ನಾನು ಮೆಚ್ಚಿದ ವಾಟ್ಸಪ್

Monday, June 15, 2020

ಇಂದಿನ ಇತಿಹಾಸ History Today ಜೂನ್ 15

ಇಂದಿನ ಇತಿಹಾಸ History Today ಜೂನ್  15  

2020: ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ 2020 ಜೂನ್ 15ರ ಸೋಮವಾರ ಬೆಳಗ್ಗೆ ಕಣ್ಮರೆಯಾಗಿದ್ದ ಭಾgತೀಯ ಹೈಕಮಿಷನ್ನಿನ ಇಬ್ಬರು ಸಿಬ್ಬಂದಿಯನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನಿ ಅಧಿಕಾರಿಗಳು ಭಾರತದ ರಾಜತಾಂತ್ರಿಕ ಕಚೇರಿಗೆ ರಾತ್ರಿ ತಿಳಿಸಿದರು. ಪಾಕಿಸ್ತಾನದ ಚಾರ್ಜ್ ಡಿಅಫೇರ್‍ಸ್ ಸೈಯದ್ ಹೈದರ್ ಶಾ ಅವರಿಗೆ ನವದಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಮನ್ಸ್ ಕಳುಹಿಸಿ ಭಾರತೀಯ ಸಿಬ್ಬಂದಿಯ ಭದ್ರತೆಯ ಖಾತರಿ ನೀಡುವುದು ಪಾಕ್ ಸರ್ಕಾರದ ಜವಾಬ್ದರಿ ಎಂಬುದಾಗಿ ಕಟುವಾಗಿ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಭಾರತೀಯ ಅಧಿಕಾರಿಗಳಿಗೆ ಪಾಕಿಸ್ತಾನದಿಂದ ಬಿಡುಗಡೆಯ ಭರವಸೆ ಬಂದಿತು. ಭಾರತೀಯ ಹೈಕಮಿಷನ್ನಿನ ಇಬ್ಬರೂ ಸಿಬ್ಬಂದಿ ಕಣ್ಮರೆಯಾದ ಸುಮಾರು ಏಳು ಗಂಟೆಗಳ ಬಳಿಕ ಅಪಘಾತ ಎಸಗಿ ಪರಾರಿಯಾದ ಪ್ರಕರಣದಲ್ಲಿ ಇಬ್ಬರೂ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂಬುದಾಗಿ ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು. ಭಾರತೀಯ ಹೈಕಮಿಷನ್ನಿನ ಇಬ್ಬರು ಸಿಬ್ಬಂದಿಯ ಬಂಧನ ಕುರಿತ ವರದಿಗಳನ್ನು ಉಲ್ಲೇಖಿಸಿ ಪಾಕಿಸ್ತಾನಕ್ಕೆ ಪ್ರಬಲ ಪ್ರತಿಭಟನೆ ಸಲ್ಲಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೈದರ್ ಶಾ ಅವರಿಗೆ ಬುಲಾವ್ ನೀಡಿ ಕರೆಸಿಕೊಂಡು ಭಾರತೀಯ ಅಧಿಕಾರಿಗಳನ್ನು ಯಾವುದೇ ತನಿಖೆಗೆ ಗುರಿಪಡಿಸಬಾರದು ಮತ್ತು ಕಿರುಕುಳ ನೀಡಬಾರದು ಎಂದು ತಿಳಿಸಿತು. ರಾಜತಾಂತ್ರಿಕ ಕಚೇರಿಯ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಖಾತರಿ ನೀಡುವುದು ಪಾಕ್ ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದೂ ಸಚಿವಾಲಯ ಪಾಕಿಸ್ತಾನಕ್ಕೆ ಖಡಕ್ ಮಾತುಗಳಲ್ಲಿ  ಹೇಳಿತು. ಇಬ್ಬರೂ ಅಧಿಕಾರಿಗಳನ್ನು ಅಧಿಕೃತ ಕಾರಿನಲ್ಲಿ ಒಬ್ಬ ಅಧಿಕಾರಿಯೊಂದಿಗೆ ತತ್ ಕ್ಷಣವೇ ಹೈಕಮಿಷನ್‌ಗೆ ಹಿಂದಿರುಗಿ ಕಳುಹಿಸಬೇಕು ಎಂದು ಪಾಕಿಸ್ತಾನಕ್ಕೆ ಸೂಚಿಸಲಾಯಿತು ಎಂದು ಸರ್ಕಾರಿ ಮೂಲವೊಂದು ತಿಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಡೆಹ್ರಾಡೂನ್: ಭಾರತ ಮತ್ತು ನೇಪಾಳ ನಡುವಣ ಬಾಂಧವ್ಯಗಳು ಮುರಿಯಲು ಅಸಾಧ್ಯವಾದ ಬಾಂಧವ್ಯಗಳು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2020 ಜೂನ್ 15ರ ಸೋಮವಾರ ಇಲ್ಲಿ ಹೇಳಿದರು. ರಾಜನಾಥ್ ಸಿಂಗ್ ಅವರು ಭಾರತೀಯ ಜನತಾ ಪಕ್ಷದ ಉತ್ತರಾಖಂಡ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನಮ್ಮ ಸೇನೆಯು ಗೂರ್ಖಾ ರೆಜಿಮೆಂಟನ್ನು ಹೊಂದಿದೆ. ಅದರ ಯೋಧರು ದೇಶದ ಸಲುವಾಗಿ ಅಪ್ರತಿಮ ಶೌರ್‍ಯ ಹಾಗೂ ಕೆಚ್ಚುನ್ನು ಹಲವಾರು ಸಂದರ್ಭಗಳಲ್ಲಿ ಪ್ರದರ್ಶಿಸಿದ್ದಾರೆ. ಮೈ ಮಹಾಕಾಳಿ, ಆಯೋ ರೇ ಗೂರ್ಖಾಲಿ (ಮಹಾಕಾಳಿಗೆ ಜೈ, ಗೂರ್ಖಾ ಬರುತ್ತಿದ್ದಾನೆ) ಎಂಬುದು ಗೂರ್ಖಾ ಯೋಧರ ಸಮರ ಘೋಷಣೆಯಾಗಿದೆ.. ಅಲ್ಲದೆ ಕೋಲ್ಕತ, ಕಾಮಾಕ್ಯ ಮತ್ತು ವಿಂಧ್ಯಾಚಲದಲ್ಲಿಯೂ ಕಾಳಿ ಇದ್ದಾಳೆ. ಕಾಳಿಯ ಭಕ್ತರು ಭಾರತದಾದ್ಯಂತ ಇದ್ದಾರೆ. ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಹೇಗೆ ತುಂಡರಿಸಲು ಸಾಧ್ಯ? ಎಂದು ಸಿಂಗ್ ಅವರು ಗಢವಾಲ ವಿಭಾಗದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಭಾಷಣದಲ್ಲಿ ಪ್ರಶ್ನಿಸಿದರು. ಅತ್ಯಂತ ಆಯಕಟ್ಟಿನ ಜಾಗಗಳಾದ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರ ಪ್ರದೇಶಗಳನ್ನು ನೇಪಾಳಕ್ಕೆ  ಸೇರಿಸಿದ ಹೊಸ ರಾಜಕೀಯ ನಕ್ಷೆಗೆ ನೇಪಾಳದ ಸಂಸತ್ತು ಅನುಮೋದನೆ ನೀಡಿದ ಕೆಲವೇ ದಿನಗಳ ಬಳಿಕ ರಕ್ಷಣಾ ಸಚಿವರಿಂದ ಹೇಳಿಕೆ ಬಂದಿದೆ. ಉತ್ತರಾಖಂಡದ ಪಿತೋರಗಢ ಜಿಲ್ಲೆಯಲ್ಲಿ ರಾಜನಾಥ್ ಸಿಂಗ್ ಅವರು ಲಿಪುಲೇಖ ಕಣಿವೆ ಮತು ದಾರ್ಚುಲಾ ಪ್ರದೇಶವನ್ನು ಸಂಪರ್ಕಿಸುವ ನಿರ್ಣಾಯಕ ರಸ್ತೆಯನ್ನು ಉದ್ಘಾಟಿಸಿದ ಬಳಿಕ ನೇಪಾಳ ಸರ್ಕಾರವು ತನ್ನ ನಕ್ಷೆಯನ್ನು ಬದಲಾಯಿಸುವ ನಿರ್ಣಯವನ್ನು ಕೈಗೊಂಡಿದೆ. ರಸ್ತೆಯು ತನ್ನ ನೆಲದ ಮೇಲೆ ಹಾದು ಹೋಗುತ್ತಿದೆ ಎಂದು ನೇಪಾಳವು ಪ್ರಬಲ ತಕರಾರು ತೆಗೆದಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೊನಾವೈರಸ್ ಸೋಂಕಿನ ಉಲ್ಬಣವನ್ನು ಎದುರಿಸಲು ಭಾರತವು ಪರೀಕ್ಷೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವಂತೆಯೇ, ೩೦ ನಿಮಿಷಗಳಲ್ಲಿ ಫಲಿತಾಂಶಗಳನ್ನು ನೀಡುವ ಕೊರಿಯಾದ ಕಂಪನಿಯ ಪ್ರತಿಜನಕ ಪರೀಕ್ಷಾ ಕಿಟ್‌ನ್ನು (ಆಂಟಿಜೆನ್ ಟೆಸ್ಟ್ ಕಿಟ್) ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್ ) 2020 ಜೂನ್ 15ರ ಸೋಮವಾರ ಅನುಮೋದಿಸಿವೆ. ಗುರುಗ್ರಾಮದ ಮಾನೇಸರದ ಉತ್ಪಾದನಾ ಘಟಕದಲ್ಲಿ ಎಸ್‌ಡಿ ಬಯೋಸೆನ್ಸರ್ ಸಂಸ್ಥೆಯು ತಯಾರಿಸಿದ ಕಿಟ್‌ನ್ನು ಕ್ಷೇತ್ರ ಸೆಟ್ಟಿಂಗ್‌ಗಳಲ್ಲಿ ಬಳಸಬಹುದು. ಪ್ರತಿಜನಕ ಪರೀಕ್ಷೆಯ ಫಲಿತಾಂಶವು ಪಾಸಿಟಿವ್ (ಸಕಾರಾತ್ಮP) ಆಗಿ ಹೊರಬಂದರೆ, ಅದನ್ನು ಸೋಂಕಿನ ದೃಢೀಕರಣವೆಂದು  ಪರಿಗಣಿಸಬಹುದು. ಇದು ನಕಾರಾತ್ಮಕ ಫಲಿತಾಂಶವನ್ನು ತೋರಿಸಿದರೆ, ಸೋಂಕನ್ನು ತಳ್ಳಿಹಾಕಲು ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಸಹ ಮಾಡಬೇಕೆಂದು ಐಸಿಎಂಆರ್ ಶಿಫಾರಸು ಮಾಡಿದೆ. ಪ್ರತಿಜನಕದಲ್ಲಿನ ಸಕಾರಾತ್ಮಕ ಪರೀಕ್ಷೆಯನ್ನು ನಿಜವಾದ ಪಾಸಿಟಿವ್ ಎಂದು ಪರಿಗಣಿಸಬೇಕು ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಯಿಂದ ಪುನರ್ ದೃಢೀಕರಣದ ಅಗತ್ಯವಿಲ್ಲ. ಪ್ರಸ್ತುತ ರೋಗಿಗೆ ಸೋಂಕು ತಗುಲಿದೆಯೇ ಎಂದು ಇದು ತೋರಿಸುತ್ತದೆ ಎಂದು ಐಸಿಎಂಆರ್‌ನ ವಿಜ್ಞಾನಿ ಮತ್ತು ಮಾಧ್ಯಮ ಸಂಯೋಜಕ ಡಾ.ಎಲ್.ಕೆ.ರ್ಮ ಹೇಳಿದರು. ಕಿಟ್‌ನ ಬೆಲೆಯ ಬಗ್ಗೆ ಕೇಳಿದ ಪ್ರಶ್ನೆಗೆ ಕಿಟ್‌ನ ಬೆಲೆಯನ್ನು ಕಂಪೆನಿಯು ಹೇಳಬಹುದು ಎಂದು ಶರ್ಮ ಉತ್ತರಿಸಿದರು. ಕಿಟ್‌ಗಳನ್ನು ಸಂಗ್ರಹಿಸುವ ಬಗ್ಗೆ ರಾಜ್ಯ ಸರ್ಕಾರಗಳು ನಿರ್ಧರಿಸಬೇಕು ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಪುನಃ ದಿಗ್ಬಂಧನ (ಲಾಕ್ ಡೌನ್) ಜಾರಿ ಮಾಡಬಹುದು ಎಂಬ ವದಂತಿಗಳನ್ನು ಅಲ್ಲಗಳೆದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 2020 ಜೂನ್ 15ರ ಸೋಮವಾರ ಟ್ವೀಟ್ ಮಾಡಿದರು. ಕೊರೋನಾ ಸೋಂಕು ಪ್ರಸರಣವನ್ನು ತಡೆಗಟ್ಟಲು ಮಾರ್ಚ್ ೨೫ರಂದು ಜಾರಿಗೊಳಿಸಲಾದ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು  (ಲಾಕ್ ಡೌನ್) ಬಳಿಕ ನಾಲ್ಕು ಬಾರಿ ವಿಸ್ತರಿಸಲಾಗಿತ್ತು. ಪ್ರಸ್ತುತ ಕಂಟೈನ್ ಮೆಂಟ್ ವಲಯಗಳಲ್ಲಿ ಮಾತ್ರ ಜೂನ್ ೩೦ರವರೆಗೆ  ಲಾಕ್‌ಡೌನ್ ಜಾರಿಯಲ್ಲಿ ಇದೆ. ದೆಹಲಿಯಲ್ಲಿ ಮತ್ತೊಮ್ಮೆ ದಿಗ್ಬಂಧನ ಜಾರಿಯಾಗಬಹುದು ಎಂದು ಹಲವರು ಊಹೆಗಳನ್ನು ಮಾಡುತ್ತಿದ್ದಾರೆ. ಆದರೆ ಅಂತಹ ಯಾವ ಯೋಜನೆಗಳೂ ಇಲ್ಲ ಎಂದು ಕೇಜ್ರಿವಾಲ್ ಟ್ವೀಟಿನಲ್ಲಿ ತಿಳಿಸಿದರು. ಇದಕ್ಕೆ ಮುನ್ನ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಗರದ ಕೊರೋನಾವೈರಸ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ದೆಹಲಿಯ ಸರ್ವ ಪಕ್ಷಗಳ ಸಭೆ ನಡೆಯಿತು. ದೆಹಲಿಯಲ್ಲಿ ಹಾಸಿಗೆಗಳ ಸಾಮರ್ಥ್ಯ ವರ್ಧನೆ, ಪರೀಕ್ಷೆ ಹೆಚ್ಚಳ ಮತ್ತು ಇತರ ಪ್ರಮುಖ ಉಪಕ್ರಮಗಳನ್ನು ಕೈಗೊಳ್ಳಲು ಕಾರ್‍ಯ ಯೋಜನೆಯೊಂದನ್ನು ರೂಪಿಸಲು ಕೇಂದ್ರ ಮತ್ತು ಆಪ್ ಸರ್ಕಾರ ಒಪ್ಪಿದವು ಎಂದು ದೆಹಲಿ ಸರ್ಕಾರ ಸಭೆಯ ಬಳಿಕ ಹೇಳಿಕೆಯೊಂದರಲ್ಲಿ ತಿಳಿಸಿತು. ಕೊರೋನಾವೈರಸ್ ಪ್ರಕರಣಗಳನ್ನು ನಿಭಾಯಿಸಲು ಲಾಕ್‌ಡೌನ್ ಮರುಜಾರಿ ಮಾಡುವ ಬಗ್ಗೆ ಯಾವುದೇ ಪಕ್ಷವೂ ಸಭೆಯಲ್ಲಿ ಸಲಹೆ ಮಾಡಲಿಲ್ಲ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

 ಇಂದಿನ ಇತಿಹಾಸ  History Today ಜೂನ್  15  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment