ನಾನು ಮೆಚ್ಚಿದ ವಾಟ್ಸಪ್

Thursday, April 26, 2018

ಇಂದಿನ ಇತಿಹಾಸ History Today ಏಪ್ರಿಲ್ 25

ಇಂದಿನ ಇತಿಹಾಸ History Today ಏಪ್ರಿಲ್ 25
2018: ನವದೆಹಲಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ೨೦೧೩ರಲ್ಲಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ೭೭ರ ಹರೆಯದ ಅಸಾರಾಂ ಬಾಪು ತಪ್ಪಿತಸ್ಥ ಎಂದು ತೀರ್ಪು ನೀಡಿದ ಜೋಧಪುರದ ವಿಶೇಷ ನ್ಯಾಯಾಲಯವು ಈ ಅಪರಾಧಕ್ಕಾಗಿ ಅವರಿಗೆ ಜೀವಾವಧಿ ಸಜೆ ವಿಧಿಸಿತು.  ಅಸಾರಾಂ ಬಾಪು ಸಾಯುವವರೆಗೂ ಸೆರೆವಾಸ ಅನುಭವಿಸಬೇಕು ಎಂದು ಕೋರ್ಟ್ ಹೇಳಿತು.  ಪ್ರಕರಣದಲ್ಲಿನ ಇನ್ನಿಬ್ಬರು ಸಹ ಆರೋಪಿಗಳಾದ ಶಿವ ಮತ್ತು ಶಿಲ್ಪಿಗೆ ತಲಾ ೨೦ ವರ್ಷಗಳ ಸೆರೆವಾಸವನ್ನು ವಿಧಿಸಲಾಗಿದ್ದು, ಶರದ್ ಮತ್ತು ಪ್ರಕಾಶ್ ಎಂಬಿಬ್ಬರನ್ನು ಖುಲಾಸೆ ಮಾಡಲಾಯಿತು.  ಜೋಧಪುರ ಕೇಂದ್ರೀಯ ಸೆರೆಮನೆಯಲ್ಲೇ ತೀರ್ಪು ಹಾಗೂ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಿತು.
ಅಸಾರಾಂ ಬೆಂಬಲಿಗರು ಹಿಂಸಾಚಾರಕ್ಕಿಳಿಯಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶರು ಸ್ವತಃ ಸೆರೆಮನೆ ಆವರಣಕ್ಕೆ ಆಗಮಿಸಿ ಅಲ್ಲಿಯೇ ತೀರ್ಪು ಮತ್ತು ಶಿಕೆಯನ್ನು ಪ್ರಕಟಿಸಿದರು.  ‘ನಾವು ನಮ್ಮ ಕಾನೂನು ತಜ್ಞರ ತಂಡದ ಜತೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ. ನಮಗೆ ನ್ಯಾಯಾಂಗದ ಮೇಲೆ ಭರವಸೆಯಿದೆ ಎಂದು ಅಸಾರಾಂ ವಕ್ತಾರ ನೀಲಂ ದುಬೆ ಸುದ್ದಿಸಂಸ್ಥೆಗೆ ತಿಳಿಸಿದರು.  ಆಗಸ್ಟ್ ತಿಂಗಳಲ್ಲಿ ಡೇರಾ ಸಚ್ಚಾ ಸೌದಾ ನಾಯಕ ಬಾಬಾ ಗುರ್ಮೀತ್ ರಾಂ ರಹೀಂ ಸಿಂಗ್ ವಿರುದ್ಧ ತೀರ್ಪು ಪ್ರಕಟವಾದಾಗ ಅವರ ಬೆಂಬಲಿಗರು ಹಿಂಸಾಚಾರ ನಡೆಸಿದಂತೆ ಬಾಪು ಬೆಂಬಲಿಗರೂ ಹಿಂಸಾತ್ಮಕ ಪ್ರತಿಕ್ರಿಯೆ ವ್ಯಕ್ತ ಪಡಿಸಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ರಾಜಸ್ಥಾನ, ಗುಜರಾತ್ ಹಾಗೂ ಹರ್ಯಾಣ ಈ ಮೂರು ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜೋಧಪುರದಲ್ಲಿ ಪರಿಸ್ಥಿತಿ ಸಂಪೂರ್ಣ ಶಾಂತವಾಗಿತ್ತು. ಹಲವಾರು ಬೆಂಬಲಿಗರನ್ನು ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣದಿಂದಲೇ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದವು. ನ್ಯಾಯ ಸಿಕ್ಕಿತು: ’ಅಸಾರಾಂ ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ನಮಗೆ ನ್ಯಾಯ ದೊರೆತಿದೆ. ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆಗಳು. ಅಪರಾಧಿಗಳಿಗೆ ಕಠಿಣ ಶಿಕ್ಷೆ ದೊರೆಯಬಹುದೆಂಬ ನಿರೀಕ್ಷೆಯಿದೆ ಎಂದು ಅತ್ಯಾಚಾರ ಸಂತ್ರಸ್ತೆಯ ತಂದೆ  ಅಸಾರಾಂ ತಪ್ಪಿತಸ್ಥ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆಯೇ ಪ್ರತಿಕ್ರಿಯಿಸಿದರು.  ರಾಜಸ್ಥಾನದ ಜೋಧಪುರ ಸಮೀಪದ ಮನಾಯ್ ಗ್ರಾಮದಲ್ಲಿ ೧೬ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ೨೦೧೩ರ ಆಗಸ್ಟ್ ೩೧ರಿಂದ ಅಸಾರಾಂ ಸೆರೆವಾಸ ಅನುಭವಿಸುತ್ತಿದ್ದಾರೆ. ಉತ್ತರ ಪ್ರದೇಶ ಮೂಲದ ಬಾಲಕಿ ಅಸಾರಾಂ ಆಶ್ರಮದಲ್ಲಿ ವಿದ್ಯಾರ್ಥಿನಿಯಾಗಿದ್ದಳು. ೨೦೧೩ರ ಆಗಸ್ಟ್ ೧೫ರಂದು ರಾತ್ರಿ ಆಸಾರಾಂ ಬಾಪು ತಮ್ಮ ಆಶ್ರಮಕ್ಕೆ ತನ್ನನ್ನು ಕರೆಸಿಕೊಂಡು ಅತ್ಯಾಚಾರ ನಡೆಸಿದರು ಎಂದು ಬಾಲಕಿ ಆರೋಪಿಸಿದ್ದಳು.   ಪ್ರಸ್ತುತ ೭೭ ವರ್ಷ ವಯಸ್ಸಿನ ಅಸಾರಾಂ ವಿರುದ್ಧ ಪೋಕ್ಸೋ, ದಲಿತ ದೌರ್ಜನ್ಯ ತಡೆ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನುಗಳ ಅಡಿಯಲ್ಲಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ವಿಚಾರಣೆ ಕಾಲದಲ್ಲಿ ಅಸಾರಾಂ ಬಾಪು ೧೨ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಪ್ರತಿಬಾರಿಯೂ ವಿಫಲರಾಗಿದ್ದರು. ಅವುಗಳ ಪೈಕಿ ಆರು ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.  ಮೂರು ಜಾಮೀನು ಅರ್ಜಿಗಳನ್ನು  ರಾಜಸ್ಥಾನ ಹೈಕೋರ್ಟ್ ಹಾಗೂ ಉಳಿದ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದವು.  ಅಸಾರಾಂ ಬಾಪು ವಿರುದ್ಧ ಗುಜರಾತಿನಲ್ಲೂ ಒಂದು ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಇಬ್ಬರು ಸೋದರಿಯರು ಬಾಪು ಮತ್ತು ಅವರ ಪುತ್ರ ನಾರಾಯಣ್ ಸಾಯಿ ವಿರುದ್ಧ ತಮ್ಮನು ಕೂಡಿ ಹಾಕಿ ಅತ್ಯಾಚಾರ ನಡೆಸಿದ ಬಗ್ಗೆ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು.  ಪೋಸ್ಕೋ ಕಾಯ್ದೆಯ ಸೆಕ್ಷನ್ ೬ ರ ಅಡಿಯಲ್ಲಿ ಅಸಾರಾಂ ಬಾಪುಗೆ ಜೀವಾವಧಿ ಸಜೆಯನ್ನು ವಿಧಿಸಲಾಗಿದ್ದು, ಈ ಕಾರಣದಿಂದ ಬಾಪು ತಮ್ಮ ಉಳಿದ ಜೀವನವನ್ನು ಪೂರ್ತಿಯಾಗಿ ಕಂಬಿಗಳ ಹಿಂದೆಯೇ ಕಳೆಯಬೇಕಾಗುತ್ತದೆ. ಪೋಸ್ಕೋ ಕಾಯ್ದೆಯ ಸೆಕ್ಷನ್ ೩೭೦, ೩೭೬, ೧೨೦ ಬಿ, ೩೪೨ ಮತ್ತು ೩೫೪ರ ಅಡಿಯಲ್ಲೂ ಅಸಾರಾಂ ಅವರನ್ನು ಶಿಕ್ಷಿಸಲಾಗಿದೆ. ಈ ಸೆಕ್ಷನ್ ಗಳು ಲೈಂಗಿಕ ಹಲ್ಲೆ, ಮಹಿಳೆಯ ಮಾನಹಾನಿ, ಅಕ್ರಮ ಬಂಧನ ಮತ್ತು ಕ್ರಿಮಿನಲ್ ಸಂಚಿಗೆ ಸಂಬಂಧಿಸಿವೆ. ’ವ್ಯಕ್ತಿಯನ್ನು ಗುಲಾಮನಂತೆ ಬಳಸಿದ್ದಕ್ಕಾಗಿಯೂ ಅವರಿಗೆ ಶಿಕ್ಷೆ ವಿಧಿಸಲಾಯಿತು. ಪ್ರಕರಣದ ತನಿಖೆಯ ನೇತೃತ್ವ ವಹಿಸಿ ಅಸಾರಾಂ ಬಾಪುವನ್ನು ಬಂಧಿಸಿದ್ದ ಜೋಧಪುರದ ಮಾಜಿ ಡಿಜಿಪಿ ಅಜಯ್ ಪಾಲ್ ಲಂಬಾ ಅವರು ಫೇಸ್ ಬುಕ್ ನಲ್ಲಿ ’ಕಡೆಗೂ ಸತ್ಯ ಗೆದ್ದಿತು ಎಂದು ಬರೆದರು. ರಾಜಸ್ಥಾನ ಹೈಕೋರ್ಟಿನಲ್ಲಿ ನಾಳೆಯೇ (ಗುರುವಾರ) ಅಸಾರಾಂ ಪರ ಜಾಮೀನು ಕೋರಿಕೆ ಅರ್ಜಿ ಸಲ್ಲಿಸಲಾಗುವುದು ಎಂದು ಅಸಾರಾಂ ವಕೀಲರ ತಂಡ ಹೇಳಿತು. ಈ ಮುನ್ನ ವಿಚಾರಣಾಧೀನ ಕೈದಿಯಾಗಿದ್ದುದರಿಂದ ಜಾಮೀನು ಪಡೆಯುವುದು ಕಷ್ಟವಿತ್ತು. ಈಗ ನಮ್ಮ ಬಳಿ ಆದೇಶವಿದೆ. ನಾವು ಅಸಾರಾಂ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದೇವೆ ಎಂದು ವಕೀಲರ ತಂಡ ಹೇಳಿತು. ಸಿಪಿಐ (ಎಂ) ಸ್ವಾಗತ: ೨೦೧೩ರ ಅಪ್ರಾಪ್ತಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಮತ್ತು ಇತರ ಇಬ್ಬರನ್ನು ತಪ್ಪಿತಸ್ಥರು ಎಂಬುದಾಗಿ ಘೋಷಿಸಿದ ಕೋರ್ಟ್ ತೀರ್ಪನ್ನು ಸಿಪಿಐ (ಎಂ) ಸ್ವಾಗತಿಸಿತು. ತಥಾಕಥಿತ ದೇವಮಾನವ ತನ್ನ ಬೆಂಬಲಿಗರ ನಂಬಿಕೆಯನ್ನು ದುರುಪಯೋಗಿಸಿಕೊಂಡು ಅಪ್ರಾಪ್ತೆಯನ್ನು ಲೈಂಗಿಕವಾಗಿ ಶೋಷಿಸಿದ್ದಕ್ಕೆ ಪ್ರಬಲ ಶಿಕ್ಷೆಗೆ ಅರ್ಹರಾಗಿದ್ದಾರೆ. ಇದು ಸಂತ್ತಸ್ಥೆ ಮತ್ತು ಆಕೆಯ ಕುಟುಂಬದ ವಿರುದ್ಧ ಹಿಂಸೆ ಮತ್ತು ಬೆದರಿಕೆಯನ್ನು ಒಡ್ಡಲಾಗಿದ್ದ ಪ್ರಕರಣದಲ್ಲಿ ನ್ಯಾಯಕ್ಕೆ ಲಭಿಸಿದ ವಿಜಯವಾಗಿದೆ. ಪ್ರಕರಣದ ೯ ಸಾಕ್ಷಿಗಳ ಮೇಲೆ ದಾಳಿಗಳು ನಡೆದಿದ್ದು ಅವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಸಾಕ್ಷಿಗಳನ್ನು ಕೊಂದ ಪ್ರಕರಣಗಳು ಸೇರಿದಂತೆ ಸಂಬಂಧಪಟ್ಟ ಇತರ ಪ್ರಕರಣಗಳಲ್ಲೂ ತ್ವರಿತ ತೀರ್ಪಿನ ಖಾತರಿಯನ್ನು ನ್ಯಾಯಾಲಯಗಳು ನೀಡಬೇಕು ಎಂದು ಸಿಪಿಐ(ಎಂ) ಟ್ವೀಟ್ ಮಾಡಿತು.

2018: ನವದೆಹಲಿ: ಮಾಹಿತಿ ಉಲ್ಲಂಘನೆ ವಿಷಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿವರಗಳನ್ನು ಕೋರಿ ಕೇಂಬ್ರಿಜ್ ಅನಾಲಿಟಿಕಾ ಮತ್ತು ಫೇಸ್ ಬುಕ್ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಎರಡನೇ ಬಾರಿಗೆ ನೋಟಿಸ್ ಗಳನ್ನು ಕಳುಹಿಸಿದೆ ಎಂದು ಮೂಲಗಳು ಹೇಳಿದವು. ತನ್ನ ಮೊದಲ ನೋಟಿಸಿಗೆ ’ರಹಸ್ಯಾತ್ಮಕ ರೀತಿಯ ಪ್ರತಿಕ್ರಿಯೆ ನೀಡಿರುವ ಕೇಂಬ್ರಿಜ್ ಅನಾಲಿಟಿಕಾ ವಿರುದ್ಧ ಬಿಗಿ ನಿಲುವು ತಳೆದಿರುವ ಸರ್ಕಾರ, ಮಾಹಿತಿ ದುರುಪಯೋಗ ಸಾಧ್ಯತೆ ಬಗ್ಗೆ ಹೆಚ್ಚುವರಿ ಪ್ರಶ್ನೆಗಳೊಂದಿಗೆ ಬ್ರಿಟಿಷ್ ಡಾಟಾ ಅನಾಲಿಟಿಕ್ಸ್ ಮತ್ತು ಫೇಸ್ ಬುಕ್ ಸಂಸ್ಥೆಗಳಿಗೆ ಪುನಃ ನೋಟಿಸ್ ಕಳುಹಿಸಿತು. ಭಾರತೀಯರಿಗೆ ಸಂಬಂಧಪಟ್ಟ ಮಾಹಿತಿಯನ್ನು ಕಳವು ಮಾಡದಂತೆ ಅಥವಾ ಚುನಾವಣೆಯ ಮೇಲೆ ಪ್ರಭಾವ ಬೀರುವುದು ಸೇರಿದಂತೆ ಬಾಹ್ಯ ಉದ್ದೇಶಗಳಿಗೆ ಬಳಸದಂತೆ ಪ್ರಸ್ತಾಪಿಸಲಾಗಿರುವ ಭದ್ರತಾ ಕ್ರಮಗಳ ಪಟ್ಟಿಯನ್ನು ನೀಡುವಂತೆ ಕೇಂದ್ರವು ಫೇಸ್ ಬುಕ್ ಸಂಸ್ಥೆಯನ್ನು ಕೋರಿತು.  ತನ್ನ ಬಳಿ ಇರುವ ಮಾಹಿತಿಯನ್ನು ಅಕ್ರಮವಾಗಿ ಬಳಸುವುದರ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳೇನು ಎಂಬುದಾಗಿ ಫೇಸ್ ಬುಕ್ ನ್ನು ಪ್ರಶ್ನಿಸಿರುವ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಲು ಮೇ ೧೦ ರ ಗಡುವನ್ನು ನಿಗದಿಪಡಿಸಿತು. ಇದಕ್ಕೆ ಮುನ್ನ ಕೇಂದ್ರ ಸರ್ಕಾರವು ಮಾಹಿತಿ ಉಲ್ಲಂಘನೆಯ ಪರಿಣಾಮ ಬಗ್ಗೆ ಉಭಯ ಕಂಪೆನಿಗಳನ್ನೂ ಪ್ರಶ್ನಿಸಿತ್ತು. ಇದನ್ನು ಅನುಸರಿಸಿ ಫೇಸ್ ಬುಕ್ ಭಾರತದ ಸುಮಾರು ೫.೬೨ ಲಕ್ಷ ಜನರ ಮೇಲೆ ಮಾಹಿತಿ ಉಲ್ಲಂಘನೆಯ ಪರಿಣಾಮವಾಗಿರಬಹುದು ಎಂದು ಒಪ್ಪಿಕೊಂಡಿತ್ತು.  ಈ ಮಾಸದ ಆದಿಯಲ್ಲಿ ಫೇಸ್ ಬುಕ್ ಮತ್ತು ಕೇಂಬ್ರಿಜ್ ಅನಾಲಿಟಿಕಾ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿದ್ದವು. ಅದನ್ನು ಆಧರಿಸಿ ಸರ್ಕಾರ ಈಗ ಇನ್ನಷ್ಟು ವಿವರಗಳನ್ನು ಕೋರಿ ಎರಡನೇ ಬಾರಿಗೆ ನೋಟಿಸ್ ಕಳುಹಿಸಿದೆ. ಸರ್ಕಾರ ಈ ಬಾರಿ ಪ್ರತಿಕ್ರಿಯೆ ಸಲ್ಲಿಸಲು ಮೇ ೧೦ರವರೆಗೆ ಉಭಯ ಕಂಪೆನಿಗಳಿಗೂ ಕಾಲಾವಕಾಶ ನೀಡಿದೆ ಎಂದು ಗುರುತು ಹೇಳಲು ಇಚ್ಛಿಸದ ಮೂಲವು ತಿಳಿಸಿತು.  ಸಾಮಾಜಿಕ ಜಾಲತಾಣ ದೈತ್ಯನಾದ ಫೇಸ್ ಬುಕ್, ಕಳೆದ ಕೆಲವು ವಾರಗಳಿಂದ ಲಕ್ಷಾಂತರ ಬಳಕೆದಾರರ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಬಳಕೆದಾರರು ಮತ್ತು ಸರ್ಕಾರಗಳಿಂದ ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.  ಸುಮಾರು ೮೦ ದಶಲಕ್ಷಕ್ಕೂ ಹೆಚ್ಚು ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಡಾಟಾ ಅನಾಲಿಟಿಕ್ಸ್ ಮತ್ತು ರಾಜಕೀಯ ಸಮಾಲೋಚನಾ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾ ಕಳವು ಮಾಡಿ ಬಳಸಿಕೊಂಡಿದೆಯೆಂಬ ಮಾಹಿತಿಯು ಅಮೆರಿಕದ ಈ ಕಂಪೆನಿ ವಿರುದ್ಧ ಜಾಗತಿಕ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು.

2018: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ಭಯೋತ್ಪಾದಕ
ದಾಳಿಯಲ್ಲಿ ಕಾಂಗ್ರೆಸ್ ನಾಯಕನೊಬ್ಬ ಹತನಾಗಿ, ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.  ಕಾಂಗ್ರೆಸ್ ನಾಯಕ ಗುಲಾಂ ನಬಿ ಪಟೇಲ್ ಅವರು ತಮ್ಮ ಕಾರಿನಲ್ಲಿ ಪುಲ್ವಾಮ ಜಿಲ್ಲೆಯ ರಾಜಪೋರಾ ಚೌಕದಲ್ಲಿ ಹೋಗುತ್ತಿದ್ದಾಗ ಭಯೋತ್ಪಾದಕರು ಅವರ ಮೇಲೆ ಗುಂಡಿನ ಸುರಿಮಳೆಗೈದರು ಎಂದು ವರದಿಗಳು ಹೇಳಿದವು. ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡ ಪಟೇಲ್ ಬಳಿಕ ಗಾಯಗಳ ಪರಿಣಾಮವಾಗಿ ಅಸು ನೀಗಿದರು. ದಾಳಿಯಲ್ಲಿ ಗಾಯಗೊಂಡಿರುವ ಭದ್ರತಾ ಸಿಬ್ಬಂದಿ ಇಮ್ತಿಯಾಜ್ ಅಹ್ಮದ್ ಮತ್ತು ಬಿಲಾಲ್ ಅಹ್ಮದ್ ಅವರಿಗೆ ಚಿಕಿತ್ಸೆ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.  ರಾಜ್ ಪೋರಾದಲ್ಲಿ ಈದಿನ ಉಗ್ರಗಾಮಿಗಳಿಂದ ಹತರಾದ ಹಿರಿಯ ಕಾಂಗ್ರೆಸ್ ನಾಯಕ ಜಿ.ಎನ್. ಪಟೇಲ್ ಕುಟುಂಬಕ್ಕೆ ಮನಃಪೂರ್ವಕ ಸಂತಾಪಗಳು. ಇಂತಹ ಹೇಡಿ ಕೃತ್ಯಗಳಿಂದ ಅವರು ಇನ್ನೊಂದು ಕುಟುಂಬವನ್ನು ಹಾಳು ಮಾಡುವುದು ಬಿಟ್ಟು ಬೇರೇನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದರು. 

2018: ನವದೆಹಲಿ: ದಕ್ಷಿಣ ಅಮೆರಿಕಾದ ಫ್ರೆಂಚ್ ಗಯಾನಾದಲ್ಲಿರುವ ಕೊವೂರು ಬಾಹ್ಯಾಕಾಶ ಉಡ್ಡಯನ
ಕೇಂದ್ರಕ್ಕೆ ಉಡ್ಡಯನ ಸಲುವಾಗಿ ಕಳುಹಿಸಿದ ಹದಿನೈದೇ ದಿನಗಳಲ್ಲಿ ತನ್ನ ಜಿಸ್ಯಾಟ್ -೧೧ ಬೃಹತ್ ಸಂಪರ್ಕ ಉಪಗ್ರಹವನ್ನು ಇಸ್ರೋ ಹಿಂದಕ್ಕೆ ತರಿಸಿಕೊಂಡಿತು. ಉಪಗ್ರಹವನ್ನು ನಿರ್ಮಿಸಲಾಗಿರುವ ಬೆಂಗಳೂರಿನಲ್ಲಿ ಹೆಚ್ಚುವರಿ ತಾಂತ್ರಿಕ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಉಪಗ್ರಹವನ್ನು ಹಿಂದಕ್ಕೆ ತರಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದವು. ೫,೭೦೦ ಕಿಲೋ ಗ್ರಾಂ ತೂಕದ ಹೈ ಥ್ರೋಪುಟ್ ಅಥವಾ ಇಂಟರ್ ನೆಟ್ ಬ್ರಾಡ್ ಬ್ಯಾಂಡ್ ಉಪಗ್ರಹವು ಮಾರ್ಚ್ ೩೦ರಂದು ಕೊವುರು ಉಡ್ಡಯನ ಕೇಂದ್ರಕ್ಕೆ ತಲುಪಿತ್ತು. ಏರಿಯನ್ ಉಡಾವಣಾ ಸಂಸ್ಥೆಯ ಪ್ರಕಾರ ಮೇ ೨೬ರಂದು ಉಪಗ್ರಹದ ಉಡಾವಣೆ ಆಗಲಿತ್ತು.  ಇಸ್ರೋ ವಕ್ತಾರರಾಗಲೀ, ಅಧಿಕಾರಿಗಳಾಗಲೀ ಪ್ರತಿಕ್ರಿಯೆಗೆ ಲಭಿಸಲಿಲ್ಲ. ಬಾಹ್ಯಾಕಾಶ ಉಡಾವಣಾ ಸಂಸ್ಥೇ ಏರಿಯನ್ ಪ್ರಕಾರ ೨೦೧೮ರ ಮೇ ೨೬ಕ್ಕೆ ನಿಗದಿಯಾಗಿದ್ದ ಏರಿಯನ್ ೫ರ ಉಡಾವಣೆಯನ್ನು ಮುಂದೂಡಲಾಗಿದೆ. ಇಸ್ರೋದಲ್ಲಿ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಜಿ ಸ್ಯಾಟ್ -೧೧ ಉಪಗ್ರಹದ ಉಡಾವಣೆಯನ್ನು ಮುಂದೂಡಲಾಗಿದೆ. ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರದಲ್ಲಿ (ಐಸ್ಯಾಕ್) ಹೆಚ್ಚುವರಿ ಪರೀಕ್ಷೆಗಳು ನಡೆಯಲಿವೆ ಎಂದು ಏರಿಯನ್ ತಿಳಿಸಿತು.  ಭಾರತೀಯ ಪ್ರದೇಶಗಳು ಮತ್ತು ನೆರೆಯ ದ್ವೀಪಗಳಲ್ಲಿ ಕಾ ಮತ್ತು ಕು ಬ್ಯಾಂಡ್ ಗಳಲ್ಲಿ ಮಲ್ಟಿಪಲ್ ಸ್ಪಾಟ್ ಬೀಮ್ ಕವರೇಜ್ ಒದಗಿಸುವ ಉದ್ದೇಶವನ್ನು ಜಿಸ್ಯಾಟ್ -೧೧ ಹೊಂದಿದೆ. ಅದರ ೧೨ ಜಿಬಿಪಿಎಸ್ ಸೇವೆಯು ಭಾರತದ ಹಳೆಯ ಸಂಪರ್ಕ ಉಪಗ್ರಹಗಳಿಗಿಂತ ಹೆಚ್ಚು ಉತ್ಕೃಷ್ಟವಾಗಿರುವ ನಿರೀಕ್ಷೆ ಇದೆ. ಉಪಗ್ರಹ ಮತ್ತು ಅದರ ವಿದೇಶೀ ಉಡಾವಣಾ ವೆಚ್ಚವು ಅಂದಾಜು ೧,೧೧೭ ಕೋಟಿ ರೂಪಾಯಿಗಳಾಗಿದ್ದು, ೨೦೧೬ರ ಮಾರ್ಚ್ ತಿಂಗಳಲ್ಲಿ ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು.  ‘ಬಾಹ್ಯಾಕಾಶ ರಂಗದಲ್ಲಿ ಇಂತಹುದೆಲ್ಲ ಘಟಿಸುತ್ತವೆ. ಗ್ರಾಹಕರು ಸಂಪೂರ್ಣ ತಾಂತ್ರಿಕ ತಪಾಸಣೆಗಳನ್ನು ಮಾಡಬೇಕಾಗುತ್ತದೆ ಎಂಬುದು ನಮ್ಮ ಸಂಪೂರ್ಣ ಅರಿವಿನಲ್ಲಿದೆ. ಅತ್ಯಂತ ವಿಶೇಷ ಉಪಗ್ರಹವಾಗಿರುವುದರಿಂದ ಅದನ್ನು ಉಡಾವಣೆ ಮಾಡುವಲ್ಲಿ ಅತ್ಯಂತ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇದರ ಉಡಾವಣೆಗೆ ವಿಚಾರದಲ್ಲಿ ಇಸ್ರೋಗೆ ನಾವು ಎಲ್ಲ ಸಹಕಾರವನ್ನೂ ನೀಡುತ್ತೇವೆ ಎಂದು ಫ್ರೇಂಚ್ ರಾಯಭಾರ ಕಚೇರಿಯಲ್ಲಿನ ಸ್ಪೇಸ್ ಕೌನ್ಸೆಲರ್ ಬೆಂಗಳೂರಿನಲ್ಲಿ ಇರುವ ಮಥಿಯು ವೀಸ್ ನುಡಿದರು.


2018: ನವದೆಹಲಿ: ಲೈಂಗಿಕವಾಗಿ ಶೋಷಣೆಗೆ ಒಳಗಾಗುವ ಹೆಣ್ಮಕ್ಕಳಿಗೆ ಒದಗಿಸಲಾಗುವಂತಹುದೇ
ಪರಿಹಾರವನ್ನು ಈ ರೀತಿ ಶೋಷಣೆಗೆ ಒಳಗಾಗುವ ಗಂಡು ಮಕ್ಕಳಿಗೂ ಒದಗಿಸುವ ಸಲುವಾಗಿ ಹಾಲಿ ಮಕ್ಕಳ ಲೈಂಗಿಕ ದುರ್ಬಳಕೆ ಕಾನೂನಿಗೆ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮುಂದಿಟ್ಟರು.  ಮಕ್ಕಳ ಲೈಂಗಿಕ ದುರ್ಬಳಕೆಗೆ ಗುರಿಯಾದ ಗಂಡುಮಕ್ಕಳ ಬಗ್ಗೆ ಅಧ್ಯಯನ ನಡೆಸುವುದಾಗಿಯೂ ಅವರು ಪ್ರಕಟಿಸಿದರು.  ಗಂಡುಮಕ್ಕಳ ಲೈಂಗಿಕ ಶೋಷಣೆ ಬಗ್ಗೆ ನಡೆಸುವ ಅಧ್ಯಯನ ಈ ಮಾದರಿಯ ಮೊತ್ತ ಮೊದಲ ಅಧ್ಯಯನವಾಗಲಿದೆ.  ‘ಮಕ್ಕಳ ಲೈಂಗಿಕ ದುರ್ಬಳಕೆಗೆ ಗುರಿಯಾಗಿ ನಿರ್ಲಕ್ಷಿತರಾದ ಮಕ್ಕಳ ಸ್ಥಿತಿಗತಿಯ ವಿಚಾರ ಅತ್ಯಂತ ನಿರ್ಲಕ್ಷಿತ ವಿಚಾರವಾಗಿದೆ. ಲೈಂಗಿಕ ಶೋಷಣೆಗೆ ಗುರಿಯಾಗುವ ಗಂಡುಮಕ್ಕಳು ಜೀವಮಾನ ಪೂರ್ತಿ ಮೌನವಾಗಿದ್ದುಕೊಂಡು ತಮಗಾದ ನೋವನ್ನು ಅನುಭವಿಸುತ್ತಾರೆ. ಕಳಂಕ ಭೀತಿ ಮತ್ತು ನಾಚಿಕೆ ಅವರನ್ನು ಈ ಬಗ್ಗೆ ಮಾತನಾಡದಂತೆ ಮಾಡುತ್ತದೆ. ಇದು ಗಂಭೀರ ಸಮಸ್ಯೆಯಾಗಿದ್ದು, ಗಮನಿಸಲೇ ಬೇಕಾದ ವಿಚಾರವಾಗಿದೆ ಎಂದು ಚಿತ್ರ ನಿರ್ಮಾಪಕರಾದ ಇನ್ಸಿಯ ಧರಿವಾಲ ಅವರ ಗಂಡು ಮಕ್ಕಳ ಲೈಂಗಿಕ ದುರ್ಬಳಕೆ  ಸಂಬಂಧದ  ’ಚೇಂಜ್.ಆರ್ಗ್ ದೂರಿಗೆ ಸ್ಪಂದಿಸಿ ಮಾತನಾಡುತ್ತಾ ಮೇನಕಾಗಾಂಧಿ ಹೇಳಿದರು. ದೂರನ್ನು ಅನುಸರಿಸಿ ತಾವು ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗಕ್ಕೆ (ಎನ್ ಸಿಪಿಸಿಆರ್) ೨೦೧೭ರ ಸೆಪ್ಟೆಂಬರಿನಲ್ಲಿ ಈ ವಿಷಯದ ಬಗ್ಗೆ ಗಮನಿಸುವಂತೆ ಸೂಚನೆ ನೀಡಿರುವುದಾಗಿಯೂ ಸಚಿವೆ ನುಡಿದರು.  ಸಮ್ಮೇಳನದಲ್ಲಿ ಮೂಡಿಬಂದ ಶಿಫಾರಸುಗಳಿಗೆ ಅನುಗುಣವಾಗಿ ಮಕ್ಕಳ ಲೈಂಗಿಕ ದುರ್ಬಳಕೆಯ ಸಂತ್ರಸ್ಥರಿಗೆ ಪರಿಹಾರ ಒದಗಿಸುವ ಈಗಿನ ರೂಪುರೇಷೆಗೆ (ಸ್ಕೀಮ್) ತಿದ್ದುಪಡಿ ತರುವ ಅಗತ್ಯವಿದೆ ಎಂಬ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು. ಅದರ ಪ್ರಕಾರ ಲೈಂಗಿಕವಾಗಿ ದುರ್ಬಳಕೆಗೆ ಅಥವಾ ಅತ್ಯಾಚಾರಕ್ಕೆ ಗುರಿಯಾದ ಬಾಲಕರಿಗೂ ಪರಿಹಾರ ಒದಗಿಸುವ ಅಂಶವನ್ನು ಸೇರ್ಪಡೆ ಮಾಡಬೇಕು ಎಂದು ತೀರ್ಮಾನಿಸಲಾಯಿತು ಎಂದು ಮೇನಕಾ ಗಾಂಧಿ ನುಡಿದರು.  ಈ ಸಮ್ಮೇಳನದ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗವು (ಎನ್ ಸಿ ಪಿಸಿಆರ್) ದೇಶಾದ್ಯಂತ ಲೈಂಗಿಕ ದುರ್ಬಳಕೆಗೆ ಗುರಿಯಾದ ೧೬೦ ಗಂಡುಮಕ್ಕಳ ಕುರಿತು ದರಿವಾಲ ನಡೆಸಿದ ಪ್ರಾಥಮಿಕ ಸಂಶೋಧನೆಯ ವಿವರಗಳನ್ನು ಅಧ್ಯಯನ ಮಾಡಿತು. ಇದರಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಹಿಂಸಾಚಾರಕ್ಕೂ ಗಂಡು ಮಕ್ಕಳಿಗೆ ಲೈಂಗಿಕ ಹಿಂಸೆಯಿಂದಾಗುವ ಆಘಾತಕ್ಕೂ ಪರಸ್ಪರ ಸಂಬಂಧ ಇರುವ ಸಾಧ್ಯತೆ ಇರುವುದು ಬೆಳಕಿಗೆ ಬಂದಿತ್ತು. ಈ ಅಧ್ಯಯನವನ್ನು ಆಧರಿಸಿ, ಆಡ್ರಿಯನ್ ಫಿಲಿಪ್ಸ್ ಆಫ್ ಜಸ್ಟೀಸ್ ಅಂಡ್ ಕೇರ್ ಸಂಸ್ಥೇಯ ಬೆಂಬಲದೊಂದಿಗೆ ಲೈಂಗಿಕ ಶೋಷಣೆಗೆ ಒಳಗಾದ ಗಂಡು ಮಕ್ಕಳ ಬಗ್ಗೆ ಹೆಚ್ಚಿನ ಅಧ್ಯಯನವನ್ನು ನಡೆಸಲು ಇನ್ಸಿಯಾವನ್ನು ಆಹ್ವಾನಿಸಲು ಆಯೋಗವು ನಿರ್ಧರಿಸಿತು ಎಂದು ಸಚಿವೆ ನುಡಿದರು.  ೨೦೦೭ರಲ್ಲಿ ಮಹಿಳೆರು ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ನಡೆಸಿದ ಮಕ್ಕಳ ಲೈಂಗಿಕ ದುರ್ಬಳಕೆ ಕುರಿತ ಕೊನೆಯ ಅಧಿಕೃತ ಅಧ್ಯಯನದಲ್ಲಿ ಶೇಕಡಾ ೫೩.೨ರಷ್ಟು ಮಕ್ಕಳು ಒಂದಲ್ಲ ಒಂದು ರೀತಿಯ ಲೈಂಗಿಕ ದುರ್ಬಳಕೆಯ ಅನುಭವ ಹೊಂದಿದ್ದಾರೆ. ಅವರ ಪೈಕಿ ಶೇಕಡಾ ೫೨.೯ರಷ್ಟು ಬಾಲಕರು ಎಂಬುದು ಬೆಳಕಿಗೆ ಬಂತು ಎಂದು ಅವರು ವಿವರಿಸಿದರು.  ೨೦೧೮ರ ಫೆಬ್ರುವರಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು, ಪೂರ್ಣಿಯಾ ಗೋವಿಂದರಾಜುಲು ಅವರ ಚೇಂಜ್.ಆರ್ಗ್ ದೂರನ್ನು ಆಧರಿಸಿ ಮಕ್ಕಳ ಲೈಂಗಿಕ ದುರ್ಬಳಕೆಗೆ ಗುರಿಯಾದ ವಯಸ್ಕರಿಗೆ ನೆರವು ನೀಡಿಕೆ ಕ್ರಮಗಳ ಬಗ್ಗೆ ಪರಿಶೀಲಿಸುವುದಾಗಿಯೂ ಪ್ರಕಟಿಸಿತ್ತು.


2018: ಕೊಪೆನ್ ಹೇಗನ್: ಖಾಸಗಿ ಜಲಾಂತರ್ಗಾಮಿ ಪಯಣದ ವೇಳೆಯಲ್ಲಿ ಸ್ವೀಡಿಶ್ ವರದಿಗಾರ್ತಿ ಕಿಮ್
ವಾಲ್ ಅವರನ್ನು ಚಿತ್ರಹಿಂಸೆಗೆ ಗುರಿಪಡಿಸಿ ಕೊಂದ ಪ್ರಕರಣದಲ್ಲಿ ಡ್ಯಾನಿಶ್ ಜಲಾಂತರ್ಗಾಮಿ ಸಂಶೋಧಕ ಪೀಟರ್ ಮ್ಯಾಡ್ಸೆನ್ (೪೭) ತಪ್ಪಿತಸ್ಥ ಎಂಬುದಾಗಿ ತೀರ್ಪು ನೀಡಿರುವ ಇಲ್ಲಿನ ಕೋರ್ಟ್, ಈ ಅಪರಾಧಕ್ಕಾಗಿ ಪೀಟರ್‌ಗೆ  ಆಜೀವ ಸೆರೆವಾಸದ ಶಿಕ್ಷೆ ವಿಧಿಸಿತು. ಕಿಮ್ ವಾಲ್ ಅವರ ಸಾವು ಕೊಲೆಯಾಗಿದ್ದು, ಮ್ಯಾಡ್ಸೆನ್ ಅವರು ನಂಬಿಕೆಗೆ ಅರ್ಹವಾದ ವಿವರಣೆಯನ್ನು ನೀಡಿಲ್ಲ ಎಂಬ ಸರ್ವಾನುಮತದ ತೀರ್ಮಾನಕ್ಕೆ ತಾವು ಮತ್ತು ತಮ್ಮ ಇಬ್ಬರು ಜ್ಯೂನಿಯರ್ ಗಳು ಬಂದಿರುವುದಾಗಿ ನ್ಯಾಯಾಧೀಶೆ ಅನೆಟ್ ಬುರ್ಕೋಯೆ ಅವರು ಕೊಪೆನ್ ಹೇಗನ್ ಸಿಟಿ ಕೋರ್ಟಿನಲ್ಲಿ ಈದಿನ ಪ್ರಕಟಿಸಿದರು.  ‘ಇದು ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಪತ್ರಕರ್ತೆಯ ಸಿನಿಕತನದ ಕೊಲೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತು. ಡೆನ್ಮಾರ್ಕಿನಲ್ಲಿ ಆಜೀವ ಕಾರಾಗೃಹ ಶಿಕ್ಷೆ ಅಂದರೆ ೧೬ ವರ್ಷಗಳ ಸೆರೆವಾಸಕ್ಕೆ ಸಮ. ಅಗತ್ಯ ಬಿದ್ದಲ್ಲಿ ಅದನ್ನು ವಿಸ್ತರಿಸಬಹುದು.  ಮಾರ್ಚ್ ೮ರಂದು ವಿಚಾರಣೆಯುದ್ದಕ್ಕೂ  ಮ್ಯಾಡ್ಸೆನ್ ಕೊಲೆ ಆರೋಪವನ್ನು ನಿರಾಕರಿಸಿದ್ದು, ೩೦ರ ಹರೆಯದ ವಾಲ್ ಜಲಾಂತರ್ಗಾಮಿಯ ಒಳಗೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ಪ್ರತಿಪಾದಿಸಿದರು. ಆದರೆ ಆಕೆ ಸತ್ತದ್ದು ಹೇಗೆ ಎಂಬ ಬಗ್ಗೆ ಮಾತ್ರ ಪೀಟರ್ ತಮ್ಮ ಕಥೆಯನ್ನು ಬದಲಾಯಿಸುತ್ತಾ ಹೋದರು. ಉದ್ಯಮಿಯ ಸಂದರ್ಶನ ನಡೆಸುವ ಸಲುವಾಗಿ ಪತ್ರಕರ್ತೆ ವಾಲ್ ಆಗಸ್ಟ್ ೧೦ರಂದು ಮ್ಯಾಡ್ಸೆನ್ ಜಲಾಂತರ್ಗಾಮಿಯನ್ನು ಪ್ರವೇಶಿಸಿದ್ದರು.  ವಾಲ್ ಹತ್ಯೆ ಲೈಂಗಿಕ ಉದ್ದೇಶದ್ದಾಗಿದ್ದು, ಪೂರ್ವ ನಿರ್ಧರಿತವಾಗಿತ್ತು. ಮ್ಯಾಡ್ಸೆನ್ ತನ್ನೊಂದಿಗೆ ತಾನು ಯಾವಾಗಲೂ ತಾರದ ಸಲಕರಣೆಗಳು ಹಾಗೂ ಸ್ಕ್ರೂಡ್ರೈವರ್‍ಗಳನ್ನು ಚೂಪಾಗಿಸಿಕೊಂಡು ತಂದಿದ್ದುದಾಗಿ ಪ್ರಾಸೆಕ್ಯೂಟ್ ಜಾಕೋಬ್ ಬುಚ್ -ಜೆಪ್ಸೆನ್ ಪ್ರತಿಪಾದಿಸಿದರು. ಸಾವಿಗೆ ಕಾರಣ ಏನು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ. ಆದರೆ ಆದದ್ದೇನು ಎಂಬುದನ್ನು ಮರೆಮಾಚಲು ಮ್ಯಾಡ್ಸೆನ್ ಪತ್ರಕರ್ತೆಯ ಶವವನ್ನು ತುಂಡರಿಸಿದ ಎಂದು ನ್ಯಾಯಾಲಯ ಹೇಳಿತು.  ಮ್ಯಾಡ್ಸೆನ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವರೇ ಎಂಬುದು ತತ್ ಕ್ಷಣಕ್ಕೆ ಸ್ಪಷ್ಟವಾಗಿಲ್ಲ.

2018: ತಂಜಾವೂರು (ತಮಿಳುನಾಡು): ತನ್ನ ಹದಿಹರೆಯದ ಪುತ್ರಿಯ ಮೇಲೆ ನಿರಂತರ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗುವಂತೆ ಮಾಡಿದ ೫೦ರ ಹರೆಯದ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯವೊಂದು ಸತತ ೪ ಅವಧಿಗಳ ಆಜೀವ ಸೆರೆವಾಸದ ಶಿಕ್ಷೆ ವಿಧಿಸಿತು.  ಮಹಿಳಾ ನ್ಯಾಯಾಲಯದ ನ್ಯಾಯಾಧೀಶ ಬಾಲಕೃಷ್ಣನ್ ಅವರು ಅಪರಾಧಿ ಸುಬ್ರಮಣಿಯಮ್ ಗೆ ಸತತ ೪ ಅವಧಿಗಳ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದರು. ಪರಿಣಾಮವಾಗಿ ಆತ ಜೀವಮಾನ ಪೂರ್ತಿ ಸೆರೆವಾಸವನ್ನು ಅನುಭವಿಸಬೇಕು. ಪುದುಕೊಟ್ಟಾಯಿ ಜಿಲ್ಲೆಯ ಸುಬ್ರಮಣಯಮ್  ನಿರಂತರವಾಗಿ ಜೀವಾವಧಿ ಸಜೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಹೇಳಿದರು. ಪ್ರಾಸೆಕ್ಯೂಷನ್ ಪ್ರಕಾರ ಸುಬ್ರಮಣಿಯಮ್ ೧೭ರ ಹರೆಯದ ತನ್ನ ಪುತ್ರಿಯ ಮೇಲೆ ೨೦೧೬ರಲ್ಲಿ ಆಕೆಯ ತಾಯಿ ಮನೆಯಲ್ಲಿ ಇಲ್ಲದೇ ಇದ್ದಾಗ ಬಲಾತ್ಕಾರದಿಂದ ಅತ್ಯಾಚಾರ ಎಸಗಿದ್ದ.  ಬಳಿಕ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಸಿದ್ದ. ೨೦೧೭ರ ಮಾರ್ಚ್ ತಿಂಗಳಲ್ಲಿ ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿತು. ಆಗ ಆಕೆ ಗರ್ಭಿಣಿಯಾಗಿದ್ದುದು ಬೆಳಕಿಗೆ ಬಂತು. ಕೆಲವು ವಾರಗಳ ಬಳಿಕ ಆಕೆ ಹೆಣ್ಣುಮಗುವಿಗೆ ಜನ್ಮವಿತ್ತಳು. ತಾಯಿ ನಿರಂತರವಾಗಿ ಪ್ರಶ್ನಿಸಿದಾಗ ಅಪ್ಪನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದುದು ಬೆಳಕಿಗೆ ಬಂದಿತ್ತು. ಬಾಲಕಿಯ ತಾಯಿ ನೀಡಿದ ದೂರನ್ನು ಆಧರಿಸಿ ಪಟ್ಟುಕೊಟ್ಟಾಯಿಯ ಸರ್ವ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಸುಬ್ರಮಣಿಯಮ್ ನನ್ನು ಬಂಧಿಸಿದ್ದರು. ಆತ ಅತಿಯಾದ ಕುಡುಕನಾಗಿದ್ದ ಎಂದು ಪ್ರಾಸೆಕ್ಯೂಷನ್ ತಿಳಿಸಿತ್ತು.

2009: ಸಚಿವರಾದ ಜಿ.ಜನಾರ್ದನರೆಡ್ಡಿ, ಜಿ.ಕರುಣಾಕರರೆಡ್ಡಿ ಮತ್ತು ಬಿ.ಶ್ರೀರಾಮುಲು ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ಸೇರಿದಂತೆ ನಾಲ್ಕು ಸಂಸ್ಥೆಗಳಿಗೆ ಬಳ್ಳಾರಿ ಅರಣ್ಯ ವಲಯದ ಅಂತರರಾಜ್ಯ ಗಡಿ ಭಾಗದ ಒಂದು ಪ್ರದೇಶದಲ್ಲಿ ನೀಡಲಾಗಿದ್ದ ಐದು ಗಣಿ ಗುತ್ತಿಗೆಗಳನ್ನು ತತ್ ಕ್ಷಣ ಅಮಾನತು ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತು. ಸಚಿವರ ಮಾಲೀಕತ್ವದ ಓಎಂಸಿ ಅಂತರರಾಜ್ಯ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟವಾಗಿ ತಿಳಿಯಲು ಭಾರತೀಯ ಸರ್ವೇ ಇಲಾಖೆ ವತಿಯಿಂದ ಸಮೀಕ್ಷೆ ನಡೆಯಬೇಕಿದೆ. ಗಡಿ ಗುರುತಿಸುವ ಪ್ರಕ್ರಿಯೆ ಅಂತ್ಯಗೊಳ್ಳುವವರೆಗೆ ಎಲ್ಲ ಐದು ಗುತ್ತಿಗೆಗಳನ್ನೂ ಅಮಾನತಿನಲ್ಲಿ ಇಡಬೇಕು ಎಂದು ಕೇಂದ್ರ ಅರಣ್ಯ ಇಲಾಖೆಯ ಹಿರಿಯ ಸಹಾಯಕ ಐಜಿಪಿ ಬಿ.ಕೆ.ಸಿಂಗ್ ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದರು. ಅನಂತಪುರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯು ಅಂತರರಾಜ್ಯ ಗಡಿ ಪ್ರದೇಶದಲ್ಲಿ ಗಣಿಗಾರಿಕೆ ನಿಯಂತ್ರಿಸುವಲ್ಲಿ ಲೋಪ ಎಸಗಿರುವ ಸಂಬಂಧ ಕೇಂದ್ರ ಅರಣ್ಯ ಇಲಾಖೆಯ ಬೆಂಗಳೂರು ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯು 2009ರ ಜನವರಿ 30ರಂದು ನೀಡಿರುವ ಸ್ಥಳ ಪರಿಶೀಲನಾ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಯಿತು.

2009: ಪ್ರತ್ಯೇಕ ತಮಿಳು ರಾಷ್ಟ್ರ ನಿರ್ಮಾಣ ಸಲುವಾಗಿ ಆರಂಭವಾದ ಎಲ್‌ಟಿಟಿಇ ಹಾಗೂ ಶ್ರೀಲಂಕಾ ಸೇನೆಯ ನಡುವಿನ ಕದನ ಭೀಕರವಾಗಿ ಮುಂದುವರಿಯಿತು. ಯುದ್ಧ ನಿಲ್ಲಿಸುವಂತೆ ಎರಡೂ ಪಡೆಗಳಿಗೆ ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ರಾಷ್ಟ್ರಗಳು ಸೇರಿದಂತೆ ಹಲವು ರಾಷ್ಟ್ರಗಳು ಒಂದೆಡೆಯಿಂದ ಒತ್ತಡ ಹೇರಿದರೆ, ಮತ್ತೊಂದೆಡೆ ತನ್ನ ಪ್ರದೇಶದಲ್ಲಿರುವ 1.60 ಲಕ್ಷ ನಾಗರಿಕರಿಗೆ ತಕ್ಷಣ ಮಾನವೀಯ ನೆರವು ಸಿಗದೇ ಹೋದರೆ ಅವರು ಬದುಕುಳಿಯುವುದು ಅನುಮಾನ ಎಂದು ಎಲ್‌ಟಿ ಟಿಇ ಆತಂಕ ವ್ಯಕ್ತಪಡಿಸಿತು. . ಇದನ್ನು ಶ್ರೀಲಂಕಾ ಸರ್ಕಾರ ಅಲ್ಲಗಳೆಯಿತು.

2009: ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರು ಬುನೇರ್ ಜಿಲ್ಲೆಯನ್ನು ಸಂಪೂರ್ಣವಾಗಿ ತೊರೆದರು. ಪಾಕಿಸ್ಥಾನಿ ಅಧಿಕಾರಿಗಳು ಜಿಲ್ಲೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದಿನಿಂದ ಕೇವಲ 100 ಕಿ.ಮೀ ಅಂತರದಲ್ಲಿರುವ ಬುನೇರ್ ಜಿಲ್ಲೆಯ ಮೇಲೆ ಹಿಡಿತ ಸಾಧಿಸಿದ್ದ ತಾಲಿಬಾನ್ ಉಗ್ರರು ಸರ್ಕಾರದ ಜೊತೆಗಿನ ಮಾತುಕತೆಯ ನಂತರ ಹಿಂದಕ್ಕೆ ಸರಿಯಲು ಒಪ್ಪಿಕೊಂಡಿದ್ದರು.

2009: ಫಾರ್ಚೂನ್ 500ರ ಪಟ್ಟಿಯಲ್ಲಿ ಅಮೆರಿಕದ ಹಲವು ಬೃಹತ್ ಕಂಪೆನಿಗಳನ್ನು ಮುನ್ನಡೆಸುವ 15 ಮಹಿಳೆಯರಲ್ಲಿ ಪೆಪ್ಸಿಕೊ ಕಂಪೆನಿಯ ಸಿಇಒ ಭಾರತೀಯ ಸಂಜಾತೆ ಇಂದ್ರಾ ನೂಯಿ ನಾಲ್ಕನೇಯವರಾದರು. 2006ರಲ್ಲಿ ಸಿಇಓ ಆಗಿ ಅಧಿಕಾರ ವಹಿಸಿಕೊಂಡಂದಿನಿಂದ ಇಂದ್ರಾ ನೂಯಿ (53) ಕಂಪೆನಿಯ ಆದಾಯ ಹೆಚ್ಚಿಸುವಲ್ಲಿ ಶ್ರಮಿಸಿದ್ದರು. 2008ರಲ್ಲಿ (ಶೇ10ರಷ್ಟು ಹೆಚ್ಚಳ)43.3 ಶತಕೋಟಿ ಅಮೆರಿಕ ಡಾಲರ್ ಆದಾಯ ಗಳಿಸಿಕೊಡುವುದರೊಂದಿಗೆ ಕಂಪೆನಿಯ ಕುರಿತು ಉತ್ತಮ ಭಾವನೆ ಬೆಳೆಸುವಂತಹ ಹಲವು ಕ್ಷೇತ್ರಗಳಿಗೆ ಅದರ ಕಾರ್ಯವ್ಯಾಪ್ತಿ ವಿಸ್ತರಿಸಿದ್ದಾರೆ ಎಂದು ಮ್ಯಾಗಝೀನ್ ಹೇಳಿತು.

2009: ಭಾರತೀಯ ಮೂಲದ ಅಮೆರಿಕ ಕಾದಂಬರಿಗಾರ್ತಿ, ಪತ್ರಕರ್ತೆ ಶಾಂತಾ ರಾಮರಾವು (86) ತೀವ್ರ ಅಸ್ವಸ್ಥತೆಯಿಂದ ನ್ಯೂಯಾರ್ಕಿನಲ್ಲಿ ನಿಧನರಾದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತು. ಈಸ್ಟ್ ಆಫ್ ಹೋಮ್, ವ್ಯೆ ಟು ದ ಸೌತ್ ಈಸ್ಟ್, ಮೈ ರಷ್ಯನ್ ಜರ್ನಿ ಇತ್ಯಾದಿ ಕೃತಿಗಳನ್ನು ನೀಡಿದ ಶಾಂತಾ ಅವರ ಆತ್ಮಕತೆ 'ಗಿಫ್ಟ್ಸ್ ಆಫ್ ಪ್ಯಾಸೇಜ್'. ಇ ಎಂ ಫಾಸ್ಟರ್ ಅವರ 'ಎ ಪ್ಯಾಸೇಜ್ ಟು ಇಂಡಿಯಾ' ಕಾದಂಬರಿಯನ್ನು ರಂಗಕ್ಕೆ ಅಳವಡಿಸಿದ ಕೀರ್ತಿ ಶಾಂತಾ ಅವರಿಗೆ ಸಲ್ಲುತ್ತದೆ. 1923ರಲ್ಲಿ ಚೆನ್ನೈನಲ್ಲಿ ಜನಿಸಿದ ಶಾಂತಾ ಅವರ ತಂದೆ ಜಪಾನ್ ಮತ್ತು ಅಮೆರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

2009: ಭಾರತವನ್ನು 'ಗೋ ಹತ್ಯೆ ಮುಕ್ತ ರಾಷ್ಟ್ರ' ಎಂದು ಘೋಷಿಸಲು ಎಲ್ಲ ರಾಜಕೀಯ ಪಕ್ಷಗಳು ಮುಂದಾಗಬೇಕು ಎಂದು ಅಖಿಲ ಕರ್ನಾಟಕ ಪ್ರಾಣಿದಯಾ ಸಂಘ ಬೆಂಗಳೂರಿನಲ್ಲಿ ಒತ್ತಾಯಿಸಿತು. 'ಭಾರತೀಯರಿಗೆ ಗೋವುಗಳ ಬಗ್ಗೆ ಪೂಜ್ಯ ಭಾವನೆ ಇದೆ. ಹಾಗಾಗಿ ಗೋ ಹತ್ಯೆಯನ್ನು ಎಲ್ಲರೂ ವಿರೋಧಿಸಬೇಕು. ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ದೇಶವನ್ನು 'ಗೋ ಹತ್ಯೆ ಮುಕ್ತ ರಾಷ್ಟ್ರ'ವನ್ನಾಗಿ ಘೋಷಿಸಲು ಮತದಾರರು ಒತ್ತಡ ಹೇರಬೇಕು' ಎಂದು ಸಂಘದ ಸಮನ್ವಯಾಧಿಕಾರಿ ದಯಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದರು.

2008: ಬಾಲಿವುಡ್ ನಟ ಡಾ. ಶ್ರೀರಾಮ್ ಲಾಗೂ ಅವರಿಗೆ ಮುಂಬೈಯಲ್ಲಿ ಗಾಯಕಿ ಲತಾ ಮಂಗೇಶ್ಕರ್ ಅವರು ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಕ್ರೀಡಾಂಗಣಗಳಲ್ಲಿ `ಚಿಯರ್ ಗರ್ಲ್ಸ್' ತಂಡಗಳು ನೃತ್ಯ ಪ್ರದರ್ಶನ ನೀಡುವುದಕ್ಕೆ ನಿಷೇಧ ಹೇರುವ ಯೋಚನೆಯನ್ನು ಮಹಾರಾಷ್ಟ್ರ ಸರ್ಕಾರ ಕೈಬಿಟ್ಟಿತು. `ಅಶ್ಲೀಲ' ಭಾವ-ಭಂಗಿಗಳನ್ನು ತೋರಿದರೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ಅದು ಎಚ್ಚರಿಸಿತು.

2008: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್ ಎಫ್ ಡಿ ಸಿ) ಅಧ್ಯಕ್ಷರನ್ನಾಗಿ ಹಿರಿಯ ನಟ ಓಂಪುರಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು. ಏಪ್ರಿಲ್ 4ರಿಂದ ಅನ್ವಯವಾಗುವಂತೆ ಅವರ ನೇಮಕಾತಿ ಆಗಿದ್ದು, ಮುಂದಿನ ಮೂರು ವರ್ಷಗಳ ಕಾಲ ಅವರು ಈ ಸ್ಥಾನದಲ್ಲಿ ಮುಂದುವರೆಯುವರು. 1980ರ ದಶಕದಿಂದಲೂ ಎನ್ ಎಫ್ ಡಿ ಸಿ ಜತೆಗೆ ಸಂಪರ್ಕ ಇಟ್ಟುಕೊಂಡ ಓಂಪುರಿ ಅವರು, `ಅರ್ಧ ಸತ್ಯ', `ಜಾನೆ ಭಿ ದೋ ಯಾರ್ಹೊ...', `ಮಿರ್ಚ್ ಮಸಾಲಾ', `ಧಾರಾವಿ', `ಭವಾನಿ ಭವಾಯಿ', `ಕರೆಂಟ್' ಮೊದಲಾದ ಚಿತ್ರಗಳಲ್ಲಿ ನಟಿಸಿದವರು. ಈ ಹಿಂದೆ ಅಡಲ್ಯಾಬ್ಸಿನ ಮನಮೋಹನ ಶೆಟ್ಟಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಹೃಷಿಕೇಶ ಮುಖರ್ಜಿ, ಬಾಲಿವುಡ್ಡಿನ ಕನಸಿನ ಕನ್ಯೆ ಹೇಮಾಮಾಲಿನಿ ಅವರು ಎನ್ ಎಫ್ ಡಿ ಸಿ ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2008: ವಾಯುದಳಕ್ಕೆ ಬೆಂಬಲವಾಗಿ ಕಾರ್ಯ ನಿರ್ವಹಿಸಲು ಭೂಮಿಯಿಂದ ಆಕಾಶದತ್ತ ನಿಗದಿತ ಗುರಿಯತ್ತ ಬಹು ವೇಗವಾಗಿ ಚಿಮ್ಮುವ ಸಾಮರ್ಥ್ಯದ ಕ್ಷಿಪಣಿಗಳನ್ನು ಖರೀದಿಸಲು ಭಾರತೀಯ ಸೇನೆಯು 3,800 ಕೋಟಿ ರೂಪಾಯಿಗಳ ಜಾಗತಿಕ ಟೆಂಡರ್ ಕರೆಯಿತು. ಗಗನದಲ್ಲಿ 8ರಿಂದ 9 ಕಿ. ಮೀ. ಎತ್ತರದಲ್ಲಿ ಹಾರಾಡುವ ಯುದ್ಧ ವಿಮಾನಗಳನ್ನು ಹಾಗೂ ಮಾನವರಹಿತ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿಗಳು ಹೊಂದಿರುತ್ತವೆ ಎಂದು ಸೇನಾ ಮೂಲಗಳು ತಿಳಿಸಿದವು.

2008: ಇಂಗ್ಲೆಂಡಿನ ಬ್ರಿಸ್ಟಲ್ ನಗರದಲ್ಲಿರುವ ಭಾರತದ ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರ ಸಮಾಧಿ ಪುನರುಜ್ಜೀವನಕ್ಕೆ 165 ವರ್ಷಗಳ ಬಳಿಕ ಚಾಲನೆ ನೀಡಲಾಯಿತು. ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿ ರಾಜಾರಾಮ್ ಮೋಹನ್ ರಾಯ್ ಅವರು 1833ರ ಸೆಪ್ಟೆಂಬರ್ 27ರಂದು ಬ್ರಿಸ್ಟಲ್ ನಗರದಲ್ಲಿ ಅಸುನೀಗಿದ್ದು ಅವರ ಸಮಾಧಿಯನ್ನು ಇಲ್ಲಿಯೇ ನಿರ್ಮಿಸಲಾಗಿತ್ತು. ರಾಯ್ ಸಮಾಧಿ ಪುನರುಜ್ಜೀವನಕ್ಕಾಗಿ ಕೋಲ್ಕತ ಮಹಾನಗರ ಪಾಲಿಕೆಯು 50 ಸಾವಿರ ಪೌಂಡ್ ಸಂಗ್ರಹಿಸಿ ನೀಡಿತು. ಈ ಸ್ಥಳವು ಬಂಗಾಳ ಹಾಗೂ ಭಾರತದ ಇತರೆಡೆಯಿಂದ ಇಂಗ್ಲೆಂಡಿಗೆ ಬರುವ ಪ್ರವಾಸಿಗರಿಗೆ ಮುಖ್ಯ ದಾರ್ಶನಿಕ ಕೇಂದ್ರವಾಗಿದೆ.

2008: ಭಯೋತ್ಪಾದನೆ ಪರಿಣಾಮವಾಗಿ ಕಣಿವೆಯಿಂದ ಗುಳೇ ಹೋಗಿದ್ದ ಕಾಶ್ಮೀರಿ ವಲಸಿಗರು ಆದಷ್ಟೂ ಬೇಗನೆ ಹಿಂತಿರುಗುವಂತಾಗಲು ಕೇಂದ್ರ ಸರ್ಕಾರವು 1600 ಕೋಟಿ ರೂಪಾಯಿಗಳ ಕೊಡುಗೆಯನ್ನು ಪ್ರಕಟಿಸಿತು. ವಾಪಸಾಗುವ ಕಾಶ್ಮೀರಿಗಳಿಗೆ ವಸತಿ ವ್ಯವಸ್ಥೆ, ನೌಕರಿ ಸವಲತ್ತು ಮತ್ತು ಸಾಲದ ಮೇಲಿನ ಬಡ್ಡಿ ಮನ್ನಾ ಕೂಡಾ ಈ ಕೊಡುಗೆಗಳಲ್ಲಿ ಸೇರಿದೆ.

2008: ದಕ್ಷಿಣ ದೆಹಲಿಯ ಲೋಧಿ ರಸ್ತೆಯಲ್ಲಿರುವ ಕೇಂದ್ರೀಯ ತನಿಖಾ ದಳ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್- ಸಿಬಿಐ) ಕಚೇರಿಯಲ್ಲಿ ಈದಿನ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿತು. ಬೆಳಗ್ಗೆ 8.50ರ ಸುಮಾರಿಗೆ ಸಿಜಿಓ ಕಾಂಪ್ಲೆಕ್ಸಿನ ಆರನೇ ಮಹಡಿಯ ಕೊಠಡಿಯೊಂದರಲ್ಲಿ ಈ ಬೆಂಕಿ ಕಾಣಿಸಿಕೊಂಡಿತು. ಬೆಳಗ್ಗೆ 10.05ರ ವೇಳೆಗೆ ಬೆಂಕಿಯನ್ನು ನಿಯಂತ್ರಿಸಲಾಯಿತು.

2008: ಹತ್ತನೇ ದರ್ಜೆಯ ಇಂಗ್ಲಿಷ್ ಬೋರ್ಡ್ ಪರೀಕ್ಷೆಯ ಸುಮಾರು 22,000ಕ್ಕೂ ಹೆಚ್ಚು ಉತ್ತರ ಪತ್ರಿಕೆಗಳು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಮೌಲ್ಯ ಮಾಪನ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಭಸ್ಮವಾದವು.

2007; ಸೌರವ್ಯೂಹದಿಂದ 20 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಒಂದು ಗ್ರಹವನ್ನು ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದು ಅದರಲ್ಲಿ ಜೈವಿಕಾಂಶ ಇರಬಹುದು ಎಂದು ಪ್ರಕಟಿಸಿದರು. ಹೊಸ ಗ್ರಹವು ಭೂಗ್ರಹಕ್ಕಿಂತ ಐದು ಪಟ್ಟು ದೊಡ್ಡದಾಗಿದ್ದು, ಸೌರವ್ಯೂಹಕ್ಕೆ ಸನಿಹದಲ್ಲಿರುವ ಕೆಂಪು ಕುಬ್ಜ ತಾರೆ ಗ್ಲೆಸೆ-581ನ್ನು ಸುತ್ತುತ್ತಿದೆ, ಇದು ತುಲಾ ನಕ್ಷತ್ರ ರಾಶಿಯಲ್ಲಿದೆ ಎಂದು ಹೊಸ ಗ್ರಹವನ್ನು ಪತ್ತೆ ಹಚ್ಚಿದ ಸ್ವಿಜರ್ಲೆಂಡಿನ ಜಿನೀವಾ ಖಗೋಳಾಲಯದ ವಿಜ್ಞಾನಿಗಳಾದ ಸಿಫೈನ್ ಉಡ್ರಿ ಮತ್ತು ಸಹೋದ್ಯೋಗಿಗಳು ಹೇಳಿದರು.

2006: ಡಕಾಯತಿಯಿಂದ ರಾಜಕೀಯಕ್ಕೆ ಸೇರಿದ್ದ ಚಂಬಲ್ ರಾಣಿ ಕುಖ್ಯಾತಿಯ ಫೂಲನ್ ದೇವಿಯನ್ನು ಹತ್ಯೆಗೈದ ಪ್ರಮುಖ ಆರೋಪಿ ಶೇರ್ ಸಿಂಗ್ ರಾಣಾನನ್ನು ದೆಹಲಿ ಪೊಲೀಸರ ತನಿಖಾ ತಂಡವು ದೆಹಲಿಯಲ್ಲಿ ಬಂಧಿಸಿತು. ತಿಹಾರ್ ಸೆರೆಮನೆಯಿಂದ ಪರಾರಿಯಾಗಿ, ಎರಡು ವರ್ಷಗಳ ಬಳಿಕ ಆರೋಪಿ ಸೆರೆ ಸಿಕ್ಕಿದ. ಫೂಲನ್ ದೇವಿಯನ್ನು ದೆಹಲಿಯಲ್ಲಿ ಅವರ ಮನೆ ಎದುರಲ್ಲಿ 2001ರ ಜುಲೈಯಲ್ಲಿ ಹತ್ಯೆ ಮಾಡಲಾಗಿತ್ತು ಹತ್ಯೆಯಾದ ಎರಡೇ ದಿನದಲ್ಲಿ ಶೇರ್ ಸಿಂಗನನ್ನು ಡೆಹರಾಡೂನಿನಲ್ಲಿ ಪೊಲೀಸರು ಬಂದಿಸಿದ್ದರು. 2004ರಲ್ಲಿ ಆತ ತಿಹಾರ್ ಸೆರೆಮನೆಯಿಂದ ಪರಾರಿಯಾಗಿದ್ದ.

2006: ನೇಪಾಳದ ನೂತನ ಪ್ರಧಾನಿ ಸ್ಥಾನಕ್ಕೆ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ , ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ (84) ಅವರನ್ನು ಪ್ರಸ್ತಾಪಿಸಿ ಸಪ್ತಪಕ್ಷ ಮೈತ್ರಿಕೂಟ ನಿರ್ಣಯ ಅಂಗೀಕರಿಸಿತು. 19 ದಿನಗಳ ಪ್ರಜಾಪ್ರಭುತ್ವ ಪರ ಚಳವಳಿಯನ್ನೂ ಹಿಂತೆಗೆದುಕೊಂಡ ಮೈತ್ರಿಕೂಟ, ಸಂಸತ್ತಿಗೆ ಮರುಜೀವ ನೀಡುವುದಾಗಿ ದೊರೆ ಜ್ಞಾನೇಂದ್ರ ಅವರು ನೀಡಿದ ಆಹ್ವಾನಕ್ಕೆ ಒಪ್ಪಿ ಸರ್ಕಾರ ರಚನೆಗೆ ಮುಂದಾಯಿತು.

2006: ಗರ್ಭಿಣಿಯ ಪೋಷಾಕಿನಲ್ಲಿ ಶ್ರೀಲಂಕಾ ಸೇನೆಯ ಕೊಲಂಬೊ ಕೇಂದ್ರ ಕಚೇರಿ ಆವರಣದೊಳಕ್ಕೆ ಪ್ರವೇಶಿಸಿದ ಎಲ್ ಟಿಟಿಇ ಸಂಘಟನೆಯ ಮಹಿಳಾ ಮಾನವ ಬಾಂಬ್ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹತ್ತು ಮಂದಿ ಸೈನಿಕರು ಮೃತರಾಗಿ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಶರತ್ ಫಾನ್ಸೆಕಾ ತೀವ್ರವಾಗಿ ಗಾಯಗೊಂಡರು.

2006: ಲಾಭದ ಹುದ್ದೆ ಹೊಂದಿರುವ ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ, ಪಂಜಾಬ್, ಮಧ್ಯಪ್ರದೇಶ, ಒರಿಸ್ಸಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಛತ್ತೀಸ್ ಗಢ ಈ 6 ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಪ್ರಣವ್ ಮುಖರ್ಜಿ, ಶರದ್ ಪವಾರ್ ಮತ್ತು ಮೀರಾಕುಮಾರ್ ಸೇರಿದಂತೆ ಒಟ್ಟು 43 ಲೋಕಸಭೆ ಸದಸ್ಯರು ಮತ್ತು 200ಕ್ಕೂ ಹೆಚ್ಚು ಶಾಸಕರ ಹೆಸರನ್ನು ಚುನಾವಣಾ ಆಯೋಗವು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿತು.

2006: ಬಸವ ವೇದಿಕೆಯು ಪ್ರತಿವರ್ಷ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಈ ವರ್ಷ ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ವಿ.ಎಸ್. ಮಳಿಮಠ ಆಯ್ಕೆಯಾದರು. ವಚನ ಸಾಹಿತ್ಯ ಶ್ರೀ ಪ್ರಶಸ್ತಿಗೆ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಅಜಯಕುಮಾರ್ ಸಿಂಗ್ ಆಯ್ಕೆಯಾದರು.

2006: ಶ್ರೀಶ್ರೀ ರವಿಶಂಕರ ಗುರೂಜಿ ಅವರಿಗೆ ತೈವಾನ್ ಸಾಂಸ್ಕತಿಕ ಮತ್ತು ಮಾನವ ಜೀವನ ಶಿಕ್ಷಣ ಸಂಸ್ಥೆಯು ಫರ್ವೆಂಟ್ ಗ್ಲೋಬಲ್ ಲವ್ ಆಫ್ ಲೈಫ್-2006 ಪ್ರಶಸ್ತಿಯನ್ನು ನೀಡಿತು.

2005: ಜಪಾನಿನ ಆಮ್ ಅಗಾಸಾಕಿ ನಿಲ್ದಾಣದ ಬಳಿ ಪ್ರಯಾಣಿಕ ರೈಲು ದುರಂತದಲ್ಲಿ 107 ಜನರ ಸಾವು.

1982: ಸತ್ಯಜಿತ್ ರೇ ಅವರ `ಶತ್ ರಂಜ್ ಕಿ ಖಿಲಾಡಿ' ಸಿನಿಮಾ ಪ್ರಸಾರದೊಂದಿಗೆ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ವರ್ಣರಂಜಿತ ರಾಷ್ಟ್ರೀಯ ಪ್ರಸಾರ ಆರಂಭವಾಯಿತು.

1973: ಕಲಾವಿದ ರಮೇಶ ಕುಲಕರ್ಣಿ ಜನನ.

1968: ಭಾರತದ ಶಾಸ್ತ್ರೀಯ ಸಂಗೀತಗಾರ ಬಡೇ ಗುಲಾಂ ಅಲಿ ಅವರು ತಮ್ಮ 66ನೇ ವಯಸ್ಸಿನಲ್ಲಿ ಮೃತರಾದರು. ಪಾಟಿಯಾಲ ಘರಾಣಾ ಮತ್ತು ಖಯಾಲ್ ಹಾಡುಗಾರಿಕೆಯನ್ನು ಜನಪ್ರಿಯಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

1945: ವಿಶ್ವಸಂಸ್ಥೆಯ ಸಂಘಟನೆಗಾಗಿ ಸುಮಾರು 50 ರಾಷ್ಟ್ರಗಳ ಪ್ರತಿನಿಧಿಗಳು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಭೆ ಸೇರಿದರು.

1926: ಕಲಾವಿದ ಅಂಬಳೆ ಸುಬ್ಬರಾವ್ ಜನನ.

1924: ಕಲಾವಿದ ಎಸ್. ರಾಘವೇಂದ್ರರಾವ್ ಕದಿರೆ ಜನನ.

1922: ಕಲಾವಿದ ಎಂ.ಆರ್. ದೊರೆಸ್ವಾಮಿ ಜನನ.

1916: ಗಮಕ ಗಂಧರ್ವರೆನಿಸಿದ್ದ ಬಿ. ಎಸ್. ಎಸ್. ಕೌಶಿಕ್ ಅವರು ಸುಬ್ಬಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಕೃಷ್ಣರಾಜಪೇಟೆ ತಾಲ್ಲೂಕು ಹೇಮಗಿರಿ ಕುಪ್ಪಹಳ್ಳಿಯಲ್ಲಿ ಜನಿಸಿದರು.

1859: ಸುಯೆಜ್ ಕಾಲುವೆಗಾಗಿ ಅದರ ಯೋಜಕ ಫರ್ಡಿನಾಂಡ್ ಡಿ ಲೆಸ್ಸೆಪ್ಸ್ ಮಾರ್ಗದರ್ಶನದಲ್ಲಿ ನೆಲ ಅಗೆಯಲು ಆರಂಭಿಸಲಾಯಿತು. ಸರಿಯಾಗಿ 100 ವರ್ಷಗಳ ಬಳಿಕ 1959ರಲ್ಲಿ ಅಟ್ಲಾಂಟಿಕ್ ಸಾಗರಕ್ಕೆ ಗ್ರೇಟ್ ಲೇಕ್ಸ್ ನ್ನು ಸಂಪರ್ಕಿಸುವ ಸೇಂಟ್ ಲಾರೆನ್ಸ್ ಸಮುದ್ರಮಾರ್ಗವನ್ನು (ಸೀವೇ) ರಾಣಿ ಎರಡನೇ ಎಲಿಜಬೆತ್ ಹಾಗೂ ಅಧ್ಯಕ್ಷ ಐಸೆನ್ ಹೊವರ್ ಜಂಟಿಯಾಗಿ ಉದ್ಘಾಟಿಸಿದರು.

No comments:

Post a Comment