ತಿರುವುದಾಗಿ ನುಡಿದರು.  ಫೈರ್ ಬ್ರಾಂಡ್ ನಾಯಕನಾಗಿ ಬದಲಾವಣೆಗೊಂಡ ಸರ್ಜನ್ ತೊಗಾಡಿಯಾ ಅವರು ಧಾರ್ಮಿಕ ನಾಯಕರಿಂದ ಹಣ್ಣಿನ ರಸ ಸ್ವೀಕರಿಸಿ ಉಪವಾಸವನ್ನು ಅಂತ್ಯಗೊಳಿಸಿದರು. ಅಖಿಲೇಶ್ವರದಾಸ್ ಮಹಾರಾಜ್ ನೇತೃತ್ವದಲ್ಲಿ ಧಾರ್ಮಿಕ ನಾಯಕರ ತಂಡವೊಂದು ನಿರಶನ ಮುಕ್ತಾಯಗೊಳಿಸುವಂತೆ ಅವರನ್ನು ಒತ್ತಾಯಿಸಿತು.  ವಿಶ್ವಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷನ ಆಯ್ಕೆಗಾಗಿ ಕಳೆದವಾರ ನಡೆದ ಸಂಘಟನೆಯ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಸೋತ ಬಳಿಕ ತೊಗಾಡಿಯಾ ವಿಶ್ವ ಹಿಂದೂ ಪರಿಷತ್ತಿಗೆ ರಾಜೀನಾಮೆ ಸಲ್ಲಿಸಿದ್ದರು. ರಾಮಮಂದಿರ ನಿರ್ಮಾಣ, ಅಕ್ರಮ ಬಾಂಗ್ಲಾದೇಶೀಯರ ವಾಪಸಾತಿ, ಕಾಶ್ಮೀರದಲ್ಲಿ ಹಿಂದುಗಳ ಮರುವಸತಿ ಮತ್ತು ಸಂವಿಧಾನದ ೩೭೦ನೇ ಪರಿಚ್ಛೇದ ರದ್ದು ಬೇಡಿಕೆಗಳನ್ನು ಮುಂದಿಟ್ಟು ಏಪ್ರಲ್ ೧೭ರಂದು ಅವರು ಉಪವಾಸ ಆರಂಭಿಸಿದ್ದರು.  ವರದಿಗಾರರ ಜೊತೆ ಮಾತನಾಡಿದ ತೊಗಾಡಿಯಾ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಪೂರ್ವಾಧಿಕಾರಿಗಳಷ್ಟೇ ತಾವೂ ಕೆಟ್ಟವರು ಎಂಬುದನ್ನು ಬಿಜೆಪಿ ಮತ್ತು ಮೋದಿ ಸಾಬೀತು ಪಡಿಸಿದ್ದಾರೆ ಮತ್ತು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.  ‘೧೦೦ ಕೋಟಿ ಹಿಂದುಗಳ ವಿಷಯವನ್ನು ಎತ್ತಿಕೊಂಡು ನಾನು ರಾಷ್ಟ್ರವ್ಯಾಪಿ ಪ್ರವಾಸ ಮಾಡುವೆ ಮತ್ತು ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿರುವುದರಿಂದ ’ಹಿಂದುತ್ವ ರಾಜಕೀಯವನ್ನು ಪುನರುಜ್ಜೀವನಗೊಳಿಸಲು ಕೋರುವೆ ಎಂದು ಅವರು ನುಡಿದರು.  ’೨೦೧೪ರಲ್ಲಿ ಅಧಿಕಾರ ಪಡೆದವರು ಅಧಿಕಾರದಿಂದ ಉಚ್ಚಾಟನೆಗೊಂಡವರಷ್ಟೇ ಕೆಟ್ಟವರು ಎಂಬುದಾಗಿ ಸಾಬೀತಾಗಿರುವುದರಿಂದ ಜನರು ಈಗ ತಾವು ಯಾರಿಗೆ ಓಟು ಕೊಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ೨೦೧೯ರ ವೇಳೆಗೆ ಜನರ ಆಶೋತ್ತರಗಳನ್ನು ಈಡೇರಿಸಲು ನಾನು ಹಿಂದುತ್ವ ರಾಜಕೀಯವನ್ನು ಪ್ರತಿಷ್ಠಾಪಿಸಲು ಯತ್ನಿಸುವೆ ಎಂದು ತೊಗಾಡಿಯಾ ಹೇಳಿದರು.  ‘ನಾನು ರೈತರು, ಕಾರ್ಮಿಕರು ಮತ್ತು ಯುವಕರ ವಿಷಯಗಳನ್ನು ಎತ್ತಿಕೊಳ್ಳುವೆ. ಹಿಂದುಗಳು, ಆರ್ ಎಸ್ ಎಸ್, ಬಿಜೆಪಿ ಮತ್ತು ವಿಎಚ್ ಪಿಯ ಇತರ ಕಾರ್ಯಕರ್ತರ ಜೊತೆಗೆ ನನ್ನ ಗುರಿ ಸಾಧಿಸುವ ವಿಶ್ವಾಸವಿದೆ. ಈ ಕಾರ್‍ಯಕರ್ತರು ಈಗಲೂ ಈ ಕಾರ್‍ಯದಲ್ಲಿ ನನ್ನೊಂದಿಗೆ ಸೇರುವ ವಿಶ್ವಾಸವಿದೆ ಎಂದು ಅವರು ನುಡಿದರು.  ‘ನರೇಂದ್ರ ಭಾಯಿ, ಭರವಸೆಗಳನ್ನು ಏಕೆ ಈಡೇರಿಸಲಿಲ್ಲ ಎಂದು ಉತ್ತರಿಸುವ ಅಗತ್ಯವಿದೆ. ನೀವು ಉತ್ತರ ಕೊಡದಿದ್ದರೆ, ಆಗ ೧೦೦ ಕೋಟಿ ಹಿಂದುಗಳು ರೈತರು ಮತ್ತು ಯುವಕರ ಸಹಿತವಾಗಿ ೨೦೧೯ರಲ್ಲಿ ನಿಮ್ಮ ಉತ್ತರ ಕೇಳಲಿದ್ದಾರೆ. ಜಗತ್ತಿನ ಸುತ್ತ ಸುತ್ತಾಡುವ ಬದಲು, ಈ ರಾಷ್ಟ್ರದ ಜನರ ಸಮಸ್ಯೆಗಳನ್ನು ನಿವಾರಿಸಲು ಯತ್ನಿಸಿ ಎಂದು ಅವರು ನುಡಿದರು.  ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ವಿ.ಎಸ್. ಕೊಕ್ಜೆ ಅವರು ಸಂಘಟನೆಯ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ರಾಘವ ರೆಡಿ ಅವರನ್ನು ಪರಾಭವಗೊಳಿಸಿದ ಬಳಿಕ ತೊಗಾಡಿಯಾ ವಿಎಚ್ ಪಿಯಿಂದ ಹೊರಗೆ ಬಂದಿದ್ದರು.

2018: ಇಸ್ಲಾಮಾಬಾದ್: ೨೦೧೬ರಲ್ಲಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ನೆಲದಲ್ಲಿ ಸರ್ಜಿಕಲ್ ದಾಳಿಗಳನ್ನು ಭಾರತ ನಡೆಸಿದುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆ ’ತಪ್ಪು ಮತ್ತು ಬುಡರಹಿತ ಎಂದು ಪಾಕಿಸ್ತಾನ ತಿರಸ್ಕರಿಸಿದೆ. ’ಸುಳ್ಳನ್ನು ಪುನರಾವರ್ತಿಸುವುದರಿಂದ ಅದು ಸತ್ಯವಾಗಿ ಬದಲಾಗುವುದಿಲ್ಲ ಎಂದು ಪಾಕಿಸ್ತಾನ ಹೇಳಿತು.  ಲಂಡನ್ನಿನಲ್ಲಿ ಏಪ್ರಿಲ್  18ರ ಬುಧವಾರ ಭಾರತ್ ಕಿ ಬಾತ್, ಸಬ್ ಕೆ ಸಾಥ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮೋದಿ ಅವರು ಭಾರತವು ಮಾಧ್ಯಮ ಮತ್ತು ಜನರಿಗೆ ತಿಳಿಸುವ ಮುನ್ನ ಕಾರ್ಯಾಚರಣೆ ಬಗ್ಗೆ ಪಾಕಿಸ್ತಾನಕ್ಕೆ ತಿಳಿಸಲು ಕಾದಿತ್ತು ಎಂದು ಹೇಳಿದ್ದರು.  ‘ಭಾರತಕ್ಕೆ ಗೊತ್ತಾಗುವ ಮುನ್ನ ನಾವು ಪಾಕಿಸ್ತಾನವನ್ನು ಸಂಪರ್ಕಿಸಿ ಅವರಿಗೆ ಇದನ್ನು ಹೇಳಬೇಕು ಎಂದು ನಾನು ಹೇಳಿದ್ದೆ. ಬೆಳಗ್ಗೆ ೧೧ ಗಂಟೆಯಿಂದಲೇ ನಾವು ಅವರಿಗೆ ಕರೆ ಮಾಡಲು ತೊಡಗಿದ್ದೆವು. ಆದರೆ ಅವರು ದೂರವಾಣಿಯಲ್ಲಿ ಮಾತನಾಡಲು ಹೆದರಿದ್ದರು, ೧೨ ಗಂಟೆಗೆ ನಾವು ಅವರ ಬಳಿ ಮಾತನಾಡಿದೆವು ಮತ್ತು ಬಳಿಕ ಭಾರತದ ಮಾಧ್ಯಮಕ್ಕೆ ಕಾರ್‍ಯಾಚರಣೆ ಬಗ್ಗೆ ತಿಳಿಸಿದೆವು ಎಂದು ಮೋದಿ ಹೇಳಿದ್ದರು.  ಮೋದಿ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ ಫೈಸಲ್ ಅವರು ಗುರುವಾರ ಸರ್ಜಿಕಲ್ ದಾಳಿ ನಡೆಸಿರುವುದಾಗಿ ಭಾರತ ಮಾಡಿದ ಪ್ರತಿಪಾದನೆ ತಪ್ಪು ಮತ್ತು ಬುಡರಹಿತ ಎಂದು ಹೇಳಿದರು.  ‘ಸುಳ್ಳನ್ನು ಪುನರಾವರ್ತಿಸುವುದರಿಂದ ಅದು ಸತ್ಯವಾಗಿ ಬದಲಾಗುವುದಿಲ್ಲ ಎಂದು ವಕ್ತಾರ ಹೇಳಿದುದನ್ನು ಡಾನ್ ಉಲ್ಲೇಖಿಸಿತು. ಭಾರತದ ಉನ್ನತ ನಾಯಕತ್ವದಿಂದ ಬರುತ್ತಿರುವ ಪಾಕಿಸ್ತಾನ ವಿರುದ್ಧದ ಬೆದರಿಕೆಯ ಹೇಳಿಕೆಗಳು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳವಳದ ವಿಷಯವಾಗಬೇಕು ಎಂದು ವಕ್ತಾರ ನುಡಿದರು.  ಪಾಕಿಸ್ತಾನವು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಭಾರತವೇ ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂದು ಪ್ರತಿಪಾದಿಸಿದರು.  ‘ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಭಾರತದ ಗುಪ್ತಚರ ಕುಲಭೂಷಣ್ ಜಾಧವ್ ಅವರೇ ಸಾಕ್ಷಿ ಎಂದು ವಕ್ತಾರ ಆಪಾದಿಸಿದರು.  ಜಾಧವ್ ಅವರಿಗೆ ಪಾಕಿಸ್ತಾನಿ ಸೇನಾ ನ್ಯಾಯಾಲಯ ಗೂಢಚರ್ಯೆ ಮತ್ತು ಭಯೋತ್ಪಾದನೆ ಆಪಾದನೆ ಮೇಲೆ ಮರಣ ದಂಡನೆ ವಿಧಿಸಿದೆ. ಭಾರತ ಇದರ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಕಳೆದ ಮೇ ತಿಂಗಳಲ್ಲಿ ದೂರು ನೀಡಿದ್ದು, ನ್ಯಾಯಾಲಯವು ತನ್ನ ಅಂತಿಮ ತೀರ್ಪಿನವರೆಗೆ ಮರಣದಂಡನೆ ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿತ್ತು. ಪಾಕ್ ಭದ್ರತಾ ಪಡೆಗಳು ಜಾಧವ್ ಅವರನ್ಜು ಅಶಾಂತ ಬಲೂಚಿಸ್ತಾನ ಪ್ರಾಂತ್ಯದಲ್ಲಿ ೨೦೧೬ರ ಮಾರ್ಚ್ ೩ರಂದು ಇರಾನಿನಿಂದ ಬಂದಾಗ ಬಂಧಿಸಿರುವುದಾಗಿ ಪಾಕಿಸ್ತಾನ ಪ್ರತಿಪಾದಿಸಿತ್ತು.  ಆದರೆ ಭಾರತವು ಜಾಧವ್ ಅವರು ವ್ಯವಹಾರ ಸಲುವಾಗಿ ಇರಾನಿಗೆ ಹೋಗಿದ್ದಾಗ ಅವರನ್ನು ಪಾಕಿಸ್ತಾನ ಅಪಹರಿಸಿದೆ ಎಂದು ಹೇಳಿತ್ತು.

2009: ಕರ್ನಾಟಕದ ವಿವಿಧೆಡೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ಅಕಾಲಿಕ ಮಳೆಯಿಂದ ಒಟ್ಟು 7 ಜನ ಮೃತರಾದರು. ಆಸ್ತಿಪಾಸ್ತಿಗೆ ಅಪಾರ ಹಾನಿ ಸಂಭವಿಸಿತು. ಬೆಂಗಳೂರಿನ ಯಲಹಂಕದಲ್ಲಿ ನಾಲ್ವರು ಮೃತರಾದರು. ಸಿಡಿಲು ಬಡಿದು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಇಬ್ಬರು ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮಾಕೋಡು ಗ್ರಾಮದಲ್ಲಿ ಒಬ್ಬ ರೈತ ಮೃತರಾದರು.

2009: ಕೊಲೆ ಯತ್ನ ಪ್ರಕರಣದ ಆರೋಪಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಪ್ತಾಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತೋಪುಡುರ್ತಿ ಪ್ರಕಾಶ್ ರೆಡ್ಡಿ (30) ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದರು. ಪ್ರಕಾಶ್ ರೆಡ್ಡಿ ತನ್ನ ಒಂಬತ್ತು ಮಂದಿ ಸಹಚರರ ಜತೆ ಸೇರಿ 1997ರಲ್ಲಿ ಪೀಣ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಮೂರ್ತಿ ಎಂಬವರ ಮೇಲೆ ಹಲ್ಲೆ ನಡೆಸಿ ಆಸಿಡ್ ಎರಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದರು. ಪ್ರಕರಣದಲ್ಲಿ ಬಂಧಿತನಾಗಿ ಎರಡನೇ ತ್ವರಿತ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆತ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಆತನನ್ನು ಬಂಧಿಸುವಂತೆ ಮತ್ತು ಆಸ್ತಿ ಜಫ್ತಿ ಮಾಡುವಂತೆ (ಪ್ರೊಕ್ಷಮೇಷನ್) ನ್ಯಾಯಾಲಯ 2004ರಲ್ಲಿ ಆದೇಶ ನೀಡಿತ್ತು.

2009: ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ 'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಬಾಲ ನಟಿ ರುಬಿನಾ ಅಲಿ ಖುರೇಷಿಯನ್ನು ಆಕೆಯ ತಂದೆ ದುಬೈ ಶೇಖ್‌ರಿಗೆ 2 ಲಕ್ಷ ಪೌಂಡ್‌ಗಳಿಗೆ (ಅಂದಾಜು ರೂ 1.4 ಕೋಟಿ ) ಮಾರಾಟ ಮಾಡಲು ಉದ್ದೇಶಿಸಿದ್ದರು ಎಂದು ಲಂಡನ್‌ ಪತ್ರಿಕೆಯೊಂದು ವರದಿ ಮಾಡಿತು. ಒಂಬತ್ತು ವರ್ಷದ ರುಬಿನಾ ನಟಿಸಿದ 'ಸ್ಲಂಡಾಗ್..' ಎಂಟು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಜತೆಗೆ ಗಲ್ಲಾ ಪೆಟ್ಟಿಗೆಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸಿದೆ. ಚಿತ್ರದ ಬಾಲನಟಿ ರುಬಿನಾ ತಂದೆ ರಫಿಖ್ ಖುರೇಷಿ ಕಾನೂನು ಬಾಹಿರವಾಗಿ ಮಗಳನ್ನು ದತ್ತು ನೀಡುವ ಮೂಲಕ ಭಾರಿ ಮೊತ್ತಕ್ಕೆ ಮಾರಾಟ ಮಾಡಲು ಉದ್ದೇಶಿಸಿದ್ದರು ಎಂದು ಪತ್ರಿಕೆ ವರದಿ ಮಾಡಿತು. ಇಂಗ್ಲೆಂಡ್ ಮೂಲದ ಅಂತರ್‌ಜಾಲ ತಾಣ 'ನ್ಯೂಸ್ ಆಫ್ ದ ವರ್ಲ್ಡ್' ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ಸಂಗತಿ ಬಹಿರಂಗಗೊಂಡಿತು.. ಸಿನಿಮಾ ನಿರ್ಮಾಪಕರಿಂದ ತಮ್ಮ ಕುಟುಂಬಕ್ಕೆ ಯಾವುದೇ ಸಂಭಾವನೆ ದೊರೆತಿಲ್ಲ. ಅನಿವಾರ್ಯ ಕಾರಣದಿಂದ ಮಗಳನ್ನು ತಾನು 2 ಲಕ್ಷ ಪೌಂಡ್‌ಗೆ ಮಾರಾಟ ಮಾಡಲು ಮನಸ್ಸು ಮಾಡಿರುವುದಾಗಿ ಆತ ರಹಸ್ಯ ಕಾರ್ಯಾಚರಣೆ ನಡೆಸಿದ ಮಾರುವೇಷದ ವರದಿಗಾರರಿಗೆ ಹೇಳಿದ್ದ. ದುಬೈನ ನಕಲಿ ಶೇಖ್‌ರ ವೇಷದಲ್ಲಿ ಪತ್ರಕರ್ತರು ಈ ಕಾರ್ಯಾಚರಣೆ ನಡೆಸಿದ್ದರು. ರುಬಿನಾಳ ಭವಿಷ್ಯ ಹಾಗೂ ತನಗೆ ಯಾವ ರೀತಿಯ ಹಣಕಾಸಿನ ಅನುಕೂಲವಾಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿ ತಾನು ಈ ತೀರ್ಮಾನಕ್ಕೆ ಬಂದಿರುವುದಾಗಿ ಖುರೇಷಿ ತಿಳಿಸಿದ್ದ.

2009: ಟಿಬೆಟ್‌ಗೆ ಪೂರ್ಣ ಸ್ವಾಯತ್ತತೆಗೆ ಆಗ್ರಹಿಸಿ ದಲೈಲಾಮ ಸಂಬಂಧಿ ಜಿಗ್ಮೆ ನೊಬ್ರು ಅವರು ಅಮೆರಿಕದಲ್ಲಿ 1400 ಕಿ.ಮೀ. ಪಾದಯಾತ್ರೆ ಕೈಗೊಂಡರು. ಟಿಬೆಟ್‌ಗೆ ಸ್ವಾಯತ್ತತೆ ಕಲ್ಪಿಸಲು ಹೋರಾಡಿದವರಿಗೆ ನಮನ ಸಲ್ಲಿಸಲು ಅವರು ಇಂಡಿಯಾನಾದಿಂದ ನ್ಯೂಯಾರ್ಕ್‌ವರೆಗೆ ಈ ಯಾತ್ರೆ ಕೈಗೊಂಡರು. ಟಿಬೆಟ್‌ಗೆ ಸ್ವಾಯತ್ತತೆ ಕಲ್ಪಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಕಳೆದ ಸೆಪ್ಟೆಂಬರ 5 ರಂದು ಕೊನೆಯುಸಿರೆಳೆದ ಟಕಸ್ಟರ್ ರಿಂಪೊಚೆ ಅವರ ಮಗನೇ ಈ ಜಿಗ್ಮೆ ನೊಬ್ರು. ನ್ಯೂಯಾರ್ಕ್‌ನಲ್ಲಿರುವ ಚೀನಾ ದೂತಾವಾಸದ ಕಚೇರಿ ಮುಂದೆ ಸ್ವಾಯತ್ತತೆಗೆ ಆಗ್ರಹಿಸಿ ಕೈಗೊಂಡಿದ್ದ ರಾಲಿಯ 50ನೇ ವರ್ಷಾಚರಣೆ ಸವಿನೆನಪಿಗಾಗಿ ಮಾರ್ಚ್ 10 ರಂದು ನೊಬ್ರು ಈ ನಡಿಗೆ ಆರಂಭಿಸಿದ್ದರು.

2009: ಪ್ರಧಾನಿ ಮನಮೋಹನ್ ಸಿಂಗ್, ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ, ಉದ್ಯಮಪತಿಗಳಾದ ಮುಖೇಶ್ - ಅನಿಲ್ ಅಂಬಾನಿ, ಕಾರ್ಪೊರೇಟ್ ದೊರೆ ರತನ್ ಟಾಟಾ ಹಾಗೂ ತಾರಾ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನ್ನು ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಪಟ್ಟಿಗೆ 'ಬಿಸಿನೆಸ್ ವೀಕ್' ಪತ್ರಿಕೆ ಸೇರಿಸಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ಪ್ರಣವ್ ಮುಖರ್ಜಿ, ಸಂಗೀತ ನಿರ್ದೇಶಕ ಎ ಆರ್ ರೆಹಮಾನ್, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಹಾಗೂ ಭಾರತ ಸೆಕ್ಯುರಿಟಿ ಹಾಗೂ ವಿನಿಮಯ ಮಂಡಳಿ (ಸೆಬಿ) ಅಧ್ಯಕ್ಷ ಸಿ ಬಿ ಭಾವೆ ಅವರೂ ಈ 50 ಮಂದಿಯ ಪಟ್ಟಿಗೆ ಸೇರ್ಪಡೆಯಾದರು.

2009: ವಿದೇಶಿ ಪ್ರಶಸ್ತಿ ಸ್ವೀಕರಿಸಿದ್ದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆಯೂ ಆದ ಸೋನಿಯಾ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ಧತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಲ್ಲಿ ಭಿನ್ನಮತ ಕಂಡು ಬಂದಿತು. ಅಂತಿಮವಾಗಿ ಬಹುಮತದ ಆಧಾರದ ಮೇಲೆ ಆ ಕೋರಿಕೆ ತಿರಸ್ಕೃತವಾಯಿತು. ಮೂವರು ಸದಸ್ಯರ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಈ ಬಗ್ಗೆ ಇನ್ನಷ್ಟು ವಿವರವಾದ ತನಿಖೆ ನಡೆಯುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರೆ, ನವೀನ್ ಚಾವ್ಲಾ ಮತ್ತು ಇನ್ನೊಬ್ಬ ಸದಸ್ಯ ಎಸ್.ವೈ.ಖುರೇಷಿ ಅವರು, ಎಲ್ಲಾ ತನಿಖೆಯೂ ಮುಗಿದಿದ್ದು, ಮತ್ತೆ ಯಾವ ವಿವರವೂ ಬೇಕಿಲ್ಲವೆಂದು ಅಭಿಪ್ರಾಯಪಟ್ಟರು. ಅಂತಿಮವಾಗಿ 2-1ರ ಬಹುಮತದ ಆಧಾರದಲ್ಲಿ ಸೋನಿಯಾ ಸದಸ್ಯತ್ವ ರದ್ಧತಿ ಆಗ್ರಹ ತಿರಸ್ಕೃತಗೊಂಡಿತು. ಸೋನಿಯಾ 2006ರ ನವೆಂಬರಿನಲ್ಲಿ ಬೆಲ್ಜಿಯಂಗೆ ಭೇಟಿ ನೀಡಿದ್ದಾಗ ಅಲ್ಲಿನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ಲಿಯೋಪೋಲ್ಡ್'ನ್ನು ಸ್ವೀಕರಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇರಳದ ವಕೀಲರೊಬ್ಬರು, ಆ ಆಧಾರದ ಮೇಲೆ ಸೋನಿಯಾ ಸದಸ್ಯತ್ವ ರದ್ದು ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

2009: ನ್ಯೂಯಾರ್ಕಿನ ವ್ಯಾಪಾರಿಯೊಬ್ಬ ತನ್ನ ಹೆಸರಿನಲ್ಲಿ 100 ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿದ ಖ್ಯಾತಿಗೆ ಭಾಜನರಾದರು. ಅಶ್ರಿತ ಫೋರ್ಮನ್ (54) ತನ್ನ ಹೆಸರಿನಲ್ಲಿ 100 ದಾಖಲೆಗಳನ್ನು ಹೊಂದಿರುವ ಮೊದಲ ವ್ಯಕ್ತಿ ಎಂದು ಗಿನ್ನೆಸ್ ವಿಶ್ವ ದಾಖಲೆ ದೃಢಪಡಿಸಿತು. 30 ವರ್ಷಗಳ ಹಿಂದೆ, 27,000 ನೆಗೆತಗಳನ್ನು ಕೇವಲ 5 ಗಂಟೆಗಳಲ್ಲಿ ಪೂರ್ಣಗೊಳಿಸುವ ಮೂಲಕ ಇವರು ದಾಖಲೆ ನಿರ್ಮಿಸಿ, ಮೊದಲ ಬಾರಿಗೆ ಹೆಸರು ದಾಖಲಿಸಿದ್ದರು. ಕ್ವೀನ್ಸ್‌ನಲ್ಲಿ ಆಹಾರ ಮಳಿಗೆ ಇಟ್ಟುಕೊಂಡ ಇವರು 'ನಾನು ಸುಮಾರು 230 ದಾಖಲೆಗಳನ್ನು ಸಾಧಿಸಿದ್ದೇನೆ. ಆದರೆ ಅವುಗಳೆಲ್ಲ ದಾಖಲಾಗಲಿಲ್ಲ. ಈಗ ಅಧಿಕೃತವಾಗಿ ನನ್ನ ಹೆಸರಿನಲ್ಲಿ 100 ದಾಖಲೆ ಹೊಂದಿದ್ದೇನೆ' ಎಂದರು. ಜುಲು ಮತ್ತು ರಿಯಿಟೊ ರೊಮೆನಿಕ್ ಭಾಷೆ ಸೇರಿದಂತೆ ಪದ್ಯವೊಂದನ್ನು110 ಭಾಷೆಗಳಲ್ಲಿ ಓದುವ ಮೂಲಕ ಇವರು 100 ನೇ ದಾಖಲೆ ಮಾಡಿದರು.

2008: ಒಂದೆಡೆ ಕಡಲ ದಂಡೆಯಲ್ಲಿ ಹೆಚ್ಚುತ್ತಿರುವ ಕಸದ ರಾಶಿ ಆತಂಕ ಮೂಡಿಸಿದ್ದರೆ, ಇನ್ನೊಂದಡೆ ತ್ಯಾಜ್ಯ ಸರಕುಗಳ ಮರು ಬಳಕೆಯೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸುದ್ದಿ ಪ್ರಕಟಗೊಂಡಿತು. ತ್ಯಾಜ್ಯ ಸರಕಿನ ಮರು ಬಳಕೆಯು ಪರಿಸರಕ್ಕೆ ಒಳಿತನ್ನು ಮಾಡುವುದಕ್ಕಿಂತ ಹಾನಿ ಮಾಡುವುದೇ ಹೆಚ್ಚು ಎಂದು ಪರಿಣತರು ಅಭಿಪ್ರಾಯಪಟ್ಟರು. ವಿದ್ಯುನ್ಮಾನ ಸಲಕರಣೆಗಳಾದ ಮೊಬೈಲ್, ಟಿವಿ, ಕಂಪ್ಯೂಟರ್ ಮತ್ತಿತರ ಬಳಸಿ ಬಿಟ್ಟ ಸಲಕರಣೆಗಳ ಮರು ಬಳಕೆಯು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಮೆಲ್ಬೋರ್ನಿನ ಪರಿಸರ ತಜ್ಞ ಟಿಮ್ ಗ್ರ್ಯಾಂಟ್ ಹೇಳಿದರು. ಪ್ಲ್ಯಾಸ್ಟಿಕ್ ಮತ್ತು ಗಾಜಿನ ಬಾಟಲಿಯಂತಹ ತ್ಯಾಜ್ಯವನ್ನು ಮರು ಬಳಕೆ ಮಾಡುವುದು, ಅವುಗಳನ್ನು ಬಳಸದೆ ಬೀಸಾಕುವುದಕ್ಕಿಂತ ಮತ್ತು ಸುಡುವುದಕ್ಕಿಂತ ಕಡಿಮೆ ಅಪಾಯಕಾರಿ ಎನ್ನುವುದನ್ನು ಬಹುತೇಕ ಪರಿಣತರು ಒಪ್ಪಿಕೊಳ್ಳುತ್ತಾರೆ. ಆದರೆ ಘನ ತ್ಯಾಜ್ಯದ ಮರು ಬಳಕೆ ತಂತ್ರಜ್ಞಾನವೂ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂಬುದು ತಜ್ಞರ ಅಭಿಮತ.

2008: ಹನ್ನೊಂದು ದಿನಗಳ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನೆಗೆದಿದ್ದ ರಷ್ಯದ ಗಗನನೌಕೆ `ಸೂಯುಜ್' ಕಜಕಿಸ್ಥಾನದ ನಿಗದಿತ ಸ್ಥಳದ ಬದಲಿಗೆ 420 ಕಿ.ಮೀ. ಉತ್ತರದ ಪ್ರದೇಶವೊಂದರಲ್ಲಿ ಸುರಕ್ಷಿತವಾಗಿ ಬಂದು ಇಳಿಯಿತು. `ಸೂಯುಜ್ ಟಿಎಂಎ-11' ಗಗನನೌಕೆ ಅತ್ಯಂತ ಚಿಕ್ಕ ಆಕಾರದ ನೌಕೆಯಾಗಿದ್ದು, ಯಾವುದೇ ಸ್ಥಳದಲ್ಲೂ ಬಂದು ಇಳಿಯಬಹುದು. ನಿಗದಿತ ಸ್ಥಳದ ಬದಲು ಬೇರೆ ಕಡೆ ಇಳಿದರೆ ಅದನ್ನು ಪತ್ತೆಹಚ್ಚುವುದು ಕಷ್ಟ ಎಂಬ ಭಯ ಮೊದಲು ಕಾಡಿತ್ತು. ಆದರೆ ನೌಕೆಯನ್ನು ಪತ್ತೆಹಚ್ಚುವುದು ಕಷ್ಟವಾಗಲಿಲ್ಲ. ಗಗನನೌಕೆಯಲ್ಲಿದ್ದ ದಕ್ಷಿಣ ಕೊರಿಯಾದ ಪ್ರಥಮ ಮಹಿಳಾ ಗಗನಯಾತ್ರಿ ಯಿ ಸೊಯೀನ್, ರಷ್ಯದ ಯೂರಿ ಮಲೆಂಚೆಂಕೊ, ಅಮೆರಿಕದ ಪೆಗ್ಗಿ ವೈಟ್ಸನ್ ಅವರು ಸುರಕ್ಷಿತವಾಗಿದ್ದಾರೆ ಎಂದು ರಷ್ಯದ ಬಾಹ್ಯಾಕಾಶ ಇಲಾಖೆಯ ಅಧಿಕಾರಿಗಳು ತಿಳಿಸಿದರು. ವೈಟ್ಸನ್ ಅವರು ಒಟ್ಟು 377 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದರು. ಈ ಮೂಲಕ ಅಲ್ಲಿ ಅತ್ಯಂತ ದೀರ್ಘ ಅವಧಿಯ ತನಕ ಇದ್ದ ಅಮೆರಿಕದ ಗಗನಯಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೆ ಮೂರು ಗಂಟೆ ಮೊದಲು ಬಾಹ್ಯಾಕಾಶ ನಿಲ್ದಾಣದಿಂದ ಗಗನ ಯಾನಿಗಳು ಬೀಳ್ಕೊಡುವ ದೃಶ್ಯವನ್ನು ಸೂಯುಜಿನ ಕ್ಯಾಮರಾ ಸೆರೆಹಿಡಿದು ಭೂಮಿಗೆ ರವಾನಿಸಿತ್ತು.

2008: ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಲಿಂಪಿಕ್ ಜಿಮ್ನಾಸ್ಟ್ ಅಲಿನಾ ಕಬಯೇವಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ಗಾಳಿಸುದ್ದಿ ಪ್ರಕಟಿಸಿದ `ಮಾಸ್ಕೊವಿಸ್ಕಿ ಕರೆಸ್ಪಾಂಡೆಂಟ್' ಟ್ಯಾಬ್ಲಾಯ್ಡಿನ ಪ್ರಕಾಶಕರು ಪತ್ರಿಕೆಯ ಮುದ್ರಣವನ್ನು ಸ್ಥಗಿತಗೊಳಿಸಿದರು. ಸಂಪಾದಕ ಗ್ರಿಗೊರಿ ನೆಖೊರೊಶೆವ್ ಅವರು ರಾಜೀನಾಮೆ ನೀಡಿದರು. ಗಾಳಿ ಸುದ್ದಿ ಪ್ರಕಟಿಸಿದ್ದಕ್ಕೆ ಪತ್ರಿಕೆಯು ಹಿಂದಿನ ದಿನ ಕ್ಷಮೆ ಯಾಚಿಸಿತ್ತು.

2008: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ (ಒ ಎನ್ ಜಿ ಸಿ)ದ ಮುಂಬೈ ಹೈ ಘಟಕದ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ರೂ 6,339 ಕೋಟಿ ವೆಚ್ಚದಲ್ಲಿ ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ಐದು ವರ್ಷದಲ್ಲಿ ಕಾಮಗಾರಿ ಪೂರ್ಣವಾದರೆ ಪ್ರತಿದಿನಕ್ಕೆ 1,80,000 ಕಚ್ಚಾತೈಲ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಅದು ಹೊಂದಲಿದೆ. ಪ್ರಸ್ತುತ 1,50,000 ಬ್ಯಾರೆಲ್ ಉತ್ಪಾದನಾ ಸಾಮರ್ಥ್ಯವನ್ನು ಮುಂಬೈ ಹೈ ಘಟಕ ಹೊಂದಿದೆ.

2008: ಧರ್ಮಸ್ಥಳದಲ್ಲಿ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ 1,02,700 ಚದರ ಅಡಿ ವಿಸ್ತೀರ್ಣದ `ಶ್ರೀಮುಡಿ' ಎಂಬ ಹರಕೆ ಮುಡಿ (ತಲೆಕೂದಲು) ಅರ್ಪಿಸುವ ನೂತನ ಕಟ್ಟಡಕ್ಕೆ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಶಿಲಾನ್ಯಾಸ ನೆರವೇರಿಸಿದರು. ಭಕ್ತಾದಿಗಳ ಅನುಕೂಲತೆಗಾಗಿ, ನೂತನ ಕಟ್ಟಡದಲ್ಲಿ 6000 ಮಂದಿಗೆ ಸರದಿಯಲ್ಲಿ ನಿಲ್ಲುವ ಅವಕಾಶವಿದ್ದು, 150 ಕ್ಷೌರಿಕರು 600 ಮಂದಿಯ ಮುಡಿಯನ್ನು ಏಕಕಾಲದಲ್ಲಿ ತೆಗೆಯಲು ಸೌಲಭ್ಯ ಕಲ್ಪಿಸಲಾಗಿದೆ. ವ್ಯವಸ್ಥಿತವಾಗಿ ಮುಡಿ ಅರ್ಪಿಸಲು ನಿರ್ಮಿಸಲಾಗುವ ಕಟ್ಟಡದಲ್ಲಿ ಭಕ್ತಾದಿಗಳು ಸರದಿಯಲ್ಲಿ ನಿಲ್ಲುವ ವ್ಯವಸ್ಥೆ, ವಾಹನ ನಿಲುಗಡೆ, ಉಪಾಹಾರ ಗೃಹ, ಶೌಚಾಲಯ, ವಿಶ್ರಾಂತಿ ಕೋಣೆ ಮೊದಲಾದ ಸವಲತ್ತುಗಳನ್ನು ಒದಗಿಸಲಾಗಿದೆ. ಮುಂದಿನ 25 ವರ್ಷಗಳ ಬೆಳವಣಿಗೆ ಮತ್ತು ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಕಟ್ಟಡದ ವಿನ್ಯಾಸ ರೂಪಿಸಲಾಗಿದೆ ಎಂದು ಡಾ. ಹೆಗ್ಗಡೆ ತಿಳಿಸಿದರು.

2008: ಸಿಪಿಎಂ ಕಾರ್ಯಕರ್ತರು ಎಂದು ಆರೋಪಿಸಲಾದ ಕೆಲವು ದುಷ್ಕರ್ಮಿಗಳು ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹಿನ್ನೆಲೆಯಲ್ಲಿ ನಂದಿಗ್ರಾಮದ ಗೋಕುಲ್ ನಗರದಲ್ಲಿ ಉದ್ರಿಕ್ತ ವಾತಾವರಣ ಉಂಟಾಯಿತು. ಇನ್ನೊಬ್ಬ ಮಹಿಳೆಯ ಮೇಲೆ ಕೂಡ ಇದೇ ರೀತಿ ಅತ್ಯಾಚಾರ ನಡೆದಿದೆ ಎಂದು ಬಿಯುಪಿಸಿ ಸಂಘಟನೆಯು ಆರೋಪಿಸಿತು.

2008: ಇತ್ತೀಚೆಗಷ್ಟೆ ಸ್ವಯಂ ನಿವೃತ್ತಿ ಪಡೆದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಡಾ. ಸುಭಾಶ್ ಭರಣಿ ಬೆಂಗಳೂರಿನಲ್ಲಿ ಬಿಜೆಪಿ ಸೇರಿದರು.

2008: ಎರಡು ಸಾವಿರ ಕಿ.ಮೀ. ದೂರ ಕ್ರಮಿಸಬಲ್ಲ ಹಾಗೂ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಶಹೀನ್-2 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಪಾಕಿಸ್ಥಾನದಲ್ಲಿ ನಡೆಯಿತು. ಪಾಕಿಸ್ಥಾನದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಪ್ರಥಮ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಇದಾಗಿದ್ದು, ಪ್ರಧಾನಿ ಯೂಸುಫ್ ರಝಾ ಜಿಲಾನಿ, ರಕ್ಷಣಾ ಸಚಿವ ಚೌಧುರಿ ಅಹ್ಮದ್ ಮುಕ್ತಾರ್ ಸಹಿತ ಇತರರು ಪರೀಕ್ಷೆಯನ್ನು ವೀಕ್ಷಿಸಿದರು.

2008: ದಕ್ಷಿಣ ಅಮೆರಿಕದ ಉಡಾವಣಾ ಕೇಂದ್ರವೊಂದರಿಂದ ತನ್ನ ಪ್ರಥಮ ಉಪಗ್ರಹ ಉಡಾವಣೆ ಮಾಡುವ ಮೂಲಕ ವಿಯೆಟ್ನಾಂ ವಿಶ್ವದಲ್ಲಿ ಉಪಗ್ರಹ ಸಂಪರ್ಕ ಹೊಂದಿದ ದೇಶಗಳ ಪಟ್ಟಿಗೆ ಸೇರ್ಪಡೆಯಾಯಿತು.

2007: ನಿವೃತ್ತ ಎಂಜಿನಿಯರ್, ತುಂಗಾ ಮೇಲ್ದಂಡೆ ಹೋರಾಟ ಸಮಿತಿಯ ಸಂಚಾಲಕ ಎಫ್. ಕೆ. ಬಿದರಿ (69) ನಿಧನರಾದರು. ಕರ್ನಾಟಕ ಭೂ ಸೇನಾ ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಅವರು ರಾಣೆಬೆನ್ನೂರು ಭಾಗದಲ್ಲಿ ರೈತ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

2007: ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟಿನಲ್ಲಿ ವಿಶೇಷ ಮೇಲ್ಮನವಿ ಮತ್ತು ಮೂಲ ದಾವೆ ಹೂಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿತು. ಈ ಮೇಲ್ಮನವಿಗಳ ಕರಡು ಪ್ರತಿಗಳಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತು.

2007: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಾಣ ಬೆದರಿಕೆ ಒಡ್ಡಿದ ಆರೋಪ ಹೊತ್ತ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕರ್ನಾಟಕ ಹೈಕೋರ್ಟ್ ಆರೋಪ ಮುಕ್ತಗೊಳಿಸಿತು. ಇವರಿಬ್ಬರ ವಿರುದ್ಧ ಸುಳ್ಳು ಆರೋಪ ಹೊರಿಸಿರುವ ಬಗ್ಗೆ ಹೈಕೋರ್ಟಿನ ರಿಜಿಸ್ಟ್ರಾರ್ (ತನಿಖಾದಳ) ನೀಡಿದ ವರದಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಆರ್. ಗುರುರಾಜನ್ ನೇತೃತ್ವದ ವಿಭಾಗೀಯ ಪೀಠವು ವಿವಾದ ಕುರಿತ ಪ್ರಕರಣವನ್ನು ಇತ್ಯರ್ಥ ಮಾಡಿತು.

2006: ಆಸ್ಟ್ರೇಲಿಯಾದ ಜೆಸನ್ ಗ್ಲಿಲೆಸ್ಪಿ ಅವರು ಬಾಂಗ್ಲಾದೇಶದ ವಿರುದ್ಧ ಚಿತ್ತಗಾಂಗಿನಲ್ಲಿ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನೈಟ್ ವಾಚ್ ಮನ್ ಆಗಿ ಅತಿ ಹೆಚ್ಚು ರನ್ ಅಂದರೆ ಅಜೇಯ 201 ರನ್ ಗಳಿಸಿ ತಮ್ಮದೇ ದೇಶದ ಟೋನಿಮನ್ ದಾಖಲೆಯನ್ನು ಮುರಿದು ಹಾಕಿದರು. ಟೋನಿಮನ್ ಅವರು 1977ರಲ್ಲಿ ಭಾರತದ ವಿರುದ್ಧ 105 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು.

2006: ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಭೂತನಾಥ ದೇವಾಲಯ ಸಂಕೀರ್ಣದಲ್ಲಿ ಖ್ಯಾತ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ ಬಚ್ಚನ್ ಅವರ ವಿವಾಹ ಅದ್ಧೂರಿಯಾಗಿ ನಡೆಯಿತು. ಆದರೆ ಇದು ನಿಜ ಮದುವೆಯಲ್ಲ. ಮಣಿರತ್ನಂ ಅವರ ಮಹತ್ವಾಕಾಂಕ್ಷೆಯ ಗುರು ಚಿತ್ರಕ್ಕಾಗಿ ನಡೆದ ಚಿತ್ರೀಕರಣದ ಮದುವೆ ಇದು. ಬಾದಾಮಿಯ ಪುರೋಹಿತರು, ನಾಗರಿಕರು ಸೇರಿದಂತೆ 200ಕ್ಕೂ ಹೆಚ್ಚು ಜನ ಈ `ಮದುವೆ'ಯಲ್ಲಿ ಪಾಲ್ಗೊಂಡ್ದಿದರು.

2006: ಒಂದು ಕಾಲದಲ್ಲಿ ಪ್ರಜಾಪ್ರಭುತ್ವ ಪರ ಹೋರಾಟದಲ್ಲಿ ಸೆರೆಮನೆವಾಸ ಅನುಭವಿಸಿದ್ದ ಮಾಜಿ ಸಾಮಾಜಿಕ ಕಾರ್ಯಕರ್ತೆ ಹ್ಯಾನ್ ಮೈಯಾಂಗ್- ಸೂಕ್ ಅವರನ್ನು ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ದಕ್ಷಿಣ ಕೊರಿಯಾ ಸಂಸತ್ ಒಪ್ಪಿಕೊಂಡಿತು.

2006: ಭಾರತದ ಕೃಷಿ ವಲಯವನ್ನು ಆಹಾರ ಸ್ವಾವಲಂಬನೆಯಿಂದ ಹೆಚ್ಚು ಮಾರುಕಟ್ಟೆ ಆಧಾರಿತ ವ್ಯವಸ್ಥೆಗೆ ಪರಿವರ್ತಿಸಲು ಅನುವಾಗುವಂತೆ ವಿಶ್ವಬ್ಯಾಂಕ್ ಭಾರತದ ರಾಷ್ಟ್ರೀಯ ಕೃಷಿ ಪುನಶ್ಚೇತನ ಯೋಜನೆಗೆ ಒಟ್ಟು 200 ಕೋಟಿ ಅಮೆರಿಕನ್ ಡಾಲರ್ ಸಾಲ ನೀಡಲು ಒಪ್ಪಿಕೊಂಡಿತು.

2006: ಸಾಮಾಜಿಕ, ಶೈಕ್ಷಣಿಕ ಯೋಜನೆಗಳಿಗಾಗಿ ಹಾಗೂ ದತ್ತಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ವೆಸ್ಟ್ ಮಿನ್ ಸ್ಟರ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಸಾಗರೋತ್ತರ ಬ್ರಿಟಿಷ್ ವ್ಯವಹಾರಗಳ ರಾಯಭಾರಿ ಭಾರತೀಯ ಮೂಲದ ಲಾರ್ಡ್ ಸ್ವರಾಜ್ ಪಾಲ್ ಅವರಿಗೆ 2006ನೇ ಸಾಲಿನ ಬ್ರಿಟನ್ನಿನ ಈಸ್ಟರ್ನ್ ಐ ಕಮ್ಯೂನಿಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈಸ್ಟರ್ನ್ ಐ ಎಂಬುದು ಬ್ರಿಟನ್ನಿನಲ್ಲಿ ಅತ್ಯಧಿಕ ಮಾರಾಟವಾಗುವ ಏಷ್ಯಾದ ವೃತ್ತಪತ್ರಿಕೆಯಾಗಿದ್ದು, ಪತ್ರಿಕಾ ಸಂಸ್ಥೆಯು ಈ ಪ್ರಶಸ್ತಿ ನೀಡುತ್ತದೆ.

2005: ವ್ಯಾಟಿಕನ್ ಸಿಟಿಯ ರೋಮನ್ ಕ್ಯಾಥೊಲಿಕ್ ಚರ್ಚಿನ 265ನೇ ಪೋಪ್ ಆಗಿ ಜರ್ಮನಿಯ ರಜಿಂಗರ್ ಆಯ್ಕೆಯಾಗಿದ್ದು, ಕುತೂಹಲ ಕೆರಳಿಸಿದ್ದ ಹೊಸ ಪೋಪ್ ಆಯ್ಕೆ ಪ್ರಕ್ರಿಯೆಗೆ ಅಂತಿಮ ತೆರೆ ಬಿತ್ತು. 78 ವರ್ಷದ ರಜಿಂಗರ್ ಅವರು ಈದಿನದಿಂದ `ಪೋಪ್ 16ನೇ ಬೆನೆಡಿಕ್ಟ್' ಆದರು. ಈ ಶತಮಾನದಲ್ಲಿ ಪೋಪ್ ಸ್ಥಾನಕ್ಕೆ ಆಯ್ಕೆಯಾದವರಲ್ಲಿ ರಜಿಂಗರ್ ಅತ್ಯಂತ ಹಿರಿಯ ವ್ಯಕ್ತಿ ಮತ್ತು ಎರಡನೇ ಪೋಪ್ ಜಾನ್ ಪಾಲ್ ಅವರ ನಿಕಟವರ್ತಿ.

1995: ರಸಗೊಬ್ಬರ ಮತ್ತು ತೈಲ ತುಂಬಿದ್ದ ಟ್ರಕ್ ಬಾಂಬ್ ಒಕ್ಲಹಾಮಾ ನಗರದ ಅಲ್ ಫ್ರೆಡ್ ಪಿ. ಮುರ್ರಾ ಫೆಡರಲ್ ಕಟ್ಟಡದ ಸಮೀಪ ಸ್ಫೋಟಗೊಂಡಿತು. ಈ ಘಟನೆಯಲ್ಲಿ 168 ಜನ ಮೃತರಾಗಿ 500 ಮಂದಿ ಗಾಯಗೊಂಡರು. ಅಮೆರಿಕದಲ್ಲಿ 2001ರ ಸೆಪ್ಟೆಂಬರ್ 11 ರ ಘಟನೆಗೆ ಮುಂಚಿನ ಅತಿ ಭೀಕರ ಭಯೋತ್ಪಾದಕ ದಾಳಿ ಇದು. ಪರ್ಷಿಯನ್ ಕೊಲ್ಲಿ ಯುದ್ಧದ ನಾಯಕ ಟಿಮೋಥಿ ಮೆಕ್ ವೀಗ್ ಮತ್ತು ಟೆರ್ರಿ ನಿಕೋಲಸ್ ಈ ದಾಳಿಯನ್ನು ರೂಪಿಸಿದ್ದರು..

1951: ಲಂಡನ್ನಿನ ಸ್ಟ್ರ್ಯಾಂಡ್ನ ಲೈಸಿಯಂ ಬಾಲ್ ರೂಮಿನಲ್ಲಿ ಮೊತ್ತ ಮೊದಲ `ಮಿಸ್ ವರ್ಲ್ಡ್ಡ್' ಸ್ಪರ್ಧೆ ನಡೆಯಿತು. ಮಿಸ್ ಸ್ವೀಡನ್ ಕಿಕಿ ಹಾಕೋನ್ಸನ್ ಸ್ಪರ್ಧೆಯಲ್ಲಿ ವಿಜೇತರಾದರು.

1950: ಶ್ಯಾಮ ಪ್ರಸಾದ್ ಮುಖರ್ಜಿ ಅವರು ಭಾರತದ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

1939: ಕಲಾವಿದ ಐರೋಡಿ ವೈಕುಂಠ ಹೆಬ್ಬಾರ್ ಜನನ.

1913: ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಜಿ. ಚನ್ನಮ್ಮ (19-4-1913ರಿಂದ 20-1-1986) ಅವರು ಸ್ವಾತಂತ್ರ್ಯ ಹೋರಾಟಗಾರ ಗೌಡಗೆರೆ ಮಡಿವಾಳಯ್ಯ ಗುರು ಬಸವಯ್ಯ- ವೀಣಾ ವಾದಕಿ ರಾಜಮ್ಮ ದಂಪತಿಯ ಮಗಳಾಗಿ ತುಮಕೂರಿನಲ್ಲಿ ಜನಿಸಿದರು.

1845: ಭಾರತದಲ್ಲಿ ರೈಲ್ವೇ ಆರಂಭಿಸುವ ಬಗ್ಗೆ ಚರ್ಚಿಸುತ್ತಿದ್ದ ಮುಂಬೈಯ ಪ್ರಮುಖ ಗಣ್ಯರು ಇಂಡಿಯನ್ ರೈಲ್ವೇ ಅಸೋಸಿಯೇಷನ್ ಹುಟ್ಟು ಹಾಕಿದರು. ಭಾರತದಲ್ಲಿ ರೈಲ್ವೇ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡಲು ಆಗಮಿಸಿದ ಇಂಗ್ಲೆಂಡಿನ ಎಂಜಿನಿಯರ್ ಜಿ.ಟಿ. ಕ್ಲಾರ್ಕ್ ನೀಡಿದ ಮುಂಬೈ- ಠಾಣೆ ರೈಲುಮಾರ್ಗ ಪ್ರಸ್ತಾವಕ್ಕೆ ಈ ಗಣ್ಯರು ಅನುಮೋದನೆ ನೀಡಿದರು.

No comments:

Post a Comment