ನಾನು ಮೆಚ್ಚಿದ ವಾಟ್ಸಪ್

Wednesday, January 15, 2020

ಇಂದಿನ ಇತಿಹಾಸ History Today ಜನವರಿ 15

2020: ಶಬರಿಮಲೈ: ಕೇರಳ ಸರ್ಕಾರದ  ವತಿಯಿಂದ ನೀಡಲಾಗುವ  2020ನೇ ಸಾಲಿನ ಪ್ರತಿಷ್ಠಿತ ಹರಿವರಾಸನಂ ಪ್ರಶಸ್ತಿಯನ್ನು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ 2020 ಜನವರಿ 15ರ ಬುಧವಾರ ಶಬರಿಮಲೈ ಸ್ವಾಮಿ ಅಯ್ಯಪ್ಪ ಸನ್ನಿಧಾನದಲ್ಲಿ ಪ್ರಧಾನ ಮಾಡಲಾಯಿತು. ಪ್ರತೀವರ್ಷ ಧಾರ್ಮಿಕ, ಸಾಮರಸ್ಯ ಹಾಗೂ ರಾಷ್ಟ್ರೀಯ ಐಕ್ಯತೆಗೆ ಕಾರಣರಾದವರಿಗೆ ಈ ಪ್ರಶಸ್ತಿಯನ್ನು ಕೇರಳ ಸರ್ಕಾರ  ನೀಡುತ್ತಿದೆ. ಪ್ರಶಸ್ತಿಯು ೧ ಲಕ್ಷ ರೂಪಾಯಿ ನಗದು, ಪ್ರಮಾಣ ಪತ್ರ ಹಾಗೂ ಫಲಕವನ್ನು  ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಇಳಯರಾಜ ಅವರಿಗೆ ಪೂಜಾ ಸಂಗೀತಗಾರ ಎಂಬ ಬಿರುದನ್ನು ಕೂಡಾ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಈವರೆಗೆ ಡಾ.ಕೆ.ಜೆ.ಯೇಸುದಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ,  ಕೆ.ಎಸ್.ಚಿತ್ರಾ ,ಪಿ.ಸುಶೀಲಾ, ಎಂ.ಜಿ.ಶ್ರೀ ಕುಮಾರ್, ಗಂಗೈ ಅಮರನ್ ಅವರಿಗೆ ನೀಡಲಾಗಿತ್ತು. ಕನ್ನಡ ಸೇರಿದಂತೆ ದಕ್ಷಿಣದ ಚಲನಚಿತ್ರೋದ್ಯಮದ  ಹಲವಾರು ಚಿತ್ರಗಳಿಗೆ ಸಂಗೀತ ಸಂಯೋಜಿಸಿ, ಅದ್ಭುತ ಗೀತೆಗಳನ್ನು ನೀಡಿ, ಸಂಗೀತ ನಿಧಿ ಎಂದು ಹೆಸರುವಾಸಿಯಾಗಿರುವ ಇಳಯರಾಜಾ ಅವರಿಗೆ ಇತರ ಹಲವು ಗೌರವ, ಪ್ರಶಸ್ತಿಗಳು ಸಂದಿವೆ. . (ವಿವರಗಳಿಗೆ   ಇಲ್ಲಿ ಕ್ಲಿಕ್ಕಿಸಿ)

2020: ಲಕ್ನೋ: ಇಪಿಎಫ್‌ಒ ಪಿಂಚಣಿದಾರರಿಗೆ  ಸಿಹಿ ಸುದ್ದಿ. ಪಿಂಚಣಿದಾರರು ಪ್ರತಿ ವರ್ಷ ನವೆಂಬರ್‌ನಲ್ಲಿ ಜೀವಂತ ಪ್ರಮಾಣಪತ್ರಗಳನ್ನು (ಲೈಫ್ ಸರ್ಟಿಫಿಕೇಟ್ ) ನೀಡಬೇಕು ಎಂಬ ಕಡ್ಡಾಯ ನಿಯಮ ಇದೀಗ ಸಡಿಲಿಕೆಯಾಗಿದೆ.  ಪಿಂಚಣಿದಾರರು ಈಗ ತಮ್ಮ ಅನುಕೂಲಕ್ಕೆ ಅನುಗುಣವಾಗಿ ವರ್ಷದ ಯಾವುದೇ ತಿಂಗಳಲ್ಲಿ ಜೀವಂತ ಪ್ರಮಾಣಪತ್ರಗಳನ್ನು ನೀಡಬಹುದು. ಆದರೆ ಒಂದು ಶರತ್ತು:  ನೀವು ಜನವರಿಯಲ್ಲಿ ಪ್ರಮಾಣಪತ್ರವನ್ನು ಸಲ್ಲಿಸಿದರೆ, ಮುಂದಿನ ವರ್ಷದ ಜನವರಿ ತಿಂಗಳಲ್ಲೇ  ನೀವು ಅದನ್ನು ಸಲ್ಲಿಸಬೇಕಾಗುತ್ತದೆ , ಇಲ್ಲದಿದ್ದರೆ ಪಿಂಚಣಿಯನ್ನು ನಂತರದ ತಿಂಗಳಿನಿಂದ ತಡೆಹಿಡಿಯಲಾಗುತ್ತದೆ.  ಇಪಿಎಫ್‌ಒ ಪ್ರಧಾನ ಕಚೇರಿ ಆಯುಕ್ತ ಮುಖೇಶ್ ಕುಮಾರ್ ಈ ಕುರಿತು ಸೂಚನೆಗಳನ್ನು ನೀಡಿದ್ದಾರೆ. ಇಪಿಎಫ್‌ಒ ಇದುವರೆಗೆ ಡಿಸೆಂಬರ್‌  ಒಳಗಾಗಿ ಅಂದರೆ ನವೆಂಬರ್ ತಿಂಗಳಿನಲ್ಲೇ  ಜೀವಂತ ಪ್ರಮಾಣಪತ್ರವನ್ನು ಸಲ್ಲಿಸುವ ನಿಯಮವನ್ನು ಮಾಡಿತ್ತು. ಇದರಿಂದಾಗಿ , ಪ್ರಾದೇಶಿಕ ಕಚೇರಿಗಳಲ್ಲಿ ಪಿಂಚಣಿದಾರರ ಒತ್ತಡ ಹೆಚ್ಚುತ್ತಿತ್ತು. ನವೆಂಬರ್  ತಿಂಗಳು ಪೂರ್ತಿ ಪಿಂಚಣಿದಾರರ ಜಮಾವಣೆಯಿಂದಾಗಿ ಎಲ್ಲ ಕಚೇರಿಗಳ ಕಾರ್ಯಚಟುವಟಿಕೆಗೆ ತೊಂದರೆಯಾಗುತ್ತಿತ್ತು. ಈ ಒತ್ತಡ ನಿವಾರಣೆ ಸಲುವಾಗಿ ಇಪಿಎಫ್‌ಒ ಅದನ್ನು ವರ್ಷದ ಯಾವುದೇ ತಿಂಗಳಲ್ಲಿ ಸಲ್ಲಿಸಬಹುದು ಎಂಬ ಸೂಚನೆ ನೀಡಿದೆ.  ಆದರೆ  ಪಿಂಚಣಿದಾರರು ಯಾವ ತಿಂಗಳಲ್ಲಿ ಪ್ರಮಾಣಪತ್ರವನ್ನು ಸಲ್ಲಿಸುತ್ತಾರೋ, ನಂತರದ ವರ್ಷಗಳಲ್ಲಿ ಅವರು ಅದನ್ನು ಅದೇ  ತಿಂಗಳಲ್ಲಿ ಸಲ್ಲಿಸಬೇಕು. ಈ ನಿರ್ದೇಶನದಿಂದ  ಉತ್ತರ ಪ್ರದೇಶದ  ೩ ಲಕ್ಷ  ಮತ್ತು ದೇಶಾದ್ಯಂತ  ೧ ಕೋಟಿ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಇಪಿಎಫ್‌ಒ ಮಂಡಳಿಯ ಸದಸ್ಯ ಸುಖದೇವ್ ಪ್ರಸಾದ್ ಮಿಶ್ರಾ ಹೇಳುತ್ತಾರೆ. (ವಿವರಗಳಿಗೆ   ಇಲ್ಲಿ ಕ್ಲಿಕ್ಕಿಸಿ)

2020: ನವದೆಹಲಿ: 2012 ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ  ಶಿಕ್ಷಿತ ಅಪರಾಧಿಗಳನ್ನು ಜನವರಿ 22ರಂದು ಗಲ್ಲಿಗೇರಿಸಲು ಸಾಧ್ಯವಾಗುವುದಿಲ್ಲ ಎಂದು ದೆಹಲಿ ಸರ್ಕಾರವು ದೆಹಲಿ ಹೈಕೋರ್ಟಿಗೆ  2020 ಜನವರಿ 15 ಬುಧವಾರ ತಿಳಿಸಿತು.ಡೆತ್ ವಾರಂಟ್  ಕಾರ್ಯಗತಗೊಳಿಸುವುದಕ್ಕೆ ಮುನ್ನ  ಅಪರಾಧಿಗಳ ಕ್ಷಮಾದಾನ ಕೋರಿಕೆ ಅರ್ಜಿಯ  ಇತ್ಯರ್ಥಕ್ಕಾಗಿ ಕಾಯಬೇಕಾದ  ಸೆರೆಮನೆಯ ನಿಯಮಾವಳಿಗಳಿಗೆ ಸರ್ಕಾರವು ಬದ್ಧವಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. "ಜನವರಿ ೨೧ ರಂದು, ನಾವು ಹೊಸ ಡೆತ್ ವಾರಂಟ್ ಜಾರಿ ಕೋರಿ ಕೆಳ ನ್ಯಾಯಾಲಯಕ್ಕೆ ಹೋಗುತ್ತೇವೆ. ಕಾನೂನಿನ ಪ್ರಕಾರ, ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸಿದ ನಂತರ, ಅಪರಾಧಿಗಳಿಗೆ ೧೪ ದಿನಗಳನ್ನು ನೀಡಲಾಗುತ್ತದೆ, ”ಎಂದು ಸರ್ಕಾರ ಹೇಳಿತು.  ದೆಹಲಿ ಸರ್ಕಾರದ ಗೃಹ ಇಲಾಖೆಯು ಕ್ಷಮಾದಾನ ಕೋರಿಕೆ ಅರ್ಜಿಯನ್ನು  ಈದಿನ ತಿರಸ್ಕರಿಸಿ ಅದನ್ನು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ರವಾನಿಸಿತು. ಕಡತವನ್ನು ನಂತರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುವುದು,  ಅಲ್ಲಿಂದ  ಅದನ್ನು ರಾಷ್ಟ್ರಪತಿಯವರಿಗೆ  ಕಳುಹಿಸಲಾಗುತ್ತದೆ. ೨೦೧೨ ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ  ಗುರಿಯಾಗಿರುವ  ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಮುಖೇಶ್ ಸಿಂಗ್  2020 ಜನವರಿ 14ರ ಮಂಗಳವಾರ ರಾಷ್ಟ್ರಪತಿ  ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಕೋರಿಕೆ  ಅರ್ಜಿಯನ್ನು ಸಲ್ಲಿಸಿದ್ದ. (ವಿವರಗಳಿಗೆ   ಇಲ್ಲಿ ಕ್ಲಿಕ್ಕಿಸಿ)

2020: ವಾಷಿಂಗ್ಟನ್:  ಸೌರವ್ಯೂಹದ  ಅತಿ ಪ್ರಾಚೀನ ಘನ  ವಸ್ತುವೊಂದು ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದ್ದು, ಇದು ನಕ್ಷತ್ರದ ಅತಿ ಸಣ್ಣ ತುಣುಕು ಎಂದು ವಿಜ್ಞಾನಿಗಳು 2020 ಜನವರಿ 15ರ ಬುಧವಾರ ತಿಳಿಸಿದರು.  ಈ ಘನ ವಸ್ತು ೭೦೦ ಕೋಟಿ ವರ್ಷಗಳಷ್ಟು ಹಳೆಯದಾಗಿದೆ ಎಂದು  ವಿಜ್ಞಾನಿಗಳು ಹೇಳಿದರು. ಐವತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ನಿರ್ಜನ ಪ್ರದೇಶದಲ್ಲಿ ಉಲ್ಕೆಯೊಂದು ಅಪ್ಪಳಿಸಿದಾಗ ಅದರ ಜೊತೆಗೆ ಈ ನಕ್ಷತ್ರದ ಚೂರು ಸಹ ಭೂಮಿಗೆ ಬಂದು ಸೇರಿಕೊಂಡಿತು. ಇದು ಸೂರ್ಯನ ಸೃಷ್ಟಿಗೂ ಮುನ್ನ ತಾರೆಗಳು ಉದಯಿಸುವಾಗ ಜನಿಸಿರುವ ವಸ್ತು ಎಂಬುದು ಪರೀಕ್ಷೆಯಿಂದ  ತಿಳಿದುಬಂದಿದೆ. ಇದರಿಂದ ತಾರೆಗಳ ಉಗಮದ ಬಗ್ಗೆ ಹೊಸ ಮಾಹಿತಿಗಳು ಸಿಗಲಿದ್ದು, ಈ ವರೆಗೆ ಇರುವ ಸಿದ್ಧಾಂತಗಳನ್ನು ಮೀರಿದ ಮತ್ತೊಂದು ಸಿದ್ಧಾಂತ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಷಿಕಾಗೋ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಫಿಲಿಪ್ ಹೆಕ್ ತಿಳಿಸಿದರು. . (ವಿವರಗಳಿಗೆ   ಇಲ್ಲಿ ಕ್ಲಿಕ್ಕಿಸಿ)

ಇಂದಿನ ಇತಿಹಾಸ  History Today ಜನವರಿ 15  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)



No comments:

Post a Comment