ಇಂದಿನ ಇತಿಹಾಸ History Today ಏಪ್ರಿಲ್ 23
2018: ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಉಪ ರಾಷ್ಟ್ರಪತಿ
ಹಾಗೂ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಭಾರತದ
ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಅವರ ವಿರುದ್ದ ಸಲ್ಲಿಸಿದ್ದ ದೋಷಾರೋಪ (ವಾಗ್ದಂಡನೆ)
ಸೂಚನೆಯನ್ನು ಈದಿನ ಬೆಳಗ್ಗೆ ತಿರಸ್ಕರಿಸಿದರು. ದೋಷಾರೋಪ
ಸೂಚನೆಯನ್ನು ತಿರಸ್ಕರಿಸಿ ೧೦ ಪುಟಗಳ ಆದೇಶ ನೀಡಿರುವ ವೆಂಕಯ್ಯ ನಾಯ್ಡು ಅವರು, ಸೂಚನೆ ತಿರಸ್ಕರಿಸುವ
ನಿರ್ಧಾರವನ್ನು ಕೈಗೊಳ್ಳುವ ಮುನ್ನ ಹೈದರಾಬಾದಿನ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಿ ದೆಹಲಿಗೆ
ವಾಪಸಾಗಿ ಭಾರತದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ
ಸುದರ್ಶನ ರೆಡ್ಡಿ ಸೇರಿದಂತೆ ಉನ್ನತ ಕಾನೂನು ಮತ್ತು ಸಂವಿಧಾನ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದರು.
‘ದೋಷಾರೋಪ ಸೂಚನೆಯಲ್ಲಿ ಮಾಡಲಾಗಿರುವ ಎಲ್ಲ ಐದು ಆರೋಪಗಳನ್ನು
ಮತ್ತು ಅದರೊಂದಿಗಿನ ಎಲ್ಲ ದಾಖಲೆ ಪತ್ರಗಳನ್ನು ನಾನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಗೊತ್ತುವಳಿಯಲ್ಲಿ
ಮಂಡಿಸಲಾಗಿರುವ ಅಂಶಗಳು ಸತ್ವಪೂರ್ಣವಾಗಿಲ್ಲದಿರುವುದನ್ನು ಕಂಡುಕೊಂಡಿದ್ದೇನೆ. ಗೊತ್ತುವಳಿಯಲ್ಲಿ
ಮಾಡಲಾಗಿರುವ ಆರೋಪಗಳಿಂದ ಸಿಜೆಐ ಅವರು ದುವರ್ತನೆಯ ಅಪರಾಧ ಎಸಗಿದ್ದಾರೆ ಎನ್ನುವುದನ್ನು ಸಾಬೀತು ಮಾಡಲು
ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಯಾವುದೇ ನ್ಯಾಯೋಚಿತ
ಮನಸ್ಸು ಬರಲು ಸಾಧ್ಯವಿದೆ” ಎಂದು ನಾಯ್ಡು ಹೇಳಿದರು.
ಸಿಜೆಐ ವಿರುದ್ಧದ ದೋಷಾರೋಪ ನಿರ್ಣಯವು ನ್ಯಾಯಾಂಗ
ಪರೀಕ್ಷೆಯಲ್ಲಿ ಗೆದ್ದೀತೇ ಎಂಬ ಬಗ್ಗೆ ನಾಯ್ಡು ಅವರು ಕಾನೂನು ಪರಿಣತರೊಂದಿಗೆ ಸಮಾಲೋಚನೆ ನಡೆಸಿದ
ಒಂದು ದಿನದ ಬಳಿಕ ನಿರ್ಣಯವನ್ನು ತಿರಸ್ಕರಿಸಿದರು.
‘ಮುಖ್ಯ ನ್ಯಾಯಮೂರ್ತಿಗಳನ್ನು ದೋಷಾರೋಪಕ್ಕೆ ಗುರಿಪಡಿಸಿ ಪದಚ್ಯುತಗೊಳಿಸಬೇಕೆಂಬ ಪ್ರತಿಪಕ್ಷಗಳ
ಸೂಚನೆಯಲ್ಲಿ ಯಾವುದೇ ಹುರುಳಿಲ್ಲ. ಕಾನೂನು ತಜ್ಞರ ಜತೆ ವಿಸ್ತೃತ ಸಮಾಲೋಚನೆ ನಡೆಸಿದ ಬಳಿಕ ಈ ಅಂಶ
ಮನದಟ್ಟಾಗಿದ್ದು, ಸೂಚನೆಯನ್ನು ಒಪ್ಪಿಕೊಳ್ಳಲಾಗದು’ ಎಂದು ನಾಯ್ಡು ತಿಳಿಸಿದರು.
‘ದೋಷಾರೋಪ ಸೂಚನೆಯಲ್ಲಿ ಉಲ್ಲೇಖಿಸಲಾದ ಎಲ್ಲ ಐದು
ಆರೋಪಗಳನ್ನೂ ಹಾಗೂ ಒದಗಿಸಿದ ದಾಖಲೆಗಳನ್ನು ವಿಸ್ತೃತವಾಗಿ ಪರಿಶೀಲಿಸಲಾಗಿದೆ. ಈ ಆಧಾರದಲ್ಲಿ ನನ್ನ
ವಿವೇಚನೆ ಬಳಸಿ ಸಿಜೆಐ ಅವರ ಪದಚ್ಯುತಿ ಬೇಡಿಕೆಗೆ ಯಾವುದೇ ಸಕಾರಣಗಳಿಲ್ಲ’ ಎಂದು ನಾಯ್ಡು ಹೇಳಿರುವುದಾಗಿ ಸುದ್ದಿ ಸಂಸ್ಥೆ
ವರದಿ ಮಾಡಿತು. ’ಸೂಚನೆ ಸಲ್ಲಿಸಿರುವ ಸಂಸತ್ತಿನ ಗೌರವಾನ್ವಿತ ಸದಸ್ಯರಿಗೆ
ತಮ್ಮ ಪ್ರಕರಣದ ಬಗ್ಗೆ ತಮಗೇ ಖಚಿತತೆ ಇಲ್ಲದೇ ಇರುವುದು ಸ್ಪಷ್ಟವಾಗಿದೆ. ಸೂಚನೆಯ ಮೊದಲ ಪುಟದಲ್ಲೇ
’ಪ್ರಸಾದ್ ಎಜುಕೆಷನ್ ಟ್ರಸ್ಟಿನ ವಾಸ್ತವಾಂಶಗಳು ಮತ್ತು ಸಂದರ್ಭಗಳು ಭಾರತದ ಮುಖ್ಯ ನ್ಯಾಯಮೂರ್ತಿಯವರು
ಅಕ್ರಮ ಲಂಚದ ಪ್ರಕರಣದಲ್ಲಿ ಶಾಮೀಲಾಗಿರಬಹುದು ಎಂದು ಸೂಚಿಸುವ ಮೇಲ್ನೋಟದ ಸಾಕ್ಷ್ಯಾಧಾರಗಳನ್ನು ಒಳಗೊಂಡಿವೆ’ ಎಂದು ಹೇಳುತ್ತದೆ’ ಎಂದು ನಾಯ್ಡು ಅವರು ತಮ್ಮ ಆದೇಶದಲ್ಲಿ ವಿಶ್ಲೇಷಿಸಿದರು. ಸೂಚನೆಯು ಮುಂದುವರೆದು ಭಾರತದ ಮುಖ್ಯ ನ್ಯಾಯಮೂರ್ತಿಯವರ
ಬಗ್ಗೆ ಪ್ರಸ್ತಾಪಿಸಿ ’ಅವರು ಕೂಡಾ ತನಿಖಾ ವ್ಯಾಪ್ತಿಗೆ ಬರುವ ಸಾಧ್ಯತೆಗಳಿವೆ’ ಎಂದು ಹೇಳುತ್ತದೆ ಎಂದು ಸಭಾಪತಿ ಹೇಳಿದ್ದಾರೆ. ‘ಭಾರತದ ಮುಖ್ಯ ನ್ಯಾಯಮೂರ್ತಿಯವರು ಪೂರ್ವ ದಿನಾಂಕದ ಆಡಳಿತಾತ್ಮಕ
ಆದೇಶ ನೀಡಿದಂತೆ ಕಾಣುತ್ತಿದೆ’ ಎಂಬ ವಾಕ್ಯವೂ ಸೂಚನೆಯಲ್ಲಿದೆ’ ಎಂದು ಉಲ್ಲೇಖಿಸಿರುವ ನಾಯ್ಡು ಅವರು, ’ಸಂಸತ್ತಿನ
ಗೌರವಾನ್ವಿತ ಸದಸ್ಯರು ಬಳಸಿರುವ ಇಂತಹ ವಾಕ್ಯಗಳು ತಮ್ಮ ಮಾತುಗಳ ಬಗ್ಗೆ ಅವರಿಗೇ ಸಂಶಯ ಇರುವುದನ್ನು
ಸೂಚಿಸುತ್ತದೆ ಎಂಬುದನ್ನು ಸ್ಪಷ್ಟ ಪಡಿಸುವ ಸಲುವಾಗಿ ನಾನು ಈ ವಾಕ್ಯಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ’ ಎಂದು ನಾಯ್ಡು ಅವರ ಆದೇಶ ತಿಳಿಸಿದೆ. ‘ಈ ವಾಕ್ಯಗಳು ಸೂಚನೆಯು ಸಂಶಯಾತೀತ ಸಾಕ್ಷ್ಯಾಧಾರಗಳನ್ನು
ಹೊಂದಿಲ್ಲ ಎಂಬುದನ್ನು ಖಚಿತವಾಗಿ ದೃಢಪಡಿಸುತ್ತದೆ. ಸಂವಿಧಾನದ ೧೨೪ನೇ ಪರಿಚ್ಛೇದದ ಅಡಿಯಲ್ಲಿ ದುರ್ವರ್ತನೆಯ
ಆರೋಪವನ್ನು ಸಾಬೀತು ಪಡಿಸಲು ಸಂಶಯಾತೀತ ಸಾಕ್ಷ್ಯಾಧಾರ ಇರಬೇಕಾದ್ದು ಅತ್ಯಗತ್ಯ. ವಿಶ್ವಾಸಾರ್ಹತೆ
ಇಲ್ಲದ ಮೂರನೇ ಪಕ್ಷದವರ ನಡುವಣ ಸಂಭಾಷಣೆಯನ್ನೇ ನಂಬಿರುವುದು ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು
ಹೊಂದಿದವರ ವಿರುದ್ಧದ ವಾಸ್ತವಿಕ ಸಾಕ್ಷ್ಯವಾಗುವುದಿಲ್ಲ’ ಎಂದು ಆದೇಶ ಹೇಳಿದೆ. ‘ಸಿಜೆಐ ಅವರು ಮಾಸ್ಟರ್ ಆಫ್ ರೋಸ್ಟರ್ ಆಗಿ ತಮಗೆ ಸರಿ ಎನ್ನಿಸಿದ
ರೀತಿಯಲ್ಲಿ ಪ್ರಕರಣಗಳ ನಿಯೋಜನೆ ಮಾಡುವ ಅಧಿಕಾರ ಹೊಂದಿದ್ದು, ಅದು ನ್ಯಾಯಾಂಗದ ಆಂತರಿಕ ವಿಚಾರ ಎಂಬುದಾಗಿ
ಸುಪ್ರೀಂಕೋರ್ಟ್ ಆದೇಶ ಪುನರುಚ್ಚರಿಸಿದ್ದನ್ನೂ ನಾಯ್ಡು ಅವರು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ಪಕ್ಷಗಳ ೬೪ ಸಂಸದರು
ಭಾರತದ ಮುಖ್ಯ ನ್ಯಾಯಮೂರ್ತಿಯವರ ಪದಚ್ಯುತಿಗೆ ಆಗ್ರಹಿಸಿ ರಾಜ್ಯಸಭಾ ಸಭಾಪತಿಯವರಿಗೆ ಶುಕ್ರವಾರ ನೋಟಿಸ್
ನೀಡಿದ್ದರು. ಎನ್ ಸಿಪಿ, ಸಿಪಿಐ-ಎಂ, ಸಿಪಿಐ, ಎಸ್ಪಿ, ಬಿಎಸ್ಪಿ ಮತ್ತು ಮುಸ್ಲಿಂ ಲೀಗ್ ಈ ಬೇಡಿಕೆಗೆ
ಕಾಂಗ್ರೆಸ್ ಜೊತೆ ಕೈಜೋಡಿಸಿದ್ದವು. ತತ್ ಕ್ಷಣ ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪಿ.ಎಲ್
ಪುನಿಯಾ, ಪ್ರತಿಪಕ್ಷಗಳು ಮುಂದಿನ ಕ್ರಮಕ್ಕಾಗಿ ಕಾನೂನು ತಜ್ಞರ ಜತೆ ಚರ್ಚಿಸುವುದಾಗಿ ಹೇಳಿದರು. ನೋಟೀಸ್
ತಿರಸ್ಕೃತವಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಕ್ಕೂ ಸಿದ್ಧವಿರುವುದಾಗಿ ಕಾಂಗ್ರೆಸ್ ನಾಯಕರು ಕಳೆದ
ವಾರವೇ ಹೇಳಿದ್ದರು. ನಾಯ್ಡು ಅವರು ಈ ನೋಟೀಸನ್ನು ತಿರಸ್ಕರಿಸುತ್ತಾರೆ ಎಂಬುದು ಮೊದಲೇ ತಿಳಿದಿತ್ತು
ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕ ತೆಹ್ಸೀನ್ ಪೂನಾವಾಲ ಪ್ರತಿಕ್ರಿಯಿಸಿದರು.
ಮುಖ್ಯ
ನ್ಯಾಯಮೂರ್ತಿಗಳ ಪದಚ್ಯುತಿ ಬೇಡಿಕೆ ನೋಟೀಸ್ ತಿರಸ್ಕೃತವಾಗಿರುವುದನ್ನು ಪ್ರಜಾಪ್ರಭುತ್ವದ ವಿಜಯ ಎಂದು
ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ‘ಭಾರತದ
ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಸಲ್ಲಿಸಲಾಗಿದ್ದ ರಾಜಕೀಯವಾಗಿ ಪೂರ್ವಾಗ್ರಹಪೀಡಿತವಾಗಿದ್ದ ಬೇಡಿಕೆಯನ್ನು
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದಾರೆ. ಇದು ಪ್ರಜಾಪ್ರಭುತ್ವದ ವಿಜಯ’ ಎಂದು ಮೋದಿ ಟ್ವೀಟ್ ಮಾಡಿದರು.
2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ
ದೀಪಕ್ ಮಿಶ್ರ ಅವರ ವಿರುದ್ಧ ಸಲ್ಲಿಸಲಾಗಿದ್ದ ದೋಷಾರೋಪ (ವಾಗ್ದಂಡನೆ) ಸೂಚನೆಯನ್ನು ತಿರಸ್ಕರಿಸಿದ
ರಾಜ್ಯಸಭಾ ಸಭಾಪತಿಯವರ ಆದೇಶ ಅಕ್ರಮವಾಗಿದ್ದು, ಅದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಗುವುದು
ಎಂದು ಕಾಂಗ್ರೆಸ್ ಪ್ರಕಟಿಸಿತು. ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಕಾಂಗ್ರೆಸ್ ಧುರೀಣ ಕಪಿಲ್ ಸಿಬಲ್ ಮತ್ತು ಇತರರು ’ಸಭಾಪತಿಯವರ ಆದೇಶ ಅಭೂತಪೂರ್ವ, ಅಕ್ರಮ,
ಅವಸರದ್ದು ಮತ್ತು ತಪ್ಪು ಸಲಹೆಯನ್ನು ಆಧರಿಸಿದ್ದು’ ಎಂದು ಬಣ್ಣಿಸಿದರು. ‘ಇತಿಹಾಸದಲ್ಲಿ ಎಂದೂ ಇಂತಹುದು ಘಟಿಸಿಲ್ಲ. ಪೂರ್ಣ ಪ್ರಮಾಣದ
ತನಿಖೆಯ ಬಳಿಕ ನೀಡಬೇಕಾಗಿದ್ದ ಆದೇಶವನ್ನು ಸಭಾಪತಿಯವರು ಅವಸರದಲ್ಲಿ ನೀಡಿದ್ದಾರೆ, ಆದ್ದರಿಂದ ಇದು
ಅಕ್ರಮ ಆದೇಶ’ ಎಂದು ಕಾಂಗ್ರೆಸ್ ವಕ್ತಾರ ಕಪಿಲ್ ಸಿಬಲ್
ಹೇಳಿದರು. ಕಾಂಗ್ರೆಸ್ ಸೇರಿದಂತೆ ಏಳು ವಿಪಕ್ಷಗಳು
ಸಲ್ಲಿಸಿದ್ದ ದೋಷಾರೋಪ ಸೂಚನೆಯನ್ನು ವೆಂಕಯ್ಯ ನಾಯ್ಡು ಅವರು ಸೋಮವಾರ ಬೆಳಗ್ಗೆ ತಿರಸ್ಕರಿಸಿದ್ದರು.
ಸಂಸತ್ ಸದಸ್ಯರು ಸಲ್ಲಿಸಿದ್ದ ಸೂಚನೆಯು ಪ್ರಸಾದ್ ಎಜುಕೇಶನ್ ಟ್ರಸ್ಟ್ ಪ್ರಕರಣದ ಬಗ್ಗೆ ಕೇವಲ ಸಂಶಯಗಳನ್ನು
ಸೂಚಿಸಿದೆ. ಇದು ದುರ್ವರ್ತನೆಯನ್ನು ಸಾಬೀತು ಪಡಿಸುವಂತಹ ಸಂಶಯಾತೀತ ಸಾಕ್ಷ್ಯಾಧಾರ ಆಗುವುದಿಲ್ಲ ಎಂದು
ನಾಯ್ಡು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದರು. ಸಭಾಪತಿಯವರ
ಆದೇಶ ಅಕ್ರಮ, ಅವರಸರದ್ದು ಮತ್ತು ತಪ್ಪು ಸಲಹೆಯನ್ನು ಆಧರಿಸಿದ್ದು. ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು
ಸಿಜೆಐ ದೀಪಕ್ ಮಿಶ್ರ ಅವರನ್ನು ದೋಷಾರೋಪಕ್ಕೆ ಗುರಿಪಡಿಸುವಂತೆ ಕೋರಿದ ಸೂಚನೆಯನ್ನು ಪ್ರಾಥಮಿಕ ಹಂತದಲ್ಲೇ
ತಿರಸ್ಕರಿಸಲಾಗಿದೆ. ಪೂರ್ಣ ಪ್ರಮಾಣದ ತನಿಖೆಯ ಬಳಿಕ ಸಭಾಪತಿಯವರು ತಮ್ಮ ಆದೇಶ ಹೊರಡಿಸಬೇಕಾಗಿತ್ತು.
ಹಾಗೆ ಮಾಡದೇ ಇರುವ ಕಾರಣ ಇದು ಅಕ್ರಮ ಎಂದು ಕಪಿಲ್ ಸಿಬಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಿಜೆಐ ದೀಪಕ್ ಮಿಶ್ರ ಅವರು ನಿವೃತ್ತರಾಗುವವರೆಗೂ ತಾವು
ಇನ್ನು ಅವರ ನ್ಯಾಯಾಲಯಗಳಲ್ಲಿ ಹಾಜರಾಗುವುದಿಲ್ಲ ಎಂದೂ ಕಾಂಗ್ರೆಸ್ ನಾಯಕ ಹಾಗೂ ಹಿರಿಯ ವಕಿಲರಾದ ಕಪಿಲ್
ಸಿಬಲ್ ಪ್ರಕಟಿಸಿದರು. ‘ನಾನು ನಾಳೆಯಿಂದಲೇ ಮುಖ್ಯ
ನ್ಯಾಯಮೂರ್ತಿಯವರ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ’ ಎಂದು ಅವರು ನುಡಿದರು. ‘ನಾನು ನನ್ನ ವೃತ್ತಿಯಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಂಡು
ಬಂದಿದ್ದೇನೆ. ಅವರು (ಸಿಜೆಐ) ಹುದ್ದೆಯಲ್ಲಿ ಮುಂದುವರೆದರೆ, ಅವರು (ಹುದ್ದೆಯಿಂದ) ನಿವೃತ್ತರಾಗುವವರೆಗೆ
ಮತ್ತು ತನಿಖೆ ಆರಂಭವಾಗುವರೆಗೆ ನಾನು ಸಿಜೆಐ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ. ನಾವು ಕೆಲವು ಗುಣಮಟ್ಟಗಳಲ್ಲಿ
ನಂಬಿಕೆ ಇಟ್ಟುಕೊಂಡಿದ್ದೇವೆ’ ಎಂದು ಅವರು ನುಡಿದರು. ಡಿಎಂಕೆ ಸಂಸದೆ ಕನಿಮೋಳಿ ಅವರು ಸರ್ಕಾರವು ದೋಷಾರೋಪ ನಿರ್ಣಯವನ್ನು
ತಿರಸ್ಕರಿಸುತ್ತದೆ ಎಂಬುದು ನಿರೀಕ್ಷಿತ ಹೇಳಿದರು. ‘ಸರ್ಕಾರ ಏನು ಮಾಡಬೇಕು ಎಂದು ನೀವು ನಿರೀಕ್ಷಿಸುತ್ತೀರಿ?
ತಮ್ಮನ್ನು ಪ್ರಶ್ನಿಸುವವರನ್ನು ಅವರು ಎಂದಿಗೂ ಪ್ರೋತ್ಸಾಹಿಸುವುದಿಲ್ಲ.’ ಎಂದು ಅವರು ನುಡಿದರು. ಡಿಎಂಕೆ
ಸಂಸದರು ನೋಟಿಸಿಗೆ ಏಕೆ ಸಹಿ ಮಾಡಲಿಲ್ಲ ಎಂಬ ಪ್ರಶ್ನೆಗೆ ನ್ಯಾಯಾಂಗವನ್ನು ಪ್ರಶ್ನಿಸುವ ಮಟ್ಟಕ್ಕೆ
ತರುವುದನ್ನು ತಮ್ಮ ಪಕ್ಷವು ನಂಬುವುದಿಲ್ಲ. ನ್ಯಾಯಮೂರ್ತಿಗಳ ಮಧ್ಯೆ ಇನ್ನಷ್ಟು ಸಂಭಾಷಣೆಗಳು ನಡೆದು
ಅವರು ಹೊಂದಾಣಿಕೆಗೆ ಬರಬಹುದು ಎಂದು ತಮ್ಮ ಪಕ್ಷವು ಹಾರೈಸುತ್ತದೆ. ಇದು ಎಲ್ಲ ನಾಗರಿಕರಿಗೂ ಅಂತಿಮ
ದಾರಿ. ಹೀಗಾಗಿಯೇ ಪಕ್ಷವು ಸೂಚನೆಗೆ ಸಹಿ ಮಾಡದಿರಲು ನಿರ್ಧರಿಸಿತು ಎಂದು ಅವರು ಹೇಳಿದರು. ‘ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ವಿರುದ್ಧ ಸಲ್ಲಿಸಲಾದ
ದೋಷಾರೋಪ ನಿರ್ಣಯದ ಬಗ್ಗೆ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರು ಅವಸರದ ನಿರ್ಣಯ ಕೈಗೊಂಡಿದ್ದಾರೆ.
ಇದು ಕೆಟ್ಟ ಸಂಪ್ರದಾಯವನ್ನು ಹಾಕಿಕೊಟ್ಟಿದೆ ಮತ್ತು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಲೋಕಸಭೆಯ
ಮಾಜಿ ಸಭಾಧ್ಯಕ್ಷ ಸೋಮನಾಥ ಚಟರ್ಜಿ ಹೇಳಿದರು. ಸೂಚನೆಯನ್ನು
ತಿರಸ್ಕರಿಸುವ ಮುನ್ನ ನಾಯ್ಡು ಅವರು ಸೂಕ್ತ ನಿಯಮಾವಳಿಗಳನ್ನು ಅನುಸರಿಸಬೇಕಾಗಿತ್ತು ಎಂದು ನುಡಿದ
ಚಟರ್ಜಿ ಹಿಂದೆ ದೋಷಾರೋಪ ನಿರ್ಣಯಗಳು ಬಂದಾಗ ನಿಯಮಾವಳಿಗಳನ್ನು ಅನುರಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದರು.
2018: ನವದೆಹಲಿ: ’ಶೌಚಾಲಯಗಳು ಮತ್ತು
ಮಾನವ ಮಲವನ್ನು ಸ್ವಚ್ಛಗೊಳಿಸುವುದರಲ್ಲಿ ಪಾವಿತ್ರ್ಯವಿದೆ’ ಎಂಬ ಪ್ರಧಾನಿ ಮೋದಿ
ಅವರ ನಂಬಿಕೆ ಬಗ್ಗೆ ರಾಷ್ಟ್ರದ ದಲಿತರು ಕ್ರುದ್ಧರಾಗಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ ಅವರು ಸೋಮವಾರ ದಲಿತರನ್ನು ಸೆಳೆಯುವ ಭಾರಿ ಯತ್ನವನ್ನು ಮಾಡಿದರು. ಪ್ರಧಾನಿ ಮೋದಿ ಅವರು ಬರೆದ ’ಕರ್ಮ ಯೋಗಿ’ ಪುಸ್ತಕದ ವಾಕ್ಯವೊಂದನ್ನು ಉಲ್ಲೇಖಿಸಿದ ರಾಹುಲ್
’ದಲಿತರು ಮತ್ತು ತುಳಿತಕ್ಕೆ ಒಳಗಾದವರ ಬಗೆಗಿನ ಪ್ರಧಾನಿಯವರ ಧೋರಣೆಯು ಅವರು ದಲಿತರ ನೋವಿನ ವಿಷಯಗಳನ್ನು
ಅರ್ಥ ಮಾಡಿಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದರು. ಎರಡು ಕೋಟಿಗೂ ಹೆಚ್ಚು ಯುವಕರು ನಿರುದ್ಯೋಗಿಗಳಾಗಿದ್ದಾರೆ
ಮತ್ತು ಅವರು ಪಾವಿತ್ರ್ಯದ ಬಗ್ಗೆ ಮಾತನಾಡುತ್ತಾರೆ ಎಂದು ರಾಹುಲ್ ಗಾಂಧಿ ನುಡಿದರು. ‘ಸಂವಿಧಾನ ರಕ್ಷಿಸಿ’ ಜಾಥಾವನ್ನು ಉದ್ಘಾಟಿಸಿ
ಮಾತನಾಡಿದ ಕಾಂಗ್ರೆಸ್ ನಾಯಕ ’ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್ ಸೃಷ್ಟಿಸಿದ ರಾಷ್ಟ್ರದ
ಸಂಸ್ಥೆಗಳನ್ನು ನಾಶಮಾಡಲು ಬಿಡುವುದಿಲ್ಲ’ ಎಂದು ಘೋಷಿಸಿದರು. ‘ಉನಾ, ಮಧ್ಯಪ್ರದೇಶದತ್ತ ನೋಡಿ. ದಲಿತರ ಮೇಲಿನ ದೌರ್ಜನ್ಯಗಳು
ಹೆಚ್ಚಾಗುತ್ತಿವೆ. ಬದಿಗೊತ್ತಲ್ಪಟ್ಟವರು, ದಲಿತರು ಮತ್ತು ಮಹಿಳೆಯರನ್ನು ಸಂವಿಧಾನ ಮಾತ್ರವೇ ರಕ್ಷಿಸುತ್ತದೆ.
ಸಂವಿಧಾನವನ್ನು ರಚಿಸಿ ಭಾರತಕ್ಕೆ ನೀಡಿದ್ದು ಕೇವಲ ಅಂಬೇಡ್ಕರ್ ಮತು ಕಾಂಗ್ರೆಸ್. ಐಐಟಿ, ಐಐಎಂ, ಚುನಾವಣಾ ಆಯೋಗ, ರಾಜ್ಯಸಭಾ, ಲೋಕಸಭಾ- ಯಾವ
ಸಂಸ್ಥೆಯನ್ನಾದರೂ ತೆಗೆದುಕೊಳ್ಳಿ, ಎಲ್ಲವನ್ನೂ ಕೊಟ್ಟದ್ದು ಸಂವಿಧಾನ. ಈಗ ನಮ್ಮ ಎಲ್ಲ ಸಂಸ್ಥೆಗಳಲ್ಲೂ
ಆರೆಸ್ಸೆಸ್ ಪ್ರಭಾವಿತ ನಾಯಕರಿಗೆ ಸ್ಥಾನಗಳನ್ನು ನೀಡಲಾಗಿದೆ’ ಎಂದು ರಾಹುಲ್ ಗಾಂಧಿ
ಕಾಂಗ್ರೆಸ್ ಕಾರ್‍ಯಕರ್ತರು, ಜಿಲ್ಲಾ ಮತ್ತು ಪಂಚಾಯತ್ ಮಟ್ಟದ ಕಾರ್ಮಿಕರ ಸಮಾವೇಶವನ್ನು ಉದ್ದೇಶಿಸಿ
ಮಾತನಾಡುತ್ತಾ ಹೇಳಿದರು. ವಿದೇಶಗಳಲ್ಲಿ
ಭಾರತದ ವರ್ಚಸ್ಸು ಹಾಳಾಗುತ್ತಿರುವುದಕ್ಕೂ ಅವರು ಬಿಜೆಪಿ ಸರ್ಕಾರವನ್ನು ದೂಷಿಸಿದರು. ‘ಇಡೀ ಜಗತ್ತು ಭಾರತದ ಸಮೃದ್ಧಿ ವಿವಿಧತೆಯನ್ನು ಆಧರಿಸಿ
ನಿಂತಿದೆ ಎಂದು ಯೋಚಿಸುತ್ತದೆ. ಭಾರತದ ಸಂವಿಧಾನ, ಸಂಸ್ಥೆಗಳು, ಸುಪ್ರೀಂಕೋರ್ಟ್ ಬಗ್ಗೆ ಅವರು ಅಪಾರ
ಗೌರವ ಹೊಂದಿದ್ದಾರೆ ಮತ್ತು ಮಾರ್ಗದರ್ಶನಕ್ಕಾಗಿ ನಮ್ಮತ್ತ ನೋಡುತ್ತಾರೆ. ಭಾರತ ತಮಗೆ ಮಾರ್ಗದರ್ಶನ
ಮಾಡುತ್ತದೆ ಎಂದು ನಾನು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಅವರು ಹೇಳಿದ್ದರು. ಆದರೆ ಈ ಖ್ಯಾತಿಯನ್ನು ಬಿಜೆಪಿ ಹಾಳುಗೆಡವಿದೆ. ಈಗ ಎಲ್ಲೆಡೆಯಲ್ಲೂ
ಅಪ್ರಾಪ್ತರ ಮೇಲೆ ಅತ್ಯಾಚಾರ, ಅಲ್ಪಸಂಖ್ಯಾತರ ಮೇಲೆ ದಾಳಿ, ದಲಿತ ಮೇಲೆ ದೌರ್ಜನ್ಯ ಇತ್ಯಾದಿ ವಿಷಯಗಳ
ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಕಾಂಗ್ರೆಸ್ ನಾಯಕ
ನುಡಿದರು. ಪತ್ರಿಕೆಗಳಿಗೆ
ಮಸಾಲೆ ಕೊಡಬೇಡಿ ಮತ್ತು ಎಲ್ಲೆಂದರಲ್ಲಿ, ಎಲ್ಲ ವಿಷಯಗಳ ಬಗ್ಗೆ ಹೇಳಿಕೆ ನೀಡುವುದರಿಂದ ದೂರವಿರಿ ಎಂದು
ಪ್ರಧಾನಿ ಮೋದಿ ಅವರು ತಮ್ಮ ಸಚಿವರು ಮತ್ತು ನಾಯಕರಿಗೆ ಇತ್ತೀಚೆಗೆ ಸೂಚಿಸಿದ್ದರು. ಈ ಹೇಳಿಕೆಯನ್ನೂ ಉಲ್ಲೇಖಿಸಿದ ರಾಹುಲ್ ಗಾಂಧಿ, ’ಇದು ಮಾಧ್ಯಮವನ್ನು
ಮಟ್ಟ ಹಾಕುವ ಕರೆ. ಕಾಂಗ್ರೆಸ್ ಮಾತ್ರವೇ ಪತ್ರಿಕೆಗಳು ತಮ್ಮ ವಿರುದ್ಧ ಇದ್ದರೂ ಅವುಗಳ ಪರ ನಿಂತ ಪಕ್ಷ’ ಎಂದು ಹೇಳಿದರು. ‘ಅವರು ಸಚಿವರಿಗೆ
ಮೌನವಾಗಿರಲು ಸೂಚಿಸುತ್ತಾರೆ. ಯಾರೂ ಮಾತನಾಡಬಾರದು ಮತ್ತು ಇಡೀ ರಾಷ್ಟ್ರ ಕೇವಲ ತಮ್ಮ ಮನ್ ಕಿ ಬಾತ್
ಆಲಿಸಬೇಕು. ಪ್ರಧಾನಿ ಮೋದಿ ಅವರು ಕೇವಲ ಮೋದಿ ಅವರಲ್ಲಿ ಮಾತ್ರವೇ ಆಸಕ್ತಿ ಹೊಂದಿದ್ದಾರೆ ಎಂದು ಇಡೀ
ರಾಷ್ಟ್ರಕ್ಕೆ ಗೊತ್ತಿದೆ. ಯಾರೇ ಪತ್ರಕರ್ತ ನನ್ನ ಬಳಿ
ಎಂನರೇಗಾ ಬಗ್ಗೆ ಕೇಳಬಹುದು, ನಾನು ಅದಕ್ಕೆ ಉತ್ತರ ಕೊಡುತ್ತೇನೆ. ಇದನ್ನೇ ಮೋದಿ ಅವರಿಗೆ
ಕೇಳಿ. ನಿಮ್ಮನ್ನು ಕೊಠಡಿಯಿಂದಲೇ ಹೊರಹಾಕಲಾಗುತ್ತದೆ. ನೀವು ನಮ್ಮ ವಿರುದ್ಧ ಇದ್ದರೂ ನಾವು ನಿಮ್ಮನ್ನು
ರಕ್ಷಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ’ ಎಂದು ರಾಹುಲ್ ನುಡಿದರು. ಅತ್ಯಾಚಾರ ಪ್ರಕರಣಗಳ ಬಗ್ಗೆ ಆಡಳಿತಾರೂಢ ಸರ್ಕಾರ ಗಾಢ ಮೌನ
ತಳೆದಿರುವ ಬಗ್ಗೆ ಕೂಡಾ ರ್‍ಯಾಲಿ ಬೊಟ್ಟು ಮಾಡಿತು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಮಾತ್ರವೇ ಇಂತಹ
ಪ್ರಕರಣಗಳನ್ನು ರಾಷ್ಟ್ರದಲ್ಲಿ ನಡೆಯದಂತೆ ಮಾಡಲು ನೆರವಾಗುತ್ತದೆ ಎಂದು ರಾಹುಲ್ ಹೇಳಿದರು. ‘ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಾತ್ರವೇ ಅಪ್ರಾಪ್ತರು
ಮಹಿಳೆಯರ ಮೇಲಿನ ಅತ್ಯಾಚಾರದ ಸಮಸ್ಯೆಗಳನ್ನು ನಿವಾರಿಸಬಲ್ಲುದು. ರಾಷ್ಟ್ರದ ಯಾವುದೇ ಮೂಲೆಯಲ್ಲಿ ಇಂತಹ
ದೌರ್ಜನ್ಯ ನಡೆದಾಗ ಕಾಂಗ್ರೆಸ್ ಕಾರ್ಯಕರ್ತರು ಸಮಸ್ಯೆ ನಿವಾರಣೆಗೆ ಮುಂದಾಗುವುದನ್ನು ನೀವು ನೋಡಬಲ್ಲಿರಿ
ಎಂದು ರಾಹುಲ್ ನುಡಿದರು. ಅತ್ಯಾಚಾರಗಳು ನಡೆದರೂ,
ಜನರು ಸಾವನ್ನಪ್ಪಿದರೂ ಪ್ರಧಾನಿಯವರು ಕೇವಲ ಪ್ರಧಾನಿಯಾಗುವುದು ಹೇಗೆ ಎಂದು ಯೋಚಿಸುತ್ತಿರುವುದು ಇದಕ್ಕೆ
ಕಾರಣ ಎಂದು ರಾಹುಲ್ ನುಡಿದರು. ಬಿಜೆಪಿಯ ’ಬೇಟಿ ಬಚಾವೋ, ಬೇಟಿ ಪಡಾವೋ’ ಘೋಷಣೆ ಈಗ ’ಬಚಾವೋ ಬಚಾವೋ ಫ್ರಮ್ ಬಿಜೆಪಿ
ಎಂಎಲ್ ಎ’ (ಬಿಜೆಪಿ ಶಾಸಕರಿಂದ ರಕ್ಷಿಸಿ, ರಕ್ಷಿಸಿ) ಎಂದು
ಬದಲಾಗಿದೆ ಎಂದು ರಾಹುಲ್ ಚುಚ್ಚಿದರು.
2018: ನವದೆಹಲಿ: ಏಪ್ರಿಲ್ ೧ರಿಂದ ಜಾರಿಯಾಗುವಂತೆ
ಮೇಘಾಲಯದಿಂದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯ್ದೆಯನ್ನು (ಎಎಫ್ ಎಸ್ ಪಿಎ) ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಗೃಹ ಇಲಾಖೆಯ
ಅಧಿಕಾರಿಯೊಬ್ಬರು ತಿಳಿಸಿದರು. ಅಸ್ಸಾಂ - ಮೇಘಾಲಯ ಗಡಿಯಲ್ಲಿನ ೨೦ ಕಿಮೀ ವ್ಯಾಪ್ತಿಯಲ್ಲಿ ಈ ಮುನ್ನ
ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ ಜಾರಿಯಲ್ಲಿತ್ತು. ಅರುಣಾಚಲ ಪ್ರದೇಶದಲ್ಲಿ ಕಾಯ್ದೆಯ ವ್ಯಾಪ್ತಿಯನ್ನು ೧೬ ಪೊಲೀಸ್
ಠಾಣೆಗಳಿಂದ ೮ ಠಾಣೆಗಳಿಗೆ ಮತ್ತು ಅಸ್ಸಾಂ ಗಡಿಯ ಟಿರಪ್, ಲಾಂಗ್ಡಿಂಗ್ ಮತ್ತು ಚಂಗ್ಲಾಂಗ್ ಜಿಲ್ಲೆಗಳಲ್ಲಿ
ಹಿಂತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಣಿಪುರ,
ಮಿಜೋರಂ ಮತ್ತು ನಾಗಾಲ್ಯಾಂಡಿಗೆ ಭೇಟಿ ನೀಡುವ ವಿದೇಶೀಯರಿಗೆ ಸಂರಕ್ಷಿತ ಪ್ರದೇಶ ಅನುಮತಿಯನ್ನೂ (ಪಿಎಪಿ) ಸಡಿಲಗೊಳಿಸಲಾಗಿದೆ. ಪಿಎಪಿಯು ಐದು ವರ್ಷಗಳ ಅವಧಿಗೆ
ಸಕ್ರಮವಾಗಿದ್ದು, ಪಾಕಿಸ್ತಾನ, ಆಫ್ಘಾನಿಸ್ಥಾನ, ಮತ್ತು ಚೀನಾದ ನಿವಾಸಿಗಳಿಗೆ ಮಾತ್ರ ಈ ಪ್ರದೇಶಗಳ
ಭೇಟಿಗೆ ಅನುಮತಿ ನೀಡಲಾಗುವುದಿಲ್ಲ. ೧೯೫೮ರ ಸಶಸ್ತ್ರ
ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ (ಇಂಫಾಲದ ಏಳು ವಿಧಾನಸಭಾ ಕ್ಷೇತ್ರಗಳನ್ನು
ಹೊರತುಪಡಿಸಿ) ರಾಜ್ಯಗಳಲ್ಲಿ ಪೂರ್ತಿಯಾಗಿ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಜಾರಿಯಲ್ಲಿತ್ತು.
ಕಾಯ್ದೆಯ ಸೆಕ್ಷನ್ ೩ರ ಪ್ರಕಾರ ನಾಗರಿಕ ಅಧಿಕಾರಕ್ಕೆ ನೆರವಾಗಲು ಸಶಸ್ತ್ರ ಪಡೆಗಳ ಅಗತ್ಯ ಎಲ್ಲಿದೆಯೋ
ಅಂತಹ ಸ್ಥಳಗಳಲ್ಲಿ ಅದನ್ನು ಹಿಂತೆಗೆದುಕೊಳ್ಳಲು ಅವಕಾಶವಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ನಿಯೋಜಿತವಾದ ಸೇನೆ ಮತ್ತು
ಕೇಂದ್ರೀಯ ಪಡೆಗಳಿಗೆ ಕಾನೂನಿಗೆ ವಿರುದ್ಧವಾಗಿ ವರ್ತಿಸುವ ಯಾರೇ ವ್ಯಕ್ತಿಯನ್ನು ಕೊಲ್ಲುವ, ಬಂಧಿಸುವ
ಮತ್ತು ಯಾವುದೇ ಆವರಣದಲ್ಲಿ ವಾರಂಟ್ ಇಲ್ಲದೆ ಶೋಧ
ನಡೆಸುವ ಮತ್ತು ಕೇಂದ್ರದ ಒಪ್ಪಿಗೆ ಇಲ್ಲದೆಯೇ ಪಡೆಗಳಿಗೆ ಕಾನೂನು ಕ್ರಮ ಮತ್ತು ಕಾನೂನು ಖಟ್ಲೆಗಳಿಂದ
ವಿನಾಯ್ತಿಯ ಅಧಿಕಾರವನ್ನು ಸಶಸ್ತ್ರ ಪಡೆಗಳಿಗೆ ಕಾಯ್ದೆಯು ನೀಡಿದೆ. ಕೇಂದ್ರ
ಸರ್ಕಾರವು ಅಸ್ಸಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಲ್ಲಿ ಕಾಲ ಕಾಲಕ್ಕೆ ಇದಕ್ಕೆ
ಸಂಬಂಧಿಸಿದ ಅಧಿಸೂಚನೆಗಳನ್ನು ಹೊರಡಿಸುತ್ತಿರುತ್ತದೆ.
ತ್ರಿಪುರಾ ರಾಜ್ಯದಲ್ಲಿ ೨೦೧೫ರಲ್ಲಿ ಎಎಫ್ ಎಸ್ ಪಿಎಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಕಳೆದ
ವರ್ಷ ಗೃಹ ಸಚಿವಾಲಯವು ತನ್ನ ಅಧಿಕಾರವನ್ನು ಬಿಟ್ಟುಕೊಟ್ಟು ರಾಜ್ಯದಲ್ಲಿ ಕಾಯ್ದೆಯನ್ನು ಮುಂದುವರೆಸುವ
ಬಗ್ಗೆ ನಿರ್ಧಾರ ಕೈಗೊಳ್ಳಲು ಅಸ್ಸಾಂ ಸರ್ಕಾರಕ್ಕೆ ಸೂಚಿಸಿತ್ತು. ಕಾಯ್ದೆಯನ್ನು ಕಾರ್ಯಾಚರಣೆಯ ದೃಷ್ಟಿಯಿಂದ ಪರಿಣಾಮಕಾರಿ
ಹಾಗೂ ಮಾನವೀಯವನ್ನಾಗಿ ಮಾಡುವ ಪ್ರಸ್ತಾಪವನ್ನು ಕೇಂದ್ರವು ಪರಿಶೀಲಿಸುತ್ತಿದೆ ಎಂದು ಗೃಹ ಖಾತೆ ರಾಜ್ಯ
ಸಚಿವ ಹನ್ಸರಾಜ್ ಗಂಗಾರಾಮ್ ಅಹಿತ್ ಮಾರ್ಚ್ ೨೦ರಂದು ಲೋಕಸಭೆಗೆ ತಿಳಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿರುವ ಸಶಸ್ತ್ರ
ಪಡೆಗಳ (ಜಮ್ಮು ಮತ್ತು ಕಾಶ್ಮೀರ) ವಿಶೇಷ ಅಧಿಕಾರಗಳ ಕಾಯ್ದೆ, ೧೯೯೦ನ್ನು ತಿದ್ದುಪಡಿ ಮಾಡುವ ಪ್ರಸ್ತಾಪ
ಇಲ್ಲ ಎಂದು ಅಹಿರ್ ಹೇಳಿದ್ದರು. ಆದರೆ ಕಾಯ್ದೆಯನ್ನು ಪರಿಣಾಮಕಾರಿ ಮತ್ತು ಮಾನವಿಯವನ್ನಾಗಿ ಮಾಡುವ
ಪ್ರಸ್ತಾಪಗಳು ಇವೆ ಎಂದು ಅವರು ಲೋಕಸಭೆಗೆ ತಿಳಿಸಿದ್ದರು.
2018: ನವದೆಹಲಿ: ಕಾಂಗ್ರೆಸ್ ಪ್ರಾರಂಭಿಸಿರುವ
‘ಸಂವಿಧಾನ ರಕ್ಷಿಸಿ’ ಅಭಿಯಾನವನ್ನು ಪ್ರಹಸನ
ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕುಟುಂಬ ರಾಜಕಾರಣದ ಉಳಿವಿಗಾಗಿ ಈ ಪ್ರಯತ್ನ
ಎಂದು ಅಣಕಿಸಿದರು. ‘ಭಾರತೀಯ ಸೇನೆ, ನ್ಯಾಯಾಂಗ, ಸುಪ್ರೀಂ ಕೋರ್ಟ್,
ಚುನಾವಣಾ ಆಯೋಗ, ಇವಿಎಂ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮೇಲೆ ನಂಬಿಕೆ ಇಲ್ಲದವರು ಈಗ,
ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುತ್ತಿದ್ದಾರೆ’ ಎಂದು ಆರೋಪಿಸಿದರು. ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ
ಬೆನ್ನಲ್ಲೇ, ಅಮಿತ್ ಶಾ ಕಾಂಗ್ರೆಸ್ ವಿರುದ್ಧ ದಾಳಿ
ನಡೆಸಿದರು. ‘ಮೋದಿಯವರನ್ನು ವಿರೋಧಿಸುವವರು ಭಾರತದ
ವಿರೋಧಿಗಳಾಗಿ ಬದಲಾಗುತ್ತಿದ್ದಾರೆ’ ಎಂದು ಅವರು ನುಡಿದರು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ವಿರುದ್ಧ ದೋಷಾರೋಪ
ನಿರ್ಣಯಕ್ಕಾಗಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸಲ್ಲಿಸಿರುವ ಸೂಚನೆಯನ್ನು ರಾಜ್ಯಸಭೆಯ
ಸಭಾಪತಿ ಎಂ.ವೆಂಕಯ್ಯ ನಾಯ್ಡು ತಿರಸ್ಕರಿಸಿದ ಬಳಿಕ ಅಮಿತ್ ಶಾ ಈ ಪ್ರತಿಕ್ರಿಯೆ ನೀಡಿದರು. ‘ಕುಟುಂಬ ರಾಜಕಾರಣ’ಕ್ಕೆ ತಲೆಬಾಗದೆ ತನ್ನ
ಅಸ್ತಿತ್ವ ಉಳಿಸಿಕೊಂಡಿರುವ ಸಂಸ್ಥೆಗಳನ್ನು ದುರ್ಬಲಗೊಳಿಸಲು ವಿರೋಧ ಪಕ್ಷಗಳು ಅಭಿಯಾನ ಪ್ರಾರಂಭಿಸಿವೆ’ ಎಂದು ಅವರು ಟೀಕಿಸಿದರು.
ಇಂದು ವಿಶ್ವ ಪುಸ್ತಕ ದಿನ.
2009: ದೇಶದ 12 ರಾಜ್ಯಗಳ 140 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಎರಡನೇ ಹಂತದ ಶಾಂತಿಯುತ ಚುನಾವಣೆಯಲ್ಲಿ 19.4 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಅಂದಾಜು ಶೇ 55ರಷ್ಟು ಮತದಾನವಾಯಿತು.
2009: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಎಲ್‌ಟಿಟಿಇ-ಸೇನೆ ನಡುವಿನ ಕದನ ಮತ್ತಷ್ಟು ಭೀಕರವಾಯಿತು. ಕ್ಷಣಕ್ಷಣಕ್ಕೂ ಸೇನೆಯು ಬಂಡುಕೋರರ ಕೊನೆಯ ಪ್ರದೇಶದೊಳಗೆ ಮುನ್ನುಗ್ಗಿತು. ಉತ್ತರ ಶ್ರೀಲಂಕಾದಲ್ಲಿ ಬಂಡುಕೋರರು ಅಡಗಿ ಕುಳಿತ ಎಂಟು ಚದರ ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಸೇನೆ ಸುತ್ತುವರಿಯಿತು. ಈ ಪ್ರದೇಶದಲ್ಲಿನ ಬಂಡುಕೋರರು ಹಾಗೂ ಅವರ ನಾಯಕ ಪ್ರಭಾಕರನ್ ತಪ್ಪಿಸಿಕೊಂಡು ಹೋಗದಂತೆ ತಡೆಯಲು ಕಡಲ ತಡಿಯಲ್ಲಿ ತೀವ್ರ ಕಣ್ಗಾವಲು ಸಹಿತ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಆತನನ್ನು (ವಿ. ಪ್ರಭಾಕರನ್) ಜೀವ ಸಹಿತ ಉಳಿಸುವುದಿಲ್ಲ' ಎಂದು ಸೇನಾಧಿಕಾರಿಗಳು ಗುಡುಗಿದರು. ಯುದ್ಧಭೂಮಿಯಲ್ಲಿ ಸಿಲುಕಿದ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಕದನಕ್ಕೆ ತಾತ್ಕಾಲಿಕ ತಡೆಯೊಡ್ಡಬೇಕೆಂದು ವಿಶ್ವಸಂಸ್ಥೆ, ಅಮೆರಿಕ ಹಾಗೂ ಇಂಗ್ಲೆಂಡ್ ಜಂಟಿಯಾಗಿ ಮನವಿ ಮಾಡಿಕೊಂಡವು.
2009: ಪ್ರಪಂಚದ ಅತ್ಯಂತ ಸೆಕ್ಸಿ ಮಹಿಳೆಯರ ಮೊದಲ ಹತ್ತು ಮಂದಿಯ ಸಾಲಿಗೆ ಮಂಗಳೂರು ಮೂಲದ ಮುಂಬೈ ಬೆಡಗಿ ಫ್ರೀಡಾ ಪಿಂಟೊ ಸೇರ್ಪಡೆಯಾದರು. ಬ್ರಿಟನ್‌ನ ಪುರುಷರ ಜೀವನಶೈಲಿ ನಿಯತಕಾಲಿಕ 'ಎಫ್‌ಎಚ್‌ಎಂ' ಓದುಗರಿಂದಲೇ ಕೈಗೊಂಡ ಅಭಿಪ್ರಾಯ ಸಂಗ್ರಹದಲ್ಲಿ ಈ ಅಂಶ ಬೆಳಕಿಗೆ ಬಂತು. ಹಲವು ಆಸ್ಕರ್ ಪ್ರಶಸ್ತಿ ಗಳಿಸಿದ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದ ಮೂಲಕ ಗಮನ ಸೆಳೆದ ಪಿಂಟೊ ಸೆಕ್ಸಿ ಮಹಿಳೆಯರ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಏರಿದರು. 24 ವರ್ಷದ ಅವರು 'ವ್ಯಾನಿಟಿ ಫೇರ್' ಸುಂದರಿ ಪಟ್ಟ ಗಳಿಸಿದ್ದರು. ಜಗತ್ತಿನ ಅತ್ಯಂತ ಸೆಕ್ಸಿ ಎಂಬ ಹೆಗ್ಗಳಿಕೆಗೆ ಗಾಯಕಿ ಚೆರಿಲ್ ಕೋಲ್ ಪಾತ್ರರಾದರು.
2009: ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿ ಮತ್ತು ಇತರ ಒಂಬತ್ತು ಮಂದಿ ಆರೋಪಿಗಳನ್ನು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರೆಂದು ನವದೆಹಲಿ ನ್ಯಾಯಾಲಯ ತೀರ್ಪು ನೀಡಿತು. ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಂಜಯ್ ಬನ್ಸಾಲಿ ಈ ತೀರ್ಪು ನೀಡಿದರು. ಬೆಂಗಳೂರು ಜೈಲಿನಲ್ಲಿದ್ದ ಕರೀಂ ತೆಲಗಿಯೊಂದಿಗೆ ವಿಡಿಯೊ ಸಂವಾದದ ಮೂಲಕ ಮೂಲಕ ವಿಚಾರಣೆ ನಡೆದಿತ್ತು. ಈ ತಿಂಗಳ ಆರಂಭದಲ್ಲಿ ಬೆಂಗಳೂರಿನ ವಿಶೇಷ ಸೆಷನ್ಸ್ ನ್ಯಾಯಾಲಯ ತೆಲಗಿಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿತ್ತು.
2009: ಉತ್ತಮ ಆರೋಗ್ಯ ನಿಮ್ಮದಾಗಬೇಕಾದರೆ ರಷ್ಯಾದ ಪ್ರತಿ ಮನೆಯಲ್ಲಿ ಯೋಗ ಅಭ್ಯಾಸ ನಡೆಯಬೇಕು ಎಂದು ರಷ್ಯದ ಮಾಜಿ ಅಧ್ಯಕ್ಷ ಬೋರಿಸ್ ಯೆಲ್ಸಿನ್ ಅವರ ಪತ್ನಿ ನೈನಾ ಯೆಲಿಸ್ಟಾನ (77) ಸಲಹೆ ನೀಡುವ ಮೂಲಕ ಯೋಗದ ಮಹತ್ವವನ್ನು ಸಾರಿದರು. ಭಾರತದ ಯೋಗಾಚಾರ್ಯ ಬಿ. ಕೆ. ಎಸ್. ಅಯ್ಯಂಗಾರ್ ಅವರನ್ನು ಸನ್ಮಾನಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು ಹಾಗೂ ತಾವು ಕಳೆದ 2 ವರ್ಷಗಳಿಂದ ಯೋಗ ಅಭ್ಯಾಸ ಮಾಡುತ್ತಿರುವುದರಿಂದ ಆಗಿರುವ ಉಪಯೋಗವನ್ನು ವಿವರಿಸಿದರು. ಭಾರತದ ರಾಯಭಾರಿ ಪಿ.ಪಿ.ಶುಕ್ಲಾ ಈ ಕಾರ್ಯಕ್ರಮ ಆಯೋಜಿಸಿದ್ದರು.
2009: ಇರಾಕ್‌ನ ದಿಯಾಲಾ ಪ್ರಾಂತ್ಯ ಹಾಗೂ ಕರಾದಾ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಆತ್ಮಹತ್ಯಾ ದಾಳಿಗಳಲ್ಲಿ ಕನಿಷ್ಠ 73 ಮಂದಿ ಮೃತರಾದರು. ದಿಯಾಲಾ ಪ್ರಾಂತ್ಯದ ಹೊಟೇಲ್ ಸಮೀಪ ಬಾಂಬರ್ ತನ್ನನ್ನು ತಾನು ಸ್ಫೋಟಿಸಿದ್ದರಿಂದ 45 ಮಂದಿ ಸತ್ತು 28 ಮಂದಿ ಗಾಯಗೊಂಡರು, ಕರಾದಾದಲ್ಲಿ ನಡೆದ ಘಟನೆಯಲ್ಲಿ 28 ಮಂದಿ ಸತ್ತು 45 ಮಂದಿ ಗಾಯಗೊಂಡರು ಎಂದು ಆಂತರಿಕ ಸಚಿವಾಲಯ ತಿಳಿಸಿತು.
2009: ದಕ್ಷಿಣ ಆಫ್ರಿಕಾದಲ್ಲಿ ಸಾರ್ವತ್ರಿಕ ಮತದಾನದ ಮತ ಎಣಿಕೆಯಲ್ಲಿ ಆಫ್ರಿಕಾ ರಾಷ್ಟ್ರೀಯ ಕಾಂಗ್ರೆಸ್ (ಎಎನ್‌ಸಿ) ಮುನ್ನಡೆಯಲ್ಲಿದೆ ಎಂದು ದಕ್ಷಿಣ ಆಫ್ರಿಕಾ ರೇಡಿಯೊ ವರದಿ ಮಾಡಿತು, ಎಎನ್‌ಸಿ ಕೇಪ್‌ಟೌನ್ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕಿಂತ ಶೇ.60.6ರಷ್ಟು ಹೆಚ್ಚು ಮತಗಳನ್ನು ಪಡೆದಿದೆ ಎಂದು ವರದಿ ಹೇಳಿತು.
2008: ಕೇರಳದ ತ್ರಿಶ್ಶೂರ್ ಜಿಲ್ಲೆಯ ಇರಿಂಜಲಕೂಡ ಕೂಡಮಾಣಿಕ್ಯ ದೇವಸ್ಥಾನದಲ್ಲಿ ಉತ್ಸವ ನಡೆಯುತ್ತಿದ್ದ ವೇಳೆ ಆನೆಯೊಂದು ಯದ್ವಾತದ್ವ ಓಡಿ ತುಳಿದ ಘಟನೆಯಲ್ಲಿ ಮಹಿಳೆಯೊಬ್ಬರ ಸಹಿತ ಮೂವರು ಮೃತರಾದರು. `ತಿರುವಲ್ಲ ಉಣ್ಣಿಕೃಷ್ಣನ್' ಹೆಸರಿನ ಈ ಸಾಕಿದ ಆನೆಯನ್ನು ಉತ್ಸವದ ಸಲುವಾಗಿ ಬೇರೆಡೆಯಿಂದ ಕರೆತರಲಾಗಿತ್ತು. ದೇವಸ್ಥಾನದಲ್ಲಿ `ಕರ್ಚಶಿವೇಲಿ' ಧಾರ್ಮಿಕ ವಿಧಿ ನಡೆದ ಕೆಲವೇ ಕ್ಷಣದಲ್ಲಿ ಈ ದುರಂತ ಘಟಿಸಿತು.
2008: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವರ್ದಯಪಾಳೆಂನಲ್ಲಿ ಇರುವ ಕಲ್ಕಿ ಭಗವಾನ್ ಆಶ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಕುಡಿಯುವ ನೀರಿಗಾಗಿ ನೂಕುನುಗ್ಗಾಟ ನಡೆಸಿದಾಗ ಕಾಲ್ತುಳಿತ ಉಂಟಾಗಿ ಐವರು ಮೃತರಾದರು. ಸುಡುಬಿಸಿಲಿನ ಈ ಸನ್ನಿವೇಶದಲ್ಲಿ ಆಶ್ರಮವು ಸಮರ್ಪಕವಾಗಿ ಕುಡಿವ ನೀರಿನ ವ್ಯವಸ್ಥೆ ಮಾಡದೆ ಇದ್ದುದು ಈ ಘಟನೆಗೆ ಕಾರಣ ಎಂದು ಚಿತ್ತೂರು ಜಿಲ್ಲಾ ಪೊಲೀಸ್ ವರಿಷ್ಠರಾದ ಕೆ. ಲಕ್ಷ್ಮಿ ರೆಡ್ಡಿ ತಿಳಿಸಿದರು. ಕಲ್ಕಿ ಭಗವಾನ್ ಏಕತಾ ವಿ.ವಿ. ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಲ್ಕಿ ಭಗವಾನ್ ದರ್ಶನಕ್ಕಾಗಿ ದೇಶದ ನಾನಾ ಭಾಗಗಳಿಂದ ಜನರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
2008: ಪುಷ್ಪಕುಮಾರ್ ದಹಾ ಅಲಿಯಾಸ್ `ಪ್ರಚಂಡ' ಅವರ ನೇತೃತ್ವದಲ್ಲಿಯೇ ಮುಂದಿನ ಸರ್ಕಾರ ರಚನೆಯಾಗಲಿದೆ ಎಂದು ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನೇಪಾಳದ ಕಮ್ಯುನಿಸ್ಟ್ ಪಕ್ಷ (ಸಿಪಿಎನ್-ಎಂ) ಕಠ್ಮಂಡುವಿನಲ್ಲಿ ಘೋಷಿಸಿತು. ಈ ಸಂಬಂಧ ನಗರದಲ್ಲಿ ಸಭೆ ಸೇರಿದ ಪಕ್ಷದ ವರಿಷ್ಠರು, ಪ್ರಚಂಡ ಪ್ರಧಾನಿಯಾಗಿ ಅಥವಾ ರಾಷ್ಟ್ರಾಧ್ಯಕ್ಷರಾಗಿ ಸರ್ಕಾರದ ನೇತೃತ್ವ ವಹಿಸಿಕೊಳ್ಳಬೇಕೆಂದು ತೀರ್ಮಾನಿಸಿದರು. ರಾಜಪ್ರಭುತ್ವ ಕೊನೆಗೊಳಿಸಿ, ಗಣರಾಜ್ಯವನ್ನು ಸ್ಥಾಪಿಸುವ ತಮ್ಮ ಈ ಹಿಂದಿನ ತೀರ್ಮಾನವನ್ನು ಮತ್ತೊಮ್ಮೆ ಪುನರುಚ್ಚರಿಸಿದರು.
2008: ಭಾರತದ ಮಹಿಳಾ ಡಿಸ್ಕಸ್ ಥ್ರೋ ಸ್ಪರ್ಧಿ ಕೃಷ್ಣ ಪೂನಿಯ ಅವರು ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿದರು. ಅಮೆರಿಕದಲ್ಲಿ ನಡೆದ ಮಹಿಳೆಯರ ಆಹ್ವಾನಿತ ಕೂಟದಲ್ಲಿ ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಿಟ್ಟಿಸಲು ಬೇಕಾದಷ್ಟು ದೂರವನ್ನು ಸಾಧಿಸಲು ಕೃಷ್ಣ ಪೂನಿಯ ಯಶಸ್ವಿಯಾದರು. ಕ್ಯಾಲಿಫೋರ್ನಿಯಾದ ಹಿಲ್ಮರ್ ಲಾಜರ್ ಕ್ರೀಡಾಂಗಣದಲ್ಲಿ ಏಪ್ರಿಲ್ 17 ರಿಂದ 20ರ ವರೆಗೆ ನಡೆದ ಅಥ್ಲೆಟಿಕ್ ಕೂಟದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಕೃಷ್ಣ ಡಿಸ್ಕಸನ್ನು 59.04 ಮೀ. ದೂರ ಎಸೆದರು. ಇದರೊಂದಿಗೆ ಕೃಷ್ಣ ಪೂನಿಯ ಅವರು ಬೀಜಿಂಗ್ ಕೂಟಕ್ಕೆ ಅರ್ಹತೆ ಪಡೆದ ಭಾರತದ ಐದನೇ ಅಥ್ಲೀಟ್ ಎನಿಸಿದರು. ವಿಕಾಸ್ ಗೌಡ ಅವರು ಪುರುಷರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಅರ್ಹತೆ ಪಡೆದಿದ್ದಾರೆ.
2008: ಪಾಕಿಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಏಕೈಕ ಸಿಖ್ ಸಂಚಾರಿ ಪೊಲೀಸ್ ವಾರ್ಡನ್ ಮತಭೇದದಿಂದ ಅವಮಾನಿತರಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಬೆಳಕಿಗೆ ಬಂತು. ಗುಲಾಬ್ ಸಿಂಗ್ ಅವರು ಪಕ್ಷಭೇದ ನೀತಿಯಿಂದ ಅವಮಾನಿತರಾಗಿ ಎರಡು ದಿನಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದವರು. ತಾವು ಮುಸ್ಲಿಮ್ ಜನಾಂಗಕ್ಕೆ ಸೇರಿದವರಲ್ಲ ಎಂಬ ಕಾರಣಕ್ಕೆ ಸಹೊದ್ಯೋಗಿಗಳು ಕೀಳಾಗಿ ಕಾಣುತ್ತಿದ್ದರು ಎಂದು ಸಿಂಗ್ ಆರೋಪಿಸಿದರು. ಅಲ್ಲದೆ ಸಿಖ್ ಧರ್ಮದ ಬಗ್ಗೆ ಅವರು ಹೀನಾಯವಾಗಿ ಮಾತನಾಡಿ ರಂಜನೆ ಪಡೆಯುತ್ತಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತಮ್ಮ ಮೇಲೆ ಅವಮಾನ ಹೆಚ್ಚಾಯಿತು. ಆದ್ದರಿಂದ ನೊಂದು ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಹೇಳಿದರು.
2008: ಪುಟ್ಟ ಚಾಕೊಲೆಟ್ಟಿಗೆ ಇರುವ ತಾಕತ್ತು ಸಾಮಾನ್ಯವಲ್ಲ. ಕೊಲೆಸ್ಟರಾಲ್ ಅಂಶವನ್ನು ಕರಗಿಸಬಲ್ಲ ಶಕ್ತಿ ಚಾಕೊಲೆಟ್ಟಿಗೆ ಇದೆ ಎಂದು ನ್ಯೂಯಾರ್ಕಿನ `ಜರ್ನಲ್ ಆಫ್ ನ್ಯೂಟ್ರಿಷನ್' ಎನ್ನುವ ನಿಯತಕಾಲಿಕವು ವಿಶೇಷ ವರದಿಯೊಂದರಲ್ಲಿ ಪ್ರಕಟಿಸಿತು. ರಕ್ತದೊತ್ತಡಕ್ಕೂ ಚಾಕೊಲೆಟ್ ಮದ್ದು ಎಂಬುದು ಈ ವರದಿಯ ಪ್ರತಿಪಾದನೆ. ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ತೊಂದರೆ ಇದ್ದವರ ಮೇಲೆ ಪ್ರತ್ಯೇಕವಾಗಿ ಚಾಕೊಲೆಟ್ ತಿನ್ನಿಸುವ ಪ್ರಯೋಗ ನಡೆಸಲಾಯಿತು. ಚಾಕೊಲೆಟ್ ಸೇವನೆಯಿಂದ ಅವರ ಮೇಲಾದ ಪರಿಣಾಮಗಳನ್ನು ಪರಿಗಣಿಸಿದಾಗ ಸತ್ಯಾಂಶ ಬೆಳಕಿಗೆ ಬಂತು ಎಂಬುದು ಸಂಶೋಧಕರ ಪ್ರತಿಪಾದನೆ ಎಂದು ವರದಿ ವಿವರಿಸಿತು.
2007: ಸೋವಿಯತ್ ಒಕ್ಕೂಟದ ವಿಭಜನೆಯ ನಂತರದ ರಷ್ಯಾದ ಪ್ರಥಮ ಚುನಾಯಿತ ಅಧ್ಯಕ್ಷ ಬೋರಿಸ್ ಯೆಲ್ಸಿನ್ (76) ನಿಧನರಾದರು. ರಷ್ಯಾ ಕಂಡ ಅಪರೂಪದ ನಾಯಕ, ಯೆಲ್ಸಿನ್ ಜನಪ್ರಿಯತೆಯ ಉತ್ತುಂಗ, ವಿರೋಧದ ಅಲೆ ಎರಡನ್ನೂ ಎದುರಿಸಿದ ಮುಖಂಡ. ಅತ್ಯಂತ ಪರಿಣಾಮಕಾರಿ ಸುಧಾರಕನಾಗಿ 1991ರಲ್ಲಿ ಗೊರ್ಬಚೇವ್ ವಿರುದ್ಧ ಸ್ಪರ್ಧಿಸಿ ಗೆದ್ದು, ಅಧಿಕಾರಕ್ಕೆ ಬಂದ ಯೆಲ್ಸಿನ್ ನಂತರದ ದಿನಗಳಲ್ಲಿ ವ್ಯಾಪಕ ಭ್ರಷ್ಟಾಚಾರ, ಆರ್ಥಿಕತೆಯ ಕುಸಿತ ಹಾಗೂ ಅಪಾರ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣರಾದರು.
2007: ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆಗಸಕ್ಕೆ ಚಿಮ್ಮಿದ ಪಿ ಎಸ್ ಎಲ್ ವಿ -ಸಿ8 ಗಗನನೌಕೆಯು ಇಟಲಿಯ ಉಪಗ್ರಹ `ಅಗೈಲ್'ನ್ನು ಕಕ್ಷೆಯಲ್ಲಿ ಯಶಸ್ವಿಯಾಗಿ ಕೂರಿಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಇತಿಹಾಸದಲ್ಲಿ ಪ್ರಮುಖ ಸಾಧನೆ ಮಾಡಿತು. ಇದೇ ಮೊದಲ ಬಾರಿಗೆ ಇಸ್ರೊ ವಾಣಿಜ್ಯಿಕ ಉದ್ದೇಶಕ್ಕಾಗಿ ವಿದೇಶೀ ಉಪಗ್ರಹವನ್ನು ಉಡಾವಣೆ ಮಾಡಿದ್ದು, ಈ ಯಶಸ್ಸು ಜಾಗತಿಕ ಉಪಗ್ರಹ ಉಡಾವಣೆ ಕ್ಷೇತ್ರದಲ್ಲಿ ಭಾರತಕ್ಕೆ ಮಹತ್ವದ ಸ್ಥಾನವನ್ನು ದೊರಕಿಸಿಕೊಟ್ಟಿತು. ಮಧ್ಯಾಹ್ನ 3.30ಕ್ಕೆ ಗಗನಕ್ಕೆ ಚಿಮ್ಮಿದ ಪಿ. ಎಸ್ .ಎಲ್. ವಿ -ಸಿ 8' 22 ನಿಮಿಷಗಳ ನಂತರ 352 ಕೆ.ಜಿ. ತೂಕದ ಇಟಲಿಯ `ಅಗೈಲ್'ನ್ನು ಭೂಮಿಯಿಂದ 550 ಕಿ.ಮೀ. ಎತ್ತರದಲ್ಲಿ ಕಕ್ಷೆಯಲ್ಲಿ ಕೂರಿಸಿತು.
2007: ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡಲಾದ ಶೇಕಡಾ 27ರ ಮೀಸಲಾತಿ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ಐಐಎಂ, ಐಐಟಿಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶೇಕಡಾ 27 ಒಬಿಸಿ ಮೀಸಲಾತಿ ಅನುಷ್ಠಾನಗೊಳಿಸುವುದು ಅಸಾಧ್ಯ ಎಂದು ನ್ಯಾಯಾಲಯ ತಿಳಿಸಿತು.
2007: ಗೋ ಸಂರಕ್ಷಣೆಗಾಗಿ ಸಂತ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲು ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರಿ ರಾಮಚಂದ್ರಾಪುರ ಮಠದ ಆವರಣದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಸಂತ ಸಮಾವೇಶವು ನಿರ್ಧರಿಸಿತು. ಈ ನಿಟ್ಟಿನಲ್ಲಿ ನಿರ್ಣಯವೊಂದನ್ನು ಮಂಡಿಸಿ ಅಂಗೀಕರಿಸಲಾಯಿತು.
2007: ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಪೂರೈಸಿದ ಬೆಂಗಳೂರು ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯವು ಪ್ರಮುಖ ಅಪರಾಧಿ ಅಬ್ದುಲ್ ಕರೀಮ್ ತೆಲಗಿ ಸೇರಿದಂತೆ ಐವರಿಗೆ ತಲಾ 10 ವರ್ಷಗಳ ಸೆರೆವಾಸ ಮತ್ತು 70,000 ರೂಪಾಯಿಗಳ ದಂಡ ವಿಧಿಸಿತು. ನ್ಯಾಯಾಧೀಶ ವಿಶ್ವನಾಥ ವಿರೂಪಾಕ್ಷ ಅಂಗಡಿ ಅವರು ಸಂಜೆ ನಾಲ್ಕು ಗಂಟೆಗೆ ತೀರ್ಪನ್ನು ಪ್ರಕಟಿಸಿದರು.
2007: ಭಾರತೀಯ ಮೂಲದ ಪತ್ರಕರ್ತ ಐಜಾಜ್ ಝೂಕ ಸೈಯದ್ ಅವರಿಗೆ 2006ರ ಸಾಲಿನ ಪ್ರತಿಷ್ಠಿತ ಲಾರೆಂಜೊ ನಟಾಲಿ ಪ್ರಶಸ್ತಿ ಲಭಿಸಿತು. ಅವರು ಬರೆದ ಸೂಡಾನ್ ದೇಶದ ದಾರ್ ಪುರದಲ್ಲಿನ ಶೋಚನೀಯ ಸ್ಥಿತಿಗತಿಗಳ ಕುರಿತ ಬರಹಕ್ಕೆ ಈ ಬರಹ ಬಂದಿತು. ಪ್ರಶಸ್ತಿಯನ್ನು ಯುರೋಪಿಯನ್ ಯೂನಿಯನ್ 1992ರಲ್ಲಿ ಸ್ಥಾಪಿಸಿದ್ದು, ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶ್ರೇಷ್ಠ ಪತ್ರಿಕೋದ್ಯಮಕ್ಕೆ ನೀಡಲಾಗುತ್ತದೆ.
2007: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೃಷಿ, ಆರ್ಥಿಕ ತಜ್ಞ ಡಾ. ಪಿ.ಜಿ. ಚೆಂಗಪ್ಪ ಅವರನ್ನು ರಾಜ್ಯಪಾಲ ಚತುರ್ವೇದಿ ನೇಮಕ ಮಾಡಿದರು.
2006: ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ಸಾರ್ವಭೌಮ ವೇದಿಕೆಯಲ್ಲಿ ದೇವ ದೇವೋತ್ತಮ ಸೀತಾಮಾತಾ ಸಹಿತ ಶ್ರೀರಾಮಚಂದ್ರನಿಗೆ ಮಂತ್ರ , ವೇದಘೋಷಗಳ ಮಧ್ಯೆ ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ರಾಮಾಯಣ ಕಾಲದ ವೈಭವವನ್ನು ಆಧುನಿಕ ಯುಗದಲ್ಲಿ ಪ್ರತ್ಯಕ್ಷೀಕರಿಸುವ ಪ್ರಯತ್ನವಾಗಿ ನಡೆದ ರಾಮಾಯಣ ಮಹಾಸತ್ರದ ಪ್ರಧಾನ ಅಂಗವಾದ ಈ ಕಾರ್ಯಕ್ರಮ ಈ ದಿನ ಬೆಳಗ್ಗೆ ಕರ್ಕಾಟಕ ಲಗ್ನದಲ್ಲಿ ನೆರವೇರಿತು. ದೇಶದ 500 ನದಿಗಳಿಂದ ಸಂಗ್ರಹಿಸಲಾಗಿದ್ದ ಜಲದಿಂದ ಶ್ರೀರಾಮಚಂದ್ರ ಸೀತಾಮಾತೆಯ ವಿಗ್ರಹಗಳಿಗೆ ಅಭಿಷೇಕ ನಡೆಸಲಾಯಿತು. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ 10 ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿದ್ದರು. ದೇಶಾದ್ಯಂತದ ಮೂರು ಲಕ್ಷಕ್ಕೂ ಅಧಿಕ ಮಂದಿ 10 ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಮ್ಮ ಜೀವನದ ಸರ್ವಸ್ವವನ್ನೂ ಇನ್ನು ಮುಂದೆ ಗೋ ಸಂರಕ್ಷಣೆಗೆ ಸಮರ್ಪಿಸುವುದಾಗಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಘೋಷಿಸಿದರು.
2006: ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ ಸಿಂಗ್ (ವಿ.ಪಿ. ಸಿಂಗ್) ಅವರು ಜನ ಮೋರ್ಚಾ ಹೆಸರಿನ ಹೊಸ ಪಕ್ಷ ಸ್ಥಾಪನೆಯನ್ನು ಪ್ರಕಟಿಸಿದರು ಮತ್ತು ಖ್ಯಾತ ಹಿಂದಿ ಚಿತ್ರನಟ ಹಾಗೂ ಸಮಾಜವಾದಿ ಪಕ್ಷದಿಂದ ಉಚ್ಚಾಟನೆಗೊಂಡ ರಾಜ್ ಬಬ್ಬರ್ ಅವರನ್ನು ಈ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.
1992: ಭಾರತದ ಶ್ರೇಷ್ಠ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರು ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೂರು ವಾರಗಳ ಬಳಿಕ ಕೋಲ್ಕತದಲ್ಲಿ ಮೃತರಾದರು.
1990: ಚಿತ್ರನಟಿ ಹಾಗೂ ನಟ ಚಾರ್ಲಿ ಚಾಪ್ಲಿನ್ ಅವರ ಮಾಜಿ ಪತ್ನಿ ಪೌಲೆಟ್ ಗೊಡ್ಡಾರ್ಡ್ ಮೃತರಾದರು. ಅಕೆ ಚಾರ್ಲಿ ಚಾಪ್ಲಿನ್ ಜೊತೆಗೆ `ಮಾಡರ್ನ್ ಟೈಮ್ಸ್' ಹಾಗೂ `ದಿ ಗ್ರೇಟ್ ಡಿಕ್ಟೇಟರ್' ಚಿತ್ರಗಳಲ್ಲಿ ನಟಿಸಿದ್ದರು.
1985: ಶಾ ಬಾನೊ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಬಡ, ಅನಕ್ಷರಸ್ಥ ಮುಸ್ಲಿಂ ಮಹಿಳೆ ಶಾ ಬಾನೊ ತನ್ನ ವಿಚ್ಛೇದಿತ ಪತಿ ಮಹಮ್ಮದ್ ಅಹ್ಮದನಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಳು. ಆಕೆಯ ಪರವಾಗಿ ತೀರ್ಪು ನೀಡಿದ ಮಧ್ಯಪ್ರದೇಶ ಹೈಕೋರ್ಟ್, ವಿಚ್ಛೇದಿತ ಮಹಿಳೆಗೆ ಬದುಕಿಗೆ ಯಾವುದೇ ಆದಾಯ ಇಲ್ಲದಿದ್ದರೆ ಆಕೆಯ ಮರುಮದುವೆ ಅಥವಾ ಮರಣದವರೆಗೆ ಯಾವುದೇ ಧರ್ಮದ ಭೇದವಿಲ್ಲದೆ ಜೀವನಾಂಶ ನೀಡಬೇಕು ಎಂದು ಹೇಳಿತ್ತು.
1985: ಕೊಕಾ ಕೋಲ ಕಂಪೆನಿಯು ತಾನು ಕೋಕ್ ನ ರಹಸ್ಯ ಫಾರ್ಮುಲಾವನ್ನು ಬದಲಾಯಿಸುತ್ತಿರುವುದಾಗಿ ಪ್ರಕಟಿಸಿತು. ಆದರೆ ಸಾರ್ವಜನಿಕರಿಂದ ವ್ಯಕ್ತವಾದ ಪ್ರತಿಭಟನೆಯನ್ನು ಅನುಸರಿಸಿ ನಂತರ ತನ್ನ ಮೊದಲಿನ ಫಾರ್ಮುಲಾವನ್ನೇ ಉಳಿಸಿಕೊಂಡಿತು.
1978: ಕಲಾವಿದೆ ಪೂರ್ಣಿಮಾ ಡಿ. ಸಾಗರ ಜನನ.
1967: ರಷ್ಯದ ಸೋಯುಜ್ 1 ಬಾಹ್ಯಾಕಾಶ ನೌಕೆಯ ಉಡ್ಡಯನ ನಡೆಯಿತು. ಅದು 17 ಸುತ್ತುಗಳನ್ನು ಮುಗಿಸಿ ಭೂಕಕ್ಷೆಗೆ ಮರಳುವಾಗ ಸ್ಫೋಟಗೊಂಡು ಗಗನಯಾನಿ ವ್ಲಾಡಿಮೀರ್ ಕೊಮಾರೋವ್ ಅಸುನೀಗಿದರು.
1964: ಕಲಾವಿದೆ ಮಾಲಿನಿ ಜನನ.
1958: ಕಲಾವಿದ ಎಂ. ರಾಘವೇಂದ್ರ ಜನನ.
1956: ಬೀದಿ ನಾಟಕಗಳ ಮೂಲಕ ಧಾರವಾಡ ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನ ಕೈಗೊಂಡ ಕಲಾವಿದ ವೀರೇಶ ಗುತ್ತಲ ಅವರು ಕೃಷ್ಣಪ್ಪ ಗುತ್ತಲ- ಶಾರದಾಬಾಯಿ ದಂಪತಿಯ ಮಗನಾಗಿ ಹಾವೇರಿ ತಾಲ್ಲೂಕಿನ ಕಿತ್ತೂರ ಗ್ರಾಮದಲ್ಲಿ ಜನಿಸಿದರು.
1949: ಕಲಾವಿದೆ ಟಿ.ಎನ್. ಪದ್ಮಾ ಜನನ.
1913: ಹಾಸ್ಯಬ್ರಹ್ಮ ಎಂದೇ ಖ್ಯಾತರಾಗಿದ್ದ ರಾಯಸದ ಭೀಮಸೇನರಾವ್ 'ಬೀಚಿ'(23-4-1913 ರಿಂದ 7-12-1980) ಹುಟ್ಟಿದ ದಿನ. ಶ್ರೀನಿವಾಸರಾವ್- ಭಾರತಮ್ಮ ದಂಪತಿಯ ಪುತ್ರರಾಗಿ ಬಳ್ಳಾರಿ ಜಿಲ್ಲೆಯ ಹರಪನಹಳಿಯಲ್ಲಿ ಜನಿಸಿದ ಅವರು ಅ.ನ.ಕೃ. ಅವರ ಸಂಧ್ಯಾರಾಗ ಓದಿ ಕನ್ನಡ ದೀಕ್ಷೆ ಸ್ವೀಕರಿಸಿ ಕನ್ನಡದಲ್ಲಿ ಬರೆಯಲು ಆರಂಭಿಸಿದರು. ಕನ್ನಡ ಹಾಸ್ಯ ಸಾಹಿತ್ಯದಲ್ಲಿ ಅಮರರಾದ ಅವರ ತಿಂಮ ಪಾತ್ರ ಖ್ಯಾತ ಹಾಸ್ಯ ಬರಹಗಾರ ಪಿ.ಜಿ. ಓಡ್ ಹೌಸ್ ಅವರ ಜೀವ್ಸ್ ಪಾತ್ರವನ್ನೇ ಹೋಲುವ ಕನ್ನಡದ ಸೃಷ್ಟಿ.
No comments:
Post a Comment