ನಾನು ಮೆಚ್ಚಿದ ವಾಟ್ಸಪ್

Sunday, June 14, 2020

ಇಂದಿನ ಇತಿಹಾಸ History Today ಜೂನ್ 14

ಇಂದಿನ ಇತಿಹಾಸ  History Today ಜೂನ್  14  

2020: ಪಿಥೋರಗಢ (ಉತ್ತರಾಖಂಡ): ಕಾಳಿ ನದಿಯ ಮೂಲ ಕಾಲಾಪಾನಿ ಎನ್ನುವುದಕ್ಕೆ ಸಾಕ್ಷಿಯಾಗಿ ಇರುವ ಶಾಸನ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ಗ್ರಂಥಗಳನ್ನು ಉತ್ತರಾಖಂಡ ವಿದ್ವಾಂಸರು 2020 ಜೂನ್ 14ರ ಭಾನುವಾರ ಮುಂದಿಟ್ಟಿದ್ದಾರೆ. ಕಾಲಾಪಾನಿ, ಲಿಪುಲೇಖ, ಲಿಂಪಿಯಧುರ ಒಳಗೊಂಡ ಪರಿಷ್ಕೃತ ಭೂಪಟಕ್ಕೆ ನೇಪಾಳದ ಸಂಸತ್ತಿನ ಕೆಳಮನೆ 2020 ಜೂನ್ 13ರ ಶನಿವಾರ ಒಪ್ಪಿಗೆ ಸೂಚಿಸಿತ್ತು. ಆದರೆ ಈ ನಡೆಯನ್ನು ವಿರೋಧಿಸಿದ್ದ ಭಾರತ ಈ ಪ್ರದೇಶಗಳು ಭಾರತಕ್ಕೆ ಸೇರಿದವು ಎಂದು ಪ್ರತಿಕ್ರಿಯೆ ನೀಡಿತ್ತು. ಎರಡೂ ದೇಶಗಳಿಗೆ ಗಡಿಯಾಗಿ ಕಾಳಿ ನದಿಯಿದ್ದು, ಇದರ ಮೂಲ ಕಾಲಾಪಾನಿ ಪ್ರದೇಶವಲ್ಲ ಎಂದು ನೇಪಾಳ ವಾದಿಸಿತ್ತು. ಲಿಂಪಿಯಧುರದಲ್ಲಿ ಹುಟ್ಟುವ ಕುತಿಯಾಂಗ್ತಿ ತೊರೆಯೇ ಕಾಳಿ ನದಿಯ ಮೂಲ ಎಂದು ನೇಪಾಳ ವಾದಿಸುತ್ತಿದೆ.   ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್.ಎಸ್.ಜೀನಾ ಕ್ಯಾಂಪಸ್ಸಿನ ಇತಿಹಾಸ ಪ್ರಾಧ್ಯಾಪಕರಾದ ವಿ.ಡಿ.ಎಸ್.ನೇಗಿ, ಕಾಳಿ ನದಿಯ ಉಲ್ಲೇಖವಿರುವ ಸ್ಕಂದ ಪುರಾಣದ ಮಾನಸ ಖಂಡವನ್ನು ಸಾಕ್ಷಿಯಾಗಿ ಮುಂದಿಟ್ಟಿದ್ದಾರೆ.  ‘ಮಾನಸ ಖಂಡದಲ್ಲಿರುವ ಶ್ಲೋಕವೊಂದರ ಪ್ರಕಾರ ಕಾಳಿ ನದಿಯ ಮೂಲ ಲಿಪುಲೇಖ್ ಪರ್ವತಶ್ರೇಣಿ. ಭಾರತದ ಸ್ವಾತಂತ್ರ್ಯಕ್ಕೆ ಮೊದಲು ಟಿಬೆಟ್ಟಿಗೆ ಭೇಟಿ ನೀಡಿದ್ದ ಬ್ರಿಟಿಷ್ ಪ್ರವಾಸಿಗರು ಹಾಗೂ ಕೈಲಾಸ- ಮಾನಸಸರೋವರದ ಬಗ್ಗೆ ಬರೆದಿರುವ ಭಾರತದ ವಿದ್ವಾಂಸರು ಕಾಳಿ ನದಿಯ ಮೂಲ ಕಾಲಾಪಾನಿ ಎಂದು ಉಲ್ಲೇಖಿಸಿದ್ದಾರೆ’ ಎಂದು ನೇಗಿ ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ಬಾಲಿವುಡ್ಡಿನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈಯ ತಮ್ಮ ಮನೆಯಲ್ಲಿ 2020 ಜೂನ್ 14ರ ಭಾನುವಾರ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತು. ಆತ್ಮಹತ್ಯೆಗೆ ಖಿನ್ನತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಬಾಲಿವುಡ್ ನಟ ಇರ್ಫಾನ್ ಖಾನ್ ಸಾವಿನ ಬೆನ್ನಲ್ಲೇ ಮತ್ತೋರ್ವ ನಟ ಸಾವನ್ನಪ್ಪಿರುವುದು ಬಾಲಿವುಡ್ ಮಂದಿಗೆ ಆಘಾತ ಉಂಟುಮಾಡಿತು. ೩೪ರ ಹರೆಯದ ಸುಶಾಂತ್ ಸಿಂಗ್ ಮುಂಬೈಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಮನೆ ಕೆಲಸದವರು ಬಂದು ನೋಡಿದಾಗ ಈ ವಿಷಯ ಬೆಳಕಿಗೆ ಬಂತು. ಮಲಗುವ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಕಳೆದ ೬ ತಿಂಗಳಿನಿಂದ ಸುಶಾಂತ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸುಶಾಂತ್ ಸ್ನೇಹಿತರು ಪೊಲೀಸರಿಗೆ ತಿಳಿಸಿದರು. ಧಾರಾವಾಹಿ ನಟನಾಗಿ ಅಭಿನಯವನ್ನು ಶುರು ಮಾಡಿದ್ದ ಸುಶಾಂತ್ ಸಿಂಗ್ ಬಳಿಕ ಸಾಲು ಸಾಲು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು. ಕಾಯ್ ಪೋ ಚೆ, ಶುದ್ಧ ದೇಸಿ ರೊಮ್ಯಾನ್ಸ್, ಪಿಕೆ, ಎಂ.ಎಸ್. ಧೋಣಿ, ರಾಬ್ಟಾ, ಕೇದಾರನಾಥ್ ಮುಂತಾದ ಹಿಟ್ ಸಿನಿಮಾಗಳಲ್ಲಿ ಸುಶಾಂತ್ ಸಿಂಗ್ ನಾಯಕನಾಗಿ ಅಭಿನಯಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

 ಇಂದಿನ ಇತಿಹಾಸ  History Today ಜೂನ್  14  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 


No comments:

Post a Comment