ಇಂದಿನ ಇತಿಹಾಸ History
Today
ಜೂನ್ 02
2020: ನವದೆಹಲಿ: ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಪ್ರಮಾಣವಚನ ಸ್ವೀಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ 2020 ಜೂನ್ 02ರ ಮಂಗಳವಾರ ಕಾರ್ಪೊರೇಟ್ ಮುಖಂಡರನ್ನು ಆಗ್ರಹಿಸಿದರು. ಈ ಗುರಿ ಸಾಧನೆಗಾಗಿ ಐದು ಅಂಶಗಳನ್ನು ಅವರು ಪಟ್ಟಿ ಮಾಡಿದರು. ‘ಭಾರತ ಆತ್ಮ ನಿರ್ಭರ’ ಮಾಡುವ ಪ್ರಮಾಣವಚನ ಸ್ವೀಕರಿಸಿ. ಸರ್ಕಾರ ನಿಮ್ಮೊಂದಿಗೆ ನಿಂತಿದೆ, ನೀವು ದೇಶದ ಗುರಿಗಳೊಂದಿಗೆ ನಿಲ್ಲಬೇಕು" ಎಂದು ಪ್ರಧಾನಿ ಇಂಡಿಯಾ ಇಂಕ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ‘ಭಾರತವು ಸ್ವಾವಲಂಬಿ’ಯಾಗಲು ಐದು ವಿಷಯಗಳು ಬಹಳ ಮುಖ್ಯ: ಉದ್ದೇಶ, ಸೇರ್ಪಡೆ, ಹೂಡಿಕೆ, ಮೂಲಸೌಕರ್ಯ ಮತ್ತು ನಾವೀನ್ಯತೆ. ಇತ್ತೀಚೆಗೆ ನಾವು ತೆಗೆದುಕೊಂಡ ದಿಟ್ಟ ನಿರ್ಧಾರಗಳಲ್ಲಿ ಇವುಗಳ ಒಂದು ನೋಟವನ್ನು ನೀವು ಪಡೆಯುತ್ತೀರಿ" ಎಂದು ಪ್ರಧಾನಿ ನುಡಿದರು. ಸರ್ಕಾರವು ವಿವಿಧ ಸುಧಾರಣೆಗಳನ್ನು ಮುಂದುವರೆಸುತ್ತಿರುವುದರಿಂದ ಭಾರತ ಖಂಡಿತವಾಗಿಯೂ ತನ್ನ ಆರ್ಥಿಕ ಬೆಳವಣಿಗೆಯನ್ನು ಮರಳಿ ಪಡೆಯುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ವ್ಯಕ್ತ ಪಡಿಸಿದರು. "ದೇಶವು ಈಗ ವಿಶ್ವಕ್ಕಾಗಿ ಭಾರತದಲ್ಲಿ ಉತ್ಪನ್ನಗಳನ್ನು ತಯಾರಿಸುವ ಅಗತ್ಯವಿದೆ" ಎಂದು ಅವರು ಹೇಳಿದರು. ಕೈಗಾರಿಕಾ ಸಂಘ ಸಿಐಐನ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ, ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಆರ್ಥಿಕತೆಯ ಬಗ್ಗೆಯೂ ಕಾಳಜಿ ವಹಿಸಿದೆ ಎಂದು ಪ್ರಧಾನಿ ನುಡಿದರು. ’ಬೆಳವಣಿಗೆಯನ್ನು ಮರಳಿ ಪಡೆಯುವುದು’ ವಿಷಯದ ಬಗ್ಗೆ ಪ್ರಧಾನಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ವಕ್ರ ದೃಷ್ಟಿ ಹೊಂದಿದ್ದಾರೆ, ಅವರ ನ್ಯಾಯ ಯೋಜನೆಯನ್ನು ತಿರಸ್ಕರಿಸಲಾಗಿದೆ ಎಂದು ಅವರಿಗೆ ಗೊತ್ತಾಗುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2020 ಜೂನ್ 02ರ ಮಂಗಳವಾರ ಇಲ್ಲಿ ಹೇಳಿದರು. ಬಡ ಮತ್ತು ವಲಸೆ ಕಾರ್ಮಿಕರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಸಲಹೆಗಳನ್ನು ದೇಶದ ಜನರು ಈಗಾಗಲೇ ತಿರಸ್ಕರಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು. ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಿದ್ದ ಶಾ, ‘ಕೆಲವು ಜನರಿಗೆ ವಕ್ರ ದೃಷ್ಟಿ ಇರುತ್ತದೆ. ಮುಂದಿನ ಆರು ತಿಂಗಳವರೆಗೆ ಸರ್ಕಾರವು ೭,೫೦೦ ರೂಗಳನ್ನು ನೇರವಾಗಿ ವಲಸೆ ಕಾರ್ಮಿಕರ ಖಾತೆಗೆ ವರ್ಗಾಯಿಸಬೇಕು ಎಂಬ ರಾಹುಲ್ ಗಾಂಧಿಯವರ ಬೇಡಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾ ’ಕೆಲವು ಜನರಿಗೆ ವಕ್ರ ದೃಷ್ಟಿ ಇರುತ್ತದೆ ಅವರು ನೇರವಾಗಿ ಏನನ್ನೂ ನೋಡಲಾಗುವುದಿಲ್ಲ’ ಎಂದು ನುಡಿದರು. ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಖ್ಯಾತ ಅರ್ಥಶಾಸ್ತ್ರಜ್ಞರಾದ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರನ್ನು ಸಂಪರ್ಕಿಸಿ ಸಲಹೆ ಡೆದುಕೊಂಡು, ದಿಗ್ಬಂಧನದಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡಬೇಕು ಎಂದು ಕೋರಿದ್ದಾರೆ. ಕಳೆದ ವರ್ಷ ಸಾರ್ವತ್ರಿಕ ಚುನಾವಣೆಗಿಂತ ಮುಂಚಿತವಾಗಿಯೇ ರಾಹುಲ್ ಗಾಂಧಿಯವರು ಪ್ರತಿ ಬ್ಯಾಕ್ ಖಾತೆಗೆ ೭೫೦೦ ರೂಗಳನ್ನು ಹಾಕುವ ಯೋಜನೆಯೊಂದಿಗೆ ಸುತ್ತುತ್ತಿದ್ದಾರೆ ಎಂದು ಗೃಹ ಸಚಿವರು ಉಲ್ಲೇಖಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಗುವಾಹಟಿ: ಭಾರೀ ಮಳೆ ಹಾಗೂ ಪ್ರವಾಹದ ಪರಿಣಾಮವಾಗಿ ಅಸ್ಸಾಮಿನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಗಳಲ್ಲಿ 2020 ಜೂನ್ 02ರ ಮಂಗಳವಾರ ಸಂಭವಿಸಿದ ಭೂಕುಸಿತಗಳಲ್ಲಿ ಇಪ್ಪತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಮಂಗಳವಾರ ಮುಂಜಾನೆ ಸಂಭವಿಸಿದ ಭೂಕುಸಿತದಿಂದಾಗಿ ಕರೀಮ್ಗಂಜ್ ಜಿಲ್ಲೆಯಲ್ಲಿ ಕನಿಷ್ಠ ಆರು ಜನರು, ಕ್ಯಾಚರ್ ಮತ್ತು ಹೈಲಕಂಡಿ ಜಿಲ್ಲೆಗಳಲ್ಲಿ ತಲಾ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಸಂತ್ರಸ್ತರ ಸಾವಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ಸೂಚಿಸಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು. ‘ಅಸ್ಸಾಮಿನ ಬರಾಕ್ ಕಣಿವೆಯಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದ ಪ್ರಾಣಹಾನಿ ದುರಂತಗಳು ಘಟಿಸಿದ್ದು, ಸ್ಥಳೀಯ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವೆ’ ಎಂದು ಅವರು ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ: ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಮಂಗಳವಾರ ’ನಿಸರ್ಗ’ ಬಿರುಗಾಳಿಯನ್ನು ’ಚಂಡಮಾರುತ’ ಎಂಬುದಾಗಿ ಅಧಿಕೃತವಾಗಿ ಘೋಷಿಸಿದ್ದು, ಚಂಡಮಾರುತವು 2020 ಜೂನ್ ೩ರ ಬುಧವಾರ ಮಧ್ಯಾಹ್ನದ ವೇಳೆಗೆ ಮುಂಬೈ ಸಮೀಪ ನೆಲಕ್ಕೆ ಅಪ್ಪಳಿಸಲಿದೆ. ಕಡಿಮೆ ಒತ್ತಡದ ಪ್ರದೇಶವಾಗಿ ಪ್ರಾರಂಭವಾದ ಉಷ್ಣವಲಯದ ಚಂಡಮಾರುತವು 2020 ಜೂನ್ 02ರ ಮಂಗಳವಾರ ಮಧ್ಯಾಹ್ನ ಚಂಡಮಾರುತವಾಗಿ ಮಾರ್ಪಟ್ಟಿದೆ ಎಂದು ಐಎಂಡಿ ಹೇಳಿತು. ಜೂನ್ ೨ ರಂದು ಸಂಜೆ ೫.೩೦ ರ ವೇಳೆಗೆ ನಿಸರ್ಗ ಪ್ರಬಲ ಬಿರುಗಾಳಿ ಸಹಿತವಾದ ಚಂಡಮಾರುತವಾಗಲಿದೆ ಎಂದು ಐಎಂಡಿ ಇದಕ್ಕೆ ಮುನ್ನವೇ ತಿಳಿಸಿತ್ತು. ಚಂಡಮಾರುತವು ಪ್ರಸ್ತುತ ೯೦-೧೦೦ ಕಿ.ಮೀ ವೇಗದ ಗಾಳಿಯೊಂದಿಗೆ ಮುನ್ನುಗ್ಗುತ್ತಿದೆ. ಭೂಮಿಗೆ ಅಪ್ಪಳಿಸುವ ಜಾಗದ ಸನಿಹಕ್ಕೆ ಬರುವ ವೇಳೆಗೆ ಗಾಳಿಯ ವೇಗ ೧೦೫-೧೧೫ ಕಿ.ಮೀಯಿಂದ ೧೨೫ ಕಿ.ಮೀ ವೇಗದಲ್ಲಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ನಿಸರ್ಗ ವಿಶೇಷವಾಗಿ ಮುಂಬೈಯಂತಹ ನಗರಗಳಲ್ಲಿ ತಗ್ಗು ಪ್ರದೇಶಗಳನ್ನು ಮುಳುಗಿಸಬಹುದು ಮತ್ತು ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಉರುಳಿಸಿ, ಹಾನಿ ಉಂಟು ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದರು. ಕೋವಿಡ್ -೧೯ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆರೋಗ್ಯ ಸಂಪನ್ಮೂಲಗಳಿಗಾಗಿ ಈಗಾಗಲೇ ತೊಂದರೆಗೊಳಗಾಗಿರುವ ನಗರವು ಚಂಡಮಾರುತ ಹೊಡೆತವನ್ನು ಹೇಗೆ ನಿಭಾಯಿಸುತ್ತದೆ ಎಂಬ ಕಳವಳವನ್ನು ಇದು ಸೃಷ್ಟಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ರೋಗಿಗಳ ಸಂಖ್ಯೆ ೨ ಲಕ್ಷದ ಸನಿಹಕ್ಕೆ ಬಂದಿದ್ದರೂ, ಭಾರತವು ಕೋವಿಡ್ -೧೯ ಶಿಖರದಿಂದ ದೂರವಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ಐಸಿಎಂಆರ್) ತಜ್ಞೆ ಡಾ.ನಿವೇದಿತಾ ಗುಪ್ತ ಅವರು 2020 ಜೂನ್ 02ರ ಮಂಗಳವಾರ ಇಲ್ಲಿ ಹೇಳಿದರು. ಕೋವಿಡ್ -೧೯ಕ್ಕೆ ಸಂಬಂಧಿಸಿದ ಐಸಿಎಂಆರ್ ಮತ್ತು ಆರೋಗ್ಯ ಸಚಿವಾಲಯದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಡಾ. ನಿವೇದಿತಾ ಗುಪ್ತ ಮಾತನಾಡುತ್ತಿದ್ದರು. ರೋಗವನ್ನು ದಮನಿಸುವಲ್ಲಿ ಭಾರತದ ಕ್ರಮಗಳು ಪರಿಣಾಮಕಾರಿಯಾಗಿವೆ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿಯೂ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಅವರು ನುಡಿದರು. ‘ಸಮುದಾಯ ಪ್ರಸರಣ’ ಎಂಬ ಪದವನ್ನು ಬಳಸುವ ಮುನ್ನ, ರೋಗದ ಹರಡುವಿಕೆಯ ವ್ಯಾಪ್ತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಉತ್ತುಂಗದಿಂದ ದೂರವಿದ್ದೇವೆ’ ಎಂದು ಅವರು ಹೇಳಿದರು. ಭಾರತದಲ್ಲಿ ಕೋವಿಡ್ -೧೯ ಸಾವಿನ ಪ್ರಮಾಣ ೨.೮೨% ಆಗಿದ್ದು, ಇದು ವಿಶ್ವದ ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು. ‘ಭಾರತದಲ್ಲಿ ಶೇಕಡಾ ೭೩ ರಷ್ಟು ಕೋವಿಡ್ -೧೯ ಸಾವುಗಳು ಸಹ-ಅಸ್ವಸ್ಥತೆ ಹೊಂದಿರುವ ಜನರಲ್ಲಿ ಸಂಭವಿಸಿವೆ’ ಎಂದು ಅಗರವಾಲ್ ನುಡಿದರು. ಭಾರತದ ಜನಸಂಖ್ಯೆಯ ೧೦% ರಷ್ಟು ದೇಶದ ಕೋವಿಡ್ -೧೯ ಸಂಬಂಧಿತ ಸಾವುಗಳ ಶೇಕಡಾ ೫೦% ರಷ್ಟು ಆಗುತ್ತದೆ. ದೇಶಾದ್ಯಂತ ೯೫,೫೨೭ ಕೊರೋನವೈರಸ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಹೀಗಾಗಿ ಚೇತರಿಕೆ ಪ್ರಮಾಣವು ಈಗ ಶೇಕಡಾ ೪೮.೦೭ಕ್ಕೆ ಏರಿದೆ ಎಂದು ಅಗರವಾಲ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ನಿಸರ್ಗ ಚಂಡಮಾರುತವನ್ನು ಎದುರಿಸಲು ತೀವ್ರ ಸಿದ್ಧತೆ ನಡೆಸಲಾಗುತ್ತಿದ್ದು, ಗುಜರಾತ್ ರಾಜ್ಯ ಸರ್ಕಾರವು ಚಂಡಮಾರುತದ ಚಂಡಮಾರುತದಿಂದ ಬೀಸುವ ಪ್ರದೇಶಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲು 2020 ಜೂನ್ 06ರ ಮಂಗಳವಾರ ಆರಂಭಿಸಿತು. ಜೂನ್ ೩ ರ ಮಧ್ಯಾಹ್ನ ನಿರ್ಗ ಚಂಡ ಮಾರುತವು ಹರಿಹರೇಶ್ವರ (ಮಹಾರಾಷ್ಟ್ರದ ರಾಯಗಡದಲ್ಲಿ) ಮತ್ತು ದಮನ್ ನಡುವೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಹಿಂದೆ ತಿಳಿಸಿತ್ತು. ಆದರೆ, ನಂತರ ಜೂನ್ ೩ ರ ಮಧ್ಯಾಹ್ನ ಮುಂಬೈ ಸಮೀಪದ ಅಲಿಬಾಗ್ನಲ್ಲಿ ಚಂಡಮಾರುತ ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮಂಗಳವಾರ ಹೇಳಿತು. ಗುಜರಾತ್ನ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಒಂದು ದೊಡ್ಡ ಪರಿಹಾರವಾಗಿದೆ, ಆದರೆ ಚಂಡಮಾರುತವು ಬೀಸುವ ಗಾಳಿಯ ರೂಪದಲ್ಲಿ ಪರಿಣಾಮ ಬೀರುತ್ತದೆ ಮತ್ತು ಈ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತದೆ ಎಂದು ರಾಜ್ಯ ಮೆಟ್ ಸೆಂಟರ್ ನಿರ್ದೇಶಕಿ ಜಯಂತ ಸರ್ಕಾರ್ ಹೇಳಿದರು. ಮುನ್ನೆಚ್ಚರಿಕೆ ಕ್ರಮವಾಗಿ ನವಸಾರಿ ಮತ್ತು ವಲ್ಸಾದ್ ಜಿಲ್ಲಾಡಳಿತಗಳು ಈಗಾಗಲೇ ಜನರ ಸ್ಥಳಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ಈ ಜಿಲ್ಲೆಗಳಲ್ಲಿ ಕರಾವಳಿಗೆ ಸಮೀಪದಲ್ಲಿರುವ ೪೭ ಹಳ್ಳಿಗಳಿಂದ ಸುಮಾರು ೨೦,೦೦೦ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಸುದ್ದಿ ಸಂಸ್ಥೆಯು ರಾಜ್ಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment