ಇಂದಿನ ಇತಿಹಾಸ History
Today ಜನವರಿ
16
2020: ನವದೆಹಲಿ:
ಗಣರಾಜ್ಯೋತ್ಸವ ಸಂದರ್ಭದಲ್ಲಿ ಶ್ರೀನಗರ ಹಾಗೂ ಕಾಶ್ಮೀರ ಕಣಿವೆಯಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆಸಲು ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ
ಸಂಘಟನೆ ಹೆಣೆದಿದ್ದ ಸಂಚನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿಯೇ ಭೇದಿಸಿ ವಿಫಲಗೊಳಿಸಿದರು. ಸಂಚಿಗೆ ಸಂಬಂಧಿಸಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದ್ದು, ಅವರಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶ ಪಡಿಸಿಕೊಳ್ಳಲಾಯಿತು. ಶ್ರೀನಗರದಲ್ಲಿ ಜೈಶ್-ಇ-ಮೊಹಮ್ಮದ್ ಹೆಣೆದಿದ್ದ
ಸಂಚನ್ನು ಪತ್ತೆ ಹಚ್ಚಿದ ಶ್ರೀನಗರ ಪೊಲೀಸರು ಗಣರಾಜ್ಯೋತ್ಸವದ ದಿನ ಕಣಿವೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಭಾರೀ ವಿಧ್ವಂಸಕ ಕೃತ್ಯದ ಅಪಾಯವನ್ನು ನಿವಾರಿಸಿದರು. ಜೈಶ್ -ಇ-ಮೊಹಮ್ಮದ್ ಭಯೋತ್ಪಾದಕ
ಸಂಘಟನೆ ಈ ಹುನ್ನಾರವನ್ನು ಹೂಡಿದ್ದುದನ್ನು
ಪತ್ತೆ ಹಚ್ಚಿದ ಪೊಲೀಸರು ಐವರನ್ನು ಇದಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ ಎಂದು ಕೇಂದ್ರ ಕಾಶ್ಮೀರ ವಲಯದ ಡಿಐಜಿ ಜಿ ಎಚ್ ಭಟ್
ತಿಳಿಸಿದರು. ಸಂಚನ್ನು ಬಯಲಿಗೆಳೆಯುವಲ್ಲಿ ಶ್ರೀನಗರ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಹಜರತ್ಬಾಲ್ ಪ್ರದೇಶದಲ್ಲಿ ಎರಡು ಗ್ರೆನೇಡ್ ಸ್ಫೋಟಗಳು ಸಂಚನ್ನು ಬಯಲಿಗೆಳೆದವು. ಗಣರಾಜ್ಯೋತ್ಸವಕ್ಕೂ ಮುನ್ನವೇ ಸಂಭವನೀಯವಾದ ಭಾರೀ ದಾಳಿಯನ್ನು ವಿಫಲಗೊಳಿಸಲಾಗಿದೆ’ ಎಂದು
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಒಂದರಲ್ಲಿ ತಿಳಿಸಿದರು. ಇದಕ್ಕೆ ಮುನ್ನ ಶ್ರೀನಗರದ ಸುತ್ತ ಮುತ್ತ ಇದೇ ಭಯೋತ್ಪಾದಕರ ತಂಡ ಎರಡು ಗ್ರೆನೇಡ್ ದಾಳಿಗಳನ್ನು ನಡೆಸಿತ್ತು ಎಂದೂ ಪೊಲೀಸರು ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಮರಣದಂಡನೆಗೆ ಗುರಿಯಾದ ಅಪರಾಧಿಯ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾದ ೧೪ ದಿನಗಳ ಬಳಿಕ
ಮಾತ್ರವೇ ಮರಣದ ಜಾರಿ ಸಾಧ್ಯ ಎಂಬ ನಿಯಮಾವಳಿ ಹಿನ್ನೆಲೆಯಲ್ಲಿ ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜನವರಿ ೨೨ರಂದು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ 2020 ಜನವರಿ
16ರ ಗುರುವಾರ ತೀರ್ಪು
ನೀಡಿತು. ಈ
ಮಧ್ಯೆ ಅಪರಾಧಿಗಳ ಗಲ್ಲು ಜಾರಿ ವಿಳಂಬಕ್ಕೆ ದೆಹಲಿಯ ಆಪ್ ಸರ್ಕಾರವೇ ಹೊಣೆ ಎಂಬುದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಟೀಕಿಸಿತು. ನಿರ್ಭಯಾ ಸಾಮೂಹಿಕ
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಈಗಾಗಲೇ ನಿಗದಿಯಾಗಿರುವಂತೆ ಜನವರಿ ೨೨ರಂದು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ದೆಹಲಿಯ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಗುರುವಾರ ಆದೇಶ ನೀಡಿದರು. ಇದೇ ವೇಳೆಗೆ ತಿಹಾರ್ ಸೆರೆಮನೆ ಅಧಿಕಾರಿಗಳು ಕೂಡಾ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಉಲ್ಲೇಖಿಸಿ ಗಲ್ಲು ಜಾರಿಯನ್ನು ಮುಂದೂಡುವಂತೆ ಮತ್ತು ನೂತನ ದಿನಾಂಕ ನಿಗದಿ ಪಡಿಸುವಂತೆ ದೆಹಲಿ ಸರ್ಕಾರವನ್ನು ಕೋರಿತು. ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ತಾನು ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನ್ನು ತಿಳಿಸಿ ಸಲ್ಲಿಸಿದ ಅರ್ಜಿಯನ್ನು ಉಲ್ಲೇಖಿಸಿ ಈ ಆದೇಶ ನೀಡಿದ
ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರು ನಿಗದಿತ ಮರಣದಂಡನೆ ಕುರಿತ ವಸ್ತುಸ್ಥಿತಿ ವರದಿಯನ್ನು ಶುಕ್ರವಾರದ ಒಳಗಾಗಿ ಸಲ್ಲಿಸುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಇದೇ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ’ತೀವ್ರಗಾಮಿ ಪರಿವರ್ತನಾ ಶಿಬಿರ’ಗಳ ಮಾತನಾಡಿರುವ ರಕ್ಷಣಾ
ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ’ಈ ಶಿಬಿರಗಳಲ್ಲಿ ಸಂಪೂರ್ಣವಾಗಿ
ತೀವ್ರಗಾಮಿಗಳಾಗಿರುವ ಯುವ ಕಾಶ್ಮೀರಿಗಳನ್ನು ಪ್ರತ್ಯೇಕಿತರನ್ನಾಗಿ ಮಾಡಿ ಇರಿಸಲಾಗುತ್ತದೆ’ ಎಂದು
ಬಹಿರಂಗ ಪಡಿಸಿದರು. ‘ಪಾಕಿಸ್ತಾನದಲ್ಲಿ ಕೂಡಾ ಇಂತಹ ಶಿಬಿರಗಳು ಇವೆ’ ಎಂದು ರಾವತ್ ಹೇಳಿದರು. ನವದಹಲಿಯಲ್ಲಿ
ನಡೆದ ’ರೈಸೀನಾ ಸಂಭಾಷಣೆ ೨೦೨೦’ರಲ್ಲಿ ನಡೆದ ಚರ್ಚಾಕೂಟದಲ್ಲಿ ಮಾತನಾಡಿದ ಜನರಲ್ ರಾವತ್ ಅವರು ’ಕಾಶ್ಮೀರದಲ್ಲಿ ಇಂದು ೧೦-೧೨ರ ವಯಸ್ಸಿನಲ್ಲೇ
ಮಕ್ಕಳನ್ನು ತೀವ್ರವಾದಿಗಳನ್ನು ಪರಿವರ್ತಿಸಲಾಗುತ್ತಿದೆ’ ಎಂದು
ನುಡಿದರು. ‘ಇಂತಹ
ಜನರನ್ನು ಈಗಲೂ ತೀವ್ರವಾದಿತ್ವದಿಂದ ಪ್ರತ್ಯೇಕಿಸಿ ಕ್ರಮೇಣ ಮಂದಗಾಮಿಗಳನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಆದರೆ ಸಂಪೂರ್ಣವಾಗಿ ತೀವ್ರವಾದಿಗಳಾಗಿರುವ ಜನರಿದ್ದಾರೆ. ಇವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ತೀವ್ರವಾದದಿಂದ ಮುಕ್ತಗೊಳಿಸುವ ’ತೀವ್ರಗಾಮಿ ಪರಿವರ್ತನಾ ಶಿಬಿರ’ಗಳಿಗೆ ಕಳುಹಿಸಬೇಕಾಗುತ್ತದೆ. ನಮ್ಮ ರಾಷ್ಟ್ರದಲ್ಲಿ ನಾವು ಇಂತಹ ತೀವ್ರಗಾಮಿ ಪರಿವರ್ತನಾ ಶಿಬಿರಗಳನ್ನು ಹೊಂದಿದ್ದೇವೆ. ನಿಮಗೆ ಹೇಳಬೇಕೆಂದರೆ, ಪಾಕಿಸ್ತಾನದಲ್ಲೂ ಇಂತಹುದೇ ಶಿಬಿರಗಳಿವೆ. ಅವರು ತೀವ್ರವಾದಿಗಳನ್ನಾಗಿ ಯಾರನ್ನು ಮಾಡಿದ್ದಾರೋ ಅವರಲ್ಲಿ ಕೆಲವರು ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ ಎಂಬುದು ಅವರಿಗೂ ಗೊತ್ತಾಗಿದೆ’ ಎಂದು
ಜನರಲ್ ರಾವತ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಭಯೋತ್ಪಾದಕ ಸಂಪರ್ಕಗಳಿಗಾಗಿ ಬಂಧಿಸಲ್ಪಟ್ಟಿರುವ ಜಮ್ಮು
ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ರಾಷ್ಟ್ರದ ಮುಂಚೂಣಿಯ ಭಯೋತ್ಪಾದನಾ ತನಿಖಾ ಸಂಸ್ಥೆಯಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ವಿಚಾರಣೆಗೆ ಗುರಿ ಪಡಿಸಲಿದೆ. ಸಿಂಗ್
ಪ್ರಕರಣದ ತನಿಖೆ ನಡೆಸಿ ಭಯೋತ್ಪಾದಕ ಗುಂಪುಗಳ ಜೊತೆಗಿನ ಅವರ ಸಂಬಂಧಗಳ ಬಗ್ಗೆ ಪರಿಶೀಲಿಸುವಂತೆ ಗೃಹ ಸಚಿವಾಲಯವು 2020 ಜನವರಿ 16ರ ಗುರುವಾರ ಎನ್ಐಎಗೆ ಆದೇಶ ನೀಡಿತು. ದೇವಿಂದರ್
ಸಿಂಗ್ ಅವರನ್ನು ಜಮ್ಮುವಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂವರು ವ್ಯಕ್ತಿಗಳ ಜೊತೆಗೆ ತಮ್ಮ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅಡ್ಡಗಟ್ಟಲಾಗಿತ್ತು. ಸಿಂಗ್ ಅವರು ಹುಂಡೈ ವಾಹನದ ಮುಂಭಾಗದ ಆಸನದಲಿ ಇದ್ದರು. ಅದೇ ವಾಹನದಲ್ಲಿ ಭದ್ರತಾ ಸಂಸ್ಥೆಗಳು ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ಗಳು ಎಂಬುದಾಗಿ ಗುರುತಿಸಿರುವ ನವೀದ್ ಬಾಬು ಮತ್ತು ಅಸಿಫ್ ಅಹ್ಮದ್ ಮತ್ತು ವಕೀಲ ರಫಿ ಅಹ್ಮದ್ ಇದ್ದರು. ಬಳಿಕ
ಸಿಂಗ್ ಅವರನ್ನು ಭಯೋತ್ಪಾದನಾ ನಿಗ್ರಹ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಅಥವಾ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿತ್ತು. ಈ
ಮಧ್ಯೆ, ದೇವಿಂದರ್ ಸಿಂಗ್ ಗೆ ಈ ಹಿಂದೆ
ನೀಡಲಾಗಿದ್ದ ’ಶೇರ್ ಇ ಕಾಶ್ಮೀರ್’ ಪೊಲೀಸ್ ಪದಕವನ್ನೂ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ವಾಪಸ್ ಪಡೆಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಚೀನಾದ ಮೂಲಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ತಾಪಿಸಲು ಪಾಕಿಸ್ತಾನವು ನಡೆಸಿರುವ ಯತ್ನವನ್ನು ’ವಿಶ್ವಸಂಸ್ಥೆ ಭದ್ರತಾ ಮಂಡಳಿಯ ದುರ್ಬಳಕೆಯ ಯತ್ನ’ ಎಂಬುದಾಗಿ ಭಾರತವು 2020 ಜನವರಿ 16ರ ಗುರುವಾರ ಪಾಕಿಸ್ತಾನಕ್ಕೆ ಛೀಮಾರಿ ಹಾಕಿತು. ‘ಭವಿಷ್ಯದಲ್ಲಿ
ಇಂತಹ ದುಸ್ಸಾಹಸಗಳಿಗೆ ಕೈಹಾಕದೆ ದೂರ ಉಳಿಯುವ ಮೂಲಕ ಜಾಗತಿಕ ಮುಜುಗರ ತಪ್ಪಿಸಿಕೊಳ್ಳುವ ಆಯ್ಕೆ ಪಾಕಿಸ್ತಾನಕ್ಕೆ ಇದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿತು. ‘ಪಾಕಿಸ್ತಾನದ ಸರ್ವಋತು ಮಿತ್ರನಾಗಿರುವ ಚೀನಾಕ್ಕೆ ಕೂಡಾ ಈ ಜಾಗತಿಕ
ಸಹಮತವು ಇಂತಹ ಕೃತ್ಯಗಳಿಂದ ದೂರ ಉಳಿಯುವುದು ಒಳಿತು ಎಂಬ ಸ್ಪಷ್ಟ ಸೂಚನೆಯನ್ನು ನೀಡಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಚೀನಾವು 2020 ಜನವರಿ 15ರ ಬುಧವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಹಸ್ಯ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲು ಯತ್ನಿಸಿದ್ದು ಅದಕ್ಕೆ ತಿರುಗುಬಾಣವಾಗಿ ಪರಿಣಮಿಸಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಗಳು ಈ ವಿಷಯವನ್ನು ಚರ್ಚಿಸುವ
ವೇದಿಕೆ ಇದಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಚೀನಾದ ಯತ್ನಕ್ಕೆ ತಣ್ಣೀರು ಎರಚಿದ್ದವು. ಚೀನಾದ ಹೊರತಾಗಿ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ರಶ್ಯಾ, ಅಮೆರಿಕ ಮತ್ತು ಇಂಗ್ಲೆಂಡ್ ಸಭೆಯಲ್ಲಿ ಪಾಲ್ಗೊಂಡಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment