ಇಂದಿನ ಇತಿಹಾಸ History
Today
ಜೂನ್ 03
2020: ಬೀಜಿಂಗ್: ಭಾರತದ ಕೋವಿಡ್ -೧೯ ಪ್ರಕರಣಗಳು ಜೂನ್ ಮಧ್ಯಭಾಗದಲ್ಲಿ ದಿನಕ್ಕೆ ೧೫,೦೦೦ ದಾಟಲಿವೆ ಎಂದು ಚೀನಾ 2020 ಜೂನ್ 03ರ ಬುಧವಾರ ಭವಿಷ್ಯ ನುಡಿಯಿತು. ಜೂನ್ ತಿಂಗಳಲ್ಲಿ ಭಾರತವು ಕೋವಿಡ್ -೧೯ ಪ್ರಕರಣಗಳಲ್ಲಿ ಸ್ಥಿರ ಏರಿಕೆ ಕಾಣುವ ಸಾಧ್ಯತೆಯಿದೆ, ದೈನಂದಿನ ಹೆಚ್ಚಳವು ತಿಂಗಳ ಮಧ್ಯಭಾಗದಲ್ಲಿ ದಿನಕ್ಕೆ ೧೫,೦೦೦ ದಾಟಲಿದೆ ಎಂದು ಚೀನಾದ ಸಂಶೋಧಕರು ಸಿದ್ಧಪಡಿಸಿದ ಕೊರೋನವೈರಸ್ ಸಾಂಕ್ರಾಮಿಕ ರೋಗದ ಜಾಗತಿಕ ಮುನ್ಸೂಚನೆ ಮಾದರಿ ಭವಿಷ್ಯ ನುಡಿಯಿತು. ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದ ಲ್ಯಾನ್ ಝೋವು ವಿಶ್ವವಿದ್ಯಾಲಯವು ಸ್ಥಾಪಿಸಿದ ’ಗ್ಲೋಬಲ್ ಕೋವಿಡ್ -೧೯ ಪ್ರಿಡಿಕ್ಟ್ ಸಿಸ್ಟಮ್’ ೧೮೦ ದೇಶಗಳಿಗೆ ದೈನಂದಿನ ಮುನ್ಸೂಚನೆಯನ್ನು ನೀಡುತ್ತದೆ. ಜೂನ್ ೨ ರಂದು ಭಾರತದಲ್ಲಿ ೯,೨೯೧ ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳ ಬಗ್ಗೆ ಸಂಶೋಧನಾ ಗುಂಪಿನ ಮುನ್ಸೂಚನೆ ಮಾದರಿಯು ಭವಿಷ್ಯ ನುಡಿದಿತ್ತು. ಭಾರತ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳಲ್ಲಿ ೮,೯೦೯ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದು ಈವರೆಗಿನ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ. ಬುಧವಾರದಿಂದ, ಮುಂದಿನ ನಾಲ್ಕು ದಿನಗಳವರೆಗೆ ೯೬೭೬, ೧೦,೦೭೮, ೧೦,೪೯೮ ಮತ್ತು ೧೦,೯೩೬ ದೈನಂದಿನ ಹೊಸ ಪ್ರಕರಣಗಳ ಮುನ್ಸೂಚನೆಯನ್ನು ಸಂಸ್ಥೆ ನೀಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿ ಗಲಭೆ ಪ್ರಕರಣದ ಪ್ರಮುಖ ಸಂಚುಕೋರ ಫೈಸಲ್ ಫಾರೂಕ್, ಫೆಬ್ರವರಿ ಗಲಭೆ ನಡೆಯುತ್ತಿರುವಾಗ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಅವರ ಆಪ್ತ ಸಹವರ್ತಿ ಎಂದು ವರ್ಣಿಸಲಾದ ಅಬ್ದುಲ್ ಅಲೀಮ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಎಂದು ದೆಹಲಿ ಪೊಲೀಸರು ದೆಹಲಿ ನ್ಯಾಯಾಲಯಕ್ಕೆ 2020 ಜೂನ್ 03ರ ಬುಧವಾರ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ತಿಳಿಸಿದ್ದಾರೆ. ‘ಗಲಭೆಯಲ್ಲಿ ಫೈಸಲ್ ಫಾರೂಕ್ ಅವರ ಪಾತ್ರದ ಬಗ್ಗೆ ತನಿಖೆಯ ಭಾಗವಾಗಿ ಪೊಲೀಸರು ಅವರ ಫೋನಿನ ವಿವರವಾದ ಕರೆ ವಿಶ್ಲೇಷಣೆಯನ್ನು ನಡೆಸಿದ್ದರು. ಫೈಸಲ್ ಫಾರೂಕ್ ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಪಿಂಜ್ರಾ ಟಾಡ್ ಗುಂಪು, ಜಾಮಿಯಾ ಸಮನ್ವಯ ಸಮಿತಿ ಮತ್ತು ಹಜರತ್ ನಿಜಾಮುದ್ದೀನ್ ಮಾರ್ಕಾಜ್ ಅವರ ಪ್ರಮುಖ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರು ಎಂದು ವಿಶ್ಲೇಷಣೆ ತಿಳಿಸಿದೆ. ದಯಾಳಪುರದಲ್ಲಿ ರಾಜಧಾನಿ ಶಾಲೆಯನ್ನು ಹೊಂದಿರುವ ಫೈಸಲ್ ಫಾರೂಕ್, ತನ್ನ ಶಾಲೆಯ ಸುತ್ತಲಿನ ಗಲಭೆಗಾಗಿ ಅಪರಾಧ ವಿಭಾಗದಿಂದ ಬಂಧಿಸಲ್ಪಟ್ಟ ೧೮ ಜನರಲ್ಲಿ ಒಬ್ಬನಾಗಿದ್ದಾನೆ. ಗಲಭೆಕೋರರ ಆರಂಭಿಕ ಗುರಿಗಳಲ್ಲಿ ಒಂದು ಫಾರೂಕ್ ನಡೆಸುತ್ತಿದ್ದ ಶಾಲೆಯ ಪಕ್ಕದ ಡಿಆರ್ಪಿ ಕಾನ್ವೆಂಟ್ ಶಾಲೆಯಾಗಿತ್ತು. ತನಿಖೆಯ ಸಮಯದಲ್ಲಿ, ಫೈಸಲ್ ಫಾರೂಕ್ ರಾಜಧಾನಿ ಶಾಲೆಯಲ್ಲಿ ಮತ್ತು ಸುತ್ತಮುತ್ತಲಿನ ಗಲಭೆಗಳನ್ನು ಉಲ್ಬಣಗೊಳಿಸುವ ಪಿತೂರಿ ನಡೆಸಿದ್ದುದು ತಿಳಿದುಬಂದಿದೆ. ಫೈಸಲ್ ಸೂಚನೆಯ ಮೇರೆಗೆ ಪಕ್ಕದ ಮತ್ತು ಪ್ರತಿಸ್ಪರ್ಧಿ ಡಿಆರ್ಪಿ ಕಾನ್ವೆಂಟ್ ಶಾಲೆಯನ್ನು ಜನಸಮೂಹ ನಾಶಪಡಿಸಿತ್ತು ಎಂದು ದೋಷಾರೋಪ ಪಟ್ಟಿ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ/ ಮುಂಬೈ: ‘ನಿಸರ್ಗ’ ಚಂಡಮಾರುತವು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ 2020 ಜೂನ್ 03ರ ಬುಧವಾರ ಮಧ್ಯಾಹ್ನ ನೆಲಕ್ಕೆ ಅಪ್ಪಳಿಸಿ, ಮಹಾರಾಷ್ಟ್ರದಲ್ಲಿ ಹಲವಾರು ಮರಗಳು, ವಿದ್ಯುತ್ ಕಂಬಗಳನ್ನು ಧರೆಗೆ ಉರುಳಿಸಿತು. ಮುಂಬೈಯಿಂದ ಹುಬ್ಬಳ್ಳಿಯವರೆಗೆ ಭಾರೀ ಗಾಳಿ ಸಹಿತವಾಗಿ ಅಬ್ಬರದ ಮಳೆ ಸುರಿದಿದ್ದು, ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಮುಂಬೈ ಸಮೀಪದ ಅಲಿಬಾಗ್ನ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಬಿದ್ದು ೫೮ ವರ್ಷದ ವ್ಯಕ್ತಿಯೊಬ್ಬರು ಮೃತರಾದರು. ಒಂದು ಸಾವನ್ನು ಹೊರತು ಪಡಿಸಿ ಮಹಾರಾಷ್ಟ್ರದಲ್ಲಿ ಈವರೆಗೆ ಬೇರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ರಾಯಗಢ ಜಿಲ್ಲಾಧಿಕಾರಿ ನಿಧಿ ಚೌಧರಿ ತಿಳಿಸಿದರು. ‘ಅಲಿಬಾಗ್ನಿಂದ ಒಂದು ಸಾವು ವರದಿಯಾಗಿದೆ. ಅಲಿಬಾಗ್ನ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬ ಬಿದ್ದು ೫೮ ವರ್ಷದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಜಿಲ್ಲೆಯಾದ್ಯಂತ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ’ ಎಂದು ಚೌಧರಿ ನುಡಿದರು. ಅಲಿಬಾಗ್ಗೆ ಸಮೀಪದಲ್ಲಿರುವ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ಹಲವಾರು ಮರಗಳು ಬಿರುಗಾಳಿಗೆ ಉರುಳಿ ಬಿದ್ದಿವೆ. ಹಲವಾರು ವಿದ್ಯುತ್ ಕಂಬಗಳೂ ನೆಲಕ್ಕೆ ಒರಗಿವೆ. ಅಲಿಬಾಗ್ ಸಮೀಪ ಚಂಡಮಾರುತವು ಬುಧವಾರ ಮಧ್ಯಾಹ್ನ ನೆಲಕ್ಕೆ ಅಪ್ಪಳಿಸಿತು. ಅಧಿಕಾರಿಗಳ ಪ್ರಕಾರ, ಚಂಡಮಾರುvದ ಅಬ್ಬರಕ್ಕೆ ಸುಮಾರು ೮೫ ದೊಡ್ಡ ಮರಗಳು ಉರುಳಿದ್ದು, ಅವುಗಳಲ್ಲಿ ಕೆಲವು ಮನೆಗಳ ಮೇಲೆ ಬಿದ್ದ. ಹನ್ನೊಂದು ವಿದ್ಯುತ್ ಕಂಬಗಳೂ ಧರೆಗುರುಳಿದವು. ಮಹಾರಾಷ್ಟ್ರ ಕರಾವಳಿಗೆ ೧೨೦ ಕಿ.ಮೀ ವೇಗದೊಂದಿಗೆ ಅಪ್ಪಳಿಸಿದ ಬಳಿಕ ’ನಿರ್ಗ’ ಚಂಡಮಾರುತವು ದುರ್ಬಲಗೊಳ್ಳಲು ಪ್ರಾರಂಭಿಸಿದೆ ಮತ್ತು ಸಂಜೆಯಾಗುತ್ತಿದ್ದಂತೆಯೇ ಅದರ ತೀವ್ರತೆಯು ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ: ಮುಂಬೈಯಿಂದ ೯೫ ಕಿಮೀ ದೂರದಲ್ಲಿರುವ ಅಲಿಬಾಗ್ನಲ್ಲಿ ’ನಿಸರ್ಗ’ ಚಂಡಮಾರುತವು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಮುಂಬೈ ಮಹಾನಗರ ಹಾಗೂ ಗುಜರಾತ್ ’ಪ್ರಕೃತಿ’ ನರ್ತನದ ಮಹಾವಿಪತ್ತಿನಿಂದ ಪಾರಾದವು. ‘ಚಂಡಮಾರುತವು ಮುಂಬೈನ ಆಗ್ನೇಯಕ್ಕೆ ೭೫ ಕಿ.ಮೀ ಮತ್ತು ಪುಣೆಯ ಪಶ್ಚಿಮಕ್ಕೆ ೬೫ ಕಿ.ಮೀ ದೂರದಲ್ಲಿದ್ದು ದುರ್ಬಲಗೊಳ್ಳಲು ಪ್ರಾರಂಭಿಸಿದೆ. ಗಾಳಿಯ ವೇಗವು ಪ್ರಸ್ತುತ ಗಂಟೆಗೆ ೯೦-೧೦೦ ಕಿ.ಮೀ. ಮತ್ತು ಸಂಜೆಯ ಹೊತ್ತಿಗೆ ತೀವ್ರತೆಯು ಮತ್ತಷ್ಟು ಕಡಿಮೆಯಾಗುತ್ತದೆ" ಎಂದು ಅಧಿಕಾರಿಗಳು ಹೇಳಿದರು. ನಿಸರ್ಗ ಚಂಡಮಾರುತವು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಬೀಸಿದ ಭಾರೀ ಗಾಳಿ ಮತ್ತು ಮಳೆಯನ್ನು ಅನುಸರಿಸಿ ಮುಂಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಂಜೆ ೭ ಗಂಟೆಯವರೆಗೆ ಮುಚ್ಚಲಾಯಿತು. "ಫೆಡೆಕ್ಸ್ ಎಂಡಿ ೧೧ ವಿಮಾನ (ಎನ್ ೫೮೩ ಎಫ್ಇ) ಬುಧವಾರ ಮುಂಬೈನಲ್ಲಿ ರನ್ವೇ ೧೪ ರಲ್ಲಿ ಸುತ್ತುತ್ತಿದೆ. ವಿಮಾನವು ರನ್ವೇ ಅಂತ್ಯದಿಂದ ೯ ಮೀಟರ್ ದೂರದಲ್ಲಿದೆ. ವಿಮಾನ ಮೂಲಸೌಕರ್ಯ ಮತ್ತು ವಿಮಾನಗಳಿಗೆ ಯಾವುದೇ ಹಾನಿಯಾಗಿಲ್ಲ" ಎಂದು ವರದಿಗಳು ಹೇಳಿವೆ. ಈ ಮಧ್ಯೆ, ಪುಣೆಯಲ್ಲಿ ೬೦ ಮರಗಳು ಬೇರು ಸಹಿತವಾಗಿ ನೆಲಕ್ಕೆ ಉರುಳಿರುದ್ದು, ಪುಣೆ ಅಗ್ನಿಶಾಮಕ ಇಲಾಖೆಗೆ ೯ ಕಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವ ಬಗ್ಗೆ ಕರೆಗಳು ಬಂದಿವೆ. ಮರಗಳು ಉರುಳಿರುವ ಬಗ್ಗೆ ಬಂದ ೬೦ ಕರೆಗಳು ಮತ್ತು ಜಲಾವೃತಗೊಂಡಿರುವ ಬಗ್ಗೆ ಬಂದ ೯ ಕರೆಗಳಿಗೆ ಅಗ್ನಿಶಾಮಕ ಇಲಾಖೆ ಮತ್ತು ಪುಣೆ ಮಹಾನಗರ ಪಾಲಿಕೆ ಸ್ಪಂದಿಸಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಭರೂಚ್: ಗುಜರಾತಿನ ಭರೂಚ್ ಜಿಲ್ಲೆಯ ದಹೇಜ್ನಲ್ಲಿ ರಾಸಾಯನಿಕ ಕಾರ್ಖಾನೆಯ ಬಾಯ್ಲರ್ನಲ್ಲಿ 2020 ಜೂನ್ 03ರ ಬುಧವಾರ ಸಂಭವಿಸಿದ ಭಾರಿ ಸ್ಫೋಟ ಹಾಗೂ ಬೆಂಕಿಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ೫೭ ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು. ಘಟನೆ ನಡೆದ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿತು. ‘ಇಲ್ಲಿಯವರೆಗೆ ನಾವು ಐವರು ಉದ್ಯೋಗಿಗಳ ಸಾವನ್ನು ದೃಢ ಪಡಿಸಿದ್ದೇವೆ. ಕೆಲವು ಶವಗಳನ್ನು ಕಾರ್ಖಾನೆಯಿಂದ ಹೊರತರಲಾಗಿದ್ದು, ಕೆಲವರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ’ ಎಂದು ಭರೂಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿ.ಚುದಾಸಮಾ ತಿಳಿಸಿದರು. ಬುಧವಾರ ಮಧ್ಯಾಹ್ನ ಭರೂಚ್ನ ದಹೇಜ್ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿರುವ ಯಶಶ್ವಿ ರಸಾಯನ್ ಪ್ರೈವೇಟ್ ಲಿಮಿಟೆಡ್ನಲ್ಲಿನ ಟ್ಯಾಂಕ್ನಲ್ಲಿ ಸಂಭವಿಸಿದ ಸ್ಫೋಟ ಹಾಗೂ ಬೆಂಕಿಯಲ್ಲಿ ಸಿಲುಕಿ ಐವರು ಜನರು ಪ್ರಾಣ ಕಳೆದುಕೊಂಡರು ಮತ್ತು ೫೭ ಜನರು ಗಾಯಗೊಂಡಿದ್ದಾರೆ ”ಎಂದು ಭರೂಚ್ ಜಿಲ್ಲಾಧಿಕಾರಿ ಡಾ ಎಂಡಿ ಮೋಡಿಯಾ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment