ನಾನು ಮೆಚ್ಚಿದ ವಾಟ್ಸಪ್

Thursday, June 18, 2020

ಇಂದಿನ ಇತಿಹಾಸ History Today ಜೂನ್ 18

ಇಂದಿನ ಇತಿಹಾಸ  History Today ಜೂನ್  18

2020: ನವದೆಹಲಿ: ಸಿಗ್ನಲಿಂಗ್ಗೆ ಸಂಬಂಧಿಸಿದ ಚೀನಾ ಸಂಸ್ಥೆಯೊಂದರ ಜೊತೆಗಿನ ೪೭೧ ಕೋಟಿ ರೂಪಾಯಿ ವ್ಯವಹಾರದ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಲು ಭಾರತೀಯ ರೈಲ್ವೆಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಡಿಎಫ್ಸಿಸಿಐಎಲ್) 2020 ಜೂನ್ 18ರ ಗುರುವಾರ ನಿರ್ಧರಿಸಿತು.  ಸಿಗ್ನಲಿಂಗ್ ಗುತ್ತಿಗೆಯನ್ನು ಬೀಜಿಂಗ್ ರಾಷ್ಟ್ರೀಯ ರೈಲ್ವೆ ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆಗೆ ಸಿಗ್ನಲ್ ಮತ್ತು ಸಂವಹನ ಸಂಸ್ಥೆಗೆ ೨೦೧೬ ರಲ್ಲಿ ನೀಡಲಾಗಿತ್ತುಚೀನಾದ ಕಂಪನಿಯು ೪೧೭ ಕಿ.ಮೀ ಉದ್ದದ ಕಾನ್ಪುರ-ದೀನ ದಯಾಳ್ ಉಪಾಧ್ಯಾಯ ವಿಭಾಗದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿತ್ತು. ಯೋಜನೆಯ ವೆಚ್ಚ ೪೭೧ ಕೋಟಿ ರೂ ಎಂಬುದಾಗಿ ನಿಗದಿ ಪಡಿಸಲಾಗಿತ್ತು. ಗುತ್ತಿಗೆ ಒಪ್ಪಂದವನ್ನು ರದ್ದುಪಡಿಸುವುದಾಗಿ ಪ್ರಕಟಣೆಯಲ್ಲಿ ಪ್ರಕಟಿಸಿರುವ ಡಿಎಫ್ಸಿಸಿಐಎಲ್, ಚೀನೀ ಕಂಪನಿಯು ನಾಲ್ಕು ವರ್ಷಗಳಲ್ಲಿ ಕೇವಲ ಶೇಕಡಾ ೨೦ರಷ್ಟು ಮಾತ್ರ ಕೆಲಸವನ್ನು ಪೂರ್ಣಗೊಳಿಸಿದೆ ಎಂದು ಹೇಳಿತು. ಒಪ್ಪಂದದ ಪ್ರಕಾರ ತಾಂತ್ರಿಕ ದಾಖಲೆಗಳನ್ನು ನೀಡಲು ಚೀನಾ ಕಂಪನಿ ಹಿಂಜರಿಯುತ್ತಿದೆ ಎಂದು ಡಿಎಫ್ಸಿಸಿಐಎಲ್ ಹೇಳಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಕಠ್ಮಂಡು: ರಾಷ್ಟ್ರೀಯ ಲಾಂಛನದಲ್ಲಿ ತನ್ನ ಹೊಸ ನಕ್ಷೆಯನ್ನು ಪ್ರತಿಬಿಂಬಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ  ನೇಪಾಳದ ಮೇಲ್ಮನೆಯು 2020 ಜೂನ್ 18ರ ಗುರುವಾರ ಸರ್ವಾನುಮತದ ಒಪ್ಪಿಗೆ ನೀಡಿತು. ಇದರೊಂದಿಗೆ ವಿವಾದಾತ್ಮಕ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ತಿನ ಸಂಪೂರ್ಣ ಅನುಮೋದನೆ ಲಭಿಸಿದಂತಾಗಿದ್ದು, ಇದು ನೇಪಾಳ ಮತ್ತು ಭಾರತದ ಬಾಂಧವ್ಯಕ್ಕೆ ಗಡಿರೇಖೆಯು ಒಂದು ಶಾಶ್ವತ ಅಡ್ಡಿಯಾಗುವಂತೆ ಮಾಡಿದೆ. ನೇಪಾಳ ಮೇಲ್ಮನೆಯಲ್ಲಿ ಮಸೂದೆ ಪರವಾಗಿ ೫೭ ಮತಗಳು ಬಂದವು. ವಿರುದ್ಧವಾಗಿ ಯಾವುದೇ ಮತ ಚಲಾವಣೆಯಾಗಲಿಲ್ಲ. ಕಳೆದ ವಾರ, ನೇಪಾಳದ ಕೆಳಮನೆಯು ಮಸೂದೆಗೆ ಒಪ್ಪಿಗೆ ನೀಡಿದ್ದು, ಎಲ್ಲ ೨೫೮ ಶಾಸನಕರ್ತರು ಹಾಜರಿದ್ದು ಮತದಾನ ಮಾಡಿದ್ದರು. ಭಾರತದ ವಶದಲ್ಲಿರುವ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರ ಪ್ರದೇಶಗಳು ತನಗೆ ಸೇರಿದ್ದು ಎಂಬುದಾಗಿ ನೇಪಾಳ ಇತೀಚೆಗೆ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಪ್ರತಿಪಾದಿಸಿದೆ. ನೇಪಾಳದ ಕೆಳಮನೆಯಲ್ಲಿ ನಕ್ಷೆಯ ಅಂಗೀಕಾರದ ಬಗ್ಗೆ ಪ್ರತಿಕ್ರಿಯಿಸಿದ ಭಾರತ, ‘ ಕೃತಕ ಹಕ್ಕುಗಳ ವಿಸ್ತರಣೆಯು ಯಾವುದೇ ಐತಿಹಾಸಿಕ ದಾಖಲೆ ಅಥವಾ ಪುರಾವೆಗಳನ್ನು ಆಧರಿಸಿಲ್ಲ ಮತ್ತು ಇದು ಸಮರ್ಥನೀಯವಲ್ಲಎಂದು ಹೇಳಿತು. ‘ಗಡಿ ವಿಷಯಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸುವುದು ಪ್ರಸ್ತುತ ಇರುವ ತಿಳುವಳಿಕೆಗೆ ವಿರುದ್ಧ ಮತ್ತು ಅದರ ಉಲ್ಲಂಘನೆಯಾಗಿದೆಎಂದು ಅದು ಹೇಳಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನ ಸಮಯದಲ್ಲಿ ತಮ್ಮ ಹುಟ್ಟೂರು/ ಮನೆಗಳಿಗೆ ಮರಳಿದ ವಲಸೆ ಕಾರ್ಮಿಕರಿಗೆ ದೇಶದ ೧೧೬ ಜಿಲ್ಲೆಗಳಲಿ ಉದ್ಯೋಗ ಒದಗಿಸಲು ಗರಿಬ್ ಕಲ್ಯಾಣ್ ರೋಜಗಾರ್ ಅಭಿಯಾನದ ಅಡಿಯಲ್ಲಿ  ಒಟ್ಟುಗೂಡಿಲಾಗುವ ೨೫ ಯೋಜನೆಗಳಿಗೆ ಕೇಂದ್ರ ಸರ್ಕಾರವು ೫೦,೦೦೦ ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದೆ. ಅಭಿಯಾನಕ್ಕೆ 2020 ಜೂನ್ ೧೯ರ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.  " ೨೫ ಯೋಜನೆಗಳಿಗೆ ನಿಗದಿಪಡಿಸಿದ ಹಣವನ್ನು ಆದ್ಯತೆಯಲ್ಲಿ ಒದಗಿಸಲು ಮಾಡಲು ನಾವು ಬಯಸುತ್ತೇವೆ. ಇದರಿಂದ ಕಾರ್ಮಿಕರು ತಮ್ಮ ಕೆಲಸವನ್ನು ಪಡೆಯುತ್ತಾರೆ. ಗ್ರಾಮೀಣಾಭಿವೃದ್ಧಿಯ ಉದ್ದೇಶದಿಂದ ನಡೆಸಲಾಗುವ ಕಾಮಗಾರಿಗಳಲ್ಲಿ ಸ್ವತ್ತುಗಳನ್ನು ನಿರ್ಮಿಸಲಾಗುವುದುಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  2020 ಜೂನ್ 18ರ ಗುರುವಾರ ಹೇಳಿದರು.  " ೧೧೬ ಜಿಲ್ಲೆಗಳಲ್ಲಿ ಅಗತ್ಯವಿರುವ ಪ್ರತಿಯೊಬ್ಬರಿಗೂ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನದ ಅಡಿಯಲ್ಲಿ ಕೆಲಸ ನೀಡಲಾಗುವುದು, ಯೋಜನೆಯ ಅಂದಾಜು ವೆಚ್ಚ ೫೦,೦೦೦ ಕೋಟಿ ರೂಪಾಯಿಗಳು. ಇದಕ್ಕಾಗಿ ನಿಗದಿಪಡಿಸಿದ ಹಣವನ್ನು ಆದ್ಯತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ" ಎಂದು ಸೀತಾರಾಮನ್ ಹೇಳಿದರು. ಮನೆಗೆ ಮರಳಿದ ವಲಸೆ ಕಾರ್ಮಿಕರ ಕೌಶಲ್ಯಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳಲ್ಲಿ ೧೧೬ ಜಿಲ್ಲೆಗಳು ವ್ಯಾಪಿಸಿವೆ. "ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯಗಳ ೧೧೬ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮರಳಿದ ವಲಸೆ ಕಾರ್ಮಿಕರ ಕೌಶಲ್ಯಗಳನ್ನು ನಿಖರವಾಗಿ ಗುರುತಿಸಿವೆಎಂದು ಸೀತಾರಾಮನ್ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಜೂನ್ ೧೫ ರಂದು ಪೂರ್ವ ಲಡಾಕ್ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದ ನಂತರ ಹಲವಾರು ಸೈನಿಕರು ನಾಪತ್ತೆಯಾಗಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಭಾರತೀಯ ಸೇನೆ ನಿರಾಕರಿಸಿದೆ. ಗಡಿಯಲ್ಲಿನ ಉದ್ವಿಗ್ನತೆ ಶಮನಕ್ಕಾಗಿ ಉಭಯ ರಾಷ್ಟ್ರಗಳ ಸೇನಾ ಮುಖ್ಯಸ್ಥರು 2020 ಜೂನ್ 18ರ ಗುರುವಾರ ಸಭೆ ನಡೆಸಿದ್ದು, ಸಂದರ್ಭದಲ್ಲಿ ಭಾರತೀಯ ಸೇನೆಯಿಂದ ಸ್ಪಷ್ಟನೆ ಬಂದಿತು.  ಗಲ್ವಾನ್ ಘರ್ಷಣೆಯ ಬಳಿಕ ಇದು ಎರಡನೇ ಸಭೆಯಾಗಿದ್ದು, ಬುಧವಾರವೂ ಸಭೆ ನಡೆದಿತ್ತು.  "ಭಾರತೀಯ ಸೇನೆಯ ಯಾವ ಸೈನಿಕರೂ ಕಣ್ಮರೆಯಾಗಿಲ್ಲಎಂದು ಸೇನೆಯು ಸಂಕ್ಷಿಪ್ತ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿತು. ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ಸಾವನ್ನಪ್ಪಿದ್ದು, ಚೀನಾದ ಕಡೆಯಲ್ಲೂ ಹಲವಾರು ಸಾವು ನೋವುಗಳು ಸಂಭವಿಸಿದ್ದವು.  ನ್ಯೂಯಾರ್ಕ್ ಟೈಮ್ಸ್ ಬುಧವಾರ ಪ್ರಕಟಿಸಿದ ಲೇಖನವನ್ನು ಉಲ್ಲೇಖಿಸಿ ಹೇಳಿಕೆಯನ್ನು  ನೀಡಲಾಗಿದೆ ಎಂದು ಸೇನೆಯ ವಕ್ತಾರರು ತಿಳಿಸಿದರು. ಭಾರತೀಯ ಮಾಧ್ಯಮಗಳ ಕೆಲವು ವಿಭಾಗಗಳು ಕೂಡಾ ಹಲವಾರು ಭಾರತೀಯ ಸೈನಿಕರು ನಾಪತ್ತೆಯಾಗಿದ್ದಾರೆ ಅಥವಾ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ವರದಿ ಮಾಡಿದ್ದವುಗಡಿ ಪಡೆಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಗ್ಗಿಸಲು ಪ್ರಮುಖ ಸಾಮಾನ್ಯ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ಭಾರತೀಯ ಮತ್ತು ಚೀನಾದ ನಿಯೋಗಗಳು ಪೂರ್ವ ಲಡಾಕ್ನಲ್ಲಿ ಗುರುವಾರ ಸಭೆ ನಡೆಸಿದ್ದು, ಸಂದರ್ಭದಲ್ಲೇ ಸೇನೆ ಹೇಳಿಕೆ ನೀಡಿದೆ. ಹಾಲಿ ಗಡಿ ಬಿಕ್ಕಟ್ಟು ಪ್ರಾರಂಭವಾದ ನಂತರ ಹಾಗೂ ಕ್ರೂರ ಗಲ್ವಾನ್ ಕಣಿವೆ ಘರ್ಷಣೆಯ ನಂತರ ಇದು ಸೇನಾ ಅಧಿಕಾರಿಗಳ ಏಳನೇ ಸಭೆ ಇದಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಭಾರತದಲ್ಲಿ ವ್ಯಾಪಾರ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿವೆ ಮತ್ತು ಕೋವಿಡ್ ಪೂರ್ವ ಹಂತವನ್ನು ವೇಗವಾಗಿ ತಲುಪುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಜೂನ್ 18ರ ಗುರುವಾರ ಹೇಳಿದರು. ಕೊರೋನಾವೈರಸ್ ಹರಡುವುದನ್ನು ತಡೆಯಲು ಜಾರಿಗೊಳಿಸಲಾಗಿದ್ದ ಸುದೀರ್ಘವಾದ ದಿಗ್ಬಂಧನ (ಲಾಕ್ಡೌನ್) ಪರಿಣಾಮವಾಗಿ ಕೈಗಾರಿಕಾ ಉತ್ಪಾದನೆ ಮತ್ತು ಗ್ರಾಹಕರ ಖರ್ಚು-ವೆಚ್ಚ ತೀವ್ರವಾಗಿ ಕುಸಿದಿದ್ದು, ದೇಶದ ಸಮಗ್ರ ಆಂತರಿಕ ಉತ್ಪಾದನೆಯು ಕುಸಿತದ ಸೂಚನೆಗಳನ್ನು ತೋರಿಸಿದ್ದವು. ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ವ್ಯವಹಾರ ಚಟುವಟಿಕೆಗಳು ವೇಗವಾಗಿ ಸಾಮಾನ್ಯ ಮಟ್ಟಕ್ಕೆ ಮರಳುತ್ತಿವೆ ಎಂದು ಹೇಳಿದರು. "ಬಳಕೆ ಮತ್ತು ಬೇಡಿಕೆ ಈಗ ಕೋವಿಡ್ ಪೂರ್ವ ಮಟ್ಟವನ್ನು ತಲುಪುತ್ತಿದೆ" ಎಂದು ಅವರು ಹೇಳಿದರು. ವಿದ್ಯುತ್ ಬೇಡಿಕೆ ಹೆಚ್ಚಳ ಮತ್ತು ಇಂಧನ ಬಳಕೆ ಚೇತರಿಕೆಗೆ ಕಾರಣವಾಗಿದ್ದ ಇತರ ಅಂಶಗಳನ್ನೂ ಪ್ರಧಾನಿ ಉಲ್ಲೇಖಿಸಿದರು. " ಸೂಚಕಗಳು ಭಾರತೀಯ ಆರ್ಥಿಕತೆಯು ವೇಗವಾಗಿ ಪುಟಿದೇಳಲು ತಯಾರಿ ನಡೆಸುತ್ತಿದೆ ಎಂಬುದನ್ನು ಸೂಚಿಸಿವೆಎಂದು ಪ್ರಧಾನಿ ನುಡಿದರು. "ಭಾರತವು ಹಿಂದೆ ದೊಡ್ಡ ಬಿಕ್ಕಟ್ಟುಗಳಿಂದ ಹೊರಬಂದಿದೆ ಮತ್ತು ಅದು ಈಗಿನ ಬಿಕ್ಕಟ್ಟಿನಿಂದಲೂ ಹೊರಬರುತ್ತದೆಎಂದು ಮೋದಿ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜೂನ್  18  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment