ನಾನು ಮೆಚ್ಚಿದ ವಾಟ್ಸಪ್

Monday, January 13, 2020

ಇಂದಿನ ಇತಿಹಾಸ History Today ಜನವರಿ 13

2020: ನವದೆಹಲಿ: ಭಯೋತ್ಪಾದಕರನ್ನು ತನ್ನ ವಾಹನದಲ್ಲೇ ಒಯ್ಯುತ್ತಿದ್ದಾಗ ಸೆರೆ ಹಿಡಿಯಲ್ಪಟ್ಟಿರುವ ಜಮ್ಮು ಮತ್ತು ಕಾಶ್ಮೀರದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿವೈಎಸ್ಪಿ) ದೇವಿಂದರ್ ಸಿಂಗ್ ಅವರಿಗೆ ಭಯೋತ್ಪಾದಕರು ೧೨ ಲಕ್ಷ ರೂಪಾಯಿಗಳ ಆಮಿಷ ಒಡ್ಡಿದ್ದ ಹಾಗೂ ಉಗ್ರರಿಗೆ ಸಿಂಗ್ ತಮ್ಮ ನಿವಾಸದಲ್ಲೇ ವಸತಿ ಒದಗಿಸಿದ್ದ ಸ್ಫೋಟಕ ಮಾಹಿತಿ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿತು.  ಭಯೋತ್ಪಾದಕರನ್ನು ತನ್ನ ವಾಹನದಲ್ಲೇ ಒಯ್ದಿದ್ದ ಸಿಂಗ್, ತಾನು ಇಬ್ಬರು ಹಿಜ್ಬುಲ್ ಭಯೋತ್ಪಾದಕರನ್ನು ಶರಣಾಗತಿ ಮಾಡಿಸುವ ಸಲುವಾಗಿ ಕರೆದೊಯ್ಯುತ್ತಿದ್ದುದಾಗಿ ಪ್ರತಿಪಾದಿಸಿದ್ದರೂ, ಅವರ ಯೋಜನೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಯಾವುದೇ ಸುಳಿವು ಕೂಡಾ ಇರಲಿಲ್ಲ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿತು.  ತಮ್ಮ ಪ್ರಾಥಮಿಕ ತನಿಖೆಯ ವೇಳೆಯಲ್ಲಿ ಸಿಂಗ್ ಅವರು ತಾವು ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸೈಯದ್ ನವೀದ್ ಮುಷ್ತಾಖ್ ಮತ್ತು ಭಯೋತ್ಪಾದಕ ರಫಿ ರಾಥೆರ್ ಅವರನ್ನು ಶರಣಾಗತಿ ಮಾಡಿಸುವ ಸಲುವಾಗಿ ಕರೆದೊಯ್ಯುತ್ತಿದ್ದಾಗಿ ಪ್ರತಿಪಾದಿಸಿದ್ದಾರೆ.  ಬಹಿರಂಗ ಕಾರ್ಯಕರ್ತನಾಗಿದ್ದು ಬಳಿಕ ವಕೀಲನಾಗಿ ಬದಲಾಗಿದ್ದ ಇರ್ಫಾನ್ ಶಫಿ ಕೂಡಾ ಅವರ ಜೊತೆಗಿದ್ದ. ’ಅವರು (ಸಿಂಗ್) ಪ್ರತಿಪಾದನೆ ಮಾಡಿದ್ದಾರೆ, ಆದರೆ ನಾವು ತನಿಖೆ ನಡೆಸುತ್ತಿದ್ದೇವೆಎಂದು ತನಿಖಾಧಿಕಾರಿಗಳು 2020 ಜನವರಿ 13ರ  ಸೋಮವಾರ  ಹೇಳಿದರು. ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಜಾಗೃತಾ ದಳ (ಇಂಟಲಿಜೆನ್ಸ್ ಬ್ಯೂರೋ -ಐಬಿ) ಸಂಸ್ಥೆಗಳ ಜಂಟಿ ತಂಡವೊಂದು ಸಿಂಗ್ ಮತ್ತು ಅವರ ಜೊತೆಗೆ ಬಂಧಿಸಲ್ಪಟಿರುವವರ ತನಿಖೆ ನಡೆಸುತ್ತಿವೆ. ವಿಚಾರಣೆ ಕಾಲದಲ್ಲಿ ಪ್ರಶ್ನಿಸಿದಾಗಶರಣಾಗತಿ ಯೋಜನೆಬಗ್ಗೆ ತಮಗೆ ಯಾವುದೇ ಅರಿವು ಇಲ್ಲ ಎಂಬುದಾಗಿ ಬಂಧಿತ ಭಯೋತ್ಪಾದಕರು ಉತ್ತರಿಸಿದ್ದಾರೆಎಂದು ಮೂಲಗಳು ಹೇಳಿವೆ. ‘ಸಿಂಗ್ ಅವರು ಹಣಕ್ಕೆ ಬದಲಾಗಿ ಭಯೋತ್ಪಾದಕರಿಗೆ ಬನಿಹಾಲ್ ಸುರಂಗ ದಾಟಲು ನೆರವು ನೀಡುವ ಭರವಸೆ ಕೊಟ್ಟಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಒಪ್ಪಿಕೊಳ್ಳಲಾಗಿದ್ದ ಮೊತ್ತ ೧೨ ಲಕ್ಷ ರೂಪಾಯಿಗಳು. ಸ್ವತಃ  ಡಿವೈಎಸ್ಪಿ ಅವರೇ ಚಲಾಯಿಸುತ್ತಿದ್ದುದರಿಂದ  ಕಾರನ್ನು ಯಾರೂ ತಡೆಯಲಾರರು ಎಂಬ ಭರವಸೆಯಿಂದ ಸಿಂಗ್ ಸ್ವತಃ ಕಾರಿನಲ್ಲೇ ಕುಳಿತಿದ್ದರುಎಂದು ಅಧಿಕಾರಿಗಳು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಕಾಂಗ್ರೆಸ್ ನೇತೃತ್ವದಲ್ಲಿ 2020 ಜನವರಿ 13ರ  ಸೋಮವಾರ  ದೆಹಲಿಯಲ್ಲಿ ಸಭೆ ಸೇರಿದ ೨೦ ವಿರೋಧ ಪಕ್ಷಗಳು ರಾಷ್ಟ್ರೀಯ ಪೌರ ನೋಂದಣಿಯನ್ನು  (ಎನ್ಆರ್ಸಿ) ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ನಿರಾಕರಿಸಿದ ಎಲ್ಲ ಮುಖ್ಯಮಂತ್ರಿಗಳು ಪೌರರ ಪಟ್ಟಿಗೆ ಅಡಿಪಾಯವಾದ  ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪ್ರಕ್ರಿಯೆಯನ್ನು ಕೂಡಾ ಸ್ಥಗಿತಗೊಳಿಸಬೇಕು ಎಂದು ನಿರ್ಧರಿಸಿದವು.  ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಈಗಾಗಲೇ ಎನ್ಪಿಆರ್ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಕಾಂಗ್ರೆಸ್ ಆಳ್ವಿಕೆ ಇರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಕೂಡಾ ತಾವೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದರುವಿರೋಧ ಪಕ್ಷಗಳು ಸಹಿ ಹಾಕಿರುವ ನಿರ್ಣಯವು ಬಿಜೆಪಿ ಮಿತ್ರ ಪಕ್ಷಗಳಾದ ನಿತೀಶ್ ಕುಮಾರ್ ಮತ್ತು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಸಮಾನ ಅಂತರ ಕಾಯ್ದುಕೊಂಡಿರುವ  ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯಂತಹವರಿಗೆ ಹಾಕಿರುವ ಸವಾಲು ಎಂಬುದಾಗಿ ಭಾವಿಸಲಾಗಿದೆ.   ಭವಿಷ್ಯದಲ್ಲಿ ರಾಷ್ಟ್ರೀಯ ಪೌರ ನೋಂದಣಿಗೆ ಅಡಿಪಾಯವಾಗಲಿದೆ ಎಂಬುದಾಗಿ ಭಾವಿಸಲಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಇನ್ನೂ ಆರಂಭವಾಗಿಲ್ಲ. ಪೌರತ್ವ ತಿದ್ದುಪಡಿ ಮಸೂದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಎಲ್ಲವೂ ಒಂದಕ್ಕೊಂದು ಪೂರಕ ಎಂಬುದಾಗಿ ಬಣ್ಣಿಸಿ ಅವುಗಳನ್ನು ವಿರೋಧಿಸುವ ನಿರ್ಣಯವನ್ನು ಸಭೆಯ ಸಮಾವೇಶದ ಕೊನೆಗೆ ಅಂಗೀಕರಿಸಿತು. (ವಿವರಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

2020: ನವದೆಹಲಿ: ಆರು ಪ್ರಮುಖ ಪ್ರತಿಪಕ್ಷಗಳ ಪಕ್ಷಗಳ ಗೈರುಹಾಜರಿ ಮಧ್ಯೆ  2020 ಜನವರಿ 13ರ  ಸೋಮವಾರ   ನಗರದಲ್ಲಿ ೨೦ ವಿರೋಧ ಪಕ್ಷಗಳ ಸಭೆ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಪ್ರಬಲ ದಾಳಿ ನಡೆಸಿದರು.  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತ್ವತದ ತೃಣಮೂಲ ಕಾಂಗ್ರೆಸ್, ಮಾಯಾವತಿ ಅವರ ಬಹುಜನ ಸಮಾಜ ಪಕ್ಷ, ಅಖಿಲೇಶ ಯಾದವ್ ಅವರ ಸಮಾಜವಾದಿ ಪಕ್ಷ, ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ, ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ - ಪ್ರಮುಖ ವಿರೋಧ ಪಕ್ಷಗಳ ಗೈರು ಹಾಜರಿ ಶಕ್ತಿ ಪ್ರದರ್ಶನವಾಗಬೇಕಾಗಿದ್ದ ಸಮಾವೇಶದಲ್ಲಿ ಎದ್ದು ಕಂಡಿತು.  ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಪುನಃ ವಹಿಸಿಕೊಂಡ ಸೋನಿಯಾಗಾಂಧಿ ಅವರುಕೇಂದ್ರ ಸರ್ಕಾರದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಕಾರ್ಯಕ್ರಮವು ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಜಾರಿ ನಿಟ್ಟಿನಲ್ಲಿ ಮೊದಲ ಹೆಜ್ಜೆಎಂದು ಬಣ್ಣಿಸಿದರು.  ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಪೊಲೀಸರ ಪಕ್ಷಪಾತದ ಆಘಾತಕಾರಿ ಮತ್ತು ಮಾರಕ ದಮನ ಕಾರ್ಯಾಚರಣೆಯನ್ನುಕಟುವಾಗಿ ಟೀಕಿಸಿದ ಸೋನಿಯಾ,  ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಎನ್ಆರ್ಸಿ ರಾಷ್ಟ್ರವ್ಯಾಪಿ ಸ್ವಯಂಪ್ರೇರಿತ ಪ್ರತಿಭಟನೆಗಳಿಗೆ ಕಾರಣವಾಗಿದ್ದರೂ, ಇವು ಜನರ ವ್ಯಾಪಕ ಭ್ರಮನಿರಸನ ಮತ್ತು ಸಿಟ್ಟನ್ನು ಪ್ರತಿಫಲಿಸಿದ್ದು ಈಗ ಬಹಿರಂಗಕ್ಕೆ ಬಂದಿದೆ  ಎಂದು ಹೇಳಿದರು.  ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರದಲ್ಲಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದೂ ಸೋನಿಯಾ ಆಪಾದಿಸಿದರು.  (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಅರ್ಹ ವಲಸಿಗರಿಗೆ ಭಾರತದ ನಾಗರಿಕತೆಯನ್ನು ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವುದರೊಂದಿಗೆ ಉತ್ತರ ಪ್ರದೇಶವು ಪೌರತ್ವ (ತಿದ್ದುಪಡಿ) ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಾಜ್ಯದಲ್ಲಿರುವ ಒಟ್ಟು ೭೫ ಜಿಲ್ಲೆಗಳ ಪೈಕಿ ೨೧ ಜಿಲ್ಲೆಗಳಲ್ಲಿ ಒಟ್ಟು ೩೨ ಸಾವಿರ ವಲಸಿಗರನ್ನು ಗುರುತಿಸಲಾಗಿದೆ ಎಂದು ಉತ್ತರಪ್ರದೇಶ ಸಚಿವ ಶ್ರೀಕಾಂತ ಶರ್ಮಾ ಅವರು  2020 ಜನವರಿ 13ರ ಸೋಮವಾರ ತಿಳಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಯನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಶರ್ಮಾ ಸುದ್ದಿ ಸಂಸ್ಥೆಗೆ ತಿಳಿಸಿದರು. ಇವರಲ್ಲಿ ಹೆಚ್ಚಿನವರು ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದವರಾಗಿದ್ದಾರೆ ಎಂಬ ಮಾಹಿತಿಯನ್ನೂ ಸಹ ಸಚಿವರು ಇದೇ ಸಂದರ್ಭದಲ್ಲಿ ನೀಡಿದರು.
ಸಹರಣಪುರ, ಗೋರಖ್ ಪುರ, ಅಲಿಗಢ, ರಾಂ ಪುರ, ಪ್ರತಾಪಗಢ, ಪಿಲಿಭಿತ್, ಲಕ್ನೋ, ವಾರಣಾಸಿ, ಬಹ್ರೈಚ್, ಲಖಿಂಪುರ, ಮೀರತ್ ಮತ್ತು ಆಗ್ರಾ ಜಿಲ್ಲೆಗಳಿಂದ ವಲಸಿಗರಿಗೆ ಸಂಬಂಧಿಸಿದ ಮೊದಲ ಪಟ್ಟಿ ರಾಜ್ಯ ಸರ್ಕಾರದ  ಕೈ ಸೇರಿದೆ ಎಂದು ಸಚಿವರು ತಿಳಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment