ಇಂದಿನ ಇತಿಹಾಸ History
Today
ಜೂನ್ 29
2020: ನವದೆಹಲಿ: ಆರು ರಫೇಲ್ ಯುದ್ಧ ವಿಮಾಣಗಳ ಮೊದಲ ಕಂತು ಜುಲೈ ೨೭ರ ಒಳಗಾಗಿ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಇವುಗಳು ಭಾರತೀಯ ವಾಯುಪಡೆಗಳ ಸಮರ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿವೆ. ರಫೇಲ್ ವಿಮಾನಗಳ ಮೊದಲ ಕಂತನ್ನು ಅಂಬಾಲ ವಾಯುನೆಲೆಯಲ್ಲಿ ನಿಲ್ಲಿಸಲಾಗುವುದು ಎಂದು 2020 ಜೂನ್ 29ರ ಸೋಮವಾರ ಸುದ್ದಿ ಮೂಲಗಳು ತಿಳಿಸಿದವು. ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದ ಬಳಿಕ ಚೀನಾದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಭಾರತೀಯ ವಾಯುಪಡೆ ತೀವ್ರ ಎಚ್ಚರಿಕೆ ವಹಿಸಿದೆ. ಘರ್ಷಣೆಯಲಿ ೨೦ ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಉಭಯ ಸೇನೆಗಳೂ ಏಳು ವಾರಗಳಿಂದ ತೀವ್ರ ಗಡಿ ಬಿಕ್ಕಟ್ಟು ಎದುರಿಸುತ್ತಿವೆ. ಜೂನ್ ೨ ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಈ ಸಂದರ್ಭದಲ್ಲಿ ಫ್ರಾನ್ಸ್ನ ಕೊರೋನವೈರಸ್ ಸಾಂಕ್ರಾಮಿಕದ ಹೊರತಾಗಿಯೂ ರಫೇಲ್ ಜೆಟ್ಗಳನ್ನು ಭಾರತಕ್ಕೆ ತಲುಪಿಸಲಾಗುವುದು ಎಂದು ಫ್ಲಾರೆನ್ಸ್ ತಿಳಿಸಿದರು. ರಫೇಲ್ ಜೆಟ್ಗಳ ಆಗಮನದಿಂದ ಭಾರತೀಯ ವಾಯುಪಡೆಯ ಒಟ್ಟಾರೆ ಸಮರ ಸಾಮರ್ಥ್ಯ ಗಮನಾರ್ಹವಾಗಿ ಹೆಚ್ಚುತ್ತದೆ ಮತ್ತು ಭಾರತದ "ವಿರೋಧಿಗಳಿಗೆ" ಸ್ಪಷ್ಟ ಸಂದೇಶದ ರವಾನೆಯಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಬೀಜಿಂಗ್: ನವದೆಹಲಿಯಿಂದ ಗುವಾಂಗ್ಝೊವು ನಗರಕ್ಕೆ 2020 ಜೂನ್ 29ರ ಸೋಮವಾರ ಮುಂಜಾನೆ ಹೊರಟ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ರಾಜತಾಂತ್ರಿಕರ ಕುಟುಂಬಗಳು ಸೇರಿದಂತೆ ಹಲವಾರು ಭಾರತೀಯರಿಗೆ ಪಯಣಿಸಲು ಚೀನಾ ಅನುಮತಿ ನಿರಾಕರಿಸಿತು. ಶಾಂಘೈನಿಂದ ಹೊರತು ಜೂನ್ ೨೧ ರಂದು ಬಂದಿಳಿದ ವಿಶೇಷ ವಿಮಾನದಲ್ಲಿ ಇಬ್ಬರು ಭಾರತೀಯರಿಗೆ ಕೊರೋನಾ ಸೋಂಕು ತಟ್ಟಿತ್ತು ಎಂಬ ಕಾರಣಕ್ಕಾಗಿ ಚೀನಾ ಈ ಕ್ರಮ ಕೈಗೊಂಡಿತು. ಇಬ್ಬರು ಭಾರತೀಯರಿಗೆ ಕೋವಿಡ್-೧೯ ಸೋಂಕು ತಗುಲಿದ್ದು ಖಚಿತವಾದ ಬಳಿಕ, ಚೀನೀ ಅಧಿಕಾರಿಗಳು ಭಾರತದಿಂದ ಖಾಲಿ ವಿಮಾನ ಹಾರಾಟಕ್ಕೆ ಮಾತ್ರ ಅನುಮತಿ ನೀಡಿದರು, ಮತ್ತು ದಕ್ಷಿಣದ ಗುವಾಂಗ್ ಝೊವು ನಗರದಲ್ಲಿ ಇಳಿಯಬೇಕಿದ್ದ ಭಾರತೀಯರನ್ನು ವಾಪಾಸು ಕಳುಹಿಸಿದರು. ವಿದೇಶದಲ್ಲಿ ಸಿಲುಕಿರುವ ದೇಶದ ನಾಗರಿಕರ ವಾಪಸಾತಿ ಯೋಜನೆಯಾದ ವಂದೇ ಭಾರತ್ ಮಿಷನ್ನ ಮೂರನೇ ಹಂತದ ಅಡಿಯಲ್ಲಿ ಭಾರತದಿಂದ ವಿಶೇಷ ವಿಮಾನವು ಇಂದು ಮಧ್ಯಾಹ್ನ ೮೬ ಭಾರತೀಯರೊಂದಿಗೆ ಗುವಾಂಗ್ ಝೊವುಗೆ ಹೊರಟಿತ್ತು. ೧೮೬ ಮಂದಿ ಹಿಂದಿರುಗಿದ ಜೂನ್ ೨೧ರ ವಿಮಾನವು ಶಾಂಘೈ ವಾಪಸಾತಿ ಕಾರ್ಯಾಚರಣೆಯ ಭಾಗವಾಗಿತ್ತು. ವಿಶೇಷ ವಿಮಾನಯಾನಗಳಲ್ಲಿ ಮತ್ತು ರಾಜತಾಂತ್ರಿಕ ಪಾಸ್ಪೋರ್ಟ್ಗಳಲ್ಲಿ ಸಹ ಭಾರತೀಯರಿಗೆ ಅನುಮತಿ ನೀಡದೇ ಇರುವ ಚೀನಾದ ನಿರ್ಧಾರವು, ಉಭಯ ದೇಶಗಳ ನಡುವಿನ ವಾಣಿಜ್ಯ ವಿಮಾನಗಳು ಶೀಘ್ರದಲ್ಲೇ ಪುನಾರಂಭಗೊಳ್ಳುವ ಸಾಧ್ಯತೆಯಿಲ್ಲ ಎಂಬುದರ ಸೂಚನೆಯಾಗಿದೆ. ಭಾರತೀಯ ರಾಜತಾಂತ್ರಿಕರ ಕುಟುಂಬಗಳಿಗೆ ವಿಮಾನವನ್ನು ಚೀನಾಕ್ಕೆ ಕರೆದೊಯ್ಯಲು ಅನುಮತಿ ನೀಡದೇ ಇರುವ ನಿರ್ಧಾರದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಪತ್ರಿಕಾಸಂಸ್ಥೆಯೊಂದು ಚೀನಾದ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿತ್ತು. ಹಾಲಿ ಗಡಿ ಉದ್ವಿಗ್ನತೆಗೂ ಈ ನಿರ್ದಾರಕ್ಕೂ ಸಂಬಂಧವಿದೆಯೇ ಎಂದು ಪತ್ರಿಕಾ ಸಂಸ್ಥೆಯು ಪ್ರಶ್ನಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ/ ಮುಂಬೈ: ದೇಶದಲ್ಲಿ ೧೬,೪೭೫ ಏಕದಿನ ಸಾವುನೋವುಗಳೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ 2020 ಜೂನ್ 29ರ ಸೋಮವಾರ ೫,೪೮,೩೧೮ಕ್ಕೆ ಏರಿತು. ಸೋಮವಾರ ಒಂದೇ ದಿನದಲ್ಲಿ ೩೮೦ ಹೊಸ ಸಾವುಗಳು ವರದಿಯಾಗಿದ್ದು, ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ಅನುಸರಿಸಿ ಮಹಾರಾಷ್ಟ್ರ ಸರ್ಕಾರವು ದಿಗ್ಬಂಧನವನ್ನು (ಲಾಕ್ ಡೌನ್) ಜುಲೈ ೩೧ರವರೆಗೆ ವಿಸ್ತರಿಸಿತು. ಕೊರೋನವೈರಸ್ ಸೋಂಕು ದೇಶದಲ್ಲಿ ಸತತ ಆರನೇ ದಿನ ೧೫,೦೦೦ಕ್ಕಿಂತ ಹೆಚ್ಚಾಗಿದೆ. ದೇಶವು ಜೂನ್ ೧ ರಿಂದ ಇಲ್ಲಿಯವರೆಗೆ ೩,೫೭,೭೮೩ ಸೋಂಕುಗಳ ಉಲ್ಬಣವನ್ನು ಕಂಡಿದೆ. ದೇಶದಲ್ಲಿ ಈವರೆಗೆ ಒಟ್ಟು ೫,೪೮,೩೧೮ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಮೃತರ ಸಂಖ್ಯೆಯು ೧೬,೪೭೫ಕ್ಕೆ ಏರಿಕೆಯಾಯಿತು. ದಿನದಿಂದ ದಿನಕ್ಕೆ ಕೋವಿಡ್-೧೯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದಾದ್ಯಂತ ಕಳೆದ ೨೪ ಗಂಟೆಗಳಲ್ಲಿ ೧೯,೪೫೯ ಹೊಸ ಕೋವಿಡ್ -೧೯ ಪ್ರಕರಣಗಳು ದೃಢಪಟ್ಟಿದ್ದು, ೩೮೦ ಜನರು ಮೃತರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿತು. ಸದ್ಯ ೨,೧೦,೧೨೦ ಪ್ರಕರಣಗಳು ಸಕ್ರಿಯವಾಗಿದ್ದು, ೩,೨೧,೭೨೩ ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. "ಹೀಗಾಗಿ, ಇದುವರೆಗೆ ಸುಮಾರು ೫೮.೬೭ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋರ್ ಕಮಾಂಡರ್ಗಳ ನೇತೃತ್ವದಲ್ಲಿ ಭಾರತ ಮತ್ತು ಚೀನೀ ಸೇನಾ ನಿಯೋಗಗಳು ನೈಜ ನಿಯಂತ್ರಣ ರೇಖೆಯ (ಎಲ್ ಎಸಿ) ಉಭಯ ಕಡೆಗಳಲ್ಲೂ ಉದ್ವಿಗ್ನತೆ ಶಮನ ಮತ್ತು ಸೇನಾ ಬಲ ಇಳಿಕೆಯ ಸಲುವಾಗಿ 2020 ಜೂನ್ 30ರ ಮಂಗಳವಾರ ಲಡಾಖ್ನ ಚುಶುಲ್ನಲ್ಲಿ ಮಾತುಕತೆ ನಡೆಸಲಿವೆ ಎಂದು ಸುದ್ದಿ ಮೂಲಗಳು 2020 ಜೂನ್ 29ರ ಸೋಮವಾರ ತಿಳಿಸಿದವು. ಹಿರಿಯ ಸೇನಾ ಅಧಿಕಾರಿಗಳ ನೇತೃತ್ವದ ನಿಯೋಗಗಳು ಮೇ ಆದಿಯಲ್ಲಿ ಉಭಯ ಪರಮಾಣು ಸಜ್ಜಿತ ರಾಷ್ಟ್ರಗಳ ಮಧ್ಯೆ ಗಡಿ ಬಿಕ್ಕಟ್ಟು ಉದ್ಭವಿಸಿದ ಬಳಿಕ ಮೂರನೇ ಸುತ್ತಿನ ಮಾತುಕತೆ ನಡೆಸಲಿವೆ. ಭಾರತದ ೨೦ ಮಂದಿ ಯೋಧರು ಹುತಾತ್ಮರಾದ ಹಿಂಸಾತ್ಮಕ ಗಲ್ವಾನ್ ಕಣಿವೆ ಘರ್ಷಣೆ ನಡೆದ ಸರಿಯಾಗಿ ಒಂದು ವಾರದ ಬಳಿಕ ಜೂನ್ ೨೨ರಂದು ಸೇನಾ ಅಧಿಕಾರಿಗಳ ಮಟ್ಟದ ಹಿಂದಿನ ಸಭೆ ನಡೆದಿತ್ತು. ಲೆಹ್ ಮೂಲದ ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ದಕ್ಷಿಣ ಕ್ಷಿನ್ಜಿಯಾಂಗ್ ಸೇನಾ ಪ್ರದೇಶದ ಪಿಎಲ್ ಎ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ನೇತೃತ್ವದ ನಿಯೋಗ ಮಟ್ಟದ ಮಾತುಕತೆಗಳಲ್ಲಿ ಎಲ್ಎಸಿಯಾದ್ಯಂತ ಘರ್ಷಣಾ ಸ್ಥಳಗಳಿಂದ ಸೇನೆ ವಾಪಸ್ ಮಾಡುವ ಬಗ್ಗೆ ಸಹಮತಕ್ಕೆ ಬರಲಾಗಿತ್ತು. ಆದಾಗ್ಯೂ, ಚೀನಾವು ಗಲ್ವಾನ್ ಕಣಿವೆ, ಡೆಸ್ಪಾಂಗ್ ಬಯಲು ಪ್ರದೇಶ ಮತ್ತು ಪ್ಯಾಂಗೊಂಗ್ ತ್ಸೊ ಸಮೀಪದ ಫಿಂಗರ್ ಪ್ರದೇಶದಲ್ಲಿ ತನ್ನ ಸೇನಾ ಚಟುವಟಿಕೆಯನ್ನು ಸ್ಥಗಿತಗೊಳಿಸಲಿಲ್ಲ. ಉಭಯ ಸೇನೆಗಳ ಹಿರಿಯ ಅಧಿಕಾರಿಗಳು ಮೊತ್ತ ಮೊದಲಿಗೆ ಜೂನ್ ೬ರಂದು ಮಾತುಕತೆ ನಡೆಸಿದ್ದರು. ಚೀನೀ ಪಡೆಗಳು ಹಲವಾರು ಘರ್ಷಣಾ ಸ್ಥಳಗಳಿಂದ ಹಿಂದಕ್ಕೆ ಹೋಗಬೇಕು ಎಂಬ ಬೇಡಿಕೆಯನ್ನು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಯಥಾಸ್ಥಿತಿ ಪು:ಸ್ಥಾಪನೆಯಾಗಬೇಕು ಎಂಬುದಾಗಿ ಮಂಗಳವಾರದ ಸಭೆಯಲ್ಲಿ ಭಾರತವು ಒತ್ತಿ ಹೇಳುವ ನಿರೀಕ್ಷೆಯಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment