ಇಂದಿನ ಇತಿಹಾಸ History
Today
ಜೂನ್ 24
2020: ನವದೆಹಲಿ: ಒಂದೇ ದಿನದಲ್ಲಿ ೩,೯೪೭ ಹೊಸ ಸೋಂಕುಗಳು ದೃಢಪಡುವುದರೊಂದಿಗೆ ದೆಹಲಿಯ ಕೋವಿಡ್-೧೯ ಪ್ರಕರಣಗಳು ೬೬,೦೦೦ರ ಗಡಿ ದಾಟಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಹೊಸ ತಂತ್ರವನ್ನು ರೂಪಿಸಿದೆ. ಜೂನ್ ೩೦ ರೊಳಗೆ ಕಂಟೈನ್ಮೆಂಟ್ ವಲಯಗಳಲ್ಲಿನ ಎಲ್ಲಾ ಮನೆಗಳನ್ನು ಸ್ಕ್ರೀನಿಂಗ್ ಮಾಡಲಾಗುವುದು ಮತ್ತು ಜುಲೈ ೬ರ ವೇಳೆಗೆ ರಾಷ್ಟ್ರ ರಾಜಧಾನಿಯ ಪ್ರತಿಯೊಂದು ಮನೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಜ್ರಿವಾಲ್ ನಡುವಿನ ಸಭೆಗಳ ನಂತರ ಬಿಡುಗಡೆ ಮಾಡಲಾದ ಹೊಸ ಕೋವಿಡ್ ಹತೋಟಿ ಯೋಜನೆಯ ಭಾಗವಾಗಿ ಸರ್ಕಾರ 2020 ಜೂನ್ 24ರ ಬುಧವಾರ ತಿಳಿಸಿತು. ಕಳೆದ ವಾರ ಶುಕ್ರವಾರ ಮತ್ತು ಭಾನುವಾರದ ನಡುವೆ ೩,೦೦೦ ಅಥವಾ ಹೆಚ್ಚಿನ ಹೊಸ ಪ್ರಕರಣಗಳು ರಾಜಧಾನಿಯಲ್ಲಿ ದಾಖಲಾಗಿವೆ. ಸೋಮವಾರ ನಗರದಲ್ಲಿ ೨,೯೦೯ ಪ್ರಕರಣಗಳು ದಾಖಲಾಗಿವೆ. ಕಳೆದ ೨೪ ಗಂಟೆಗಳಲ್ಲಿ ಅರವತ್ತೆಂಟು ಸಾವು-ನೋವುಗಳು ದಾಖಲಾಗಿವೆ ಎಂದು ದೆಹಲಿ ಆರೋಗ್ಯ ಇಲಾಖೆಯ ಬುಲೆಟಿನ್ ಮಂಗಳವಾರ ತಿಳಿಸಿದೆ. ಕೊರೋನವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೨,೩೦೧ಕ್ಕೆ ಏರಿದೆ ಮತ್ತು ಒಟ್ಟು ಪ್ರಕರಣಗಳ ಸಂಖ್ಯೆ ೬೬,೬೦೨ಕ್ಕೆ ಏರಿದೆ ಎಂದು ಅದು ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಬೀಜಿಂಗ್: ಚೀನಾದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳು ಗಲ್ವಾನ್ ಕಣಿವೆಯಲ್ಲಿ ಜೂನ್ ೧೫ರಂದು ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಭಾರತದ ವಿರುದ್ಧ 2020 ಜೂನ್ 24ರ ಬುಧವಾರ ಅವಳಿ ರಾಜತಾಂತ್ರಿಕ ದೂಷಣೆಗಳನ್ನು ಮಾಡಿದವು ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮತ್ತು ಭಾರತೀಯ ಮಾಧ್ಯಮಗಳು ಘಟನೆ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಆಪಾದಿಸಿದವು. ‘ಉದ್ವಿಗ್ನತೆಯನ್ನು ಕಡಿಮೆಗೊಳಿಸಲು’ ಮತ್ತು ’ಭಿನ್ನಾಭಿಪ್ರಾಯಗಳನ್ನು ಸಮರ್ಪಕವಾಗಿ ನಿಭಾಯಿಸಲು’ ಜೂನ್ ೨೨ರಂದು ಸೇನಾ ಕಮಾಂಡರ್ ಮಟ್ಟದ ಮಾತುಕತೆಗಳನ್ನು ನಡೆಸಿದ ಒಂದು ದಿನದ ಬಳಿ ಉಭಯ ಸಚಿವಾಲಯಗಳು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಘರ್ಷಣೆಯನ್ನು ಪ್ರಚೋದಿಸಿದ್ದಕ್ಕಾಗಿ ಭಾರತವನ್ನು ಪ್ರತ್ಯೇಕವಾಗಿ ದೂಷಿಸಿದವು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ರಶ್ಯಾ, ಭಾರತ ಮತ್ತು ಚೀನಾ ವಿದೇಶಾಂಗ ಸಚಿವರ ಸಭೆಯ ವೇಳೆಯಲ್ಲಿ ಅಂತಾರಾಷ್ಟ್ರೀಯ ನಿಯಮಗಳ ಮಹತ್ವದ ಬಗ್ಗೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಚೀನೀ ವಿದೇಶಾಂಗ ಸಚಿವಾಲಯವು ’ಅಂತಾರಾಷ್ಟ್ರೀಯ ನಿಯಮ’ಗಳ ಉಲ್ಲೇಖ ಮಾಡಿದೆ ಎಂದು ಭಾವಿಸಲಾಗಿದೆ. ಗಲ್ವಾನ್ ಘರ್ಷಣೆಯಲ್ಲಿ ಭಾರತದ ೨೦ ಮಂದಿ ಯೋಧರು ಹುತಾತ್ಮರಾಗಿದ್ದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್ಎ) ಅಸಂಖ್ಯಾತ ಸೈನಿಕರು ಸಾವನ್ನಪ್ಪಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಸಂಭವಿಸಿದ ಜೂನ್ ೧೫ ರ ಘರ್ಷಣೆಯ ನಂತರದ ಮೊದಲ ಔಪಚಾರಿಕ ರಾಜತಾಂತ್ರಿಕ ಸಭೆಯಲ್ಲಿ ಗಡಿ ಉದ್ವಿಗ್ನತೆ ಮತ್ತು ಭವಿಷ್ಯದ ರಾಜತಾಂತ್ರಿಕ ಸಂಪರ್ಕಗಳನ್ನು ಸರಾಗಗೊಳಿಸುವ ಮಾರ್ಗಗಳನ್ನು ಭಾರತ ಮತ್ತು ಚೀನಾ 2020 ಜೂನ್ 24ರ ಬುಧವಾರ ಚರ್ಚಿಸಿದವು. ಜೂನ್ ೧೫ರ ಘರ್ಷಣೆಯಲ್ಲಿ ಭಾರತದ ೨೦ ಸೈನಿಕರು ಹುತಾತ್ಮರಾಗಿದ್ದರು. ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯತಂತ್ರ (ವರ್ಕಿಂಗ್ ಮೆಕ್ಯಾನಿಸಂ ಫಾರ್ ಕನ್ಸಲ್ಟೇಷನ್ ಅಂಡ್ ಅಂಡ್ ಕೋ ಆರ್ಡಿನೇಷನ್ ಆನ್ ಬಾರ್ಡರ್ ಅಫೇರ್ಸ್ (ಡಬ್ಲ್ಯೂ ಎಂಸಿಸಿ) ಅಡಿಯಲ್ಲಿ ಜೂನ್ ೫ ರಿಂದ ಇದು ಎರಡನೆಯ ಸಭೆಯಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಿತು. ೨೦೧೨ ರಲ್ಲಿ ಸ್ಥಾಪನೆಯಾದ ಡಬ್ಲ್ಯುಎಂಸಿಸಿ, ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್ ಶ್ರೀವಾಸ್ತವ ಮತ್ತು ಚೀನಾದ ವಿದೇಶಾಂಗ ಸಚಿವಾಲಯದ ಮಹಾನಿರ್ದೇಶಕ ವೂ ಜಿಯಾಂಗ್ಹಾವೊ ನೇತೃತ್ವ ವಹಿಸಿದ್ದಾರೆ. ಡಬ್ಲ್ಯುಎಂಸಿಸಿಯ ನಂತರದ ಮುಂದಿನ ಹಂತವು ವಿಶೇಷ ಪ್ರತಿನಿಧಿಗಳ ಕಾರ್ಯವಿಧಾನವಾಗಿದೆ. ಆದರೆ ಶೀಘ್ರದಲ್ಲೇ ಯಾವುದಾದರೂ ಸಮಯದಲ್ಲಿ ಎರಡೂ ಸಭೆಗಳನ್ನು ಡೆಸಲು ಉದ್ದೇಶಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಸೂಚನೆ ಲಭಿಸಿಲ್ಲ. ಬುಧವಾರದ ಸಭೆಯು ಭಾರತೀಯ ಮತ್ತು ಚೀನೀ ಸೇನೆಯ ಕೋರ್ ಕಮಾಂಡರ್ಗಳಲ್ಲಿ ಒಬ್ಬರು ಪಾಲ್ಗೊಂಡಿದ್ದ ವಿವಾದಾತ್ಮಕ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಚೀನಾದ ಬದಿಯಲ್ಲಿರುವ ಮೊಲ್ಡೊದಲ್ಲಿ ಸೋಮವಾರ ನಡೆದ ಸಭೆಯ ಮುಂದಿನ ಭಾಗವಾಗಿದೆ. ಈ ಸಂದರ್ಭದಲ್ಲಿ ಉದ್ವಿಗ್ನತೆ ತಗ್ಗಿಸುವ ಕ್ರಮಗಳಿಗೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೇಶಾದ್ಯಂತ ಸುಮಾರು ೮ ಕೋಟಿ ಲಕ್ಷ ಖಾತೆದಾರರಿಂದ ಅಂದಾಜು ೫ ಲಕ್ಷ ಕೋಟಿ ರೂಪಾಯಿ ಮೌಲ್ಯದ ಠೇವಣಿಗಳನ್ನು ಹೊಂದಿರುವ ೧,೫೪೦ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ವ್ಯಾಪ್ತಿಗೆ ತರುವ ನಿರ್ಧಾರಕ್ಕೆ ಕೇಂದ್ರ ಸರ್ಕಾರವು 2020 ಜೂನ್ 24ರ ಬುಧವಾರ ಅನುಮತಿ ನೀಡಿತು. ಶೆಡ್ಯೂಲ್ಡ್ ಬ್ಯಾಂಕುಗಳ ಮಾದರಿಯಲ್ಲಿಯೇ ಈ ಸಹಕಾರಿ ಬ್ಯಾಂಕುಗಳೂ ಇನ್ನು ಮುಂದೆ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆ ವ್ಯಾಪ್ತಿಗೆ ಒಳಪಡಲಿವೆ. ಇದರಿಂದ ಠೇವಣಿದಾರರಿಗೆ ರಕ್ಷಣೆ ಲಭಿಸಲಿದ್ದು, ದುರುಪಯೋಗದ ಅವಕಾಶ ತಗ್ಗಲಿದೆ. ಎಲ್ಲ ನಗರ ಸಹಕಾರಿ ಬ್ಯಾಂಕುಗಳು ಮತ್ತು ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆ ವ್ಯಾಪ್ತಿಗೆ ತರಲಾಗುತ್ತಿದೆ. ಸುಮಾರು ೮ ಕೋಟಿ ಲಕ್ಷ ಖಾತೆದಾರರಿಂದ ಸುಮಾರು ೫ ಲಕ್ಷ ಕೋಟಿ ರೂಪಾಯಿ ಮೌಲ್ಯದ ಠೇವಣಿಗಳನ್ನು ಇಂತಹ ಬ್ಯಾಂಕುಗಳು ಹೊಂದಿವೆ. ಈ ಬ್ಯಾಂಕುಗಳ ಸಂಖ್ಯೆ ಸುಮಾರು ೧೫೪೦ರಷ್ಟು ಇವೆ ಎಂದು ಕೇಂದ್ರ ಸಚಿವ ಜಾವಡೇಕರ್ ಹೇಳಿದರು. ಇದಕ್ಕೆ ಮುನ್ನ ಈ ವರ್ಷ ಫೆಬ್ರುವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಹಕಾರಿ ಬ್ಯಾಂಕುಗಳನ್ನು ಆರ್ಬಿಐಯ ಮೇಲ್ವಿಚಾರಣೆ ವ್ಯಾಪ್ತಿಗೆ ತರುವ ಸರ್ಕಾರದ ಇಂಗಿತವನ್ನು ಪ್ರಕಟಿಸಿದ್ದರು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಇದನ್ನು ಮಾಡಲಾಗುವುದು ಎಂದು ಅವರು ತಿಳಿಸಿದ್ದರು. ಈ ಸಂಬಂಧವಾಗಿ ಸರ್ಕಾರವು ಸುಗ್ರೀವಾಜ್ಞೆಯೊಂದನ್ನು ಬುಧವಾರ ಹೊರಡಿಸಿದೆ ಎಂದು ಜಾವಡೇಕರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕು ಮತ್ತೆ ಉಲ್ಬಣಗೊಂಡಿದ್ದು ಒಟ್ಟು ಸಂಖ್ಯೆ ೪,೫೭,೬೫೬ಕ್ಕೆ ತಲುಪಿದೆ. ಸಾವಿನ ಸಂಖ್ಯೆ ೧೪,೫೦೫ಕ್ಕೆ ಏರಿದೆ. ದೆಹಲಿಯಲ್ಲಿ ಒಂದೇ ದಿನ ೩,೭೮೮ ಹೊಸ ಪ್ರಕರಣಗಳೊಂದಿಗೆ ಒಟ್ಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ೬೬,೦೦೦ವನ್ನು ದಾಟಿದೆ. ದೆಹಲಿಯಲ್ಲಿ ಸಾವಿನ ಸಂಖ್ಯೆ ೨,೩೦೧ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದೇ ದಿನ ೩,೨೧೪ ಹೊಸ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ ೧,೩೯,೦೧೦ಕ್ಕೆ ಏರಿದೆ. ಒಂದೇ ದಿನ ೨೪೮ ಸಾವುಗಳು ವರದಿಯಾಗುವುದರೊಂದಿಗೆ ಸಾವಿನ ಸಂಖ್ಯೆ ೬,೫೩೧ಕ್ಕೆ ಏರಿದೆ. ದೇಶದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ೧ ಸಾವು ಸಂಭವಿಸಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಹೇಳಿತು. ದೇಶದಲ್ಲಿ ಕೋರೋನಾಕ್ಕೆ ಬಲಿಯಾಗುತ್ತಿರುವವರ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದೂ ಸರ್ಕಾರ ಹೇಳಿತು. ಕೊರೋನಾ ಸಾವಿನ ಜಾಗತಿಕ ಪ್ರಮಾಣ ಪ್ರಸ್ತುತ ಸರಾಸರಿ ೬.೦೪. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ನಿಯಂತ್ರಣಗಳೊಂದಿಗೆ ದೇಶೀ ವಿಮಾನ ಹಾರಾಟ ಆರಂಭವಾಗಿದ್ದರೂ, ಆಗಸ್ಟ್ ಮಧ್ಯದವರೆಗೆ ದೇಶದಲ್ಲಿ ರೈಲು ಸಂಚಾರ ಪುನಾರಂಭವಾಗುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ ಭಾರತೀಯ ರೈಲ್ವೇಯು ಎಲ್ಲ ಟಿಕೆಟ್ಗಳ ಹಣ ಮರುಪಾವತಿ ಮಾಡುವಂತೆ ಎಲ್ಲ ರೈಲ್ವೇ ವಲಯಗಳಿಗೂ ಸುತ್ತೋಲೆ ಕಳುಹಿಸಿದೆ. ರೈಲ್ವೇ ಸಚಿವಾಲಯವು ಏಪ್ರಿಲ್ ೧೪ ಅಥವಾ ಅದಕ್ಕೆ ಮುನ್ನ ಬುಕ್ ಮಾಡಿದ ಟಿಕೆಟ್ ಗಳನ್ನು ರದ್ದು ಪಡಿಸಿ, ಟಿಕೆಟ್ಗಳಿಗೆ ಪೂರ್ತಿ ಹಣ ಮರುಪಾವತಿ ಮಾಡುವಂತೆ ಎಲ್ಲ ರೈಲ್ವೇ ವಲಯಗಳಿಗೂ ಸೂಚಿಸಿದೆ ಎಂದು ವರದಿಯೊಂದು ಹೇಳಿತು. ಬೇಡಿಕೆಯನ್ನು ಪೂರೈಸಲು ಹೆಚ್ಚು ರೈಲುಗಳನ್ನು ’ವಿಶೇಷ’ ರೈಲುಗಳ ಹೆಸರಿನಲ್ಲಿ ಓಡಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ದೇಶದಲ್ಲಿ ಪ್ರಸ್ತುತ ೨೩೦ ಮೈಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳು ’ವಿಶೇಷ’ ಹೆಸರಿನಲ್ಲಿ ಓಡುತ್ತಿವೆ. ರೈಲ್ವೇಯು ೧೨೦ ದಿನಗಳಿಗೆ ಮುನ್ನ ಮುಂಗಡ ಬುಕ್ಕಿಂಗ್ ಅವಕಾಶ ಕಲ್ಪಿಸಿದೆ. ಪ್ರಸ್ತುತ ನಿಯಮಾವಳಿಗಳ ಪ್ರಕಾರ ಪ್ರಯಾಣಿಕರು ಟಿಕೆಟ್ಗಳನ್ನು ರದ್ದು ಪಡಿಸಬೇಕಾಗಿಲ್ಲ, ರೈಲ್ವೇಯು ರೈಲುಗಳನ್ನು ರದ್ದು ಪಡಿಸಿದರೆ ಪೂರ್ಣ ಹಣ ಮರುಪಾವತಿಯ ಪ್ರಕ್ರಿಯೆ ಆಟೋಮ್ಯಾಟಿಕ್ ಆಗಿ ಆರಂಭವಾಗುತ್ತದೆ. ರೈಲ್ವೇಯು ಈ ಹಿಂದೆ ಎಲ್ಲ ನಿಯಮಿತ ರೈಲುಗಳನ್ನು ಜೂನ್ ೩೦ರವರೆಗೆ ರದ್ದು ಪಡಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment