ನಾನು ಮೆಚ್ಚಿದ ವಾಟ್ಸಪ್

Friday, June 19, 2020

ಇಂದಿನ ಇತಿಹಾಸ History Today ಜೂನ್ 19

ಇಂದಿನ ಇತಿಹಾಸ  History Today ಜೂನ್  19  

2020: ನವದೆಹಲಿ: ಲಡಾಖ್‌ನಲ್ಲಿ ಚೀನಾವು ತಡೆಯಲು ಯತ್ನಿಸಿದ್ದ ಗಲ್ವಾನ್ ನದಿ ಸೇತುವೆಯನ್ನು ಭಾರತವು ಚೀನೀ ಪಡೆಗಳ ಜೊತೆಗಿನ ಘರ್ಷಣೆಯ ನಡುವೆಯೇ ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು 2020 ಜೂನ್ 19ರ ಶುಕ್ರವಾರ ತಿಳಿಸಿದರು. ಭಾರತದ ಸೇನಾ ಎಂಜಿನಿಯರ್‌ಗಳು ಪೂರ್ವ ಲಡಾಖ್‌ನ ಗಲ್ವಾನ್ ನದಿಯ ಮೇಲೆ ೬೦ ಮೀಟರ್ ಸೇತುವೆಯನ್ನು ಪೂರ್ಣಗೊಳಿಸಿದ್ದಾರೆ, ಇದು ಭಾರತೀಯ ಕಾಲಾಳುಪಡೆಗೆ ಶೀತ ಪರ್ವತ ನದಿಗೆ ಅಡ್ಡಲಾಗಿ ಚಲಿಸಲು ಅವಕಾಶ ನೀಡುವ ಮೂಲಕ ಸೂಕ್ಷ್ಮ ವಲಯದಲ್ಲಿ ಭಾರತದ ಹಿಡಿತವನ್ನು ಬಲಪಡಿಸುತ್ತದೆ ಮತ್ತು ದಾರ್ಬುಕ್‌ನಿಂದ ಕಾರಾಕೋರಂ ಕಣಿವೆ ಮಾರ್ಗದ ದಕ್ಷಿಣಕ್ಕಿರುವ ಕೊನೆಯ ಸೇನಾ ಠಾಣೆಯಾಗಿರುವ ದೌಲತ್ ಬೇಗ್ ಓಲ್ಡಿವರೆಗಿನ ೨೫೫ ಕಿ.ಮೀ ಉದ್ದದ ಆಯಕಟ್ಟಿನ ರಸ್ತೆಯನ್ನು ರಕ್ಷಿಸುತ್ತದೆ ಎಂದು ಉನ್ನತ ಅಧಿಕಾರಿಗಳು ಹೇಳಿದರು. ಯೋಜನೆಯನ್ನು ಕೈಬಿಡುವಂತೆ ಭಾರತೀಯ ಸೇನೆಯನ್ನು ಒತ್ತಾಯಿಸುವ ಪ್ರಯತ್ನದಲ್ಲಿ ಪಿಎಲ್‌ಎ ಪ್ರದೇಶದಲ್ಲಿ ಪ್ರತಿಕೂಲ ಚಲನೆಗಳನ್ನು ತೋರಿಸುತಿದ್ದುದರ ನಡುವೆಯೇ ಸೇನಾ ಎಂಜಿನಿಯರ್‌ಗಳು ಸೇತುವೆಯನ್ನು ನಿರ್ಮಿಸಿದ್ದಾರೆ. ಪೂರ್ವ ಲಡಾಕ್‌ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನಡೆಸಿದ್ದ ಆಕ್ರಮಣಕಾರಿ ಪ್ರಚೋದನೆಗಳ ಮಧ್ಯೆಯೇ ಸೇತುವೆಯ ನಿರ್ಮಾಣವನ್ನು  ಪೂರ್ಣಗೊಳಿಸಲಾಯಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಉಲ್ಬಣಗೊಳ್ಳುತ್ತಿರುವ ಭಾರತ-ಚೀನಾ ಉದ್ವಿಗ್ನತೆಗಳ ಬಗ್ಗೆ ಚರ್ಚಿಸಲು 2020 ಜೂನ್ 19ರ ಶುಕ್ರವಾರ  ಕರೆಯಲಾದ ಸರ್ವಪಕ್ಷ ಸಭೆಗೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಕೆಲವು ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದವು. ಸಂಸತ್ತಿನಲ್ಲಿನ ನಗಣ್ಯ ಉಪಸ್ಥಿತಿಯನ್ನು ಅನುಸರಿಸಿ ಆರ್‌ಜೆಡಿ, ಆಮ್ ಆದ್ಮಿ ಪಕ್ಷ (ಆಪ್) ಮತ್ತು ಎಐಐಎಂಐಎಂಗಳಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿಲ್ಲ ಎಂದು ಹೇಳಲಾಗಿತ್ತು. ಸಭೆಯ ಮುನ್ನಾದಿನ ಟ್ವಿಟರ್ ಖಾತೆ ಬಳಸಿ, ಪ್ರಧಾನಿ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ ಆರ್‌ಜೆಡಿ ಮುಖಂಡ ಹಾಗೂ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ಅವರು ಗಲ್ವಾನ್ ಕಣಿವೆ ಕುರಿತ ಸರ್ವ ಪಕ್ಷ ಸಭೆಗಾಗಿ ರಾಜಕೀಯ ಪಕ್ಷಗನ್ನು ಆಹ್ವಾನಿಸಲು ಅನುಸರಿಸಲಾಗಿರುವ ಮಾನದಂಡಗಳೇನು ಎಂಬುದಾಗಿ ತಾವು ತಿಳಿಯಬಯಸುವುದಾಗಿ ರಕ್ಷಣಾ ಸಚಿವರು ಮತ್ತು ಪ್ರಧಾನಿಯವರ ಟ್ವಿಟ್ಟರ್ ಖಾತೆಯನ್ನು ಹ್ಯಾಷ್ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ತಮ್ಮ ಪಕ್ಷಕ್ಕೆ ಈವರೆಗೆ ಯಾವುದೇ ಸಂದೇಶ ಬಂದಿಲ್ಲ, ಆದ್ದರಿಂದ ಸಭೆಗೆ ಆಹ್ವಾನಿಸುವ/ ಹೊರಗಿಡುವ ಆಧಾರಗಳು ಏನು ಎಂಬುದಾಗಿ ತಿಳಿಯಬಯಸಿದ್ದೇನೆ ಎಂದು ತೇಜಸ್ವಿ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಸಂಹಾರ ಕಾರ್ಯಾಚರಣೆ ಮುಂದುವರೆಸಿರುವ ಭದ್ರತಾ ಪಡೆಗಳು ಕಳೆದ  ೨೪ ಗಂಟೆಗಳಲ್ಲಿ ಭಯೋತ್ಪಾದಕರನ್ನು ಘರ್ಷಣೆಯಲ್ಲಿ ಹೊಡೆದುರುಳಿಸಿದವು. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ 2020 ಜೂನ್ 19ರ ಶುಕ್ರವಾರ  ಸ್ಪಷ್ಟಪಡಿಸಿದರು. ಸತ್ತಿರುವ ಭಯೋತ್ಪಾದಕರಲ್ಲಿ ಪಾಂಪೋರ್ನ ಜಾಮಿಯಾ ಮಸೀದಿಯಲ್ಲಿ ಅಡಗಿದ್ದ ಇಬ್ಬರು ಉಗ್ರರೂ ಸೇರಿದ್ದಾರೆ. ಇವರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ಅವರು ನುಡಿದರು. ಮಸೀದಿಯಲ್ಲಿ ಅಡಗಿದ್ದ ಉಗ್ರರ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಧಾರ್ಮಿಕ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ದಿಲ್ಬಾಗ್ ಸಿಂಗ್ ಸ್ಪಷ್ಟಪಡಿಸಿದ್ದು, ಅತ್ಯಂತ ಕರಾರುವಾಕ್ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದರು. ಮಸೀದಿಯಲ್ಲಿ ಅಡಗಿದ್ದ ಭಯೋತ್ಪಾದಕರನ್ನು ಮೊದಲು ಮಸೀದಿ ಬಿಟ್ಟು ಹೊರಬರುವ ಅನಿವಾರ್ಯತೆ ಸೃಷ್ಟಿಸಿದ ಭದ್ರತಾ ಪಡೆಗಳು, ನಂತರ ಇಬ್ಬರನ್ನೂ ಹೊಡೆದುರುಳಿಸುವಲ್ಲಿ ಯಶಸ್ವಿಯಾದವು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲಾಗಿದ್ದ ಪಿಎಲ್‌ಎ ಬೆಟಾಲಿಯನ್‌ನ ಕಮಾಂಡಿಂಗ್ ಅಧಿಕಾರಿ ಮತ್ತು ಅವರ ಎರಡನೇ ಕಮಾಂಡ್ ಸೋಮವಾರ ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಚೀನೀ ಮತ್ತು ಭಾರತೀಯ ಸೈನಿಕರ ನಡುವಣ ಹಿಂಸಾತ್ಮಕ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನಂಬಲರ್ಹ ಸುದ್ದಿ ಮೂಲಗಳು 2020 ಜೂನ್ 19ರ ಶುಕ್ರವಾರ ತಿಳಿಸಿದವು. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸಾಕಷು ಸಾವುನೋವುಗಳನ್ನು ಅನುಭವಿಸಿದೆ ಎಂದು ಚೀನಾ ದೃಢ ಪಡಿಸಿದೆ, ಆದರೆ ಘರ್ಷಣೆಯ ವಿವರಗಳ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗ ಪುನರಪಿ ಪ್ರಶ್ನೆಗಳಿಗೆ ಉತ್ತರಿಸಿಲು ನಿರಾಕರಿಸಿದೆ.  ಹಿಂಸಾತ್ಮಕ ಘರ್ಷಣೆಯಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ ಇಪ್ಪತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ೪೫ ವರ್ಷಗಳಲ್ಲಿ ಪಿಎಲ್‌ಎ ಜೊತೆಗಿನ ಘರ್ಷಣೆಯಲ್ಲಿ ಮೊದಲಬಾರಿ ಭಾರತದ ಕಡೆಯಲ್ಲಿ  ಸಾವುನೋವು ಸಂಭವಿಸಿದೆ. "ಇದು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಮಾದರಿ ಮೊದಲ ಘರ್ಷಣೆಯಾಗಿದೆ. ಏಕೆಂದರೆ ಭಾರತವು ಆಕ್ರಮಣಕಾರಿ ಚೀನಾಕ್ಕೆ ಎದುರು ನಿಲ್ಲುವ ಸಾಮರ್ಥ್ಯ ಮತ್ತು ಇಚ್ಛೆಯನ್ನು ಪ್ರಕಟಿಸಿದೆ ಎಂದು ಉನ್ನತ ಸೇನಾ ಕಮಾಂಡರ್ ತಿಳಿಸಿದರು. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಸೈನಿಕರನ್ನು ಸಜ್ಜುಗೊಳಿಸಿದ ಮತ್ತು ಸುಮಾರು ಆರು ವಾರಗಳ ಕಾಲ ಭಾರತದೊಂದಿಗೆ ಬಿಕ್ಕಟ್ಟು ಸೃಷ್ಟಿಸಿದ ಚೀನಾ ಪಡೆಗಳು, ಜೂನ್ ರಂದು ಉಭಯ ಸೇನೆಗಳ ಉನ್ನತ ಕಮಾಂಡರ್‌ಗಳ ನಡುವೆ ತಲುಪಿದ ತಿಳುವಳಿಕೆಗೆ ಅನುಗುಣವಾಗಿ ಹಿಂದೆ ಸರಿಯಲು ನಿರಾಕರಿಸಿದವು. ಉದ್ವಿಗ್ನತೆ ಉಲ್ಬಣಗೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಪಿಎಲ್‌ಎ ಭಾರತದ ಕಡೆಯಲ್ಲಿ ಸ್ಥಾಪಿಸಿದ ಡೇರೆಯನ್ನು ಕಿತ್ತು ಹಾಕಲು ನಿರಾಕರಿಸಿದ ಬಳಿಕ ಜೂನ್ ೧೫ ರಂದು ಸಂಜೆ ಉಭಯ ಕಡೆಯ ಸ್ಥಳೀಯ ಕಮಾಂಡರ್‌ಗಳ ನಡುವಿನ ವಾದ, ಮುಖಾಮುಖಿ ಘರ್ಷಣೆಯೊಂದಿಗೆ ಪರ್ಯವಸಾನಗೊಂಡಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020:  ನವದೆಹಲಿ: ಕೋವಿಡ್ -೧೯ ಚಿಕಿತ್ಸೆಗಾಗಿ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮಂಗಳವಾರ ದಾಖಲಾದ ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ನ್ಯುಮೋನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು 2020 ಜೂನ್ 19ರ ಶುಕ್ರವಾರ ದಕ್ಷಿಣ ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಗೆ ಸ್ಥಳಾಂತರಿಸಲಾಯಿತು. ಜೈನ್ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಅವರಿಗೆ ಕೋವಿಡ್-೧೯ ಸಲುವಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಮೂಲಗಳು ಹೇಳಿವೆ. ೫೫ ವರ್ಷದ ಸಚಿವರ ಆಮ್ಲಜನಕದ ಸ್ಯಾಚುರೇಶನ್ ಮಟ್ಟ ಇಳಿಮುಖವಾಗಿರುವುದರಿಂದ ಅವರನ್ನು ಆಮ್ಲಜನಕದ ಬೆಂಬಲದಲ್ಲಿ ಇಡಲಾಗಿದೆ. "ಕೋವಿಡ್ -೧೯ ಸೋಂಕಿನೊಂದಿಗೆ ಹೋರಾಡುತ್ತಿರುವ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮೂಲಕ ಹಾರೈಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಭಾರತವು ಒಂದೇ ದಿನದಲ್ಲಿ ೧೩,೫೮೬ ಹೊಸ ಕೋವಿಡ್-೧೯ ಪ್ರಕರಣಗಳನ್ನು ದಾಖಲಿಸುವುದರೊಂದಿಗೆ  ಶುಕ್ರವಾರ ಸೋಂಕು ಪ್ರಕರಣಗಳ ಸಂಖ್ಯೆ ,೮೦,೫೩೨ಕ್ಕೆ ತಲುಪಿದೆ. ೩೩೬ ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ ೧೨,೫೭೩ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು ತಿಳಿಸಿದವು. ಈ ಮಧ್ಯೆ, ರೋಗದಿಂದ ಗುಣಮುಖರಾಗಿ ಚೇತರಿಸಿಕೊಂಡವರ ಸಂಖ್ಯೆ ಎರಡು ಲಕ್ಷವನ್ನು ದಾಟಿದ ಆಶಾದಾಯಕ ವರದಿಗಳೂ ಬಂದಿವೆ. .೮೦ ಲಕ್ಷ ಸೋಂಕು ಪ್ರಕರಣಗಳ ಪೈಕಿ ,೦೪,೭೧೦ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ,೬೩.೨೪೮ ಸಕ್ರಿಯ ಪ್ರಕರಣಗಳಿವೆ ಎಂದು ಶುಕ್ರವಾರ ಬೆಳಗ್ಗೆ ಪ್ರಕಟಿಸಲಾದ ನವೀಕೃತ ಅಂಕಿಅಂಶಗಳು ಹೇಳಿವೆ. "ಹೀಗಾಗಿ, ಇದುವರೆಗೆ ಚೇತರಿಕೆಯ ಪ್ರಮಾಣ ಶೇಕಡಾ ೫೩.೭೯ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಭಾರvವು ಸತತ ಎಂಟನೇ ದಿನ ೧೦,೦೦೦ ಪ್ರಕರಣಗಳನ್ನು ದಾಖಲಿಸಿದೆ. ಕೋವಿಡ್-೧೯ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿರುವ ಪ್ರಮುಖ ಐದು ರಾಜ್ಯಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್ ಮತ್ತು ಉತ್ತರ ಪ್ರದೇಶಗಳು ಜೂನ್ ರಿಂದ ೧೯ ರವರೆಗೆ ,೮೯,೯೯೭ ಸೋಂಕುಗಳ ಉಲ್ಬಣವನ್ನು ಕಂಡಿದೆ. ಐಸಿಎಂಆರ್ ಪ್ರಕಾರ, ಜೂನ್ ೧೮ ರವರೆಗೆ ಒಟ್ಟು ೬೪,೨೬,೬೨೭ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಟ್ಟು ,೭೬,೯೫೯ ಮಾದರಿಗಳನ್ನು ಗುರುವಾರ ಪರೀಕ್ಷಿಸಲಾಗಿದೆ, ಇದುವರೆಗೆ ಒಂದು ದಿನದಲ್ಲಿ ಅತಿ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ’ಚೀನಿಯರು ನಮ್ಮ ಭೂಪ್ರದೇಶವನ್ನು ಪ್ರವೇಶಿಸಿಲ್ಲ ಅಥವಾ ಅವರು ಯಾವುದೇ ನೆಲೆಯನ್ನು (ಪೋಸ್ಟನ್ನು) ವಶಕ್ಕೆ ಪಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಜೂನ್ 19ರ ಶುಕ್ರವಾರ ಲಡಾಖ್ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನೀ ಪಡೆಗಳ ಜೊತೆ ಸಂಭವಿಸಿದ ಘರ್ಷಣೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸರ್ವ ಪಕ್ಷ ಸಭೆಯಲ್ಲಿ ಒತ್ತಿ ಹೇಳಿದರು. "ಅವರು ನಮ್ಮ ಗಡಿಯಲ್ಲಿ ಒಳನುಗ್ಗಿಲ್ಲ, ಅಥವಾ ಯಾವುದೇ ನೆಲೆಯನ್ನೂ ಅವರು (ಚೀನಾ) ವಶಕ್ಕೆ ಪಡೆದಿಲ್ಲ್ಲ. ನಮ್ಮ ಇಪ್ಪತ್ತು ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಭಾರತ ಮಾತೆಗೆ ಸವಾಲು ಹಾಕಬಂದವರಿಗೆ ಸೂಕ್ತ ಪಾಠ ಕಲಿಸಲಾಗಿದೆ ಎಂದು ಪ್ರಧಾನಿ ನುಡಿದರು. ಭಾರತದ ಶಕ್ತಿಯನ್ನು ಒತ್ತಿಹೇಳುತ್ತಾ, "ನಮ್ಮ ಒಂದು ಅಂಗುಲ ಭೂಮಿಯನ್ನು ಸಹ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಘೋಷಿಸಿದರು. ಇಂದು, ನಮ್ಮ ಭೂಮಿಯ ಒಂದು ಅಂಗುಲ ಜಾಗದ ಮೇಲೆ ಸಹ ಯಾರೂ ಕಣ್ಣು ಹಾಕಲು ಸಾಧ್ಯವಿಲ್ಲ. ಅಂತಹ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಭಾರತದ ಸಶಸ್ತ್ರ ಪಡೆಗಳಿಗೆ ಒಂದೇ ಸಮಯದಲ್ಲಿ ಅನೇಕ ಕ್ಷೇತ್ರಗಳಿಗೆ ಚಲಿಸುವ ಸಾಮರ್ಥ್ಯವಿದೆಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಸಂಭವಿಸಿದ ಭಾರತ-ಚೀನಾ ಘರ್ಷಣೆಯಲ್ಲಿ ಹುತಾತ್ಮರಾದ ೨೦ ಮಂದಿ ಭಾರತೀಯ ಯೋಧರಿಗೆ ಗೌರವಾರ್ಪಣೆಯೊಂದಿಗೆ 2020 ಜೂನ್ 19ರ ಶುಕ್ರವಾರ ಪ್ರಾರಂಭವಾದ ಸರ್ವ ಪಕ್ಷ ಸಭೆಯಲ್ಲಿ ಸರ್ಕಾರದ ರಾಜತಾಂತ್ರಿಕ ಮತ್ತು ಮಿಲಿಟರಿ ಪ್ರಯತ್ನಗಳ ಬಗ್ಗೆ ರಾಜಕೀಯ ಒಮ್ಮತವನ್ನು ಮೂಡಿಸಲು ಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರ್ವ ಪಕ್ಷಗಳ ವಿಶಾಲ ಬೆಂಬಲ ವ್ಯಕ್ತವಾಯಿತು. ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕರೆದ ಸರ್ವ ಪಕ್ಷ ಸಭೆಯು, ಪ್ರಾರಂಭದಲ್ಲೇ ಎದ್ದು ನಿಂತು ಮೌನ ಆಚರಿಸುವ ಮೂಲಕ ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ೨೦ ಯೋಧರಿಗೆ ಗೌರವ ಸಲ್ಲಿಸಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆಗಿನ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸರ್ಕಾರವನ್ನು ಪ್ರತಿನಿಧಿಸಿದರು. ಪ್ರಧಾನ ಮಂತ್ರಿಯವರ ನಿವಾಸದಲ್ಲಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಕ್ಷದ ಎಲ್ಲ ಮುಖಂಡರಿಗೆ ಎಲ್‌ಎಸಿಯಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು ಮತ್ತು ಅವರ ಬೆಂಬಲವನ್ನು ಕೋರಿದರು. ಚೀನಾ ಮತ್ತು ಭಾರತೀಯ ಸೈನಿಕರ ನಡುವಿನ ಘರ್ಷಣೆಯ ಸಂದರ್ಭಗಳ ವಿವರಗಳನ್ನು ಹಂಚಿಕೊಳ್ಳಲು ಪ್ರತಿಪಕ್ಷಗಳು ಕೋರಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಪರವಾಗಿ ರಕ್ಷಣಾ ಸಚಿವರು ಕರೆದಿರುವ ಚರ್ಚೆಗಳಲ್ಲಿ ಪಾಲ್ಗೊಳ್ಳು ಆಹ್ವಾನ ಸಿಗದ ಕೆಲವು ರಾಜಕೀಯ ಪಕ್ಷಗಳಲ್ಲಿ ಆಮ್ ಆದ್ಮಿ ಪಕ್ಷ, ಆರ್‌ಜೆಡಿ ಮತ್ತು ಎಐಐಎಂಐಎಂ ಸೇರಿವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಬಿಹಾರ ಮುಖ್ಯಮಂತ್ರಿ ಮತ್ತು ಜನತಾದಳ-ಸಂಯಕ್ತ ಮುಖ್ಯಸ್ಥ ನಿತೀಶ್ ಕುಮಾರ್, ಎಲ್‌ಜೆಪಿ ಮುಖಂಡ ಚಿರಾಗ್ ಪಾಸ್ವಾನ್, ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್, ಎಡ ಪಕ್ಷಗಳ ಮುಖಂಡರಾದ ಡಿ.ರಾಜ ಮತ್ತು ಸೀತಾರಾಂ ಯೆಚೂರಿ ಪ್ರಮುಖವಾಗಿ ಚರ್ಚೆಯಲ್ಲಿ ಪಾಲ್ಗೊಂಡರು. ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ವಿಶಾಲ ಬೆಂಬಲ ವ್ಯಕ್ತವಾಯಿತು. ಸರ್ಕಾರವು ಪರಿಸ್ಥಿತಿ ಬಗ್ಗೆ ಕಾಲ ಕಾಲಕ್ಕೆ ನಿಯಮಿತವಾಗಿ ವಿರೋಧ ಪಕ್ಷಗಳಿಗೆ ಮಾಹಿತಿ ನೀಡಬೇಕು ಎಂಬುದಾಗಿ ಬಯಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸರ್ಕಾರದ ಮುಂದೆ ಪ್ರಶ್ನೆಗಳನ್ನು ಇರಿಸಿದರು. ಚೀನಾದೊಂದಿಗೆ ಉಂಟಾಗಿರುವ ಗಡಿ ಉದ್ವಿಗ್ನತೆ ಬಗ್ಗೆ ಸಭೆ ವ್ಯಾಪಕವಾಗಿ ಚರ್ಚಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಜೂನ್  19  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment