ನಾನು ಮೆಚ್ಚಿದ ವಾಟ್ಸಪ್

Thursday, January 30, 2020

ಇಂದಿನ ಇತಿಹಾಸ History Today ಜನವರಿ 29

2020: ನವದೆಹಲಿ: ಬಿಹಾರ ರಾಜ್ಯದ ಒಳಗೆ ಮತ್ತು ಹೊರಗೆ ಬಿಜೆಪಿ ಜೊತೆಗಿನ ಪಕ್ಷದ ಸಖ್ಯವನ್ನು ಖಚಿತ ಪಡಿಸುವ ಸ್ಪಷ್ಟ ಸೂಚನೆಯಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್  ನೇತೃತ್ವದ ಜನತಾದಳವು (ಯುನೈಟೆಡ್)  2020 ಜನವರಿ 29ರ ಬುಧವಾರ ಬಂಡಾಯ ನಾಯಕರಾದ ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿತು.  ಉಭಯ ನಾಯಕರು ಬಿಹಾರದ ಹೊರಗೆ ಬಿಜೆಪಿಯೊಂದಿಗಿನ ಜೆಡಿಯು ಮೈತ್ರಿ  ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಕುರಿತ ಪಕ್ಷದ ನಿಲುವನ್ನು ತೀವ್ರವಾಗಿ ಪ್ರಶ್ನಿಸಿದ್ದರು.  ಫೆಬ್ರುವರಿ ರಂದು ದೆಹಲಿಯಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ನಿತೀಶ್ ಕುಮಾರ್ ಅವರು ಕೇಂದ್ರ  ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಮತ್ತು ಮುಂದಿನ ವಾರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸುವ ನಿರೀಕ್ಷೆಯಿದೆ. ‘ಉಭಯ ಧುರೀಣರೂ ಪಕ್ಷದ ನಿರ್ಧಾರ ಮತ್ತು ಅದರ ಕಾರ್ಯವೈಖರಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇದು ಶಿಸ್ತಿನ ಉಲ್ಲಂಘನೆಯಾಗಿದೆ. ಪ್ರಶಾಂತ ಕಿಶೋರ್ ಅವರು ಬಿಹಾರ ಮುಖ್ಯಮಂತ್ರಿ ವಿರುದ್ಧ "ಅವಮಾನಕರ ಪದಗಳನ್ನು" ಬಳಸಿದ್ದಾರೆ ಎಂದು ಪಕ್ಷದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಹೊರಡಿಸಿದ ಜೆಡಿಯು ಹೇಳಿಕೆ ಆರೋಪಿಸಿದೆ. ‘ಇನ್ನಷ್ಟು ಕೀಳ್ಮಟ್ಟಕ್ಕೆ ಇಳಿಯದಂತೆ  ನೋಡಿಕೊಳ್ಳಲು ಕಿಶೋರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವುದು ಅನಿವಾರ್ಯವಾಗಿದೆಎಂದು ಜೆಡಿಯು ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಗರ್ಭಪಾತಕ್ಕೆ ಅನುಮತಿ ನೀಡುವ ಈಗಿನ ೨೦ ವಾರಗಳ ಗರಿಷ್ಠ ಮಿತಿಯನ್ನು 
೨೪  ವಾರಗಳಿಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು  2020 ಜನವರಿ 29ರ ಬುಧವಾರ  ಒಪ್ಪಿಗೆ ನೀಡಿತು. ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿಚಾರವನ್ನು ತಿಳಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರುಇದು ಮಹಿಳೆಯರಿಗೆ ತಮ್ಮ ದೇಹದ ಮೇಲೆ ಸಂತಾನೋತ್ಪತ್ತಿ ಹಕ್ಕುಗಳನ್ನು ನೀಡುವ "ಪ್ರಗತಿಪರ ಸುಧಾರಣೆ" ಎಂದು ಹೇಳಿದರು. ‘ಸಂತಾನೋತ್ಪತ್ತಿ ಸ್ವಾಯತ್ತತೆಯ ಹಕ್ಕು ಭ್ರೂಣದ ಜೀವವನ್ನು ರಕ್ಷಿಸುವ ರಾಜ್ಯದ ಆಸಕ್ತಿಯನ್ನು ಮೀರಿಸಲು ಸಾಧ್ಯವಿಲ್ಲ, ಆದ್ದರಿಂದ ೨೦ ವಾರಗಳ ಮಿತಿಯನ್ನು ಸಾರಾಸಗಟು ವಿಸ್ತರಿಸಲಾಗದುಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ತಿಳಿಸಿದ ಸುಮಾರು ನಾಲ್ಕು ತಿಂಗಳ ನಂತರ ಸುದ್ದಿ ಬಂದಿತು. "ಪ್ರಗತಿಪರ ಸುಧಾರಣೆ ಮತ್ತು ಮಹಿಳೆಯರಿಗೆ ಸಂತಾನೋತ್ಪತ್ತಿ ಹಕ್ಕುಗಳನ್ನು ನೀಡುವ ನಿಟ್ಟಿನಲ್ಲಿ, ವೈದ್ಯಕೀಯವಾಗಿ ಗರ್ಭಪಾತ ಮಾಡುವ ಅವಧಿಯನ್ನು ೨೦ ವಾರಗಳಿಂದ ೨೪ ವಾರಗಳಿಗೆ ಹೆಚ್ಚಿಸಲಾಗಿದೆ" ಎಂದು ಜಾವಡೇಕರ್ ಹೇಳಿದರು. ‘ಇದು ಸುರಕ್ಷಿತ ವೈದ್ಯಕೀಯ ಗರ್ಭಪಾತವನ್ನು ಖಚಿತಪಡಿಸುತ್ತದೆ ಮತ್ತು ಮಹಿಳೆಯರಿಗೆ ಅವರ ದೇಹದ ಮೇಲೆ ಸಂತಾನೋತ್ಪತ್ತಿ ಹಕ್ಕುಗಳನ್ನು ನೀಡುತ್ತದೆಎಂದು ಸಚಿವರು ನುಡಿದರು. "ಇದು ಬಹುಮುಖ್ಯವಾದ ವಿಷಯವಾಗಿದೆ. ಏಕೆಂದರೆ ಮೊದಲ ಐದು ತಿಂಗಳಲ್ಲಿ ಸಂಬಂಧಪಟ್ಟ ಹುಡುಗಿ ಪರಿಸ್ಥಿತಿ ಅರಿತುಕೊಳ್ಳದ ಮತ್ತು ನ್ಯಾಯಾಲಯಕ್ಕೆ ಹೋಗಬೇಕಾದ ಸಂದರ್ಭಗಳು ಇರುತ್ತವೆ" ಎಂದು ಸಚಿವರು ವಿವರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಕೇಂದ್ರ ಹಣಕಾಸು ಸಹಾಯಕ ಸಚಿವ ಅನುರಾಗ್ ಠಾಕೂರ್ ಮತ್ತು ದೆಹಲಿ ಸಂಸದ ಪರ್ವೇಶ್ ವರ್ಮಾ ಅವರನ್ನು ದೆಹಲಿ ಚುನಾವಣೆಯ ತಾರಾ ಪ್ರಚಾರಕರ ಪಟ್ಟಿಯಿಂದ ಕೈಬಿಡುವಂತೆ ಭಾರತೀಯ ಜನತಾ ಪಕ್ಷಕ್ಕೆ ಚುನಾವಣಾ ಆಯೋಗವು 2020 ಜನವರಿ 29ರ ಬುಧವಾರ  ಆದೇಶ ನೀಡಿತು. ಆದರೆ, ಚುನಾವಣಾ ಆಯೋಗದ ನಿರ್ದೇಶನವು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಿಂದ ಅವರನ್ನು ತಡೆಯುವುದಿಲ್ಲ ಎಂದು ದೆಹಲಿ ಬಿಜೆಪಿ ಮುಖಂಡರು ಸ್ಪಷ್ಟ ಪಡಿಸಿದರು.  ಚುನಾವಣಾ ಆಯೋಗವು ಇಬ್ಬರ ಹೆಸರನ್ನು ತಾರಾ ಪ್ರಚಾರಕರ ಪಟ್ಟಿಯಿಂದ ತೆಗೆದುಹಾಕುವಂತೆ ಪಕ್ಷಕ್ಕೆ ನಿರ್ದೇಶನ  ನೀಡಿದೆ. ಆದರೆ ಅವರು ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ" ಎಂದು ಚುನಾವಣಾ ಆಯೋಗವು ತನ್ನ ನಿರ್ಧಾರವನ್ನು ಘೋಷಿಸಿದ ಬೆನ್ನಲ್ಲೇ ಎಂದು ರಾಜ್ಯ ಬಿಜೆಪಿಯ ಮಾಧ್ಯಮ ಪ್ರಮುಖರಾದ ಅಶೋಕ್ ಗೋಯೆಲ್ ಹೇಳಿದರು.  ಚುನಾವಣಾ ಆಯೋಗವು ಪ್ರಚಾರವನ್ನು ನಿಲ್ಲಿಸುವಂತೆ ಸೂಚಿಸಿಲ್ಲವಾದ ಕಾರಣ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಅವರು ಪಕ್ಷದ ಪರ ಪ್ರಚಾರವನ್ನು ಮುಂದುವರಿಸಲಿದ್ದಾರೆ ಎಂದು ಅವರು ಒತ್ತಿ ಹೇಳಿದರು. ತಾರಾ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟದ್ದರಿಂದ ಪಕ್ಷದ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ಸ್ವಲ್ಪ ಹೊರೆಯಾಗಲಿದೆ.   ಏಕೆಂದರೆ ನಿಗದಿತ ತಾರಾ ಪ್ರಚಾರಕ ಮತ್ತು ಇತರ ಪ್ರಚಾರಕರ ನಡುವಿನ ವ್ಯತ್ಯಾಸವು ಮುಖ್ಯವಾಗಿ ಚುನಾವಣಾ ಲೆಕ್ಕಪತ್ರ ನಿರ್ವಹಣೆ ಮತ್ತು ಖರ್ಚು ಮೇಲ್ವಿಚಾರಣೆಯ ಅಂಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ, ಹೆಲಿಕಾಪ್ಟರ್ ಅಥವಾ ಇನ್ನಾವುದೇ ಮಾರ್ಗವನ್ನು ಬಳಸಿ ತಾರಾ ಪ್ರಚಾರಕರು ಮಾಡುವ ವೆಚ್ಚವನ್ನು ಆಯಾ ರಾಜಕೀಯ ಪಕ್ಷಗಳ ಖಾತೆಗೆ ಸೇರಿಸಲಾಗುತ್ತದೆ. ಇತರ ಪ್ರಚಾರಕರ ಪಯಣದ ವೆಚ್ಚವನ್ನು ಸಂಬಂಧಪಟ್ಟ ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುತ್ತದೆ. ಆತ ಅಥವಾ ಆಕೆ ೨೮ ಲಕ್ಷ ರೂ.ಗಿಂತ ವೆಚ್ಚ ಮಿತಿಯನ್ನು ಮೀರಿ ಖರ್ಚು ಮಾಡಿದ್ದಾರೆಯೇ ಎಂದು ಲೆಕ್ಕಹಾಕುವಾಗ ಇತರ ಇತರ ಪ್ರಚಾರಕರ ಖರ್ಚನ್ನು ಅಭ್ಯಥಿಗಳ: ವೆಚ್ಚಕ್ಕೆ ಸೇರಿಸಲಾಗುತ್ತದೆ. ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರ ವೆಚ್ಚಕ್ಕೆ ೨೮ ಲಕ್ಷ ರೂಪಾಯಿಗಳಿಗೆ ಮಿತಿಯನ್ನು ವಿಧಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಶಿಕ್ಷಿತರ ಗಲ್ಲು ಶಿಕ್ಷೆಯು ನಿಗದಿಯಂತೆ ಫೆಬ್ರುವರಿ ೧ರಂದು ಜಾರಿಯಾಗುವುದು ಅಸಂಭವ ಎನ್ನಲಾಗುತ್ತಿದೆ. ಇನ್ನಿಬ್ಬರು ಅಪರಾಧಿಗಳ ಪೈಕಿ ಒಬ್ಬ  ಅಪರಾಧಿ ಸುಪ್ರೀಂಕೋಟ್ ಮೆಟ್ಟಿಲೇರಿದ್ದರೆ, ಇನ್ನೊಬ್ಬ ರಾಷ್ಟ್ರಪತಿ ಭವನದ ಮೆಟ್ಟಿಲು ತುಳಿದಿರುವುದು  ಇದಕ್ಕೆ ಕಾರಣ ಎಂದು ಹೇಳಲಾಯಿತು. ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ತಪ್ಪಿತಸ್ಥ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್  2020 ಜನವರಿ 29ರ ಬುಧವಾರ ವಜಾಗೊಳಿಸಿದ ಬೆನ್ನಲ್ಲೇ, ಇನ್ನೊಬ್ಬ ಶಿಕ್ಷಿತ ಅಪರಾಧಿ ಅಕ್ಷಯ್ ಸಿಂಗ್ (೩೧) ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ  ಕ್ಯುರೇಟಿವ್ ಅರ್ಜಿ ಸಲ್ಲಿಸಿದರೆ, ವಿನಯ್ ಶರ್ಮ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ  ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಿದ.  ಕಳೆದ ತಿಂಗಳು ಆಕ್ಷಯ್ ಸಿಂಗ್ ಸಲ್ಲಿಸಿದ್ದ ಮರಣದಂಡನೆ ಪುನರ್ ಪರಿಶೀಲನಾ ಕೋರಿಕೆ ಅರ್ಜಿಯನ್ನು  ಸುಪ್ರೀಂಕೋರ್ಟ್ ತಿರಸ್ಕರಿಸಿತ್ತುಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ದೆಹಲಿ ಮಾಲಿನ್ಯ ಬಿಕಟ್ಟನ್ನು ಉಲ್ಲೇಖಿಸಿ ತನ್ನ ಮರಣದಂಡನೆಯನ್ನು ಜಾರಿಗೊಳಿಸಬಾರದು ಎಂಬ ವಿಚಿತ್ರ ವಾದವನ್ನು ಅಕ್ಷಯ್ ಸಿಂಗ್ ಸುಪ್ರೀಂಕೋರ್ಟಿನಲ್ಲಿ ಮಂಡಿಸಿದ್ದ. ಇದೀಗ ಅಕ್ಷಯ್ ಸಿಂಗ್ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯನ್ನು ನ್ಯಾಯಮೂರ್ತಿಗಳು ಮುಕ್ತ ನ್ಯಾಯಾಲಯದ ಬದಲು ತಮ್ಮ ಕೊಠಡಿಯಲ್ಲೇ ಆಲಿಸಲಿದ್ದಾರೆ. ಕ್ಯೂರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆಭಾರತದ ರಾಷ್ಟ್ರಪತಿಯವರು ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಮನಸ್ಸನ್ನು ಅನ್ವಯಿಸದೇ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ (೩೨) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು  ಈದಿನ ತಿರಸ್ಕರಿಸಿತು. ಈ ಮಧ್ಯೆ ಪ್ರಕರಣದ ಇನ್ನೋರ್ವ ಅಪರಾಧಿ ವಿನಯ್ ಶರ್ಮಾ ಮತ್ತೆ ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ  ಈದಿನ  ಅರ್ಜಿಯನ್ನು ಸಲ್ಲಿಸಿದ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಜನವರಿ29  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)



No comments:

Post a Comment