ನಾನು ಮೆಚ್ಚಿದ ವಾಟ್ಸಪ್

Thursday, June 20, 2019

ಇಂದಿನ ಇತಿಹಾಸ History Today ಜೂನ್ 20

ಇಂದಿನ ಇತಿಹಾಸ History Today ಜೂನ್ 20
2019: ಒಸಾಕ (ಜಪಾನ್): ಪ್ರಧಾನಿ ನರೇಂದ್ರ ಮೋದಿ ಅವರು ಜಿ-೨೦ ಶೃಂಗಸಭೆಗೆ ಮುನ್ನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಇರಾನ್, ೫ಜಿ ಸಂಪರ್ಕ ಜಾಲ, ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಇಲ್ಲಿ ಮಾತುಕತೆ ನಡೆಸಿದರುಇತ್ತೀಚೆಗೆ ಬರೆದ ಪತ್ರವೊಂದರಲ್ಲಿ ಭಾರತದ ಬಗ್ಗೆ ತಮ್ಮ ಪ್ರೀತಿ ವ್ಯಕ್ತ ಪಡಿಸಿದ್ದಕ್ಕಾಗಿ ಟ್ರಂಪ್ ಅವರಿಗೆ ಮೋದಿ ಧನ್ಯವಾದ ಸಲ್ಲಿಸಿದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪೆಯೋ ಮೂಲಕ ಟ್ರಂಪ್ ಅವರು ಪತ್ರವನ್ನು ಮೋದಿ ಅವರಿಗೆ ಕಳುಹಿಸಿದ್ದರು.
ಇರಾನ್, ೫ಜಿ ಸಂಪರ್ಕ ಜಾಲ, ದ್ವಿಪಕ್ಷೀಯ ಬಾಂಧ್ಯವ್ಯಗಳು ಮತ್ತು ರಕ್ಷಣಾ ಬಾಂಧವ್ಯಗಳ ಬಗ್ಗೆ ಟ್ರಂಪ್ ಜೊತೆಗೆ ಮಾತುಕತೆ ನಡೆಸಲು ತಾವು ಬಯಸುವುದಾಗಿ ಪ್ರಧಾನಿ ಮೋದಿ ಅವರು ಮಾತುಕತೆಗೆ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದರು.  ಟೆಹರಾನ್ ಮತ್ತು ಜಾಗತಿಕ ಶಕ್ತಿ ರಾಷ್ಟ್ರಗಳ ಜೊತೆಗಿನ ೨೦೧೫ರ ಪರಮಾಣು ಒಪ್ಪಂದದಿಂದ ಹೊರಬಂದ ಬಳಿಕ ನವೆಂಬರಿನಲ್ಲಿ ಅಮೆರಿಕವು ಇರಾನ್ ವಿರುದ್ಧ ದಿಗ್ಬಂಧನಗಳನ್ನು ಮರುಜಾರಿಗೊಳಿಸಿತ್ತು. ಇರಾನಿನ ಕಚ್ಛಾ ತೈಲ ಆಮದನ್ನು ಶೂನ್ಯಗೊಳಿಸುವ ಅಮೆರಿಕದ ಗಡುವು ಮೇ ೨ಕ್ಕೆ ಅಂತ್ಯಗೊಂಡಿತ್ತು. ಭಾರತ ಸೇರಿದಂತೆ ಇರಾನಿ ತೈಲ ಖರೀದಿದಾರರಿಗೆ ಅಮೆರಿಕ ನೀಡಿದ್ದ ಮನ್ನಾ ಮುಂದಿನ ತಿಂಗಳುಗಳವರೆಗೆ ಮಾತ್ರ ಮುಂದುವರೆಯುತ್ತದೆ. ಅಮೆರಿಕದ ದಿಗ್ಬಂಧನಕ್ಕೆ ಬದ್ಧತೆ ವ್ಯಕ್ತ ಪಡಿಸಿದ್ದ ಭಾರತ ಇರಾನಿನಿಂದ ತನ್ನ ಎಲ್ಲ ತೈಲ ಆಮದನ್ನು ರದ್ದು ಪಡಿಸಿತ್ತು. ಟ್ರಂಪ್ ಅವರು ಪ್ರಧಾನಿ ಮೋದಿ ಅವರನ್ನು ಇತ್ತೀಚಿನ ಚುನಾವಣಾ ವಿಜಯಕ್ಕಾಗಿ ಅಭಿನಂದಿಸಿದರು ಮತ್ತು ಉಭಯ ರಾಷ್ಟ್ರಗಳು ಸೇನಾ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಲಿವೆ ಎಂದು ಹೇಳಿದರು.  ‘ಇದು ದೊಡ್ಡ ವಿಜಯ. ನೀವು ಅದಕ್ಕೆ ಅರ್ಹರಾಗಿದ್ದೀರಿ. ನೀವು ಮಹಾನ್ ಕೆಲಸ ಮಾಡಿದ್ದೀರಿ. ದೊಡ್ಡ ವಿಷಯಗಳನ್ನು ನಾವು ಪ್ರಕಟಿಸಿದ್ದೇವೆ. ವ್ಯಾಪಾರ, ಉತ್ಪಾದನೆ, ಜಿ ಜಾಲ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನಾವು ಮಾತುಕತೆ ನಡೆಸಲಿದ್ದೇವೆ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ  ಮತ್ತು ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಟ್ರಂಪ್ ಮಾತುಕತೆಗೆ ಮುನ್ನ ಹೇಳಿದರು.  ‘ನಾವು ಮಹಾನ್ ಮಿತ್ರರಾಗಿದ್ದೇವೆ ಮತ್ತು ನಮ್ಮ ರಾಷ್ಟ್ರಗಳು  ಹಿಂದೆಂದಿಗಿಂತಲೂ ಹೆಚ್ಚು ಆಪ್ತವಾಗಿವೆ. ನಾನು ಇದನ್ನು ಖಚಿತವಾಗಿ ಹೇಳಬಲ್ಲೆ. ಸೇನಾ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ನಾವು ಜೊತೆಯಾಗಿ ಕೆಲಸ ಮಾಡಲಿದ್ದೇವೆ.  ವ್ಯಾಪಾರದ ಬಗ್ಗೆ ನಾವು ಈದಿನ ಚರ್ಚಿಸುತ್ತೇವೆ ಎಂದು ಟ್ರಂಪ್ ತಿಳಿಸಿದ್ದರು. ಇರಾನ್ ವಿಷಯಕ್ಕೆ ಸಂಬಂಧಿಸಿದಂತೆನಮಗೆ ಬೇಕಾದಷ್ಟು ಸಮಯವಿದೆ. ಅವಸರ ಏನಿಲ್ಲ. ಅವರು ತಮ್ಮದೇ ಕಾಲಾವಕಾಶವನ್ನು ತೆಗೆದುಕೊಳ್ಳಬಹುದು. ಸಮಯದ ಒತ್ತಡ ಖಂಡಿತವಾಗಿ ಇಲ್ಲ ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದರು. ಒಸಾಕದಲ್ಲಿ ಜಿ-೨೦ ಶೃಂಗಸಭೆಯ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ವಿವಿಧ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಎಂದು ಪ್ರಧಾನ ಮಂತ್ರಿಯವರ ಕಚೇರಿಯು ಮಾತುಕತೆಯ ಬಳಿಕ ಟ್ವೀಟ್ ಮಾಡಿತು.  ತ್ರಿಪಕ್ಷೀಯ ಮಾತುಕತೆ: ಜಪಾನ್-ಅಮೆರಿಕ-ಭಾರತ ತ್ರಿಪಕ್ಷೀಯ ಸಭೆ ನಡೆಸಿದ ಸ್ವಲ್ಪ ಹೊತ್ತಿನ ಬಳಿಕ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಮಾತುಕತೆ ನಡೆಸಿದರು. ತ್ರಿಪಕ್ಷೀಯ ಮಾತುಕತೆಯಲ್ಲಿ ಗುಂಪುರಚನೆಯ ಮಹತ್ವವನ್ನು ಮೋದಿ ಒತ್ತಿ ಹೇಳಿದರು. ಅಮೆರಿಕದ ಅಧ್ಯಕ್ಷರುಅಮೆರಿಕ ಮೊದಲು ನೀತಿಯನ್ನು ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ - ಟ್ರಂಪ್ ಮಾತುಕತೆ ಹೆಚ್ಚಿನ ಮಹತ್ವ ಪಡೆದಿದೆ. ’ಅಮೆರಿಕ ಮೊದಲು ನೀತಿಯನ್ನು ಪ್ರತಿಪಾದಿಸುತ್ತಿರುವ ಟ್ರಂಪ್ ಅವರು ಅಮೆರಿಕದ ಉತ್ಪನ್ನಗಳ ಮೇಲೆ ಭಾರತವು ವಿಧಿಸುತ್ತಿರುವ ಅತಿಯಾದ ಸುಂಕವನ್ನು ಕಟುವಾಗಿ ಟೀಕಿಸುತ್ತಿದ್ದಾರೆ.  ಜಪಾನಿಗೆ ಬರುವ ಮುನ್ನ ಟ್ರಂಪ್ ಅವರುಪ್ರಧಾನಿ (ನರೇಂದ್ರ) ಮೋದಿ ಅವರ ಜೊತೆಗಿನ ಮಾತುಕತೆಯನ್ನು ನಾನು ಎದುರು ನೋಡುತ್ತಿದ್ದೇನೆ. ಹಲವಾರು ವರ್ಷಗಳಿಂದ ಭಾರತವು ಅಮೆರಿಕದ ವಿರುದ್ಧ ಅತಿಯಾದ ಸುಂPಗಳನ್ನು ವಿಧಿಸುತ್ತಿದೆ. ಇತ್ತೀಚೆಗೆ ಅದು ಸುಂಕಗಳನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಅತಿಯಾದ ಸುಂಕಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು. ಸಂಸದೀಯ ಚುನಾವಣೆಯಲ್ಲಿ ಬಿಜೆಪಿಯು ಪ್ರಚಂಡ ವಿಜಯಗಳಿಸಿ ಅಧಿಕಾರಕ್ಕೆ ಮರಳಿ ಬಂದ ಬಳಿಕ ಟ್ರಂಪ್ ಅವರ ಜೊತೆಗೆ ಮೋದಿ ಅವರ ಮೊದಲ ಭೇಟಿ ಇದಾಗಿದೆಅಮೆರಿಕವು ಭಾರತೀಯ ಉತ್ಪನ್ನಗಳಿಗೆ ನೀಡಲಾಗಿದ್ದ ಆದ್ಯತೆಯನ್ನು ಹಿಂತೆಗೆದುಕೊಂಡದ್ದಕ್ಕೆ ಪ್ರತಿಯಾಗಿ ಭಾರತವು ಬಾದಾಮಿ, ದ್ವಿದಳ ಧಾನ್ಯಗಳು, ಆಕ್ರೋಡು (ವಾಲ್ನಟ್) ಸೇರಿದಂತೆ ಅಮೆರಿಕದಿಂದ ಆಮದಾಗುವ ೨೮ ಉತ್ಪನ್ನಗಳ ಮೇಲೆ ಸುಂಕಗಳನ್ನು ಇತ್ತೀಚೆಗೆ ಏರಿಸಿತ್ತು.  ಪ್ರಧಾನಿ ಮೋದಿ ಅವರು ವ್ಯಾಪಾರದ ಅಡಚಣೆಗಳನ್ನು ತಗ್ಗಿಸಬೇಕು ಮತ್ತು ನ್ಯಾಯೋಚಿತ ಹಾಗೂ ಸ್ಪಂದನಶೀಲ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಟ್ರಂಪ್ ಆಡಳಿತ ಬಯಸುತ್ತಿದೆ. ಭಾರತವು ಐಕಾನಿಕ್ ಹಾರ್ಲೇ ಡೇವಿಡ್ಸನ್ ಮೋಟಾರ್ ಸೈಕಲ್ಗಳ ಮೇಲೆ ಅತಿಯಾದ ಸುಂಕ ವಿಧಿಸಿದ್ದನ್ನೂ ಟ್ರಂಪ್ ಅವರು ಟೀಕಿಸಿದ್ದರು ಮತ್ತು ಇದು ಸ್ವೀಕಾರಾರ್ಹ ಅಲ್ಲ ಎಂದು ಪ್ರಧಾನಿ ಮೋದಿ ಅವರು ತಮ್ಮ  ಅತ್ಯುತ್ತಮ ಗೆಳೆಯ ಎಂಬುದಾಗಿ ಹೇಳುತ್ತಲೇ ದೃಢ ಪಡಿಸಿದ್ದರು. ಪ್ರಧಾನಿ ಮೋದಿ ಅವರು ಸುಂಕವನ್ನು ಶೇಕಡಾ ೧೦೦ರಿಂದ ಶೇಕಡಾ ೫೦ಕ್ಕೆ ಇಳಿಸಿದ್ದನ್ನು ಅವರು ಬಳಿಕ ಮೆಚ್ಚಿದ್ದರು. ಕಳೆದ ಫೆಬ್ರುವರಿಯಲ್ಲಿ ಭಾರತ ವಿಧಿಸುತ್ತಿರುವ ಸುಂಕವನ್ನು ನ್ಯಾಯೋಚಿತವಲ್ಲ ಎಂಬುದಾಗಿ ಟೀಕಿಸಿದ್ದ ಟ್ರಂಪ್ ಅವರು ಅಮೆರಿಕಕ್ಕೆ ಆಮದಾಗುವ ಭಾರತೀಯ ಬೈಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವುದಾಗಿ ಬೆದರಿಕೆ ಹಾಕಿದ ಬಳಿಕ ಭಾರತವು ಹಾರ್ಲೆ ಡೇವಿಡ್ಸನ್ ಸೇರಿದಂತೆ ಹಲವಾರು ಆಮದು ಮೋಟಾರುಸೈಕಲ್ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ ೫೦ರಷ್ಟು ಇಳಿಸಿತ್ತು.
ಕೆಲವೊಂದು ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಅಮೆರಿಕವು ಗಮನಾರ್ಹವಾಗಿ ಹೆಚ್ಚಿಸಿದ್ದಕ್ಕೆ ಪ್ರತಿಯಾಗಿ ಭಾರತ ಸರ್ಕಾರವು ಕಳೆದ ವರ್ಷ ಜೂನ್ ೨೧ರಂದು ಸುಂಕಗಳನ್ನು ವಿಧಿಸಲು ನಿರ್ಧರಿಸಿತ್ತು. ಅಮೆರಿಕವು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಉಕ್ಕಿನ ಮೇಲೆ ಶೇಕಡಾ ೨೫ರಷ್ಟು ಸುಂಕವನ್ನೂ ಮತ್ತು ಅಲ್ಯೂಮಿನಿಯಂ ಮೇಲೆ ಶೇಕಡಾ ೧೦ರಷ್ಟು ಆಮದು ಸುಂಕವನ್ನೂ ವಿಧಿಸಿತ್ತು.

2019: ನವದೆಹಲಿ: ಭಾರತೀಯ ನೌಕಾಪಡೆಗಾಗಿ ಅತ್ಯಾಧುನಿಕ ಡೀಸೆಲ್ -ಎಲೆಕ್ಟ್ರಿಕ್ ಜಲಾಂತರ್ಗಾಮಿಗಳ ಎರಡನೇ ಹಂತದ ಉತ್ಪಾದನೆಗೆ ಕೇಂದ್ರವು ಮಹತ್ವದ ಹೆಜ್ಜೆ ಇಟ್ಟಿದ್ದು, ೭೫- ಯೋಜನೆಯ ಭಾಗವಾಗಿ ೪೫,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಜಲಾಂತರ್ಗಾಮಿಗಳನ್ನು ಮೇಕ್-ಇನ್-ಇಂಡಿಯಾ ಅಡಿಯಲ್ಲಿ ನಿರ್ಮಿಲು ದವು. ಮುಂಚೂಣಿಯ ಅಂತಾರಾಷ್ಟ್ರೀಯ ಜಲಾಂತರ್ಗಾಮಿ ತಯಾರಕರು ಭಾರತದಲ್ಲೇ ಜಲಾಂತರ್ಗಾಮಿ ನಿರ್ಮಾಣದ ಯೋಜನೆಯಲ್ಲಿ ಆಸಕ್ತಿ ವಹಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.  ‘ಯೋಜನೆಯು ಭಾರತದಲ್ಲಿ ದೇಶೀ ವಿನ್ಯಾಸದ ಜಲಾಂತರ್ಗಾಮಿ ನಿರ್ಮಾಣಕ್ಕೆ ಭಾರೀ ಒತ್ತು ನೀಡಲಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿತು. ಯೋಜನೆ ಸಫಲಗೊಂಡಲ್ಲಿ ಭಾರತವು ಜಲಾಂತರ್ಗಾಮಿ ವಿನ್ಯಾಸ ಮತ್ತು ಉತ್ಪಾದನೆಗೆ ಜಾಗತಿಕ ಕೇಂದ್ರವಾಗಲಿದೆ. ಭಾರತೀಯ ನೌಕಾಪಡೆಯು ಭವಿಷ್ಯಕ್ಕಾಗಿ ಇನ್ನೂ ಆರು ಜಲಾಂತರ್ಗಾಮಿಗಳಿಗಾಗಿ ಒಕ್ಕೂಟಕ್ಕೆ ಆರ್ಡರ್ ಮಾಡುವ ಆಯ್ಕೆಯನ್ನೂ ಮುಕ್ತವಾಗಿ ಇರಿಸಿಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿತು. ಈ ಮಹಾ ಯೋಜನೆಯಲ್ಲಿ ಆಸಕ್ತಿ ವ್ಯಕ್ತ ಪಡಿಸಿರುವ ಭಾರತೀಯ ಕಂಪೆನಿಗಳು ಕುರಿತ ಗುರುವಾರದ ಪ್ರಕಟಣೆಗೆಎರಡು ತಿಂಗಳುಗಳ ಒಳಗೆ ಸ್ಪಂದಿಸುವ ನಿರೀಕ್ಷೆ ಇದೆ. ’ಭಾರತೀಯ ಕಂಪೆನಿಗಳನ್ನು ಅವುಗಳ ಸಾಮರ್ಥ್ಯ, ತಜ್ಞರು, ವ್ಯವಸ್ಥೆಗಳು ಮತ್ತು ಆರ್ಥಿಕ ಶಕ್ತಿಗೆ ಅನುಗುಣವಾಗಿ ಪಟ್ಟಿ ಮಾಡಲಾಗುವುದು ಎಂದು ಸರ್ಕಾರ ತಿಳಿಸಿತು. ಕಂಪೆನಿಗಳು ಯೋಜನೆಯಲ್ಲಿ ಆಸಕ್ತಿ ವ್ಯಕ್ತ ಪಡಿಸಿದ ಬಳಿಕ, ಸರ್ಕಾರವು ತನ್ನ ಬೆಲೆ ಕೋರಿಕೆ ಹಂತದತ್ತ ಚಲಿಸುವುದು ಮತ್ತು ವಾಣಿಜ್ಯಾತ್ಮಕ ಬಿಡ್ಗಳ ಪರಿಶೀಲನೆ ನಡೆಸುವುದು. ಪರಿಶೀಲನೆಯ ಬಳಿಕ ಕಡಿಮೆ ದರ ವಿಧಿಸುವ ಕಂಪೆನಿಗಳ ಪಟ್ಟಿಯನ್ನು ತಯಾರಿಸಿ ಸ್ಪರ್ಧೆಯಲ್ಲಿ ಗೆದ್ದವರ ಹೆಸರುಗಳನ್ನು ಪ್ರಕಟಿಸಲಾಗುವುದು. ಭಾರತೀಯ ಕಂಪೆನಿಯು ವಿದೇಶೀ ಪಾಲುದಾರನೊಂದಿಗೆ ದೇಶದಲ್ಲಿ ಜಲಾಂತರ್ಗಾಮಿ ನಿರ್ಮಿಸುವ ಜಂಟಿ ಸಾಹಸದ ಪ್ರಕ್ರಿಯೆ ಬಳಿಕ ಆರಂಭವಾಗಲಿದೆ. ಏನಿದ್ದರೂ, ಯೋಜನೆ ೭೫- ಅಡಿಯಲ್ಲಿ ನಿರ್ಮಾಣಗೊಳ್ಳುವ ಭಾರತದ ಮೊದಲ ಜಲಾಂತರ್ಗಾಮಿಯ ಕಾರ್ಯಾರಂಭ ಮುಂದಿನ ಐದು ವರ್ಷಗಳ ಒಳಗಾಗಿ ಆಗುವ ಸಾಧ್ಯತೆಗಳು ಕಡಿಮೆ ಎನ್ನಲಾಯಿತು. ಕಾರ್ಗಿಲ್ ಸಮರದ ಬಳಿಕ, ಭದ್ರತೆಗೆ ಸಂಬಂಧಿಸಿದ ಸಂಪುಟ ಉಪ ಸಮಿತಿಯು ೩೦ ವರ್ಷಗಳ ಜಲಾಂತರ್ಗಾಮಿ ನಿರ್ಮಾಣದ ಎರಡು ಹಂತಗಳ ಯೋಜನೆಗೆ ಅನುಮೋದನೆ ನೀಡಿತ್ತು. ಇವುಗಳನ್ನು ಭಾರತದಲ್ಲೇ ನಿರ್ಮಿಸಬೇಕು ಎಂದು ಸೂಚಿಸಲಾಗಿತ್ತು. ಜಲಾಂತರ್ಗಾಮಿಗಳಲ್ಲಿ ಸಾಂಪ್ರದಾಯಿಕ ಜಲಾಂತರ್ಗಾಮಿಗಳ ಜೊತೆಗೆ ಪರಮಾಣು ಚಾಲಿತ ಜಲಾಂತರ್ಗಾಮಿಗಳೂ ಸೇರಿವೆ. ನೌಕಾಪಡೆಯು ಫ್ರೆಂಚ್ ವಿನ್ಯಾಸದ ಸ್ಕಾರ್ಪೇನ್ ದರ್ಜೆಯ ಜಲಾಂತರ್ಗಾಮಿಗಳನ್ನು ಮುಂಬೈಯ ಮಜಗಾಂವ್ ಹಡಗುಕಟ್ಟೆಯಲ್ಲಿ ಯೋಜನೆ -೭೫ ಅಡಿಯಲ್ಲಿ ನಿರ್ಮಿಸುತ್ತಿದೆ. ಆದರೆ ಮಹತ್ವಾಕಾಂಕ್ಷೆಯ ಯೋಜನೆ ೭೫- ವಿಳಂಬಗೊಂಡಿತ್ತು. ಈದಿನ  ಕ್ರಮವು ಆಯಕಟ್ಟಿನ ಪಾಲುದಾರಿಕೆ ಮಾದರಿಯ ಭಾಗವಾಗಿ ಕೈಗೊಂಡಿರುವ ಮೋದಿ ಸರ್ಕಾರದ ಎರಡನೆಯ ಪ್ರಮುಖ ಕ್ರಮವಾಗಿದೆ. ಮುನ್ನ ಸರ್ಕಾರವು ೧೧೧ ನೌಕಾ ಬಳಕೆಯ ಹೆಲಿಕಾಪ್ಟರುಗಳ (ಎನ್ ಯುಎಚ್) ಖರೀದಿಗೆ ಒಪ್ಪಿಗೆ ನೀಡಿತ್ತು. ಭಾರತೀಯ ನೌಕಾಪಡೆಯು ಪ್ರಸ್ತುತ ಸಾಂಪ್ರದಾಯಿಕವಾದ ೧೪ ಜಲಾಂತರ್ಗಾಮಿಗಳನ್ನು ಬಳಸುತ್ತಿದೆ ಮತ್ತು ಇನ್ನೂ ಐದು ಸ್ಕಾರ್ಪೇನ್ ದರ್ಜೆಯ ಜಲಾಂತರ್ಗಾಮಿಗಳನ್ನು ಸೇರ್ಪಡೆ ಮಾಡುವ ಪ್ರಕ್ರಿಯೆಯನ್ನು ವಿವಿಧ ಹಂತಗಳಲ್ಲಿ ನಡೆಸುತ್ತಿದೆ. ನೌಕಾಪಡೆಯು ಎರಡು ಪರಮಾಣು ಚಾಲಿತ ಸಮರ ಕ್ಷಿಪಣಿ ಜಲಾಂತರ್ಗಾಮಿಗಳನ್ನು ಬಳಸುತ್ತಿದೆ. ಇವು ಭಾರತ ಮತ್ತು ರಶ್ಯಾ ನಿರ್ಮಿತ ಪರಮಾಣು ಶಕ್ತಿಯ ಫಾಸ್ಟ್ ಟ್ರ್ಯಾಕ್ ಜಲಾಂತರ್ಗಾಮಿಗಳಾಗಿವೆ.  ಭಾರತದ ಪರಮಾಣು ಜಲಾಂರ್ಗಾಮಿಯು ವಿಶಾಖಪಟ್ಟಣದಲ್ಲಿ ನೆಲೆ ನಿಂತಿದ್ದು, ಡೀಸೆಲ್ ಎಲೆಕ್ಟ್ರಿಕ್ ಜಲಾಂತರ್ಗಾಮಿಗಳು ಪ್ರಾಥಮಿಕವಾಗಿ ಮುಂಬೈ ಮತ್ತು ವಿಶಾಖ ಪಟ್ಟಣದಲ್ಲಿ ನೆಲೆ ನಿಂತಿವೆ.

2019: ನವದೆಹಲಿ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಆಳವಾದ ಕಮರಿಗೆ ಬಸ್ಸೊಂದು ಉರುಳಿದ ಪರಿಣಾಮವಾಗಿ ಕನಿಷ್ಠ ೨೫ ಮಂದಿ ಪ್ರಯಾಣಿಕರು ಮೃತರಾಗಿ, ೩೫ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಈದಿನ  ಘಟಿಸಿತು. ಜಂಜಾರದಿಂದ ಕಿಮೀ ದೂರದಲ್ಲಿ ಸಂಜೆ .೪೦ರ ವೇಳೆಗೆ ಬಸ್ಸು ಅಪಘಾತಕ್ಕೆ ಈಡಾದಾಗ ಅದರಲ್ಲಿ ಕನಿಷ್ಠ ೬೦ ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ತಿಳಿಸಿದರು. ಕುಲು ಜಿಲ್ಲೆಯ ಬಂಜಾರ್ ತೆಹ್ಸಿಲನಲ್ಲಿ ಧೋತ್ ಮೋರ್ಹ್ ಸಮೀಪ ಖಾಸಗಿ ಬಸ್ಸು ೫೦೦ ಮೀಟರ್ ಆಳದ ನಾಲೆಗೆ ಉರುಳಿದೆ ಎಂದು ಕುಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾಋಇ ಶಾಲಿನಿ ಅಗ್ನಿಹೋತ್ರಿ ಹೇಳಿದರು. ಅಪಘಾತಕ್ಕೆ ಈಡಾದಾಗ ಬಸ್ಸು ಕುಲುವಿನಿಂದ ಗಡ ಗುಶೈನಿ ಕಡೆಗೆ ಹೊರಟಿತ್ತುಈವರೆಗೆ ೧೫ ಶವಗಳನ್ನು ಹೊರಕ್ಕೆ ಎತ್ತಲಾಗಿದೆ ಎಂದು ಅಗ್ನಿಹೋತ್ರಿ ತಿಳಿಸಿದರು.
ತಿರುವಿನಲ್ಲಿ ಬಸ್ಸನ್ನು ತಿರುಗಿಸುತ್ತಿದ್ದಾಗ ಚಾಲಕನಿಗೆ ಚಕ್ರಗಳ ಮೇಲಿನ ನಿಯಂತ್ರಣ ತಪ್ಪಿದ್ದು ಅಪಘಾತಕ್ಕೆ ಕಾರಣವಾಗಿರುವಂತೆ ಕಾಣುತ್ತದೆ ಎಂದು ಅಗ್ನಿಹೋತ್ತಿ ನುಡಿದರುಬಸ್ಸಿನಲ್ಲಿ ಮಿತಿ ಮೀರಿದ ಪ್ರಯಾಣಿಕರಿದ್ದರು. ೬೦ಕ್ಕೂ ಹೆಚ್ಚು ಪ್ರಯಾಣಿಕರು ಅದರಲ್ಲಿ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

2019: ನವದೆಹಲಿ: ತೆಲುಗುದೇಶಂ ಪಕ್ಷದ (ಟಿಡಿಪಿ) ಆರು ಮಂದಿ ರಾಜ್ಯಸಭಾ ಸದಸ್ಯರ ಪೈಕಿ ನಾಲ್ವರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೇರುವುದರೊಂದಿಗೆ ಚಂದ್ರಬಾಬು ನಾಯ್ಡು ಅವರಿಗೆ ಭಾರೀ ಹಿನ್ನಡೆಯಾಯಿತು.  ತೆಲುಗುದೇಶಂ ಪಕ್ಷದ ರಾಜ್ಯಸಭಾ ಸದಸ್ಯರು ಸಂಜೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿಯಾಗಿರುವ ವೆಂಕಯ್ಯ ನಾಯ್ಡು ಅವರನ್ನೂ ಭೇಟಿ ಮಾಡಿ ತಾವು ಬಿಜೆಪಿ ಜೊತೆ ತತ್ ಕ್ಷಣದಿಂದಲೇ ವಿಲೀನವಾಗಲು ನಿರ್ಧರಿಸಿರುವುದಾಗಿ ಪತ್ರ ಸಲ್ಲಿಸಿದರು. ತೆಲುಗುದೇಶಂ ಪಕ್ಷದ ರಾಜ್ಯಸಭಾ ಸದಸ್ಯರಾದ ವೈಎಸ್ ಚೌಧರಿ, ಸಿಎಂ ರಮೇಶ್, ಗರಿಕಾಪೊವಾಟಿ ಮೋಹನ್ ರಾವ್ ಮತ್ತು ಟಿಜಿ ವೆಂಕಟೇಶ್ ಅವರು ಬಿಜೆಪಿಯ ನೂತನ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರ ಜೊತೆಗೆ ಬಂದು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದರು. ಚಂದ್ರಬಾಬು ನಾಯ್ಡು ಅವರು ಅಮೆರಿಕಕ್ಕೆ ರಜಾ ಕಳೆಯುವ ಸಲುವಾಗಿ ತೆರಳಿದ್ದಾಗ ಬಂಡಾಯ ನಾಯಕರು ಟಿಡಿಪಿಯಿಂದ ಬಿಜೆಪಿಗೆ ನೆಗೆದರು. ಚಂದ್ರಬಾಬು ನಾಯ್ಡು ಅವರು ಕಳೆದ ವರ್ಷ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಿಂದ (ಎನ್ಡಿಎ) ಹೊರಬಂದಿದ್ದು ವಿರೋಧ ಪಕ್ಷಗಳ ಬಣದಲ್ಲಿ ಪ್ರಮುಖ ನಾಯಕರಾಗಿ ರೂಪುಗೊಂಡಿದ್ದರು. ಆದರೆ ಅವರ ಯೋಜನೆ ಸಂಪೂರ್ಣವಾಗಿ ವಿಫಲಗೊಂಡಿತ್ತು. ಚಂದ್ರಬಾಬು ನಾಯ್ಡು ಅವರ ಕಡು ವಿರೋಧಿ, ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ (ವೈಎಸ್ಆರ್ಸಿಪಿ) ಮುಖ್ಯಸ್ಥ  ಜಗನ್ ಮೋಹನ ರೆಡ್ಡಿ ಅವರು ಇತ್ತೀಚಿನ ಮಹಾಚುನಾವಣೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಜಯಗಳಿಸಿದ್ದು, ೨೫ ಲೋಕಸಭಾ ಸ್ಥಾನಗಳ ಪೈಕಿ ೨೨ ಸ್ಥಾನಗಳನ್ನು ಗೆದ್ದುಕೊಂಡಿದ್ದರು. ಬಿಜೆಪಿ ಸೇರಿರುವ ನಾಲ್ವರು ತೆಲುಗುದೇಶಂ ರಾಜ್ಯಸಭಾ ಸದಸ್ಯರ ಪೈಕಿ ಇಬ್ಬರು ಗುರುವಾರ ಬೆಳಗ್ಗೆ ಪಕ್ಷ ತ್ಯಜಿಸುವ ತಮ್ಮ ಉದ್ದೇಶವನ್ನು ಪ್ರಕಟಿಸಿದ್ದರು. ’ಹೌದು, ನಾನು ಟಿಡಿಪಿ ತ್ಯಜಿಸುತ್ತಿದ್ದೇನೆ ಮತ್ತು ಬಿಜೆಪಿ ಸೇರುತ್ತಿದ್ದೇನೆ ಎಂದು ತೆಲುಗುದೇಶಂ ಪಕ್ಷದ ಟಿಜಿ ವೆಂಕಟೇಶ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿತ್ತು.  ‘ನಾನು ಹಿಂದೆ ಎಬಿವಿಪಿ ಮತ್ತು ಬಿಜೆವೈಎಂ (ಬಿಜೆಪಿಯ ಯುವ ಮೋರ್ಚಾ) ಸದಸ್ಯನಾಗಿದ್ದೆ ಎಂದೂ ಅವರು ಹೇಳಿದ್ದರು. ಎಬಿವಿಪಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದ್ಯಾರ್ಥಿ ವಿಭಾಗದ ಸಂಘಟನೆಯಾಗಿದೆ. ಪಕ್ಷದ ಹಿರಿಯ ನಾಯಕ ವೈ.ಎಸ್.ಚೌಧರಿ ಅವರು ಕೂಡಾ ತಾವು ಪಕ್ಷ ಬದಲಾಯಿಸುತ್ತಿರುವುದಾಗಿ ಒಪ್ಪಿಕೊಂಡಿದ್ದರು. ನಾಲ್ವರು ರಾಜ್ಯಸಭಾ ಸದಸ್ಯರು ಪಕ್ಷ ತ್ಯಜಿಸುವುದರೊಂದಿಗೆ ಎನ್. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ (ಟಿಡಿಪಿ) ಹಾಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿತು. ನಾಲ್ವರು ಟಿಡಿಪಿ ಸದಸ್ಯರ ಸೇರ್ಪಡೆಯಿಂದ ಮೇಲ್ಮನೆಯಲ್ಲಿ ಬಿಜೆಪಿಗೆ ಹೆಚ್ಚಿನ ಬಲ ಬಂದಿತು.  ಲೋಕಸಭೆಯಂತೆ ರಾಜ್ಯಸಭೆಯಲ್ಲಿ ಬಿಜೆಪಿಯ ಸರಳ ಬಹುಮತವನ್ನು ಪಡೆದಿಲ್ಲ. ಸರ್ಕಾರವು ಮಂಡಿಸಲಿರುವ ಪ್ರಮುಖ ಮಸೂದೆಗಳ ವಿಚಾರದಲ್ಲಿ ಹಿಂದಿನ ಅವಧಿಯಂತೆ ಬಾರಿಯೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಅಡ್ಡಿ ಉಂಟು ಮಾಡುವ ಸಾಧ್ಯತೆಗಳಿವೆ.  ಪಕ್ಷದ ಮೂರನೇ ಎರಡರಷ್ಟು ರಾಜ್ಯಸಭಾ ಸದಸ್ಯರು ಬಿಜೆಪಿಯಲ್ಲಿ ವಿಲೀನವಾಗುವುದರಿಂದ ಪಕ್ಷ ಬದಲಿಸುವ ಟಿಡಿಪಿ ಸದಸ್ಯರು ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಶಿಸ್ತುಕ್ರಮಕ್ಕೆ ಒಳಗಾಗುವ ಸಾಧ್ಯತೆ ಇಲ್ಲ. ಸಂವಿಧಾನಕ್ಕೆ ೫೨ನೇ ತಿದ್ದುಪಡಿಯ ಮೂಲಕ ೧೯೮೫ರಲ್ಲಿ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ೧೦ನೇ ಶೆಡ್ಯೂಲು ಆಗಿ ಸೇರ್ಪಡೆ ಮಾಡಲಾಗಿದ್ದ ಪಕ್ಷಾಂತರ ನಿಷೇಧ ಕಾಯ್ದೆಯು ಒಂದು ಪಕ್ಷವು ಇನ್ನೊಂದು ಪಕ್ಷದ ಜೊತೆಗೆ ವಿಲೀನಗೊಳ್ಳಲು ಮೂರನೇ ಎರಡರಷ್ಟು ಸದಸ್ಯರ ಒಪ್ಪಿಗೆಯನ್ನು ಕಡ್ಡಾಯಗೊಳಿಸಿತ್ತು೨೫ ಲೋಕಸಭಾ ಸ್ಥಾನಗಳ ಪೈಕಿ ೨೨ಸ್ಥಾನಗಳನ್ನು ಕಳೆದುಕೊಂಡಿರುವ ಟಿಡಿಪಿ ಈಗಾಗಲೇ ಭಾರೀ ಬಿಕ್ಕಟ್ಟು ಎದುರಿಸುತ್ತಿದೆ. ರಾಜ್ಯ ವಿಧಾನಸಭೆಯಲ್ಲೂ ೧೭೫ ಸ್ಥಾನಗಳ ಪೈಕಿ ೧೫೧ ಸ್ಥಾನಗಳನ್ನು ಜಗನ್ ಮೋಹನ ರೆಡ್ಡಿ ಅವರ ವೈಎಸ್ಆರ್ಸಿಪಿಗೆ ಒಪ್ಪಿಸಿರುವ ಚಂದ್ರಬಾಬು ನಾಯ್ಡು ಅವರ ಪಕ್ಷವು ಪ್ರಸ್ತುತ ಸಂಸತ್ ಸದಸ್ಯರನ್ನು ಮಾತ್ರವೇ ಹೊಂದಿತ್ತುಬೆಳವಣಿಗೆಗಳ ಬಗ್ಗೆ ಟಿವಿ ವಾಹಿನಿ ಒಂದರ ಜೊತೆಗೆ ಮಾತನಾಡಿದ ಟಿಡಿಪಿ ನಾಯಕ ಲಂಕಾ ದಿನಕರನ್ ಅವರುಇದು ಎಷ್ಟು ಸತ್ಯ ಎಂಬುದು ನನಗೆ ಗೊತ್ತಿಲ್ಲ. ಆದರೆ ಹಲವಾರು ಟಿಡಿಪಿ ನಾಯಕರು ಚುನಾವಣೆಯ ಸೋಲಿನಿಂದ ಭ್ರಮನಿರಸನಗೊಂಡಿದ್ದಾರೆ ಎಂಬುದು ನನ್ನ ಬಲವಾದ ಭಾವನೆ. ಈವರೆಗೂ ಸೋಲಿನ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಉನ್ನತ ನಾಯಕರಿಂದ ಆತ್ಮಾವಲೋಕನ ಕೂಡಾ ನಡೆದಿಲ್ಲ ಎಂದು ಹೇಳಿದರು.   ಬಿಜೆಪಿ ಸೇರಿರುವ ಟಿಡಿಪಿ ಸದಸ್ಯರ ಪೈಕಿ ಒಬ್ಬರಾಗಿರುವ ವೈಎಸ್ ಚೌಧರಿ ಅವರು ಸುಜನಾ ಕಂಪೆನಿಗಳ ಸಮೂಹದ ಸ್ಥಾಪಕರಾಗಿದ್ದಾರೆ. ಜಾರಿ ನಿರ್ದೇಶನಾಲಯದ (ಇಡಿ) ಪ್ರಕಾರ  ಕಂಪೆನಿಯು ಬ್ಯಾಂಕುಗಳಿಗೆ ,೭೦೦ ಕೋಟಿ ರೂಪಾಯಿಗಳಷ್ಟು ಹಣವನ್ನು ವಂಚಿಸಿದೆ. ಕಳೆದ ನವೆಂಬರ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಚೌಧರಿ ಅವರ ಹೈದರಾಬಾದ್ ನಿವಾಸದ ಮೇಲೆ ಹಲವಾರು ದಾಳಿಗಳನ್ನು ನಡೆಸಿದ್ದರು.   ತಮ್ಮ ಪಕ್ಷವು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಏಕೈಕ ಬೇಡಿಕೆ ಮತ್ತು ರಾಜ್ಯದ ಹಿತಾಸಕ್ತಿಗಳ ರಕ್ಷಣೆ ಸಲುವಾಗಿ ಬಿಜೆಪಿ ಜೊತೆಗೆ ಹೋರಾಟ ನಡೆಸಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.  ‘ನಾವು ವಿಶೇಷ ಸ್ಥಾನಮಾನಕ್ಕಾಗಿ ನಮ್ಮ ಕೇಂದ್ರ ಸಚಿವರನ್ನೇ ಬಲಿ ಕೊಟ್ಟೆವು. ಟಿಡಿಪಿಯನ್ನು ದುರ್ಬಲಗೊಳಿಸುವ ಬಿಜೆಪಿಯ ಯತ್ನಗಳನ್ನು ನಾವು ಖಂಡಿಸುತ್ತೇವೆ.’ ಎಂದು ಅವರು ನುಡಿದರು. ಇಂತಹ ಬಿಕ್ಕಟ್ಟು ಪಕ್ಷಕ್ಕೆ ಹೊಸದೇನೂ ಅಲ್ಲ. ನಮ್ಮ ನಾಯಕರು ಮತ್ತು ಕಾರ್ಯಕರ್ತರು ಇದರಿಂದ ಎದೆಗುಂದಬೇಕಾಗಿಲ್ಲ ಎಂದೂ ಅವರು ಹೇಳಿದರು.          

2019: ನವದೆಹಲಿ: ರಾಹುಲ್ ಗಾಂಧಿಯವರ ಮುಂದಿನ ಹೆಜ್ಜೆಗಳ ಬಗ್ಗೆ ಊಹಾಪೋಹಗಳು ದಟ್ಟವಾಗಿ ಮುಂದುವರೆಯುತ್ತಿರುವುದರ ನಡುವೆಯೇ ಪದತ್ಯಾಗದ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡ  ಕಾಂಗ್ರೆಸ್ ಅಧ್ಯಕ್ಷರು ತಮ್ಮ ಉತ್ತರಾಧಿಕಾರಿಯ ಬಗ್ಗೆ ಪಕ್ಷ ನಿರ್ಧರಿಸುತ್ತದೆ ಹೊರತು ತಾನಲ್ಲ ಎಂಬುದಾಗಿ ಇಲ್ಲಿ ಸ್ಪಷ್ಟ ಪಡಿಸಿದರು. ತಮ್ಮ ಉತ್ತರಾಧಿಕಾರಿ ಬಗ್ಗೆ ನಿರ್ಧರಿಸುವ ವ್ಯಕ್ತಿ ತಾನಲ್ಲ ಎಂದು ರಾಹುಲ್ ಗಾಂಧಿಯವರು ಸುದ್ದಿಗಾರರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಯಾರು ಉತ್ತರಾಧಿಕಾರಿಯಾಗುತ್ತಾರೆ ಎಂಬುದಾಗಿ ಪ್ರಶ್ನಿಸಿದಾಗ ಉತ್ತರಿಸಿದರು. ಪಕ್ಷದ ಮುಂದಿನ ಮುಖ್ಯಸ್ಥನ ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಕಾಂಗ್ರೆಸ್ಸಿನ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂದು ನಾನು ನಿರ್ಧರಿಸುವುದಿಲ್ಲ ಎಂದೂ ಅವರು ನುಡಿದರು. ಲೋಕಸಭಾ ಚುನಾವಣೆಯಲ್ಲಿನ ಪರಾಭವವನ್ನು ಅನುಸರಿಸಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ ರಾಹುಲ್ ಗಾಂಧಿಯವರು ವಿಚಾರದಲ್ಲಿ ಬಲವಾದ ಪಟ್ಟು ಹಿಡಿದಿದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯೂಸಿ) ರಾಹುಲ್ ಗಾಂಧಿಯವರ ರಾಜೀನಾಮೆ ಕೊಡುಗೆಯನ್ನು ತಿರಸ್ಕರಿಸಿದ್ದು ಎಲ್ಲ ಹಂತಗಳಲ್ಲಿ ಪಕ್ಷವನ್ನು ಮರುಸಂಘಟನೆ ಮಾಡುವಂತೆ ಸೂಚಿಸಿದೆ. ನಿರ್ಧಾರ ಮರುಪರಿಶೀಲನೆ ಮಾಡುವಂತೆ ಪಕ್ಷದ ಹಲವಾರು ನಾಯಕರು ರಾಹುಲ್ ಗಾಂಧಿಯವರನ್ನು ಒತ್ತಾಯಿಸಿದ್ದಾರೆಮೇ ೨೫ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿಯವರು ಮೊತ್ತ ಮೊದಲ ಬಾರಿಗೆ ಪದತ್ಯಾಗದ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ಆದರೆ ಕಾರ್ಯಕಾರಿ ಸಮಿತಿಯು ತತ್ ಕ್ಷಣವೇ ಅದನ್ನು ಸರ್ವಾನುಮತದಿಂದ ತಿರಸ್ಕರಿಸಿತ್ತುಲೋಕಸಭಾ ನಾಯಕ ಸ್ಥಾನವನ್ನು ಕೂಡಾ ನಿರಾಕರಿಸುವ ಮೂಲಕ ರಾಹುಲ್ ಗಾಂಧಿಯವರು ಪಕ್ಷದ ನಾಯಕತ್ವವನ್ನು ಮತ್ತೊಮ್ಮೆ ಇಕ್ಕಟ್ಟಿನಲ್ಲಿ ಸಿಕ್ಕಿಸಿದ್ದರು. ಕಾಂಗ್ರೆಸ್ ಪಕ್ಷವು ಕಡೆಗೆ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಅಧೀರ್ ರಂಜನ್ ಚೌಧರಿ ಅವರನ್ನು ಲೋಕಸಭೆಯಲ್ಲಿ ಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿತ್ತುರಾಹುಲ್ ಗಾಂಧಿಯವರು ನೀಡಿರುವ ಹೇಳಿಕೆಯು ಕಾಂಗ್ರೆಸ್ ಅಧ್ಯಕ್ಷ ಪದ ತ್ಯಜಿಸುವ ನಿರ್ಧಾರದಿಂದ ಅವರು ಹಿಂದೆ ಸರಿಯುವುದಿಲ್ಲ ಎಂಬುದನ್ನು ಇದೀಗ ದೃಢ ಪಡಿಸಿದೆ. ಯಥಾಸ್ಥಿತಿಯನ್ನಾದರೂ ಕಾಪಾಡಬೇಕು ಎಂಬ ಕಾಂಗ್ರೆಸ್ ಪಕ್ಷದ ಆಗ್ರಹದ ಹೊರತಾಗಿಯೂ ರಾಹುಲ್ ಗಾಂಧಿ ಅವರು ಪದತ್ಯಾಗದ ನಿರ್ಧಾರದಿಂದ ಹಿಂದೆ ಸರಿದಿಲ್ಲಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ೫೨ಸ್ಥಾನಗಳನ್ನು ಗೆದ್ದುಕೊಳ್ಳಲು ಸಫಲವಾಗಿತ್ತು. ಇದು ೨೦೧೪ರಲ್ಲಿ ಗೆದ್ದಿದ್ದ ೪೪ ಸ್ಥಾನಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿನ ಸುಧಾರಣೆ. ಆದರೆ ಇಷ್ಟು ಸ್ಥಾನಗಳನ್ನು  ಗೆದ್ದರೂ ಪಕ್ಷಕ್ಕೆ ವಿರೋಧ ನಾಯಕನ ಸ್ಥಾನಮಾನ ಪಡೆಯುವ ತಾಕತ್ತು ಲಭಿಸಲಿಲ್ಲ.
ಕುಟುಂಬದ ಪರಂಪರಾಗತ ಕ್ಷೇತ್ರವಾದ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರ ಎದುರು ಪರಾಭವಗೊಳ್ಳುವುದರೊಂದಿಗೆ ರಾಹುಲ್ ಗಾಂಧಿಯವರು ಸ್ವತಃ ಭಾರೀ ಪೆಟ್ಟು ತಿಂದಿದ್ದರು. ಏನಿದ್ದರೂ ಕೇರಳದ ವಯನಾಡು ಕ್ಷೇತ್ರದ ಮೂಲಕ ಸಂಸತ್ತಿನ ತಮ್ಮ ಹಾದಿಯನ್ನು ಅವರು ಮುಕ್ತಗೊಳಿಸಿಕೊಂಡಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಮಾಡಿದ ಉಲ್ಲೇಖದ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರವಾಗಿರಫೇಲ್ ಯುದ್ಧ ವಿಮಾನ ವ್ಯವಹಾರದಲ್ಲಿಕಳ್ಳತನವಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಪ್ರತಿಪಾದಿಸಿದರು.ರಫೇಲ್ ಯುದ್ಧ ವಿಮಾನ ವ್ಯವಹಾರದಲ್ಲಿ ಕಳ್ಳತನ ನಡೆದಿದೆ ಎಂಬ ನನ್ನ ನಿಲುವಿಗೆ ನಾನು ಬದ್ಧನಾಗಿದ್ದೇನೆ ಎಂದು ಸಂಸತ್ತಿನ ಹೊರಗೆ ಪತ್ರಕರ್ತರ ಜೊತೆ ಮಾತನಾಡುತ್ತಾ ರಾಹುಲ್ ಗಾಂಧಿ ನುಡಿದರು.


2018: ನವದೆಹಲಿ: ’ಕೌಟುಂಬಿಕ ಬದ್ಧತೆಗಳ ಹಿನ್ನೆಲೆಯಲ್ಲಿ ಭಾರತದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ ಎಂದು
ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಫೇಸ್ ಬುಕ್ ನಲ್ಲಿ  ಪ್ರಕಟಿಸಿದರು.  ‘ಕೆಲವು ದಿನಗಳ ಹಿಂದೆ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನನ್ನನ್ನು ಭೇಟಿ ಮಾಡಿದ್ದರು. ಕೌಟುಂಬಿಕ ಬದ್ಧತೆಗಳ ಹಿನ್ನೆಲೆಯಲ್ಲಿ ತಾವು ಮರಳಿ ಅಮೆರಿಕಕ್ಕೆ ಹೋಗಬಯಸುತ್ತಿರುವುದಾಗಿ ಅವರು ನನಗೆ ತಿಳಿಸಿದರು. ಅವರ ಕಾರಣಗಳು ವೈಯಕ್ತಿಕ, ಆದರೆ ಅವರ ಮಟ್ಟಿಗೆ ಅತ್ಯಂತ ಮಹತ್ವವಾದವು. ಒಪ್ಪುವುದರ ಹೊರತಾಗಿ ಬೇರೆ ಯಾವುದೇ ಆಯ್ಕೆಯನ್ನೂ ಅವರು ನನಗೆ ನೀಡಲಿಲ್ಲ ಎಂದು ಜೇಟ್ಲಿ ಹೇಳಿದರು. ಭಾರತದ ಆರ್ಥಿಕತೆಯ ವಿಶಾಲ ಆರ್ಥಿಕ ನಿರ್ವಹಣೆಗೆ ಕೊಟ್ಟ ಕಾಣಿಕೆಗಾಗಿ ಜೇಟ್ಲಿ ಅವರು ಸುಬ್ರಮಣಿಯನ್ ಅವರಿಗೆ ಧನ್ಯವಾದ ಅಪ್ಪಿಸಿದ್ದಾರೆ. ’ವೈಯಕ್ತಿಕವಾಗಿ ನಾನು ಅವರ ದಕ್ಷತೆ, ಶಕ್ತಿ, ಬೌದ್ಧಿಕ ಸಾಮರ್ಥ್ಯ ಮತ್ತು ಕಲ್ಪನೆಗಳನ್ನು ನಾನು ಕಳೆದುಕೊಳ್ಳುತ್ತಿದ್ದೇನೆ. ಅವರು ನನ್ನ ಕೊಠಡಿಗೆ ದಿನದಲ್ಲಿ ಹಲವಾರು ಬಾರಿ ಬರುತ್ತಿದ್ದುದೂ, ಸಚಿವನಂತೆಯೇ ನನ್ನಲ್ಲಿ ಮಾತನಾಡಿ ಒಳ್ಳೆಯ ಇಲ್ಲವೇ ವಿರುದ್ಧವಾದ ಸುದ್ದಿಗಳನ್ನು ಕೊಡುತ್ತಿದ್ದುದು ಉಂಟು. ಅವರ ವಿದಾಯವು ನನಗೆ ನಷ್ಟವನ್ನು ಉಂಟು ಮಾಡಿದೆ ಎಂದು ಹೇಳುವ ಅಗತ್ಯವೇ ಇಲ್ಲ. ಆದರೆ ಅವರ ಹೃದಯ ಇಲ್ಲಿಯೇ ಇರುತ್ತದೆ ಎಂಬುದು ನನಗೆ ಗೊತ್ತು ಎಲ್ಲಿಯೇ ಇದ್ದರೂ  ಅವರು ತಮ್ಮ ಸಲಹೆ, ವಿಶ್ಲೇಷಣೆಗಳನ್ನು ನನಗೆ ಕಳುಹಿಸುವರು ಎಂಬ ಖಚಿತತೆ ನನಗೆ ಇದೆ ಎಂದು ಜೇಟ್ಲಿ ಬರೆದಿದರು. ಜೇಟ್ಲಿ ಅವರ ಫೇಸ್ ಬುಕ್ ಪೋಸ್ಟಿಗೆ ಧನ್ಯವಾದಗಳನ್ನು ಹೇಳಿರುವ ಅರವಿಂದ ಸುಬ್ರಮಣಿಯನ್ ಅವರು ’ಸಚಿವರ ಅತ್ಯಪೂರ್ವ ಸಜ್ಜನಿಕೆಯ ಪದಗಳಿಗಾಗಿ ನಾನು ಅತ್ಯಂತ ಆಭಾರಿಯಾಗಿದ್ದೇನೆ ಮತ್ತು ವಿನೀತನಾಗಿದ್ದೇನೆ. ವೈಯಕ್ತಿಕ, ಸಂಶೋಧನಾ ಕಾರ್‍ಯಕ್ಕಾಗಿ ನಾನು ಮರಳುತ್ತಿರುವ ವಿಚಾರವನ್ನು ಅವರು ಪ್ರಕಟಿಸಿದ್ದಾರೆ. ಸಿಇಎ ಕೆಲಸ ನನ್ನ ಜೀವನದಲ್ಲೇ ಅತ್ಯಂತ ಪ್ರತಿಫಲದಾಯಕವಾದ್ದು ಮತ್ತು ರೋಮಾಂಚಕವಾದದ್ದು. ತುಂಬಾ ತುಂಬಾ ಧನ್ಯವಾದಗಳು ಎಂದು ಬರೆದರು. ಅರವಿಂದ ಸುಬ್ರಮಣಿಯನ್ ಅವರು ಪೀಟರ್‍ಸನ್ ಇನ್ ಸ್ಟಿಟ್ಯೂಟ್ ಫಾರ್ ಇಂಟರ್ ನ್ಯಾಷನಲ್ ಇಕನಾಮಿಕ್ಸ್ ನ ಹಿರಿಯ ಫೆಲೋ ಆಗಿದ್ದು ೨೦೧೪ರ ಅಕ್ಟೋಬರಿನಲ್ಲಿ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ (ಸಿಇಎ), ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಗವರ್ನರ್ ಹುದ್ದೆಗೆ ಬಡ್ತಿ ಪಡೆದ ರಘುರಾಮ ರಾಜನ್ ಸ್ಥಾನಕ್ಕೆ ನೇಮಕಗೊಂಡಿದ್ದರು. ಅವರ ಅವಧಿ ಮೂರು ವರ್ಷಗಳದ್ದಾಗಿದ್ದು, ೨೦೧೭ರ ಅಕ್ಟೋಬರ್ ೧೬ಕ್ಕೆ ಮುಕ್ತಾಯಗೊಂಡಿತ್ತು. ಸುಬ್ರಮಣಿಯನ್ ಅವರಿಗೆ ಕಳೆದ ಸೆಪ್ಟೆಂಬರಿನಲ್ಲಿ ಒಂದು ವರ್ಷದ ವಿಸ್ತರಣೆ ಲಭಿಸಿತ್ತು.

2018: ನವದೆಹಲಿ/ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬೆಳಗ್ಗೆ ಸಮ್ಮತಿ ನೀಡಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೆ ಬಂದಿತು.  ಬೆನ್ನಲ್ಲೇ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ರಾಜ್ಯದಲ್ಲಿ ತತ್ ಕ್ಷಣವೇ ವಿಧಾನಸಭೆಯನ್ನು ವಿಸರ್ಜಿಸಿ, ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು. ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ಮಂಗಳವಾರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಜೊತೆಗಿನ ಸಮ್ಮಿಶ್ರ ಸರ್ಕಾರಕ್ಕೆ ತಾನು ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡ ಪರಿಣಾಮವಾಗಿ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡಿದ್ದು, ಈದಿನ ಬೆಳಗ್ಗೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಯಿತು.  ‘ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿಧಾನಸಭೆಯನ್ನು ತತ್ ಕ್ಷಣ ವಿಸರ್ಜಿಸಬೇಕು ಮತ್ತು ಹೊಸದಾಗಿ ಚುನಾವಣೆ ನಡೆಸಬೇಕು. ಸರ್ಕಾರ ರಚನೆಗೆ ಬಿಜೆಪಿ ಕುದುರೆ ವ್ಯಾಪಾರ ನಡೆಸದೇ ಇರಲಾಗದು ಎಂಬುದಾಗಿ ಮಾಜಿ ಉಪ ಮುಖ್ಯಮಂತ್ರಿಯವರೇ ಒಪ್ಪಿಕೊಂಡಿದ್ದಾರೆ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದರು. ತಮ್ಮ ಪಕ್ಷವು ಏನೋ ಒಂದು ವಿಷಯದ ಬಗ್ಗೆ ಕೆಲಸ ಮಾಡುತ್ತಿದೆ ಎಂಬುದಾಗಿ ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕವೀಂದರ್ ಗುಪ್ತ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.  ‘ಶೀಘ್ರದಲ್ಲಿಯೇ ನೂತನ ಸರ್ಕಾರ ರಚನೆಯಾದೀತು ಎಂದು ನಾನು ಯೋಚಿಸುವುದಿಲ್ಲ. ಬಹಳಷ್ಟು ಅನಿಶ್ಚಿತತೆ ಇದೆ. ಆದರೆ ನಾವು ಏನೋ ಒಂದು ವಿಚಾರದ ಬಗ್ಗೆ ಶ್ರಮಿಸುತ್ತಿದ್ದೇವೆ, ಜನರಿಗೆ ಶೀಘ್ರವೇ ಈ ಬಗ್ಗೆ ಗೊತ್ತಾಗಲಿದೆ ಎಂದು ಕವೀಂದರ್ ಗುಪ್ತ ಹೇಳಿಕೆ ನೀಡಿದ್ದರು ಎನ್ನಲಾಯಿತು.  ‘ಬಿಜೆಪಿಯು ಇತರ ಪಕ್ಷಗಳನ್ನು ಒಡೆಯಲು ಮತ್ತು ಸರ್ಕಾರ ರಚಿಸಲು ಯತ್ನಿಸುತ್ತಿದೆ ಎಂಬ ಸುಳಿವನ್ನು ಕವೀಂದರ್ ಗುಪ್ತ ಅವರ ಹೇಳಿಕೆ ನೀಡಿದೆ ಎಂದು ಅಬ್ದುಲ್ಲಾ ಪ್ರತಿಪಾದಿಸಿದರು. ‘ನಾವು ಏನೋ ಒಂದು ವಿಚಾರದ ಬಗ್ಗೆ ಶ್ರಮಿಸುತ್ತಿದ್ದೇವೆ ಎಂಬುದರ ಅರ್ಥ ಏನು? ’ಏನೋ ಒಂದು ಅಂದರೆ ಇರುವ ಏಕೈಕ ಮಾರ್ಗ ಇತರ ಪಕ್ಷಗಳನ್ನು ಒಡೆಯುವುದು ಮತ್ತು ಬಿಜೆಪಿ ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ತಂದು ಕೊಡುವುದು. ಮಾಜಿ ಉಪ ಮುಖ್ಯಮಂತ್ರಿ ಪ್ರಮಾದವಶಾತ್ ಬೀಜಗಳನ್ನು ಉಗುಳಿಬಿಟ್ಟಿದ್ದಾರೆಯೇ? ಎಂದು ಒಮರ್ ಟ್ವೀಟಿನಲ್ಲಿ ಪ್ರಶ್ನಿಸಿದರು. ಸರ್ಕಾರದಿಂದ ಹೊರಬರುವ ವಿಚಾರ ಗಮಗೆ ಗೊತ್ತಿರಲಿಲ್ಲ ಎಂಬುದಾಗಿ ಗೃಹ ಸಚಿವ ರಾಜನಾಥ ಸಿಂಗ್ ಅವರು ಹೇಳಿದ ಬಗೆಗಿನ ಪತ್ರಿಕಾ ವರದಿ ಬಗ್ಗೆ ಕೂಡಾ ಪ್ರತಿಕ್ರಿಯಿಸಿದ ಒಮರ್, ’ಈ ವರದಿ ಸತ್ಯವಾಗಿದ್ದರೆ ಮತ್ತು ಭಾರತದ ಗೃಹ ಸಚಿವರಿಗೆ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರದ ಪತನದ ವಿಷಯ ಗೊತ್ತಿರಲಿಲ್ಲ ಎಂದಾದರೆ ಈ ವಾಸ್ತವಾಂಶವು ನನ್ನನ್ನು ಮತ್ತು ನನ್ನ ಸಹೋದ್ಯೋಗಿಗಳನ್ನು ಅಚ್ಚರಿಯಲ್ಲಿ ಕೆಡವುತ್ತದೆ ಎಂದು ಹೇಳಿದರು.   ರಾಷ್ಟ್ರಪತಿ ಅಂಕಿತ: ಇದಕ್ಕೆ ಮುನ್ನ ಈ ದಿನ ಬೆಳಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ತತ್ ಕ್ಷಣದಿಂದಲೇ ರಾಜ್ಯಪಾಲರ ಆಳ್ವಿಕೆ ಜಾರಿಗೆ ಅನುಮೋದನೆ ನೀಡಿದ್ದರು.  ಸಮ್ಮಿಶ್ರ ಸರ್ಕಾರದಿಂದ ಬಿಜೆಪಿಯು ಹೊರಬರುವ ಘೋಷಣೆ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ರಾಜೀನಾಮೆ ನೀಡಿದ ಬಳಿಕ, ಗವರ್ನರ್ ಎನ್ ಎನ್ ವೋಹ್ರಾ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಮಂಗಳವಾರ ಸಂಜೆ ರಾಜ್ಯದಲ್ಲಿ ಕೇಂದ್ರೀಯ ಆಳ್ವಿಕೆ ಜಾರಿಗೊಳಿಸುವಂತೆ ಶಿಫಾರಸು ಮಾಡಿದ್ದರು.
ಕೋವಿಂದ್ ಅವರು ಪ್ರಸ್ತುತ ಸೂರಿನಾಮ್ ಪ್ರವಾಸದಲ್ಲಿ ಇರುವುದರಿಂದ ರಾಜ್ಯಪಾಲ ಆಳ್ವಿಕೆ ಕೋರಿಕೆಯನ್ನು ಅಲ್ಲಿಗೇ ಕಳುಹಿಸಿಕೊಡಲಾಗಿತ್ತು.  ಪ್ರಸ್ತಾಪವನ್ನು ಗವರ್ನರ್ ಅವರು ಹಿಂದಿನ ದಿನ ಸಂಜೆ  ಕಳುಹಿಸಿದಾಗ ಕೋವಿಂದ್ ಅವರು ಅಥೆನ್ಸ್ ನಿಂದ ಸೂರೀನಾಮ್ ಕಡೆಗೆ ಹೊರಟಿದ್ದರು. ಅವರು ಪರಮಾರಿಬೊದಲ್ಲಿ ಇಳಿದೊಡನೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಗೆ ತಮ್ಮ ಸಮ್ಮತಿ ನೀಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

2018: ನವದೆಹಲಿ: ’ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿರುವುದರಿಂದ ಉಗ್ರ ನಿಗ್ರಹ ಕಾರ್ಯಾಚರಣೆಗೆ ಯಾವುದೇ ಧಕ್ಕೆ ಇಲ್ಲ  ಮತ್ತು ಸೇನಾ ಕಾರ್ಯಾಚರಣೆಗೆ ಯಾವುದೇ ರಾಜಕೀಯ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ಸಿಂಗ್ ರಾವತ್ ಹೇಳಿದರು.   "ಪವಿತ್ರ ರಮ್ಜಾನ್ ಮಾಸದಲ್ಲಿ ಮಾತ್ರವೇ ನಾವು ನಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿದ್ದೆವು; ಆದರೆ ಅದರಿಂದ ಏನಾಯಿತು ಎಂಬುದನ್ನು ಕಂಡೆವು. ರಾಜ್ಯದಲ್ಲೀಗ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿದೆ. ಆದರೆ ಇದರಿಂದ ಸೇನಾ ಕಾರ್ಯಾಚರಣೆಗೆ ಯಾವುದೇ ಧಕ್ಕೆ ಇಲ್ಲ; ನಮ್ಮ ಕಾರ್ಯಾಚರಣೆ ಹಿಂದಿನಂತೆಯೇ ಮುಂದುವರೆಯಲಿದೆ; ಹಾಗೆಯೇ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪವೂ ಇರುವುದಿಲ್ಲ ಎಂದು ರಾವತ್ ನವದೆಹಲಿಯಲ್ಲಿ  ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.   ಇದಕ್ಕೆ ಮೊದಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ ಆರು ತಿಂಗಳ ಅವಧಿಗೆ ತತ್‌ಕ್ಷಣದಿಂದ ಜಾರಿಯಾಗುವಂತೆ ರಾಜ್ಯಪಾಲರ ಆಳ್ವಿಕೆಗೆ ಅನುಮತಿ ನೀಡಿದ್ದರು.  ಭಾರತೀಯ ಜನತಾ ಪಕ್ಷ ಜಮ್ಮು ಮತ್ತು ಕಾಶ್ಮೀರದಲ್ಲಿನ ಪಿಡಿಪಿ ಮೈತ್ರಿಕೂಟ ಸರ್ಕಾರದಿಂದ ಹೊರಬಂದ ಕೇವಲ ೨೪ ತಾಸುಗಳ ಒಳಗೆ ಈ ಬೆಳವಣಿಗೆಗಳು ನಡೆದಿವೆ.  ರಮ್ಜಾನ್ ಮಾಸ ಮುಗಿದ ಬೆನ್ನಿಗೇ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡದ್ದೇ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಪರಿಣಾಮವಾಗಿ ಪಿಡಿಪಿ - ಬಿಜೆಪಿ ಮೈತ್ರಿ ಕೂಟ ಸರ್ಕಾರದಲ್ಲಿ ಒಡಕು ಉಂಟಾಗಿತ್ತು.  

2018: ನವದೆಹಲಿ: ಕರ್ನಾಟಕದ ರಾಮನಗರದ ೧೦೦ಕ್ಕೂ ಹೆಚ್ಚು ರೈತರು ಸೇರಿದಂತೆ ದೇಶದ ವಿವಿಧ ಕಡೆಗಳ ರೈತರ ಜೊತೆಗೆ  ’ನಮೋ ಆಪ್ ಮೂಲಕ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೨ರ ವೇಳೆಗೆ ದೇಶದ ರೈತರ ಆದಾಯ ದುಪ್ಪಟ್ಟು ಮಾಡುವ ಗುರಿ ನಮ್ಮ ಸರ್ಕಾರಕ್ಕೆ  ಇದೆ ಎಂದು ಹೇಳಿದರು.  ‘ರೈತರ ಆದಾಯ ದುಪ್ಪಟ್ಟು ಮಾಡುವ ಮಹತ್ವದ ಉದ್ದೇಶಕ್ಕಾಗಿ ಕೃಷಿ ಕ್ಷೇತ್ರಕ್ಕೆ ಮುಂಗಡಪತ್ರದಲ್ಲಿ ನಾವು ೨.೧೨ ಲಕ್ಷ ಕೋಟಿ ರೂಪಾಯಿ ಹಣ ಮೀಸಲಿರಿಸಿದ್ದೇವೆ ಎಂದು ಪ್ರಧಾನಿ ನುಡಿದರು.  ‘ಎಲ್ಲೆಲ್ಲಾ ನೆರವು ಅಗತ್ಯವಾಗಿದೆಯೋ ಅಲ್ಲೆಲ್ಲ ನಾವು ನಮ್ಮ ಸಹಾಯ ನೀಡುತ್ತಿದ್ದೇವೆ. ಕೃಷಿಕರಿಗೆ ಎಲ್ಲಾ ರೀತಿಯ ಸಲಹೆಗಳು, ಲಾಭಗಳು ಸಿಗುವಂತೆ ನಾವು ಶ್ರಮ ವಹಿಸುತ್ತಿದ್ದೇವೆ. ನನಗೆ ದೇಶದ ರೈತರಲ್ಲಿ ಭರವಸೆ ಇದೆ ಎಂದು ಅವರು ಹೇಳಿದರು.  ‘ಕೃಷಿ ಬೆಳೆ ವೆಚ್ಚವನ್ನು ಕಡಿತಗೊಳಿಸುವುದು, ಬೆಳೆಗೆ ನ್ಯಾಯೋಚಿತ ಬೆಲೆ ನೀಡುವುದು,  ಉತ್ಪನ್ನಗಳನ್ನು ಕೊಳೆಯುವಿಕೆಯಿಂದ ಹಾಳಾಗದಂತೆ ತಡೆಗಟ್ಟಿ, ಆದಾಯದ ಪರ್ಯಾಯ ಮೂಲಗಳನ್ನು ಕಂಡುಹಿಡಿಯುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಿ ವಿವರಿಸಿದರು.  ‘ಮಣ್ಣಿನ ಆರೋಗ್ಯ ಕಾರ್ಡ್ ಮತ್ತು ರೈತರಿಗೆ ಸಕಾಲದಲ್ಲಿ ಸಾಲ ಸಿಗುವಂತೆ ಮಾಡಿದ್ದೇವೆ. ಗುಣಮಟ್ಟದ ಬೀಜಗಳು, ಬೇವು ಲೇಪಿತ ಯೂರಿಯಾ ನೀಡಿದ್ದೇವೆ. ಇ-ನಾಮ್ ಮೂಲಕ ಮಧ್ಯವರ್ತಿಗಳ ಹಾವಳಿಯನ್ನೂ ತಡೆಗಟ್ಟಿದ್ದೇವೆ ಎಂದು ಮೋದಿ ನುಡಿದರು.  ರಾಜ್ಯದ ರೈತರೊಂದಿಗೆ ಕನ್ನಡದಲ್ಲಿ:  ’ಕಮಲಮ್ಮ ನೀವು ಹೇಗಿದ್ದೀರಿ? ನಿಮ್ಮ ಊರಿನಲ್ಲಿ ಎಲ್ಲರೂ ಕ್ಷೇಮವಾಗಿದ್ದೀರಾ?’ ಎಂದು ನಮೋ ಆಪ್ ಲೈವ್ ವಿಡಿಯೊ ಮೂಲಕ ಮೋದಿ ಅವರು ಕರ್ನಾಟಕದ ರೈತರನ್ನು ಪ್ರಶ್ನಿಸಿದಾಗ ರೈತರ ಮುಖದಲ್ಲಿ ಖುಷಿಯ ಅಲೆಗಳು ಎದ್ದವು.  ರಾಮನಗರ ಜಿಲ್ಲೆಯ. ಮಾಗಡಿ ತಾಲೂಕಿನ ಚಂದುರಾಯನ ಪಾಳ್ಯದಲ್ಲಿರುವ ಕೃಷಿ ಕ್ಷೇತ್ರದಲ್ಲಿನ ಕರ್ನಾಟಕ ಕೃಷಿ ವಿಕಾಸ ಕೇಂದ್ರದಲ್ಲಿ ವಿಡಿಯೋ ಕಾನ್ಪರೆನ್ಸ್ ನಡೆಯಿತು. ನೂರಕ್ಕೂ ಹೆಚ್ಚು ರೈತರು ಮೋದಿ ಅವರ ಜೊತೆಗೆ ಲೈವ್ ವಿಡಿಯೋ ಸಂವಾದ ನಡೆಸಿದರು.
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಮತ್ತು ಮಣ್ಣು ಆರೋಗ್ಯ ಅಭಿಯಾನದ ವಿಚಾರವಾಗಿ ಮೋದಿ ರೈತರ ಜತೆ ಮಾತುಕತೆ ನಡೆಸಿದರು.  ಮಣ್ಣಿನ ಫಲವತ್ತತೆ, ಮಣ್ಣು ಪರೀಕ್ಷೆ ಹಾಗೂ ಕೃಷಿ ನಡೆಸುವ ರೀತಿ, ಯಾವ ಯಾವ ಬಗೆಯ ಕೃಷಿ ಮಾಡುತ್ತೇವೆ ಎಂದು ರೈತರು ಪ್ರಧಾನಿಗೆ ವಿವರಿಸಿದರು.   ಕಮಲಮ್ಮ ಎಂಬ ರೈತ ಮಹಿಳೆ ಮೋದಿ ಜತೆ ಮಾತು ಆರಂಭಿಸಿದಾಗ, ಮೋದಿ ಕನ್ನಡದಲ್ಲಿ ಮಾತನಾಡಿದರು. ರೈತರು ಕನ್ನಡದಲ್ಲಿ ಮಾತನಾಡಿದ್ದನ್ನು ಅಲ್ಲಿದ್ದ ಇನ್ನೊಬ್ಬ ವ್ಯಕ್ತಿ ಹಿಂದಿಯಲ್ಲಿ ಅನುವಾದ ಮಾಡುತ್ತಿದ್ದರು.  ಇನ್ನೊಬ್ಬ ರೈತ ಮಾತನಾಡಿದಾಗ, ನೀವು ಹೇಗಿದ್ದೀರಾ? ನಿಮ್ಮ ಕೃಷಿ ಕೆಲಸಗಳು ಹೇಗಿವೆ? ಎಂದು ಪ್ರಧಾನಿ ಪ್ರಶ್ನಿಸಿದರು.  ಕರ್ನಾಟಕ ವಿಧಾನಸಭಾ  ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಮೋದಿ ತಮ್ಮ ಭಾಷಣವನ್ನು ಕನ್ನಡದಲ್ಲೇ ಆರಂಭಿಸುತ್ತಿದ್ದರು.  ಹುಬ್ಬಳ್ಳಿಯಲ್ಲಿ  ನಡೆದ ಪ್ರಚಾರ ಸಭೆಯಲ್ಲಿ ವರಕವಿ ಬೇಂದ್ರೆಯವರನ್ನು ಉಲ್ಲೆಖಿಸಿ ಕುರುಡು ಕಾಂಚಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು...’ ಕವನವನ್ನು ವಾಚಿಸಿದ್ದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

2018: ನವದೆಹಲಿ: ಚಂಡೀಗಡದ ಹಿರಿಯ ಐಎಎಸ್ ಅಧಿಕಾರಿ ಬಿ.ವಿ.ಆರ್. ಸುಬ್ರಮಣಿಯಂ ಅವರನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸೇವೆಗಳಿಗಾಗಿ ಕೇಂದ್ರ ಸರ್ಕಾರವು ನಿಯೋಜಿಸಿತು. ೧೯೮೭ರ ಐಎಎಸ್ ತಂಡದ ಅಧಿಕಾರಿಯಾಗಿರುವ ೫೫ರ ಹರೆಯದ ಸುಬ್ರಮಣಿಯಂ ಅವರು ಆಂಧ್ರಪ್ರದೇಶದವರಾಗಿದ್ದು, ಅವರನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿಯಾಗಿ ಹಾಲಿ ಸಿಎಸ್ ಬಿ.ಬಿ.ವ್ಯಾಸ್ ಅವರ ಸ್ಥಾನಕ್ಕೆ ನೇಮಿಸುವ ಸಾಧ್ಯತೆಗಳಿವೆ. ಸುಬ್ರಮಣಿಯಂ ಅವರು ಪ್ರಸ್ತುತ ಛತ್ತೀಸ್ ಗಢದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ನೇಮಕಾತಿ ಸಮಿತಿಯು ಸುಬ್ರಮಣಿಯಂ ಅವರನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸೇವೆಗಳಿಗಾಗಿ ನಿಯೋಜಿಸಲು ಒಪ್ಪಿಗೆ ನೀಡಿತು ಎಂದು ಸಿಬ್ಬಂದಿ ಸಚಿವಾಲಯದ ಪ್ರಕಟಣೆ ತಿಳಿಸಿತು.
2009: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಹೊಣೆ ಹೊತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, ಇದೇ ನೆಪದಿಂದ ಹಿಂದುತ್ವ ಸಿದ್ಧಾಂತದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಪಕ್ಷ ರಾಷ್ಟ್ರಾದ್ಯಂತ ಹಿನ್ನಡೆ ಅನುಭವಿಸಿಲ್ಲ. ಬದಲಾಗಿ ರಾಜ್ಯದಿಂದ ರಾಜ್ಯಕ್ಕೆ ಫಲಿತಾಂಶದ ಚಿತ್ರಣ ಬದಲಾಗಿದೆ. ಹಾಗಾಗಿ ಚುನಾವಣೆಗೆ ಒಬ್ಬರನ್ನೇ ಹೊಣೆಯನ್ನಾಗಿ ಮಾಡುವುದು ಸರಿಯಲ್ಲ ಎಂದು ಅವರು ವಿಶ್ಲೇಷಿಸಿದರು.

2009: ಮೂರು ದಿನಗಳ ತೀವ್ರ ಹೋರಾಟದ ನಂತರ ರಕ್ಷಣಾ ಪಡೆಗಳು ಲಾಲ್‌ಗಢದ ಪೊಲೀಸ್ ಠಾಣೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡವು. 2008ರ ನವೆಂಬರ್ ತಿಂಗಳಿನಿಂದ ಈ ಪೊಲೀಸ್ ಠಾಣೆ ಮಾವೋವಾದಿಗಳ ಹಿಡಿತದಲ್ಲಿತ್ತು. ನೆಲಬಾಂಬ್ ನಿಗ್ರಹ ವಾಹನದ ನೆರವಿನೊಂದಿಗೆ 'ದಾರಿ ಸುಗಮ' ಮಾಡಿಕೊಂಡ ರಕ್ಷಣಾ ಪಡೆಯ ಯೋಧರು, ಯಾವುದೇ ವಿರೋಧಗಳಿಲ್ಲದೇ ಒಳಗಿನಿಂದ ಬೀಗ ಹಾಕಿಕೊಂಡಿದ್ದ ಪೊಲೀಸ್ ಠಾಣೆ ಕಟ್ಟಡವನ್ನು ವಶಪಡಿಸಿಕೊಂಡರು.

2009: ಹಿರಿಯ ಐಎಎಸ್ ಅಧಿಕಾರಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸಿ.ಆರ್.ಚಿಕ್ಕಮಠ ಅವರನ್ನು ರಾಜ್ಯದ ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಆದೇಶ ಹೊರಡಿಸಿದರು. ಈವರೆಗೂ ಚುನಾವಣಾ ಆಯುಕ್ತರಾಗಿದ್ದ ಎಂ.ಆರ್.ಹೆಗಡೆ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಯಿತು. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ 308(1)ನೇ ಕಲಮಿನ ಅನ್ವಯ ರಾಜ್ಯಪಾಲರು ಈ ಆದೇಶ ಹೊರಡಿಸಿದರು.

2009: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿನ್ನಡೆಗೆ ತಮ್ಮ ಪುತ್ರ ವರುಣ್ ಗಾಂಧಿಯನ್ನು 'ಹರಕೆಯ ಕುರಿ'ಯಾಗಿ ಮಾಡಬಾರದು ಎಂದು ಹಿರಿಯ ಬಿಜೆಪಿ ನಾಯಕಿ ಮೇನಕಾ ಗಾಂಧಿ ನವದೆಹಲಿಯಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಆಗ್ರಹಿಸಿದರು. ಯಾರು ಕೆಲಸ ಮಾಡಬೇಕಿತ್ತೋ ಅವರು ಸರಿಯಾಗಿ ಕೆಲಸ ಮಾಡದೆ ಇದ್ದುದರಿಂದ ಪಕ್ಷಕ್ಕೆ ಸೋಲುಂಟಾಗಿದೆ, ಈ ಸೋಲಿಗೆ ವರುಣ್ ಹೊಣೆಯಲ್ಲ ಎಂದು ಅವರು ನುಡಿದರು.

2009: ಗುಜರಾತ್ ವಿಧಾನಸಭೆ ಅಂಗೀಕರಿಸಿದ ಕಠಿಣ ಭಯೋತ್ಪಾದನಾ ವಿರೋಧಿ ಮಸೂದೆಯನ್ನು ತಿದುಪಡಿ ಮಾಡುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿತು. ನವದೆಹಲಿಯಲ್ಲಿ ಈ ಬಗ್ಗೆ ವಿವರ ನೀಡಿದ ಗೃಹ ಸಚಿವ ಪಿ.ಚಿದಂಬರಂ, ಮೂರು ತಿದ್ದುಪಡಿಗಳಿಗಾಗಿ ಗುಜರಾತ್ ಸಂಘಟಿತ ಅಪರಾಧ ನಿಯಂತ್ರಣ ಮಸೂದೆಯನ್ನು (ಗುಜ್‌ಕೋಕ) ಹಿಂದಕ್ಕೆ ಕಳುಹಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು.

2009: ತೆಹರಿಕ್-ಎ-ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಸೂದ್ ಬಂಡುಕೋರ ಪಡೆ ವಿರುದ್ಧ ಪಾಕಿಸ್ಥಾನದ ಪಡೆಗಳು ಇದೇ ಮೊತ್ತಮೊದಲ ಬಾರಿಗೆ ದಾಳಿ ನಡೆಸಿ, ದಕ್ಷಿಣ ವಜೀರಿಸ್ಥಾನದಲ್ಲಿ ಕನಿಷ್ಠ 50 ಭಯೋತ್ಪಾದರನ್ನು ಹತ್ಯೆಗೈದವು. ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದ ಬಳಿಕ ಪಾಕ್ ಸೇನೆ  ವಜೀರಿಸ್ಥಾನದಲ್ಲಿ ಉಗ್ರರನ್ನು ಮಣಿಸಲು ಮುಂದಾಯಿತು.

2009: ಬೆಂಗಳೂರು ನಗರದ 'ಟಾಪ್ ಆಫ್ ದಿ ವರ್ಲ್ಡ್' ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯ ಸ್ಥಾಪಕ ನಿರ್ದೇಶಕ ಡಾ ಎಸ್ ರಮೇಶ್ ಒಂದು ಗಂಟೆ ಅವಧಿಯಲ್ಲಿ ಯಾರ ಸಹಾಯವೂ ಇಲ್ಲದೇ 1,800 ಭಾವಚಿತ್ರಗಳಿಗೆ ಸಹಿ ಹಾಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು. ಡಾ. ರಮೇಶ್ ಅವರ ಈ ವಿಶಿಷ್ಟ ದಾಖಲೆಗೆ ಈದಿನ ವಿದ್ಯಾರಣ್ಯಪುರದ ಸೈಂಟ್ ಫಿಲೋಮಿನಾಸ್ ಇಂಗ್ಲಿಷ್ ಸ್ಕೂಲ್‌ನಲ್ಲಿ ಸೇರಿದ್ದ ನೂರಾರು ಜನರು ಸಾಕ್ಷಿಯಾದರು. ಅವರು ಈ ಮೊದಲೇ ವಿವಿಧ ರೀತಿಯ ಸಾಧನೆ ಮಾಡುವ ಮೂಲಕ 38 ವಿಶ್ವ ದಾಖಲೆ ಮತ್ತು ಏಳು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದರು. ಈ ಹಿಂದೆ ಸಿಂಗಪುರದ ಜೆಜೆ ಲಾಮ್ ಒಂದು ಗಂಟೆಯಲ್ಲಿ 1200 ಭಾವಚಿತ್ರಗಳಿಗೆ ಸಹಿ ಹಾಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು.

2009: ಚಲನಚಿತ್ರ ನಿರ್ಮಾಪಕ ಆರ್.ಲಕ್ಷ್ಮಣ್ (82) ಅವರು ಬೆಂಗಳೂರಿನಲ್ಲಿ ನಿಧನರಾದರು. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ ಲಕ್ಷ್ಮಣ್ ಚಿತ್ರ ವಿತರಕರಾಗಿದ್ದರು. 1960 ರ ದಶಕದಲ್ಲಿ ಕನ್ನಡ ಡಬ್ಬಿಂಗ್ ಚಿತ್ರಗಳ ವಿರುದ್ಧ ನಡೆದ ಚಳವಳಿ ಹಾಗೂ ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳಿಗೇ ಆದ್ಯತೆ ಕೊಡಬೇಕೆಂದು ಒತ್ತಾಯಿಸಿ ನಡೆದ ಚಳವಳಿಯಲ್ಲಿ ಲಕ್ಷ್ಮಣ್ ಅವರ ಪಾತ್ರವೂ ಹಿರಿಯದು. ಬಳಿಕ ಬೆಂಗಳೂರಿನಲ್ಲಿ ಭಾರತ್ ಚಿತ್ರಮಂದಿರದ ನಿರ್ವಾಹಕರಾಗಿ ಅಲ್ಲಿ ಗೋಪಾಲ್ ಅವರೊಡಗೂಡಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವ ಪಣತೊಟ್ಟು, ಕನ್ನಡ ಚಿತ್ರಗಳತ್ತ ಪ್ರೇಕ್ಷಕರು ಒಲಿಯುವಂತೆ ಮಾಡಿದರು.  ಡಾ. ರಾಜ್‌ಕುಮಾರ್ ಅಭಿನಯದ 'ಬಂಗಾರದ ಮನುಷ್ಯ', ನಟಸಾರ್ವಭೌಮ ಮುಂತಾದ ಚಿತ್ರಗಳನ್ನು ನಿರ್ಮಿಸಿದರು. ದಕ್ಷಿಣ ಭಾರತ ಚಲನಚಿತ್ರ ಮಂಡಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ಸಲ್ಲಿಸಿದರು.

2009: ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕ ಹಾಗೂ ಖ್ಯಾತ ಅನುವಾದಕ ಡಾ.ತಿಪ್ಪೇಸ್ವಾಮಿ ಅವರನ್ನು ನವದೆಹಲಿಯ ಭಾರತೀಯ ಅನುವಾದ ಪರಿಷತ್ ಪ್ರತಿಷ್ಠಿತ ದ್ವಿವಾಗೀಶ ಪುರಸ್ಕಾರಕ್ಕೆ ಆಯ್ಕೆ ಮಾಡಿತು.

 2009: ತನ್ನ ಸಹವರ್ತಿ ಸ್ಟೇಟ್ ಬ್ಯಾಂಕ್ ಆಫ್ ಇಂದೋರನ್ನು ತನ್ನೊಳಗೆ ವಿಲೀನಗೊಳಿಸುವ ಪ್ರಸ್ತಾವಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತು.

2008: ಬೆಂಗಳೂರು ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಷೇಧಿತ ಉಲ್ಫಾ ಉಗ್ರಗಾಮಿ ಸಂಘಟನೆಗೆ (ಪಿಆರ್ಇಪಿಎಕೆ) ಸೇರಿದ ನಾಲ್ವರು ಉಗ್ರಗಾಮಿಗಳನ್ನು ಬಂಧಿಸಿದರು. ಮಣಿಪುರದ ತಲ್ಲಬೆ, ಜಾನಿ, ಜಿತನ್ಸಿಂಗ್ ಮತ್ತು ಮೇಘಚಂದರ್ ಬಂಧಿತರು. ಉಗ್ರರು ಕಗ್ಗದಾಸನಪುರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಪಿಆರ್ಇಪಿಎಕೆ ಸಂಘಟನೆಯನ್ನು 1970ರಲ್ಲಿಯೇ ಸರ್ಕಾರ ನಿಷೇಧಿಸಿತ್ತು.

2007: ಕ್ರಿ.ಪೂ.1800ರಿಂದ 1500 ವರೆಗಿನ ಋಗ್ವೇದದ 30 ಹಸ್ತಪ್ರತಿಗಳು ಸೇರಿದಂತೆ ಒಟ್ಟು 38 ಪುರಾತನ ವಿಷಯಗಳನ್ನು ಯುನೆಸ್ಕೊ ತನ್ನ ಪರಂಪರೆ ಪಟ್ಟಿಯಲ್ಲಿ ಹೊಸದಾಗಿ ಸೇರಿಸಿತು. ಭವಿಷ್ಯದ ಪೀಳಿಗೆಗೆ ಪುರಾತನ ಸಂಸ್ಕೃತಿಯನ್ನು ಪರಿಚಯಿಸುವ ಕಾರಣಕ್ಕಾಗಿ ಇವನ್ನು ಸಂರಕ್ಷಿಸಲಾಗುತ್ತಿದೆ ಎಂದು ಯುನೆಸ್ಕೊ ಪ್ರಕಟನೆ ತಿಳಿಸಿತು .ವಿಶ್ವದ ಮೊದಲ ಉದ್ದನೆಯ ಸಾಕ್ಷ್ಯಚಿತ್ರ ಸೇರಿದಂತೆ ಸ್ವೀಡಿಷ್ ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಕುಟುಂಬ ಒಡೆತನದ ಪತ್ರಾಗಾರ ಹಾಗೂ ದಕ್ಷಿಣ ಆಫ್ರಿಕಾದ ವರ್ಣನೀತಿ ವಿರೋಧಿ ನಾಯಕ ನೆಲ್ಸನ್ ಮಂಡೇಲಾ ಅವರ ಸಾಧನೆಯನ್ನು ಕೂಡಾ ಯುನೆಸ್ಕೊ ಪರಂಪರೆ ಪಟ್ಟಿಯಲ್ಲಿ ಸೇರಿಸಿತು. ವಿಶ್ವಸಂಸ್ಥೆಯ ವೈಜ್ಞಾನಿಕ ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗ ತಯಾರಿಸಿರುವ `ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್' ಎನ್ನುವ ಯೋಜನೆಯಲ್ಲಿ ಈ ಪಾರಂಪರಿಕ ಪಟ್ಟಿ ಇದೆ. ಯುನೆಸ್ಕೊ ನಿರ್ದೇಶಕ ಕೂಚಿರೊ ಮತ್ ಸೂರಾ ಅವರು ಈ ಪಾರಂಪರಿಕ ಪಟ್ಟಿ ಕುರಿತು ಮಾಹಿತಿ ನೀಡಿದರು. ವಿಶ್ವದ ಪಾರಂಪರಿಕ ಹಾಗೂ ಪುರಾತನ ವಸ್ತುಗಳನ್ನು ಸಂರಕ್ಷಿಸುವ ಈ ಯೋಜನೆಯನ್ನು ವಿಶ್ವಸಂಸ್ಥೆಯು 1992ರಿಂದ ಆರಂಭಿಸಿತು. ಈ ಬಾರಿ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ `ದಿ ಸ್ಟೋರಿ ಆಫ್ ಕೆಲ್ಲಿ ಗ್ಯಾಂಗ್' ಎಂಬ ವಿಶ್ವದ ಮೊದಲ ಸಾಕ್ಷ್ಯ ಚಿತ್ರ (1906), 1840ರಿಂದ 1900ರವರೆಗೆ ಇದ್ದ ನೊಬೆಲ್ ಕುಟುಂಬದ ಪುರಾತನ ಪತ್ರಾಗಾರ ಹಾಗೂ ಸ್ವೀಡಿಷ್ ಚಲನಚಿತ್ರ ನಿರ್ದೇಶಕ ಇನ್ಗ್ ಮರ್ ಬರ್ಗ್ ಮನ್ ಮತ್ತು 1914ರಿಂದ 1923ರವರೆಗಿನ ರೆಡ್ ಕ್ರಾಸ್ ಸಂಸ್ಥೆಯ ದಾಖಲೆಗಳನ್ನು ಸಂರಕ್ಷಿಸಿಡುವ ಕಾರ್ಯವನ್ನು ಹಮ್ಮಿಕೊಂಡಿತ್ತು. ದಕ್ಷಿಣ ಕೊರಿಯಾದ ಕಾಯಾ ಪರ್ವತದಲ್ಲಿ ಸಂರಕ್ಷಿಸಿರುವ 1237ರಿಂದ 1248ವರೆಗಿನ 81,258 ಮರದ ಕೆತ್ತನೆಗಳ ಸಂಗ್ರಹ ಕೂಡಾ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಬುದ್ಧನ ಕುರಿತಾದ ಸಂಪೂರ್ಣ ಪಠ್ಯವನ್ನು ಹೊಂದಿದೆ ಎಂಬ ನಂಬಿಕೆ ಇದೆ. ಕೆನಡಾವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 1670ರ ಹಡ್ಸನ್ನಿನ ಬೇ ಕಂಪನಿ, ಮಧ್ಯ ವಿಶ್ವದ ಅಪರೂಪದ ಭೂಪಟ ಕೂಡಾ ಯುನೆಸ್ಕೊ ಪರಂಪರೆಯ ಹೊಸ ಪಟ್ಟಿಯಲ್ಲಿ ಸ್ಥಾನ ಪಡೆದವು.

2007:  ಆಂಧ್ರ ಪ್ರದೇಶದ ಸರ್ಕಾರ ಮುಸ್ಲಿಮರಿಗೆ ಜಾತಿ ಆಧಾರದ ಮೇಲೆ ಶಿಕ್ಷಣ ಹಾಗೂ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಲು ಉದ್ದೇಶಿಸಿರುವುದನ್ನು ವಿರೋಧಿಸಿ ಮುಸ್ಲಿಂ ಸಂಯುಕ್ತ ಕ್ರಿಯಾ ಸಮಿತಿ ಹಾಗೂ ಕೆಲ ಮುಸ್ಲಿಂ ಧಾರ್ಮಿಕ ಸಂಘಟನೆಗಳು `ಫತ್ವಾ' ಹೊರಡಿಸಿದವು. ತಮ್ಮ ಜನಾಂಗವನ್ನು ಮೇಲುಸ್ತರಕ್ಕೆ ತರಲು ಜಾತಿ ಆಧಾರದ ಮೇಲೆ ಮೀಸಲು ಕಲ್ಪಿಸುವುದರಿಂದ ಸಾದ್ಯ ಎನ್ನುವುದು ಹುಚ್ಚು ಸಾಹಸ. ಈ ರೀತಿ ಮೀಸಲಾತಿ ಪಡೆಯುವುದು ಇಸ್ಲಾಂ ಧರ್ಮಕ್ಕೆ ವಿರೋಧವಾದುದು ಎಂದು ಆಲ್ ಇಂಡಿಯಾ ಮಜ್ಲೀಸ್ - ಎ- ಇತ್ತೆಹಾದುಲ್ ಮುಸ್ಲಿಮೀನ್ ವಕ್ತಾರ ಹಾಗೂ ಸಂಸದ ಅಸಾದ್ದುದೀನ್ ಒವಾಸಿ ಸ್ಪಷ್ಟಪಡಿಸಿದರು.

 2007: ರಾಜ್ಯಸಭೆಯ ಮಾಜಿ ಉಪಸಭಾಪತಿ ನಜ್ಮಾ ಹೆಫ್ತುಲ್ಲಾ ಅವರಿಗೆ 2007ನೇ ಸಾಲಿನ `ವೀರಾಂಗನ ಸಮ್ಮಾನ್' ಪ್ರಶಸ್ತಿ ಲಭಿಸಿತು. ನಜ್ಮಾ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಯಿತು.  ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ಮಧ್ಯಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮೀಬಾಯಿ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಜ್ಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಹುತಾತ್ಮ ಚಂದ್ರಶೇಖರ್ ಆಜಾದ್ ಸ್ಮರಣಾರ್ಥ ನೀಡಲಾಗುವ ಪ್ರಶಸ್ತಿಯನ್ನು ಛತ್ತೀಸಗಢದ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಕೇಂದ್ರಕ್ಕೆ ಪ್ರದಾನ ಮಾಡಲಾಯಿತು. ಬುಡಕಟ್ಟು ಜನರ ಶಿಕ್ಷಣ, ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ಉನ್ನತೀಕರಣಕ್ಕೆ ಸಲ್ಲಿಸಿದ ಸೇವೆಗಾಗಿ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮಕ್ಕೆ ಈ ಪ್ರಶಸ್ತಿ ದೊರಕಿತು. ಈ ಪ್ರಶಸ್ತಿಯು ಒಂದೂವರೆ ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2007: ಪತ್ನಿ ಮತ್ತು ತನ್ನ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದ ಮಧ್ಯ ಪ್ರದೇಶದ ವಿಜೇಂದ್ರ ಸಿಂಗ್ ಗೆ ದಿವಾಸ್ ಸೆಷನ್ಸ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತು. ಈತ 2005ರ ಫೆಬ್ರುವರಿ 27ರಂದು ಹರಿತವಾದ ಆಯುಧ ಬಳಸಿ ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದ.

2007: 1975ರ ಹಿಟ್ ಚಿತ್ರ `ಜೈ ಸಂತೋಷಿ ಮಾ'ದಲ್ಲಿ ಸಂತೋಷಿ ಮಾ ಪಾತ್ರ ವಹಿಸಿದ್ದ ಅನಿತಾ ಗುಹಾ (70) ಅವರು ಹೃದಯಾಘಾತದಿಂದ ಮುಂಬೈಯಲ್ಲಿ ನಿಧನರಾದರು. ಪಶ್ಚಿಮ ಬಂಗಾಳದಿಂದ ಅವಕಾಶ ಅರಸಿ ಮುಂಬೈಗೆ ಬಂದ ಅನಿತಾ ಪೂರ್ಣಿಮಾ, ಪ್ಯಾರ್ ಕೀ ರಾಹೇ, ಗೇಟ್ ವೇ ಆಫ್ ಇಂಡಿಯಾ, ಸಂಜೋಗ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಸಂಪೂರ್ಣ ರಾಮಾಯಣ ಚಿತ್ರದಲ್ಲಿ ಅನಿತಾ ಅವರು ಸೀತೆಯ ಪಾತ್ರ ನಿರ್ವಹಿಸಿದ್ದರು.

2007: ಬ್ರಿಟನ್ ಸಂಸತ್ತಿನ ಅತಿ ಹಿರಿಯ ಸದಸ್ಯ ಭಾರತೀಯ ಮೂಲದ ಪಿಯಾರ ಸಿಂಗ್ ಖಾಬ್ರಾ (82) ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾದರು. ಪಂಜಾಬಿನ ಕಹರ್ಪುರದಲ್ಲಿ ಜನಿಸಿದ್ದ ಖಾಬ್ರಾ 1959ರಲ್ಲಿ ಬ್ರಿಟನ್ನಿಗೆ ವಲಸೆ ಹೋಗಿದ್ದರು. ಅಲ್ಲಿ ಶಿಕ್ಷಕನಾಗಿ ಜೀವನ ಆರಂಬಿಸಿದ್ದ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, 1992ರಲ್ಲಿ ಲೇಬರ್ ಪಕ್ಷದಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದರು.

2007: ಮೂರು ತಿಂಗಳ ಹಿಂದೆ 10ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ತಮ್ಮ ಪುತ್ರ ಧಿಲೀಪನ್ ರಾಜ್ ಚೆನ್ನೈಗೆ ಸಮೀಪದ ಮನಪ್ಪರೈಯ ಖಾಸಗಿ `ಮತಿ ಸರ್ಜಿಕಲ್ ಹಾಗೂ ಮೆಟರ್ನಿಟಿ ಆಸ್ಪತೆ'ಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ವಿಶ್ವದಾಖಲೆ ಸ್ಥಾಪಿಸಿದ್ದನ್ನು ಬಹಿರಂಗ ಪಡಿಸಿದ ಆತನ ತಂದೆ ಡಾ. ಮುರುಗೇಶನ್ ಇದನ್ನು ಸಾಬೀತು ಪಡಿಸುವ ಸಿಡಿ ಪ್ರದರ್ಶಿಸಿ ಸಹೋದ್ಯೋಗಿಗಳನ್ನು ಅಚ್ಚರಿಯಲ್ಲಿ ಕೆಡವಿದರು. ತಂದೆ ಮುರುಗೇಶನ್ ಹಾಗೂ ತಾಯಿ ಗಾಂಧಿಮತಿ ಮೇಲ್ವಿಚಾರಣೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು.

2006: ಭಾರತ - ಪಾಕ್ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪೂಂಚ್ ಮತ್ತು ಪಾಕಿಸ್ತಾನದ ರಾವಲ್ ಕೋಟ್ ನಡುವೆ ಮತ್ತೊಂದು ಬಸ್ ಸೇವೆಯನ್ನು ಈದಿನ ಆರಂಭಿಸಲಾಯಿತು.

1996: `ವಿಶ್ವದಲ್ಲಿ ಪರಮಾಣು ಅಸ್ತ್ರ ಪರೀಕ್ಷೆ ನಿಷೇಧ' ಕುರಿತ ಜಿನೀವಾ ಸಮ್ಮೇಳನದಲ್ಲಿ ಸಿಟಿಬಿಟಿಗೆ ಸಹಿ ಹಾಕದೇ ಇರಲು ಭಾರತವು ತೀರ್ಮಾನಿಸಿತು.

1987: ಪ್ರಸಿದ್ಧ ಪಕ್ಷಿ ಶಾಸ್ತ್ರಜ್ಞ ಸಲೀಂ ಅಲಿ ನಿಧನರಾದರು.

1976: ಭಾರತೀಯ ಕ್ರಿಕೆಟಿಗ ದೇಬಸಿಸ್ ಮೊಹಂತಿ ಜನನ.

1960: ಫ್ಲಾಯ್ಡ್ ಪ್ಯಾಟರ್ಸನ್ ಅವರು ಇಂಗ್ಮಾರ್ ಜಾನ್ಸನ್ ಅವರನ್ನು ಸೋಲಿಸುವ ಮೂಲಕ ಜಾಗತಿಕ ಹೆವಿವೇಯ್ಟ್ ಬಾಕ್ಸಿಂಗ್ ಪ್ರಶಸ್ತಿಯನ್ನು ಮತ್ತೆ ಪಡೆದುಕೊಂಡ ಜಗತ್ತಿನ ಮೊತ್ತ ಮೊದಲ ಬಾಕ್ಸರ್ ಎನಿಸಿಕೊಂಡರು.

1954: ಸಾಹಿತಿ ಬಸವರಾಜ ಸಬರದ ಅವರು ಬಸಪ್ಪ ಸಬರದ- ಬಸಮ್ಮ ದಂಪತಿಯ ಮಗನಾಗಿ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಈ ದಿನ ಜನಿಸಿದರು.

1952: ಇಂಗ್ಲಿಷ್ ಸಾಹಿತ್ಯದಲ್ಲೇ ಬೃಹತ್ ಕಾದಂಬರಿ `ಎ ಸ್ಯುಟೇಬಲ್ ಬಾಯ್' ಎಂಬ ಕೃತಿ ನೀಡಿದ ಭಾರತೀಯ ಕಾದಂಬರಿಕಾರ ವಿಕ್ರಮ್ ಸೇಠ್ ಅವರು ಈದಿನ ಕೋಲ್ಕತ್ತಾದಲ್ಲಿ (ಅಂದಿನ ಕಲ್ಕತ್ತಾ) ಜನಿಸಿದರು.

1952: ಶಾಸ್ತ್ರೀಯ, ಸುಗಮ ಸಂಗೀತ ಎರಡರಲ್ಲೂ ಪ್ರಾವೀಣ್ಯ ಗಳಿಸಿದ್ದ ಪ್ರತಿಭಾನ್ವಿತ ಗಾಯಕ ಮತ್ತೂರು ಲಕ್ಷ್ಮೀ ಕೇಶವ ಅವರು ಕೆ. ಸೂರ್ಯ ನಾರಾಯಣ ಅವಧಾನಿ- ಸುಂದರಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದಲ್ಲಿ ಜನಿಸಿದರು.

1926: ಕಲಾವಿದ ಮಲ್ಪೆ ರಾಮದಾಸ ಸಾಮಗ ಜನನ.

1897: ಮುಂಬೈಯಲ್ಲಿ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ ಕೇಂದ್ರ ಕಚೇರಿಗೆ `ವಿಕ್ಟೋರಿಯಾ ಟರ್ಮಿನಸ್' ಎಂದು ಹೆಸರಿಡಲಾಯಿತು. ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ ಅವರ ರಾಜ್ಯಭಾರದ ಸ್ವರ್ಣಮಹೋತ್ಸವದ ನೆನಪಿಗಾಗಿ ಈ ಕ್ರಮ ಕೈಗೊಳ್ಳಲಾಯಿತು. 99 ವರ್ಷಗಳ ಬಳಿಕ 1996ರಲ್ಲಿ ಈ ಟರ್ಮಿನಸ್ ಗೆ `ಛತ್ರಪತಿ ಶಿವಾಜಿ ಟರ್ಮಿನಸ್' ಎಂದು ಮರುನಾಮಕರಣ ಮಾಡಲಾಯಿತು.

1789: ಫ್ರೆಂಚ್ ಕ್ರಾಂತಿಯ ಮಹತ್ವದ ಘಟನೆಯಾಗಿ ನ್ಯಾಷನಲ್ ಅಸೆಂಬ್ಲಿ ತನ್ನ ಎಂದಿನ ಸಮಾವೇಶ ತಾಣಕ್ಕೆ ಬದಲಾಗಿ ಪ್ಯಾರಿಸಿನ ಟೆನಿಸ್ ಕೋರ್ಟ್ ಒಂದರಲ್ಲಿ ಸಮಾವೇಶಗೊಂಡಿತು. ಫ್ರಾನ್ಸಿಗೆ ಸಂವಿಧಾನ ನೀಡುವವರೆಗೆ ಅಲ್ಲಿಂದ ಕದಲುವುದಿಲ್ಲ ಎಂಬ ಪ್ರತಿಜ್ಞೆಯನ್ನೂ ಈ ಸಮಾವೇಶ ಮಾಡಿತು. ಈ ಪ್ರತಿಜ್ಞೆ `ಟೆನಿಸ್ ಕೋರ್ಟ್ ಪ್ರತಿಜ್ಞೆ' ಎಂದೇ ಖ್ಯಾತಿ ಪಡೆದಿದೆ.

1756: ಬಂಗಾಳದ ನವಾಬ ಸಿರಾಜ್- ಉದ್- ದೌಲನ ಆಜ್ಞೆಯಂತೆ ಸೆರೆಹಿಡಿಯಲಾದ 146 ಮಂದಿ ಬ್ರಿಟಿಷ್ ಕಾವಲುಪಡೆ ಸೈನಿಕರನ್ನು 18 ಅಡಿ ಉದ್ದ 15 ಅಡಿ ಅಗಲದ ಸುರಂಗದಲ್ಲಿ ಕೂಡಿ ಹಾಕಲಾಯಿತು. ಅವರಲ್ಲಿ 23 ಮಂದಿ ಮಾತ್ರ ಬದುಕಿ ಉಳಿದರು. ಈ ಘಟನೆ `ಬ್ಲ್ಯಾಕ್ ಹೋಲ್ ಆಫ್ ಕಲ್ಕತ್ತ ಅಟ್ರೋಸಿಟಿ' ಎಂದೇ ಖ್ಯಾತವಾಗಿದೆ. ನಂತರ ನಡೆದ ಸಂಶೋಧನೆಗಳಲ್ಲಿ ಈ ಸುರಂಗಕ್ಕೆ ತಳ್ಳಲಾದವರ ಸಂಖ್ಯೆ 64 ಮಾತ್ರ ಹಾಗೂ ಅವರಲ್ಲಿ ಬದುಕಿ ಉಳಿದವರ ಸಂಖ್ಯೆ 21 ಎಂದು ತಿಳಿದುಬಂತು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment