ನಾನು ಮೆಚ್ಚಿದ ವಾಟ್ಸಪ್

Thursday, January 9, 2020

ಇಂದಿನ ಇತಿಹಾಸ History Today ಜನವರಿ 09


2020: ನವದೆಹಲಿ: ೨೦೧೯ರ ಪೌರತ್ವ ತಿದ್ದುಪಡಿ ಕಾಯ್ದೆಯ(ಸಿಎಎ) ಸಿಂಧುತ್ವ ಪ್ರಶ್ನಿಸಿದ ಹಾಗೂ ಸಿಎಎ ಸಂವಿಧಾನಬದ್ಧ ಎಂಬುದಾಗಿ ಘೋಷಿಸಬೇಕು  ಎಂಬ ಕೋರಿಕೆ ಮಂಡಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಹಿಂಸಾಚಾರ ನಿಂತ ಬಳಿಕವೇ ನಡೆಸುವುದಾಗಿ ಸುಪ್ರೀಂಕೋರ್ಟ್ 2020 ಜನವರಿ 09ರ ಗುರುವಾರ ಸ್ಪಷ್ಟ ಪಡಿಸಿತು. ದೇಶ ಪ್ರಸ್ತುತ ಸಂದಿಗ್ಧ ಕಾಲಘಟ್ಟದಲ್ಲಿದೆ. ಇಂತಹ ಅರ್ಜಿಗಳಿಂದ ಯಾವುದೇ ಸಹಾಯವಾಗುವುದಿಲ್ಲ. ಹೀಗಾಗಿ ಹಿಂಸಾಚಾರ ನಿಂತ ನಂತರವೇ ಸಿಎಎ ಕುರಿತ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ  ಬೋಬ್ಡೆ ಹೇಳಿದರು.  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನಬದ್ಧ ಎಂಬುದಾಗಿ ಘೋಷಿಸಬೇಕು. ಅಲ್ಲದೇ ಕಾನೂನಿನ ಕುರಿತು ಪ್ರತಿಭಟನೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ವಿನೀತ್ ಧಾಂಡಾ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಸಿಜೆಐ ಬೋಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ ಅವರ ಮುಂದೆ ಪ್ರಸ್ತಾಪಿಸಿದಾಗ ಸಿಜೆಐ ಬೋಬ್ಡೆ ಅವರು ಸ್ಪಷ್ಟನೆ ನೀಡಿದರು. ೨೦೧೪ರ ಡಿಸೆಂಬರ್ ೩೧ಕ್ಕೆ ಮುನ್ನ ಧಾರ್ಮಿಕ ಕಿರುಕುಳದ ಕಾರಣಕ್ಕಾಗಿ ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕಲ್ಪಿಸಲು ಪೌರತ್ವ ಕಾಯ್ದೆಗೆ ಮಾಡಲಾದ ೨೦೧೯ರ ತಿದ್ದುಪಡಿಗಳ ಸಿಂಧುತ್ವವನ್ನು ಪ್ರಶ್ನಿಸಿ ೬೦ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದೆ. ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳು ಕಾಯ್ದೆಯು ಧಾರ್ಮಿಕ ಅಸ್ಮಿತೆಯನ್ನು ಪೌರತ್ವಕ್ಕೆ ಜೋಡಿಸಿದ ಪರಿಣಾಮವಾಗಿ ಭಾರತೀಯ ಸಂವಿಧಾನದ ಜಾತ್ಯತೀತ ಸ್ವರೂಪದ ಉಲ್ಲಂಘನೆಯಾಗಿದೆ ಎಂದು ವಾದಿಸಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿಧಿಸಲಾಗಿರುವ ಗಲ್ಲು ಶಿಕ್ಷೆಯಿಂದ ಪಾರಾಗುವ ಕೊನೆಯ ಯತ್ನವಾಗಿ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮ  2020 ಜನವರಿ 09ರ ಗುರುವಾರ ಸುಪ್ರೀಂಕೋರ್ಟಿಗೆ ಕ್ಯೂರೇಟಿವ್ ಅರ್ಜಿ ಸಲ್ಲಿಸಿದ. ಕ್ಯುರೇಟಿವ್ ಅರ್ಜಿಯು ಶಿಕ್ಷಿತ ಅಪರಾಧಿಗೆ ಲಭ್ಯವಿರುವ ಕೊನೆಯ ಕಾನೂನುಬದ್ಧ ಪರಿಹಾರವಾಗಿದೆ. ಪ್ರಕರರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಖೇಶ್ (೩೨), ಪವನ್ ಗುಪ್ತ (೨೫), ವಿನಯ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರನ್ನು ೨೦೨೦ರ ಜನವರಿ ೨೨ರಂದು ಬೆಳಗ್ಗೆ ಗಂಟೆಗೆ ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಗುವುದು ಎಂದು ಪ್ರಕಟಿಸಿದ್ದ ದೆಹಲಿ ನ್ಯಾಯಾಲಯವು ಮರಣದಂಡನೆ ಜಾರಿಗಾಗಿಡೆತ್ ವಾರಂಟ್ಎಂಬುದಾಗಿಯೇ ಪರಿಗಣಿತವಾಗಿರುವಬ್ಲ್ಯಾಕ್ ವಾರಂಟ್ಜಾರಿ ಮಾಡಿತ್ತು. ತನ್ನ ಕ್ಯುರೇಟಿವ್ ಅರ್ಜಿಯಲ್ಲಿ ವಿನಯ್ ತನ್ನ ಚಿಕ್ಕ ವಯಸ್ಸನ್ನು ತಗ್ಗಿಸುವ ಯತ್ನ ಎಂಬುದಾಗಿ ತಪ್ಪಾಗಿ ಹೇಳಿ ತನ್ನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು  ಎಂದು ಪ್ರತಿಪಾದಿಸಿದ್ದಾನೆ. ‘ಅರ್ಜಿದಾರರ ಸಾಮಾಜಿಕ-ಆರ್ಥಿಕ ಸನ್ನಿವೇಶಗಳು, ಅನಾರೋಗ್ಯ ಪೀಡಿತ ಪೋಷಕರು ಸೇರಿದಂತೆ ಕುಟುಂಬ ಅವಲಂಬಿತರ ಸಂಖ್ಯೆ, ಜೈಲಿನಲ್ಲಿ ಉತ್ತಮ ನಡವಳಿಕೆ ಮತ್ತು ಸುಧಾರಣೆಯ ಸಂಭವನೀಯತೆಯನ್ನು ಸಮರ್ಪಕವಾಗಿ ಪರಿಗಣಿಸಲಾಗಿಲ್ಲ, ಇದರಿಂದಾಗಿ ನ್ಯ್ಯಾಯದಾನದಲ್ಲಿ ಸಂಪೂರ್ಣ ಅನ್ಯಾಯವಾಗಿದೆಎಂದು ಮನವಿಯಲ್ಲಿ ತಿಳಿಸಲಾಗಿದೆ. ನ್ಯಾಯಾಲಯದ ತೀರ್ಪು ನೀಡುವಲ್ಲಿ ಮತ್ತು ತನ್ನ ಹಾಗೂ ಇತರರಿಗೆ ವಿಧಿಸಬೇಕಾದ ಶಿಕ್ಷೆಯನ್ನು ನಿರ್ಧರಿಸುವಲ್ಲಿ "ಸಮಾಜದ ಸಾಮೂಹಿಕ ಆತ್ಮಸಾಕ್ಷಿ" ಮತ್ತು "ಸಾರ್ವಜನಿಕ ಅಭಿಪ್ರಾಯ" ದಂತಹ ಅಂಶಗಳನ್ನು ಅವಲಂಬಿಸಿದೆ ಎಂದು ಅರ್ಜಿ ವಾದಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ತೀರ್ಪುಗಳು ಭಾರತದಲ್ಲಿ ಮರಣದಂಡನೆ ವಿಧಿಸುವ ಕಾನೂನನ್ನು ಗಮನಾರ್ಹವಾಗಿ ಬದಲಿಸಿರುವುದರಿಂದ ಮತ್ತು ಅನೇಕ ಶಿಕ್ಷಿತರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿರುವುದರಿಂದ ತನ್ನ ವಿರುದ್ಧದ ತೀರ್ಪು ಕಾನೂನು ಪ್ರಕಾರ ಕೆಟ್ಟದ್ದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ವಾರ ಸಂಭವಿಸಿದ ಹಿಂಸಾಚಾರದ ವಿರುದ್ಧ ಪ್ರತಿಭಟಿಸುತ್ತಿರುವ ಜೆಎನ್ಯು ವಿದ್ಯಾರ್ಥಿಗಳು ಉಪಕುಲಪತಿ ಜಗದೀಶ್ ಕುಮಾರ್ ವಜಾಕ್ಕೆ ಆಗ್ರಹಿಸಿ 2020 ಜನವರಿ 09ರ ಗುರುವಾರ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಿದರು. ಆದರೆ ಮಾರ್ಗಮಧ್ಯದಲ್ಲಿಯೇ ತಡೆದ ಪೊಲೀಸರು ಅವರನ್ನು ಬಂಧಿಸಿದರು. ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಬಹುತೇಕ ವಿದ್ಯಾರ್ಥಿಗಳನ್ನು ಪೊಲೀಸರು ತಡೆದು ಬಸ್ಸು ಒಂದಕ್ಕೆ ಹತ್ತಿಸಿದರು. ಮೆರವಣಿಗೆ ತಡೆಯುವ ಯತ್ನ ನಡೆಸಿದ ಪೊಲೀಸರು, ಜನಪಥದಲ್ಲಿ ಸಂಚಾರ ಅಡ್ಡಗಟ್ಟಲು ಯತ್ನಿಸಿದ ಪ್ರತಿಭಟನಕಾರರನ್ನು ನಿಯಂತ್ರಿಸಲು ಲಾಠಿ ಪ್ರಹಾರವನ್ನೂ ನಡೆಸಿದರು ಎಂದು ವರದಿಗಳು ತಿಳಿಸಿವೆ.  ಇದಕ್ಕೆ ಮುನ್ನ ಧ್ವನಿವರ್ಧಕಗಳ ಮೂಲಕ ಪೊಲೀಸರು ಶಾಂತಿ ಕಾಯ್ದುಕೊಳ್ಳುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡಿದರು.  ಪೊಲೀಸರು ಕೆಲವು ಮಹಿಳಾ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಯತ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಆಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಬೆತ್ತ ಬೀಸಿದರು ಎಂದು ವರದಿಗಳು ಹೇಳಿವೆ. ಮುಂಜಾಗರೂಕತಾ ಕ್ರಮವಾಗಿ ಪೊಲೀಸರು ರಾಷ್ಟ್ರಪತಿ ಭವನದ ಉತ್ತರ- ದಕ್ಷಿಣ ಬ್ಲಾಕ್ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು  ನಿಯೋಜಿಸಿದ್ದರು.  ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ತೆರಳುವ ಮುನ್ನ ಜೆಎನ್ಯು ವಿದ್ಯಾರ್ಥಿ ಸಂಘ ಮತ್ತು ಜೆಎನ್ಯು ಶಿಕ್ಷಕರ ಸಂಘದ ನಿಯೋಗವೊಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್ಆರ್ಡಿ) ಸಚಿವಾಲಯ ಅಧಿಕಾರಿಗಳನ್ನು ಭೇಟಿ ಮಾಡಿ ಉಪಕುಲಪತಿ ಜಗದೀಶ್ ಕುಮಾರ್ ಅವರನ್ನು ಹುದ್ದೆಯಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿತು. ಜಗದೀಶ್ ಕುಮಾರ್ ಅವರನ್ನು ಕಿತ್ತು ಹಾಕಲು ಸರ್ಕಾರವು ಈವರೆಗೂ ನಿರಾಕರಿಸಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖಾರೆ ಹೇಳಿದರು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಅಟಲ್ ಬಿಹಾರಿ ವಾಜಪೇಯಿ  ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಮುರಳಿ ಮನೋಹರ ಜೋಷಿ ಅವರು ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ ಉಪಕುಲಪತಿ ಮಮಿಂಡಾಲ ಜಗದೀಶ್ ಕುಮಾರ್ ಅವರನ್ನು ತತ್ ಕ್ಷಣ ವಜಾಗೊಳಿಸುವಂತೆ ಸರ್ಕಾರಕ್ಕೆ  2020 ಜನವರಿ 09ರ ಗುರುವಾರ ಸಲಹೆ ಮಾಡಿದರು. ವಿಶ್ವ ವಿದ್ಯಾಲಯದ ಬಿಕ್ಕಟ್ಟು ಇತ್ಯರ್ಥಕ್ಕೆ ಕ್ರಮಗಳನ್ನು ಕೈಗೊಂಡು ಸೂತ್ರ ರೂಪಿಸುವಂತೆ ಶಿಕ್ಷಣ ಸಚಿವಾಲಯವು ಎರಡು ಬಾರಿ ಉಪಕುಲಪತಿ ಅವರಿಗೆ ಸಲಹೆ ಮಾಡಿದ್ದ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿದ ಜೋಷಿ, ’ಸರ್ಕಾರದ ಸೂಚನೆಗಳನ್ನು ಪಾಲಿಸದ ಉಪಕುಲಪತಿ ಅವರನ್ನು ತತ್ ಕ್ಷಣ ವಜಾಗೊಳಿಸುವುದು ಸೂಕ್ತಎಂದು ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಜನವರಿ09  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)






No comments:

Post a Comment