ಇಂದಿನ ಇತಿಹಾಸ History
Today
ಜೂನ್ 11
2020: ನವದೆಹಲಿ: ಪಾಕಿಸ್ತಾನ ಮತ್ತು ಆಕ್ರಮಿತ ಪ್ರದೇಶಗಳಲ್ಲಿ ವೃತ್ತಿಪರ ಕೋರ್ಸ್ಗಳನ್ನು ತೆಗೆದುಕೊಳ್ಳಲು ೧,೬೦೦ ಕಾಶ್ಮೀರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಇಮ್ರಾನ್ ಖಾನ್ ಸರ್ಕಾರದ ಯೋಜನೆಯ ಬಗ್ಗೆ ಭಾರತೀಯ ಭದ್ರತಾ ಸಂಸ್ಥೆಗಳು 2020 ಜೂನ್ 11ರ ಗುರುವಾರ ಎಚ್ಚರಿಕೆಯ ಕರೆಗಂಟೆ ಭಾರಿಸಿವೆ. ವಿದ್ಯಾರ್ಥಿವೇತನ ಪ್ರಸ್ತಾಪವು ಯುವ ಕಾಶ್ಮೀರಿಗಳನ್ನು ತೀವ್ರಗಾಮಿಗಳನ್ನಾಗಿ ಮಾಡಲು, ಭಾರತದ ವಿರುದ್ಧ ಪ್ರಚೋದಿಸಲು ಮತ್ತು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಬಹುದಾದ (ಟ್ಯಾಪ್ ಮಾಡಬಹುದಾದ) ದೊಡ್ಡ ಸಂಖ್ಯೆಯ ಸಹಾನುಭೂತಿದಾರರನ್ನು ನಿರ್ಮಿಸುವ ಪಾಕಿಸ್ತಾನದ ಆಳವಾದ ಸಂಚಿನ ದೊಡ್ಡ ಯೋಜನೆಯ ಭಾಗವಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. "ಯುವ ಕಾಶ್ಮೀರಿಗಳು ವಾಘಾ-ಅಟ್ಟಾರಿ ಗಡಿ ಠಾಣೆ ಮೂಲಕ ಅಧ್ಯಯನ ಮಾಡಲು ಗಡಿ ದಾಟಿ ಹೋಗಿ ಭಯೋತ್ಪಾದಕರಾಗಿ ನಿಯಂತ್ರಣ ರೇಖೆಯ ಮೂಲಕ ಮರಳಿದ ಹಲವು ಉದಾಹರಣೆಗಳಿವೆ" ಎಂದು ಹೆಸರು ಹೇಳಲು ಇಚ್ಛಿಸದ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ಭೋಪಾಲ್: ಕಮಲನಾಥ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪಕ್ಷದ ವರಿಷ್ಠ ಮಂಡಳಿಯ ಸೂಚನೆ ಮೇರೆಗೇ ಕೆಡವಲಾಯಿತು ಎಂಬುದಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರು ಒಪ್ಪಿಕೊಂಡ ಆಡಿಯೋ ಮತ್ತು ವಿಡಿಯೋ ದೃಶ್ಯಾವಳಿಗಳು ವೈರಲ್ ಆದ ಒಂದು ದಿನದ ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿ ಚೌಹಾಣ್ ತಮ್ಮ ನಿಲುವನ್ನು 2020 ಜೂನ್ 11ರ ಗುರುವಾರ ಸಮರ್ಥಿಸಿಕೊಂಡರು. ‘ಪಾಪಿಗಳನ್ನು ನಾಶ ಮಾಡುವುದು ಪವಿತ್ರ ಕಾರ್ಯ’ ಎಂಬುದಾಗಿ ಮುಖ್ಯಮಂತ್ರಿ ಪ್ರತಿಪಾದಿಸಿದರು. ಪಾಪಿಯೋಂಕಾ ವಿನಾಶ್ ಕರನಾ ತೋ ಪುಣ್ಯ ಕಾ ಕಾಮ್ ಹೈ. ಹಮಾರಾ ಧರಮ್ ತೊ ಯಹೀ ಕೆಹ್ತಾ ಹೈ ಕ್ಯೋಂ? ಬೋಲೋ! ಸಿಯಾಪತಿ ರಾಮಚಂದ್ರ ಕಿ ಜೈ (ಪಾಪಿಗಳನ್ನು ನಾಶ ಮಾಡುವುದು ಪವಿತ್ರ ಕಾರ್ಯ. ನಮ್ಮ ಧರ್ಮ ಇದನ್ನೇ ಹೇಳುತ್ತದೆ. ಅಲ್ಲವೇ?’ ಎಂದು ಚೌಹಾಣ್ ಟ್ವೀಟ್ ಮಾಡಿದರು. ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲು ಪಕ್ಷದ ವರಿಷ್ಠ ಮಂಡಳಿ ಸೂಚಿಸಿತ್ತು ಇಲ್ಲದೇ ಇದ್ದಲ್ಲಿ ಅದು ಎಲ್ಲವನ್ನೂ ನಾಶ ಮಾಡುತ್ತಿತ್ತು ಎಂಬುದಾಗಿ ಚೌಹಾಣ್ ಹೇಳಿದ್ದ ಆಡಿಯೋ, ವಿಡಿಯೋ ದೃಶ್ಯಾವಳಿಗಳು ವೈರಲ್ ಆದ ಬಳಿಕ ಮಧ್ಯಪ್ರದೇಶದಲ್ಲಿ ಭಾರೀ ವಿವಾದ ಉದ್ಭವಿಸಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಸಹಾಯಕ ತುಲಸೀರಾಮ್ ಸಿಲಾವತ್ ಹೊರತಾಗಿ ಇದು ಸಾಧ್ಯವಿರಲಿಲ್ಲ ಎಂದೂ ಚೌಹಾಣ್ ಹೇಳಿದ್ದು ಆಡಿಯೋ ವಿಡಿಯೋದಲ್ಲಿ ದಾಖಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)
2020: ನವದೆಹಲಿ: ವಿಶೇಷವಾಗಿ ಮುಂಬೈ ಮತ್ತು ದೆಹಲಿಯಲ್ಲಿ ಪ್ರಕರಣಗಳ ಹೆಚ್ಚಳದ ಹೊರತಾಗಿಯೂ, ಭಾರತದಲ್ಲಿ ಕೊರೋನವೈರಸ್ ಸೋಂಕು ಸಾಮುದಾಯಿಕ ಪ್ರಸರಣ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ 2020 ಜೂನ್ 11ರ ಗುರುವಾರ ಸ್ಪಷ್ಟ ಪಡಿಸಿತು. ಈ ಮಧ್ಯೆ ಎರಡನೇ ದಿನವೂ ಭಾರತದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಗುಣಮುಖರಾಗಿ ಚೇತರಿಸಿಕೊಂಡವರ ಸಂಖ್ಯೆ ಹಿಂದಕ್ಕೆ ಹಾಕಿತು. ೧.೩೭ ಲಕ್ಷ ಸಕ್ರಿಯ ಪ್ರಕರಣಗಳಿಗೆ ಬದಲಾಗಿ ೧.೪೧ ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. "ಭಾರತವು ದೊಡ್ಡ ದೇಶ, ಅದಕ್ಕೆ ಹೋಲಿಸಿದರೆ ಹರಡುವಿಕೆ ಪ್ರಮಾಣ ತುಂಬಾ ಕಡಿಮೆ. ಭಾರತದಲ್ಲಿ ಸಮುದಾಯ ಪ್ರಸರಣ ಇಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ಹೇಳಿದರು. ರೋಗದ ತ್ವರಿತ ಹರಡುವಿಕೆಯನ್ನು ತಡೆಗಟ್ಟುವಲ್ಲಿ ದಿಗ್ಬಂಧನ (ಲಾಕ್ಡೌನ್) ಕ್ರಮಗಳು ‘ಯಶಸ್ವಿಯಾಗಿದೆ’ ಎಂದು ಉನ್ನತ ವೈದ್ಯಕೀಯ ಸಂಸ್ಥೆಯ ಅಧಿಕಾರಿ ಒತ್ತಿಹೇಳಿದರು. "ಈ ೧೫ ಜಿಲ್ಲೆಗಳ ಜನಸಂಖ್ಯೆಯ ಶೇಕಡಾ ೦.೭೩% ಮಂದಿಯಲ್ಲಿ ರೋಗ ಹರಡದೇ ಇರುವುದನ್ನು ನಾವು ಕಂಡುಕೊಂಡಿದ್ದೇವೆ. ದಿಗ್ಬಂಧನ ಕ್ರಮಗಳು ರೋಗದ ಹರಡುವಿಕೆಯನ್ನು ಕಡಿಮೆ ಇರಿಸಲು ಮತ್ತು ವೇಗವಾಗಿ ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂಬುದು ಇದರ ಅರ್ಥ’ ಎಂದು ಭಾರ್ಗವ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)
2020: ನವದೆಹಲಿ: ಖಾಸಗಿ ರಂಗದ ಘಟಕಗಳಿಂದ (ಪಿಎಸ್ಯು) ಹೊಂದಾಣಿಕೆ ಮಾಡಲಾದ ಒಟ್ಟು ಕಂದಾಯಕ್ಕಾಗಿ (ಎಜಿಆರ್) ೪ ಲಕ್ಷ ಕೋಟಿ ರೂಪಾಯಿ ಪಾವತಿ ಮಾಡುವಂತೆ ದೂರಸಂಪರ್ಕ ಇಲಾಖೆಯು (ಟೆಲಿಕಾಂ ಇಲಾಖೆ) ಮುಂದಿಟ್ಟಿರುವ ಬೇಡಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್ 2020 ಜೂನ್ 11ರ ಗುರುವಾರ ಹೇಳಿತು. ಇದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಟೆಲಿಕಾಂ ಇಲಾಖೆ ಪರಿಗಣಿಸಬೇಕು ಎಂದು ಪೀಠ ಹೇಳಿತು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಸ್. ಅಬ್ದುಲ್ ನಜೀರ್ ಮತ್ತು ಎಂಆರ್ ಶಾ ಅವನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಾ, ಖಾಸಗಿ ರಂಗದ ಘಟಕಗಳಿಂದ ಬರಬೇಕಾದ ಎಜಿಆರ್ನ್ನು ಏರಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿತು. ತನ್ನ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗಿದೆ. ಎಜಿಆರ್ ಆಧರಿಸಿದ ಬಾಕಿ ವಿಷಯದ ಬಗ್ಗೆ ಸುಪ್ರೀಂಕೋರ್ಟ್ ವ್ಯವಹರಿಸಿಯೇ ಇಲ್ಲ ಎಂದು ಪೀಠ ಹೇಳಿತು. ’ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹ’ ಎಂದು ಖಾಸಗಿ ರಂಗದ ಘಟಕಗಳ ವಿರುದ್ಧ ಬೇಡಿಕೆ ಹೆಚ್ಚಿಸಿದ್ದನ್ನು ಉಲ್ಲೇಖಿಸುತ್ತಾ ಕೋರ್ಟ್ ಹೇಳಿತು. ದೂರ ಸಂಪರ್ಕ ಇಲಾಖೆಯ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಎಜಿಆರ್ನ್ನು ಏರಿಸಿದ್ದು ಏಕೆ ಎಂಬುದಾಗಿ ವಿವರಿಸಿ ಪ್ರಮಾಣಪತ್ರ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)
2020: ಮುಂಬೈ: ಬ್ರಿಟಿಷ್ ಕಾಲದ ಮುಂಬೈಯ ಕ್ರಾಫರ್ಡ್ ಮಾರುಕಟ್ಟೆಯಲ್ಲಿ 2020 ಜೂನ್ 11ರ ಗುರುವಾರ ಅಗ್ನಿ ದುರಂತ ಸಂಭವಿಸಿತು. ಆದರೆ ಯಾವುದೇ ಸಾವು ನೋವಿನ ವರದಿಯಾಗಲಿಲ್ಲ.ಸಂಜೆ ೬ ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿತು. ಆರು ಅಗ್ನಿಶಾಮಕ ಎಂಜಿನ್ಗಳು ಮತ್ತು ಮೂರು ಜಂಬೋ ಟ್ಯಾಂಕರುಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿಯನ್ನು ಲೆವೆಲ್ ೨ ಮಾದರಿಯ ಬೆಂಕಿ ಎಂಬುದಾಗಿ ವರ್ಗೀಕರಿಸಲಾಯಿತು.ಮಾರುಕಟ್ಟೆಯಲ್ಲಿ ಹಲವಾರು ಅಂಗಡಿಗಳಿದ್ದು, ನಾಲ್ಕು ವಾಣಿಜ್ಯ ಸ್ಥಳಗಳಿಗೆ ಬೆಂಕಿ ಸೀಮಿತವಾಗಿತ್ತು ಎಂದು ವರದಿಗಳು ಹೇಳಿದವು.ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯಸ್ಥ ಪ್ರಭಾತ್ ರಹಂಗ್ಡಾಲೆ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಸ್ವಾವಲಂಬನೆ ಈಗಾಗಲೇ ಕೇಂದ್ರದ ನೀತಿಯ ಒಂದು ಭಾಗವಾಗಿದೆ. ಕೋವಿಡ್ -೧೯ ಸಾಂಕ್ರಾಮಿಕವು ಇದಕ್ಕೆ ಒಂದು ಒತ್ತು ನೀಡಿದೆ. ಕೋವಿಡ್ -೧೯ರ ಸಂಕಷ್ಟವನ್ನು ’ಆತ್ಮ ನಿರ್ಭರ’ ಭಾರತದ (ಸ್ವಾವಲಂಬೀ ಭಾರತ) ನಿರ್ಮಾಣಕ್ಕಾಗಿ ಬಳಸಿಕೊಳ್ಳೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಜೂನ್ 11ರ ಗುರುವಾರ ಕರೆ ನೀಡಿದರು. ಭಾರತೀಯ ವಾಣಿಜ್ಯ ಮಂಡಳಿಯ (ಐಸಿಸಿ) ೯೫ ನೇ ವಾರ್ಷಿಕ ದಿನಾಚರಣೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಮಾತನಾಡುತ್ತಿದ್ದರು. ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಲು ನಾಗರಿಕರು ನಿರ್ಧರಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ದೇಶಕ್ಕೆ ಒಂದು ಮಹತ್ವದ ತಿರುವು ಎಂದು ಮೋದಿ ಹೇಳಿದರು. ಪ್ರಧಾನಿಯವರು ಮೇ ೧೨ ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಸ್ವಾವಲಂಬೀ ಭಾರತದ ನಿರ್ಮಾಣಕ್ಕಾಗಿ ದೇಶೀಯವಾಗಿ ಉತ್ಪಾದಿಸುವ ಸರಕುಗಳಿಗೆ ಪ್ರೋತ್ಸಾಹ ನೀಡಲು ಕರೆ ನೀಡಿದ್ದರು. ಗುರುವಾರ ಮೋದಿಯವರು ಭಾರತೀಯ ಆರ್ಥಿಕತೆಯನ್ನು ’ಕಮಾಂಡ್ ಅಂಡ್ ಕಂಟ್ರೋಲ್’ನಿಂದ ಹೊರತೆಗೆದು ಅದನ್ನು’ ಪ್ಲಗ್ ಅಂಡ್ ಪ್ಲೇ ’ಕಡೆಗೆ ತೆಗೆದುಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸಿದರು. "ನಾವು ಭಾರತೀಯ ಆರ್ಥಿಕತೆಯನ್ನು ’ಕಮಾಂಡ್ ಅಂಡ್ ಕಂಟ್ರೋಲ್’ನಿಂದ ತೆಗೆದುಕೊಂಡು ಅದನ್ನು’ ಪ್ಲಗ್ ಅಂಡ್ ಪ್ಲೇ’ ಕಡೆಗೆ ತೆಗೆದುಕೊಳ್ಳಬೇಕಾಗಿದೆ. ಇದು ಸಂಪ್ರದಾಯಿಕ ವಿಧಾನದ ಅನುಕರಣೆಗೆ ಸಮಯವಲ್ಲ. ಇದು ದಿಟ್ಟ ನಿರ್ಧಾರಗಳು ಮತ್ತು ದಿಟ್ಟ ಹೂಡಿಕೆಗಳ ಸಮಯವಾಗಿದೆ" ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)
No comments:
Post a Comment