ಇಂದಿನ ಇತಿಹಾಸ History
Today
ಜೂನ್ 04
2020: ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ಪರಸ್ಪರ ಸೇನಾ ನೆಲೆಗಳಿಗೆ ಪ್ರವೇಶ ಪಡೆಯಲು 2020 ಜೂನ್ 04ರ ಗುರುವಾರ ಒಪ್ಪಂದ ಮಾಡಿಕೊಂಡಿವೆ. ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಿನ ಸೇನಾ ವಿನಿಮಯ ಮತ್ತು ಕವಾಯತುಗಳಿಗೆ ದಾರಿ ಮಾಡಿಕೊಡಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಸ್ಟ್ರೇಲಿಯಾದ ಪ್ರಧಾನಿ ಮಾರಿಸನ್ ನಡುವಿನ ವಾಸ್ತವ ಶೃಂಗಸಭೆಯಲ್ಲಿ ಪರಸ್ಪರ ಸಾಗಣೆ (ಲಾಜಿಸ್ಟಿಕ್) ಬೆಂಬಲ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಭಾರತವು ಅಮೆರಿಕದೊಂದಿಗೆ ಇದೇ ರೀತಿಯ ಒಪ್ಪಂದವನ್ನು ಹೊಂದಿದೆ, ಈ ಪ್ರದೇಶದಲ್ಲಿ ಚೀನಾದ ಬೆಳೆಯುತ್ತಿರುವ ಆರ್ಥಿಕ ಮತ್ತು ಮಿಲಿಟರಿ ತೂಕವನ್ನು ಸಮತೋಲನಗೊಳಿಸುವ ವಿಶಾಲ ಭದ್ರತಾ ಸಹಕಾರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಯಿತು. ಭಾರತ ಮತ್ತು ಆಸ್ಟ್ರೇಲಿಯಾದ ರಕ್ಷಣಾ ಮತ್ತು ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ೨ + ೨ ಸಂವಾದದಲ್ಲಿ ಆಸ್ಟ್ರೇಲಿಯಾದೊಂದಿಗಿನ ಒಪ್ಪಂದದ ರೂಪುರೇಷೆಯನ್ನು ಕಳೆದ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಲಾಗಿತ್ತು. ಈ ಮಾದರಿಯ ಮೊತ್ತ ಮೊದಲ ಶೃಂಗಸಭೆಯಲ್ಲಿ, ಮೋದಿ ಮತ್ತು ಮಾರಿಸನ್ ಅವರು ಕೊರೋನವೈರಸ್ ಸಾಂಕ್ರಾಮಿಕ, ಸೈಬರ್ ಸುರಕ್ಷತೆ ಮತ್ತು ವ್ಯಾಪಾರವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು. ಕೊರೋನವೈರಸ್ ಬಿಕ್ಕಟ್ಟನ್ನು "ಅವಕಾಶ" ಎಂಬುದಾಗಿ ನೋಡುತ್ತಿರುವ ಕಾರಣ ಬಹುತೇಕ ಎಲ್ಲ ಕ್ಷೇತ್ರಗಳನ್ನು ಒಳಗೊಂಡ ಸಮಗ್ರ ಸುಧಾರಣೆಯ ಪ್ರಕ್ರಿಯೆಯನ್ನು ಭಾರತದಲ್ಲಿ ಪ್ರಾರಂಭಿಸಲಾಗಿದೆ ಎಂದು ಮೋದಿ ವಿವರಿಸಿದರು. ಜಾಗತಿಕವಾಗಿ ಸುಮಾರು ೬೫ ಲಕ್ಷ ಜನರನ್ನು ಬಾಧಿಸಿ, ೩.೮೮ ಲಕ್ಷ ಜನರನ್ನು ಬಲಿ ಪಡೆದಿರುವ ಕೋವಿಡ್ -೧೯ರ ಪ್ರತಿಕೂಲಕರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮದಿಂದ ಹೊರಬರಲು ಸಂಘಟಿತ ಮತ್ತು ಸಹಭಾಗಿತ್ವದ ವಿಧಾನಕ್ಕಾಗಿ ಭಾರತ ಮುಂದಾಗಿರುವುದನ್ನು ಪ್ರಧಾನಿ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಾಗಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳು, ರಾವಲ್ಪಿಂಡಿ ಜಿಎಚ್‌ಕ್ಯು ನಿರ್ದೇಶನದ ಮೇರೆಗೆ ಅಫ್ಘಾನಿಸ್ತಾನದಲ್ಲಿ ತರಬೇತಿ ಮತ್ತು ಹೋರಾಟಕ್ಕಾಗಿ ಕಾರ್ಯಕರ್ತರನ್ನು ತ್ವರಿತವಾಗಿ ಸಜ್ಜುಗೊಳಿಸುತ್ತಿವೆ ಎಂದು ಸುದ್ದಿ ಮೂಲಗಳು 2020 ಜೂನ್ 04ರ ಗುರುವಾರ ತಿಳಿಸಿದವು. ಎರಡೂ ಭಯೋತ್ಪಾದಕ ಗುಂಪುಗಳು ಯುದ್ಧ ಪೀಡಿತ ದೇಶದಲ್ಲಿ ೧,೦೦೦ ಭಯೋತ್ಪಾದಕ ಕಾರ್ಯಕರ್ತರನ್ನು ಹೊಂದಿವೆ ಎಂದು ಅಂದಾಜು ಮಾಡಲಾಗಿದೆ, ಅವರಲ್ಲಿ ಹೆಚ್ಚಿನವರು ಫೆಬ್ರವರಿಯಲ್ಲಿ ಸಹಿ ಹಾಕಲಾದ ತಾಲಿಬಾನ್ ಮತ್ತು ಅಮೆರಿಕ ನಡುವಣ ಒಪ್ಪಂದದ ನಂತರ ಸೇರ್ಪಡೆಗೊಂಡಿದ್ದು, ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಮೂಲಗಳು ಹೇಳಿದವು. ಕಳೆದ ಕೆಲವು ತಿಂಗಳುಗಳಲ್ಲಿ, ಸುಮಾರು ೨೦೦ ಲಷ್ಕರ್ ಕಾರ್ಯಕರ್ತರು ಪಾಕಿಸ್ತಾನದ ಬಜೌರ್ ಏಜೆನ್ಸಿಯಿಂದ ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯಕ್ಕೆ ನುಸುಳಿದ್ದರು. ಮೇ ಕೊನೆಯ ವಾರದಲ್ಲಿ, ಮಾಜಿ ಐಎಸ್‌ಐ ಅಧಿಕಾರಿ ಬಿಲಾಲ್ ಅಕಾ ಜರ್ಕಾವಿ ನೇತೃತ್ವದ ೩೦ ಲಷ್ಕರ್-ಇ- ತೊಯ್ಬಾ ಭಯೋತ್ಪಾದಕರ ಮತ್ತೊಂದು ಗುಂಪು ಕುನಾರಿನ ದಂಗಮ್ ಜಿಲ್ಲೆಗೆ ಸೇರಿಕೊಂಡಿತ್ತು. ಹದಿನೈದು ದಿನಗಳ ಹಿಂದೆ, ತಾಲಿಬಾನ್ ಕಮಾಂಡರ್ ಮುಲ್ಲಾ ನೆಕ್ ಮೊಹಮ್ಮದ್ ರಭರ್ ಸಾಕುತ್ತಿದ್ದ ೪೫ ಜೈಶ್ ಕಾರ್ಯಕರ್ತರು ಪಾಕಿಸ್ತಾನದ ಕುರ್ರಾಮ್ ಏಜೆನ್ಸಿ ಮೂಲಕ ನಂಗರ್‌ಹಾರ್‌ನ ಶೆರ್ಜಾದ್ ಪ್ರಾಂತ್ಯವನ್ನು ಪ್ರವೇಶಿಸಿದ್ದರು. ದೆಹಲಿ ಮತ್ತು ಕಾಬೂಲ್‌ನಲ್ಲಿನ ಅಧಿಕಾರಿಗಳು ಈ ಎರಡು ಭಯೋತ್ಪಾದಕ ಗುಂಪುಗಳು ಅಫ್ಘಾನಿಸ್ತಾನದ ಮೇಲೆ ಕೇಂದ್ರೀಕರಿಸಿದ್ದು, ಅವರ ನಿಯೋಜನೆಗಳು ಮತ್ತು ಕ್ರಮಗಳು ಪಾಕಿಸ್ತಾನದ ಐಎಸ್‌ಐನ ಆದ್ಯತೆಗಳೇನು ಎಂಬುದನ್ನು ಪ್ರತಿಬಿಂಬಿಸುತ್ತವೆ ಎಂದು ಅಧಿಕಾರಿಗಳು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕಳೆದ ತಿಂಗಳ ಕೊನೆಯಲ್ಲಿ ಗರ್ಭಿಣಿ ಆನೆಯನ್ನು ಕ್ರೂರವಾಗಿ ಹತ್ಯೆಗೈದ ನಂತರ ಭುಗಿಲೆದ್ದಿರುವ ಆಕ್ರೋಶವನ್ನು ಶಮನಗೊಳಿಸಲು 2020 ಜೂನ್ 04ರ ಗುರುವಾರ ತಮ್ಮ ಟ್ವಿಟ್ಟರ್ ಖಾತೆಯನ್ನು ಆಶ್ರಯಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ’ಅಪರಾಧಿಗಳನ್ನು ಕಟಕಟೆಗೆ ತರಲಾಗುವುದು’ ಎಂದು ಹೇಳಿದರು. "ಮೂವರು ಶಂಕಿತರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಘಟನೆ ತನಿಖೆ ನಡೆಸಲಿವೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ಜಿಲ್ಲಾ ಅರಣ್ಯ ಅಧಿಕಾರಿ ಇಂದು ಸ್ಥಳಕ್ಕೆ ಭೇಟಿ ನೀಡಿದರು. ಅಪರಾಧಿಗಳನ್ನು ಕಟಕಟೆಗೆ ತರಲು ನಾವು ಎಲ್ಲವನ್ನು ಮಾಡುತ್ತೇವೆ. ನ್ಯಾಯ ದೊರಕಲಿದೆ’ ಎಂದು ಮುಖ್ಯಮಂತ್ರಿ ಜನರಿಗೆ ಭರವಸೆ ನೀಡಿದರು. ‘ನಿಮ್ಮಲ್ಲಿ ಅನೇಕರು ನಮ್ಮನ್ನು ತಲುಪಿದ್ದಾರೆ. ನಿಮ್ಮ ಕಾಳಜಿಗಳು ವ್ಯರ್ಥವಾಗುವುದಿಲ್ಲ ಎಂದು ನಾವು ನಿಮಗೆ ಭರವಸೆ ನೀಡ ಬಯಸುತ್ತೇವೆ. ನ್ಯಾಯ ಮೇಲುಗೈ ಸಾಧಿಸುತ್ತದೆ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಕೆಲವರು ಈ ದುರಂತವನ್ನು ದ್ವೇಷದ ಅಭಿಯಾಕ್ಕಾಗಿ ಬಳಸುತ್ತಿರುವುದು ದುರದೃಷ್ಟಕರ ಎಂದು ವಿಜಯನ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಸಹಾಯಕರಾಗಿ ಸೇವೆ ಸಲ್ಲಿಸಿರುವ ೧೯೯೬ ರ ತಂಡದ ಐಎಎಸ್ ಅಧಿಕಾರಿ ರಾಜೀವ್ ಟೊಪ್ನೊ ಅವರನ್ನು ವಿಶ್ವಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರರಾಗಿ ನೇಮಿಸಲಾಗಿದೆ. ಟೋಪ್ನೊ ಅವರ ಮುಂದಿನ ಹುದ್ದೆಯನ್ನು ಪ್ರಧಾನಿ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿಯು 2020 ಜೂನ್ 04ರ ಗುರುವಾರ ತೆರವುಗೊಳಿಸಿತು. ವಿದೇಶಿ ನಿಯೋಜನೆಗಳಿಗಾಗಿ ಇತರ ಐದು ಅಧಿಕಾರಿಗಳ ಹೆಸರನ್ನು ಸಹ ಸಮಿತಿ ತೆರವುಗೊಳಿಸಿತು. ಗುಜರಾತ್ ಕೇಡರ್ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದ ಟೊಪ್ನೊ ಅವರು ೨೦೦೯ ರಲ್ಲಿ ಮನಮೋಹನ್ ಸಿಂಗ್ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಿದಾಗ ಉಪ ಕಾರ್ಯದರ್ಶಿಯಾಗಿ ಪ್ರಧಾನ ಮಂತ್ರಿ ಕಚೇರಿಗೆ ಸೇರಿದ್ದರು. ಯುಪಿಎ -೨ ಸರ್ಕಾರದಲ್ಲಿ ಪ್ರಧಾನ ಮಂತ್ರಿಯವರ ಕಾರ್‍ಯಾಲಯದಲ್ಲಿ (ಪಿಎಂಒ) ಟೆಲಿಕಾಂ ಮತ್ತು ಬಂದರುಗಳಂತಹ ಪ್ರಮುಖ ಖಾತೆಗಳನ್ನು ಅವರು ನಿರ್ವಹಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಹರಡುವಿಕೆಯನ್ನು ತಡೆಯಲು ಜಾರಿಗೆ ತರಲಾದ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್‌ಡೌನ್) ಸಮಯದಲ್ಲಿ ವೀಸಾ ನಿಯಮಗಳನ್ನು ಉಲ್ಲಂಘಿಸಿ ಭಾರತದಲ್ಲಿ ಉಳಿದುಕೊಂಡಿದ್ದ ಒಟ್ಟು ೨,೫೫೦ ವಿದೇಶಿ ತಬ್ಲಿಘಿ ಜಮಾತ್ ಸದಸ್ಯರನ್ನು ಗೃಹ ಸಚಿವಾಲಯವು ಕಪ್ಪುಪಟ್ಟಿಗೆ ಸೇರಿಸಿದೆ ಎಂದು ಸುದ್ದಿ ಸಂಸ್ಥೆಯು 2020 ಜೂನ್ 04ರ ಗುರುವಾರ ವರದಿ ಮಾಡಿತು. ಮುಂದಿನ ೧೦ ವರ್ಷಗಳ ಕಾಲ ೨,೫೫೦ ವಿದೇಶಿ ಪ್ರಜೆಗಳಿಗೆ ಭಾರತವನ್ನು ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಅಧಿಕಾರಿಗಳನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿತು. ಮಾರ್ಚ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಸಮಾವೇಶವು ದೇಶದ ಕೋವಿಡ್ -೧೯ ರ ಪ್ರಮುಖ ಹಾಟ್ ಸ್ಪಾಟ್ ಆಗಿ ಬದಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸಿದ ಕೆಲವರಿಗೆ ಆ ಬಳಿಕ ಕೊರೋನವೈರಸ್ ಸೋಂಕು ತಗುಲಿದ್ದು ದೃಢ ಪಟ್ಟಿತ್ತು. ಈ ಪ್ರತಿನಿಧಿಗಳಲ್ಲಿ ಅಷ್ಟರಲ್ಲೇ ದೇಶದ ಉದ್ದಗಲಕ್ಕೂ ಪಯಣಿಸಿ ತಮ್ಮ ತವರು ರಾಜ್ಯಗಳನ್ನು ಸೇರಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಉದ್ಯಮಿ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವುzನ್ನು "ಗೌಪ್ಯ" ಕಾನೂನು ವಿಷಯವೊಂದು ತಡೆಹಿಡಿದಿದೆ, ಆದರೆ ಸಾಧ್ಯವಾದಷ್ಟು ಬೇಗ ಈ ವಿಷಯವನ್ನು ಇತ್ಯರ್ಥ ಪಡಿಸಲು ಯತ್ನಿಸಲಾಗುತ್ತಿದೆ ಎಂದು ಇಂಗ್ಲೆಂಡ್ 2020 ಜೂನ್ 04ರ ಗುರುವಾರ ಹೇಳಿತು. ಭಾರತದಲ್ಲಿ ಆರ್ಥಿಕ ಅಕ್ರಮಗಳ ಆರೋಪ ಎದುರಿಸಬೇಕಾಗಿರುವ ಮಲ್ಯ ಅವರು, ಏಪ್ರಿಲ್‌ನಲ್ಲಿ ಇಂಗ್ಲೆಂಡ್ ಹೈಕೋರ್ಟಿನಲ್ಲಿ ಹಸ್ತಾಂvರಿಸಲು ಒಪ್ಪಿಗೆ ಕೊಟ್ಟ ೨೦೧೮ ರ ಆದೇಶದ ವಿರುದ್ಧದ ಸಲ್ಲಿಸಿದ್ದ ಮೇಲ್ಮನವಿಯನ್ನು ಅರ್ಜಿಯಲ್ಲಿ ಸೋತಿದ್ದರು. ಕಳೆದ ತಿಂಗಳು ಇಂಗ್ಲೆಂಡ್ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಮಲ್ಯ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ಮಲ್ಯ ಹಸ್ತಾಂತರ ಸನ್ನಿಹಿತವಾಗಿದೆ ಎಂದು ಭಾರತೀಯ ಮಾಧ್ಯಮಗ ವರದಿಗಳ ಮಧ್ಯೆ, ಬ್ರಿಟಿಷ್ ಹೈಕಮಿಷನ್‌ನ ವಕ್ತಾರರು, ಗೌಪ್ಯ ಸ್ವಭಾವದ ಕಾನೂನು ಸಮಸ್ಯೆ ಇನ್ನೂ ಇದೆ, ಉದ್ಯಮಿಯನ್ನು ಭಾರತಕ್ಕೆ ಕಳುಹಿಸುವ ಮುನ್ನ ಅದನ್ನು ಬಗೆಹರಿಸಬೇಕಾಗಿದೆ ಎಂದು ಹೇಳಿದರು. "ವಿಜಯ ಮಲ್ಯ ಕಳೆದ ತಿಂಗಳು ಹಸ್ತಾಂತರದ ವಿರುದ್ಧದ ಮೇಲ್ಮನವಿಯಲ್ಲಿ ಸೋತಿದ್ದಾರೆ ಮತ್ತು ಇಂಗ್ಲೆಂಡ್ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಲಾಯಿತು" ಎಂದು ವಕ್ತಾರರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಬಾಲಿವುಡ್‌ನ ಖ್ಯಾತ ಹಾಗೂ ದಂತಕಥೆ ಎನ್ನಿಸಿಕೊಂಡಿದ್ದ ನಿರ್ದೇಶಕ ಬಸು ಚಟರ್ಜಿ (೯೦ವರ್ಷ) 2020 ಜೂನ್ 04ರ ಗುರುವಾರ ವಿಧಿವಶರಾಗಿದ್ದಾರೆ ಎಂದು ವರದಿ ತಿಳಿಸಿತು. ರಜನಿಗಂಧ, ಚೋಟಿ ಸಿ ಬಾತ್, ಖಟ್ಟಾ ಮೀಠಾ, ಬಾತೋನ್ ಬಾತೋನ್ ಮೈನ್, ಸೌಕೀನ್ ಸೇರಿದಂತೆ ಹಲವಾರು ಕ್ಲಾಸಿಕ್ ಚಿತ್ರಗಳ ನಿರ್ದೇಶಕರಾಗಿ ಹೆಸರಾಗಿದ್ದವರು ಬಸು ಚಟರ್ಜಿ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಜೂನ್ 04 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment