ಇಂದಿನ ಇತಿಹಾಸ History Today ಜೂನ್ 14
2019: ನವದೆಹಲಿ: ಕೋಲ್ಕತ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದ ಆರೋಪಕ್ಕಾಗಿ ಸಹೋದ್ಯೋಗಿ ವೈದ್ಯರಿಬ್ಬರ ಮೇಲೆ ರೋಗಿಯ ಕುಟುಂಬ ಸದಸ್ಯರು ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಪ್ರತಿಭಟಿಸಿ ಮುಷ್ಕರಕ್ಕೆ ಇಳಿದ ಪಶ್ಚಿಮ ಬಂಗಾಳದ ಕಿರಿಯ ವೈದ್ಯರ ಮುಷ್ಕರ ಇನ್ನಷ್ಟು
ತೀವ್ರಗೊಂಡಿದ್ದು ರಾಷ್ಟ್ರಮಟ್ಟಕ್ಕೆ ವಿಸ್ತರಣೆಗೊಂಡಿತು. ವೈದ್ಯರ ಮೇಲಿನ ಹಲ್ಲೆಯನ್ನು ಪ್ರತಿಭಟಿಸಿ ಜೂನ್ ೧೭ರ ಸೋಮವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ್ದು, ೩.೫ ಲಕ್ಷ
ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಶ್ಚಿಮ
ಬಂಗಾಳದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ವೈದ್ಯರ ಮುಷ್ಕರ ಹಾಗೂ ಪ್ರತಿಭಟನೆ ಹಿಂಪಡೆಯಲು ಮುಷ್ಕರ ನಿತರ ವೈದ್ಯರು ಕೆಲವು ಷರತ್ತುಗಳನ್ನು ವಿಧಿಸಿದರು. ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿಯವರು ವೈದ್ಯ ಸಮುದಾಯದ ಬೇಷರತ್ ಕ್ಷಮೆಯಾಚನೆ ಮಾಡುವುದೂ ಸೇರಿ ದಂತೆ ಏಳು ಷರತ್ತುಗಳನ್ನು ವಿಧಿಸಲಾಯಿತು. ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ತಾವು ನಡೆದುಕೊಂಡ ರೀತಿಗೆ ಬೇಷರತ್ ಕ್ಷಮೆ ಯಾಚಿಸ ಬೇಕು ಎಂದು ಕಿರಿಯ ವೈದ್ಯರ ವೇದಿಕೆಯ ವಕ್ತಾರ ಡಾ. ಅರಿಂದಮ್ ದತ್ತ ಅವರು ಆಗ್ರಹಿಸಿದರು. ತಮ್ಮ ಷರತ್ತುಗಳನ್ನು ಪಟ್ಟಿ ಮಾಡಿದ ದತ್ತ ಅವರು, ಮುಖ್ಯಮಂತ್ರಿಗಳು ಬೇಷರತ್ ಕ್ಷಮೆಯಾಚಿಸಬೇಕು, ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವೈದ್ಯರ ಆರೋಗ್ಯ ವಿಚಾರಿಸಬೇಕು. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ನೀಡಬೇಕು. ವೈದ್ಯರಿಗೆ ರಕ್ಷಣೆ ನೀಡದ ಪೊಲೀಸರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು. ಅಲ್ಲದೆ ನಮ್ಮ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಂಡ ಬಗ್ಗೆ ದಾಖಲೆ ನೀಡಬೇಕು ಎಂದು ವೈದ್ಯರು ಆಗ್ರಹಿಸಿದರು. ಈ ಮಧ್ಯೆ ರಾಜ್ಯದ ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ೭ ದಿನಗಳ ಒಳಗಾಗಿ
ಉತ್ತರ ನೀಡುವಂತೆ ಗಡುವು ನೀಡಿದ ಕಲ್ಕತ್ತ ಹೈಕೋರ್ಟ್ ಬಿಕ್ಕಟ್ಟು ಇತ್ಯರ್ಥಕ್ಕೆ ಮತ್ತು
ಪರಿಹಾರ ಹುಡುಕಲು ಕೈಗೊಳ್ಳಲಾದ ಕ್ರಮಗಳೇನು ಎಂಬುದಾಗಿ ತಿಳಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನಿರ್ದೇಶಿಸಿತು. ಕೋಲ್ಕತ ಕಿರಿಯ ವೈದ್ಯರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿ ಬೆಂಗಳೂರು, ಹೈದರಾಬಾದ್, ದೆಹಲಿ ಮತ್ತು ಮುಂಬೈ ಮೆಟ್ರೋ ನಗರಗಳು ಸೇರಿದಂತೆ ದೇಶಾದ್ಯಂತ ವೈದ್ಯರು ಪತ್ರಿಭಟನೆಗಳನ್ನು ನಡೆಸಿದ್ದು, ಕಿರಿಯ ವೈದ್ಯರಿಗೆ ಬೆಂಬಲವಾಗಿ ನೂರಾರು ವೈದ್ಯರು ರಾಜೀನಾಮೆ ನೀಡಿದ ವರದಿಗಳೂ ವಿವಿಧ ಕಡೆಗಳಿಂದ ಬಂದವು. ಕೋಲ್ಕತ ಆಸ್ಪತ್ರೆಯಲ್ಲಿ
ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆಯ ವಿರುದ್ಧ ಪಾನ್-ಇಂಡಿಯಾ ಪ್ರತಿಭಟನೆಗೆ ಕರೆ ಕೊಟ್ಟಿರುವ ಭಾರತೀಯ ವೈದ್ಯಕೀಯ ಸಂಘವು ಜೂನ್ ೧೭ರ ಸೋಮವಾರ ಬೆಳಗ್ಗೆ ೬ ಗಂಟೆಯಿಂದ ಮರುದಿನ
ಬೆಳಗ್ಗೆ ೬ ಗಂಟೆಯವರೆಗೆ ವೈದ್ಯರು
ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಘೋಷಿಸಿತು. ಜೂನ್ ೧೭ರಂದು ಯಾವುದೇ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಬಾರದು ಮತ್ತು ಅಹಿಂಸಾತ್ಮಕ
ಪ್ರತಿಭಟನೆ ಮುಂದುವರೆಯಬೇಕು ಎಂದು ವೈದ್ಯರ ಉನ್ನತ ಸಂಘಟನೆ ಹೇಳಿದೆ. ’ವೈದ್ಯರು ಭದ್ರತೆ ಮತ್ತು ಸಣ್ಣಪುಟ್ಟ ವಿಷಯಗಳನ್ನು ಮುಂದಿಟ್ಟಿದ್ದಾರೆ, ಅವುಗಳು
ಈಡೇರಿಸಲಾಗದಂತಹ ಇಲ್ಲವೇ ಚಂದ್ರನಿಂದ ತಂದು ಕೊಡಬೇಕಾದಂತಹ ಬೇಡಿಕೆಗಳಲ್ಲ. ಈಡೇರಿಸಬಹುದಾದ ಬೇಡಿಕೆಗಳು ಇವು. ಆದ್ದರಿಂದ ನಾವು ಮುಷ್ಕರದಿಂದ ಹಿಮ್ಮೆಟ್ಟುವುದಿಲ್ಲ’ ಎಂದು ಐಎಂಎ
ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿತು. ೩.೫ ಲಕ್ಷ
ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಐಎಂಎ ಹೇಳಿತು. ಈ ಮಧ್ಯೆ ಸರ್ಕಾರಿ
ಸ್ವಾಮ್ಯದ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ನೀಡಲು ಕಲ್ಕತ್ತ ಹೈಕೋರ್ಟ್ ನಿರಾಕರಿಸಿತು. ಮುಖ್ಯ ನ್ಯಾಯಮೂರ್ತಿ ಟಿಬಿಎನ್ ರಾಧಾಕೃಷ್ಣನ್ ಮತ್ತು ನ್ಯಾಯಮೂರ್ತಿ ಸುರ್ವ ಘೋಷ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಕೆಲಸ ಪುನಾರಂಭ ಮಾಡುವಂತೆ ಮತ್ತು ರೋಗಿಗಳಿಗೆ ದೈನಂದಿನ ಸೇವೆಗಳನ್ನು ಒದಗಿಸುವಂತೆ ಮುಷ್ಕರ ನಿರತ ವೈದ್ಯರ ಮನವೊಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಜೂನ್ 10ರ ಸೋಮವಾರ ರಾತ್ರಿ ನಗರ ಆಸ್ಪತ್ರೆಯಲಿ ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸುವಂತೆಯೂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪೀಠ ಸೂಚಿಸಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕಾಲದಲ್ಲಿ ಮುಖ್ಯ ನ್ಯಾಯಮೂರ್ತಿಯವರು ಎಲ್ಲ
ರೋಗಿಗಳ ಕಲ್ಯಾಣದ ಖಾತರಿ ನೀಡಿ ಮಾಡುವ ’ಆಷಾಡಭೂತಿ ಪ್ರಮಾಣವಚನ’ವನ್ನು (ಹಿಪ್ಪೋಕ್ರಾಟಿಕ್
ಓಥ್) ಮುಷ್ಕರ ನಿರತ ವೈದ್ಯರಿಗೆ ನೆನಪಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ ೨೧ಕ್ಕೆ ಅವರು ನಿಗದಿ ಪಡಿಸಿದರು. ಕೇಂದ್ರ ಆರೋಗ್ಯ ಸಚಿವರ ಮನವಿ: ಕೋಲ್ಕತದ ಮುಷ್ಕರ ನಿರತ ವೈದ್ಯರಿಗೆ ಬೆಂಬಲವಾಗಿ ವೈದ್ಯರು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಇಳಿದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಶುಕ್ರವಾರ ಸಂಯಮ ವಹಿಸುವಂತೆ ಮತ್ತು ರೋಗಿಗಳ ಸೇವೆ ಮುಂದುವರೆಸುವಂತೆ ವೈದ್ಯ ಸಮುದಾಯವನ್ನು ಒತ್ತಾಯಿಸಿದರು. ’ಈ
ಸೂಕ್ಷ್ಮ ವಿಚಾರವನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬೇಡಿ’ ಎಂಬುದಾಗಿ ಪಶ್ಚಿಮ
ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದ ಹರ್ಷ ವರ್ಧನ್, ಈ ಬಗ್ಗೆ ಬ್ಯಾನರ್ಜಿ ಅವರಿಗೆ ಪತ್ರವನ್ನು ಕೂಡಾ ಬರೆದರು. ಕೋಲ್ಕತದ
ಎನ್ ಆರ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ರೋಗಿಯೊಬ್ಬರ ಬಂಧುಗಳು ನಡೆಸಿದ ಹಲ್ಲೆಯಲ್ಲಿ ತಮ್ಮ ಸಹೋದ್ಯೋಗಿಗಳು ಇಬ್ಬರು ತೀವ್ರವಾಗಿ ಗಾಯಗೊಂಡ ಬಳಿಕ ಮಂಗಳವಾರದಿಂದ ಕಿರಿಯ ವೈದ್ಯರು ಪಶ್ಚಿಮ ಬಂಗಾಳದಲ್ಲಿ ಮುಷ್ಕರ ನಡೆಸಿದರು. ‘ಇಷ್ಟೊಂದು ಮಾರಕ ಹಲ್ಲೆ ನಡೆಸಿದ್ದರ ಹೊರತಾಗಿಯೂ ವೈದ್ಯರು ಆಕೆಯ (ಮಮತಾ ಬ್ಯಾನರ್ಜಿ) ಬಳಿ ಸೂಕ್ತ ಭದ್ರತೆ ಒದಗಿಸುವಂತೆ ಮತ್ತು ಹಿಂಸೆಗೆ ಕಾರಣರಾದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಮಾತ್ರವೇ ಆಗ್ರಹಿಸುತ್ತಿದ್ದಾರೆ’ ಎಂದು ಹರ್ಷ
ವರ್ಧನ್ ಹೇಳಿದರು. ’ಇದನ್ನು ಮಾಡುವುದಕ್ಕೆ ಬದಲಾಗಿ, ಅವರು ವೈದ್ಯರಿಗೆ ಬೆದರಿಕೆ ಹಾಕಿ ಕೆಲಸಕ್ಕೆ ಹಾಜರಾಗಲು ಗಡುವು ನೀಡಿದರು. ಇದರಿಂದ ದೇಶಾದ್ಯಂತ ವೈದ್ಯರು ರೊಚ್ಚಿಗೆದ್ದಿದ್ದು ಮುಷ್ಕರಕ್ಕೆ ಇಳಿದಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಯವರು ಸೂಕ್ಷ್ಮತೆಯನ್ನು ಅರಿತು ವರ್ತಿಸಿದ್ದರೆ ಇಂತಹ ಗಂಭೀರ ಪರಿಸ್ಥಿತಿ ಎದುರಾಗುತ್ತಿರಲಿಲ್ಲ, ದೇಶಾದ್ಯಂತ ರೋಗಿಗಳು ನರಳಬೇಕಾಗಿ ಬರುತ್ತಿರಲಿಲ್ಲ. ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಬೇಡಿ ಎಂದು ನಾನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ’ ಎಂದು ಹರ್ಷವರ್ಧನ್
ನುಡಿದರು. ಸರ್ಕಾರವು ವೈದ್ಯರ ಸುರಕ್ಷತೆಯ ಖಾತರಿಗೆ ಬದ್ಧವಾಗಿದೆ ಎಂದು ವೈದ್ಯರಿಗೆ ಭರವಸೆ ಕೊಟ್ಟ ಕೇಂದ್ರ ಸಚಿವ, ಅಗತ್ಯ ಸೇವೆಗಳು ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಿ ಎಂದು
ಅವರನ್ನು ಆಗ್ರಹಿಸಿದರು. ’ನೀವು
ಸಾಂಕೇತಿಕ ಮುಷ್ಕರ ಮಾಡಬಹುದು ಮತ್ತು ಕೆಲಸ ಮುಂದುವರೆಸಬಹುದು. ಇದರಿಂದ ರೋಗಿಗಳು ತೊಂದರೆಗೆ ಒಳಗಾಗುವುದಿಲ್ಲ’ ಎಂದು ಹರ್ಷ
ವರ್ಧನ್ ಹೇಳಿದರು. ಸಂಯಮ ವಹಿಸುವಂತೆ ರೋಗಿಗಳು ಮತ್ತು ಅವರನ್ನು ನೋಡಿಕೊಳ್ಳುವವರಿಗೂ ಮನವಿ ಮಾಡಿದ ಹರ್ಷ ವರ್ಧನ್, ವೈದ್ಯರ
ಭದ್ರತೆಯ ವಿಚಾರವನ್ನು ತಾವು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ನುಡಿದರು. ದೆಹಲಿಯ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನೂರಾರು ವೈದ್ಯರು ಶುಕ್ರವಾರ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆಗಳನ್ನುನಡೆಸಿ ಪಶ್ಚಿಮ ಬಂಗಾಳದ ತಮ್ಮ ಪ್ರತಿಭಟನಾ ನಿರತ ಸಹೋದ್ಯೋಗಿಗಳಿಗೆ ಬೆಂಬಲ ವ್ಯಕ್ತ ಪಡಿಸಿದರು. ಇದೇ ಮಾದರಿಯ ಪ್ರತಿಭಟನೆಗಳು ದೇಶಾದ್ಯಂತ ನಡೆದವು. ದೆಹಲಿಯ ಏಮ್ಸ್ (ಎಐಐಎಂಎಸ್) ಸ್ಥಾನಿಕ ವೈದ್ಯರ ಸಂಘದ ಸದಸ್ಯರ ತಂಡವೊಂದು ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಆಸ್ಪತ್ರೆ ಆವರಣಗಳಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿದರೆ ವೈದ್ಯರಿಗೆ ಸುರಕ್ಷತೆ ಮತ್ತು ಭದ್ರತೆ ಖಾತರಿ ಪಡಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿತು. ಆಸ್ಪತ್ರೆ ಹಿಂಸಾಚಾರದ ವಿರುದ್ಧ ಕೇಂದ್ರೀಯ ಕಾನೂನು ರಚನೆಗೆ ಒತ್ತಾಯಿಸಿ ಮನವಿ ಪತ್ರವನ್ನೂ ತಂಡವು ಸಲ್ಲಿಸಿತು. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾ ನಿರತ ವೈದ್ಯರ ಮೇಲೆ ರಾಜಕೀಯ ಪ್ರೇರಿತ ದೌರ್ಜನ್ಯಗಳನ್ನು ತಡೆಯಲು ಕೇಂದ್ರವು ತತ್ ಕ್ಷಣ ಮಧ್ಯಪ್ರವೇಶ ಮಾಡಬೇಕು ಮತ್ತು ವೈದ್ಯರಿಗೆ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತರಬೇತಿ ಪಡೆದ ಭದ್ರತಾ ಗಾರ್ಡ್ಗಳನ್ನು ನೇಮಿಸುವಂತೆ ಮತ್ತು ವಸತಿಗೃಹಗಳಲ್ಲಿನ ಭದ್ರತಾ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸುವಂತೆಯೂ ನಿಯೋಗ ಮನವಿ ಮಾಡಿತು. ಪ್ರತಿಯೊಂದು
ಆಸ್ಪತ್ರೆಯಲ್ಲೂ ಸಿಸಿಟಿವಿ ಕಣ್ಗಾವಲು ಮತ್ತು ಹಾಟ್ ಲೈನ್ ಅಲಾರ್ಮ್ ವ್ಯವಸ್ಥೆ ಅಳವಡಿಸುವಂತೆಯೂ ನಿಯೋಗ ಕೋರಿತು. ವೈದ್ಯರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹರ್ಷವರ್ಧನ್ ಭರವಸೆ ಕೊಟ್ಟರು. ೩೦೦ ವೈದ್ಯರ ರಾಜೀನಾಮೆ: ಈ ಮಧ್ಯೆ ಪಶ್ಚಿಮ
ಬಂಗಾಳದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು ೩೦೦ಕ್ಕೂ ಹೆಚ್ಚು ವೈದ್ಯರು ಕಿರಿಯ ವೈದ್ಯರ ಮೇಲಿನ ಹಲ್ಲೆಯನ್ನು ಪ್ರತಿಭಟಸಿ ರಾಜೀನಾಮೆ ಸಲ್ಲಿಸಿದರು. ಕೋಲ್ಕತ, ಬರ್ದ್ವಾನ್, ಡಾರ್ಜಿಲಿಂಗ್, ಉತ್ತರ ೨೪ ಪರಗಣ ಜಿಲ್ಲೆಗಳ
ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಇಲಾಖಾ ಮುಖ್ಯಸ್ಥರು ಸೇರಿದಂತೆ ಹಲವಾರು ವೈದ್ಯರು ರಾಜೀನಾಮೆ ನೀಡಿರುವುದಾಗಿ ಪ್ರಕಟಿಸಿದರು. ಅವರು
ತಮ್ಮ ರಾಜೀನಾಮೆ ಪತ್ರಗಳನ್ನು ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣದ ರಾಜ್ಯ ನಿರ್ದೇಶಕರಿಗೆ ಕಳುಹಿಸಿದರು. ಈಮಧ್ಯೆ ಸಿಪಿಐ (ಎಂ) ನಾಯಕ ಸೀತಾರಾಂ ಯೆಚೂರಿ ಮತ್ತು ಬಿಜೆಪಿ ನಾಯಕ ಮುಕುಲ್ ರಾಯ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನು ಬಿಟ್ಟು ಮುಖ್ಯಮಂತ್ರಿಯವರು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದರು.
2019: ರಾಂಚಿ (ಜಾರ್ಖಂಡ್): ಜಾರ್ಖಂಡ್‌ನ ಸೆರೈಕೆಲಾದಲ್ಲಿ ಈದಿನ
ಸಂಜೆ
೬.೩೦ಕ್ಕೆ ನಡೆದ ಮಾವೋವಾದಿ ದಾಳಿಯಲ್ಲಿ ಇಬ್ಬರು ಸಬ್ -ಇನ್ಸ್ಪೆಕ್ಟರ್ಗಳು ಮತ್ತು ಮೂವರು ಕಾನ್ಸ್ಟೇಬಲ್ಗಳು ಸೇರಿದಂತೆ ಕನಿಷ್ಠ ೫ ಮಂದಿ ಪೊಲೀಸರು
ಹುತಾತ್ಮರಾದರು. ಪೊಲೀಸ್
ಪಹರೆ ತಂಡವು ಜಿಲ್ಲೆಯ ತಿರುಲ್ದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಡು ಬಜಾರ್ ವಾರದ ಸಂತೆಯ ಬಳಿಗೆ ಬಂದಾಗ ಈ ದಾಳಿ ನಡೆಯಿತು.
ಮಾವೋವಾದಿಗಳ ತಂಡವೊಂದು ಪೊಲೀಸರ ಮೇಲೆ ಈ ದಾಳಿ ನಡೆಸಿತು. ದಾಳಿಯಲ್ಲಿ ಇತರ
ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಯಿತು. ಘಟನೆಯನ್ನು ದೃಢ ಪಡಿಸಿದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೆಶಕ (ಕಾರ್ಯಾಚರಣೆ) ಎಂ.ಎಲ್. ಮೀನಾ
ಅವರು ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ
ಮುನ್ನ ಮೇ ೨೮ರಂದು ರಾಯ್
ಸಿಂದ್ರಿ ಬೆಟ್ಟ ಪ್ರದೇಶದ ಕುಚೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾವೋವಾದಿಗಳು ಸರಣಿ ಸುಧಾರಿತ ಸ್ಪೋಟಕ ಸಾಧನಗಳನ್ನು ಸ್ಫೋಟಿಸಿದ ಪರಿಣಾಮವಾಗಿ ಕೇಂದ್ರೀಯ ಪೊಲೀಸ್ ಮತ್ತು ರಾಜ್ಯ್ಯ ಪೊಲೀಸ್ ಪಡೆಯ ಕನಿಷ್ಠ ೨೬ ಭದ್ರತಾ ಸಿಬ್ಬಂದಿ
ಹುತಾತ್ಮರಾಗಿದ್ದರು.
2019: ಬಿಶ್ಕೇಕ್:
ಪಾಕಿಸ್ತಾನದ ವಿರುದ್ಧ ಬಿಶ್ಕೇಕ್ ಜಾಗತಿಕ ಸಮ್ಮೇಳನದಲ್ಲಿ ಕಠಿನ ವಾಕ್ ಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ಹಾವಳಿಯನ್ನು ಮಟ್ಟಹಾಕುವ ಸಲುವಾಗಿ ಅದನ್ನು ಪ್ರಾಯೋಜಿಸುವ, ಅದಕ್ಕೆ ನೆರವು ನೀಡುವ ಮತ್ತು ಹಣಕಾಸು ಒದಗಿಸುವ ರಾಷ್ಟ್ರಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು ಕರೆ ನೀಡಿದರು. ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರ ಬಲವರ್ಧನೆಗಾಗಿ ಶಾಂಘೈ ಸಹಕಾರ ಸಂಘಟನೆಯ ಚೈತನ್ಯ ಮತ್ತು ಆದರ್ಶಗಳನ್ನು ಎತ್ತಿ ಹಿಡಿದರು. ಭಾರತವು ಭಯೋತ್ಪಾದನೆ ಮುಕ್ತ ಸಮಾಜದ ಪರ ನಿಂತಿದೆ ಎಂದು
ಅವರು ಘೋಷಿಸಿದರು.
’ಕಳೆದ
ಜೂನ್ 9ರ ಭಾನುವಾರ ಶ್ರೀಲಂಕೆಗೆ ನೀಡಿದ ಭೇಟಿಯ ಕಾಲದಲ್ಲಿ ನಾನು ಸೈಂಟ್ ಆಂತೋಣಿ ಇಗರ್ಜಿಗೆ ಭೇಟಿ ನೀಡಿದೆ. ಅಲ್ಲಿ ಮುಗ್ಧರ ಜೀವಗಳನ್ನು ಬಲಿತೆಗೆದುಕೊಂಡ ಭಯೋತ್ಪಾದನೆಯ ಕೊಳಕು ಮುಖವನ್ನು ಕಂಡೆ’ ಎಂದು
ಪ್ರಧಾನಿ ಹೇಳಿದರು. ಭಯೋತ್ಪಾದನೆಯ ಹಾವಳಿಯನ್ನು ಮಟ್ಟಹಾಕಲು, ರಾಷ್ಟ್ರಗಳು ತಮ್ಮ ಸಂಕುಚಿತ ದೃಷ್ಟಿಕೋನದಿಂದ ಹೊರಗೆ ಬರಬೇಕು ಮತ್ತು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಬೇಕು ಎಂದು ಮೋದಿ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಸಮ್ಮುಖದಲ್ಲಿಯೇ ಗುಡುಗಿದರು. ಭಯೋತ್ಪಾದನೆಯನ್ನು ಪ್ರಾಯೋಜಿಸುವ, ಅದಕ್ಕೆ ನೆರವು ನೀಡುವ ಹಣಕಾಸು ಒದಗಿಸುವ ರಾಷ್ಟ್ರಗಳನ್ನು ಹೊಣೆ ಮಾಡಬೇಕು ಎಂದು ಅವರು ನುಡಿದರು. ಪ್ರಧಾನಿ ಮೋದಿ ಮಾತುಗಳನ್ನು ಇಮ್ರಾನ್ ಖಾನ್ ಅವರು ಮೌನವಾಗಿ ಆಲಿಸಿದರು. ಭಯೋತ್ಪಾದನೆಯ ವಿರುದ್ಧ ಎಸ್ಸಿಒ ಅಡಿಯಲ್ಲಿ ಪ್ರಾದೇಶಿಕ ಭಯೋತ್ಪಾದನೆ ವಿರೋಧಿ ಸಂರಚನೆಯನ್ನು (ಆರ್ಎಟಿಎಸ್- ರಾಟ್ಸ್) ರೂಪಿಸಲು ಎಸ್ಸಿಒ ಸದಸ್ಯ ರಾಷ್ಟ್ರಗಳು ಸಹಕರಿಸಬೇಕು ಎಂದು ಪ್ರದಾನಿ ಮೋದಿ ಕರೆ ನೀಡಿದರು. ಭಯೋತ್ಪಾದನೆ ವಿಚಾರವಾಗಿಯೇ ಜಾಗತಿಕ ಸಮ್ಮೇಳನ ಸಂಘಟಿಸುವಂತೆಯೂ ಅವರು ಎಸ್ಸಿಒ ನಾಯಕರನ್ನು ಆಗ್ರಹಿಸಿದರು. ’ಸಾಹಿತ್ಯ
ಮತ್ತು ಸಂಸ್ಕೃತಿ ನಮ್ಮ ಸಮಾಜಗಳಿಗೆ ಧನಾತ್ಮಕ ಚಟುವಟಿಕೆಯನ್ನು ಒದಗಿಸುತ್ತವೆ. ವಿಶೇಷವಾಗಿ ನಮ್ಮ ಸಮಾಜದಲ್ಲಿ ಯುವಕರಲ್ಲಿ ಉಗ್ರವಾದ ಹರಡದಂತೆ ಅವರು ಅವು ಮಾಡುತ್ತವೆ’ ಎಂದು
ಮೋದಿ ಹೇಳಿದರು. ಶಾಂತಿಯುತವಾದ, ಒಗ್ಗಟ್ಟಿನ, ಸುರಕ್ಷಿತ ಮತ್ತು ಸಮೃದ್ಧ ಆಫ್ಘಾನಿಸ್ಥಾನವು ಎಸ್ಸಿಒದಲ್ಲಿ ಸ್ಥಿರತೆ ಮತ್ತು ಭದ್ರತೆಗೆ ಅತ್ಯಗತ್ಯ ಎಂದು ಅವರು ನುಡಿದರು. ಆಫ್ಘನ್ ನೇತೃತ್ವದ, ಆಫ್ಘನ್ ಮಾಲೀಕತ್ವದ ಮತ್ತು ಆಫ್ಘನ್ ನಿಯಂತ್ರಿತ ಸಮಗ್ರ ಶಾಂತಿ ಪ್ರಕ್ರಿಯೆಗಾಗಿ ಆಫ್ಘಾನಿಸ್ಥಾನದ ಜನತೆ ಮತ್ತು ಸರ್ಕಾರವನ್ನು ಬೆಂಬಲಿಸುವುದು ನಮ್ಮ ಗುರಿ. ಆಫ್ಘಾನಿಸ್ತಾನ ಸಂಪರ್ಕ ತಂಡದ ರಚನೆಗಾಗಿ ಎಸ್ಸಿಒದಲ್ಲಿ ಮಾರ್ಗ ನಕ್ಷೆ ರೂಪಿಸಲಾಗಿರುವುದಕ್ಕೆ ನಮಗೆ ಖುಷಿ ಇದೆ ಎಂದು ಮೋದಿ ಹೇಳಿದರು. ಭಾರತವು ಎಸ್ಸಿಒದ ಪೂರ್ಣ ಪ್ರಮಾಣದ ಸದಸ್ಯನಾಗಿ ಎರಡು ವರ್ಷವಾಗಿದೆ. ಎಸ್ಸಿಒದ ಎಲ್ಲ ಚಟುವಟಿಕೆಗಳಲ್ಲೂ ಭಾರತ ಧನಾತ್ಮಕ ಕಾಣಿಕೆ ನೀಡಿದೆ ಎಂದು ಪ್ರಧಾನಿ ನುಡಿದರು. ಪ್ರದಾನಿ ಮೋದಿ ಅವರು ಕಿರ್ಗಿಜ್ ರಾಜಧಾನಿಗೆ ಎರಡು ದಿನಗಳ ಎಸ್ಸಿಒ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುರುವಾರ ಆಗಮಿಸಿದ್ದರು. ಶಾಂಘೈ ಸಹಕಾರ ಸಂಘಟನೆಯು (ಎಸ್ಸಿಒ) ಚೀನಾ ನೇತೃತ್ವದ ಎಂಟು ಸದಸ್ಯ ಆರ್ಥಿಕ ಮತ್ತು ಭದ್ರತಾ ವಲಯವಾಗಿದ್ದು, ಭಾರತ ಮತ್ತು ಪಾಕಿಸ್ತಾನವನ್ನು ೨೦೧೭ರಲ್ಲಿ ಇದಕ್ಕೆ ಸೇರ್ಪಡೆ ಮಾಡಲಾಗಿತ್ತು. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದುದಕ್ಕಾಗಿ ಭಾರತವು ಹಿಂದಿನಿಂದಲೇ ಪಾಕಿಸ್ತಾನವನ್ನು ದೂಷಿಸುತ್ತಾ ಬಂದಿತ್ತು ಮತ್ತು ತನ್ನ ನೆಲದಲ್ಲಿ ಕಾರ್ಯಾಚಣೆ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಗಳಿಗೆ ನೀಡಲಾಗುವ ಬೆಂಬಲವನ್ನು ಸ್ಥಗಿತಗೊಳಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿತ್ತು. ೨೦೧೬ರ ಜನವರಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಪಠಾಣಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ ಬಳಿಕ ಭಾರತವು ಪಾಕಿಸ್ತಾನದ ಜೊತೆಗಿನ ಸಂಪರ್ಕವನ್ನು ಕಡಿತಗೊಳಿಸಿದೆ. ಮಾತುಕತೆ
ಮತ್ತು ಭಯೋತ್ಪಾದನೆ ಒಟ್ಟಾಗಿ ಸಾಗಲು ಸಾಧ್ಯವಿಲ್ಲ ಎಂದು ಭಾರತ ಪಾಕಿಸ್ತಾನಕ್ಕೆ ಸ್ಪಷ್ಟ ಶಬ್ಧಗಳಲ್ಲಿ ಹೇಳಿತ್ತು. ಈ
ವರ್ಷದ ಆರಂಭದಲ್ಲಿ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್
(ಜೆಇಎಂ) ಸಂಘಟನೆಯ ಆತ್ಮಹತ್ಯಾ ಬಾಂಬರ್ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ದಾಳಿ ನಡೆಸಿ ೪೦ ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಣ ಪ್ರಕ್ಷುಬ್ಧತೆ ಇನ್ನಷ್ಟು ಹೆಚ್ಚಿತ್ತು. ಬಿಗಡಾಯಿಸಿದ ಪ್ರಕ್ಷುಬ್ಧತೆಯ ಮಧ್ಯೆಯೇ ಭಾರತೀಯ ವಾಯುಪಡೆಯು ಫೆಬ್ರುವರಿ ೨೬ರಂದು ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೆಇಎಂನ ಅತಿದೊಡ್ಡ ಭಯೋತ್ಪಾದನೆ ತರಬೇತಿ ಶಿಬಿರದ ಮೇಲೆ ದಾಳಿ ನಡೆಸುವ ಮೂಲಕ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಕೈಗೊಂಡಿತ್ತು. ಮರುದಿನ ಇದರ ಸೇಡು ತೀರಿಸಲು ಪಾಕಿಸ್ತಾನ ಭಾರತೀಯ ವಾಯುನೆಲೆಯನ್ನು ಗುರಿಯಾಗಿಟ್ಟುಕೊಂಡು ವಾಯುದಾಳಿ ನಡೆಸಲು ಯತ್ನಿಸಿತು. ಮತ್ತು ಈ
ಸಂದರ್ಭದಲ್ಲಿ ನಡೆದ ’ವೈಮಾನಿಕ ಡಾಗ್ ಪೈಟ್’ ವೇಳೆ
ಭಾರತದ ಮಿಗ್ -೨೧ ವಿಮಾನವನ್ನು ಕೆಳಕ್ಕೆ
ಕೆಡವಿ ಐಎಎಫ್ ಪೈಲಟ್ನನ್ನು ಸೆರೆ ಹಿಡಿಯಿತು. ಏನಿದ್ದರೂ ಬಳಿಕ ಪೈಲಟ್ ನನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿತ್ತು. ಭಾರತ
ಮತ್ತು ಪಾಕಿಸ್ತಾನ ನಡುವಣ ಪ್ರಕ್ಷುಬ್ಧತೆಯನ್ನು ಶಮನಗೊಳಿಸುವಲ್ಲಿ ಚೀನಾ ತನ್ನ ಪಾತ್ರ ವಹಿಸಿತ್ತು.
2019: ಬೆಂಗಳೂರು: ತೀವ್ರ ವಿರೋಧಕ್ಕೆ ಗುರಿ ಯಾಗಿರುವ ಬಳ್ಳಾರಿ ಜಿಲ್ಲೆ ತೋರಣ ಗಲ್ ನ ಜಿಂದಾಲ್ ನ
ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಗೆ ೩೫೬೬ ಎಕರೆ ಜಮೀನು ಮಾರಾಟ ಮಾಡುವ ಸಚಿವ ಸಂಪುಟದ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡಲು ಸಂಪುಟ ಉಪ ಸಮಿತಿ ರಚನೆ
ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದು ಕೊಂಡಿತು. ಒಂದೆಡೆ ಪ್ರತಿಪಕ್ಷ ಬಿಜೆಪಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಅಹೋರಾತ್ರಿ ಧರಣಿ ನಡೆಸುತ್ತಿರುವುದು, ಇನ್ನೊಂದೆಡೆ ಸಮಾಜಿಕ ಹೋರಾಟ ಗಾರರು ಹಾಗೂ ರೈತರು ವಿರೋಧ ವ್ಯಕ್ತಪಡಿಸಿರುವುದರಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿತು..
ಆದರೆ, ಸರ್ಕಾರ ತೆಗೆದುಕೊಂಡಿರುವ ನಿರ್ಣಯವನ್ನು ಪ್ರತಿಪಕ್ಷ ಬಿಜೆಪಿ ವಿರೋಧಿಸಿತು. ಇದೊಂದು ಕಣ್ಣೊರೆಸುವ ತಂತ್ರವಾ ಗಿದ್ದು, ನಮ್ಮ ಹೋರಾಟ ಮುಂದುವರೆ ಯಲಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದರು. ಮುಖ್ಯಮಂತ್ರಿ
ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.
ಸಂಪುಟ ಸಭೆಯ ಬಳಿಕ ಸುದ್ದಿ ಗೋಷ್ಟಿ ನಡೆಸಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರು,ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು. ಜಿಂದಾಲ್ಗೆ ಜಮೀನು ಮಾರಾಟ
ಮಾಡುವುದಕ್ಕೆ ಕೆಲವರು ವಿರೋಧ ವ್ಯಕ್ತ ಪಡಿಸಿದ್ದರಿಂದ ಈ ಹಿಂದೆ ಸಂಪುಟದಲ್ಲಿ
ತೆಗೆದುಕೊಂಡ ನಿರ್ಣಯವನ್ನು ಪುನರ್ ಪರಿಪರಿಶೀಲನೆ ಮಾಡಲು ಸಂಪುಟ ಉಪಸಮಿತಿಯನ್ನು ರಚನೆ ಮಾಡಲಾ ಗಿದೆ. ಈ ಸಮಿತಿ ನೀಡುವ
ವರದಿಯ ಮೇಲೆ ಸರ್ಕಾರ ಮುಂದಿನ ಕ್ರಮಕೈ ಗೊಳ್ಳಲಿದೆ ಎಂದು ಹೇಳಿದರು.
2019: ಬೆಂಗಳೂರು: ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು ಆರ್. ಶಂಕರ್ ಹಾಗೂ ನಾಗೇಶ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ
ಮಧ್ಯಾಹ್ನ ೧:೧೦ಕ್ಕೆ ನಡೆದ
ಸರಳ ಸಮಾರಂಭದಲ್ಲಿ ಸಂಪುಟಕ್ಕೆ ಸೇರ್ಪಡೆಯಾದ ಆರ್.ಶಂಕರ್ ಹಾಗೂ ನಾಗೇಶ್ ಅವರಿಗೆ ರಾಜ್ಯಪಾಲ ವಾಜೂಭಾಯಿ ವಾಲಾ ಅವರು ಗೌಪ್ಯತಾ ಪ್ರತಿಜ್ಞಾವಿಧಿ ಬೋಧಿಸಿದರು. ಸಂಪುಟ
ವಿಸ್ತರಣೆಯ ಸಂದರ್ಭದಲ್ಲಿ ಜೆಡಿಎಸ್ ವತಿಯಿಂದ ಬಂಡೆಪ್ಪ ಕಾಶೆಂ ಪೂರ್ ಅವರನ್ನು ಕೈ ಬಿಟ್ಟು ಹಿರಿಯ
ನಾಯಕ ಹೆಚ್.ವಿಶ್ವನಾಥ್ ಅವರನ್ನು ಮಂತ್ರಿಯ ನ್ನಾಗಿ ಮಾಡಲು ಮಾಜಿ ಪ್ರಧಾನಿ ದೇವೇ ಗೌಡ ಉತ್ಸುಕರಾಗಿದ್ದರೂ ಕಾರಣಾಂತರಗ ಳಿಂದ ಅವರ ಹೆಸರನ್ನು ಕೈ ಬಿಡಲಾಯಿತು. ಇದೇ
ರೀತಿ ತಮ್ಮ ಕೋಟಾದಲ್ಲಿ ಬಾಕಿ ಉಳಿದಿರುವ ಒಂದು ಸ್ಥಾನವನ್ನು ಭರ್ತಿ ಮಾಡಿ ಅಲ್ಪಸಂಖ್ಯಾತ ನಾಯಕ ಬಿ.ಎಂ.ಫಾರೂಕ್
ಅವರಿಗೆ ಅವಕಾಶ ಕಲ್ಪಿಸಬೇಕು ಎಂಬ ಲೆಕ್ಕಾಚಾರ ಜೆಡಿಎಸ್ ನಲ್ಲಿ ನಡೆದಿತ್ತಾದರೂ ಅಂತಿಮ ಕ್ಷಣದಲ್ಲಿ ಆ ಚಿಂತನೆಯನ್ನು ಕೈ
ಬಿಡಲಾಯಿತು. ಹೀಗಾಗಿ
ಜೆಡಿಎಸ್ ಕೋಟಾದಡಿ ಪಡೆದಿದ್ದ ಸಚಿವ ಸ್ಥಾನಕ್ಕೆ ದಲಿತ ಸಮುದಾ ಯಕ್ಕೆ ಸೇರಿದ ನಾಗೇಶ್ ಅವರನ್ನು ಭರ್ತಿ ಮಾಡಲಾಯಿತಾದರೆ,ಸಿ.ಎಸ್.ಶಿವಳ್ಳಿ
ಅವರ ನಿಧನದಿಂದ ತೆರವಾಗಿದ್ದ ಸ್ಥಾನವನ್ನು ಕುರುಬ ಸಮುದಾಯದ ಆರ್.ಶಂಕರ್ ಭರ್ತಿ ಮಾಡಿದರು. ಹೀಗೆ ಇಬ್ಬರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ೧:೧೦ ಕ್ಕೆ
ಪ್ರಾರಂಭವಾದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೆಲ ನಿಮಿ?ಗಳಲ್ಲಿ ಮುಗಿದು ಹೋಯಿತು.
2019: ಬೆಂಗಳೂರು: ಸಾವಿರಾರು ಜನರಿಗೆ ನೂರಾರು ಕೋಟಿ ವಂಚನೆ ಮಾಡಿದ ಆರೋಪಕ್ಕೆ ಸಿಲುಕಿ ರುವ ಐಎಂಎ ಜ್ಯುವೆಲ್ಲರ್ಸ್‌ನ ಮಾಲೀಕ ಮೊಹಮ್ಮದ್
ಮನ್ಸೂರ್ ಖಾನ್ ಪ್ರಕರಣ ಬಯಲಾಗುವ ಮೊದಲೇ ಕುಟುಂಬ ಸಮೇತ ದುಬೈಗೆ ಪರಾರಿಯಾದದ್ದು ಬೆಳಕಿಗೆ ಬಂದಿತು. ಜೂನ್
೮ ರಂದು ಶನಿವಾರ ಸಂಜೆ ೮.೪೫ರಲ್ಲಿ ದೇವನಹಳ್ಳಿ
ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನನಿಲ್ದಾಣದಿಂದ ಯುನೈ ಟೆಡ್ ಅರಬ್ ಎಮಿರೆಟ್ಸ್ (ಯುಎಇ)ಗೆ ಸೇರಿದ ವಿಮಾನದಲ್ಲಿ
ಪತ್ನಿ-ಮಕ್ಕಳು ಸಮೇತ ಮನ್ಸೂರ್ ಖಾನ್ ದುಬೈಗೆ ಹಾರಿರುವುದನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಪತ್ತೆಹಚ್ಚಿತು. ವಿಮಾನ ನಿಲ್ದಾಣದ ವಲಸೆ ವಿಭಾಗದ (ಇಮಿಗ್ರೇಷನ್ ಸೆಕ್ಷನ್)ನಲ್ಲಿ ಕಳೆದ ಶನಿವಾರ ಸಂಜೆ ದುಬೈಗೆ ಯಾರು ಯಾರು ಹೋಗಿದ್ದಾರೆ ಎಂಬ ವಿವರಗಳನ್ನು ಅಧಿಕಾರಿಗಳು ಎಸ್ಐಟಿ ತನಿಖಾ ತಂಡಕ್ಕೆ ನೀಡಿದ್ದರು.
2018: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ
ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಯೋಧ ಔರಂಗಜೇಬ್
ಎಂಬವರನ್ನು ಭಯೋತ್ಪಾದಕರು ಅಪಹರಿಸಿದರು. ಅಪಹೃತ ಯೋಧನ ಪತ್ತೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು
ತೀವ್ರ ಶೋಧ ಆರಂಭಿಸಿದ್ದು, ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದರು. ಅಪಹೃತ ಯೋಧ ಔರಂಗಜೇಬ್ ಶಾದಿಮಾರ್ಗ್
ಸೇನಾ ಶಿಬಿರದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಮೀರ್ ಟೈಗರ್‌ನನ್ನು
ಹತ್ಯೆಗೈದಿದ್ದ ಸೇನಾ ಪಡೆಯ ಸದಸ್ಯರಲ್ಲಿ ಒಬ್ಬರಾಗಿದ್ದರು ಎಂದು ವರದಿಗಳು ಹೇಳಿದವು. ಅಪಹರಣಕ್ಕೊಳಗಾದ
ಯೋಧ ಔರಂಗಜೇಬ್ ಪೂಂಚ್ ನಿವಾಸಿಯಾಗಿದ್ದು ರಜೆಯಲ್ಲಿ ಇದ್ದರು ಎನ್ನಲಾಯಿತು. ಕೆಲಸ
ಮುಗಿಸಿ ಪ್ಯಾಸೆಂಜರ್ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಔರಂಗಜೇಬ್ ಅವರನ್ನು ಪುಲ್ವಾಮಾದಿಂದ
ಅಪಹರಣ ಮಾಡಲಾಗಿದೆ. ಶಸ್ತ್ರ ಸಜ್ಜಿತ ಉಗ್ರರ ತಂಡ ಗನ್ ಪಾಯಿಂಟಿನಲ್ಲಿ ಅವರನ್ನು ಎಳೆದುಕೊಂಡು ಹೋಯಿತು ಎಂದು ವರದಿಗಳು ಹೇಳಿದವು. ೪೪
ರಾಷ್ಟ್ರೀಯ ರೈಫಲ್ ಶಿಬಿರದ ಸೇನಾ ಸಿಬ್ಬಂದಿಯ ಪ್ರಕಾರ ಪುಲ್ವಾಮದ ಶಾದಿ ಮಾರ್ಗದಲ್ಲಿ ಭಯೋತ್ಪಾದಕರು
ಖಾಸಗಿ ವಾಹನವೊಂದನ್ನು ತqದು ಚಾಲಕನಿಗೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ನಲ್ಲಿ ಔರಂಗಜೇಬ್ ಅವರನ್ನು
ಕೆಳಕ್ಕೆ ಇಳಿಸುವಂತೆ ಆಜ್ಞಾಪಿಸಿದರು. ಆದರೆ ವಾಹನ ಕಲಾಂಪೋರ ತಲುಪಿದಾಗ, ಉಗ್ರಗಾಮಿUಳು ವಾಹನವನ್ನು
ತಡೆದು, ಔರಂಗಜೇಬ್ ಅವರನ್ನು ಅಪಹರಿಸಿದರು ಎಂದು ಪೊಲೀಸರು ಹೇಳಿದರು. ೪೪ ರಾಷ್ಟ್ರೀಯ ರೈಫಲ್ಸ್ ತುಕಡಿಯು ಶೋಪಿಯಾನ್ ನಲ್ಲಿ ಭಯೋತ್ಪಾದಕ
ನಿಗ್ರಹ ಕಾರ್‍ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಸಮೀರ್‌ನನ್ನು ಇನ್ನೋರ್ವ
ಪ್ರಮುಖ ಉಗ್ರನೊಂದಿಗೆ ಮೇ ತಿಂಗಳಿನಲ್ಲಿ ಹತ್ಯೆಗೈಯಲಾಗಿತ್ತು. ಇದಕ್ಕೆ ಮುನ್ನ ಭಯೋತ್ಪಾದಕರು ಪುಲ್ವಾಮದ ಗಂಗೂ ಸಮೀಪ ಸಿಆರ್ ಪಿಎಫ್ ಮತ್ತು
ಪೊಲೀಸ್ ಜಂಟಿ ತಪಾಸಣಾ ಕೇಂದ್ರದತ್ತ ಗುಂಡು ಹಾರಿಸಿದ್ದರು. ೨೦೧೭ರ ಮೇ ೧೦ರಂದು ಐದರಿಂದ ಆರು ಮಂದಿಯ ಉಗ್ರಗಾಮಿಗಳ ಗುಂಪೊಂದು ದಕ್ಚಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ
೨೨ರ ಹರೆಯದ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಬಂಧು ಒಬ್ಬರ ಮನೆಯಿಂದ ಅಪಹರಿಸಿದ್ದರು. ಗುಂಡೇಟಿನಿಂದ ಜರ್ಜರಿತವಾದ ಅವರ ಪಾರ್ಥಿವ ಶರೀರ ಬಳಿಕ ಶೋಪಿಯಾನ್
ನ ಹರ್ಮನ್ ಪ್ರದೇಶದಲ್ಲಿ ಪತ್ತೆಯಾಗಿತ್ತು.
2018: ಹ್ಯೂಸ್ಟನ್: ವಿಶ್ವದ ಪ್ರಮುಖ ಕಂಪೆನಿಗಳ ಪ್ರಮುಖ ಸ್ಥಾನಗಳಿಗೆ ನೇಮಕಗೊಳ್ಳುತ್ತಿರುವ
ಭಾರತೀಯರ ಸಾಲಿಗೆ ಇದೀಗ ಇನ್ನೊಬ್ಬ ಮಹಿಳೆ ಸೇರ್ಪಡೆಯಾದರು. ಭಾರತೀಯ ಮೂಲದ ಅಮೆರಿಕನ್ ಮಹಿಳೆ ದಿವ್ಯ ಸೂರ್ಯದೇವರ ಅವರು ಅಮೆರಿಕದ ಬೃಹತ್ ಆಟೋಮೇಕರ್
ಜನರಲ್ ಮೋಟಾರ್ಸ್ನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಚೀಫ್ ಫೈನಾನ್ಸ್ ಆಫೀಸರ್- ಸಿಎಫ್ ಒ) ನೇಮಕಗೊಂಡರು. ಸೂರ್ಯದೇವರ ಅವರು ಪ್ರಸ್ತುತ ಕಾರ್ಪೋರೇಟ್ ಫೈನಾನ್ಸ್ ನ
ಉಪಾಧ್ಯಕ್ಷರಾಗಿದ್ದು, ಜನರಲ್ ಮೋಟಾರ್‍ಸ್ ನ ಹಾಲಿ ಸಿಎಫ್ ಒ ಚುಕ್ ಸ್ಟೀವನ್ಸ್ ಅವರ ಉತ್ತರಾಧಿಕಾರಿಯಾಗಿ
ಸೆಪ್ಟೆಂಬರ್ ೧ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪೆನಿಯ ಹೇಳಿಕೆಯೊಂದು ಈದಿನ ತಿಳಿಸಿತು.
ತಮಿಳುನಾಡಿನ ಚೆನ್ನೈಯಲ್ಲಿ ಜನಿಸಿದ ೩೯ರ ಹರೆಯದ ಸೂರ್ಯದೇವರ ಅವರು ೨೦೧೭ರ ಜುಲೈ ತಿಂಗಳಿನಿಂದೀಚೆಗೆ
ಕಾರ್ಪೋರೇಟ್ ಫೈನಾನ್ಸ್ ಜನರಲ್ ಮೋಟಾರ್ಸ್ ಉಪಾಧ್ಯಕ್ಷರಾಗಿದ್ದಾರೆ.
ಸೂರ್ಯದೇವರ ಅವರು, ೨೦೧೪ರಿಂದ ಆಟೋಮೇಕರ್ ಕಂಪೆನಿಯ ಮುಖ್ಯಸ್ಥರಾಗಿರುವ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ
(ಸಿಇಒ) ಮೇರಿ ಬರ್ರಾ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ. ಬರ್ರಾ ಮತ್ತು ಸೂರ್ಯದೇವರ ಅವರು ಆಟೋ ಕೈಗಾರಿಕೋದ್ಯಮದಲ್ಲಿನ
ಉನ್ನತ ಹುದ್ದೆಗಳಲ್ಲಿ ಇರುವ ಮೊದಲ ಮಹಿಳೆಯರಾಗಿದ್ದಾರೆ. ಬೇರೆ ಯಾವುದೇ ಪ್ರಮುಖ ಜಾಗತಿಕ ಆಟೋಮೇಕರ್
ಕಂಪೆನಿಯಲ್ಲಿ ಮಹಿಳಾ ಸಿಇಒ ಅವರನ್ನಾಗಲೀ ಅಥವಾ ಸಿಇಒ ಮತ್ತು ಸಿಎಫ್ ಒ ಎರಡೂ ಹುದ್ದೆಗಳಿಗೆ ಮಹಿಳೆಯರನ್ನಾಗಲೀ
ಹೊಂದಿಲ್ಲ. ಜನರಲ್ ಮೋಟಾರ್ಸ್ ಕಂಪೆನಿಯು ಶೀಘ್ರದಲ್ಲೇ ಹರ್ಶೆ ಕಂಪನಿ ಮತ್ತು ಅಮೆರಿಕನ್ ವಾಟರ್ ವರ್ಕ್ಸ್
ಕಂಪೆನಿ ಸೇರಿದಂತೆ ಎಸ್ ಅಂಡ್ ಪಿ ೫೦೦ ಕಂಪೆನಿಗಳ ಪಟ್ಟಿಗೆ ಸೇರ್ಪಡೆಯಾಗಲಿದೆ. ಸೂರ್ಯದೇವರ ಅವರು
ಚೆನ್ನೈಯ ಮದ್ರಾಸ್ ವಿಶ್ವ ವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು
ಪಡೆದಿದ್ದು, ತಮ್ಮ ೨೨ನೇ ವರ್ಷದಲ್ಲಿ ಹಾರ್ವಡ್ ವಿಶ್ವ ವಿದ್ಯಾಲಯದಲ್ಲಿ ಎಂಬಿಎ ಓದುವ ಸಲುವಾಗಿ ಅಮೆರಿಕಕ್ಕೆ
ತೆರಳಿದ್ದರು. ಚಾರ್ಟರ್ಡ್ ಫೈನಾನ್ಶಿಯಲ್ ಅನಲಿಸ್ಟ್
ಮತ್ತು ಅಕೌಂಟೆಂಟ್ ಆಗಿರುವ ಸೂರ್‍ಯದೇವರ ಯುಬಿಎಸ್ ಮತ್ತು ಪೈಸ್ ವಾಟರ್ ಹೌಸ್ ಕೂಪರ್‍ಸ್ ಕಂಪೆನಿಯಲ್ಲಿ
ಕೆಲಸ ಮಾಡಿದ್ದರು. ಬಳಿಕ ೨೦೦೫ರಲ್ಲಿ ಡೆಟ್ರಾಯಿಟ್ ಮೂಲದ ಜನರಲ್ ಮೋಟಾರ್‍ಸ್ ಕಂಪೆನಿಗೆ ತಮ್ಮ ೨೫ನೇ
ವಯಸ್ಸಿನಲ್ಲಿ ಸೇರಿದ್ದರು. ‘ನಮ್ಮ ಹಣಕಾಸು ಕಾರ್ಯಾಚರಣೆಗಳುದ್ದಕ್ಕೂ
ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ದಿವ್ಯ ಅವರ ಅನುಭವ ಮತ್ತು ನಾಯಕತ್ವವು ಕಂಪೆನಿಯ ವಹಿವಾಟನ್ನು
ಸುಭದ್ರಗೊಳಿಸುವಲ್ಲಿ ಉತ್ತಮ ಫಲಿತಾಂಶ ಬೀರಿವೆ’ ಎಂದು ಬರ್ರಾ ತಮ್ಮ ಹೇಳಿಕೆಯಲ್ಲಿ
ತಿಳಿಸಿದರು. ಅಮೆರಿಕದ ಅತ್ಯಂತ ದೊಡ್ಡ ಆಟೋಮೇಕರ್
ಕಂಪೆನಿಯಲ್ಲಿ ೨೦೧೪ರಿಂದ ಸಿಎಫ್ ಒ ಆಗಿರುವ ಸ್ಟೀವನ್ಸ್ (೫೮) ಅವರು ಕಂಪೆನಿಯಲ್ಲಿನ ತಮ್ಮ ೪೦ ವರ್ಷಗಳ
ಸೇವೆಯ ಬಳಿಕ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.
2018: ಪಾಟ್ನಾ: ಬಿಹಾರದ ವೈದ್ಯರೊಬ್ಬರ
೩೫ರ ಹರೆಯದ ಪತ್ನಿಯ ಮೇಲೆ ೧೦ ಮಂದಿಯ ಗುಂಪೊಂದು ಜನನಿಬಿಡ
ರಸ್ತೆಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಅಪ್ರಾಪ್ತ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಪಾಟ್ನಾದ
ರಫೀಗಂಜ್ -ಗಯಾ ರಸ್ತೆಯಲ್ಲಿ ಘಟಿಸಿತು. ಇದೇ ದುಷ್ಕರ್ಮಿಗಳು ಇಬ್ಬರು ವಿದ್ಯಾರ್ಥಿಗಳನ್ನೂ ಥಳಿಸಿ
ಅವರ ಬಳಿ ಇದ್ದ ಮೊಬೈಲ್ ಫೋನುಗಳು ಮತ್ತು ನಗದು ಹಣವನ್ನು ಕಿತ್ತುಕೊಂಡು ಹೋದರು. ವೈದ್ಯರು ತಮ್ಮ ಮೋಟಾರ್ ಸೈಕಲ್‌ನಲ್ಲಿ ಪತ್ತಿ ಮತ್ತು ಪುತ್ರಿಯ
ಜೊತೆಗೆ ಹೋಗುತ್ತಿದ್ದಾಗ ಈ ಘಟನೆ ಘಟಿಸಿತು. ಪೊಲೀಸರ ಪ್ರಕಾರ ೧೦ ಮಂದಿಯ ಗುಂಪು ರಸ್ತೆಯಲ್ಲಿ ಜನರು
ಇಲ್ಲದ ಜಾಗದಲ್ಲಿ ಮೋಟಾರ್ ಸೈಕಲನ್ನು ಅಡ್ಡಗಟ್ಟಿ, ಪತ್ನಿ ಮತ್ತು ಪುತ್ರಿಯ ಮೇಲೆ ಲೈಂಗಿಕ ದಾಳಿ ನಡೆಸುವ
ಮುನ್ನ ವೈದ್ಯರನ್ನು ಸಮೀಪದ ಹೊಲವೊಂದಕ್ಕೆ ಒಯ್ದು ಕೈಕಾಲು ಕಟ್ಟಿ ಹಾಕಿದ್ದರು. ಬಳಿಕ ಸೋನಿಧಿ ಗ್ರಾಮದ
ಸಮೀಪ ಲೈಂಗಿಕ ದಾಳಿ ನಡೆಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಜಿಲ್ಲೆಯ ಗುರಾರು ಪ್ರದೇಶದಲ್ಲಿ ಖಾಸಗಿ ಕ್ಲಿನಿಕ್ ಇಟ್ಟುಕೊಂಡಿರುವ
ವೈದ್ಯರು ಘಟನೆ ಸಂಭವಿಸಿದ ವೇಳೆಯಲ್ಲಿ ತಮ್ಮ ಮನೆಯತ್ತ ಹೊರಟಿದ್ದರು. ಘಟನಾ ಸ್ಥಳಕ್ಕೆ ಸಮೀಪದ ಪೊಲೀಸ್ ಠಾಣೆಯ ಪೊಲೀಸರ ತಂಡವು
ಅಪರಾಧಿಗಳನ್ನು ಸೆರೆ ಹಿಡಿಯಲು ಯತ್ನಿಸುತ್ತಿದೆ ಎಂದು ಗಯಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್
ಮಿಶ್ರ ಹೇಳಿದರು. ’ಸೋನಿಧಿ ಗ್ರಾಮದಲ್ಲಿ ಹಲವಾರು ಮನೆಗಳ ಮೇಲೆ ನಾವು ದಾಳಿ ನಡೆಸಿದ್ದೇವೆ. ಮತ್ತು
ಅನುಮಾನದ ಮೇಲೆ ೨೦ ಯುವಕರನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಲಾಗುತ್ತಿದೆ’ ಎಂದು ಎಸ್ ಎಸ್ ಪಿ ಹೇಳಿದರು. ಜನನಿಬಿಡ ರಸ್ತೆಯ ನಿರ್ಜನ ಭಾಗದಲ್ಲಿ ದುಷ್ಕರ್ಮಿಗಳು ತಮ್ಮನ್ನು
ಅಡ್ಡ ಗಟ್ಟಿದರು. ತಮ್ಮ ಬಳಿ ಇರುವುದೆಲ್ಲವನ್ನೂ ತೆಗೆದುಕೊಂಡು ಬಿಟ್ಟು ಬಿಡುವಂತೆ ಬೇಡಿದೆವು. ಆದರೆ
ಅವರು ನಿರಾಕರಿಸಿದರು. ದಾಳಿಕೋರರು ವೈದ್ಯರ ಕೈ ಮತ್ತು ಕಾಲುಗಳನ್ನು ಕಟ್ಟಿ ಪಕ್ಕದ ಹೊ ಒಂದರತ್ತ ಒಯ್ದರು.
ದುಷ್ಕರ್ಮ ಎಸಗಿ ಪರಾರಿಯಾಗುವ ಮುನ್ನ ತನ್ನನ್ನು ಹಾಗೂ ಪುತ್ರಿಯನ್ನು ಮರಕ್ಕೆ ಕಟ್ಟಿಹಾಕಿ ಪರಾರಿಯಾದರು
ಎಂದು ಮಹಿಳೆ ತಮಗೆ ತಿಳಿಸಿದರು. ಬಳಿಕ ಮಹಿಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿಯೂ,
ಪುತ್ರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದೂ ಹೇಳಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಇಬ್ಬರನ್ನೂ
ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಮಧ್ಯೆ ಅಪ್ರಾಪ್ತ ಬಾಲಕಿ ತನಗೆ ತೋರಿಸಲಾದ ಭಾವಚಿತ್ರಗಳಲ್ಲಿ
ಇಬ್ಬರು ದಾಳಿಕೋರರನ್ನು ಗುರುತಿಸಿದ್ದಾಳೆ ಎಂದು ಪೊಲೀಸರು ಹೇಳಿದರು. ಪೊಲೀಸರ ಪ್ರಕಾರ ಇದೇ ಅಪರಾಧಿಗಳ
ಗುಂಪು ವೈದ್ಯ ಕುಟುಂಬದ ಮೇಲೆ ದಾಳಿ ನಡೆಸುವುದಕ್ಕೆ ಮುನ್ನ ಅದೇ ಜಾಗದಲ್ಲಿ ಇಬ್ಬರು ವಿದ್ಯಾರ್ಥಿಗಳ
ಮೇಲೆ ದಾಳಿ ನಡೆಸಿ, ಥಳಿಸಿ ಅವರ ಬಳಿ ಇದ್ದ ಮೊಬೈಲ್ ಫೋನುಗಳನ್ನು ಮತ್ತು ನಗದು ಹಣವನ್ನು ದರೋಡೆ ಮಾಡಿತ್ತು
ಎನ್ನಲಾಯಿತು.
2018:
ಶ್ರೀನಗರ: ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರನ್ನು ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಮಾಡಿದರು. ತೀವ್ರ ಗಾಯಗೊಂಡಿದ್ದ ಬುಖಾರಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಶ್ರೀನಗರದ ಪ್ರೆಸ್ ಕಾಲೊನಿಯಲ್ಲಿ ಇಫ್ತಾರ್ ಕೂಟ ಮುಗಿಸಿಕೊಂಡು ಬಂದ ಶುಜಾತ್ ಬುಖಾರಿ ಅವರು ಇದ್ದ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ಮಳೆಗರೆದರು. ಕಾರು ಚಾಲಕ ಮತ್ತು ಭದ್ರತಾ ಸಿಬ್ಬಂದಿ ಸಹ ಈ ಗುಂಡಿನ ದಾಳಿಯಲ್ಲಿ ಗಾಯಗೊಂಡರು. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. 18 ವರ್ಷಗಳ ಹಿಂದೆ (2000ನೇ ಇಸವಿ) ಶುಜಾತ್ ಬುಖಾರಿ ಅವರ ಮೇಲೆ ದಾಳಿ ನಡೆದಿತ್ತು. ನಂತರ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
2016: ರೋಮ್: ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆಯ ಮುಖಂಡ ಅಬುಬಕರ್ ಅಲ್ ಬಗ್ದಾದಿ ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಹತ್ಯೆಯಾಗಿರುವುದನ್ನು ಐಸಿಸ್ ದೃಢ ಪಡಿಸಿರುವುದಾಗಿ ವರದಿಗಳು ಈದಿನ ತಿಳಿಸಿದವು. ಉತ್ತರ ಸಿರಿಯಾದ ರಖ್ಖಾ ಎಂಬಲ್ಲಿ ರಂಜಾನಿನ ಐದನೇ ದಿನ ಅಮೆರಿಕಾ ನಡೆಸಿದ ದಾಳಿಯಲ್ಲಿ ಅಬುಬಕರ್ ಅಲ್ ಬಗ್ದಾದಿ ಹತ್ಯೆಯಾಗಿರುವುದಾಗಿ ಐಸಿಸ್ ಸ್ವಾಮ್ಯದ ಅರಬಿಕ್ ಸುದ್ದಿ ಸಂಸ್ಥೆ ಅಲ್-ಅಮಾಖ್ನ್ನು ಉಲ್ಲೇಖಿಸಿ ಟರ್ಕಿ ಪತ್ರಿಕೆ ಎನ್ನಿಸ್ ಸಫಕ್ ವರದಿ ಮಾಡಿತು.
ಇದಕ್ಕೆ ಮುನ್ನ ಮೊಸುಲ್ ನಗರದಿಂದ 65 ಕಿಮೀ. ದೂರದ ಪ್ರದೇಶವೊಂದರಲ್ಲಿ ಜೂನ್ 12ರ ಭಾನುವಾರ ಮಿತ್ರಪಡೆಗಳು ನಡೆಸಿದ ವಾಯುದಾಳಿಯಲ್ಲಿ ಬಗ್ದಾದಿ ಮತ್ತು ಇತರರು ತೀವ್ರವಾಘಿ ಗಾಯಗೊಂಡಿರುವುದಾಗಿ ಇರಾಕಿ ಟಿವಿ ವಾಹಿನಿ ವರದಿ ಮಾಡಿತ್ತು.
2016: ಮುಂಬೈ: ಬ್ಯಾಂಕ್ ಸಾಲ ಮರುಪಾವತಿ ವಿಷಯದಲ್ಲಿ ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಮುಂಬೈಯ ವಿಶೇಷ ನ್ಯಾಯಾಲಯವು ಉದ್ಯಮಿ ವಿಜಯ್ ಮಲ್ಯ ಅವರು ಘೋಷಿತ ಅಪರಾಧಿ ಎಂದು ಘೋಷಿಸಿತು. ಸದ್ಯ ಲಂಡನ್ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಅವರುಗೆ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತನ್ನ ಮುಂದೆ ಹಾಜರಾಗುವಂತೆ ಹಲವಾರು ಬಾರಿ ಜಾರಿ ನಿರ್ದೇಶನಾಲಯವು ನಿರ್ದೇಶನ ನೀಡಿತ್ತು. ಮಲ್ಯ ಅವರು ಇದಕ್ಕೆ ಸ್ಪಂದಿಸದ ಕಾರಣ ಅವರನ್ನು ಘೋಷಿತ ಅಪರಾಧಿ ಎಂಬುದಾಗಿ ಘೋಷಿಸುವಂತೆ ಜಾರಿ ನಿರ್ದೇಶನಾಲಯ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಘೋಷಿತ ಅಪರಾಧಿ ಎಂಬುದಾಗಿ ಘೋಷಿಸಿದ್ದರಿಂದ ಕಾನೂನಿನ ಪ್ರಕಾರ ಈಗ ಮಲ್ಯ ಅವರು ಮುಂದಿನ 30 ದಿನಗಳ ಒಳಗಾಗಿ ನ್ಯಾಯಾಲಯವು ಸೂಚಿಸಿದ ಸ್ಥಳದಲ್ಲಿ, ಸೂಚಿಸಿದ ವೇಳೆಗೆ ಹಾಜರಾಗಬೇಕಾಗುತ್ತದೆ. ಆರೋಪಿಯನ್ನು ಹಾಜರಾಗುವಂತೆ ಮಾಡಲು ಇದು ಏಕೈಕ ಪರಿಣಾಮಕಾರಿ ಕ್ರಮವಾಗಿದೆ. ಹಾಜರಾಗದೇ ಇದ್ದಲ್ಲಿ ಅವರ ಎಲ್ಲಾ ಆಸ್ತಿಪಾಸ್ತಿಯನ್ನೂ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಬಹುದಾಗಿದೆ. ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿಯನ್ನು ಕೂಡಾ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇಡಿ ಈಗಾಗಲೇ ಮಲ್ಯರ ಪಾಸ್ಪೋರ್ಟ್ ರದ್ದುಗೊಳಿಸಿದ್ದು, ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಬಹುದಾದ ಮುನ್ಸೂಚನೆ ನೀಡಿತ್ತು. ಮಲ್ಯರಿಗೆ ಆಶ್ರಯ ನೀಡದಂತೆ ಬ್ರಿಟನ್ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಘೋಷಿತ ಅಪರಾಧಿಯಾದ ಮಲ್ಯರನ್ನು ವಿಚಾರಣೆಗೆ ಸ್ವದೇಶಕ್ಕೆ ಕರೆತರುವ ಕಾರ್ಯವನ್ನು ಜಾರಿ ನಿರ್ದೇಶನಾಲಯ ಚುರುಕುಗೊಳಿಸಲಿದೆ ಎಂದು ಮೂಲಗಳು ಹೇಳಿದವು.
2016: ನವದೆಹಲಿ: ದೆಹಲಿಯ ಆಮ್ ಆದ್ಮಿ ಸರ್ಕಾರದ ಸಾರಿಗೆ ಸಚಿವ ಗೋಪಾಲ್ ರೈ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಲೋಕೋಪಯೋಗಿ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಸಾರಿಗೆ ಇಲಾಖೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿದವು. ಗೋಪಾಲ್ ರೈ ಅವರು ತಮ್ಮ ಕತ್ತಿನಲ್ಲಿ 17 ವರ್ಷಗಳಿಂದ ಇದ್ದ ಬುಲೆಟ್ ತೆಗೆಯಲು ನಡೆದ ಸರ್ಜರಿಯ ಹಿನ್ನೆಲೆಯಲ್ಲಿ ತಮ್ಮನ್ನು ಸಚಿವಾಲಯ ಕರ್ತವ್ಯದಿಂದ ಮುಕ್ತರನ್ನಾಗಿ ಮಾಡುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮನವಿ ಮಾಡಿದ್ದರು. ರೈ ಅವರು ಆಪ್ ಸರ್ಕಾರದಲ್ಲಿ ಹಲವಾರು ಸಾರಿಗೆ ಯೋಜನೆಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದರು. ಪ್ರಸ್ತುತ ಬೆನ್ನಹುರಿ ಚಿಕಿತ್ಸಾ ಕೇಂದ್ರದಲ್ಲಿ ಅವರು ಫಿಸಿಯೋಥೆರೆಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೈ ಅವರು ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ಹೊಣೆಯನ್ನೂ ಹೊಂದಿದ್ದರು. ಶಸ್ತ್ರಚಿಕಿತ್ಸೆ ಬಳಿಕದ ಪರಿಸ್ಥಿತಿಯಲ್ಲಿ ತಮಗೆ ಸಚಿವರಾಗಿ ನಿರ್ವಹಿಸಬೇಕಾದ ಹೊಣೆಗಾರಿಕೆಗೆ ನ್ಯಾಯ ಒದಗಿಸಲಾಗುತ್ತಿಲ್ಲ ಎಂದು ಅವರು ಕೇಜ್ರಿವಾಲ್ ಅವರಿಗೆ ತಿಳಿಸಿದ್ದರು ಎಂದು ಹೇಳಲಾಯಿತು.
2016: ಕ್ಯಾಲಿಫೋರ್ನಿಯಾ: ಭೂಮಿಯಿಂದಾಚೆ ಏಕಕಾಲದಲ್ಲಿ ‘ಜೋಡಿ ಸೂರ್ಯ’ರನ್ನು ಸುತ್ತುತ್ತಿರುವ, ಹೆಚ್ಚೂಕಡಿಮೆ ಗುರು ಗ್ರಹದಷ್ಟೇ ದೊಡ್ಡದಾದ ಇನ್ನೊಂದು ಗ್ರಹ ‘ಕೆಪ್ಲರ್1647ಬಿ’ ಇರುವುದನ್ನು ಪತ್ತೆ ಮಾಡಲಾಗಿದೆ! ಮೇರಿಲ್ಯಾಂಡ್ನಲ್ಲಿರುವ ಗಾಡ್ಗಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಮತ್ತು ಸ್ಯಾನ್ ಡೀಗೋ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞರ ತಂಡ, ಕೆಪ್ಲರ್ ದೂರದರ್ಶಕದ ಸಹಾಯದೊಂದಿಗೆ ಇಂತಹದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾಗಿ ಹೇಳಿಕೊಂಡಿದೆ. ಸ್ಯಾನ್ ಡೀಗೋನಲ್ಲಿ ನಡೆದ ಅಮೆರಿಕ ಖಗೋಳಶಾಸ್ತ್ರಜ್ಞರ ಒಕ್ಕೂಟದ ಸಭೆಯ ಬಳಿಕ ಈ ಸಂಶೋಧನೆಯ ಮಾಹಿತಿಯನ್ನು ನೀಡಲಾಯಿತು. ಬಾಹ್ಯಾಕಾಶದಲ್ಲಿ ಗ್ರಹವೊಂದು ‘ಜೋಡಿ ನಕ್ಷತ್ರ’ ವ್ಯವಸ್ಥೆಯಲ್ಲಿ ಸುತ್ತುವ ಪ್ರಕ್ರಿಯೆ ಸಾಬೀತು ಪಡಿಸಲಿಕ್ಕೆ ಈ ಅಧ್ಯಯನ ಅತ್ಯುತ್ತಮ ಉದಾಹರಣೆ ಆಗಲಿದೆ ಎಂದು ಖಗೋಳಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬರಿಗಣ್ಣಿನಲ್ಲಿ ಅಸ್ಪಷ್ಟವಾಗಿ ಗೋಚರಿಸುವ ಈ ಪ್ರಕ್ರಿಯೆ ದೂರದರ್ಶಕದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಜೋಡಿ ನಕ್ಷತ್ರಗಳನ್ನು ಸುತ್ತುವ ವ್ಯವಸ್ಥೆಯಲ್ಲಿನ ಗ್ರಹಗಳನ್ನು ಸರ್ಕ್ಯುಂಬೈನರಿ ಗ್ರಹ ಎಂದು ಗುರುತಿಸಲಾಗುತ್ತದೆ. ಅಥವಾ ಕೆಲವೊಮ್ಮೆ ‘ಟಾಟೋಯಿನ್’ ಗ್ರಹಗಳು ಎಂದು ಕರೆಯಲಾಗುತ್ತದೆ. ಆದರೆ ಅಧ್ಯಯನದ ವರದಿಯ ಪ್ರಕಾರ ಏಕ ನಕ್ಷತ್ರದ ಸುತ್ತ ಸುತ್ತುವ ಗ್ರಹಗಳಿಗಿಂತ ಜೋಡಿ ನಕ್ಷತ್ರಗಳ ಸುತ್ತ ಸುತ್ತುವ ಗ್ರಹ ಒರಟಾಗಿರುತ್ತದೆ ಎಂದು ಖಗೋಳಶಾಸ್ತ್ರಜ್ಞ ವಿಲಿಯಮ್ ವೆಲ್ಷ್ ಹೇಳಿದ್ದಾರೆ. ವೆಲ್ಷ್ ಪತ್ರಿಕೆಯೊಂದರ ಅಂಕಣಕಾರ ಕೂಡ ಆಗಿದ್ದಾರೆ. ‘ಕೆಪ್ಲರ್1647ಬಿ’ ಅಂದಾಜು 3,700 ಜ್ಯೋತಿವರ್ಷಗಳಷ್ಟು ದೂರದಲ್ಲಿದ್ದು, ಹೆಚ್ಚೂಕಡಿಮೆ 4.4 ಬಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಅಂದರೆ ಭೂಮಿಯಷ್ಟೇ ಹಳೆಯ ಗ್ರಹ ಎಂದು ಅಂದಾಜಿಸಲಾಗಿದೆ. ಜೋಡಿ ಸೂರ್ಯರಿಗೆ ಪ್ರದಕ್ಷಿಣೆ ಹಾಕಲು ಈ ಗ್ರಹ 1,107 ದಿನಗಳನ್ನು (ಮೂರಕ್ಕಿಂತಲೂ ಹೆಚ್ಚು ವರ್ಷ) ತೆಗೆದುಕೊಳ್ಳುತ್ತದೆ.
2016: ವಿಶ್ವಸಂಸ್ಥೆ: ಅತಿ ಪುಟ್ಟದಾದ ಫೆಸಿಫಿಕ್ ದ್ವೀಪರಾಷ್ಟ್ರ ಫಿಜಿಯ ರಾಯಭಾರಿ ಪೀಟರ್ ಥಾಮ್ಸನ್ ಅವರು ಹಿಂದಿನ ದಿನ ನಡೆದ ಅಪರೂಪದ ಚುನಾವಣೆಯಲ್ಲಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಥಾಮ್ಸನ್ ಅವರು ಸೈಪ್ರಸ್ನ ಮಾವ್ರೊಯಿಯನ್ನಿಸ್ ಅವರನ್ನು 94 ಮತ ಗಳಿಸಿ 4 ಮತಗಳ ಅಲ್ಪ ಅಂತರದಲ್ಲಿ ಪರಾಭವಗೊಳಿಸಿದರು. ಮಾವ್ರೊಯಿಯನ್ನಿಸ್ ಅವರಿಗೆ 90 ಮತಗಳು ಲಭಿಸಿದವು. ಹೆಸರಿಗಷ್ಟೇ ಇರುವ ಹುದ್ದೆಯಾಗಿದ್ದರೂ ಮಹತ್ವದ ವೈಧಾನಿಕ ಪ್ರಕ್ರಿಯೆಗಳಿಗೆ ಸಂಬಂಧಿದ ಅತ್ಯಂತ ಉನ್ನತ ಹುದ್ದೆ ಇದಾಗಿದೆ. ಸಾಮಾನ್ಯವಾಗಿ ಒಬ್ಬರೇ ಅಭ್ಯರ್ಥಿಯನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಮಾತ್ರ ಈ ಹುದ್ದೆಗೆ ಅಪರೂಪದ ಚುನಾವಣೆ ನಡೆಯಿತು. 2013-14ರ ಸಾಲಿನಲ್ಲಿ ಇದ್ದ ತಮ್ಮ ಪೂರ್ವಾಧಿಕಾರಿಯ ವಿರುದ್ಧ ಅಮೆರಿಕದ ಅಧಿಕಾರಿಗಳು ಚೀನೀ ವ್ಯಾಪಾರಿಯಿಂದ 1.3 ಮಿಲಿಯ ಡಾಲರ್ ಲಂಚ ಪಡೆದ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡುವುದಾಗಿ ಥಾಮ್ಸನ್ ಹೇಳಿದರು. ವಿಶ್ವಸಂಸ್ಥೆಯ ಹಾಲಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಸ್ಥಾನಕ್ಕೆ ನೂತನ ವ್ಯಕ್ತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಥಾಮ್ಸನ್ ನೋಡಿಕೊಳ್ಳಲಿದ್ದಾರೆ.
2016: ನವದೆಹಲಿ: ದೆಹಲಿ ಮುಖ್ಯಮಂತ್ರಿಯಿಂದ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡ 21 ಮಂದಿ ಆಮ್ ಆದ್ಮಿ ಪಕ್ಷದ ಶಾಸಕರನ್ನು ರಕ್ಷಿಸುವ ಸಲುವಾಗಿ ತರಲಾಗಿದ್ದ ಲಾಭದ ಹುದ್ದೆ ಮಸೂದೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಹಿಂದಿನ ರಾತ್ರಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಿದರು. ಲಾಭದ ಹುದ್ದೆ ಮಸೂದೆಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿರುವುದರಿಂದ ಈಗ ಆಮ್ ಆದ್ಮಿ ಪಕ್ಷದ 21 ಶಾಸಕರು ಅನರ್ಹಗೊಳ್ಳುವ ಸಾಧ್ಯತೆ ಇದೆ. ಕೇಂದ್ರದ ಮೋದಿ ಸರ್ಕಾರದ ಶಿಫಾರಸು ಪ್ರಕಾರವೇ ತಾನು ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡುವ ಆದೇಶ ಹೊರಡಿಸಿದ್ದಾಗಿ ಹೇಳಿದ ಕೇಜ್ರಿವಾಲ್ ಅವರು ‘ಪ್ರಧಾನಿಯವರಿಗೆ ದೆಹಲಿ ಪರಾಭವವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಜರೆದರು. ‘ದೆಹಲಿ ಪರಾಭವವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲವಾದ ಕಾರಣ ನೀವು ದೆಹಲಿ ಸರ್ಕಾರವನ್ನು ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲವೇ ಎಂದು ಮೋದೀಜಿ ಅವರನ್ನು ನಾನು ಕೇಳಬಯಸುತ್ತೇನೆ’ ಎಂದು ಕೇಜ್ರಿವಾಲ್ ಪ್ರಶ್ನಿಸಿದರು. ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಆಡಳಿತ ಇರುವ ಹರಿಯಾಣ, ನಾಗಾಲ್ಯಾಂಡ್, ರಾಜಸ್ಥಾನ, ಪಂಜಾಬ್, ಗುಜರಾತ್ ಮತ್ತಿತರ ರಾಜ್ಯಗಳಲ್ಲೂ ಸಂಸದೀಯ ಕಾರ್ಯದರ್ಶಿಗಳು ಇದ್ದಾರೆ. ಮೋದೀಜಿ ಅವರಿಗೆ ದೆಹಲಿ ಸಂಸದೀಯ ಕಾರ್ಯದರ್ಶಿಗಳನ್ನು ಮಾತ್ರವೇ ಅನರ್ಹಗೊಳಿಸುವ ಉಮೇದು ಏಕೆ?’ ಎಂದೂ ಕೇಜ್ರಿವಾಲ್ ಕೇಳಿದರು. ಚುನಾಯಿತ ಸದಸ್ಯ ಲಾಭದ ಹುದ್ದೆಯನ್ನು ಹೊಂದಿದ್ದರೆ ಆತ ಸಂವಿಧಾನವನ್ನು ಉಲ್ಲಂಘಿಸಿದಂತಾಗುತ್ತದೆ. ರಾಷ್ಟ್ರಪತಿಯವರು ಆಪ್ ಶಾಸಕರಿಗೆ ವಿನಾಯ್ತಿ ನೀಡಲು ಕೋರಿದ ಮಸೂದೆಯನ್ನು ತಿರಸ್ಕರಿಸಿರುವುದರಿಂದ ಈ ಶಾಸಕರು ತತ್ಕ್ಷಣದಿಂದಲೇ ಅನರ್ಹಗೊಳ್ಳುತ್ತಾರೆ ಮತ್ತು ಅವರ ಸ್ಥಾನಗಳಿಗೆ ಹೊಸದಾಗಿ ಚುನಾವಣೆ ನಡೆಯಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಮೂಲಗಳು ಹೇಳಿದವು.
.
2016: ಪ್ಯಾರಿಸ್: ಫ್ರೆಂಚ್ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಆತನ ಪತ್ನಿಯನ್ನು ಉಗ್ರರು ಹತ್ಯೆಗೈದ ಘಟನೆ ಪ್ಯಾರಿಸ್ನಲ್ಲಿ ಹಿಂದಿನ ದಿನ ಘಟಿಸಿತು. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿಗಳು ಹೊತ್ತರು. ಈ ದಾಳಿ ನಡೆಸಿರುವುದು ಐಸಿಸ್ ಹೋರಾಟಗಾರ ಎಂದು ಸಂಘಟನೆಯ ವಾರ್ತಾ ಏಜನ್ಸಿ ಅಮಾಖ್ ಹೇಳಿತು. ಘಟನಾ ಸ್ಥಳದಲ್ಲಿದ್ದ ಮೂರು ವರ್ಷದ ಬಾಲಕನೊಬ್ಬನ್ನು ಪಾರು ಮಾಡಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಿದ್ದು ಹೆಚ್ಚಿನ ಮಾಹಿತಿ ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
2016: ನಾಗಪುರ: ಎರಡು ದಿನದ ಹಿಂದೆ ಜನಿಸಿದ್ದ, ವೈದ್ಯಲೋಕಕ್ಕೆ ಸವಾಲಾಗಿದ್ದ ವಿಚಿತ್ರ ಮಗು ಈದಿನ ಸಂಜೆ ಸಾವನ್ನಪ್ಪಿತು. ಹುಟ್ಟಿದಾಗ 1.8 ಕೆ.ಜಿ. ತೂಕ ಹೊಂದಿದ್ದ ಮಗು ಹರ್ಲೆಕ್ವಿನ್ ಇಕ್ತಿಯೋಸಿಸ್ ಎಂಬ ಅತ್ಯಂತ ವಿರಳ ಖಾಯಿಲೆಗೆ ತುತ್ತಾಗಿತ್ತು. ಈ ರೋಗದಿಂದ ಬಳಲುವವರ ದೇಹದ ಮೇಲೆ ಚರ್ಮವಿಲ್ಲದೆ ಆಂತರಿಕ ಅಂಗಾಂಗಗಳು ಗೋಚರಿಸುತ್ತವೆ. ಜನಿಸಿದ್ದು ಹೆಣ್ಣು ಮಗು ಎಂದು ತಿಳಿಸಿದ ವೈದ್ಯರು, ಆಕೆಗೆ ನಿರಂತರವಾಗಿ ಆಮ್ಲಜನಕ ನೀಡುತ್ತ ಆರೈಕೆ ಮಾಡುತ್ತಿದ್ದರು. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಬಡ ಕುಟುಂಬಕ್ಕೆ ಜನಿಸಿದ ಈ ಮಗು ಕುಟುಂಬಕಷ್ಟೆ ಅಲ್ಲದೇ ನಗರದ ಜನರಿಗೆಲ್ಲ ಅಚ್ಚರಿ ಉಂಟು ಮಾಡಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆಯಿತು. ಇದೇ ಖಾಯಿಲೆಗೆ ತುತ್ತಾಗಿದ್ದ ಮಗುವೊಂದು ಪಾಕಿಸ್ತಾನದಲ್ಲಿ 1984 ರಲ್ಲಿ ಜನಿಸಿ 10 ವರ್ಷಗಳ ಕಾಲ ಬದುಕಿತ್ತು ಎನ್ನಲಾಗಿತ್ತು. ಇದೇ ಮಾದರಿ ಮತ್ತೊಂದು ಘಟನೆ 1994 ರಲ್ಲಿ ಅಮೆರಿದಲ್ಲಿ ಘಟಿಸಿತ್ತು.
2016: ನವದೆಹಲಿ: 251 ರೂಪಾಯಿಗೆ ಅಗ್ಗದ ಮೊಬೈಲ್ ನೀಡುತ್ತೇವೆ ಎಂದು ಸುದ್ದಿ ಮಾಡಿ ಮರೆಯಾಗಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿ ಇದೀಗ ಮತ್ತೆ ಮುಂಚೂಣಿಗೆ ಬಂದಿತು. ಜೂನ್ 28ರಿಂದ ಆನ್ಲೈನ್ನಲ್ಲಿ ನೋಂದಣಿ ಮಾಡಲ್ಪಟ್ಟ ಸದಸ್ಯರಿಗೆ ಮೊಬೈಲ್ ವಿತರಿಸಲಾಗುವದು ಎಂದು ಕಂಪೆನಿ ತಿಳಿಸಿತು. ಫ್ರೀಡಂ-251 ಸ್ಮಾರ್ಟ್ ಫೋನ್ ಪಡೆಯಲು ದೇಶದ ಜನತೆ ಈ ಹಿಂದೆ ಮುಗಿ ಬಿದ್ದಿದ್ದರು. ಆದರೆ ಸೀಮಿತ ಮೊಬೈಲ್ಗಳನ್ನು ಮಾತ್ರ ನೋಂದಣಿ ಮಾಡಿಕೊಂಡ ಕಂಪೆನಿಯ ಕ್ರಮದ ವಿರುದ್ಧ ಜನರು ಕೆಂಡ ಕಾರಿದ್ದರು. ಕಳೆದ ಫೆಬ್ರುವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅದ್ದೂರಿಯಾಗಿ ಉದ್ಘಾಟನಾ ಸಮಾರಂಭ ಮಾಡಿ ಸುದ್ದಿಯಾಗಿತ್ತು. ಆದರೆ ಕಂಪೆನಿ ಇಷ್ಟು ಅಗ್ಗದ ಬೆಲೆಗೆ ಮೊಬೈಲ್ ನೀಡಲು ಸಾಧ್ಯವಿಲ್ಲ. ಇದರ ಹಿಂದೆ ಮೋಸದ ಜಾಲವಿರಬಹುದು ಎಂದು ಪ್ರತಿಷ್ಠಿತ ಮೊಬೈಲ್ ಕಂಪನಿ ಮಾಲೀಕರು ಸಂಶಯ ವ್ಯಕ್ತಪಡಿಸಿದ್ದರು. ಇದರಿಂದಾಗಿ ಕಂಪೆನಿಯ ಮೇಲೆ ಪೊಲೀಸ್ ಪಡೆಗೆ ನಿಗಾವಹಿಸಲು ಕೇಂದ್ರ ಸರ್ಕಾರ ಸೂಚಿಸಿತ್ತು. ಇದೀಗ ಕಂಪೆನಿಯ ನಿರ್ದೇಶಕರಲ್ಲಿ ಒಬ್ಬರಾದ ಮೋಹಿತ್ ಗೋಯಲ್ ಈ ಕುರಿತು ಸ್ಪಷ್ಟಪಡಿಸಿ, ಜೂನ್ 28ರಿಂದ ಗ್ರಾಹಕರಿಗೆ ಮೊಬೈಲ್ ವಿತರಿಸುವುದಾಗಿ ತಿಳಿಸಿದರು. ವಿಶ್ವದ ಅತಿ ಅಗ್ಗದ ಈ ಮೊಬೈಲ್ಗಾಗಿ 7.35 ಕೋಟಿ ಮಂದಿ ಬುಕ್ಕಿಂಗ್ ಮಾಡಿದ್ದು, 30 ಸಾವಿರ ಜನರು ಹಣ ಸಂದಾಯ ಮಾಡಿದ್ದರು.
2016: ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಉತ್ತರ ಪ್ರದೇಶದ 6 ಮಂದಿ ಕಾಂಗ್ರೆಸ್ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು. ಈ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಕಪಿಲ್ ಸಿಬಲ್ ವಿರುದ್ಧ ಮತದಾನ ಮಾಡಿದ್ದರು ಎಂದು ಪಕ್ಷದ ನಾಯಕ ಜನಾರ್ದನ ದ್ವಿವೇದಿ ಪ್ರಕಟಿಸಿತು. ಏನಿದ್ದರೂ ಸಿಬಲ್ ಇತರ ಪಕ್ಷಗಳ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
2016: ನವದೆಹಲಿ: ಭಾರತೀಯ ಮೂಲದ ಅಮೆರಿಕನ್ ಪ್ರಜೆ ಲೇಖಕ ಅಖಿಲ್ ಶರ್ಮಾ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಡಬ್ಲಿನ್ ಸಾಹಿತ್ಯ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಜತೆ 1 ಲಕ್ಷ ಯುರೋ (75 ಲಕ್ಷ ರೂಪಾಯಿ) ಬಹುಮಾನ ಕೂಡಾ ಅವರ ಕಾದಂಬರಿ ‘ಫ್ಯಾಮಿಲಿ ಲೈಫ್’ ಎಂಬ ಆತ್ಮಚರಿತ್ರೆಗೆ ದೊರಕಿತು. ಪ್ರಶಸ್ತಿಗಾಗಿ 43 ದೇಶಗಳ 150 ಕ್ಕೂ ಅಧಿಕ ಲೇಖಕರು ಸ್ಪರ್ಧಿಸಿದ್ದರು. ಇದು ಲೇಖನಗಳಿಗೆ ಜಗತ್ತಿನಲ್ಲೆ್ಲೕ ಅತ್ಯಂತ ಹೆಚ್ಚು ಪ್ರಶಸ್ತಿ ಮೊತ್ತ ಕೊಡಮಾಡುವ ಪ್ರಶಸ್ತಿಯಾಗಿದೆ. ಪ್ರಶಸ್ತಿ ಲಭಿಸಿದ್ದಕ್ಕೆ ಖುಷಿಯಾಗಿರುವ ಲೇಖಕ ಶರ್ಮಾ, ಜನರ ತೀರ್ಪಿಗೆ ನಾನು ಋಣಿಯಾಗಿದ್ದು, ಅವರ ತೀರ್ಪಿಗೆ ತಲೆಬಾಗುವೆ ಎಂದಿದ್ದಾರೆ. ಇಯಾನ್ ಸಾಮ್ಸನ್, ಜುವಾನ್ ಪಬ್ಲೊ, ಕಾರ್ಲೆ ಗೆಬ್ಲರ್ ಈ ಪ್ರಶಸ್ತಿಯ ತೀರ್ಪುಗಾರರಾಗಿದ್ದರು.
2016: ಜೈಪುರ: ರಾಜಸ್ಥಾನದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡುವ ಸಂಸ್ಥೆಯೊಂದು ತನ್ನ ಸಂಸ್ಥೆಯಲ್ಲಿ ತರಬೇತಿ ಪಡೆದು ಐಐಟಿ ಪ್ರವೇಶ ಪರೀಕ್ಷೆಯಲ್ಲಿ 11 ನೇ ರ್ಯಾಂಕ್ ಬಂದ ವಿದ್ಯಾರ್ಥಿಯೊಬ್ಬನಿಗೆ ದುಬಾರಿ ಬಿಎಮ್ ಡಬ್ಲೂ ಕಾರನ್ನು ಕೊಡುಗೆಯಾಗಿ ನೀಡಿತು. ಸಿಕಾರ್ನ ಈ ಪ್ರತಿಷ್ಠಿತ ತರಬೇತಿ ಸಂಸ್ಥೆ ಮೊದಲೇ ಘೋಷಿಸಿದಂತೆ 1 ರಿಂದ 20 ನೇ ರ್ಯಾಂಕ್ ಒಳಗೆ ಸಾಧನೆ ಮಾಡಿದರೆ ಕಾರು ಕೊಡುಗೆಯಾಗಿ ನೀಡುವುದಾಗಿ ಹೇಳಿತ್ತು, ಆದರೆ 27.5 ಲಕ್ಷ ಮೌಲ್ಯದ ಐಷಾರಾಮಿ ಕಾರನ್ನು ನೀಡಬಹುದೆಂಬ ಊಹೆ ಇರಲಿಲ್ಲ ಎಂದು ಕಾರು ಪಡೆದ ಲಕ್ಕಿ ವಿದ್ಯಾರ್ಥಿ ತನ್ಮಯ್ ಹೇಳಿದರು. ದೇಶದ ಅತಿಹೆಚ್ಚು ತರಬೇತಿ ಸಂಸ್ಥೆಗಳು ಇರುವುದು ರಾಜಸ್ಥಾನದಲ್ಲೇ. ಪ್ರತಿವರ್ಷ ಭಾರತದ 1.5 ಲಕ್ಷ ಪ್ರತಿಭೆಗಳು ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದು ಉನ್ನತ ಸ್ಥಾನ ಅಲಂಕರಿಸುತ್ತಾರೆ. ಆದ್ದರಿಂದಲೇ ತರಬೇತಿ ಸಂಸ್ಥೆಗಳು ಈ ರೀತಿಯ ಆಮೀಷ ನೀಡುವುದು ರಾಜಸ್ಥಾನದಲ್ಲಿ ಸಾಮಾನ್ಯವಾಗಿದೆ. ಕಾರು ಪಡೆದಿರುವ ತನ್ಮಯನ ತಂದೆ ತಾಯಿ ಇಬ್ಬರೂ ಶಿಕ್ಷಕರಾಗಿದ್ದು, ಸದ್ಯ ದುಬಾರಿ ಕಾರು ಪಡೆದಿರುವ ತನ್ಮಯ್ ಮೊದಲು ಕಾರು ಚಲಾವಣೆ ಕಲಿತುಕೊಂಡು ನಂತರ ಕಾರು ಉಪಯೋಗಿಸುವುದಾಗಿ ತಿಳಿಸಿದರು.
2016: ಕಾಬೂಲ್: ಪಶ್ಚಿಮ ಫರಾಹ್ನಲ್ಲಿ ಅಫ್ಘಾನಿಸ್ತಾನ ನಡೆಸಿದ ದಾಳಿಯಲ್ಲಿ 25 ತಾಲಿಬಾನ್ ಉಗ್ರರನ್ನು ಕೊಲ್ಲಲಾಗಿದ್ದು 27ಕ್ಕೂ ಹೆಚ್ಚು ಉಗ್ರರು ಗಾಯಗೊಂಡರು. ಫರಾಹ್ನ ಬಲಾ ಬಲೋಕ್ ಜಿಲ್ಲೆಯಲ್ಲಿ ಸೇನೆಯ ದಾಳಿಗೆ 25 ಉಗ್ರರು ಬಲಿಯಾಗಿ, 27ಕ್ಕೂ ಹೆಚ್ಚು ಉಗ್ರರು ಗಾಯಗೊಂಡಿರುವುದಾಗಿ ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿತು. ದಾಳಿಯ ವೇಳೆ ಉಗ್ರರ 4 ವಾಹನಗಳು ಹಾಗೂ 7 ದ್ವಿಚಕ್ರವಾಹನಗಳನ್ನು ನಾಶಪಡಿಸಿರುವುದಾಗಿ ಸಚಿವಾಲಯ ತಿಳಿಸಿತು. ಆದರೆ ವಾಯುದಾಳಿಯಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿರುವುದಾಗಿ ತಾಲಿಬಾನ್ ಹೇಳಿಕೊಂಡಿತು.
2016: ಬೀಜಿಂಗ್: ಪರಮಾಣು ಸರಬರಾಜುದಾರರ ಸಮೂಹ (ಎನ್ಎಸ್ಜಿ) ಸದಸ್ಯತ್ವಕ್ಕೆ ಭಾರತ ನಡೆಸಿರುವ ಯತ್ನವನ್ನು ಖಂಡತುಂಡವಾಗಿ ವಿರೋಧಿಸಿರುವ ಚೀನಾದ ಸರ್ಕಾರಿ ಮಾಧ್ಯಮವು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಮೊತ್ತ ಮೊದಲ ಪ್ರತಿಕ್ರಿಯೆಯಲ್ಲಿ ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ಲಭಿಸಿದರೆ ಅದು ಪಾಕಿಸ್ತಾನವನ್ನು ಕೆಣಕುವುದಷ್ಟೇ ಅಲ್ಲ ಅಣ್ವಸ್ತ್ರ ಪೈಪೋಟಿಯನ್ನು ಹೆಚ್ಚಿಸಿ, ಚೀನಾದ ರಾಷ್ಟ್ರೀಯ ಹಿತಾಸಕ್ತಿಗೂ ಧಕ್ಕೆ ಉಂಟು ಮಾಡುವುದು ಎಂದು ಹೇಳಿತು. ‘ಪರಮಾಣು ಮಹತ್ವಾಕಾಂಕ್ಷೆಯಿಂದ ಭಾರತ ಕುರುಡಾಗಬಾರದು’ ಶೀರ್ಷಿಕೆಯ ಪ್ರಮುಖ ಲೇಖನವೊಂದರಲ್ಲಿ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆಯು, ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ಲಭಿಸಿದರೆ ಪ್ರದೇಶದಲ್ಲಿ ಪರಮಾಣು ಘರ್ಷಣೆಗೆ ನಾಂದಿಯಾಗುವುದು ಎಂದು ತಿಳಿಸಿತು. ಪ್ರದೇಶದ ಅಣ್ವಸ್ತ್ರ ರಾಷ್ಟ್ರಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಅಣ್ವಸ್ತ್ರ ಸಾಮರ್ಥ್ಯ ಬಗ್ಗೆ ಕಟ್ಟೆಚ್ಚರದಿಂದ ಇರಬೇಕು. ಎನ್ಎಸ್ಜಿ ಸದಸ್ಯತ್ವಕ್ಕೆ ಭಾರತ ಸಲ್ಲಿಸಿರುವ ಅರ್ಜಿ ಮತ್ತು ಅದರ ಪರಿಣಾಮಗಳು ಖಂಡಿತವಾಗಿ ಭಾರತದ ಪರಂಪರಾಗತ ಪ್ರತಿಸ್ಪರ್ಧಿಯಾಗಿರುವ ಪಾಕಿಸ್ತಾನವನ್ನು ಕೆಣಕದೆ ಬಿಡವು ಎಂದು ಪತ್ರಿಕೆ ಹೇಳಿದತು. ಎನ್ಎಸ್ಜಿ ಸದಸ್ಯತ್ವದಿಂದ ಪ್ರಾದೇಶಿಕ ಭದ್ರತೆಗೆ ಧಕ್ಕೆಯಾಗುವುದಷ್ಟೇ ಅಲ್ಲ, ಚೀನಾದ ರಾಷ್ಟ್ರೀಯ ಹಿತಾಸಕ್ತಿಗಳಿಗೂ ತೊಂದರೆಯಾಗುವುದು ಎಂದು ಪತ್ರಿಕೆ ಪ್ರತಿಪಾದಿಸಿತು.
2016: ವಾಷಿಂಗ್ಟನ್: ವೃತ್ತಿಪರ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ನ್ನು ಭಾರೀ ಮೊತ್ತಕ್ಕೆ ಖರೀದಿಸಲು ಐಟಿ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ನಿರ್ಧರಿಸಿತು. ಲಿಂಕ್ಡ್ಇನ್ನ ಪ್ರತಿ ಷೇರಿಗೆ ತಲಾ 13 ಸಾವಿರದಂತೆ ಪಾವತಿಸಲಿರುವ ಮೈಕ್ರೋಸಾಫ್ಟ್ ಒಟ್ಟು 1.70 ಲಕ್ಷ ಕೋಟಿ ರೂ.ಗೆ ಡೀಲ್ ಕುದುರಿಸಿತು. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಲಿಂಕ್ಡ್ಇನ್ ಷೇರು ಮೌಲ್ಯ ಶೇ. 48 ಏರಿಕೆಯಾಗಿ ಮೈಕ್ರೋಸಾಫ್ಟ್ನ ಷೇರು ಶೇ. 4 ಇಳಿಕೆಯಾಯಿತು. ಮೈಕ್ರೋಸಾಫ್ಟ್ ಜಾಲಕ್ಕೆ ಬಂದ ಬಳಿಕ ಲಿಂಕ್ಡ್ಇನ್ ಸಿಇಒ ಆಗಿ ಜೆಫ್ ವೇನರ್ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿದವು. ಈ ಡೀಲ್ಗೆ ಎರಡೂ ಕಂಪನಿಗಳ ಆಡಳಿತ ಮಂಡಳಿಗಳು ಸಹಮತ ವ್ಯಕ್ತಪಡಿಸಿದ್ದು, ವರ್ಷಾಂತ್ಯಕ್ಕೆ ಡೀಲ್ ಅಂತಿಮವಾಗಲಿದೆ. ವಿಲೀನ ಪ್ರಕ್ರಿಯೆಗೆ ಲಿಂಕ್ಡ್ಇನ್ ಷೇರುದಾರರ ಒಪ್ಪಿಗೆ ದೊರೆಯಬೇಕಿದೆ. ಲಿಂಕ್ಡ್ಇನ್ ಜಗತ್ತಿನಾದ್ಯಂತ ವಿವಿಧ ಉದ್ಯಮ, ವೃತ್ತಿಪರ ಜನತೆಯ ನೆಟ್ವರ್ಕ್ ಆಗಿ ಬೆಳೆದಿದೆ. ಮೈಕ್ರೋಸಾಫ್ಟ್ ಜತೆಗೂಡಿ ಲಿಂಕ್ಡ್ಇನ್ ಇನ್ನಷ್ಟು ಉತ್ತಮ ಸಾಧನೆ ಮಾಡಲಿದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ತಿಳಿಸಿದ್ದಾರೆ. ಕೆಲವೊಂದು ಸಣ್ಣಪುಟ್ಟ ಬದಲಾವಣೆಯಾಗಲಿದೆ. ಆದರೆ ಉದ್ಯೋಗಿಗಳ ಸ್ಥಾನ ಮತ್ತು ಕೆಲಸದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಲಿಂಕ್ಡ್ಇನ್ನ ಪ್ರಗತಿಗೆ ಸದಸ್ಯರ ಎಲ್ಲ ರೀತಿಯ ಸಹಕಾರ ಅಗತ್ಯ. ಲಿಂಕ್ಡ್ಇನ್ನ ಸ್ಥಾನಮಾನವನ್ನು ಇನ್ನಷ್ಟು ಏರಿಸಲು ಶ್ರಮವಹಿಸಬೇಕಿದೆ ಎಂದು ಸಿಇಒ ಜೆಫ್ ವೇನರ್ ತನ್ನ ಉದ್ಯೋಗಿಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದರು. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಲಿಂಕ್ಡ್ಇನ್ 2002ರ ಡಿಸೆಂಬರ್ನಲ್ಲಿ ಸ್ಥಾಪನೆಯಾಗಿದೆ. 10 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದ್ದು, ವೃತ್ತಿಪರ ನೆಟ್ವರ್ಕಿಂಗ್ ಸೈಟ್ ಆಗಿ ಪ್ರಸಿದ್ಧಿ ಪಡೆದಿದೆ
2009: ತನ್ನ ಜಾಲದಲ್ಲಿ ಯಾವುದೇ ವಿಚಾರವನ್ನು ಸೆನ್ಸಾರ್ ಮಾಡುವುದಿಲ್ಲ. ಆದರೆ ಏನಾದರೂ ದೂರುಗಳಿದ್ದಲ್ಲಿ ಅದನ್ನು ಪರಿಹರಿಸಲು ತಕ್ಷಣ ಕಾರ್ಯ ಪ್ರವೃತ್ತವಾಗುವುದಾಗಿ ಗೂಗಲ್ ಹೇಳಿತು. ಮಾಹಿತಿ ನಿಯಂತ್ರಣದಲ್ಲಿ ಸಕ್ರಿಯ ಪಾತ್ರವನ್ನು ಗೂಗಲ್ ವಹಿಸುವುದಿಲ್ಲ. ಸಂಪಾದಕೀಯ ಆಯ್ಕೆಯ ಪಾತ್ರವನ್ನು ನಿರ್ವಹಿಸುವುದು ಗೂಗಲ್‌ಗೆ ಸಾಧ್ಯವಿಲ್ಲ ಎಂದು ಗೂಗಲ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ರಾವ್ ನವದೆಹಲಿಯಲ್ಲಿ ತಿಳಿಸಿದರು.2009: ಮನೆಗೆಲಸದವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಬಾಲಿವುಡ್ ನಟ ಶಿನೆ ಅಹುಜಾ ಅವರನ್ನು ವಿಚಾರಣೆಗಾಗಿ ಬಂಧಿಸಿದ ಪ್ರಸಂಗ ಮುಂಬೈಯ ಒಶಿವಾರಾ ಉಪನಗರದಲ್ಲಿ ಘಟಿಸಿತು. ಅಹುಜಾ ಅವರ ಮನೆಯ ಕೆಲಸದಾಕೆ ತನ್ನ ಮೇಲೆ ಅಹುಜಾ ಅತ್ಯಾಚಾರ ನಡೆಸಿದರು ಎಂದು ಸ್ವತಃ ದೂರು ನೀಡಿದ್ದರಿಂದ ಅಹುಜಾ ಅವರನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಡಿಸಿಪಿ ನಿಕೇತ್ ಕೌಶಿಕ್ ತಿಳಿಸಿದರು.
2009: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಥವಾ ತೃತೀಯ ರಂಗ ಅಸ್ತಿತ್ವಕ್ಕೆ ಬಂದರೆ ಮುಂದಿನ ಕಾರ್ಯತಂತ್ರ ಹೆಣೆಯಲು ಎಲ್‌ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ಹವಣಿಸಿದ್ದ. ಆದರೆ ಕೊನೆಗೂ ಫಲಿಸಿದ್ದು ಶ್ರೀಲಂಕಾ ಸೇನೆಯ ಕಾರ್ಯತಂತ್ರ. ಮೇ 16ರ ಭಾರತದ ಚುನಾವಣಾ ಫಲಿತಾಂಶ ಎಲ್‌ಟಿಟಿಇ ಪಾಲಿಗೆ ಅಳಿವು ಉಳಿವಿನ ಸಂಗತಿಯಾಗಿತ್ತು. ಎನ್‌ಡಿಎ ಅಥವಾ ತೃತೀಯ ರಂಗ ಅಧಿಕಾರ ಸ್ವೀಕರಿದರೆ ಯಾರಾದರೂ ನಾಯಕರು ತಮ್ಮ ಪರ ಮಧ್ಯಸ್ಥಿಕೆ ವಹಿಸಿ ಶತ್ರು ಸೇನೆ ಯುದ್ಧ ರಹಿತ ವಲಯ ಪ್ರವೇಶಿಸುವುದನ್ನು ತಡೆಯಲಿದ್ದಾರೆ ಎಂದೇ ಆತ ಆಶಿಸಿದ್ದ. ಆದರೆ ಆತನ ಊಹೆ ಮೀರಿ ಎಲ್‌ಟಿಟಿಇಯನ್ನು ಸುತ್ತುವರೆಯಲಾಗಿತ್ತು ಎಂದು ಲಂಕಾ ಸೇನೆ ಮೂಲಗಳು ತಿಳಿಸಿದವು. ತನಗೆ ಪ್ರತಿಕೂಲವಾಗಿ ಪರಿಣಮಿಸಲಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದು ತಿಳಿಯುತ್ತಿದ್ದಂತೆಯೇ ಮೇ 16ರ ಮಧ್ಯಾಹ್ನ ಮಾನವ ಗುರಾಣಿಯಾಗಿ ಬಳಸಲಾಗಿದ್ದ ಎಲ್ಲ ತಮಿಳು ನಾಗರಿಕರನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಲಾಯಿತು. ಎಲ್‌ಟಿಟಿಇ ಅಂತರರಾಷ್ಟ್ರೀಯ ವ್ಯವಹಾರಗಳ ಮುಖಂಡ ಸೆಲ್ವರಸ ಪದ್ಮನಾಭನ್ 'ಎಲ್‌ಟಿಟಿಇ ಬಹುತೇಕ ಸೋಲೊಪ್ಪಿಕೊಂಡಿದೆ' ಎಂದು ಘೋಷಿಸಿ ಅಂತರರಾಷ್ಟ್ರೀಯ ಸಮುದಾಯದ ನೆರವು ಕೋರಿದರು. ತೃತೀಯ ರಂಗ ಅಧಿಕಾರಕ್ಕೆ ಬಂದರೆ ಎಐಎಡಿಎಂಕೆ ನಾಯಕಿ ಜಯಲಲಿತಾ ಶ್ರೀಲಂಕಾ ತಮಿಳರ ನೆರವಿಗೆ ಭಾರತೀಯ ಸೇನೆ ಕಳುಹಿಸಿಕೊಡುವುದಾಗಿ ಕೂಡ ಘೋಷಿಸಿದ್ದರು. ಫಲಿತಾಂಶದ ನಂತರ ಸಂಘಟನೆ ಪರವಾಗಿ ತಮಿಳುನಾಡಿನಲ್ಲಿ ದೊಡ್ಡ ಕ್ರಾಂತಿಯೇ ನಡೆಯುತ್ತದೆ ಎಂದು ಎಲ್‌ಟಿಟಿಇ ಭಾವಿಸಿತ್ತು. ಆದರೆ ಯೋಚಿಸಿ ತಂತ್ರ ರೂಪಿಸುವ ಕಾಲ ವ್ಯಾಘ್ರರ ಪಾಲಿಗೆ ಮಿಂಚಿಹೋಗಿತ್ತು.
2009: ನಾಯಕತ್ವದ ವಿರುದ್ಧ ತಿರುಗಿ ಬಿದ್ದು ಬಿಜೆಪಿಯಲ್ಲಿನ ತಮ್ಮ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ಸಲ್ಲಿಸಿದ್ದ ಹಿರಿಯ ನಾಯಕ ಯಶವಂತ ಸಿನ್ಹ, ತಾವು ಪಕ್ಷ ತ್ಯಜಿಸುವುದಿಲ್ಲ ಎಂದು ರಾಂಚಿಯಲ್ಲಿ ಸ್ಪಷ್ಟಪಡಿಸಿದರು. 'ನನ್ನ ರಾಜೀನಾಮೆ ಅಂಗೀಕಾರವಾಗಿರುವುದು ನನಗೆ ಸಂತಸ ತಂದಿದೆ. ಆದ್ದರಿಂದ ಇನ್ನು ಟೀಕೆ ಮಾಡಲು ನನಗೆ ಏನೂ ಇಲ್ಲ' ಎಂದು ವಿದೇಶಾಂಗ ವ್ಯವಹಾರ ಹಾಗೂ ಹಣಕಾಸು ಇಲಾಖೆಗಳ ಮಾಜಿ ಸಚಿವರೂ ಆದ ಅವರು, ವಿವಾದದ ಬಗ್ಗೆ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಹೇಳಿದರು.
2009: ಒಟ್ಟು 5.94 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಶೇಷಾದ್ರಿ ರಸ್ತೆಯ ಮಹಾರಾಣಿ ಕಾಲೇಜು ವೃತ್ತ ಮತ್ತು ಕೆ.ಆರ್.ವೃತ್ತದಲ್ಲಿ ನಿರ್ಮಿಸಲಾದ ಅಂಡರ್‌ಪಾಸ್‌ಗಳು ಹಾಗೂ ಪಾದಚಾರಿ ಸುರಂಗ ಮಾರ್ಗಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
2008: ಬೆಂಗಳೂರಿನ ಜಯನಗರ ವಾಣಿಜ್ಯ ಸಮುಚ್ಚಯದ ಆವರಣದಲ್ಲಿನ ತರಕಾರಿ ಮಾರಾಟ ಸಂಕೀರ್ಣದಲ್ಲಿ 32 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಹಿಂದಿನ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 49 ಮಳಿಗೆಗಳು ಸುಟ್ಟು ಭಸ್ಮವಾಗಿ, 20ಕ್ಕೂ ಅಧಿಕ ಮಳಿಗೆಗಳು ಭಾಗಶಃ ಹಾನಿಗೆ ಒಳಗಾದವು. ಅನಾಹುತದಲ್ಲಿ ಸುಮಾರು ಮೂರು ಕೋಟಿ ರೂಪಾಯಿ ನಷ್ಟ ಸಂಭವಿಸಿರಬಹುದು ಎಂದು ಅಂದಾಜು ಮಾಡಲಾಯಿತು.
2007: ರಾಷ್ಟ್ರಪತಿ ಸ್ಥಾನಕ್ಕೆ ಸಂಯಕ್ತ ಪ್ರಗತಿಪರ ಮೈತ್ರಿ ಕೂಟ (ಯುಪಿ ಎ) ಅಭ್ಯರ್ಥಿಯಾಗಿ ರಾಜಸ್ಥಾನದ ರಾಜ್ಯಪಾಲರಾದ ಪ್ರತಿಭಾ ದೇವಿಸಿಂಗ್ ಪಾಟೀಲ್ (72) ಆಯ್ಕೆಯಾದರು. ಹಲವು ಸುತ್ತಿನ ಕಸರತ್ತಿನ ಬಳಿಕ ಪ್ರತಿಭಾ ಪಾಟೀಲ್ ಅಚ್ಚರಿಯ ಅಭ್ಯರ್ಥಿಯಾಗಿ ಹೊರ ಹೊಮ್ಮಿದರು. ಯುಪಿ ಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರತಿಭಾ ಆಯ್ಕೆ ವಿಚಾರವನ್ನು ಪ್ರಕಟಿಸಿದರು.
2007: ಒಟ್ಟು 5,608 ಕೋಟಿ ರೂಪಾಯಿ ವೆಚ್ಚದಲ್ಲಿ ಗಂಗಾನದಿಯ ಕೆಳಗೆ ಕೊಳವೆಯೊಳಗೆ ಸಾಗುವಂತಹ 13.7 ಕಿ.ಮೀ. ಉದ್ದದ (ಇದರಲ್ಲಿ ನದಿಯ ಕೆಳಗಿನ ದೂರ 8 ಕಿ.ಮೀ) ಪೂರ್ವ- ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಗೆ ಬುದ್ಧದೇವ ಭಟ್ಟಾಚಾರ್ಯ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಹಸಿರು ನಿಶಾನೆ ತೋರಿಸಿತು. ದೇಶದಲ್ಲೇ ಮೊತ್ತ ಮೊದಲ ಬಾರಿಗೆ ನೀರಿನ ಅಡಿಯಲ್ಲಿ ಸಾಗುವ ಈ ರೈಲು ಮಾರ್ಗವು ಹೌರಾ ನಿಲ್ದಾಣ ಮತ್ತು ಸಾಲ್ಟ್ ಲೇಕ್ ನಡುವೆ ಸಂಪರ್ಕ ಕಲ್ಪಿಸುವುದು.
2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಮುಬೀನಾ ಭಿವಂಡಿವಾಲಾ ಮತ್ತು ಜೈಬುನ್ನೀಸಾ ಖಾಜಿ ಎಂಬ ಇಬ್ಬರು ಮಹಿಳೆಯರಿಗೆ ವಿಶೇಷ ಟಾಡಾ ನ್ಯಾಯಾಲಯವು ತಲಾ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು.
2007: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ `ಇಂಡಿಯನ್' ನ (ಹಿಂದಿನ ಇಂಡಿಯನ್ ಏರ್ ಲೈನ್ಸ್) ಸುಮಾರು 15,000 ಭೂ ಸೇವಾ ಸಿಬ್ಬಂದಿ ತಮ್ಮ ದೇಶವ್ಯಾಪಿ ಮುಷ್ಕರವನ್ನು ವಾಪಸ್ ಪಡೆದುಕೊಂಡರು. ವೇತನ ಬಾಕಿ ಹಾಗೂ ಬಡ್ತಿ ಸಂಬಂಧಿ ಬಿಕ್ಕಟ್ಟು ಬಗೆಹರಿಸುವುದಾಗಿ ಆಡಳಿತ ಮಂಡಳಿ ಹಾಗೂ ವಿಮಾನಯಾನ ಸಚಿವಾಲಯ ನೀಡಿದ ಭರವಸೆ ಅನುಸರಿಸಿ ಮುಷ್ಕರ ನಿರತರು ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದರು.
2006: ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಮಹೇಶ ಭಟ್ ಅವರನ್ನು ಗುರಿಯಾಗಿಟ್ಟುಕೊಂಡು ಅವರ ಕಚೇರಿಗೆ ನುಗ್ಗಿದ ಇಬ್ಬರು ಅಪರಿಚಿತರು ಕಚೇರಿಯಲ್ಲಿ ಗುಂಡು ಹಾರಿಸಿ ಪರಾರಿಯಾದರು. ಈ ವೇಳೆಯಲ್ಲಿ ಮಹೇಶ ಭಟ್ ಕಚೇರಿಯಲ್ಲಿ ಇರಲಿಲ್ಲ. ಗುಂಡೇಟಿನಿಂದ ಯಾರೂ ಗಾಯಗೊಳ್ಳಲಿಲ್ಲ.
2006: ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ದೇವರ ದಾಸಿಮಯ್ಯ ಅವರ ಸಾಧನೆ, ಬರವಣಿಗೆ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಪೀಠ ಸ್ಥಾಪನೆ. ಪೀಠಕ್ಕೆ 2006-07 ಸಾಲಿನಲ್ಲಿ ಸರ್ಕಾರ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿತು.
2001: ಭಾರತದ ನಾರಾಯಣ್ ಕಾರ್ತಿಕೇಯನ್ ಇಂಗ್ಲೆಂಡಿನ ಸಿಲ್ವರ್ ಸ್ಟೋನ್ ಟ್ರ್ಯಾಕ್ಸಿನಲ್ಲಿ ಜಾಗ್ವಾರ್ ರೇಸಿಂಗ್ ತಂಡಕ್ಕಾಗಿ ಪರೀಕ್ಷಾರ್ಥವಾಗಿ ಫಾರ್ಮ್ಯುಲಾ ಒನ್ ಕಾರನ್ನು ಓಡಿಸುವ ಮೂಲಕ ಈ ಕಾರನ್ನು ಓಡಿಸಿದ ಪ್ರಪ್ರಥಮ ಭಾರತೀಯ ಹಾಗೂ ಮೊತ್ತ ಮೊದಲ ಜಪಾನೇತರ ಏಷಿಯನ್ ಎನಿಸಿಕೊಂಡರು.
1969: ಜರ್ಮನಿಯ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ಜನ್ಮದಿನ. 1988ರಲ್ಲಿ ಒಲಿಂಪಿಕ್ ಸ್ವರ್ಣ ಹಾಗೂ ಎಲ್ಲ ಪ್ರಮುಖ ಟೆನಿಸ್ ಸ್ಪರ್ಧೆಗಳನ್ನು ಗೆಲ್ಲುವ ಮೂಲಕ ಈಕೆ `ಗೋಲ್ಡನ್ ಗ್ರ್ಯಾಂಡ್ ಸ್ಲಾಮ್' ಪಡೆದುಕೊಂಡರು.
1960: ಕಲಾವಿದ ಜಿ. ಜೈಕುಮಾರ್ ಜನನ.
1958: ಅಮೆರಿಕದ ಸ್ಕೇಟರ್ ಎರಿಕ್ ಹೀಡನ್ ಜನ್ಮದಿನ. 1980ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಮೊತ್ತ ಮೊದಲ ಅಮೆರಿಕನ್ ಸ್ಕೇಟರ್ ಈ ವ್ಯಕ್ತಿ.
1956: ಮೈಸೂರು ವಿಶ್ವವಿದ್ಯಾನಿಲಯದ ವೈಸ್ ಛಾನ್ಸಲರ್ (ಕುಲಪತಿ) ಆಗಿ ಮಹಾರಾಜಾ ಕಾಲೇಜು ಪ್ರಿನ್ಸಿಪಾಲ ಕೆ.ವಿ. ಪುಟ್ಟಪ್ಪ ಅವರನ್ನು ಸರ್ಕಾರ ನೇಮಿಸಿತು. ಹಾಲಿ ವೈಸ್ ಛಾನ್ಸಲರ್ ಪ್ರೊ. ವಿ.ಎಲ್. ಡಿಸೌಜಾ ಅವರ ಸ್ಥಾನಕ್ಕೆ ಪುಟ್ಟಪ್ಪ ಅವರು ನೇಮಕಗೊಂಡರು.
1953: ಕಲಾವಿದ ಬಾನಂದೂರು ಕೆಂಪಯ್ಯ ಜನನ.
1947: ಮೌಂಟ್ ಬ್ಯಾಟನ್ ಯೋಜನೆಯ ಭಾರತ ವಿಭಜನೆ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿಣಿ ನವದೆಹಲಿಯಲ್ಲಿ ಈದಿನ ಸಭೆ ಸೇರಿತು.
1937: ಖ್ಯಾತ ವೀಣಾವಾದಕ ಆರ್. ಕೆ. ಸೂರ್ಯನಾರಾಯಣ (14-6-1937ರಿಂದ 25-12-2003) ಅವರು ಆರ್.ಎಸ್. ಕೇಶವಮೂರ್ತಿ- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.
1933: ಸಾಹಿತಿ, ಮನೋವಿಜ್ಞಾನ ಪ್ರಾಧ್ಯಾಪಕ, ಜೈನ ಸಿದ್ಧಾಂತಗಳಲ್ಲಿ ಪಾಂಡಿತ್ಯ ಗಳಿಸಿದ್ದ ಡಾ. ಎ.ಎಸ್. ಧರಣೇಂದ್ರಯ್ಯ (14-6-1933ರಿಂದ 8-4-2000) ಅವರು ಸಿಂದಪ್ಪ ಶೆಟ್ಟರು- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಹಾಸನ ಜಿಲ್ಲೆಯ ಅಡಗೂರು ಗ್ರಾಮದಲ್ಲಿ ಜನಿಸಿದರು.
1929: ಕಲಾವಿದ ಬಿ.ವಿ. ನಂಜುಂಡಯ್ಯ ಜನನ.
1909: ಇಎಂಎಸ್ ನಂಬೂದರಿಪಾಡ್ (1908-1998) ಜನ್ಮದಿನ. ಭಾರತದ ಕಮ್ಯೂನಿಸ್ಟ್ ನಾಯಕರಾದ ಇವರು 1957ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿ, ಜಗತ್ತಿನಲ್ಲೇ ಮುಕ್ತ ಚುನಾವಣೆ ಮೂಲಕ ಅಧಿಕಾರಕ್ಕೆ ಏರಿದ ಮೊದಲ ಕಮ್ಯೂನಿಸ್ಟ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಗಳಿಸಿದರು.
1868: ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೇನರ್ ಜನನ. ರಕ್ತದ ಗುಂಪುಗಳನ್ನು ಕಂಡು ಹಿಡಿದುದಕ್ಕಾಗಿ ಇವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು.
1800: ಫ್ರೆಂಚ್ ಕ್ರಾಂತಿ ಸಂದರ್ಭದಲ್ಲಿ ಇಟಲಿಯ ಅಲೆಸ್ಸಾಂಡ್ರಿಯ ಸಮೀಪದ ಮರೆಂಗೋದಲ್ಲಿ ನಡೆದ ನಡೆದ ಸಮರದಲ್ಲಿ ಆಸ್ಟ್ರಿಯನ್ನರನ್ನು ನೆಪೋಲಿಯನ್ ಸೋಲಿಸಿದ. ಫ್ರೆಂಚ್ ಜನರಲ್ ಲೂಯಿ ಚಾರ್ಲ್ಸ್ ಡೆಸಾಯಿಕ್ಸ್ ಯುದ್ಧದಲ್ಲಿ ಹತನಾದ.
1777: ಅಮೆರಿಕನ್ ಕಾಂಗ್ರೆಸ್ `ನಕ್ಷತ್ರ ಮತ್ತು ಪಟ್ಟಿ'ಗಳಿರುವ (ಸ್ಟಾರ್ ಅಂಡ್ ಸ್ಟ್ರೈಪ್ಸ್) ಧ್ವಜವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಧ್ವಜವಾಗಿ ಅಂಗೀಕರಿಸಿತು.
No comments:
Post a Comment