2020: ನವದೆಹಲಿ: ಅಳಿವಿನ ಅಂಚಿನಲ್ಲಿರುವ ಆಫ್ರಿಕಾದ ನಮೀಬಿಯಾ ದೇಶದಿಂದ ಚಿರತೆಗಳನ್ನು ಭಾರತದ ನಿರ್ದಿಷ್ಟ ಪ್ರದೇಶಗಳಲ್ಲಿ ತಂದು ಬಿಡಲು ಸುಪ್ರಿಂ ಕೋರ್ಟ್ 2020 ಜನವರಿ 28ರ ಮಂಗಳವಾರ ಅನುಮತಿ ನೀಡಿತು. ಈ ನಿರ್ದಿಷ್ಟ ತಳಿಯ ಚಿರತೆಯು ಅಳಿವಿನಂಚಿನಲ್ಲಿ ಇರುವುದರಿಂದ ಅದನ್ನು ಭಾರತದಲ್ಲಿ ತಂದು ಸಾಕಲು ಅನುಮತಿ ನೀಡಬೇಕೆಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಸಲ್ಲಿಸಿದ್ದ ಮನವಿಯ ಪರಿಶೀಲನೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಶರತ್ ಅರವಿಂಧ ಬೋಬ್ಡೆ ನೇತೃತ್ವದ ನ್ಯಾಯಪೀಠವು ಈ ಒಪ್ಪಿಗೆ ನೀಡಿತು. ಈ ಚಿರತೆಗಳ ಆಹಾರ ಕ್ರಮ, ಜೀವನ ಶೈಲಿಗಳನ್ನು ವಿವರವಾಗಿ ಅಧ್ಯಯನ ನಡೆಸಿದ ಬಳಿಕ ಇವುಗಳನ್ನು ಮಧ್ಯಪ್ರದೇಶದ ಕುನೋ ಉದ್ಯಾನದಲ್ಲಿ ಅಥವಾ ಅವುಗಳಿಗೆ ಸೂಕ್ತವೆನಿಸುವ ದೇಶದ ಯಾವುದೇ ಭಾಗದಲ್ಲಿ ಇರಿಸಬಹುದು ಎಂದು ನ್ಯಾಯಪೀಠವು ಸೂಚನೆ ನೀಡಿತು. ಪ್ರಾಯೋಗಿಕ ನೆಲೆಯಲ್ಲಿ ಆಫ್ರಿಕಾದ ಚಿರತೆಗಳನ್ನು ಭಾರತಕ್ಕೆ ತರಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ತಜ್ಞರ ಸಮಿತಿಯಿಂದ ಪ್ರತೀ ನಾಲ್ಕ ತಿಂಗಳಿಗೊಮ್ಮೆ ಪ್ರಗತಿ ವರದಿಯನ್ನು ತನಗೆ ಸಲ್ಲಿಸುವಂತೆಯೂ ನ್ಯಾಯಪೀಠ ಇದೇ ಸಂದರ್ಭದಲ್ಲಿ ಆದೇಶ ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ವಿಶ್ವಸಂಸ್ಥೆ: ಭಾರತದ ಪರಿಸರ ತಜ್ಞ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ
ರಾಯಭಾರಿ ಪವನ್ ಸುಖದೇವ್ ಅವರಿಗೆ 2020 ಜನವರಿ 28ರ ಮಂಗಳವಾರ ‘ಟೇಲರ್ ಪುರಸ್ಕಾರ’ ಪ್ರಕಟಿಸಲಾಯಿತು. ಅದನ್ನು ಪರಿಸರ ಸಂರಕ್ಷಣೆಗಾಗಿ ನೀಡಲಾಗುವ
ನೊಬೆಲ್ ಎಂದೇ ಪರಿಗಣಿಸಲಾಗುತ್ತದೆ. ‘ಹಸಿರು ಪರಿಸರ’ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಯಿತು. ಪವನ್ ಜತೆಗೆ ಜೀವ ವಿಜ್ಞಾನಿ
ಗ್ರೆಚೆಕನ್ ದೇವ್ ಅವರಿಗೂ ಈ ಪ್ರಶಸ್ತಿ ಲಭಿಸಿದೆ. ಪರಿಸರ ವಿನಾಶದಿಂದ ಆರ್ಥಿಕ ಕ್ಷೇತ್ರಕ್ಕೂ ಪ್ರತಿಕೂಲ
ಪರಿಣಾಮ ಉಂಟಾಗಲಿದೆ. ಈ ಬಗ್ಗೆ ರಾಜಕೀಯ ಮತ್ತು ಕಾರ್ಪೊರೇಟ್ ಕ್ಷೇತ್ರದ ನಾಯಕರು ಚಿಂತನೆ ನಡೆಸಬೇಕು
ಎಂದು ಅವರಿಬ್ಬರು ಸಲಹೆ ಮಾಡಿದ್ದಾರೆ. ಮೇ ೧ರಂದು ಅವರಿಬ್ಬರಿಗೆ ೨ ಲಕ್ಷ ಅಮೆರಿಕನ್ ಡಾಲರ್ ನಗದು,
ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)
2020: ನವದೆಹಲಿ:
ದೆಹಲಿಯಲ್ಲಿ
ನಡೆದ ಎರಡು ಚುನಾವಣಾ ಸಭೆಗಳಲ್ಲಿ ವಿವಾದಾತ್ಮಕ
ಹೇಳಿಕೆ ನೀಡಿದ್ದಕ್ಕಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಸಂಸತ್ ಸದಸ್ಯ ಪರ್ವೇಶ್ ವರ್ಮಾ ಅವರಿಗೆ ಚುನಾವಣಾ ಆಯೋಗವು 2020 ಜನವರಿ 28ರ ಮಂಗಳವಾರ ನೋಟಿಸ್ ನೀಡಿತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ "ಗೋಲಿ ಮಾರೊ" - ಅಥವಾ ’ದೇಶದ್ರೋಹಿಗಳಿಗೆ ಗುಂಡಿಕ್ಕಿ’
ಎಂಬುದಾಗಿ ಚುನಾವಣಾ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವ ಠಾಕೂರ್ ಅವರಿಗೆ ನೋಟಿಸ್ ನೀಡಲಾಗಿದ್ದು, 2020 ಜನವರಿ 30ರ ಗುರುವಾರ ಮಧ್ಯಾಹ್ನದೊಳಗೆ ಉತ್ತರ ನೀಡುವಂತೆ
ನಿರ್ದೇಶಿಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದ ಕೇಂದ್ರ ಹಣಕಾಸು ಸಹಾಯಕ ಸಚಿವ ಠಾಕೂರ್ ಮತ್ತು ಸಂಸದ ಪರ್ವೇಶ್ ವರ್ಮಾ ಅವರು ಬಳಸಿದ ’ಪ್ರಚೋದನಕಾರಿ’ ಭಾಷೆಯ
ಕುರಿತು ಚುನಾವಣಾ ಆಯೋಗಕ್ಕೆ ಹಿಂದಿನ
ದಿನ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ವರದಿ ಸಲ್ಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ವಾಯವ್ಯ ದೆಹಲಿಯ ರಿಥಾಲಾದಲ್ಲಿ ಬಿಜೆಪಿ ಅಭ್ಯರ್ಥಿ ಮನೀಶ್ ಚೌಧರಿ ಪರ ಪ್ರಚಾರ ನಡೆಸುತ್ತಿದ್ದಾಗ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರ
ವಿರುದ್ಧ ವಾಗ್ದಾಳಿ ನಡೆಸಿದ ನಂತರ ಠಾಕೂರ್
ಅವರು ’ಗುಂಡು ಹಾರಿಸಿ’ ಘೋಷಣೆ
ಕೂಗಿದ್ದರು ಎನ್ನಲಾಗಿದೆ. ಠಾಕೂರ್ ಅವರು ಜನರನ್ನು ಪ್ರಚೋದಿಸಲು "ದೇಶ್ ಕೆ ಗದ್ದಾರೋಂ ಕೋ
..." ಎಂಬುದಾಗಿ ಕೂಗಿದ್ದು ಮತ್ತು ಜನ ಸಮುದಾಯವು "... ಗೋಲಿ
ಮಾರೊ ಸಾ *** ನ್ ಕೊ"
("ದೇಶಕ್ಕೆ ದ್ರೋಹ ಮಾಡುವ ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂಬುದಾಗಿ ಪ್ರತಿಕ್ರಿಯಿಸಿದ್ದು ವಿಡಿಯೋದಲ್ಲಿ ದಾಖಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಪಾಟ್ನಾ:
ನಾಲ್ಕು ದಿನಗಳ ತೀವ್ರ ಶೋಧದ ಬಳಿಕ ಬಿಹಾರದ ಜೆಹಾನಾಬಾದ್ನಲ್ಲಿ ಜೆಎನ್ಯು ಸಂಶೋಧನಾ ವಿದ್ಯಾರ್ಥಿ
ಮತ್ತು ಕಾರ್ಯಕರ್ತ ಶಾರ್ಜೀಲ್ ಇಮಾಮ್ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ದೆಹಲಿ ಪೊಲೀಸ್ ಅಪರಾಧ ವಿಭಾಗವು 2020 ಜನವರಿ
28ರ ಮಂಗಳವಾರ ಬಂಧಿಸಿತು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಶಹೀನ್ ಬಾಗ್ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರೀ ಭಾಷಣ ಮಾಡಿದ್ದಕ್ಕಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಐತಿಹಾಸಿಕ ಅಧ್ಯಯನ ಕೇಂದ್ರದ ಪಿಎಚ್ಡಿ ವಿದ್ಯಾರ್ಥಿ ಇಮಾಮ್
ವಿರುದ್ಧ ಹಲವಾರು ರಾಜ್ಯಗಳು ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿದ್ದವು. "ನಾವು ಜೆಹಾನಾಬಾದ್ನಿಂದ ಶಾರ್ಜೀಲ್ ಇಮಾಮ್ನನ್ನು ಬಂಧಿಸಿದ್ದೇವೆ" ಎಂದು ದೆಹಲಿ ಅಪರಾಧ ವಿಭಾಗದ ಪೊಲೀಸ್ ಪೊಲೀಸ್ ಆಯುಕ್ತ ರಾಜೇಶ್ ಡಿಯೋ ಹೇಳಿದರು. ಮುಂಬೈ,
ಪಾಟ್ನಾ ಮತ್ತು ದೆಹಲಿಯಲ್ಲಿ ದಾಳಿ ನಡೆಸಿದ ದೆಹಲಿ ಪೊಲೀಸರು ಬಿಹಾರದ ನಿವಾಸಿ ಇಮಾಮ್ ಪತ್ತೆ ಹಚ್ಚಲು ಐದು ತಂಡಗಳನ್ನು ನಿಯೋಜಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
೨೦೧೨ರ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾಗಿರುವ ಮುಕೇಶ್ ಸಿಂಗ್, ಸೆರೆಮನೆಯಲ್ಲಿ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆದಿದೆ ಎಂದು ಮಂಗಳವಾರ ಸುಪ್ರೀಂಕೋರ್ಟಿಗೆ ತಿಳಿಸಿದ್ದು, ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿದ ಆತನ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು 2020 ಜನವರಿ 29ರ ಬುಧವಾರ
ತನ್ನ ತೀರ್ಪು ನೀಡಲಿದೆ. ವಿಚಾರಣಾ ನ್ಯಾಯಾಲಯದ ತೀರ್ಪು ಸೇರಿದಂತೆ ದಾಖಲೆಗಳನ್ನು ನೋಡುವ ಅವಕಾಶವನ್ನು ರಾಷ್ಟ್ರಪತಿ ಭವನಕ್ಕೆ ನಿರಾಕರಿಸಿದ ಹಾಗೂ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ ರಾಷ್ಟ್ರಪತಿಯವರ ಕ್ರಮ ನಿರಂಕುಶವಾದದ್ದು’ ಎಂಬುದಾಗಿ ಮುಕೇಶ್ ಸಿಂಗ್ 2020 ಜನವರಿ
28ರ ಮಂಗಳವಾರ ಸುಪ್ರಿಂಕೋರ್ಟಿನಲ್ಲಿ ಪ್ರತಿಪಾದಿಸಿದ. ನ್ಯಾಯಮೂರ್ತಿ ಆರ್. ಭಾನುಮತಿ
ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ಮುಂದೆ ಮುಕೇಶ್ ಸಿಂಗ್ ಪರವಾಗಿ ಹಾಜರಾದ ಹಿರಿಯ ವಕೀಲರರಾದ ಅಂಜನಾ ಪ್ರಕಾಶ್ ಅವರ ವಾದ ಮಂಡನೆಯ ಬಳಿಕ ಪೀಠವು ತನ್ನ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿತು. ಮುಕೇಶ್ ಸಿಂಗ್ ಮತ್ತು ಆತನ ಇತರ ಮೂವರು ಸಹಚರರಿಗೆ, ೨೦೧೨ರಲ್ಲಿ ದೆಹಲಿಯ ಚಲಿಸುವ ಬಸ್ಸಿನಲ್ಲಿ ೧೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ತಿಂಗಳ ಆದಿಯಲ್ಲಿ
ದೆಹಲಿ ನ್ಯಾಯಾಲಯವು ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ಫೆಬ್ರುವರಿ ೧ರಂದು ಗಲ್ಲಿಗೇರಿಸುವಂತೆ ಆಜ್ಞಾಪಿಸಿ ಡೆತ್ ವಾರಂಟ್ ಹೊರಡಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಸಿಂಧ್ ಪ್ರಾಂತ್ಯದಲ್ಲಿ ಮದುವೆ ಮಂಟಪದಿಂದ ಹಿಂದೂ ವಧುವನ್ನು ಅಪಹರಿಸಿ, ಮತಾಂತರ ಮಾಡಿ ಮುಸ್ಲಿಮ್ ಪುರುಷನ ಜೊತೆಗೆ ಬಲಾತ್ಕಾರದ ಮದುವೆ ಮಾಡಿಸಿದ ಘಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಹೈಕಮೀಷನ್ ಅಧಿಕಾರಿಯನ್ನು 2020 ಜನವರಿ
28ರ ಮಂಗಳವಾರ ಬುಲಾವ್ ನೀಡಿ ಕರೆಸಿಕೊಂಡ ಭಾರತ ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿತು. ೨೪ರ
ಹರೆಯದ ಹಿಂದೂ ಯುವತಿ ಭಾರತಿ ಬಾಯಿಯ ಕುಟುಂಬವು ಭಾರತಿ ಬಾಯಿಯನ್ನು ಅಪರಿಚಿತ ವ್ಯಕ್ತಿಗಳು ಮದುವೆ ಮಂಟಪದಿಂದ ಅಪಹರಿಸಿರುವುದಾಗಿಯೂ, ಈ ಕೃತ್ಯಕ್ಕೆ ಪೊಲೀಸರೇ
ನೆರವಾದರು ಎಂದು ಆಪಾದಿಸಿತ್ತು. ಆಕೆಯನ್ನು ಕಳೆದ ಡಿಸೆಂಬರಿನಲ್ಲಿ ಇಸ್ಲಾಮಿಗೆ ಮತಾಂತರಿಸಲಾಗಿದ್ದು ತಾನು ಮದುವೆಯಾಗಿರುವುದಾಗಿ ಮುಸ್ಲಿಮ್ ಪುರುಷನೊಬ್ಬ ಪ್ರತಿಪಾದಿಸಿದ್ದ. ಅಲ್ಪಸಂಖ್ಯಾತ
ಹಿಂದೂ ಸಮುದಾಯ ಸೇರಿದಂತೆ ತನ್ನ ನಾಗರಿಕರ ಭದ್ರತೆ, ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಹಿಂದೂ ವಧು ಅಪಹರಣದ ಘಟನೆಯಂತಹ ಹೀನ ಕೃತ್ಯದ ಬಗ್ಗೆ ತನಿಖೆ ನಡೆಸುವಂತೆ ಭಾರತವು ಪಾಕಿಸ್ತಾನ
ಸರ್ಕಾರವನ್ನು ಆಗ್ರಹಿಸಿತು. ಇಂತಹ ಖಂಡನಾರ್ಹ ಘೋರ ಕೃತ್ಯಗಳಲ್ಲಿ ಶಾಮೀಲಾದ ದುಷ್ಕರ್ಮಿಗಳನ್ನು ತ್ವರಿತವಾಗಿ ನ್ಯಾಯದ ಕಟಕಟೆಗೆ ತರಲು
ತತ್ ಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅದು ಪಾಕಿಸ್ತಾನವನ್ನು ಒತ್ತಾಯಿಸಿತು. "ಭಾರತವು ಪಾಕಿಸ್ತಾನ ಹೈಕಮಿಷನ್ನ ಹಿರಿಯ ಅಧಿಕಾರಿಯನ್ನು
ಕರೆದು ಜನವರಿ ೨೫ ರಂದು ಸಿಂಧ್
ಪ್ರಾಂತ್ಯದ ಹಲಾ ನಗರದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಹಿಂದೂ ಅಲ್ಪಸಂಖ್ಯಾತ ಬಾಲಕಿಯನ್ನು ಮದುವೆ ಮಂಟಪದಿಂದ ಅಪಹರಿಸಿದ ಪ್ರಕರಣ ವಿರುದ್ಧ ಪ್ರಬಲ ಪ್ರತಿಭಟನೆ ವ್ಯಕ್ತ ಪಡಿಸಿತು ಎಂದು ಅಧಿಕೃತ ಮೂಲಗಳು ತಿಳಿಸಿದವು. ಜನವರಿ ೨೬ ರಂದು ಸಿಂಧ್
ಪ್ರಾಂತ್ಯದ ಥಾರ್ಪಾರ್ಕರ್ನಲ್ಲಿರುವ ಮಾತಾ ರಾಣಿ ಭಾಟಿಯಾನಿ ದೇವಾಲಯವನ್ನು ಅಪವಿತ್ರಗೊಳಿಸಿದ ಪ್ರಕರಣದ ಬಗೆಗೂ ಭಾರತವು ತೀವ್ರ ಪ್ರತಿಭಟನೆಯನ್ನು ವ್ಯಕ್ತ ಪಡಿಸಿತು. (ವಿವರಗಳಿಗಾಗಿಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment