Wednesday, June 19, 2019

ಇಂದಿನ ಇತಿಹಾಸ History Today ಜೂನ್ 19

ಇಂದಿನ ಇತಿಹಾಸ History Today ಜೂನ್ 19
2019: ನವದೆಹಲಿ: ಬಿಜೆಪಿಯ ಲೋಕಸಭಾ ಸದಸ್ಯ ೫೬ರ ಹರೆಯದ ಓಂ ಬಿರ್ಲಾ ಅವರು ಲೋಕಸಭೆಯ ನೂತನ ಸಭಾಧ್ಯಕ್ಷರಾಗಿ  ಆಯ್ಕೆಯಾದರು. ದಶಕಗಳ ಹಿಂದೆ ರಾಜಸ್ಥಾನದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದ್ದ ಕೋಟಾದ ೫೬ರ ಹರೆಯದ ಓಂ ಬಿರ್ಲಾ ಅವರ ಹೆಸರನ್ನು ನೂತನ ಸಭಾಧ್ಯಕ್ಷರನ್ನಾಗಿ ಸೂಚಿಸುವ ನಿರ್ಣಯವನ್ನು ಸದನದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು.. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿರ್ಣಯವನ್ನು ಅನುಮೋದಿಸಿದರು. ಓಂ ಬಿರ್ಲಾ ಹೆಸರನ್ನು ಕಾಂಗ್ರೆಸ್, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಸೇರಿದಂತೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಬೆಂಬಲಿಸಿದವು. ಬಿರ್ಲಾ ಅವರ ಅಭ್ಯರ್ಥನವನ್ನು ಬೆಂಬಲಿಸಿ ೧೩ ನಿರ್ಣಯಗಳು ಮಂಡನೆಯಾಗಿದ್ದವು. ಆದರೆ ಪ್ರಧಾನಿ ಮೋದಿ ಅವರು ಮಂಡಿಸಿದ ನಿರ್ಣಯವನ್ನು ಸದನವು ಧ್ವನಿ ಮತದಿಂದ ಅಂಗೀಕರಿಸಿದ ಕಾರಣ ಉಳಿದ ನಿರ್ಣಯಗಳನ್ನು ಸದನವು ಕೈಗೆತ್ತಿಕೊಳ್ಳಲಿಲ್ಲ. ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಓಂ ಬಿರ್ಲಾ ಅವರನ್ನು  ಸಭಾಧ್ಯಕ್ಷರ ಆಸನಕ್ಕೆ ಕರೆದೊಯ್ದರು. ಮತ್ತು ಸಾರ್ವಜನಿಕ ಸೇವೆಯ ಅತ್ಯುತ್ತಮ ದಾಖಲೆಗಾಗಿ ರಾಜಸ್ಥಾನದ ನಾಯಕರತ್ತ ಪ್ರಶಂಸೆಯ ಮಳೆಗರೆದರು.   ಸಹಸ್ರಾರು ಮಂದಿಯನ್ನು ಬಲಿತೆಗೆದುಕೊಂಡ ಗುಜರಾತಿನ ೨೦೦೧ರ ಭೂಕಂಪದ ಬಳಿಕ ಕಛ್ ಪ್ರದೇಶದಲ್ಲಿ ಓಂ ಬಿರ್ಲಾ ಅವರು ಹಲವಾರು ತಿಂಗಳ ಸ್ವತಃ ತಂಗಿ ಸಂತ್ರಸ್ತರ ಸಂಕಷ್ಟ ನಿವಾರಣೆಗಾಗಿ ದುಡಿದಿದ್ದುದನ್ನು ಹಾಗೂ ರಾಜಸ್ಥಾನದ ಕೋಟಾದಲ್ಲಿ ಯಾರೊಬ್ಬರೂ ಹಸಿವಿನೊಂದಿಗೆ ನಿದ್ರಿಸದಂತೆ ಖಚಿತ ಪಡಿಸಲು ಓಂ ಬಿರ್ಲಾ ಅವರು ಕೈಗೊಂಡಿದ್ದ ಉಪಕ್ರಮಗಳನ್ನು ಪ್ರಧಾನಿ ನೆನಪಿಸಿದರು.  ‘ಸಾರ್ವಜನಿಕ ಸೇವೆಯು ಓಂ ಬಿರ್ಲಾಜಿ ಅವರ ರಾಜಕೀಯದಲ್ಲಿ ಪ್ರಮುಖ ಅಂಶವಾಗಿದೆ ಎಂದು ನುಡಿದ ಪ್ರಧಾನಿ ಮೋದಿ ’ಅವರು ಸದನಕ್ಕೆ ಸ್ಫೂರ್ತಿ ಎಂಬುದಾಗಿ ಬಣ್ಣಿಸುವ ಮೂಲಕ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ಸಭಾಧ್ಯಕ್ಷರಾಗಿ ನೂತನ ಪಾತ್ರ ವಹಿಸುವ ಸಂದರ್ಭದಲ್ಲಿ ಆಡಳಿತ ಪಕ್ಷದ ಪೀಠಗಳ ಕಡೆಯಿಂದ ಸಂಪೂರ್ಣ ಬೆಂಬಲದ ಭರವಸೆಯನ್ನು ಪ್ರಧಾನಿ ನೀಡಿದರು. ’ಸದನದಲ್ಲಿ ಸುವ್ಯವಸ್ಥೆ ನೆಲೆಸುತ್ತದೆ ಎಂದು ಕೂಡಾ ನಾನು ನಿಮಗೆ ಭರವಸೆ ನೀಡುತ್ತೇನೆ. ನಮ್ಮ ಕಡೆಯಿಂದ ಕೂಡಾ ಯಾರಾದರೂ (ಆಡಳಿತ ಪಕ್ಷದ ಸದಸ್ಯರು) ಮಿತಿ ಮೀರಿದರೆ ನೀವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ನುಡಿದರು. ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ಅವರು ನಿಷ್ಪಕ್ಷಪಾತದಿಂದ ಕಾರ್‍ಯ ನಿರ್ವಹಿಸುವಂತೆ ಓಂ ಬಿರ್ಲಾ ಅವರನ್ನು ಆಗ್ರಹಿಸಿದರು. ಸಾರ್ವಜನಿಕ ಹಿತಕ್ಕೆ ಸಂಬಂಧಪಟ್ಟ ವಿಷಯಗಳನ್ನು ಎತ್ತಲು ವಿರೋಧ ಪಕ್ಷಕ್ಕೆ ಸಾಕಷ್ಟು ಕಾಲಾವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.  ಲೋಕಸಭೆಯ ಸ್ಥಾಯೀ ಸಮಿತಿಗೆ ಒಪ್ಪಿಸಲಾಗುವ ಕೆಲವು ಮಸೂದೆಗಳಿಗೆ ಸಂಬಂಧಿಸಿದಂತೆ ಅವರು ಕಾಳಜಿ ವ್ಯಕ್ತ ಪಡಿಸಿದರು.  ಬಿಜೆಡಿ  ಸದಸ್ಯ ಪಿನಾಕಿ ಮಿಶ್ರ ಅವರೂ ಈ ಅಭಿಪ್ರಾಯವನ್ನು ಪ್ರತಿಧ್ವನಿಸಿದರು.  ೫೪೩ ಸದಸ್ಯಬಲದ ಲೋಕಸಭೆಯಲ್ಲಿ ಆಡಳಿತಾರೂಢ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ ಡಿಎ) ಸದಸ್ಯ ಬಲವೇ ೩೫೩ ಇದ್ದು, ಸ್ಪಷ್ಟ ಬಹುಮತ ಹೊಂದಿರುವುದರಿಂದ ಸಭಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇನಗೊಂಡ ಬಿಜೆಪಿ ಅಭ್ಯರ್ಥಿಯ ಗೆಲುವು ಮೊದಲೇ ನಿರ್ಧಾರವಾಗಿತ್ತು. ಮೂರು ಬಾರಿ ರಾಜಸ್ಥಾನ ವಿಧಾನಸಭೆಯ ಸದಸ್ಯರಾಗಿದ್ದ ಬಿರ್ಲಾ, ೨೦೦೪ರಿಂದ ೨೦೦೮ರವರೆಗೆ ರಾಜ್ಯ ಸರ್ಕಾರದ ಸಂಸದೀಯ ಕಾರ್‍ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆಪ್ತ ವ್ಯಕ್ತಿಯೆಂದೇ ಬಿರ್ಲಾ ಅವರು ಪರಿಗಣಿತರಾಗಿದ್ದರು. ಬಿರ್ಲಾ ಅವರು ೨೦೧೪ರ ಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ಈ ವರ್ಷ ರಾಜಸ್ಥಾನದ ಕೋಟ-ಬಂಡಿ ಕ್ಷೇತ್ರದಿಂದ ಅವರು ಪುನರಾಯ್ಕೆಯಾಗಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಬಿರ್ಲಾ ಅವರು ಕಾಂಗ್ರೆಸ್ಸಿನ ರಾಮನಾರಾಯಣ ಮೀನಾ ಅವರನ್ನು ೨.೫ ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.  ಬಿರ್ಲಾ ಅವರು ಬಿಜೆಪಿಯ ಯುವ ವಿಭಾಗವಾದ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಅವರು ಯುವ ಮೋರ್ಚಾದ ರಾಜಸ್ಥಾನ ಘಟಕದ ಮುಖ್ಯಸ್ಥರಾಗಿಯೂ ಅವರು ಆರು ವರ್ಷ ಕಾಲ ಸೇವೆ ಸಲ್ಲಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ಅವರು ದಿವ್ಯಾಂಗರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ೨೦೦೧ರ ಜನವರಿಯಲ್ಲಿ ಗುಜರಾತಿನಲ್ಲಿ ಸಂಭವಿಸಿದ ಭೂಕಂಪದ ವೇಳೆಯಲ್ಲಿ ಸಂತ್ರಸ್ತರ ನೆರವಿಗಾಗಿ ವೈದ್ಯರನ್ನೂ ಒಳಗೊಂಡ ೧೦೦ ಮಂದಿ ಸ್ವಯಂ ಸೇವಕರ ತಂಡವನ್ನು ರಚಿಸಿಕೊಂಡು ಅವರು ಓಡಾಡಿದ್ದರು.

2019: ನವದೆಹಲಿ: ’ಒಂದು ರಾಷ್ಟ್ರ, ಒಂದು ಚುನಾವಣೆ ಯೋಜನೆಗೆ ಸಂಬಂಧಿಸಿದಂತೆ ಕಾಲಮಿತಿಯೊಳಗೆ ಸಲಹೆಗಳನ್ನು ನೀಡುವ ಸಲುವಾಗಿ ಸಮಿತಿಯೊಂದನ್ನು ರಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಈದಿನ ಇಲ್ಲಿ ನಡೆದ ಸರ್ವ ಪಕ್ಷ ಸಭೆ ನಿರ್ಧರಿಸಿತು. ಸಭೆ ಮುಕ್ತಾಯಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ’ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಕಾಲ ಮಿತಿಯೊಳಗೆ ತನ್ನ ಸಲಹೆಗಳನ್ನು ನೀಡಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಪಕ್ಷಗಳು ’ಒಂದು ರಾಷ್ಟ್ರ, ಒಂದು ಚುನಾವಣೆಗೆ ಬೆಂಬಲ ವ್ಯಕ್ತ ಪಡಿಸಿವೆ. ಸಿಪಿಐ(ಎಂ) ಮತ್ತು ಸಿಪಿಐ ಕಲ್ಪನೆಯ ಅನುಷ್ಠಾನ ಬಗ್ಗೆ ಭಿನ್ನಾಭಿಪ್ರಾಯ ಹೊಂದಿವೆ, ಆದರೆ ಅವರು ಕಲ್ಪನೆಯನ್ನು ವಿರೋಧಿಸಿಲ್ಲ ಎಂದು ರಾಜನಾಥ್ ಸಿಂಗ್ ನುಡಿದರು. ಸರ್ವ ಪಕ್ಷ ಸಭೆಯ ಕಾರ್‍ಯಸೂಚಿಯಲ್ಲಿ ಸಂಸತ್ತಿನಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದು ಹೇಗೆ?, ’ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯಗಳು ಒಳಗೊಂಡಿದ್ದವು ಎಂದು ನುಡಿದ ರಕ್ಷಣಾ ಸಚಿವರು ’ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಸಮಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಲಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಮುಂಬೈ ಘಟಕದ ಅಧ್ಯಕ್ಷ ಮಿಲಿಂದ ದೇವ್ರಾ ಅವರು ಕೇಂದ್ರ ಮತ್ತು ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಉಭಯ ಕಡೆಗಳು ಮುಕ್ತ ಹೃದಯದಿಂದ ಚರ್ಚಿಸಬೇಕು ಎಂದು ಹೇಳಿದರು. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಟಿಪ್ಪಣಿ ಒಂದರಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದನ್ನು ವಿರೋಧಿಸಿದರು. ಇಂತಹ ಕ್ರಮವನ್ನು ಅವರು ಒಕ್ಕೂಟ ವಿರೋಧಿ, ಪ್ರಜಾತಂತ್ರ ವಿರೋಧಿ ಮತ್ತು ಪ್ರಜಾತಾಂತ್ರಿಕ ಸಂಸದೀಯ ವ್ಯವಸ್ಥೆಯ ಬುಡಕ್ಕೆ ಪೆಟ್ಟು ಎಂದು ಟಿಪ್ಪಣಿಯಲ್ಲಿ ಅವರು ತಿಳಿಸಿದರು. ದೇಶದ ಹಿತದೃಷ್ಟಿಯಿಂದ ಬೆಂಬಲ: ಬಿಜು ಜನತಾ ದಳವು ಯಾವಾಗಲೂ ದೇಶ ಮತ್ತು ಅದರ ಜನರ ಹಿತದೃಷ್ಟಿಯಿಂದ ಮಾಡುವ ಯಾವುದೇ ಕೆಲಸಕ್ಕೆ ಬೆಂಬಲ ನೀಡುವುದು. ನಾವು ಇದನ್ನು ಭವಿಷ್ಯದಲ್ಲಿಯೂ ಮುಂದುವರೆಸುತ್ತೇವೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಭೆಯ ಬಳಿಕ ನೀಡಿದ ಹೇಳಿಕೆಯಲ್ಲಿ ತಿಳಿಸಿದರು. ಭಾರತದ ಆದರ್ಶವಾಗಿರುವ ’ಅಹಿಂಸೆಯನ್ನು ಸಂವಿಧಾನದ ಪೀಠಿಕೆಗೆ ಸೇರಿಸಬೇಕು ಎಂದೂ ಮುಖ್ಯಮಂತ್ರಿ ಸಲಹೆ ಮಾಡಿದರು.  ‘ಪದೇ ಪದೇ ನಡೆಯುವ ಚುನಾವಣೆಗಳು ಅಭಿವೃದ್ಧಿಯ ವೇಗಕ್ಕೆ ತಡೆ ಹಾಕುತ್ತವೆ ಮತ್ತು ಸಹಕಾರಾತ್ಮಕ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಗೆ ಅಡ್ಡಿಯಾಗುತ್ತವೆ. ಬಿಜೆಡಿಯು ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಕಲ್ಪಿಸುವುದಕ್ಕೂ ಬಿಜೆಡಿ ಬೆಂಬಲ ನೀಡುತ್ತದೆ ಎಂದು ಅವರು ನುಡಿದರು. ಸಂಸತ್ತಿನಲ್ಲಿ ಪ್ರಾತಿನಿಧ್ಯ ಹೊಂದಿರುವ ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಏಕಕಾಲಕ್ಕೆ ಚುನಾವಣೆ ನಡೆಸುವ ಕಲ್ಪನೆ ಭಾರತಕ್ಕೆ ಹೊಸದೇನೂ ಅಲ್ಲ. ೧೯೫೨ರಿಂದ ೧೯೭೦ರವರೆಗಿನ ಭಾರತದ ಮೊದಲ ೪ ಚುನಾವಣೆಗಳಲ್ಲಿ ಅಂದರೆ ೧೯೫೨, ೧೯೫೭, ೧೯೬೨ ಮತ್ತು ೧೯೬೭ರ ಚುನಾವಣೆಗಳು ವಸ್ತುಶಃ ’ಒಂದು ರಾಷ್ಟ್ರ, ಒಂದು ಚುನಾವಣೆಯೇ ಆಗಿತ್ತು. ನಾಲ್ಕನೇ ಲೋಕಸಭೆಯನ್ನು ಅವಧಿಗೆ ಮೊದಲೇ ವಿಸರ್ಜಿಸಿದ ಬಳಿಕ ಈ ವ್ಯವಸ್ಥೆ ತಪ್ಪಿಹೋಗಿತ್ತು. ರಾಷ್ಟ್ರದಲ್ಲಿ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಸಾಧ್ಯತೆ ಹಾಗೂ ೧೧೭ ಜಿಲ್ಲೆಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸುವುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ ರೆಡ್ಡಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಹಾಜರಾಗಿದ್ದರು.  ಪ್ರಧಾನಿ ಮೋದಿ ಅವರ ಭಾರತೀಯ ಜನತಾ ಪಕ್ಷವು ರಾಷ್ಟ್ರೀಯ ಚುನಾವಣೆಯಲ್ಲಿ ಲೋಕಸಭೆಯ ೫೪೨ ಸ್ಥಾನಗಳ ಪೈಕಿ ೩೦೩ ಸ್ಥಾನಗಳನ್ನು ಗೆದ್ದುಕೊಂಡು ಪ್ರಚಂಡ ಸಾಧನೆ ತೋರಿಸಿದ ಕೆಲವು ವಾರಗಳ ಬಳಿಕ ನಡೆದ ಈ ಸರ್ವ ಪಕ್ಷ ಸಭೆಗೆ ಹಲವಾರು ವಿರೋಧ ಪಕ್ಷಗಳು ಗೈರುಹಾಜರಾದವು.  ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ ಅವರು ಮೊತ್ತ ಮೊದಲಿಗರಾಗಿ ಸಭೆಗೆ ಗೈರುಹಾಜರಾಗುವ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಆ ಬಳಿಕ ಬಿಎಸ್‌ಪಿಯ ಮಾಯಾವತಿ, ಎಸ್‌ಪಿಯ ಅಖಿಲೇಶ್ ಯಾದವ್, ಡಿಎಂಕೆಯ ಎಂಕೆ ಸ್ಟಾಲಿನ್ ಕೂಡಾ ಸಭೆಗೆ ಗೈರುಹಾಜರಾಗುವುದಾಗಿ ಪ್ರಕಟಿಸಿದರು.  ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಆಮ್ ಆದ್ಮಿ ಪಕ್ಷದ (ಆಪ್) ಮುಖ್ಯಸ್ಥ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸ್ವತಃ ಹಾಜರಾಗುವ ಬದಲು ಪಕ್ಷ ನಾಯಕರನ್ನು ಪ್ರತಿನಿಧಿಸಲು ನೇಮಕ ಮಾಡಿದರು. ಪ್ರಧಾನಿ ಮೋದಿಯವರ ’ಒಂದು ರಾಷ್ಟ್ರ, ಒಂದು ಚುನಾವಣೆ ಯೋಜನೆಯ ಪ್ರಬಲ ಟೀಕಾಕಾರರಾದ ಸಿಪಿಎಂನ ಸೀತಾರಾಮ್ ಯೆಚೂರಿ ಅವರು ’ಏಕಕಾಲಕ್ಕೆ ಚುನಾವಣೆ ನಡೆಸುವ ಕಲ್ಪನೆಯನ್ನು ವಿರೋಧಿಸುವ ಸಲುವಾಗಿ ತಾವು ಸಭೆಗೆ ಹಾಜರಾಗುವುದಾಗಿ ಬುಧವಾರ ಬೆಳಗ್ಗೆ ಪ್ರಕಟಿಸಿದರು.  ’ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಯು ಮೂಲಭೂತವಾಗಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಅವರು ಹೇಳಿದರು. ಟೀಕೆಗೆ ಒಳಗಾಗಿರುವ ಈ ಕಲ್ಪನೆಯು ಸರ್ಕಾರವು ಶಾಸನಸಭೆಗೆ ಉತ್ತರದಾಯಿಯಾಗಬೇಕಾದ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಕೈಯಾಡಿಸುವುದು ಎಂದು ಅವರು ನುಡಿದರು.  ಲೋಕಸಭೆ ಅಥವಾ ಶಾಸನಸಭೆಯ ಅವಧಿಯನ್ನು ವಿಸ್ತರಿಸುವ ಯಾವುದೇ ಪ್ರಯತ್ನ ಸಂವಿಧಾನವಿರೋಧಿ ಮಾತ್ರವೇ ಅಲ್ಲ, ಪ್ರಜಾಪ್ರಭುತ್ವ ವಿರೋಧಿ ಕೂಡಾ. ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕ ಜನರು ವ್ಯಕ್ತ ಪಡಿಸುವ ಇಚ್ಛೆ ಜಯಶಾಲಿಯಾಗಬೇಕು ಎಂದು ಅವರು ಹೇಳಿದರು.  ಬಿಜೆಪಿ ನಾಯಕ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಅವರು ’ಸಭೆಗೆ ಗೈರುಹಾಜರಾಗುವ ರಾಜಕೀಯ ನಾಯಕರು ವಿಷಯಕ್ಕೆ ಸಂಬಂಧಿಸಿದಂತೆ ಇತರ ಎಲ್ಲ ರಾಜಕೀಯ ಪಕ್ಷಗಳ ಜೊತೆ ತೊಡಗಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು. ’ಒಂದು ರಾಷ್ಟ್ರ- ಒಂದು ಚುನಾವಣೆ ಯೋಜನೆ ವಿಚಾರದಲ್ಲಿ ಸಹಮತ ಸಾಧಿಸುವುದರಿಂದ ದೇಶಕ್ಕೆ ಅನುಕೂಲವಾಗುತ್ತದೆ ಎಂದು ಅವರು ನುಡಿದರು. ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಯನ್ನು ಹಿಂದಿನ ಲೋಕಸಭೆಯ ಅವಧಿಯಲ್ಲಿ ಹರಿಯಬಿಡಲಾಗಿತ್ತು. ಆದರೆ ಸಹಮತ ಸಾಧ್ಯವಾಗದೇ ಇದ್ದುದುರಿಂದ ಅದು ಮೂಲೆಗುಂಪಾಯಿತು. ಎನ್ ಡಿಎ ಸರ್ಕಾರವು ಇದನ್ನು ಪ್ರತ್ಯೇಕ ಚುನಾವಣೆಗಳಿಗಾಗಿ ಮಾಡುವ ವೆಚ್ಚ ಕಡಿಮೆಗೊಳಿಸುವ ಒಂದು ಮಹತ್ವದ ಚುನಾವಣಾ ಸುಧಾರಣೆ ಎಂಬುದಾಗಿ ಪರಿಗಣಿಸಿದೆ. ಚುನಾವಣಾ ಪ್ರಕ್ರಿಯೆ ಸಂದರ್ಭಗಳಲ್ಲಿ ಜಾರಿಯಾಗುವ ಮಾದರಿ ನೀತಿ ಸಂಹಿತೆಯ ಪರಿಣಾಮವಾಗಿ ಆಡಳಿತಕ್ಕೆ ಬೀಳುವ ತಡೆಯನ್ನೂ ಈ ಮೂಲಕ ನಿವಾರಿಸಬಹುದು ಎಂಬುದು ಎನ್‌ಡಿಎ ಚಿಂತನೆ.
           
2019: ನವದೆಹಲಿ/ ಬೆಂಗಳೂರು: ಕಾಂಗ್ರೆಸ್ಸಿನ ಕರ್ನಾಟಕ ಘಟಕದಲ್ಲಿ ಹೆಚ್ಚುತ್ತಿರುವ ಆಂತರಿಕ ಕಲಹಗಳ ಮಧ್ಯೆ ವರಿಷ್ಠ ಮಂಡಳಿಯು ಪಕ್ಷದ ರಾಜ್ಯ ಘಟಕವನ್ನು  ವಿಸರ್ಜಿಸಿ, ಹಾಲಿ ಅಧ್ಯಕ್ಷ ದಿನೇಶ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಮಾತ್ರ ಉಳಿಸಿಕೊಂಡಿತು.  ‘ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಹಾಲಿ ಸಮಿತಿಯನ್ನು ವಿಸರ್ಜಿಸಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನಿರ್ಧರಿಸಿದೆ. ಅಧ್ಯಕ್ಷ ಮತ್ತು ಕಾರ್‍ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದು ಕರ್ನಾಟಕದ ಪಕ್ಷ ವ್ಯವಹಾರಗಳ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್‍ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಅವರು ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿತು. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿನ ಪರಾಭವದ ಬಳಿಕ ಕರ್ನಾಟಕ ಕಾಂಗ್ರೆಸ್ ಘಟಕದ ಒಳಗಿನ ಆಂತರಿಕ ಕಲಹ ತೀವ್ರಗೊಂಡಿದೆ. ಕಾಂಗ್ರೆಸ್- ಜನತಾದಳ (ಜಾತ್ಯತೀತ) ಸಮಿಶ್ರ ಸರ್ಕಾರವನ್ನು ನಿಭಾಯಿಸಲು ರಚಿಸಲಾಗಿರುವ ಸಮನ್ವಯ ಸಮತಿಯಲ್ಲಿಯೂ ಸಮಸ್ಯೆಗಳು ತಲೆದೋರಿವೆ. ಕರ್ನಾಟಕ ಕಾಂಗ್ರೆಸಿನಲ್ಲಿ ಕಳೆದ ಕೆಲವು ಸಮಯದಿಂದ ಭಿನ್ನಮತದ ಧ್ವನಿಗಳು ಬೆಳೆಯುತ್ತಿದ್ದು, ಇದು ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಕಾರ್ಯ ನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತಿದೆ. ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಿಸರ್ಜನೆಯು ಲೋಕಸಭೆಯಲ್ಲಿ ಪಕ್ಷವು ತೋರಿದ ಕಳಪೆ ಸಾಧನೆಯ ಫಲಶ್ರುತಿ ಎಂದೇ ರಾಜಕೀಯ ವಲಯದಲ್ಲಿ ಭಾವಿಸಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ೧೭೦ ಮಂದಿ ಪದಾಧಿಕಾರಿಗಳನ್ನು ಹೊಂದಿತ್ತು.  ರಾಜ್ಯದಲ್ಲಿ ಪಕ್ಷದ ಮರು ಸಂಘಟನೆಯ ಅಗತ್ಯ ಬಗ್ಗೆ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಔಪಚಾರಿಕ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯ ಘಟಕ ವಿಸರ್ಜನೆಯ ತೀಮಾನ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು. ಆದರೆ ಪಕ್ಷಾಧ್ಯಕ್ಷ ದಿನೇಶ ಗುಂಡೂರಾವ್ ಮತ್ತು ಕಾರ್‍ಯಾಧ್ಯಕ್ಷ ಖಂಡ್ರೆ ಅವರ ನಾಯಕತ್ವದಲ್ಲೇ ನಡೆದ ಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರ ಬದಲಾವಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಪಕ್ದ ಹಲವಾರು ನಾಯಕರು ವರಿಷ್ಠ ಮಂಡಳಿಯ ನಿರ್ಧಾರದಿಂದ ಆಶ್ಚರ್ಯ ಚಕಿತರಾಗಿದ್ದರು. ಪಕ್ಷಾಧ್ಯಕ್ಷರಾಗಿ ಲಿಂಗಾಯತ ಅಥವಾ ಒಕ್ಕಲಿಗರೊಬ್ಬರನ್ನು ಪಕ್ಷಾಧ್ಯಕ್ಷರಾಗಿ ನೇಮಿಸಬೇಕು ಎಂಬ ಬೇಡಿಕೆ ಕೂಡಾ ಇತ್ತು. ಗೃಹ ಸಚಿವ ಎಂಬಿ ಪಾಟೀಲ್ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಹೆಸರುಗಳು ಅಧ್ಯಕ್ಷ ಸ್ಥಾನದ ಹಿಂದೆ ಸುತ್ತಾಡುತ್ತಿದ್ದವು. ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್ - ಜನತಾದಳ (ಎಸ್) ತಲಾ ಒಂದೊಂದು ಸ್ಥಾನವನ್ನು ಮಾತ್ರವೇ ಪಡೆಯಲು ಶಕ್ತವಾಗಿದ್ದವು. ಹೀನಾಯ ಸೋಲು ಪಕ್ಷದಲ್ಲಿ ಆಂತರಿಕ ಕಚ್ಚಾಟಕ್ಕೆ ತುಪ್ಪ ಸುರಿದಿತ್ತು. ಈ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಅವರು ಪಕ್ಷದ ರಾಜ್ಯ ಘಟಕವನ್ನು ಪುನರ್ರಚಿಸಿ ಹೊಸ ತಂಡ ಕಟ್ಟಲು ನೆರವಾಗುವಂತೆ ಮನವಿ ಮಾಡಿದ್ದರು.  ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಹೊಸ ಉತ್ಸಾಹ, ಚೈತನ್ಯದೊಂದಿಗೆ ಕೆಲಸ ಮಾಡಲು ಯುವ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡುವ ಅಗತ್ಯವಿದೆ ಎಂದು ದಿನೇಶ ಗುಂಡೂರಾವ್ ಅವರು ವರಿಷ್ಠರಿಗೆ ಒತ್ತಿ ಹೇಳಿದ್ದರು. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಮುಖ್ಯಸ್ಥ ಸಿದ್ದರಾಮಯ್ಯ ಅವರೂ ಕೂಡಾ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಗೆ ಜನತಾ ದಳ ಜೊತೆಗಿನ ಮೈತ್ರಿ ಕಾರಣ ಎಂದು ತಿಳಿಸಿದ್ದು, ಪಕ್ಷದ ಬಲವರ್ಧನೆಗಾಗಿ ಮೈತ್ರಿಯಿಂದ ಹೊರಬರುವುದೇ ಉತ್ತಮ ಎಂಬುದಾಗಿ ತಿಳಿಸಿದ್ದಾರೆ ಎನ್ನಲಾಯಿತು. ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರನ್ನು ಇತ್ತೀಚೆಗೆ ಕರ್ನಾಟಕ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿತ್ತು. ಕರ್ನಾಟಕದ ಪಕ್ಷ ವ್ಯವಹಾರಗಳ ಉಸ್ತುವಾರಿ ವಹಿಸಿರುವ ವೇಣುಗೋಪಾಲ್ ಅವರು ರಾಜ್ಯ ನಾಯಕರ ಜೊತೆ ಸಮಾಲೋಚಿಸಿ ಶೀಘ್ರವೇ ನೂತನ ತಂಡವನ್ನು ಪ್ರಕಟಿಸುವರು ಎಂದು ನಿರೀಕ್ಷಿಸಲಾಯಿತು.

 2019: ನವದೆಹಲಿ: ೨೦೨೦ರ ಕ್ಯೂಎಸ್ ಜಾಗತಿಕ ವಿಶ್ವ ವಿದ್ಯಾಲಯ ರಾಂಕಿಂಗಿನಲ್ಲಿ ಐಐಟಿ ಬಾಂಬೆ ೧೫೨ನೇ ಸ್ಥಾನ ಪಡೆಯುವ ಮೂಲಕ ದೇಶದಲ್ಲೇ ಅಗ್ರ ಸ್ಥಾನವನ್ನು ಗಳಿಸಿದ್ದು, ಸಂಶೋಧನಾ ಪರಿಣಾಮ ಬೀರುವಿಕೆಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)  ಅತ್ಯುನ್ನತ ಸ್ಥಾನ ಪಡೆದಿದ್ದು, ಜಾಗತಿಕ ಮಟ್ಟದಲ್ಲಿ ಎರಡನೇ ಅತ್ಯುತ್ತಮ ಸಂಶೋಧನಾ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಳೆದ ಮೂರು ವರ್ಷಗಳ ರಾಂಕಿಂಗಿನಲ್ಲಿ ಭಾರತೀಯ ಸಂಸ್ಥೆಗಳ ಪೈಕಿ ಐಐಟಿ ಬಾಂಬೆ ಅತ್ಯುನ್ನತ ಸ್ಥಾನ ಗಳಿಸಿದ್ದು ಪ್ರತಿಷ್ಠಿತ ಜಾಗತಿಕ ರಾಂಕಿಂಗಿನಲ್ಲಿ ೨೭ ಸ್ಥಾನದಷ್ಟು ಮೇಲಕ್ಕೆ ಏರಿತು. ಐಐಟಿ ದೆಹಲಿ ೧೮೨ನೇ ಸ್ಥಾನ ಪಡೆದಿದ್ದು, ಐಐಟಿ ಬಾಂಬೆಯ ನಂತರದ ಸ್ಥಾನದಲ್ಲಿದೆ. ಆದರೆ, ೨೦೧೯ರಲ್ಲಿ ೧೭೨ನೇ ಸ್ಥಾನದಲ್ಲಿದ್ದ ಐಐಟಿ ದೆಹಲಿ ೨೦೨೦ರ ಕ್ಯೂಎಸ್ ರಾಂಕಿಂಗಿನಲ್ಲಿ  ೧೦ ಸ್ಥಾನ ಕೆಳಕ್ಕೆ ಕುಸಿದಿದೆ. ಭಾರತದ ೨೩ ಸಂಸ್ಥೆಗಳು ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯ ರ್‍ಯಾಂಕಿಂಗ್‌ನ ೧೬ನೇ ಆವೃತ್ತಿಯಲ್ಲಿ ಸ್ಥಾನ ಪಡೆದವು. ೨೩ ಸಂಸ್ಥೆಗಳ ಪೈಕಿ ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ -ಐಐಎಸ್ಸಿ) ಬೆಂಗಳೂರು ಮಾತ್ರವೇ ಜಗತ್ತಿನ ೨೦೦ ಅತ್ಯುನ್ನತ ಸಂಸ್ಥೆಗಳಲ್ಲಿ ಸೇರಿವೆ. ರಾಂಕಿಂಗಿನಲ್ಲಿ  ಐಐಟಿ ಬಾಂಬೆಯ ಸಾಧನೆಗೆ ಸಂಶೋಧನಾ ಕ್ಷೇತ್ರದಲ್ಲಿನ ಅದರ ಸಾಧನೆ ಕಾರಣವಾಗಿದೆ. ಈಗ ಅದು ವಿಶ್ವದಲ್ಲಿ ೧೮೪ನೇ ರಾಂಕ್  ಪಡೆದಿದೆ. ಇನ್ನೊಂದೆಡೆಯಲ್ಲಿ ಐಐಎಸ್‌ಸಿ ಬೆಂಗಳೂರು ಸಂಶೋಧನಾ ಪರಿಣಾಮಕ್ಕಾಗಿ ವಿಶ್ವದಲ್ಲೇ ಎರಡನೇ ಅತ್ಯುತ್ತಮ ಅಂಕಗಳನ್ನು ಗಳಿಸಿದೆ. ಫ್ಯಾಕಲ್ಟಿ ಮೆಟ್ರಿಕ್‌ನ ಉಲ್ಲ್ಲೇಖಗಳಿಗಾಗಿ (ಸೈಟೇಷನ್ಸ್) ಅದು ಪೂರ್ಣ ೧೦೦ ಅಂಕಗಳನ್ನು ಗಳಿಸಿದೆ. ಐದು ವರ್ಷಗಳ ಅವಧಿಯಲ್ಲಿ ತನ್ನ ಸಂಶೋಧನೆಯನ್ನು ೧,೦೦,೦೦೦ ಬಾರಿ ಉಲ್ಲೇಖಿಸಿಕೊಂಡ ಭಾರತದ ಮೊತ್ತ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ. ಟಾಪ್ ೫೦೦ ಸಂಸ್ಥೆಗಳ ಪಟ್ಟಿಗೆ ಸೇರ್ಪಡೆಯಾಗಿರುವ ಭಾರತೀಯ ವಿಶ್ವ ವಿದ್ಯಾಲಯಗಳಲ್ಲಿ ಐಐಟಿ ಮದ್ರಾಸ್ (೨೭೧), ಐಐಟಿ- ಖರಗಪುರ (೨೮೧), ಐಐಟಿ ಕಾನ್ಪುರ (೨೯೧), ಐಐಟಿ ರೂರ್ಕೀ (೩೮೩), ದೆಹಲಿ ವಿಶ್ವವಿದ್ಯಾಯ (೪೭೪) ಮತ್ತು ಐಐಟಿ ಗುವಾಹಟಿ (೪೯೧) ಸೇರಿವೆ.  ಐಐಟಿ ಖರಗಪುರವು ೨೦೧೮ರ ೩೦೮ನೇ ಸ್ಥಾನದಿಂದ ೨೮೧ನೇ ಸ್ಥಾನಕ್ಕೆ ಏರಿದೆ.  ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ಉನ್ನತ ರ್‍ಯಾಂಕ್‌ಗಳನ್ನು ಅಮೆರಿಕದ ವಿಶ್ವ ವಿದ್ಯಾಲಯಗಳು ಮಾತ್ರವೇ ಕಬಳಿಸಿವೆ. ವಿಶ್ವ ದರ್ಜೆಯ ಎಂಐಟಿ (ಮೆಸ್ಯಾಚುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯ ರ್‍ಯಾಂಕಿಂಗ್‌ಗಳಲ್ಲಿ ಸತತ ೮ನೇ ವರ್ಷ ಉನ್ನತ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಕ್ಯೂ ಎಸ್ ಪ್ರಕಾರ ಬೇರೆ ಯಾವುದೇ ವಿಶ್ವ ವಿದ್ಯಾಲಯಕ್ಕೂ ಇಷ್ಟೊಂದು ದೀರ್ಘ ಕಾಲ ಉನ್ನತ ಸ್ಥಾನದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿಲ್ಲ. ಮೊದಲ ೧೦೦ರ ಪಟ್ಟಿಯಲ್ಲಿ ಸ್ಥಾನವಿಲ್ಲ: ಭಾರತದ ಉನ್ನತ ಶಿಕ್ಷಣ ರಂಗದಲ್ಲಿ ಮಹತ್ತರ ಸುಧಾರಣೆಗಳು ಆಗಿದ್ದರೂ, ವಿಶ್ವದ ೧೦೦ ಅಗ್ರ ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯ ಸ್ಥಾನ ಪಡೆದಿಲ್ಲ.

ಜಾಗತಿಕ ಉನ್ನತ ಶಿಕ್ಷಣ ಕನ್‌ಸೆಲ್ಟೆನ್ಸಿ ಸಂಸ್ಥೆಯಾಗಿರುವ ಕ್ಯೂಯಾಕ್ಯುರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಸಿದ್ಧಪಡಿಸಿರುವ ವಿಶ್ವದ ಅಗ್ರ ನೂರು ವಿವಿಗಳಲ್ಲಿ ಭಾರತದ ಒಂದೇ ಒಂದು ವಿವಿ ಇಲ್ಲದಿರುವುದು ಇದೀಗ ಬೆಳಕಿಗೆ ಬಂದಿದೆ. ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಾಗಿರುವ ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಎಸ್‌ಸಿ ಬೆಂಗಳೂರು ವಿಶ್ವದ ಮೊದಲ ೨೦೦ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿವೆ. ಆ ಪ್ರಕಾರ ಐಐಟಿ ಬಾಂಬೆ ೧೫೨ನೇ ಸ್ಥಾನ ಮತ್ತು ಐಐಟಿ ದೆಹಲಿ ೧೮೨ನೇ ಸ್ಥಾನ ಪಡೆದಿವೆ. ಕಳೆದ ವರ್ಷಕ್ಕೆ ಹೋಲಿಸಿದಾಗ, ಕ್ಯೂಯಾಕ್ಯುರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಸಿದ್ಧಪಡಿಸಿರುವ ೧೬ನೇ ಆವೃತ್ತಿಯ ಜಾಗತಿಕ ವಿಶ್ವ ವಿದ್ಯಾಲಯ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ೨೩ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ನಾಲ್ಕು ಸಂಸ್ಥೆಗಳು ತಮ್ಮ ಕ್ರಮಾಂಕವನ್ನು ಸುಧಾರಿಸಿವೆ; ಆದರೆ ಅದೇ ವೇಳೆ ಏಳು ಶಿಕ್ಷಣ ಸಂಸ್ಥೆಗಳು ಪಟ್ಟಿಯಿಂದ ಹೊರಬಿದ್ದಿವೆ. ಶಿಕ್ಷಕ ವೃಂದದ ಗಾತ್ರಕ್ಕೆ ಅನುಗುಣವಾಗಿ ಸಂಶೋಧನ ರಂಗದಲ್ಲಿ ಬೆಂಗಳೂರಿನ ಐಐಎಸ್‌ಸಿ ನೂರರಲ್ಲಿ ನೂರು ಅಂಕ ಗಳಿಸುವ ಮೂಲಕ ವಿಶ್ವದ ಎರಡನೇ ಶ್ರೇಷ್ಠತಾ ಸಂಸ್ಥೆ ಎಂಬ ಸ್ಥಾನವನ್ನು ಪಡೆದಿದೆ.


2018: ನವದೆಹಲಿ:  ನಾಟಕೀಯ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯು ತನ್ನ ಬೆಂಬಲ ಹಿಂಪಡೆಯುವುದರೊಂದಿಗೆ,  ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮೂರು ವರ್ಷಗಳ ಹಿಂದೆ ರಚನೆಯಾಗಿದ್ದ ಪಿಡಿಪಿ-ಬಿಜೆಪಿ ನೇತೃತ್ವದ ಸರ್ಕಾರ ಮುರಿದು ಬಿದ್ದಿತು.  ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದು ಕೊಂಡಿರುವುದಾಗಿ ಬಿಜೆಪಿಯ ಧುರೀಣ ರಾಮ್ ಮಾಧವ್ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಪಿಡಿಪಿ-ಬಿಜೆಪಿ ಮೈತ್ರಿ ಮುರಿದು ಬಿದ್ದ ಪರಿಣಾಮವಾಗಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಲೆಫ್ಟಿನೆಂಟ್ ಗವರ್ನರ್ ಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಇದರೊಂದಿಗೆ ಮೂರು ವರ್ಷಗಳ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರ ಪತನಗೊಂಡಿತು.  ಈ ನಡುವೆ ಪಿಡಿಪಿ ಜತೆಗೆ ಸೇರಿ ಸರಕಾರ ರಚನೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಸ್ಪಷ್ಟಪಡಿಸಿದರು.  ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚನೆಯಾದಾಗಲೇ ತಾನು ಇದು ಹಿಮಾಲಯನ್ ಬ್ಲಂಡರ್ ಎಂಬುದಾಗಿ ಎಚ್ಚರಿಸಿದ್ದೆ. ಬಿಜೆಪಿಗೆ ಈಗ ಅದು ಅರಿವಾಗಿದೆ ಎಂಬುದಾಗಿ ಎಂದು ಆಜಾದ್ ಪ್ರತಿಕ್ರಿಯಿಸಿದರು. ಪಿಡಿಪಿ-ಬಿಜೆಪಿ ಮೈತ್ರಿ ಒಂದು ಅಪವಿತ್ರ ಮೈತ್ರಿಯಾಗಿತ್ತು ಎಂದು ಅವರು ಹೇಳಿದರು.  ಒಟ್ಟು ೮೭ ವಿಧಾನಸಭೆಯ ಬಲಾಬಲದಲ್ಲಿ ಪಿಡಿಪಿ ೨೮ ಸ್ಥಾನ, ಬಿಜೆಪಿ ೨೫, ನ್ಯಾಷನಲ್ ಕಾನ್ಫರೆನ್ಷ್ ೧೫, ಕಾಂಗ್ರೆಸ್ ೧೨ ಹೊಂದಿದೆ. ಇತರರು ೭ ಸ್ಥಾನ ಹೊಂದಿದ್ದಾರೆ.  ಪಿಡಿಪಿಯ ಬಳಿಕ ಬಿಜೆಪಿ ರಾಜ್ಯದಲ್ಲಿ ಎರಡನೇ ದೊಡ್ಡ ಪಕ್ಷವಾಗಿದೆ.  ನವದೆಹಲಿಯಲ್ಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬೆಂಬಲ ವಾಪಸ್ ನಿರ್ಧಾರವನ್ನು ಪ್ರಕಟಿಸಿದ  ರಾಮ್ ಮಾಧವ್, ’ವರಿಷ್ಠ ನಾಯಕರ ಜತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಷ್ಟ್ರದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಮ್ ಮಾಧವ್ ತಿಳಿಸಿದರು. ೨೦೧೪ರ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಅಸ್ಥಿರವಾಗಿತ್ತು. ರಾಜ್ಯದಲ್ಲಿ ದೃಢತೆ ಮತ್ತು ಶಾಂತಿ ನೆಲೆಸಬೇಕು ಎಂಬ ಕಾರಣಕ್ಕಾಗಿ ನಾವು ಪಿಡಿಪಿ ಜೊತೆ ಮೈತ್ರಿ ಸರ್ಕಾರ ರಚಿಸಿದೆವು ಎಂದು ಅವರು ನುಡಿದರು.  ಆದರೆ ಈಗ ಮೈತ್ರಿಯನ್ನು ಮುಂದುವರೆಸಲಾಗದಷ್ಟು ಪರಿಸ್ಥಿತಿ ಕೈ ಮೀರಿದೆ. ಸರ್ಕಾರದಲ್ಲಿ ಭಾಗಿಯಾಗುವುದು ಸೂಕ್ತವಲ್ಲ ಎಂಬ ನಿರ್ಧಾರ ಕೈಗೊಂಡ ನಂತರ ಪಿಡಿಸಿಗೆ ನೀಡಿರುವ ಬೆಂಬಲವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಮೂಲ ತತ್ವಗಳಿಗೆ ಧಕ್ಕೆ ಆಗಬಾರದು ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆಗಳು ಸಮರ್ಥನೀಯವಾಗಿಲ್ಲ ಎಂಬುದು ಸ್ಪಷ್ಟವಾಗಿದ್ದು, ಬಳಿಕ ಮೈತ್ರಿಯಿಂದ ಹೊರಬರಲು ನಿರ್ಧರಿಸಲಾಗಿದೆ ಎಂದು ರಾಮ್ ಮಾಧವ್ ಹೇಳಿದರು.   ಪಕ್ಷದ ರಾಜ್ಯ ಘಟಕ ಮತ್ತು ಸಚಿವರ ಜೊತೆ ಸಮಾಲೋಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರೂ ಈ ನಿರ್ಧಾರದ ಪರವಾಗಿದ್ದಾರೆ ಎಂದು ನುಡಿದ ರಾಮ್ ಮಾಧವ್, ಸರ್ಕಾರದಲ್ಲಿ ಭಾಗಿಯಾಗಿದ್ದ ಬಿಜೆಪಿಯ ಎಲ್ಲ ಸಚಿವರು ರಾಜೀನಾಮೆ ಸಲ್ಲಿಸಲಿದ್ದಾರೆ. ನಂತರ ಲೆಫ್ಟಿನೆಂಟ್ ಗವರ್ನರ್ ಕೈಗೆ ಆಡಳಿತ ಸೂತ್ರ ವಹಿಸುವುದು ಸೂಕ್ತ ಎಂಬುದು ಪಕ್ಷದ ಅಭಿಪ್ರಾಯ ಎಂದು ನುಡಿದರು.  ಈ ಮಧ್ಯೆ ಪಕ್ಷದ ಸದಸ್ಯರ ಜೊತೆ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ ಮೆಹಬೂಬಾ ಮುಫ್ತಿ ಅವರು ಬೇರೆ ಯಾವುದೇ ಪಕ್ಷದ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ನಡೆಸುವ ಸಾಧ್ಯತೆಗಳಿಲ್ಲ ಎಂಬುದಾಗಿ ಲೆಫ್ಟಿನೆಂಟ್ ಗವರ್ನರ್‌ಗೆ ತಿಳಿಸಿದರು. ‘ನಾವು ಅಧಿಕಾರಕ್ಕಾಗಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರಲಿಲ್ಲ ’ ಎಂದು ಹೇಳಿದ ಅವರು ’ಸಂವಿಧಾನದ ೩೭೦ ಮತ್ತು ೩೫ಎ ವಿಧಿಗಳನ್ನು ನಾವು ಸಂರಕ್ಷಿಸಿದ್ದೇವೆ. ನಾವು ಜಮ್ಮು ಮತ್ತು ಕಾಶ್ಮೀರವನ್ನು ವೈರಿ ರಾಷ್ಟ್ರದಂತೆ ಕಾಣಬಾರದು ; ಎಂದು ಅವರು ಹೇಳಿದರು.

2018: ನವದೆಹಲಿ: ವಿಜಯ್ ಮಲ್ಯ ಸ್ವಾಮ್ಯದ ಕಿಂಗ್ ಫಿಶರ್ ನ ನೌಕರರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದು, ’ಮಲ್ಯ ಕೈಗಳು ರಕ್ತ ಸಿಕ್ತವಾಗಿರುವ ಕಾರಣ ತತ್ ಕ್ಷಣ ಅವರನ್ನು ದೇಶಕ್ಕೆ ವಾಪಸ್ ಕರೆತನ್ನಿ ಎಂದು ಸರ್ಕಾರವನ್ನು ಆಗ್ರಹಿಸಿದರು.  ‘ನಾವು ನಿಮ್ಮ ವಿದೇಶಾಂಗ ನೀತಿಯನ್ನು ಮೆಚ್ಚುತ್ತೇವೆ ಮತ್ತು ನಿಮ್ಮ ನಾಯಕತ್ವದಲ್ಲಿ ಭಾರತದ ವರ್ಚಸ್ಸು ಅಗಾಧವಾಗಿ ಬೆಳೆದಿರುವುದಕ್ಕೆ ಹೆಮ್ಮೆ ಪಡುತ್ತೇವೆ. ವೇತನ ಪಾವತಿ ಮಾಡದೇ ಇರುವುದನ್ನು ಇಂಗ್ಲೆಂಡಿನಲ್ಲಿ ಗಂಭೀರವಾದ ಅಪರಾಧ ಎಂಬುದಾಗಿ ಪರಿಗಣಿಸಲಾಗುತ್ತದೆ ಅದೂ,  ನೌಕರನೊಬ್ಬನ ಪತ್ನಿ ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವಾಗ  ಇದರ ಗಂಭೀರತೆ ಇನ್ನೂ ಹೆಚ್ಚು. ವಿಜಯ್ ಮಲ್ಯ ಗಡೀಪಾರಿಗೆ ಇದೊಂದೇ ಕಾರಣ ಸಾಕು. ಈವರೆಗೂ ಇದನ್ನು ಏಕೆ ಮಾಡಲಾಗಿಲ್ಲ ಎಂದು ನಾವು ಅಚ್ಚರಿ ಪಡುತ್ತಿದ್ದೇವೆ ಎಂದು ಕಿಂಗ್ ಫಿಶರ್ ನೌಕರರು ಮಂಗಳವಾರ ಬರೆದ ಪತ್ರದಲ್ಲಿ ತಿಳಿಸಿದರು.  ‘ಈಗ ನ್ಯಾಯಾಲಯಗಳೂ ನ್ಯಾಯ ಒದಗಿಸುತ್ತಿಲ್ಲ. ಸಾಮಾನ್ಯ ಜನರನ್ನು ಹಿಂಸಿಸುತ್ತಿವೆ ಎಂದು ಅವರು ಹೇಳಿದರು.   ‘ವ್ಯವಸ್ಥೆ ಕುಸಿದು ಬಿದ್ದಿದೆ. ನಾವು ಕಂಬದಿಂದ ಕಂಬಕ್ಕೆ ಸುತ್ತುತ್ತಿದ್ದೇವೆ. ಆದರೂ ನಮಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಮಲ್ಯ ಅವರು ಪಾವತಿ ಮಾಡದ ಆದಾಯ ತೆರಿಗೆಗಾಗಿ ಇನ್ನೂ ನೋಟಿಸ್ ಜಾರಿಯಾಗಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದರು. ವೈಯಕ್ತಿಕ ಮಾತುಕತೆಯ ಸಂದರ್ಭದಲ್ಲಿ ಮಲ್ಯ ಅವರು ಬ್ಯಾಂಕುಗಳೂ ಶೇಕಡಾ ೫ಕ್ಕಿಂತ ಹೆಚ್ಚಿನ ಸಾಲವನ್ನು ವಸೂಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದರರ್ಥ ದೊಡ್ಡ ಕುಳಗಳು ಅವರಿಗೆ ನೆರವಾಗುತ್ತಿವೆ ಎಂದು. ದಯವಿಟ್ಟು ಈ ಸಂಪರ್ಕವನ್ನು ತುಂಡರಿಸಿ ಮತ್ತು ತಪ್ಪಿತಸ್ಥರನ್ನು ಕಾನೂನು ವ್ಯಾಪ್ತಿಗೆ ತನ್ನಿ ಎಂದು ಪತ್ರ ಹೇಳಿತು.  ಅತ್ಯಂತ  ಹೆಚ್ಚು ಆದಾಯ ತೆರಿಗೆ ಪಾವತಿ ಮಾಡಿದರೂ, ಯಾವುದೇ ಸವಲತ್ತುಗಳನ್ನು ಗಳಿಸದ ವೇತನ ವರ್ಗದವರಿಗಾಗಿ ಏನಾದರೂ ಮಾಡುವ ಮೂಲಕ ’ಇತಿಹಾಸ ನಿರ್ಮಿಸಿ ಎಂದು ಸರ್ಕಾರವನ್ನು ಆಗ್ರಹಿಸಿದ ಪತ್ರ, ’ಬ್ಯಾಂಕುಗಳಿಗೆ ಬರಬೇಕಾದ ಬಾಕಿಗಿಂತಲೂ ನೌಕರರಿಗೆ ಬರಬೇಕಾದ ಬಾಕಿ ವಸೂಲಿಗೆ ಆದ್ಯತೆ ಇರಬೇಕಾಗಿತ್ತು. ಬ್ಯಾಂಕುಗಳು ಸಂಸ್ಥೆಗಳು, ಆದರೆ ನಾವು ವ್ಯಕ್ತಿಗಳು. ನಾವು ದುಪ್ಪಟ್ಟು ತೊಂದರೆಗಳಿಂದ ನರಳುತ್ತಿದ್ದೇವೆ. ನಾವು ಆದಾಯ ತೆರಿಗೆ ಪಾವತಿ ಮಾಡುತ್ತೇವೆ. ಅದನ್ನು ಮಲ್ಯ, ನೀರವ್ ಮೋದಿಯಂತಹ ಜನರು ಲೂಟಿ ಮಾಡುತ್ತಾರೆ. ನಮ್ಮ ವೇತನಕ್ಕೆ ಯಾವುದೇ ಭದ್ರತೆಯೂ ಇಲ್ಲ ಎಂದು ನೌಕರರು ದೂರಿದರು. ಜಾರಿ ನಿರ್ದೇಶನಾಲಯವು ವಿಜಯ್ ಮಲ್ಯ ಮತ್ತು ಅವರ ಎರಡು ಸಂಸ್ಥೆಗಳ ವಿರುದ್ಧ ೩,೭೦೦ ಕೋಟಿ ರೂಪಾಯಿ ಬ್ಯಾಂಕ್ ಹಣವನ್ನು ಇಂಗ್ಲೆಂಡ್ ಮೂಲದ ಎಫ್ ೧ ಮೋಟಾರ್ ಸ್ಪೋರ್ಟ್ ಕಂಪೆನಿಗೆ ಟ೨೦ ತಂಡಕ್ಕೆ ಖಾಸಗಿ ಜೆಟ್ ಸವಲತ್ತುಗಳನ್ನು ಪಡೆಯುವುದಕ್ಕಾಗಿ ವರ್ಗಾವಣೆ ಮಾಡಿತು ಎಂದು ಆಪಾದಿಸಿ ಜಾರಿ ನಿರ್ದೇಶನಾಲಯ ಸೋಮವಾರ ಆಪಾದಿಸಿದ ಒಂದು ದಿನದ ಬಳಿಕ ನೌಕರರು ಈ ಪತ್ರವನ್ನು ಬರೆದರು.  ಜಾರಿ ನಿರ್ದೇಶನಾಲಯವು ಸೋಮವಾರ ಮಲ್ಯ ಮತ್ತು ಅವರ ಸಂಸ್ಥೆಗಳ ವಿರುದ್ಧ ಹೊಸದಾಗಿ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದು, ಇದು ಮಲ್ಯ ಅವರನ್ನು ’ದೇಶಭ್ರಷ್ಟ ಎಂಬುದಾಗಿ ಭಾರತದ ಹೊಸ ಕಾಯ್ದೆಯ ಅಡಿಯಲ್ಲಿ ಘೋಷಿಸಲು ಅನುವು ಮಾಡಿಕೊಡುವ ಸಾಧ್ಯತೆ ಇದೆ. 

2009: ಐವರು ಪ್ರಯಾಣಿಕರು ಮತ್ತು ಯುದ್ಧ ಸಾಮಗ್ರಿ ಇದ್ದ ರಷ್ಯಾದ ಸೇನಾ ಕಾರ್ಗೊ ಎಎನ್-124 ವಿಮಾನವೊಂದು ಈದಿನ ರಾತ್ರಿ ಪಾಕಿಸ್ಥಾನದ ಮೂಲಕ ಭಾರತದ ವಾಯುಗಡಿಯನ್ನು ಉಲ್ಲಂಘಿಸಿ ಒಳಪ್ರವೇಶಿಸಿತು. ಸೂಕ್ತ ಮುನ್ಸೂಚನೆ ಇಲ್ಲದೆ ವಾಯು ಗಡಿ ಉಲ್ಲಂಘಿಸಿದ್ದರಿಂದ ಭಾರತದ ವಾಯುಪಡೆ ವಿಮಾನಗಳು ರಷ್ಯಾ ವಿಮಾನವನ್ನು ಸುತ್ತುವರಿದು ಅದನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಿದವು.

2009: 'ಶಸ್ತ್ರಾಸ್ತ್ರ ತ್ಯಜಿಸಿ ಮಾತುಕತೆಗೆ ಬನ್ನಿ' ಎಂಬ ಕೇಂದ್ರ ಸರ್ಕಾರದ ಕರೆಯನ್ನು ಧಿಕ್ಕರಿಸಿ, ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಲಾಲ್‌ಗಡ ಪ್ರದೇಶವನ್ನು ನಕ್ಸಲೀಯರು ನಿಯಂತ್ರಣಕ್ಕೆ ತೆಗೆದುಕೊಂಡು, ಅದನ್ನು 'ವಿಮೋಚನಾ ವಲಯ' ಎಂದು ಘೋಷಿಸಿದರು. ಸ್ಥಳೀಯ ಬುಡಕಟ್ಟು ಜನರ ಪ್ರಬಲ ಬೆಂಬಲದೊಂದಿಗೆ ಹೋರಾಟಕ್ಕೆ ಇಳಿದ ನಕ್ಸಲೀಯರು ಹಾಗೂ ಅವರನ್ನು ಹಿಮ್ಮೆಟ್ಟಿಸಲು ಹೊರಟ ಅರೆಸೇನಾ ಪಡೆಗಳಿಂದಾಗಿ ಲಾಲ್‌ಗಢದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಬಂಡುಕೋರರ ಪ್ರಾಬಲ್ಯವನ್ನು ಶತಾಯಗತಾಯ ಬಗ್ಗುಬಡಿಯಲು ನಿರ್ಧರಿಸಿದ ಪಡೆಗಳು, ರಾಜ್ಯ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದವು.

2009: ತ್ವರಿತ ಹಾಗೂ ಪಾರದರ್ಶಕ ತನಿಖೆಗಾಗಿ ದೇಶದ ಎಲ್ಲಾ ಪೊಲೀಸ್ ಠಾಣೆಗಳ ಮಧ್ಯೆ ಸಂಪರ್ಕ ಏರ್ಪಡಿಸುವ 2000 ಕೋಟಿ ರೂಪಾಯಿಗಳ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅಪರಾಧ ಮತ್ತು ಅಪರಾಧಿಗಳ ಜಾಡಿನ ಜಾಲ ಮತ್ತು ವ್ಯವಸ್ಥೆಯನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಜಾರಿ ಮಾಡಲಾಗುತ್ತಿದೆ. 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಈ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರ ಜಾರಿಗೆ ಪ್ರಧಾನಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಒಪ್ಪಿಗೆ ನೀಡಿದೆ. ಇ-ಆಡಳಿತದ ಮೂಲಕ ಎಲ್ಲಾ ಪೊಲೀಸ್ ಠಾಣೆಗಳ ಮಧ್ಯೆ ಸಂಪರ್ಕ ಏರ್ಪಡಿಸುವುದೇ ಈ ಯೋಜನೆಯ ಉದ್ದೇಶ ಎಂದು ಗೃಹ ಸಚಿವ ಪಿ. ಚಿದಂಬರಂ ತಿಳಿಸಿದರು.

2009: ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್ (88) ಅವರು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದ ತಮ್ಮ ಸಂಗೀತ ಶಾಲೆಯಲ್ಲಿ ಈದಿನ ಬೆಳಗ್ಗೆ ನಿಧನರಾದರು. ಅವರು ಪತ್ನಿ ಮೇರಿ, ಮೂವರು ಪುತ್ರರು, ಒಬ್ಬ ಪುತ್ರಿ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದರು. ಕಳೆದ ನಾಲ್ಕು ವರ್ಷಗಳಿಂದ ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ನಾಲ್ಕು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಭಾರತೀಯ ಸಂಗೀತದ ಪ್ರಚಾರಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಮುಂತಾಗಿ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ಅವರ ತಂದೆ ಪದ್ಮ ವಿಭೂಷಣ, ಆಚಾರ್ಯ ಡಾ.ಅಲ್ಲಾವುದ್ದೀನ್ ಖಾನ್ ಅವರೂ 'ಉತ್ತರ ಭಾರತದ ಈ ಶತಮಾನದ ಶ್ರೇಷ್ಠ ಸಂಗೀತ ತಜ್ಞ' ಎಂಬ ಹೆಸರು ಗಳಿಸಿದ್ದರು. ಕಳೆದ ಐದು ದಶಕಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಬಹುದೊಡ್ಡ ಹೆಸರಾಗಿದ್ದ ಅಲಿ ಅಕ್ಬರ್ ಖಾನ್, ಕರ್ನಾಟಕದ ರಾಜೀವ್ ತಾರಾನಾಥ್ ಸೇರಿದಂತೆ ಅನೇಕ ಶಿಷ್ಯಂದಿರನ್ನು ಹೊಂದಿದ್ದರು. 1922ರಲ್ಲಿ ಪೂರ್ವ ಬಂಗಾಳದ ಕೊಮಿಲಾ ಜಿಲ್ಲೆಯ ಶಿವಪುರದಲ್ಲಿ (ಈಗಿನ ಬಾಂಗ್ಲಾದೇಶ) ಹುಟ್ಟಿದ ಅವರು ಮೂರರ ಎಳೆ ವಯಸ್ಸಿನಲ್ಲೇ ತಂದೆಯಿಂದ ಹಿಂದುಸ್ಥಾನಿ ಗಾಯನ ಮತ್ತು  ಚಿಕ್ಕಪ್ಪ ಫಕೀರ್ ಅಫ್ತಾಬುದ್ದಿನರಿಂದ ಡ್ರಂ ಬಾರಿಸುವುದನ್ನು ಕಲಿತರು. ತಂದೆಯಿಂದಲೇ ಇತರ ವಾದ್ಯಗಳನ್ನು ನುಡಿಸುವುದನ್ನೂ ಅಭ್ಯಾಸ ಮಾಡಿದರು. ಆದರೆ ಬಳಿಕ ಅವರ ಒಲವು ಸಿತಾರ್‌ನತ್ತ ಹೆಚ್ಚು ಕೇಂದ್ರೀಕೃತವಾಯಿತು. 25 ತಂತಿಗಳ ಸರೋದ್ ನುಡಿಸುವುದರಲ್ಲಿ ಹೊಂದಿದ ಪರಿಣತಿಯಿಂದಾಗಿ ಜಗತ್ತಿನಾದ್ಯಂತ ಸಂಗೀತ ವಲಯದಲ್ಲಿ ಅವರ ಖ್ಯಾತಿ ಹಬ್ಬಿತ್ತು. ಕ್ಯಾಲಿಫೋರ್ನಿಯಾದಲ್ಲಿಯೇ ನೆಲೆಸಿದ ಬಳಿಕ ಅಮೆರಿಕ ಸಹಿತ ಪಾಶ್ಚಿಮಾತ್ಯ ದೇಶಗಳಲ್ಲಿ ಅವರ ಕಛೇರಿಗಳು ತುಂಬ ಜನಪ್ರಿಯವಾಗಿದ್ದವು. ಅಲ್ಲಿಯೇ ಸಂಗೀತ ಶಾಲೆಯನ್ನು ನಡೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ಅವರು ಗುರುಗಳಾಗಿದ್ದರು. ಜಗದ್ವಿಖ್ಯಾತ ವಯಲಿನ್ ವಾದಕ ಯೆಹುದಿ ಮೆನುಹಿನ್ ಇವರ ಸಿತಾರ್ ವಾದನದಿಂದ ಪ್ರಭಾವಿತರಾಗಿ 'ಜಗತ್ತಿನ ಅತಿ ಶ್ರೇಷ್ಠ ಸಂಗೀತಗಾರ' ಎಂದು ಕರೆದಿದ್ದರು. 1991ರಲ್ಲಿ ಮೆಕಾರ್ಥರ್ ಫೌಂಡೇಷನ್ನಿನ ಫೆಲೊಶಿಪ್ ಪಡೆದ ಮೊದಲ ಭಾರತೀಯ ಅವರು. 1970ರಿಂದ 1998ರ ಮಧ್ಯೆ ಐದು ಸಲ ಅವರು ಗ್ರಾಮಿ ಪ್ರಶಸ್ತಿಗೆ ನಾಮಕರಣ ಹೊಂದಿದ್ದರು. 13ರ ಹರೆಯದಲ್ಲಿ ಅಲಹಾಬಾದಿನಲ್ಲಿ ಮೊದಲ ಕಛೇರಿ ನೀಡುವ ಮೂಲಕ ಸುದ್ದಿ ಮಾಡಿದ ಅವರು, 20ರ ಹರೆಯದಲ್ಲಿ ಮೊದಲ ಗ್ರಾಮಾಫೋನ್ ರೆಕಾರ್ಡಿಂಗ್ (ಎಚ್‌ಎಂವಿ) ಮಾಡಿದ್ದರು. ಮರುವರ್ಷ ಜೋಧ್‌ಪುರದ ಮಹಾರಾಜರ ಆಸ್ಥಾನ ಸಂಗೀತಗಾರರಾಗಿಯೂ ನೇಮಕಗೊಂಡಿದ್ದರು. ಏಳು ವರ್ಷ ಕಾಲ ಅಲ್ಲಿದ್ದಾಗ  ಅವರಿಗೆ ಉಸ್ತಾದ್ ಸಹಿತ ಹಲವು ಬಿರುದುಗಳು ಲಭಿಸಿದವು. ಸುಮಾರು 20 ವರ್ಷಗಳ ಕಾಲ ಪ್ರತಿದಿನ 18 ಗಂಟೆಗಳ ಅಭ್ಯಾಸ ಮಾಡಿದ ಅವರು, 1972ರಲ್ಲಿ ತಂದೆಯವರು ತೀರಿಕೊಂಡ ಬಳಿಕ ಅವರ ಘರಾಣಾ ಪರಂಪರೆಯನ್ನೇ ಮುಂದುವರಿಸಿದರು. ಅವರ ತಂದೆ ರಾಂಪುರ ಮತ್ತು ಮೈಹರ್‌ನ ಬಾಬಾ ಅಲ್ಲಾವುದ್ದೀನ್ ಸೇನಿ ಘರಾಣಾಕ್ಕೆ ಸೇರಿದವರು. 1955ರಲ್ಲಿ ಜಾಗತಿಕ ವಯೋಲಿನ್ ಮಾಂತ್ರಿಕ ಯೆಹುದಿ ಮೆನುಹಿನ್ ಮನವಿಯ ಮೇರೆಗೆ ಅಮೆರಿಕಕ್ಕೆ ಭೇಟಿ ನೀಡಿದ ಖಾನ್, ನ್ಯೂಯಾರ್ಕಿನ ಮಾಡರ್ನ್ ಆರ್ಟ್ ಮ್ಯೂಸಿಯಂನಲ್ಲಿ  ಕಛೇರಿ  ನೀಡಿ ಜಗದ್ವಿಖ್ಯಾತರಾದರು. ಭಾರತೀಯ ಶಾಸ್ತ್ರೀಯ ಸಂಗೀತದ ಮೊದಲ ಪಾಶ್ಚಿಮಾತ್ಯ ಎಲ್‌ಪಿ ರೆಕಾರ್ಡಿಂಗ್ ಮಾಡಿದ ದಾಖಲೆಯೂ ಅವರ  ಹೆಸರಲ್ಲಿದೆ. ಅಲ್ಲಿನ ಟೆಲಿವಿಷನ್‌ಗಳಲ್ಲೂ ಕಾರ್ಯಕ್ರಮ ನೀಡಿದ ಮೊದಲ ಭಾರತೀಯರು. 1956ರಲ್ಲಿ  ಕೋಲ್ಕತದಲ್ಲಿ ಅಲಿ ಅಕ್ಬರ್ ಕಾಲೇಜ್ ಆಫ್ ಮ್ಯೂಸಿಯಂ ಸ್ಥಾಪಿಸಿದ ಅವರು,  1967ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಸಂಗೀತ ಶಾಲೆ ಸ್ಥಾಪಿಸಿದರು. ಅಲ್ಲಿನ  ಸಂಗೀತ ಶಾಲೆಯಲ್ಲಿ ಪಾಶ್ಚಿಮಾತ್ಯ ದೇಶಗಳ ನೂರಾರು ವಿದ್ಯಾರ್ಥಿಗಳಿದ್ದರು. ಸ್ವಿಜರ್ಲೆಂಡಿನಲ್ಲೂ ಅವರ ಶಾಲೆಯ ಶಾಖೆ ಆರಂಭವಾಗಿತ್ತು. ಆಸ್ಟ್ರೇಲಿಯಾ, ಲಂಡನ್‌ಗಳಲ್ಲೂ ಅವರು ಜನಪ್ರಿಯರಾಗಿ ಜನಪ್ರಿಯರಾಗಿದ್ದರು.

2009: ಉಪ್ಪಿನಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗೆ ಜ್ವರ ಕಾಣಿಸಿಕೊಂಡು, ನೆಕ್ಕಿಲಾಡಿ ಗ್ರಾಮದ ಬೋಳಂತಿಲ ನಿವಾಸಿ ಜೆಸಿಂತಾ ರೆಬೆಲ್ಲೋ (38) ಮೃತರಾದರು.

2009: ಆಂಗ್ಲಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಂತೆ ಕಳೆದ ಏಪ್ರಿಲ್ 6ರಂದು ಏಕ ಸದಸ್ಯ ಪೀಠ ನೀಡಿರುವ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನು ಹೈಕೋರ್ಟಿನ ವಿಭಾಗೀಯ ಪೀಠ ತಿರಸ್ಕರಿಸಿತು. ಮುಖ್ಯನ್ಯಾಯಮೂರ್ತಿ ಪಿ.ಡಿ. ದಿನಕರನ್ ಮತ್ತು ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೀಡಿರುವ ಆದೇಶದಿಂದಾಗಿ ಸರ್ಕಾರಕ್ಕೆ ಹಿನ್ನಡೆಯಾಯಿತು.

2009: ಶಿಕ್ಷಣದ ಸುಧಾರಣೆಗಾಗಿ ರಾಷ್ಟ್ರೀಯ ಜ್ಞಾನ ಆಯೋಗ ಮಾಡಿರುವ ಶಿಫಾರಸುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನೀಲನಕ್ಷೆಯನ್ನು ಮೊದಲು ಬಿಡುಗಡೆ ಮಾಡಿರುವ ಹೆಗ್ಗಳಿಕೆಗೆ ದೆಹಲಿ ರಾಜ್ಯ ಪಾತ್ರವಾಯಿತು. ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ದೆಹಲಿ ವಿಧಾನಸಭೆಯಲ್ಲಿ  ದಾಖಲೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದರು.

2009: ವಿಶ್ವದ ಅತ್ಯಂತ ಹಿರಿಯ ತೊಮೊಜಿ ತನಬೆ ಹೃದಯ ವೈಫಲ್ಯದಿಂದ ದಕ್ಷಿಣ ಜಪಾನಿನಲ್ಲಿ ನಿಧನ ಹೊಂದಿದರು. ಅವರಿಗೆ 113ವರ್ಷ ವಯಸ್ಸಾಗಿತ್ತು. ಜನವರಿ 2007ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ತನಬೆಯನ್ನು ವಿಶ್ವದ ಅತ್ಯಂತ ಹಿರಿಯ ಎಂದು ದಾಖಲಿಸಲಾಗಿತ್ತು. ಮೇ ತಿಂಗಳಲ್ಲಿ ಅಸ್ವಸ್ಥರಾಗಿದ್ದ ಅವರು ಆನಂತರ ಚೇತರಿಸಿಕೊಂಡಿರಲಿಲ್ಲ. ತನಬೆ ಬೆಳಿಗ್ಗೆ 5.30ಕ್ಕೆ ಎದ್ದು ಉಪಹಾರ ಸೇವಿಸುವ ಮುನ್ನ ಪತ್ರಿಕೆ  ಓದುತ್ತಿದ್ದರು. ದಿನಕ್ಕೆ ಮೂರು ಸಲ ಊಟ ಸೇವಿಸುತ್ತಿದ್ದ ಅವರು ಮಧ್ಯಾಹ್ನದ ಒಂದು ಲೋಟ ಹಾಲು ಕುಡಿಯುತ್ತಿದ್ದರು. ತಮ್ಮ ದೀರ್ಘ ಆಯಸ್ಸಿನ ಗುಟ್ಟು 'ಕುಡಿತದಿಂದ ಹಾಗೂ ಧೂಮಪಾನದಿಂದ ದೂರವಿರುವುದು' ಎಂದು ಹೇಳುತ್ತಿದ್ದರು. ಸಾವಿಗೆ ಮುಂಚೆ ಅವರು ತಮ್ಮ ಎಂಟು ಮಕ್ಕಳ ಪೈಕಿ ಒಬ್ಬ ಮಗ ಹಾಗೂ ಸೊಸೆಯೊಂದಿಗೆ ಇದ್ದರು. ಈಗಿನ ಹೊಸ ಅತ್ಯಂತ ಹಿರಿಯ ಜಪಾನಿನ ವ್ಯಕ್ತಿ ಪಶ್ವಿಮ ಕ್ಯೊಟೊ ಪ್ರಾಂತ್ಯದಲ್ಲಿ ಇದ್ದು ಆತನ ವಯಸ್ಸು 112. ಅತ್ಯಂತ ಹಿರಿಯ ಮಹಿಳೆ ದಕ್ಷಿಣ ಓಕಿನಾವಾದಲ್ಲಿದ್ದು ಆಕೆಗೆ 114 ವರ್ಷ. ಸರ್ಕಾರ ನೀಡಿರುವ ಅಂಕಿಅಂಶದ ಪ್ರಕಾರ  ಜಪಾನಿನಲ್ಲಿ ನೂರು ವರ್ಷ ತುಂಬಿದವರ ಸಂಖ್ಯೆ ಅಕ್ಟೋಬರಿನಲ್ಲಿ 41,000ಕ್ಕೆ ತಲುಪಿದೆ. ಜಪಾನಿನಲ್ಲಿ ಜನರ ಸರಾಸರಿ ಆಯಸ್ಸು 85 ವರ್ಷವಾಗಿದ್ದು ಇದು ವಿಶ್ವದಲ್ಲೇ ಅತಿಹೆಚ್ಚು ಎನ್ನಲಾಯಿತು.

2009: ಪಕ್ಷದೊಳಗಿನ ಭಿನ್ನಮತೀಯರ ಒತ್ತಡಕ್ಕೆ ಮಣಿದು ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ ರಾವ್ ರಾಜೀನಾಮೆ ನೀಡಿದರು. ಮಾಜಿ ಕೇಂದ್ರ ಸಚಿವರೂ ಆದ ಅವರು ತಮ್ಮ ರಾಜೀನಾಮೆ ಪತ್ರವನ್ನು ಈದಿನ ಸಂಜೆ ಪಕ್ಷದ ಕೇಂದ್ರ ಕಚೇರಿ ತೆಲಂಗಾಣ ಭವನಕ್ಕೆ ಕಳುಹಿಸಿಕೊಟ್ಟರು. ಇತ್ತೀಚೆಗೆ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದ ಕಾರಣ ಅವರ ರಾಜೀನಾಮೆಗೆ ಪಕ್ಷದಲ್ಲಿ ಒತ್ತಡ ಹೆಚ್ಚಾಗಿತ್ತು.

2008: ಕನ್ನಡದ ಹೆಸರಾಂತ ಹಿರಿಯ ನಟಿ ಬಿ.ಸರೋಜಾದೇವಿ, ಗಾನಕೋಗಿಲೆ ಲತಾ ಮಂಗೇಶ್ಕರ್, ನಟ ದಿಲೀಪ್ ಕುಮಾರ್ ಹಾಗೂ ನಿರ್ದೇಶಕ ತಪನ್ ಸಿನ್ಹಾ ಅವರನ್ನು ಕೇಂದ್ರ ಸರ್ಕಾರವು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿತು. 60ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಇವರನ್ನು ಈ ಪ್ರಶಸ್ತಿಗೆ  ಆಯ್ಕೆ ಮಾಡಲಾಯಿತು.

2007: ತನ್ನ ಅತ್ಯುನ್ನತ ಪ್ರಶಸ್ತಿ `ಆಫೀಸರ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಗೆ ಹಿಂದಿ ನಟ ಶಾರುಖ್ ಖಾನ್ ಅವರನ್ನು ಫ್ರಾನ್ಸ್ ಆಯ್ಕೆ ಮಾಡಿತು. ಹಿಂದಿ ಸಿನಿಮಾ ರಂಗಕ್ಕೆ ಮತ್ತು ಭಾರತ- ಫ್ರಾನ್ಸ್ ಸಹಕಾರ ವರ್ಧನೆಗೆ ಶಾರುಖ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಯಿತು.

2007: ಅಟ್ಲಾಂಟಿಸ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಧಕ್ಕೆಯಿಂದ ಕಳಚಿಕೊಂಡು ಭೂಮಿಯತ್ತ ಪ್ರಯಾಣ ಬೆಳೆಸಿತು. `ಐಎಸ್ಎಸ್' ನಲ್ಲಿ ಆರು ತಿಂಗಳು ತಂಗಿದ್ದ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್ ಸೇರಿದಂತೆ 7 ಗಗನ ಯಾತ್ರಿಗಳು ಅಟ್ಲಾಂಟಿಸ್ ನೌಕೆಯಲ್ಲಿ ಭೂಮಿಯತ್ತ ಹೊರಟರು. ಏಳು ಗಗನಯಾತ್ರಿಗಳನ್ನು ಹೊತ್ತು ಜೂನ್ 8ರಂದು ಅಂತರಿಕ್ಷದತ್ತ ಪ್ರಯಾಣ ಬೆಳೆಸಿದ್ದ ಅಟ್ಲಾಂಟಿಸ್ ಜೂನ್ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು. `ಐಎಸ್ಎಸ್' ನಲ್ಲಿ ಸುನೀತಾ ಬದಲಿಗೆ ಕಾರ್ಯನಿರ್ವಹಿಸಲು ನಿಯೋಜಿತರಾಗಿದ್ದ ಕ್ಲೆಟನ್ ಅಂಡರ್ ಸನ್ ಸಹ ಇದರಲ್ಲಿ ಪಯಣಿಸಿದ್ದರು.

2007: ಯುದ್ಧಾ ನಂತರ ಇರಾಕಿನ `ಸುರಕ್ಷಿತ ವಲಯ'ದಲ್ಲಿ ಕಂಡು ಬರುತ್ತಿರುವ ದಿನ ನಿತ್ಯದ ಜನಜೀವನದ ಬಗ್ಗೆ ಅನಿವಾಸಿ ಭಾರತೀಯ ರಾಜೀವ್ ಚಂದ್ರಶೇಖರ್ ರಚಿಸಿರುವ `ಇಂಪೀರಿಯಲ್ ಲೈಫ್ ಇನ್ ದ ಎಮೆರಾಲ್ಡ್ ಸಿಟಿ' (ಹವಳದ ನಗರದಲ್ಲಿನ ಭವ್ಯ ಬದುಕು) ಕೃತಿ, ಕಥೆಯೇತರ ವಿಭಾಗದಲ್ಲಿ ಬ್ರಿಟನ್ನಿನ ಅತ್ಯುನ್ನತ ಪ್ರಶಸ್ತಿಯಾದ `ಬಿಬಿಸಿ ಫೋರ್ ಸ್ಯಾಮ್ಯುಯೆಲ್ ಜಾನ್ಸನ್ ಪ್ರಶಸ್ತಿಗೆ ಆಯ್ಕೆಯಾಯಿತು. `ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ಬಾಗ್ದಾದ್ ಬ್ಯೂರೊದ ಮಾಜಿ ಮುಖ್ಯಸ್ಥ ಚಂದ್ರಶೇಖರ್, ರಕ್ಷಿತ ವಲಯದಲ್ಲಿ ಅಮೆರಿಕನ್ನರ ಗೂಡಿನೊಳಗಿನ ಬದುಕು ಮತ್ತು ರಕ್ಷಿತ ವಲಯದ ಆಚೆ ಇರಾಕ್ ಜನತೆಯ ಗೊಂದಲ, ಅರಾಜಕತೆಯ ಬದುಕನ್ನು ಇಲ್ಲಿ ಚಿತ್ರಿಸಿದ್ದಾರೆ. ಸದ್ದಾಂ ಹುಸೇನ್ ಅವರನ್ನು 2003ರಲ್ಲಿ ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಇರಾಕಿನಲ್ಲಿ ಆಡಳಿತ ನಡೆಸಿದ  ಸರ್ಕಾರದ ವೈಫಲ್ಯಗಳನ್ನೂ ಈ ಕೃತಿಯಲ್ಲಿ ಪಟ್ಟಿ ಮಾಡಲಾಗಿದೆ. 18ನೇ ಶತಮಾನದ ನಿಘಂಟು ರಚನೆಕಾರ ಮತ್ತು ಪ್ರಬಂಧ ರಚನೆಕಾರ ಸ್ಯಾಮುಯೆಲ್ ಜಾನ್ಸನ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಪ್ರಚಲಿತ ವಿದ್ಯಮಾನ, ಇತಿಹಾಸ, ರಾಜಕೀಯ, ವಿಜ್ಞಾನ, ಕ್ರೀಡೆ, ಪ್ರವಾಸ, ಜೀವನಚರಿತ್ರೆ ವಿಭಾಗದಲ್ಲಿನ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ನೀಡಲಾಗುತ್ತಿದೆ. ಪ್ರಶಸ್ತಿ 30 ಸಾವಿರ ಪೌಂಡ್ ನಗದು ಹೊಂದಿದೆ.

 2007: ಸಿಂಗೂರು ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಆರ್ಥಿಕ ಪುನರ್ ವಸತಿ ಕಲ್ಪಿಸುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿತು. ಇದೇ ವೇಳೆ, ಭೂಮಿ ನೀಡಲು ಇಚ್ಛಿಸದ ರೈತರ ಜಮೀನನ್ನು ಮರಳಿ ನೀಡಬೇಕೆನ್ನುವ ತೃಣಮೂಲ ಕಾಂಗ್ರೆಸ್ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತು. ಈಗ ನೀಡಲಾಗುವ ಆರ್ಥಿಕ ಪುನರ್ ವಸತಿ ಪ್ಯಾಕೇಜ್ನಡಿ ಯೋಜನೆಯ ನಿರಾಶ್ರಿತರಿಗೆ ಕೆಲವು ತರಬೇತಿಗಳನ್ನು ಆರಂಭಿಸಲಾಗುವುದು ಮತ್ತು ಟಾಟಾ ಮೋಟಾರ್ಸ್ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ರಾಜ್ಯದ ಕೈಗಾರಿಕಾ ಸಚಿವ ನಿರುಪಮ್ ಸೇನ್ ವಿವರಿಸಿದರು.

 2007: ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ (66) ಈದಿನ ಬೆಳಿಗ್ಗೆ ಸುಮಾರು 5 ಗಂಟೆಗೆ ಮೈಸೂರಿನಲ್ಲಿ ನಿಧನರಾದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು 20 ದಿನಗಳ ಹಿಂದಷ್ಟೇ ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಅವರು, ಈದಿನ ಬೆಳಗಿನ ಜಾವ ತೀವ್ರ ಸುಸ್ತಿನ ಬಳಿಕ ಕೊನೆಯುಸಿರೆಳೆದರು. ಲೇಖಕಿಯೂ ಆಗಿರುವ ಆರ್. ನಿರ್ಮಲಾ ಇವರು ಪ್ರೊ.ಕೆ. ರಾಮದಾಸ್ ಅವರ ಪತ್ನಿ. 1941ರ ಮಾರ್ಚ್ 26ರಂದು ಕಳಸದಲ್ಲಿ ಹುಟ್ಟಿದ್ದ ರಾಮದಾಸ್ ಬಾಲ್ಯದಲ್ಲೇ ತಂದೆ ಶಿವಯ್ಯ ಅವರನ್ನು ಕಳೆದುಕೊಂಡವರು. ತಾಯಿ ಮಂಜಮ್ಮ ದುಡಿದು ಅವರನ್ನು ಬೆಳೆಸಿ, ಓದಿಸಿದರು. ಹೊಸನಗರದಲ್ಲಿದ್ದ ರಾಮದಾಸ್ ಕಾಲೇಜು ಓದಲು ಮೈಸೂರಿಗೆ ಬಂದು ಮೈಸೂರಿನವರೇ ಆದರು. ಪ್ರೊ. ರಾಮದಾಸ್ ಅವರ ಅಂತ್ಯಸಂಸ್ಕಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅನಿಲ ಚಿತಾಗಾರದಲ್ಲಿ ಯಾವುದೇ ಧಾರ್ಮಿಕ ವಿಧಿ-ವಿಧಾನಗಳಿಲ್ಲದೆ ಸಂಜೆ 5.55ಕ್ಕೆ ನೆರವೇರಿತು. ಮೈಸೂರಿನಲ್ಲಿ ಯುವಜನ ಸಮಾಜವಾದಿ ಚಳವಳಿ, ಗೋಕಾಕ್ ಚಳವಳಿ, ಕನ್ನಡದ ಹೋರಾಟ, ದಲಿತ ಚಳವಳಿ ಮತ್ತು ಕಾವೇರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮದಾಸ್, ಲಂಕೇಶ್ ಅವರ ಸಾವಿನ ಬಳಿಕವೂ `ಕರ್ನಾಟಕ ಪ್ರಗತಿರಂಗದ ವಕ್ತಾರ'ರಾಗಿ ಉಳಿದವರು.

 2007: ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್. ಆರ್ ರಾವ್ ಅವರಿಗೆ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಈ ಗೌರವಕ್ಕೆ ಪಾತ್ರರಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ರಾವ್ ಅವರದಾಯಿತು.

2006: ಮುಖ್ಯಮಂತ್ರಿಯಾದ ನಾಲ್ಕು ತಿಂಗಳ ಬಳಿಕ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ರಾತ್ರಿ ತಮ್ಮ ಅಧಿಕೃತ ನಿವಾಸ `ಅನುಗ್ರಹ'ಕ್ಕೆ ಪ್ರವೇಶ ಮಾಡಿದರು. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ನೀಡಿರುವ ಅಪರೂಪದ ದೇಶೀಯ `ಘಿರ್' ತಳಿಗೆ ಸೇರಿದ ಗೋವು ನಂದಿನಿ ಮತ್ತು ಕರು ರಾಮನನ್ನು ಮನೆಯೊಳಗೆ ತುಂಬಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಔಪಚಾರಿಕವಾಗಿ ಹೊಸ ಮನೆಗೆ ಕಾಲಿಟ್ಟರು. ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

2006: ನಲ್ವತ್ತನಾಲ್ಕು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಆಯಕಟ್ಟಿನ ನಾಥು ಲಾ ಪಾಸ್ ಮೂಲಕ ಜುಲೈ 6ರಿಂದ ಗಡಿ ವ್ಯಾಪಾರ ಪುನರಾರಂಭಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಬೀಜಿಂಗಿನಲ್ಲಿ ಸಮ್ಮತಿಸಿದವು.

1997: ಕಾರ್ಗೊ ಹಡಗು ಮುಂಬೈ ಬಳಿ ಸಮುದ್ರದಲ್ಲಿ ಮುಳುಗಿ ನಾಲ್ವರು ಮೃತರಾಗಿ 20 ಜನ ಕಣ್ಮರೆಯಾದರು.

1995: ಭಾರತ ಮತ್ತು ಅಮೆರಿಕ ವ್ಯಾಪಾರ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದವು.

1981: ಭಾರತದ ಸಂಪರ್ಕ ಉಪಗ್ರಹ `ಆ್ಯಪಲ್' ನ್ನು ಹೊತ್ತ ಯುರೋಪಿನ ಏರಿಯನ್ ರಾಕೆಟನ್ನು ಫ್ರೆಂಚ್ ಗಯಾನಾದ ಅಂತರಿಕ್ಷ ನೆಲೆ ಕೊವುರೋನಿಂದ ಯಶಸ್ವಿಯಾಗಿ ಹಾರಿಸಲಾಯಿತು.

1978: ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಟೆಸ್ಟಿನಲ್ಲಿ ಸೆಂಚುರಿ (108 ರನ್) ಬಾರಿಸುವುದರ ಜೊತೆಗೆ 8 ವಿಕೆಟ್ಗಳನ್ನು ಬೀಳಿಸಿದ (8-34) ಮೊತ್ತ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡಿನ ಇಯಾನ್ ಬಾಥಮ್ ಪಾತ್ರರಾದರು.

1974: ಕಲಾವಿದ ರೂಪ ಡಿ. ಬಿಜೂರ್ ಜನನ.

 1966: ಶಿವಸೇನೆ ಸ್ಥಾಪನೆ.

1956: ಕಲಾವಿದ ಎಲ್. ಬಸವರಾಜ್ ಜಾನೆ ಜನನ.

1953: ಗೂಢಚರ್ಯೆಗಾಗಿ ಅಮೆರಿಕದ ಇಬ್ಬರು ನಾಗರಿಕರಾದ ಜ್ಯೂಲಿಯಸ್ ಮತ್ತು ಈಥೆಲ್ ರೋಸೆನ್ ಬರ್ಗ್ ಅವರನ್ನು ಸಿಂಗ್ ಸಿಂಗ್ ಸೆರೆಮನೆಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು. ಅಮೆರಿಕದಲ್ಲಿ ಗೂಢಚರ್ಯೆಗಾಗಿ ಮರಣದಂಡನೆಗೆ ಗುರಿಯಾದ ಮೊದಲ ಅಮೆರಿಕನ್ ಪ್ರಜೆಗಳು ಇವರು. ತಮ್ಮ ಕೈಗೆ ಬಂದಿದ್ದ ಸೋವಿಯತ್ ಸೇನಾ ರಹಸ್ಯಗಳನ್ನು ಸೋವಿಯತ್ ಒಕ್ಕೂಟಕ್ಕೆ ಹಿಂದಿರುಗಿಸಲು ಯತ್ನಿಸಿದರೆಂಬ ಆಪಾದನೆ ಅವರ ಮೇಲಿತ್ತು.

1953: ಕಲಾವಿದ ಅಶೋಕ ಅಕ್ಕಿ ಟಿ. ಜನನ.

1947: ಸಲ್ಮಾನ್ ರಷ್ದಿ ಜನ್ಮದಿನ. ಆಂಗ್ಲೋ ಇಂಡಿಯನ್ ಕಥೆಗಾರರಾದ ಇವರು ಇಸ್ಲಾಂಗೆ ಸಂಬಂಧಿಸಿದಂತೆ ಬರೆದ `ಸಟಾನಿಕ್ ವರ್ಸಸ್' ಕಥೆ 1989ರಲ್ಲಿ ಇರಾನಿನ ಮುಸ್ಲಿಮರ ಕೋಪಕ್ಕೆ ತುತ್ತಾಯಿತು. ಅವರು ರಷ್ದಿಗೆ `ಮರಣದಂಡನೆ' ವಿಧಿಸಿರುವುದಾಗಿ ಘೋಷಿಸಿದರು. ಇವರ `ಮಿಡ್ನೈಟ್  ಚಿಲ್ಡ್ರನ್ಸ್' ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ.

1940: ಸಂಗೀತಗಾರನ ಮನೆತನದಲ್ಲಿ ಬೆಳೆದ ಖ್ಯಾತ ಸಂಗೀತಗಾರ ಡಿ.ಎನ್. ಗುರುದತ್ ಅವರು ಡಿ.ಕೆ. ನಾಗಣ್ಣ- ಅಶ್ವತ್ಥ ಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1931: ರಾಜಕಾರಣಿ ನಂದಿನಿ ಸತ್ಪತಿ ಜನನ.

1901: ಖ್ಯಾತ ಗಣಿತ ಶಾಸ್ತ್ರಜ್ಞ ರಾಜ್ ಚಂದ್ರ ಬೋಸ್ ಜನನ.

1867: ಮೆಕ್ಸಿಕೊದ ದೊರೆ ಮ್ಯಾಕ್ಸಿಮಿಲಿಯನ್ ನ್ನು ಬೆನಿಟೋ ಜುವಾರೆಜ್ ನ ಪಡೆಗಳು ಗುಂಡಿಟ್ಟು ಕೊಂದವು. ಆತನ ಪುಟ್ಟ ಸೇನೆ 1867ರ ಮೇ 15ರಂದು ಸೋತ ಬಳಿಕ ಈ ಘಟನೆ ನಡೆಯಿತು. ವಿಕ್ಟರ್ ಹ್ಯೂಗೊ, ಜಿಸೆಪ್ ಗ್ಯಾರಿಬಾಲ್ಡಿ ಮತ್ತು ಯುರೋಪಿನ ಹಲವಾರು ದೊರೆಗಳು ಮ್ಯಾಕ್ಸಿಮಿಲಿಯನ್ ನ್ನು ಕ್ಷಮಿಸುವಂತೆ ಮನವಿ ಮಾಡಿದರೂ ಆತನ ಮರಣದಂಡನೆಗೆ ಆದೇಶ ನೀಡಿದ ಜುವಾರೆಜ್ ಮೇಲೆ ಅವು ಯಾವ ಪರಿಣಾಮವನ್ನೂ ಬೀರಲಿಲ್ಲ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment