ನಾನು ಮೆಚ್ಚಿದ ವಾಟ್ಸಪ್

Monday, January 27, 2020

ಇಂದಿನ ಇತಿಹಾಸ History Today ಜನವರಿ 27

2020: ನವದೆಹಲಿ: ಅಸ್ಸಾಮಿನ ಕಟ್ಟಾ ಉಗ್ರಗಾಮಿ ಸಂಘಟನೆ ’ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಜೊತೆಗೆ ಚಾರಿತ್ರಿಕ ಒಪ್ಪಂದಕ್ಕೆ ಸರ್ಕಾರವು 2020 ಜನವರಿ 27ರ ಸೋಮವಾರ ಸಹಿ ಹಾಕಿತು. ಇದರೊಂದಿಗೆ ರಾಜ್ಯ ಸ್ಥಾನಮಾನಕ್ಕಾಗಿ ನಡೆಯುತ್ತಿದ್ದ ದಶಕಗಳ ಕಾಲದ ಹಿಂಸಾತ್ಮಕ ಚಳವಳಿಗೆ ತೆರೆ ಬಿದ್ದಿತು.  ಒಪ್ಪಂದವು ಅಸ್ಸಾಮಿನ ಪ್ರಾದೇಶಿಕ ಸಮಗ್ರತೆಯನ್ನು ಹಾಗೇಯೇ ಉಳಿಸಿಕೊಳ್ಳುವುದರ ಜೊತೆಗೆ, ೧೫೦೦ ಕೋಟಿ ರೂ.ಗಳ ಹಣಕಾಸು ಕೊಡುಗೆಯೊಂದಿಗೆ ಬೋಡೋ ಜನರ ಸರ್ವತೋಮುಖ ಅಭಿವೃದ್ಧಿಯನ್ನು ಖಾತರಿ ಪಡಿಸುತ್ತದೆ ಎಂದು  ಎಂದು ಅಸ್ಸಾಂ ಸಚಿವ ಹಾಗೂ ಈಶಾನ್ಯದ ಬಿಜೆಪಿಯ ಪ್ರಮುಖ ನಾಯಕ ಹಿಮಂತ ಬಿಸ್ವಾ ಶರ್ಮಾ ಹೇಳಿದರು.  ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಹಾಜರಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಪ್ಪಂದವನ್ನು ’ಐತಿಹಾಸಿಕ ಎಂಬುದಾಗಿ ಬಣ್ಣಿಸಿ, "ಇದು ಬೋಡೋ ಪ್ರದೇಶ ಮತ್ತು ಅಸ್ಸಾಂ ಅಭಿವೃದ್ಧಿಗೆ ಸಹಾಯ ಮಾಡಲಿದೆ ಎಂದು ಹೇಳಿದರು. ಹಿಂದಿನ ಸಲಕ್ಕಿಂತ ಭಿನ್ನವಾಗಿ ಈ ಬಾರಿ ಎಲ್ಲ ಪಾಲುದಾರರೂ ಸಹಿ ಹಾಕಿರುವುದರಿಂದ ಈ ಒಪ್ಪಂದ ಶಾಶ್ವತ ಒಪ್ಪಂದವಾಗಲಿದೆ. ಕಳೆದ ಬಾರಿ ಮೂರು ಗುಂಪುಗಳು ಒಪ್ಪಂದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಅಮಿತ್ ಶಾ ನುಡಿದರು.  ತ್ರಿಪಕ್ಷೀಯ ಒಪ್ಪಂದಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಎನ್‌ಡಿಎಫ್‌ಬಿ ಮತ್ತು ಎಬಿಎಸ್‌ಯು ಸಂಘಟನೆಗಳ ನಾಲ್ಕು ಬಣಗಳ ನಾಯಕತ್ವ ಮತ್ತು ಕೇಂದ್ರ ಸರ್ಕಾರ ಸಹಿ ಹಾಕಿವೆ. ರಾಜ್ಯ ಸ್ಥಾನಮಾನ ಚಳವಳಿಯ ಮುಂಚೂಣಿಯಲ್ಲಿದ್ದ ಆಲ್ ಬೋಡೋ ವಿದ್ಯಾರ್ಥಿ ಸಂಘ ಕೂಡಾ ಒಪ್ಪಂದಕ್ಕೆ ಸಹಿ ಹಾಕಿತು. ಒಪ್ಪಂದದ ಪ್ರಕಾರ, ರಾಜ್ಯ ಸ್ಥಾನಮಾನಕ್ಕಾಗಿ ನಡೆದ ಆಂದೋಲನದಲ್ಲಿ ಶಸ್ತ್ರಾಸ್ತ್ರ ಕೈಗೆತ್ತಿಕೊಂಡವರ ಬಗ್ಗೆ ಕೇಂದ್ರವು ಸಹಾನುಭೂತಿಯ ದೃಷ್ಟಿಕೋನವನ್ನು ಹೊಂದಲಿದೆ ಎಂದು ಮೂಲಗಳು ತಿಳಿಸಿದವು.  (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ಹೈದರಾಬಾದ್: ಆಂಧ್ರ ಪ್ರದೇಶದಲ್ಲಿ ಅಸ್ತಿತ್ವದಲ್ಲಿ ಇರುವ ವಿಧಾನಪರಿಷತ್ತನ್ನು (ಮೇಲ್ಮನೆ) ರದ್ದು ಪಡಿಸುವ ನಿರ್ಣಯವನ್ನು ಆಂಧ್ರ ವಿಧಾನಸಭೆ  2020 ಜನವರಿ 27ರ ಸೋಮವಾರ ಅವಿರೋಧವಾಗಿ ಅಂಗೀಕರಿಸಿತು. ಇದರೊಂದಿಗೆ ಆಂಧ್ರಪ್ರದೇಶದಲ್ಲಿ ಮೇಲ್ಮನೆಯು ಎರಡನೇ ಬಾರಿಗೆ ರದ್ದಾಗುತ್ತಿದೆ.  ಸೋಮವಾರ ಬೆಳಗ್ಗೆಯಷ್ಟೇ ೧೩ ವರ್ಷಗಳ ಹಿಂದೆ ತಮ್ಮ ತಂದೆ ಮತ್ತೆ ಅಸ್ತಿತ್ವಕ್ಕೆ ತಂದಿದ್ದ ವಿಧಾನ ಪರಿಷತ್ತನ್ನು ರದ್ದು ಪಡಿಸುವ ನಿರ್ಧಾರಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು. ಬಳಿಕ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಯಿತು.  ನಿರ್ಣಯದ ಪರವಾಗಿ ೧೩೩ ಮತಗಳು ಬಿದ್ದಿದ್ದು, ನಿರ್ಣಯದ ವಿರುದ್ಧ ಯಾವುದೇ ಮತ ಚಲಾವಣೆಯಾಗಿಲ್ಲ. ಈ ಮೂಲಕ ಆಂಧ್ರಪ್ರದೇಶದಲ್ಲಿ ಎರಡನೇ ಬಾರಿಗೆ ವಿಧಾನಪರಿಷತ್ತನ್ನು ವಿಸರ್ಜಿಸಲಾಯಿತು. ವಿಧಾನ ಪರಿಷತ್ ರದ್ದುಪಡಿಸಲು ಒಪ್ಪಿಗೆ ಕೋರಿ ಕೇಂದ್ರ ಸರ್ಕಾರಕ್ಕೆ ನಿರ್ಣಯವನ್ನು ಕಳುಹಿಸಲಾಗುತ್ತದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಕೆಲವೇ ದಿನಗಳ ಹಿಂದೆ ಮೇಲ್ಮನೆಯಲ್ಲಿ ಜಗನ್ ಸರ್ಕಾರಕ್ಕೆ ಭಾರಿ ಮುಖಭಂಗವಾಗಿತ್ತು. ಸಿಎಂ ಜಗನ್ ಮೋಹನ್ ರೆಡ್ಡಿ ಮಹತ್ವಾಕಾಂಕ್ಷೆಯ ಮೂರು ರಾಜಧಾನಿ ರೂಪಿಸುವ ಮತ್ತು ಸಿಆರ್‌ಡಿಎ ರದ್ದುಗೊಳಿಸುವ ಮಸೂದೆಯನ್ನು ವಿಧಾನ ಪರಿಷತ್ ಅನುಮೋದಿಸದೆ ಆಯ್ಕೆ ಸಮಿತಿಗೆ ಕಳುಹಿಸಿತ್ತು. ಹೀಗಾಗಿ ಪರಿಷತ್ತನ್ನೇ ರದ್ದುಪಡಿಸಲು ಜಗನ್ ನಿರ್ಧರಿಸಿದ್ದರು. ೧೯೮೫ರ ಮೇ ೩೧ರಂದು ತೆಲುಗು ದೇಶಂ ಸಂಸ್ಥಾಪಕ ಎನ್.ಟಿ. ರಾಮರಾವ್ ಮುಖ್ಯಮಂತ್ರಿಯಾಗಿದ್ದಾಗ ಆಂಧ್ರ ವಿಧಾನ ಪರಿಷತ್ತನ್ನು ರದ್ದುಗೊಳಿಸಿದ್ದರು. ಈ ಸದನದಿಂದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಅವರು ಹೇಳಿದ್ದರು. ೨೨ ವರ್ಷಗಳ ಬಳಿಕ ಅಂದರೆ ೨೦೧೭ರಲ್ಲಿ ರಾಜಶೇಖರ ರೆಡ್ಡಿಯವರು ಮೇಲ್ಮನೆಯನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದರು.  (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ/ ಬೀಜಿಂಗ್: ನೂತನ ಮಾರಣಾಂತಿಕ ಕೊರೋನಾವೈರಸ್ ವ್ಯಾಧಿಗೆ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೮೦ಕ್ಕೇ ಏರಿದ್ದು, ವ್ಯಾಧಿಯ ಕೇಂದ್ರವಾಗಿರುವ ಚೀನಾದ ವುಹಾನ್ ನಗರದಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ಬೋಯಿಂಗ್ ೭೪೭ ವಿಮಾನವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು  2020 ಜನವರಿ 27ರ ಸೋಮವಾರ ತಿಳಿಸಿದರು. ಈ ಮಧ್ಯೆ, ಸೋಂಕನ್ನು ಹರಡದಂತೆ ನಿಯಂತ್ರಿಸುವ ಸಲುವಾಗಿ ತನ್ನ ನೂತನ ಚಾಂದ್ರ ವರ್ಷದ ರಜೆಯನ್ನು ವಿಸ್ತರಿಸಲು ಚೀನಾ ಸರ್ಕಾರ ನಿರ್ಧರಿಸಿತು.  ನಾಗರಿಕರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರದ ನಿರ್ಧಾರಕ್ಕಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಕಾದಿದ್ದಾರೆ.  "ಕೊರೊನಾವೈರಸ್ ಭಯದಿಂದಾಗಿ ಚೀನಾದ ವುಹಾನ್ ನಗರದಿಂದ ಭಾರತೀಯರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ಬೋಯಿಂಗ್ ೭೪೭ ಸನ್ನದ್ಧವಾಗಿದೆ. ಸಂಸ್ಥೆಯು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದೆ" ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು. ಸಾಂಕ್ರಾಮಿಕ ಕೊರೋನಾವೈರಸ್ ರೋಗಕ್ಕೆ ಚೀನಾದಲ್ಲಿ ಈವರೆಗೆ ೮೦ ಜನರು ಬಲಿಯಾಗಿದ್ದಾರೆ ಮತ್ತು ದೇಶದ ೨೭೪೪ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಚಿಕಿತ್ಸೆ ಪಡೆಯುತ್ತಿರುವ ೪೬೧ ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿತು. ಕಳೆದ ೨೪ ಗಂಟೆಗಳಲ್ಲಿ ೭೬೯ ಹೊಸ ಪ್ರಕರಣಗಳು ದೃಢಪಟ್ಟಿವೆ. ೩೮೦೬ ಶಂಕಿತ ಪ್ರಕರಣಗಳು ದಾಖಲಾಗಿವೆ ಎಂದು ಆಯೋಗದ ವರದಿ ತಿಳಿಸಿತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ಸಿಂಧ್: ಪಾಕಿಸ್ತಾನದಲ್ಲಿ ಬಲವಂತ ಮತಾಂತರದ ಮತ್ತೊಂದು ಪ್ರಕರಣದಲ್ಲಿ, ಹಿಂದೂ ವಧು ಒಬ್ಬಳನ್ನು ಮದುವೆ ಮಂಟಪದಿಂದಲೇ ಅಪಹರಿಸಿ, ಇಸ್ಲಾಮ್‌ಗೆ ಮತಾಂತರಗೊಳಿಸಿ ಬಳಿಕ ಮುಸ್ಲಿಮ್ ಯುವಕನೊಬ್ಬ ಮದುವೆಯಾದ ಘಟನೆ ಘಟಿಸಿದೆ.  ಸಿಂಧ್ ಪ್ರಾಂತ್ಯದ ಮಾಟಿಯಾರಿ ಜಿಲ್ಲೆಯ ಹಲಾ ನಗರದಲ್ಲಿ 2020 ಜನವರಿ 25ರ ಶನಿವಾರ ನಡೆದ ವಿವಾಹ ಸಮಾರಂಭದ ಸ್ಥಳದಿಂದ ವಧು ಭಾರತಿ ಬಾಯಿ ಎಂಬ ಮಹಿಳೆಯನ್ನು ಒಂದು ಗುಂಪು ಅಪಹರಿಸಿದ್ದು, ನಂತರ ಶಾರುಖ್ ಗುಲ್ ಎಂಬ ವ್ಯಕ್ತಿ ಆಕೆಯನ್ನು ಮದುವೆಯಾಗಿರುವುದಾಗಿ ವರದಿ 2020 ಜನವರಿ 27ರ ಸೋಮವಾರ ತಿಳಿಸಿತು. ಅಪಹರಣಕಾರರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ವರದಿಗಳ ಪ್ರಕಾರ, ವಧುವನ್ನು ಬಲವಂತವಾಗಿ ಕರೆದೊಯ್ಯಲು ಪೊಲೀಸರೇ ಅಪಹರಣ ನಡೆಸಿದ ಪುರುಷರಿಗೆ ಸಹಾಯ ಮಾಡಿದರು ಎನ್ನಲಾಯಿತು. ಪ್ರತಿ ವರ್ಷ, ೧೨ ರಿಂದ ೨೮ ವರ್ಷದೊಳಗಿನ ಸುಮಾರು ೧,೦೦೦ ಯುವ ಸಿಂಧಿ ಹಿಂದೂ ಬಾಲಕಿಯರನ್ನು ಅಪಹರಿಸಿ, ಬಲವಂತವಾಗಿ ಮದುವೆಯಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ ಎಂದು ಅಮೆರಿಕ ಮೂಲದ ಸಿಂಧಿ ಫೌಂಡೇಶನ್ ಆಪಾದಿಸಿತು. ಪಾಕಿಸ್ತಾನದಲ್ಲಿ, ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹುಡುಗಿಯರನ್ನು, ಮುಖ್ಯವಾಗಿ ಹಿಂದೂ, ಸಿಖ್ ಮತ್ತು ಕ್ರೈಸ್ತರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಮುಸ್ಲಿಂ ಪುರುಷರೊಂದಿಗೆ ವಿವಾಹ ಮಾಡುವ ಇಂತಹ ಅನೇಕ ಘಟನೆಗಳು ಆಗಾಗ ವರದಿಯಾಗುತ್ತವೆ. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ಕೋಲ್ಕತಾ: ಕೇರಳ, ಪಂಜಾಬ್ ಮತ್ತು ರಾಜಸ್ಥಾನದ ನಂತರ, ಪಶ್ಚಿಮ ಬಂಗಾಳವು  2020 ಜನವರಿ 27ರ ಸೋಮವಾರ  ವಿಧಾನಸಭೆಯಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ೪ನೇ ರಾಜ್ಯವಾಯಿತು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಪ್ರಸ್ತಾಪಿತ ರಾಷ್ಟ್ರೀಯ ಪೌರ ನೋಂದಣಿಯನ್ನು ಜಾರಿಗೆ ತರಬಾರದು ಎಂದು ಪಶ್ಚಿಮ ಬಂಗಾಳ ವಿಧಾನಸಭೆಯು ಅಂಗೀಕರಿಸಿದ ನಿರ್ಣಯವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು. ಬಹುಮತದೊಂದಿಗೆ ಅಂಗೀಕೃತವಾದ ಈ ನಿರ್ಣಯವನ್ನು ಪಶ್ಚಿಮ ಬಂಗಾಳದ ಬಂಗಾಳ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ ಅವರು ಸದನದ ವಿಶೇಷ ಅಧಿವೇಶನದಲ್ಲಿ ಮಂಡಿಸಿದರು. ದೇಶವನ್ನು ಧರ್ಮದ ನೆಲೆಯಲ್ಲಿ ವಿಭಜಿಸುವ ಕ್ರಮವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಮುಖೇಶ್ ಸಿಂಗ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು 2020 ಜನವರಿ 28ರ ಮಂಗಳವಾರ ಮಧ್ಯಾಹ್ನ ೧೨.೩೦ಕ್ಕೆ ನಡೆಸಲಿದೆ. ತಾನು ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮುಖೇಶ್ ಸಿಂಗ್ ಈ ಅರ್ಜಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದಾನೆ. ಮುಖೇಶ್ ಸಿಂಗ್ ಪರ ವಕೀಲರು ಕಳೆದ ವಾರ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸೋಮವಾರ ಭಾರತದ ಮುಖ್ಯ ನ್ಯಾಯಮೂರ್ತಿ ಶರತ್ ಎ. ಬೋಬ್ಡೆ ನೇತೃತ್ವದ ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದ್ದರು. ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ಅರ್ಜಿಯನ್ನು ಕಲಾಪ ಪಟ್ಟಿಗೆ ಸೇರಿಸಲು ನ್ಯಾಯಾಲಯದ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಪ್ರಕರಣವನ್ನು ನ್ಯಾಯಾಲಯವು  ಮೊದಲ ಆದ್ಯತೆಯ ಮೇರೆಗೆ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದರು. "ಯಾರನ್ನಾದರೂ ಗಲ್ಲಿಗೇರಿಸಲಾಗುತ್ತಿದ್ದರೆ ಇದಕ್ಕಿಂತ ಹೆಚ್ಚಿನ ತುರ್ತು ಏನೂ ಇರಲು ಸಾಧ್ಯವಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹೇಳಿದ್ದರು. (ವಿವರಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

2020: ಕಾಬೂಲ್: ೮೩ ಮಂದಿ ಪ್ರಯಾಣಿಕರನ್ನು ಒಯ್ಯುತ್ತಿದ್ದ ಆಫ್ಘಾನಿಸ್ಥಾನದ ಏರಿಯಾನಾ ಏರ್ ಲೈನ್ಸ್‌ಗೆ ಸೇರಿದ ಪ್ರಯಾಣಿಕ ವಿಮಾನವೊಂದು 2020 ಜನವರಿ 27ರ ಸೋಮವಾರ  ಘಜನಿ ಪ್ರಾಂತದಲ್ಲಿ ನೆಲಕ್ಕಪ್ಪಳಿಸಿದೆ ಎಂದು ವರದಿಗಳು ತಿಳಿಸಿದವು. ವಿಮಾನವು ಮಧ್ಯಾಹ್ನ ೧.೧೦ರ ವೇಳೆಗೆ ಘಜನಿ ಪ್ರಾಂತದ ದೆಹ್ ಯಾಕ್ ಜಿಲ್ಲೆಯ ಸಡೋ ಖೇಲ್ ಪ್ರದೇಶದಲ್ಲಿ ಪತನಗೊಂಡಿದೆ. ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ ಎಂದು ವರದಿಗಳು ಹೇಳಿದವು.  (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೂ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗೂ ‘ಹಣಕಾಸು ಸಂಬಂಧವಿದೆ‘ ಎಂದು ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿತು. ಸಂಸತ್ತಿನಲ್ಲಿ ಸಿಎಎ ಮಸೂದೆಗೆ ಅನುಮೋದನೆ ದೊರೆತ ನಂತರ ಉತ್ತರ ಪ್ರದೇಶದಲ್ಲಿ ಬ್ಯಾಂಕಿನ ವಿವಿಧ ಖಾತೆಗಳಿಗೆ ೧೨೦.೫ ಕೋಟಿ ರೂಪಾಯಿ  ಜಮೆಯಾಗಿದೆ ಎಂದು ಗುರುತಿಸಲಾಗಿದೆ ಎಂದು ನಿರ್ದೇಶನಾಲಯ ತಿಳಿಸಿತು. ‘ಇದು, ಆಧಾರರಹಿತ ಆರೋಪ’ ಎಂದು ಪಿಎಫ್‌ಐ ತಳ್ಳಿಹಾಕಿತು. ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ೨೦೧೮ರಿಂದಲೂ ಕೇರಳ ಮೂಲದ ಪಿಎಫ್‌ಐ ಸಂಘಟನೆಯ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ. ಖಾತೆಗಳಿಗೆ ನಗದು, ಆರ್ಟಿಜಿಎಸ್ ಮೂಲಕ ಹಣ ಜಮೆ ಆಗಿದೆ. ಆಗಾಗ್ಗೆ ಚೆಕ್ ಮೂಲಕ ಜಮೆಯಾಗಿದೆ ಎಂದು ಹೇಳಿತು.  ಉತ್ತರ ಪ್ರದೇಶದಲ್ಲಿ ಸಿಂಡಿಕೇಟ್ ಬ್ಯಾಂಕಿನ ನೆಹರೂ ಪ್ಲೇಸ್ ಶಾಖೆಯಲ್ಲಿರುವ ಪಿಎಫ್‌ಐ ಖಾತೆಗೆ ದೊಡ್ಡ ಪ್ರಮಾಣದಲ್ಲಿ ಸಾಕಷ್ಟು ಬಾರಿ ಹಣ ಜಮೆಯಾಗಿರುವ ದಾಖಲೆ ಇದೆ. ಬಹರೀಚ್, ಬಿಜ್ನೂರ್, ಹಪುರ್, ಶಾಮ್ಲಿ ಮತ್ತು ದಸ್ನಾದ ಶಾಖೆಗಳ ಖಾತೆಗಳಲ್ಲೂ ಇದೇ ಸ್ಥಿತಿ ಇದೆ. ಬ್ಯಾಂಕಿನ ಕೋಯಿಕ್ಕೋಡ್  ಶಾಖೆಯಲ್ಲಿರುವ ಪಿಎಫ್‌ಐ ಖಾತೆ ಪರಿಶೀಲಿಸಿದಾಗ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ವಕೀಲರಾದ ಇಂದಿರಾ ಜೈಸಿಂಗ್, ದುಶ್ಯಂತ್ ಎ ದವೆ ಅವರಿಗೆ ಹಣ ಪಾವತಿಸಿರುವುದು ಗೊತ್ತಾಗಿದೆ ಎಂದು ಇ.ಡಿ ತಿಳಿಸಿತು.


No comments:

Post a Comment