ನಾನು ಮೆಚ್ಚಿದ ವಾಟ್ಸಪ್

Sunday, January 26, 2020

ಇಂದಿನ ಇತಿಹಾಸ History Today ಜನವರಿ 26

2020: ನವದೆಹಲಿ: ನವದೆಹಲಿಯ ಹೃದಯಭಾಗದಲ್ಲಿನ ರಾಜಪಥದಲ್ಲಿ  2020 ಜನವರಿ 26ರ ಭಾನುವಾರ ನಡೆದ ೯೦ ನಿಮಿಷಗಳ ಭಾರತದ ೭೧ನೇ ಗಣರಾಜ್ಯೋತ್ಸವ ಕವಾಯತು (ಪರೇಡ್) ಭಾರತದ ಬಹುಹಂತದ ಭದ್ರತಾ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನದ ಜೊತೆಗೆ ಹಲವಾರು ಪ್ರಥಮಗಳಿಗೆ ಸಾಕ್ಷಿಯಾಯಿತುಸಮಾರಂಭದ ಗೌರವ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಭಾರತದ ಗಣರಾಜ್ಯೋತ್ಸವ ಸಂಭ್ರಮವನ್ನು ಕಣ್ತುಂಬಿಕೊಂಡರು. ಸಶಸ್ತ್ರ ಪಡೆಗಳ ಗೌರವ ರಕ್ಷೆ ಸ್ವೀಕರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜೈರ್ ಬೋಲ್ಸೊನಾರೊ ಜೊತೆಗೆ ರಾಜಪಥದಲ್ಲಿ ಪರೇಡ್ ಮತ್ತು ಟ್ಯಾಬ್ಲೋಗಳನ್ನು ವೀಕ್ಷಿಸಿದರು. ಬೆಳಗ್ಗೆ ಗಣರಾಜ್ಯೋತ್ಸವ ಸಮಾರಂಭ ಆರಂಭಕ್ಕೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರವನ್ನು ಅಭಿನಂದಿಸಿದರು. ಸಂಪ್ರದಾಯವನ್ನು ಮುರಿದು ಕೇಸರಿ ಪೇಟ ಧರಿಸಿ ಅಮರ ಜವಾನ್ ಜ್ಯೋತಿಗೆ ಬದಲಾಗಿ ರಾಷ್ಟ್ರೀಯ ಸಮರ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಅಲ್ಲಿಯೇ ಹುತಾತ್ಮರಿಗೆ ಮಾಲಾರ್ಪಣೆ ಮಾಡುವ ಮೂಲಕ ರಾಷ್ಟ್ರದ ಶ್ರದ್ಧಾಂಜಲಿ ಸಲ್ಲಿಸಿದರು.  ಸ್ವಾತಂತ್ರ್ಯ ಕಾಲದಿಂದಲೇ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಯೋಧರ ನೆನಪಿಗಾಗಿ ಇಂಡಿಯಾ ಗೇಟ್ ಸಮೀಪ ರಾಷ್ಟ್ರೀಯ ಸಮರ ಸ್ಮಾರಕವನ್ನು ನಿರ್ಮಿಸಲಾಗಿದೆ. ಸರಣಿ ಪ್ರಥಮಗಳು: ಸೇನೆಯ ಸಮರ ಟ್ಯಾಂಕ್ ಭೀಷ್ಮ, ಪದಾತಿ ಯುದ್ಧ ವಾಹನ ಬಾಲ್ ವೇ ಮೆಷಿನ್ ಪಿಕಾಟೆ ಮತ್ತು ವಾಯುಪಡೆಯ ವಿನೂತನ ರಫೇಲ್ ಯುದ್ಧ ವಿಮಾನ ಹಾಗೂ ವಾಯುಪಡೆಗೆ ಹೊಸದಾಗಿ ಸೇರ್ಪಡೆಯಾದ ಚಿನೂಕ್ ಸಮರವಿಮಾನ ಮತ್ತು ಅಪಾಚೆ ಹೆಲಿಕಾಪ್ಟರುಗಳ ಪ್ರದರ್ಶನದೊಂದಿಗೆ ಸಂಪೂರ್ಣ ಪರೇಡಿನಲ್ಲಿ ಭಾರತದ ಸಶಸ್ತ್ರ ಪಡೆಗಳು ಕೇಂದ್ರ ಸ್ಥಾನದಲ್ಲಿ ಮಿಂಚಿದವು. ಭಾರತೀಯ ಸೇನಾ ಕ್ಯಾಪ್ಟನ್ ಮೃಗಾಂಕ್ ಭಾರದ್ವಾಜ್ ಮುನ್ನಡೆಸಿದ ದೀರ್ಘಗಾಮೀ ಆರ್ಟಿಲರಿ ಗನ್ ಧನುಶ್, ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡಿನಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಕಾಣಿಸಿಕೊಂಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್ ಪಿಆರ್) ಪ್ರತಿಭಟಿಸಲು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗವು (ಎಲ್ಡಿಎಫ್) 2020 ಜನವರಿ 26ರ ಭಾನುವಾರ  ಆಯೋಜಿಸಿದ್ದ ಮಾನವ ಸರಪಳಿಯಲ್ಲಿ ಕೇರಳದ ಸುಮಾರು ಏಳು ಮಿಲಿಯನ್ (೭೦ ಲಕ್ಷ) ಜನರು ಪಾಲ್ಗೊಂಡಿದ್ದು, ರಾಜ್ಯದ ಮುಖ್ಯಮಂತ್ರಿ  ಪಿಣರಾಯಿ ವಿಜಯನ್ ಅವರೂ ಮಾನವ ಸರಪಳಿಗೆ ಕೈಜೋಡಿಸಿದರುಗಣರಾಜ್ಯೋತ್ಸವ ದಿನದಂದು ಆಡಳಿತಾರೂಢ ಸಿಪಿಐ (ಎಂ) ನೇತೃತ್ವದಲ್ಲಿ ೬೨೦ ಕಿ.ಮೀ ಉದ್ದದ ಮಾನವ ಸರಪಳಿಯನ್ನು ಉತ್ತರ ಕೇರಳದ ಕಾಸರಗೋಡಿನಿಂದ ರಾಜ್ಯದ ದಕ್ಷಿಣ ಭಾಗದ ಕಲಿಯಕ್ಕವಿಲ್ಲೈವರೆಗೆ ರಚಿಸಲಾಯಿತು. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ನಡೆದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸುವಲ್ಲಿ ಮುಂಚೂಣಿಯಲ್ಲಿದ್ದ ಪಿಣರಾಯಿ ವಿಜಯನ್ ಮತ್ತು ಸಿಪಿಐ ನಾಯಕ ಕನಂ ರಾಜೇಂದ್ರನ್ ಪ್ರತಿಭಟನೆಯಲ್ಲಿ ಸೇರಿಕೊಂಡರು. ‘ಸಿಎಎ ವಿರುದ್ಧ ಭಾನುವಾರ ಆಯೋಜಿಸಲಾದ ಮಾನವ ಸರಪಳಿ ಮಹಾಗೋಡೆಯಾಗಿ ಮಾರ್ಪಟ್ಟಿದೆ. ಕಾನೂನು ದೇಶದ ಜಾತ್ಯತೀತತೆಗೆ ಅಪಾಯಕಾರಿಯಾಗಿದೆ. ನೆಲದಲ್ಲಿ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಜಾರಿಗೆ ಬರುವುದಿಲ್ಲ ಎಂದು ಕೇರಳ ಸ್ಪಷ್ಟಪಡಿಸಿದೆಎಂದು ಪಿಣರಾಯಿ ಅವರನ್ನು ಉಲ್ಲೆಖಿಸಿದ ಸುದ್ದಿ ಸಂಸ್ಥೆ ವರದಿ ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಪಾಟ್ನಾ/ ನವದೆಹಲಿ: ಶಹೀನ್ ಬಾಗ್ ಪ್ರತಿಭಟನೆಯ ವೇಳೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದದಕ್ಕಾಗಿ ಶಾಜೀಲ್ ಇಮಾಮ್ ವಿರುದ್ಧ ದೆಹಲಿ ಪೊಲೀಸರು  2020 ಜನವರಿ 26ರ ಭಾನುವಾರ ರಾಷ್ಟ್ರದ್ರೋಹ ಆರೋಪ ಹೊರಿಸಿ ಪ್ರಕರಣ ದಾಖಲಿಸುತ್ತಿದ್ದಂತೆಯೇ,  ಜೆಹಾನಾಬಾದ್ ಪೊಲೀಸರು ಅವರ ಬಿಹಾರ ನಿವಾಸದ ಮೇಲೆ ದಾಳಿ ನಡೆಸಿ ಅವರ ಇಬ್ಬರು ಬಂಧುಗಳನ್ನು ಬಂಧಿಸಿದರು. ಶಹೀನಾಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರಿಯ ನಾಗರಿಕ ನೋಂದಣಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ವೇಳೆಯಲ್ಲಿ ಭಾನುವಾರ ಬೆಳಗ್ಗೆ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಶಾಜೀಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಪೊಲೀಸರ ಪ್ರಕಾರ ಜವಾಹರ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಹಾಗೂ ಬಿಹಾರದ ನಿವಾಸಿ ಇಮಾಮ್, ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಯ ಕಾಲದಲ್ಲಿ ಅತ್ಯಂತ ಪ್ರಚೋದನಾಕಾರಿ ಭಾಷಣ ಮಾಡಿರುವುದಾಗಿ ಹೇಳಲಾಯಿತು. ಇದಕ್ಕೆ ಮುನ್ನ ಆತ ಕಳೆದ ವರ್ಷ ಡಿಸೆಂಬರ್ ೧೩ರಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಸಿಎಎ ಮತ್ತು ಎನ್ಆರ್ಸಿಯನ್ನು ವಿರೋಧಿಸುತ್ತಾ ಅತ್ಯಂತ ಪ್ರಚೋದನಾಕಾರಿ ಭಾಷಣ ಮಾಡಿರುವುದಾಗಿಯೂ ಪೊಲೀಸರು ತಿಳಿಸಿದ್ದು, ಸರ್ಕಾರದ ವಿರುದ್ಧ ಆತ ಮಾಡಿದ ಇನ್ನೂ ಪ್ರಚೋದನಾಕಾರಿ ಭಾಷಣ ಸಾಮಾಜಿಕ ಮಾಧ್ಯಮದಲ್ಲೂ ವೈರಲ್ ಆಗಿದೆ ಎಂದು ಪೊಲೀಸರು ಹೇಳಿದರು.  ‘ ಭಾಷಣಗಳು ದಾರ್ಮಿಕ ಸೌಹಾರ್ದಕ್ಕೆ ಹಾನಿ ಉಂಟು ಮಾಡುವುದಲ್ಲದೆ ಭಾರತದ ಏಕತೆ ಮತ್ತು ಸಮಗ್ರತೆಗೂ ಧಕ್ಕೆ ತರುವ ಸಾಧ್ಯತೆಗಳಿವೆ. ಕಾರಣಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020:  ಹೈದರಾಬಾದ್:  ಟಾಟಾ ಸಮಾಜ ವಿಜ್ಞಾನ ಸಂಸ್ಥೆ (ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ -ಟಿಐಎಸ್ಎಸ್) ವಿದ್ಯಾರ್ಥಿಗಳು ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಭೀಮ ಸೇನಾ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್ ಅವರನ್ನು  2020 ಜನವರಿ 26ರ ಭಾನುವಾರ  ಸಂಜೆ ಹೈದರಾಬಾದ್ ಪೊಲೀಸರು ಬಂಧಿಸಿದರು. ಬಂಧನಕ್ಕೊಳಗಾದಾಗ ಸಿಎಎ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್-ಎನ್ಪಿ ಆರ್) ವಿರುದ್ಧ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರದರ್ಶನದ ಆರಂಭದ ತಾಣವಾದ ಮೆಹದಿಪಟ್ಟಣಂದ ಕ್ರಿಸ್ಟಲ್ ಗಾರ್ಡನ್ ಕಡೆಗೆ ಆಜಾದ್ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು. ಹಬೀಬ್ ನಗರ ಪೊಲೀಸ್ ಠಾಣಾ ಪ್ರದೇಶದಲ್ಲಿ ಜನ ಸಮೂಹ ಸೇರಲು ಪ್ರಾರಂಭಿಸಿದ ನಂತರ ಆಜಾದ್ ಅವರನ್ನು  ಹಬೀಬ್ ನಗರ ಪೊಲೀಸ್ ಠಾಣೆಯಿಂದ ಬಲ್ಲಾರಂ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬಂಧಿತರಾದ ಎಲ್ಲರನ್ನೂ ಬಳಿಕ ಗೋಶಮಹಲ್ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು. ೭೧ ನೇ ಗಣರಾಜ್ಯೋತ್ಸವದಂದು ಟಾಟಾ ಸಮಾಜ ವಿಜ್ಞಾನ ಸಂಸ್ಥೆ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಜಾದ್ ನಗರಕ್ಕೆ ಬಂದಿದ್ದರು. ಮೆಜ್ದಿಪಟ್ಟಣಂ ಆಂದೋಲನ ನಡೆಯುವ ಸ್ಥಳಕ್ಕೆ ತೆರಳಲು ನಗರ ಪೊಲೀಸರು ಜನರನ್ನು ತಡೆಯುತ್ತಿದ್ದಾರೆ ಎಂದು ಇದಕ್ಕೆ ಮುನ್ನ ಮಧ್ಯಾಹ್ನ ಆಜಾದ್ ಅವರ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment