ನಾನು ಮೆಚ್ಚಿದ ವಾಟ್ಸಪ್

Wednesday, April 18, 2018

ಇಂದಿನ ಇತಿಹಾಸ History Today ಏಪ್ರಿಲ್ 17

ಇಂದಿನ ಇತಿಹಾಸ History Today  ಏಪ್ರಿಲ್ 17
 2018: ನವದೆಹಲಿ:  ನವದೆಹಲಿ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ರಾಜಸ್ಥಾನ
ಸೇರಿದಂತೆ ದೇಶದ ವಿವಿಧೆಡಗಳಿಂದ ಎಟಿಎಂಗಳು (ಎನಿ ಟೈಮ್ ಮನಿ) ಖಾಲಿಯಾಗಿರುವ, ಕಾರ್ಯ ನಿರ್ವಹಿಸದೇ ಇರುವ ದೂರುಗಳ ಮಹಾಪೂರ ಹರಿಯಿತು. ಪರಿಣಾಮವಾಗಿ ನೋಟು ಆಮಾನ್ಯೀರಕಣದ ವೇಳೆಯಲ್ಲಿ ಉಂಟಾದಂತಹುದೇ ನಗದು ಬಿಕ್ಕಟ್ಟು ಉಂಟಾಗಿದೆಯೇ ಎಂಬ ಭೀತಿ ತಲೆದೋರಿತು. ಎಟಿಎಂಗಳ ಖಾಲಿ, ಖಾಲಿಯಾಗಿರುವ ಬಗ್ಗೆ ಟ್ವಿಟ್ಟರಿನಲ್ಲಿ ಹಲವರು ದೂರಿದ್ದರೆ, ಹಲವರು ಬ್ಯಾಂಕುಗಳಲ್ಲಿ ಹಣ ಹಿಂಪಡೆಯಲು ಮಿತಿಗಳನ್ನು ಹೇರಲಾಗುತ್ತಿದೆ ಎಂದು ದೂರಿದರು. ಆದರೆ ಈ ದೂರುಗಳ ನೈಜತೆ ಬಗ್ಗೆ ತತ್ ಕ್ಷಣಕ್ಕೆ ಯಾವುದೇ ಸ್ಪಷ್ಟತೆ ಲಭಿಸಲಿಲ್ಲ.  ಹೈದರಾಬಾದಿನಲ್ಲಿ ಎಟಿಎಂಗಳು ಖಾಲಿ ಖಾಲಿಯಾಗಿವೆ. ಸ್ಥಳೀಯ ಎಸ್ ಬಿಐ ಶಾಖೆಯು ಹಣ ಹಿಂಪಡೆಯಲು ೫೦೦೦ ರೂಪಾಯಿಗಳ ಮಿತಿ ವಿಧಿಸಿದೆ. ಹಿರಿಯ ನಾಗರಿಕರೊಬ್ಬರು ೨೦,೦೦೦ ರೂಪಾಯಿ ನೀಡುವಂತೆ ಕೋರಿದಾಗ ನಿರಾಕರಿಸಿದ ಕ್ಲರ್ಕ್ ಕೊನೆಗೆ ಅನುಕಂಪ ತೋರಿ ಕೊಡಲೊಪ್ಪಿದಾಗ ಹಿರಿಯರು ಕೃತಜ್ಞತೆ ವ್ಯಕ್ತ ಪಡಿಸಿದ ಘಟನೆ ಘಟಿಸಿತು. ಐಪಿಎಲ್ ಬೆಟ್ಟಿಂಗ್ ಕಾ ರಣ ನಗದು ಹಣವನ್ನು ಆರ್ ಬಿಐ ಹಿಡಿದಿಟ್ಟಿದೆ ಎಂಬ ವದಂತಿಗಳು ಹರಡಿವೆ ಎಂದು ಕ್ಲರ್ಕ್ ಹೇಳಿದುದಾಗಿ ಅನಾಮಿಕ ಎಂಬವರು ಟ್ವೀಟ್ ಮಾಡಿದರು.  ‘ಕರೆನ್ಸಿ ಎಲ್ಲಿಗೆ ಹೋಗುತ್ತಿದೆ? ಹೈದರಾಬಾದಿನ ಎಟಿಎಂಗಳು ಖಾಲಿಯಾಗಿವೆ? ಇದು ಯಾಕಾಗುತ್ತಿದೆ? ನಗದು ಹಣ ಎಲ್ಲಿ ಮಾಯವಾಯಿತು? ಕಣ್ಮರೆಯಾಗುತ್ತಿರುವ ನಗದು ಬಗ್ಗೆ ದಯವಿಟ್ಟು ಯಾರಾದರೂ ತನಿಖೆ ಮಾಡಿ! ಎಂದು ಸುನೀತಾ ಸಿಮೊನ್  ಟ್ವೀಟ್ ಮಾಡಿದರು. ಹಲವಾರು ಮಂದಿ ವಿವಿಧ ರಾಜ್ಯಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿರುವುದನ್ನು ಗಮನಿಸಿ ಹಣಕಾಸು ರಾಜ್ಯ ಸಚಿವ ಎಸ್‌ಪಿ ಶುಕ್ಲ ಅವರು ರಾಜ್ಯಗಳಿಗೆ ಹಣ ವರ್ಗಾವಣೆ ಮಾಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸಮಿತಿಯೊಂದರನ್ನು ರಚಿಸಿದೆ ಎಂದು ಹೇಳಿದರು.  ‘ನಾವು ೧,೨೫,೦೦೦ ಕೋಟಿ ರೂಪಾಯಿಗಳಷ್ಟು ನಗದು ಹಣವನ್ನು ಹೊಂದಿದ್ದೇವೆ. ಒಂದು ಸಮಸ್ಯೆ ಏನೆಂದರೆ ಕೆಲವು ರಾಜ್ಯಗಳು ಕಡಿಮೆ ನಗದು ಹಣ ಹೊಂದಿದ್ದರೆ, ಇತರ ಕೆಲವು ರಾಜ್ಯಗಳು ಹೆಚ್ಚು ನಗದು ಹಣ ಹೊಂದಿವೆ. ಸರ್ಕಾರವು ರಾಜ್ಯವಾರು ಸಮಿತಿಯನ್ನು ರಚಿಸಿದ್ದು ರಿಸರ್ವ್ ಬ್ಯಾಂಕ್ ಕೂಡಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಣ ವರ್ಗಾವಣೆಗಾಗಿ ಸಮಿತಿಯೊಂದನ್ನು ರಚಿಸಿದೆ. ಮೂರು ದಿನಗಳ ಒಳಗಾಗಿ ಹಣ ವರ್ಗಾವಣೆ ಆಗಲಿದೆ ಎಂದು ಶುಕ್ರ ನುಡಿದರು. ದೆಹಲಿಯಲ್ಲೂ ಜನರು ತಾವು ನಗದು ಬಿಕ್ಕಟ್ಟು ಎದರಿಸುತ್ತಿರುವುದಾಗಿ ಹೇಳಿದ್ದಾರೆ. ಬಹುತೇಕ ಎಟಿಎಂಗಳು ಹಣ ವಿತರಣೆ ಮಾಡುತ್ತಿಲ್ಲ. ಹಣ ವಿತರಣೆ ಮಾಡುತ್ತಿರುವ ಎಟಿಎಂಗಳು ಕೇವಲ ೫೦೦ ರೂಪಾಯಿ ನೋಟುಗಳನ್ನು ಹೊಂದಿವೆ. ನಾವು ಅತ್ಯಂತ ತೊಂದರೆ ಎದುರಿಸುತಿದ್ದೇವೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ದೆಹಲಿಯ ನಿವಾಸಿಯೊಬ್ಬರು ಹೇಳಿದ್ದನ್ನು ಎಎನ್ ಐ ಉಲ್ಲೇಖಿಸಿತು. ನಗದು ಬಿಕ್ಕಟ್ಟು ಎದುರಿಸುತ್ತಿರುವುದಾಗಿ ಭೋಪಾಲ್ ಜನರೂ ಹೇಳುತ್ತಿದ್ದಾರೆ. ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ. ೧೫ ದಿನಗಳಲ್ಲಿ ಪರಿಸ್ಥಿತಿ ಒಂದೇ ರೀತಿಯಾಗಿ ಇದೆ. ನಾವು ಹಲವಾರು ಎಟಿಎಂಗಳಿಗೆ ಎಡತಾಕಿದ್ದೇವೆ. ಪ್ರಯೋಜನವಿಲ್ಲ ಎಂದು ಭೋಪಾಲ್ ನಿವಾಸಿಯೊಬ್ಬರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಆರ್ ಬಿಐ ಜೊತೆಗೆ ಸಭೆ ನಡೆಸಿರುವುದಾಗಿ ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳಿದರು.  ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾರುಕಟ್ಟೆಯಿಂದ ೨೦೦೦ ರೂಪಾಯಿ ನೋಟುಗಳು ಕಣ್ಮರೆಯಾಗುತ್ತಿವೆ ಎಂದು ಪ್ರತಿಪಾದಿಸುವುದರೊಂದಿಗೆ ವಿಷಯ ರಾಜಕೀಯ ಬಣ್ಣವನ್ನೂ ಪಡೆದುಕೊಂಡಿತು.  ‘ಇದರ ಹಿಂದೆ ಸಂಚು ಇದೆ ಎಂದು ಆಪಾದಿಸಿದ ಚೌಹಾಣ್ ’ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು. ನೋಟು ಅಮಾನ್ಯೀಕರಣಕ್ಕೆ ಮೊದಲು ೧೫,೦೦,೦೦೦ ಕೋಟಿ ರೂಪಾಯಿ ಮೊತ್ತದ ಕರೆನ್ಸಿ ಚಲಾವಣೆಯಲ್ಲಿತ್ತು. ನೋಟು ಅಮಾನ್ಯೀಕರಣ ಕಸರತ್ತಿನ ಬಳಿಕ ಈ ಮೊತ್ತವನ್ನು ೧೬,೫೦,೦೦೦ ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ. ಆದರೆ ಮಾರುಕಟ್ಟೆಯಿಂದ ೨೦೦೦ ರೂ ಮುಖಬೆಲೆಯ ನೋಟುಗಳು ಕಣ್ಮರೆಯಾಗುತ್ತವೆ ಎಂದು ಚೌಹಾಣ್ ರೈತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.  ೨೦೦೦ ರೂಪಾಯಿ ಮುಖಬೆಲೆಯ ಈನೋಟುಗಳು ಎಲ್ಲಿಗೆ ಹೋಗುತ್ತಿವೆ? ಯಾವು ಅವುಗಳನ್ನು ಚಲಾವಣೆಗೆ ಬಾರದಂತೆ ತಡೆ ಹಿಡಿದು ಇಡುತ್ತಿದ್ದಾರೆ? ನಗದು ಕೊರತೆಯನ್ನು ಯಾರು ಸೃಷ್ಟಿಸುತ್ತಿದ್ದಾರೆ? ಇದು ಸಮಸ್ಯೆ ಸೃಷ್ಟಿಸಲು ನಡೆದಿರುವ ಸಂಚು. ಈ ಬಗ್ಗೆ ಸರ್ಕಾರ ಬಿಗಿ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. 

2018: ನವದೆಹಲಿ:  ಬೇಕಾದುದಕ್ಕಿಂತ ಹೆಚ್ಚಿನ ಪ್ರಮಾಣದ ನಗದು ಹಣ ಚಲಾವಣೆಯಲ್ಲಿದೆ ಎಂದು ಇಲ್ಲಿ
ಸ್ಪಷ್ಟ ಪಡಿಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ’ಕೆಲವು ರಾಜ್ಯಗಳಲ್ಲಿನ ತಾತ್ಕಾಲಿಕ ಕೊರತೆಯನ್ನು ಶೀಘ್ರದಲ್ಲೇ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು
ಎಂದು ಹೇಳಿದರು.  ಗುಜರಾತ್, ಪೂರ್ವ ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಕನಿಷ್ಠ ೬ ರಾಜ್ಯಗಳಲ್ಲಿ ನಗದು ಹಣದ ಕೊರತೆ ಇದೆ ಎಂದು ವರದಿಗಳು ಬಂದಿದ್ದವು. ರಾಷ್ಟ್ರದ ನಗದು ಪರಿಸ್ಥಿತಿಯನ್ನು ತಾವು ಪರಿಶೀಲಿಸಿರುವುದಾಗಿ ಜೇಟ್ಲಿ ಅವರು ಟ್ವೀಟ್ ಮಾಡಿದರು.  ‘ಒಟ್ಟಾರೆಯಾಗಿ ರಾಷ್ಟ್ರದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿಯೇ ನಗದು ಹಣ ಚಲಾವಣೆಯಲ್ಲಿದೆ. ಬ್ಯಾಂಕುಗಳಲ್ಲಿಯೂ ನಗದು ಬೇಕಾದಷ್ಟು ಲಭ್ಯವಿದೆ. ಕೆಲವು ಪ್ರದೇಶಗಳಲ್ಲಿ ಬೇಡಿಕೆಯಲ್ಲಿ ಉಂಟಾಗಿರುವ ತಾತ್ಕಾಲಿಕ ಮತ್ತು ಅಸಹಜವಾದ ದಿಢೀರ್  ಏರಿಕೆಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ತ್ವರಿತವಾಗಿ ನಿಭಾಯಿಸಲಾಗುವುದುಎಂದು ಜೇಟ್ಲಿ ನುಡಿದರು.


2018: ನ್ಯೂಯಾರ್ಕ್: ಖ್ಯಾತ ಚಿತ್ರ ನಿರ್ಮಾಪಕ ಹಾರ್ವೆ ವೀಸ್ಟೀನ್ ವಿರುದ್ಧದ  ಲೈಂಗಿಕ ಕಿರುಕುಳಕ್ಕೆ
ಸಂಬಂಧಿಸಿದ ಏಪ್ರಿಲ್ ೧೬ರ ಸ್ಫೋಟಕ ವರದಿಗಾಗಿ ’ದಿ ನ್ಯೂಯಾಕ್ ಟೈಮ್ಸ್ ಮತ್ತು ’ದಿ ನ್ಯೂಯಾರ್ಕರ್ ಸಾರ್ವಜನಿಕ ಸೇವೆಗಾಗಿ ನೀಡಲಾಗುವ ಪತ್ರಿಕೋದ್ಯಮ ಕ್ಷೇತ್ರದ ಪ್ರತಿಷ್ಠಿತ ಪುಟಲಿಟ್ಜರ್ ಪ್ರಶಸ್ತಿಗೆ ಭಾಜನವಾದವು.  ಜೋಡಿ ಕ್ಯಾಂಟೋರ್ ಮತ್ತು ಮೆಗನ್ ಟ್ವೊಹೀ ನೇತೃತ್ವದ ’ಟೈಮ್ಸ್ ತಂಡ ಮತ್ತು ನ್ಯೂಯಾರ್ಕರ್ ನ ಪತ್ರಕರ್ತ ರೋನನ್ ಫರೋ ಅವರಿಗೆ ಹಾಲಿವುಡ್ ದೊರೆಯ ಬದುಕನ್ನೇ ನೆಲಕಚ್ಚಿಸಿದ ವರದಿಗಳಿಗಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.  ೨೦೧೭ರ ಅಕ್ಟೋಬರ್ ತಿಂಗಳಲ್ಲಿ ಟೈಮ್ಸ್ ಮತ್ತು ನ್ಯೂಯಾರ್ಕರ್ ನಲ್ಲಿ ಬಂದ ವರದಿಗಳ ಬಳಿಕ ೧೦೦ಕ್ಕೂ ಹೆಚ್ಚು ಮಂದಿ ಮಹಿಳೆಯರು ಲೈಂಗಿಕ ಕಿರುಕುಳದಿಂದ ಅತ್ಯಾಚಾರವರೆಗಿನ ಚಿತ್ರ ನಿರ್ಮಾಪಕನ ದುರ್ವರ್ತನೆ ಬಗ್ಗೆ ಬಹಿರಂಗವಾಗಿ ಆಪಾದಿಸಿದ್ದರು. ಇದು #ಮಿ ಟೂ ವಿಶ್ವ ವ್ಯಾಪಿ ಚಳವಳಿಯನ್ನು ಹುಟ್ಟು ಹಾಕಿತ್ತು.  ವೀನ್ ಸ್ಟೀನ್ ಪತ್ರಿ ವೀನ್ ಸ್ಟೀನ್ ಅವರನ್ನು ತ್ಯಜಿಸಿದರೆ, ಪೊಲೀಸರು ಲಂಡನ್, ಲಾಸ್ ಏಂಜೆಲಿಸ್ ಮತ್ತು ನ್ಯೂಯಾರ್ಕಿನಲ್ಲಿ  ಕ್ರಿಮಿನಲ್ ತನಿಖೆಗಳನ್ನು ನಡೆಸಿದರು. ೬೬ರ ಹರೆಯದ ಖ್ಯಾತ ಚಿತ್ರ ನಿರ್ಮಾಪಕನ ವಿರುದ್ಧ ಹಲವಾರು ಸಿವಿಲ್ ಖಟ್ಲೆಗಳು ದಾಖಲಾಗಿ, ಅವರು ಆರ್ಥಿಕವಾಗಿ ನೆಲಕಚ್ಚಿದರು. ‘ಈ ವರದಿಗಳು ಹಾಲಿವುಡ್ ನ ಅತ್ಯಂತ ಪ್ರಭಾವಶಾಲಿ ನಿರ್ಮಾಪಕರಲ್ಲಿ ಒಬ್ಬರು ಸೇರಿದಂತೆ ಪ್ರಭಾವಶಾಲಿ ಶ್ರೀಮಂತ ಲೈಂಗಿಕ ಪರಭಕ್ಷಕರ ಖಯಾಲಿಗಳನ್ನು ಬಯಲಿಗೆಳೆದು ಮಹಿಳೆಯರ ವಿರುದ್ಧದ ಶೋಷಣೆ, ಕ್ರೌರ್‍ಯವನ್ನು ಹೊರಗೆಳೆದವು ಎಂದು ಪುಲಿಟ್ಜರ್ ಆಡಳಿತಗಾರ ಡಾನಾ ಕೆನಡಿ ಹೇಳಿದರು.  ದಿ ವಾಷಿಂಗ್ಟನ್ ಪೋಸ್ಟ್ ರಿಪಬ್ಲಿಕನ್ ಅಭ್ಯರ್ಥಿ ರೋಯ್ ಮೂರೆ ಅವರು ಹದಿಹರೆಯದ ಹುಡುಗಿಯರಿಗೆ ನೀಡುತ್ತಿದ್ದ ಲೈಂಗಿಕ ಕಿರುಕುಳದ ಕಥೆಗಳನ್ನು ಬಯಲಿಗೆ ಎಳೆದುದದಕ್ಕಾಗಿ ತನಿಖಾ ವರದಿ ವಿಭಾಗದ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಮೂರೆ ವಿರೋಧಿ ವರದಿಗಳ ಪರಿಣಾಮವಾಗಿ ೨೦೧೭ರ ಡಿಸೆಂಬರ್ ತಿಂಗಳಲ್ಲಿ ನಡೆದ ವಿಶೇಷ ಚುನಾವಣೆಯಲ್ಲಿ ಮೂರೆ ಅವರ ಪ್ರತಿಸ್ಪರ್ಧಿ ಡೌಗ್ ಜೋನ್ಸ್ ಗೆಲ್ಲುವುದರೊಂದಿಗೆ ೨೫ ವರ್ಷಗಳಲ್ಲಿಯೇ ಅಲಬಾಮಾದ ಮೊದಲ ಡೆಮಾಕ್ರಾಟಿಕ್ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೊಡ್ಡ ಪ್ರಮಾಣದ ಹೊಡೆತವಾಗಿತ್ತು. ನ್ಯಾಷನಲ್ ರಿಪೋರ್ಟಿಂಗ್ ವಿಭಾಗದ ಪುಲಿಟ್ಜರ್ ಪ್ರಶಸ್ತಿಯನ್ನು ದಿ ನ್ಯೂಯಾಕ್ ಟೈಮ್ಸ್ ಮತ್ತು ದಿ ವಾಷಿಂಗ್ಟನ್ ಪೋಸ್ಟ್ ಹಂಚಿಕೊಂಡವು. ಫಿಲಿಪ್ಪೈನ್ಸ್ ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ಟೆ ಅವರು ಮಾದಕ ದ್ರವ್ಯಗಳ ವಿರುದ್ಧ ನಡೆಸಿದ ಸಮರಕ್ಕೆ ಸಂಬಂಧಿಸಿದ ವರದಿಗಾಗಿ ಅಂತಾರಾಷ್ಟ್ರೀಯ ವರದಿಗಾರಿಕೆಗೆ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿಯನ್ನು ರಾಯಿಟರ್ ಪಡೆದುಕೊಂಡಿತು. ಫೀಚರ್ ಫೋಟೋಗ್ರಫಿಗೆ ನೀಡಲಾಗುವ ಪ್ರಶಸ್ತಿಯನ್ನು ರೊಹಿಂಗ್ಯಾ ಬಿಕ್ಕಟ್ಟಿಗೆ ಸಂಬಂಧಿಸಿದ ಫೊಟೋಗಳಿಗಾಗಿ ರಾಯಿಟರ್ ಪಡೆಯಿತು.

2018: ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಹೊರಬಂದಿರುವ ಹಗರಣಗಳ
ಹಿನ್ನೆಲೆಯಲ್ಲಿ ಪ್ರಶ್ನೆಗಳನ್ನು ಉತ್ತರಿಸಲು ಮೇ ೧೭ರಂದು ತನ್ನ ಮುಂದೆ ಹಾಜರಾಗುವಂತೆ ಸಂಸದೀಯ ಸಮಿತಿಯೊಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಕರೆ ಕಳುಹಿಸಿತು. ಕಾಂಗ್ರೆಸ್ ನಾಯಕ ಎಂ. ವೀರಪ್ಪ ಮೊಯ್ಲಿ ನೇತೃತ್ವದ ಹಣಕಾಸು ಸ್ಥಾಯೀ ಸಮಿತಿಯು ಈದಿನ  ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಪ್ರಶ್ನಿಸಿತು.  ‘ಮೇ ೧೭ರಂದು ಸಮಿತಿಯ ಮುಂದೆ ಹಾಜರಾಗುವಂತೆ ನಾವು ಆರ್ ಬಿಐ ಗವರ್ನರ್ ಅವರನ್ನು ಆಹ್ವಾನಿಸಿದ್ದೇವೆ. ಬ್ಯಾಂಕಿಂಗ್ ಹಗರಣಗಳು ಮತ್ತು ಇತರ ಬ್ಯಾಂಕಿಂಗ್ ನಿಯಮಾವಳಿಗಳ ಬಗ್ಗೆ ನಾವು ಅವರನ್ನು ಪ್ರಶ್ನಿಸಲಿದ್ದೇವೆ ಎಂದು ಸಮಿತಿಯ ಮೂಲವೊಂದು ತಿಳಿಸಿತು.  ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಈದಿನ ಸಮಿತಿ ಸಭೆಗೆ ಹಾಜರಾಗಿದ್ದರು.  ಸರ್ಕಾರಿ ರಂಗದ ಬ್ಯಾಂಕುಗಳ ಜೊತೆ ವ್ಯವಹರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಕ್ತ ಅಧಿಕಾರಗಳನ್ನು ಹೊಂದಿಲ್ಲ ಎಂದು ಪಟೇಲ್ ಅವರು ಇತ್ತೀಚೆಗೆ ಹೇಳಿದ್ದರು.  ಆರ್ ಬಿಐ ಗವರ್ನರ್ ಅವರಿಗೆ ಯಾವ ರೀತಿಯ ಅಧಿಕಾರಗಳ ಅಗತ್ಯವಿದೆ ಎಂದು ನಾವು ತಿಳಿಯಬಯಸಿದ್ದೇವೆ ಎಂದು ಸಮಿತಿಯ ಇನ್ನೊಂದು ಮೂಲ ಹೇಳಿತು. ನಿಯಮಾವಳಿ ಅತ್ಯಂತ ಮುಖ್ಯವಾದ ಭಾಗ. ಆದ್ದರಿಂದ ನಾವು ಗವರ್ನರ್ ಅವರನ್ನೇ ಕರೆದಿದ್ದೇವೆ ಎಂದು ಮೂಲ ಹೇಳಿತು.   ಸಮಿತಿಯು ಈದಿನದ ಸಭೆಯಲ್ಲಿ ಸರ್ಕಾರಿ ಮತ್ತು ಖಾಸಗಿ ರಂಗದ ಬ್ಯಾಂಕುಗಳ ಹಲವಾರು ಹಗರಣಗಳ ಬಗ್ಗೆ ಚರ್ಚಿಸಿತು ಎಂದು ಮೂಲ ಹೇಳಿತು.  ಸಭೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಹಗರಣ ಮತ್ತು ಐಸಿಐಸಿಐ ಬ್ಯಾಂಕ್ ಸಾಲ ವಿಷಯಗಳು ಪ್ರಸ್ತಾಪಗೊಂಡವೇ ಎಂಬ ಪ್ರಶ್ನೆಗೆ  ’ಐಸಿಐಸಿಐ ಬ್ಯಾಂಕ್ ಸೇರಿದಂತೆ ಎಲ್ಲ ವಾಣಿಜ್ಯ ಬ್ಯಾಂಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಯಿತು ಎಂದು ಮೂಲ ಉತ್ತರಿಸಿತು.  ಹಣಕಾಸು ಸಚಿವಾಲಯದ ಅಧಿಕಾರಿಗಳು ಶಾಸನಕರ್ತರ ಪ್ರಶ್ನೆಗಳಿಗೆ ಭಾಗಶಃ ಉತ್ತರ ನೀಡಿದರು. ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಸಲ್ಲಿಸಲು ಅವರಿಗೆ ಮೂರು ವಾರಗಳ ಗಡುವು ನೀಡಲಾಯಿತು ಎಂದು ಮೂಲಗಳೂ ಹೇಳಿದವು. .

2018: ನವದೆಹಲಿ:  ಇಪ್ಪತ್ತು ವರ್ಷಗಳ ಹಿಂದೆ ಕೃಷ್ಣ ಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ  ಐದು
ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಜಾಮೀನು ಪಡೆದು ಹೊರ ಬಂದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ನಾಲ್ಕು ದೇಶಗಳ ಸಂದರ್ಶನಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳಲು ಜೋಧಪುರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ, ಮಂಗಳವಾರ ಶರತ್ತಿನ ಅನುಮತಿ ನೀಡಿತು.  ೧೯೯೮ರಲ್ಲಿ ಕೃಷ್ಣ ಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ಎಪ್ರಿಲ್ ೭ರಂದು ಜಾಮೀನು ಮಂಜೂರಾಗಿತ್ತು. ೨೫,೦೦೦ ರೂ.ಗಳ ಎರಡು ಭದ್ರತಾ ಠೇವಣಿ ಆಧಾರದಲ್ಲಿ ಖಾನ್ ಅವರನ್ನು ಬಿಡುಗಡೆ ಮಾಡಲಾಗಿತ್ತು.  ಜಾಮೀನು ಸಿಗುವ ಮುನ್ನ ಸಲ್ಮಾನ್ ಖಾನ್ ಜೋಧಪರ ಸೆರೆಮನೆಯಲ್ಲಿ ಎರಡು ರಾತ್ರಿಗಳನ್ನು ಕಳೆದಿದ್ದರು. ಜಾಮೀನು ಶರತ್ತಿನ ಪ್ರಕಾರ ಸಲ್ಮಾನ್ ವಿದೇಶ ಪ್ರವಾಸ ಕೈಗೊಳ್ಳಲು ನ್ಯಾಯಾಲಯದ ಅನುಮತಿ ಕೋರಬೇಕಾಗಿತ್ತು.
ಅದರ ಪ್ರಕಾರ ಸಲ್ಮಾನ್ ಖಾನ್ ಅವರು ವಿದೇಶ ಪ್ರವಾಸಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.  ಸಲ್ಮಾನ್ ಖಾನ್ ಅವರು ಮೇ ೨೫ರಿಂದ ಜುಲೈ ೧೦ರವರೆಗೆ ಕೆನಡಾ, ನೇಪಾಳ ಮತ್ತು ಅಮೆರಿಕ ಪ್ರವಾಸ ನಡೆಸಲಿದ್ದಾರೆ. 

2018: ವಾಷಿಂಗ್ಟನ್: ಅಮೆರಿಕದಲ್ಲಿ ೪ ಸದಸ್ಯರ ಭಾರತೀಯರ ಕುಟುಂಬವೊಂದು ಕಳೆದ ವಾರ
ನಾಪತ್ತೆಯಾಗಿದ್ದು, ತೀವ್ರ ಹುಡುಕಾಟದ ಬಳಿಕ ನದಿಯೊಂದರಲ್ಲಿ ಕಾರಿನಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿದವು. ನದಿಯಲ್ಲಿ ಇಬ್ಬರ ಶವಗಳು ಸುವ್ ಕಾರಿನಲ್ಲಿ ಪತ್ತೆಯಾಗಿದ್ದು, ತನಿಖೆ ವೇಳೆ ಶವಗಳು ಸಂದೀಪ್ ತೊಟ್ಟಿಪಿಲ್ಲಿ ಮತ್ತು ಅವರ ೯ ವರ್ಷದ ಪುತ್ರಿ ಸಾಚಿ ಅವರದ್ದು ಎಂದು ಗೊತ್ತಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ತಿಳಿಸಿತು.  ಓರೆಗಾಂವ್ ನಿಂದ  ಕ್ಯಾಲಿಫೋರ್ನಿಯಾಕ್ಕೆ ಎಸ್ ಯು ವಿ (ಸ್ಫೋರ್ಟ್ ಯುಟಿಲಿಟಿ ವೆಹಿಕಲ್ ) ಕಾರಿನಲ್ಲಿ ಪಯಣ ಹೊರಟಿದ್ದ ಸಂದೀಪ್ ತೊಟ್ಟಪಿಲ್ಲಿ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದರು.  ಸಂದೀಪ್ ಮತ್ತು ಪುತ್ರಿಯ ಶವ ಪತ್ತೆಯಾಗುವ ೨ ದಿನ ಮುನ್ನ ಪತ್ನಿ ಸೌಮ್ಯ ಶವವೂ ಪೊಲೀಸರಿಗೆ ಲಭಿಸಿತ್ತು. ಆದರೆ ಪುತ್ರ ಸಿದ್ಧಾಂತ್ ಎಲ್ಲಿದ್ದಾನೆ ಎಂಬ ಮಾಹಿತಿ ಲಭಿಸಿಲ್ಲ. ನದಿಯಲ್ಲಿ ಬೋಟಿಂಗ್ ನಡೆಸುತ್ತಿದ್ದ ತಂಡದ ಸದಸ್ಯರು ಕಾರನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಶವಗಳನ್ನು ಮೇಲಕ್ಕೆತ್ತಲಾಯಿತು ಎಂದು ವರದಿ ಹೇಳಿದೆ. ಪ್ರಕರಣದ ಬಗ್ಗೆ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು ಸಾವಿಗೆ ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲ.  ಸಂದೀಪ್ ಗುಜರಾತಿನ  ಸೂರತ್ ನಗರದಲ್ಲಿ ಹುಟ್ಟಿ ಬೆಳೆದವರಾಗಿದ್ದು, ಅಮೆರಿಕದಲ್ಲಿ ೧೫ ವರ್ಷಗಳಿಂದ ನೆಲೆಸಿದ್ದರು ಎಂದು ವರದಿಗಳು ಹೇಳಿದವು.


2017: ನವದೆಹಲಿ:ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡುವುದಕ್ಕಾಗಿ  ಹೊಟೇಲ್ನಲ್ಲಿ  ಹಣ ಇಟ್ಟುಕೊಂಡ ಆರೋಪದ ಮೇಲೆ ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿ ಟಿ ವಿ ದಿನಕರನ್ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದರು. ಈದಿನ  ಬೆಳಗ್ಗೆ ದೆಹಲಿಯ ಖಾಸಗಿ ಹೊಟೇಲ್ವೊಂದರಲ್ಲಿ ಪೊಲೀಸರು  ದಾಳಿ ನಡೆಸಿ  1.5 ಕೋಟಿ ರೂ. ನಗದನ್ನು ವಶಪಡಿಸಿಕೊಂಡು ಸುಕೇಶ್ ಚಂದ್ರಶೇಖರ್ ಯಾನೆ ಬಾಲಾಜಿ ಎಂಬ ಬೆಂಗಳೂರಿನ ಮಧ್ಯವರ್ತಿಯನ್ನು  ಬಂಧಿಸಿದರು. ಸುಕೇಶ್ ತಪ್ಪೊಪ್ಪಿಕೊಂಡಿದ್ದು, ಎರಡೆಲೆ ಚಿಹ್ನೆಗಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ ನೀಡಲು ದಿನಕರನ್ 50 ಕೋಟಿ ರೂಪಾಯಿಗಳ ಲಂಚ ವ್ಯವಹಾರ ಕುದುರಿಸಿದ್ದುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದರು. ಹಣ ದಿನಕರನ್ಅವರಿಗೆ ಸೇರಿದ್ದು ಇದನ್ನು ಚುನಾವಣಾ  ಆಯೋಗದ ಅಧಿಕಾರಿಗಳಿಗೆ ಲಂಚ ನೀಡುವುದಕ್ಕಾಗಿ ಹೊಟೇಲ್ನಲ್ಲಿ ಇರಿಸಲಾಗಿತ್ತು ಎಂದು ಸುಕೇಶ್ ಚಂದ್ರಶೇಖರ್ಪೊಲೀಸರ ತನಿಖೆ ವೇಳೆ ಹೇಳಿದ್ದನ್ನು ಅನುಸರಿಸಿ ದಿನಕರನ್ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಸುಕೇಶ್ ಚಂದ್ರಶೇಖರನಿಂದ 1.5 ಕೋಟಿ ರೂ. ಜತೆಗೆ  ಬಿಎಂಡಬ್ಲ್ಯೂ ಮತ್ತು ಮರ್ಸಿಡೀಸ್ ಕಾರುಗಳನ್ನೂ ಸಹ ವಶಪಡಿಸಿಕೊಳ್ಳಲಾಯಿತು.  ಪೊಲೀಸರು ಸಂಬಂಧ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದು, ತನಿಖೆಗೆ ಸಹಕರಿಸುವಂತೆ ದಿನಕರನ್ ಅವರಿಗೆ ಸಮನ್ಸ್ ಜಾರಿ ಮಾಡಿತು.  ಚೆನ್ನೈನ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಮುನ್ನ ಪನ್ನೀರ ಸೆಲ್ವಂ ಮತ್ತು ವಿಕೆ ಶಶಿಕಲಾ ಬಣ ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗದ ಮೊರೆ ಹೋಗಿದ್ದವು. ಎರಡೂ ಪಕ್ಷಗಳ ವಿಚಾರಣೆ ನಡೆಸಿದ ಚುನಾವಣಾ ಆಯೋಗವು ಎರಡೂ ಬಣಕ್ಕೆ ಪ್ರತ್ಯೇಕ ಚಿಹ್ನೆ ನೀಡಿತ್ತು. ಹಿನ್ನೆಲೆಯಲ್ಲಿ ಮೂಲ ಚಿಹ್ನೆಯನ್ನು ತಮ್ಮ ಬಣಕ್ಕೇ ದಕ್ಕಿಸಿಕೊಳ್ಳಲು ಶಶಿಕಲಾ ಬಣ ದುಸ್ಸಾಹಸಕ್ಕೆ ಕೈಹಾಕಿತು ಎನ್ನಲಾಯಿತು. ಆರ್ ಕೆ ನಗರ ಕ್ಷೇತ್ರದಲ್ಲಿ ಹಣ ಹಂಚಿಕೆಯಾಗಿದೆ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಚುನಾವಣೆಯನ್ನು ಮುಂದೂಡಿತ್ತು. ಹಣ ಹಂಚಿಕೆ ಸಂಬಂಧ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿ 89.5 ಕೋಟಿ ರೂ. ಹಣ ಹಂಚಿಕೆಯಾಗಿರುವ ಕುರಿತು ದಾಖಲೆ ಸಂಗ್ರಹಿಸಿದ್ದರು.
2017: ಹೈದರಾಬಾದ್‌: ಹನ್ನೊಂದು ವರ್ಷದ ಬಾಲಕ ಅಗಸ್ತ್ಯ ಜೈಸ್ವಾಲ್‌ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ದಾಖಲೆ ಸ್ಥಾಪಿಸಿದ. ತೆಲಂಗಾಣದ ಎಸ್ಎಸ್ಸಿ ಮಂಡಳಿಯಿಂದ ವಿಶೇಷ ಅನುಮತಿ ಪಡೆದು 9ನೇ ವಯಸ್ಸಿನಲ್ಲಿಯೇ ಎಸ್ಎಸ್ಸಿ (10ನೇ ತರಗತಿ) ಪರೀಕ್ಷೆ ಬರೆದು ಅಗಸ್ತ್ಯ ತೇರ್ಗಡೆಯಾಗಿದ್ದ. ಯೂಸುಫ್ಗುಡದ ಸೇಂಟ್ಮೇರಿಸ್ಜೂನಿಯರ್ಕಾಲೇಜಿನಲ್ಲಿ ಶಿಕ್ಷಣ ಪಡೆದ ಅಗಸ್ತ್ಯ ಇದೇ ಮಾರ್ಚ್ನಲ್ಲಿ 12ನೇ ತರಗತಿ ಪರೀಕ್ಷೆ ಬರೆದಿದ್ದ. ಹಿಂದಿನ ದಿನ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.63 ಅಂಕ ಬಂದಿರುವುದಾಗಿ ಅಗಸ್ತ್ಯ ತಂದೆ ಅಶ್ವನಿ ಕುಮಾರ್ತಿಳಿಸಿದರು. ಭಾಷಾ ವಿಷಯಗಳೊಂದಿಗೆ  ಪೌರನೀತಿ, ಅರ್ಥಶಾಸ್ತ್ರ ಹಾಗೂ ವಾಣಿಜ್ಯ   ವಿಷಯಗಳಲ್ಲಿ ಪರೀಕ್ಷೆ ತೆಗೆದುಕೊಳ್ಳಲಾಗಿತ್ತು. ಅದ್ಭುತ ಸಾಮರ್ಥ್ಯದ ಬಾಲಕನೆಂದು ಹೆಸರಾಗಿರುವ ಅಗಸ್ತ್ಯನ ಅಕ್ಕ ಅಂತರರಾಷ್ಟ್ರೀಯ ಟೇಬಲ್ಟೆನಿಸ್ಆಟಗಾರ್ತಿ ನೈನಾ ಜೈಸ್ವಾಲ್‌, ಪಿಎಚ್ಡಿ ಮಾಡುತ್ತಿರುವ ಅತಿ ಕಿರಿಯ ಕ್ರೀಡಾಪಟು ಎನ್ನುವ ಖ್ಯಾತಿ ಹೊಂದಿದ್ದಾರೆ. ತನ್ನ 15ನೇ ವಯಸ್ಸಿನಲ್ಲಿ ನೈನಾ ರಾಜ್ಯ ಶಾಸ್ತ್ರ ವಿಷಯದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು.
2017: ಬೆಂಗಳೂರು:  ವಿಧಾನ ಪರಿಷತ್ ಬಿಜೆಪಿ ಸದಸ್ಯೆ ವಿಮಲಾಗೌಡ (63 ವರ್ಷ) ಅವರು ಹೃದಯಾಘಾತದಿಂದ ನಿಧನರಾದರು. ಉಸಿರಾಟ ಹಾಗೂ ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ವಿಮಲಾಗೌಡ ಅವರು ತಿಂಗಳಿಂದ ನಗರದ ನಾರಾಯಾಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು. 2011ರಿಂದ 2014 ವರೆಗೂ ಉಪ ಸಭಾಪತಿಯಾಗಿ ವಿಮಲಾಗೌಡ ಜವಾಬ್ದಾರಿ ನಿರ್ವಹಿಸಿದ್ದರು. ಮೂರು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. 1955 ನವೆಂಬರ್ 20ರಂದು ಜನಿಸಿದ ಅವರು 1980ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

 1989: ವಿಶ್ವ ಕುಸುಮ ದಿನ. ವಿಶ್ವ ಕುಸುಮ (ಹಿಮೋಫಿಲಿಯಾ) ರೋಗ ದಿನಾಚರಣೆಯನ್ನು ಪ್ರತಿ ವರ್ಷ ಏಪ್ರಿಲ್ 17ರಂದು ಹಮ್ಮಿಕೊಳ್ಳಲಾಗುತ್ತದೆ. ವಿಶ್ವ ಹಿಮೋಫಿಲಿಯಾ ಸಂಘಟನೆಯ ಸಂಸ್ಥಾಪಕ ಫ್ರ್ಯಾಂಕ್ ಶ್ಯಾನ್ ಬೆಲ್ನ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 1989ರಿಂದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರಲ್ಲಿ ಕುಸುಮ ರೋಗದ ಕುರಿತು ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ರೋಗಕ್ಕೆ ಸಂಬಂಧಿಸಿದಂತೆ ಜನರಲ್ಲಿ ಇರುವ ತಪ್ಪು ಕಲ್ಪನೆ ಕೊನೆಗಾಣಿಸುವುದು ಸಂಘಟನೆಯ ಇನ್ನೊಂದು ಪ್ರಮುಖ ಉದ್ದೇಶ.

2016: ಅಜಂಗಡ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಗುಮ್ನಾಮಿ ಬಾಬಾ ಹೆಸರಿನಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಬದುಕಿದ್ದರು ಎಂಬ ಗುಮಾನಿಗಳ ಮಧ್ಯೆ ನೇತಾಜಿ ಅವರ ಕಾರು ಚಾಲಕ ಹಾಗೂ ಅಂಗರಕ್ಷಕರಾಗಿದ್ದ ಕರ್ನಲ್ ನಿಜಾಮುದ್ದೀನ್ ಮತ್ತೆ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾದರು. ಈಗ ಅವರು ಸುದ್ದಿಯಾಗಿರುವುದು ಏಕೆಂದರೆ ಅವರೀಗ ಭೂಮಿಯಲ್ಲಿ ಬದುಕಿರುವ ಅತ್ಯಂತ ಹಿರಿಯ ಮನುಷ್ಯ ಮತ್ತು 116ನೇ ವಯಸ್ಸಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂಬ ಕಾರಣಕ್ಕಾಗಿ. ಕರ್ನಲ್ ನಿಜಾಮುದ್ದೀನ್ ಯಾನೆ ಸೈಫುದ್ದೀನ್ ಅವರ ಮತದಾರ ಗುರುತಿನ ಚೀಟಿ ಮತ್ತು ಪಾಸ್ಪೋರ್ಟ್ ಪ್ರಕಾರ ಅವರು 1900ರಲ್ಲಿ ಜನಿಸಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆಯುವ ಸಲುವಾಗಿ ಅವರು ಸಲ್ಲಿಸಿದ ದಾಖಲೆಗಳಿಂದ ಅವರ ವಯಸ್ಸು ಬೆಳಕಿಗೆ ಬಂದಿತು.  ಈ ವರ್ಷ ಫೆಬ್ರುವರಿಯಲ್ಲಿ ವಿಶ್ವದ ಅತ್ಯಂತ ವೃದ್ಧ ಎಂಬುದಾಗಿ ಭಾವಿಸಲಾಗಿದ್ದ ಜಪಾನಿನ ವ್ಯಕ್ತಿ ತಮ್ಮ 114ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಹೀಗಾಗಿ ಈದಿನ ಭಾನುವಾರ 116 ವರ್ಷ, 3 ತಿಂಗಳು, 14 ದಿನಗಳನ್ನು ಪೂರೈಸಿರುವ ನಿಜಾಮುದ್ದೀನ್ ಅವರು ಭೂಮಿಯ ಮೇಲೆ ಬದುಕಿರುವ ಅತ್ಯಂತ ಹಿರಿಯ ಮನುಷ್ಯ ಎಂಬುದು ಸ್ಪಷ್ಟವಾಯಿತು. ಇದೀಗ ನಿಜಾಮುದ್ದೀನ್ ಅವರು ತಮ್ಮ ಪತ್ನಿ ಅಜ್ಬುನ್ನೀಸಾ (107) ಮತ್ತು ತಮ್ಮ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ಖಾತೆ ತೆರೆದು ಇನ್ನೊಂದು ದಾಖಲೆ ನಿರ್ಮಿಸಿದ್ದಾರೆನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಾರಿನ ಚಾಲಕ ಹಾಗೂ ಅಂಗರಕ್ಷಕರಾಗಿದ್ದ ಕರ್ನಲ್ ನಿಜಾಮುದ್ದೀನ್ ಅವರು 2006ರಲ್ಲೇ, ಸುಭಾಷ್ ಚಂದ್ರ ಬೋಸ್ ಅವರು 1945 ತೈಪೆ ವಿಮಾನ ಅಪಘಾತದಲ್ಲಿ ಮೃತರಾಗಿಲ್ಲ, ಏಕೆಂದರೆ ಅವರು ವಿಮಾನವನ್ನು ಹತ್ತಿರಲೇ ಇಲ, ಕೊನೆ ಕಣದಲ್ಲಿ ಮನಸ್ಸು ಬದಲಿಸಿದ್ದರು ಎಂದು ಖಂಡತುಂಡವಾಗಿ ಹೇಳಿದ್ದಲ್ಲದೆ, ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಅವರು ಫೈಜಾಬಾದಿನಲ್ಲಿ ಗುಮ್ನಾಮಿ ಬಾಬಾ ಹೆಸರಿನಲ್ಲಿ ಅಜ್ಞಾತರಾಗಿ ಜೀವಿಸಿ ಬಳಿಕ ಅದೇ ಹೆಸರಿನಲ್ಲಿ ನಿಧನರಾಗಿದ್ದರು ಎಂದು ಪ್ರತಿಪಾದಿಸಿದ್ದರು. ಇತ್ತೀಚೆಗೆ ಗುಮ್ನಾಮಿ ಬಾಬಾ ಅವರ ಬಳಿ ಇದ್ದ ಪೆಟ್ಟಿಗೆಯೊಂದರಲ್ಲಿ ನೇತಾಜಿ ಅವರ ಕುಟುಂಬ ಸದಸ್ಯರ ಭಾವಚಿತ್ರಗಳು ಪತ್ತೆಯಾಗಿದ್ದವು.

2016: ಕ್ವಿಟೋ: ಈಕ್ವೆಡಾರ್ನಲ್ಲಿ ಹಿಂದಿನ ದಿನ ಮತ್ತು ಈದಿನ ನಸುಕಿನಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ 233ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 500 ಮಂದಿ ಗಾಯಗೊಂಡರು. ಇದೇವೇಳೆಗೆ ಜಪಾನ್ ಭೂಕಂಪದಲ್ಲಿ ಸತ್ತವರ ಸಂಖ್ಯೆ 41ಕ್ಕೆ ಏರಿತು.ಇಟಲಿ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಾಸಾದ ಅಧ್ಯಕ್ಷ ರಾಫೆಲ್ ಕೊರಿ, ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು.ಭೂಕಂಪ ಸಂಭವಿಸಿದ ಪ್ರದೇಶದಲ್ಲಿ 10,000 ಯೋಧರು ಮತ್ತು 3,500 ಪೊಲೀಸರು ರಕ್ಷಣಾ ಕಾರ್ಯ ನಡೆಸುಸಿದರು.. ಶನಿವಾರ ಸಂಜೆ 7.8 ಪ್ರಮಾಣದ ಭೂಕಂಪ ಸಂಭವಿಸಿತ್ತು. ಬಳಿಕ 5.6 ತೀವ್ರತೆಯ ಇನ್ನೊಂದು ಭೂಕಂಪ ಸಂಭವಿಸಿತ್ತು.

2009: ಮಹತ್ವದ ಬೆಳವಣಿಗೆಯೊಂದರಲ್ಲಿ ಬಂಧಿತ ಪಾಕಿಸ್ಥಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಅಲಿಯಾಸ್ ಕಸಾಬ್, ಮುಂಬೈ ದಾಳಿಯಲ್ಲಿ ಭಾಗಿಯಾಗಿರುವುದಾಗಿ ನ್ಯಾಯಾಲಯಕ್ಕೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಹಿಂತೆಗೆದುಕೊಂಡ. ಮೊದಲ ದಿನದ ವಿಚಾರಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸರ್ಕಾರಿ ನಿಯೋಜಿತ ಕಸಾಬ್ ಪರ ವಕೀಲ ಎಸ್.ಜಿ. ಅಬ್ಬಾಸ್ ಕಜ್ಮಿ, 'ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ ಸುಮಾರು 40 ಪುಟಗಳ ತಪ್ಪೊಪ್ಪಿಗೆ ಹೇಳಿಕೆ ಮತ್ತು ಅದರಲ್ಲಿರುವ ಸಹಿಯನ್ನು ತನ್ನ ಕಕ್ಷಿದಾರನ ಮೇಲೆ ಒತ್ತಡ ಹಾಕಿ ಪಡೆಯಲಾಗಿದೆ' ಎಂದು ದೂರಿದರು. 'ನಾನು ಸ್ವಯಂ-ಇಚ್ಛೆಯಿಂದ ತಪ್ಪೊಪ್ಪಿಗೆ ಹೇಳಿಕೆ ನೀಡಿಲ್ಲ. ಪೊಲೀಸರು ಒತ್ತಡದಿಂದ ಹೇಳಿಕೆ ಪಡೆದಿದ್ದಾರೆ. ನನಗೆ ಅಭಿಪ್ರಾಯ ಹೇಳಲು ಸ್ವಲ್ಪವೂ ಅವಕಾಶ ನೀಡಿಲ್ಲ' ಎಂದು ಕಸಾಬ್ ತಿಳಿಸಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ಓದಿದ ನಂತರ ಕಜ್ಮಿ ಆರೋಪಿಸಿದರು.

2009: ಪಾಕಿಸ್ಥಾನಿ ಸೇನೆಯ ಮೇಜರ್ ಜನರಲ್ ದರ್ಜೆ ಅಧಿಕಾರಿಯೊಬ್ಬರ ಮೇಲ್ವಿಚಾರಣೆಯಲ್ಲಿ ತಾನು ಮತ್ತು ತನ್ನ ಒಂಬತ್ತು ಸಹದ್ಯೋಗಿಗಳು ತರಬೇತಿ ಪಡೆದಿರುವುದಾಗಿ ಕಳೆದ ನವೆಂಬರ 26ರ ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಅಲಿಯಾಸ್ ಕಸಾಬ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ಪಬ್ಲಕ್ ಪ್ರಾಸೆಕ್ಯೂಟರ್ ಉಜ್ವಲ್ ನಿಕಂ ತಿಳಿಸಿದರು. 'ಲಷ್ಕರ್-ಎ-ತೊಯ್ಬಾ ಸಂಘಟಿಸಿದ್ದ ಶೂಟಿಂಗ್ ತರಬೇತಿಯಲ್ಲಿ ಮೊದಲಿಗನಾಗಿ ಹೊರಹೊಮ್ಮಿದ ತನ್ನನ್ನು ಆ ಮೇಜರ್ ಜನರಲ್ ಬೆನ್ನುತಟ್ಟಿ ಪ್ರಶಂಸಿಸಿದ್ದರು ಮತ್ತು ಉಳಿದ ಸಹದ್ಯೋಗಿಗಳಿಗೆ ಪ್ರಯತ್ನ ಸಾಲದೆಂದು ತಿಳಿಸಿದ್ದರು ಎಂದೂ ಕಸಾಬ್ ಹೇಳಿರುವುದಾಗಿ ಅವರು ತಿಳಿಸಿದರು. ಭಾರತದ ಮಹಾನಗರಗಳ ಮೇಲೆ ಇಂತಹದ್ದೇ ದಾಳಿಗಳನ್ನು ಮಾಡಿ, ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಯೋಜನೆ ಉಗ್ರರದ್ದು ಎಂಬುದು ಸ್ಪಷ್ಟವಾಗಿದೆ ಎಂದು ಅವರು ವಿವರಿಸಿದರು.

2009: ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಎಂದು ಸಾಬೀತಾದ ನಿವೃತ್ತ ಎಸಿಪಿ ಟಿ.ಜಿ. ಸಂಗ್ರಾಮ್ ಸಿಂಗ್ ಅವರಿಗೆ ಮೂರು ವರ್ಷಗಳ ಸಜೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಆದೇಶಿಸಿತು. ಆದರೆ ಈ ಆದೇಶ ಪ್ರಶ್ನಿಸಿ ಅವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿ, ಬೆಂಗಳೂರು 35ನೇ ಹೆಚ್ಚುವರಿ ವಿಶೇಷ ನಗರ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ್ ಪಾಟೀಲ್ ಆದೇಶಿಸಿದರು. ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಕರೀಂ ಲಾಲಾ ತೆಲಗಿ ಹಾಗೂ ಇತರರಿಗೆ ಏಳು ವರ್ಷಗಳ ಕಠಿಣ ಸಜೆ ವಿಧಿಸಲಾಯಿತು. ಸಂಗ್ರಾಮ್ ಸಿಂಗ್‌ಗೆ 1.75ಲಕ್ಷ ಹಾಗೂ ತೆಲಗಿಗೆ 50 ಸಾವಿರ ರೂಪಾಯಿ ದಂಡವನ್ನೂ ಇದೆ ವೇಳೆ ವಿಧಿಸಲಾಯಿತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಅಪರಾಧಿಗಳಿಗೆ ಓದಿ ಹೇಳಿದರು. ಏಳು ವರ್ಷ ಕಠಿಣ ಸಜೆಗೆ ಒಳಗಾದ ಇತರ ಅಪರಾಧಿಗಳು: ಸೈಯದ್ ಜುಮೇದಾರ್, ಬದ್ರುದ್ದೀನ್, ಆನಂದ, ಇಲಿಯಾಜ್ ಅಹಮ್ಮದ್, ಸೋಹೆಲ್ ಖಾನ್, ಇಬ್ರಾಹಿಂ ಹುಡ್ಲಿ, ಸೈಯದ್ ಮೊಹಿದ್ದೀನ್ ಹಾಗೂ ವಜೀರ್ ಅಹಮ್ಮದ್ ಖಾನ್.

2009: ಜಗತ್ತಿನ ಮೂರು ಕಡೆಗಳಲ್ಲಿ ಸಂಭವಿಸಿದ ಭೂಕಂಪನವು ಆಫ್ಘಾನಿಸ್ಥಾನದಲ್ಲಿ 22 ಜನರನ್ನು ಬಲಿ ತೆಗೆದುಕೊಂಡಿತು. ಇಂಡೊನೇಷ್ಯಾ ಹಾಗೂ ಚಿಲಿಯಯಲ್ಲಿ ಯಾವುದೇ ಪ್ರಾಣ ಹಾನಿಯಾಗಲಿಲ್ಲ. ಆಫ್ಘಾನಿಸ್ಥಾನದ ಪೂರ್ವ ಪ್ರಾಂತ್ಯದಲ್ಲಿ ಹಿಂದಿನ ದಿನ ಮಧ್ಯರಾತ್ರಿ ಎರಡು ಬಾರಿ ಭೂಕಂಪನವಾಗಿ, ನೂರಾರು ಮನೆಗಳು ಉರುಳಿ 22 ಮಂದಿ ಮೃತರಾದರು.

2009: ನಗು ಮನಸ್ಸಿನ ಒತ್ತಡ ನಿವಾರಿಸುವ ದಿವ್ಯೌಷಧ ಎಂಬುದನ್ನು ವಿಜ್ಞಾನಿಗಳು ಮತ್ತು ಜನಸಾಮಾನ್ಯರು ಒಪ್ಪಿಕೊಂಡಿರುವುದು ಹಳೆಯ ಸಂಗತಿಯಾದರೂ ಆ ಬಗ್ಗೆ ಹೊಸ ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ. ಇತ್ತೀಚಿನ ಸಂಶೋಧನೆಯೊಂದು, ಪ್ರತಿದಿನ 30 ನಿಮಿಷ ಮನಬಿಚ್ಚಿ ನಕ್ಕರೂ ಸಾಕು ಹೃದಯ ಕಾಯಿಲೆ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಿತು. ಇದೀಗ ನಗುವಿನ ಮಹತ್ವ ಗೊತ್ತಾಗಿರುವುದು ಲಂಡನ್ನಿನ ಲೋಮ ಲಿಂಡಾ ವಿ.ವಿ. ಸಂಶೋಧಕರ ತಂಡಕ್ಕೆ. ದಿನದಲ್ಲಿ ಅರ್ಧ ತಾಸು ಹಾಸ್ಯ ಪ್ರಸಂಗಗಳನ್ನು ವೀಕ್ಷಿಸಿದ್ದೇ ಆದರೆ ಒತ್ತಡ ಸಂಬಂಧಿ ರಸದೂತ (ಹಾರ್ಮೋನ್)ಗಳ ಉತ್ಪತ್ತಿ ಜರ್ರನೆ ಇಳಿಯುವ ಜೊತೆಗೆ ಹೃದಯ ರೋಗಕ್ಕೆ ಕಾರಣವಾಗುವ ಸಂಯುಕ್ತ ರಾಸಾಯನಿಕಗಳ ಉತ್ಪತ್ತಿಯೂ ತಗ್ಗುತ್ತದೆ ಎಂದು ಅಧ್ಯಯನ ಹೇಳಿತು. ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಹೆಚ್ಚುವರಿ ಕೊಲೆಸ್ಟರಾಲ್‌ಗೆ ಔಷಧ ಸೇವಿಸುತ್ತಿದ್ದ ತಲಾ 20 ಗಂಡಸರು ಮತ್ತು ಹೆಂಗಸರನ್ನು ಪ್ರಯೋಗಕ್ಕೆ ಅಳವಡಿಸಲಾಯಿತು. ಇದರಲ್ಲಿ ಅರ್ಧದಷ್ಟು ಮಂದಿಗೆ ಔಷಧಿ ಮಾತ್ರ ನೀಡಿದರೆ ಉಳಿದರ್ಧ ಮಂದಿಗೆ ಔಷಧಿ ನೀಡುವ ಜತೆಗೆ ನಿತ್ಯ ಅರ್ಧ ಗಂಟೆ ತಮಾಷೆ ದೃಶ್ಯಗಳನ್ನು ತೋರಿಸಲಾಯಿತು. ಹಾಸ್ಯ ಪ್ರಸಂಗಗಳನ್ನು ಸವಿದವರು ಹೆಚ್ಚು ತೊಂದರೆ ಮುಕ್ತರಾದುದು ಖಚಿತವಾಯಿತು ಎಂದು ಸಂಶೋಧಕರು ವಿವರಿಸಿದರು.

2008: ಬೀಜಿಂಗ್ ಒಲಿಂಪಿಕ್ ಜ್ಯೋತಿಯ ರಿಲೇಯು ನವದೆಹಲಿಯಲ್ಲಿ ಯಾವುದೇ ತೊಡಕಿಲ್ಲದೆ ಸರಾಗವಾಗಿ ನಡೆದರೂ ಟಿಬೆಟಿಯನ್ನರ ಪ್ರತಿಭಟನೆ ಬೆದರಿಕೆಯ ಹಿನ್ನೆಲೆಯಲ್ಲಿ ಭದ್ರ ಕೋಟೆಯ ನಡುವೆ ತನ್ನ ಆಕರ್ಷಣೆ ಕಳೆದುಕೊಂಡು ಸೊರಗಿತು. ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಆರಂಭವಾದ ಓಟ ರಾಜಪಥದ ಮೂಲಕ ಸಾಗಿ ಕೊನೆಗೆ ಇಂಡಿಯಾ ಗೇಟ್ ಬಳಿ ಮುಕ್ತಾಯವಾಯಿತು. 2.3 ಕಿ.ಮಿ. ದೂರದ ಓಟ ಸಾಗಿದ ದಾರಿಯನ್ನು ಸುಮಾರು 17 ಸಾವಿರ ಮಂದಿ ಭದ್ರತಾ ಸಿಬ್ಬಂದಿ ಕಾವಲು ಕಾದರು.

2008: ಬೆಂಗಳೂರು ನಗರದ ವೊಕಾರ್ಡ್ ಆಸ್ಪತ್ರೆಯಲ್ಲಿ ಗೋವಾ ಮೂಲದ ದಂಪತಿಯ ಕೇವಲ 900 ಗ್ರಾಂ ತೂಕದ ನವಜಾತ ಶಿಶುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ವೈದ್ಯ ಡಾ. ಎನ್. ಎಸ್. ದೇವಾನಂದ ಪ್ರಕಟಿಸಿದರು. ನವಮಾಸ ತುಂಬುವ ಮುನ್ನವೇ ಅಂದರೆ ಕೇವಲ 27 ವಾರಕ್ಕೆ ಜನ್ಮತಾಳಿದ ಶಿಶುವಿನ ಹೃದಯದಲ್ಲಿ' ಫಂಗಸ್' ಸೋಂಕಿನಿಂದ ಒಂದು ಸೆಂ.ಮೀ ಗಾತ್ರದ ಗಡ್ಡೆ ಬೆಳೆದು ಉಸಿರಾಟಕ್ಕೆ ತೊಂದರೆಯಾಗಿತ್ತು. ಜನವರಿ ತಿಂಗಳಲ್ಲೇ ಶಸ್ತ್ರಚಿಕಿತ್ಸೆ ನಡೆಸಿ, ಗಡ್ಡೆ ತೆಗೆಯಲಾಗಿದ್ದು, ಮಗು ಆರೋಗ್ಯದಿಂದಿದೆ ಎಂದು ಅವರು ಈದಿನ ಹೇಳಿದರು.

2008: ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (56) ಅವರು ಒಲಿಂಪಿಕ್ ಜಿಮ್ನಾಸ್ಟ್. ಬಳುಕುವ ಬಳ್ಳಿ ಅಲೀನಾ ಕಬೀವಾ (24) ಎಂಬಾಕೆಯನ್ನು ಜೂನ್ ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎಂದು ರಷ್ಯಾದ ದೈನಿಕ `ಮಾಸ್ಕೊವ್ಕಿ ಕೊರೆಸ್ಪಾಂಡೆಂಟ್' ಉಲ್ಲೇಖಿಸಿ `ದಿ ಡೈಲಿ ಟೆಲಿಗ್ರಾಫ್' ವರದಿ ಮಾಡಿತು. ತಮ್ಮ ಪುತ್ರಿಯ ಪ್ರಾಯದ ಜಿಮ್ನಾಸ್ಟ್ ಗೆ ಮಾಸ್ಕೋದ ರೆಸ್ಟೋರೆಂಟ್ ಒಂದರಲ್ಲಿ ಚುಂಬಿಸುವ ಮೂಲಕ ಪುಟಿನ್ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದನ್ನು ವೆಬ್ ಸೈಟ್ ಒಂದು ದಾಖಲಿಸಿದ್ದನ್ನೂ ಪತ್ರಿಕೆ ಉಲ್ಲೇಖಿಸಿತು. ಅಲೀನಾ ಕಬೀವಾ ರಷ್ಯ ಸಂಸತ್ತಿನ ಸದಸ್ಯೆ. ಕಳೆದ ಸಿಡ್ನಿ ಮತ್ತು ಅಥೆನ್ಸ್ ಒಲಿಂಪಿಕ್ಸ್ ಗಳಲ್ಲಿ ಆಕೆ ದೇಶವನ್ನು ಪ್ರತಿನಿಧಿಸಿದ್ದರು. 1983ರಲ್ಲಿ ತಾಷ್ಕೆಂಟಿನಲ್ಲಿ ಜನಿಸಿದ ಆಕೆ ಚಲನಚಿತ್ರವೊಂದರಲ್ಲೂ ಕಾಣಿಸಿಕೊಂಡಿದ್ದರು. ಹಾಗೂ ಮಾಡೆಲ್ ಆಗುವ ನಿಟ್ಟಿನಲ್ಲಿ ಕ್ಯಾಮರಾಕ್ಕೂ ಪೋಸು ನೀಡಿದ್ದರು.

2008: ಪಾಕಿಸ್ಥಾನದ ವಾಯವ್ಯ ಭಾಗದಲ್ಲಿನ ಖೈಬರ್ ಕಣಿವೆ ಪ್ರದೇಶದಲ್ಲಿನ ಮೂಲಭೂತವಾದಿಗಳು ಹಾಗೂ ಬುಡಕಟ್ಟು ಜನರ ನಡುವೆ ಹಿಂದಿನ ದಿನ ರಾತ್ರಿ ನಡೆದ ಘರ್ಷಣೆಯಲ್ಲಿ 20 ಮಂದಿ ಸಾವನ್ನಪ್ಪಿದರು. ಧರ್ಮಗುರು ಮಂಗಲ್ ಬಾಗ್ ಆಫ್ರಿದಿ ನಾಯಕತ್ವದ ಲಷ್ಕರ್-ಎ-ಇಸ್ಲಾಂ ಪಡೆ ಹಾಗೂ ಕೂಕಿ ಖೇಲ್ ಬುಡಕಟ್ಟು ಜನರ ನಡುವೆ ಈ ಘರ್ಷಣೆ ಸಂಭವಿಸಿತು. ಆಫ್ರಿದಿಯವರು ಬುಡಕಟ್ಟು ಜನರ ಮುಂದೆ 30 ಬೇಡಿಕೆಗಳನ್ನು ಇಟ್ಟಿದ್ದರು. ಅದು ಅನೈತಿಕ ಹಾಗೂ ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಚಟುವಟಿಕಗಳೆಂದು ತೀರ್ಮಾನಿಸಿ ಕೂಕಿ ಖೇಲ್ ಬುಡಕಟ್ಟು ಸಮುದಾಯದವರು ಅದನ್ನು ತಿರಸ್ಕರಿಸಿದರು. ಈ ಕಾರಣದಿಂದ ಈ ಇಬ್ಬರ ನಡುವೆ ಘರ್ಷಣೆ ಸಂಭವಿಸಿತು.

2008: ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 20 ಪ್ಯಾಲೆಸ್ತೀನಿಯರು ಹಾಗೂ ಮೂವರು ಇಸ್ರೇಲಿ ಸೈನಿಕರು ಹತರಾದರು. ಘಟನೆಯನ್ನು ವರದಿ ಮಾಡಲು ಹೋದ ರಾಯಿಟರ್ ಸುದ್ದಿ ಸಂಸ್ಥೆಯ ಟಿವಿ ಛಾಯಾಗ್ರಹಕ ಫಡಲ್ ಶಾನ್ ಕೊಲೆಯಾದರು.

2007: ಖ್ಯಾತ ಕಾದಂಬರಿಕಾರ ತರಾಸು. ಅವರ ಪತ್ನಿ ಅಂಬುಜಾ ತರಾಸು (80) ಅವರು ಮೈಸೂರಿನ ಯಾದವಗಿರಿಯಲ್ಲಿನ ಗಿರಿಕನ್ನಿಕಾದಲ್ಲಿ ನಿಧನರಾದರು.

2007: ಭಾರತ ಸಂಜಾತೆ ಉಷಾ ಲೀ ಮೆಕ್ ಫಾರ್ಲಿಂಗ್ ಅವರನ್ನು ಒಳಗೊಂಡಿರುವ `ಲಾಸ್ ಏಂಜೆಲೀಸ್ ಟೈಮ್' ತಂಡಕ್ಕೆ ಪುಲಿಟ್ಜರ್ ಪ್ರಶಸ್ತಿ ಲಭಿಸಿತು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಪೃಥ್ವಿಯಿಂದ 210 ಮೈಲಿ ದೂರದ ಬಾಹ್ಯಾಕಾಶದ ಅಟ್ಟಣಿಗೆಯಲ್ಲಿ ಟ್ರೆಡ್ ಮಿಲ್ (ನಡಿಗೆ ಯಂತ್ರ) ಮೇಲೆ ಓಡಿ ಬೋಸ್ಟನ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯಾಗುವುದರೊಂದಿಗೆ ಮತ್ತೊಂದು ವಿಶಿಷ್ಟ ಸಾಧನೆ ಮಾಡಿದರು. ಬಾಹ್ಯಾಕಾಶ ಅಟ್ಟಣಿಗೆಯು ಗಂಟೆಗೆ ಎಂಟು ಮೈಲಿ ವೇಗದಲ್ಲಿ ದಿನಕ್ಕೆ ಎರಡು ಬಾರಿ ಭೂಪ್ರದಕ್ಷಿಣೆ ಮಾಡುವಾಗ ಸುನೀತಾ ಅವರು ಟ್ರಡ್ ಮಿಲ್ ನಲ್ಲಿ 4 ಗಂಟೆ 24 ನಿಮಿಷಗಳಲ್ಲಿ ಮ್ಯಾರಥಾನ್ ಗುರಿ ತಲುಪಿದರು. ಬೋಸ್ಟನ್ನಿನಲ್ಲಿ 24,000 ಸ್ಪರ್ಧಿಗಳು ಕೊರೆಯುವ ಚಳಿ ಹಾಗೂ ಇಬ್ಬನಿಯ ಪ್ರತಿಕೂಲ ವಾತಾವರಣದಲ್ಲಿ ಓಡುವ ಮೂಲಕ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡರು.

2007: ಅಮೆರಿಕದ ಷೇರು ಕಂಪೆನಿಗಳನ್ನು ಬಯಲಿಗೆಳೆದ್ದಿದಕ್ಕಾಗಿ 2006ರಲ್ಲಿ ಸಾರ್ವಜನಿಕ ಸೇವಾ ಪ್ರಶಸ್ತಿಯೂ ಸೇರಿದಂತೆ ವಾಲ್ ಸ್ಟ್ರೀಟ್ ನಿಯತಕಾಲಿಕೆಯು ಎರಡು ಪುಲಿಟ್ಜರ್ ಪ್ರಶಸ್ತಿಗಳನ್ನು ಪಡೆಯಿತು.

2007: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈದಿನದಿಂದ ಜಾರಿಯಾಗುವಂತೆ ಬಿಹಾರ ಸರ್ಕಾರದ ಎಲ್ಲ ಸಿಬ್ಬಂದಿಗೆ 15 ದಿನಗಳ `ಪಿತೃತ್ವ ರಜೆ'ಗೆ ಅವಕಾಶ ಕಲ್ಪಿಸಿದರು. ಆದರೆ ಈ ಸವಲತ್ತು ಪಡೆಯಲು ಒಂದು ಕಠಿಣ ಷರತ್ತು ವಿಧಿಸಲಾಯಿತು. ಯಾರು ಕಡ್ಡಾಯವಾಗಿ ಇಬ್ಬರು ಮಕ್ಕಳನ್ನು ಹೊಂದಿರುತ್ತಾರೋ ಅವರಿಗಷ್ಟೇ ಈ ಸವಲತ್ತು ಲಭಿಸುತ್ತದೆ ಎಂಬುದೇ ಈ ಷರತ್ತು. ಅರ್ಹತಾ ಸಮಿತಿಯು ಕಳುಹಿಸಿದ ಪ್ರಸ್ತಾವದ ಬಗ್ಗೆ ಸುದೀರ್ಘ ಚರ್ಚೆಯ ಬಳಿಕ ಈ ನಿಟ್ಟಿನಲ್ಲಿ ಸರ್ಕಾರಿ ಆದೇಶವನ್ನು ಹೊರಡಿಸಲಾಯಿತು. ಮಹಿಳಾ ನೌಕರರ `ಮಾತೃತ್ವ ರಜೆ'ಯನ್ನು 90 ದಿನಗಳಿಂದ 135 ದಿನಗಳಿಗೆ ಏರಿಸಬೇಕು ಎಂಬುದಾಗಿ ಅರ್ಹತಾ ಸಮಿತಿಯು ಮಾಡಿದ ಸಲಹೆಗೂ ಸರ್ಕಾರ ಒಪ್ಪಿಗೆ ನೀಡಿತು. ಇದಕ್ಕೆ ಮುನ್ನ ಜನವರಿ 1ರಂದು ನಿತೀಶ್ ಕುಮಾರ್ ಸರ್ಕಾರವು ದೈನಂದಿನ ಕೆಲಸದ ಸಮಯವನ್ನು ಹೆಚ್ಚು ಮಾಡಿ ಐದು ದಿನಗಳ ಕೆಲಸದ ವಾರ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.

2007: ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆನ್ ಲೈನ್ ಲಾಟರಿ, ಪೇಪರ್ ಲಾಟರಿ ಸೇರಿದಂತೆ ಎಲ್ಲ ಬಗೆಯ ಲಾಟರಿ ನಿಷೇಧಿಸಿ ಕರ್ನಾಟಕ ಸರ್ಕಾರವು ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತು.

2006: ಇಪ್ಪತ್ತೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನವದೆಹಲಿಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅತ್ಯಂತ ಗರಿಷ್ಠ ಮಟ್ಟಕ್ಕೆ ಅಂದರೆ ಪ್ರತಿ 10 ಗ್ರಾಮಿಗೆ 9000 ರೂಪಾಯಿಗಳಿಗೆ, ಬೆಳ್ಳಿಯ ಬೆಲೆ ಪ್ರತಿ ಕಿ.ಗ್ರಾಂ.ಗೆ 20,000 ರೂಪಾಯಿಗಳಗೆ ಮುಟ್ಟಿತು.

2006: ದೇಶದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ಅವರನ್ನು ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಲಾಯಿತು.

2006: ನರ್ಮದಾ ಸರೋವರ ಅಣೆಕಟ್ಟೆಯ ನಿರ್ಮಾಣ ಕಾಮಗಾರಿ ಮತ್ತು ಅಣೆಕಟ್ಟೆ ನಿರ್ಮಾಣದಿಂದ ಮನೆಮಠ ಕಳೆದುಕೊಳ್ಳುವವರಿಗೆ ಪರಿಣಾಮಕಾರಿ ಪುನರ್ ವಸತಿ ಈ ಎರಡೂ ಕಾರ್ಯ ಜೊತೆ ಜೊತೆಯಾಗಿಯೇ ಸಾಗಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿತು. ತೀರ್ಪಿನ ಬೆನ್ನಲ್ಲೇ ಸರ್ದಾರ್ ಸರೋವರ ಯೋಜನೆಯಲ್ಲಿ ಸಂತ್ರಸ್ತರಾಗುವ ಮಂದಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಮರುವಸತಿ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿತು.

2006: ನರ್ಮದಾ ಅಣೆಕಟ್ಟೆಯಿಂದ ನಿರಾಶ್ರಿತರಾದವರಿಗೆ ಪರಿಣಾಮಕಾರಿ ಪುನರ್ ವಸತಿ ಕಲ್ಪಿಸದೇ ಇದ್ದರೆ ಮೇ 1ರಿಂದ ಅಣೆಕಟ್ಟೆ ಕಾಮಗಾರಿ ನಿಲ್ಲಿಸುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ್ದನ್ನು ಅನುಸರಿಸಿ ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ತಮ್ಮ 20 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

2006: ರಾಯ್ ಬರೇಲಿ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದರು.

2006: ದೇಶದ ಮೊದಲ ಬೃಹತ್ ಜೈವಿಕ ತಂತ್ರಜ್ಞಾನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಯೋಕಾನ್ ಫಾರ್ಮಾಸ್ಯೂಟಿಕಲ್ಸ್ ಕೇಂದ್ರಕ್ಕೆ ಬೆಂಗಳೂರು ಹೊರವಲಯದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಚಾಲನೆ ನೀಡಿದರು.

2006: ಅಲಿಪ್ತ ಸದಸ್ಯ ರಾಷ್ಟ್ರಗಳ ಸುದ್ದಿ ಸಂಸ್ಥೆಗಳನ್ನು ಒಂದುಗೂಡಿಸಿ `ಅಲಿಪ್ತ ಸುದ್ದಿ ಸಂಸ್ಥೆ'ಯನ್ನು (ಎನ್ ಎನ್ ಎನ್) ಕ್ವಾಲಾಲಂಪುರದಲ್ಲಿ ಅಧಿಕೃತವಾಗಿ ಆರಂಭಿಸಲಾಯಿತು. ಜಗತ್ತಿಗೆ ಪರಿಣಾಮಕಾರಿಯಾಗಿ ತಮ್ಮ `ಕಥೆ' ಹೇಳಲು 114 ರಾಷ್ಟ್ರಗಳಿಗೆ ಅನುಕೂಲವಾಗುವಂತೆ ಈ ಮಾಧ್ಯಮವನ್ನು ಆರಂಭಿಸಲಾಯಿತು. ಮಲೇಷ್ಯಾದ `ಮೆದುಳಿನ ಕೂಸು' ಆಗಿರುವ ಈ ಸುದ್ದಿ ಸಂಸ್ಥೆಗೆ ಬೆರ್ನಾಮಾ ಎನ್ ಎನ್ ಎನ್ ಮುಖ್ಯಸ್ಥ ಮಲೇಷ್ಯನ್ ನ್ಯೂಸ್ ಏಜೆನ್ಸಿಯ ಬೆರ್ನಾಮ ಜಮೀಲ್ ಸೈಯದ್ ಜಾಫರ್ ಅವರೇ ಹಣಕಾಸು ಒದಗಿಸುವರು. ಇಂಟರ್ನೆಟ್ ಆಧಾರಿತ ಸಂಸ್ಥೆಯಾಗಿ ಇದು ಜೂನ್ ನಿಂದ ಕಾರ್ಯ ನಿರ್ವಹಿಸುವುದು ಎಂದು ಪ್ರಕಟಿಸಲಾಯಿತು.

1961: ಭಾರತದ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಥಿ ಹುಟ್ಟಿದ ದಿನ. ಬಿಲಿಯರ್ಡ್ಸ್ ನಲ್ಲಿ ಇವರು ಒಟ್ಟು 7 ವಿಶ್ವ ಪ್ರಶಸ್ತಿಗಳನ್ನು ಪಡೆದುದಲ್ಲದೆ 1985ರಲ್ಲಿ ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಸರು ಪಡೆದರು.

1916: ಸಿರಿಮಾವೋ ಬಂಡಾರನಾಯಕೆ ಜನ್ಮದಿನ. ಈಕೆ ಇಂದಿನ ಶ್ರೀಲಂಕೆಯ (ಆಗಿನ ಸಿಲೋನ್) 1960ರ ಮಹಾಚುನಾವಣೆಯಲ್ಲಿ ತನ್ನ ಪಕ್ಷದ ಭಾರೀ ವಿಜಯಕ್ಕೆ ಕಾರಣರಾಗಿ ಪ್ರಧಾನಿ ಸ್ಥಾನಕ್ಕೆ ಏರಿದರು. ಈಕೆಗೆ ಜಗತ್ತಿನಲ್ಲೇ ಮೊತ್ತ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಬಂತು.

1894: ನಿಕಿಟ ಖ್ರುಶ್ಚೇವ್ (1894-1971) ಜನ್ಮದಿನ. ಸೋವಿಯತ್ ಒಕ್ಕೂಟದ ಪ್ರಧಾನಿಯಾಗಿದ್ದ ಇವರು ರಾಷ್ಟ್ರದ ಮೇಲಿದ್ದ ಸ್ಟಾಲಿನ್ ಪ್ರಭಾವವನ್ನು ನಿವಾರಿಸುವ ನೀತಿಗಳನ್ನು ಅನುಷ್ಠಾನಕ್ಕೆ ತಂದರು.

1799: ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ್ ಮಧ್ಯೆ ನಡೆದ 4ನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಲಾಯಿತು. ಮೇ 4ರಂದು ಟಿಪ್ಪು ಸುಲ್ತಾನ್ ಸಾವಿನೊಂದಿಗೆ ಈ ಮುತ್ತಿಗೆ ಕೊನೆಗೊಂಡಿತು.

No comments:

Post a Comment