ನಾನು ಮೆಚ್ಚಿದ ವಾಟ್ಸಪ್

Monday, January 20, 2020

ಇಂದಿನ ಇತಿಹಾಸ History Today ಜನವರಿ 20

2020: ಬೆಂಗಳೂರು: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2020 ಜನವರಿ 20ರ ಸೋಮವಾರ ಬೆಳಗ್ಗೆ ೧೦ ಕಿಲೋ ಗ್ರಾಂ ತೂಕದ ಸುಧಾರಿತ ಐಇಡಿ ಜೀವಂತ ಬಾಂಬ್ ಪತ್ತೆಯಾಗಿದ್ದು, ಕೂದಲೆಳೆ ಅಂತರದಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಸಿಬ್ಬಂದಿಯ ಮುಂಜಾಗರೂಕತೆಯಿಂದ ತಪ್ಪಿತು. ಸುಧಾರಿತ ಐಐಡಿ ಸ್ಫೋಟಕವನ್ನು ಕೆಂಜಾರಿನ ನಿರ್ಜನ ಪ್ರದೇಶಕ್ಕೆ ಸಾಗಿಸಿ ನಿಯಂತ್ರಿತ ರೀತಿಯಲಿ ಸ್ಫೋಟಿಸುವ ಮೂಲಕ ಅದರಿಂದ ಆಗಬಹುದಾದ ಅಪಾಯವನ್ನು ನಿವಾರಿಸಲಾಯಿತು.  ವಿಮಾನ ನಿಲ್ದಾಣದ ಆವರಣಕ್ಕೆ ರಿಕ್ಷಾದ ಮೂಲಕ ಬಂದು ಬಾಂಬ್ ಇದ್ದ ಬ್ಯಾಗ್ಇರಿಸಿ ಪರಾರಿಯಾದ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ದಾಖಲಾಗಿದ್ದು ಪೊಲೀಸರು ಭಾವಚಿತ್ರವನ್ನು ಬಿಡುಗಡೆ ಮಾಡಿದ್ದು, ಅಪರಿಚಿತ ವ್ಯಕ್ತಿಗಳಿಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದರು.. ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಯಿತು. ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಶಾಮೀಲಾಗಿರುವ ಸಾಧ್ಯತೆ ಇದೆ ಎಂಬ ಅನುಮಾನದ ಜೊತೆಗೆ ಗಣರಾಜ್ಯ ದಿನದಂದು ಭಯೋತ್ಪಾದಕರು ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಂಚು ರೂಪಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಘಟನೆಯು ಆಘಾತದ ಅಲೆಗಳನ್ನು ಎಬ್ಬಿಸಿದ್ದು, ಎಲ್ಲೆಡೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯವು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. .(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರವು2020 ಜನವರಿ 20ರ ಸೋಮವಾರ ಆರಂಭವಾದ ಮೂರು ದಿನಗಳ ರಾಜ್ಯ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ "ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ" ಕುರಿತಾದ ಮಸೂದೆ ಮಂಡಿಸಿತು.  ಮೂರುದಿನಗಳ ಚರ್ಚೆಯ ಬಳಿಕ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಯಿತು. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕನಸಿನ ಅಮರಾವತಿ ಅಭಿವೃದ್ಧಿಗೆ ಜಗನ್ ಸರ್ಕಾರ ಎಳ್ಳುನೀರು ಬಿಟ್ಟಿತು.. ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾದ ಮಸೂದೆಯ ಮೇಲೆ ವಿಧಾನಸಭೆಯಲ್ಲಿ ಸೋಮವಾರ ಇಡೀ ದಿನ ಕೋಲಾಹಲಕಾರಿ ಚರ್ಚೆ ನಡೆಯಿತು. ವಿಧಾನಸಭೆಯಲ್ಲಿ ಆಂಧ್ರಪ್ರದೇಶ ಹಣಕಾಸು ಸಚಿವ ಬುಗ್ಗನ್ ರಾಜೇಂದ್ರನಾಥ್ ರೆಡ್ಡಿ, ರಾಜ್ಯಾಡಳಿತ ವಿಕೇಂದ್ರಿಕರಣ ಮಸೂದೆ ಮಂಡಿಸಿದರು. ಜತೆಗೆ ಆಂಧ್ರದ ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಮಂಡನೆ ಮಾಡಿದರು ಎಂದು ವರದಿಗಳು ಹೇಳಿದವು. ಆಂಧ್ರಪ್ರದೇಶ ವಿಭಜನೆಯಾದಾಗ ಆಂಧ್ರಪ್ರದೇಶ ಪುನರ್ರಚನೆ ಕಾಯ್ದೆ ಸಮಿತಿ ಅಧ್ಯಕ್ಷರಾಗಿ ಕೆ.ಎಸ್ ಶಿವರಾಮಕೃಷ್ಣನ್ ಅವರನ್ನು ನೇಮಿಸಲಾಗಿತ್ತು. ಹಲವು ದಿನಗಳ ಅಧ್ಯಯನದ ನಂತರ ಕೆ.ಎಸ್ ಶಿವರಾಮಕೃಷ್ಣನ್ ಸಮಿತಿ ಶಿಫಾರಸುಗಳನ್ನು ಪರಿಗಣಿಸದೆ ಅಂದು ಆಂಧ್ರಪ್ರದೇಶದ ರಾಜಧಾನಿಯನ್ನು ನಿರ್ಧರಿಸಲಾಗಿತ್ತು. ಆದರೆ ಈಗ ಇತರೆ ಪ್ರದೇಶಗಳ ಆರ್ಥಿಕ ಅಭಿವೃದ್ಧಿ ಬಗ್ಗೆ ಒತ್ತು ನೀಡಿ ಆಡಳಿತ ವಿಕೇಂದ್ರಿಕರಣ ಮಾಡಲಾಗುತ್ತಿದೆ ಎಂದು ರಾಜೇಂದ್ರನಾಥ್ ರೆಡ್ಡಿ ಮಸೂದೆಯನ್ನು ಮಂಡಿಸುತ್ತಾ ಸದನಕ್ಕೆ ತಿಳಿಸಿದರು.(ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ೨೦೧೨ರ ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತ ಸಲ್ಲಿಸಿದ್ದ ಅರ್ಜಿಯನ್ನು 2020 ಜನವರಿ 20ರ ಸೋಮವಾರ ತಿರಸ್ಕರಿಸಿದ ಸುಪ್ರೀಂಕೋರ್ಟ್ ಆತ ಅಪರಾಧ ಸಂಭವಿಸಿದ ವೇಳೆಯಲ್ಲಿ ಅಪ್ರಾಪ್ತ ವಯಸ್ಕನಾಗಿದ್ದ ಎಂಬುದಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದು ತೀರ್ಪು ನೀಡಿತು.ಇದರೊಂದಿಗೆ ನಿರ್ಭಯಾ ಪ್ರಕರಣದ ನಾಲ್ಕೂ ಮಂದಿ ಅಪರಾಧಿಗಳು ಗಲ್ಲಿಗೆ ಏರುವುದು ಖಚಿತವಾಯಿತು. ಫೆಬ್ರುವರಿ ೧ರಂದು ಬೆಳಗ್ಗೆ ಗಂಟೆಗೆ ತನ್ನನ್ನು ಗಲ್ಲಿಗೆ ಏರಿಸುವುದನ್ನು ಸ್ಥಗಿತಗೊಳಿಸಬೇಕು ಎಂಬುದಾಗಿ ಕೋರಿ ಪವನ್ ಕುಮಾರ್ ಗುಪ್ತ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು  (ಎಸ್ಎಲ್ಪಿ) ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವತ್ವ ಪೀಠವು ಈದಿನ ಬೆಳಗ್ಗೆ ವಿಚಾರಣೆಗೆ ಎತ್ತಿಕೊಂಡಿತ್ತು.೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ ಮನೆಗೆ ಹೋಗುತ್ತಿದ್ದ ವೇಳೆಯಲ್ಲಿ ಆಕೆಯ ಮೇಲೆ ೨೦೧೨ರ ಡಿಸೆಂಬರ್ ೧೬ರಂದು ಚಲಿಸುವ ಬಸ್ಸಿನಲ್ಲಿ ಮಂದಿಯಿಂದ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಅಪರಾಧದ ಘಟನೆ ಘಟಿಸಿತ್ತು. ತಾನು ಅಪ್ರಾಪ್ತ ವಯಸ್ಕನಾಗಿದ್ದುನಾಗಿ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತ ಅರ್ಜಿಯಲ್ಲಿ ಪ್ರತಿಪಾದಿಸಿದ್ದ. ಪೊಲೀಸರು ಆತನ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಬಚ್ಚಿಟ್ಟಿದ್ದರು ಎಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯ ವೇಳೆಯಲ್ಲಿ ಗುಪ್ತ ಪರ ವಕೀಲ ಎಪಿ ಸಿಂಗ್ ಆಪಾದಿಸಿದರು. ’ಪವನ್ ಜನ್ಮದಿನ ೧೯೯೬ರ ಅಕ್ಟೋಬರ್ . ದಾಖಲೆಗಳನ್ನು ದೆಹಲಿ ಪೊಲೀಸರು ಬಚ್ಚಿಟ್ಟಿದ್ದರು. ಇದೊಂದು ದೊಡ್ಡ ಸಂಚು ಎಂದು ವಕೀಲರು ಪ್ರತಿಪಾದಿಸಿದರು. .(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2020:  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು  ಪಕ್ಷಾಧ್ಯಕ್ಷ ಅಮಿತ್ ಅವರ ಆಯ್ಕೆ ಎಂಬುದಾಗಿ ಪರಿಗಣಿಸಲಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (ಜೆಪಿ ನಡ್ಡಾ) ಅವರು  2020 ಜನವರಿ 20ರ ಸೋಮವಾರ ಅಧಿಕೃತವಾಗಿ ಅಮಿತ್ ಶಾ ಅವರಿಂದ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ನಡ್ಡಾ ಅವರಿಗೆ ಬೆಂಬಲವಾಗಿ ನಾಮಪತ್ರಗಳನ್ನು ಸಲ್ಲಿಸಲು ಕೇಂದ್ರ ಸಚಿವರು ಮತ್ತು ರಾಜ್ಯಗಳ ನಾಯಕರು ಸೇರಿದಂತೆ ಪಕ್ಷದ ಉನ್ನತ ನಾಯಕರು ಬಿಜೆಪಿಯ ರಾಷ್ಟ್ರೀಯ ಕೇಂದ್ರ ಕಚೇರಿಯಲ್ಲಿ ಸಾಲುಗಟ್ಟಿದ್ದರು.ಪಕ್ಷದ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿದ್ದ ಹಿರಿಯ ಬಿಜೆಪಿ ನಾಯಕ ರಾಧಾ ಮೋಹನ್ ಸಿಂಗ್ ಅವರು ಬಿಜೆಪಿಯ ೩೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ೨೧ರಲ್ಲಿ ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದರು.‘ಬಿಜೆಪಿ ಸದಸ್ಯತ್ವ ಅಭಿಯಾನ ಮತ್ತು ವಿಸ್ತರಣಾ ಪ್ರಕ್ರಿಯೆ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಶೇಕಡಾ ೭೫ರಷ್ಟು ಬೂತ್ ಮಟ್ಟದ ಸಮಿತಿಗಳು, ಶೇಕಡಾ ೫೦ರಷ್ಟು ಮಂಡಲ ಸಮಿತಿಗಳನ್ನು ರಚಿಸಲಾಗಿದ್ದು, ಬಿಜೆಪಿ ಸಂವಿಧಾನದ ಪ್ರಕಾರ ೨೧ ರಾಜ್ಯಗಳಲ್ಲಿ ಪಕ್ಷಾಧ್ಯಕ್ಷರ ಆಯ್ಕೆ ನಡೆಸುವ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕಟಿಸಲು ನಾನು ಹರ್ಷಗೊಂಡಿದ್ದೇನೆ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದರು.ಒಟ್ಟು ರಾಜ್ಯ ಘಟಕಗಳ ಕನಿಷ್ಠ ಅರ್ಧದಷ್ಟು ಸಾಂಸ್ಥಿಕ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಬಿಜೆಪಿ ಸಂವಿಧಾನ ಹೇಳುತ್ತದೆ.ನಡ್ಡಾ ಅವರ ಹೆಸರನ್ನು ಪಕ್ಷದ ಮಾಜಿ ಮುಖ್ಯಸ್ಥರು ಮತ್ತು ಸಂಸದೀಯ ಮಂಡಳಿ ಸದಸ್ಯರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರು ಸೂಚಿಸಿದರು. ಬೇರೆ ಯಾವುದೇ ನಾಮಪತ್ರಗಳ ಸಲ್ಲಿಕೆಯಾಗದ ಕಾರಣ ನಡ್ಡಾ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ರಾಧಾ ಮೋಹನ್ ಸಿಂಗ್ ಪ್ರಕಟಿಸಿದರು. .(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)





No comments:

Post a Comment