2020: ನವದೆಹಲಿ: ದೇಶದ
ಎರಡನೇ ಅತ್ಯುನ್ನತ ಪ್ರಶಸ್ತಿ ಎಂದು ಕರೆಸಿಕೊಂಡಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು ಈ ಬಾರಿ ಏಳು
ಮಂದಿಗೆ ನೀಡಲಾಗಿದ್ದು, ಕೇಂದ್ರದ ಮಾಜಿ ಸಚಿವರಾದ ದಿವಂಗತ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಜಾರ್ಜ್ ಫರ್ನಾಂಡಿಸ್ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದ ಸ್ವಾಮೀಜಿ ಅವರಿಗೆ ಪ್ರಸಕ್ತ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಕಟಿಸಲಾಯಿತು. ಮನೋಹರ್ ಪರಿಕ್ಕರ್ ಅವರಿಗೂ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಗಣರಾಜ್ಯೋತ್ಸವದ ಮುನ್ನಾದಿನವಾದ 2020 ಜನವರಿ 25ರ ಶನಿವಾರ
ರಾತ್ರಿ ಕೇಂದ್ರವು
ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಜಾರ್ಜ್ ಫರ್ನಾಂಡಿಸ್ ಮತ್ತು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ ಅವರಿಗೆ
ಮರಣೋತ್ತರ ಪ್ರಶಸ್ತಿ ಸೇರಿದಂತೆ ಒಟ್ಟು ೭ ಮಂದಿಗೆ ಪದ್ಮವಿಭೂಷಣ
ಪ್ರಶಸ್ತಿಯನ್ನು ಪ್ರಕಟಿಸಿತು. ಪದ್ಮವಿಭೂಷಣ
ಪ್ರಶಸ್ತಿ ಪುರಸ್ಕೃತರಲ್ಲಿ ಮಾರಿಷಸ್ ಮಾಜಿ ಪ್ರದಾನಿ ಸರ್ ಅನಿರುದ್ಧ ಜಗನ್ನಾಥ್, ಮಹಿಳಾ ಬಾಕ್ಸರ್ ಚಾಂಪಿಯನ್ ಎಂ.ಸಿ. ಮೇರಿಕೋಮ್
(ಮಣಿಪುರ), ಶಾಸ್ತ್ರೀಯ ಗಾಯಕ ಪಂಡಿತ್ ಶ್ರೀ ಚನ್ನೂಲಾಲ್ ಮಿಶ್ರ (ಉತ್ತರಪ್ರದೇಶ) ಅವರೂ ಸೇರಿದ್ದಾರೆ. ಮನೋಹರ
ಪರಿಕ್ಕರ್ ಅವರಿಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ೧೬
ಮಂದಿಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಸರ್ಕಾರ ಪ್ರಕಟಿಸಿತು. ಸಿಂಧು ಅವರಿಗೂ ಪದ್ಮಭೂಷಣ
ಪ್ರಶಸ್ತಿ ಲಭಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ನವದೆಹಲಿ:
೭೧ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಆರು ಮಂದಿ ಸೇನಾ ಯೋಧರಿಗೆ ಶೌರ್ಯ ಚಕ್ರ ಪ್ರಶಸ್ತಿ ಭಾಜನರಾದವರ ಹೆಸರನ್ನು ಕೇಂದ್ರ ಸರ್ಕಾರ 2020 ಜನವರಿ 25ರ ಶನಿವಾರ ಪ್ರಕಟಿಸಿತು. ಲೆಫ್ಟಿನೆಂಟ್ ಕರ್ನಲ್ ಜ್ಯೋತಿ ಲಾಮಾ, ಮೇಜರ್ ಬಿಜೇಂದ್ರ ಸಿಂಗ್, ನಯಿಬ್ ಸುಬೇದಾರ್ ನರೇಂದ್ರ ಸಿಂಗ್, ಲೇಟ್ ನಯಿಬ್ ಸುಬೇದಾರ್ ನಾಯಕ್ ನರೇಶ್ ಕುಮಾ, ಕರ್ಮಾಡೆಯೋ ಸೇರಿದಂತೆ ಆರು ಯೋಧರು ಶೌರ್ಯ ಪ್ರಶಸ್ತಿ ಪಡೆಯಲಿದ್ದಾರೆ ಎಂದು ವರದಿ ತಿಳಿಸಿತು. ಈ ಬಾರಿ ಗಣರಾಜ್ಯೋತ್ಸವದಲ್ಲಿ
ಹತ್ತು ಪರಮ ವಿಶಿಷ್ಟ ಸೇವಾ ಪದಕ, ೩೨ ಅತಿ ವಿಶಿಷ್ಟ
ಸೇವಾ ಪದಕ, ೮ ಯುದಾ ಸೇವಾ
ಪದಕ (ವೈಎಸ್ ಎಂ) ಸೇರಿದಂತೆ ಒಟ್ಟು ೧೫೧ ಸೇನಾ ಪದಕಗಳನ್ನು ಕೇಂದ್ರ ಸರ್ಕಾರ ಘೋಷಿಸಿತು. ಲೆಫ್ಟಿನೆಂಟ್ ಕರ್ನಲ್ ಜ್ಯೋತಿ ಲಾಮಾ ಅವರನ್ನು ಮಣಿಪುರದಲ್ಲಿ ಗುಪ್ತಚರ ಸಂಪರ್ಕದ ಮೂಲಕ ಹದಿನಾಲ್ಕು ಉಗ್ರರನ್ನು ಸೆರೆಹಿಡಿಯಲು ಅಭೂತಪೂರ್ವ ಯೋಜನೆ ರೂಪಿಸಿದ್ದಕ್ಕಾಗಿ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಿಜೇಂದ್ರ ಸಿಂಗ್ ಅವರಿಗೆ ಸಂಚನ್ನು ಬೇಧಿಸುವ ತಂತ್ರಗಾರಿಕೆ, ಕಾರ್ಯನಿರ್ವಹಣೆ ಹಾಗೂ ಧೈರ್ಯಕ್ಕಾಗಿ ಶೌರ್ಯ ಪ್ರಶಸ್ತಿ ನೀಡಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮೂಲದ ಮೂವರು ಮಕ್ಕಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ೪೯ ಮಕ್ಕಳಿಗೆ ’ಬಾಲ
ಶಕ್ತಿ ಪುರಸ್ಕಾರ’
೨೦೨೦ ಪ್ರಶಸ್ತಿಯನ್ನು 2020 ಜನವರಿ 25ರ ಶನಿವಾರ ಪ್ರದಾನ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಾಲಕಿ ಮೂರ್ಜೆ ಸುನಿತಾ ಪ್ರಭು ಶೈಕ್ಷಣಿಕ, ಬೆಂಗಳೂರಿನ ಪ್ರಗುನ್ ಪುದುಕೊಳಿ ಕಲೆ ಮತ್ತು ಸಂಸ್ಕೃತಿ ಮತ್ತು ಬೆಂಗಳೂರಿನ ಯಶ್ ಆರಾಧ್ಯಾ ಕ್ರೀಡಾ ವಿಭಾಗದಲ್ಲಿ ಪುರಸ್ಕಾರಕ್ಕೆ ಪಾತ್ರರಾದರು. ಪ್ರಧಾನ ಮಂತ್ರಿ ಬಾಲ ಶಕ್ತಿ ಪುರಸ್ಕಾರ ಪಡೆದ ಮಕ್ಕಳೊಂದಿಗೆ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ ನರೇಂದ್ರ ಮೋದಿ, ಇಂತಹ ಪ್ರತಿಭೆಗಳಿಂದ ನಾನು ಸ್ಫೂರ್ತಿ ಮತ್ತು ಶಕ್ತಿಯನ್ನು ಪಡೆಯುತ್ತೇನೆ. ಸಮಾಜ ಮತ್ತು ರಾಷ್ಟ್ರದ ಬಗೆಗಿನ ತಮ್ಮ ಕರ್ತವ್ಯದ ಅರಿವನ್ನು ಹೊಂದಿರುವ ಮಕ್ಕಳನ್ನು ನೋಡಿ ಹೆಮ್ಮೆ ಪಡುತ್ತೇನೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ನವದೆಹಲಿ:
ಗಣರಾಜ್ಯೋತ್ಸವದ ಮುನ್ನಾದಿನ 2020 ಜನವರಿ 25ರ ಶನಿವಾರ ರಾತ್ರಿ ರಾಷ್ಟ್ರವನ್ನು
ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ ಮತ್ತು ವೈವಿಧ್ಯತೆಗೆ ಒತ್ತು ನೀಡುವಂತೆ ಜನತೆಗೆ ಕರೆ ನೀಡಿದರು. ಸಾಮೂಹಿಕ ಭವಿಷ್ಯವನ್ನು ನಿರ್ಧರಿಸುವಲ್ಲಿ ಭಾರತೀಯ ನಾಗರಿಕರ ಸಾಮುದಾಯಿಕ ಶಕ್ತಿಯೇ ಮಹತ್ವವಾದದ್ದು ಎಂದು ಕೋವಿಂದ್ ಹೇಳಿದರು. ಶಾಸಕಾಂಗ,
ಕಾರ್‍ಯಾಂಗ ಮತ್ತು ನ್ಯಾಯಾಂಗ ರಾಷ್ಟ್ರದ ಮೂರು ಪ್ರಮುಖ ಅಂಗಗಳು. ಆದರೆ ಮೂಲತಃ ಜನರೇ ರಾಷ್ಟ್ರ. ನಾವು ಪ್ರಜಾತಾಂತ್ರಿಕ ಮೌಲ್ಯಗಳಾದ ಸಮಾನತೆ ಮತ್ತು ವೈವಿಧ್ಯತೆಯನ್ನು ಉಳಿಸಿಕೊಳ್ಳುವ ನಿಲುವನ್ನು ದೃಢವಾಗಿ ತಾಳಬೇಕು ಎಂದು ಅವರು ನುಡಿದರು. ರಾಷ್ಟ್ರ ನಿರ್ಮಾಣಕ್ಕೆ ಮಹಾತ್ಮ ಗಾಂಧಿಯವರ ತತ್ವಗಳನ್ನು ಮುನ್ನಡೆಸಿಕೊಂಡು ಹೋಗಬೇಕಾದದು ಅತ್ಯಂತ ಮಹತ್ವ.
ವಾಸ್ತವವಾಗಿ ಅವು ಈಗ ಇನ್ನೂ ಹೆಚ್ಚು
ಮಹತ್ವವನ್ನು ಗಳಿಸಿವೆ ಎಂದು ರಾಷ್ಟ್ರಪತಿ ನುಡಿದರು. ಆರೋಗ್ಯ, ಶಿಕ್ಷಣ ಎಲ್ಲರಿಗೂ ಲಭಿಸಬೇಕು. ಉತ್ತಮ ಆಡಳಿತದ ಅಡಿಪಾಯ ಎಂಬುದಾಗಿ ಇವು ಪರಿಗಣಿತವಾಗಿವೆ. ಈ ಎರಡೂ ರಂಗಗಳಲ್ಲಿ
ಕಳೆದ ೭೦ ವರ್ಷಗಳಲ್ಲಿ ನಾವು
ಸುದೀರ್ಘ ಪಯಣ ನಡೆಸಿದ್ದೇವೆ. ನಮ್ಮ ಯುವಕರಿಗೆ ರಾಷ್ಟ್ರವು ಯಾವಾಗಲೂ ಪ್ರಥಮವಾಗಬೇಕು. ಅವರ ಮೂಲಕವೇ ನೂತನ ಭಾರತ ಉದಯಿಸುವುದನ್ನು ನಾವು ಕಾಣುತ್ತಿದ್ದೇವೆ’ ಎಂದು
ಕೋವಿಂದ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ಬೀಜಿಂಗ್:
ನೂತನ ಕೊರೋನಾವೈರಸ್ ವ್ಯಾಧಿ ಮೊತ್ತ ಮೊದಲಿಗೆ ಕಾಣಿಸಿಕೊಂಡಿರುವ ಹಾಗೂ ರೋಗವನ್ನು ವ್ಯಾಪಿಸದಂತೆ ತಡೆಯುವ ಸಲುವಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ಸಂಚಾರ ದಿಗ್ಬಂಧನಕ್ಕೆ ಒಳಗಾಗಿರುವ ವುಹಾನ್ ನಗರವನ್ನು ತ್ಯಜಿಸಲು ಅಲ್ಲಿ ಉಳಿದಿರುವ ಭಾರತೀಯರಿಗೆ ಅವಕಾಶ ಕಲ್ಪಿಸಿಕೊಡುವಂತೆ ಭಾರತವು ಚೀನಾಕ್ಕೆ ಮನವಿ ಮಾಡಿದೆ ಎಂಬುದಾಗಿ ವರದಿಗಳು ತಿಳಿಸಿವೆ. ಚೀನಾದಲ್ಲಿ ಕೊರೋನಾವೈರಸ್ ರೋಗಕ್ಕೆ ಬಲಿಯಾಗಿರುವವರ ಸಂಖ್ಯೆ 2020 ಜನವರಿ
25ರ ಶನಿವಾರ ೪೧ಕ್ಕೆ
ಏರಿದ್ದು, ೧೨೮೭ ಪ್ರಕರಣಗಳು ದೃಢ ಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಕಮಿಷನ್ ತಿಳಿಸಿದೆ. ಉಚಿತ ಬಸ್ಸು, ಅಧಿಕೃತ ಕಾರುಗಳು ಮತ್ತು ಸರಬರಾಜು ಸಾಗಣೆ ವಾಹನಗಳಂತಹ ವಿಶೇಷ ನಿಯೋಜಿತ ವಾಹನಗಳನ್ನು ಹೊರತು ಪಡಿಸಿ ಎಲ್ಲ ವಾಹನಗಳ ಸಂಚಾರವನ್ನೂ ನಗರದಲ್ಲಿ ಭಾನುವಾರದಿಂದ ಅನಿರ್ದಿಷ್ಟ ಅವಧಿಗೆ ರದ್ದು ಪಡಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿತು.
ವುಹಾನ್ ನಗರದಲಿ
ಗುರುವಾರ ದಿಢೀರನೆ ಪ್ರಕಟಿಸಿಲಾದ ಸಂಚಾರ ನಿರ್ಬಂಧಗಳ ಪರಿಣಾಮವಾಗಿ ನಗರದ ಭಾರತೀಯ ಸಮುದಾಯದ ಸದಸ್ಯರಲ್ಲಿ ಭೀತಿ ಮತ್ತು ಆತಂಕ ಮೂಡಿದೆ. ತಾವು ಗಂಭೀರ ವೈದ್ಯಕೀಯ ತುರ್ತುಪರಿಸ್ಥಿತಿಯ ಮಧ್ಯೆ ತಾವು ಸಿಕ್ಕಿಹಾಕಿಕೊಂಡಿದ್ದೇವೆ ಎಂಬ ಭಾವನೆ ಅವರಲ್ಲಿ ಮೂಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ನವದೆಹಲಿ:
೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಮುಖೇಶ್ ಸಿಂಗ್ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ್ದನ್ನು ಪ್ರಶ್ನಿಸಿ 2020 ಜನವರಿ 25ರ ಶನಿವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. ರಾಷ್ಟ್ರಪತಿಯವರು ತನ್ನ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕರಿಸಿದ್ದರ ನ್ಯಾಯಾಂಗ ವಿಮರ್ಶೆ ನಡೆಸಬೇಕು ಎಂದು ಮುಖೇಶ್ ಸಿಂಗ್ ಕೋರಿದ್ದಾನೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖೇಶ್ ಸಿಂಗ್ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಜನವರಿ ೧೭ರಂದು, ತಮಗೆ ಸಲ್ಲಿಕೆಯಾದ ಕೇವಲ ನಾಲ್ಕು ದಿನಗಳ ಒಳಗಾಗಿ ತಿರಸ್ಕರಿಸಿದ್ದರು. ಕ್ಷಮಾದಾನ ಕೋರಿಕೆ ಅರ್ಜಿಯೊಂದನ್ನು ಇಷ್ಟೊಂದು ತ್ವರಿತವಾಗಿ ರಾಷ್ಟ್ರಪತಿಯವರು ಇತ್ಯರ್ಥ ಪಡಿಸಿದ್ದು ಇದೇ ಪ್ರಥಮವಾಗಿತ್ತು. ೨೦೧೪ರ ಶತ್ರುಘ್ನ ಚೌಹಾಣ್ ವರ್ಸಸ್ ಭಾರತ ಸರ್ಕಾರ ಪ್ರಕರಣವನ್ನು ಆಧರಿಸಿ ಮುಖೇಶ್ ಸಿಂಗ್ ಸುಪ್ರೀಂಕೋರ್ಟ್ಗೆ ಇದೀಗ ನ್ಯಾಯಾಂಗ
ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು, ರಾಷ್ಟ್ರಪತಿಯವರು ಅರ್ಜಿಯನ್ನು ವಿಲೇವಾರಿ ಮಾಡಿದ ಬಗೆಯನ್ನು ಪ್ರಶ್ನಿಸಿದ್ದಾನೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ನವದೆಹಲಿ: ದೆಹಲಿಯ ಭಜನ್ಪುರ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮವಾಗಿ 2020 ಜನವರಿ 25ರ ಶನಿವಾರ ೪ ಮಂದಿ ವಿದ್ಯಾರ್ಥಿಗಳು
ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಮೂಲಗಳು ತಿಳಿಸಿವೆ. ೧೦-೧೫ ವಯೋಮಾನದ
ನಾಲ್ವರು ವಿದ್ಯಾರ್ಥಿಗಳು ಮತ್ತು ಒಬ್ಬ ಬೋಧಕ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇತರ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಈಶಾನ್ಯ ದೆಹಲಿಯ ಡಿಸಿಪಿ ವೇದ ಪ್ರಕಾಶ ಸೂರ್‍ಯ ತಿಳಿಸಿದರು. ಇದಕ್ಕೆ
ಮುನ್ನ ಕಟ್ಟಡ ಕುಸಿತದಿಂದ ಗಾಯಗೊಂಡ ೧೩ ಮಂದಿಯನ್ನು ಆಸ್ಪತ್ರೆಗೆ
ಸೇರಿಸಲಾಗಿತ್ತು. ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಕೋಚಿಂಗ್ ಕೇಂದ್ರ ಇತ್ತು. ಹೀಗಾಗಿ ಕೇಂದ್ರದ ವಿದ್ಯಾರ್ಥಿಗಳು ಮತ್ತು ಬೋಧಕರು ದುರಂತದಲ್ಲಿ ಸಿಕ್ಕಿಹಾಕಿಕೊಂಡರು ಎಂದು ಸುದ್ದಿ ಮೂಲಗಳು ಹೇಳಿವೆ. ಕನಿಷ್ಠ ೧೩ ಮಂದಿಯನ್ನು ಆಸ್ಪತ್ರೆಗೆ
ದಾಖಲಿಸಲಾಗಿದೆ. ಮೂವರು ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಮುಖ್ಯಸ್ಥ ಅತುಲ್ ಗಾರ್ಗ್ ಇದಕ್ಕೆ ಮುನ್ನ ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ಜೈಪುರ:
ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಬಲ ಪ್ರತಿಭಟನೆಯ ಮಧ್ಯೆ ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರವು 2020 ಜನವರಿ 25ರ ಶನಿವಾರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧೀ ನಿರ್ಣಯಕ್ಕೆ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು. ಇದರೊಂದಿಗೆ ರಾಜಸ್ಥಾನವು ತಿದ್ದುಪಡಿಯಾಗಿರುವ ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ದೇಶದ ಮೂರನೇ ರಾಜ್ಯವಾಯಿತು. ಈಗಾಗಲೇ ಕೇರಳ ಮತ್ತು ಪಂಜಾಬ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧೀ ನಿರ್ಣಯ ಅಂಗೀಕರಿಸಿವೆ. ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವರಾದ ಶಾಂತಿ ಧರಿವಾಲ್ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ತತ್ ಕ್ಷಣವೇ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ತೀವ್ರ ದಾಳಿ ನಡೆಸಿದರು. ಅವರ ಪೈಕಿ ಕೆಲವರು ವಿಧಾನಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ನುಗ್ಗಿ ಘೋಷಣೆಗಳನ್ನು ಕೂಗಿದರು. ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಸಂವಿಧಾನದ ಮೂಲರಚನೆಯನ್ನೇ ಗಾಳಿಗೆ ತೂರಿದೆ ಮತ್ತು ಜನಸಂಖ್ಯೆ ಗಣನೀಯ ಪ್ರಮಾಣದ ವರ್ಗವು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮತ್ತು ರಾಷ್ಟ್ರೀಯ ಪೌರ ನೋಂದಣಿಗೆ (ಎನ್ ಆರ್ಸಿ) ಕೂಡಾ ಇದೇ ನೆಲೆ ಹೊಂದಿವೆ ಎಂದು ನಿರ್ಣಯ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
No comments:
Post a Comment