ಇಂದಿನ ಇತಿಹಾಸ History Today ಜೂನ್ 17
2019: ಕೋಲ್ಕತ: ಆಸ್ಪತ್ರೆಗಳಲ್ಲಿ
ಕರ್ತವ್ಯ ನಿರತ ವೈದ್ಯರಿಗೆ ಭದ್ರತೆ ಒದಗಿಸಬೇಕೆಂಬ ಪ್ರಮುಖ ಬೇಡಿಕೆ ಸೇರಿದಂತೆ ಪಶ್ಚಿಮ ಬಂಗಾಳದ ಆಸ್ಪತ್ರೆಗಳ
ಕಿರಿಯ ವೈದ್ಯರು ಮುಂದಿಟ್ಟಿದ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒಪ್ಪಿಗೆ ನೀಡಿದ್ದು, ಫಲಪ್ರದ ಸಭೆಯ ಪರಿಣಾಮವಾಗಿ, ಒಂದು
ವಾರ ಕಾಲದ ಕಿರಿಯ ವೈದ್ಯರ ಮುಷ್ಕರ ಅಂತ್ಯಗೊಂಡಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆಗಿನ
ನಬನ್ನಾದಲ್ಲಿನ ಮಾತುಕತೆಯ ಬಳಿಕ ಮುಷ್ಕರ ನಿರತ ವೈದ್ಯರ ನಿಯೋಗ ಮಾತುಕತೆಗಳ ಬಗ್ಗೆ ತೃಪ್ತಿ ವ್ಯಕ್ತ
ಪಡಿಸಿತು. ನಿಯೋಗದ ಸದಸ್ಯರು ಪ್ರತಿಭಟನೆಗಳ ಕೇಂದ್ರವಾದ ಎನ್ ಆರ್ ಎಸ್ ವೈದ್ಯಕೀಯ ಕಾಲೇಜಿಗೆ ವಾಪಸಾದ
ಬಳಿಕ ಕಿರಿಯ ವೈದ್ಯರು ಮುಷ್ಕರ ವಾಪಸಾತಿಯ ಪ್ರಕಟಣೆ ಮಾಡಿದರು. ಪಶ್ಚಿಮ ಬಂಗಾಳದಲಿ ಭುಗಿಲೆದ್ದ ವೈದ್ಯ ಚಳವಳಿ, ದೇಶವ್ಯಾಪಿಯಾಗಿ
ಹರಡುವುದರ ಜೊತೆಗೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರೆಯ ಮೇರೆಗೆ ಈದಿನ ವೈದ್ಯರಿಂದ ದೇಶವ್ಯಾಪಿ
ಮುಷ್ಕರ ಕೂಡಾ ನಡೆಯಿತು. ಈ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ವೈದ್ಯರ ರಕ್ಷಣೆಗೆ
ಕಾನೂನುಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೂ ಸೂಚಿಸಿದೆ ಎಂದು ಪ್ರಕಟಿಸಿದರು.
ಕಿರಿಯ ವೈದ್ಯರ ಜೊತೆಗೆ ಮಾಧ್ಯಮಗಳ ಎದುರಿನಲ್ಲೇ ಮಾತುಕತೆ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಸಭೆಯ ಬಳಿಕ ’ಈ ಸಭೆ ಅತ್ಯಂತ ಸೌಹಾರ್ದಯುತವಾಗಿ ನಡೆದಿರುವುದಕ್ಕೆ
ನಾನು ಹರ್ಷಿತಳಾಗಿದ್ದೇನೆ. ಇಲ್ಲಿಂದ ವಾಪಸಾದ ಬಳಿಕ ನೀವು ಚಳವಳಿ ಹಿಂತೆಗೆದುಕೊಳ್ಳುವಿರಿ ಎಂದು ನಾನು
ನಿರೀಕ್ಷಿಸುತ್ತಿದ್ದೇನೆ. ನೀವು ಮುಷ್ಕರ ಹಿಂತೆಗೆದುಕೊಂಡ ಬಳಿಕ ನಾನು ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು
ಮತ್ತು ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಕುಂದುಕೊರತೆ ನಿವಾರಣಾ ಸೆಲ್‌ಗಳನ್ನು
ರಚಿಸಬೇಕು ಎಂಬ ವೈದ್ಯರ ಪ್ರಸ್ತಾಪವನ್ನು ಮುಖ್ಯಮಂತ್ರಿ ಮಮತಾ ಬ್ಯಾನಜಿ ಮಾತುಕತೆಯಲ್ಲಿ ಅಂಗೀಕರಿಸಿದರು
. ಮುಖ್ಯಮಂತ್ರಿಯವರ ಜೊತೆಗಿನ ಮಾತುಕತೆಯಿಂದ ತಮಗೆ ತೃಪ್ತಿಯಾಗಿದೆ ಎಂದು ನಿಯೋಗದಲ್ಲಿದ್ದ ವೈದ್ಯರು
ಸಭೆಯ ಬಳಿಕ ಹೇಳಿದರು. ಕಾಯ್ದೆಗೆ ತಿದ್ದುಪಡಿ: ಚಿಕಿತ್ಸಾಲಯ ಸ್ಥಾಪನಾ ಕಾಯ್ದೆಗೆ (ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್
ಆಕ್ಟ್) ತಿದ್ದುಪಡಿಗಳನ್ನು ತರುವುದಾಗಿ ಭರವಸೆ ನೀಡಿದ ಮಮತಾ ಬ್ಯಾನರ್ಜಿ ಅವರು ಮುಂಬರುವ ವಿಧಾನಮಂಡಲ
ಅಧಿವೇಶನದಲ್ಲೇ ತಿದ್ದುಪಡಿಗಳನ್ನು ಮಂಡಿಸಲಾಗುವುದು ಎಂದು ನುಡಿದರು. ಪಶ್ಚಿಮ ಬಂಗಾಳದ ಎಲ್ಲ ಆಸ್ಪತ್ರೆಗಳಲ್ಲೂ
ಕುಂದುಕೊರತೆ ಪರಿಹಾರ ಘಟಕಗಳನ್ನು ಸ್ಥಾಪಿಸಬೇಕು ಎಂಬ ವೈದ್ಯರ ಪ್ರಸ್ತಾಪವನ್ನು ಮುಖ್ಯಮಂತ್ರಿ ಒಪ್ಪಿದರು.
ಇಂತಹ ದಾಳಿಗಳು ನಡೆದ ಸಂದರ್ಭದಲ್ಲಿ ಕ್ಷಿಪ್ರ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮೀಷನರ್ ಅವರಿಗೆ ಮುಖ್ಯಮಂತ್ರಿ
ಸೂಚಿಸಿದರು. ಪ್ರತಿಯೊಂದು ಆಸ್ಪತ್ರೆಯಲ್ಲೂ ನೋಡಾಲ್ ಪೊಲೀಸ್ ಅಧಿಕಾರಿಯನ್ನು ನಿಯೋಜನೆ ಮಾಡುವಂತೆಯೂ
ಮುಖ್ಯಮಂತ್ರಿಯವರು ಪೊಲೀಸ್ ಕಮೀಷನರ್ ಅಂಜು ಶರ್ಮ ಅವರಿಗೆ ರಾಷ್ಟ್ರವ್ಯಾಪಿ ನೇರ ಪ್ರಸಾರಗೊಂಡ ವೈದ್ಯರ
ಜೊತೆಗಿನ ಸಭೆಯಲ್ಲಿ ನಿರ್ದೇಶನ ನೀಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕುರು
ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದ ನಿಜ ಎಂದು ಮಮತಾ ಒಪ್ಪಿದರು. ಕಿರಿಯ ವೈದ್ಯರ ಮೇಲಿನ ಹಲ್ಲೆ
ಘಟನೆಗೆ ಸಂಬಂಧಿಸಿದಂತೆ ತಾನು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಾಗಿ ಬ್ಯಾನರ್ಜಿ ಹೇಳಿದರು. ಘಟನೆಗೆ
ಸಂಬಂಧಿಸಿದಂತೆ ಈವರೆಗೆ ಐವರನ್ನು ಬಂಧಿಸಲಾಗಿದೆ. ಮೃತರ ಕುಟುಂಬದಲ್ಲಿ ಒಬ್ಬರಿಗೆ ಕೆಲಸ ನೀಡಬೇಕಾದ್ದು
ಸರ್ಕಾರದ ಮಾನವಿಯ ಕರ್ತವ್ಯ ಎಂದು ಅವರು ನುಡಿದರು. ಆಸ್ಪತ್ರೆಗಳಲ್ಲಿ ರಾತ್ರಿ ಪಹರೆ ಇನ್ನು ಮುಂದೆ
ಹೆಚ್ಚುವ ನಿರೀಕ್ಷೆ ಇದೆ. ೩೧ ಮಂದಿ ವೈದ್ಯರು ಇದ್ದ ನಿಯೋಗದ ಜೊತೆಗಿನ ಮಾತುಕತೆ ವೇಳೆಯಲ್ಲಿ ಪಶ್ಚಿಮ
ಬಂಗಾಳದ ಆರೋಗ್ಯ ಕಾರ್‍ಯದರ್ಶಿ, ಆರೋಗ್ಯ ಖಾತೆ ಸಹಾಯಕ ಸಚಿವೆ ಚಂದ್ರಿಮಾ ಭಟ್ಟಾಚಾರ್‍ಯ ಮತ್ತು ಇತರ
ಅಧಿಕಾರಿಗಳು ಪಾಲ್ಗೊಂಡಿದ್ದರು. ಎನ್ ಆರ್ ಎಸ್ ಆಸ್ಪತ್ರೆಯಲಿ ಭದ್ರತೆ ವಿಸ್ತರಣೆಗಾಗಿ ಸರ್ಕಾರವು
೧೨೫ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಿದೆ ಎಂದು ರಾಜ್ಯದ ಆರೋಗ್ಯ ಕಾರ್‍ಯದರ್ಶಿ ರಾಜೀವ
ಸಿನ್ಹ ಹೇಳಿದರು.
2019: ನವದೆಹಲಿ: ೧೭ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಹಿತ ಹೊಸದಾ|ಗಿ ಚುನಾಯಿತರಾದ ಎಲ್ಲ ಸಂಸತ್ ಸದಸ್ಯರು ಲೋಕಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಹಂಗಾಮಿ ಲೋಕಸಭಾಧ್ಯಕ್ಷ ವೀರೇಂದ್ರ ಕುಮಾರ್ ಅವರು ಕಲಾಪ ನಡೆಸಿಕೊಟ್ಟರು. ಮೊದಲಿಗೆ ಪ್ರಧಾನಿ ಮೋದಿ, ಬಳಿಕ ಕೆ. ಸುರೇಶ್, ರಾಜನಾಥ್ ಸಿಂಗ್, ಅಮಿತ್ ಶಾ ಪ್ರಮಾಣ ವಚನ ಸ್ವೀಕರಿಸಿದರು. ಆಮೇಲೆ ನಿತಿನ್ ಗಡ್ಕರಿ ಪ್ರಮಾಣವಚನ ಸ್ವೀಕರಿಸಿದರು. ಅವರ ನಂತರ ಡಿ.ವಿ ಸದಾನಂದ ಗೌಡ ಅವರು ದೇವರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಹರ್ ಸಿಮ್ರತ್ ಕೌರ್ ಬಾದಲ್, ರಮೇಶ್ ಪೋಖ್ರಿಯಾಲ್ ನಿಶಾಂಕ್, ಅರ್ಜುನ್ ಮುಂಡಾ, ಸ್ಮೃತಿ ಇರಾನಿ ಪ್ರಮಾಣವಚನ ಸ್ವೀಕರಿಸಿದರು. ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್, ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅಧಿವೇಶನ ಇಂದಿನಿಂದ ಜೂನ್
೨೬ರ ವರೆಗೆ ನಡೆಯಲಿದೆ. ಈ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪೂರ್ಣ ಪ್ರಮಾಣದ ಮುಂಗಡಪತ್ರವನ್ನು
ಮಂಡಿಸಲಿದೆ. ತ್ರಿವಳಿ ತಲಾಖ್ ವಿಧೇಯಕವೂ ಸೇರಿದಂತೆ ಹಲವು ಪ್ರಮುಖ ವಿಧೇಯಕಗಳಿಗೆ ಈ ಅಧಿವೇಶನದಲ್ಲಿ ಅಂಗೀಕಾರ ಪಡೆಯುವ ನಿರೀಕ್ಷೆಯಿದೆ. ಲೋಕಸಭೆ ಅಧಿವೇಶನಕ್ಕೆ ಮುನ್ನ ಹಿಂದಿನ ದಿನ ಪ್ರಧಾನಿ ಮೋದಿ ಸರ್ವಪಕ್ಷ ಸಭೆ ನಡೆಸಿ ಸುಗಮ ಕಲಾಪಗಳಿಗೆ ಎಲ್ಲ ಪಕ್ಷಗಳ ಸಹಕಾರ ಕೋರಿದ್ದರು. ಅಲ್ಲದೆ ’ಒಂದು ದೇಶ- ಒಂದು ಚುನಾವಣೆ’ ಎಂಬ
ತಮ್ಮ ಮಹತ್ವಾಕಾಂಕ್ಷಿ ಕಲ್ಪನೆಗೆ ಒಮ್ಮತ ರೂಪಿಸುವ ನಿಟ್ಟಿನಲ್ಲಿ ಜೂನ್ ೧೯ರಂದು ಮತ್ತೆ ಸರ್ವಪಕ್ಷ ಸಭೆ ಕರೆದಿದ್ದರು. ಲೋಕಸಭೆ ಅಥವಾ ರಾಜ್ಯಸಭೆಯ ಸಂಸದರ ಪೈಕಿ ಎಲ್ಲ ಪಕ್ಷಗಳಿಂದಲೂ ಒಬ್ಬ ಪ್ರತಿನಿಧಿಯಾದರೂ ಈ ಸಭೆಯಲ್ಲಿ ಭಾಗವಹಿಸಬೇಕೆಂದು
ಸೂಚಿಸಲಾಗಿತ್ತು. ತ್ರಿವಳಿ ತಲಾಖ್ ತಡೆ ವಿಧೇಯಕ ಸೇರಿದಂತೆ ಮಹತ್ವದ ಹಲವು ವಿಧೇಯಕಗಳ ಅಂಗೀಕಾರಕ್ಕೆ ಸಹಕರಿಸುವಂತೆ ಸರ್ಕಾರ ಪ್ರತಿಪಕ್ಷಗಳ ಬೆಂಬಲ ಕೋರಲಿದೆ. ತ್ರಿವಳಿ ತಲಾಖ್ ವಿಧೇಯಕವನ್ನು ಸಚಿವ ಸಂಪುಟ ಈ ವಾರ ಅನುಮೋದಿಸಿತ್ತು. ‘ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ವಿಧೇಯಕ, ೨೦೧೯’ ಮುಸ್ಲಿಂ ಪುರುಷ ಮೂರು ಬಾರಿ ತಲಾಖ್ ಹೇಳುವ ಮೂಲಕ ತನ್ನ ಪತ್ನಿಗೆ ವಿಚ್ಛೇದನ ನೀಡುವುದನ್ನು ನಿಷೇಧಿಸುತ್ತದೆ; ಇದನ್ನು ಉಲ್ಲಂಘಿಸಿದವರಿಗೆ ೩ ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸುತ್ತದೆ. ಏನಿದ್ದರೂ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ವಿಧೇಯಕದಲ್ಲಿರುವ
ಜೈಲು ಶಿಕ್ಷೆ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಈ ಮೊದಲು ವಿಧೇಯಕ ಲೋಕಸಭೆಯ ಅಂಗೀಕಾರ ಪಡೆದಿತ್ತು. ಆದರೆ ರಾಜ್ಯಸಭೆಯಲ್ಲಿ ನನೆಗುದಿಗೆ ಬಿದ್ದಿತ್ತು. ವಿಧೇಯಕ ರದ್ದಾಗದಂತೆ ನೋಡಿಕೊಳ್ಳಲು ಸರ್ಕಾರ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೊಳಿಸಿತ್ತು. ಇದೀಗ ಮತ್ತೆ ಸಂಸತ್ತಿನ ಅನುಮೋದನೆಗಾಗಿ ಮಂಡಿಸುತ್ತಿದೆ. ಸಾಧ್ವಿ ಪ್ರಜ್ಞಾ ಸಿಂಗ್ ಪ್ರಮಾಣವಚನ ಸ್ವೀಕಾರದಲ್ಲೂ ವಿವಾದ: ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಲೋಕಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಗದ್ದಲವೆಬ್ಬಿಸಿದರು.
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಾಧ್ವಿ ಪ್ರಜ್ಞಾ ಸಿಂಗ್ ತಮ್ಮ ಆಧ್ಯಾತ್ಮಿಕ ಹೆಸರನ್ನು (ಸ್ವಾಮಿ ಪೂರ್ಣಚೇತನಾನಂದ ಅವಧೇಶಾನಂದ ಪೂರ್ಣಚೇತನಾನಂದ ಅವಧೇಶಾನಂದ ಗಿರಿ) ಉಲ್ಲೇಖಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರು. ಚುನಾವಣೆಗೆ ಸ್ಪರ್ಧಿಸುವಾಗ ದಾಖಲೆಯಲ್ಲಿ ಉಲ್ಲೇಖಿಸಿದ ಹೆಸರನ್ನೇ ಹೇಳಿ ಪ್ರಮಾಣವಚನ ಸ್ವೀಕರಿಸುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಆಗ ಹಂಗಾಮಿ ಲೋಕಸಭಾಧ್ಯಕ್ಷ ವೀರೇಂದ್ರ ಕುಮಾರ್ ಅವರು ಸದಸ್ಯೆಯ ಪೂರ್ಣ ಹೆಸರು ಓದಿ ಹೇಳುವಂತೆ ಲೋಕಸಭಾ ಕಾರ್ಯದರ್ಶಿಗೆ ಸೂಚಿಸಿದರು. ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ, ಚುನಾವಣೆ ಆಯೋಗದ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ ಹೆಸರೇ ದಾಖಲೆಯಲ್ಲಿ ಉಳಿಯುತ್ತದೆ ಎಂದು ಅವರು ರೂಲಿಂಗ್ ನೀಡಿದರು. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪ ಹೊತ್ತಿರುವ ಪ್ರಜ್ಞಾ ಸಿಂಗ್ ಠಾಕೂರ್, ಪ್ರಮಾಣವಚನದ ಕೊನೆಯಲ್ಲಿ ’ಭಾರತ್ ಮಾತಾ ಕಿ ಜೈ’ ಘೋಷಣೆ
ಕೂಗಿದರು. ಅವರು ಭೋಪಾಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ಸಾಧ್ವಿ ಪ್ರಮಾಣ ವಚನದ ಬಳಿಕ ಬಿಜೆಪಿ ಸದಸ್ಯರು ’ಭಾರತ್ ಮಾತಾ ಕಿ ಜೈ’ ಘೋಷಣೆ
ಕೂಗುತ್ತಾ, ಪ್ರತಿಪಕ್ಷಗಳಿಗೆ
ತಿರುಗೇಟು ನೀಡಿದರು. ಪ್ರತಿಯೊಬ್ಬ ಬಿಜೆಪಿ ಸದಸ್ಯ ಪ್ರಮಾಣವಚನ ಸ್ವೀಕರಿಸಿದ ಬಳಿಕವೂ ಈ ಘೋಷಣೆ ಮುಂದುವರೆಯಿತು. ಬಿಜೆಪಿ ಸಂಸದ ಗಜೇಂದ್ರ ಉಮಾರಾವ್ ಸಿಂಗ್ ಪಟೇಲ್ ಕೂಡ ತಮ್ಮ ಪ್ರಮಾಣವಚನದ ಬಳಿಕ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದರು. ಆಗ ಆರ್ಎಸ್ಪಿ ಸದಸ್ಯ ಎನ್.ಕೆ ಪ್ರೇಮಚಂದ್ರನ್ ಆಕ್ಷೇವೆತ್ತಿ, ನಿಗದಿತ ನಮೂನೆಯಲ್ಲೇ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವಂತೆ ಹಂಗಾಮಿ ಸಭಾಧ್ಯಕ್ಷರನ್ನು
ಒತ್ತಾಯಿಸಿದರು.
2019: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ೧೭ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು, ಆದರೆ ರಿಜಿಸ್ಟರಿನಲ್ಲಿ
ಸಹಿ ಮಾಡಲು ಮರೆತರು! ಇಂಗ್ಲಿಷಿನಲ್ಲಿ ಪ್ರಮಾಣ ವಚನ ಸ್ವೀಕಾರದ ಬಳಿಕ ಕಿರುನಗು ಸೂಸುತ್ತಾ, ’ನಮಸ್ತೆ’ ಭಂಗಿಯಲ್ಲಿ ಕೈಗಳನ್ನು ಜೋಡಿಸಿ ಹಾಜರಿದ್ದ ಎಲ್ಲರನ್ನೂ ಅಭಿನಂದಿಸುತ್ತಾ ತಮ್ಮ ಆಸನದತ್ತ ಹೊರಟ ರಾಹುಲ್ ಅವರನ್ನು ಇತರ ಸದಸ್ಯರು ಹಿಂದಕ್ಕೆ ಬರುವಂತೆ ಕೂಗಿ, ಪ್ರಮಾಣ ವಚನ ಪ್ರಕ್ರಿಯೆಯ ಪ್ರಮುಖ ಭಾಗವಾದ ರಿಜಿಸ್ಟರಿಗೆ ಸಹಿ ಮಾಡಲು ಮರೆತದ್ದನ್ನು ನೆನಪಿಸಿದರು. ಮುಂಭಾಗದ ಸಾಲಿನಲ್ಲಿಯೇ ಆಸೀನರಾಗಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡಾ ರಾಹುಲ್ ಗಾಂಧಿಯವರತ್ತ ಕೈಸನ್ನೆ ಮಾಡುತ್ತಿದ್ದ ದೃಶ್ಯ ಕಾಣಿಸಿತು. ತತ್
ಕ್ಷಣವೇ ಮತ್ತೆ ಹಿಂದಕ್ಕೆ ಹೆಜ್ಜೆ ಹಾಕಿದ ಕಾಂಗ್ರೆಸ್ ಅಧ್ಯಕ್ಷ ರಿಜಿಸ್ಟರ್ ಇದ್ದ ಕಡೆಗೆ ತೆರಳಿ ಸಹಿ ಹಾಕಲು ಆಸನದ ಮೇಲೆ ಕುಳಿತರು. ಸಹಿ ಹಾಕಿದ ಬಳಿಕ ಎದ್ದು ನಿಂತ ರಾಹುಲ್ ಪೀಠದತ್ತ ತೆರಳಿ ಕೈ ಕುಲುಕಿದರು ಮತ್ತು ಸದನದಿಂದ ಹೊರಕ್ಕೆ ತೆರಳಿದರು. ರಾಹುಲ್ ಗಾಂಧಿಯವರು ಕೇರಳದ ವಯನಾಡು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದರು. ಅವರು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದರು.
ಆದರೆ ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಂದ ೫೫,೦೦೦ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಪ್ರಮಾಣ ವಚನಕ್ಕೆ ಕೆಲವು ಕ್ಷಣಗಳ ಮುನ್ನ ರಾಹುಲ್ ಅವರು ಲೋಕಸಭಾ ಸದಸ್ಯರಾಗಿ ತಮ್ಮ ಸತತ ನಾಲ್ಕನೇ ಅವಧಿ ಸೋಮವಾರ ಆರಂಭವಾಗಲಿದೆ ಎಂದು ಟ್ವೀಟ್ ಮಾಡಿದ್ದರು. ‘ಕೇರಳದ ವಯನಾಡು ಕ್ಷೇತ್ರವನ್ನು ಪ್ರತಿನಿಧಿಸಿ ಈ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸುವ ಮೂಲಕ ನಾನು
ಸಂಸತ್ತಿನಲ್ಲಿ ನನ್ನ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದೇನೆ ಮತ್ತು ಭಾರತದ ಸಂವಿಧಾನಕ್ಕೆ ನನ್ನ ನೈಜ ನಿಷ್ಠೆಯನ್ನು ದೃಢ ಪಡಿಸುತ್ತಿದ್ದೇನೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದರು.
2019: ನವದೆಹಲಿ: ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು (ಎನ್ಡಿಎ) ಸಂಸತ್ತಿನಲ್ಲಿ ಪ್ರಚಂಡ ಸಂಖ್ಯಾಬಲ ಹೊಂದಿದ್ದರೂ ವಿರೋಧ ಪಕ್ಷದ ಪ್ರತಿಯೊಂದು ಪದವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳಿಗೆ ಭರವಸೆ ನೀಡಿದರು. ೧೭ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಕ್ಕೆ ಮುನ್ನ ಸಂಸತ್ತಿನ ಹೊರಗೆ ಪ್ರಧಾನಿ ಮಾತನಾಡುತ್ತಿದ್ದರು. ‘ವಿರೋಧ
ಪಕ್ಷದ ಪಾತ್ರ ಮತ್ತು ಸಕ್ರಿಯ ವಿರೋಧ ಪಕ್ಷ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮಹತ್ವದ್ದು. ತಮ್ಮ ಸಂಖ್ಯೆ ಬಗ್ಗೆ ವಿರೋಧ ಪಕ್ಷಗಳು ಚಿಂತಿಸಬೇಕಾಗಿಲ್ಲ.
ಜನರಿಂದ ವಿರೋಧ ಪಕ್ಷಗಳು ಎಷ್ಟು ಸ್ಥಾನವನ್ನಾದರೂ ಗಳಿಸಿರಲಿ, ನಾವು ಅವರ ಪ್ರತಿಯೊಂದು ಪದವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಅವರು ಸದನ ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ ಮತ್ತು ಮಾತನಾಡುತ್ತಾರೆ ಎಂದು ನಾನು ಹಾರೈಸುವೆ’ ಎಂದು
ಮೋದಿ ಹೇಳಿದರು. ಬಿಜೆಪಿ ನೇತೃತ್ವದ ಎನ್ಡಿಎ ೫೪೫ ಸದಸ್ಯಬಲದ ಲೋಕಸಭೆಯಲ್ಲಿ ಒಟ್ಟು ೩೫೩ ಸದಸ್ಯರನ್ನು ಹೊಂದಿದೆ. ಬಿಜೆಪಿಯೊಂದೇ ೩೦೩ ಸದಸ್ಯರನ್ನು ಹೊಂದಿದ್ದು, ಎರಡನೇ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ೫೨ ಸಂಸತ್ ಸದಸ್ಯರನ್ನು ಹೊಂದಿದೆ. ವಿರೋಧ ಪಕ್ಷಗಳ ಜೊತೆಗೆ ಕೆಲಸ ಮಾಡಬೇಕಾದ ಅಗತ್ಯಕ್ಕೆ ಇನ್ನಷ್ಟು ಒತ್ತು ನೀಡಿದ ಪ್ರಧಾನಿ ’ಸಂಸತ್ತಿಗೆ ಬಂದಾಗ, ನಾವು ’ಪಕ್ಷ’ ಮತ್ತು ’ವಿಪಕ್ಷ’ವನ್ನು
ಮರೆಯಬೇಕು. ನಾವು ವಿಷಯಗಳ ಬಗ್ಗೆ ’ನಿಷ್ಪಕ್ಷ’ ಸ್ಫೂರ್ತಿಯೊಂದಿಗೆ
ಚಿಂತಿಸಬೇಕು ಮತ್ತು ರಾಷ್ಟ್ರದ ವಿಶಾಲ ಹಿತದೃಷ್ಟಿ ಸಲುವಾಗಿ ಕೆಲಸ ಮಾಡಬೇಕು’ ಎಂದು
ಹೇಳಿದರು. ‘ಸಂಸತ್ತು ಸುಲಲಿತವಾಗಿ ನಡೆದಾಗ ಭಾರತದ ಜನರ ಅಸಂಖ್ಯ ಆಶಯಗಳನ್ನು ನಾವು ಈಡೇರಿಸಲು ಸಾಧ್ಯ ಎಂಬುದು ನನ್ನ ಅನುಭವ’ ಎಂದು
ಮೋದಿ ನುಡಿದರು. ಹಿಂದಿನ ದಿನ ನಡೆದ ಸರ್ವ ಪಕ್ಷ ಸಭೆಯಲ್ಲಿ ಸಂಸತ್ ಕಲಾಪದಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಡುವಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ಪ್ರಧಾನಿ ಮನವಿ ಮಾಡಿದ್ದರು. ಮೋದಿಯವರ ಈದಿನದ ಮಾತುಗಳು ಸರ್ವ ಪಕ್ಷ ಸಭೆಯ ಮಾತುಗಳ ಮುಂದುವರಿಕೆಯಾಗಿತ್ತು. ‘ನಾವು ಇರುವುದು ಜನರಿಗಾಗಿ.. ಸಂಸತ್ತಿನ ಕಾರ್‍ಯ ನಿರ್ವಹಣೆಯನ್ನು ಹಾಳುಗೆಡಹುವ ಮೂಲಕ ನಾವು ಜನರ ಹೃದಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಪಕ್ಷಗಳೂ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನುಬದಿಗಿಟ್ಟು ರಾಷ್ಟ್ರದ ಪ್ರಗತಿಗಾಗಿ ಅವಿಶ್ರಾಂತ ದುಡಿಯಲು ತಮಗೆ ತಾವೇ ಬದ್ಧರಾಗಬೇಕು’ ಎಂದು
ಪ್ರಧಾನಿ ಸಂಸತ್ ಸಮುಚ್ಚಯದಲಿ ಭಾನುವಾರ ಮುಂಗಡಪತ್ರ ಅಧಿವೇಶನ ಆರಂಭಕ್ಕೆ ನಡೆದ ನಡೆದ ಸರ್ವ ಪಕ್ಷ ಸಭೆಯ ಅಧ್ಯಕ್ಷಸ್ಥಾನದಿಂದ ಮಾತನಾಡುತ್ತಾ ಹೇಳಿದ್ದರು. ಜುಲೈ ೨೬ರಂದು ಸಮಾಪ್ತಿಗೊಳ್ಳಲಿರುವ
ಸಂಸತ್ತಿನ ಚೊಚ್ಚಲ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆ, ಆಧಾರ್ ವಿಶಿಷ್ಠ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಮೊಬೈಲ್ ಫೋನ್ ಸಂಪರ್ಕಗಳನ್ನು ಪಡೆಲಯ ಸ್ವ ಇಚ್ಛೆಯಿಂದ ಬಳಸಲು ಅನುಮತಿ ನೀಡುವ ಮಸೂದೆ ಮಂಡನೆಯಾಗಲಿದೆ. ವಿರೋಧ
ಪಕ್ಷಗಳು ಕೃಷಿ ಸಂಕಷ್ಟ, ನಿರುದ್ಯೋಗ ಮತ್ತು ಬರ ಬಿಕ್ಕಟ್ಟನ್ನು ಮೊದಲ ಅಧಿವೇಶನದಲ್ಲಿಯೇ ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಆಗ್ರಹಿಸಿವೆ. ಕೇಂದ್ರ ಮುಂಗಡಪತ್ರವು ಜುಲೈ ೫ರಂದು ಮಂಡನೆಯಾಗಲಿದೆ. ಫೆಬ್ರುವರಿಯಲ್ಲಿ ಜಾರಿಗೊಳಿಸಲಾಗಿದ್ದ
ಸುಗ್ರೀವಾಜ್ಞೆಯ ಸ್ಥಾನದಲ್ಲಿ ತ್ರಿವಳಿ ತಲಾಖ್ಗೆ ಸಂಬಂಧಿಸಿದ ಹೊಸ ಮಸೂದೆಯ ಮಂಡನೆಯಾಗಲಿದೆ. ಪ್ರಸ್ತಾಪಿತ ಮಸೂದೆಯ ಅಡಿಯಲ್ಲಿ ದಿಢೀರ್ ತ್ರಿವಳಿ ತಲಾಖ್ ನೀಡುವುದು ಅಕ್ರಮ ಹಾಗೂ ಮೂರು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಲಿದೆ. ಹಿಂದಿನ ಮಸೂದೆಗೆ ರಾಜ್ಯಸಭೆ ಅನುಮೋದನೆ ನೀಡಿರಲಿಲ್ಲ ಮತ್ತು ೧೬ನೇ ಲೋಕಸಭೆ ವಿಸರ್ಜನೆಯ ಕಾರಣ ಅದು ರದ್ದಾಗಿತ್ತು.
2019: ನವದೆಹಲಿ: ಮಾಜಿ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ (ಜೆಪಿ ನಡ್ಡಾ) ಅವರು ಭಾರತೀಯ ಜನತಾ ಪಕ್ಷದ ನೂತನ ಕಾರ್ಯಾಧ್ಯಕ್ಷರಾಗಿ
ನೇಮಕಗೊಂಡಿದ್ದಾರೆ. ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪದತ್ಯಾಗ ಮಾಡುವ ಆಶಯ ವ್ಯಕ್ತಪಡಿಸಿರುವುದರಿಂದ ಹಿರಿಯ ಬಿಜೆಪಿ ನಾಯಕ ಜೆಪಿ ನಡ್ಡಾ ಅವರನ್ನು ಬಿಜೆಪಿ ಕಾರ್ಯಾಧ್ಯಕ್ಷರಾಗಿ
ನೇಮಕ ಮಾಡಲಾಗಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಈದಿನ ಪ್ರಕಟಿಸಿದರು.
ಬಿಜೆಪಿಯು ಹಲವಾರು ಚುನಾವಣೆಗಳನ್ನು ಅಮಿತ್ ಶಾ ಜಿ ಅವರ ನೇತೃತ್ವದಲ್ಲಿ ಗೆದ್ದಿದೆ. ಆದರೆ ಪ್ರಧಾನಿಯವರು ಗೃಹ ಸಚಿವರಾಗಿ ನೇಮಕ ಮಾಡಿರುವುದರಿಂದ ಅಮಿತ್ ಶಾ ಅವರು ಸ್ವತಃ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು
ಬೇರೆ ಯಾರಿಗಾದರೂ ವಹಿಸಲು ಅಪೇಕ್ಷಿಸಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿಯು ಜೆಪಿ ನಡ್ಡಾ ಅವರನ್ನು ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದೆ ಎಂದು ರಾಜನಾಥ್ ಸಿಂಗ್ ನುಡಿದರು.
ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿರುವ ನಡ್ಡಾ ಅವರನ್ನು ಔಪಚಾರಿಕವಾಗಿ ಆಡಳಿತಾರೂಢ ಪಕ್ಷದ ಮುಖ್ಯಸ್ಥರಾಗಿ, ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ಸಂಘಟನಾತ್ಮಕ ಚುನಾವಣೆಗಳು ಡಿಸೆಂಬರ್- ಜನವರಿಯಲ್ಲಿ ಪೂರ್ಣಗೊಂಡ ಬಳಿಕ ಆಯ್ಕೆ ಮಾಡಲಾಗುವುದು. ನಡ್ಡಾ
ಅವರನ್ನು ವರ್ಷಾಂತ್ಯದಲಿ ಸುಗಮ ಅಧಿಕಾರ ವರ್ಗಾವಣೆಯ ಖಾತರಿಗಾಗಿ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದರು. ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಅಮಿತ್ ಶಾ ಅವರು ನಡ್ಡಾ ಅವರು ಅಧಿಕೃತವಾಗಿ ಆಯ್ಕೆಯಾಗುವವರೆಗೆ
ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ೫೮ರ ಹರೆಯದ ಜೆಪಿ ನಡ್ಡಾ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದ್ಯಾರ್ಥಿ ದಳವಾದ ಅಖಿಲ
ಭಾರತೀಯ ವಿದ್ಯಾರ್ಥಿ ಪರಿಷತ್ ಹಿನ್ನೆಲೆಯಿಂದ ಬಂದವರಾಗಿದ್ದು, ಹಿಮಾಚಲ ಪ್ರದೇಶ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ೨೦೧೪ರಲ್ಲಿ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಗೃಹ
ಸಚಿವರಾದ ಬಳಿಕ ನಡ್ಡಾ ಅವರು ಬಿಜೆಪಿ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿ ಇದ್ದರು. ಆದರೆ ಬಿಜೆಪಿ ಅಧ್ಯಕ್ಷ ಗಾದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯಾಗಿದ್ದ ಅಮಿತ್ ಶಾ ಎದುರು ನಡ್ಡಾ ಅವರು ಪರಾಭವಗೊಂಡಿದ್ದರು.
2019: ಬೆಂಗಳೂರು: ನಗರ ಪೊಲೀಸ್ ಆಯುಕ್ತ ಸುನೀಲ್ಕುಮಾರ್ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಅಪರಾಧ ವಿಭಾಗದ ಹೆಚ್ಚು ವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ನೂತನ ನಗರ ಪೊಲೀಸ್ ಆಯುಕ್ತ ರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿತು. ಹೆಚ್ಚುವರಿ
ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ)ಹುದ್ದೆಗೆ ಬಡ್ತಿ ನೀಡಿದ ತಕ್ಷಣವೇ ನೂತನ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕಮಾಡಿದ್ದು ಈದಿನ ಸಂಜೆ ಅವರು ಅಧಿಕಾರವಹಿಸಿಕೊಂಡರು. ನೇಮಕಾತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆಗೊಂಡ ಸುನೀಲ್ಕುಮಾರ್ ಅವ ರಿಂದ ಅಧಿಕಾರ ವಹಿಸಿಕೊಂಡ ಅಲೋಕ್ ಕುಮಾರ್ ನಗರದಲ್ಲಿ ಅಪರಾಧ ಪ್ರಕರಣಗಳನನ್ನು ಹತ್ತಿಕ್ಕಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಿ ಉತ್ತಮ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿ ತಿಳಿಸಿದರು. ವರ್ಗಾವಣೆಗೆ ರಜಾ ದಿನವಾದರೂ ಹಿಂದಿನ ದಿನ ಮಧ್ಯರಾತ್ರಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿರಿಯ ಪೊಲೀಸರ ಅಸಮಾಧಾನಕ್ಕೆ ಕಾರಣವಾಯಿತು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಲ್ಲಿ
ಅಲೋಕ್ಮೋಹನ್, ಆರ್.ಪಿ.ಶರ್ಮ, ಡಾ .ರವೀಂದ್ರನಾಥ್,ಕಮಲ್ಪಂತ್,ಪ್ರತಾಪ್ ರೆಡ್ಡಿ, ಸುನಿಲ್ ಅಗರ್ವಾಲ್, ಮಾಲಿನಿ ಕೃಷ್ಣ ಮೂರ್ತಿ, ಎಂ.ಎ. ಸಲೀಂ ಸೇರಿದಂತೆ ೨೦ ಮಂದಿ ಅಧಿಕಾರಿಗಳಿದ್ದರೂ ಅವರಲ್ಲಿ ಯಾ ರೊಬ್ಬರನ್ನು ಪರಿಗಣಿಸದೇ ಎಡಿಜಿಪಿ ಹುದ್ದೆಗೆ ಬಡ್ತಿ ನೀಡಿದ ಕೂಡಲೇ ನಗರ ಪೊಲೀಸ್ ಆಯುಕ್ತರನ್ನಾಗಿ ಅಲೋಕ್ ಕುಮಾರ್ ಅವ ರನ್ನು ನೇಮಕ ಮಾಡಲಾಯಿತು.
2019: ಹೈದರಾಬಾದ್: ರಾಜ್ಯದಲ್ಲಿ ಸುಡು ಬಿಸಿಲಿನಿಂದಾಗಿ ಹೆಚ್ಚುತ್ತಿರುವ ತಾಪಮಾನದಿಂದ ಪಾರಾಗಲು ಬೀಯರ್ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ತಾಪಮಾನ ಹೆಚ್ಚುತ್ತಿದಂತೆಯೇ
ರಾಜ್ಯದ ವಿವಿಧೆಡೆಗಳಲ್ಲಿ
ಬೀಯರ್ ಮಾರಾಟವೂ ಯದ್ವಾತದ್ವ ಏರಿತು. ಸಕಾಲಕ್ಕೆ
ನೈಋತ್ಯ ಮುಂಗಾರು ಆಗಮಿಸದೇ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ನ್ನು ದಾಟಿತು. ತೆಲಂಗಾಣ ರಾಜ್ಯ ಪಾನೀಯಗಳ ನಿಗಮವು ಮೇ ತಿಂಗಳಲ್ಲಿ ೬೧ ಲಕ್ಷ ಕೇಸ್ ಬೀಯರ್ ಮಾರಾಟ ಮಾಡಿದೆ, ಒಂದು ತಿಂಗಳಲ್ಲಿ ಮಾರಾಟ ಮಾಡಲಾಗಿರುವ ಅತ್ಯಧಿಕ ಪ್ರಮಾಣ ಇದು. ಏಪ್ರಿಲ್ ತಿಂಗಳಲ್ಲಿ ೫೩ ಲಕ್ಷ ಕೇಸ್ ಬೀಯರ್ ಮಾರಾಟ ಮಾಡಲಾಗಿತ್ತು. ಸರ್ಕಾರಿ ಮಾಲಿಕತ್ವದ ಸಗಟು ಮದ್ಯ ಮಾರಾಟಗಾರರು ಕಳೆದ ವರ್ಷ ಮೇ ತಿಂಗಳಲ್ಲಿ ೫೭ ಲಕ್ಷ ಕೇಸ್ ಬೀಯರ್ ಮಾರಾಟ ಮಾಡಿದ್ದರು ಎಂದು ಸರ್ಕಾರಿ ಮೂಲಗಳು ತಿಳಿಸಿದವು. ಕೆಲವು
ಸ್ಥಳಗಳಲ್ಲಿ ಬೀಯರ್ ಉತ್ಪಾದಕರಿಗೆ ಅಂತರ್ಜಲ ಸರಬರಾಜು ಸಂಬಂಧ ನಿಯಮಾವಳಿಗಳನ್ನು ರೂಪಿಸಿದ್ದರ ಹೊರತಾಗಿಯೂ ಬೀಯರ್ ಮಾರಾಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ಮೇಡಕ್ ಮತ್ತಿತರ ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಕುಸಿತದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು
ಮಾದಕ ಪೇಯ ಉತ್ಪಾದಕರಿಗೆ ನೀರು ಸರಬರಾಜು ಸಂಬಂಧ ಕಟ್ಟು ನಿಟ್ಟಿನ ನಿಯಮಾವಳಿ ರೂಪಿಸಿದ್ದಾರೆ. ಹೀಗಾಗಿ ಬೀಯರ್ ಉತ್ಪಾದನೆ ಇಳಿಮುಖವಾಗಿದೆ ಎಂದು ಮೂಲಗಳು ಹೇಳಿದವು. ವೈನ್ ಶಾಪ್ಗಳಿಗೆ ಬೀಯರ್ ಸರಬರಾಜು ಶೇಕಡಾ ೩೦ರಷ್ಟು ತಗ್ಗಿದೆ ಎಂದು ತೆಲಂಗಾಣ ವೈನ್ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ವರ ರಾವ್ ಹೇಳಿದರು. ಅಧಿಕ ಬೆಲೆಯ ಬೀಯರ್ಗಳ ಲಭ್ಯತೆ ಸಾಕಷ್ಟಿದ್ದರೂ, ಜನಸಾಮಾನ್ಯರು ಬಳಸುವ ಜನಪ್ರಿಯ ಬ್ರ್ಯಾಂಡ್ ಬೀಯರ್ ಸರಬರಾಜಿನಲ್ಲಿ ಕೊರತೆ ಉಂಟಾಗಿದೆ ಎಂದು ಅವರು ನುಡಿದರು. ಬೇಸಿಗೆ ತಿಂಗಳುಗಳಲ್ಲಿ ದೇಶಾದ್ಯಂತ ಬೀಯರ್ ಕೊರತೆ ಉಂಟಾಗುತ್ತದೆ ಎಂದು ಅವರು ಹೇಳಿದರು. ತೆಲಂಗಾಣದಲ್ಲಿ ಹಾಲಿ ಹವಾಮಾನ ಪರಿಸ್ಥಿತಿಯ ಹಿನ್ನಲೆಯಲ್ಲಿ ಬೀಯರ್ ಸರಬರಾಜಿನಲ್ಲಿ ಹೆಚ್ಚಿನ ಕೊರತೆ ಉಂಟಾಗಿದೆ. ಇದೇ ವೇಳೆಗೆ ಬೀಯರ್ ಬಳಕೆ ವರ್ಷಪೂರ್ತಿ ಹೆಚ್ಚಿದೆ ಎಂದು ಅವರು ನುಡಿದರು.
2018: ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಕಚೇರಿಯಲ್ಲಿ
ಧರಣಿ ಕುಳಿತ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಮತ್ತು ಸಂಪುಟ ಸಹೋದ್ಯೋಗಿಗಳ ನೆರವಿಗೆ ಬಂದ ನಾಲ್ಕು ರಾಜ್ಯಗಳ ಎನ್ ಡಿಎ ಯೇತರ ಮುಖ್ಯಮಂತ್ರಿಗಳಾದ
ಎಚ್.ಡಿ. ಕುಮಾರಸ್ವಾಮಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಮತ್ತು ಪಿಣರಾಯಿ ವಿಜಯನ್ ಅವರು
೭ನೇ ದಿನಕ್ಕೆ ಕಾಲಿಟ್ಟಿರುವ ದೆಹಲಿ ಸರ್ಕಾರದ ಬಿಕ್ಕಟ್ಟನ್ನು ತತ್ ಕ್ಷಣ ಇತ್ಯರ್ಥ ಪಡಿಸುವಂತೆ ಪ್ರಧಾನಿ
ನರೇಂದ್ರ ಮೋದಿ ಅವರನ್ನು ಆಗ್ರಹಿಸಿದರು. ನೀತಿ ಆಯೋಗದ
ನಿರ್ಣಾಯಕ ಸಭೆಯ ಸಂದರ್ಭದಲ್ಲಿ ನಾಲ್ವರೂ ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ದೂರನ್ನು ಪ್ರಧಾನಿಯವರ ಗಮನಕ್ಕೆ ತಂದರು. ’ನಾನು ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದ ಮುಖ್ಯಮಂತ್ರಿಗಳ
ಜೊತೆಗೆ ದೆಹಲಿ ಸರ್ಕಾರದ ಸಮಸ್ಯೆಯನ್ನು ತತ್ ಕ್ಷಣವೇ ಇತ್ಯರ್ಥ ಪಡಿಸುವಂತೆ ಗೌರವಾರ್ಹ ಪ್ರಧಾನಿಯವರಿಗೆ
ಮನವಿ ಮಾಡಿದ್ದೇವೆ’ ಎಂದು ಮಮತಾ ಬ್ಯಾನರ್ಜಿ ಅವರು ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಟ್ವೀಟ್ ಮಾಡಿದರು. ನಾಲ್ವರೂ ಮುಖ್ಯಮಂತ್ರಿಗಳು ದೆಹಲಿಯ ಲೆಫ್ಟಿನೆಂಟ್ ಗವರ್ನರ್
ಅನಿಲ್ ಬೈಜಾಲ್ ಭೇಟಿಗೆ ಅವಕಾಶ ಕೋರಿದ್ದರು. ಆದರೆ ಬೈಜಾಲ್ ಅವರು ಅವಕಾಶ ನಿರಾಕರಿಸಿದಾಗ, ಪ್ರಧಾನಿಯವರ
ಬಳಿಯೇ ವಿಷಯ ಪ್ರಸ್ತಾಪಿಸುವುದಾಗಿ ನಾಲ್ವರೂ ಮುಖ್ಯಮಂತ್ರಿಗಳು ಪ್ರಕಟಿಸಿದ್ದರು. ದೆಹಲಿ ಪರಿಸ್ಥಿತಿಯನ್ನು
’ಸಂವಿಧಾನ ಬಾಹಿರ ಸ್ಥಿತಿ’ ಎಂಬುದಾಗಿ ಬಣ್ಣಿಸಿದ ಅವರು ಸಮಸ್ಯೆ ಇತ್ಯರ್ಥ ಬಗ್ಗೆ ಪ್ರಧಾನಿಯವರು ಖಚಿತತೆ
ನೀಡಬೇಕು ಎಂದು ಆಗ್ರಹಿಸಿದ್ದರು. ಕೇಜ್ರಿವಾಲ್ ಅವರಿಗೆ
ನಾಲ್ಕು ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ತೆಲುಗುದೇಶಂ, ಜನತಾದಳ (ಜಾತ್ಯತೀತ) ಮತ್ತು
ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷ ಬಹಿರಂಗವಾಗಿ ಬೆಂಬಲ ನೀಡಿದ್ದು, ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ
ವಿಪಕ್ಷ ಮೈತ್ರಿಕೂಟ ರಚಿಸುವ ಯತ್ನಕ್ಕೆ ಇನ್ನಷ್ಟು ಇಂಬು ನೀಡಿತು. ಕೇಜ್ರಿವಾಲ್, ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ
ಮತ್ತು ಸಚಿವರಾದ ಸತ್ಯೇಂದ್ರ ಜೈನ್ ಮತ್ತು ಗೋಪಾಲ್
ರೈ ಕಳೆದ ಲೆಫ್ಟಿನೆಂಟ್ ಗವರ್ನರ ಕಚೇರಿಯಲ್ಲಿ ಧರಣಿ ನಡೆಸಿ, ’ಮುಷ್ಕರ’ವನ್ನು ಕೊನೆಗೊಳಿಸುವಂತೆ ಐಎಎಸ್ ಅಧಿಕಾರಿಗಳಿಗೆ
ನಿರ್ದೇಶನ ನೀಡುವಂತೆ ಮತ್ತು ಮನೆಬಾಗಿಲಿಗೆ ಪಡಿತರ ಹಂಚಿಕೆ ಯೋಜನೆಗೆ ಒಪ್ಪಿಗೆ ನೀಡುವಂತೆ ಬೈಜಾಲ್
ಅವರನ್ನು ಆಗ್ರಹಿಸಿದ್ದರು. ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ೧೫ನೇ ಹಣಕಾಸು ಆಯೋಗವು ಅಂಗೀಕರಿಸಿದ
೨೦೧೧ರ ಜನಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಬೆಂಬಲಿಸಿದ ಮಮತಾ ಬ್ಯಾನರ್ಜಿ
ಕಾರ್ಯ ನಿರ್ವಹಿಸುತ್ತಿರುವ ರಾಜ್ಯಗಳನ್ನು ದಂಡನೆಗೆ ಗುರಿಪಡಿಸಬಾರದು ಎಂದು ಕೋರಿದರು. ಪ್ರತಿಭಟನಾ ಪ್ರದರ್ಶನ: ಈ ಮಧ್ಯೆ ಕೇಜ್ರಿವಾಲ್ ಸರ್ಕಾರ
ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ನಡುವಣ ಬಿಕ್ಕಟ್ಟು ೭ನೇ ದಿನಕ್ಕೆ ಪ್ರವೇಶಿಸಿರುವ
ಬಿಕ್ಕಟ್ಟು ಇತ್ಯರ್ಥಕ್ಕೆ ಮಧ್ಯ ಪ್ರವೇಶ ಮಾಡುವಂತೆ ಪ್ರಧಾನಿಯವರನ್ನು ಒತ್ತಾಯಿಸುವ ಸಲುವಾಗಿ ಪ್ರಧಾನಿಯವರ
ನಂ.೭, ಲೋಕಕಲ್ಯಾಣ ಮಾರ್ಗ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲು ಆಮ್ ಆದ್ಮಿ ಪಕ್ಷವು ಯೋಜಿಸಿತು. ಪೊಲೀಸರು ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡಿಲ್ಲ ಎಂದು
ಹೇಳಿದ್ದಾರೆ. ಆದರೆ ಪಕ್ಷವು ಮಂಡಿ ಹೌಸ್ ನಿಂದ ಅಹಿಂಸಾತ್ಮಕ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ
ಹೇಳಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೊ ಸ್ಟೇಷನ್ ಗಳಾದ ಲೋಕಕಲ್ಯಾಣ ಮಾರ್ಗ, ಪಟೇಲ್
ಚೌಕ, ಸೆಂಟ್ರಲ್ ಸೆಕ್ರೆಟೇರಿಯಟ್, ಉದ್ಯೋಗ ಭವನ ಮತ್ತು ಜನಪಥದಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು
ಸ್ಥಗಿತಗೊಳಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು. ಈ ಮಧ್ಯೆ ಚಿತ್ರನಟ ಪ್ರಕಾಶ್ ರಾಜ್ ಅವರು ದೆಹಲಿ ಮುಖ್ಯಮಂತ್ರಿ
ಅರವಿಂದ ಕೇಜ್ರಿವಾಲ್ ಅವರ ಬೆಂಬಲಕ್ಕೆ ಬಂದಿದ್ದು, ಕೇಜ್ರಿವಾಲ್ ಜೊತೆಗೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ
ಸೂಚಿಸಲು ಒಂದು ನಿಮಿಷ ಸಮಯ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವೀಟ್ ಮೂಲಕ ಆಗ್ರಹಿಸಿದರು.
2018: ನವದೆಹಲಿ: ‘೨೦೧೭-೧೮ರ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ
ಬೆಳವಣಿಗೆ ದರ ಆರೋಗ್ಯಕರವಾದ ಶೇಕಡಾ ೭.೭ ರಷ್ಟಿತ್ತು. ಇದನ್ನು ಎರಡಂಕಿಗೆ ಒಯ್ಯಬೇಕಾಗಿದೆ.’ ಎಂದು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ನೀತಿ ಆಯೋಗದ
ನಾಲ್ಕನೇ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಪ್ರವಾಹ ಪೀಡಿತ ರಾಜ್ಯಗಳಲ್ಲಿನ ಪರಿಸ್ಥಿತಿ ನಿಭಾಯಿಸಲು
ಬೇಕಾದ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಧಾನಿ ಮೋದಿ ಇದೇ ವೇಳೆ ಭರವಸೆ ನೀಡಿದರು. ‘೨೦೧೭-೧೮ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ
ಬೆಳವಣಿಗೆ ದರ ಶೇಕಡಾ ೭.೭ ಇತ್ತು ಎಂದು ನೆನಪಿಸಿದ ಪ್ರಧಾನಿ, ’ಈ ದರವನ್ನು ೨೦೨೦ರ ವೇಳೆಗೆ ಎರಡಂಕಿಗೆ
ಒಯ್ಯಲು ನಾವು ಶ್ರಮಿಸಬೇಕಾಗಿದೆ. ಇದಕ್ಕಾಗಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ಹೇಳಿದರು. ಭಾರತಕ್ಕೆ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಕೊರತೆ ಇಲ್ಲ
ಎಂದು ಅವರು ನುಡಿದರು. ‘ನೀತಿ ಆಯೋಗದ ಆಡಳಿತ ಮಂಡಳಿಯು
ರಾಜ್ಯ ಸರ್ಕಾರಗಳನ್ನು ಒಳಗೊಂಡ ‘ಟೀಮ್ ಇಂಡಿಯಾ’ವನ್ನು ಮುನ್ನಡೆಸುತ್ತ, ಅವುಗಳ ನಡುವಿನ ಸಂಕೀರ್ಣ
ಸಮಸ್ಯೆಗಳನ್ನು ಸಹಕಾರ, ಒಕ್ಕೂಟ ವ್ಯವಸ್ಥೆ ನೆಲೆಯಲ್ಲಿ ಪರಿಹರಿಸಲಿದೆ’ ಎಂದು ಮೋದಿ ಹೇಳಿದರು. ‘ಪ್ರಸ್ತುತ ಹಣಕಾಸಿನ ವರ್ಷದಲ್ಲಿ ರಾಜ್ಯಗಳು ೧೧ ಲಕ್ಷ ಕೋಟಿ
ರೂಪಾಯಿಗಳಿಗಿಂತ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರದಿಂದ ಪಡೆಯಲಿವೆ. ಇದು ಹಿಂದಿನ ಸರ್ಕಾರದ
ಕೊನೆಯ ವರ್ಷ ಇದ್ದುದಕ್ಕಿಂತ ೬ ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚು. ಆ ವರ್ಷ ರಾಜ್ಯಗಳು ಪಡೆದಿದ್ದ
ಅನುದಾನದ ಮೊತ್ತ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳು’ ಎಂದು ಪ್ರಧಾನಿ ವಿವರಿಸಿದರು. ರೈತರ ಆದಾಯ
ದ್ವಿಗುಣಗೊಳಿಸುವುದು, ಜಿಲ್ಲೆಗಳ ಅಭಿವೃದ್ಧಿ, ಅಪೌಷ್ಠಿಕತೆ ನಿವಾರಣೆ, ಆಯುಷ್ಮಾನ್ ಭಾರತ, ಮಿಷನ್
ಇಂಧ್ರಧನುಷ್ ಯೋಜನೆಗಳ ಜಾರಿ ಮತ್ತು ಗಾಂಧೀಜಿಯವರ ೧೫೦ನೇ ಜನ್ಮದಿನ ಆಚರಣೆಯ ವಿಷಯಗಳನ್ನು ಸಭೆಯಲ್ಲಿ
ಚರ್ಚಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ
ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ’ರಾಜ್ಯದಲ್ಲಿನ ೮೫ ಲಕ್ಷ ರೈತರ ಸಾಲಮನ್ನಾ ಮಾಡಲು
ಕೇಂದ್ರ ಸರ್ಕಾರ ಶೇಕಡಾ ೫೦ ನೆರವು ನೀಡಬೇಕು’ ಎಂದು ಕೋರಿದರು. ’ಯಾದಗಿರಿ ಮತ್ತು ರಾಯಚೂರಿನಂತಹ ಹಿಂದುಳಿದ ಪ್ರತಿಯೊಂದು
ಜಿಲ್ಲೆಗಳ ಅಭಿವೃದ್ಧಿಗೆ ಮುಂದಿನ ಐದು ವರ್ಷಗಳ ಕಾಲ ೧೦೦ ರೂಪಾಯಿ ಕೋಟಿ ಅನುದಾನ ನೀಡಬೇಕು. ಯುವಜನರ
ಕೌಶಲಾಭಿವೃದ್ಧಿ ತರಬೇತಿ ಮತ್ತು ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ ಕೈಗೊಳ್ಳುವ ಪ್ರಯತ್ನಗಳನ್ನು ದ್ವಿಗುಣಗೊಳಿಸಲು
ನೆರವಾಗಬೇಕು ಎಂದೂ ಮುಖ್ಯಮಂತ್ರಿ ಮನವಿ ಮಾಡಿದರು.
2018: ನವದೆಹಲಿ: ಮದ್ಯ ಉದ್ಯಮಿ ವಿಜಯ್ ಮಲ್ಯ ಮತ್ತು ಅವರ
ಕಂಪೆನಿಗಳ ವಿರುದ್ಧ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಒಕ್ಕೂಟಕ್ಕೆ
೬,೦೨೭ ಕೋಟಿ ರೂಪಾಯಿಗಳಷ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ದೋಷಾರೋಪ ಪಟ್ಟಿಯನ್ನು
(ಚಾರ್ಜ್‌ಶೀಟ್) ಶೀಘ್ರದಲ್ಲೇ ಸಲ್ಲಿಸಲು ಜಾರಿ ನಿರ್ದೇಶನಾಲಯ (ಇಡಿ) ಸಿದ್ಧತೆ ನಡೆಸಿತು. ಹೊಸ ದೋಷಾರೋಪ ಪಟ್ಟಿಯೊಂದಿಗೆ ಕೇಂದೀಯ ತನಿಖಾ ಸಂಸ್ಥೆಯು
ಇತ್ತೀಚೆಗೆ ಹೊರಡಿಸಲಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಸುಗ್ರೀವಾಜ್ಞೆಯ ಅಡಿಯಲ್ಲಿ ಮಲ್ಯ ಮತ್ತು
ಅವರ ಕಂಪೆನಿಗಳ ೯೦೦೦ ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ತತ್ ಕ್ಷಣ ಮುಟ್ಟುಗೋಲು ಹಾಕಿಕೊಳ್ಳಲು
ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಲಿದೆ ಎಂದು ಅಧಿಕಾರಿಗಳು ಹೇಳಿದರು. ಜಾರಿ ನಿರ್ದೇಶನಾಲಯವು ಪ್ರಸ್ತುತ ಲಂಡನ್ನಿನಲ್ಲಿ ಇರುವ
ಮಲ್ಯ ವಿರುದ್ಧ ಐಡಿಬಿಐ ಬ್ಯಾಂಕಿಗೆ ಕಿಂಗ್ ಫಿಶರ್ ಏರ್ ಲೈನ್ಸ್ (ಕೆಎಫ್ ಎ) ೯೦೦ ಕೋಟಿ ರೂಪಾಯಿಗಳ
ಸಾಲವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೊದಲ ದೋಷಾರೋಪ ಪಟ್ಟಿಯನ್ನು ಕಳೆದ ವರ್ಷ ಸಲ್ಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ೯,೮೯೦ ಕೋಟಿ ರೂಪಾಯಿ ಮೌಲ್ಯದ
ಆಸ್ತಿಯನ್ನು ಈವರೆಗೆ ಮುಟ್ಟುಗೋಲು ಹಾಕಿಕೊಂಡಿತ್ತು.
೨೦೦೫-೧೦ರ ಅವಧಿಯಲ್ಲಿ ಮಲ್ಯ ಕಂಪೆನಿಗಳು ಪಡೆದ ಸಾಲದ ಮರುಪಾವತಿ ಬದ್ಧತೆಗಳನ್ನು ಪೂರೈಸದ
ಪರಿಣಾಮವಾಗಿ ಆಗಿರುವ ೬,೦೨೭ ಕೋಟಿ ರೂಪಾಯಿ ನಷ್ಟಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳ ಒಕ್ಕೂಟದ ಪರವಾಗಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ ಐ) ಸಲ್ಲಿಸಿದ
ದೂರಿನ ತನಿಖೆ ಬಳಿಕ ಜಾರಿ ನಿರ್ದೇಶನಾಲಯವು ಈ ಹೊಸ ದೋಷಾರೋಪ ಪಟ್ಟಿಯನ್ನು ಸಲ್ಲಿಸುತ್ತಿದೆ. ಸಿಬಿಐ ದಾಖಲಿಸಿರುವ ಎಫ್ ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು
ತನ್ನ ತನಿಖೆಯನ್ನು ನಡೆಸಿದ್ದು, ಮುಂಬೈಯ ವಿಶೇಷ ನ್ಯಾಯಾಲಯದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್
ಎ) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಿದೆ ಎಂದು
ಅಧಿಕಾರಿಗಳು ಹೇಳಿದರು. ಎಸ್ ಬಿಐ ಮತ್ತು ಅದರ ಒಕ್ಕೂಟಕ್ಕೆ ಸೇರಿದ ಬ್ಯಾಂಕುಗಳು ಕಿಂಗ್ ಫಿಶರ್ ಏರ್
ಲೈನ್ಸ್ ಲಿಮಿಟೆಡ್ ಗೆ ವಿವಿಧ ಸಾಲ ಸವಲತ್ತುಗಲನ್ನು ೨೦೦೫ ಮತ್ತು ೨೦೧೦ರ ಅವಧಿಯಲ್ಲಿ ಒದಗಿಸಿದ್ದವು.
೨೦೦೯-೧೦ರಲ್ಲಿ ಕಂಪೆನಿಯು ತನ್ನ ಮರುಪಾವತಿ ಬದ್ಧತೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಬಳಿಕ
ಅವುಗಳು ಮರುಪಾವತಿಯಾಗದ ಸಾಲಗಳ ವರ್ಗಕ್ಕೆ ಸೇರ್ಪಡೆಯಾದವು ಎಂದು ಸಿಬಿಐ ಎಫ್ ಐಆರ್ ಹೇಳಿತು. ಈ ಹಿನ್ನೆಲೆಯಲ್ಲಿ
ಒಕ್ಕೂಟದ ಬ್ಯಾಂಕುಗಳು ಸಾಲ ಸವಲತ್ತುಗಳಿಗೆ ಯುನೈಟೆಡ್ ಬ್ರೀವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್ ನೀಡಿದ್ದ
ಕಾರ್ಪೋರೇಟ್ ಖಾತರಿ ಮತ್ತು ಮಲ್ಯ ಅವರ ವೈಯಕ್ತಿಕ ಖಾತರಿಯನ್ನು ಕೇಳಿದವು. ಆದರೆ ಕಂಪೆನಿಗಳ ಸಮೂಹದ
ಪ್ರವರ್ತಕ ಮತ್ತು ಇತರ ಅಪರಿಚಿತರು ಒಟ್ಟಾಗಿ ಸಾಲ ನೀಡಿದವರನ್ನು ವಂಚಿಸಲು ಸಂಚು ಹೆಣೆದಿದ್ದರು ಎಂದು
ಸಿಬಿಐ ಆಪಾದಿಸಿತು. ಹಣ ವರ್ಗಾವಣೆಗಾಗಿ ಹಲವಾರು ನಕಲಿ
ಕಂಪೆನಿಗಳನ್ನು ಹುಟ್ಟುಹಾಕಿದ್ದು ಕೂಡಾ ಬೆಳಕಿಗೆ ಬಂದಿದ್ದು ಈ ವಿವರಗಳನ್ನು ದೋಷಾರೋಪ ಪಟ್ಟಿಯಲ್ಲಿ
ಸೇರಿಸುವ ನಿರೀಕ್ಷೆಯಿತ್ತು. ಜಾರಿ ನಿರ್ದೇಶನಾಲಯವು
ನೂತನ ದೇಶಭ್ರಷ್ಟ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ತನಿಖಾ
ಸಂಸ್ಥೆಯಾಗಿರುವುದರಿಂದ ಮಲ್ಯ ಅವರನ್ನು ’ದೇಶಭ್ರಷ್ಟ’ ವರ್ಗಕ್ಕೆ ಸೇರಿದವರೆಂದು ಅಧಿಕೃತವಾಗಿ ಘೋಷಿಸಲು
ಕೋರುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿದವು. ಲಂಡನ್ನಿನಲ್ಲಿ ವಾಸವಾಗಿರುವ ಮಲ್ಯ ಅವರು ತಮ್ಮ ಮೇಲಿನ
ಆಪಾದನೆಗಳನ್ನು ತಿರಸ್ಕರಿಸಿ ಅದರ ವಿರುದ್ಧ ಹೋರಾಟ ನಡೆಸಿದರು.
2018: ಕಠ್ಮಂಡು: ಪ್ರಪಂಚದ ಅತಿ ಎತ್ತರದ ಶಿಖರವಾದ ಮೌಂಟ್
ಎವರೆಸ್ಟ್ ಏರುವುದು ಬಹುದೊಡ್ಡ ಸಾಧನೆ. ಆದರೆ ಸೌಂದರ್ಯದ ಖನಿಯಾಗಿರುವ ಪರ್ವತವನ್ನು ಕಸದ ತೊಟ್ಟಿಯನ್ನಾಗಿ
ಮಾರ್ಪಡಿಸುವುದು ಸಾಧನೆಯಲ್ಲ, ಮಾನವ ಕುಲ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುವ ಕೆಲಸ. ೮,೮೪೮ ಮೀಟರ್ (೨೯೦೨೯ ಅಡಿ) ಎತ್ತರದ ಎವರೆಸ್ಟ್ ಶಿಖರ ಈಗ
ತನ್ನ ಸೌಂದರ್‍ಯವನ್ನು ಕಳೆದುಕೊಳ್ಳುತ್ತಾ ಕಸದ ತೊಟ್ಟಿಯಾಗಿ ಪರಿವರ್ತನೆಗೊಳ್ಳುತ್ತಿದೆ. ವಾಣಿಜ್ಯ ಪರ್ವತಾರೋಹಣ ಹೆಚ್ಚುತ್ತಿರುವುದು ಎವರೆಸ್ಟ್
ಪರ್ವತಕ್ಕೆ ಇದೀಗ ಕುತ್ತಾಗಿ ಪರಿಣಮಿಸುತ್ತಿದೆ. ಪರ್ವತಾರೋಹಿಗಳ
ಅಸಡ್ಡೆ ಮನೋಭಾವವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಪರ್ವತಾರೋಹಣ ಕೈಗೊಳ್ಳಲು ಬೇಕಾದ ಸಾಧನಗಳಾದ ಹಗ್ಗ, ಎತ್ತರಕ್ಕೆ ಏರಲು ಬೇಕಾದ ಸಾಧನಗಳು, ಖಾಲಿ
ಗ್ಯಾಸ್ ಸಿಲಿಂಡರ್‌ಗಳು, ಪ್ಲಾಸ್ಟಿಕ್ ಬ್ಯಾಗ್, ನೀರಿನ
ಬಾಟಲಿ ಸೇರಿದಂತೆ ತಾವು ಒಯ್ಯುವ ತ್ಯಾಜ್ಯಗಳನ್ನು ಶಿಖರ ಏರಿ ವಾಪಸ್ ಬರುವ ವೇಳೆಯಲ್ಲಿ ಪರ್ವತಾರೋಹಿಗಳು
ಪರ್ವತದಲ್ಲಿ ಎಲ್ಲೆಂದರಲ್ಲಿ ಬಿಸಾಡಿ ವಾಪಸಾಗುತ್ತಿರುವುದು ಸಮಸ್ಯೆಯ ಮೂಲ ಎಂದು ಹೇಳಲಾಗಿದೆ. ಮೌಂಟ್ ಎವರೆಸ್ಟ್ ಅಡಿಯಲ್ಲಿ ಟನ್‌ಗಟ್ಟಲೇ ತ್ಯಾಜ್ಯ ಸಂಗ್ರಹವಾಗುತ್ತಿದೆ.
ಇದನ್ನು ನೋಡಲು ಬೇಸರವಾಗುತ್ತದೆ. ಈ ವರ್ಷ ಸುಮಾರು ೬೦೦ಕ್ಕೂ ಹೆಚ್ಚು ಮಂದಿ ಶಿಖರವೇರಿದ್ದು, ಪರಿಸ್ಥಿತಿ
ತುಂಬಾ ಶೋಚನೀಯವಾಗಿದೆ ಎಂದು ೧೮ ಬಾರಿ ಎವರೆಸ್ಟ್ ಏರಿರುವ ಪರ್ವತಾರೋಹಿ ಪೆಂಬಾ ದೊರ್ಜೆ ಶೆರ್ಪಾ ಬೇಸರ
ವ್ಯಕ್ತಪಡಿಸಿದರು. ಸಾಗರಮಠ ಮಾಲಿನ್ಯ ನಿಯಂತ್ರಣ ಸಮಿತಿಯ
(ಎಸ್‌ಪಿಸಿಸಿ) ಪ್ರಕಾರ, ೨೦೧೭ರಲ್ಲಿ ನೇಪಾಳವು ೨೫ ಟನ್ ಕಸ ಹಾಗೂ ೧ ೫ ಟನ್ ಮಾನವ ತ್ಯಾಜ್ಯಗಳನ್ನು
ಶಿಖರದಿಂದ ಹೊರಹಾಕಿತ್ತು. ಈ ವರ್ಷ ಇದಕ್ಕೂ ಹೆಚ್ಚು ತ್ಯಾಜ್ಯವನ್ನು ತೆಗೆಯಲಾಗಿದೆ. ಆದರೆ ತೆಗೆದಷ್ಟೇ
ಸಲೀಸಾಗಿ ಕಸ ಶೇಖರಣೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತು. ೬೫ ವರ್ಷಗಳ ಹಿಂದೆ ಎಡ್ಮಂಡ್
ಹಿಲರಿ ಮತ್ತು ತೇನ್‌ಸಿಂಗ್ ಅವರು ಪ್ರಪ್ರಥಮ ಬಾರಿಗೆ ಎವರೆಸ್ಟ್ ಶಿಖರ ಏರಿದ ಬಳಿಕ ಈವರೆಗೆ ಎವರೆಸ್ಟ್
ಏರಿರುವ ಪರ್ವತಾರೋಹಿಗಳು ಬಿಸಾಕಿ ಬಂದಿರುವ ಕಸ, ಜಾಗತಿಕ ತಾಪಮಾನ ಏರಿಕೆ ಪರಿಣಾಮವಾಗಿ ಹಿಮಗಡ್ಡೆ
ಕರಗುವಾಗ ಅದರ ಜೊತೆ ಸೇರಿ ನೀರನ್ನೂ ಮಲಿನಗೊಳಿಸುತ್ತಿದೆ.
ಐದು ವರ್ಷಗಳ ಹಿಂದೆ ನೇಪಾಳ ಎವರೆಸ್ಟ್ ಶಿಖರದಲ್ಲಿ ಸಂಗ್ರಹವಾಗಿದ್ದ ಕಸ ನಿವಾರಣೆ ಕ್ರಮವಾಗಿ
ಪರ್ವತಾರೋಹಿಗಳಿಂದ ಕಸ ನಿವಾರಣೆ ಠೇವಣಿಯಾಗಿ ೪೦೦೦ ಡಾಲರ್ ಹಣ ಪಡೆಯುವ ಕ್ರಮ ಜಾರಿಗೊಳಿಸಿತ್ತು. ಈ
ಕ್ರಮದ ಅಡಿಯಲ್ಲಿ ಪ್ರತಿಯೊಬ್ಬ ಪರ್ವತಾರೋಹಿ ಕನಿಷ್ಠ ೮ ಕಿಲೋಗ್ರಾಮ್ (೧೮ ಪೌಂಡ್) ತ್ಯಾಜ್ಯವನ್ನು
ಮರಳಿ ತಂದರೆ ಮಾತ್ರ ಈ ಠೇವಣಿ ಹಣ ಮರುಪಾವತಿ ಮಾಡಲಾಗುತ್ತದೆ. ಹಿಮಾಲಯ ಪರ್ವತದ ಟಿಬೆಟ್ ಕಡೆಯಲ್ಲಾದರೆ
ಪರ್ವತಾರೋಹಿಗಳಿಗೆ ತ್ಯಾಜ್ಯ ವಾಪಸ್ ತರದೇ ಇದ್ದಲ್ಲಿ ಕಿಲೋ ಗ್ರಾಂ ಗೆ ೧೦೦ ಡಾಲರ್ ನಷ್ಟು ದಂಡವನ್ನು
ವಿಧಿಸುವ ಕ್ರಮವನ್ನೂ ಜಾರಿಗೆ ತರಲಾಗಿದೆ. ದುರಂತವೆಂದರೆ,
ತ್ಯಾಜ್ಯವನ್ನು ಹಿಂದಕ್ಕೆ ತರುವುದಕ್ಕೆ ಬದಲಾಗಿ ಬಹಳಷ್ಟು ಪರ್ವತಾರೋಹಿಗಳು ಠೇವಣಿ ಮುಟ್ಟುಗೋಲು ಹಾಕಿಕೊಳ್ಳುವಂತೆ
ಹೇಳಿ ವಾಪಸಾಗುತ್ತಿದ್ದಾರೆ. ಪರ್ವತಾರೋಹಣ ಅನುಭವಕ್ಕಾಗಿ
ತಾವು ಮಾಡುವ ಅಂದಾಜು ೨೦,೦೦೦ ಡಾಲರಿನಿಂದ ೧,೦೦,೦೦೦ ಡಾಲರ್ ಮುಂದೆ ಈ ದಂಡ ಜುಜುಬಿ ಎಂದು ಭಾವಿಸಿ
ಅದನ್ನು ಬಿಟ್ಟು ಬಿಡುವವರೇ ಹೆಚ್ಚು.
ಬಹಳಷ್ಟು ಮಂದಿಗೆ
ಇದೊಂದು ಲೆಕ್ಕಕ್ಕೇ ಬಾರದ ಹ. ಕೆಲವು ಅಧಿಕಾರಿಗಳು ಸಣ್ಣ ಪ್ರಮಾಣದ ಲಂಚಕ್ಕಾಗಿ ಇಂತಹವರನ್ನು ಬಿಟ್ಟು
ಬಿಡುವುದು ಸಮಸ್ಯೆಯನ್ನು ಬೆಟ್ಟವಾಗಿಸಿದೆ ಎನ್ನುತ್ತಾರೆ ಪೆಂಬಾ. ಬೇತಾಳವಾಗಿ ಕಾಡುತ್ತಿರುವ ತ್ಯಾಜ್ಯ ನಿರ್ವಹಣೆ ಬಗ್ಗೆ ಸಾಕಷ್ಟು
ಮಂದಿ ನಿರ್ಲಕ್ಯ ವಹಿಸುತ್ತಿದ್ದಾರೆ. ಲಂಚ ಪಡೆದುಕೊಳ್ಳುವ ಮೂಲಕ ವಂಚನೆ ಎಸಗುತ್ತಿದ್ದಾರೆ. ಪರಿಸರ
ಜಾಗೃತಿಯ ಕುರಿತಾಗಿ ಕೇವಲ ಶಿಬಿರಗಳನ್ನು ಮಾಡಿದರೆ ಮಾತ್ರ ಸಾಲದು. ಸ್ವಚ್ಛತೆ ಕಾಪಾಡುವ ಮನೋಭಾವ ಎಲ್ಲರಲ್ಲೂ
ಮೈಗೂಡಬೇಕು ಎಂದು ಪೆಂಬಾ ಅವರು ಅಭಿಪ್ರಾಯಪಟ್ಟರು.
2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ
ಸರ್ಕಾರ ಮುಸ್ಲಿಮರ ವಿಶ್ವಾಸ ಗಳಿಸಲು, ಇನ್ನಷ್ಟು ಕೆಲಸ ಮಾಡಬೇಕಾಗಿದೆ ಎಂದು ಕೇಂದ್ರ ಸಚಿವ ಮುಖ್ತಾರ್
ಅಬ್ಬಾಸ್ ನಖ್ವಿ ಇಲ್ಲಿ ಹೇಳಿದರು. ಮುಸಲ್ಮಾನರ ಮನಸ್ಸು
ಕಳೆದ ೭೦ ವರ್ಷಗಳಿಂದ ಬದಲಾಗಿಲ್ಲ, ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತ್ರಿವಳಿ ತಲಾಕ್ ಸಹಿತ
ಮುಸ್ಲಿಮರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳನ್ನು
ಅವರಿಗೆ ನೆನಪಿಸಬೇಕಾಗಿದೆ ಎಂದು ಅವರು ನುಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಮತ್ತು ಮುಸ್ಲಿಂ ಮಹಿಳೆಯರು ಬಿಜೆಪಿ ಅವರಿಗಾಗಿ ಏನು
ಮಾಡಿದೆ ಎನ್ನುವುದನ್ನು ಅರಿತುಕೊಳ್ಳುತ್ತಿದ್ದಾರೆ, ಇದೊಂದು ಉತ್ತಮ ಬೆಳವಣಿಗೆ ಎಂದು ನಖ್ವಿ ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳೆಲ್ಲಾ ಒಟ್ಟಾಗಿ ಬಿಜೆಪಿ
ವಿರುದ್ಧ ಹೋರಾಡಲಿವೆ. ಆದರೆ ಅದಕ್ಕೆ ಬಿಜೆಪಿ ಸೂಕ್ತ ಕಾರ್ಯತಂತ್ರ ರೂಪಿಸಲಿದೆ. ಕಾಂಗ್ರೆಸ್ ಎಲ್ಲ
ಮುಸ್ಲಿಮರು ಕೂಡ ಅವರಿಗೇ ಮತ ನೀಡುತ್ತಾರೆ ಎಂದುಕೊಂಡಿದೆ. ಆದರೆ ಅವರಿಗಾಗಿ ಅದು ಏನನ್ನೂ ಮಾಡಿಲ್ಲ
ಎಂದು ನಖ್ವಿ ಹೇಳಿದರು. ಬಿಜೆಪಿ ಮುಸ್ಲಿಮರ ಅಭಿವೃದ್ಧಿಗಾಗಿ
ಹಲವು ಯೋಜನೆ ಕೈಗೊಂಡಿದೆ. ಹೀಗಾಗಿ ಮುಸ್ಲಿಮರು ಬಿಜೆಪಿಯ ಕುರಿತು ಒಲವು ಹೊಂದಿದ್ದಾರೆ. ಬಿಜೆಪಿ ವೋಟ್
ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ, ಆದರೆ ಕಾಂಗ್ರೆಸ್ ಮತ್ತು ವಿಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ
ಮಾಡುತ್ತವೆ ಎಂದು ಸಚಿವ ನಖ್ವಿ ಆರೋಪಿಸಿದರು.
2009: ರೈಲಿನಲ್ಲಿದ್ದ ಪ್ರಯಾಣಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಡಕಾಯತಿ ನಡೆಸಿದ್ದ ಆರು ಜನರ ಪೈಕಿ ಇಬ್ಬರನ್ನು ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಹಾಗೂ ಇನ್ನಿಬ್ಬರನ್ನು ಲೋಂಡಾದಲ್ಲಿ ಪೊಲೀಸರು ನಸುಕಿನ ಜಾವ ಬಂಧಿಸಿದರು. ಧಾರವಾಡ ರೈಲ್ವೆ ನಿಲ್ದಾಣದಲ್ಲಿ ನಾಲ್ವರು ಡಕಾಯಿತರು ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿ ಇಬ್ಬರನ್ನು ಬಂಧಿಸಿದರು. ಬಂಧಿತರಿಂದ ಎರಡು ಮೊಬೈಲ್ ಸೆಟ್‌ಗಳು, 2000 ರೂ. ನಗದು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿ ಕೊಳ್ಳಲಾಯಿತು. ಹುಬ್ಬಳ್ಳಿಯ ರಾಮನಗರದ ನಾಗರಾಜ ಬಾಬು ಪವಾರ (18), ಧಾರವಾಡ ತಾಲ್ಲೂಕಿನ ಪುಡಕಲಟ್ಟಿ ಗ್ರಾಮದ ಸಂತೋಷ ಬಸಯ್ಯ ಪೂಜಾರ (19) ಬಂಧಿತರು. ಪವಾರ ಕಾಲಿಗೆ ಎರಡು ಗುಂಡುಗಳು ತಾಗಿದರೆ, ಸಂತೋಷನ ಕಾಲಿಗೆ ಒಂದು ಗುಂಡು ತಾಗಿತು.2009: ರಾಜ್ಯದ ವಿವಿಧೆಡೆ ಸುರಿದ ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ ಒಟ್ಟು ಏಳು ಮಂದಿ ಬಲಿಯಾದರು. ಗುಲ್ಬರ್ಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಐವರು ಮೃತರಾದರು. ಬಾಗಲಕೋಟೆಯ ಗದ್ದನಕೇರಿಯಲ್ಲಿ ಒಬ್ಬ ವೃದ್ಧೆ ಮನೆ ಕುಸಿತದಿಂದ ಸಾವಿಗೀಡಾದರು. ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಬ್ಯಾಕೋಡ ಗ್ರಾಮದ ಬಳಿ ಬಾಲಕನೊಬ್ಬ ಹಳ್ಳ ದಾಟುವಾಗ ನೀರು ಪಾಲಾದ. ಗುಲ್ಬರ್ಗ ತಾಲ್ಲೂಕಿನ ಭೂಪಾಲತೆಗನೂರ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ ಜಟ್ಟೆಪ್ಪ (25) ಹಾಗೂ ಅನಿಲ್ ಕುಪೇಂದ್ರ (19) ಎಂಬವರು ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಆಶ್ರಯ ಪಡೆದಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತರಾದರು. ಅಫಜಲಪೂರ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮರಳುತ್ತಿದ್ದ ಮಾಶಾಳ ಗ್ರಾಮದ ಕಾಶಿನಾಥ ಭೀಮಶಾ ಭಜಂತ್ರಿ (55) ಹಾಗೂ ಗುಲ್ಬರ್ಗ ಸಂತ್ರಸವಾಡಿಯ ರಾಣಪ್ಪ ಭೀಮಶಾ ಚೌಧ (56) ಸಿಡಿಲಿಗೆ ಬಲಿಯಾದರು.
2009: ವಿಶ್ವದ ಬಹುದೊಡ್ಡ ಸೇನಾಪಡೆಯ ಮುಖ್ಯಸ್ಥರೂ ಆದ ಅಧ್ಯಕ್ಷ ಬರಾಕ್ ಒಬಾಮ ಅವರ ಮೇಲೆ 'ಬಂಡುಕೋರ'ನೊಬ್ಬ 'ದಾಳಿ' ನಡೆಸಿದ! ಕೂಡಲೇ 'ಕಠೋರ' ನಿರ್ಧಾರ ಕೈಗೊಂಡ ಅವರು ಆ ಉಗ್ರನನ್ನು ಕ್ಷಣಮಾತ್ರದಲ್ಲಿ ಹೊಸಕಿ ಹಾಕಿದರು! ಈ ಆಕ್ರಮಣ ನಡೆದದ್ದು ಸದಾ ಸರ್ಪಗಾವಲಿರುವ ಶ್ವೇತಭವನದಲ್ಲಿ. ಈ ಭಯೋತ್ಪಾದಕ ಯಾರು ಗೊತ್ತೆ? ನೊಣದ ಜಾತಿಗೆ ಸೇರಿದ ಒಂದು ಕ್ರಿಮಿ! ಸಿಎನ್‌ಬಿಸಿ ಸುದ್ದಿವಾಹಿನಿಗೆ ಸಂದರ್ಶನ ನೀಡುತ್ತಿದ್ದ ವೇಳೆ ಒಬಾಮ ಅವರನ್ನು ನೊಣ ಸುತ್ತುವರೆಯಿತು. 'ಇಲ್ಲಿಂದ ತೊಲಗು' ಎಂದು ಅವರು 'ಆಜ್ಞೆ'ಯಿತ್ತರೂ ಅದು 'ಕೇರ್' ಮಾಡಲಿಲ್ಲ. ಕೊನೆಗೆ ಒಬಾಮ ಹಿಂಸೆಯ ಹಾದಿ ತುಳಿದು 'ವೈರಿ ಸಂಹಾರ' ನಡೆಸಿದರು. ಕ್ಷಣಾರ್ಧದಲ್ಲಿ ನಡೆದ ಈ 'ಯುದ್ಧ'ವನ್ನು ಇಡಿಯಾಗಿ ಕ್ಯಾಮರಾಗಳು ಸೆರೆಹಿಡಿದವು. ನಂತರ ಸಂದರ್ಶಕರನ್ನು ಉದ್ದೇಶಿಸಿ ಒಬಾಮಾ 'ಈಗ ನಾವು ಯಾವ ಪ್ರಶ್ನೆಯಲ್ಲಿದ್ದೆವು? ಬಹಳಾ ಚೆನ್ನಾಗಿತ್ತಲ್ಲ. ನಾನು ನೊಣ ಹಿಡಿದೆ' ಎಂದರು.
2009: ಬೆಂಬಲಿಗರ ರಂಪಾಟ, ತೀವ್ರ ವಿರೋಧದ ನಡುವೆ ಮುಜರಾಯಿ ಮತ್ತು ವಸತಿ ಖಾತೆ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
2009: ಮುಂಬೈ ಸೂಚ್ಯಂಕ ವಹಿವಾಟಿನಲ್ಲಿ 435 ಅಂಶಗಳಷ್ಟು ಕುಸಿತ ಕಂಡಿತು. ಇದು ಈ ವರ್ಷದ ನಾಲ್ಕನೇ ಅತಿ ದೊಡ್ಡ ಕುಸಿತ. ಸದ್ಯದ ಆರ್ಥಿಕ ಬಿಕ್ಕಟ್ಟು ಸರಿಹೋಗಲು ದೀರ್ಘ ಸಮಯ ಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಹೇಳಿದ್ದು ಹೂಡಿಕೆದಾರರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿ ಈ ಕುಸಿತಕ್ಕೆ ಕಾರಣವಾಯಿತು. ದಿನದ ಕೊನೆಯ ಅರ್ಧ ಗಂಟೆ ವಹಿವಾಟಿನಲ್ಲಿ ಒತ್ತಡಕ್ಕೆ ಒಳಗಾದ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದರು. 435.07 ಅಂಶಗಳಷ್ಟು ಕುಸಿತ ಕಂಡು 14,522.84 ಅಂಶಗಳಿಗೆ ಸೂಚ್ಯಂಕ ಸ್ಥಿರಗೊಂಡಿತು.
2009: ನೀವು ಅಕಾಲ ನರೆ ಸಮಸ್ಯೆಗೆ ತುತ್ತಾಗಿದ್ದೀರಾ? ಅದಕ್ಕೆ ಕಾರಣ ಮಾನಸಿಕ ಒತ್ತಡ ಎಂದು ಸಂಶೋಧನೆಯೊಂದು ತಿಳಿಸಿತು. ತೀವ್ರ ಒತ್ತಡದಿಂದಾಗಿ ಡಿಎನ್‌ಎಗೆ ತೊಂದರೆಯಾಗಿ ಕೂದಲನ್ನು ಕಪ್ಪಗಿರಿಸುವ ಜೀವಕೋಶಗಳು ಉತ್ಪತ್ತಿಯಾಗುವುದಿಲ್ಲ. ಹೀಗಾಗಿ ಒತ್ತಡದಿಂದ ದೂರವಿದ್ದಷ್ಟೂ ನರೆ ಆವರಿಸುವುದಿಲ್ಲ ಎಂದು ಟೋಕಿಯೊ ವೈದ್ಯಕೀಯ ಮತ್ತು ದಂತವಿಜ್ಞಾನ ವಿಶ್ವವಿದ್ಯಾಲಯದ ಎಮಿ ನಿಶಿಮುರಾ ಪ್ರಕಟಿಸಿದರು. ಜೀವಕೋಶವೊಂದು ಪ್ರತಿ ದಿನ 1 ಲಕ್ಷಕ್ಕೂ ಹೆಚ್ಚು ಡಿಎನ್‌ಎ ನಾಶಕಗಳ ವಿರುದ್ಧ ಹೋರಾಡುತ್ತದೆ. ಇಂಥ ಜೀವಕೋಶಗಳು ನಾಶವಾದರೆ ಡಿಎನ್‌ಎ ಗುಣಮಟ್ಟ ಕೂಡ ಕುಸಿಯುತ್ತದೆ. ಹೆಚ್ಚಾಗಿ ಒತ್ತಡದಿಂದ ಡಿಎನ್‌ಎ ಶಕ್ತಿ ಕುಗ್ಗುತ್ತದೆ ಎಂದು ನಿಶೀಮೊರಾ ತಿಳಿಸಿದರು. ಈ ಸಂಶೋಧನೆಯ ವರದಿ ಸೆಲ್ ಜರ್ನಲ್‌ನಲ್ಲಿ ಪ್ರಕಟವಾಯಿತು.
2009: ವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಪ್ರತಿಪಾದಿಸಿದ 'ಹಾಕಿಂಗ್ ವಿಕಿರಣ'ಗಳು ವಾಸ್ತವವಾಗಿಯೂ ಅಸ್ತಿತ್ವದಲ್ಲಿವೆಯೇ ಎಂಬುದನ್ನು ಪತ್ತೆಹಚ್ಚಲು ನೆರವಾಗುವ 'ಕೃತಕ ಕಪ್ಪುಕುಳಿ'ಯನ್ನು ತಾವು ಸೃಷ್ಟಿಸಿರುವುದಾಗಿ ವಿಜ್ಞಾನಿಗಳು ಲಂಡನ್‌ನಲ್ಲಿ ಪ್ರಕಟಿಸಿದರು. ಶೂನ್ಯಕ್ಕಿಂತ ಅತ್ಯಂತ ಕಡಿಮೆ ಮಟ್ಟಕ್ಕೆ ತಂಪು ಮಾಡಿದ ರುಬಿಡಿಯಮ್ ಪರಮಾಣುಗಳನ್ನು ಶಬ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಕಾಂತಕ್ಷೇತ್ರದೆಡೆಗೆ ಸೆಳೆಯವ ಮೂಲಕ ಕೃತಕ ಕಪ್ಪುಕುಳಿಗಳನ್ನು ಸೃಷ್ಟಿಸಬಹುದು ಎಂದು ಟೆಕ್ನಿಯಾನ್- ಇಸ್ರೇಲ್ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ಹೇಳಿದರು. ವಸ್ತುವಿನ ದ್ರವ್ಯರಾಶಿ ಅತ್ಯಧಿಕ ಮಟ್ಟಕ್ಕೆ ಸಂಚಯವಾಗಿ ಇಡೀ ದ್ರವ್ಯರಾಶಿ ಏಕೈಕ ಬಿಂದುವಿನಲ್ಲಿ ಸಾಂದ್ರವಾದಾಗ ಸೃಷ್ಟಿಯಾಗುವ ಕಪ್ಪು ಕುಳಿಗಳು ಕಾಲಕ್ರಮೇಣ ಅಗೋಚರವಾಗುವ ಗುಣಲಕ್ಷಣ ಹೊಂದಿವೆ ಎಂದು 30 ವರ್ಷಗಳ ಹಿಂದೆ ಹಾಕಿಂಗ್ ಸಿದ್ಧಾಂತ ಮಂಡಿಸಿದ್ದರು.
2009: ಒಂದು ತಿಂಗಳಿನಿಂದ ತಮ್ಮ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಗಳಿಗೆ ಜನಾಂಗೀಯ ದ್ವೇಷ ಕಾರಣ ಎಂಬುದನ್ನು ಭಾರತದಲ್ಲಿನ ಆಸ್ಟ್ರೇಲಿಯಾದ ರಾಯಭಾರಿ ಜಾನ್ ಮೆಕಾರ್ತಿ ಒಪ್ಪಿಕೊಂಡರು. ಇಂತಹ ಘಟನೆಗಳನ್ನು ಕೊನೆಗಾಣಿಸಿ ಭವಿಷ್ಯದಲ್ಲಿ ಅವು ಮರುಕಳಿಸದಂತೆ ಮಾಡಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ ಎಂದು ಅವರು ಹೇಳಿದರು.
2009: ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ಹಿರಿಯ ಸಮಾಜವಾದಿ ಎಂ.ಪಿ.ಈಶ್ವರಪ್ಪ (81) ಈದಿನ ಹೃದಯಾಘಾತದಿಂದ ನಿಧನರಾದರು. ಕರ್ನಾಟಕ ಸೋಷಿಯಲಿಸ್ಟ್ ಪಕ್ಷದ ಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು 1963ರಿಂದ 67ರವರೆಗೆ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ನಂತರ ಅವರು ಕಾಂಗ್ರೆಸ್ ಪಕ್ಷ ಸೇರಿದರು. ಅವರು ಕರ್ನಾಟಕ ಗೃಹ ಮಂಡಲಿಯ ಅಧ್ಯಕ್ಷರಾಗಿ, ಓಎನ್‌ಜಿಸಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
2009: ಕಂಪ್ಲಿಗೆ ಸಮೀಪದ ನಂ.10 ಮುದ್ದಾಪುರ ಗ್ರಾಮದ ಬಯಲಾಟ ನಿರ್ದೇಶಕರಾಗಿದ್ದ ಎಚ್. ಪಂಪಾಪತಿ ಮಾಸ್ತರ್ (65) ಹೃದಯಾಘಾತದಿಂದ ಮೃತರಾದರು. ಪಂಪಾಪತಿ ಇಲ್ಲಿಯವರೆಗೆ 150 ಬಯಲಾಟಗಳ ನಿರ್ದೇಶನ ಮಾಡಿದ್ದರು. ಜತೆಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು. 30 ಬಯಲಾಟಗಳಲ್ಲಿ ಸ್ವತಃ ಅಭಿನಯಿಸಿದ್ದಲ್ಲದೆ, 30ಕ್ಕೂ ಹೆಚ್ಚು ಬಯಲಾಟಗಳಲ್ಲಿ ಮಹಿಳಾ ಪಾತ್ರಗಳಲ್ಲಿ ಅಭಿನಯಿಸಿ ಈ ಭಾಗದಲ್ಲಿ ಎಲ್ಲಾ ಬಯಲಾಟಪ್ರಿಯರ ಮನಸೂರೆಗೊಂಡಿದ್ದರು.
2009: ಉದ್ದೀಪನಾ ಮದ್ದು ಸೇವಿಸಿದ್ದನ್ನು ಒಪ್ಪಿಕೊಂಡ ಸೈಕ್ಲಿಸ್ಟ್ ಟೇಲರ್ ಹ್ಯಾಮಿಲ್ಟನ್ ಮೇಲೆ ಅಮೆರಿಕಾದ ಉದ್ದೀಪನಾ ಮದ್ದು ತಡೆ ಘಟಕವು (ಯುಎಸ್‌ಎಡಿಎ) ಎಂಟು ವರ್ಷಗಳ ಅವಧಿಗೆ ನಿಷೇಧ ಹೇರಿತು. 38 ವರ್ಷ ವಯಸ್ಸಿನ ಹ್ಯಾಮಿಲ್ಟನ್ ಮದ್ದು ಸೇವಿಸಿ ಸ್ಪರ್ಧಿಸಿದ್ದಾಗಿ ಯುಎಸ್‌ಎಡಿಎ ಮುಂದೆ ತಪ್ಪೊಪ್ಪಿಕೊಂಡಿದ್ದರು. ಆದ್ದರಿಂದ ಅವರ ವಿರುದ್ಧ ಶಿಕ್ಷೆಯನ್ನು ಪ್ರಕಟಿಸಲಾಯಿತು. 8 ವರ್ಷಗಳ ನಿಷೇಧದಿಂದಾಗಿ ಹ್ಯಾಮಿಲ್ಟನ್ ಅವರ ಕ್ರೀಡಾ ಭವಿಷ್ಯವೇ ಕೊನೆಗೊಂಡಂತಾಯಿತು. 2004ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ವರ್ಣ ಗೆದ್ದಿದ್ದ ಹ್ಯಾಮಿಲ್ಟನ್ ಕಳೆದ ಏಪ್ರಿಲ್‌ನಲ್ಲಿಯೇ ತಾವು ಬಳಸುವ ಔಷಧಿಯಲ್ಲಿ ನಿಷೇಧಿತ ಮದ್ದಿನ ಅಂಶವಿದೆ ಎನ್ನುವುದನ್ನು ಪ್ರಕಟಿಸಿದ್ದರು.
2008: ವಿತರಣೆ ಚೀಟಿ ಪಡೆದರೂ ರಸಗೊಬ್ಬರ ನೀಡುತ್ತಿಲ್ಲ ಎಂದು ಆರೋಪಿಸಿ ದಾವಣಗೆರೆಯ ಗಾಂಧಿ ವೃತ್ತದಲ್ಲಿ ರೈತರು ದಿಡೀರ್ ಪ್ರತಿಭಟನೆ ನಡೆಸಿದರು.
2007: ತೆರೆ ಕಂಡ ಮೊದಲ ದಿನವೇ 60 ಲಕ್ಷ ರೂಪಾಯಿ (5,60,00 ರಿಂಗೆಟ್ಸ್) ಸಂಗ್ರಹಿಸುವ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಶಿವಾಜಿ' ಮಲೇಷ್ಯಾದಲ್ಲೂ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿತು.
2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಎಚ್ಐವಿ/ಏಡ್ಸ್ ಬಗ್ಗೆ ಜಾಗೃತಿ ಉಂಟುಮಾಡಲು ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ `ಸಿಲ್ವರ್ ಸ್ಟಾರ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಂಡನ್ನಿನ ಬ್ರಿಟನ್ ವಿದೇಶ ಮತ್ತು ಕಾಮನ್ವೆಲ್ತ್ ಕಚೇರಿಯ ದರ್ಬಾರ್ ಕೋರ್ಟಿನಲ್ಲಿ ಈದಿನ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬ್ರಿಟನ್ ಸಂಸತ್ತಿನ ಕೆಳಮನೆನಾಯಕ ಜಾಕ್ ಸ್ಟ್ರಾ 31ರ ಹರೆಯದ ಶಿಲ್ಪಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಲೇಬರ್ ಪಕ್ಷದ ಸಂಸದ ಕೀತ್ ವಾಜ್ ಅವರು ಚುನಾಯಿತಗೊಂಡ 20ನೇ ವರ್ಷಾಚರಣೆಯ ಪ್ರಯುಕ್ತ ಸಮಾರಂಭ ಏರ್ಪಡಿಸಲಾಗಿತ್ತು
2007: ಸ್ಕಾಟ್ಲೆಂಡಿನ 22 ವರ್ಷ ವಯಸ್ಸಿನ ಹವ್ಯಾಸಿ ಫುಟ್ಬಾಲ್ ಆಟಗಾರ ಅಲೆಕ್ಸ್ ಮೆಕ್ ಗ್ರೆಗೊರ್ ಅವರು ಪಂದ್ಯದ ಆರಂಭದ ಮೂರೇ ನಿಮಿಷದ ಅವಧಿಯಲ್ಲಿ `ಹ್ಯಾಟ್ರಿಕ್' ಸಾಧನೆ ಮಾಡಿ, ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾದರು. ಲಂಡನ್ನಿನ ಫುಟ್ಬಾಲ್ ಲೀಗ್ ಪಂದ್ಯವೊಂದರಲ್ಲಿ ಕುಲ್ಲೆನ್ ಕ್ಲಬ್ ವಿರುದ್ಧ ಬಿಷಪ್ ಮಿಲ್ ವಿಲ್ಲಾ ಕ್ಲಬ್ ತಂಡದ ಪರವಾಗಿ ಆಡಿದ ಅಲೆಕ್ಸ್ ತೀರ ಕಡಿಮೆ ಅವಧಿಯಲ್ಲಿ ಮೂರು ಬಾರಿ ಚೆಂಡನ್ನು ಗುರಿ ಮುಟ್ಟಿಸಿ, ಗಮನ ಸೆಳೆದರು. ಶೌಚಾಲಯ ದುರಸ್ತಿ ಮಾಡುವ ಉದ್ಯೋಗಿಯಾದ ಅಲೆಕ್ಸ್ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಗೋಲು ಗಳಿಸಿದರು. ವಿಜಯ ಸಾಧಿಸಿದ ಬಿಷಪ್ ಮಿಲ್ ಪರ ಹನ್ನೊಂದು ಗೋಲುಗಳು ದಾಖಲಾದವು. ಈ ಸಾಧನೆಯೊಂದಿಗೆ ಅಲೆಕ್ಸ್ ಹೆಸರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿತು.
2007: ಮರಗಳನ್ನು ಸ್ಥಳಾಂತರಿಸುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್)ದ ಯೋಜನೆ ಯಶಸ್ಸಿನತ್ತ ಸಾಗುವ ಸಾಧ್ಯತೆ ಕಂಡುಬಂದಿತು. ಎಂ.ಜಿ.ರಸ್ತೆಯಿಂದ ಪಕ್ಕದ ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಸ್ಥಳಾಂತರಗೊಳಿಸಲಾದ ಐದು ಮರಗಳಲ್ಲಿ ಮೂರರಲ್ಲಿ ಹೊಸ ಚಿಗುರು ಮೂಡಿದ್ದು ಬೆಳಕಿಗೆ ಬಂದಿತು. ಮರಗಳ ಸ್ಥಳಾಂತರ ಕಾರ್ಯ ಮೇ 28ರಿಂದ ಪ್ರಾರಂಭವಾಗಿತ್ತು. ಮೊದಲ ದಿನ ಸತತ ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕ್ರೇನ್ಗಳ ಸಹಾಯದಿಂದ ತುಬುಯಿಯಾ ರೋಸಾ ಜಾತಿಯ ಒಂದು ಮರವನ್ನು ಸ್ಥಳಾಂತರ ಮಾಡಲಾಗಿತ್ತು. ಬಳಿಕ ಹಂತ ಹಂತವಾಗಿ ಎಂ.ಜಿ. ರಸ್ತೆಯಿಂದ ಈ ಮೈದಾನಕ್ಕೆ ಒಟ್ಟು ಐದು ಮರಗಳನ್ನು ಸ್ಥಳಾಂತರಿಸಲಾಗಿತ್ತು. ಚೆನ್ನೈನ `ಲ್ಯಾಂಡ್ ಸ್ಕೇಪ್ ಆರ್ಕಿಟೆಕ್ಟ್ಸ್' ಸಂಸ್ಥೆಯ ಸಿಬ್ಬಂದಿ ಈ ಕೆಲಸವನ್ನು ನಿರ್ವಹಿಸಿದ್ದರು. ಬೆಂಗಳೂರು ಪರಿಸರ ಸಂಘ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳು ಮರಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಹಭಾಗಿತ್ವ ನೀಡಿದ್ದವು.
2007: ಪುಣೆಯ ಗ್ರಾಮವೊಂದರಲ್ಲಿ ಇಕ್ಕಟ್ಟಾದ ಕೊಳವೆಬಾವಿಯೊಳಗೆ ಬಿದ್ದ ಶಿರೂರ್ ತಾಲ್ಲೂಕಿನ ವಡಗಾಂವ್ ರಸಾಯಿ ಗ್ರಾಮದ ಬಾಲಕ ಸೋನು ಶಿವಾಜಿ ದೇಶಮುಖ್ ಎಂಬ ಐದು ವರ್ಷದ ಬಾಲಕನನ್ನು ಮೇಲಕ್ಕೆ ಕರೆತರಲಾಯಿತು. ಆದರೆ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಈತ 150 ಅಡಿ ಆಳದ ಕೊಳವೆಬಾವಿಯಲ್ಲಿ ಬಿದ್ದು, 20 ಅಡಿ ಅಂತರದಲ್ಲೇ ಸಿಕ್ಕಿಹಾಕಿಕೊಂಡ. ಏಳು ತಾಸುಗಳ ಹರಸಾಹಸದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ರಕ್ಷಿಸಿ ಮೇಲಕ್ಕೆ ಕರೆತಂದು ಆಸ್ಪತ್ರೆಗೆ ಸೇರಿಸಲಾಗಿತ್ತು.
2007: ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಲ್ಲಿ ಸಂಭವಿಸಿದ ಮೂರು ಸ್ಫೋಟಗಳಲ್ಲಿ ಪೊಲೀಸರು ಸೇರಿ ಒಟ್ಟು 35 ಜನ ಬಲಿಯಾದರು. ಈ ಕೃತ್ಯಕ್ಕೆ ತಾನೇ ಕಾರಣ ಎಂದು ತಾಲಿಬಾನ್ ಉಗ್ರಗಾಮಿಗಳು ಘೋಷಿಸಿದರು.
2006: ದುಬೈಯಲ್ಲಿ ನಡೆದ ಐಐಎಫ್ಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ `ಬ್ಲ್ಯಾಕ್' ಪ್ರಶಸ್ತಿಗಳನ್ನು ಕೊಳ್ಳೆ ಹೊಡೆಯಿತು. ಉತ್ತಮ ಚಿತ್ರ, ಉತ್ತಮ ನಿದರ್ೆಶಕ, ಉತ್ತಮ ನಟ (ಅಮಿತಾಭ್ ಬಚ್ಚನ್), ಉತ್ತಮ ನಟಿ (ರಾಣಿ ಮುಖರ್ಜಿ), ಉತ್ತಮ ಪೋಷಕ ನಟಿ (ಆಯೇಷಾ ಕಪೂರ್), ಉತ್ತಮ ಛಾಯಾಗ್ರಹಣ, ಉತ್ತಮ ಸಂಕಲನ, ಉತ್ತಮ ಧ್ವನಿ ಗ್ರಹಣ ಮತ್ತು ಉತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಗಳು `ಬ್ಲ್ಯಾಕ್'ಗೆ ಲಭಿಸಿದವು.
2006: ಮರಾಠಿಯ ಹೆಸರಾಂತ ಸಂಗೀತಗಾರ ಸ್ನೇಹಲ್ ಭಾಟ್ಕರ್ ಮತ್ತು ಹಿಂದಿಯ ಪ್ರಸಿದ್ಧ ಹಿನ್ನೆಲೆ ಗಾಯಕ ಮನ್ನಾ ಡೇ ಅವರನ್ನು 2004-05ನೇ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಗೆ ಮಹಾರಾಷ್ಟ್ರ ಸರ್ಕಾರವು ಆಯ್ಕೆ ಮಾಡಿತು.
1980: ಅಮೆರಿಕದ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಜನನ.
1973: ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಜನ್ಮದಿನ. ಇವರು ಮಹೇಶ್ ಭೂಪತಿ ಅವರೊಂದಿಗೆ ಫ್ರೆಂಚ್ ಓಪನ್, ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡವರು.
1972: ವಾಟರ್ ಗೇಟ್ ಕಟ್ಟಡದಲ್ಲಿದ್ದ ಡೆಮಾಕ್ರಟಿಕ್ ಪಾರ್ಟಿ ನ್ಯಾಷನಲ್ ಕಮಿಟಿಯ ಕೇಂದ್ರ ಕಚೇರಿಗೆ ನುಗ್ಗಿದ್ದಕ್ಕಾಗಿ ಐವರನ್ನು ವಾಷಿಂಗ್ಟನ್ ಪೊಲೀಸರು ಬಂಧಿಸಿದರು. ಈ ಪ್ರಕರಣ ಉಲ್ಬಣಿಸುತ್ತಾ ಹೋಗಿ `ವಾಟರ್ಗೇಟ್ ಹಗರಣ' ಎಂದೇ ಖ್ಯಾತಿ ಪಡೆಯಿತು. ಅಷ್ಟೇ ಅಲ್ಲ 1974ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆಯೊಂದಿಗೆ ಪರ್ಯವಸಾನಗೊಂಡಿತು.
1950: ಷಿಕಾಗೋದಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಚಿಕಿತ್ಸೆ.
1939: ವಿಚಾರವಾದಿ, ಚಿಂತಕ, ಸಾಹಿತಿ ಡಾ. ಜಿ. ರಾಮಕೃಷ್ಣ ಅವರು ಸುಬ್ರಹ್ಮಣ್ಯಂ- ನರಸಮ್ಮ ದಂಪತಿಯ ಪುತ್ರನಾಗಿ ಮಾಗಡಿ ಬಳಿಯ ಕೆಂಪಸಾಗರದಲ್ಲಿ ಜನಿಸಿದರು.
1933: ಭಾರತದಲ್ಲಿ ಅಸಹಕಾರ ಚಳವಳಿ ಮುಕ್ತಾಯ.
1929: ಟೈಗ್ರನ್ ವಿ. ಪೆಟ್ರೋಸಿಯನ್ (1924-84) ಜನ್ಮದಿನ. ಈ ಸೋವಿಯತ್ ಚೆಸ್ ಗ್ರ್ಯಾಂಡ್ ಮಾಸ್ಟರ್ 1963ರಲ್ಲಿ ಜಾಗತಿಕ ಚೆಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. 1969ರಲ್ಲಿ ತನ್ನ ಜನ್ಮದಿನದಂದೇ ಬೋರಿಸ್ ಸ್ಪಾಸ್ಕಿ ಎದುರು ಸೋತು ವಿಶ್ವ ಚೆಸ್ ಚಾಂಪಿಯನ್ ಶಿಪ್ ಕಳೆದುಕೊಂಡರು.
1917: ಅಹಮದಾಬಾದಿನ ಸಬರಮತಿ ಆಶ್ರಮದ ಹೃದಯಕುಂಜದಲ್ಲಿ ಮಹಾತ್ಮ ಗಾಂಧಿ ಮತ್ತು ಕಸ್ತೂರಿಬಾ ವಾಸ ಆರಂಭ.
1867: ಗ್ಲಾಸ್ಗೋದಲ್ಲಿ ಜೋಸೆಫ್ ಲಿಸ್ಟರ್ ತನ್ನ ಸಹೋದರಿ ಇಸಬೆಲ್ಲಾಳಿಗೆ ಸೆಪ್ಟಿಕ್ (ನಂಜು) ನಿರೋಧಕ ನೀಡಿ ಮೊತ್ತ ಮೊದಲ ಶಸ್ತ್ರಚಿಕಿತ್ಸೆ ನಡೆಸಿದ.
1858: ಗ್ವಾಲಿಯರ್ ಸಮೀಪದ ಕೊತಾಹ್-ಕಿ-ಸರಾಯ್ ರಣಾಂಗಣದಲ್ಲಿ ಅಶ್ವದಳ ಸೈನಿಕನಂತೆ ವೇಷ ಧರಿಸಿ ಹೋರಾಡುತ್ತಿದ್ದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷ್ ಸೈನಿಕ ಹುಸ್ಸಾರ್ನಿಂದ ಹತರಾದರು. ಹುಸ್ಸಾರ್ ಗೆ ತನ್ನಿಂದ ಹತಳಾದ ವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ. ಆಕೆ ಲಕ್ಷ್ಮೀಬಾಯಿ ಎಂದು ಅರಿವಾಗುತ್ತಿದ್ದಂತೆಯೇ ಜನರಲ್ ಹ್ಯೂಗ್ ರೋಸ್ `ಇಲ್ಲಿ ಮಲಗಿರುವುದು ಬಂಡುಕೋರರ ನಡುವಿನ ಏಕೈಕ ಪುರುಷ' ಎಂದು ಹೇಳಿ ಆಕೆಗೆ ಗೌರವ ಸಲ್ಲಿಸಿದ.
1674: ಶಿವಾಜಿಯ ತಾಯಿ ಜೀಜಾಬಾಯಿ ನಿಧನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment