ಇಂದಿನ ಇತಿಹಾಸ History
Today
ಜೂನ್ 17
2020: ನವದೆಹಲಿ: ಭಾರತವು ಶಾಂತಿಯನ್ನು ಬಯಸಿದೆ ಆದರೆ ಪ್ರಚೋದಿಸಿದರೆ ಸೂಕ್ತ ಉತ್ತರ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಸ್ಪಷ್ಟ ಹಾಗೂ ತೀಕ್ಷ್ಣ ಸಂದೇಶವನ್ನು 2020 ಜೂನ್ 17ರ ಬುಧವಾರ ನೀಡಿದರು. ಸೋಮವಾರ ಸಂಜೆ ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವಿನ ಗಡಿ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಚೊಚ್ಚಲ ಹೇಳಿಕೆ ಇದಾಗಿದೆ. ಗಲ್ವಾನ್ ಕಣಿವೆಯಲ್ಲಿ ಸಾವನ್ನಪ್ಪಿದ ೨೦ ಸೈನಿಕರಿಗೆ ಗೌರವ ಸೂಚಕವಾಗಿ ಪ್ರಧಾನ ಮಂತ್ರಿಯವರು ಎರಡು ನಿಮಿಷಗಳ ಮೌನದೊಂದಿಗೆ ಕೊರೋನಾವೈರಸ್ ನಿಭಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆಗಿನ ತಮ್ಮ ಸಭೆಯನ್ನು ಆರಂಭಿಸಿದರು. ‘ನಮ್ಮ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ. ನಮಗೆ, ದೇಶದ ಏಕತೆ ಮತ್ತು ಸಾರ್ವಭೌಮತ್ವ ಅತ್ಯಂತ ಮುಖ್ಯವಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪಸ್ಥಿತರಿದ್ದರು. ಪೂರ್ವ ಲಡಾಕ್ನಲ್ಲಿ ಸೋಮವಾರ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಸೇನೆಯ ಮಧ್ಯೆ ಕಲ್ಲು ತೂರಾಟ, ಸರಳುಗಳೊಂದಿಗೆ ಹೊಡೆದಾಟ ಕೂಡಾ ನಡೆಯಿತು. ಘರ್ಷಣೆಯ ನಂತರ, ಉಭಯ ಕಡೆಯವರು ಹೋರಾಟ ನಡೆದ ಸ್ಥಳದಿಂದ ಹಿಂದಕ್ಕೆ ಹೋದರು ಎಂದು ಭಾರತೀಯ ಸೇನೆಯ ಹೇಳಿಕೆ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಚೀನಾದೊಂದಿಗೆ ಸಂಪರ್ಕ ಹೊಂದಿದ ೫೨ ಮೊಬೈಲ್ ಅಪ್ಲಿಕೇಶನ್ಗಳ (ಆಪ್) ಬಳಕೆ ಸುರಕ್ಷಿತವಲ್ಲ ಮತ್ತು ಇವು ಭಾರತದ ಹೊರಗೆ ಹೆಚ್ಚಿನ ಪ್ರಮಾಣದ ಮಾಹಿತಿ (ಡೇಟಾ) ಸಂಗ್ರಹದ ಉದ್ದೇಶವನ್ನು ಹೊಂದಿವೆ ಎಂದು ಹೇಳಿರುವ ಭಾರತೀಯ ಗುಪ್ತಚರ ಸಂಸ್ಥೆಗಳು ಈ ಆಪ್ಗಳನ್ನು ನಿರ್ಬಂಧಿಸುವಂತೆ ಇಲ್ಲವೇ ಅವುಗಳನ್ನು ಬಳಕೆ ಮಾಡದಂತೆ ಜನರಿಗೆ ಸಲಹೆ ಮಾಡಬೇಕು ಎಂದು ಸರ್ಕಾರಕ್ಕೆ 2020 ಜೂನ್ 17ರ ಬುಧವಾರ ಶಿಫಾರಸು ಮಾಡಿವೆ. ಭದ್ರತಾ ಸಂಸ್ಥೆಯು ಸರ್ಕಾರಕ್ಕೆ ಕಳುಹಿಸಿರುವ ಅಪ್ಲಿಕೇಶನ್ಗಳ ಪಟ್ಟಿಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಜೂಮ್, ಶಾರ್ಟ್-ವಿಡಿಯೋ ಅಪ್ಲಿಕೇಶನ್ ಟಿಕ್ಟಾಕ್, ಮತ್ತು ಯುಸಿ ಬ್ರೌಸರ್, ಕ್ಸೆಂಡರ್, ಶೇರ್ ಇಟ್ ಮತ್ತು ಕ್ಲೀನ್-ಮಾಸ್ಟರ್ನಂತಹ ಇತರ ಉಪಯುಕ್ತತೆಯ ಮತ್ತು ವಿಷಯ ಸಂಬಂಧಿತ ಅಪ್ಲಿಕೇಶನ್ಗಳು ಸೇರಿವೆ. ಗುಪ್ತಚರ ಸಂಸ್ಥೆಗಳ ಶಿಫಾರಸನ್ನು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಬೆಂಬಲಿಸಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ, ಇದು ಭಾರತದ ಭದ್ರತೆಗೆ ಹಾನಿಕರ ಎಂದು ಗುಪ್ತಚರ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. "ಶಿಫಾರಸುಗಳ ಕುರಿತು ಚರ್ಚೆಗಳು ಮುಂದುವರೆದಿದೆ’ ಎಂದು ಹೇಳಿದ ಅಧಿಕಾರಿ, ’ಪ್ರತಿ ಮೊಬೈಲ್ ಅಪ್ಲಿಕೇಶನ್ನ ಮಾನದಂಡಗಳು ಮತ್ತು ಅಪಾಯಗಳನ್ನು ಒಂದೊಂದಾಗಿ ಪರಿಶೀಲಿಸಬೇಕಾಗುತ್ತದೆ’ ಎಂದು ವಿವರಿಸಿದರು. ಈ ವರ್ಷದ ಏಪ್ರಿಲ್ನಲ್ಲಿ, ರಾಷ್ಟ್ರೀಯ ಸೈಬರ್ ಸೆಕ್ಯುರಿಟಿ ಏಜೆನ್ಸಿಯಾದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಆಫ್ ಇಂಡಿಯಾ (ಸಿಇಆರ್ಟಿ-ಇನ್) ಶಿಫಾರಸಿನ ಮೇರೆಗೆ ಗೃಹ ಸಚಿವಾಲಯವು ಜೂಮ್ ಬಳಕೆ ಮಾಡದಂತೆ ಸಲಹೆ ನೀಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಹದಿನಾರು ಬಿಹಾರ ರೆಜಿಮೆಂಟ್ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಸೇರಿದಂತೆ ಒಟ್ಟು ೨೦ ಯೋಧರ ಪ್ರಾಣಹಾನಿಗೆ ಕಾರಣವಾಧ ಗಲ್ವಾನ್ ಕಣಿವೆಯಲ್ಲಿ ನಡೆದ ಹತ್ಯಾಕಾಂಡ ಮಾದರಿಯ ಘರ್ಷಣೆ ಭಾರತೀಯ ಭೂಪ್ರದೇಶದ ಒಳಗಿನ ಪೆಟ್ರೋಲಿಂಗ್ ಪಾಯಿಂಟ್ ೧೪ರಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್ ಎ) ಹಾಕಿದ್ದ ಟೆಂಟನ್ನು ತೆಗೆದುಹಾಕುವಂತೆ ಭಾರತೀಯ ಸೇನೆ ಆಗ್ರಹಿಸಿದ ಬಳಿಕ ಸಂಭವಿಸಿತು ಎಂದು ಸುದ್ದಿ ಮೂಲಗಳು 2020 ಜೂನ್ 17ರ ಬುಧವಾರ ತಿಳಿಸಿವೆ. ಹೋರಾಟ ಹೇಗೆ ಪ್ರಾರಂಭವಾಯಿತು ಎಂಬುದರ ಕುರಿತು ಕೆಲವು ವಿವರಗಳು ಹೊರಬಂದಿವೆ. ಭಾರತೀಯ ಸೈನಿಕರ ಆಗ್ರಹಕ್ಕೆ ಪಿಎಲ್ಎ ಸೈನಿಕರು ಪಾಯಿಂಟ್ ೧೪ ರ ಮೇಲಿರುವ ಎತ್ತರದ ಭಾಗದಿಂದ ಕಲ್ಲುಗಳನ್ನು ಎಸೆದು ಪ್ರತಿಕ್ರಿಯಿಸಿದರು ಮತ್ತು ನಂತರ ಕಬ್ಬಿಣದ ಸರಳುಗಳು ಮತ್ತು ದೊಣ್ಣೆಗಳನ್ನು ಬಳಸಿ ಹಲ್ಲೆ ನಡೆಸಿದರು ಎಂದು ಮೂಲಗಳು ಹೇಳಿವೆ. ಹೋರಾಟದಲ್ಲಿ ಉಭಯ ಸೇನೆಗಳ ಹೆಚ್ಚಿನ ಸಂಖ್ಯೆಯ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿದವು. ವರದಿಗಳ ಪ್ರಕಾರ ಚೀನೀ ಸೇನೆಯಲ್ಲೂ ಸುಮಾರು ೪೩ ಮಂದಿ ಸಾವು ನೋವಿಗೆ ಈಡಾಗಿದ್ದಾರೆ ಎನ್ನಲಾಗಿದೆ. ಗಲ್ವಾನ್ ಮತ್ತು ಶ್ಯೋಕ್ ನದಿಗಳ ಸಂಗಮದ ಸಮೀಪವಿರುವ ಪಾಯಿಂಟ್ ೧೪, ಕಳೆದ ವಾರ ವಿಭಾಗೀಯ ಕಮಾಂಡರ್-ಮಟ್ಟದ ಸಭೆಯ ಸ್ಥಳವಾಗಿತ್ತು, ಅಲ್ಲಿ ಭಾರತೀಯ ಸೇನೆ ಮತ್ತು ಪಿಎಲ್ಎ ಸೈನ್ಯವನ್ನು ವಿರಳಗೊಳಿಸಲು ಒಪ್ಪಿಕೊಳ್ಳಲಾಗಿತ್ತು. ಮೇ ತಿಂಗಳಲ್ಲಿ ಆರಂಭವಾದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ತಿಂಗಳ ಕಾಲದ ಬಿಕ್ಕಟ್ಟನ್ನು ಕೊನೆಗೊಳಿಸುವ ಮೊದಲ ಹೆಜ್ಜೆ ಇದಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿ ಮತ್ತು ಮಹಾರಾಷ್ಟ್ರಗಳು ಕೋವಿಡ್ ಸಾವುನೋವುಗಳ ಅಂಕಿಸಂಖ್ಯೆಗಳನ್ನು ನವೀಕರಿಸಿದ ಬಳಿಕ ಭಾರತದಲ್ಲಿ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 2020 ಜೂನ್ 17ರ ಬುಧವಾರ ೧೨,೦೦೦ಕ್ಕೆ ಏರಿತು. ಬುಧವಾರ ಒಂದೇದಿನ ೨೦೦೦ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು ತಿಳಿಸಿವೆ. ದೇಶದಲ್ಲಿ ಕೊರೋನಾಸೋಂಕಿನ ಪ್ರಕರಣಗಳ ಸಂಖ್ಯೆ ೩,೫೪,೦೬೫ಕ್ಕೆ ಏರಿದೆ ಎಂದೂ ವರದಿ ತಿಳಿಸಿದೆ. ಸಚಿವಾಲಯದ ಅಂಕಿಸಂಖ್ಯೆಗಳ ಪ್ರಕಾರ, ಕಳೆದ ೨೪ ಗಂಟೆಗಳಲ್ಲಿ ದೇಶಾದ್ಯಂತ ೧೦,೯೭೪ ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ೨,೦೦೩ ರೋಗಿಗಳು ಉಸಿರಾಟದ ಕಾಯಿಲೆಗೆ ಬಲಿಯಾಗಿದ್ದಾರೆ. ಭಾರತದ ಸಾವಿನ ಸಂಖ್ಯೆ ಇಲ್ಲಿಯವರೆಗೆ ೧೧,೯೦೩ ಆಗಿದೆ. ದೆಹಲಿ ಮತ್ತು ಮಹಾರಾಷ್ಟ್ರವು ನೂರಾರು ಸಾವುಗಳನ್ನು ಗಣನೆಗೆ ತೆಗೆದುಕೊಂಡ ನಂತರ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಒಟ್ಟು ಪ್ರಕರಣಗಳ ಪೈಕಿ ೧೮೬,೯೩೪ ಮಂದಿ ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಉಳಿದಂತೆ ೧,೫೫,೨೨೭ ಸಕ್ರಿಯ ಪ್ರಕರಣಗಳಿವೆ. ಚೇತರಿಕೆ ಪ್ರಮಾಣ ಮಂಗಳವಾರ ಶೇಕಡಾ ೫೨.೪೬ರಿಂದ ಶೇಕಡಾ ೫೨.೭೯ಕ್ಕೆ ಏರಿದೆ. ಸಾಂಕ್ರಾಮಿಕ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ಗುಜರಾತ್, ಬಿಹಾರ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಬುಧವಾರ ಮಾತುಕತೆ ನಡೆಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಹಿಂಸಾತ್ಮಕ ಘಟನೆ ಬಗ್ಗೆ ಭಾರತವು 2020 ಜೂನ್ 17ರ ಬುಧವಾರ ತನ್ನ ಉಗ್ರ ಪ್ರತಿಭಟನೆಯನ್ನು ಚೀನಾಕ್ಕೆ ಸಲ್ಲಿಸಿದೆ ಮತ್ತು ತಪ್ಪು ನಡೆಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ಬಾಂಧವ್ಯಗಳ ಮೇಲೆ ಗಂಭೀರ ಪರಿಣಾಮವಾದೀತು ಎಂದು ಚೀನಾಕ್ಕೆ ಎಚ್ಚರಿಕೆ ನೀಡಿತು. ‘ವಾಸ್ತವಿಕ ಗಡಿ ರೇಖೆಯ (ಎಲ್ಎಸಿ) ಭಾರತದ ಬದಿಯಲ್ಲಿ ಒಂದು ರಚನೆಯನ್ನು ನಿರ್ಮಿಸಲು ಚೀನಾ ಪ್ರಯತ್ನಿಸಿದೆ’ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಚೀನಾದ ತತ್ಸಮಾನ ಸಚಿವ ವಾಂಗ್ ಯಿ ಜೊತೆಗೆ ಬುಧವಾರ ನಡೆಸಿದ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಭಾರತದ ಪ್ರತಿಭಟನೆಯನ್ನು ದಾಖಲಿಸಲಾಗಿದೆ ಎಂದು ಹೇಳಿದರು. ‘೨೦ ಭಾರತೀಯ ಸೈನಿಕರ ಸಾವು ಸೇರಿದಂತೆ ಹಿಂಸಾಚಾರ ಮತ್ತು ಸಾವುನೋವುಗಳಿಗೆ ಚೀನಾದ ಕಡೆಯವರು "ಪೂರ್ವನಿರ್ಧರಿತ ಮತ್ತು ಯೋಜಿತ" ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ಭಾರತ ಹೇಳಿದೆ. ಗಲ್ವಾನ್ ಕಣಿವೆ ಬೆಳವಣಿಗೆಯು ದ್ವಿಪಕ್ಷೀಯ ಬಾಂಧವ್ಯದ ಮೇಲೆ "ಗಂಭೀರ" ಪರಿಣಾಮ ಬೀರುತ್ತದೆ ಎಂದು ಭಾರತವು ಚೀನಾಕ್ಕೆ ತಿಳಿಸಿದೆ ಎಂದು ಸಂಭಾಷಣೆಯ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿತು. ಚೀನಾದ ಕಡೆಯವರು ತನ್ನ ಕೃತ್ಯಗಳ ಮರು ಮೌಲ್ಯಮಾಪನ ಮಾಡಿ, ’ಸರಿಪಡಿಸುವ’ ಕ್ರಮಗಳನ್ನು ಕೈಗೊಳ್ಳುವುದು ಸಮಯದ ಅಗತ್ಯವಾಗಿದೆ ಎಂದು ಹೇಳಿಕೆ ತಿಳಿಸಿತು. "ಹಿಂದೆಂದೂ ನಡೆಯದ ಈ ಬೆಳವಣಿಗೆಯು ದ್ವಿಪಕ್ಷೀಯ ಬಾಂಧವ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಚೀನಾವು ತನ್ನ ಕೃತ್ಯದ ಮರು ಮೌಲ್ಯಮಾಪನ ಮಾಡುವುದು ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಸಮಯದ ಅಗತ್ಯವಾಗಿದೆ. ಜೂನ್ ೬ ರಂದು ಹಿರಿಯ ಕಮಾಂಡರ್ಗಳು ಒಪ್ಪಿದ ತಿಳುವಳಿಕೆಯನ್ನು ಉಭಯ ಕಡೆಯವರು ಸೂಕ್ಷ್ಮವಾಗಿ ಮತ್ತು ಪ್ರಾಮಾಣಿಕವಾಗಿ ಜಾರಿಗೆ ತರಬೇಕು’ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment