ನಾನು ಮೆಚ್ಚಿದ ವಾಟ್ಸಪ್

Sunday, January 26, 2020

ಗಣರಾಜ್ಯೋತ್ಸವದ ದಿನ ಇವರ ಮರೆವು ಕನ್ನಡಿಗರ ಪಾಲಿನ ದುರಂತ..!

ಗಣರಾಜ್ಯೋತ್ಸವದ ದಿನ ಇವರ ಮರೆವು ಕನ್ನಡಿಗರ ಪಾಲಿನ ದುರಂತ..!
2020 ಜನವರಿ 26 ಭಾನುವಾರ. ಭಾರತದ 71ನೇ ಗಣರಾಜ್ಯೋತ್ಸವದ ದಿನ. ಭಾರತೀಯ ಗಣರಾಜ್ಯಕ್ಕೆ ಅಡಿಪಾಯವಾದ ಸಂವಿಧಾನವನ್ನು ಹಾಡಿ ಹೊಗಳುವ ದಿನ. ಈದಿನ ಕನ್ನಡದ ಪತ್ರಿಕೆಗಳೂ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳ ನಮ್ಮ ಸಂವಿಧಾನದ ಮಹತ್ವದ ಬಗ್ಗೆ, ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳ ಬಗ್ಗೆ ದಪ್ಪಕ್ಷರಗಳಲ್ಲಿ ಪುಟಗಟ್ಟಲೆ ಲೇಖನಗಳನ್ನು ಬರೆದಿವೆ.
ಆದರೆ ಎಲ್ಲರಿಗೂ ಮರೆತು ಹೋದ ಅಥವಾ ಜಾಣಮರೆವಿನ ಒಂದು ಅಂಶ ವಾಟ್ಸಪ್ ಬರಹಗಳಲ್ಲಿ ಪ್ರಸಾರವಾಗುತ್ತಿದೆ. ವಿಷಯ ಏನೆಂಬುದು ನಿಮಗೆ ಗೊತ್ತೇ?

ಹೌದು, ನಮ್ಮ ಸಂವಿಧಾನವನ್ನು ಮೂಲತಃ ಸಿದ್ಧ ಪಡಿಸಿದ ಮಹಾನ್ ವ್ಯಕ್ತಿ ನಾವು ಹೆಮ್ಮೆ ಪಡಬೇಕಾದ ಕನ್ನಡಿಗ ನ್ಯಾಯಶಾಸ್ತ್ರ ತಜ್ಞ ಬೆನಗಲ್ ನರಸಿಂಗ ರಾವ (ಬಿ.ಎನ್. ರಾವ). ಸ್ವಾತಂತ್ರ್ಯ ಪೂರ್ವಕ್ಕೆ ಮುನ್ನವೇ ಜಮ್ಮು ಮತ್ತು ಕಾಶ್ಮೀರದ ಪ್ರಧಾನಿ (1944-45) ಆಗಿ ಹಾಗೂ ಬಳಿಕ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ ) ನ್ಯಾಯಮೂರ್ತಿ (1952-52) ಮತ್ತು  ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಾಗಿ (1951)  ಸೇವೆ ಸಲ್ಲಿಸಿದ್ದ ಬೆನಗಲ್ ನರಸಿಂಗ ರಾವ ಅವರು ಭಾರತದ ಸಂವಿಧಾನ ರಚನೆಯ ಸಲಹೆಗಾರರಾಗಿ ಭಾರತ ಸರ್ಕಾರದಿಂದ ನೇಮಕಗೊಂಡಿದ್ದರು.

ಭಾರತೀಯ
ಸಂವಿಧಾನದ ಮೂಲ ಪ್ರತಿಯನ್ನು ರಚಿಸಿಕೊಟ್ಟ ನರಸಿಂಗ ರಾವ ಅವರ ಕರಡು ಪ್ರತಿಯನ್ನೇ ಬಳಿಕ ಪರಿಷ್ಕರಿಸಲಾಗಿದೆ ಹೊರತು ಇದರಲ್ಲಿ ನನ್ನ ಹೆಗ್ಗಳಿಕೆಯೇನೂ ಇಲ್ಲ ಎಂಬುದಾಗಿ ಸಂವಿಧಾನ ರಚನಾ ಸಮಿತಿಯ ಪರಿಮಾಪ್ತಿ ಭಾಷಣದಲ್ಲಿ ಸಮಿತಿಯ ಅಧ್ಯಕ್ಷ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಸ್ವತಃ ತಿಳಿಸಿದ್ದರು.

ಅಂಬೇಡ್ಕರ್ ಅವರು ಹೇಳಿದ ಮಾತು ವಿಕಿಪೀಡಿಯಾದಲ್ಲಿ ದಾಖಲಾಗಿರುವಂತೆ ಇರುವುದು ಹೀಗೆ: ‘ಶ್ರೇಯಸ್ಸನ್ನು ನನಗೆ ಕೊಡಲಾಗುತ್ತಿದೆ. ಆದರೆ, ನಿಜವಾಗಿ ಅದು ನನಗೆ ಸಲ್ಲುವಂತಹುದೇ ಅಲ್ಲ. ಅದು ಭಾಗಶಃ ಸಲ್ಲುವುದು ಸಂವಿಧಾನ ರಚನಾ ಸಮಿತಿಯ ಪರಿಶೀಲನೆಗಾಗಿ ಕರಡು ಸಂವಿಧಾನವನ್ನು ಸಿದ್ಧ ಪಡಿಸಿಕೊಟ್ಟ  ಸಂವಿಧಾನ ರಚನಾ ಸಭೆಯ ಸಲಹೆಗಾರ ಶ್ರೀ ಬಿ.ಎನ್. ರಾವ ಅವರಿಗೆ’ .

ಇಂತಹ ವ್ಯಕ್ತಿಯನ್ನು ಗಣರಾಜ್ಯ ದಿನೋತ್ಸವವಾದ ಈದಿನ ಮರೆಯುವುದು ಕನ್ನಡಿಗರ ಪಾಲಿನ ದುರಂತವಾಗುತ್ತದೆ. ಹೀಗಾಗಿ ವಾಟ್ಸಪ್ ನಲ್ಲಿ ಅನಾಮಧೇಯರೊಬ್ಬರು ಬರೆದ ಲೇಖನವನ್ನೇ ಇಲ್ಲಿ ಪುನರಾವರ್ತನೆ ಮಾಡಿದ್ದೇನೆ.

ಲೇಖಕರ ಸಲಹೆ ಖಂಡಿತಾ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದಂತಹುದು.  ಕನ್ನಡ ಪತ್ರಿಕೆಗಳಂತೂ ಹೆಚ್ಚು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದಂತಹುದು.
ಗಣರಾಜ್ಯನಿಮಗೆ, ನಮಗೆ ಬಿ.ಆರ್. ಅಂಬೇಡ್ಕರ್ ಗೊತ್ತು. ಆದರೆ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೊಬ್ಬ ವ್ಯಕ್ತಿ "ಬಿ.ಎನ್. ರಾವ್" ರವರ ಬಗ್ಗೆ ಗೊತ್ತೆ? ಬಹುಶಃ ಗೊತ್ತಿರಲಿಕ್ಕಿಲ್ಲ. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ, ಮಾರುಕಟ್ಟೆಯಲ್ಲಿ, ಹೊಟೆಲುಗಳಲ್ಲಿ ಅಥವಾ ಇನ್ನಾವುದೇ ಸ್ಥಳಗಳಲ್ಲಿ, ಯಾರನ್ನು ಬೇಕಾದರೂ ಕೇಳಿ; ಯಾರಿಗೂ ಹೆಸರಿನ ವ್ಯಕ್ತಿಯ ಪರಿಚಯ ಇಲ್ಲ. ಇವರ ಬಗ್ಗೆ ಅವರೆಲ್ಲೂ ಓದಿಲ್ಲವೆಂದು ಧೈರ್ಯದಿಂದ ಷರತ್ತನ್ನೂ ಕಟ್ಟಬಹುದು ! ಈಗ ಅವರ ಬಗ್ಗೆ ಕೇಳಿ.
ಇವರ ಹೆಸರಿನ, ಎನ್ ಎಂದರೆ ನರಸಿಂಗ; ಬಿ ಎಂದರೆ ಬೆನಗಲ್ ಎಂದು. ಬೆನಗಲ್, ಕಾರ್ಕಳ ಮಂಗಳೂರುಗಳ ಮಧ್ಯೆ ಇರುವ ಪುಟ್ಟದೊಂದು ಹಳ್ಳಿ. ಹಳ್ಳಿಯ ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಮನೆತನದಲ್ಲಿ ೧೮೮೭ರ ಫೆಬ್ರವರಿ ೨೬ರಂದು ಹುಟ್ಟಿದ ಮಗು, ನರಸಿಂಗ.

ವಂಶದ ಜನ ಪಾರ್ಸಿಗಳಿಗಿಂತಲೂ ಅಲ್ಪಸಂಖ್ಯಾತರು. ಇಡೀ ಜಗತ್ತಿನಲ್ಲಿ ೩೦ ಸಾವಿರ ಚಿತ್ರಾಪುರ ಬ್ರಾಹ್ಮಣರಿದ್ದರೆ ಹೆಚ್ಚು. ಆದರೆ ಜಗತ್ತಿನಲ್ಲಿ ಬಹಳ ಹೆಸರು ಮಾಡಿದ ಇದೇ ಪಂಗಡದ ಮಹಾಮಹಿಮರನ್ನು ಪರಿಚಯಿಸಿಕೊಳ್ಳೋಣ : ದೇಶಭಕ್ತ ಕಾರ್ನಾಡ್ ಸದಾಶಿವರಾಯರು, ಕುದ್ಮುಲ್ ರಂಗರಾವ್, ಸಹಕಾರ ಕ್ರಾಂತಿಯ ಮೊಳಹಳ್ಳಿ ಶಿವರಾಯರು, ಪಂಜೆ ಮಂಗೇಶರಾಯರು, ಕಮಲಾದೇವಿ ಚಟ್ಟೋಪಾಧ್ಯಾಯ, ಗೌರೀಶ ಕಾಯ್ಕಿಣಿ, ಜಯಂತ್ ಕಾಯ್ಕಿಣಿ, ಪ್ರಕಾಶ್ ಪಡುಕೋಣೆ, ಸಂತೋಷ ಕುಮಾರ ಗುಲ್ವಾಡಿ, ಗಿರೀಶ ಕಾರ್ನಾಡ್.

ನರಸಿಂಗರಾವರ ತಂದೆ ರಾಘವೇಂದ್ರ ರಾಯರು ಸುತ್ತಮುತ್ತಲಿನ ಹಳ್ಳಿಗೆಲ್ಲ ಪ್ರಸಿದ್ಧ ವೈದ್ಯರು. ನರಸಿಂಗರಾಯರು ಮಂಗಳೂರಿನ ಕೆನರಾ ಶಾಲೆಯಲ್ಲಿ ಕಲಿಯುತ್ತಿದ್ದವರು ೧೯೦೧ರಲ್ಲಿ ನಡೆದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮದ್ರಾಸ್ ಪ್ರಾಂತ್ಯಕ್ಕೇ ಮೊದಲ ಸ್ಥಾನ ಪಡೆದು ಬಿಟ್ಟರು.
ಅಲ್ಲಿಂದ
ಮದ್ರಾಸಿಗೆ ಹೋಗಿ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು ಸೇರಿದ್ದಾಯಿತು. ಅಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ಗಣಿತ ವಿಷಯಗಳನ್ನು ಅಭ್ಯಾಸ ಮಾಡಿ ಎಫ್ ಪರೀಕ್ಷೆಯಲ್ಲಿ ಮತ್ತೆ ಇಡೀ ಪ್ರಾಂತ್ಯಕ್ಕೆ ಪ್ರಥಮ ಸ್ಥಾನ ಪಡೆದದ್ದೂ ಆಯಿತು. ವಿದ್ಯಾರ್ಥಿ ವೇತನ ಸಿಕ್ಕಿದ್ದರಿಂದ ನರಸಿಂಗ ರಾಯರು ಇಂಗ್ಲೆಂಡಿಗೆ ಹೋದರು. ಅಲ್ಲಿ ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷ ಪದವಿ ವ್ಯಾಸಂಗ ಮಾಡಿ ೧೯೦೯ರಲ್ಲಿ ಟ್ರೈಪೋಸ್ ಪಾಸು ಮಾಡಿದರು. ಅದೇ ವರ್ಷ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಅದನ್ನೂ ಪಾಸು ಮಾಡಿಕೊಂಡು ಆಗಿನ ಬ್ರಿಟಿಷ್ ಭಾರತದ ರಾಜಧಾನಿ ಕಲ್ಕತ್ತಕ್ಕೆ ನ್ಯಾಯಾಧೀಶನಾಗಿ ಆಯ್ಕೆಯಾಗಿ ಬಂದ ನರಸಿಂಗರಾಯರು ಕಾಲದಲ್ಲಿ ಮಾಡಿದ ಬಹು ದೊಡ್ಡ ಕೆಲಸವೆಂದರೆ ಭಾರತದ ಕಾನೂನು ಸಂಹಿತೆಯನ್ನು ಹೊಸದಾಗಿ ಬರೆದದ್ದು. ಬ್ರಿಟಿಷ್ ಸರಕಾರ ವಹಿಸಿದ್ದ ಕೆಲಸವನ್ನು ದಾಖಲೆಯ ಎರಡು ವರ್ಷದಲ್ಲಿ ಮುಗಿಸಿದ್ದಕ್ಕಾಗಿ ರಾಯರಿಗೆ ನೈಟ್-ಹುಡ್ ಬಿರುದು ಕೊಡಲಾಯಿತು. ಹೆಸರಿನ ಹಿಂದೆ ಸರ್ ಎಂಬ ಉಪಾಧಿ ಸೇರಿ ಕೊಂಡಿತು. ನಂತರ ಬ್ರಿಟಿಷ್ ಸರಕಾರವು ರಾಯರನ್ನು ಸಿಂಧ್ ಪ್ರಾಂತ್ಯಕ್ಕೆ ಕರೆಸಿಕೊಂಡಿತು. ಅಲ್ಲಿನ ನಗರ-ಹಳ್ಳಿಗಳಿಗೆ ನದಿ ನೀರಿನ ಹಂಚಿಕೆಯನ್ನು ಯಾವ ರೀತಿಯಲ್ಲಿ ಮಾಡಬೇಕೆಂಬುದಕ್ಕೆ ಅಧ್ಯಯನ ಮಾಡಿ ವರದಿ ನೀಡಬೇಕೆಂದು ಕೇಳಿಕೊಂಡಿತು. ನರಸಿಂಗರಾಯರು ಅದನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಿ ವರದಿ ಒಪ್ಪಿಸಿದರು. ಗಣಿತದಲ್ಲಿ ಅಪ್ರತಿಮ ಪಂಡಿತರಾಗಿದ್ದ ಅವರು ಸುಮಾರು ಇಪ್ಪತ್ತು- ಮೂವತ್ತು ವರ್ಷಗಳ ಎಲ್ಲಾ ಅಂಕಿ-ಅಂಶಗಳನ್ನು ಒಟ್ಟು ಹಾಕಿ ಆಳವಾದ ಅಧ್ಯಯನ ಮಾಡಿ ಬರೆದ ವರದಿಯ ಆಧಾರದಲ್ಲೇ ಇಂದಿಗೂ ಭಾರತ-ಪಾಕಿಸ್ತಾನಗಳ ನಡುವೆ ನೀರಿನ ಹಂಚಿಕೆ ನಡೆಯುತ್ತಿದೆ. ಸದಾ ಬೆಂಕಿಯುಗುಳುವ ದೇಶಗಳ ಮಧ್ಯೆ ಕಳೆದ ಎಪ್ಪತ್ತು ವರ್ಷಗಳಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಮಸ್ಯೆ ಉದ್ಭವವಾಗಿಲ್ಲವೆಂದರೆ ಅದಕ್ಕೆ ಕಾರಣ ನರಸಿಂಗ ರಾಯರ ದೂರದೃಷ್ಟಿ ಎನ್ನಲೇಬೇಕು.

ನದಿನೀರಿನ ವರದಿ ಕೊಟ್ಟ ಮೇಲೆ ಸರಕಾರ ಅವರನ್ನು ಮತ್ತೆ ಕಲ್ಕತ್ತಕ್ಕೆ ಕರೆಸಿ ಸುಪ್ರೀ೦ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿತು. ೧೯೪೪ರಲ್ಲಿ ಅವರು ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು!
೧೯೪೬ರಲ್ಲಿ
, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ತನ್ನ ಸೇವಾವಧಿಯಲ್ಲಿ ಸುಮಾರು ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಕೆಲಸ ಮಾಡಿದ ಅವರಿಗಿಂತ ಸೂಕ್ತ ವ್ಯಕ್ತಿ ಬೇರಾರಿದ್ದಾರು? ನರಸಿಂಗರಾಯರು ಸರಕಾರ ಕೇಳಿಕೊಂಡಂತೆ ಸಂವಿಧಾನದ ಕರಡು ಸಿದ್ಧಪಡಿಸಿದರು. ಇದರಲ್ಲಿ ಒಟ್ಟು ೨೪೩ ವಿಧಿಗಳೂ ೧೩ ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟುಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ರಾಯರು
ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು. ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ ೩೧೫ವಿಧಿಗಳೂ ಅನುಚ್ಛೇದಗಳು ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ ೩೯೫ಕ್ಕೆ ಏರಿತು. ತನ್ನ ಕರ್ತವ್ಯವನ್ನು ರಾಯರು ಒಂದೇ ಒಂದು ರುಪಾಯಿ ವೇತನ ಅಥವಾ ಸಂಭಾವನೆ ಪಡೆಯದೇ ಉಚಿತವಾಗಿ ನಡೆಸಿಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶ. ಸಂವಿಧಾನವನ್ನು ಪೂರ್ತಿ ಬರೆದವರೇ ಅಂಬೇಡ್ಕರ್ ಎಂಬ ತಪ್ಪು ಕಲ್ಪನೆ ಈಗ ಬೆಳೆದುಬಂದಿದೆ. ಬಹುಶಃ ಕಾಲಕಾಲಕ್ಕೆ ಜನರನ್ನು ಜಾತಿ ಆಧಾರದ ಮೇಲೆ ಓಲೈಸಿಕೊಂಡು ಬಂದ ರಾಜಕೀಯ ಪಕ್ಷಗಳೇ ಮಿಥ್ಯ ಚರಿತ್ರೆಗೆ ನೇರ ಹೊಣೆ ಎನ್ನಬಹುದು. ಸಂವಿಧಾನ ಆಂಗೀಕೃತವಾದ ಸುವರ್ಣ ಮಹೋತ್ಸವದ ಸಂದರ್ಭದಲ್ಲೂ ಅದರ ಮೂಲಕರಡನ್ನು ತಯಾರಿಸಿಕೊಟ್ಟ ಮೇಧಾವಿ, ಯಾರಿಗೂ ನೆನಪಾಗಿಲ್ಲವೆಂದರೆ ಅದು ಗಣರಾಜ್ಯದ ದುರಂತ !


ನರಸಿಂಗರಾಯರು, ಸಂವಿಧಾನದ ಕೆಲಸ ಮುಗಿಸಿದ ಮೇಲೆ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ ಬರ್ಮಾ ದೇಶ, ತನ್ನ ಸಂವಿಧಾನದ ಕರಡನ್ನು ಸಿದ್ಧಪಡಿಸಿ ಕೊಡಲು ರಾಯರನ್ನು ಕೇಳಿ ಕೊಂಡಿತು ! ಕೆಲಸವನ್ನೂ ಪೂರೈಸಿಕೊಟ್ಟ ರಾಯರು, ವಿಶ್ವಸಂಸ್ಥೆಯಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತಾಹೋಗಿ ೧೯೫೦ರಲ್ಲಿ ಅದರ ಸೆಕ್ಯುರಿಟಿ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಸದಸ್ಯ ರಾಷ್ಟ್ರವಾಗಲು ಚಿನ್ನದಂಥಾ ಅವಕಾಶ ಒದಗಿಬಂದಿತ್ತು. ಆದರೆ ಅದೃಷ್ಟವನ್ನು ನಮ್ಮ ದೇಶದ ಆಗಿನ ಪ್ರಧಾನಿ ನೆಹರೂ, ಕೃಷ್ಣಾರ್ಪಣ ಮಾಡಿದ್ದರಿಂದ ಎಪ್ಪತ್ತು ವರ್ಷಗಳೇ ಕಳೆದರೂ ನಮಗೆ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗಿಲ್ಲ. ೧೯೫೨ರಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಗುವ ಅವಕಾಶ ರಾಯರಿಗೆ ಕೂದಲೆಳೆಯಲ್ಲಿ ಕೈತಪ್ಪಿ ಹೋಯಿತು. ಆದರೇನಂತೆ, ಅವರು ಹೇಗ್ ಅಂತರ-ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದರು. ಆದರೆ, ಹುದ್ದೆಯಲ್ಲಿ ಬಹುಕಾಲ ಮುಂದುವರಿಯಲು ಅದೃಷ್ಟ ಇರಲಿಲ್ಲವೋ ಏನೋ.೧೯೫೩ರ ನವೆಂಬರ್ ೩೦ರಂದು ಬೆನಗಲ್ ನರಸಿಂಗ ರಾಯರು ಜ್ಯೂರಿಕ್ ನಲ್ಲಿ ತನ್ನ ೬೬ನೆಯ ವಯಸ್ಸಿನಲ್ಲಿ ನಿಧನರಾದರು.ನರಸಿಂಗ ರಾಯರ ಉಳಿದಿಬ್ಬರು ಸೋದರರೂ ಮಹಾರಥಿಗಳೇ. ಅವರ ಮೊದಲ ಸಹೋದರರಾದ ಬಿ. ರಾಮರಾವರವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. ಎರಡನೆಯ ಸಹೋದರ ಶಿವರಾಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಾರ್ಮಿಕ ಹೋರಾಟಗಾರರು. ಜೊತೆಗೆ ಸಂಸದರೂ ಆಗಿದ್ದವರು. ತನ್ನ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಸಂಶೋಧನೆಗೆ ಮೀಸಲಿಟ್ಟ ವಿಚಿತ್ರ ಮತ್ತು ಅಪರೂಪದ ರಾಜಕಾರಣಿ ಅವರು.

ಕಾರ್ಕಳದ
ಬೆನಗಲ್ಲಿನಂಥ ಒಂದು ಪುಟ್ಟ ಊರಿನಿಂದ ವಿಶ್ವಸಂಸ್ಥೆ, ಬಅಂತರರಾಷ್ಟ್ರೀಯ ನ್ಯಾಯಾಲಯಗಳಂಥ ಎತ್ತರಗಳನ್ನು ಏರಿ, ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ, ಭಾರತದ ಸಂವಿಧಾನವನ್ನು ಬರೆಯುವಂಥ ಅವಕಾಶ ಪಡೆದ ಧೀಮಂತರು ನಮ್ಮ ದೇಶದಲ್ಲಿ ಹೆಚ್ಚಿಲ್ಲ. ಸಂಸತ್ತಿನ ಹೊರಗೆ ಅಂಬೇಡ್ಕರರ ಪಕ್ಕದಲ್ಲಿ ಹೆಗಲೆಣೆಯಾಗಿ ನಿಲ್ಲಬೇಕಿದ್ದ ಪ್ರತಿಮೆ ಬೆನಗಲ್ ನರಸಿಂಗರಾಯರದು ! ಆದರೆ, ನಮ್ಮ ಕರ್ನಾಟಕದ ಮಹಾನ್ ವ್ಯಕ್ತಿಯನ್ನು ದೇಶಕ್ಕೆ ಮರು-ನೆನಪಿಸುವ ಕೆಲಸವನ್ನು ಯಾವ ಜನಪ್ರತಿನಿಧಿಯೂ ಇದುವರೆಗೆ ಮಾಡಿಲ್ಲ ಎನ್ನುವುದು ನಮ್ಮ ಅಭಿಮಾನ-ಶೂನ್ಯತೆಯನ್ನು ಎತ್ತಿ ತೋರಿಸುವಂತಿದೆ !

ಕೊನೆಯಪಕ್ಷ ಈಗಲಾದರೂ ನಮ್ಮ ಶಾಸಕರು, ಸಂಸದರು ಹಾಗೂ ಮುಂದಾಳುಗಳು ಕಾರ್ಯವನ್ನು ಮಾಡಿ ಒಬ್ಬ ಮಹಾನ್ ಮೇಧಾವಿ ಸತ್ಪುರುಷನನ್ನು ಹೊಸಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಲಿ ಎಂದು ಆಶಿಸೋಣವೇ?

ನೆತ್ರಕೆರೆ ಉದಯಶಂಕರ

No comments:

Post a Comment