ನಾನು ಮೆಚ್ಚಿದ ವಾಟ್ಸಪ್

Saturday, April 28, 2018

ಇಂದಿನ ಇತಿಹಾಸ History Today ಏಪ್ರಿಲ್ 27

ಇಂದಿನ ಇತಿಹಾಸ History Today ಏಪ್ರಿಲ್ 27
2018: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪಯಣಿಸುತ್ತಿದ್ದ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲ ಇಳಿಯುವ ಮುನ್ನ ಅಡಚಣೆ ಎದುರಿಸಿದ ಘಟನೆಯ ಬಳಿಕ  ಚೀನಾಕ್ಕೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಅವರ ಸುರಕ್ಷತೆ ಬಗ್ಗೆ ವಿಚಾರಿಸಿದ ವಿಚಾರ ಬೆಳಕಿಗೆ ಬಂದಿತು. ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಮೋದಿ ಅವರಿಂದ ಮಧ್ಯಾಹ್ನ ೨.೩೦ರ ಸುಮಾರಿಗೆ ದೂರವಾಣಿ ಕರೆ ಬಂದಿತ್ತು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದವು. ಮೇ ೧೨ರ ವಿಧಾನಸಭಾ ಚುನಾವಣೆ ಸಲುವಾಗಿ ಪಕ್ಷದ ಪರ ಪ್ರಚಾರಕ್ಕಾಗಿ ಎರಡು ದಿನಗಳ ಭೇಟಿಗಾಗಿ ಕಾಂಗ್ರೆಸ್ ಮುಖ್ಯಸ್ಥ ಕರ್ನಾಟಕಕ್ಕೆ ತೆರಳಿದ್ದರು.  ‘ಅದು ಇಬ್ಬರ ನಡುವಣ ಖಾಸಗಿ ಸಂಭಾಷಣೆಯಾಗಿತ್ತು (ದೂರವಾಣಿಯಲ್ಲಿ). ವಿಮಾನದಲ್ಲಿ ಅಡಚಣೆ ಉಂಟಾದ ಬಗ್ಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ತಿಳಿಸಲಾಗಿತ್ತು. ಆ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಅವರ ಸುರಕ್ಷತೆ ಬಗ್ಗೆ ವಿಚಾರಿಸಿದರು ಎಂದು ಮೂಲವೊಂದು ತಿಳಿಸಿತು. ಗಡ ಗಡ ನಡುಗಿ, ಎಡಕ್ಕೆ ವಾಲಿತು: ರಾಷ್ಟ್ರದ ರಾಜಧಾನಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ವಿಮಾನದಲ್ಲಿ ರಾಹುಲ್ ಗಾಂಧಿ ಅವರಲ್ಲದೆ ಇತರರೂ ಇದ್ದರು. ಹುಬ್ಬಳ್ಳಿಯಲ್ಲಿ ಇಳಿಯುವ ಮುನ್ನ ಬೆಳಗ್ಗೆ ೧೦.೪೫ರ ವೇಳೆಗೆ ವಿಮಾನದಲ್ಲಿ ತಾಂತ್ರಿಕ ಅಡಚಣೆ ಕಾಣಿಸಿಕೊಂಡು ವಿಮಾನ ಓಲಾಡಿ, ತೀವ್ರವಾಗಿ ನಡುಗುತ್ತಾ ಎಡ ಬದಿಗೆ ವಾಲಿತು. ಮತ್ತು ವೇಗವಾಗಿ ಕೆಳಗಿಳಿಯತೊಡಗಿತು ಎಂದು ಗಾಂಧಿ ಅವರ ನಿಕಟವರ್ತಿ ಕೌಶಲ್ ವಿದ್ಯಾರ್ಥೀ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ನೀಲಮಣಿ ಎನ್. ರಾಜು  ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದರು.  ವಿದ್ಯಾರ್ಥೀ ಅವರೂ ರಾಹುಲ್ ಗಾಂಧಿ ಅವರ ಜೊತೆ ವಿಮಾನದಲ್ಲಿ ಪಯಣಿಸುತ್ತಿದ್ದರು.  ಬೆಳಗ್ಗೆ ೧೧.೨೫ ಗಂಟೆಗೆ ವಿಮಾನ ಹುಬ್ಬಳ್ಳಿಯಲ್ಲಿ ಮೂರನೇ ಪ್ರಯತ್ನದಲ್ಲಿ ಇಳಿಯಿತು. ಪ್ರಯಾಣಿಕರ ಪ್ರಕಾರ ಹವಾಮಾನ ಮಾಮೂಲಿಯಾಗಿದ್ದು, ಗಾಳಿಯೂ ಇರಲಿಲ್ಲ ಎಂದು ಪತ್ರ ತಿಳಿಸಿತು. ವಿದ್ಯಾರ್ಥೀ ಅವರು ಬಳಿಕ ’ಕಾಂಗ್ರೆಸ್ ಮುಖ್ಯಸ್ಥರು ತಮ್ಮ ಶಾಂತತೆಯನ್ನು ಕಾಯ್ದುಕೊಂಡಿದ್ದರು. ಇತರ ಪ್ರಯಾಣಿಕರನ್ನೂ ಶಾಂತರಾಗಿ ಇರಿಸಲು ಅವರು ಯತ್ನಿಸಿದರು ಎಂದು ಟ್ವೀಟ್ ಮಾಡಿದರು.  ‘ಕೊಠಡಿಯೊಂದರಲ್ಲಿ ಕುಳಿತು ವಿಶ್ರಾಂತಿ ಪಡೆಯಲು ಹರ್ಷವಾಗುತ್ತಿದೆ. ಜೀವಂತವಾಗಿರುವುದಕ್ಕಾಗಿ ಧನ್ಯವಾದಗಳು. ನನ್ನ ಜೀವಮಾನದಲ್ಲೇ ಇಂತಹ ಭಯಾನಕ ಅನುಭವ ಆಗಿರಲಿಲ್ಲ. ವಿಮಾನ ಪತನದತ್ತ ಸಾಗಿತ್ತು. ಕಾಂಗ್ರೆಸ್ ಅಧ್ಯಕ್ಷರ ತಾಳ್ಮೆ ಮತ್ತು ಶಾಂತತೆಯನ್ನು ನಂಬಲಾಗುತ್ತಿಲ್ಲ. ಪೈಲಟ್ ಗಳು ಪರಿಸ್ಥಿತಿಯನ್ನು ನಿಭಾಯಿಸಲು ಯತ್ನಿಸುತ್ತಿದ್ದಾಗ ಅವರು ಪೈಲಟ್ ಗಳ ಬಳಿಯೇ ನಿಂತುಕೊಂಡಿದ್ದರು ಎಂದು ವಿದ್ಯಾರ್ಥೀ ಟ್ವೀಟಿನಲ್ಲಿ ತಿಳಿಸಿದರು. ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಷಯವನ್ನು ಪರಿಶೀಲಿಸುತ್ತಿದ್ದು, ರಾಜ್ಯ ಪೊಲೀಸರು ದೂರು ದಾಖಲಿಸಿಕೊಂಡರು. ತನಿಖೆಗೆ ಕಾಂಗ್ರೆಸ್ ಆಗ್ರಹ: ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿತು. ಕಾಂಗ್ರೆಸ್ ಪಕ್ಷದ ಸಂಪರ್ಕ ಹೊಣೆಗಾರಿಕೆ ನೋಡಿಕೊಳ್ಳುತ್ತಿರುವ ರಣ್‌ದೀಪ್ ಸುರ್ಜಿವಾಲ ಅವರು ’ವಿಮಾನದಲ್ಲಿನ ಆಟೋ ಪೈಲಟ್ ಮೋಡ್ ವೈಫಲ್ಯವನ್ನು ’ಭಯಾನಕ ಮತ್ತು ’ಗಂಭೀರ ಎಂಬುದಾಗಿ ಬಣ್ಣಿಸಿ, ಇದರಲ್ಲಿ ಏನಾದರೂ ’ದುಷ್ಕೃತ್ಯ ಇತ್ತೇ ಎಂಬ ಬಗ್ಗೆ ಪತ್ತೆ ಹಚ್ಚಲು ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

2018: ನವದೆಹಲಿ: ಚೆನ್ನೈಯಲ್ಲಿ ಚಲಿಸುತ್ತಿದ್ದ ರೈಲುಗಾಡಿಯಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ಯತ್ನಿಸುತ್ತಿದ್ದ ದುರುಳನ ಕಪಿಮುಷ್ಠಿಯಿಂದ ಮಹಿಳೆಯೊಬ್ಬರನ್ನು ರಕ್ಷಿಸಿದ ರೈಲ್ವೇ ಸುರಕ್ಷತಾ ಪಡೆಯ (ಆರ್ ಪಿಎಫ್) ಕಾನ್ ಸ್ಟೇಬಲ್ ಒಬ್ಬರಿಗೆ ಕೇಂದ್ರ ರೈಲ್ವೇ ಸಚಿವ ಪೀಯೂಶ್ ಗೋಯಲ್ ಅವರು ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನ ಮತ್ತು ಶೌರ್ಯ  ಪದಕವನ್ನು ಮಂಜೂರು ಮಾಡಿದರು.  ಆರ್ ಪಿಎಫ್ ಯೋಧ ಕೆ. ಶಿವಾಜಿ ಅವರು ಏಪ್ರಿಲ್ ೨೩ರಂದು ರೈಲಿನಲ್ಲಿ ರಾತ್ರಿ ಪಹರೆಯ ಹೊಣೆಗಾರಿಕೆಯನ್ನು ಇತರ ಇಬ್ಬರು ಸಹೋದ್ಯೋಗಿಗಳ ಜೊತೆಗೆ ನಿರ್ವಹಿಸುತ್ತಿದ್ದರು. ಆಗ ಪಕ್ಕದ ಬೋಗಿಯಲ್ಲಿ ಸಹಾಯಕ್ಕಾಗಿ ಯಾರೋ ಕೂಗುತ್ತಿರುವುದನ್ನು ಆಲಿಸಿದರು.  ರೈಲುಗಾಡಿ ನಿಧಾನವಾಗುತ್ತಿದ್ದಂತೆಯೇ ಶಿವಾಜಿ ಅವರು ತಮ್ಮ ಬೋಗಿಯಿಂದ ಹೊರಕ್ಕೆ ಜಿಗಿದು, ಪಕ್ಕದ ಬೋಗಿಯನ್ನು ಪ್ರವೇಶಿಸಿದರು. ಅಲ್ಲಿ ವ್ಯಕ್ತಿಯೊಬ್ಬ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸುತ್ತಿದ್ದುದು ಕಂಡಿತು. ಕಾನ್‌ಸ್ಟೇಬಲ್ ತತ್ ಕ್ಷಣವೇ ಆ ವ್ಯಕ್ತಿಯನ್ನು ನಿರಾಯುಧನನ್ನಾಗಿ ಮಾಡಿ, ಪ್ರಜ್ಞಾಹೀನಳಾಗಿದ್ದ ಮಹಿಳೆಯನ್ನು ರಕ್ಷಿಸಿದರು. ಆಕೆಯ ತುಟಿಗಳಲ್ಲಿ ರಕ್ತ ಒಸರುತ್ತಿದ್ದರೆ, ಬಟ್ಟೆಗಳು ಹರಿದಿದ್ದವು ಎಂದು ದಕ್ಷಿಣ ರೈಲ್ವೇಯು ಸಚಿವಾಲಯಕ್ಕೆ ಕಳುಹಿಸಿದ ಸಂದೇಶವು ತಿಳಿಸಿತು. ೨೦೧೮ನೇ ವರ್ಷವನ್ನು ’ಮಹಿಳಾ ಸುರಕ್ಷತಾ ವರ್ಷ ಎಂಬುದಾಗಿ ಘೋಷಿಸಿರುವ ಸಚಿವ ಗೋಯಲ್ ಅವರು ’ಮಹಿಳೆಯ ಸುರಕ್ಷತೆಯ ರೈಲ್ವೇ ಬದ್ಧತೆಯನ್ನು ಸಾರುವ ಸಲುವಾಗಿ ಧೈರ್‍ಯಶಾಲಿ ಕಾನ್‌ಸ್ಟೇಬಲ್ ತತ್ ಕ್ಷಣವೇ ಪ್ರಶಸ್ತಿಯನ್ನು ಅನುಮೋದಿಸಿದರು.  ‘ತನ್ನ ಸ್ವಂತ ಸುರಕ್ಷತೆಯನ್ನೂ ಕೂಡಾ ಲೆಕ್ಕಿಸದೆ ಹಲ್ಲೆಕೋರನನ್ನು ಏಕಾಂಗಿಯಾಗಿ ಎದುರಿಸಿದ್ದೇ ಮಹಿಳಾ ಸುರಕ್ಷತೆ ಬಗೆಗಿನ  ಬದ್ಧತೆ ಮತ್ತು ಸಮರ್ಪಣಾ ಭಾವವನ್ನು ತೋರಿಸುತ್ತದೆ. ತನ್ಮೂಲಕ ಕಾನ್ ಸ್ಟೇಬಲ್ ಇತರರಿಗೆ ಮಾದರಿಯಾಗುವುದರ ಜೊತೆಗೆ ರೈಲ್ವೇ ಮತ್ತು ರೈಲ್ವೇ ಸುರಕ್ಷತಾ ಪಡೆಯ ವರ್ಚಸ್ಸನ್ನು ಹೆಚ್ಚಿಸಿದ್ದಾರೆ ಎಂದು ಸಚಿವರು ನುಡಿದರು.   ‘ದಕ್ಷಿಣ ರೈಲ್ವೇಯ ಕೆ. ಶಿವಾಜಿ ಅವರು ತಮ್ಮ ಪ್ರಾಣಾಪಾಯವನ್ನೂ ಲೆಕ್ಕಿಸದೆ ಮಹಿಳೆಯೊಬ್ಬರನ್ನು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಕ್ರಿಮಿನಲ್ ಒಬ್ಬನ ಕಪಿಮುಷ್ಠಿಯಿಂದ ರಕ್ಷಿಸಿ, ಆಕೆಯ ಜೀವವನ್ನು ಉಳಿಸಿದ್ದಾರೆ. ಇದನ್ನು ವಿಶೇಷ ಪ್ರಕರಣವಾಗಿ ಗಮನಿಸಿ, ಅವರನ್ನು ರೈಲ್ವೇ ಸಚಿವಾಲಯ ಶೌರ್ಯ ಪ್ರಶಸ್ತಿಗೆ ಪರಿಗಣಿಸಬಹುದು ಎಂದು ಇಲಾಖೆಯು ಸಚಿವರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿತ್ತು.  ರೈಲ್ವೇ ಶೌರ್ಯ ಪ್ರಶಸ್ತಿಯು ೧ ಲಕ್ಷ ರೂಪಾಯಿಗಳ ನಗದು ಗೌರವಧನವನ್ನು ಹೊಂದಿದೆ.

2018: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ಮೇ ೭ರವರೆಗೆ ತಡೆಯಾಜ್ಞೆ ನೀಡಿತು.  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಇಂದು ಮಲ್ಹೋತ್ಹ ಅವರ ಪೀಠವು ತಾನು ಕೃತ್ಯಕ್ಕೆ ಬಲಿಯಾದ ಬಾಲಕಿಯ ತಂದೆ ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾಯಿಸಬೇಕು ಎಂಬುದಾಗಿ ಮಾಡಿರುವ ಮನವಿ ಮತ್ತು ಆರೋಪಿಗಳು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂಬುದಾಗಿ ಮಾಡಿರುವ ಮನವಿಯನ್ನು ಪರಿಶೀಲಿಸುವುದಾಗಿ ಹೇಳಿತು.  ಅಲ್ಪಸಂಖ್ಯಾತ ಅಲೆಮಾರಿ ಸಮುದಾಯದ ಬಾಲಕಿ ಜನವರಿ ೧೦ರಂದು ಜಮ್ಮು ಪ್ರದೇಶದ ಕಥುವಾ ಸಮೀಪದ ತನ್ನ ಗ್ರಾಮದ ಮನೆಯಿಂದ ಕಣ್ಮರೆಯಾಗಿದ್ದಳು.  ಆಕೆಯ ಶವ ಒಂದು ವಾರದ ಬಳಿಕ ಅದೇ ಪ್ರದೇಶದಲ್ಲಿ ಪತ್ತೆಯಾಗಿತ್ತು.  ವಿಚಾರಣೆ ಕಾಲದಲ್ಲಿ ಕೃತ್ಯಕ್ಕೆ ಬಲಿಯಾದ ಮಗುವಿನ ಕುಟುಂಬದ ಪರ ಹಾಜರಾದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಮತ್ತು ಆರೋಪಿಗಳ ಪರವಾಗಿ ಹಾಜರಾದ ವಕೀಲ ಹರ್‍ವಿಂದರ್ ಚೌಧರಿ ಅವರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.  ನ್ಯಾಯಾಲಯ ಕಥುವಾಕ್ಕೆ ಸಮೀಪದಲ್ಲಿ ಇರುವುದರಿಂದ ಮತ್ತು ಸ್ಥಳೀಯ ನ್ಯಾಯಾಲಯದ ವಕೀಲರಿಂದ ಪೊಲೀಸ್ ಸಿಬ್ಬಂದಿಗೆ ಅಡೆತಡೆಗಳು ಉಂಟಾಗುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ಚಂಡೀಗಢಕ್ಕೆ ವರ್ಗಾಯಿಸಬೇಕು ಎಂದು ಜೈಸಿಂಗ್ ವಾದಿಸಿದರು.  ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ಮತ್ತು ಅಪರಾಧ ಶಾಖೆಯ ಅಧಿಕಾರಿಗಳನ್ನು ಬೆದರಿಸುವ ಪ್ರಯತ್ನಗಳು ನಡೆದಿರುವುದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಅಫಿಡವಿಟ್‌ನಿಂದ ಖಚಿತವಾಗಿದೆ ಎಂದು ಅವರು ನುಡಿದರು.  ತಮ್ಮ ಕಕ್ಷಿದಾರರಿಗೆ ಪೊಲೀಸ್ ತನಿಖೆಯಲ್ಲಿ ವಿಶ್ವಾಸವಿಲ್ಲ ಎಂದು ಹೇಳಿದ ಚೌಧರಿ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಹೇಳಿದರು.  ಪೊಲೀಸರು ಪಟ್ಟಭದ್ರ ಹಿತಾಸಕ್ತಿಗಳ ಜೊತೆಗೆ ಶಾಮೀಲಾಗಿದ್ದಾರೆ ಮತ್ತು ನೈಜ ಅಪರಾಧಿಗಳು ಬೇರೆಯವರಾಗಿದ್ದರೂ ಅವರನ್ನು ಬಿಟ್ಟು ಆರೋಪಿಗಳನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದಾರೆ ಎಂದು ಚೌಧರಿ ವಾದಿಸಿದರು.  ಅಡ್ವೋಕೇಟ್ ಜನರಲ್ ಜಹಾಂಗೀರ್ ಇಕ್ಬಾಲ್ ಗನೈ ಮತ್ತು ಜಮ್ಮು ಮತ್ತು ಕಾಶ್ಮೀರದ ಪರವಾಗಿ ಹಾಜರಾದ ವಕೀಲ ಶೋಯೆಲ್ ಆಲಂ ಅವರು ಸಿಬಿಐ ತನಿಖೆಯ ಕೋರಿಕೆಯನ್ನು ವಿರೋಧಿಸಿದರು. ಅಪರಾಧ ಶಾಖೆಯ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.  ೨೦೦ಕ್ಕೂ ಹೆಚ್ಚು ಸಾಕ್ಷಿಗಳು: ವಿಚಾರಣೆಯನ್ನು ಕಥುವಾದಿಂದ ರಾಜ್ಯದೊಳಗಿನ ಬೇರೆ ಯಾವುದಾದರೂ ಜಿಲ್ಲೆಗೆ ವರ್ಗಾಯಿಸಬಹುದು. ಏಕೆಂದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ೨೨೧ ಸಾಕ್ಷಿಗಳಿದ್ದು ಬಹುತೇಕ ಹೇಳಿಕೆಗಳು ಉರ್ದು ಭಾಷೆಯಲ್ಲಿ ದಾಖಲಾಗಿವೆ ಎಂದು ಗನೈ ನುಡಿದರು.  ಜಮ್ಮು ಮತ್ತು ಕಾಶ್ಮೀರವು ತನ್ನದೇ ಆದ ದಂಡನಾ ಕಾನೂನನ್ನು ಹೊಂದಿದೆ. ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾಯಿಸಿದರೆ, ಅದು ಹಲವಾರು ಸಮಸ್ಯೆಗಳನ್ನು ಹುಟ್ಟು ಹಾಕಬಹುದು ಎಂದು ಆಲಂ ಹೇಳಿದರು.  ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಡಿಷನಲ್ ಸಾಲಿಸಿಟರ್ ಜನರಲ್ ಮಣೀಂದರ್ ಸಿಂಗ್ ಅವರು ಸರ್ಕಾರವು ಯಾವುದೇ ಅಗತ್ಯ ನೆರವು ಒದಗಿಸಲು ಸಿದ್ಧ. ಆದರೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅದನ್ನು ನಿರ್ಧರಿಸಬೇಕು ಎಂದು ನುಡಿದರು.  ಪ್ರಾಮಾಣಿಕ ತನಿಖೆಯ ಅಭಾವದ ಸಣ್ಣ ಸಾಧ್ಯತೆ ಕಂಡುಬಂದರೂ ತಾನು ಪ್ರಕರಣವನ್ನು ಸ್ಥಳೀಯ ನ್ಯಾಯಾಲಯದಿಂದ ಬೇರೆ ಕಡೆಗೆ ವರ್ಗಾಯಿಸುವುದಾಗಿ ಸುಪ್ರೀಂಕೋರ್ಟ್ ಗುರುವಾರ ಹೇಳಿತ್ತು. ಸಮರ್ಪಕರ ಕಾನೂನು ಕ್ರಮ ಜರುಗಿಸುವ ಬಗ್ಗೆ ನಿಜವಾದ ಕಾಳಜಿ ಬೇಕು ಎಂದು ಅದು ತಿಳಿಸಿತ್ತು.  ಕುಟುಂಬ ಒಬ್ಬ ಗೆಳೆಯ ಮತ್ತು ಅವರ ವಕೀಲ ದೀಪಿಕಾ ಸಿಂಗ್ ರಜಾವತ್ ಅವರಿಗೆ ಬೆದರಿಕೆ ಇದೆ ಎಂದು ಎಂಟರ ಹರೆಯದ ಮಗುವಿನ ತಂದೆ ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿದ್ದರು.  ಇಬ್ಬರು ಆರೋಪಿಗಳು ಕೂಡಾ ವಿಚಾರಣೆ ಜಮ್ಮುವಿನಲ್ಲೇ ನಡೆಯಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಪ್ರತ್ಯೇಕ ಮನವಿ ಸಲ್ಲಿಸಿದ್ದರು. ಅಪರಾಧ ಶಾಖೆಯು ೭ ಮಂದಿಯ ವಿರುದ್ಧ ಮುಖ್ಯ ದೋಷಾರೋಪ ಪಟ್ಟಿ ಮತ್ತು ಅಪ್ರಾಪ್ತ ವಯಸ್ಕನೊಬ್ಬನ ವಿರುದ್ಧ ಪ್ರತ್ಯೇಕ ದೋಷಾರೋಪ ಪಟ್ಟಿಯನ್ನು ಕಳೆದ ವಾರ ಕಥುವಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು.  ಬಾಲಕಿಯನ್ನ ಹೇಗೆ ಅಪಹರಿಸಲಾಯಿತು, ಮಾದಕ ಔಷಧ ಕೊಡಲಾಯಿತು ಮತ್ತು ಕೊಲ್ಲುವ ಮುನ್ನ ಪೂಜಾಸ್ಥಳದ ಒಳಗೆ ಹೇಗೆ ಅತ್ಯಾಚಾರ ಎಸಗಲಾಯಿತು ಎಂಬ ವಿವರಗಳನ್ನು ನೀಡಿತ್ತು.

2018: ನವದೆಹಲಿ: ಹಿರಿಯ ವಕೀಲರಾದ ಇಂದು ಮಲ್ಹೋತ್ರ ಅವರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.  ಮಲ್ಹೋತ್ರ್ರ ಅವರ ನೇಮಕಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿತ್ತು.  ಇಂದು ಮಲ್ಹೋತ್ರ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಿತ್ತು.  ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನೇರವಾಗಿ ನೇಮಕವಾಗಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದು ಮಲ್ಹೋತ್ರ ಪಾತ್ರರಾಗಿದ್ದಾರೆ.  ಪ್ರಸ್ತುತ ಉತ್ತರಾಖಂಡ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿರುವ ಕೆ.ಎಂ. ಜೋಸೆಫ್ ಮತ್ತು ಹಿರಿಯ ವಕೀಲರಾದ ಇಂದು ಮಲ್ಹೋತ್ರ ಅವರ ಹೆಸರನ್ನು ಸುಪ್ರೀಂಕೋರ್ಟ್ ಕೊಲಿಜಿಯಂ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ  ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಆದರೆ, ಮಲ್ಹೋತ್ರ್ರ ಅವರ ಹೆಸರನ್ನು ಮಾತ್ರ ಕೇಂದ್ರ ಸರ್ಕಾರ ಅನುಮೋದಿಸಿತ್ತು.  ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳ ಪೈಕಿ ಮಲ್ಹೋತ್ರ ಅವರ ಹೆಸರನ್ನು ಅನುಮೋದಿಸಿ, ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ಹೆಸರನ್ನು ಮರುಪರಿಶೀಲಿಸುವಂತೆ ಕಳುಹಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠ ಹೇಳಿತ್ತು.

2018: ವುಹಾನ್ (ಚೀನೀ ನಗರ): ಭಾರತ ಮತ್ತು ಚೀನಾದ ಬಾಂಧವ್ಯ ಶತಮಾನಗಳಷ್ಟು ಹಳೆಯದು.
ಉಭಯ ರಾಷ್ಟ್ರಗಳಿಗೆ ತಮ್ಮ ದೇಶದ ಜನರು ಮತ್ತು ವಿಶ್ವಕ್ಕಾಗಿ ಒಟ್ಟಾಗಿ ದುಡಿಯುವ ’ದೊಡ್ಡ ಅವಕಾಶ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರಿಗೆ ಹೇಳಿದರು.  ಕೇಂದ್ರ ಚೀನೀ ನಗರ ವುಹಾನ್ ನಲ್ಲಿ ಅಭೂತಪೂರ್ವ ಅನೌಪಚಾರಿಕ ಶೃಂಗ ಸಭೆಯಲ್ಲಿ ಕ್ಷಿ ಅವರ ಜೊತೆಗೆ ನಿಯೋಗ ಮಟ್ಟದ ಮಾತುಕತೆಗಳಲ್ಲಿ ಪಾಲ್ಗೊಂಡ ಮೋದಿ ’ಇಂತಹ ಅನೌಪಚಾರಿಕ ಶೃಂಗಸಭೆಗಳು ಉಭಯ ರಾಷ್ಟ್ರಗಳ ಮಧ್ಯೆ ಪರಂಪರೆಯಾಗಬೇಕು ಎಂದು ನುಡಿದರು.  ೨೦೧೯ರಲ್ಲಿ ಭಾರತದಲ್ಲಿ ನಾವು ಇಂತಹ ಅನೌಪಚಾರಿಕ ಶೃಂಗಸಭೆಯನ್ನು ಏರ್ಪಡಿಸಲು ಸಾಧ್ಯವಾದರೆ ನನಗೆ ಅತ್ಯಂತ ಖುಷಿಯಾಗುತ್ತದೆ ಎಂದು ಕ್ಷಿ ಅವರಿಗೆ ಮೋದಿ ತಿಳಿಸಿದರು.  ವಿಶ್ವದ ಜನಸಂಖ್ಯೆಯ ಶೇಕಡಾ ೪೦ರಷ್ಟು ಜನರಿಗಾಗಿ ಕೆಲಸ ಮಾಡುವ ಹೊಣೆಗಾರಿಕೆ ಭಾರತ ಮತ್ತು ಚೀನಾದ ಮೇಲಿದೆ ಎಂದು ಮೋದಿ ನುಡಿದರು. ೨೦೦೦ ವರ್ಷಗಳ ಇತಿಹಾಸದಲ್ಲಿ ಭಾರತ ಮತ್ತು ಚೀನಾ ಒಟ್ಟಾಗಿ ಜಾಗತಿಕ ಆರ್ಥಿಕತೆಗೆ ಸ್ಮರಣೀಯ ಬಲವನ್ನು ನೀಡಿವೆ. ೧೬೦೦ ವರ್ಷಗ ಕಾಲ ಜಾಗತಿಕ ಆರ್ಥಿಕತೆಯಲ್ಲಿ ಉಭಯ ರಾಷ್ಟ್ರಗಳು ಪ್ರಾಬಲ್ಯ ಮೆರೆದಿವೆ. ವಿಶ್ವ ಆರ್ಥಿಕತೆಯ ಶೇಕಡಾ ೫೦ರಷ್ಟನ್ನು ಭಾರತ ಮತ್ತು ಚೀನ ಹೊಂದಿದ್ದರೆ, ೧೬೦೦ ವರ್ಷಗಳಲ್ಲಿ ಉಳಿದ ರಾಷ್ಟ್ರಗಳ ಪಾಲು ಶೇಕಡಾ ೫೦ರಷ್ಟು ಮಾತ್ರ ಎಂದು ಪ್ರಧಾನಿ ನುಡಿದರು. ರಾಜಧಾನಿಯಿಂದ ಹೊರಗೆ ತಮ್ಮನ್ನು ಕ್ಷಿ ಅವರು ಸ್ವಾಗತಿಸಿದ್ದಕ್ಕಾಗಿ ಭಾರತದ ಜನತೆ ಹೆಮ್ಮೆ ಪಡುತ್ತಾರೆ. ರಾಜಧಾನಿ ಬೀಜಿಂಗ್‌ನಿಂದ ಹೊರಗೆ ಸ್ವಾಗತಿಸಲ್ಪಟ್ಟ ಭಾರತದ ಪ್ರಪ್ರಥಮ ಪ್ರಧಾನಿ ಬಹುಶಃ ನಾನು ಎಂದು ಮೋದಿ ಅವರು ಕ್ಷಿ ಅವರ ಹುಟ್ಟೂರು ಕ್ಷಿಯಾನ್ ಗೆ ೨೦೧೫ರಲ್ಲಿ ತಾವು ಭೇಟಿ ನೀಡಿದ್ದನ್ನು ಉಲ್ಲೇಖಿಸುತ್ತಾ ಹೇಳಿದರು.  ಮೋದಿ ಮಾತಿಗೆ ಉತ್ತರ ನೀಡಿದ ಕ್ಷಿ ಅವರು ’ಇತ್ತೀಚಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳು ನಿಕಟ ಪಾಲುದಾರಿಕೆಯನ್ನು ಸ್ಥಾಪಿಸಿದ್ದು ಧನಾತ್ಮಕ ಪ್ರಗತಿ ಸಾಧಿಸಿವೆ ಎಂದು ನುಡಿದರು.  ಕಳೆದ ಐದು ವರ್ಷಗಳಲ್ಲಿ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ನಾವು ಹಲವಾರು ಸಂದರ್ಭಗಳಲ್ಲಿ ಪರಸ್ಪರ ಭೇಟಿ ಮಾಡಿದ್ದೇವೆ. ಉಭಯ ರಾಷ್ಟ್ರಗಳು ನಿಕಟ ಪಾಲುದಾರಿಕೆ ಮತ್ತು ಸಹಕಾರದ ಸಾಧನೆ ಮಾಡಿವೆ. ನಾವು ಧನಾತ್ಮಕ ಪ್ರಗತಿ ಸಾಧಿಸಿದ್ದೇವೆ. ಭಾರತ ಮತ್ತು ಚೀನಾ ಒಟ್ಟಿಗೆ ೨.೬ ಬಿಲಿಯನ್ (೨೬೦ ಕೋಟಿ) ಜನಸಂಖ್ಯೆಯನ್ನು ಹೊಂದಿದ್ದೇವೆ. ಇದು ಅಭಿವೃದ್ಧಿಗೆ ಅಗಾಧ ಶಕ್ತಿಯನ್ನು ನೀಡುತ್ತದೆ. ಪ್ರದೇಶ ಮತ್ತು ವಿಶ್ವದಲ್ಲಿ ಉಭಯ ರಾಷ್ಟ್ರಗಳ ಪ್ರಭಾವ ತ್ವರಿತವಾಗಿ ಹೆಚ್ಚುತ್ತಿದೆ ಎಂದು ಕ್ಷಿ ಅವರು ಮೋದಿ ಅವರಿಗೆ ಹೇಳಿದರು.  ಭವಿಷ್ಯದ ಮೇಲೆ ನನಗೆ ವಿಶ್ವಾಸವಿದೆ. ಉಭಯ ನಾಯಕರು ಕಾಲ ಕಾಲಕ್ಕೆ ಈ ರೀತಿ ಅನೌಪಚಾರಿಕವಾಗಿ ಭೇಟಿಯಾಗುತ್ತಿರಬಹುದು ಎಂದು ಕ್ಷಿ ನುಡಿದರು.  ‘ನಿಮ್ಮೊಂದಿಗೆ ಗಾಢವಾಧ ಸಂಪರ್ಕ ಸಾಧಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಚೀನಾ-ಭಾರತ ಬಾಂಧ್ಯವ್ಯ ವರ್ಧನೆಯಲ್ಲಿ ಸಮಾನ ತಿಳುವಳಿಕೆಯನ್ನು ಬೆಳೆಸಿಕೊಳ್ಳುವ ಬಗ್ಗೆ ಮತ್ತು ಬಾಂಧವ್ಯವನ್ನು ಇನ್ನೊಂದು ಸ್ತರಕ್ಕೆ ಒಯ್ಯುವ ಬಗ್ಗೆ ಖಚಿತತೆಯನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಅವರು ಖ್ಯಾತ ಈಸ್ಟ್ ಲೇಕ್‌ನ ಅತಿಥಿಗೃಹದಲ್ಲಿ ಭೋಜನ ಸ್ವೀಕಾರಕ್ಕೆ ಮುನ್ನ ಹೇಳಿದರು.  ನಗರಕ್ಕೆ ಆಗಮಿಸಿದ ಮೋದಿ ಅವರಿಗೆ ಕೆಂಪುಹಾಸಿನ ಭವ್ಯ ಸ್ವಾಗತವನ್ನು ಚೀನಾ ನೀಡಿತು. ಬೆನ್ನಲ್ಲೇ ಉಭಯ ನಾಯಕರು ಮಾತುಕತೆ ಆರಂಭಿಸಿದರು.

2009: ಕೋಳಿ ಜ್ವರದ ನಂತರ ಈಗ ವಿಶ್ವದೆಲ್ಲೆಡೆ ಹಂದಿಜ್ವರದ ಭೀತಿ ವ್ಯಾಪಿಸಿತು. ಉತ್ತರ ಅಮೆರಿಕ ಮತ್ತು ಯೂರೋಪ್‌ನಲ್ಲಿ ಹಂದಿಜ್ವರ ಕಾಣಿಸಿಕೊಂಡಿರುವ ಪರಿಣಾಮ ಬೆಂಗಳೂರು ಸೇರಿದಂತೆ ದೇಶದ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಶೇಷ ವೈದ್ಯಕೀಯ ತಪಾಸಣೆಗಾಗಿ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲಾಯಿತು. ಮೆಕ್ಸಿಕೊ, ಅಮೆರಿಕ, ಕೆನಡಾ, ನ್ಯೂಜಿಲೆಂಡ್, ಸ್ಪೇನ್, ಬ್ರಿಟನ್ ಮುಂತಾದ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರನ್ನು ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್, ಕೊಚ್ಚಿ, ಜೈಪುರ, ಪಣಜಿ ಮತ್ತಿತರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.

2009: ಶ್ರೀಲಂಕಾದಲ್ಲಿ ಯುದ್ಧಪೀಡಿತ ಪ್ರದೇಶದಿಂದ ಪಾರಾಗಿ ಬಂದ ಸಾವಿರಾರು ತಮಿಳು ಸಂತ್ರಸ್ತರಿಗೆ ಮಾನವೀಯ ನೆರವು ನೀಡಲು ಭಾರತ 100 ಕೋಟಿ ರೂಪಾಯಿಗಳ ಕೊಡುಗೆ ಘೋಷಿಸಿತು. ತಮಿಳು ಪ್ರತ್ಯೇಕತಾವಾದಿ ಬಂಡುಕೋರ ಸಂಘಟನೆ 'ಎಲ್‌ಟಿಟಿಇ' ವಿರುದ್ಧ ವೈಮಾನಿಕ ದಾಳಿ ಮತ್ತು ಭಾರಿ ಶಸ್ತ್ರಾಸ್ತ್ರಗಳ ಬಳಕೆ ನಿಲ್ಲಿಸುವುದಾಗಿ ಶ್ರೀಲಂಕಾ ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ ಈ ಕೊಡುಗೆ ಘೋಷಿಸಲಾಯಿತು.

2009: ಶ್ರೀಲಂಕಾದಲ್ಲಿ ಕದನವಿರಾಮ ಘೋಷಿಸಬೇಕೆಂದು ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಈದಿನ ಬೆಳಿಗ್ಗೆ ಚೆನ್ನೈಯಲ್ಲಿ 'ಮಿಂಚಿನ' ಉಪವಾಸ ಸತ್ಯಾಗ್ರಹ ಆರಂಭಿಸಿದರೂ, ಸೇನಾ ಕಾರ್ಯಾಚರಣೆ ಕೊನೆಗೊಂಡ ಬಗ್ಗೆ ಲಂಕಾ ಸರ್ಕಾರದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ 6 ಗಂಟೆಗಳ ಬಳಿಕ ಸತ್ಯಾಗ್ರಹವನ್ನು ಕೊನೆಗೊಳಿಸಿದರು. ಶ್ರೀಲಂಕಾದಲ್ಲಿ ಮುಗ್ಧ ತಮಿಳರನ್ನು ಕೊಲ್ಲುತ್ತಿರುವುದನ್ನು ಖಂಡಿಸಿ ಕರುಣಾನಿಧಿ ಅವರು ಯಾವುದೇ ಪೂರ್ವಸೂಚನೆ ನೀಡದೆ ಬೆಳಿಗ್ಗೆ 6.30ಕ್ಕೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸತ್ಯಾಗ್ರಹ ಕೊನೆಗೊಂಡ ಸುದ್ದಿ ಹೊರಬೀಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ನೂರಾರು ಡಿಎಂಕೆ ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು. ಕೇಂದ್ರ ಸಚಿವ ಟಿ. ಆರ್. ಬಾಲು, ಕರುಣಾ ನಿಧಿ ಅವರ ಪುತ್ರ ಎಂ. ಕೆ. ಅಳಗಿರಿ, ಪುತ್ರಿ ಕನಿಮೋಳಿ, ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಸಹಿತ 300ಕ್ಕೂ ಅಧಿಕ ಡಿಎಂಕೆ ಕಾರ್ಯಕರ್ತರು ಉಪವಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

2009: ಇನ್ನು ಮುಂದೆ ರಾಹುಕಾಲ ನೋಡಲು ಪಂಚಾಂಗ ಅಥವಾ ಕ್ಯಾಲೆಂಡರ್‌ನ ಮೊರೆ ಹೋಗಬೇಕಾದ ಅಗತ್ಯವಿಲ್ಲ. ವಾರದ ಎಲ್ಲ ದಿನಗಳ ರಾಹುಕಾಲದ ಸಮಯವನ್ನು ತೋರುವ ವಿಶಿಷ್ಠ ಗಡಿಯಾರವನ್ನು ತಾವು ಸಿದ್ಧ ಪಡಿಸಿರುವುದನ್ನು ವಿ. ರವಿ ಸುಕುಮಾರನ್ ಬೆಂಗಳೂರಿನಲ್ಲಿ ಬಹಿರಂಗ ಪಡಿಸಿದರು. 'ವಾರದ ಎಲ್ಲ ದಿನಗಳಲ್ಲೂ ರಾಹುಕಾಲ ಬೇರೆ ಬೇರೆ ಸಮಯಕ್ಕೆ ಬರುತ್ತದೆ. ಹಾಗಾಗಿ ಗಡಿಯಾರದಲ್ಲಿ ಸಮಯ ನಮೂದಿಸಿರುವ ಸಂಖ್ಯೆಯ ಪಕ್ಕದಲ್ಲಿಯೇ ರಾಹುಕಾಲದ ಸಮಯವನ್ನೂ ನೀಡಲಾಗಿದೆ. ಇದರಿಂದ ಸುಲಭವಾಗಿ ರಾಹುಕಾಲದ ಸಮಯವನ್ನು ಗುರುತಿಸಬಹುದು' ಎಂದು ರವಿ ಹೇಳಿದರು. 'ಗೋಡೆ ಗಡಿಯಾರದಲ್ಲಿ ಈ ಮಾಹಿತಿಯನ್ನು ಅಳವಡಿಸಿರುವ ರೀತಿಯಲ್ಲೇ ಕೈ ಗಡಿಯಾರಗಳಿಗೂ ಅಳವಡಿಸಬಹುದು. ಇದು ಕಡಿಮೆ ಖರ್ಚಿನ ತಂತ್ರ. ರಾಹುಕಾಲ ಗುರುತಿಸುವ ಗಡಿಯಾರಕ್ಕೆ ಹಕ್ಕು ಸ್ವಾಮ್ಯಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಇನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ' ಎಂದು ಅವರು ಹೇಳಿದರು. (ವಿವರಗಳಿಗೆ ಮೊಬೈಲ್ 94483 53046).

2009: ಗೋಧ್ರಾ ನರಮೇಧ ನಂತರದ ಕೋಮು ಗಲಭೆಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ 63 ಮಂದಿ ರೂಪಿಸಿದ್ದಾಗಿ ಮಾಜಿ ಸಂಸದರೊಬ್ಬರ ಪತ್ನಿ ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿಗೆ) ನಿರ್ದೇಶನ ನೀಡಿತು. ಮೂರು ತಿಂಗಳ ಒಳಗಾಗಿ ಈ ಆರೋಪದ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ ನ್ಯಾಯಪೀಠ ಆದೇಶಿಸಿತು. ಗುಜರಾತ್‌ನಲ್ಲಿ 2002ರಲ್ಲಿ ನಡೆದ ಈ ಗಲಭೆಯಿಂದ 1044 ಜನರ ಹತ್ಯೆ, 233 ಮಂದಿಯ ಕಣ್ಮರೆ ಹಾಗೂ 1,40,000ಕ್ಕೂ ಹೆಚ್ಚು ಜನ ಮನೆಮಠ ಕಳೆದುಕೊಂಡಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಮೋದಿ ಮತ್ತು ಅವರ ಸಂಪುಟದ ಸಚಿವರು, ಬಿಜೆಪಿ ಶಾಸಕರು, ವಿಎಚ್‌ಪಿ ಕಾರ್ಯಕರ್ತರು, ಆಗಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಇತರ ಪೊಲೀಸ್ ಅಧಿಕಾರಿಗಳು ಗಲಭೆಯಲ್ಲಿ ಭಾಗಿಯಾಗಿದ್ದುದಾಗಿ ಹತ್ಯೆಯಾದ ಕಾಂಗ್ರೆಸ್‌ನ ಮಾಜಿ ಸಂಸದ ಎಹಸಾನ್ ಜಫ್ರಿಯವರ ಪತ್ನಿ ಜಾಕಿಯಾ ನಸೀಂ ಅಹೆಸಾನ್ ಆರೋಪ ಮಾಡಿದ್ದರು.

2009: ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಫಿರೋಜ್ ಖಾನ್ (70)
ಅವರು  ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ನಿಧನರಾದರು. ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಸಹೋದರ ರಾದ ಸಂಜಯ್ ಖಾನ್, ಅಕ್ಬರ್ ಖಾನ್, ಪುತ್ರ ನಟ ಫರ್ದೀನ್ ಖಾನ್, ಪುತ್ರಿ ಲೈಲಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದರು. 'ಸ್ಟೈಲ್ ಖಾನ್' ಎಂದೇ ಗುರುತಿಸಿಕೊಂಡಿದ್ದ ಫಿರೋಜ್ ಅವರು ಬೆಂಗಳೂರಿನಲ್ಲಿ ಜನಿಸಿದ್ದರು. ಇಲ್ಲಿಯೇ ಶಾಲಾ- ಕಾಲೇಜು ಶಿಕ್ಷಣ ಪೂರೈಸಿ, ಚಿತ್ರರಂಗದಲ್ಲಿ ಯಶಸ್ಸು ಗಳಿಸಲು ಮುಂಬೈಗೆ ತೆರಳಿದ್ದರು. 1960ರಲ್ಲಿ 'ದೀದಿ' ಎಂಬ ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದ ಅವರು ಎರಡು ವರ್ಷಗಳಲ್ಲಿಯೇ ಹಾಲಿವುಡ್‌ನತ್ತ ಆಕರ್ಷಿತರಾದರು. 'ಟಾರ್ಜನ್ ಗೋಸ್ ಟು ಇಂಡಿಯಾ' ಎಂಬ ಇಂಗಿಷ್ಲ್ ಚಿತ್ರ ನಿರ್ಮಿಸಿ, ಅಭಿನಯಿಸಿದರು. ಮತ್ತೆ ಬಾಲಿವುಡ್‌ಗೆ ಮರಳಿದ ಅವರಿಗೆ 'ಆರ್ಜೂ', 'ಔರತ್', 'ಸಫರ್', 'ಧರ್ಮಾತ್ಮ' ಮತ್ತು 'ಖುರ್ಬಾನಿ' ಚಲನಚಿತ್ರಗಳು ಖ್ಯಾತಿ ತಂದುಕೊಟ್ಟವು. 1970ರಲ್ಲಿ ಅತ್ಯುತ್ತಮ ಪೋಷಕ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಗಳಿಸಿದರು. 2000ದಲ್ಲಿ ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪಡೆದರು. 1998ರಲ್ಲಿ ಪುತ್ರ ಫರ್ದೀನ್ ಖಾನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಅವರು 'ಪ್ರೇಮ್ ಅಗನ್' ಮತ್ತು 'ಜಾನಶೀನ್' ಚಲನಚಿತ್ರಗಳನ್ನು ನಿರ್ಮಿಸಿದರು. ಕಾಯಿಲೆಯಿಂದ ಬಳಲುತ್ತಿದ್ದರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಅವರು ಅಕ್ಷಯ್ ಕುಮಾರ್ ಅಭಿನಯದ 'ವೆಲ್‌ಕಮ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ತಾವು ಅಭಿನಯಿಸಿದ್ದ 'ಖುರ್ಬಾನಿ' ಚಿತ್ರವನ್ನು ಮತ್ತೊಮ್ಮೆ ರಿಮೇಕ್ ಮಾಡಿ, ಫರ್ದೀನ್‌ಖಾನ್‌ಗೆ ಪ್ರಮುಖ ಪಾತ್ರ ನೀಡುವುದು ಫಿರೋಜ್ ಅವರ ಕೊನೆಯ ಆಸೆಯಾಗಿತ್ತು. ಬೆಂಗಳೂರು ಅವರ ಮೆಚ್ಚಿನ ತಾಣವಾಗಿತ್ತು.

2009: ಸರಳ ಹಾಗೂ ನೇರ ನುಡಿಯ ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಹೊಸಪೇಟೆಯ ಮಾಜಿ ಶಾಸಕರಾದ ಜಿ.ಶಂಕರಗೌಡ (73) ಈದಿನ ಬೆಳಗಿನ ಜಾವ ನಿಧನರಾದರು. ಶಾಸಕರಾದರೂ ಜನಸಾಮಾನ್ಯರಂತೆ ತಿರುಗಾಡುವ ಮೂಲಕ ಸರಳತೆಗೆ ಮಾದರಿಯಾದ್ದ ಅವರು, 1983ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹಾಗೂ 1993ರಲ್ಲಿ ಭಾರತೀಯ ಜನತಾ ಪಕ್ಷದಿಂದ ಮೊದಲಬಾರಿಗೆ ಜಿಲ್ಲೆಯನ್ನು ಪ್ರತಿನಿಧಿಸಿ ವಿಧಾನಸಭೆ ಪ್ರವೇಶಿಸಿ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ನೀಡಿದ್ದರು. ಮೂಲತಃ ಕೃಷಿಕರಾಗಿದ್ದ ಜಿ.ಶಂಕರಗೌಡರು ರೈತಪರವಾಗಿ ಅಪಾರ ಕಾಳಜಿ ಹೊಂದಿದ್ದರು. ಶಿಕ್ಷಣಪ್ರೇಮಿಯೂ ಆಗಿದ್ದ ಇವರು ಮಹಿಳಾ ಕಾಲೇಜು ಪ್ರಾರಂಭಿಸಿದ್ದರು.

2009: ತೆಂಕು ತಿಟ್ಟಿನ ಚಂಡೆ, ಮದ್ದಳೆ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ (82) ಬೆಂಗಳೂರು ನಗರದ ಕೋರಮಂಗಲದಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ಐವರು ಪುತ್ರಿಯರು ಹಾಗೂ ಮೂವರು ಪುತ್ರರನ್ನು ಅಗಲಿದರು. ಕೋರಮಂಗಲದ ಬಿಡಿಎ ವಾಣಿಜ್ಯ ಸಂಕೀರ್ಣದ ಬಳಿಯಿರುವ ಎಡನೀರು ಗೋಪಾಲಕೃಷ್ಣ ಸ್ವಾಮಿ ದೇವಾಲಯದಲ್ಲಿ ವಾಸ್ತವ್ಯ ಹೂಡಿದ್ದ ಬಲ್ಲಾಳರು ಈದಿನ ಸಂಜೆ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಬೇಕಿತ್ತು. ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡ ಕಾರಣ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೊ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತು. ಸಂಜೆ ಹಿಂತಿರುಗಿದ ಅವರು ದೇವಾಲಯದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದರು. ಸಂಜೆ 6.45ರ ವೇಳೆಗೆ ಪ್ರದರ್ಶನಕ್ಕೂ ಮೊದಲು ಚೌಕಿ ಪೂಜೆ ನಡೆಸುವ ಸಂದರ್ಭದಲ್ಲೇ ಮತ್ತೆ ಎದೆ ನೋವು ಕಾಣಿಸಿಕೊಂಡು ಕುಸಿದುಬಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆ ಉಸಿರೆಳೆದರು. ಬಲ್ಲಾಳರು ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ಚಂಡೆ- ಮದ್ದಳೆ ವಾದಕರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದವು.

2009: ಇಸ್ಲಾಮಾಬಾದ್ ನಗರದತ್ತ ಧಾವಿಸಿ ಬರುವ ತಾಲಿಬಾನಿಗಳನ್ನು ತಡೆದು ಹಿಮ್ಮೆಟ್ಟಿಸಬೇಕೆಂದು ಅಮೆರಿಕ ಸರ್ಕಾರವು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಪಾಕಿಸ್ಥಾನಿ ಸೈನ್ಯವು ವಾಯವ್ಯ ಪ್ರಾಂತ್ಯದ ತಾಲಿಬಾನ್ ನೆಲೆಗಳ ಮೇಲೆ ಪರಿಣಾಮಕಾರಿ ದಾಳಿ ನಡೆಸಿದ್ದು, ಸುಮಾರು 50ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದರು. ಪಾಕ್ ಯೋಧರು ಹೆಲಿಕಾಪ್ಟರ್‌ಗಳ ಮೂಲಕ ಸ್ಫೋಟಕದ ಪುಡಿಗಳನ್ನು ಗಿರಿಕಂದರಗಳ ಮೇಲೆ ಚೆಲ್ಲಿ, ಅಲ್ಲಿ ಅಡಗಿದ್ದ ತಾಲಿಬಾನಿಗಳ ಮೇಲೆ ಇನ್ನಿಲ್ಲದ ಒತ್ತಡ ಹೇರಿದರು.

2009: ನಾಲ್ಕು ತಿಂಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡ್ದಿದ ಪೋಲೆಂಡ್‌ನ ಭೂ ವಿಜ್ಞಾನಿಯೊಬ್ಬರ ತಲೆಯನ್ನು ಕಡಿದ ತಾಲಿಬಾನ್ ಉಗ್ರರು ವಿಜ್ಞಾನಿಯ ದೇಹವನ್ನು ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸ್ದಿದಾರೆ ಎಂದು ಇಸ್ಲಾಮಾಬಾದಿನಲ್ಲಿ ಅಧಿಕಾರಿಗಳು ತಿಳಿಸಿದರು. ಪೋಲೆಂಡ್‌ನ ಜಿಯೋಫಿಜ್‌ಕಾ ಎಂಬ ಕಂಪೆನಿಯ 42 ವರ್ಷದ ಭೂ ವಿಜ್ಞಾನಿ ಪಿಯೋಟರ್ ಸ್ಟಾನ್‌ಜಾಕ್ ಪಾಕಿಸ್ಥಾನದ ರಾಜ್ಯ ಸ್ವಾಮ್ಯದ ತೈಲ ಮತ್ತು ಇಂಧನ ಸಂಶೋಧನಾ ಕಂಪೆನಿಯ ಯೋಜನೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಗ್ರರು ಕಳೆದ ಸೆಪ್ಟೆಂಬರಿನಲ್ಲಿ ಪಂಜಾಬ್ ಪ್ರಾಂತ್ಯದ ಅಟೋಕ್ ಎಂಬಲ್ಲಿ ಈ ವಿಜ್ಞಾನಿಯನ್ನು ಅಪಹರಿಸಿದ್ದರು. ಅವರ ಬಿಡುಗಡೆ ಸಂಬಂಧ ಪಾಕಿಸ್ಥಾನಿ ಸರ್ಕಾರದೊಂದಿಗೆ ಮಾತುಕತೆ ವಿಫಲಗೊಂಡಾಗ ಫೆಬ್ರುವರಿ 7 ರಂದು ತಾಲಿಬಾನಿಗಳು ವಿಜ್ಞಾನಿಯ ತಲೆ ಕತ್ತರಿಸಿದ್ದರು. 60 ಮಂದಿ ಉಗ್ರರನ್ನು ಬಿಡುಗಡೆಗೊಳಿಸಿದಲ್ಲಿ ಸ್ಟಾನ್‌ಜಾಕ್ ಅವರನ್ನು ಬಿಡುಗಡೆಗೊಳಿಸುವುದಾಗಿ ತಾಲಿಬಾನ್ ಬೇಡಿಕೆ ಇಟ್ಟಿತ್ತು.

2008: ಆಫ್ಘಾನಿಸ್ಥಾನ ಅಧ್ಯಕ್ಷ ಹಮೀದ್ ಕರ್ಜೈ ಅವರ ಹತ್ಯೆಗೆ ಕಾಬೂಲಿನಲ್ಲಿ ತಾಲಿಬಾನ್ ಉಗ್ರಗಾಮಿಗಳು ಗುಂಡು ಮತ್ತು ರಾಕೆಟ್ ದಾಳಿಮೂಲಕ ಯತ್ನಿಸಿದರು. ಆದರೆ ಕರ್ಜೈ ಪ್ರಾಣಾಪಾಯವಿಲ್ಲದೆ ಪಾರಾದರು. ದೇಶದಲ್ಲಿ ಕಮ್ಯುನಿಸ್ಟ್ ಸರ್ಕಾರ ಪತನಗೊಂಡು, ಆಡಳಿತ ಮುಜಾಹಿದೀನ್ ಗಳ ವಶವಾದ 16ನೇ ವರ್ಷಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ಜೈ ಮತ್ತು ಅವರ ಸಚಿವ ಸಹದ್ಯೋಗಿಗಳು, ರಾಜತಾಂತ್ರಿಕರು, ಉನ್ನತ ಮಟ್ಟದ ಅಧಿಕಾರಿಗಳು, ಮಾಜಿ ಯುದ್ಧ ವೀರರು ಭಾಗವಹಿಸಿದ್ದಾಗ ಈ ದಾಳಿ ನಡೆಯಿತು. ತಕ್ಷಣ ಜಾಗೃತಗೊಂಡ ಸೇನಾ ಸಿಬ್ಬಂದಿ ಕೆಲವು ಶಂಕಿತರನ್ನು ಬಂಧಿಸಿದರು. ದಾಳಿಯಲ್ಲಿ ಒಬ್ಬ ನಾಗರಿಕ ಮೃತನಾಗಿ, ಸಂಸದ ಸೇರಿದಂತೆ 11 ಮಂದಿ ಗಾಯಗೊಂಡರು. ಈ ದಾಳಿಗೆ ತಾನೇ ಕಾರಣ ಎಂದು ಹೊಣೆ ಹೊತ್ತುಕೊಂಡ ತಾಲಿಬಾನ್, ತನ್ನ ಕಡೆಯ ಮೂವರು ಯೋಧರು ಈ ಸಂದರ್ಭದಲ್ಲಿ ಸತ್ತರು.

2008: ಭಾರತೀಯ ಮೂಲದ ಉಕ್ಕು ದೊರೆ ಲಕ್ಷ್ಮಿ ಮಿತ್ತಲ್ ಯೂರೋಪಿನ ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ಒಟ್ಟು ಆಸ್ತಿ 27.7 ಶತಕೋಟಿ ಪೌಂಡ್ ಮೌಲ್ಯದಷ್ಟಿದ್ದು, ಬ್ರಿಟನ್ನಿನ ಅತಿ ಶ್ರೀಮಂತ ಉದ್ಯಮಿ ಎನ್ನುವ ಹೆಗ್ಗಳಿಕೆಗೆ ಸತತ ನಾಲ್ಕನೇ ವರ್ಷವೂ ಭಾಜನರಾಗಿದ್ದಾರೆ ಎಂದು ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿ ಸಿದ್ಧಪಡಿಸಿದ `ಸಂಡೆ ಟೈಮ್ಸ್' ಪತ್ರಿಕೆ ತಿಳಿಸಿತು. ಒಂದು ವರ್ಷದಲ್ಲಿ 8.5 ಶತಕೋಟಿ ಪೌಂಡುಗಳಷ್ಟು ಸಂಪತ್ತು ವೃದ್ಧಿ ಕಂಡ ಮಿತ್ತಲ್, ವಿಶ್ವದ ಕುಬೇರರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದರು. ಅಂಬಾನಿ ಸಹೋದರರಾದ ಮುಖೇಶ್ ಹಾಗೂ ಅನಿಲ್ ಅವರ ಒಟ್ಟು ಆಸ್ತಿ ಸೇರಿಸಿದರೆ ಅವರೇ ಜಗತ್ತಿನ ಅತಿ ದೊಡ್ಡ ಶ್ರೀಮಂತರಾಗುತ್ತಾರೆ. ಇವರ ಆಸ್ತಿ ಮೌಲ್ಯ 43 ಶತಕೋಟಿ ಪೌಂಡ್. ಇದು ಅಮೆರಿಕದ ವಾಲ್ ಮಾರ್ಟ್ ನ ಒಡೆಯರಾದ ವಾಲ್ಟನ್ ಕುಟುಂಬದ 38.4 ಶತಕೋಟಿ ಪೌಂಡ್ ಹಾಗೂ ಮೈಕ್ರೋಸಾಫ್ಟ್ ನ ಮುಖ್ಯಸ್ಥ ಬಿಲ್ ಗೇಟ್ಸ್ ಅವರ 29 ಶತಕೋಟಿ ಪೌಂಡಿಗಿಂತಲೂ ಹೆಚ್ಚು ಎಂದು ವರದಿ ಹೇಳಿತು.

2008: ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಏಳು ವರ್ಷದ ಬಾಲಕ ಅನಿಕೇತ ರಮೇಶ ಚಿಂಡಕ ಬೆಳಗಾವಿಯ ಆದರ್ಶನಗರದಲ್ಲಿ 82 ಟಾಟಾ ಸುಮೋ ವಾಹನಗಳಡಿ ಲಿಂಬೋ ಸ್ಕೇಟಿಂಗ್ ಮೂಲಕ ತೂರಿಬಂದು ದಾಖಲೆ ನಿರ್ಮಿಸಿದನು. ರೋಟರಿ ಕ್ಲಬ್ ಆಫ್ ಬೆಳಗಾವಿ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 57 ಸೆಕೆಂಡುಗಳಲ್ಲಿ 82 ಟಾಟಾ ಸುಮೋ ವಾಹನಗಳಡಿ ತೂರಿಬಂದು ತನ್ನ ಹಿಂದಿನ ದಾಖಲೆಯನ್ನು ಅನಿಕೇತ ಮುರಿದನು. 2007ರ ಫೆಬ್ರುವರಿ 28 ರಂದು ಬೆಳಗಾವಿ ನಗರದಲ್ಲಿ 45.31 ಸೆಕೆಂಡುಗಳಲ್ಲಿ 57 ಟಾಟಾ ಸುಮೋ ವಾಹನಗಳಡಿ ತೂರಿಬಂದು ಬೆರಗುಗೊಳಿಸಿದ್ದ ಬಾಲಕ ಈದಿನ ಮಧ್ಯಾಹ್ನ 53 ಸೆಕೆಂಡುಗಳಲ್ಲಿ 81 ಸುಮೋ ವಾಹನಗಳಡಿ ತೂರಿಬಂದನು. ಬಳಿಕ 82 ವಾಹನಗಳಡಿ ತೂರಿಬಂದು ತನ್ನ ದಾಖಲೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ದನು. `ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ' ನಿರ್ದೇಶಕ ಸುರೇಶ ಹರ್ಮಿಲಾ, ಯೋಜನಾ ಅಧಿಕಾರಿ ಎಂ.ಎಸ್. ತ್ಯಾಗಿ ಹಾಗೂ ರೋಲ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯದರ್ಶಿ ರಾಜು ದಾಬಡೆ ಅವರು ಅನಿಕೇತ ಚಿಂಡಕ ಸಾಧನೆಯನ್ನು ದಾಖಲು ಮಾಡಿಕೊಂಡರು. ಅನಿಕೇತನ ಪ್ರತಿಭೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ನಗರದಲ್ಲಿ ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಸ್ಕೇಟಿಂಗ್ ಟ್ರ್ಯಾಕ್ ನಿರ್ಮಿಸಲಾಗಿತ್ತು. 100ಕ್ಕೂ ಹೆಚ್ಚು ಸುಮೋ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಲಿಂಬೋ ಸ್ಕೇಟಿಂಗ್ ದೃಶ್ಯ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಅನಿಕೇತ ಈ ಕಿರಿಯ ವಯಸ್ಸಿನಲ್ಲೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ 300ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾನೆ. ಲಿಂಬೋ ಸ್ಕೇಟಿಂಗ್ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಈ ಬಾಲಕನಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

2008: ಚಿತ್ರನಟ ಜೈಜಗದೀಶ್ ಅವರು ಮಡಿಕೇರಿಯಲ್ಲಿ ನಡೆದ ಬಿಜೆಪಿ ಬಹಿರಂಗಸಭೆಯಲ್ಲಿ ಸುಷ್ಮಾ ಸ್ವರಾಜ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಬಿಎಸ್ಪಿಯಿಂದ ಮಡಿಕೇರಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಜೈಜಗದೀಶ್, `ಬಿ' ಫಾರಂ ಗೊಂದಲದಿಂದ ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದರು.

2008: ಮೈಸೂರು ನಗರದ ಅಪರಾಧ ಪತ್ತೆ ದಳದ ಪೊಲೀಸರು ಮತ್ತು ಮಣಿಪುರಿ ಪೊಲೀಸರು ಜಂಟಿ ಕಾರ್ಯಾಚರಣೆ ಮೈಸೂರಿನ ವಸತಿ ಗೃಹವೊಂದರಲ್ಲಿದ್ದ 6 ಮಂದಿ ಶಂಕಿತ ಉಲ್ಫಾ ಉಗ್ರಗಾಮಿಗಳನ್ನು ಬಂದಿಸಿದರು. ಈಶಾನ್ಯ ರಾಜ್ಯದ 6 ಮಂದಿಯನ್ನು ವಶಕ್ಕೆ ತೆಗೆದುಕೊಂಡದ್ದನ್ನು ನಗರ ಪೊಲೀಸ್ ಆಯಕ್ತ ಡಾ.ಪಿ.ರವೀಂದ್ರನಾಥ್ ದೃಢಪಡಿಸಿದರು.

2008: ಜಗತ್ತಿನ ಅತಿ ಕಿರಿಯ ಪೈಲಟ್ ಮತ್ತು ಅತಿ ಕಿರಿಯ ಗಗನಯಾತ್ರಿ ಎಂಬ ಕೀರ್ತಿಗೆ ಪಾತ್ರರಾದ ಬೆಂಗಳೂರು ನಗರದ ಶ್ರೀಯಾ ದಿನಕರ್ ಅವರಿಗೆ ಭವಿಷ್ಯದ ಶಿಕ್ಷಣಕ್ಕಾಗಿ ಸ್ಲೋವೆನಿಯಾದ ವರ್ಲ್ಡ್ ಆಫ್ ಆರ್ಟ್ ಯೂರೋಪ್ ಸಂಸ್ಥೆ ಒಂದು ಲಕ್ಷ ಯೂರೋಗಳನ್ನು ದೇಣಿಗೆಯಾಗಿ ನೀಡಿತು. ಬೆಂಗಳೂರಿನ ವರ್ಡ್ ಆರ್ಟ್ಫೌಂಡೇಶನ್ ಮತ್ತು ವರ್ಡ್ ಆಫ್ ಆರ್ಟ್ ಯೂರೋಪ್ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಕಬ್ಬನ್ ಉದ್ಯಾನದ ಬಾಲಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಶ್ರೀಯಾ ಬಹುಮಾನದ ಚೆಕ್ ಸ್ವೀಕರಿಸಿದರು. ವರ್ಲ್ಡ್ ಆಫ್ ಆರ್ಟ್ ಯೂರೋಪ್ ನಿರ್ದೇಶಕರಾದ ಮಿಹಾಲಿಯೋ ಲಿಸಾನಿನ್ ಮತ್ತು ಬೊಜಿಕಾ ಹ್ರೊಸೇವೆಕ್ ಬಹುಮಾನದ ಚೆಕ್ ಹಸ್ತಾಂತರಿಸಿದರು. ವರ್ಲ್ಡ್ ಆಫ್ ಆರ್ಟ್ ಯೂರೋಪ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀಯಾ ದಿನಕರ್ ಪ್ರಥಮ ಬಹುಮಾನ ಗಳಿಸಿದ್ದರು. ಬಹುಮಾನಿತ ಕೃತಿ 77 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ಈ ಹಣವನ್ನು ಅವರು ಸ್ವಯಂಸೇವಾ ಸಂಸ್ಥೆಯೊಂದಕ್ಕೆ ನೀಡಿದ್ದರು.
ಜಗತ್ತಿನ ಕಿರಿಯ ಚಿತ್ರ ನಿರ್ದೇಶಕ ಎಂಬ ಖ್ಯಾತಿ ಪಡೆದಿರುವ ಮಾಸ್ಟರ್ ಕಿಶನ್ ಸೇರಿದಂತೆ ಹಲವು ಕಿರಿಯ ಕಲಾವಿದರಿಗೆ ಈ ಸಂದರ್ಭದಲ್ಲಿ `ಲಿಯೋನಾರ್ಡೊ ಡಾ ವಿಂಚಿ ಅಂತಾರಾಷ್ಟ್ರೀಯ ಕಲಾ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.

2007: ಗಾಲಿ ಕುರ್ಚಿಗೆ ಅಂಟಿಕೊಂಡೇ ಜೀವಿಸುತ್ತಿರುವ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಅವರು `ಬಾಹ್ಯಾಕಾಶದಲ್ಲಿ ತೂಕರಹಿತ ಅನುಭವ'ದ ತಮ್ಮ ಕನಸನ್ನು ನನಸಾಗಿಸಿಕೊಂಡರು. ಫ್ಲಾರಿಡಾ ಮೂಲದ ಜೀರೋ ಗ್ರಾವಿಟಿ ಕಾರ್ಪೊರೇಷನ್ ಬೋಯಿಂಗ್ 747 ವಿಮಾನದಲ್ಲಿ ಶೂನ್ಯ ಗುರುತ್ವಾಕರ್ಷಣೆ ನಿರ್ಮಿಸಿ ಸ್ಟೀಫನ್ ಅವರಿಗೆ ಈ ವಿಶಿಷ್ಟ ಅನುಭವ ದಕ್ಕುವಂತೆ ಮಾಡಿತು. `ವೊರ್ಮಿಟ್ ಕಾಮೆಟ್' ಹೆಸರಿನ ಪರಿವರ್ತಿತ ವಿಮಾನದಲ್ಲಿ ಅಟ್ಲಾಂಟಿಕ್ ಸಾಗರದ ಮೇಲೆ ಸಾಗುವಾಗ ಈ ಅನುಭವವನ್ನು ಹಾಕಿನ್ಸ್ ಪಡೆದರು. 9,754 ಮೀಟರ್ (32,000 ಅಡಿ ಎತ್ತರಕ್ಕೆ ಏರಿ 7315 ಮೀಟರಿನಷ್ಟು ಕೆಳಕ್ಕೆ ವಿಶಿಷ್ಟ ರೀತಿಯಲ್ಲಿ ಬರುವಾಗ ಹಾಕಿನ್ಸ್ ಜೊತೆಗಿದ್ದ ವೈದ್ಯರು ಮತ್ತು ದಾದಿಯರೂ ಈ ತೂಕರಹಿತ ಅನುಭವ ಪಡೆದರು.

2007: ಬ್ರಿಟಿಷರ ಒಡೆದು ಆಳುವ ಕುಟಿಲ ನೀತಿಯಿಂದಾಗಿಯೇ ಗೋಹತ್ಯೆ ಕಾಯ್ದೆ ಜಾರಿಗೆ ಬಂತು ಎಂದು ಸ್ವದೇಶೀ ಬಚಾವೋ ಆಂದೋಲನದ ನೇತಾರ ರಾಜೀವ ದೀಕ್ಷಿತ್ ಶಿವಮೊಗ್ಗದ ಹೊಸನಗರದಲ್ಲಿ ಶ್ರೀರಾಮಚಂದ್ರಾಪುರ ಮಠ ಸಂಘಟಿಸಿದ ವಿಶ್ವ ಗೋ ಸಮ್ಮೇಳನದಲ್ಲಿ ಅಭಿಪ್ರಾಯ ಪಟ್ಟರು. ಸಮ್ಮೇಳನದ ಏಳನೇ ದಿನ ಅವರು ಗೋ ಮಹಿಮಾ ಗೋಷ್ಠಿಯಲ್ಲಿ ಪಾಲ್ಗೊಂಡರು.

2007: ನಕಲಿ ಪಾಸ್ ಪೋರ್ಟ್ ಬಳಸಿ ಮಾನವ ಕಳ್ಳಸಾಗಣೆ ನಡೆಸಿದ ಆರೋಪಕ್ಕೆ ಒಳಗಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿ ಆರ್ ಎಸ್) ಶಾಸಕ ಕೆ. ಲಿಂಗಯ್ಯ ಅವರು ಹೈದರಾಬಾದಿನ 7ನೇ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಶರಣಾಗತರಾದರು.

2007: ಕೃಷ್ಣಾ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಆಂಧ್ರಪ್ರದೇಶ ಸಲ್ಲಿಸಿದ್ದ ಅರ್ಜಿಯನ್ನು ಕೃಷ್ಣಾ ಜಲ ನ್ಯಾಯ ಮಂಡಳಿಯು ವಜಾ ಮಾಡಿತು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಬಹಿರಂಗವಾಗಿ ಚುಂಬಿಸಿ ವಿವಾದಕ್ಕೆ ಗುರಿಯಾಗಿದ್ದ ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ಈ ಘಟನೆಗೆ ಕ್ಷಮೆ ಯಾಚಿಸಿದರು. ಯಾವುದೇ ಮನ ನೋಯಿಸುವಂತಹ ತಪ್ಪು ಮಾಡಿದ್ದರೆ ದಯವಿಟ್ಟು ಕ್ಷಮಿಸಿ ಎಂಬುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದರು.

2007: ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿ ಇ ಟಿ) ತಮಿಳುನಾಡಿನಲ್ಲಿ ರದ್ದು ಪಡಿಸಿದ ತಮಿಳುನಾಡು ಸರ್ಕಾರದ ನಿರ್ಣಯವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿಯಿತು. ತಮಿಳುನಾಡು ಸರ್ಕಾರವು ಅಂಗೀಕರಿಸಿದ ತಮಿಳುನಾಡು (ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ) ಕಾಯ್ದೆಯ (2006) ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ರಿಟ್ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತು.

2006: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 6000 ಕೋಟಿ ರೂಪಾಯಿ ಅಂದಾಜು ವೆಚ್ಚದ ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಮಂಜೂರಾತಿ ನೀಡಿತು. ಇದರೊಂದಿಗೆ 33 ಕಿ.ಮೀ. ಉದ್ದದ ಮೆಟ್ರೊ ರೈಲು ಯೋಜನೆಗೆ ಇದ್ದ ಕೊನೆಯ ಅಡ್ಡಿ ನಿವಾರಣೆ ಆಯಿತು. ಈ ಯೋಜನೆ 2011ಕ್ಕೆ ಪೂರ್ಣಗೊಳ್ಳಬೇಕು.

2006: ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಎಲ್. ಬಸವರಾಜು ಅವರಿಗೆ ರಾಜ್ಯ ಸರ್ಕಾರದ 2005ನೇ ಸಾಲಿನ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.

2006: ನೇಪಾಳದ ಹಿರಿಯ ಮುಖಂಡ ಗಿರಿಜಾ ಪ್ರಸಾದ್ ಕೊಯಿರಾಲ ಅವರು ನೇಪಾಳ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು. ಇದೇ ವೇಳೆಯಲ್ಲಿ ಬಾಲಿವುಡ್ ನಟಿ ಮನಿಶಾ ಕೊಯಿರಾಲ ಅವರ ತಂದೆ, ಪ್ರಕಾಶ ಕೊಯಿರಾಲ ಅವರನ್ನು ನೇಪಾಳ ಕಾಂಗ್ರೆಸ್ಸಿನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಯಿತು. ಈ ಇಬ್ಬರೂ ಧುರೀಣರು ಸಮೀಪ ಸಂಬಂಧಿಗಳು.

2006: ಹಿರಿಯ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಪ್ರತಿಷ್ಠಿತ 2006ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಆಯ್ಕೆಯಾದರು.

2006: ಜಮ್ಮುವಿನ ಭದೇವ್ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆದ ಉಪ ಚುನಾವಣೆಯಲ್ಲಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ದಾಖಲೆ ಜಯ ಸಾಧಿಸಿದರು. ಎದುರಾಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ ಅವರು 66,129 ಮತಗಳ ಪೈಕಿ 62,072 ಮತಗಳನ್ನು ಬಗಲಿಗೆ ಹಾಕಿಕೊಂಡರು.

2006: ಗಂಗೊಳ್ಳಿಯಿಂದ ಮಂಗಳೂರಿನವರೆಗೆ ಅರಬ್ಬಿ ಸಮುದ್ರದಲ್ಲಿ 150 ಕಿ.ಮೀ. ದೂರವನ್ನು ಸತತ 24 ಗಂಟೆಗಳ ಕಾಲ ಈಜಿ ಕ್ರಮಿಸುವ ಮೂಲಕ ಬೆಂಗರೆ ದಯಾನಂದ ಖಾರ್ವಿ ಹೊಸ ದಾಖಲೆ ನಿರ್ಮಿಸಿದರು.

2006: ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) 9069 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಖಾಸಗಿ ಕ್ಷೇತ್ರದಲ್ಲಿನ ಭಾರತೀಯ ಕಂಪೆನಿಯೊಂದು ಗಳಿಸಿದ ಅತ್ಯಧಿಕ ಲಾಭ ಇದು ಎಂದು ಆರ್ ಐ ಎಲ್ ಅಧ್ಯಕ್ಷ , ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಮುಂಬೈಯಲ್ಲಿ ಪ್ರಕಟಿಸಿದರು.

1960: ರಕ್ಷಣಾ ಪಡೆಗಳ ಉನ್ನತಾಧಿಕಾರಿಗಳಿಗೆ ತರಬೇತಿ ನೀಡುವ ಸಲುವಾಗಿ ನವದೆಹಲಿಯಲ್ಲಿ ನ್ಯಾಷನಲ್ ಡಿಫೆನ್ಸ್ ಕಾಲೇಜನ್ನು ಆರಂಭಿಸಲಾಯಿತು.

1959: ಕಮಾಂಡರ್ ಕವಾಸ್ ಮಣೇಕ್ ಶಾ ನಾನಾವತಿ ತನ್ನ ಬ್ರಿಟಿಷ್ ಪತ್ನಿ ಸಿಲ್ವಿಯಾಳ ಪ್ರಿಯಕರ ಪ್ರೇಮ್ ಅಹುಜಾನನ್ನು ಗುಂಡಿಟ್ಟು ಕೊಂದ. ಈ ಪ್ರಕರಣ ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿತು. ಇದೊಂದು ಅಪಘಾತ ಎಂದು ಬಿಂಬಿಸಿದ ಪರಿಣಾಮವಾಗಿ ಆತನ ಪರ ಅನುಕಂಪದ ಹೊಳೆ ಹರಿಯಿತು. ಮುಂಬೈ ಸೆಷನ್ಸ್ ಕೋರ್ಟ್ ಆತ ನಿರಪರಾಧಿ ಎಂದೂ ತೀರ್ಪಿತ್ತಿತು. ನಂತರ ಸುಪ್ರೀಂಕೋರ್ಟ್ ಅದನ್ನು ತಳ್ಳಿಹಾಕಿ ನಾನಾವತಿ ಅಪರಾಧಿ ಎಂದು ತೀರ್ಪು ನೀಡಿತು. ಈ ಘಟನೆ ನಡೆಯದೇ ಇರುತ್ತಿದ್ದರೆ ನಾನಾವತಿ ಭಾರತದ ಮೊದಲ ಏರ್ ಕ್ರಾಫ್ಟ್ ಕ್ಯಾರಿಯರ್ ಐ ಎನ್ ಎಸ್ ವಿಕ್ರಾಂತ್ ನ ಮೊದಲ ಕಮಾಂಡರ್ ಆಗುತ್ತಿದ್ದ.

1897: ಅಮೋಘ ಭಾಷಣಕಾರ, ಸಾಹಿತ್ಯ, ಪತ್ರಿಕಾರಂಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ ತಿರುಮಲೆ ತಾತಾಚಾರ್ಯ ಶರ್ಮ (ತಿ.ತಾ. ಶರ್ಮ) (27-4-1897 ರಿಂದ 20-10-1973) ಅವರು ಚಿಕ್ಕಬಳ್ಳಾಪುರದ ರಾಜಗುರು ಮನೆತನದಲ್ಲಿ ಶ್ರೀನಿವಾಸ ತಾತಾಚಾರ್ಯ- ಜಾನಕಿಯಮ್ಮ ತಿರುಮಲ ದಂಪತಿಯ ಪುತ್ರರಾಗಿ ಈ ದಿನ ಜನಿಸಿದರು.

1896: ನೈಲಾನ್ ಕಂಡು ಹಿಡಿದ ವ್ಯಾಲೇಸ್ ಹ್ಯೂಂ ಕ್ಯಾರೂತರ್ಸ್ ಈ ದಿನ ಜನಿಸಿದರು.

1882: ಅಮೆರಿಕದ ತತ್ವಜ್ಞಾನಿ, ಕವಿ, ಪ್ರಬಂಧಕಾರ ರಾಲ್ಫ್ ವಾಲ್ಡೊ ಎಮರ್ಸನ್ 78ನೇ ವಯಸ್ಸಿನಲ್ಲಿ ಮೆಸಾಚ್ಯುಸೆಟ್ಸಿನ ಕಾಂಕಾರ್ಡಿನಲ್ಲಿ ಮೃತನಾದ.

1857: ಆಧುನಿಕ ಸಂಖ್ಯಾಶಾಸ್ತ್ರದ ಹರಿಕಾರ ಕಾರ್ಲ್ ಪಿಯರ್ಸನ್ ಜನನ.

1521: ಪೋರ್ಚುಗೀಸ್ ಸಂಶೋಧಕ ಫರ್ಡಿನಾಂಡ್ ಮೆಗೆಲ್ಲನ್ ವಿಶ್ವ ಪರ್ಯಟನೆಗಾಗಿ ಹೊರಟಿದ್ದಾಗ ಫಿಲಿಪ್ಪೀನ್ಸ್ ಜನರಿಂದ ಹತನಾದ. ಫಿಲಿಪ್ಪೀನ್ಸಿನಲ್ಲೇ ಆತ ಹತನಾದರೂ ಆತನ ನೌಕೆ ಬಾಸ್ಕಿನ ಜುವಾನ್ ಸೆಬಾಸ್ಟಿಯನ್ ಡೆಲ್ ಕ್ಯಾನೊ ನೇತೃತ್ವದಲ್ಲಿ ಪಶ್ಚಿಮಾಭಿಮುಖವಾಗಿ ಸ್ಪೇನಿನತ್ತ ಯಾನ ಮುಂದುವರಿಸಿ ಜಗತ್ತಿಗೆ ಸುತ್ತು ಹಾಕಿದ ಮೊದಲ ನೌಕೆ ಎಂಬ ಹೆಗ್ಗಳಿಕೆಯನ್ನು ಪಡೆಯಿತು.

No comments:

Post a Comment