ನಾನು ಮೆಚ್ಚಿದ ವಾಟ್ಸಪ್

Saturday, June 13, 2020

ಇಂದಿನ ಇತಿಹಾಸ History Today ಜೂನ್ 13

ಇಂದಿನ ಇತಿಹಾಸ  History Today ಜೂನ್  13  

2020: ಕಠ್ಮಂಡು: ತನ್ನ ರಾಷ್ಟ್ರೀಯ ಲಾಂಛನದಲ್ಲಿ ಹೊಸ ನಕ್ಷೆಯನ್ನು ಪ್ರತಿಬಿಂಬಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ನೇಪಾಳದ ಕೆಳಮನೆಯು 2020 ಜೂನ್ 13ರ ಶನಿವಾರ ತನ್ನ ಸರ್ವಾನುಮತದ ಅಂಗೀಕಾರ ಮುದ್ರೆಯನ್ನು ಒತ್ತಿತು. ತನ್ಮೂಲಕ ಭಾರತದೊಂದಿಗೆ ಮಾತುಕತೆಯ ಬಾಗಿಲನ್ನು ಮುಚ್ಚಿದ ನೇಪಾಳವು ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಗಡಿರೇಖೆ ಕಿರಿಕಿರಿಯನ್ನು  ಶಾಶ್ವತವಾಗಿ ಕೆರಳುವಂತೆ ಮಾಡಿತು. ಸದನದಲ್ಲಿ ಹಾಜರಿದ್ದ ಎಲ್ಲ ೨೫೮ ಸದಸ್ಯರೂ ಸಂವಿಧಾನ ತಿದ್ದುಪಡಿ ಮಸೂದೆಯ ಪರವಾಗಿ ಮತದಾನ ಮಾಡಿದರು. ಕೋವಿಡ್ -೧೯ ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವ ಸರ್ಕಾರದ ಕಳಪೆ ಕ್ರಮವನ್ನು ಪ್ರತಿಭಟಿಸಿ ರಾಜಧಾನಿ ಕಠ್ಮಂಡುವಿನ ಬೀದಿ ಬೀದಿಗಳಲ್ಲಿ ಸಹಸ್ರಾರು ಪ್ರತಿಭಟನಕಾರರು ಪ್ರದರ್ಶನಗಳನ್ನು ನಡೆಸುತ್ತಿದ್ದ ವೇಳೆಯಲ್ಲಿಯೇ, ಮಸೂದೆಗೆ ಸದನವು ಒಪ್ಪಿಗೆ ನೀಡುವುದರೊಂದಿಗೆ ಪ್ರಧಾನಿ ಕೆಪಿ ಶರ್ಮ ಒಲಿ ಅವರ ನಿಲುವಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಒಳಗೆ ಮತ್ತು ಹೊರಗೆ ಬಲ ಬಂದಂತಾಯಿತು. ನೇಪಾಳದ ಸಂಸತ್ತು ವಿಶೇಷ ಸಮಾವೇಶದಲ್ಲಿ ಭಾರತದ ಭಾಗಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿರುವ ಪರಿಷ್ಕೃತ ಭೂಪಟಕ್ಕೆ ಒಪ್ಪಿಗೆ ನೀಡಿದ್ದಕ್ಕೆ ಭಾರತ ಈವರೆಗೂ ಯಾವುದೇ ಔಪಚಾರಿಕ ಪ್ರತಿಕ್ರಿಯೆ ನೀಡಿಲ್ಲ. ಆದರೆ ನವದೆಹಲಿಯಲ್ಲಿ ಭಾರತೀಯ ಅಧಿಕಾರಿಯೊಬ್ಬರು ನೇಪಾಳವು ಗಡಿ ವಿವಾದ ಹುಟ್ಟುಹಾಕುತ್ತಿರುವುದನ್ನು ನವದೆಹಲಿಯು ಗಮನಕ್ಕೆ ತೆಗೆದುಕೊಂಡಿದೆ ಮತ್ತು ಭಾರತದ ವಿರುದ್ಧ ಭಾವನೆಗಳನ್ನು ಬಡಿದೆಬ್ಬಿಸುವ ಪ್ರಯತ್ನಗಳ ಬಗ್ಗೆ ಭ್ರಮ ನಿರಸನಗೊಂಡಿದೆ ಎಂಬ ಸುಳಿವು ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಬೀಜಿಂಗ್: ಫೆಬ್ರವರಿ ತಿಂಗಳಲ್ಲಿ ಕೋವಿಡ್-೧೯ ಸೋಂಕಿಗೆ ಬಲಿಯಾದ ೩೪ ವರ್ಷದ ವುಹಾನ್ ಶಿಳ್ಳೆಗಾರ ವೈದ್ಯ ಲಿ ವೆನ್ಲಿಯಾಂಗ್ ಅವರ ಪತ್ನಿ, ದಂಪತಿಯ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಚೀನಾದ ಸೋಷಿಯಲ್ ಮೀಡಿಯಾ ವೇದಿಕೆಯಾದ ವೀಚಾಟ್ನಲ್ಲಿ ಲಿ ವೆನ್ಲಿಯಾಂಗ್ ಅವರ ಪತ್ನಿ ಫೂ ಕ್ಸುಯೆಜಿ ಹೃದಯಸ್ಪರ್ಶಿ ಸುದ್ದಿ ಹಂಚಿಕೊಂಡಿದ್ದಾರೆ. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಲಿಚಿ ನ್ಯೂಸ್  2020 ಜೂನ್ 13ರ ಶನಿವಾರ ವರದಿ ಮಾಡಿತು. "ನೀವು ಅದನ್ನು ಸ್ವರ್ಗದಿಂದ ನೋಡಬಹುದೇ? ನೀವು ನನಗೆ ಕೊಟ್ಟ ಕೊನೆಯ ಉಡುಗೊರೆ ಇಂದು ಜನಿಸಿದೆ. ನಾನು ಖಂಡಿತವಾಗಿಯೂ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ಫೂ ಕ್ಸುಯೆಜಿ ಚೀನಾದ ಸಾಮಾಜಿಕ ಜಾಲತಾಣವಿಚಾಟ್ನಲ್ಲಿ ಬರೆದಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಜೊತೆಗೆ  ಫೂ ತನ್ನ ದಿವಂಗತ ಪತಿ ಲಿ ವೆನ್ಲಿಯಾಂಗ್ ಅವರ ಅಂತಿಮ ಉಡುಗೊರೆಯಾದ  ಗಂಡು ಮಗುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೊರೋನವೈರಸ್ ಬಗ್ಗೆ ಇತರ ವೈದ್ಯರಿಗೆ ಎಚ್ಚರಿಕೆ ನೀಡಿ, ಪೊಲೀಸರಿಂದ ಕಾನೂನು ಕ್ರಮಕ್ಕೆ ಒಳಗಾದ ಎಂಟು ಶಿಳ್ಳೆಗಾರರಲ್ಲಿ ಒಬ್ಬರಾದ ಲಿ, ವೈದ್ಯರಿಗೆ ಮಾತು ಸಾಂಕ್ರಾಮಿಕದ ಬಗ್ಗೆ ತಿಳಿಸಿದ ಒಂದು ವಾರದ ನಂತರ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದರು. ಕಳೆದ ವರ್ಷ ಡಿಸೆಂಬರಿನಲ್ಲಿ ಚೀನಾದ ಕೇಂದ್ರ ಹುಬೈ ಪ್ರಾಂತ್ಯದ ಪ್ರಾಂತೀಯ ರಾಜಧಾನಿ ವುಹಾನ್ನಲ್ಲಿ ವೈರಸ್ ಹರಡುತ್ತಿರುವ ಬಗ್ಗೆ ಅವರು ಮೊತ್ತ ಮೊದಲು ವರದಿ ಮಾಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ‘ಚೀನಾದೊಂದಿಗಿನ ಗಡಿಯಲ್ಲಿನ ಪರಿಸ್ಥಿತಿ ಸಂಪೂರ್ಣ ನಮ್ಮ ನಿಯಂತ್ರಣದಲ್ಲಿದೆ ಎಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ಗಡಿಯಲ್ಲಿನ ಪ್ರಕ್ಷುಬ್ಧತೆ ನಿವಾರಣೆಗೆ ಸಂಬಂಧಿಸಿದಂತೆ ಸೇನೆಯ ಕಮಾಂಡರ್ ಮಟ್ಟದ ಮಾತುಕತೆ ಸರಣಿಯು ಚಾಲನೆಯಲ್ಲಿದೆಎಂದು ಸೇನಾ ದಂಡನಾಯಕ ಜನರಲ್ ಮನೋಜ್ ಮುಕುಂದ್ ನರವಾಣೆ 2020 ಜೂನ್ 13ರ ಶನಿವಾರ ಹೇಳಿದರು. ಚೀನಾದೊಂದಿಗಿನ ಗಡಿ ವಿವಾದ ಮತ್ತು ಸಂಘರ್ಷದ ಪರಿಸ್ಥಿತಿಗೆ ಸಂಬಂಧಿಸಿದಂತೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ‘ಸದ್ಯದ ಮಾತುಕತೆಗಳ ಫಲವಾಗಿ ಗಡಿಯಲ್ಲಿನ ಸಂಘರ್ಷದ ವಾತಾವರಣ ಸಾಕಷ್ಟು ಕಡಿಮೆಯಾಗಿದೆ. ಮಾತುಕತೆಗಳು ಇನ್ನೂ ಮುಂದುವರೆದಿವೆ. ಇದರ ಮೂಲಕ ನಾವು (ಭಾರತ ಮತ್ತು ಚೀನಾ) ಎಲ್ಲ ವ್ಯತ್ಯಾಸಗಳನ್ನು ಕೊನೆಗಾಣಿಸಲಿದ್ದೇವೆ. ಸದ್ಯ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ,’ ಎಂದು ಅವರು ನುಡಿದರು.  ಪ್ಯಾಂಗೊಂಗ್ ತ್ಸೊ ಸರೋವರದ ಬಳಿ ಭಾರತ ನಿರ್ಮಿಸುತ್ತಿರುವ ಒಂದು ಸೇತುವೆ ಹಾಗೂ ಚೀನಾದ ಸೇನೆ ನಿರ್ಮಿಸಿರುವ ಒಂದು ಬಂಕರ್, ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಶಮನಗೊಳಿಸುವ ಮಾತುಕತೆಗೆ ಅಡ್ಡಿಯಾಗಿ ಪರಿಣಮಿಸಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನರವಾಣೆ ಹೇಳಿಕೆಯು ಪ್ರಾಮುಖ್ಯತೆ ಗಳಿಸಿದೆ. ಇದೇ ವೇಳೆಯಲ್ಲಿ ಅವರು ನೇಪಾಳದೊಂದಿಗಿನ ಗಡಿ ವಿವಾದದ ಕುರಿತೂ ಮಾತನಾಡಿದರು. ‘ನೇಪಾಳದೊಂದಿಗೆ ಭಾರತಕ್ಕೆ ಬಲವಾದ ಬಾಂಧವ್ಯವಿದೆ. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಎರಡೂ ದೇಶಗಳು ಪರಸ್ಪರ ಬೆಸೆದುಕೊಂಡಿವೆ. ಭಾರತ ಮತ್ತು ನೇಪಾಳದ ಜನರ ನಡುವೆ ಬಲವಾದ ಸಂಪರ್ಕಗಳಿವೆ. ಅವರೊಂದಿಗಿನ ನಮ್ಮ ಬಾಂಧವ್ಯ ಯಾವಾಗಲೂ ಸದೃಡ. ಭವಿಷ್ಯದಲ್ಲೂ ನಮ್ಮ ಸಂಬಂಧಗಳು ಸದೃಢವಾಗಿಯೇ ಉಳಿಯಲಿವೆ,’ ಎಂದು ನರವಾಣೆ ಪ್ರತಿಪಾದಿಸಿದರು.  (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿನ ಜಿಮ್ನಾಷಿಯಂ ಒಂದರಲ್ಲಿ ಭೂತ ಚೇಷ್ಟೆ ಕಂಡು ಬಂದಿದ್ದು, ಉಪಕರಣವೊಂದು ತಾನೇ ತಾನಾಗಿ ಅಲುಗಾಲುತ್ತಿದೆ ಎಂಬ ಸುದ್ದಿಯೊಂದು ನಗರವಾಸಿಗಳಲ್ಲಿ 2020 ಜೂನ್ 13ರ ಶನಿವಾರ ಕುತೂಹಲದ ಜೊತೆಗೆ ಭಯವನ್ನೂ ಹುಟ್ಟುಹಾಕಿತ್ತು. ಜಿಮ್ನಾಷಿಯಂನಲ್ಲಿ ಉಪಕರಣ ತಾನೇ ತಾನಾಗಿ ಅಲುಗಾಡುತ್ತಿದ್ದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲಿ ವೈರಲ್ ಆಗಿತ್ತು.  ಜಿಮ್ನಾಷಿಯಂನ ಉಪಕರಣ ತಾನೇ ತಾನಾಗಿ ಅಲುಗಾಡುತ್ತಿರುವ ಬಗೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲಿ ವೈರಲ್ ಆಗುತ್ತಿದ್ದಂತೆಯೇ ಝಾನ್ಸಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದರು. ತನಿಖೆಯ ಬಳಿಕ ಶೋಲ್ಡರ್ ಪ್ರೆಸ್ ಯಂತ್ರವು ಲೆಕ್ಕಕ್ಕಿಂತ ಹೆಚ್ಚು ಗ್ರೀಸ್ ಬಳಿದ ಪರಿಣಾಮವಾಗಿ ಕೆಲವು ಸೆಕೆಂಡ್ಗಳ ಕಾಲ ತಾನೇ ತಾನಾಗಿ ಅಲುಗಾಡುತ್ತಿದೆ ಎಂಬುದು ಬೆಳಕಿಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ. ‘ಯಾವ ಭೂತವೂ ಇಲ್ಲ, ಚೇಷ್ಟೆಯೂ ಇಲ್ಲ, ಇದೆಲ್ಲ ಬರೀ ಪುಕಾರುಎಂದು ಝಾನ್ಸಿ ಪೊಲೀಸರು ಬಳಿಕ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸೋಂಕು ದೃಢಪಟ್ಟ (ಕೋವಿಡ್-೧೯ ಪಾಸಿಟಿವ್) ರೋಗಿಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರವು 2020 ಜೂನ್ 13ರ ಶನಿವಾರ ಸಾಂಕ್ರಾಮಿಕ ಕೋವಿಡ್ -೧೯ ರೋಗದ ಎರಡು ಹೊಸ ಲಕ್ಷಣಗಳನ್ನು ರೋಗ ಲಕ್ಷಣಗಳ ಪಟ್ಟಿಗೆ ಸೇರಿಸಿದೆ. ವಾಸನೆಯ ನಷ್ಟ (ಅನೋಸ್ಮಿಯಾ) ಮತ್ತು ರುಚಿಯ ನಷ್ಟ (ಏಗುಸಿಯಾ) - ಇವೆರಡನ್ನು  ಕೇಂದ್ರ ಆರೋಗ್ಯ ಸಚಿವಾಲಯವು ಕೊರೋನವೈರಸ್ ರೋಗಲಕ್ಷಣಗಳ ಪಟ್ಟಿಗೆ ಸೇರಿಸಿದೆ. ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ, ಕಫ, ನೋಯುತ್ತಿರುವ ಗಂಟಲು ಮತ್ತು ಅತಿಸಾರ ರೋಗದ ಇತರ ಲಕ್ಷಣಗಳಾಗಿವೆ. ಕೋವಿಡ್ -೧೯ ಪರೀಕ್ಷೆಯ ಮೊದಲ ಮಾನದಂಡವನ್ನು ಜನವರಿ ೨೦೨೦ ರಲ್ಲಿ ನಿಗದಿಪಡಿಸಿದಾಗ, ಇದು ಜ್ವರ, ಕೆಮ್ಮು ಮತ್ತು ಉಸಿರಾಟದ ಲಕ್ಷಣಗಳನ್ನು ರೋಗಲಕ್ಷಣಗಳಾಗಿ ಒಳಗೊಂಡಿತ್ತು. ನಂತರ, ಮೇ ತಿಂಗಳಲ್ಲಿ ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳ ಏರಿಕೆಯೊಂದಿಗೆ, ಜಠರಗರುಳಿನ ಆರೋಗ್ಯ ಸಮಸ್ಯೆಗಳಾದ ಅತಿಸಾರ ಅಥವಾ ವಾಂತಿ ಕೂಡಾ ಪಟ್ಟಿಗೆ ಸೇರ್ಪಡೆಯಾಗಿತ್ತು. ಉಲ್ಲೇಖಿಸಲಾಗಿರುವ ಮಾದರಿ ರೋಗಲಕ್ಷಣಗಳ ಪಟ್ಟಿಯಲ್ಲಿ ಪ್ರಸ್ತುತ ೧೩ ಕ್ಲಿನಿಕಲ್ ಲಕ್ಷಣಗಳು ಮತ್ತು ಚಿಹ್ನೆಗಳು ಇವೆ, ಅದನ್ನು ಕಳೆದ ತಿಂಗಳು ಸಚಿವಾಲಯ ಪರಿಷ್ಕರಿಸಿತು. ಜ್ವರ, ಕೆಮ್ಮು, ಅತಿಸಾರ, ವಾಂತಿ, ಹೊಟ್ಟೆ ನೋವು, ಉಸಿರಾಟ, ವಾಕರಿಕೆ, ಹಿಮೋಪ್ಟಿಸಿಸ್ (ರಕ್ತದ ಕೆಮ್ಮು), ದೇಹದ ನೋವು, ನೋಯುತ್ತಿರುವ ಗಂಟಲು, ಎದೆ ನೋವು, ಮೂಗಿನ ವಿಸರ್ಜನೆ ಮತ್ತು ಕಫ- ಇವುಗಳಲ್ಲಿ ಒಂದು ಅಥವಾ ಹೆಚ್ಚಿನ ರೋಗಲಕ್ಷಣಗಳನ್ನು ಹೊಂದಿರುವ ಯಾವುದೇ ರೋಗಿಯನ್ನು ಕೋವಿಡ್ -೧೯ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಲಾಗಿದೆ.  ವಾಸನೆ ಮತ್ತು ರುಚಿಯ ನಷ್ಟವನ್ನು ಪಟ್ಟಿಗೆ ಸೇರಿಸುವುದರೊಂದಿಗೆ, ರೋಗಿಯು ಒಂದು ಅಥವಾ ಹೆಚ್ಚಿನ ೧೫ ರೋಗಲಕ್ಷಣಗಳ ಪರೀಕ್ಷೆಗೆ ಒಳಪಡಬೇಕಾಗುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಮುಂದಿನ ವಾರ ಎರಡುದಿನಗಳ ಕಾಲ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್-೧೯ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ಪ್ರತಿಕ್ರಿಯೆಯ ಪರಿಶೀಲನೆಗಾಗಿ 2020 ಜೂನ್ 13ರ ಶನಿವಾರ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಮಾಲೋಚನಾ ಸಭೆ ನಡೆಸಿದರು. ವಿವಿಧ ರಾಜ್ಯಗಳಲ್ಲಿನ ಪರಿಸ್ಥಿತಿ ಬಗೆಗೂ ಸಭೆ ಚರ್ಚಿಸಿತು. ಭಾರತವು ಮೂರು ಲಕ್ಷ ಪ್ರಕರಣಗಳ ಮೈಲಿಗಲ್ಲನ್ನು ಶುಕ್ರವಾರ ದಾಟಿದ್ದು, ಶನಿವಾರ ದೇಶದಲ್ಲಿನ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ ,೧೦,೭೬೦ಕ್ಕೆ ಏರಿದೆ. ಸಾವಿನ ಸಂಖ್ಯೆ ,೮೯೫ಕ್ಕೆ ಏರಿದ್ದು, ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ,೫೫,೨೯೦ಕ್ಕೆ ಏರಿದೆ. ಸಭೆಯು ರಾಷ್ಟ್ರೀಯ ಮಟ್ಟದ ಸ್ಥಿತಿಗತಿ ಮತ್ತು ಸಾಂಕ್ರಾಮಿಕ ಎದುರಿಸುವ ಬಗೆಗಿನ ಸಿದ್ಧತೆಗಳ ಬಗ್ಗೆ ಪರಿಶೀಲಿಸಿತು ಎಂದು ಪ್ರಧಾನಮಂತ್ರಿಗಳ ಕಚೇರಿಯು ಟ್ವೀಟ್ ಮಾಡಿತು. ದೆಹಲಿಯಲ್ಲಿ ಶುಕ್ರವಾರ ಒಂದೇ ದಿನ ,೧೩೭ ಪ್ರಕರಣಗಳು ವರದಿಯಾಗಿದ್ದು, ಹಿನ್ನೆಲೆಯಲ್ಲಿ ರಾಜಧಾನಿಯ ಹಾಲಿ ಹಾಗೂ ಭವಿಷ್ಯದ ಪರಿಸ್ಥಿತಿ ಬಗ್ಗೆ ಸಭೆ ಚರ್ಚಿಸಿತು ಮತ್ತು ಮುಂದಿನ ಎರಡು ತಿಂಗಳುಗಳ ಯೋಜನೆ ಬಗ್ಗೆ ಕೂಡಾ ಚಿಂತಿಸಿತು ಎಂದು ಪಿಎಂಒ ಹೇಳಿತು. ಒಟ್ಟು ಪ್ರಕರಣಗಳ ಪೈಕಿ ಮೂರನೇ ಎರಡರಷ್ಟು ಪ್ರಕರಣಗಳು ಐದು ರಾಜ್ಯಗಳಿಂದ ವರದಿಯಾಗಿದೆ, ಅದರಲ್ಲೂ ದೊಡ್ಡ ನಗರಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂಬುದನ್ನು ಸಭೆ ಗಮನಿಸಿತು. ದೊಡ್ಡ ನಗರಗಳ ಸವಾಲು ಎದುರಿಸಲು ಪರೀಕ್ಷೆ ಮತ್ತು ಹಾಸಿಗೆಗಳ ಸಂಖ್ಯೆ ಮತ್ತು ದೈನಂದಿನ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಸೇವೆಗಳನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಜೂನ್  13  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment