ನಾನು ಮೆಚ್ಚಿದ ವಾಟ್ಸಪ್

Friday, January 3, 2020

ಇಂದಿನ ಇತಿಹಾಸ History Today ಜನವರಿ 03

2020: ಬಾಗ್ದಾದ್: ಇರಾನಿನ ಉನ್ನತ ಕಮಾಂಡರ್ ಖಾಸಿಂ ಸೊಲೈಮಾನಿ ಅವರನ್ನು ಅಮೆರಿಕವು  2020 ಜನವರಿ 03ರ  ಶುಕ್ರವಾರ  ನಸುಕಿನ ವಾಯುದಾಳಿಯಲ್ಲಿ  ಹತ್ಯೆಗೈದಿದ್ದು, ಇದಕ್ಕೆ ಉಗ್ರ ಪ್ರತೀಕಾರ ಕೈಗೊಳ್ಳುವುದಾಗಿ ಇರಾನ್ ಶಪಥ ಮಾಡಿತು. ಬೆನ್ನಲ್ಲೇ ಅಮೆರಿಕದ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ತತ್ ಕ್ಷಣ ಇರಾಕ್ ತ್ಯಜಿಸುವಂತೆ ಸೂಚನೆ ನೀಡಿತು. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ಧತೆ  ಇನ್ನಷ್ಟು ತೀವ್ರಗೊಂಡಿತು. ಇರಾನಿನ ಇಸ್ಲಾಮಿಕ್ ರಿಪಬ್ಲಿಕ್ ಖಡ್ಸ್ ಪಡೆಯ ಉನ್ನತ ಇರಾನ್ ಕಮಾಂಡರ್ ಜನರಲ್ ಖಾಸಿಂ ಸೊಲೈಮಾನಿ ಅವರನ್ನು ಅಮೆರಿಕವು ಈದಿನ ನಸುಕಿನಲ್ಲಿ  ನಡೆಸಿದ ವಾಯುದಾಳಿಯಲ್ಲಿ ಹತ್ಯೆಗೈದ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕದ ನಾಗರಿಕರಿಗೆ ತತ್ ಕ್ಷಣ ಇರಾಕ್ ತೊರೆಯಲು ಸೂಚಿಸಲಾಗಿದೆ ಎಂದು ಅಮೆರಿಕ ರಾಯಭಾರಿ ಕಚೇರಿ ಮೂಲಗಳು ತಿಳಿಸಿದವು.  ‘ಅಮೆರಿಕದ ನಾಗರಿಕರು ವಾಯುಮಾರ್ಗವಾಗಿ ತತ್ ಕ್ಷಣ ಇರಾಕ್ ತ್ಯಜಿಸಬೇಕು. ಸಾಧ್ಯವಾಗದಿದ್ದರೆ ಭೂ ಮಾರ್ಗದ ಮೂಲಕ ಇತರ ರಾಷ್ಟ್ರಗಳಿಗೆ ತೆರಳಬೇಕು ಎಂದು ಅಮೆರಿಕದ ರಾಯಭಾರ ಕಚೇರಿಯು ಹೇಳಿಕೆಯಲ್ಲಿ ಸೂಚಿಸಿದೆ. ಬಾಗ್ದಾದ್ ವಿಮಾನ ನಿಲ್ದಾಣದ ಹೊರವಲಯದಲ್ಲಿ ಶುಕ್ರವಾರ ನಸುಕಿನಲ್ಲಿ ಅಮೆರಿಕದ ವಾಯುದಾಳಿ ನಡೆಯಿತು. ಆದರೆ ವಿಮಾನ ನಿಲ್ದಾಣವು ಇನ್ನೂ ವಿಮಾನಗಳ ಹಾರಾಟಕ್ಕೆ ಮುಕ್ತವಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಸೊಲೈಮಾನಿ ಅವರು ಇರಾಕಿನ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಮತ್ತು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ಕಟ್ಟಾ ವೈರಿಯಾಗಿದ್ದರು. ಸೊಲೈಮಾನಿ ಅವರ ಸಲಹೆಗಾರ ಇರಾಕಿನ ಉನ್ನತ ಸೇನಾ ಕಮಾಂಡರ್ ಅಬು ಮಹ್ದಿ ಅಲ್-ಮುಹಾಂಡಿಸ್ ಕೂಡಾ ವಾಯುದಾಳಿಯಲ್ಲಿ ಹತರಾಗಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2020: ನವದೆಹಲಿ
:
ಚೀನಾ ಕ್ಷಿಯಾನ್ ನಲ್ಲಿ ಇರುವ ೬೦ ಮೀಟರ್ ಎತ್ತರದ ಗಾಳಿ ಶುದ್ಧೀಕರಣ
ಗೋಪುರದ  ಮಾದರಿಯ ಗಾಳಿ ಶುದ್ಧೀಕರಣ ಗೋಪುರವನ್ನು  ಗ್ಯಾಸ್ ಚೇಂಬರಿನಂತಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಾಳಿಯನ್ನು ಶುದ್ಧೀಕರಿಸುವ ಸಲುವಾಗಿ ಇದೇ ಮೊದಲ ಬಾರಿಗೆ ನಿರ್ಮಿಸಲಾಯಿತು. ಲಜಪತ್ ನಗರದ ಕೇಂದ್ರೀಯ ಮಾರುಕಟ್ಟೆಯಲ್ಲಿ ಲಕ್ಷ ರೂ. ವೆಚ್ಚದದಲ್ಲಿ ೨೦ ಅಡಿ ಎತ್ತರದ ಗಾಳಿ ಶುದ್ಧೀಕರಣ ಗೋಪುರವನ್ನು ಸ್ಥಾಪಿಸಲಾಯಿತು. ಲಜಪತ್ ನಗರವು ಜನನಿಬಿಡ ಪ್ರದೇಶವಾಗಿದ್ದು, ಪ್ರತಿನಿತ್ಯ ೧೫ ಸಾವಿರ ಮಂದಿ ಇಲ್ಲಿ ಸಂಚರಿಸುತ್ತಾರೆ. ಲಜಪತ್ ನಗರದ ವರ್ತಕರ ಸಂಘವು ಸಂಸತ್ ಸದಸ್ಯ ಗೌತಮ್ ಗಂಭೀರ್ ಸಹಕಾರದೊಂದಿಗೆ ಗೋಪುರವನ್ನು ಅಳವಡಿಸಿದೆ. ಗಾಳಿ ಶುದ್ಧೀಕರಿಸುವ ಗೋಪುರದ ನಿರ್ವಹಣೆಗೆ ವಾರ್ಷಿಕ ೩೦ ಸಾವಿರ ರೂ. ವೆಚ್ಚವಾಗಲಿದ್ದು ವರ್ತಕರ ಸಂಘವು ವೆಚ್ಚವನ್ನು ಭರಿಸಲಿದೆ. ಗಾಳಿ ಗುಣಮಟ್ಟ ಸೂಚ್ಯಂಕ ಪ್ರಕಾರ, ಪ್ರದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ವಿಪರೀತವಾಗಿತ್ತು. ಚೀನಾದ ಕ್ಷಿಯಾನ್ ನಗರದಲ್ಲಿ ೨೦೧೬ರಿಂದೀಚೆಗೆ ಅಳವಡಿಸಿ ಪರೀಕ್ಷಿಸಲಾಗುತ್ತಿರುವ ಗಾಳಿ ಶುದ್ಧೀಕರಣ ಗೋಪುರದಲ್ಲಿ ಮಾಲಿನ್ಯಭರಿತ ಬಿಸಿ ಗಾಳಿಯನ್ನು ಗೋಪುರದ ತಳಭಾಗಕ್ಕೆ ಆಕರ್ಷಿಸುವ ವ್ಯವಸ್ಥೆಯಿದೆ. ಮಾಲಿನ್ಯಭರಿತ ಗಾಳಿಯು ಗೋಪುರದ ಒಳಗೆ ಸೌರವ್ಯವಸ್ಥೆಯ ಮೂಲಕ ಬಿಸಿಯಾಗಿ ಮೇಲಕ್ಕೆ ಏರುತ್ತಾ ಗಾಳಿ ಶುದ್ದೀಕರಣ ವ್ಯವಸ್ಥೆಗಳ (ಏರ್ ಪ್ಯೂರಿಫೈಯರ್ಸ್) ಮೂಲಕ ಸಾಗಿ, ಗೋಪುರದ ತುದಿ ತಲುಪುವ ವೇಳೆಗೆ ಶುದ್ದೀಕರಣಗೊಂಡು ಪುನಃ ವಾತಾವರಣವನ್ನು ಸೇರುತ್ತದೆ.  (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2020: ನವದೆಹಲಿ
:
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ೧೧ ರಾಜ್ಯಗಳ ಪತ್ರ
ಮುಖ್ಯಮಂತ್ರಿಗಳಿಗೆ ಬರೆದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಒಂದಾಗುವಂತೆ  2020 ಜನವರಿ 03ರ  ಶುಕ್ರವಾರ ಆಗ್ರಹಿಸಿದರು. ಡಿಸೆಂಬರ್ ತಿಂಗಳಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವಂತೆ ಒತ್ತಡ ತರಬೇಕು ಎಂದು ವಿವಿಧ ಮುಖ್ಯಮಂತ್ರಿಗಳಿಗೆ ವಿಜಯನ್ ಮನವಿ ಮಾಡಿದರು. ‘೨೦೧೯ರ ಪೌರತ್ವ ತಿದ್ದುಪಡಿ ಕಾಯ್ದೆಯ ಪರಿಣಾಮವಾಗಿ ನಮ್ಮ ಸಮಾಜದ ವಿಶಾಲ ವರ್ಗದಲ್ಲಿ ಭೀತಿಗಳು ಹುಟ್ಟಿವೆ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯನ್ನ ರಕ್ಷಿಸಬಯಸುವ ಎಲ್ಲ ಭಾರತೀಯರಲ್ಲಿ ಒಗ್ಗಟ್ಟು ಮೂಡಬೇಕಾದದ್ದು ಸಮಯದ ಅಗತ್ಯವಾಗಿದೆಎಂದು ಪಿಣರಾಯಿ ತಮ್ಮ ಪತ್ರದಲ್ಲಿ ಹೇಳಿದರು. ೨೦೧೯ರ ಡಿಸೆಂಬರ್ ೩೧ರಂದು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದ ಬಗ್ಗೆ ಕೂಡಾ ವಿಜಯನ್ ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ. ಕೇರಳ ವಿಧಾನಸಭೆಯು ಅಂಗೀಕರಿಸಿದ ನಿರ್ಣಯವು ನಮ್ಮ ರಾಷ್ಟ್ರದ ಜಾತ್ಯತೀತ ನೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ ನಿರ್ಣಯವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ೧೨ ರಾಜ್ಯಗಳ ಮುಖ್ಯಮಂತ್ರಿಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದು, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅವರ ಪೈಕಿ ಮುಂಚೂಣಿಯಲ್ಲಿದ್ದಾರೆ. ಸಿಲಿಗುರಿಯಲ್ಲಿ ಶುಕ್ರವಾರ ನಡೆದ ರ್ಯಾಲಿಯಲ್ಲಿ ಬ್ಯಾನರ್ಜಿ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ್ದಕ್ಕಾಗಿ ಕೇಂದ್ರದ ಮೇಲೆ ಹರಿಹಾಯ್ದು, ಅದರ ವಿರುದ್ಧ ಒಂದಾಗುವಂತೆ ರಾಜ್ಯಗಳಿಗೆ ಕರೆ ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2020: ಬಾಗ್ದಾದ್
: ಇರಾನಿನ ಪರಮ ನಾಯಕ ಅಯತೊಲ್ಲಾ ಅಲಿ ಖೊಮೇನಿ ಅವರು ಬಾಗ್ದಾದಿನಲ್ಲಿ ನಡೆದ ವಾಯುದಾಳಿಯಲ್ಲಿ ಹತರಾದ ಖಾಸಿಂ ಸೊಲೈಮಾನಿ ಅವರ ಸ್ಥಾನದಲಿ ಇಸ್ಲಾಮಿಕ್ ಖಡ್ಸ್ ಪಡೆಗಳ ಮುಖ್ಯಸ್ಥರಾಗಿ ಕ್ರಾಂತಿಕಾರಿ ಗಾರ್ಡ್ಗಳ ವಿದೇಶೀ ಕಾರ್ಯಾಚರಣೆ  ವಿಭಾಗದ ಉಪ ಮುಖ್ಯಸ್ಥ ಇಸ್ಲಾಮಿಲ್ ಖಾನಿ ಅವರನ್ನು 2020 ಜನವರಿ 03ರ  ಶುಕ್ರವಾರ  ನೇಮಕ ಮಾಡಿದರು. ‘ಖ್ಯಾತಿವೆತ್ತ ಜನರಲ್ ಹಜ್ ಖಾಸಿಂ ಸೊಲೈಮಾನಿ ಅವರು ಹುತಾತ್ಮರಾಗಿರುವುದನ್ನು ಅನುಸರಿಸಿ, ನಾನು ಬ್ರಿಗೇಡಿಯರ್ ಜನರಲ್ ಇಸ್ಮಾಯಿಲ್ ಖಾನಿ ಅವರನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ ಖಡ್ಸ್ ಪಡೆಗಳ ಮುಖ್ಯಸ್ಥರಾಗಿ ನೇಮಕ ಮಾಡುತ್ತಿದ್ದೇನೆಎಂದು ಅಯತೊಲ್ಲಾ ಅಲಿ ಖೊಮೇನಿ ತಮ್ಮ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾದ ಹೇಳಿಕೆಯಲ್ಲಿ ತಿಳಿಸಿದರು. ೧೯೮೦-೮೮ರ ಇರಾನ್ -ಇರಾಕ್ ಸಮರದ ಕಾಲದ ಗಾರ್ಡ್ಸ್ಅತ್ಯಂತ ಬಿರುದಾಂಕಿತ ದಂಡನಾಯಕರಲ್ಲಿ ಒಬ್ಬ ಎಂದು ಖಾನಿ ಅವರನ್ನು ಖೊಮೇನಿ ಬಣ್ಣಿಸಿದರು. ‘ಖಡ್ಸ್ ಪಡೆಗಳಿಗೆ ಸಂಬಂಧಿಸಿದ ಆದೇಶಗಳು ಹುತಾತ್ಮ ಸೊಲೈಮಾನಿ ನಾಯಕತ್ವದ ವೇಳೆಯಲ್ಲಿ ಇದ್ದಂತೆಯೇ ಇರುತ್ತವೆಎಂದು ಖೊಮೇನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2020: ಜೋಧಪುರ
(
ರಾಜಸ್ಥಾನ): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೌರತ್ವ ನೀಡುವುದಕ್ಕಾಗಿ
ಇರುವ ಕಾನೂನು ವಿನಃ ಕಿತ್ತುಕೊಳ್ಳುವುದಕ್ಕಾಗಿ ಇರುವ ಕಾನೂನು ಅಲ್ಲ. ವಿರೋಧ ಪಕ್ಷಗಳ ಟೀಕೆಗಳ ಹೊರತಾಗಿಯೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ತನ್ನ ನಿರ್ಣಯದಿಂದ ಸರ್ಕಾರವು ಒಂದಂಗುಲದಷ್ಟೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿರೋಧ ಪಕ್ಷಗಳಿಗೆ  2020 ಜನವರಿ 03ರ  ಶುಕ್ರವಾರ  ಇಲ್ಲಿ ಖಡಕ್ ಉತ್ತರ ನೀಡಿದರು. ರಾಜಸ್ಥಾನದ ಜೋಧಪುರದಲ್ಲಿ ತಿದ್ದುಪಡಿಗೊಂಡ ಪೌರತ್ವ ಕಾಯ್ದೆ ಪರವಾಗಿ ಜನಜಾಗೃತಿ ಮೂಡಿಸುವ ರ್ಯಾಲಿಯಲ್ಲಿ ಅಮಿತ್ ಶಾ ಮಾತನಾಡುತ್ತಿದ್ದರು. ‘ಪೌರತ್ವ ತಿದ್ದುಪಡಿ ಕಾಯ್ದೆಯ ಯಾವುದೇ ವಿಧಿಯೂ ಯಾವ ವ್ಯಕ್ತಿಯ ಪೌರತ್ವವನ್ನು ಕೂಡಾ ಕಿತ್ತುಕೊಳ್ಳುವುದಿಲ್ಲ. ಅದು ಪೌರತ್ವ ನೀಡುವ ಕಾಯ್ದೆಎಂದು ಅಮಿತ್  ಶಾ ನುಡಿದರು. ೨೦೧೫ಕ್ಕೆ ಮುನ್ನ ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳದ ಪರಿಣಾಮವಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿನ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ಒದಗಿಸುವ ತಿದ್ದುಪಡಿ ಕಾಯ್ದೆ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟಿಸುತ್ತಿವೆ. ‘ಎಷ್ಟೇ ಪಕ್ಷಗಳು ಕಾಯ್ದೆಯ ವಿರುದ್ಧ ಕೈಜೋಡಿಸಿದರೂ ಕೇಂದ್ರ ಸರ್ಕಾರವು ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿರ್ಧಾರದಿಂದ ಒಂದಂಗುಲ ದೂರವೂ ಸರಿಯುವುದಿಲ್ಲಎಂದು ಶಾ ದೃಢವಾಗಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


ಇಂದಿನ ಇತಿಹಾಸ  History Today ಜನವರಿ 03  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment