ನಾನು ಮೆಚ್ಚಿದ ವಾಟ್ಸಪ್

Monday, April 23, 2018

ಇಂದಿನ ಇತಿಹಾಸ History Today ಏಪ್ರಿಲ್ 22

ಇಂದಿನ ಇತಿಹಾಸ History Today ಏಪ್ರಿಲ್  22

 2018: ನವದೆಹಲಿ: ರಾಷ್ಟ್ರದ ವಿಶಾಲ ದೃಷ್ಟಿಯಿಂದ ಮನಬಂದಂತೆ ಸಿಕ್ಕ ಸಿಕ್ಕ ವಿಷಯಗಳ ಬಗೆಗೆಲ್ಲ ಮಾಧ್ಯಮಗಳ ಮುಂದೆ ಮಾತನಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಸಂಸತ್ ಸದಸ್ಯರು ಮತ್ತು ಶಾಸಕರಿಗೆ ಸೂಚಿಸಿದರು.  ಸಂಸದರು ಮತ್ತು ಶಾಸಕರನ್ನು ಉದ್ದೇಶಿಸಿ ತಮ್ಮ ವೈಯಕ್ತಿಕ ನಮೋ ಆಪ್ ಮೂಲಕ ವಿಡಿಯೋ ಚಾಟ್ ಮಾಡಿ ಮಾತನಾಡಿದ ಪ್ರಧಾನಿಆಡಳಿತದ ಸನ್ನೆಗೋಲುಸರ್ವಜನ ಹಿತಾಯ, ಸರ್ವಜನ ಸುಖಾಯತತ್ವವನ್ನು ಆಧರಿಸಿ ವಿಶಾಲ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳತ್ತ ಸಾಗಬೇಕು, ವೈಯಕ್ತಿಕ ಹಿತಾಸಕ್ತಿಗಳಿಗೆ ಒತ್ತು ಕೊಡುವತ್ತ ಅಲ್ಲಎಂದು ಹೇಳಿದರು. ’ವೈಯಕ್ತಿಕ ಹಿತಾಸಕ್ತಿಗಳತ್ತ ನೀವು ಒತ್ತು ಕೊಟ್ಟರೆ ವಿಶಾಲ ಹಿತಾಸಕ್ತಿಗಳತ್ತ ಚಲಿಸಬೇಕಾದ ಆಡಳಿತದ ಸನ್ನೆಗೋಲು ಸ್ಥಗಿತಗೊಳ್ಳುತ್ತದೆಎಂದು ಮುಂಬರುವ ಮಹಾಚುನಾವಣೆಗೆ ಮುಂಚಿತವಾಗಿ ನೀಡಿದ ಮಹತ್ವದ ಹೇಳಿಕೆಯಲ್ಲಿ ಅವರು ಪಕ್ಷ ಸದಸ್ಯರಿಗೆ ಕಿವಿಮಾತು ಹೇಳಿದರು.  ಪ್ರತಿಯೊಂದು ಸಾಮಾಜಿಕ-ರಾಜಕೀಯ ಅಥವಾ ಸಾಂಸ್ಕೃತಿಕ ವಿಷಯಗಳ ಬಗ್ಗೆ ಟೀಕೆ ಮಾಡುವುದರಿಂದಲೂ ಪಕ್ಷ ಸದಸ್ಯರು ದೂರ ಇರಬೇಕು. ಇಂತಹ ಹೇಳಿಕೆಗಳನ್ನು ಮಾಧ್ಯಮಗಳು ಆಕರ್ಷಕಮಸಾಲಾಆಗಿ ಬಳಸಿಕೊಂಡು ವರದಿ ಮಾಡುತ್ತವೆಎಂದು ನುಡಿದ ಪ್ರಧಾನಿ, ’ಬಳಿಕ ಇಂತಹ ವರದಿ ಮಾಡಿದ್ದಕ್ಕಾಗಿ ಮಾಧ್ಯಮಗಳನ್ನು ದೂರುವುದರಿಂದಲೂ ದೂರ ಇರಬೇಕುಎಂದು ಹೇಳಿದರು.  ಮಾಧ್ಯಮ ತನ್ನ ಕೆಲಸ ಮಾಡುತ್ತಿದೆ. ನೀವು ಜನರ ಸೇವೆ ಮಾಡುವ ನಿಮ್ಮ ಕೆಲಸವನ್ನು ಮಾಡಬೇಕು. ಪಕ್ಷದ ನಿಯೋಜಿತ ವಕ್ತಾರರು ವಿಷಯಗಳಿಗೆ ಸಂಬಂಧಿಸಿದಂತೆ ಅಗತ್ಯ ಇದ್ದಾಗ ಹೇಳಿಕೆ ನೀಡುತ್ತಾರೆ. ಪ್ರತಿಯೊಬ್ಬರೂ ಪ್ರತಿಯೊಂದು ವಿಷಯದ ಬಗೆಗೂ ಹೇಳಿಕೆ ನೀಡಲಾರಂಭಿಸಿದರೆ, ವಿಷಯಗಳಿಗೆ ಸಂಬಂಧಿಸಿದ ಚರ್ಚೆ ಬದಲಾಗುತ್ತದೆ. ಇದು ರಾಷ್ಟ್ರಕ್ಕೆ, ಪಕ್ಷಕ್ಕೆ ಮತ್ತು ನಮ್ಮ ವೈಯಕ್ತಿಕ ವರ್ಚಸ್ಸಿಗೂ ಧಕ್ಕೆ ಉಂಟು ಮಾಡುತ್ತದೆಎಂದು ಪ್ರಧಾನಿ ನುಡಿದರು.  ಕಳೆದ ಕೆಲವು ವರ್ಷಗಳಲ್ಲಿ, ೧೬ನೇ ಲೋಕಸಭೆಯಲ್ಲಿನ ನಮ್ಮ ಪಕ್ಷದ  -೧೦ ಮಂದಿ ಸಂಸದರು ಇಂತಹ ಹವ್ಯಾಸ ಹೊಂದಿದ್ದುದನ್ನು ನಾನು ನೋಡಿದ್ದೆ. ಆದರೆ ನಾನು ಅವರ ಜೊತೆ ಮಾತನಾಡಿದ ಬಳಿಕ ಅವರು ಅದನ್ನು ನಿಲ್ಲಿಸಿದರು ಮತ್ತು ಪರಿಣಾಮವಾಗಿ ಪಕ್ಷವು ಬಹಿರಂಗವಾಗಿ ಅವಮಾನಕ್ಕೆ ಗುರಿಯಾಗುವುದು ತಪ್ಪಿತುಎಂದು ಮೋದಿ ಹೇಳಿದರು. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ರಾಜ್ಯಗಳಲ್ಲಿ ನವೆಂಬರ್- ಡಿಸೆಂಬರಿನಲ್ಲಿ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಸಂಸದರು, ಶಾಸಕರನ್ನು ಉದ್ದೇಶಿಸಿ ಮೋದಿ ಮಾತನಾಡಿರುವುದು ಮಹತ್ವ ಗಳಿಸಿದೆ.  ಕಾಂಗ್ರೆಸ್ ಮಾಡಿದ ತಪ್ಪಿನಿಂದಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಭಾವಿಸುವವರು ಇದ್ದಾರೆ. ಇದು ಸತ್ಯವಲ್ಲ. ನಮ್ಮ ಪಕ್ಷ, ಅದರ ನಾಯಕರು ಮತ್ತು ಕಾರ್ಯಕರ್ತರು ರಾಷ್ಟ್ರದ ಜನರ ಜೊತೆಗೆ ಹಲವಾರು ವರ್ಷಗಳಿಂದ ನಿರಂತರ ಸಂಪರ್ಕದಲ್ಲಿ ಇದ್ದಾರೆ.  ಪಕ್ಷ ವಿಸ್ತರಣೆ ಬಗೆಗೆ ಇದ್ದ ಮಿಥ್ಯೆಗಳನ್ನೆಲ್ಲ ನಾವು ತುಂಡರಿಸಿದ್ದೇವೆ. ನಮ್ಮನ್ನು ಬ್ರಾಹ್ಮಣ-ಬನಿಯಾ ಪಕ್ಷ, ನಗರಗಳಲ್ಲಿನ ಪಕ್ಷ, ಕೇವಲ ಉತ್ತರ ಭಾರತದ ಪಕ್ಷ ಎಂದೆಲ್ಲ ಕರೆಯಲಾಗುತ್ತಿತ್ತು. ಎಲ್ಲ ಮಿಥ್ಯೆಗಳನ್ನೂ ನಾವು ತುಂಡರಿಸಿದ್ದೇವೆ. ನಮ್ಮಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ದಲಿತ ಸಂಸದರಿದ್ದಾರೆ, ಬುಡಕಟ್ಟು ಸಂಸದರಿದ್ದಾರೆ ಮತ್ತು ದೊಡ್ಡ ಸಂಖ್ಯೆಯ ಇತರೆ ಹಿಂದುಳಿದ ವರ್ಗದ (ಒಬಿಸಿ)  ಜನಪ್ರತಿನಿಧಿಗಳು ಇದ್ದಾರೆ. ನಾವು ರಾಷ್ಟ್ರದ ವಿಶಾಲಭಾಗದ ಆಶೋತ್ತರಗಳನ್ನು ಪ್ರತಿಫಲಿಸುತ್ತಿದ್ದೇವೆಎಂದು ಪ್ರಧಾನಿ ನುಡಿದರು. ತಮ್ಮ ಮಾತಿನಲ್ಲಿ ವಿಶೇಷ ಸಾಧನೆಗಳನ್ನು ಮಾಡಿದ ಸಚಿವರು, ಸಂಸದರು, ಶಾಸಕರ ಕೆಲವು ಹೆಸರುಗಳನ್ನು ಪ್ರಸ್ತಾಪಿಸಿದ ಮೋದಿ ಅವರ ಕೆಲಸವನ್ನು ಶ್ಲಾಘಿಸಿದರು. ಕರ್ನಾಟಕದ ಪಕ್ಷ ಕಾರ್ಯಕರ್ತರ ಜೊತೆಗೆ ಪ್ರಧಾನಿ ಮೋದಿ ಏಪ್ರಿಲ್ ೨೬ರಂದು ಇದೇ ಮಾದರಿಯ ಸಂವಹನ ನಡೆಸಲಿದ್ದಾರೆ.

2018: ನವದೆಹಲಿ: ಹನ್ನೆರಡು ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆವಿಧಿಸುವ ಕಠಿಣ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದರು. ಇದರಿಂದಾಗಿ ಈದಿನದಿಂದಲೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಜಾರಿಗೆ ಬಂದಿತು.  ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಗೆ ತಿದ್ದುಪಡಿ ಮಾಡಲು ಸುಗ್ರೀವಾಜ್ಞೆ ತರಲಾಗಿದ್ದು, ಐದು ದಿನಗಳ ವಿದೇಶ ಪ್ರವಾಸಕ್ಕಾಗಿ ತೆರಳಿದ್ದ ಪ್ರಧಾನಿ ಮೋದಿ ಏ.21ರ ಶನಿವಾರ ದೆಹಲಿಗೆ ವಾಪಸಾದ ಒಂದೆರಡು ಗಂಟೆಗಳಲ್ಲೇ ಕೇಂದ್ರ ಸಚಿವ ಸಂಪುಟ ತುರ್ತು ಸಭೆ ನಡೆಸಿ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿ ಅದನ್ನು ರಾಷ್ಟ್ರಪತಿಗಳ  ಅಂಕಿತಕ್ಕಾಗಿ ಕಳುಹಿಸಿದ್ದರು.  ಜಮ್ಮು ಮತ್ತು ಕಾಶ್ಮೀರದ ಕಥುವಾ,  ಗುಜರಾತಿನ ಸೂರತ್ ನಗರದಲ್ಲಿ ನಡೆದ ಮಕ್ಕಳ ಮೇಲಿನ ಹಾಗೂ ಉನ್ನಾವ್ ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳ ಬಿಸಿ ತಾರಕಕ್ಕೇರಿರುವ ಬೆನ್ನಲ್ಲೇ ಸುಗ್ರೀವಾಜ್ಞೆ ಹೊರಡಿಸಲಾಯಿತು.  ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಂತಹ ಗರಿಷ್ಠ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಈಗಾಗಲೇ ಅಸ್ತಿತ್ವದಲ್ಲಿರುವಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಗೆ (ಪೋಸ್ಕೊ) ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿತು. ಇದರೊಂದಿಗೆ ಅಪರಾಧ ಕಾಯ್ದೆ, ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ), ಸಾಕ್ಷ್ಯಗಳ ಸಂರಕ್ಷಣಾ ಕಾಯ್ದೆ ಕೂಡ ತಿದ್ದುಪಡಿಯಾಗಲಿವೆ. ಅಪರಾಧ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆಯ ಪ್ರಕಾರ, ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಹೊಸ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳನ್ನು ರಚಿಸಲಾಗುವುದು ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲ ಪೊಲೀಸ್ ಠಾಣೆಗಳು ಮತ್ತು ಆಸ್ಪತ್ರೆಗಳಿಗೂ ವಿಶೇಷ ವಿಧಿ ವಿಜ್ಞಾನ ಕಿಟ್ಗಳನ್ನು ಒದಗಿಸಲಾಗುವುದು. ಸುಗ್ರೀವಾಜ್ಞೆಯು ೧೬ ಮತ್ತು ೧೨ ವರ್ಷಗಳಿಗಿಂತ ಕೆಳಗಿನ ವಯೋಮಾನದ ಬಾಲಕಿಯರ ಮೇಲಿನ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸಿತು.  ೧೨ ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲಿನ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವ ಅವಕಾಶವನ್ನು ಸುಗ್ರೀವಾಜ್ಞೆ ಕಲ್ಪಿಸಿತು.  ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಇದ್ದ ವರ್ಷಗಳ ಕನಿಷ್ಠ ಶಿಕ್ಷೆಯನ್ನು ೧೦ ವರ್ಷಗಳಿಗೆ ಏರಿಸಲಾಗಿದ್ದು, ಜೀವಾವಧಿ ಸಜೆಯವರೆಗೂ ವಿಸ್ತರಿಸಬಹುದು.  ೧೬ ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕನಿಷ್ಠ ಶಿಕ್ಷೆಯನ್ನು ೧೦ ವರ್ಷಗಳಿಂದ ೨೦ ವರ್ಷಗಳಿಗೆ ಏರಿಸಲಾಗಿದೆ. ಇದನ್ನು ಕೂಡಾ ಜೀವಮಾನದ ಉಳಿದ ಅವಧಿಯುದ್ದಕ್ಕೂ ವಿಸ್ತರಿಸಲು ಸುಗ್ರೀವಾಜ್ಞೆ ಅವಕಾಶ ನೀಡಿದೆ. ಅಂದರೆ ಅಪರಾಧಿಯು ಸಹಜ ಬದುಕಿನ ಅವಧಿಯಷ್ಟು ಕಾಲವೂ ಸೆರೆವಾಸ ಅನುಭವಿಸಬೇಕಾಗುತ್ತದೆ.  ೧೬ ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲಿನ ಸಾಮೂಹಿಕ ಅತ್ಯಚಾರಕ್ಕೆ ಅಪರಾಧಿಯು ತನ್ನ ಜೀವಮಾನ ಪೂರ್ತಿ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.  ೧೨ ವರ್ಷಕ್ಕಿಂತ ಕೆಳಗಿನ ವಯೋಮಾನದ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಲು ಅವಕಾಶ ನೀಡಲಾಗಿದ್ದು, ಅಪರಾಧಿ ಕನಿಷ್ಠ ಎಂದರೆ ೨೦ ವರ್ಷಗಳ ಸೆರೆವಾಸ ಅನುಭವಿಸಬೇಕು. ಶಿಕ್ಷೆ ಜೀವಾವಧಿ ಸಜೆ ಅಥವಾ ಮರಣದಂಡನೆವರೆಗೂ ವಿಸ್ತರಿಸಬಹುದು ಎಂದು ಅವರು ನುಡಿದರು.  ತುರ್ತು ತನಿಖೆ ಮತ್ತು ತುರ್ತು ವಿಚಾರಣೆಗೆ ಸುಗ್ರೀವಾಜ್ಞೆ ಅವಕಾಶ ಕಲ್ಪಿಸಿದ್ದು, ಅತ್ಯಾಚಾರದ ಎಲ್ಲ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳುಗಳ ಅವಧಿಯಲಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು.  ಎಲ್ಲ ಅತ್ಯಾಚಾರ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಎರಡು ತಿಂಗಳುಗಳ ಗಡುವು ನೀಡಲಾಯಿತು. ಮೇಲ್ಮನವಿ ಪ್ರಕರಣಗಳ ಇತ್ಯರ್ಥಕ್ಕೆ ತಿಂಗಳ ಗಡುವು ನೀಡಲಾಯಿತು.  ಎಲ್ಲೆಲ್ಲಿ ಏನೇನು ಬದಲಾವಣೆ?  ಕ್ರಿಮಿನಲ್ ಕಾನೂನು: ಮಹಿಳೆಯರ ಮೇಲಿನ ಅತ್ಯಾಚಾರ : ಇನ್ನು ಮುಂದೆ ಕನಿಷ್ಠ ೧೦ ವರ್ಷ ಸೆರೆವಾಸದ ಶಿಕ್ಷೆ. ಇದುವರೆಗೆ ಕನಿಷ್ಠ ಏಳು ವರ್ಷವಿತ್ತು, ಇನ್ನು ಮುಂದೆ ಇದು ಜೀವಾವಧಿವರೆಗೂ ವಿಸ್ತರಿಸಬಹುದು.  ೧೬ ವರ್ಷದೊಳಗಿನ ಸಂತ್ರಸ್ತೆ : ಶಿಕ್ಷೆಯ ಪ್ರಮಾಣ ಈಗಿರುವ ೧೦ರಿಂದ ೨೦ ವರ್ಷ ಅಥವಾ ಜೀವಾವಧಿವರೆಗೂ ವಿಸ್ತರಣೆ. ೧೬ ವರ್ಷದೊಳಗಿನ ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ. ೧೨ ವರ್ಷದೊಳಗಿನ ಮಕ್ಕಳು : ಮರಣದಂಡನೆ. ೧೨ ವರ್ಷದೊಳಗಿನ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ: ಗಲ್ಲುಶಿಕ್ಷೆ. ಸಂಪೂರ್ಣ ತನಿಖೆಗೆ ತಿಂಗಳ ಗಡುವು.  ವಿಚಾರಣೆಗೆ ತಿಂಗಳ ಕಾಲಾವಧಿ.  ಮೇಲ್ಮನವಿಯ ಇತ್ಯರ್ಥಕ್ಕೆ ಆರು ತಿಂಗಳ ಗಡುವು.

2018: ಹೈದರಾಬಾದ್: ನಗರದಲ್ಲಿ ಸಂಘಟಿಸಲಾದ ಪಕ್ಷದ ೨೨ನೇ ಅಧಿವೇಶನದಲ್ಲಿ (ಕಾಂಗ್ರೆಸ್) ಸೀತಾರಾಂ ಯೆಚೂರಿ ಅವರನ್ನು ಸಿಪಿಐ (ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆ ಮಾಡಲಾಯಿತು.  ಅತ್ಯಂತ ಸ್ಮರಣೀಯ ಕಾಂಗ್ರೆಸ್ ಇದಾಗಿತ್ತು. ವಿಸ್ತೃತ ಚರ್ಚೆಗಳನ್ನು ನಡೆಸಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ನಮ್ಮ ಕಾರ್ಯಕರ್ತರು ಮತ್ತು ಬದ್ಧ ವೈರಿಗೆ ಏನಾದರೂ ಸಂದೇಶ ಹೋಗುವುದಿದ್ದರೆ ಸಿಪಿಐ(ಎಂ) ಅತ್ಯಂತ ಒಗ್ಗಟ್ಟಿನ ಪಕ್ಷವಾಗಿ ಉದಯಿಸಿದೆ ಎಂಬ ಸಂದೇಶವನ್ನು ಕಾಂಗ್ರೆಸ್ ನೀಡಿದೆಎಂದು ಯೆಚೂರಿ ಹೇಳಿದರು.  ಈಗಿನ ಮುಖ್ಯ ಕೆಲಸ ಬಿಜೆಪಿ ಸರ್ಕಾರವನ್ನು ಪರಾಭವಗೊಳಿಸುವುದು ಮತ್ತು ಅದಕ್ಕಾಗಿ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಯೆಚೂರಿ ನುಡಿದರು.  ಪಶ್ಚಿಮ ಬಂಗಾಳದ ನಾಯಕ ತಪನ್ ಸೆನ್ ಮತ್ತು ನೀಲೋತ್ಪಲ್ ಬಸು ಅವರಿಗೆ ನೂತನ ಪಾಲಿಟ್ ಬ್ಯೂರೋದಲ್ಲಿ ಅವಕಾಶ ಲಭಿಸಿದ್ದು, ಮಾಜಿ ಸಿಐಟಿಯು ನಾಯಕ .ಕೆ. ಪದ್ಮನಾಭನ್ ಅವರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಲಾಯಿತು.  ಕೇರಳದ ನಾಯಕ ಎಸ್. ರಾಮಚಂದ್ರನ್ ಪಿಳ್ಳೈ ಅವರು ನಿವೃತ್ತರಾಗಿ ಕೇರಳಕ್ಕೆ ವಾಪಸಾಗುವರು ಎಂಬ  ಊಹಾಪೋಹಗಳ ಮಧ್ಯೆಯೂ ಪಾಲಿಟ್ ಬ್ಯೂರೋದಲ್ಲಿ ಮುಂದುವರೆದರು.  ಕೇರಳದ ಪಕ್ಷದ ಮುಖವಾಣಿದೇಶಾಭಿಮಾನಿಪತ್ರಿಕೆಯ ಮುಖ್ಯ ಸಂಪಾದಕ ಎಂವಿ ಗೋವಿಂದನ್ ಮಾಸ್ತರ್ ಮತ್ತು ಕೇರಳ ವಿಧಾನಸಭೆಯ ಸಭಾಧ್ಯಕ್ಷ ಕೆ. ರಾಧಾಕೃಷ್ಣನ್ ಅವರು ಕೇಂದ್ರೀಯ ಸಮಿತಿಗೆ ಹೊಸದಾಗಿ ಪ್ರವೇಶ ಪಡೆದರು.

2018: ಮುಂಬೈ: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ಈದಿನ ನಡೆದ  ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಪೊಲೀಸರು 16 ಮಂದಿ ನಕ್ಸಲೀಯರನ್ನು ಕೊಂದು ಹಾಕುವಲ್ಲಿ ಯಶಸ್ವಿಯಾದರು. ಗಡಚಿರೋಲಿ ಪೊಲೀಸ್ ಪಡೆಗೆ ಸೇರಿದ ಸಿ-೬೦ ಕಮಾಂಡೋಸ್ ಹೆಸರಿನ ವಿಶೇಷ ಕದನ ಘಟಕವು ಕಾರ್ಯಾಚರಣೆಯನ್ನು ಕೈಗೊಂಡಿತ್ತು.  ಹದಿನಾರು ನಕ್ಸಲೀಯರು ಘರ್ಷಣೆಯಲ್ಲಿ ಹತರಾದರು. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಶರದ್ ಶೇಲರ್ ಸುದ್ದಿ ಸಂಸ್ಥೆಗೆ ತಿಳಿಸಿದರು.  ಇಲ್ಲಿಂದ ೭೫೦ ಕಿಮೀ ದೂರದ ಬಮ್ರಾಗಡದಲ್ಲಿನ ತಡಗಾಂವ್ ಅರಣ್ಯದಲ್ಲಿ ಬೆಳಗ್ಗೆ ಆರಂಭವಾದ  ಶೋಧ ಕಾರ್ಯಾಚರಣೆ  ರಾತ್ರಿಯವರೆಗೂ ಮುಂದುವರೆದಿತ್ತು ಎಂದು ಅವರು ಹೇಳಿದರು. ಸಾಯಿನಾಥ್ ಮತ್ತು ಸೈನ್ಯು ಎಂಬುದಾಗಿ ಗುರುತಿಸಲಾದ ನಕ್ಸಲೀಯ ಸಂಘಟನೆಯ ಇಬ್ಬರು ಜಿಲ್ಲಾಮಟ್ಟದ ಕಮಾಂಡರ್ ಗಳು ಘರ್ಷಣೆಯಲ್ಲಿ ಹತರಾದವರಲ್ಲಿ ಸೇರಿದ್ದಾರೆ ಎಂದು ಅವರು ನುಡಿದರು. ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿ-೬೦ ತಂಡವನ್ನು ಪೊಲೀಸ್ ಮಹಾ ನಿರ್ದೇಶಕ ಸತೀಶ ಮಾಥುರ್ ಅವರು ಅಭಿನಂದಿಸಿದರು. ಇತ್ತೀಚಿನ ದಿನಗಳಲ್ಲಿಯೇ ನಕ್ಸಲೀಯರ ವಿರುದ್ಧ ನಡೆದ ದೊಡ್ಡ ಕಾರ್ಯಾಚರಣೆ ಇದು ಎಂದು ಮಾಥುರ್ ಹೇಳಿದರು.

2018: ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಹಿರಿಯ ವಕೀಲೆ ಇಂದು ಮಲ್ಹೋತ್ರ ಅವರನ್ನು ನೇಮಕಮಾಡುವಂತೆ ಕೊಲಿಜಿಯಂ ಮಾಡಿದ್ದ ಶಿಫಾರಸಿನ ಕಡೆಗೆ ಕೇಂದ್ರ ಸರ್ಕಾರ ಮೂರು ತಿಂಗಳುಗಳ ಬಳಿಕ ಇದೀಗ ಕಡೆಗೂ ಗಮನ ಹರಿಸಿತು. ಸರ್ಕಾರವು ಮಲ್ಹೋತ್ರ ಅವರ ಕಡತವನ್ನು ಗುಪ್ತಚರ ದಳಕ್ಕೆ (ಐಬಿ) ಅರ್ಹತೆ ಮತ್ತಿತರ ಅಂಶಗಳ ಪರಿಶೀಲನೆ ಸಲುವಾಗಿ ರವಾನಿಸಿತು. ಕಾನೂನು ಸಚಿವಾಲಯವು ವಾರಾರಂಭದಲ್ಲಿ ಕಡತವನ್ನು ಗುಪ್ತಚರ ದಳಕ್ಕೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿದವು.  ಸಂವಿಧಾನಬದ್ಧ ಹುದ್ದೆಗೆ ಪರಿಗಣಿಸಲಾಗುವ ವ್ಯಕ್ತಿಯ ವೃತ್ತಿ ದಕ್ಷತೆ, ವೈಯಕ್ತಿಕ ಪ್ರಾಮಾಣಿಕತೆ, ಅವರ ವಿರುದ್ಧ ಇರಬಹುದಾದ ಆರೋಪ-ದೂರುಗಳ ಸಾಚಾತನ ಇತ್ಯಾದಿಗಳ ಬಗ್ಗೆ ಗುಪ್ತಚರ ದಳವು ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡುತ್ತದೆ. ಉತ್ತರಾ ಖಂಡ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಮತ್ತು ಹಿರಿಯ ವಕೀಲರಾದ ಇಂದು ಮಲ್ಹೋತ್ರ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಕೊಲಿಜಿಯಂ ಮೂರು ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಇಂದು ಮಲ್ಹೋತ್ರ ಕಡತಕ್ಕೆ ಚಾಲನೆ ನೀಡಲಾಗಿದ್ದರೂ, ನ್ಯಾಯಮೂರ್ತಿ ಕೆ ಎಂ ಜೊಸೆಫ್ ಅವರ ಕಡತ ಇನ್ನೂ ಕಾನೂನು ಸಚಿವಾಲಯದ ಪರಿಶೀಲನೆಯಲ್ಲೇ ಉಳಿದಿದೆ.  ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರಿಗೆ ಬರೆದ ಪತ್ರವೊಂದರಲ್ಲಿ ಕೊಲಿಜಿಯಂ ಶಿಫಾರಸಿನ ಬಗ್ಗೆ ಸರ್ಕಾರವು ಮೌನ ತಾಳಿರುವುದರ ಔಚಿತ್ಯವನ್ನು ಪ್ರಶ್ನಿಸಿದ್ದರು.  ಏಪ್ರಿಲ್ ೯ನೇ ದಿನಾಂಕದ ಪತ್ರದಲ್ಲಿ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ನ್ಯಾಯಮೂರ್ತಿಗಳ ನೇಮಕಾತಿ ಮಾಡಿಸಿಕೊಳ್ಳುವಲ್ಲಿನ ಅಸಾಮರ್ಥ್ಯದ ಪರಿಣಾಮವಾಗಿಸಂಸ್ಥೆಯ ಘನತೆ ಗೌರವ ದಿನದಿಂದ ದಿನಕ್ಕೆ ಕುಸಿಯುತ್ತಿದೆಎಂದು ಎಚ್ಚರಿಸಿದ್ದರು.  ಫೆಬ್ರುವರಿ ತಿಂಗಳಲ್ಲಿ ಅತ್ಯಂತ ಹಿರಿಯ ನ್ಯಾಯಮೂರ್ತಿಯಾದ ಜೆ.ಚೆಲಮೇಶ್ವರ್ ಅವರು ಕೂಡಾ ನ್ಯಾಯಾಂಗ ನೇಮಕಾತಿಗಳನ್ನು ನನೆಗುದಿಯಲ್ಲಿ ಇಟ್ಟದ್ದಕ್ಕಾಗಿ ಸರ್ಕಾರವನ್ನು ಟೀಕಿಸಿದ್ದರು.  ಕಳೆದ ಕೆಲ ಸಮಯದಿಂದ ನಮ್ಮ ಶಿಫಾರಸುಗಳನ್ನು ಅಂಗೀಕರಿಸುವ ಸರ್ಕಾರ ಅವುಗಳ ಬಗ್ಗೆ ಕ್ರಮ ಕೈಗೊಳ್ಳದೆ ಸುಮ್ಮನೇ ಕುಳಿತುಕೊಳ್ಳುತ್ತಿರುವ ಅಸಂತೋಷಕರ ಅನುಭವ ನಮಗೆ ಆಗುತ್ತಿದೆ. ಮೂಲಕ ದಕ್ಷ ಆದರೆ ಅನುಕೂಲಕರವಲ್ಲದ ನ್ಯಾಯಾಧೀಶರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಚೆಲಮೇಶ್ವರ್ ಮುಖ್ಯ ನ್ಯಾಯಮೂರ್ತಿಯವರಿಗೆ ಬರೆದ ಪತ್ರದಲ್ಲಿ ದೂರಿದ್ದರು.

2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ವಿರುದ್ಧ ಸಲ್ಲಿಸಲಾಗಿರುವ ದೋಷಾರೋಪಣಾ ಸೂಚನೆಯನ್ನು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿದರೆ  ಅವರ ತೀರ್ಮಾನದ ವಿರುದ್ಧ ಸುಪ್ರೀಂಕೋರ್ಟಿಗೆ ಹೋಗುವ ಬಗ್ಗೆ ಕಾಂಗ್ರೆಸ್ ಪರಿಶೀಲಿಸುತ್ತಿದೆ ಎಂದು ಪಕ್ಷದ ನಾಯಕರು ತಿಳಿಸಿದರು.  ಮೇಲ್ಮನೆ ಸಭಾಪತಿಯವರು ದೋಷಾರೋಪಣಾ ಸೂಚನೆಯಲ್ಲಿ ಯಾವುದೇ ಅರ್ಹತೆ ಇಲ್ಲವೆಂಬ ತೀರ್ಮಾನಕ್ಕೆ ಬಂದರೆ ಅವರ ನಿರ್ಣಯವು ನ್ಯಾಯಾಂಗ ಪರಿಶೀಲನೆಗೆ ಅರ್ಹವಾಗುತ್ತದೆ ಎಂದು ಅವರು ಹೇಳಿದರು. ಸಭಾಪತಿಯವರ ತೀರ್ಮಾನವು ಪ್ರಶ್ನಿಸಲು ಮುಕ್ತವಾಗಿರುತ್ತದೆ. ಅದು ನ್ಯಾಯಾಂಗ ಪರಿಶೀಲನೆಗೆ ಹೋಗಲೇಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.  ಮುಖ್ಯ ನ್ಯಾಯಮೂರ್ತಿ ವಿರುದ್ಧದ ದೋಷಾರೋಪಣಾ ನಿರ್ಣಯವು ಸುಪ್ರೀಂ ಅಂಗಳಕ್ಕೆ ಬಂದರೆ ಪ್ರಕರಣದ ವಿಚಾರಣೆಯಿಂದ ದೂರ ಸರಿಯುವಂತೆ ಕಾಂಗ್ರೆಸ್ ಮುಖ್ಯ ನ್ಯಾಯಮೂರ್ತಿಯವರ ಮೇಲೆ ನೈತಿಕ ಒತ್ತಡ ನಿರ್ಮಿಸಲು ಕೂಡಾ ಯತ್ನಿಸಿತು. ಈ ಹಿಂದೆ ದೋಷಾರೋಪಕ್ಕೆ ಗುರಿಯಾದ ನ್ಯಾಯಾಧೀಶರು ನ್ಯಾಯಾಂಗ ಕೆಲಸದಿಂದ ಹಿಂದೆ ಸರಿದ ಉದಾಹರಣೆಗಳಿವೆ. ಮುಖ್ಯ ನ್ಯಾಯಮೂರ್ತಿಯವರೂ ಅದನ್ನೇ ಅನುಸರಿಸಬೇಕು ಎಂದು ಪಕ್ಷದ ನಾಯಕರೊಬ್ಬರು ಹೇಳಿದರು. ’ಇದು ಸಂಪ್ರದಾಯ ಮಾತ್ರ. ನ್ಯಾಯಮೂರ್ತಿಯವರು ತಮ್ಮ ಕಾರ್ಯ ನಿರ್ವಹಿಸಲು ಶಾಸನ ಬದ್ಧವಾದ ಅಥವಾ ಸಂವಿಧಾನಬದ್ಧವಾದ ಯಾವುದೇ ಅಡೆ ತಡೆ ಇಲ್ಲಎಂದು ಅವರು ನುಡಿದರು.  ಸಭಾಪತಿಯವರು ಶೀಘ್ರವೇ ಸೂಚನೆ ಬಗ್ಗೆ ನಿರ್ಣಯ ಕೈಗೊಳ್ಳುವರು ಎಂದು ಕಾಂಗ್ರೆಸ್ ಹಾರೈಸಿತು. ಅವರು (ರಾಜ್ಯಸಭಾ ಸಭಾಪತಿ) ಸಂವಿಧಾನವು ಯಾವುದೇ ಸಮಯದ ಮಿತಿ ವಿಧಿಸಿಲ್ಲವಾದರೂ ಅನಿರ್ದಿಷ್ಟ ಕಾಲ ಸುಮ್ಮನೇ ಕುಳಿತುಕೊಳ್ಳುವಂತಿಲ್ಲಎಂದು ಸಂವಿಧಾನ ತಜ್ಞರೊಬ್ಬರು ಹೇಳಿದರು. ಪಕ್ಷಾಂತರ ತಡೆ ಕಾನೂನಿಗೆ ಸಂಬಂಧಪಟ್ಟ ಪ್ರಕರಣವನ್ನು ಉಲ್ಲೇಖಿಸಿದ ಅವರು  ನ್ಯಾಯೋಚಿತಗಡುವಿನೊಳಗೆ ವಿಷಯವನ್ನು ಇತ್ಯರ್ಥ ಪಡಿಸಬೇಕು ಎಂದು ಕೋರ್ಟ್ ತೀರ್ಪು ನೀಡಿದೆ ಎಂದು ನುಡಿದರು.  ಸಂಸದೀಯ ನಿಯಮದ ಉಲ್ಲಂಘನೆ: ಮಧ್ಯೆ ಸೂಚನೆಯ ವಿವರಗಳನ್ನು ಬಹಿರಂಗಗೊಳಿಸುವುದರಿಂದ ಸಂಸದೀಯ ನಿಯಮಾವಳಿಗಳ ಉಲ್ಲಂಘನೆಯಾಗುತ್ತದೆ ಎಂದು ಸಂಸತ್ತಿನ ಅಧಿಕಾರಿಯೊಬ್ಬರು ಹೇಳಿದರು. ಕಾಂಗ್ರೆಸ್ ನೇತೃತ್ವದಲ್ಲಿ ಏಳು ವಿರೋಧ ಪಕ್ಷಗಳು ಸಿಜೆಐ ದೀಪಕ್ ಮಿಶ್ರ ವಿರುದ್ಧ ದೋಪಾರೋಪಣಾ ನೋಟಿಸ್ ನೀಡುವ ಅಭೂತಪೂರ್ವ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಹೇಳಿಕೆ ಮಹತ್ವ ಗಳಿಸಿತು. ಸಿಜೆಐ ವಿರುದ್ಧ ಹಲವಾರು ಆರೋಪಗಳನ್ನು ಮಾಡಿ ದೋಷಾರೋಪಣಾ ನೋಟಿಸನ್ನು ನೀಡಿರುವ ವಿಪಕ್ಷಗಳು ನೋಟಿಸಿನಲ್ಲಿ ನೀಡಲಾಗಿರುವ ವಿಷಯಗಳನ್ನು ಬಹಿರಂಗ ಪಡಿಸಿದ್ದವು.  ರಾಜ್ಯಸಭಾ ಸದಸ್ಯರ ಕೈಪಿಡಿಯಲ್ಲಿನ ವಿಧಿಗಳ ಪ್ರಕಾರ ಯಾವುದೇ ಸೂಚನೆಗೆ, ಸಭಾಪತಿಯವರು ಅಂಗೀಕರಿಸುವವರೆಗೂ ಮುಂಚಿತವಾಗಿ ಪ್ರಚಾರ ನೀಡಬಾರದು.  ಸದನದಲ್ಲಿ ಪ್ರಸ್ತಾಪಿಸುವ ವಿಷಯದ ಬಗ್ಗೆ ನೀಡಲಾಗುವ ಸೂಚನೆಗೆ, ಸಭಾಪತಿಯವರು ಅಂಗೀಕಾರ ನೀಡುವವರೆಗೂ ಯಾರೇ ಸದಸ್ಯರು ಅಥವಾ ಇತರ ವ್ಯಕ್ತಿಗಳು ಪ್ರಚಾರ ನೀಡುವಂತಿಲ್ಲ. ತಾನು ಕೊಟ್ಟ ಸೂಚನೆ, ಸಭಾಪತಿಯವರ ಪರಿಶೀಲನೆಗಾಗಿ ಬಾಕಿ ಇದ್ದಾಗ ಸದಸ್ಯ ವಿಷಯವನ್ನು ಎಲ್ಲಿಯೂ ಎತ್ತಬಾರದುಎಂದು ಕೈಪಿಡಿಯಲ್ಲಿನ ಸಂಸದೀಯ ಸಂಪ್ರದಾಯಗಳಿಗೆ ಸಂಬಂಧಿಸಿದ ನಿಯಮ . ಹೇಳುತ್ತದೆ.  ನಿಯಮವು ರೂಲ್ ೩೩೪ಎ ಅಡಿಯಲ್ಲಿ  ಕೆಳಮನೆಗೂ ಅನ್ವಯವಾಗುತ್ತದೆ ಎಂದು ನಿವೃತ್ತ ಲೋಕಸಭಾ ಅಧಿಕಾರಿಯೊಬ್ಬರು ಹೇಳಿದರು. ವಿಪಕ್ಷಗಳು ನೀಡಿದ ಸೂಚನೆಯನ್ನು ಪರಿಶೀಲನೆಗಾಗಿ ನಾಯ್ಡು ಅವರು ರಾಜ್ಯಸಭಾ ಸಚಿವಾಲಯ ಅಧಿಕಾರಿಗಳಿಗೆ ಕಳುಹಿಸಿದ್ದು, ಅಧಿಕಾರಿಗಳು ಉಲ್ಲಂಘನೆಯನ್ನು ಗುರುತಿಸಿದ್ದಾರೆ ಎಂದು ಅಧಿಕಾರಿ ನುಡಿದರು. ಸಂಸದೀಯ ನಿಯಮಗಳು ಮತ್ತು ಸಂಪ್ರದಾಯಗಳನ್ನು ೨೦೧೭ರ ಡಿಸೆಂಬರ್ ೮ರಂದು ರಾಜ್ಯಸಭೆಯಲ್ಲಿ ನೀಡಲಾದ ಬುಲೆಟಿನ್ ಕೂಡಾ ಪುನರುಚ್ಚರಿಸಿತ್ತು. ವಿಪಕ್ಷ ನಾಯಕರು ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿಯವರಾದ ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ೬೪ ಸಂಸತ್ ಸದಸ್ಯರು ಮತ್ತು ಮಂದಿ ಮಾಜಿ ಸದಸ್ಯರು ಸಹಿ ಮಾಡಿದ ಸಿಜೆಐ ವಿರುದ್ಧದ ದೋಷಾರೋಪ ಸೂಚನೆಯನ್ನು ಸಲ್ಲಿಸಿದ್ದರು.

2018: ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲಿನ ಮತದಾರರ ನೋಂದಣಿ ಕೇಂದ್ರವೊಂದರಲ್ಲಿ ಭಾನುವಾರ ಮಾನವ ಬಾಂಬ್ ದಾಳಿಗೆ ೩೧ ಮಂದಿ ಬಲಿಯಾಗಿ, ಇತರ ೫೪ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದವು.  ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲ ಪಡೆದಿರುವ ಅಧ್ಯಕ್ಷ ಅಶ್ರಫ್ ಘನಿ ನಾಯಕತ್ವದ ಬಗ್ಗೆ ಜನರಲ್ಲಿ ಅವಿಶ್ವಾಸ ಮತ್ತು ಅಭದ್ರತೆ ಮೂಡಿಸುವುದೇ ದಾಳಿಯ ಉದ್ದೇಶ ಎಂದು ಸರ್ಕಾರಿ ಮೂಲಗಳು ಆರೋಪಿಸಿದವು. ಕಾಲ್ನಡಿಗೆಯಲ್ಲಿ ಬಂದ ಮಾನವ ಬಾಂಬರ್ ಮತದಾರ ನೋಂದಣಿ ಕೇಂದ್ರದ ಒಳಗೆ ನುಗ್ಗಿ ಸ್ವತಃ ಸ್ಫೋಟಿಸಿಕೊಂಡ ಎಂದು ಗೃಹಸಚಿವಾಲಯದ ವಕ್ತಾರ ನಜೀಬ್ ದನೇಶ್ ತಿಳಿಸಿದರು.  ದಾಳಿ ವೇಳೆಗೆ ಅಧಿಕಾರಿಗಳು ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಿಸುತ್ತಿದ್ದರು. ಆಫ್ಘಾನಿಸ್ತಾನದಲ್ಲಿ ಶೀಘ್ರವೇ (ಅಕ್ಟೋಬರಿನಲ್ಲಿ) ಚುನಾವಣೆ ನಡೆಯಲಿದೆ.  ದಾಳಿಗೆ ೩೧ ಮಂದಿ ಬಲಿಯಾಗಿದ್ದು, ೫೪ ಮಂದಿ ಗಾಯಗೊಂಡಿರುವುದು ದೃಢಪಟ್ಟಿದೆ ಎಂದು ವಕ್ತಾರ ತಿಳಿಸಿದರು.  ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಕಟ್ಟಡಗಳ ಗಾಜುಗಳು ಒಡೆದಿದ್ದಲ್ಲದೆ, ಹೊರಗೆ ನಿಲ್ಲಿಸಿದ್ದ ಕಾರುಗಳು ಧ್ವಂಸಗೊಂಡವು. ಸುತ್ತಮುತ್ತಲೆಲ್ಲ ಸ್ಫೋಟದ ಅವಶೇಷಗಳು ಹರಡಿಕೊಂಡಿದ್ದವು.

2018: ಬೀಜಿಂಗ್: ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಏಪ್ರಿಲ್ ೨೭ರಿಂದ ೨೮ರವರೆಗೆ ದ್ವಿಪಕ್ಷೀಯ ಬಾಂಧವ್ಯಗಳ ಬಗ್ಗೆ ಚೀನಾದ ವುಹಾನ್ ನಗರದಲ್ಲಿ ಶೃಂಗಸಭೆ ನಡೆಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಅವರು ಇಲ್ಲಿ ಪ್ರಕಟಿಸಿದರು.  ಅಧ್ಯಕ್ಷ ಕ್ಷಿ ಅವರ ಆಹ್ವಾನದ ಮೇರೆಗೆ ಮೋದಿ ಅವರು ಕೇಂದ್ರೀಯ ಚೀನಾ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ವಾಂಗ್ ಅವರು ಚೀನಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಜೊತೆ ಮಾತುಕತೆಗಳ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸ್ವರಾಜ್ ಅವರು ಚೀನಾಕ್ಕೆ ಎಂಟು ರಾಷ್ಟ್ರಗಳ ಶಾಂಘಾಯಿ ಸಹಕಾರ ಸಂಘಟನೆಯ (ಎಸ್ ಸಿಒ) ಎರಡು ದಿನಗಳ ಸಮಾವೇಶಕ್ಕಾಗಿ ಆಗಮಿಸಿದ್ದಾರೆ. ಸಮಾವೇಶ ಏಪ್ರಿಲ್ ೨೩ರಂದು ಆರಂಭವಾಗಲಿದ್ದು, ಅದಕ್ಕೆ ಮುನ್ನ ಸ್ವರಾಜ್ ಅವರು ಈದಿನ ವಾಂಗ್ ಜೊತೆ ಮಾತುಕತೆ ನಡೆಸಿದರು.  ಕ್ಷಿ ಮತ್ತು ಮೋದಿ ನಡುವಣ ಶೃಂಗಸಭೆ ಅನೌಪಚಾರಿಕವಾದುದಾಗಿದ್ದು, ವಿವಾದಗಳು ಹಾಗೂ ಭಿನ್ನಮತಗಳ ಪರಿಣಾಮವಾಗಿ ಬಿಗಡಾಯಿಸಿರುವ ದ್ವಿಪಕ್ಷೀಯ ಬಾಂಧವ್ಯ ಸುಧಾರಿಸುವ ನಿಟ್ಟಿನಲ್ಲಿ ಯತ್ನ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿದವು. ೨೦೧೪ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಮೋದಿ ಅವರು ಚೀನಾಕ್ಕೆ ನೀಡಲಿರುವ ೪ನೇ ಭೇಟಿ ಇದಾಗಲಿದೆ. ಅವರು ಪುನಃ ಜೂನ್ ತಿಂಗಳ -೧೦ರಂದು ಕ್ವಿಂಗ್ಡಾವೋ ನಗರದಲ್ಲಿ ನಡೆಯಲಿರುವ ಎಸ್ ಸಿ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೀನಾಕ್ಕೆ ಭೇಟಿ ನೀಡಲಿದ್ದಾರೆ.

2016: ನವದೆಹಲಿ: ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯನ್ನು ರದ್ದು ಪಡಿಸಿ ಉತ್ತರಾಖಂಡ ಹೈಕೋರ್ಟ್ ಹಿಂದಿನ ದಿನ  ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ಏಪ್ರಿಲ್ 27ರವರೆಗೆ ತಡೆಯಾಜ್ಞೆ ನೀಡಿತು. ಪ್ರಕರಣದ ಮುಂದಿನ ವಿಚಾರಣೆಗೆ ಏಪ್ರಿಲ್ 27 ದಿನಾಂಕವನ್ನು ಸುಪ್ರೀಂಕೋರ್ಟ್ ನಿಗದಿ ಪಡಿಸಿತು. ಸುಪ್ರೀಂಕೋರ್ಟ್ ಪ್ರಕರಣವನ್ನು ಆಲಿಸುವವರೆಗೆ ಉತ್ತರಾಖಂಡದಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದು ಪಡಿಸಲಾಗುವುದಿಲ್ಲ ಎಂದು ಅಟಾರ್ನಿ ಜನರಲ್ ರೋಹ್ಟಗಿ ಅವರು ಸುಪ್ರೀಂಕೋರ್ಟಿಗೆ ಭರವಸೆ ನೀಡಿದರು. ರಾಷ್ಟ್ರಪತಿ ಆಳ್ವಿಕೆಯನ್ನು ರದ್ದು ಪಡಿಸಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಸರ್ಕಾರವನ್ನು ಪುನಃಸ್ಥಾಪನೆ ಮಾಡಿದ ಉತ್ತರಾಖಂಡ ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಈದಿನ ಬೆಳಗ್ಗೆ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ರಾಷ್ಟ್ರಪತಿ ಆಳ್ವಿಕೆ ರದ್ದು ಪಡಿಸಿ, ರಾವತ್ ಸರ್ಕಾರವನ್ನು ಪುನಃಸ್ಥಾಪನೆ ಮಾಡಿದ್ದ ಹೈಕೋರ್ಟ್ ಏಪ್ರಿಲ್ 29ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ರಾವತ್ಗೆ ಸೂಚಿಸಿತ್ತು. ತೀರ್ಪು ಬಂದ ಬೆನ್ನಲ್ಲೇ ರಾವತ್ ಅವರು ಸುಪ್ರೀಂಕೋರ್ಟಿನಲ್ಲಿ ಕೇವಿಯಟ್ ದಾಖಲಿಸಿ, ತಮ್ಮನ್ನು ಆಲಿಸದ ವಿನಃ ಯಾವುದೇ ಆದೇಶ ನೀಡಬಾರದು ಎಂದು ಸುಪ್ರೀಂಕೋರ್ಟನ್ನು ಕೋರಿಕೊಂಡಿದ್ದರು. ತೀರ್ಪು ಬಂದ ಬಳಿಕ ಸಚಿವ ಸಂಪುಟದ ಸಭೆಯನ್ನೂ ನಡೆಸಿದ್ದ ರಾವತ್, ಅತಿಥಿ ಉಪನ್ಯಾಸಕರ ಮರು ನೇಮಕಾತಿ ಸೇರಿದಂತೆ 11 ಪ್ರಸ್ತಾವಗಳಿಗೆ ಅನುಮೋದನೆ ನೀಡಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಭೆ ನಡೆಸಿದ ಬಳಿಕ ಉತ್ತರಾಖಂಡ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು .

2016: ಮುಂಬೈ: ಶಿರ್ಡಿ ಸಾಯಿಬಾಬ ದೇವಾಲಯದ ಕಾಣಿಕೆಹುಂಡಿಯಲ್ಲಿ 85ಲಕ್ಷ ಬೆಲೆ ಬಾಳುವ ಎರಡು ವಜ್ರಗಳು ಲಭಿಸಿದವು. ಸಾಮಾನ್ಯವಾಗಿ ಬೆಲೆಬಾಳುವ ಕಾಣಿಕೆಗಳನ್ನು ಭಕ್ತರು ನೇರವಾಗಿ ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರಿಸುತ್ತಾರೆ. ಆದರೆ ಏಪ್ರಿಲ್ 19ರಂದು ದೇವಾಲಯದ ಆಡಳಿತವ ಮಂಡಳಿ ಕಾಣಿಕೆಹುಂಡಿ ತೆರೆದ ಸಂದರ್ಭ ಪೊಟ್ಟಣವೊಂದರಲ್ಲಿ ವಜ್ರಗಳು ಇದ್ದುದು ಕಂಡುಬಂದಿತು. ತಕ್ಷಣ ಇದರ ನಿಖರಬೆಲೆ ತಿಳಿಯಲು ಮುಂಬೈನ ಸ್ವರ್ಣ ವ್ಯಾಪಾರಿಗಳನ್ನು ಕರೆಸಿ ಮೌಲ್ಯ ನಿರ್ಣಯಿಸಲಾಯಿತು. ವಜ್ರಗಳ ಪೈಕಿ ಒಂದು ವಜ್ರ 6.67 ಕ್ಯಾರೆಟ್ವುತ್ತು ಇನ್ನೊಂದು 2.50 ಕ್ಯಾರೆಟ್ ಹೊಂದಿದೆ. ವಜ್ರಗಳನ್ನು ಏನು ಮಾಡಬೇಕೆಂದು ದೇವಾಲಯಯ ಆಡಳಿತ ಮಂಡಳಿಯು ಬಾಂಬೆ ಹೈಕೋರ್ಟನ್ನೇ ಕೇಳಿದೆ. ಸದ್ಯ ಬಾಂಬೆ ಹೈಕೋರ್ಟ್ ಸಮಿತಿಯ ನೇತೃತ್ವದಲ್ಲೇ ಆಡಳಿತ ಮಂಡಳಿ ಇರುವುದರಿಂದ ನ್ಯಾಯಾಲಯವೇ ಬಗ್ಗೆ ತೀರ್ಮಾನಿಸಬೇಕಾಗಿದೆ ಎಂದು ಶಿರ್ಡಿ ದೇವಾಲಯ ಟ್ರಸ್ಟ್ ಚೀಫ್ ಅಕೌಂಟೆಂಟ್ ದಿಲೀಪ್ ಜಿಪ್ರೆ ಹೇಳಿದರು.

2016: ನವದೆಹಲಿ: ಬರಗಾಲ ಮತ್ತು ಪ್ರವಾಹದಿಂದ ತತ್ತರಿಸಿರುವ ಕರ್ನಾಟಕ, ಪುದುಚೆರಿ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಶುಕ್ರವಾರ 842.7 ಕೋಟಿ ರೂಪಾಯಿಗಳ ನೆರವನ್ನು ಮಂಜೂರು ಮಾಡಿತು. ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನೆರವು ಒದಗಿಸುವ ನಿರ್ಧಾರ ಕೈಗೊಳ್ಳಲಾಯಿತು. ಬರಗಾಲದಿಂದ ತತ್ತರಿಸಿರುವ ಕರ್ನಾಟಕ ಮತ್ತು ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಪುದುಚೆರಿ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಿಗೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡವು ನೀಡಿದ ವರದಿಯನ್ನು ಆಧರಿಸಿ ಮುಂದಿಡಲಾದ ನೆರವು ಪ್ರಸ್ತಾವಗಳನ್ನು ಸಮಿತಿಯ ಪರಿಶೀಲಿಸಿತು. ಕರ್ನಾಟಕಕ್ಕೆ 723.23 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದ್ದು, ಪುದುಚೆರಿಗೆ 35.14 ಕೋಟಿ ರೂಪಾಯಿ ಮತ್ತು ಅರುಣಾಚಲ ಪ್ರದೇಶಕ್ಕೆ 84.33 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಯಿತು. ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ದೇಶಾದ್ಯಂತ 10 ರಾಜ್ಯಗಳು ತಮ್ಮ ಕೆಲವು ಪ್ರದೇಶಗಳನ್ನು ಬರಸಂತ್ರಸ್ಥ ಪ್ರದೇಶಗಳು ಎಂದು ಘೋಷಿಸಿದ್ದು, ರಾಜ್ಯಗಳಿಗೆ 10,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಕೇಂದ್ರ ನೆರವನ್ನು ಒದಗಿಸಲಾಗಿದೆ. ಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ, ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಷಿ ಮತ್ತು ಗೃಹ, ವಿತ್ತ ಮತ್ತು ಕೃಷಿ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

2016: ಉಜ್ಜೈನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಉಜ್ಜೈನಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಸಿಂಹಸ್ತ ಕುಂಭ ಮೇಳಕ್ಕೆ ಈದಿನ ಚಾಲನೆ ನೀಡಲಾಯಿತು. ಒಂದು ತಿಂಗಳಿಡೀ ನಡೆಯಲಿರುವ ಕುಂಭ ಮೇಳದಲ್ಲಿ 5 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ಭಕ್ತಾದಿಗಳು ಶಿಪ್ರ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಮಹಾಕಾಲೇಶ್ವರನ ದರ್ಶನ ಪಡೆಯಲಿದ್ದಾರೆ. ಉಜ್ಜೈನಿಯಲ್ಲಿರುವ ಮಹಾಕಾಲೇಶ್ವರ ಲಿಂಗವು ದೇಶಾದ್ಯಂತ ಇರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಅತ್ಯಂತ ಪ್ರಮುಖ ಸ್ಥಾನ ಪಡೆದಿದೆಸಿಂಹಸ್ತ ಮೇಳಕ್ಕೆ ಉಜ್ಜೈನಿ ಸಂಪೂರ್ಣವಾಗಿ ಸಿದ್ಧಗೊಂಡಿದ್ದು, 5 ಕೋಟಿಗೂ ಹೆಚ್ಚಿನ ಭಕ್ತಾದಿಗಲೂ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಗಾಗಿ ಸಾಕಷ್ಟು ಬಿಗಿ ಭದ್ರತೆ ಒದಗಿಸಲಾಗಿದೆ. ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  ತಮ್ಮ ಪತ್ನಿಯೊಂದಿಗೆ ಪವಿತ್ರ ಸ್ನಾನ ಮಾಡಿದ ಸಂದರ್ಭದಲ್ಲಿ ಹೇಳಿದರು. ಮಧ್ಯ ಪ್ರದೇಶ ಪೊಲೀಸರು, ಕೇಂದ್ರ ಭದ್ರತಾ ಪಡೆಗಳು ಸೇರಿದಂತೆ 25 ಸಾವಿರ ಭದ್ರತಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
 2016: ಕಪೋಲಿ: ವಿಶ್ವ ಪರ್ಯಟನೆ ಮಾಡುತ್ತಿರುವ ಸೋಲಾರ್ ಚಾಲಿತ ವಿಮಾನ ಇಂಪಲ್ಸ್ ಅಮೆರಿಕದ ಹವಾಯಿಯಿಂದ ತನ್ನ ಪ್ರಯಾಣವನ್ನು ಮುಂದುವರೆಸಿತು. ಕಳೆದ ವರ್ಷ ಜುಲೈನಲ್ಲಿ ಜಪಾನ್ನಿಂದ ಹವಾಯಿಗೆ ತಲುಪಿದ್ದ ಇಂಪಲ್ಸ್ ವಿಮಾನ ತಾಂತ್ರಿಕ ಕಾರಣಗಳಿಂದಾಗಿ ಹವಾಯಿಯಲ್ಲಿ ಬೀಡು ಬಿಟ್ಟಿತ್ತು. ವಿಮಾನದ ಬ್ಯಾಟರಿಗೆ ಹಾನಿಯಾಗಿದ್ದ ಕಾರಣ ವಿಮಾನ ಹಾರಾಟ ವಿಳಂಬವಾಗಿತ್ತು. ಪ್ರಯಾಣ ಪ್ರಾರಂಭಿಸಿರುವ ಇಂಪಲ್ಸ್ ವಿಮಾನ 3 ದಿನಗಳಲ್ಲಿ ಕ್ಯಾಲಿಫೋರ್ನಿಯಾ ತಲುಪಲಿದೆಮಾರ್ಚ್ 2015ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುದಾಭಿಯಿಂದ ವಿಮಾನ ಪ್ರಯಾಣವನ್ನು ಆರಂಭಿಸಿತ್ತು, ನಂತರ ಓಮನ್, ಮಯನ್ಮಾರ್, ಚೀನಾ, ಜಪಾನ್ ಮೂಲಕ ಹವಾಯಿಗೆ ಬಂದು ತಲುಪಿತ್ತು. ಇಂಪಲ್ಸ್ ವಿಮಾನ ಕಾರ್ಬನ್ ಫೈಬರ್ನಿಂದ ತಯಾರಿಸಲ್ಪಟ್ಟಿದ್ದು, ಕೇವಲ 2500 ಕೆ.ಜಿ. ತೂಕ ಹೊಂದಿದೆ. ಇದರ ರೆಕ್ಕೆಗಳಲ್ಲಿ 17 ಸಾವಿರ ಸೋಲಾರ್ ಸೆಲ್ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ವಿಮಾನಕ್ಕೆ ಬೇಕಾಗ ವಿದ್ಯುತ್ ಉತ್ಪಾದನೆಯಾಗಲಿದೆ. ಹಗಲಿನ ವೇಳೆಯಲ್ಲಿ ಸೂರ್ಯನ ಬೆಳಕಿನಲ್ಲಿ ಸಂಚರಿಸುವ ವಿಮಾನ, ರಾತ್ರಿ ವೇಳೆ ಬ್ಯಾಟರಿಯಲ್ಲಿ ಸಂಗ್ರಹಿಸಿದ ವಿದ್ಯುತ್ನಿಂದ ಚಲಿಸುತ್ತದೆ. ಇದು ಸರಾಸರಿ ಗಂಟೆಗೆ 28 ಮೈಲಿ ವೇಗದಲ್ಲಿ ಚಲಿಸುತ್ತದೆ.

2009: ಇಬ್ಬರು ಉನ್ನತ ಎಲ್‌ಟಿಟಿಇ ವಕ್ತಾರ ಹಾಗೂ ನಾಯಕರಾದ ದಯಾ ಮಾಸ್ಟರ್ ಮತ್ತು ಮೃತ ರಾಜಕೀಯ ಧುರೀಣ ತಮಿಳ್‌ಸೆಲ್ವನ್ ನಿಕಟವರ್ತಿ ಜಾರ್ಜ್ ಶ್ರೀಲಂಕಾ ಪಡೆಗಳಿಗೆ ಶರಣಾಗತರಾದರು. ಎಲ್‌ಟಿಟಿಇ ಮುಖ್ಯಸ್ಥ ವೇಲು ಪಿಳ್ಳೈ ಪ್ರಭಾಕರನ್‌ಗೆ ಶರಣಾಗತನಾಗಲು ನೀಡಲಾಗಿದ್ದ 24 ಗಂಟೆಗಳ ಗಡುವು ಮುಗಿಯುತ್ತಿದ್ದಂತೆಯೇ ಶ್ರೀಲಂಕಾ ಪಡೆಗಳು ಅಂತಿಮ ದಾಳಿ ಆರಂಭಿಸಿ, ತಮಿಳು ಟೈಗರ್‌ಗಳ ವಶದಲ್ಲಿದ್ದ ಇನ್ನೊಂದು ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡವು.

2009: ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಪ್ರತಿರೂಪವನ್ನೇ ಭಾರತೀಯ ಬಾರ್ಬಿ ಗೊಂಬೆ ತಯಾರಿಕೆಯಲ್ಲಿ ಬಳಸಲಾಗುವುದು ಎಂದು ಬ್ರಿಟನ್ ಪತ್ರಿಕೆಯೊಂದು ಉಲ್ಲೇಖಿಸಿತು. ಬಾರ್ಬಿ ಗೊಂಬೆಯಾಗಿ ಮಿಂಚಬೇಕಿದ್ದ ಐಶ್ವರ್ಯಾ ರೈ ಬಚ್ಚನ್ ಬದಲಿಗೆ ಬಾರ್ಬಿ ತಯಾರಿಕಾ ಕಂಪೆನಿ ಕತ್ರಿನಾ ಅವರನ್ನೇ ಆಯ್ಕೆ ಮಾಡಿದೆ ಎಂದು ಪತ್ರಿಕೆ ತಿಳಿಸಿತು. ತೆಳು ತ್ವಚೆಯ, ಭಾರತೀಯ ಸೊಬಗನ್ನು ಹೊಂದಿರುವ 24 ವರ್ಷದ ನಟಿ ಕತ್ರಿನಾ ಅವರ ತಂದೆ ಕಾಶ್ಮೀರಿ, ತಾಯಿ ಬ್ರಿಟನ್ ಸಂಜಾತೆ. ಸುವರ್ಣ ವರ್ಷಾಚರಣೆ ಸಂಭ್ರಮದಲ್ಲಿರುವ ಬಾರ್ಬಿ ತಯಾರಿಕಾ ಕಂಪೆನಿ ಮ್ಯಾಟೆಲ್ ಕತ್ರಿನಾ ಮುಖವುಳ್ಳ ಗೊಂಬೆಗಳ ಉತ್ಪಾದನೆಯನ್ನು ಸೆಪ್ಟಂಬರ್‌ನಿಂದ ಆರಂಭಿಸುವುದು ಎಂದು ಪ್ರಕಟಿಸಲಾಯಿತು.

2009: ಸರ್ಕಾರದ ವಿರುದ್ಧ ಬರೆದು ತೀವ್ರ ಸಂಕಷ್ಟಕ್ಕೆ ಗುರಿಯಾದ ಶ್ರಿಲಂಕಾದ ಪತ್ರಿಕೆ 'ದಿ ಸಂಡೇ ಲೀಡರ್' ಬ್ರಿಟನ್‌ನ ಪ್ರತಿಷ್ಠಿತ ಅಭಿವ್ಯಕ್ತಿ ಸ್ವಾತಂತ್ರ್ಯ ಪುರಸ್ಕಾರಕ್ಕೆ ಪಾತ್ರವಾಯಿತು. ದಿ ಸಂಡೇ ಲೀಡರ್ ಆರಂಭವಾದಾಗಿನಿಂದಲೂ ನಿರಂತರ ಸರ್ಕಾರದ ವಿರೋಧ ಎದುರಿಸಿತ್ತು. ಪತ್ರಿಕೆಯ ಸಂಪಾದಕ ಲಸಂತಾ ವಿಕ್ರಮತುಂಘೆ ಅವರನ್ನು ಅಪರಿಚಿತ ಬಂದೂಕುಧಾರಿಯೊಬ್ಬ ಹತ್ಯೆ ಮಾಡಿದ್ದ. ಇದಕ್ಕೆ ಮೊದಲು ತನ್ನ ಹತ್ಯೆ ನಿಶ್ಚಿತ ಎಂದು ತೀರ್ಮಾನಿಸಿ ನಿಧನದ ನಂತರ ಪ್ರಕಟಿಸುವ ಸಂಪಾದಕೀಯವನ್ನೇ ಅವರು ಮೊದಲೇ ಬರೆದಿಟ್ಟಿದ್ದರು.

2009: ಮಾನವಬಾಂಬ್‌ಗಳಾಗಿ ಅಲ್‌ಖೈದಾ ತರಬೇತಿ ನೀಡ್ದಿದ ನಾಲ್ವರು ಮಕ್ಕಳನ್ನು ಇರಾಕ್ ಪೊಲೀಸರು ಬಂಧಿಸಿದರು. ತೈಲ ನಗರಿ ಕಿರ್ಕುಕ್ ಸಮೀಪದ ಹಳ್ಳಿಯೊಂದರಲ್ಲಿ ಈ ಮಕ್ಕಳನ್ನು ಪತ್ತೆ ಹಚ್ಚಲಾಯಿತು. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಂಕಿತರು ಆತ್ಮಾಹುತಿ ದಳ 'ಬರ್ಡ್ಸ್ ಆಫ್ ಪ್ಯಾರಡೈಸ್'ಗೆ ಸೇರಿದವರು ಎನ್ನಲಾಯಿತು.

2009: ಕನ್ನಡದ ಹಿರಿಯ ಕವಿ, ಕಥೆ ಗಾರ, ವಿಮರ್ಶಕ ದೇಶ ಕುಲಕರ್ಣಿ (71) ಬೆಂಗಳೂರಿನಲ್ಲಿ ಈದಿನ ನಿಧನರಾದರು. 'ದೇಶ ಕುಲಕರ್ಣಿ' ಎಂಬ ಕಾವ್ಯನಾಮದಿಂದ ಪರಿಚಿತರಾಗಿದ್ದ ಅವರ ನಿಜವಾದ ಹೆಸರು ಡಿ.ಎಲ್.ಉಪೇಂದ್ರನಾಥ್. ಅವರು ಇಲ್ಲಿನ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅನೇಕ ವರ್ಷಗಳ ಕಾಲ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಕನ್ನಡದ ನವ್ಯ ಲೇಖಕರಲ್ಲಿ ದೇಶ ಕುಲಕರ್ಣಿ ಒಬ್ಬರು. 'ನೆಪವಿಲ್ಲದ ಪ್ರೀತಿ', 'ಕೊಂಪೆಯಲ್ಲಿ ಕೋಗಿಲೆ', 'ಕೊಂಪೆ: ಋತು ಸಂಹಾರ', 'ಪಂಪಾ ಯಾತ್ರೆ', 'ಕೂಡಿಕೊಂಡ ಸಾಲು', 'ಪದ್ಯ ಗಂಧ' ಎಂಬ ಕವನ ಸಂಗ್ರಹಗಳನ್ನು ಅವರು ಪ್ರಕಟಿಸ್ದಿದರು. 'ಸೋಲೋ', 'ಚಿತ್ರದಲ್ಲಿನ ನೆರಳು' ಅವರ ಕಥಾ ಸಂಗ್ರಹಗಳು. 'ಪಾರುಪತ್ಯ' ಎಂಬ ನಾಟಕವನ್ನು ಅವರು ಬರೆದಿದ್ದಾರೆ. ಸಾಹಿತ್ಯ ವಿಮರ್ಶಕರೂ ಆಗಿದ್ದ ಅವರು 'ನಿರೀಕ್ಷೆ', 'ಅಂತರ', 'ಸಹಜ' ಎಂಬ ವಿಮರ್ಶಾ ಸಂಗ್ರಹಗಳನ್ನು ಪ್ರಕಟಿಸಿದ್ದರು. ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದ ಕೆಲವೇ ಲೇಖಕರಲ್ಲಿ ಅವರೂ ಒಬ್ಬರಾಗಿದ್ದರು.

2009: ನ್ಯಾನೊ ತಂತ್ರಜ್ಞಾನ ಮೂಲಕ ಈ ಭಗವದ್ಗೀತೆಯ ಚಿಪ್ ಸೃಷ್ಟಿಸಿ ಅದಕ್ಕಾಗಿ ಪೇಟೆಂಟ್ ಕೂಡ ಪಡೆದ ಅಮೆರಿಕದ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಪ್ರೊಫೆಸರ್ ಪವನ್ ಸಿನ್ಹಾ ಸಹಯೋಗದೊಂದಿಗೆ ತನಿಷ್ಕ್ ಆರು ಮಾದರಿಗಳಲ್ಲಿ ಪೆಂಡೆಂಟ್ ಸಿದ್ಧಪಡಿಸಿ ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಬೆಂಗಳೂರು ಸಹಿತ ದೇಶದ ಸುಮಾರು 50 ತನಿಷ್ಕ್ ಮಳಿಗೆಗಳಲ್ಲಿ ಈ ಪೆಂಡೆಂಟ್‌ಗಳನ್ನು ಮಾರಾಟಕ್ಕೆ ಇಡಲಾಯಿತು.

2009: ವಿಜಾಪುರ ಜಿಲ್ಲೆಯ ಹಾಸಂಗಿಹಾಳ್ ಕ್ರಾಸ್ ಬಳಿ 2001ರಲ್ಲಿ ನಡೆದ ಭೀಮಣ್ಣ ಸುಂಬದ್ ಕುಟುಂಬ ಸದಸ್ಯರ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಾಪುರದ ಒಂದನೇ ತ್ವರಿತ ನ್ಯಾಯಾಲಯವು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಭೀಮಣ್ಣ ಅವರ ಕುಟುಂಬದ ವಿರೋಧಿಗಳಾಗಿದ್ದ ಗುಗ್ಗೇರಿ ಕುಟುಂಬದವರು ಈ ಕೃತ್ಯ ಎಸಗಿದ್ದರು. ಭೀಮಣ್ಣ ಮತ್ತು ಅವರ ಕುಟುಂಬ ಸದಸ್ಯರು ಹಾಸಂಗಿಹಾಳ್ ಕ್ರಾಸ್ ಬಳಿ ಬಸ್‌ನಲ್ಲಿ ಹೋಗುತ್ತಿದ್ದಾಗ ಗುಗ್ಗೇರಿ ಕುಟುಂಬದವರು ಅವರನ್ನು ಕೆಳಗಿಳಿಸಿ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಘಟನೆಯಲ್ಲಿ ಭೀಮಣ್ಣ ಅವರ ಕುಟುಂಬದ ಐವರು ಮೃತರಾಗಿದ್ದರು.

2008: ಸಂಸತ್ ಭವನ ದಾಳಿ ಪ್ರಕರಣದ ಆರೋಪಿ ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡುವ ಕುರಿತ ಮನವಿಗೆ ಗೃಹ ಸಚಿವಾಲಯವು, ರಾಷ್ಟ್ರಪತಿ ಕಲಾಂ ಅವರಿಗೆ ಅವರ ಅಧಿಕಾರಾವಧಿ ಕೊನೆಯ ದಿನದವರೆಗೂ ಸೂಚನೆ ಕಳಿಸಿರಲಿಲ್ಲ ಎಂಬ ವಿಚಾರ ಬಹಿರಂಗಗೊಂಡಿತು. ಇದರೊಂದಿಗೆ ಕಲಾಂ ಅವರು ಉದ್ದೇಶಪೂರ್ವಕವಾಗಿ ಕ್ಷಮಾದಾನದ ಮನವಿಯನ್ನು ಪರಿಶೀಲಿಸದೇ ಹಾಗೇ ಇಟ್ಟಿದ್ದರು ಎನ್ನುವ ವರದಿಗಳಿಗೆ ಎಳೆದಂತಾಯಿತು. ಕಲಾಂ ಅವರ ಅಧಿಕಾರಾವಧಿ ಮುಗಿದ 2007 ರ ಜುಲೈ 25 ರ ತನಕವೂ ಗೃಹ ಸಚಿವಾಲಯ ಈ ಬಗ್ಗೆ ಯಾವುದೇ ಶಿಫಾರಸು ನೀಡಿರಲಿಲ್ಲ ಎಂದು ಕಲಾಂ ಅವರಿಗೆ ಕಾರ್ಯದರ್ಶಿಯಾಗಿದ್ದ ಪಿ.ಎಂ.ನಾಯರ್ ಅವರು `ರಾಷ್ಟ್ರಪತಿಯವರೊಂದಿಗೆ ನನ್ನ ದಿನಗಳು' ಕೃತಿಯಲ್ಲಿ ಬಹಿರಂಗಪಡಿಸಿದರು.

2008: ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ತ್ರಿಶೂರ್ ಜಿಲ್ಲೆಯ ಕುಟ್ಟೂರು ಗ್ರಾಮದ ಸತ್ಯನ್ ಎಂಬ ಭಕ್ತನೊಬ್ಬ ದೇವರ ಎದುರಿನಲ್ಲಿ ತನ್ನ ತುಲಾಭಾರಕ್ಕೆ 72 ಕಿ.ಲೋ. ತೂಕದ ಪ್ಯಾರಾಸಿಟಮಲ್ ಗುಳಿಗೆ (ಮಾತ್ರೆ)ಗಳನ್ನು ಬಳಸಿ ತುಲಾಭಾರದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ. ಈ ದೇವಾಲಯದಲ್ಲಿ ನಿತ್ಯವೂ ನೂರಾರು ಭಕ್ತರು ಬಾಳೆಹಣ್ಣಿನಿಂದ ಹಿಡಿದು ಹಲಸಿನ ಹಣ್ಣು ಹಾಗೂ ಇತರೆ ವಸ್ತುಗಳಿಂದ ತುಲಾಭಾರ ಮಾಡಿಸಿಕೊಂಡು ಆ ವಸ್ತುಗಳನ್ನು ದೇವಾಲಯಕ್ಕೆ ನೀಡುವುದು ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ಸತ್ಯನ್ ತಮ್ಮ 72 ಕಿ.ಲೋ. ತೂಕದ ದೇಹವನ್ನು ಗುಳಿಗೆಗಳ ಮೂಲಕ ತುಲಾಭಾರ ಮಾಡಿಸಿಕೊಂಡು ವಿಶಿಷ್ಟತೆ ಮೆರೆದರು. ದೇವಾಲಯದ ಅಧಿಕಾರಿಗಳು ಈ ಗುಳಿಗೆಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ನೀಡಿದರು.

2008: ಕರ್ನಾಟಕದಲ್ಲಿ ಮೇ 16ರಂದು ನಡೆಯುವ ಎರಡನೇ ಹಂತದ ವಿಧಾನಸಭಾ ಚುನಾವಣೆಗಳಿಗಾಗಿ ಚುನಾವಣಾ ಆಯೋಗವು ಈದಿನ ಅಧಿಸೂಚನೆ ಹೊರಡಿಸಿತು. ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಈ ಹತ್ತು ಜಿಲ್ಲೆಗಳ 66 ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುವುದು.

2008: ಬ್ರಿಟನ್ ಮಹಾಚುನಾವಣೆಯಲ್ಲಿ ಹಿಂದು ಮತ್ತು ಸಿಖ್ ಸಮುದಾಯಗಳು ಅತ್ಯಂತ ಹೆಚ್ಚಿನ ಮತದಾನ ಸಾಮರ್ಥ್ಯ ಪಡೆದಿವೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿತು. 2001ರಲ್ಲಿ ಶೇಕಡಾ 61.3ರಷ್ಟು ಹಿಂದುಗಳು ಮತದಾನ ಮಾಡಿದ್ದರೆ, ಸಿಖ್ ಸಮುದಾಯ ಶೇಕಡಾ 59.7ರಷ್ಟು ಹಾಗೂ ಮುಸ್ಲಿಂ ಸಮುದಾಯ ಶೇಕಡಾ 58.5ರಷ್ಟು ಮತದಾನ ಮಾಡಿದ್ದವು ಎಂಬ ವಿಚಾರವನ್ನು ಸಂಶೋಧನೆ ಬಹಿರಂಗಪಡಿಸಿತು. ಹಿಂದು ಕೌನ್ಸಿಲ್ ಯುಕೆ (ಎಚ್ ಸಿ ಯು ಕೆ) ಈ ಸಂಶೋಧನೆಯನ್ನು ನಡೆಸಿತು. ಸಾಮಾಜಿಕ ಸಂಶೋಧನಾ ಸಂಘಟನೆ ಜೋಸೆಫ್ ರೌನ್ ಟ್ರೀ ಫೌಂಡೇಷನ್ ಇದಕ್ಕೆ ನಿಧಿ ಸಹಾಯ ಮಾಡಿತ್ತು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಎಡ್ವರ್ಡ್ ಫೀಲ್ಡ್ ಹೌಸ್ ಮತ್ತು ಡೇವಿಡ್ ಕಟ್ಸ್ ಈ ಸಂಶೋಧನೆಗೆ ನೆರವಾಗಿದ್ದರು.

2008: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದ ಮೇರೆಗೆ ಬೆಂಗಳೂರು, ರಾಮನಗರ, ದಾವಣಗೆರೆ, ಕೊಪ್ಪಳ ಮತ್ತು ಬೆಳಗಾವಿಯಲ್ಲಿ ವಿವಿಧ ಇಲಾಖೆಗಳ ಒಬ್ಬ ಡಿಸಿಪಿ, ಒಬ್ಬ ಹೆಚ್ಚುವರಿ ಎಸ್ಪಿ ಸೇರಿದಂತೆ ಎಂಟು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು 45 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದರು.

2008: ಬಿಜೆಪಿ ಮಹಾರಾಷ್ಟ್ರ ಘಟಕದ ಕಾರ್ಯ ನಿರ್ವಹಣೆ ವಿರುದ್ಧ ಬಂಡಾಯದ ಬಾವುಟ ಬೀಸಿದ್ದ ಪಕ್ಷದ ಹಿರಿಯ ನಾಯಕ ಗೋಪಿನಾಥ ಮುಂಡೆ ಅವರು ನವದೆಹಲಿಗೆ ಆಗಮಿಸಿ ಪಕ್ಷದ ಹಿರಿಯ ನಾಯಕ ಎಲ್. ಕೆ. ಆಡ್ವಾಣಿ ಮತ್ತು ಅಧ್ಯಕ್ಷ ರಾಜನಾಥ್ ಸಿಂಗ್ ಅವರಲ್ಲಿ ತಮ್ಮ ದುಗುಡ ತೋಡಿಕೊಂಡರು ಹಾಗೂ ವರಿಷ್ಠರ ಸೂಚನೆ ಮೇರೆಗೆ ತಾವು ನೀಡಿದ ರಾಜೀನಾಮೆಯನ್ನು ಹಿಂದಕ್ಕೆ ಪಡೆದರು. ಇದರೊಂದಿಗೆ ಮೂರು ದಿನಗಳಿಂದ ಉದ್ಭವಿಸ್ದಿದ ಮಹಾರಾಷ್ಟ್ರ ಬಿಜೆಪಿ ಘಟಕದ ಬಿಕ್ಕಟ್ಟು ಕೊನೆಗೊಂಡಿತು.

2008: ರಾಜ್ಯದ ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಜೋಡಿ ನಿರ್ಮಿಸಿದ `ವೈಲ್ಡ್ ಡಾಗ್ ಡೈರಿಸ್'ಗೆ ಫ್ರಾನ್ಸಿನ ಪ್ರತಿಷ್ಠಿತ ಪ್ರಶಸ್ತಿ ದೊರಕಿತು. ಫ್ರಾನ್ಸ್ ಚಿತ್ರೋತ್ಸವದಲ್ಲಿ ವನ್ಯಜೀವಿ ಚಿತ್ರ ವಿಭಾಗದ ಅತ್ಯುತ್ತಮ ಪುರಸ್ಕಾರ ಹಾಗೂ ಎರಡು ಸಾವಿರ ಡಾಲರ್ ನಗದು ಈ ಚಿತ್ರಕ್ಕೆ ದೊರಕಿತು. ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ಗಾಗಿ ನಿರ್ಮಿಸಿದ ಈ ಚಿತ್ರಕ್ಕೆ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ. ಬಿಬಿಸಿ ವೈಲ್ಡ್ ಸ್ಕ್ರೀನ್, ಬರ್ಲಿನ್ ಹಾಗೂ ಜರ್ಮನಿ ವನ್ಯಜೀವಿ ಚಿತ್ರೋತ್ಸವದಲ್ಲಿ ನಾಮಕರಣಗೊಂಡುದರ ಜೊತೆಗೆ ಜಪಾನಿನ ವನ್ಯಜೀವಿ ಚಿತ್ರೋತ್ಸವ, ಸಿಂಗಪುರದ ಏಷ್ಯನ್ ಟೆಲಿಫಿಲಂ ಪ್ರಶಸ್ತಿ ಹಾಗೂ ನವದೆಹಲಿಯಲ್ಲಿ ವಾತಾವರಣ್ ಅಂತಾರಾಷ್ಟ್ರೀಯ ಪ್ರಶಸ್ತಿ ಈ ಚಿತ್ರಕ್ಕೆ ದೊರಕಿದೆ.

2007: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂಬುದಾಗಿ ಘೋಷಿಸಿ ಗೋ ಹತ್ಯೆಯನ್ನು ದೇಶದಾದ್ಯಂತ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರವೇ ಗೋಹತ್ಯಾ ನಿಷೇದ ಮಸೂದೆ ಜಾರಿಗೊಳಿಸಬೇಕು ಎಂದು ಮಾಜಿ ರಾಜ್ಯಪಾಲ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್ ಅವರ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಆವರಣದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮನವಿ ಮಾಡಿದರು.

2007: ಭಾರತ -ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ನೌಕಾಪಡೆಗಾಗಿ ಅಭಿವೃದ್ಧಿ ಪಡಿಸಲಾದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯನ್ನು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದ ಕ್ಷಿಪಣಿ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಇದು ಬ್ರಹ್ಮೋಸ್ನ 10ನೇ ಪ್ರಾಯೋಗಿಕ ಪರೀಕ್ಷೆ.

2007: ಕ್ರಿಕೆಟ್ ಜಗತ್ತಿನ ಧ್ರುವತಾರೆ, ದಾಖಲೆಗಳ ವೀರ ವೆಸ್ಟ್ ಇಂಡೀಸ್ ನ ಬ್ರಯನ್ ಲಾರಾ ಬಾರ್ಬಡಾಸ್ ನಲ್ಲಿ ನಡೆದ ಎರಡನೇ ಹಂತದ ಕೊನೆಯ ಪಂದ್ಯದಲ್ಲಿ ತಮ್ಮ ವಿಶ್ವಕಪ್ ನ ಕೊನೆಯ ಪಂದ್ಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಇತಿಶ್ರೀ ಹಾಡಿದರು.

2007: ಬುದ್ಧಿ ಮಾಂದ್ಯ ಮಕ್ಕಳ ಮಧುರಂ ನಾರಾಯಣನ್ ಕೇಂದ್ರದ ಸಂಸ್ಥಾಪಕ ಹಾಗೂ ಮಾಜಿ ಏರ್ ವೈಸ್ ಮಾರ್ಷಲ್ ವಿ. ಕೃಷ್ಣಸ್ವಾಮಿ (81) ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಅವರು ತಮಿಳುನಾಡಿನ ವಾಯುಪಡೆ ಮತ್ತು ಹಿರಿಯರ ಸೇವಾ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬುದ್ಧಿಮಾಂದ್ಯ ಮಕ್ಕಳಿಗಾಗಿ ಸ್ಥಾಪಿಸಿದ ಮಧುರಂ ನಾರಾಯಣನ್ ಕೇಂದ್ರಕ್ಕಾಗಿ 2004ರಲ್ಲಿ ಅವರನ್ನು ರಾಷ್ಟ್ರಪತಿಗಳು ಗೌರವಿಸಿದ್ದರು.

2007: ಬೆಂಗಳೂರು ಉದ್ಯಾನನಗರಿಯಲ್ಲಿ ಏಪ್ರಿಲ್ 21ರ ನಡುರಾತ್ರಿ ಸುರಿದ ಭಾರಿ ಮಳೆಗೆ ರಾಜಧಾಮಿಯ ನಿವಾಸಿಗಳು ತತ್ತರಿಸಿದರು. ಭಾರತಿ ನಗರದ ದೊಡ್ಡ ಚರಂಡಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದು ಸೇರಿ ಇಬ್ಬರು ಮೃತರಾದರು. ಮಧ್ಯರಾತ್ರಿ 12.30 ರಿಂದ ಸತತ ಮೂರು ಗಂಟೆಗಳ ಕಾಲ ಮಳೆ ಬಂದಿದ್ದು, ಒಟ್ಟಾರೆ 75 ಮಿ.ಮೀ (7.5 ಸೆಂ.ಮೀ) ಮಳೆಯಾಯಿತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 48 ಮಿ.ಮೀ (4.8 ಸೆಂ.ಮೀ) ಮಳೆ ಸುರಿದು, ನಗರದಲ್ಲಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಯಿತು.

2007: ದೊರೆಯ ಆಸ್ತಿಪಾಸ್ತಿ ರಾಷ್ಟ್ರೀಕರಣ ಮಾಡುವ ತನ್ನ ಬದ್ಧತೆಯನ್ನು ಈಡೇರಿಸುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಆಪಾದಿಸಿ ನೇಪಾಳದ ಮಾವೋವಾದಿಗಳು ಕಠ್ಮಂಡುವಿನಲ್ಲಿ ದೊರೆಯ ಆಸ್ತಿಪಾಸ್ತಿ ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಆರಂಭಿಸಿದರು. ದೊರೆಯ ಆಸ್ತಿಪಾಸ್ತಿ ವಶಕ್ಕೆ ಕಾನೂನು ರೂಪಿಸುವಲ್ಲಿ ಸಂಸತ್ತು ವಿಫಲವಾಗಿದೆ. ಹಾಗಾಗಿ ಈಗ ಯಂಗ್ ಕಮ್ಯೂನಿಸ್ಟ್ ಲೀಗ್ ಆ ಕಾರ್ಯ ಮಾಡಿ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸುವುದು ಎಂದು ಸಿಪಿಎನ್ ಮಾವೋವಾದಿ ಹಿಟ್ ಮನ್ ಶಾಕ್ಯದ ಕೇಂದ್ರೀಯ ಸಮಿತಿ ತಿಳಿಸಿತು.

2007: ಬಾಂಗ್ಲಾದೇಶದ ಸೇನೆ ಬೆಂಬಲಿತ ಮಧ್ಯಂತರ ಸರ್ಕಾರವು ಮಾಜಿ ಪ್ರಧಾನಿ ಹಸೀನಾ ಅವರ ಪುನರಾಗಮನಕ್ಕೆ ನಿಷೇಧ ವಿಧಿಸಿದ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ಹಸೀನಾ ಅವರನ್ನು ಬ್ರಿಟನ್ ಬಿಟ್ಟು ಹೊರಡದಂತೆ ನಿರ್ಬಂಧಿಸಿತು. ಆಕೆಯನ್ನು ಢಾಕಾಗೆ ಒಯ್ಯಬೇಕಿದ್ದ ಬ್ರಿಟಿಷ್ ಏರ್ವೇಸ್ ಸಂಸ್ಥೆಯು ಟಿಕೆಟ್ ಹೊಂದ್ದಿದರೂ ಹಸೀನಾ ಅವರಿಗೆ ವಿಮಾನ ಏರಲು ಅವಕಾಶ ನಿರಾಕರಿಸಿತು. ಢಾಕಾಗೆ ಹೊರಡುವ ವಿಮಾನದ ನಿರ್ಗಮನ ವೇಳೆಯಿಂದ 90 ನಿಮಿಷಗಳಷ್ಟು ಮೊದಲೇ ಹಸೀನಾ ಹೀಥ್ರೂ ವಿಮಾನ ನಿಲ್ದಾಣ ತಲುಪಿದ್ದರು.

2006: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಮೋದ ಮಹಾಜನ್ (56) ಅವರ ಮೇಲೆ ಒಡಹುಟ್ಟಿದ ಸಹೋದರ ಪ್ರವೀಣ್ ಮಹಾಜನ್ ಮಾತಿನ ಚಕಮಕಿ ಮಧ್ಯೆ ಸಿಟ್ಟಿಗೆದ್ದು ಗುಂಡು ಹಾರಿಸಿದರು. ತೀವ್ರವಾಗಿ ಗಾಯಗೊಂಡ ಪ್ರಮೋದ್ ಮಹಾಜನ್ ಅವರನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಮುಂಬೈಯ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಯಿತು. ಮುಂಬೈಯ ವರ್ಲಿಯ ಪ್ರಮೋದ್ ಮಹಾಜನ್ ಮನೆಯಲ್ಲೇ ಈ ಗುಂಡು ಹಾರಾಟದ ಘಟನೆ ನಡೆಯಿತು.

2006: ವರನಟ ಡಾ. ರಾಜ್ ಕುಮಾರ್ ಅವರ ಉತ್ತರಕ್ರಿಯೆಯನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೊ ಸಮಾಧಿ ಬಳಿ ಕುಟುಂಬ ಸದಸ್ಯರು ವಿಧಿವತ್ತಾಗಿ ನೆರವೇರಿಸಿದರು.

2006: ಗಣ್ಯ ವ್ಯಕ್ತಿಗಳಿಂದ ಹತ್ಯೆಗೀಡಾದ ರೂಪದರ್ಶಿ ಜೆಸ್ಸಿಕಾಲಾಲ್ ಅವರ ತಂದೆ ಅಜಿತ್ ಕುಮಾರ್ ಲಾಲ್ ಅವರು ನವದೆಹಲಿಯಲ್ಲಿ ಮೆದುಳಿನ ರಕ್ತಸ್ರಾವಕ್ಕೆ ತುತ್ತಾದ ಒಂದು ತಿಂಗಳ ಬಳಿಕ ನಿಧನರಾದರು. 1999ರ ಏಪ್ರಿಲ್ 29ರಂದು ಹೋಟೆಲಿನಲ್ಲಿ ಹರ್ಯಾಣ ಸಚಿವ ವಿನೋದ ಶರ್ಮಾ ಅವರ ಪುತ್ರ ಮನು ಶರ್ಮಾ ಮತ್ತು ಇತರರು ಮದ್ಯ ಸರಬರಾಜು ಮಾಡಲು ನಿರಾಕರಿಸಿದ್ದಕ್ಕಾಗಿ ಜೆಸ್ಸಿಕಾಲಾಲ್ ಅವರನ್ನು ಗುಂಡಿಟ್ಟು ಕೊಂದಿದ್ದರು. 2000ನೇ ಇಸವಿಯಲ್ಲಿ ಆಕೆಯ ತಾಯಿ ಮೃತಳಾಗಿದ್ದಳು. ತಂದೆ ಅಂದಿನಿಂದಲೇ ಅಸ್ವಸ್ಥರಾಗಿದ್ದರು.. 2006ರ ಫೆಬ್ರುವರಿ 21ರಂದು ದೆಹಲಿಯ ನ್ಯಾಯಾಲಯವೊಂದು ಜೆಸ್ಸಿಕಾಲಾಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿದ ಬಳಿಕ ಆಕೆಯ ತಂದೆ ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದರು.

1994: ಅಮೆರಿಕದ 37ನೇ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ತಮ್ಮ 81ನೇ ವಯಸ್ಸಿನಲ್ಲಿ ನ್ಯೂಯಾರ್ಕಿನ ಆಸ್ಪತ್ರೆಯೊಂದರಲ್ಲಿ ಮೃತರಾದರು.

1970: ಅಮೆರಿಕವು ಮೊತ್ತ ಮೊದಲ `ಅರ್ಥ್ ಡೇ' (ಭೂ ದಿನ) ಆಚರಿಸಿತು. ಕೈಗಾರಿಕೀಕರಣದ ದುಷ್ಪರಿಣಾಮ ಮತ್ತು ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಪ್ರಥಮ ಪ್ರಯತ್ನ ಇದಾಗಿತ್ತು.

1967: ಕಲಾವಿದ ರವೀಂದ್ರ ಎಲ್. ಜನನ.

1965: ಕಲಾವಿದೆ ಶಾಂತಲಕ್ಷ್ಮಿ ಜನನ.

1950: ಕಲಾವಿದ ಗಂಗಾಧರ ಸ್ವಾಮಿ ಜನನ.

1949: ಕಲಾವಿದ ವಸಂತ ಲಕ್ಷ್ಮಿ ಬೇಲೂರು ಜನನ.

1945: ಹಾಸ್ಯನಟರಾಗಿ ಪ್ರಖ್ಯಾತರಾಗಿರುವ ಎಂ.ಎಸ್. ಉಮೇಶ್ ಅವರು ಎ.ಎಲ್. ಶ್ರೀಕಂಠಯ್ಯ ಮತ್ತು ತಾಯಿ ನಂಜಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಮಗುವಾಗಿದ್ದಾಗಲೇ ರಂಗಪ್ರವೇಶ ಮಾಡಿ ರಂಗಭೂಮಿಯತ್ತ ಒಲವು ಬೆಳೆಸಿಕೊಂಡ ಉಮೇಶ್, ಕೆ. ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ಅನಕೃ ಅವರು ಬರೆದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಪಾತ್ರಧಾರಿಯಾಗಿ ರಂಗಪ್ರವೇಶಿಸಿದರು. ಮುಂದೆ ಕಥಾ ಸಂಗಮ ಚಲನ ಚಿತ್ರದ ತಿಮ್ಮರಾಯಿ ಪಾತ್ರದೊಂದಿಗೆ ಚಿತ್ರರಂಗ ಪ್ರವೇಶಿಸಿದ ಅವರು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪ್ರವೇಶಿಸಿ ಉತ್ತಮ ನಟನಾಗಿ ಮಿಂಚಿದರು.

1921: ಕಲಾವಿದ ದೇವಪ್ಪಯ್ಯ ಅಪ್ಪಯ್ಯ ಜನನ.

1904: ಜ್ಯೂಲಿಯಸ್ ರಾಬರ್ಟ್ ಒಪ್ಪೆನ್ಹೀಮರ್ (1904-67) ಜನ್ಮದಿನ. ಈತ ಅಣುಬಾಂಬ್ ಅಭಿವೃದ್ಧಿ ಕಾಲದಲ್ಲಿ (1943-45) ಲಾಸ್ ಅಲಮೋಸ್ ಲ್ಯಾಬೋರೇಟರಿ ಹಾಗೂ ಪ್ರಿನ್ಸ್ ಟನ್ನ ಇನ್ ಸ್ಟಿಟ್ಯೂಟ್ ಫಾರ್ ಅಡ್ವಾನ್ಸಡ್ ಸ್ಟಡಿಯ ನಿರ್ದೇಶಕನಾಗಿದ್ದ.

1500: ಪೆಡ್ರೊ ಅಲ್ವರೆಝ್ ಕಾಬ್ರೆಲ್ ಬ್ರೆಜಿಲನ್ನು ಶೋಧಿಸಿದ. ಆತ ಇದಕ್ಕೆ `ಐಲ್ಯಾಂಡ್ ಆಫ್ ಟ್ರು ಕ್ರಾಸ್' ಎಂದು ಹೆಸರು ಇಟ್ಟ. ನಂತರ ದೊರೆ ಮ್ಯಾನ್ಯುಯೆಲ್ `ಹೋಲಿ ಕ್ರಾಸ್' ಎಂಬುದಾಗಿ ಮರುನಾಮಕರಣ ಮಾಡಿದ. ಅಂತಿಮವಾಗಿ ಅದಕ್ಕೆ ಈಗಿನ ಬ್ರೆಜಿಲ್ ಎಂಬ ಹೆಸರು ಬಂತು. ಇದಕ್ಕೆ ಅಲ್ಲಿ ಸಿಗುವ `ಪೌ-ಬ್ರೆಸಿಲ್' ಎಂಬ ಬಣ್ಣದ ಮರ (ಡೈವುಡ್) ಕಾರಣ.

No comments:

Post a Comment