Monday, June 3, 2019

ಇಂದಿನ ಇತಿಹಾಸ History Today ಜೂನ್ 03

ಇಂದಿನ ಇತಿಹಾಸ History Today ಜೂನ್ 03
2019: ನವದೆಹಲಿ: ಅಸ್ಸಾಮಿನ ಜೊರ್ಹಾಟ್ನಿಂದ ಹೊರಟಿದ್ದ ಭಾರತೀಯ ವಾಯುಪಡೆಗೆ ಸೇರಿದ ಎಎನ್-೩೨ ವಿಮಾನವು ಮಂದಿ ವಾಯುಪಡೆ ಸಿಬ್ಬಂದಿ ಮತ್ತ ಐವರು ಪ್ರಯಾಣಿಕರು ಸೇರಿ ಒಟ್ಟು ೧೩ ಮಂದಿಯೊಂದಿಗೆ ಅರುಣಾಚಲ ಪ್ರದೇಶದ ಮೇಲೆ ಹಾರುತ್ತಿದ್ದಾಗ ಕಣ್ಮರೆಯಾಯಿತು. ವಿಮಾನವು ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿ ಪೂರ್ವ ಹಿಮಾಲಯದಲ್ಲಿನ ಮೆಚುಕಾ ಅಡ್ವಾನ್ಸ್ ಲ್ಯಾಂಡಿಂಗ್ ಮೈದಾನದತ್ತ ಹೊರಟಿತ್ತು. ಇಳಿದಾಣವು ಭಾರತ- ಚೀನಾ ಗಡಿಯಿಂದ ಸುಮಾರು ೩೦ ಕಿಮೀಗಳಷ್ಟು ದೂರದಲ್ಲಿತ್ತು. ಈ ಸಾರಿಗೆ ವಿಮಾನವು ಮಧ್ಯಾಹ್ನ ೧೨.೨೫ ಗಂಟೆಗೆ ಜೊರ್ಹಾಟ್ನಿಂದ ಗಗನಕ್ಕೆ ಏರಿತ್ತು.  ಗಗನಕ್ಕೆ ಏರಿದ ಬಳಿಕ ೩೫ ನಿಮಿಷಗಳ ಕಾಲ ವಿಮಾನವು ನೆಲದಲ್ಲಿನ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿತ್ತು. ಗಂಟೆಯ ಬಳಿಕ ವಿಮಾನ ಯಾವುದೇ ಸಂಪರ್ಕವನ್ನೂ ಮಾಡಲಿಲ್ಲ ಎಂದು ಭಾರತೀಯ ವಾಯುಪಡೆ ಅಧಿಕಾರಿಯೊಬ್ಬರು ತಿಳಿಸಿದರು. ವಿಮಾನವು ಏರ್ ಫೀಲ್ಡ್ ತಲುಪದೇ ಇದ್ದುದರಿಂದ ಬಗ್ಗೆ ತನಿಖಾ ಕ್ರಮವನ್ನು ಭಾರತೀಯ ವಾಯುಪಡೆ ಕೈಗೆತ್ತಿಕೊಂಡಿದೆ ಎಂದು ಅಧಿಕಾರಿ ನುಡಿದರು. ವಿಮಾನ ಪತ್ತೆಗೆ ಎಲ್ಲ ಲಭ್ಯ ಸಂಪನ್ಮೂಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ನುಡಿದರು. ವಿಮಾನದಲ್ಲಿ ಎಂಟು ಮಂದಿ ಸಿಬ್ಬಂದಿ ಮತ್ತು ಐವರು ಪ್ರಯಾಣಿಕರು ಇದ್ದರುವಿಮಾನ ಶೋಧಕ್ಕಾಗಿ ಸುಖೋಯ್-೩೦ ಯುದ್ಧ ವಿಮಾನ ಮತ್ತು ಸಿ-೧೩೦ ವಿಶೇಷ ಕಾರ್ಯಾಚರಣೆ ವಿಮಾನವನ್ನು ಕೂಡಾ ನಿಯೋಜಿಸಲಾಯಿತು.  ಎಎನ್-೩೨ ವಿಮಾನವು ೧೯೮೩ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದು, ಇನ್ನೂ ಸೇವೆಯಲ್ಲಿ ಮುಂದುವರೆದಿತ್ತು. ವಾಯುಪಡೆಯು ೧೦೦ಕ್ಕೂ ಹೆಚ್ಚು ಎಎನ್-೩೨ ವಿಮಾನಗಳ ಪಡೆಯನ್ನು ಹೊಂದಿತ್ತು. ನೂತನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಾವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿರುವುದಾಗಿ ಟ್ವೀಟ್ ಮಾಡಿದರು.  ತಾವು ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥರ ಜೊತೆಗೆ ಮಾತನಾಡಿದ್ದು ವಿಮಾನ ಕಣ್ಮರೆ ಹಾಗೂ ಅದರ ಪತ್ತೆಗಾಗಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾತನಾಡಿರುವುದಾಗಿ ರಾಜನಾಥ್ ಸಿಂಗ್ ಹೇಳಿದರು. ಕಣ್ಮರೆಯಾಗಿರುವ ಭಾರತೀಯ ವಾಯುಪಡೆ ವಿಮಾನ ಪತ್ತೆಗಾಗಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ನನಗೆ ತಿಳಿಸಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆಗಾಗಿ ನಾನು ಪ್ರಾರ್ಥಿಸಿದ್ದೇನೆ ಎಂದು ಅವರು ತಿಳಿಸಿದರು. ಅರುಣಾಚಲ ಪ್ರದೇಶದ ಮೆಚುಕಾ ಪ್ರದೇಶವು ದಟ್ಟ ಅರಣ್ಯ ಪ್ರದೇಶವಾಗಿದ್ದು, ಮೈಮಾನಿಕ ಕಾರ್ಯಾಚರಣೆ ವಿಮಾನಗಳ ಶೋಧದ ಮೂಲಕವಷ್ಟೇ ಬದುಕುಳಿದವರ ಪತ್ತೆಯಾಗಬೇಕಾಗಿದೆಭಾರತ- ಟಿಬೆಟ್ ಗಡಿ ಪೊಲೀಸ್ ಪಡೆಯನ್ನೂ ಶೋಧ ಕಾರ್ಯಾಚರಣೆಗಾಗಿ ನಿಯೋಜಿಸಲಾಯಿತು. ವಿಮಾನವು ಇಳಿಯಬೇಕಾಗಿದ್ದ ಮೆಂಚಕಾ ಅಡ್ವಾನ್ಸ್ ಲ್ಯಾಂಡಿಂಗ್ ಗ್ರೌಂಡ್ ಇಳಿದಾಣವನ್ನು ಕಳೆದ ವರ್ಷ ಜುಲೈ ೧೨ರಂದು ನವೀಕರಿಸಲಾಗಿತ್ತು. ೨೦೧೩ರಿಂದ ಅದು ಬಳಕೆಯಲ್ಲಿ ಇರಲಿಲ್ಲ.  ಎಎನ್ -೩೨ ವಿಮಾನವು ಭಾರತೀಯ ವಾಯುಪಡೆಯ ಮಧ್ಯಮದರ್ಜೆಯ ಸಾಗಣೆ ವಿಮಾನವಾಗಿದ್ದು, ಸುಮಾರು ೧೦೫ ವಿಮಾನಗಳಿವೆ. ವಿಮಾನದ ಸೇವಾವಧಿ ವಿಸ್ತರಣೆ ಸಲುವಾಗಿ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ಜಾರಿಯಲ್ಲಿತ್ತು. ೨೦೦೯ರಲ್ಲಿ, ಭಾರತವು ಎಎನ್-೩೨ ವಿಮಾನಗಳೆಲ್ಲವನ್ನೂ ಮೇಲ್ದರ್ಜೆಗೆ ಏರಿಸುವ ಮತ್ತು ಅವುಗಳ ಸೇವಾವಧಿ ವಿಸ್ತರಿಸುವ ಯೋಜನೆಯನ್ನು ಉಕ್ರೇನ್ ಜೊತೆಗೆ ೪೦೦ ಮಿಲಿಯನ್ (೪೦ಕೋಟಿ) ಡಾಲರ್ ಒಪ್ಪಂದದ ಅಡಿಯಲ್ಲಿ ಕೈಗೆತ್ತಿಕೊಂಡಿತ್ತು. ಈವರೆಗೆ ೪೬ ವಿಮಾನಗಳನ್ನು  ಮೇಲ್ದರ್ಜೆಗೆ ಏರಿಸಲಾಗಿತ್ತು.   ಪೈಕಿ ೪೦ ವಿಮಾನಗಳನ್ನು ಉಕ್ರೇನಿನಲ್ಲಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಉಳಿದವುಗಳನ್ನು ಭಾರತದಲ್ಲೇ ಮೇಲ್ದರ್ಜೆಗೆ ಏರಿಸಲಾಗುತ್ತಿತ್ತು. ೨೦೧೬ರಲ್ಲಿ: ಸೋಮವಾರದ ವಿಮಾನ ಕಣ್ಮರೆ ಘಟನೆಯು ೨೦೧೬ರ ಜುಲೈಯಲ್ಲಿ ಚೆನ್ನೈಯಿಂದ ಪೋರ್ಟ್ ಬ್ಲೇರ್ ಕಡೆಗೆ ಹಾರುತ್ತಿದ್ದ ಎಎನ್ -೩೨ವಿಮಾನ ಕಣ್ಮರೆಯಾಗಿದ್ದ ನೆನಪುಗಳು ಮರುಕಳಿಸುವಂತೆ ಮಾಡಿತು. ಆಗ ಸಾರಿಗೆ ವಿಮಾನದಲ್ಲಿದ್ದ ೨೯ ಮಂದಿಯ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಭಾರತೀಯ ವಾಯುಪಡೆಯು ಲಕ್ಷ ಚದರ ನಾಟಿಕಲ್ ಮೈಲುಗಳಷ್ಟು ವ್ಯಾಪ್ತಿಯಲ್ಲಿ ವಿಮಾನದ ಶೋಧಕ್ಕಾಗಿ ೨೦೦ ಕಾರ್ಯಾಚರಣೆ ವಿಮಾನಗಳನ್ನು ಬಳಸಲಾಗಿತ್ತು. ವಿಮಾನವು ಅಪಘಾತದಲ್ಲಿ ಪಾರಾದ ಕಾರಣ ಇದು ಸಿಬ್ಬಂದಿ ಕಣ್ಮರೆ ಪ್ರಕರಣವಾಗಿರುವ ಸಾಧ್ಯತೆ ಇಲ್ಲ ಎಂದು ಬಳಿಕ ನಡೆದ ಭಾರತೀಯ ವಾಯುಪಡೆ ಕೋರ್ಟ್ ತನಿಖೆಯು ತೀರ್ಮಾನಿಸಿತ್ತು.

2019: ಮುಂಬೈ: ’ಮಹಾತ್ಮಾ ಗಾಂಧಿಯವರ ಪ್ರತಿಮೆಗಳ ನಿರ್ಮೂಲನೆಗೆ ಇದು ಸಕಾಲ ಎಂಬುದಾಗಿ ಟ್ವೀಟ್ ಮಾಡಿ ವಿವಾದದ ಕಿಡಿ ಹಚ್ಚಿದ್ದ ಮಹಾರಾಷ್ಟ್ರದ ಐಎಎಸ್ ಅಧಿಕಾರಿ ನಿಧಿ ಚೌಧರಿ ಅವರನ್ನು ವರ್ಗಾವಣೆ ಮಾಡಲಾಯಿತು.  ‘ಮುಂಬೈ ಮಹಾನಗರ ಪಾಲಿಕೆಯಿಂದ ಅವರನ್ನು ನೀರು ಸರಬರಾಜು ಇಲಾಖೆಗೆ ವರ್ಗಾವಣೆ ಮಾಡಲಾಯಿತು.. ಅಲ್ಲದೆ ರೀತಿ ಟ್ವೀಟ್ ಮಾಡಿದ್ದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಅವರಿಗೆ ಶೋಕಾಸ್ ನೋಟಿಸ್ ನೀಡಿತು ಎಂದು ಅಧಿಕಾರಿಗಳು  ತಿಳಿಸಿದರು.  ‘ಗಾಂಧಿ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ಚೌಧರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ದೇವೇಂದ್ರ ಫಡ್ಣವೀಸ್ ಅವರಿಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಪತ್ರ ಬರೆದಿದ್ದರು. ಪತ್ರದ ಬೆನ್ನಲ್ಲೇ ನಿಧಿ ಚೌಧರಿ ಅವರನ್ನು ವರ್ಗಾವಣೆ ಮಾಡಲಾಯಿತು ಎಂದು ಸುದ್ದಿ ಮೂಲಗಳು ತಿಳಿಸಿದವು.

2019: ತಿರುವನಂತಪುರಂ: ನಿಯಮಾವಳಿಗಳಿಗಳನ್ನು ಪಾಲಿಸದೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕಾಗಿ ಪಕ್ಷದ ನಾಯಕ ಎಪಿ ಅಬ್ದುಲ್ ಕುಟ್ಟಿ ಅವರನ್ನು ಕೇರಳ ರಾಜ್ಯ ಕಾಂಗೆಸ್ ಸಮಿತಿಯು ಪಕ್ಷದಿಂದ ಉಚ್ಚಾಟಿಸಿತು. ಅಬ್ದುಲ್ ಕುಟ್ಟಿ ಅವರು ಪಕ್ಷದ ನಾಯಕರನ್ನು ಪದೇ ಪದೇ ಕಡೆಗಣಿಸಿದ್ದಕ್ಕಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೊಗಳುವ ತಮ್ಮ ನಿಲುವನ್ನು ಬದಲಾಯಿಸದೇ ಇದ್ದುದಕ್ಕಾಗಿ ರಾಜ್ಯ ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಕ್ರಮ ಕೈಗೊಂಡಿತು. ಪಕ್ಷವು ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ಅಬ್ದುಲ್ ಕುಟ್ಟಿ ಅವರ ಉಚ್ಚಾಟನೆಯನ್ನು ದೃಢ ಪಡಿಸಲಾಯಿತು.  ಅಬ್ದುಲ್ ಕುಟ್ಟಿಯವರು ಪಕ್ಷವು, ವಿವರಣೆ ನೀಡುವಂತೆ ನೀಡಿದ್ದ ಕಟ್ಟಪ್ಪಣೆಗೂ ಸೊಪ್ಪು ಹಾಕಿಲ್ಲ ಎಂದು ಹೇಳಲಾಯಿತು. ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಅಬ್ದುಲ್ ಕುಟ್ಟಿಯವರು ಪಕ್ಷದ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಪಕ್ಷದ ಗಮನಕ್ಕೆ ಬಂದಿದೆ ಎಂದು ಹೇಳಿಕೆ ತಿಳಿಸಿತು. ‘ಅವರನ್ನು (ಮೋದಿ) ಜನಪ್ರಿಯರನ್ನಾಗಿ ಮಾಡುವಲ್ಲಿ ಕುತೂಹಲಕರ ಅಂಶ ಏನೆಂದರೆ ಅವರು ತಮ್ಮ ಆಡಳಿತದಲ್ಲಿ ಗಾಂಧಿ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದು ಎಂದು ಅಬ್ದುಲ್ ಕುಟ್ಟಿ ಅವರ ವಿವಾದಾತ್ಮಕ ಫೇಸ್ ಬುಕ್ ಬರಹ ಹೇಳಿತು.   ವಿಷಯದ ಬಗ್ಗೆ ತನಿಖೆಗೆ ಪಕ್ಷವು ಬಳಿಕ ಸಮಿತಿಯೊಂದನ್ನು ರಚಿಸಿತು.
ಪಕ್ಷದಿಂದ ತಮ್ಮನ್ನು ಉಚ್ಚಾಟಿಸಿದ ಬೆನ್ನಲ್ಲೇ ಅಬ್ದುಲ್ ಕುಟ್ಟಿ ಅವರುಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಅವರ ಪ್ರತಿಕ್ರಿಯೆ ನಿರೀಕ್ಷಿತವೇ ಎಂದು  ಪ್ರತಿಕ್ರಿಯಿಸಿದರು. ‘ಮೋದಿಯವರನ್ನು ನಿಂದಿಸುವ ಮೂಲಕ ಕೇರಳವು ತನ್ನನ್ನೇ ತಾನೇ ಕೆಟ್ಟದಾಗಿ ಚಿತ್ರಿಸಿಕೊಳ್ಳಬಾರದು ಎಂದು ಹೇಳಿದ ಅಬ್ದುಲ್ ಕುಟ್ಟಿಗಾಂಧಿಯವರು ಮಾಡಿದ್ದ ಬೋಧನೆಗಳನ್ನು ಕೃತಿಗೆ ಇಳಿಸುವಲ್ಲಿ ಪ್ರಧಾನಿ ಮೋದಿಯವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರುಬಿಜೆಪಿ ಸೇರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಅಬ್ದುಲ್ ಕುಟ್ಟಿಯವರುಅಂತಹ ಮನಃಸ್ಥಿತಿಯಲ್ಲಿ ನಾನು ಇಲ್ಲ. ಬಗ್ಗೆ ಯೋಚನೆಯನ್ನೂ ಮಾಡಿಲ್ಲ ಎಂದು ಉತ್ತರಿಸಿದರುಹಿಂದೆ ಎಸ್ಎಫ್ (ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) ನಾಯಕರಾಗಿದ್ದ ಅಬ್ದುಲ್ ಕುಟ್ಟಿ ಅವರನ್ನು ೧೯೯೯ರ ಚುನಾವಣೆಯಲ್ಲಿ ಹಾಲಿ ಸಂಸತ್ ಸದಸ್ಯ ಮುಲ್ಲಪಳ್ಳಿ ರಾಮಚಂದ್ರನ್ ಅವರನ್ನು ಪರಾಭವಗೊಳಿಸಿದ ಬಳಿಕಅಲ್ಬುಥಕುಟ್ಟಿ (ಅದ್ಭುತ ಮಗು) ಎಂಬುದಾಗಿ ಬಣ್ಣಿಸಲಾಗುತ್ತಿತ್ತು. ದಶಕದ ಹಿಂದೆ, ಅಬ್ದುಲ್ ಕುಟ್ಟಿಯವರು ಕಣ್ಣೂರಿನ ಸಂಸತ್ ಸದಸ್ಯರಾಗಿದ್ದಾಗ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಗುಜರಾತ್ ಮಾದರಿ ಅಭಿವೃದ್ಧಿಯನ್ನು ಶ್ಲಾಘಿಸಿದ್ದಕ್ಕಾಗಿ ಸಿಪಿಐ(ಎಂ) ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದರು.  ‘ರಾಜ್ಯದ ಅಭಿವೃದ್ಧಿಗಾಗಿ ಮೋದಿಯವರು ನಡೆಸುತ್ತಿರುವ ಪ್ರಯತ್ನಗಳು, ಅವರ ರಾಜಕೀಯ ನೀತಿಗಳನ್ನು ಒಪ್ಪಲಾಗದೇ ಇದ್ದರೂ ಅನುಕರಣೀಯ ಎಂಬುದಾಗಿ ಅಬ್ದುಲ್ ಕುಟ್ಟಿ ದುಬೈಯಲ್ಲಿ ಹೇಳಿದ್ದನ್ನು ೨೦೦೯ರಲ್ಲಿ ಮಲಯಾಳಂ ಟೆಲಿವಿಷನ್ ಚಾನೆಲ್ ವರದಿ ಮಾಡಿತ್ತು. ತತ್ ಕ್ಷಣವೇ ಅಬ್ದುಲ್ ಕುಟ್ಟಿ ಅವರನ್ನು ಸಿಪಿಐ(ಎಂ) ನಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿ, ಉಪಚುನಾವಣೆಯಲ್ಲಿ ಕಣ್ಣೂರು ವಿಧಾನಸಭಾ ಸ್ಥಾನವನ್ನು ಗೆದ್ದಿದ್ದರು. ೨೦೧೧ರ ವಿಧಾನಸಭಾ  ಚುನಾವಣೆಯಲ್ಲಿ ಅವರು ಪುನರಾಯ್ಕೆಗೊಂಡಿದ್ದರು. ೨೦೧೬ರಲ್ಲಿ ತಲಶ್ಶೇರಿ ಕಮ್ಯೂನಿಸ್ಟ್ ಭದ್ರಕೋಟೆಯಲ್ಲಿ ಕಾಂಗ್ರೆಸ್ಸಿಗೆ ಸೋಲಿನ ಕಹಿಯ ಅನುಭವವಾದ ಬಳಿಕ ಅಬ್ದುಲ್ ಕುಟ್ಟಿಯವರು ಪಕ್ಷದಲ್ಲಿ ಯಾವುದೇ ಸ್ಥಾನಮಾನವನ್ನೂ ಹೊಂದಿರಲಿಲ್ಲ. ಏನಿದ್ದರೂ, ಬಿಜೆಪಿಯು ಉಚ್ಚಾಟಿತ ಬಲಪಂಥಿಯ ನಾಯಕ ಅಬ್ದುಲ್ ಕುಟ್ಟಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರದಲ್ಲಿ ಧನಾತ್ಮಕ ನಿಲುವು ವ್ಯಕ್ತ ಪಡಿಸಿತು. ಸಿಪಿಐ(ಎಂ) ಇದೇ ಕಾರಣಕ್ಕಾಗಿ ಅಬ್ದುಲ್ ಕುಟ್ಟಿ ಅವರನ್ನು ಉಚ್ಚಾಟಿಸಿತ್ತು. ಆಗ ಕಾಂಗ್ರೆಸ್ ಪಕ್ಷವು ಅದನ್ನು ಸ್ವಾಗತಿಸಿತ್ತು. ಅಬ್ದುಲ್ ಕುಟ್ಟಿಯವರು ಪಕ್ಷದ ತಮ್ಮ ಅಭಿಮಾನಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಬಿಜೆಪಿಯ ರಾಜ್ಯ ಕೋಶ ಸಮನ್ವಯಕಾರ ಕೆ. ರೆಂಜಿತ್ ಹೇಳಿದರು.

2019: ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ೨೦ ವರ್ಷಗಳ ಬಳಿಕ ಮಹಿಳಾ ರಾಜ್ಯಪಾಲರು ನೇಮಕಗೊಳ್ಳುವ ಸಾಧ್ಯತೆಗಳಿವೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಬಗ್ಗೆ ಉಡುಪಿಯಲ್ಲಿ ಸುಳಿವು ನೀಡಿದರು. ರಾಜ್ಯದ ರಾಜ್ಯಪಾಲ ವಜುಭಾಯಿ ವಾಲಾ ಅವರ ಆಡಳಿತಾವಧಿ ಶೀಘ್ರ ಮುಗಿಯಲಿದ್ದು, ಅವರಿಂದ ತೆರವಾಗುವ ಜಾಗಕ್ಕೆ ಮಹಿಳೆಯೊಬ್ಬರು ನೇಮಕವಾಗಲಿದ್ದಾರೆ ಎಂದು ಮೂಲಗಳು ಹೇಳಿದವು. ಐದು ವರ್ಷಗಳಿಂದ ಕರ್ನಾಟಕದ ರಾಜ್ಯಪಾಲರಾಗಿರುವ ವಜುಭಾಯಿ ವಾಲಾ ಅವರ ಅಧಿಕಾರಾವಧಿ ಮುಂಬರುವ ಸೆಪ್ಟೆಂಬರ್ ತಿಂಗಳಿಗೆ ಅಂತ್ಯಗೊಳ್ಳಲಿದೆ. ಅವರಿಂದ ತೆರವಾಗುವ ಸ್ಥಾನಕ್ಕೆ ಬಿಜೆಪಿಯ ಹಿರಿಯ ನಾಯಕಿಯೊಬ್ಬರು ನೇಮಕಗೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಮೂಲಗಳು ಹೇಳಿದವು. ಮೂಲಗಳ ಪ್ರಕಾರ ಬಿಜೆಪಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮಾಜಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಮತ್ತು ಹುಬ್ಬಳ್ಳಿಯ ಈದ್ಗಾ ಮೈದಾನ ಹೋರಾಟದಲ್ಲಿ ಸಕ್ರಿಯರಾಗಿದ್ದ ಮಾಜಿ ಕೇಂದ್ರ ಸಚಿವೆ ಉಮಾಭಾರತಿ ಮೂವರ ಹೆಸರುಗಳು ರಾಜ್ಯದ ರಾಜ್ಯಪಾಲ ಹುದ್ದೆಗೆ ಕೇಳಿಬರುತ್ತಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಎದುರು ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್ ಅವರು ಕರ್ನಾಟಕದ ಜನರ ಜೊತೆಗೆ ಅತ್ಯಂತ ಸಮೀಪದಿಂದ  ಬೆರೆತವರು. ಸುಮಿತ್ರಾ ಮಹಾಜನ್ ಅವರು ಲೋಕಸಭಾ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದವರು. ಉಮಾಭಾರತಿ ಅವರು ಈದ್ಗಾ ಮೈದಾನ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನರ ಪ್ರೀತಿಗೆ ಪಾತ್ರರಾದವರು. ಮೂವರಿಗೂ ಕರ್ನಾಟಕದ ನಂಟಿದ್ದು ಇವರಲ್ಲಿ ಯಾರೇ ರಾಜ್ಯಪಾಲರಾದರೂ ನಮಗೆ ಖುಷಿ ಇದೆ ಎಂದು ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಹೇಳಿದರು. ೨೦ ವರ್ಷಗಳ ಹಿಂದೆ ಕರ್ನಾಟಕದ ರಾಜ್ಯಪಾಲರಾಗಿ ಐದು ವರ್ಷ ಸೇವೆ ಸಲ್ಲಿಸಿದ್ದ ರಮಾದೇವಿ ಅವರು ದಕ್ಷ ಆಡಳಿತ ನೀಡಿದ್ದರು. ರಮಾದೇವಿಯವರು ೧೯೯೯ ಡಿಸೆಂಬರ್ ೨ರಿಂದ ೨೦೦೨ ಆಗಸ್ಟ್ ೨೦ರವರೆಗೆ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ರಾಜ್ಯಪಾಲರಾಗಿರುವ ವಜುಭಾಯಿ ವಾಲಾ ಅವರು ಗುಜರಾತಿನವರಾಗಿದ್ದು, ಅಧಿಕಾರಾವಧಿ ಮುಗಿದ ಬಳಿಕ ತಮ್ಮ ರಾಜ್ಯಕ್ಕೆ ವಾಪಸಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿದವು.

2019: ನವದೆಹಲಿ: ಮುಂದಿನ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿ ರುವ ಹಿನ್ನೆಲೆಯಲ್ಲಿ ಮಹಿಳಾ ಓಟ್ ಬ್ಯಾಂಕ್ ಮೇಲೆ ಕಣ್ಣಿಟ್ಟ ದೆಹಲಿ ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್  ಅವರು ಮಹಿಳೆಯರಿಗೆ ಬಸ್ ಮತ್ತು ಮೆಟ್ರೋದಲ್ಲಿ ಉಚಿತ ಪ್ರಯಾಣದ ಯೋಜನೆ ಘೋಷಿಸಿದರು. ರಾಜಧಾನಿ ದೆಹಲಿಯ ಮೆಟ್ರೋ ರೈಲು ಮತ್ತು ಬಸ್‌ಗಳಲ್ಲಿ ಮಹಿಳೆ ಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಯೋಜನೆ ಈ ಕುರಿತ ವಿಸ್ತೃತವಾದ ಪ್ರಸ್ತಾ ವನೆ ಸಿದ್ಧಪಡಿಸಿ ಸಲ್ಲಿಸುವಂತೆ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಮತ್ತು ಡಿಎಂಆರ್‌ಸಿಎಲ್‌ಗೆ (ದೆಹಲಿ ಮೆಟ್ರೋ ರೈಲು ನಿಗಮ) ಸೂಚಿಸ ಲಾಗಿದೆ. ಇದಕ್ಕಾಗಿ ಒಂದು ವಾರದ ಗಡುವು ನಿಗದಿಪಡಿಸಲಾಗಿದೆ., ಇದರ ಕುರಿತು ಸಾರ್ವ ಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಲು ಕ್ರಮ ಕೈಗೊಳ್ಳಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು.  ಈ ಯೋಜನೆ ಘೋಷಿಸುವ ಸುಳಿವನ್ನು ಮುಖ್ಯಮಂತ್ರಿ ಕೇಜ್ರಿ ವಾಲ್ ಅವರು ಜೂನ್ 1ರಂದು  ನಡೆದ ಸಭೆಯಲ್ಲಿ ನೀಡಿದ್ದರು. ಈದಿನ ಯೋಜನೆ ಘೋಷಿಸಿದ ಅವರು, ಮಹಿಳೆಯರ ಸುರಕ್ಷಿತ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಿಕೊಳ್ಳುವ ಉದ್ದೇಶ ದೊಂದಿಗೆ ದೆಹಲಿ ಮೆಟ್ರೋ ಮತ್ತು ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿ ಸುವ ಯೋಜನೆ ಜಾರಿಗೆ ತರಲಾಗು ತ್ತಿದೆ ಎಂದು ಹೇಳಿ ದರು. ಇದೇ ವೇಳೆಗೆ, ದೆಹಲಿ ಸರ್ಕಾರ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೋಟ್ ಅವರಿಗೆ ಈ ಯೋಜನೆ ಸಂಬಂಧ ಆಗು-ಹೋಗುಗಳ ಕುರಿ ತು ಸಭೆ ನಡೆಸಿ, ಶೀಘ್ರ ಕ್ರಮ ತೆಗೆದು ಕೊಳ್ಳುವಂತೆ ಸೂಚನೆ ನೀಡಿದರು.

2019: ನವದೆಹಲಿ: ಹಿಂದಿ ಹೇರಿಕೆಗೆ ಮುಂದಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿತು.  ರಾಷ್ಟ್ರೀಯ ಶಿಕ್ಷಣ ಕರಡು ನೀತಿಯನ್ನು ಕೇಂದ್ರ ಸರ್ಕಾರ ಬದಲಾಯಿಸಿದ್ದು, ಹಿಂದಿ ಭಾಷಾ ಕಲಿಕೆ ಕಡ್ಡಾಯವಲ್ಲ ಎಂದು ಹೇಳಿತು. ತ್ರಿಭಾಷಾ ಸೂತ್ರದಂತೆ ಸ್ಥಳೀಯ ಭಾಷೆಯೊಂದಿಗೆ ಹಿಂದಿ ಭಾಷೆ ಕಲಿಕೆ ಎಂದು ಈ ಹಿಂದೆ ಕೇಂದ್ರ ಸರ್ಕಾರ  ಹೇಳಿತ್ತು. ಆದರೆ ಇದಕ್ಕೆ ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ವಿರೋಧದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ಕರಡು ನೀತಿಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ಹಿಂದಿ ಭಾಷಾ ಕಲಿಕೆ ಕಡ್ಡಾಯವಲ್ಲ ಎಂದು ತಿಳಿಸಿತು. ಹಾಗೆಯೇ ೬ನೇ ತರಗತಿ ಬಳಿಕ ವಿದ್ಯಾರ್ಥಿ ಇಚ್ಛೆಯಂತೆ ಭಾಷೆ ಆಯ್ಕೆ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತು.  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊಸ ಶಿಕ್ಷಣ ನೀತಿ ಕರಡು ರೂಪಿಸಿದ್ದು, ೫೦೦ ಪುಟಗಳ ಈ ವರದಿ ಯಲ್ಲಿ ಹಿಂದಿ ಮಾತನಾಡದ ರಾಜ್ಯಗಳ ಲ್ಲಿ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಕಲಿಸಲು ಸೂಚಿಸಲಾಗಿತ್ತು.  ಶಾಲಾಪೂರ್ವ ಶಿಕ್ಷಣದಿಂದ ಹನ್ನೆರಡನೇ ತರಗತಿ ತನಕ ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿ ಕಲಿಸಲು ಈ ಕರಡಿನಲ್ಲಿ ಶಿಫಾರಸು ಮಾಡಲಾಗಿತ್ತು. ಅದನ್ನು ವಿರೋಧಿಸಿ ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯ ದಲ್ಲಿ ಪ್ರತಿಭಟನೆ ಆರಂಭವಾಗಿತ್ತು.  ಹೊಸ ಶಿಕ್ಷಣ ನೀತಿ ಬಗ್ಗೆ ಮಾತ ನಾಡಿದ್ದ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ’ತಮಿಳುನಾಡಿನ ಜನರ ರಕ್ತದಲ್ಲೇ ಹಿಂದಿ ಇಲ್ಲ. ಹಿಂದಿ ಹೇರಲು ಬಂದರೆ ಜೇನುಗೂಡಿಗೆ ಕಲ್ಲು ಎಸೆದ ಹಾಗಾಗುತ್ತದೆ ಎಂದಿದ್ದರು. ಜೊತೆಗೆ ಕರ್ನಾಟಕದಲ್ಲೂ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಕೇಂದ್ರ ಸರ್ಕಾರ ಪ್ರಾದೇ ಶಿಕ ಭಾಷೆಗಳಿಗೆ ಗೌರವ ನೀಡಬೇಕು ಎಂಬ ಕೂಗು ಕೇಳಿಬಂದಿತ್ತು. ಈ ಎಲ್ಲಾ ಆಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ  ತನ್ನ ವರಸೆಯನ್ನು ಬದಲಿಸಿತು.

2018: ನವದೆಹಲಿ: ಮಧ್ಯಪ್ರದೇಶದ ಮತದಾರ ಯಾದಿಗಳಲ್ಲಿ ಕನಿಷ್ಠ ೬೦ ಲಕ್ಷ ಮಂದಿ ನಕಲಿ ಮತದಾರರು ಇದ್ದಾರೆ ಎಂಬುದಾಗಿ ಕಾಂಗ್ರೆಸ್ ನಾಯಕರಾದ ಕಮಲನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದನ್ನು ಅನುಸರಿಸಿ ಚುನಾವಣಾ ಯಾದಿ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗ ಆಜ್ಞಾಪಿಸಿತು. ಮಧ್ಯಪ್ರದೇಶದಲ್ಲಿ ೫ ಕೋಟಿ ಮತದಾರರಿದ್ದಾರೆ. ಕಾಂಗ್ರೆಸ್ ಪ್ರತಿಪಾದನೆ ನಿಜವಾದರೆ ಈ ಪೈಕಿ ಶೇಕಡಾ ೧೨ರಷ್ಟು ಮಂದಿ ನಕಲಿ ಮತದಾರರಾಗುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದ್ದ ಕಾಂಗ್ರೆಸ್ ಮತ್ತು ಬಿಜೆಪಿಯ ಮತಪಾಲಿನ ಅಂತರ ಕೇವಲ ೮.೫ ಪ್ರತಿಶತ ಮಾತ್ರ.  ಈದಿನ ಚುನಾವಣಾ ಆಯೋಗಕ್ಕೆ ದಾಖಲೆಗಳ ಸಹಿತವಾಗಿ ದೂರು ನೀಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೆಲವು ಮತದಾರರು ಬೇರೆ ಬೇರೆ ಕ್ಷೇತ್ರಗಳ ಮತದಾರರ ಯಾದಿಗಳಲ್ಲಿ ಕಂಡು ಬಂದಿರುವ ದಾಖಲೆಗಳನ್ನು ಪ್ರದರ್ಶಿಸಿದರು. ಉದಾಹರಣೆಗೆ: ಮಧ್ಯಪ್ರದೇಶದ ಭೋಜಪುರ ಕ್ಷೇತ್ರದ ಮಹಿಳಾ ಮತದಾರರೊಬ್ಬರು ಹಲವಾರು ಮತಗಟ್ಟೆಗಳ ಮತಯಾದಿಗಳಲ್ಲಿ ೨೬ ಬಾರಿ ಕಂಡು ಬಂದಿದ್ದಾಳೆ.    ’ನಾವು ಮತದಾರರ ಯಾದಿಗೆ ಸುಮಾರು ೬೦ ಲಕ್ಷ ನಕಲಿ ಮತದಾರರ ಸೇರ್ಪಡೆಯಾಗಿರುವ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ಸಾಕ್ಷ್ಯಾಧಾರಗಳನ್ನು ನೀಡಿದ್ದೇವೆ. ಇವು ಕೇವಲ ತಪ್ಪುಗಳಲ್ಲ. ರಾಜ್ಯದ ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ಉದ್ದೇಶಪೂರ್ವಕವಾಗಿ ಆಗಿರುವ ವ್ಯತ್ಯಾಸಗಳು ಎಂದು ಕಮಲನಾಥ್ ಹೇಳಿದರು.
 ’ಇದು ಆಡಳಿತಾತ್ಮಕ ನಿರ್ಲಕ್ಷ್ಯವಲ್ಲ, ಆಡಳಿತಾತ್ಮಕ ದುರ್ಬಳಕೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಕಮಲನಾಥ್ ಆಪಾದಿಸಿದರು. ಹಿರಿಯ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ’ಈ ಅಕ್ರಮಗಳನ್ನು ಬಿಜೆಪಿ ಮಾಡಿದ್ದು, ೧೦ ವರ್ಷಗಳಲ್ಲಿ ಜನಸಂಖ್ಯೆ ಶೇಕಡಾ ೨೪ ರಷ್ಟು  ಹೆಚ್ಚಳವಾಗಿದ್ದರೆ, ಮತದಾರರ ಸಂಖ್ಯೆ ಮಾತ್ರ ಶೇಕಡಾ ೪೦ರಷ್ಟು  ಹೆಚ್ಚಾಗಿದೆ ಎಂದು ಹೇಳಿದರು. ವಿಷಯಕ್ಕೆ ಸಂಬಂಧಿಸಿದಂತೆ ಕಾಲಮಿತಿಯ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್  ತನ್ನ ಐದಂಶಗಳ ಬೇಡಿಕೆ ಪಟ್ಟಿಯಲ್ಲಿ ಚುನಾವಣಾ ಆಯೋಗವನ್ನು ಒತ್ತಾಯಿಸಿತು.  ಮಧ್ಯ ಪ್ರದೇಶದ ಎಲ್ಲ ೨೩೦ ವಿಧಾನಸಭಾ ಕ್ಷೇತ್ರಗಳಲ್ಲೂ ಪುನರಾವರ್ತಿತವಾದ/ ಎರಡೆರಡು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಒಂದೇ ಮಾದರಿಯ ದಾಖಲಾತಿಗಳನ್ನು ಚುನಾವಣಾ ಯಾದಿಗಳನ್ನು ಕಿತ್ತು ಹಾಕಬೇಕು.  ಚುನಾವಣಾ ಅಧಿಕಾರಿಯಿಂದ ಪ್ರಾಮಾಣಿಕ ಮತದಾರ ಪಟ್ಟಿಗಳ ದೃಢೀಕರಣ ಪತ್ರ ಪಡೆಯಬೇಕು. ತಪ್ಪಿತಸ್ಥರು ಎಂಬುದಾಗಿ ಕಂಡು ಬಂದಲ್ಲಿ ಸಿಇಒ, ಡಿಇಒ ಮತ್ತು ಇತರರು ಸೇರಿದಂತೆ ಎಲ್ಲ ರಾಜ್ಯ ಚುನಾವಣಾ ಅಧಿಕಾರಿಗಳ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆ ೧೯೫೧ರ ಸೆಕ್ಷನ್ ೩೨ರ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕಮಲನಾಥ್ ಮತ್ತು ಸಿಂಧಿಯಾ ಒತ್ತಾಯಿಸಿದರು.  ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಗೆ ಪ್ರತಿಪರಿಶೀಲನೆ ಮತ್ತು ಪಾರದರ್ಶಕತೆ ಸಲುವಾಗಿ ಫೊಟೋ ಸಹಿತವಾದ ಮತದಾರರ ಯಾದಿಗಳನ್ನು ನೀಡಬೇಕು, ಮಧ್ಯಪ್ರದೇಶದ ಮತದಾರರ ಯಾದಿಯು ನೆರೆಯ ರಾಜ್ಯಗಳ ಮತದಾರರ ಯಾದಿಗಳ ಜೊತೆ ಹೊಂದಾಣಿಕೆಯಾಗಬೇಕು ಎಂದೂ ಅವರು ಆಗ್ರಹಿಸಿದರು.  ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಲೀನಾ ಸಿಂಗ್ ಅವರು ’ಮತದಾರರ ಯಾದಿ ತಯಾರಿಸುವಾಗ ಕೆಲವೊಮ್ಮೆ ತಪ್ಪುಗಳಿಂದಾಗಿ ಹೀಗಾಗಬಹುದು. ಅಧಿಕಾರಿಗಳು ಫೊಟೋಗಳು ಇರಬೇಕಾದ ಖಾಲಿ ಜಾಗದಲ್ಲಿ ಬೇರೆ ಫೊಟೋಗಳನ್ನು ಹಾಕಿರಲೂ ಬಹುದು ಎಂದು ಹೇಳಿದರು. ತಪ್ಪುಗಳನ್ನು ಸರಿಪಡಿಸಲು ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾರರ ಯಾದಿ ಸರಿಪಡಿಸುವ ಹೊಣೆಗಾರಿಕೆಯನ್ನೂ, ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಈ ಕಾರ್‍ಯದ ಉಸ್ತುವಾರಿ ನೋಡಿಕೊಳ್ಳುವ ಹೊಣೆಗಾರಿಕೆಯನ್ನೂ ವಹಿಸಲಾಗಿದೆ ಎಂದು ಅವರು ನುಡಿದರು. ಮತದಾರರ ಯಾದಿಗಳಿಗೆ ಶೇಕಡಾ ೨೬ರಷ್ಟು ಹೆಚ್ಚು ಮತದಾರರ ಸೇರ್ಪಡೆಯಾಗಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ. ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.  
           
2018: ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಒಯ್ಯುತ್ತಿದ್ದ ವಿಮಾನ ಸುಮಾರು ೧೪ ನಿಮಿಷಗಳ ಕಾಲ ಮಾರಿಷಸ್ ಆಗಸದಲ್ಲಿ ಕಣ್ಮರೆಯಾದ ಘಟನೆ ಜೂನ್ 02ರ ಶನಿವಾರ ಘಟಿಸಿತ್ತು ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಈದಿನ  ತಿಳಿಸಿತು.  ‘ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಇದ್ದ ಇಂಡಿಯನ್ ಏರ್ ಫೋರ್ಸ್ ವಿಮಾನ ಐಎಫ್ ಸಿ ೩೧ ಶನಿವಾರ ತಿರುವನಂತಪುರದಿಂದ ಭಾರತೀಯ ಕಾಲಮಾನ ಮಧ್ಯಾಹ್ನ ೨.೦೮ ಗಂಟೆಗೆ ಹೊರಟಿತ್ತು. ವಿಮಾನವು ಭಾರತದ ಆಕಾಶದಿಂದ ಮಾಲೆ ಎಟಿಸಿಯತ್ತ ಹೊರಟ ಬಳಿಕ ಭಾರತೀಯ ಕಾಲಮಾನ ಸಂಜೆ ೪.೪೪ಕ್ಕೆ ಮಾಲೆ ಎಟಿಸಿಯ ಸಂಪರ್ಕ ಸಾಧಿಸಿತ್ತು. ಆದರೆ ಮಾರಿಷಸ್ ಆಕಾಶವನ್ನು ಪ್ರವೇಶಿಸಿದ ಬಳಿಕ ಮಾರಿಷಸ್ ಎಟಿಸಿಯ ಸಂಪರ್ಕಕ್ಕೆ ವಿಮಾನ ಸಿಗಲಿಲ್ಲ. ಆಮೇಲೆ ಭಾರತೀಯ ಕಾಲಮಾನ ಸಂಜೆ ೪.೫೮ ಗಂಟೆಗೆ ಐಎಫ್ ಸಿ ೩೧ ವಿಮಾನವು ಮಾರಿಷಸ್ ಎಟಿಸಿ ಜೊತೆಗೆ ಸಂಪರ್ಕ ಸಾಧಿಸಿ, ಕೆಳಕ್ಕೆ ಇಳಿಯಿತು  ಎಂದು ಎಎಐ ಪತ್ರಿಕಾ ಪ್ರಕಟಣೆ ಒಂದರಲ್ಲಿ ತಿಳಿಸಿತು. ಮಾಲೆಯಲ್ಲಿ ಸುರಕ್ಷಿತವಾಗಿ ವಿಮಾನ ಇಳಿದ ಬಳಿಕ ಸ್ವರಾಜ್ ಅವರು ದ್ವೀಪರಾಷ್ಟ್ರದ ಪ್ರಧಾನಿ ಪ್ರವಿಂದ್ ಕುಮಾರ್ ಜಗುನಾಥ್ ಅವರ ಭೇಟಿ ಸೇರಿದಂತೆ ತಮ್ಮ ನಿಗದಿತ ಕಾರ್‍ಯಕ್ರಮಗಳಲ್ಲಿ ಪಾಲ್ಗೊಂಡರು. ಮಾರಿಷಸ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ವಿಮಾನ ಮತ್ತು ಅದರಲ್ಲಿ ಇರುವವರ ಸುರಕ್ಷತೆ ಬಗ್ಗೆ ಅನಿಶ್ಚಿತತೆ ಉಂಟಾದ ಸಂದರ್ಭದಲ್ಲಿ ಬಳಸುವ ’ಇನ್‌ಸೆರ್‍ಫಾ (ಐಎನ್ ಸಿಇಆರ್ ಎಫ್ ಎ)ವನ್ನು ಸಕ್ರಿಯಗೊಳಿಸಿದ ಬಳಿಕ ಭಾರತೀಯ ವಾಯುಪಡೆ ವಿಮಾನ ಪತ್ತೆಯಾಯಿತು.  ಸಾಮಾನ್ಯವಾಗಿ ವಿಮಾನವು ಎಟಿಸಿ ಸಂಪರ್ಕವನ್ನು ಕಳೆದುಕೊಂಡ ೩೦ ನಿಮಿಷಗಳ ಬಳಿಕ ಮಾತ್ರವೇ ಈ ಸಂಕೇತದ ಎಚ್ಚರಿಕೆಯನ್ನು ನೀಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಬಹುಶ ವಿಮಾನವು ಅತಿ ಮಹತ್ವದ ವ್ಯಕ್ತಿಯನ್ನು ಒಯ್ಯುತ್ತಿದ್ದುದರಿಂದ ಬೇಗನೇ ಎಚ್ಚರಿಕೆಯನ್ನು ನೀಡಲಾಯಿತು ಎಂದು ಎಎಐ ಹೇಳಿತು.  ಏನಿದ್ದರೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸಚಿವರು ಘಟನೆಗೆ ಸಂಬಂಧಿಸಿದಂತೆ ಈವರೆಗೆ ಏನನ್ನೂ ಹೇಳಿಲ್ಲ.
ಮಾರಿಷಸ್ ನಲ್ಲಿ ತಮ್ಮ ಕಾರ್‍ಯಕ್ರಮದ ಬಳಿಕ ಸುಷ್ಮಾ ಸ್ವರಾಜ್ ಅವರು ಬ್ರಿಕ್ಸ್ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು.

2018: ಜಮ್ಮು: ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾ ನಿದೇರ್ಶಕರು (ಡಿಜಿಎಂಒ) ೨೦೦೩ರ ಕದನ ವಿರಾಮ ಒಪ್ಪಂದದ ಅನುಷ್ಠಾನಕ್ಕೆ ನಿರ್ಧರಿಸಿದ ಒಂದೇ ವಾರದಲ್ಲಿ ಈದಿನ ಪಾಕಿಸ್ತಾನ ಮತ್ತೆ ದಾರ್ಷ್ಟ್ಯ ಪ್ರದರ್ಶನ ಮಾಡಿ, ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು.  ಪಾಕ್ ದಾಳಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ ಎಫ್) ಇಬ್ಬರು ಯೋಧರು ಹುತಾತ್ಮರಾದರು.  ಪಾಕ್ ಪಡೆಗಳ ದಾಳಿಗೆ ಪ್ರತಿಯಾಗಿ ಭಾರತೀಯ ಗಡಿ ಭದ್ರತಾ ಪಡೆ ಮತ್ತು ಸೇನಾ ಪಡೆಗಳು ಜಂಟಿಯಾಗಿ ಪ್ರಬಲ ಪ್ರತಿದಾಳಿ ನಡೆಸಿ, ಪಾಕಿಸ್ತಾನದ ಬಂಕರ್ ಮತ್ತು ಸೇನಾ ನೆಲೆಯನ್ನು ಧ್ವಂಸಗೊಳಿಸಿವೆ. ಪ್ರತಿದಾಳಿಯಲ್ಲಿ ಪಾಕ್ ಸೇನೆಯ ಹಲವು ಸೈನಿಕರೂ ಗಾಯಗೊಂಡರು ಎಂದು ವರದಿ ತಿಳಿಸಿತು. ಕಾಶ್ಮೀರ ಕಣಿವೆಯ ಅಖ್ನೂರ್ ವಲಯದ ಪ್ರಾಗ್ವಲ್ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾನುವಾರ ನಸುಕಿನ ವೇಳೆಯಲ್ಲಿ ಪಾಕ್ ಪಡೆ ಗುಂಡಿನ ದಾಳಿ ನಡೆಸಿದೆ. ಬಿಎಸ್‌ಎಫ್ ನ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತರಾದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.  ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಗಡಿಯಾದ್ಯಂತ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ ಪಡೆಗೆ ಬಿಎಸ್‌ಎಫ್ ಯೋಧರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು. ಮೇ.೨೯ರಂದು ಭಾರತ ಹಾಗೂ ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಕಾಶ್ಮೀರದ ಗಡಿಯಲ್ಲಿ ಘರ್ಷಣೆ ನಡೆಯದಂತೆ ತಡೆಯಲು ೨೦೦೩ರ ಕದನ ವಿರಾಮ ಒಪ್ಪಂದವನ್ನು ಅಕ್ಷರಶಃ ಅನುಷ್ಠಾನಗೊಳಿಸಲು ನಿರ್ಧರಿಸಿದ್ದರು.  ಸಭೆಯಲ್ಲಿ ಉಭಯ ಸೇನಾ ಕಮಾಂಡರ್ ಗಳು ವಿಶೇಷ ಹಾಟ್ ಲೈನ್ ಸಂಪರ್ಕದ ಮೂಲಕ ಮಾತನಾಡಿ,  ಗಡಿ ನಿಯಂತ್ರಣ ರೇಖೆ ಮತ್ತು ಜಮ್ಮು -ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿನ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದರು. ಪಾಕಿಸ್ತಾನಿ ಡಿಜಿಎಂಒ ಹಾಟ್ ಲೈನ್ ಸಂಪರ್ಕವನ್ನು ಮೊದಲಿಗೆ ಸ್ಥಾಪಿಸಿತ್ತು.  ಮಾತುಕತೆಗಳನ್ನು ಅನುಸರಿಸಿ ಭಾರತಿಯ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಮತ್ತು ಪಾಕಿಸ್ತಾನದ ಮೇಜರ್ ಜನರಲ್ ಶಾಹಿರ ಶಂಶದ್ ಮಿರ್ಜಾ ಅವರು ಒಂದೇ ರೀತಿಯ ಹೇಳಿಕೆಗಳನ್ನು ಬಿಡುಗಡೆ ಮಾಡಿ ೧೫ ವರ್ಷಗಳಷ್ಟು ಹಳೆಯದಾದ ಕದನವಿರಾಮವನ್ನು ಜಾರಿಗೊಳಿಸಲು ಉಭಯ ರಾಷ್ಟ್ರಗಳು ಒಪ್ಪಿವೆ ಎಂದು ತಿಳಿಸಿದ್ದರು.  ಕದನ ವಿರಾಮ ಉಲ್ಲಂಘಿಸಿ ಪಾಕಿಸಾನಿ ಸೈನಿಕರು ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ (ಎಲ್ ಒಸಿ) ಇತ್ತೀಚಿಗೆ ಸಾವನ್ನಪ್ಪಿದವರ ಸಂಖ್ಯೆ ೪೬ ಕ್ಕೆ ಏರಿದೆ. ಅವರಲ್ಲಿ ೨೦ ಮಂದಿ ಭದ್ರತಾ ಸಿಬ್ಬಂದಿ ಕೂಡ ಸೇರಿದ್ದರು.  ಕಳೆದ ತಿಂಗಳು ಪಾಕಿಸ್ತಾನ ಸೇನೆ ನಡೆಸಿದ್ದ ನಿರಂತರ ಶೆಲ್ ದಾಳಿಗಳಿಂದಾಗಿ ಜಮ್ಮು, ಕಥುವಾ ಮತ್ತು ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಪ್ರದೇಶದದಲ್ಲಿ ವಾಸಿಸುತ್ತಿದ್ದ ಸಹಸ್ರಾರು ಗ್ರಾಮಸ್ಥರು ಮನೆ ಮಠ ತೊರೆದಿದ್ದರು.

2018: ಮುಂಬೈ: ಸೈಬರ್ ವಂಚಕನೊಬ್ಬನ ಬಳಿ ೨೮ ಬಾರಿ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಹಂಚಿಕೊಂಡ ಸೀವುಡ್ಡಿನ ದರವೆ ಗ್ರಾಮದ ೪೦ರ ಹರೆಯದ ಗೃಹಿಣಿಯೊಬ್ಬರು ೬.೯೮ ಲಕ್ಷ ರೂಪಾಯಿಗಳನ್ನು ಕಳೆದುಕೊಂಡದ್ದು ಬೆಳಕಿಗೆ ಬಂತು.  ಮೇ ೧೭ರಿಂದ ೨೩ರ ನಡುವಣ ಅವಧಿಯಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು ಈ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಎಂಬ ಸೋಗಿನಲ್ಲಿ ವಂಚಕ ಈ ಗೃಹಿಣಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ.  ‘ವಂಚಕ ಮಹಿಳೆಗೆ ತಾನು ಎಸ್ ಬಿಐಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಆಕೆಯ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಅದನ್ನು ಅನ್ ಲಾಕ್ ಮಾಡುವ ಸಲುವಾಗಿ ಎಟಿಎಂ ಕಾರ್ಡ್ ವಿವರಗಳು ಮತ್ತು ಪಿನ್ ನಂಬರ್ ಕೊಡಿ ಎಂದು ಹೇಳಿದ್ದ. ಆ ಬಳಿಕ ಪುನಃ ಆಕೆಯನ್ನು ದೂರವಾಣಿ ಮೂಲಕ ಸಂಪರ್ಕಸಿದ ಆತ ಆಕೆಯ ದೂರವಾಣಿಗೆ ಬಂದ ಒಟಿಪಿ ನಂಬರ್ ನೀಡುವಂತೆ ಹೇಳಿದ್ದ. ಬ್ಯಾಂಕಿನಿಂದ ಬರುವ ಬೇರೆ ಯಾವುದೇ ಸಂದೇಶವನ್ನು ಅಳಿಸಿಹಾಕಿ ಎಂದೂ ಆತ ಸೂಚಿಸಿದ್ದ ಎಂದು ಪೊಲೀಸ್ ಇನ್ ಸ್ಪೆಕ್ಟರ್ (ಅಪರಾಧ) ಭಾಗೂಜಿ ಔತಿ ಹೇಳಿದರು.  ಪ್ರತಿದಿನವೂ ಕರೆ: ಪೊಲೀಸರ ಪ್ರಕಾರ ಆರೋಪಿಯು ಮೊದಲಿಗೆ ೪೦೦೦ ರೂಪಾಯಿಗಳನ್ನು ಗುರ್ಗಾಂವ್ನ ಓಕ್ಸಿಜೆನ್ ವಾಲೆಟ್‌ಗೆ ನೀಡಿದ್ದ. ಮಹಿಳೆಗೆ ಏನೂ ಸಂಶಯ ಬಂದಿಲ್ಲ ಎಂಬುದು ಅರಿವಾದ ಬಳಿಕ, ಆತ ಮೇ ೨೩ರ ವರೆಗೆ ಹೆಚ್ಚು ಕಡಿಮೆ ಪ್ರತಿದಿನ ಹಲವಾರು ಬಾರಿ ಕರೆ ಮಾಡಿದ್ದ.  ಆತ ಮುಂಬೈಯ ಫೋನ್ಪೆ ವಾಲೆಟ್‌ನಲ್ಲಿ ನಡೆಸಿದ್ದ ಅತ್ಯಂತ ಕಡಿಮೆ ಮೊತ್ತದ ವಹಿವಾಟು ೪೦೦೦ ರೂಪಾಯಿಗಳದಾಗಿದ್ದು, ಗರಿಷ್ಠ ವಹಿವಾಟು ೪೯,೯೯೯ ರೂಪಾಯಿಗಳು ಎಂದು ಔತಿ ನುಡಿದರು.  ಆರೋಪಿಯು ಬ್ಯಾಂಕಿನಿಂದ ಬರುವ ಇತರ ಸಂದೇಶಗಳನ್ನು ಅಳಿಸಿಹಾಕಲು ಸೂಚಿಸಿದ್ದುದರಿಂದ ಮಹಿಳೆ ಬಾಂಕಿನಿಂದ ಬಂದ ಅಪ್ ಡೇಟ್ ಮತ್ತು ಹಣ ಕಡಿತಗೊಂಡ ಬಗೆಗಿನ ಸಂದೇಶಗಳೆಲ್ಲವನ್ನೂ ಅಳಿಸಿಹಾಕಿದ್ದರು.  ಕಟ್ಟ ಕಡೆಗೆ ಜುಲೈ 30ರಂದು ಬ್ಯಾಂಕಿಗೆ ತನ್ನ ಪಾಸ್ ಬುಕ್ ಅಪ್ ಡೇಟ್ ಮಾಡಲು ಬ್ಯಾಂಕಿಗೆ ಹೋದಾಗ ಆಕೆಗೆ ವಂಚನೆ ಅರಿವಿಗೆ ಬಂತು.  ‘ಬ್ಯಾಂಕಿನಿಂದ ಯಾರೂ ಕರೆಮಾಡಿಲ್ಲ ಎಂಬುದು ಆಕೆಗೆ ಗೊತ್ತಾಯಿತು. ವಂಚನೆಯ ಅರಿವಾದಾಗ ಆಕೆ ನಮ್ಮ ಬಳಿ ದೂರು ನೀಡಿದ್ದಾರೆ ಎಂದು ಔತಿ ನುಡಿದರು. ಮಹಿಳೆಯ ಪತಿ ಕುವೈತಿನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ತನ್ನ ಇಬ್ಬರು ಮಕ್ಕಳ ಜೊತೆಗೆ ದರವೆಯಲ್ಲಿ ವಾಸವಾಗಿದ್ದಾರೆ. ಆಕೆಯ ಹಿರಿಯ ಮಗ ಇದೀಗಷ್ಟೇ ೧೨ನೇ ತರಗತಿ  ಮುಗಿಸಿದ್ದಾನೆ. ಬ್ಯಾಂಕಿನಲ್ಲಿ ಆಕೆಯ ಖಾತೆಯಲ್ಲಿದ್ದ ೧೦ ಲಕ್ಷ ರೂಪಾಯಿ ಮಗನ ಉನ್ನತ ಶಿಕ್ಷಣಕ್ಕಾಗಿ ಪಡೆದ ಶಿಕ್ಷಣ ಸಾಲದ ಹಣವಾಗಿತ್ತು.  ‘ವಂಚನೆಯಿಂದಾಗಿ ಕುಟುಂಬ ದಿಗಿಲಾಗಿಹೋಗಿದೆ. ಪತಿ ತನಿಖಾ ತಂಡದ ಜೊತೆಗೆ ಸಂಪರ್ಕದಲ್ಲಿದ್ದಾರೆ. ತನಗೆ ಆನ್ ಲೈನ್ ಬ್ಯಾಂಕಿಂಗ್ ಬಗ್ಗೆ ತಿಳುವಳಿಕೆ ಇರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ ‘ ಎಂದು ಔತಿ ಹೇಳಿದರು.  ‘ನಾವು ಎಸ್ ಬಿಐಗೆ ಸಂದೇಶಗಳನ್ನು ಕಳುಹಿಸಲು ಹೇಳಿದ್ದೆವು. ಆದರೆ ಎಟಿಎಂ ಕಾರ್ಡ್ ಅಥವಾ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬ ವಿವರ ನಮಗೆ ತಿಳಿದಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ನುಡಿದರು.

2016: ಮಥುರಾ (ಉತ್ತರ ಪ್ರದೇಶ) : ನಗರದ ಜವಾಹರ್ಬಾಗ್ನಲ್ಲಿ ಹಿಂದಿನ ದಿನ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವ ಸಂದರ್ಭ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 320ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಓರ್ವ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೇದೆ ಸೇರಿದಂತೆ ಒಟ್ಟು 24 ಮಂದಿ ಸಾವಿಗೀಡಾಗಿದ್ದಾರೆ.   ಅಲಹಾಬಾದ್ ಹೈಕೋರ್ಟ್ ಆದೇಶದನ್ವಯ ಜವಾಹರ್ಬಾಗ್ನಲ್ಲಿ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವ ಸಂದರ್ಭ ನಡೆದ ಗಲಭೆಯಲ್ಲಿ ಓರ್ವ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೇದೆ ಸೇರಿದಂತೆ ಒಟ್ಟು 21 ಮಂದಿ ಸಾವಿಗೀಡಾದರು. ಸ್ವಾಧೀನಭಾರತ್ ಸುಭಾಷ್ ಸೇನಾ ಹೆಸರಿನ ಸಂಘಟನೆ, ತಾವು ಸುಭಾಷ್ಚಂದ್ರ ಬೋಸ್ ಅನುಯಾಯಿಗಳು ಎಂದು ಹೇಳಿಕೊಂಡು 280 ಎಕರೆ ಪ್ರದೇಶವನ್ನು ಎರಡು ವರ್ಷಗಳಿಂದ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಅವರನ್ನು ಜಿಲ್ಲಾಡಳಿತ ತೆರವುಗೊಳಿಸಲು ಮುಂದಾಗಿತ್ತು. ಸಂದರ್ಭ ತೆರವು ಪ್ರಕ್ರಿಯೆಗೆ ಅಡ್ಡಿ ಉಂಟುಮಾಡಿದ ಒತ್ತುವರಿದಾರರು, ಪೊಲೀಸರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಸಂದರ್ಭ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎಸ್ಪಿ ಮುಕುಲ್ ದ್ವಿವೇದಿ ಹಾಗೂ ಅವರ ಬೆಂಗಾವಲಿಗಿದ್ದ ಪೇದೆ ಸಂತೋಷ್ ಯಾದವ್ ತಲೆಗೆ ಬಲವಾದ ಗುಂಡೇಟು ಬಿದ್ದು ಸಾವಿಗೀಡಾದರು. ಈ ಪ್ರದೇಶದಲ್ಲಿದ್ದ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಗಲಭೆಕೋರರು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿದರು.

2016: ನವದೆಹಲಿ: ಗೂಗಲ್ ಸ್ವಯಂಚಾಲಿತ ವಾಹನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಸೌಮ್ಯವಾದ ಹಾರ್ನ್ ಕಾರುಗಳಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿತು. ಯಾವ ಸಂದರ್ಭದಲ್ಲಿ ಕಾರಿನ ಹಾರ್ನ್ ಮಾಡಬೇಕು ಎಂಬ ನಿಯಮವನ್ನು ಕಾರಿನಲ್ಲಿ ಗೂಗಲ್ ಇಂಜಿನಿಯರುಗಳು ಅಳವಡಿಸಿದ್ದಾರೆ. ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಕಾರುಗಳಲ್ಲಿ ಜನರಿಗೆ ಚಿರಪರಿಚಿತ ಶಬ್ದದ ಮಾದರಿಗಳನ್ನು ನೀಡಲಾಗಿದೆ.
ಪರೀಕ್ಷೆಯಲ್ಲಿ ಅರಿಯಾಗಿ ಕಾರ್ಯನಿರ್ವಹಿಸಿದ ಗೂಗಲ್ ಕಾರ್, ಮುಂಬರುವ ದಿನಗಳಲ್ಲಿ ಬೇರೆ ಕಾರುಗಳ ಶಬ್ದ ಮತ್ತು ಅದನ್ನು ಗ್ರಹಿಸುವ ಜವಬ್ದಾರಿಯನ್ನು ಸಂಶೋಧಿಸಿ ಕಾರುಗಳಲ್ಲಿ ಅಳವಡಿಸಲಾಗುವುದು ಎಂದು ಕಂಪೆನಿ ತಿಳಿಸಿತು.

2016: ನವದೆಹಲಿ: ಅಂತಾರಾಷ್ಟ್ರೀಯ ಓಲಿಂಪಿಕ್ ಕಮಿಟಿ (ಐಓಸಿ) ಸದಸ್ಯ ಸ್ಥಾನಕ್ಕಾಗಿ ಭಾರತದ ನೀತಾ ಅಂಬಾನಿ ನಾಮನಿರ್ದೇಶನಗೊಂಡರು. ಮುಂಬರುವ ಅಗಸ್ಟ್ 2 ರಿಂದ 4 ರವರೆಗೆ ಬ್ರೆಜಿಲ್ ರಿಯೋ ಡಿ ಜನೈರೋದಲ್ಲಿ 129ನೇ ಅವಧಿಗೆ ನಡೆಯುವ ಚುನಾವಣೆಗೆ ಭಾರತದಿಂದ ಪ್ರಥಮ ಮಹಿಳಾ ಅಭ್ಯರ್ಥಿಯಾಗಿ ರಿಲಯನ್ಸ್ ಫೌಂಡೇಶನ್ ಒಡತಿ ನೀತಾ ಅಂಬಾನಿ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ಅವರು ವಿಜೇತರಾದರೆ ನೀತಾ 70 ವರ್ಷ ಪ್ರಾಯದವರಾಗುವರೆಗೂ ಸದಸ್ಯೆಯಾಗಿ ಮುಂದುವರೆಯಬಹುದು. ಹಲವು ವರ್ಷಗಳಿಂದ ಶಿಕ್ಷಣ ಮತ್ತು ಕ್ರೀಡಾ ವಿಭಾಗಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ನೀತಾ ತನ್ನ ಹೆಸರನ್ನು ಐಓಸಿ ಚುನಾವಣೆಗೆ ಶಿಫಾರಸು ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಕ್ರೀಡೆಯಲ್ಲಿ ಯಾವುದೇ ಸಂಸ್ಕೃತಿ, ಭಾಷೆ ತೊಡಕು ಇಲ್ಲದೆ ಪೀಳಿಗೆಯ ಜನರನ್ನು ಒಟ್ಟುಗೂಡಿಸುತ್ತದೆ ಎಂದು ಅವರು ಹೇಳಿದರು.  ಓಲಿಂಪಿಕ್ ಕಮಿಟಿಗೆ ಸರ್ ದೊರಬ್ಜಿ ಟಾಟಾ ಭಾರತದ ಪ್ರಥಮ ಪ್ರತಿನಿಧಿಯಾಗಿ ಆಯ್ಕೆಗೊಂಡಿದ್ದರು, 2000-2014 ಅವಧಿಗೆ ರಾಜಾ ರಣಧೀರ್ ಸಿಂಗ್ ಓಲಿಂಪಿಕ್ ಗೌರವ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಓಲಿಂಪಿಕ್ ಸ್ವಯಂಸೇವಾ ಪ್ರತಿನಿಧಿಯಾಗಿ ತಮ್ಮ ದೇಶದಲ್ಲಿ ಓಲಿಂಪಿಕ್ ನಡೆಯನ್ನು ಸಾರುವ ವಿಭಾಗದಲ್ಲಿ ನೀತಾ ಅಂಬಾನಿ ನಾಮನಿರ್ದೇಶನಗೊಂಡರು.

2016: ತಿರುವನಂತಪುರಂ: ಕೇರಳದ 14ನೇ ವಿಧಾನ ಸಭೆಯ ನೂತನ ಸಭಾಧ್ಯಕ್ಷರಾಗಿ ಪಿ.ಶ್ರೀರಾಮಕೃಷ್ಣನ್ ಆಯ್ಕೆಯಾದರು. ಅವರು 92 ಮತಗಳನ್ನು ಪಡೆದು ಪ್ರತಿಸ್ಪರ್ಧಿ ವಿ.ಪಿ ಸಜೀಂದ್ರನ್ ವಿರುದ್ಧ ಜಯಗಳಿಸಿದರು. ಸಜೀಂದ್ರನ್ ಅವರಿಗೆ 46 ಮತಗಳು ಮಾತ್ರ ಲಭಿಸಿದವು. ನೂತನ ಸಭಾಧ್ಯಕ್ಷರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಭ ಕೋರಿ, ಪಿ.ಶ್ರೀರಾಮಕೃಷ್ಣನ್ ಅವರು ಎಲ್ಡಿಎಫ್ಅನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ ಬದಲು ವಿಧಾನ ಸಭೆಯನ್ನೇ ಪ್ರತಿನಿಧಿಸಲಿದ್ದಾರೆ ಎಂದರು.

2016: ನವದೆಹಲಿ: ಕಳೆದ 30 ವರ್ಷಗಳ ಅವಧಿಯಲ್ಲಿ ರಾಷ್ಟ್ರಾದ್ಯಂತ ಹರಿಯಾಣದ ಮೂರನೇ ಎರಡರಷ್ಟು ಗಾತ್ರದ (15,000 ಚದರ ಕಿ.ಮೀ.ಗಳು) ಅರಣ್ಯಗಳು ಅತಿಕ್ರಮಣಗಳಿಂದಾಗಿ ನಾಶವಾಗಿದ್ದರೆ, 23,716 ಕೈಗಾರಿಕಾ ಯೋಜನೆಗಳಿಗಾಗಿ 14,000 ಚದರ ಕಿಮೀಯಷ್ಟು ಪ್ರದೇಶದ ಕಾಡುಗಳು ನಾಶವಾಗಿವೆ. ಕೃತಕ ಕಾಡುಗಳು ನೈಸರ್ಗಿಕ ಕಾಡುಗಳಿಗೆ ಪರ್ಯಾಯವಾಗುವ ಸಾಧ್ಯತೆಗಳೇ ಇಲ್ಲ ಸರ್ಕಾರವೇ ಬಹಿರಂಗ ಪಡಿಸಿತು.  ಮೂವತ್ತು ವರ್ಷಗಳಲ್ಲಿ ನಾಶವಾಗಿರುವ 14,000 ಚದರ ಕಿಮೀ ಅರಣ್ಯ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರದೇಶವನ್ನು ಅಂದರೆ 4,947 ಚದರ ಕಿಮೀ ಪ್ರದೇಶವನ್ನು ಗಣಿಗಾರಿಕೆಗಾಗಿ ನೀಡಲಾಗಿದೆ. ರಕ್ಷಣಾ ಯೋಜನೆಗಳಿಗೆ 1594 ಚದರ ಕಿ.ಮೀ. ಮತ್ತು ಹೈಡ್ರೋ ಇಲೆಕ್ಟ್ರಿಕ್ ಯೋಜನೆಗಳಿಗಾಗಿ 1351 ಚದರ ಕಿಮೀಗಳನ್ನು ನೀಡಲಾಗಿದೆ ಯೋಜನೆಗಳಿಗಾಗಿ ಅರಣ್ಯ ಪ್ರದೇಶವನ್ನು ನೀಡುವಾಗ ವಿಧಿಸಲಾಗುವ ಎಲ್ಲಾ ಷರತ್ತುಗಳನ್ನೂ ವ್ಯಾಪಕವಾಗಿ ಉಲ್ಲಂಘಿಸಲಾಗಿದೆ ಎಂದು ಸರ್ಕಾರಿ ಲೆಕ್ಕ ಪತ್ರ ಪರಿಶೋಧಕರು ಹೇಳಿದರೆ, ತಜ್ಞರ ಪ್ರಕಾರ ಸರ್ಕಾರ ಒದಗಿಸಿರುವ ಮಾಹಿತಿಗಳೆಲ್ಲಾ ಕಡಿಮೆ ಅಂದಾಜಿನ ಮಾಹಿತಿಗಳು. ‘ಸರ್ಕಾರದ ಮಾಹಿತಿ ಸಮುದ್ರದಲ್ಲಿ ಮುಳುಗಿರುವ ಮಂಜುಗಡ್ಡೆಯ ತುದಿ ಮಾತ್ರಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಪರಿಸರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಟಿ.ವಿ. ರಾಮಚಂದ್ರ ಹೇಳುತ್ತಾರೆ. ನಮ್ಮ ಅಧ್ಯಯನದ ಪ್ರಕಾರ ಉತ್ತರ, ಮಧ್ಯ ಹಾಗೂ ದಕ್ಷಿಣದ ಪಶ್ಚಮ ಘಟ್ಟಗಳ ವ್ಯಾಪ್ತಿ ಶೇಕಡಾ 2.84, 4.38 ಮತ್ತು 5.77 ರಷ್ಟು ಇಳಿಮುಖವಾಗಿದೆ ಎಂದು ಅವರು ಹೇಳುತ್ತಾರೆ. ರಸ್ತೆಯಿಂದ ಅಣೆಕಟ್ಟುವರೆಗಿನ ವಿವಿಧ ಯೋಜನೆಗಳಿಗಾಗಿ ಈಗ 25,000 ಹೆಕ್ಟೇರ್ (250 ಚದರ ಕಿಮೀ) ಕಾಡು ನಷ್ಟವಾಗುತ್ತಿದೆ. ಎಂದು ಅವರ ಅಭಿಪ್ರಾಯ.

2016: ಕೇಂದ್ರಪಾರಾ: ಓಡಿಶಾ ರಾಜ್ಯದ ಎಮ್ ಪ್ರವೇಶಿಸಲು ನಡೆಸುವ ಪೂರ್ವಭಾವಿ ಪರೀಕ್ಷೆ (ಓಜೆಇಇ) ಯಲ್ಲಿ ಪುಸ್ತಕ ಬೈಂಡಿಂಗ್ ಮಾಡುವವರ ಮಗನಾದ ಶಾದಾಬ್ ಅನ್ವರ್(22) ಎಂಬಾತ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ.
ಎಸ್ ಕೆ ಫಲಾವುದ್ದೀನ್ ಎಂಬುವರ ಮಗ ಅನ್ವರ್ ವಿದ್ಯಾಭ್ಯಾಸಕ್ಕೆ ನಗರದಲ್ಲಿದ್ದ ತುಣುಕು ಜಾಗವನ್ನು ಮಾರಿ ಖರ್ಚು ವೆಚ್ಚ ನಿಭಾಯಿಸಿದ್ದ. ಕೇಂದ್ರಪಾರಾದ ಕಾಲೇಜೊಂದರಲ್ಲಿ ವಾಣಿಜ್ಯ ವಿಷಯವನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ ಅನ್ವರ್ ಎಮ್ ಮಾಡಲು ಇಚ್ಛಿಸಿ ಪ್ರವೇಶ ಪರೀಕ್ಷೆ ಎದುರಿಸಿದ್ದ. ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುವ ಅನ್ವರ್ ಸಾಧನೆ ಅಪಾರವಾದದ್ದು ಎಂದು ಕೇಂದ್ರಪಾರಾ ಕಾಲೇಜಿನ ಪ್ರಿನ್ಸಿಪಾಲ್ ಸಚ್ಚಿದಾನಂದ ಸದಂಗಿ ಹೇಳಿದರು. 10 ನೇ ತರಗರತಿಯಿಂದ ಓದಿನಲ್ಲಿ ಮುಂದಿದ್ದ ಅನ್ವರ್ ಓದಿಗೆ ಬೆನ್ನೆಲುಬಾಗಿ ನಿಂತ ತಂದೆ ಫಲಾವುದ್ದೀನ್ ದಿಟ್ಟತನಕ್ಕೆ ಸರಿಯಾದ ಪ್ರತಿಫಲ ದೊರಕಿಸಿದ. ಓದಿನಲ್ಲಿ ಶ್ರದ್ದೆ, ಏಕಾಗ್ರತೆ ಅವಶ್ಯ ಅದರಿಂದ ಯಾವ ಗುರಿಯನ್ನಾದರೂ ಮುಟ್ಟಬಹುದು, ಪ್ರವೇಶ ಪರೀಕ್ಷೆಯ ಮೊದಲ ರ್ಯಾಂಕ್ ನನ್ನಲ್ಲಿ ಮತ್ತಷ್ಟು ಶಕ್ತಿ ತುಂಬಿದ್ದು, ಉನ್ನತ ಮಟ್ಟಕ್ಕೇರಲು ನನ್ನನ್ನು ಹುರಿದುಂಬಿಸಿದೆ ಎಂದು ಟಾಪರ್ ಅನ್ವರ್ ಹೇಳಿದ.
 2016: ಕೃಷ್ಣಗಿರಿ: ಕರ್ನಾಟಕದಿಂದ ತೆರಳುತ್ತಿದ್ದ ಕಡಲೆಕಾಯಿ ತುಂಬಿದ ಲಾರಿ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದಾಗಿ, 33 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ ಮತ್ತು ಕಾರಿಗೆ ಡಿಕ್ಕಿ ಹೊಡೆದು 15 ಮಂದಿ ಮೃತರಾಗಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 7 ಮೇಲುಮಲೈಯಲ್ಲಿ ಘಟಿಸಿತು.  12 ವರ್ಷದ ಬಾಲಕ, ಆರು ಮಂದಿ ಮಹಿಳೆ ಸೇರಿದಂತೆ ಒಟ್ಟು 12 ಮಂದಿ ಸಾವಿಗೀಡಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ತಿಳಿಸಿತು. ಲಾರಿ ಚಾಲಕ ಹೆದ್ದಾರಿ ರೇಖೆ ಉಲ್ಲಂಘಿಸಿ ಕ್ರಾಸ್ ಮಾಡಿದ ಪರಿಣಾಮ ಘಟನೆ ಸಂಭವಿಸಿದೆ ಎಂದು ಹೇಳಲಾಯಿತು.

2016: ನವದೆಹಲಿ: ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಮತ್ತು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಅಂತೆಯೇ ಆಂಧ್ರಪ್ರದೇಶದಿಂದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವೈ. ಸತ್ಯನಾರಾಯಣ ಚೌಧರಿ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ನಾಮಪತ್ರ ಹಿಂಪಡೆಯಲು ಈದಿನ ಕಡೆ ದಿನವಾಗಿತ್ತು. ನಾಲ್ವರು ಅಭ್ಯರ್ಥಿಗಳ ಪ್ರತಿಸ್ಪರ್ಧಿಗಳು ಕಡೇ ಗಳಿಗೆಯಲ್ಲಿ ನಾಮಪತ್ರ ಹಿಂಪಡೆದಿದ್ದರಿಂದಾಗಿ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಮಹಾರಾಷ್ಟ್ರದಿಂದ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್(ಎನ್ಸಿಪಿ), ಬಿಜೆಪಿಯ ವಿನಯ್ ಸಹಸ್ರಬುದ್ಧೆ ಶಿವಸೇನೆಯ ಸಂಜಯ್ ರಾವತ್, ಬಿಜೆಪಿಯ ವಿಕಾಸ್ ಆಯ್ಕೆಯಾದರು.

2016: ನವದೆಹಲಿ: ಕಳೆದ ವರ್ಷ ಡಿಸೆಂಬರ್ನಲ್ಲಿ ಬಂಧಿಸಲಾಗಿದ್ದ ಐಸಿಸ್ (ಐಎಸ್ಐಎಸ್) ಭಯೋತ್ಪಾದಕ ಮೊಹಮ್ಮದ್ ನಾಸೇರ್ ಪಾಕೀರ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನ್ನ ಮೊದಲ ದೋಷಾರೋಪ ಪಟ್ಟಿಯನ್ನು (ಚಾಜ್ಷೀಟ್) ಸಲ್ಲಿಸಿತು. ಭಾರತದಲ್ಲಿ ಐಸಿಸ್ಗೆ ಸೇರಿಸಲು ಯುವಕರನ್ನು ನೇಮಿಸುವ ಹಾಗೂ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ ಆರೋಪಗಳನ್ನು ನಾಸೇರ್ ವಿರುದ್ಧ ಎನ್ಐಎ ದೋಷಾರೋಪ ಪಟ್ಟಿಯಲ್ಲಿ ಹೊರಿಸಲಾಯಿತು.  23 ಹರೆಯದ ತಮಿಳುನಾಡು ಮೂಲದ ನಾಸೇರ್ನನ್ನು ಸುಡಾನ್ನಿಂದ ಗಡೀಪಾರು ಮಾಡಲಾಗಿತ್ತು. ಕಳೆದ ವರ್ಷ ಡಿಸೆಂಬರ್ 11ರಂದು ಆತನನ್ನು ಬಂಧಿಸಲಾಗಿತ್ತು.

2016: ಅಥೆನ್ಸ್: ಮೆಡಿಟರೇನಿಯನ್ ಸಮುದ್ರದಲ್ಲಿ ಸಂಭವಿಸಿದ ಮೂರು ದೋಣಿ ದುರಂತಗಳಲ್ಲಿ 700ಕ್ಕೂ ಹೆಚ್ಚು ಮಂದಿ ನಿರಾಶ್ರಿತು ಜಲಸಮಾಧಿಯಾಗಿದ್ದಾರೆ ಎಂದು ಶಂಕಿಸಲಾಯಿತು. ಯುರೋಪಿಗೆ ಆಶ್ರಯ ಕೇಳಿ ಬರುತ್ತಿದ್ದವರ ಪಾಲಿನ ಅತಿಭೀಕರ ದುರಂತವಿದು ಎಂದು ಹೇಳಲಾಯಿತು. ಜೂನ್ 1, 2, 3ರಂದು ಈ ಮೂರು ದುರಂತಗಳು ಸಂಭವಿಸಿವೆ ಎನ್ನಲಾಯಿತು.  ಲಿಬಿಯಾದಿಂದ ಇಟಲಿಗೆ ಎಂಟು ದಿನಗಳ ಅವಧಿಯಲ್ಲಿ 13,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರು ಸಮುದ್ರಮಾರ್ಗವಾಗಿ ಹೊರಟಿದ್ದಾಗ ದುರಂತಗಳು ಸಂಭವಿಸಿವೆ ಎನ್ನಲಾಯಿತು. ಸಂಪೂರ್ಣ ಅರಾಜಕ ಪರಿಸ್ಥಿತಿ ಇದ್ದ ಕಾರಣ ದುರಂತದ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, 2015 ಏಪ್ರಿಲ್ ಬಳಿಕದ ಅತ್ಯಂತ ಭೀಕರ ದುರಂತ ಇದು ಎಂದು ವಿಶ್ವಸಂಸ್ಥೆ ನಿರಾಶ್ರಿತರ ಸಂಸ್ಥೆ ಹೇಳಿತು.  2015ರಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ 1300 ಜನ ಲಿಬಿಯಾ ಸಮೀಪ ಜಲಸಮಾಧಿಯಾಗಿದ್ದರು.

2016: ಕೊಯಮತ್ತೂರು: ತಮಿಳು ಚಿತ್ರನಟ, ನಿರ್ದೇಶಕ ಬಾಲು ಆನಂದ್ (62) ಅವರು ಶುಕ್ರವಾರ ತೀವ್ರ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿದವು. ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದ ಹಾಗೂ ಕೆಲವು ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದ ಆನಂದ್ ಅವರಿಗೆ ಕಲಾಮ್ಾಳ್ಯಂನ ತಮ್ಮ ನಿವಾಸದಲ್ಲಿ ಇದ್ದಾಗ ಎದೆ ನೋವು ಕಾಣಿಸಿಕೊಂಡಿತು. ತತ್ಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ಒಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರು ಎಳೆದರು.  
ಸತ್ಯರಾಜ್ ಜೊತೆಗೆ ಆನಂದ್ ಅವರು ನಟಿಸಿದ್ದಅಣ್ಣಾನಗರ ಪಸ್ಟ್ ಸ್ಟ್ರೀಟ್ಹಾಗೂ ವಿಜಯಕಾಂತ್ ಜೊತೆಗೆ ನಟಿಸಿದ್ದನಾನೇ ರಾಜ, ನಾನೇ ಮಂತ್ರಿಚಿತ್ರಗಳು ಅತ್ಯಂತ ಜನಪ್ರಿಯವಾಗಿದ್ದವು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದರು.
2016: ನ್ಯೂಯಾರ್ಕ್: ಪ್ರತಿನಿತ್ಯ ಆಕ್ರೋಡು ಇಲ್ಲವೇ ಆಕ್ರೋಟ (ವಾಲ್ನಟ್) ಸೇವಿಸುವ ಮೂಲಕ ಕರುಳಿನ (ಕೋಲನ್) ಕ್ಯಾನ್ಸರನ್ನು ತಡೆಯಬಹುದು ಎಂದು ಹೊಸ ಸಂಶೋಧನೆಯೊಂದರಿಂದ ಬೆಳಕಿಗೆ ಬಂದಿತು.  ಪ್ರತಿದಿನ 28 ಗ್ರಾಮ್ಷ್ಟು ಆಕ್ರೋಡು ಸೇವಿಸುತ್ತಿದ್ದರೆ ಕರುಳಿನ ಕ್ಯಾನ್ಸರನ್ನು ತಡೆಗಟ್ಟಬಹುದು. ಆಕ್ರೋಡು ಸೇವನೆಯಿಂದ ಕರುಳಿನ ಕ್ಯಾನ್ಸರ್ ಗಡ್ಡೆ ಬೆಳೆಯುವುದು ಕಡಿಮೆಯಾಗುತ್ತದೆ ಎಂಬುದು ಇದೇ ಮೊತ್ತ ಮೊದಲ ಬಾರಿಗೆ ನಮ್ಮ ಸಂಶೋಧನೆಯಿಂದ ಬಾರಿಗೆ ಬೆಳಕಿಗೆ ಬಂದಿದೆ ಎಂದು ಅಮೆರಿಕದ ಯನಿವರ್ಸಿಟಿ ಆಫ್ ಕನೆಕ್ಟಿಕಲ್ ಹೆಲ್ತ್ ಸೆಂಟರ್ ಸಂಶೋಧಕರ ತಂಡದ ಮುಖ್ಯಸ್ಥ ಡೇನಿಯಲ್ ರೋಸೆನ್ ಬರ್ಗ್ ಹೇಳಿದರು.  ತನಗೆ ಬೇಕಾಗುವ ಒಟ್ಟು ಕ್ಯಾಲೋರಿಯಲ್ಲಿ ಶೇಕಡಾ 7ರಿಂದ 10ರಷ್ಟನ್ನು ವಾಲ್ನಟ್ ಸೇವನೆಯಿಂದ ಪಡೆದ ಇಲಿಗಳ ಕರುಳಿನ ಕ್ಯಾನ್ಸರ್ ಗಡ್ಡೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಳೆದದ್ದು ಅಧ್ಯಯನದಿಂದ ಬೆಳಕಿಗೆ ಬಂದಿತು. ಗಂಡು ಇಲಿಗಳಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ಸ್ಪಷ್ಟಗೊಂಡಿದೆ. ಆಕ್ರೋಡು ತಿಂದ ಹೆಣ್ಣು ಇಲಿಗಳಿಗಿಂತ ಅಷ್ಟೇ ಪ್ರಮಾಣದಲ್ಲಿ ಆಕ್ರೋಡು ತಿಂದ ಗಂಡು ಇಲಿಗಳಲ್ಲಿ ಕ್ಯಾನ್ಸರ್ ಗಡ್ಡೆ 2.3 ಪಟ್ಟಿನಷ್ಟು ಕಡಿಮೆ ಬೆಳೆದಿತ್ತು ಎಂದು ಸಂಶೋಧಕರು ಹೇಳಿದರು. ಇಲಿಗಳು ತಿಂದ ಆಕ್ರೋಡು ಪ್ರಮಾಣ ಮಾನವರು ಸೇವಿಸುವ ಒಂದು ಔನ್ಸ್ನಷ್ಟು (28.3) ಗ್ರಾಮ್ ಆಕ್ರೋಡು ಪ್ರಮಾಣಕ್ಕೆ ಸಮವಾಗುತ್ತದೆ ಎಂದು ಅಧ್ಯಯನ ತಿಳಿಸಿತು. ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ಆಕ್ರೋಡು ಸೇವನೆಯಿಂದ ಹಲವಾರು ಲಾಭಗಳಿವೆ. ಕರುಳಿನ ಗಡ್ಡೆ ಬೆಳೆಯದಂತೆ ತಡೆಯಲು ಇದು ತುಂಬಾ ಅನುಕೂಲ ಎಂಬುದು ಅಧ್ಯಯನದಿಂದ ಸ್ಪಷ್ಟವಾಗಿದೆ ಎಂದು ಸಂಶೋಧಕರು ಹೇಳಿದರು.

2016: ಮುಂಬೈ: ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಬಾಲಿವುಡ್ ಸಿನಿಮಾವೊಂದಕ್ಕೆ ಗೀತೆ ಬರೆದಿದ್ದು ಈ ಹಾಡು ಜನಪ್ರಿಯ ಗಾಯಕ ಅರ್ಜಿತ್ ಸಿಂಗ್ ಅವರ ಕಂಠ ಸಿರಿಯಲ್ಲಿ ಮೂಡಿಬರಲಿದೆ. ಸಿತಾರ್ ವಾದಕ ನಿಲಾದ್ರಿ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿರುವಶೊರ್ಗಲ್ಚಿತ್ರ ಶೀರ್ಷಿಕೆ ಗೀತೆಯಿಂದಲೇ ಸುದ್ದಿ ಮಾಡುತ್ತಿದೆ. ಕವ್ವಾಲಿ ರೂಪದಲ್ಲಿರುವ ಗೀತೆತು ಹಿ ತುಎಂದು ಆರಂಭವಾಗುತ್ತದೆ. ಇಷ್ಟಕ್ಕೆ ತೃಪ್ತರಾಗದ ಕುಮಾರ್, ಸಿಬಲ್ ಅವರ ಬಳಿ ಮತ್ತೊಂದು ಗೀತೆಯನ್ನು ಬರೆಯಿಸಿದ್ದಾರೆ. ಹಾಡುತೇರೆ ಬಿನಾಎಂದು ತೆರೆದುಕೊಳ್ಳುತ್ತದೆ. ಹಾಡುಗಳ ಕುರಿತು ಪ್ರತಿಕ್ರಿಯಿಸಿದ ಕಪಿಲ್ ಸಿಬಲ್, ಹಾಡುಗಳು ಶಾಶ್ವತ ಪ್ರಭಾವ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಬರೋಬ್ಬರಿ ಒಂಭತ್ತು ತಿಂಗಳುಗಳ ಸಮಯ ತೆಗೆದುಕೊಂಡು ರಚಿಸಿದ್ದೇನೆ. ಯುವ ಮನಗಳನ್ನು ಪರಿಣಾಮಕಾರಿಯಾಗಿ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು. ಬಾಲಿವುಡ್ ನಟ ಸಲ್ಮಾನ್ ಖಾನ್ ಕೆಂಗಣ್ಣಿಗೆ ಗುರಿಯಾಗಿದ್ದ ಅರ್ಜಿತ್ ಸಿಂಗ್ ತಮ್ಮ ಕಂಚಿನ ಕಂಠದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ತಯಾರಾಗಿದ್ದಾರೆ.

 2009: ಕಾಂಗ್ರೆಸ್ಸಿನ ಹಿರಿಯ ನಾಯಕಿ, ದಲಿತ ಮಹಿಳೆ ಮೀರಾ ಕುಮಾರ್ (64) ಲೋಕಸಭಾಧ್ಯಕ್ಷರಾಗಿ  ಅವಿರೋಧವಾಗಿ ಆಯ್ಕೆ ಆದರು. ಇದರೊಂದಿಗೆ ಮಹಿಳೆ ಮೊದಲ ಬಾರಿಗೆ ಈ ಉನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿದ ಇತಿಹಾಸವೂ ನಿರ್ಮಾಣವಾಯಿತು. ಮೀರಾ ಕುಮಾರ್ ಲೋಕಸಭೆಯ 16ನೇ ಅಧ್ಯಕ್ಷರಾದರು. ಇವರ ತಂದೆ ಮಾಜಿ ಉಪ ಪ್ರಧಾನಿ ದಿವಂಗತ ಜಗಜೀವನ ರಾಮ್ ಅವರು 25 ವರ್ಷಗಳ ಹಿಂದೆ ಲೋಕಸಭೆಯ ಹಂಗಾಮಿ ಅಧ್ಯಕ್ಷರಾಗಿದ್ದರು. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮಂಡಿಸಿದ ನಿರ್ಣಯವನ್ನು ಸದನದ ನಾಯಕ ಪ್ರಣವ್ ಮುಖರ್ಜಿ ಅನುಮೋದಿಸಿದರು. ಆ ಬಳಿಕ ಸದಸ್ಯರೆಲ್ಲರೂ ಧ್ವನಿಮತದ ನಡುವೆ ಮೇಜು ಕುಟ್ಟಿ  ನಿರ್ಣಯ ಅಂಗೀಕರಿಸಿದರು. ಇದಕ್ಕೂ ಮೊದಲು, ಪ್ರತಿಪಕ್ಷದ ನಾಯಕ ಎಲ್.ಕೆ. ಅಡ್ವಾಣಿ, ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ, ಡಿಎಂಕೆಯ ಟಿ.ಆರ್. ಬಾಲು ಸೇರಿದಂತೆ ವಿವಿಧ ನಾಯಕರು ಪಕ್ಷ ಭೇದ ಮರೆತು ಸಭಾಧ್ಯಕ್ಷ ಸ್ಥಾನಕ್ಕೆ ಮೀರಾ ಕುಮಾರ್ ಅವರ ಹೆಸರನ್ನೇ ಸೂಚಿಸಿ ನಿರ್ಣಯ ಮಂಡಿಸಿದರು. ಭಾರತೀಯ ವಿದೇಶಾಂಗ ಸೇವೆಯ ಮಾಜಿ ಅಧಿಕಾರಿ ಮತ್ತು ಮಾಜಿ ಕೇಂದ್ರ ಸಚಿವೆ ಮೀರಾ ಕುಮಾರ್ ಅವರು ಸಭಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದನ್ನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರತಿಪಕ್ಷದ ನಾಯಕ ಅಡ್ವಾಣಿ ಮತ್ತಿತರರು ಸ್ವಾಗತಿಸಿದರು.

2009: ಅರುಣ್ ಜೇಟ್ಲಿ ಅವರನ್ನು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಲೋಕಸಭೆಯಲ್ಲಿ ಪಕ್ಷದ ಉಪ ನಾಯಕರಾಗಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ನೇಮಿಸಿದರು. ಉಭಯ ಸದನಗಳಲ್ಲಿ ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಬಿಜೆಪಿ ಸಂಸದೀಯ ಪಕ್ಷವು ಲೋಕಸಭೆಯ ಪ್ರತಿಪಕ್ಷದ ನಾಯಕ ಅಡ್ವಾಣಿ ಅವರಿಗೆ  ಅಧಿಕಾರ ನೀಡಿತ್ತು. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕರಾಗಿ ಎಸ್.ಎಸ್. ಅಹ್ಲುವಾಲಿಯ, ಪಕ್ಷದ ಮುಖ್ಯ ಸಚೇತಕರಾಗಿ ಮಾಯಾ ಸಿಂಗ್ ಮತ್ತು  ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ರಮೇಶ್ ಅವರನ್ನು ನೇಮಿಸಲಾಯಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಈ ಸ್ಥಾನ ತೆರವಾಗಿತ್ತು.

2009: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಸತತವಾಗಿ ಎರಡನೇ ಬಾರಿಗೆ ವೈ.ಎಸ್. ರಾಜಶೇಖರ ರೆಡ್ಡಿ ಅವರು ಹೈದರಾಬಾದಿನಲ್ಲಿ ಅಧಿಕಾರ ವಹಿಸಿಕೊಂಡರು. ವೈಎಸ್‌ಆರ್ ಎಂದೇ ಖ್ಯಾತರಾದ ಅವರು ರಾಜ್ಯ ಸಚಿವಾಲಯಕ್ಕೆ ಆಗಮಿಸಿ ಅಧಿಕೃತವಾಗಿ ಮುಖ್ಯಮಂತ್ರಿ ಕಚೇರಿಯಲ್ಲಿ ಕಡತವೊಂದಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು.

2009: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಒತ್ತಡಕ್ಕೆ ಮಣಿದ ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯು ಕೊನೆಗೂ 'ಹಾಕಿ ಇಂಡಿಯಾ'ದ ಅಸ್ತಿತ್ವವನ್ನು ಅಧಿಕೃತವಾಗಿ ಘೋಷಿಸಿತು. ಭಾರತ ಪುರುಷ ಹಾಗೂ ಮಹಿಳಾ ಹಾಕಿ ಸಂಸ್ಥೆಗಳನ್ನು ಒಳಗೊಂಡಿರುವ 'ಹಾಕಿ ಇಂಡಿಯಾ'ವನ್ನು ಮೇ 20 ರಂದು ರಚಿಸಲಾಯಿತು ಎಂದು ಐಒಎ ಅಧ್ಯಕ್ಷ ಸುರೇಶ್ ಕಲ್ಮಾಡಿ ತಿಳಿಸಿದರು. 15 ದಿನಗಳ ಒಳಗಾಗಿ ಹಾಕಿ ಸಂಸ್ಥೆಯನ್ನು ರಚಿಸುವಂತೆ ಎಚ್ಚರಿಸಿ ಎಫ್‌ಐಎಚ್ ಮೇ 5 ರಂದು ಐಒಎಗೆ ಪತ್ರ ಬರೆದಿತ್ತು. ಭಾರತದಲ್ಲಿ ಎರಡು ಹಾಕಿ ಸಂಸ್ಥೆಗಳು ಅಸ್ತಿತ್ವದಲ್ಲಿರುವುದರ ಬಗ್ಗೆ ಎಫ್‌ಐಎಚ್ ಆತಂಕ ವ್ಯಕ್ತಪಡಿಸಿತ್ತು. ಮಾತ್ರವಲ್ಲ, ಹಾಕಿ ಸಂಸ್ಥೆಯನ್ನು ರಚಿಸದಿದ್ದರೆ ಮುಂದಿನ ವರ್ಷದ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಮತ್ತು ಎಫ್‌ಐಎಚ್ ನಡೆಸುವ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳಕಾದೀತು ಎಂದು ಎಚ್ಚರಿಸಿತ್ತು.

2009: ಬ್ರೆಜಿಲ್ ನ ಫೆರ್ನಾಂಡೊ ಡಿ ನೊರೊನಾ ಸಮೀಪದ ಅಟ್ಲಾಂಟಿಕ್ ಸಾಗರದಲ್ಲಿ ಐದು ಕಿ.ಮೀ ವ್ಯಾಪ್ತಿಯಲ್ಲಿ ಚದುರಿ ಬಿದ್ದ ಅವಶೇಷಗಳು 228 ಜನರನ್ನು ಬಲಿತೆಗೆದುಕೊಂಡ ನತದೃಷ್ಟ ಏರ್ ಫ್ರಾನ್ಸ್ ವಿಮಾನದ್ದೇ ಎಂಬುದನ್ನು ಬ್ರೆಜಿಲ್ ಮತ್ತು ಫ್ರಾನ್ಸ್ ದೇಶಗಳು ಖಚಿತಪಡಿಸಿದ್ದು, ಅವಶೇಷಗಳನ್ನು ಸಂಗ್ರಹಿಸುವ ಕಾರ್ಯ ಆರಂಭವಾಯಿತು. ಈ ವಿಷಯವನ್ನು ಬ್ರೆಜಿಲ್‌ನ ರಕ್ಷಣಾ ಸಚಿವ ನೆಲ್ಸನ್ ಜೊಬಿಮ್ ಅವರು ರಿಯೊ ಡಿ ಜನೈರೋದಲ್ಲಿ ಹಾಗೂ ಪ್ಯಾರಿಸ್‌ನಲ್ಲಿ ಹಿರಿಯ ಸೇನಾಧಿಕಾರಿ ಕ್ರಿಸ್ಟೋಫೆ ಪ್ರಝೂಕ್ ತಿಳಿಸಿದರು.

2009: ಎಲ್ಲ ವಯೋಮಾನದ ಆಕರ್ಷಣೆ ಮತ್ತು ಕುತೂಹಲದ ವಸ್ತುವಾಗಿರುವ ಮೊಬೈಲ್‌ಗಳ ರಿಂಗ್‌ಟೋನ್ ಗಮನ ಸೆಳೆಯುವುದರ ಜೊತೆಗೆ ಸ್ಮರಣ ಶಕ್ತಿಯನ್ನೂ ಕಡಿಮೆ ಮಾಡುತ್ತದೆ ಎಂಬ ಅಂಶವೊಂದು ಬೆಳಕಿಗೆ ಬಂತು. ಸೇಂಟ್‌ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಜಿಲ್ ಶೆಲ್ಟನ್ ನೇತೃತ್ವದಲ್ಲಿ ನಡೆದ ಸಂಶೋಧನೆ ಈ ವಿಷಯವನ್ನು ಬಹಿರಂಗಪಡಿಸಿತು. ಮೊಬೈಲ್‌ನ ತರೇಹವಾರಿ ರಿಂಗ್‌ಟೋನ್‌ಗಳು ತರಗತಿಗಳಲ್ಲಿ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಹೆಚ್ಚು ಸೆಳೆಯುತ್ತವೆ ಎಂಬುದನ್ನು ಇವರು ಪತ್ತೆ ಹಚ್ಚಿದರು. ಮೊಬೈಲ್‌ಗಳಲ್ಲಿ ಇಂದು ಜನಪ್ರಿಯ ಗೀತೆಗಳ ಸಾಲುಗಳನ್ನು ಕರೆಧ್ವನಿಯಾಗಿ ಬಳಸಲಾಗುತ್ತದೆ. ಇದಕ್ಕೆ ಕಿವಿಗೊಡುವವರ ಮೇಲೆ ಕ್ರಮೇಣ ನಕರಾತ್ಮಾಕ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ಅಧ್ಯಯನದಿಂದ ಕಂಡುಕೊಂಡರು. 'ರಿಂಗ್‌ಟೋನ್‌ನಿಂದ ಈ ರೀತಿಯ ತೊಂದರೆಯಾಗುವುದು ಸಾಮಾನ್ಯ ಎನಿಸಿದರೂ, ಜನ ಕ್ರಮೇಣ ತಾವು ಹೊಂದಿದ್ದ ಮಾಹಿತಿಯನ್ನು ಉಳಿಸಿಕೊಳ್ಳುವ ಶಕ್ತಿಯನ್ನೂ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ' ಎಂದು ಶೆಲ್ಟನ್ ಹೇಳುತ್ತಾರೆ. ಮನಃಶಾಸ್ತ್ರ ಪದವಿ ವಿದ್ಯಾರ್ಥಿಗಳ ಮೂಲಕ ಇವರ ಮಾಡಿದ ಅಧ್ಯಯನದ ಪ್ರಕಾರ, ಮೊಬೈಲ್ ರಿಂಗಣಿಸುವ ಪರಿಸರದ ನಡುವೆ ಇದ್ದವರು ಶೇ 25 ರಷ್ಟು ಕಡಿಮೆ ಅಂಕ ಪಡೆದಿದ್ದರು. 'ಬಹಳಷ್ಟು ಜನ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ರಿಂಗ್‌ಟೋನ್‌ಗಳಿಂದ ಏನು ಮಹಾ ತೊಂದರೆಯಾಗುತ್ತದೆ ಎಂದು ಅಂದುಕೊಂಡಿರುತ್ತಾರೆ. ಆದರೆ ಈ ಶಬ್ದ ನಿಜವಾಗಿಯೂ ಮನುಷ್ಯರ ಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ' ಎಂಬುದು ಶೆಲ್ಟನ್ ಅಭಿಪ್ರಾಯ.

2009: ವಿಶೇಷ ಆರ್ಥಿಕ ವಲಯಗಳ ರಚನೆಗೆ ಸಂಬಂಧಿಸಿದಂತೆ ಒಂಬತ್ತು ನೂತನ ಬೇಡಿಕೆಗಳಿಗೆ ಸರ್ಕಾರವು ಒಪ್ಪಿಗೆ ನೀಡಿತು. ಅದರಲ್ಲಿ ಹೆಚ್ಚಿನವು ಮಾಹಿತಿ ತಂತ್ರಜ್ಞಾನ ಮತ್ತು ಸರಕು ಆಧರಿತ ಸಾಫ್ಟ್‌ವೇರ್ (ಐಟಿಇಎಸ್). ನಂತರದ ಸ್ಥಾನ ಬಯೊಟೆಕ್ನಾಲಜಿಗೆ ಸೇರಿದವುಗಳು. ವಾಣಿಜ್ಯ ಸಚಿವಾಲಯದಲ್ಲಿನ ಅನುಮೋದನೆ ಮಂಡಳಿಯು ಗಲ್ಫ್ ಆಯಿಲ್ ಕಾರ್ಪೊರೇಷನ್, ಎಲ್ ಅಂಡ್ ಟಿ, ಎಂಎಂ ಟೆಕ್‌ಗಳಿಗೆ ಬೆಂಗಳೂರು, ಮುಂಬೈ ಹಾಗೂ ಚೆನಗಮನಾಡುಗಳಲ್ಲಿ  (ಕೇರಳ) ಐಟಿ/ಐಟಿಇಎಸ್ ತೆರಿಗೆ ಮುಕ್ತ ವಲಯಗಳನ್ನು ರಚಿಸಲು ಹಸಿರು ನಿಶಾನೆ ತೋರಿತು.

2008: ಮುಂದಿನ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಬಿಜೆಪಿಯು ರಾಷ್ಟ್ರೀಯ ಪ್ರಜಾತಾಂತ್ರಿಕ  ಮೈತ್ರಿಕೂಟ (ಎನ್ ಡಿ ಎ) ವಿಸ್ತರಣೆಯ ಕಾರ್ಯಾಚರಣೆ ಆರಂಭಿಸಿತು. ಆಡಳಿತಾರೂಢ ಯುಪಿಎ ಶೀಘ್ರವಾಗಿ  ತನ್ನ ರಾಜಕೀಯ  ವರ್ಷಸ್ಸು  ಕಳೆದುಕೊಳ್ಳುತ್ತಿರುವುದು ಎನ್ಡಿಎಗೆ ಅನುಕೂಲಕರ ಎಂದು ಅದು ಪ್ರತಿಪಾದಿಸಿತು. ಕರ್ನಾಟಕ ಮತ್ತು  ಗುಜರಾತ್  ಸೇರಿದಂತೆ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಮಾಡಿರುವ ಉತ್ತಮ ಸಾಧನೆ ಖಂಡಿತವಾಗಿ  ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು  ಮುಂಚೂಣಿಗೆ ತಂದು ನಿಲ್ಲಿಸಿದ್ದು, ಇದು ಹೆಚ್ಚು ಹೆಚ್ಚು  ಮಿತ್ರಪಕ್ಷಗಳನ್ನು ಆಕರ್ಷಿಸುವುದು ಎಂದು ಬಿಜೆಪಿ ಕಾರ್ಯಕಾರಿಣಿ ನಿರ್ಣಯವು ಭರವಸೆ ವ್ಯಕ್ತಪಡಿಸಿತು.

2008: ಮುದ್ರಣ ಉದ್ಯಮವು ಕಳೆದ ವರ್ಷ ಶೇಕಡಾ 16ರಷ್ಟು  ಬೆಳವಣಿಗೆ ದಾಖಲಿಸಿದ್ದು, ಮಾರುಕಟ್ಟೆಯು 14,900 ಕೋಟಿ ರೂಪಾಯಿಗಳಷ್ಟು  ವಹಿವಾಟು ನಡೆಸಿದೆ ಎಂದು ವಾರ್ತೆ ಮತ್ತು  ಪ್ರಸಾರ ಸಚಿವಾಲಯವು ತಿಳಿಸಿತು. ದೇಶಾದ್ಯಂತ ಸಾಕ್ಷರತೆ ಪ್ರಮಾಣ ಹೆಚ್ಚಿರುವುದು ಭವಿಷ್ಯದಲ್ಲಿ ಮುದ್ರಣ ಮಾಧ್ಯಮ ಇನ್ನಷ್ಟು  ಬೆಳವಣಿಗೆ ಸಾಧಿಸುವ ಅವಕಾಶಗಳನ್ನು  ಹುಟ್ಟು  ಹಾಕಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ  ಸಚಿ ಪಿ.ಆರ್. ದಾಸ್ ಮುನ್ಶಿ ಹೇಳಿದರು.

2008: ತಮ್ಮ ರಾಜಕೀಯ  ಗುರು ಕಾನ್ಶೀರಾಮ್ ಪ್ರತಿಮೆಯ ಪಕ್ಕದಲ್ಲಿ ತಾನು `ಕುಳ್ಳಿ'ಯಾಗಿ  ಕಾಣುತ್ತೇನೆ ಎಂಬ ಕಾರಣಕ್ಕಾಗಿ ಕೇವಲ ಎರಡೇ ತಿಂಗಳ ಹಿಂದೆ ಲಖನೌದಲ್ಲಿ ಅನಾವರಣಗೊಳಿಲಾಗಿದ್ದ ತಮ್ಮ ಪ್ರತಿಮೆಯನ್ನು  ಉತ್ತರ ಪ್ರದೇಶದ ಮುಖ್ಯಮಂತ್ರಿ  ಮಾಯಾವತಿ  ಕಿತ್ತು  ಹಾಕಿಸಿದರು. ಎರಡು ತಿಂಗಳ ಹಿಂದೆ ಅನಾವರಣಗೊಳಿಸಲಾಗಿದ್ದ ಪ್ರತಿಮೆಯನ್ನು  ಒಡೆದುಹಾಕಿ ಅದಕ್ಕಿಂತ ದೊಡ್ಡದಾದ ಪ್ರತಿಮೆ  ಸ್ಥಾಪಿಸುವ ಕಾರ್ಯ ಇಲ್ಲಿನ ಗಾಂಧಿ  ಸೇತುವಿನ ಸಾಮಾಜಿಕ ಪರಿವರ್ತನ್ ಪ್ರತೀಕ ಸ್ಥಳದಲ್ಲಿ ಹಿಂದಿನ ರಾತ್ರಿ  ಆರಂಭವಾಯಿತು. ಬಿಎಸ್ಪಿ  ಸ್ಥಾಪಕ ಕಾನ್ಶೀರಾಮ್ ಅವರ ಸನಿಹದಲ್ಲೇ ಸ್ಥಾಪಿಸಲಾಗಿದ್ದ ತಮ್ಮ ಪ್ರತಿಮೆಯನ್ನು  ಮಾಯಾವತಿ ಅವರು ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಅನಾವರಣಗೊಳಿಸಿದ್ದರು. ಗೋಮತಿ  ನದಿಯ ಕಡೆಗೆ ಮುಖಮಾಡಿರುವ  ಅಂಬೇಡ್ಕರ್ ಮತ್ತು  ಅವರ ಪತ್ನಿಯ ಪ್ರತಿಮೆಗಳನ್ನು ಕೂಡಾ ಇಲ್ಲಿ ಸ್ಥಾಪಿಸಲಾಗಿತ್ತು. ಇತರ ಎಲ್ಲಾ ಪ್ರತಿಮೆಗಳು 15 ಅಡಿ  ಎತ್ತರ ಹಾಗೂ 18 ಟನ್ ತೂಕವಿದ್ದರೆ, ಬಿಎಸ್ಪಿ  ಮುಖ್ಯಸ್ಥೆಯ ಪ್ರತಿಮೆ  12 ಅಡಿಗಳಷ್ಟು  ಮಾತ್ರ ಎತ್ತರವಿತ್ತು.

2008: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಸದನದಲ್ಲಿ ವಿಶ್ವಾಸಮತ ಕೋರಲು ಒಪ್ಪಿದ ಹಿನ್ನೆಲೆಯಲ್ಲಿ ಜೂನ್ 6ರಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ಸಮ್ಮತಿಸಿದರು.

2008: ಉತ್ತರ ಕರ್ನಾಟಕದ ವಿವಿಧೆಡೆ ಸಿಡಿಲು ಬಡಿದು 13 ಮಂದಿ ಮೃತರಾದರು. ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನಲ್ಲಿ ಐವರು, ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ಮೂವರು, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನಲ್ಲಿ ಇಬ್ಬರು, ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕು ಮರೂರು ಹಾಗೂ ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ದೇವನಕಟ್ಟಿ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಮುಠ್ಠಳ್ಳಿ ಎತ್ತಕಾಲ ಅಡವಿ ಎಂಬಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾದರು.

2008: ಗರ್ಭಿಣಿಯರು ನಳದ ನೀರನ್ನು ಕುಡಿಯುವುದರಿಂದ ಹಾಗೂ ಸ್ನಾನ ಮಾಡುವುದರಿಂದ ಅವರಿಗೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಹುಟ್ಟುವ ಮಗುವಿಗೆ ಬುದ್ಧಿಮಾಂದ್ಯತೆ ಉಂಟಾಗುವ ಅಪಾಯವೂ ಇದೆ ಎಂದು ಅಧ್ಯಯನವೊಂದು ಹೇಳಿತು. ಲಂಡನ್ನಿನ ನಿಯತಕಾಲಿಕವೊಂದರಲ್ಲಿ ಈ ಸಂಗತಿ ವರದಿಯಾಯಿತು. ನಲ್ಲಿ ನೀರಿನಲ್ಲಿ ಇರುವ ಕ್ಲೋರಿನ್ನಿನಂತಹ ರಾಸಾಯನಿಕ  ಪದಾರ್ಥಗಳು  ಹೃದಯದ ತೊಂದರೆಗೆ ಕಾರಣವಾಗುತ್ತವೆ.  ಇದರ ಪರಿಣಾಮವು  ಮೆದುಳು, ತಲೆಬುರುಡೆ ಹಾಗೂ ನೆತ್ತಿಯ ಮೇಲೂ ಉಂಟಾಗುತ್ತದೆ ಎಂದು ಅಧ್ಯಯನ ಹೇಳಿತು. ಭಾರಿ ಪ್ರಮಾಣದಲ್ಲಿ ಕ್ಲೋರಿನ್ ಹಾಕಿದ ನಲ್ಲಿ ನೀರು ಕುಡಿಯುವ ಪ್ರದೇಶಗಳಲ್ಲಿ ಹುಟ್ಟುವ ಮಕ್ಕಳಲ್ಲಿ ಹೃದಯ ತೊಂದರೆಗಳು ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚು. ಇಂಥ ಮಕ್ಕಳಲ್ಲಿ ಮೆದುಳಿನ ತೊಂದರೆಯೂ ಕಾಣಿಸಿಕೊಳ್ಳುತ್ತದೆ ಎಂದು  ತೈವಾನಿನಲ್ಲಿ ಸುಮಾರು 4,00,000 ಶಿಶುಗಳ ಮೇಲೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿತು. ನೀರು ಶುದ್ಧಿಗಾಗಿ ಬಳಸುವ ಕ್ಲೋರಿನ್ನಿನಿಂದ ಯಾವ ಕಾರಣಕ್ಕೆ ಇಂಥ  ತೊಂದರೆಗಳು ಉಂಟಾಗುತ್ತವೆ ಎನ್ನುವುದು ಬೆಳಕಿಗೆ ಬಂದಿಲ್ಲ ಎಂಬುದು ಈ ಅಧ್ಯಯನ ವರದಿಯನ್ನು ತಯಾರಿಸಿರುವ ಪ್ರೊ.ಜೌನಿ ಜಾಕ್ಕೊಲಾ ಹೇಳಿಕೆ. ಸಾರ್ವಜನಿಕರ ಆರೋಗ್ಯ ಸುಧಾರಣೆಯಲ್ಲಿ ಕ್ಲೋರಿನ್ ಯುಕ್ತ ನೀರು ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸುಷ್ಟಷ್ಟ.  ಹಾಗಾಗಿ ಕ್ಲೋರಿನ್ನಿನ ಅಡ್ಡ ಪರಿಣಾಮಗಳನ್ನು ಕಂಡು ಹಿಡಿಯುವ ದಿಸೆಯಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ ಎಂಬುದು ಅವರ ಅಭಿಮತ.

2008: ಜಪಾನಿನ ಬೃಹತ್ ಪ್ರಯೋಗಾಲಯವೊಂದನ್ನು ಹೊತ್ತು ಎರಡು ದಿನಗಳ ಹಿಂದೆ ಫ್ಲಾರಿಡಾದಿಂದ ಅಂತರಿಕ್ಷಕ್ಕೆ ನೆಗೆದಿದ್ದ `ಡಿಸ್ಕವರಿ' ಗಗನ ನೌಕೆಯು ಈದಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿತು. ದಕ್ಷಿಣ ಪೆಸಿಫಿಕ್ ಪ್ರದೇಶದಿಂದ 340 ಕಿ.ಮೀ. ಎತ್ತರದಲ್ಲಿ ನಿಲ್ದಾಣದ ಸಮೀಪಕ್ಕೆ ಬಂದ ಡಿಸ್ಕವರಿಯಿಂದ ಕಮಾಂಡರ್ ಮಾರ್ಕ್ ಕೆಲ್ಲಿ ಅವರನ್ನು ನಿಲ್ದಾಣದೊಳಕ್ಕೆ ಸೇರಿಸಲಾಯಿತು.

2008: ಬಾಂಗ್ಲಾದೇಶದಿಂದ ಗಡಿಪಾರು ಶಿಕ್ಷೆಗೆ ಒಳಗಾಗಿರುವ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್, ಮುಸ್ಲಿಂ ಭಯೋತ್ಪಾದಕರಿಂದ ಜೀವ ಬೇದರಿಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಇನ್ನೂ ಎರಡು ವರ್ಷಗಳ ಕಾಲ ಸ್ವೀಡನ್ನಿನಲ್ಲಿಯೇ ಇರಲು ಅವಕಾಶ ಮಾಡಿಕೊಡುವುದಾಗಿ ಸ್ಟಾಕ್ಹೋಮ್ನ ಲೇಖಕರ ಕ್ಲಬ್ ಹೇಳಿತು.

2008: ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಪಾಕಿಸ್ಥಾನ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಅವರನ್ನು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

2007: ಕೆಲ ಕಾಲದ ಅಜ್ಞಾತವಾಸದ ಬಳಿಕ ಶೃಂಗೇರಿಗೆ ಸಮೀಪದ ಗಂಡಘಟ್ಟಕ್ಕೆ ಲಗ್ಗೆ ಇಟ್ಟ ನಕ್ಸಲೀಯರು ಕೆಸಮುಡಿ ವೆಂಕಟೇಶ್ (45) ಎಂಬ ವರ್ತಕರ ಮನೆ ಮೇಲೆ ದಾಳಿ ಮಾಡಿ ಅವರನ್ನು ಹಿಗ್ಗಾಮುಗ್ಗ ಥಳಿಸಿ ಗುಂಡಿಟ್ಟು ಕೊಂದು ಹಾಕಿದರು.

2007: ಅಂತಾರಾಷ್ಟ್ರೀಯ ಸಂಸ್ಥೆ ಗೋಲ್ಡ್ ಕ್ವೆಸ್ಟ್ ಇಂಟರ್ ನ್ಯಾಷನಲ್ (ಕ್ವೆಸ್ಟ್ ನೆಟ್) ತಯಾರಿಸಿದ ವರನಟ ಡಾ. ರಾಜಕುಮಾರ್ ಅವರ ಭಾವಚಿತ್ರ ಇರುವ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಪಾರ್ವತಮ್ಮ ರಾಜಕುಮಾರ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ನಸುನಗುತ್ತಿರುವ ಡಾ. ರಾಜಕುಮಾರ್ ಭಾವಚಿತ್ರ ಇರುವ ಈ ನಾಣ್ಯಗಳಲ್ಲಿ ನೇತ್ರದಾನ ಮಾಡಿ' ಎಂಬ ಸಂದೇಶವಿದೆ. ಚಿನ್ನದ ಪದಕ 6 ಗ್ರಾಂ ತೂಕವಿದ್ದು, 26 ಮಿ.ಮೀ. ಸುತ್ತಳತೆ ಹೊಂದಿದೆ. ಪ್ರತಿಪದಕಕ್ಕೂ ಸಂಖ್ಯೆ ಇದೆ. ಬೆಳ್ಳಿ ಪದಕದ ತೂಕ ಒಂದು ಔನ್ಸ್ ಸುತ್ತಳತೆ 38.6 ಮಿ.ಮೀ. . ಎರಡೂ ಪದಕಗಳನ್ನು ಜರ್ಮನಿಯ ಬಿ.ಎಚ್. ಮಾಯರ್ ಹೆಸರಿನ ಟಂಕಸಾಲೆಗಳಲ್ಲಿ ತಯಾರಿಸಲಾಯಿತು.

2007: ನ್ಯೂಯಾರ್ಕಿನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಫೋಟಿಸುವ ವಿಧ್ವಂಸಕ ಕೃತ್ಯದ ಸಂಚನ್ನು ವಿಫಲಗೊಳಿಸಲಾಯಿತು.

2007: ದೇಶದಾದ್ಯಂತ ಲಕ್ಷಾಂತರ ರೈತರಿಗೆ ತಲೆನೋವಾದ `ಕಾಂಗ್ರೆಸ್ ಹುಲ್ಲು' ಈಗ ಗೊಬ್ಬರ ಎಂಬುದು ಸಾಬೀತಾಗಿದೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಮಹಾರಾಷ್ಟ್ರದ ಜೀವಶಾಸ್ತ್ರ ಅಧ್ಯಾಪಕಿ ಡಾ. ಗೌರಿ ಶ್ರೀಕೃಷ್ಣ ಕ್ಷೀರಸಾಗರ್ ವಾರ್ಧಾ ಜಿಲ್ಲೆಯ ಪಲ್ ಗಾಂವ್ ಪ್ರಥಮ ದರ್ಜೆ ಕಾಲೇಜಿನ ಕಾರ್ಮಿಕ ಶಿಬಿರದಲ್ಲಿ ಪ್ರಕಟಿಸಿದರು.

2006: ವಿಶ್ವ ವೃತ್ತಿಪರ ಬಿಲಿಯರ್ಡ್ ಚಾಂಪಿಯನ್ ಶಿಪ್ನಲ್ಲಿ ಅಮೋಘ ಜಯ ದಾಖಲಿಸುವ ಮೂಲಕ ಭಾರತದ ಗೀತ್ ಸೇಥಿ ಐದನೇ ಬಾರಿಗೆ ಈ ಕಿರೀಟವನ್ನು ಧರಿಸಿದರು. ಮುಂಬೈಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡಿನ ಲ್ಯಾಗನ್ ವಿರುದ್ಧ 1000 ಅಂಕಗಳ ಅಂತರದಿಂದ ಜಯಗಳಿಸುವ ಮೂಲಕ ಸೇಥಿ ಅವರು ಈ ಪ್ರಶಸ್ತಿಗೆ ಭಾಜನರಾದರು. 1998ರಲ್ಲಿ ಗೀತ್ ಸೇಥಿ ಅವರು ಕೊನೆಯ ಬಾರಿ ಈ ಪ್ರಶಸ್ತಿ ಗೆದ್ದಿದ್ದರು.

2006: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಮತ್ತು ಅವರ ಪತಿ ಆಸಿಫ್ ಅಲಿ ಜರ್ದಾರಿ ಅವರು ತಮ್ಮ ಆಸ್ತಿಯ ವಿವರದ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದರ ಸಂಬಂಧ ತನ್ನ ಸಮನ್ಸಿಗೆ ಉತ್ತರಿಸದ ಆರೋಪಕ್ಕಾಗಿ ಇಸ್ಲಾಮಾಬಾದಿನ ನ್ಯಾಯಾಲಯವೊಂದು ಬಂಧನದ ವಾರಂಟ್ ಹೊರಡಿಸಿತು. ಇಸ್ಲಾಮಾಬಾದಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಫೀ-ಉಲ್ ಜಮನ್ ಅವರು ನ್ಯಾಯಾಲಯದ ಸಮನ್ಸಿಗೆ ಪ್ರತಿಕ್ರಿಯೆ ವ್ಯಕ್ತಪಡಿಸದ ಬೆನಜೀರ್ ಮತ್ತು ಜರ್ದಾರಿ ಬಂಧನಕ್ಕೆ ಇಂಟರ್ ಪೋಲ್ ಪೊಲೀಸರನ್ನು ಸಂಪರ್ಕಿಸುವಂತೆ ಮತ್ತು ಈ ದಂಪತಿಯನ್ನು ಬಂಧಿಸಿ ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು. ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಅವರು ಮಾಜಿ ಪ್ರಧಾನಿ ಮತ್ತು ಪಾಕಿಸ್ಥಾನ ಮುಸ್ಲಿಂ ಲೀಗ್ ಅಧ್ಯಕ್ಷ ನವಾಜ್ ಷರೀಫ್ ಅವರನ್ನು ದುಬೈಯಲ್ಲಿ ಭೇಟಿಯಾದ ಮಾರನೇ ದಿನವೇ ಬಂಧನ ಆದೇಶ ಹೊರಬಿದ್ದಿತು.

1989: ಇರಾನಿನ ರಾಜಕೀಯ ಹಾಗೂ ಧಾರ್ಮಿಕ ನಾಯಕರಾಗಿದ್ದ ಅಯತೊಲ್ಲಾ ಖೊಮೇನಿ 89ನೇ ವಯಸ್ಸಿನಲ್ಲಿ ಮೃತರಾದರು. 1979ರಲ್ಲಿ ಇವರು ಮೊಹಮ್ಮದ್ ರೇಝಾ ಶಾ ಪಹ್ಲವಿಯವರನ್ನು ಪದಚ್ಯುತಗೊಳಿಸಿ ಇರಾನಿನ ಪರಮೋಚ್ಚ ನಾಯಕರಾದರು.

1966: ಪಾಕ್ ಕ್ರಿಕೆಟಿಗ ವಾಸಿಂ ಅಕ್ರಮ್ ಜನನ.

1965: ಬಾಹ್ಯಾಕಾಶದಲ್ಲಿ ನಡೆದಾಡಿದ ಮೊತ್ತ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಎಡ್ವರ್ಡ್ ಎಚ್. ವೈಟ್ ಪಾತ್ರರಾದರು. ಅವರು `ಜೆಮಿನಿ-4' ಬಾಹ್ಯಾಕಾಶ ನೌಕೆಯಿಂದ ಹೊರಕ್ಕೆ ಬಂದು 21 ನಿಮಿಷಗಳ ಕಾಲ ಗಗನದಲ್ಲಿ ನಡೆದಾಡಿದರು.

1931: ಪತ್ರಿಕೋದ್ಯಮಿ, ಸಾಹಿತಿ ಪರಮೇಶ್ವರ ಭಟ್ಟ (ಪ.ಸು. ಭಟ್ಟ) (3-6-1931ರಿಂದ 24-6-1981) ಅವರು ಸುಬ್ಬರಾಯ ಭಟ್ಟರು - ಸರಸ್ವತಿ ದಂಪತಿಯ ಪುತ್ರನಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆಯಲ್ಲಿ ಹುಟ್ಟಿದರು.

1930: ಜಾರ್ಜ್ ಫರ್ನಾಂಡಿಸ್ ಅವರು ಮಂಗಳೂರಿನಲ್ಲಿ ಈದಿನ ಜನಿಸಿದರು.

1924: ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಜನನ.

1916: ಧೋಂಡೋ ಕೇಶವ ಕರ್ವೆ ಅವರು ಪುಣೆಯಲ್ಲಿ ಭಾರತೀಯ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿಶ್ವ ವಿದ್ಯಾಲಯಕ್ಕೆ ವಿಪುಲ ನೆರವು ನೀಡಿದ ಕೈಗಾರಿಕೋದ್ಯಮಿ ಸರ್ ವಿಠ್ಠಲದಾಸ್ ಥ್ಯಾಕರ್ಸೆ ಅವರ ತಾಯಿಯ ನೆನಪಿಗಾಗಿ ಈ ವಿಶ್ವ ವಿದ್ಯಾಲಯಕ್ಕೆ ಶ್ರೀಮತಿ ನಾಥಿಬಾಯಿ ದಾಮೋದರ ಥ್ಯಾಕರ್ಸೆ ವಿಶ್ವ ವಿದ್ಯಾಲಯ ಎಂಬುದಾಗಿ ನಂತರ ನಾಮಕರಣ ಮಾಡಲಾಯಿತು.

1899: ಗಾಯಕ ಡಾ. ಬಿ. ದೇವೇಂದ್ರಪ್ಪ (3-6-1899ರಿಂದ 6-6-1986) ಅವರು ಚಿತ್ರದುರ್ಗದ ಮದಕರಿ ನಾಯಕನ ವಂಶಕ್ಕೆ ಸೇರಿದ ಸಂಗೀತ ಮತ್ತು ಭರತನಾಟ್ಯ ಪ್ರವೀಣ ಬಿ.ಎಸ್. ರಾಮಯ್ಯ- ತುಳಸಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಅಯನೂರು ಗ್ರಾಮದಲ್ಲಿ ಜನಿಸಿದರು.

1895: ಭಾರತೀಯ ರಾಜತಾಂತ್ರಿಕ ಕಾವಲಂ ಮಾಧವ ಪಣಿಕ್ಕರ್ (ಕೆ.ಎಂ. ಪಣಿಕ್ಕರ್)(1895-1963) ಜನ್ಮದಿನ.

1890: ಗಡಿನಾಡ ಗಾಂಧಿ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫಾರ್ ಖಾನ್ ಈದಿನ ಪೇಷಾವರದಲ್ಲಿ ಜನಿಸಿದರು. 1915ರಿಂದ 1918ರವರೆಗೆ ಗಡಿ ಭಾಗದ ಸಾವಿರಾರು ಹಳ್ಳಗಳನ್ನು ಸುತ್ತಿದ ಅವರು 1920ರಲ್ಲಿ `ಸರ್ವೆಂಟ್ಸ್ ಆಫ್ ಗಾಡ್' ಎಂಬ ಸಂಘಟನೆ ಸ್ಥಾಪಿಸಿದರು. ಇದು `ರೆಡ್ ಶರ್ಟ್ಸ್' ಎಂದೇ ಪ್ರಸಿದ್ಧಿ ಪಡೆದಿದೆ.

1865: ಯುನೈಟೆಡ್ ಕಿಂಗ್ ಡಮ್ಮಿನ ದೊರೆ ಐದನೇ ಜಾರ್ಜ್ (1865-1936) ಜನ್ಮದಿನ. ರಾಣಿ ಎರಡನೇ ಎಲಿಜಬೆತ್ ಳ ತಂದೆಯಾದ ಈತ ಯುನೈಟೆಡ್ ಕಿಂಗ್ಡಮ್ಮನ್ನು 1910ರಿಂದ 1936ರ ಅವಧಿಯಲ್ಲಿ ಆಳಿದ್ದ.

1761: ಹೆನ್ರಿ ಶ್ರಾಪ್ ನೆಲ್ (1761-1842) ಜನ್ಮದಿನ. ಇಂಗ್ಲಿಷ್ ಸೇನಾ ಅಧಿಕಾರಿಯಾದ ಈತ ಶ್ರಾಪ್ ನೆಲ್ ಶೆಲ್ ಹಾಗೂ ಶೆಲ್ ಭಾಗಗಳನ್ನು ಕಂಡು ಹಿಡಿದವ. ವೆಲಿಂಗ್ಟನ್ನಿನ ಡ್ಯೂಕ್ ಈ ಶೆಲ್ ಗಳನ್ನು ವಾಟರ್ಲೂ ಕದನದಲ್ಲಿ ನೆಪೋಲಿಯನ್ ವಿರುದ್ಧ ಬಳಸಿದ್ದ.

No comments:

Post a Comment