ಇಂದಿನ ಇತಿಹಾಸ
History Today ಜನವರಿ 04
2020: ಮುಂಬೈ: ಶಿವಸೇನಾ
ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರಕ್ಕೆ ಆಗಿರುವ ಹಿನ್ನಡೆಯೊಂದರಲ್ಲಿ ಸೇನಾ ಸಚಿವ ಅಬ್ದುಲ್ ಸತ್ತಾರ್ ಅವರು ತಮ್ಮ ಹುದ್ದೆಗೆ 2020 ಜನವರಿ 04ರ ಶನಿವಾರ
ರಾಜೀನಾಮೆ
ನೀಡಿದ್ದಾರೆ ಎಂದು ವರದಿಯಾಯಿತು. ಆದರೆ ಪಕ್ಷ ಮೂಲಗಳು ವರದಿಯನ್ನು ನಿರಾಕರಿಸಿದ್ದು, ಸತ್ತಾರ್ ಅವರು 2020 ಜನವರಿ 05ರ ಭಾನುವಾರ ಪಕ್ಷದ ನಾಯಕ ಉದ್ಧವ್ ಠಾಕ್ರೆ ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದವು. ಔರಂಗಾಬಾದ್ ಜಿಲ್ಲೆಯ ಸಿಲ್ಲೋದ್
ಕ್ಷೇತ್ರದ ಶಾಸಕ ಸತ್ತಾರ್ ಅವರು ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದಿಂದ ಶಿವಸೇನೆಗೆ ಪಕ್ಷಾಂತರಗೊಂಡಿದ್ದರು. ಪಕ್ಷವು ತನಗೆ ಸಂಪುಟ ದರ್ಜೆಯನ್ನು ನೀಡದೆ, ರಾಜ್ಯ ಸಚಿವ ಸ್ಥಾನ ನೀಡಿದ್ದಕ್ಕಾಗಿ ಸತ್ತಾರ್ ಅವರು ಪಕ್ಷ ನಾಯಕತ್ವದ ಜೊತೆಗೆ ಮುನಿಸಿಕೊಂಡಿದ್ದರು ಎಂದು ಘಟನಾವಳಿಗಳ ಬಗ್ಗೆ ಅರಿವು ಹೊಂದಿರುವ ಅವರ ಆಪ್ತರೊಬ್ಬರು ತಿಳಿಸಿದರು. ಸಚಿವರ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಅಥವಾ ರಾಜಭವನದಿಂದ ಯಾವುದೇ ದೃಢೀಕರಣ ಬಂದಿಲ್ಲ. ಸ್ವತಃ ಸತ್ತಾರ್ ಅವರೂ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಮಾತನಾಡಿಲ್ಲ. ಸತ್ತಾರ್ ರಾಜೀನಾಮೆ ಬಗ್ಗೆ ಹಿರಿಯ ಶಿವಸೇನಾ ನಾಯಕರು ತಮಗೆ ಸತ್ತಾರ್ ಅವರು ರಾಜೀನಾಮೆ ನೀಡಿರುವ ಬಗ್ಗೆ ಅರಿವು ಇಲ್ಲ ಎಂದು ಹೇಳಿದ್ದಾರೆ. ಪಕ್ಷವು ಅವರ ಮನವೊಲಿಸಲು ಯತ್ನಿಸುತ್ತಿದೆ. ಸತ್ತಾರ್ ಅವರು ರಾಜೀನಾಮೆ ನೀಡಿಲ್ಲ ಎಂದು ಹಿರಿಯ ಸೇನಾ ಕಾರ್ಯಕರ್ತ ಅನಿಲ್ ದೇಸಾಯಿ ಪ್ರತಿಪಾದಿಸಿದ್ದಾರೆ. ಈ ಮಧ್ಯೆ ಸೇನಾದ
ಅರ್ಜುನ್ ಖೋತ್ಕರ್ ಅವರನ್ನು ಪಕ್ಷದ ಪರವಾಗಿ ಸತ್ತಾರ್ ಅವರನ್ನು ಭೇಟಿ ಮಾಡಿ ವಿಷಯದ ಚರ್ಚೆಗಾಗಿ ಕಳುಹಿಸಲಾಗಿತ್ತು. ಖೋತ್ಕರ್ ಅವರು ಔರಂಗಾಬಾದ್ ಹೋಟೆಲ್ ಒಂದರಲ್ಲಿ ಸತ್ತಾರ್ ಅವರನ್ನು ಶನಿವಾರ ಭೇಟಿ ಮಾಡಿದರು ಆದರೆ ಅಲ್ಲಿಂದ ಹೊರಡುವ ಮುನ್ನ ಯಾವುದೇ ಹೇಳಿಕೆಯನ್ನೂ ನೀಡಲಿಲ್ಲ. ( ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ: ಕಾಂಗ್ರೆಸ್ ಪಕ್ಷದ ಆಧೀನ ಸಂಘಟನೆ ಸೇವಾದಳವು ಪ್ರಕಟಿಸಿರುವ ವಿವಾದಾತ್ಮಕ ವೀರ ಸಾವರ್ಕರ್ ಕಿತನೆ ವೀರ್ ?’ ಹಿಂದಿ ಪುಸ್ತಕವನ್ನು ಹಿಂತೆಗೆದುಕೊಳ್ಳುವಂತೆ ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷವಾಗಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) 2020 ಜನವರಿ 04ರ ಶನಿವಾರ ಆಗ್ರಹಿಸಿತು. ತ್ರಿಪಕ್ಷ ಮೈತ್ರಿಕೂಟದಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಅಂಗಪಕ್ಷಗಳಾಗಿವೆ. ಕಾಂಗ್ರೆಸ್ ಪಕ್ಷದ ಆಧೀನ ಸಂಸ್ಥೆಯಾಗಿರುವ ಸೇವಾದಳವು ಮಧ್ಯಪ್ರದೇಶದಲ್ಲಿ ತನ್ನ ಶಿಬಿರದಲ್ಲಿ ಈ ಪುಸ್ತಕವನ್ನು ವಿತರಿಸಿದ್ದು, ಪುಸ್ತಕವು ಸಾವರ್ಕರ್ ಅವರ ದೇಶಭಕ್ತಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ. ‘ಸಾವರ್ಕರ್ ಅವರು ಜೀವಂತರಾಗಿ ಇಲ್ಲದೇ ಇರುವುದರಿಂದ ಇಂತಹ ಪ್ರತಿಪಾದನೆ ಮಾಡುವುದು ಸರಿಯಲ್ಲ’ ಎಂದು ಎನ್‌ಸಿಪಿ ಮುಖ್ಯ ವಕ್ತಾರ ನವಾಬ್ ಮಲಿಕ್ ಹೇಳಿದರು. ವಿನಾಯಕ ದಾಮೋದರ ಸಾವರ್ಕರ್ ಅವರು ಅಂಡಮಾನ್ ಸೆಲ್ಯುಲಾರ್ ಸೆರೆಮನೆಯಿಂದ ಬಿಡುಗಡೆಯಾಗಿ ಬಂದ ಬಳಿಕ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದಾರೆ. ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಜೊತೆಗೆ ಅವರು ದೈಹಿಕ ಸಂಬಂಧವನ್ನೂ ಹೊಂದಿದ್ದರು’ ಎಂದು ವಿವಾದಾತ್ಮಕ ಪುಸ್ತಕವು ಆಪಾದಿಸಿದೆ. ‘ಪುಸ್ತಕವನ್ನು ಹಿಂತೆಗೆದುಕೊಳ್ಳಬೇಕು. ನಿಮಗೆ ವ್ಯಕ್ತಿಗಳ ಜೊತೆಗೆ ಸೈದ್ಧಾಂತಿಕ ಭಿನ್ನಮತ ಇರಬಹುದು. ಆದರೆ ವ್ಯಕ್ತಿ ನಮ್ಮ ಸುತ್ತಮುತ್ತ ಇಲ್ಲದೇ ಇದ್ದಾಗ ಇಂತಹ ವೈಯಕ್ತಿಕ ಟೀಕೆಗಳನ್ನು ಮಾಡುವುದು ಸರಿಯಲ್ಲ’ ಎಂದು ನವಾಬ್ ಮಲಿಕ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಮೀರತ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2020 ಜನವರಿ 04ರ ಶನಿವಾರ ಉತ್ತರಪ್ರದೇಶದ ಪಶ್ಚಿಮಭಾಗದ ಮುಜಾಫ್ಫರನಗರದಲ್ಲಿ ಕಳೆದ ತಿಂಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧೀ ಪ್ರತಿಭಟನೆಗಳ ವೇಳೆಯಲ್ಲಿ ಮೃತರಾದವರು, ಗಾಯಗೊಂಡವರು ಮತ್ತು ಬಂಧನಕ್ಕೆ ಒಳಗಾದವರ ಮನೆಗಳಿಗೆ ಭೇಟಿ ನೀಡಿ ಅವರ ಜೊತೆಗೆ ಮಾತುಕತೆ ನಡೆಸಿದರು. ಪೂರ್ವ ಉತ್ತರಪ್ರದೇಶದ ಉಸ್ತುವಾರಿ ವಹಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಮೀರತ್ ಹೊರವಲಯದಲ್ಲಿ ಡಿಸೆಂಬರ್ ೨೦ರಂದು ನಡೆದ ಪ್ರತಿಭಟನೆ ಕಾಲದಲ್ಲಿ ಮೃತರಾದ ವ್ಯಕ್ತಿಗಳ ಸಂಬಂಧಿಗಳನ್ನು ಭೇಟಿ ಮಾಡಿದರು. ಈ ಮುನ್ನ ಅವರಿಗೆ ಮೃತರ ಬಂಧುಗಳ ಭೇಟಿಗೆ ಅವಕಾಶ ನಿರಾಕರಿಸಲಾಗಿತ್ತು. ಪ್ರಿಯಾಂಕಾ ಅವರು ದೆಹಲಿಗೆ ವಾಪಸಾಗುವ ಮಾರ್ಗದಲ್ಲಿ ಬೈಪಾಸ್ ರಸ್ತೆಯಲ್ಲಿ ಐವರು ಮೃತರ ಕುಟುಂಬಗಳ ಜೊತೆ ಮಾತನಾಡಿದರು ಎಂದು ಮೀರತ್ ನಗರ ಕಾಂಗ್ರೆಸ್ ಘಟಕದ ಮುಖ್ಯಸ್ಥ ಜಹೀದ್ ಅನ್ಸಾರಿ ಹೇಳಿದರು. ಪ್ರಿಯಾಂಕಾಗಾಂಧಿ ಅವರು ಮುಜಾಫ್ಫರನಗರಕ್ಕೆ ಶನಿವಾರ ಬೆಳಗ್ಗೆ ಆಗಮಿಸಿ ಮೀನಾಕ್ಷಿ ಚೌಕದ ಬಳಿ ಮದ್ರಸಾ ಹೊಜ್ ಇ ಇಲ್ಮಿಯಾ ನಡೆಸುವ ಮೌಲಾನಾ ಅಸದ್ ಹುಸೈನಿ ಅವರನ್ನು ಭೇಟಿ ಮಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆಯಲ್ಲಿ ಇದೇ ಚೌಕದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ‘ಸಂತ್ರಸ್ಥರೆಲ್ಲರೂ ಪೊಲೀಸರು ಭೀತಿಯ ಸಾಮ್ರಾಜ್ಯ ಸೃಷ್ಟಿಸಿದ್ದಾರೆ ಮತ್ತು ಮಾಡದ ತಪ್ಪುಗಳಿಗಾಗಿ ತಮ್ಮನ್ನು ಥಳಿಸುತ್ತಿದ್ದಾರೆ ಎಂದು ಆಪಾದಿಸಿದರು’ ಎಂದು ಹುಸೈನಿ ಮತ್ತು ಇತರ ಸಂತ್ರಸ್ಥರ ಜೊತೆಗಿನ ಮಾತುಕತೆಯ ಬಳಿಕ ಪ್ರಿಯಾಂಕಾ ಅವರು ಹೇಳಿದರು. ಪೊಲೀಸರು ಮದ್ರಸಾವನ್ನು ಪ್ರವೇಶಿಸಿ ಮೌಲಾನಾ ಮತ್ತು ಅವರ ವಿದ್ಯಾರ್ಥಿಗಳನ್ನು ಥಳಿಸಿದರು ಎಂದು ಪ್ರಿಯಾಂಕಾ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ: ಹದಿನಾರು ವರ್ಷಗಳ ಹಿಂದೆ ಕಪಿಲ್ ದೇವ್ ಅವರ ಉತ್ತರಾಧಿಕಾರಿ ಎಂಬ ಹೆಗ್ಗಳಿಕೆಯೊಂದಿಗೆ ಭಾರತ ತಂಡವನ್ನು ಪ್ರವೇಶಿಸಿದ್ದ ಆಲ್ ರೌಡರ್ ಇರ್ಫಾನ್ ಪಠಾಣ್ 2020 ಜನವರಿ 04ರ ಶನಿವಾರ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು. ಎಡಗೈ ಸೀಮ್ ಬೌಲಿಂಗ್ ಆಲ್ ರೌಂಡ್ ಸಾಧನೆಯ ಮೂಲಕ ಮಿಂಚತೊಡಗಿದರೂ ಪದೇಪದೇ ಕಾಡುತ್ತಿದ್ದ ಗಾಯದ ಸಮಸ್ಯೆ ಇರ್ಫಾನ್ ಕ್ರಿಕೆಟ್ ಬದುಕಿಗೆ ಕಂಟಕವಾಗಿ ಕಾಡಿತ್ತು. ಹೀಗಾಗಿ ಕಪಿಲ್ ದೇವ್ ಸ್ಥಾನವನ್ನು ತುಂಬಲು ಅವರಿಂದ ಸಾಧ್ಯವಾಗಲೇ ಇಲ್ಲ. ಸ್ವಿಂಗ್ ಸ್ಪೆಷಲಿಸ್ಟ್: ಬಲಗೈ ಬ್ಯಾಟ್ ಮನ್ ಗಳಿಗೆ ಎಡಗೈ ಸ್ವಿಂಗ್ ಎಸೆತಗಳ ಮೂಲಕ ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ಇರ್ಫಾನ್ ಪಠಾಣ್ ೨೦೦೩ರ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡಿನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು. ೨೦೦೮ರ ಬಳಿಕ ಯಾವುದೇ ಟೆಸ್ಟಿನಲ್ಲಿ ಕಾಣಿಸಿಕೊಳ್ಳಲಿಲ್ಲ. ೨೦೦೪-೨೦೧೨ರ ಅವಧಿಯಲ್ಲಿ ಏಕದಿನ ತಂಡದ ಸದಸ್ಯರಾಗಿದ್ದರು. ೨೫ ಟೆಸ್ಟ್ ಗಳಿಂದ ೧,೧೦೫ ರನ್, ೧೦೦ ವಿಕೆಟ್; ೧೨೦ ಏಕದಿನ ಪಂದ್ಯಗಳಿಂದ ೧,೫೪೪ ರನ್ ಹಾಗೂ ೧೭೩ ವಿಕೆಟ್; ೨೪ ಟಿ೨೦ ಪಂದ್ಯಗಳಿಂದ ೧೭೨ ರನ್ ಹಾಗೂ ೨೮ ವಿಕೆಟ್ ಉರುಳಿಸಿದ್ದು ಇರ್ಫಾನ್ ಅವರ ಸಾಧನೆಯಾಗಿತ್ತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment