ಇಂದಿನ ಇತಿಹಾಸ History Today ಮೇ 20
2018: ಬೆಂಗಳೂರು: ಮುಖ್ಯಮಂತ್ರಿಯಾಗಿ
ಪ್ರಮಾಣವಚನ ಸ್ವೀಕರಿಸಿದ ಕೇವಲ ೨೪ ಗಂಟೆಗಳ ಒಳಗಾಗಿಯೇ ವಿಶ್ವಾಸಮತ ಸಾಬೀತುಪಡಿಸುವ ವಿಶ್ವಾಸವನ್ನು
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ನಿಯೋಜಿತ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು
ಇಲ್ಲಿ ವ್ಯಕ್ತ ಪಡಿಸಿದರು. ಈ ಮಧ್ಯೆ ಮೇ ೨೩ರ ಬುಧವಾರ
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸ್ಥಳ ಮತ್ತೆ ಬದಲಾಗಿದ್ದು, ಕೊನೆಗೆ
ವಿಧಾನಸೌಧದ ಎದುರೇ ಪ್ರಮಾಣ ವಚನ ಸ್ವೀಕರಿಸಲು ತೀರ್ಮಾನಿಸಲಾಯಿತು.
ಮೊದಲು
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಲಾಗಿತ್ತು, ಬಳಿಕ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಚರ್ಚೆ ನಡೆದಿತ್ತು. ಕೊನೆಗೆ ವಿಧಾನಸೌಧದ
ಎದುರು ಪ್ರಮಾಣ ವಚನ ಸ್ವೀಕರಿಸಲು ನಿಗದಿ ಮಾಡಲಾಗಿದೆ. ಕೆಲವು ಗೊಂದಲಗಳಿಂದಾಗಿ ಹೀಗಾಯಿತು ಎಂದು ಜೆಡಿಎಸ್
ಶಾಸಕ ಬಂಡೆಪ್ಪ ಕಾಶಂಪೂರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ
ಮಾತನಾಡಿದ ಕುಮಾರ ಸ್ವಾಮಿ ಅವರು ಮೇ 21ರ ಸೋಮವಾರ ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ
ಗಾಂಧಿ ಹಾಗೂ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದು, ಸರ್ಕಾರ ರಚನೆ ಹಾಗೂ ಮಂತ್ರಿಮಂಡಲ
ಕುರಿತು ಚರ್ಚೆ ನಡೆಸುವೆ. ಜೊತೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನವನ್ನೂ ನೀಡುವೆ ಎಂದು
ಹೇಳಿದರು. ಈದಿನ ಬೆಳಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.
ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಕುಮಾರ ಸ್ವಾಮಿ ಬಳಿಕ ತಮಿಳುನಾಡಿನ ತಿರುಚ್ಚಿಯ
ಶ್ರೀರಂಗಂ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮೇ 21ರ ಬೆಳಗ್ಗೆ ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಠರ ಜೊತೆ ಮಾತುಕತೆ ನಡೆಸುವುದಾಗಿ ನುಡಿದರು. ಬಿರುಸಿನ ಚಟುವಟಿಕೆ: ಎಚ್.ಡಿ. ಕುಮಾರಸ್ವಾಮಿ ಅವರ ಜೆ.ಪಿ.ನಗರದ ನಿವಾಸದಲ್ಲಿ
ರಾಜಕೀಯ ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಬಿರುಸುಗೊಂಡಿದ್ದು, ಸಹಸ್ರಾರು ಅಭಿಮಾನಿಗಳು ನಿವಾಸದತ್ತ
ದೌಡಾಯಿಸಿ ಭಾವೀ ಮುಖ್ಯಮಂತಿಯನ್ನು ಅಭಿನಂದಿಸಲು ಹಾತೊರೆದಿದ್ದಾರೆ. ನಿವಾಸದ ಬಳಿ ಭದ್ರತೆ ಬಿಗಿ ಗೊಳಿಸಲಾಗಿದ್ದು
ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು. ಶ್ರೀರಂಗಂ
ದೇವಾಲಯದತ್ತ: ವಾಡಿಕೆಯಂತೆ ತಮಿಳುನಾಡಿನ ತಿರುಚ್ಚಿಯಲ್ಲಿರುವ
ಇತಿಹಾಸ ಪ್ರಸಿದ್ಧ ಶ್ರೀಂಗಂ ದೇವಾಲಯಕ್ಕೆ ಎಚ್‌ಡಿಕೆ ಅವರು ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದು,
ಅವರೊಂದಿಗೆ ಎಚ್.ಡಿ.ರೇವಣ್ಣ ಅವರು ತೆರಳಿದರು. ಪ್ರಮಾಣ
ವಚನ: ಎಚ್‌ಡಿಕೆ ಅವರು ಮೇ ೨೩ರ ಬುಧವಾರ ೨ ನೇ ಬಾರಿಗೆ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 24 ಗಂಟೆಗಳ ಒಳಗಾಗಿ ಸದನದಲ್ಲಿ ಸ್ಪೀಕರ್ ಆಯ್ಕೆ
ನಡೆದ ಬಳಿಕ ವಿಶ್ವಾಸಮತವನ್ನೂ ಸಾಬೀತು ಪಡಿಸುವುದಾಗಿ ಅವರು ಹೇಳಿದರು. ಮಂಡ್ಯ, ಮೈಸೂರು, ಹಾಸನ, ರಾಮನಗರ ಮತ್ತು ರಾಜ್ಯದ ವಿವಿಧ
ಕಡೆಗಳಿಂದ ಸಾವಿರಾರು ಮಂದಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಎಚ್‌ಡಿಕೆ ಅಭಿಮಾನಿಗಳು
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎನ್ನಲಾಯಿತು. ಸಿಎಸ್, ಐಜಿ, ಡಿಐಜಿ ಜೊತೆ ಚರ್ಚೆ: ನಿಯೋಜಿತ ಸಿಎಂ ಎಚ್‌ಡಿಕೆ
ಅವರ ನಿವಾಸಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ, ಪೊಲೀಸ್ ಮಹಾ ನೀರ್ದೇಶಕಿ ನೀಲಮಣಿ
ಎನ್.ರಾಜು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಭೇಟಿ ನೀಡಿ ೧ ಗಂಟೆಗೂ ಹೆಚ್ಚು
ಕಾಲ ಚರ್ಚೆ ನಡೆಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭದ್ರತೆ ನೀಡುವ ಕುರಿತಾಗಿಯೂ ಚರ್ಚೆ ನಡೆಸಿದರು. ಮುಂದುವರೆದ ರಿಸಾರ್ಟ್‌ವಾಸ: ಈ ಮಧ್ಯೆ ಕಾಂಗ್ರೆಸ್ ಪಕ್ಷವು
ತನ್ನ ಶಾಸಕರನ್ನು ಇನ್ನೂ ಬೆಂಗಳೂರು ಹೊರವಲಯದ ರಿಸಾರ್ಟ್‌ನಲ್ಲಿಯೇ ಇರಿಸಿತು. ಕುಮಾರ ಸ್ವಾಮಿ ಅವರು
ಮೊದಲಿಗೆ ಮೇ ೨೧ರ ಸೋಮವಾರ ಪ್ರಮಾಣವಚನ ಸ್ವೀಕರಿಸಲು ಉದ್ದೇಶಿಸಿದ್ದರು. ಆದರೆ, ಆದಿನ ಮಾಜಿ ಪ್ರಧಾನಿ
ರಾಜೀವ ಗಾಂಧಿ ಅವರು ೨೭ನೇ ಪುಣ್ಯದಿನವಾದ ಕಾರಣ ಪ್ರಮಾಣ ವಚನ ಸ್ವೀಕಾರವನ್ನು ಬುಧವಾರಕ್ಕೆ ಮುಂದೂಡಿದರು. ೨೨೪
ಸದಸ್ಯ ಬಲದ ವಿಧಾನಸಭೆಯ ೨೨೨ ಸ್ಥಾನಗಳ ಪೈಕಿ ಜೆಡಿ(ಎಸ್) - ಕಾಂಗ್ರೆಸ್ ಮೈತ್ರಿಕೂಟವು ೧೧೭ ಶಾಸಕರ
ಬೆಂಬಲವನ್ನು ಹೊಂದಿದೆ. ಜಯನಗರ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಚುನಾವಣೆ ಮುಂದೂಡಿಕೆಯಾಗಿದ್ದು,
ಕುಮಾರ ಸ್ವಾಮಿಯವರು ಗೆದ್ದ ಎರಡು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಸ್ಥಾನವನ್ನು ಉಳಿಸಿಕೊಂಡ ಕಾರಣ,
ರಾಮನಗರ ಸ್ಥಾನ ತೆರವಾಗಿದೆ. ಹೀಗಾಗಿ ಒಟ್ಟು ಮೂರು ಕ್ಷೇತ್ರಗಳಲ್ಲಿ ಚುನಾವಣೆಗಳು ನಡೆಯಬೇಕಾಗಿವೆ. ಉಭಯ ಪಕ್ಷಗಳ ನಾಯಕರು ಈದಿನ ಅಧಿಕಾರ ಹಂಚಿಕೆ ಬಗ್ಗೆ ಚರ್ಚಿಸಲಿದ್ದಾರೆ.
ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗುವುದರಿಂದ ಕಾಂಗ್ರೆಸ್ ಪಕ್ಷದಿಂದ ಅದೂ ದಲಿತರೊಬ್ಬರು ಉಪ ಮುಖ್ಯಮಂತ್ರಿಯಾಗುವ
ನಿರೀಕ್ಷೆ ಇದೆ. ಕುಮಾರ
ಸ್ವಾಮಿ ಅವರು ಕರ್ನಾಟಕದಲ್ಲಿ ಒಂದೇ ವಾರದ ಅವಧಿಯಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಯಾಗಲಿದ್ದಾರೆ.
ಅಸ್ಥಿರ ವಿಧಾನಸಭಾ ಫಲಿತಾಂಶ ಬಂದ ಬೆನ್ನಲ್ಲೇ ಏಕೈಕ ದೊಡ್ಡ ಪಕ್ಷ ಎಂಬ ನೆಲೆಯಲ್ಲಿ ಅಧಿಕಾರಕ್ಕೆ ಏರಿದ
ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ, ಶನಿವಾರ ಬಿಜೆಪಿ ನಾಯಕ ವಿಶ್ವಾಸ ಮತದ ಅಗ್ನಿ ಪರೀಕ್ಷೆ ಎದುರಿಸುವ
ಮುನ್ನವೇ ೧೯೯೬ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನಡೆದಿದ್ದ ಹಾದಿ ಹಿಡಿದು ಭಾವುಕ ಭಾಷಣದ ಬಳಿಕ ರಾಜೀನಾಮೆ
ಸಲ್ಲಿಸುವುದರೊಂದಿಗೆ ಕೇವಲ ೫೫ ಗಂಟೆಗಳಲ್ಲಿ ಪತನಗೊಂಡಿತ್ತು. ಬಿಜೆಪಿಯ
ತಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಆಪಾದಿಸಿದ ಕಾಂಗ್ರೆಸ್ ತನ್ನ ಶಾಸಕರನ್ನು ಬೆಂಗಳೂರು
ಹೊರವಲಯದ ರಿಸಾರ್ಟ್‌ನಲ್ಲಿ ಇರಿಸಿದರೆ, ಜೆಡಿಎಸ್ ರಾಜಧಾನಿಯ ಇನ್ನೊಂದು ಹೊಟೇಲಿನಲ್ಲಿ ತನ್ನ ಶಾಸಕರನ್ನು
ಬಿಗಿ ಬಂದೋಬಸ್ತಿನಲ್ಲಿ ಇರಿಸಿತ್ತು. ತಮ್ಮ ಪಕ್ಷದ ವಿರುದ್ಧ ಮಾಡಲಾದ ‘ಕುದುರೆ ವ್ಯಾಪಾರ’ದ ಆರೋಪಗಳನ್ನು ತಳ್ಳಿಹಾಕಿದ ಬಿಜೆಪಿ ಮುಖ್ಯಸ್ಥ ಅಮಿತ್
ಶಾ ಅವರು ಜೆಡಿ(ಎಸ್)-ಕಾಂಗ್ರೆಸ್ ಮೈತ್ರಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಳುವುದಿಲ್ಲ ಎಂದು ಹೇಳಿದ್ದಾರೆ.
2018: ನಾಗಪುರ: ದಕ್ಷಿಣ ಛತ್ತೀಸ್‌ಗಢದ
ದಾಂತೇವಾಡ ಜಿಲ್ಲೆಯಲ್ಲಿ ಮತ್ತೆ ಅಟ್ಟಹಾಸ ಮೆರೆದ ಮಾವೋವಾದಿ ನಕ್ಸಲೀಯರು ಏಳು ಮಂದಿ ಪೊಲೀಸರನ್ನು
ಒಯ್ಯುತ್ತಿದ್ದ ವಾಹನವನ್ನು ಸ್ಫೋಟಿಸಿ, ೬ ಪೊಲೀಸರನ್ನು ಬಲಿತೆಗೆದುಕೊಂಡರು. ಒಬ್ಬ ಪೊಲೀಸ್ ತೀವ್ರವಾಗಿ
ಗಾಯಗೊಂಡರು. ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಿ ದಾಂತೆವಾಡ ಜಿಲ್ಲೆಯ ಕಿರಂದುಲ್ ಪಟ್ಟಣದಿಂದ
೨೦ ಕಿಮೀ ದೂರದ ಚೋಲ್ನರ್ ಗ್ರಾಮದ ಬಳಿ ಪೊಲೀಸ್ ವಾಹನವನ್ನು ನಕ್ಸಲೀಯರು ಸ್ಫೋಟಿಸಿದರು. ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದ ೭ ಪೊಲೀಸರ ಪೈಕಿ ಐವರು
ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ದಾಂತೆವಾಡ ಡಿಐಜಿ ಪಿ. ಸುಂದರ ರಾಜ್ ದೃಢ ಪಡಿಸಿದ್ದಾರೆ. ತೀವ್ರವಾಗಿ
ಗಾಯಗೊಂಡ ಇಬ್ಬರು ಪೊಲೀಸರನ್ನು ಸಮೀಪದ ಆಸ್ಪತ್ರೆಗೆ ಒಯ್ಯಲಾಯಿತು. ಅವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ
ಗಾಯಗಳ ಪರಿಣಾಮವಾಗಿ ಸಾವನ್ನಪ್ಪಿದರು. ಸ್ಫೋಟದ ಬಳಿಕ
ಮಾವೋವಾದಿಗಳು ಪೊಲೀಸರ ಕೆಲವು ಶಸ್ತಾಸ್ತ್ರಗಳನ್ನೂ ಅಪಹರಿಸಿದ್ದಾರೆ ಎಂದು ವರದಿಗಳು ಹೇಳಿದವು. ಆದರೆ
ಅಧಿಕಾರಿಗಳು ಇದನ್ನು ದೃಢ ಪಡಿಸಲು ನಿರಾಕರಿಸಿದರು. ಪೊಲೀಸರು ಕಿರಂದುಲ್‌ನಿಂದ ಚೊಲ್ನರ್ ಕಡೆಗೆ ಖಾಸಗಿ
ವಾಹನದಲ್ಲಿ ಪ್ರಯಾಣ ಹೊರಟಿದ್ದರು. ಛತ್ತೀಸ್‌ಗಢದ
ಮುಖ್ಯಮಂತ್ರಿ ರಮಣ್ ಸಿಂಗ್ ಅವರ ನಿಗದಿತ ದಾಂತೆವಾಡ ಭೇಟಿಗೆ ಎರಡು ದಿನ ಮೊದಲು ಈ ದಾಳಿ ಘಟನೆ ಸಂಭವಿಸಿದೆ.
ರಮಣ್ ಸಿಂಗ್ ಅವರು ಬಿಜೆಪಿಯ ವಿಕಾಸ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದರು.
2018:
ನವದೆಹಲಿ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಗೋಹತ್ಯೆಯ ಶಂಕೆಯಿಂದ ಗುಂಪೊಂದು ನಡೆಸಿದ ದಾಳಿಯಲ್ಲಿ
ದರ್ಜಿ (ಟೈಲರ್) ಒಬ್ಬ ಸಾವನ್ನಪ್ಪಿದ್ದು, ಆತನ ಗೆಳೆಯ ತೀವ್ರವಾಗಿ ಗಾಯಗೊಂಡ. ೪೫ರ ಹರೆಯದ ರಿಯಾಜ್
ಗಾಯಗಳ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ೨೮ರ ಹರೆಯದ ಶಕೀಲ್ ಪ್ರಜ್ಞಾಹೀನನಾಗಿದ್ದು
ಜಬಲ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿದವು. ಇಬ್ಬರು ವ್ಯಕ್ತಿಗಳು
ಗೋಹತ್ಯೆ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಉದ್ರಿಕ್ತ ಜನರ ಗುಂಪು ಮೇ 18ರ ಶುಕ್ರವಾರ
ನಸುಕಿನ ವೇಳೆಯಲ್ಲಿ ಅಂಗರ ಗ್ರಾಮದಲ್ಲಿ ಬಡಿಗೆಗಳೊಂದಿಗೆ ಅವರ ಮೇಲೆ ದಾಳಿ ನಡೆಸಿತು ಎಂದು ಆಪಾದಿಸಲಾಯಿತು.
ಮೈಹರ್ ಪಟ್ಟಣದ ನೆರೆಹೊರೆಯ ಪುರಾನಿ ಬಸ್ತಿಯ ಅವರ ಮನೆಯಿಂದ ೨೮ ಕಿಮೀ ದೂರದಲ್ಲಿ ಅವರ ಮೇಲೆ ದಾಳಿ
ನಡೆಯಿತು. ರಾಜ್ಯದ
ರಾಜಧಾನಿ ಭೋಪಾಲ್ ನಿಂದ ಈಶಾನ್ಯಕ್ಕೆ ೪೮೫ ಕಿಮೀ ದೂರದಲ್ಲಿರುವ ಸತ್ನಾದಲ್ಲಿ ಈ ಘಟನೆಯಿಂದ ಪ್ರಕ್ಷುಬ್ಧತೆ
ಉಂಟಾಯಿತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು
ಪ್ರಸ್ತುತ ಮಧ್ಯಪ್ರವೇಶ ಪ್ರವಾಸದಲ್ಲಿದ್ದು, ಸತ್ನಾ ಅವರು ಭೇಟಿ ನೀಡಲಿರುವ ಸ್ಥಳಗಳಲ್ಲಿ ಒಂದು. ಪರಿಸ್ಥಿತಿಯನ್ನು
ಅನುಸರಿಸಿ ಸಿಂಗ್ ಭೇಟಿ ಕಾಲದಲ್ಲಿ ಯಾವುದೇ ಲೋಪ ಸಂಭವಿಸಿದಂತೆ ಭದ್ರತೆ ಬಿಗಿಗೊಳಿಸಲಾಯಿತು. ಘಟನೆಯನ್ನು ಅನುಸರಿಸಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ
ಪಾಲನೆ ಸಲುವಾಗಿ ಸುಮಾರು ೪೦೦ ಪೊಲೀಸರನ್ನು ನೇಮಿಸಲಾಗಿದೆ ಎಂದು ರೇವಾ ವಲಯದ ಐಜಿಪಿ ಉಮೇಶ್ ಜೊಗಾ
ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು
ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕೊಲೆಯತ್ನ ಪ್ರಕರಣಗಳನ್ನು ದಾಖಲಿಸಿದರು. ಘಟನಾ ಸ್ಥಳದಲ್ಲಿ
ಕಡಿಯಲಾಗಿದ್ದ ಎತ್ತು, ಮಾಂಸ ಮತ್ತು ಚೀಲಗಳಲ್ಲಿ ತುಂಬಿಡಲಾಗಿದ್ದ ಇತರ ಎರಡು ಪ್ರಾಣಿಗಳು ಪತ್ತೆಯಾಗಿವೆ
ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೇಶ್ ಹಿಂಗನ್ ಕರ್ ಹೇಳಿದ್ದನ್ನು ಸುದ್ದಿ ಮಾಧ್ಯಮಗಳು ಉಲ್ಲೇಖಿಸಿದವು.
ನಾಲ್ವರು ಆರೋಪಿಗಳನ್ನು ಪವನ್ ಸಿಂಗ್ ಗೊಂಡ್, ವಿಜಯ್ ಸಿಂಗ್ ಗೊಂಡ್, ಫೂಲ್ ಸಿಂಗ್ ಗೊಂಡ್ ಮತ್ತು
ನಾರಾಯಣ ಸಿಂಗ್ ಗೊಂಡ್ ಎಂಬುದಾಗಿ ಗುರುತಿಸಲಾಯಿತು. ಆರೋಪಿಗಳಲ್ಲಿ ಒಬ್ಬನಾದ ಪವನ್ ಸಿಂಗ್ ಗೊಂಡ್
ರಿಯಾಜ್ ಮತ್ತು ಶಕೀಲ್ ವಿರುದ್ಧ ಪೊಲೀಸರಿಗೆ ಗ್ರಾಮದಲ್ಲಿ ಗೋಹತ್ಯೆ ನಡೆಸುತ್ತಿರುವರು ಎಂದು ಆಪಾದಿಸಿ
ದೂರು ನೀಡಿದರು. ರಿಯಾಜ್ ಮತ್ತು ಶಕೀಲ್ ಓಡಲು ಯತ್ನಿಸುವಾಗ ಬಿದ್ದು ಗಾಯಗೊಂಡರು ಎಂದೂ ಹೇಳಿದ ಪವನ್
ಸಿಂಗ್ ಗೊಂಡ್, ತಾವು ಹಲ್ಲೆ ನಡೆಸಿದ್ದೇವೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಪವನ್ ಸಿಂಗ್ ಗೊಂಡ್
ದೂರನ್ನು ಅನುಸರಿಸಿ ಪೊಲೀಸರು ರಿಯಾಜ್ ಮತ್ತು ಶಕೀಲ್ ವಿರುದ್ಧ ಮಧ್ಯಪ್ರದೇಶ ಗೋಹತ್ಯಾ ನಿಷೇಧ ಕಾಯ್ದೆ
೨೦೦೪ ಮತ್ತು ಮಧ್ಯಪ್ರದೇಶ ಕೃಷಿ ಜಾನುವಾರು ಸಂರಕ್ಷಣಾ ಕಾಯ್ದೆ ೧೯೫೯ರ ಅಡಿಯಲ್ಲಿ ವಿವಿಧ ಸೆಕ್ಷನ್‌ಗಳ ಪ್ರಕಾರ ಎಫ್ ಐ ಆರ್ ದಾಖಲಿಸಿದರು.
ಗೋಮಾಂಸ ಮತ್ತು ಹತ್ಯೆ ಮಾಡಲಾದ ಎತ್ತಿನ ಮೃತದೇಹಗಳು ಘಟನಾ ಸ್ಥಳದಲ್ಲಿ ಲಭಿಸಿವೆ ಎಂದು ಮೈಹರ್ ಪ್ರದೇಶದ
ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಅರವಿಂದ ತಿವಾರಿ ಹೇಳಿದರು. ಶಕೀಲ್ ಮತ್ತು ರಿಯಾಜ್ ಅವರ ಕುಟುಂಬಗಳು ಗೋಹತ್ಯೆ ಆರೋಪವನ್ನು
ನಿರಾಕರಿಸಿದವು. ಚಿಕಿತ್ಸೆ ಪಡೆಯುತ್ತಿರುವ ಟ್ಯಾಕ್ಸಿ ಚಾಲಕ ಶಕೀಲನನ್ನು ಆಸ್ಪತ್ರೆಯಿಂದ ಬಿಡುಗಡೆ
ಮಾಡಿದ ಬಳಿಕ ಬಂಧಿಸಲಾಗುವುದು ಎಂದು ಹಿಂಗನಕರ್ ಹೇಳಿದರು. ಮಧ್ಯಪ್ರದೇಶವು ೨೦೧೨ರಲ್ಲಿ ಗೋಹತ್ಯೆ ವಿರುದ್ಧದ
ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ ಗರಿಷ್ಠ ಶಿಕ್ಷೆಯನ್ನು ಮೂರು ವರ್ಷಗಳಿಂದ ಏಳು ವರ್ಷಗಳಿಗೆ ಏರಿಸಿತ್ತು.
2018: ನವದೆಹಲಿ: ಭೂಷಣ್ ಸ್ಟೀಲ್ ಪ್ರಕರಣವನ್ನು
ಯಶಸ್ವಿಯಾಗಿ ಇತ್ಯರ್ಥ ಪಡಿಸುವುದದೊಂದಿಗೆ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮೊದಲ ಪಟ್ಟಿಯಲ್ಲಿ
ದಿವಾಳಿ ಪ್ರಕ್ರಿಯೆಗಾಗಿ ವಹಿಸಿದ ಎಲ್ಲ ೧೨ ಪ್ರಮುಖ ಅನುತ್ಪಾದಕ ಆಸ್ತಿ ಪ್ರಕರಣಗಳ (ಎನ್ ಪಿಎ) ವ್ಯಾಜ್ಯಗಳನ್ನು
ಇತ್ಯರ್ಥಗೊಳಿಸುವ ಮೂಲಕ ೧ ಲಕ್ಷ ಕೋಟಿ ರೂಪಾಯಿಗಳನ್ನು ಬ್ಯಾಂಕುಗಳು ಮರುಗಳಿಸುವುದಾಗಿ ಹಣಕಾಸು ಸಚಿವಾಲಯವು ನಿರೀಕ್ಷಿಸಿತು. ಕಳೆದ
ವಾರ ಟಾಟಾ ಸಮೂಹವು ಸಾಲಗ್ರಸ್ತ ಭೂಷಣ್ ಸ್ಟೀಲ್ ಲಿಮಿಟೆಡ್ ನ ಶೇಕಡಾ ೭೨.೬೫ ನಿಯಂತ್ರಣ ಶೇರನ್ನು ಅಂದಾಜು
೩೬,೦೦೦ ಕೋಟಿ ರೂಪಾಯಿಗಳಿಗೆ ಸ್ವಾಧೀನ ಪಡಿಸಿಕೊಂಡಿತು. ಇದು ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ವಚ್ಛಗೊಳಿಸಿಕೊಳ್ಳಲು
ಮತ್ತು ಸಾಲದಾತರ ಲಾಭ ಅವಕಾಶವನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ. ಉಳಿದ ೧೧ ಎನ್ ಪಿ ಎ ಪ್ರಕರಣಗಳನ್ನು ದಿವಾಳಿ ನಿಯಮದ ಅಡಿಯಲ್ಲಿ
ಇತ್ಯರ್ಥ ಪಡಿಸುವ ಮೂಲಕ ಒಂದು ಲಕ್ಷ ಕೋಟಿ ರೂಪಾಯಿ ಗಳಿಕೆಯ ನಿರೀಕ್ಷೆ ಇದ್ದು ಇದು ಸರ್ಕಾರಿ ರಂಗದ
ಬ್ಯಾಂಕುಗಳ ಎನ್ ಪಿಎ ಹೊರೆಯನ್ನು ತಗ್ಗಿಸಲು ನೆರವಾಗಲಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿ
ಹೇಳಿದರು. ಕಳೆದ ವರ್ಷ ಜೂನ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಆಂತರಿಕ ಸಲಹಾ
ಸಮಿತಿಯು (ಐಎಸಿ) ೫,೦೦೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಸಾಲ ಬಾಕಿ ಹೊಂದಿರುವ ೧೨ ಖಾತೆಗಳನ್ನು
ಗುರುತಿಸಿತ್ತು. ಬ್ಯಾಂಕುಗಳ ಒಟ್ಟು ಎನ್ ಪಿಎಯಲ್ಲಿ ಈ ೧೨ ಖಾತೆಗಳ ಸಾಲದ ಮೊತ್ತವೇ ಶೇಕಡಾ ೨೫ರಷ್ಟಾಗುತ್ತದೆ. ಆರ್ ಬಿಐ ಸಲಹಾ ಸಮಿತಿಯ ಸೂಚನೆ ಮೇರೆಗೆ ಬ್ಯಾಂಕುಗಳು ಭೂಷಣ್ ಸ್ಟೀಲ್ ಲಿಮಿಟೆಡ್, ಭೂಷಣ್ ಪವರ್ ಅಂಡ್
ಸ್ಟೀಲ್ ಲಿಮಿಟೆಡ್, ಜೇಪೀ ಇನ್ ಫ್ರಾಟೆಕ್ ಲಿಮಿಟೆಡ್, ಲಾನ್ಕೊ ಇನ್ ಫ್ರಾಟೆಕ್ ಲಿಮಿಟೆಡ್, ಮೊನ್ನೆಟ್
ಇಸ್ಪತ್ ಅಂಡ್ ಎನರ್ಜಿ ಲಿಮಿಟೆಡ್, ಜ್ಯೋತಿ ಸ್ಟ್ರಕ್ಚರ್‍ಸ್ ಲಿಮಿಟೆಡ್, ಎಲೆಕ್ಟ್ರೋ ಸ್ಟೀಲ್ಸ್ ಲಿಮಿಟೆಡ್,
ಆಮ್ಟೆಕ್ ಆಟೋ ಲಿಮಿಟೆಡ್, ಎರಾ ಇನ್ ಫ್ರಾ ಎಂಜಿನಿಯರಿಂಗ್ ಲಿಮಿಟೆಡ್, ಅಲೋಕ್ ಇಂಡಸ್ಟ್ರೀಸ್ ಲಿಮಿಟೆಡ್
ಅಂಡ್ ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ಖಾತೆಗಳನ್ನು ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್‌ಗೆ (ಎನ್
ಸಿ ಎಲ್ ಟಿ) ದಿವಾಳಿ ನಿಯಮಗಳ ಅಡಿಯಲ್ಲಿ ಇತ್ಯರ್ಥ ಪಡಿಸಲು ವಹಿಸಿವೆ. ಈ ಖಾತೆಗಳ ಒಟ್ಟು ಹೊರ ಸಾಲದ
ಮೊತ್ತ ೧.೭೫ ಲಕ್ಷ ಕೋಟಿ ರೂಪಾಯಿಗಳು. ನ್ಯಾಷನಲ್
ಕಂಪೆನಿ ಲಾ ಟ್ರಿಬ್ಯೂನಲ್‌ನ (ಎನ್ ಸಿ ಎಲ್ ಟಿ) ಕೋಲ್ಕತ ಪೀಠವು ಈಗಾಗಲೇ ಎಲೆಕ್ಟ್ರೋಸ್ಟೀಲ್ ಸ್ಟೀಲ್ಸ್
ಕಂಪೆನಿಯನ್ನು ಸ್ವಾಧೀನ ಪಡಿಸಿಕೊಳ್ಳುವ ವೇದಾಂತ ರಿಸೋರ್ಸಸ್ ನ ಇತ್ಯರ್ಥ ಯೋಜನೆಗೆ ಕಳೆದ ತಿಂಗಳು
ಅನುಮೋದನೆ ನೀಡಿತ್ತು. ಇದಲ್ಲದೆ, ಸಾಲಗ್ರಸ್ತ ಕಂಪೆನಿಗಾಗಿ ಇಂಗ್ಲೆಂಡ್ ಮೂಲದ ಲಿಬರ್ಟಿ ಹೌಸ್ ಸಲ್ಲಿಸಿದ
ಬಿಡ್ ನ್ನು ಪರಿಗಣಿಸುವಂತೆ ಎನ್ ಸಿ ಎಲ್ ಟಿ ಕಳೆದ ತಿಂಗಳು ಭೂಷಣ್ ಪವರ್ ಅಂಡ್ ಸ್ಟೀಲ್ ಸಾಲದಾತರಿಗೆ ಸೂಚಿಸಿತು. ಬ್ಯಾಂಕುಗಳಿಗೆ ಭೂಷಣ್ ಪವರ್ ಅಂಡ್ ಸ್ಟೀಲ್
ಒಟ್ಟು ೪೮,೦೦೦ ಕೋಟಿ ರೂಪಾಯಿಗಳನ್ನು ಪಾವತಿ ಮಾಡಬೇಕಾಗಿದ್ದು ಇದನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್
ಕಳೆದ ವರ್ಷ ಜೂನ್ ತಿಂಗಳಲ್ಲಿ ಎನ್ ಸಿ ಎಲ್ ಟಿಗೆ ಒಪ್ಪಿಸಿತ್ತು. ಕಳೆದ ವಾರ ಟಾಟಾ ಸ್ಟೀಲ್ ನ ಆಧೀನ
ಸಂಸ್ಥೆಯಾಗಿರುವ ಬಮ್ಸಿಪಲ್ ಸ್ಟೀಲ್ ಲಿಮಿಟೆಡ್ ಕಂಪೆನಿಯು ಭೂಷಣ್ ಸ್ಟೀಲ್ ನ ಶೇಕಡಾ ೭೨.೬೫ ಶೇರನ್ನು
೩೬,೪೦೦ ಕೋಟಿ ರೂಪಾಯಿಗಳಿಗೆ ಸ್ವಾಧೀನ ಪಡಿಸಿಕೊಂಡಿತು. ಈ ಹಣದಲ್ಲಿ ೩೫,೨೦೦ ಕೋಟಿ ರೂಪಾಯಿಗಳನ್ನು
ಹಣಕಾಸು ಸಾಲದಾತರಿಗೆ ಪಾವತಿ ಮಾಡಲಾಗುವುದು. ಈ ಖರೀದಿಯಿಂದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಬಂಡವಾಳ
ರೂಪದಲ್ಲಿ ಭಾರಿ ದೊಡ್ಡ ನಿರಾಳತೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಾಲಗ್ರಸ್ತ ಕಂಪೆನಿಯ
ಸಾಲದಾತರಲ್ಲಿ ಒಂದಾಗಿರುವ ಬ್ಯಾಂಕಿನ ಹೇಳಿಕೆ ತಿಳಿಸಿತು. ಭೂಷಣ್ ಸ್ಟೀಲ್ ಪ್ರಕರಣದಲ್ಲಿ ಪಂಜಾಬ್
ನ್ಯಾಷನಲ್ ಬ್ಯಾಂಕ್ ಬಹುದೊಡ್ಡ ಪ್ರಮಾಣದ ಅನುಕೂಲವನ್ನು ಹೊಂದಲಿದೆ ಎಂದು ಹೇಳಿಕೆ ತಿಳಿಸಿತು. ಬ್ಯಾಂಕಿನ
ಮೂಲಗಳ ಪ್ರಕಾರ ಭೂಷಣ್ ಸ್ಟೀಲ್‌ನಿಂದ ಬರಬೇಕಾದ ಸಾಲದ ಮೊತ್ತು ೩,೮೫೭.೪೯ ಕೋಟಿ ರೂಪಾಯಿಗಳಾಗಿದ್ದು,
ಮೇಲಿನ ಸ್ವಾಧೀನ ಪ್ರಕ್ರಿಯೆಯಿಂದ ಬ್ಯಾಂಕಿನ ಎನ್ ಪಿಎ ಹೊರೆ ೩,೮೫೭.೪೯ ಕೋಟಿ ರೂಪಾಯಿಗಳಷ್ಟು ತಗ್ಗಲಿದೆ.
ಬಾಕಿ ಸಾಲದಲ್ಲಿ ಬ್ಯಾಂಕ್ ೩,೦೫೦ ಕೋಟಿ ರೂಪಾಯಿಗಳನ್ನು
ವಾಪಸ್ ಪಡೆಯಬಹುದಾಗಿದ್ದು, ನಿಯಮಾನುಸಾರ ೮೦೭.೪೯ ಕೋಟಿ ರೂಪಾಯಿಗಳನ್ನು ವಜಾ ಮಾಡಲು ಅವಕಾಶ
ಇರುವುದರಿಂದ ಬ್ಯಾಂಕ್ ಈ ಎನ್ ಪಿಎ ಹೊರೆಯಿಂದ ನಿರಾಳಗೊಳ್ಳುವುದು ಎಂದು ಹೇಳಿಕೆ ತಿಳಿಸಿತು. ಇದರಿಂದ
ಬ್ಯಾಂಕಿನ ಲಾಭದ ಮೇಲೂ ೭೩೫.೫೦ ಕೋಟಿ ರೂಪಾಯಿಗಳಷ್ಟು ಧನಾತ್ಮಕ ಪರಿಣಾಮವಾಗುವುದು ಎಂದು ಮೂಲಗಳು ಹೇಳಿದವು.
2018: ಜಮ್ಮು: ಪಾಕಿಸ್ತಾನದ ದಾಳಿಗೆ
ಪ್ರತಿಯಾಗಿ ನಡೆಸಿದ ಭಾರತದ ಪ್ರತೀಕಾರದ ದಾಳಿಯಿಂದ ತತ್ತರಿಸಿರುವ ಪಾಕಿಸ್ತಾನಿ ರೇಂಜರುಗಳು ಅಂತಾರಾಷ್ಟ್ರೀಯ
ಗಡಿಯಲ್ಲಿ ಕದನವಿರಾಮ ಘೋಷಿಸುವಂತೆ ಗಡಿ ಭದ್ರತಾ ಪಡೆಗೆ (ಬಿಎಸ್ ಎಫ್) ದೂರವಾಣಿ ಕರೆ ಮಾಡಿ ಮೊರೆ
ಇಟ್ಟಿದ್ದಾರೆ ಎಂದು ಬಿಎಸ್ ಎಫ್ ತಿಳಿಸಿತು. ಪಾಕಿಸ್ತಾನ ಇತ್ತೀಚೆಗೆ ಗಡಿಯಾಚೆಯಿಂದ ನಡೆಸಿದ ಗುಂಡಿನ
ದಾಳಿಗೆ ಸೇಡು ತೀರಿಸಿಕೊಳ್ಳಲು ಭಾರತದ ಗಡಿ ಭದ್ರತಾ ಪಡೆ ಅಂತಾರಾಷ್ಟ್ರೀಯ ಗಡಿಯಲ್ಲಿನ ಪಾಕಿಸ್ತಾನಿ
ಸೈನಿಕ ಶಿಬಿರಗಳ ಮೇಲೆ ಎರಡು ದಿನಗಳಿಂದ ತೀವ್ರ ಫಿರಂಗಿದಾಳಿ ನಡೆಸಿದ್ದು ಪಾಕ್ ಕಡೆಯಲ್ಲಿ ಅಪಾರ ನಷ್ಟ
ಸಂಭವಿಸಿದೆ. ಒಬ್ಬ ಸೈನಿಕನೂ ಸಾವನ್ನಪ್ಪಿದ್ದಾನೆ ಎಂದು ಬಿಎಸ್ ಎಫ್ ಹೇಳಿತು. ಅಂತಾರಾಷ್ಟ್ರೀಯ ಗಡಿಯಲ್ಲಿ
ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತದ ಗಡಿ ಭದ್ರತಾ
ಪಡೆ ಪಾಕಿಸ್ತಾನಿ ನೆಲೆಗಳ ಮೇಲೆ ನಡೆಸಿದ ತೀವ್ರ ಫಿರಂಗಿ ದಾಳಿಯಲ್ಲಿ ಸಂಭವಿಸಿದ ಭಾರಿ ಹಾನಿಯನ್ನು
ತೋರಿಸುವ ೧೯ ಸೆಕೆಂಡ್ ಗಳ ವಿಡಿಯೋವನ್ನು ಕೂಡಾ ಬಿಎಸ್ ಎಫ್ ಬಿಡುಗಡೆ ಮಾಡಿತು. ಪಾಕಿಸ್ತಾನಿ ರೇಂಜರುಗಳು ಜಮ್ಮು ಬಿಎಸ್ ಎಫ್ ಗೆ ಈದಿನ ಕರೆ
ಮಾಡಿ ಫಿರಂಗಿದಾಳಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ’ ಎಂದು ಬಿಎಸ್ ಎಫ್ ವಕ್ತಾರರು
ಹೇಳಿದರು. ‘ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆಸಿದ ಅಪ್ರಚೋದಿತ ಶೆಲ್
ದಾಳಿಗೆ ತಕ್ಕ ಉತ್ತರ ನೀಡಿ ಬಿಎಸ್ ಎಫ್ ಘಟಕಗಳು ನಡೆಸಿದ ಫಿರಂಗಿದಾಳಿಯು ಕದನವಿರಾಮಕ್ಕಾಗಿ ಅವರು
ಮೊರೆ ಇಡುವಂತೆ ಮಾಡಿದೆ’ ಎಂದು ಹಿರಿಯ ಅಧಿಕಾರಿ
ನುಡಿದರು. ಮೂರು ದಿನಗಳಿಂದ ಬಿಎಸ್ ಎಫ್ ಯೋಧರು ಪಾಕಿಸ್ತಾನಿ ಗುಂಡಿನ ದಾಳಿ ಸ್ಥಳಗಳ ಮೇಲೆ ಗುರಿಇಟ್ಟು
ನಡೆಸಿದ ನಿಖರ ಫಿರಂಗಿದಾಳಿಯಿಂದ ಪಾಕ್ ಕಡೆಯಲ್ಲಿ
ಅಪಾರ ಹಾನಿ ಸಂಭವಿಸಿದ್ದು ಒಬ್ಬ ಸೈನಿಕನೂ ಅಸು ನೀಗಿದ್ದಾನೆ ಎಂದು ಅಧಿಕಾರಿ ಹೇಳಿದರು. ಕಳೆದ
ಕೆಲವು ದಿನಗಳಿಂದ ಪಾಕಿಸ್ತಾನವು ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆಸಿದ ಇತ್ತೀಚಿನ ಅಪ್ರಚೋದಿತ
ಗುಂಡಿನ ದಾಳಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆಯ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಈ ದಾಳಿಗಳಿಂದ
ಜಮ್ಮು ಪ್ರದೇಶದಲ್ಲಿ ಹಲವು ನಾಗರಿಕರೂ ಸಾವನ್ನಪ್ಪಿದ್ದಲ್ಲದೆ ಹಲವರು ಗಾಯಗೊಂಡಿದ್ದರು. ಪ್ರಧಾನಿ
ನರೇಂದ್ರ ಮೋದಿ ಅವರ ಮೇ ೧೯ರ ಶನಿವಾರದ ಜಮ್ಮು -ಕಾಶ್ಮೀರ ಭೇಟಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಈ
ದಾಳಿ ತೀವ್ರಗೊಂಡಿತ್ತು. ಇದರ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಶೆಲ್ ದಾಳಿಯ
ಪ್ರಮಾಣ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಈ ವರ್ಷ ಹೆಚ್ಚಿತ್ತು. ಪಾಕ್ ಕಡೆಯಿಂದ
ಗುಂಡಿನ ಮತ್ತು ಶೆಲ್ ದಾಳಿಯ ೭೦೦ಕ್ಕೂ ಹೆಚ್ಚು ಘಟನೆಗಳು ಘಟಿಸಿದ್ದು, ೧೮ ಮಂದಿ ಭದ್ರತಾ ಸಿಬ್ಬಂದಿ
ಸೇರಿದಂತೆ ೩೮ ಮಂದಿ ಪ್ರಾಣ ಕಳೆದು
ಕೊಂಡಿದ್ದರು. ಇತರ ಹಲವರು ಗಾಯಗೊಂಡಿದ್ದರು. ‘ಪಾಕಿಸ್ತಾನ ಮೇಲೆ ಸೇಡಿನ
ದಾಳಿ ನಡೆಸಿದ್ದನ್ನು ತೋರಿಸುವ ಜಾಗ ಯಾವುದು’ ಎಂದು ಹೇಳಲು ಅಧಿಕಾರಿ
ನಿರಾಕರಿಸಿದರು. ‘ನಾವು ಗಡಿಯಾಚೆಯಿಂದ ನಡೆದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಕ್ರಿಯಿಸಿದ್ದೇವೆ
ಮಾತ್ರ. ನಾವು ಮೊದಲಿಗೆ ಗುಂಡು ಹಾರಿಸಿಲ್ಲ ಎಂಬುದಾಗಿ ನಮ್ಮ ಅಧಿಕಾರಿ ಪಾಕಿಸ್ತಾನಿ ರೇಂಜರುಗಳಿಗೆ
ಉತ್ತರ ನೀಡಿದ್ದಾರೆ’ ಎಂದು ಅವರು ನುಡಿದರು.
2009: ಸತತ ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಡಾ.ಮನಮೋಹನ್ ಸಿಂಗ್ ಮೇ 22 ರಂದು ಪ್ರಮಾಣ ವಚನ ಸ್ವೀಕರಿಸುವರು ಎಂದು ಪ್ರಕಟಿಸಲಾಯಿತು. ಇದೇ ವೇಳೆ ಸಂಪುಟ ರಚನೆಗೆ ಸಂಬಂಧಿಸಿದಂತೆ ಸಿಂಗ್ ಅವರಿಗೆ ಯುಪಿಎ ಮಿತ್ರಪಕ್ಷಗಳು ಮುಕ್ತ ಅವಕಾಶ ನೀಡಿದವು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಸಿಂಗ್ ಅವರು ಈದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಹಕ್ಕುಮಂಡನೆ ಪತ್ರ ಸ್ವೀಕರಿಸಿದ ರಾಷ್ಟ್ರಪತಿ ಅವರು ಸಿಂಗ್ ನಾಯಕತ್ವವನ್ನು ಪರಿಗಣಿಸಿರುವುದಾಗಿ ತಿಳಿಸಿ,, 22ರಂದು ಪ್ರಮಾಣ ವಚನ ಸ್ವೀಕರಿಸಲು ಸೂಚಿಸಿದರು.
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ
ಈವರೆಗಿನ ಪ್ರಧಾನಿಗಳು...
ಜವಾಹರ ಲಾಲ್ ನೆಹರೂ
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಪಂಡಿತ್ ಜವಾಹರ ಲಾಲ್ ನೆಹರೂ ಅಧಿಕಾರ ಸ್ವೀಕಾರ. ಅವಧಿ ಆಗಸ್ಟ್ 15, 1947 ರಿಂದ ಮೇ 27 1964ರವರೆಗೆ.
ಗುಲ್ಜಾರಿ ಲಾಲ್ ನಂದಾ
ಅಪ್ಪಟ ಗಾಂಧಿವಾದಿ ಗುಲ್ಜಾರಿ ಲಾಲ್ ನಂದಾ ಅವರು ನೆಹರೂ ನಿಧನಾ ನಂತರ ಮೇ 27, 1964ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅವಧಿ ಜೂನ್ 9, 1964ರವರೆಗೆ. ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಿಧನರಾದ ಸಂದರ್ಭದಲ್ಲಿ 1966ರ ಜನವರಿ 11ರಿಂದ 24ರವರೆಗೆ ಮತ್ತೆ 14 ದಿನಗಳ ಕಾಲ ಪ್ರಧಾನಿಯಾಗಿದ್ದರು.
ಲಾಲ್ ಬಹದ್ದೂರ್ ಶಾಸ್ತ್ರಿ
1964ರ ಜೂನ್ 9ರಿಂದ 1966ರ ಜನವರಿ 11ರವರೆಗೆ ಪ್ರಧಾನಿಯಾಗಿ ಆಳ್ವಿಕೆ.
ಇಂದಿರಾ ಗಾಂಧಿ
ಜನವರಿ 24, 1966ರಿಂದ ಮಾರ್ಚ್ 24, 1977ರವರೆಗೆ ಮತ್ತು 1980 ಜನವರಿ 14ರಿಂದ 31ಅಕ್ಟೋಬರ್ 1984ರವರೆಗೆ ಒಟ್ಟು 5831 ದಿನಗಳ ಕಾಲ ಪ್ರಧಾನಿಯಾಗಿ ಆಳ್ವಿಕೆ. (ತಮ್ಮ ತಂದೆಗಿಂತಲೂ 300 ದಿನ ಕಡಿಮೆ ಅವಧಿ).
ಮೊರಾರ್ಜಿ ದೇಸಾಯಿ
ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ಮಾರ್ಚ್ 24, 1977ರಲ್ಲಿ ಅಧಿಕಾರಕ್ಕೆ. ಜುಲೈ 28 1979ರವರೆಗೆ ಆಳ್ವಿಕೆ.
ಚೌಧರಿ ಚರಣ್ ಸಿಂಗ್
ರೈತ ನಾಯಕ ಚರಣ್ ಸಿಂಗ್ ಜುಲೈ 28, 1979ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ. ಜನವರಿ 14, 1980ರವರೆಗೆ 171 ದಿನಗಳ ಆಳ್ವಿಕೆ.
ರಾಜೀವ್ ಗಾಂಧಿ
ದೇಶದ ಪ್ರಥಮ ತರುಣ ಪ್ರಧಾನಿ. ನೆಹರೂ ಮೊಮ್ಮಗನಾದ ರಾಜೀವ್ ಅವರು ತಮ್ಮ 41ನೇ ವಯಸ್ಸಿನಲ್ಲಿ ಅಂದರೆ 31 ಅಕ್ಟೋಬರ್ 1984ರಂದು ತಮ್ಮ ತಾಯಿ ಹತ್ಯೆಯಾದ ದಿನವೇ ಅಧಿಕಾರ ಸ್ವೀಕಾರ, 1 ಡಿಸೆಂಬರ್ 1989ರವರೆಗೆ ಆಡಳಿತ.
ವಿ.ಪಿ.ಸಿಂಗ್
ಜನತಾದಳದ ಮುಖಂಡ ವಿಶ್ವನಾಥ ಪ್ರತಾಪ ಸಿಂಗ್ 2 ಡಿಸೆಂಬರ್, 1989ರಂದು ಅಧಿಕಾರ ಸ್ವೀಕಾರ, 10 ನವೆಂಬರ್, 1990ರವರೆಗೆ 344 ದಿನಗಳ ಕಾಲ ಆಳ್ವಿಕೆ.
ಚಂದ್ರಶೇಖರ್
ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ 10 ನವೆಂಬರ್ 1990ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ, 21 ಜೂನ್ 1991ರವರೆಗೆ ಆಳ್ವಿಕೆ, ಒಟ್ಟು (224 ದಿನಗಳು).
ಪಿ.ವಿ.ನರಸಿಂಹರಾವ್
ಪ್ರಧಾನಿ ಪಟ್ಟ ಅಲಂಕರಿಸಿದ ದಕ್ಷಿಣ ಭಾರತದ ಪ್ರಥಮ ವ್ಯಕ್ತಿ. 21 ಜೂನ್ 1991ರಿಂದ 10 ಮೇ 1996ರವರೆಗೆ ಸಂಪೂರ್ಣ ಐದು ವರ್ಷಗಳ ಕಾಲ ಆಳ್ವಿಕೆ.
ಎ.ಬಿ.ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ ಮೇ 16 ರಿಂದ 1 ಜೂನ್ 1996ರವರೆಗೆ. ನಂತರ ಎರಡನೇ ಬಾರಿಗೆ 19 ಮಾರ್ಚ್ 1998ರಲ್ಲಿ ಹಾಗೂ ಮೂರನೇ ಬಾರಿಗೆ 13 ಅಕ್ಟೋಬರ್ 1999ರಂದು ಅಧಿಕಾರ ಸ್ವೀಕಾರ. 13 ಮೇ 2004ರವರೆಗೆ ಪ್ರಧಾನಿಯಾಗಿ ಆಳ್ವಿಕೆ.
ಎಚ್.ಡಿ.ದೇವೇಗೌಡ
11ನೇ ಲೋಕಸಭೆಯ ನಾಯಕನಾಗಿ ಹರದನಹಳ್ಳಿ ದೊಡ್ಡೇಗೌಡರ ಮಗ ದೇವೇಗೌಡ 1 ಜೂನ್ 1996ರಿಂದ 21 ಏಪ್ರಿಲ್ 1997ರವರೆಗೆ ಒಟ್ಟು 11 ತಿಂಗಳ ಕಾಲ ಪ್ರಧಾನಿಯಾಗಿ ಆಳ್ವಿಕೆ.
ಐಕೆ ಗುಜ್ರಾಲ್
21 ಏಪ್ರಿಲ್ 1997ರಂದು ಪ್ರಧಾನಿಯಾಗಿ ಗುಜ್ರಾಲ್ ಅಧಿಕಾರ ಸ್ವೀಕಾರ, 28 ನವೆಂಬರ್ 1997ರಲ್ಲಿ ಪ್ರಧಾನಿ ಪದವಿಗೆ ರಾಜೀನಾಮೆ.
ಡಾ.ಮನಮೋಹನ್ ಸಿಂಗ್
ಮನಮೋಹನ್ ಸಿಂಗ್ 22 ಮೇ 2004ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ.
2009: ಮದುವೆ ಮನೆಯಿಂದ ಹಿಂದಿರುಗುತ್ತಿದ್ದವರನ್ನು ಹೊತ್ತ ಎತ್ತಿನ ಬಂಡಿಯೊಂದು, ತುಂಬಿ ಹರಿಯುತ್ತಿದ್ದ ಹಳ್ಳವನ್ನು ದಾಟುವಾಗ ದುರಂತ ಸಂಭವಿಸಿ 18 ಮಂದಿ ಜಲಸಮಾಧಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಘಟಿಸಿತು. ಮೊಳಕಾಲ್ಮುರು ತಾಲ್ಲೂಕಿನ ಚಿನ್ನದಹಗರಿ ಹಳ್ಳದಲ್ಲಿ ನಡೆದ ಈ ದುರ್ಘಟನೆಯಲ್ಲಿ ಇಬ್ಬರು ತೀವ್ರ ಅಸ್ವಸ್ಥರಾದರು. ನಾಲ್ಕು ಮಂದಿ ನೀರಿನಲ್ಲಿ ಕಾಣೆಯಾದರು. ಮೃತರಲ್ಲಿ 12 ಮಕ್ಕಳು, ಮೂವರು ಪುರುಷರು ಹಾಗೂ ಮೂವರು ಮಹಿಳೆಯರು. ಬಂಡಿ ಮತ್ತು ಎತ್ತುಗಳು ಕಾಣೆಯಾದವು. ಬಂಡಿ ಮದುವೆ ಮನೆಗೆ ಹೋಗುವಾಗ ಇದೇ ಹಳ್ಳವನ್ನು ಯಶಸ್ವಿಯಾಗಿ ದಾಟಿತ್ತು. ಆದರೆ ವಾಪಸಾಗುವಾಗ ದಡದಾಚೆ ಕಾದು ಕುಳಿತಿದ್ದ ಜವರಾಯನನ್ನು ಮೆಟ್ಟಿ ಸಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ನೀರಿನಲ್ಲಿದ್ದ ಮರಳಿನಲ್ಲಿ ಬಂಡಿಯ ಗಾಲಿ ಸಿಲುಕಿಕೊಂಡು ಈ ದುರಂತ ಸಂಭವಿಸಿತು.
2009: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಯುಪಿಎ (ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟ) ಒಕ್ಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸೋನಿಯಾ ಅವರ ನಿವಾಸದಲ್ಲಿ ಸಭೆ ಸೇರಿದ್ದ ಒಕ್ಕೂಟದ ವಿವಿಧ ಪಕ್ಷಗಳ ನಾಯಕರು ಅವಿರೋಧವಾಗಿ ಸೋನಿಯಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು. ಡಿಎಂಕೆ ಪಕ್ಷದ ಅಧ್ಯಕ್ಷ ಕರುಣಾನಿಧಿ ಸೋನಿಯಾ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದರೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅನುಮೋದಿಸಿದರು.
2009: ತಮಿಳು ವ್ಯಾಘ್ರ ಪಡೆಯ (ಎಲ್‌ಟಿಟಿಇ) ಅಧಿನಾಯಕ ವೇಲುಪಿಳ್ಳೈ ಪ್ರಭಾಕರನ್ ಶವವನ್ನು ಆತನ ಇಬ್ಬರು ಪ್ರಮುಖ ಮಾಜಿ ಸಹಚರರು ಗುರುತಿಸಿದರು. ಎಲ್‌ಟಿಟಿಇಯ ಪೂರ್ವ ವಲಯದ ಕಮಾಂಡರ್ ಆಗಿದ್ದು, 2004ರಲ್ಲಿ ಸಂಘಟನೆಯಿಂದ ಹೊರಬಿದ್ದ ವಿನಾಯಕಮೂರ್ತಿ ಮುರಳೀಧರನ್ ಅಲಿಯಾಸ್ ಕರುಣಾ ಹಾಗೂ ಇತ್ತೀಚೆಗೆ ಸೇನೆಗೆ ಶರಣಾದ ದಯಾ ಮಾಸ್ಟರ್ ಅವರು ಶ್ರೀಲಂಕಾ ಸರ್ಕಾರದ ನಿರ್ದೇಶನದ ಮೇರೆಗೆ ಶವ ದೊರೆತ ಜಾಗಕ್ಕೆ ತೆರಳಿ ಶವವನ್ನು ಗುರುತಿಸಿದರು. 'ಇದು ಪ್ರಭಾಕರನ್ ದೇಹ ಎಂಬುದರಲ್ಲಿ ಸಂಶಯವೇ ಇಲ್ಲ. ಇದು ಆತನ ಸ್ವಯಂಕೃತ ಅಪರಾಧದ ಫಲ. ಆತ ಈಗಿಲ್ಲ ಎಂದು ನೆನೆಸಿಕೊಂಡರೆ ನನಗೆ ಕೊಂಚ ದುಃಖವಾಗುತ್ತದೆ. ಆದರೆ ವಾಸ್ತವದಲ್ಲಿ ಆತ ಯಾರೊಬ್ಬರ ಮಾತನ್ನೂ ಕೇಳುತ್ತಿರಲಿಲ್ಲ. ಹಿಂಸಾಚಾರವೊಂದೇ ಪರಿಹಾರ ಎಂಬುದು ಅವನ ಬಲವಾದ ನಂಬಿಕೆಯಾಗಿತ್ತು' ಎಂದು ದ್ವೀಪರಾಷ್ಟ್ರದ ಸರ್ಕಾರದಲ್ಲಿ ಸಚಿವರಾದ ಕರುಣಾ ಸ್ಮರಿಸಿದರು.
2009: ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಪತ್ನಿ ಮತಿವಧನಿ, ಹಿರಿಯ ಪುತ್ರಿ ದ್ವಾರಕಾ ಹಾಗೂ ಕಿರಿಯ ಪುತ್ರ ಬಾಲಚಂದ್ರನ್ ಅವರ ಮೃತದೇಹಗಳನ್ನು ಶ್ರೀಲಂಕಾ ಸೇನೆ ಪತ್ತೆ ಹಚ್ಚಿತು. ಪ್ರಭಾಕರನ್ ಶವ ಪತ್ತೆಯಾದ ನಂದಿಕಡಲ್ ಲಗೂನ್ ಪ್ರದೇಶದಲ್ಲೇ ಆತನ ಕುಟುಂಬದವರ ಮೃತದೇಹಗಳನ್ನು ಸಹ ಸೇನೆ ಗುರುತಿಸಿತು.
2009: ಸಿಕ್ಕಿಂನ ನೂತನ ಮುಖ್ಯಮಂತ್ರಿಯಾಗಿ ಆಡಳಿತಾರೂಡ ಸಿಕ್ಕಿಂ ಡೆಮಾಕ್ರಿಟಿಕ್ ಫ್ರಂಟ್ ಅಧ್ಯಕ್ಷ ಐವತ್ತೊಂಬತ್ತು ವರ್ಷದ ಪವನ್‌ಕುಮಾರ್ ಚಾಮ್ಲಿಂಗ್ ಅವರು ದಾಖಲೆಯ ನಾಲ್ಕನೇ ಬಾರಿ ಗ್ಯಾಂಗ್ಟಕ್ ರಾಜಭವನದಲ್ಲಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಬಿ.ಪಿ.ಸಿಂಗ್ ಅವರು ಚಾಮ್ಲಿಂಗ್ ಮತ್ತು ಸಂಪುಟದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
2009: ಎರಡು ದಿನಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಾಗೂ ಗಾಳಿಗೆ 700ಕ್ಕೂ ಹೆಚ್ಚು ಮನೆಗಳು ಕುಸಿದು, ಹಗರಿಬೊಮ್ಮನಹಳ್ಳಿ ತಾಲ್ಲೂಕು ಸಕ್ರಿಹಳ್ಳಿಯ ಮರುಳಸಿದ್ದಯ್ಯ(55) ಆಲೀಕಲ್ಲು ಮಳೆಯ ಹೊಡೆತಕ್ಕೆ ಸಿಲುಕಿ ಮೃತರಾದರು.
2009: ಆಂಧ್ರಪ್ರದೇಶದ 22 ನೇ ಮುಖ್ಯಮಂತ್ರಿಯಾಗಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಹೈದರಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಎನ್.ಡಿ.ತಿವಾರಿ ಅವರು ಇಲ್ಲಿನ ಲಾಲ್ ಬಹದ್ದೂರ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ರೆಡ್ಡಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅಧಿಕಾರಾವಧಿ ಪೂರ್ಣಗೊಳಿಸಿದ ಹಾಗೂ ಸತತ ಎರಡೇ ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರಲ್ಲಿ ರಾಜಶೇಖರ ರೆಡ್ಡಿ ಮೊದಲಿಗರು. ಪ್ರಮಾಣವಚನ ಸ್ವೀಕರಿಸಿದ ಬಳಿಕ ರೆಡ್ಡಿ, ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಹಾಗೂ ರಾಜ್ಯದ ಜನತೆಯ ಆಶೋತ್ತರಗಳಿಗೆ ಬದ್ಧರಾಗಿರುವುದಕ್ಕೆ ಸಾಕ್ಷಿಯಾಗಿ ವೇದಿಕೆಯಲ್ಲಿಯೇ ಎರಡು ಕಡತಗಳಿಗೆ ಸಹಿ ಹಾಕಿದರು. ಇದರಲ್ಲಿ ಕಡುಬಡವರಿಗೆ ನೀಡುವ ಅಗ್ಗದ ದರ ಅಕ್ಕಿ ಪ್ರಮಾಣವನ್ನು 20 ಕೆ.ಜಿಯಿಂದ 30 ಕೆ.ಜಿಗೆ ಏರಿಸುವ ಹಾಗೂ ರೈತರಿಗೆ ಮತ್ತೆರಡು ತಾಸುಗಳ ಕಾಲ (7ರಿಂದ 9 ತಾಸುಗಳು) ಉಚಿತ ವಿದ್ಯುತ್ ನೀಡುವ ಪ್ರಸ್ತಾವನೆಗಳಿದ್ದವು.
2009: ನೂರಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡೊನೇಷ್ಯಾದ ಸೇನಾ ವಿಮಾನ ಜಾವಾ ಪ್ರಾಂತ್ಯದ ವಾಯುನೆಲೆ ಬಳಿ ಅಪಘಾತಕ್ಕೀಡಾಯಿತು. ವಿಮಾನ ಹಳ್ಳಿಯೊಂದರ ಸಾಲು ಮನೆಗಳಿಗೆ ಡಿಕ್ಕಿ ಹೊಡೆದು ಸ್ಛೋಟಗೊಂಡ ಪರಿಣಾಮ 79 ಪ್ರಯಾಣಿಕರು ಸುಟ್ಟು ಭಸ್ಮವಾದರು. 'ಪಶ್ಚಿಮ ಜಾವಾ ಪ್ರಾಂತ್ಯದ ವಾಯುನೆಲೆ ಸಮೀಪವಿರುವ ಜೆಪ್ಲಾಕ್ ಹಳ್ಳಿಯಲ್ಲಿರುವ ಸಾಲು ಮನೆಗಳ ಮೇಲೆ ಅಪ್ಪಳಿಸಿದ 'ಸಿ-130 ಹರ್ಕ್ಯುಲಸ್' ಸೇನಾ ವಿಮಾನವು ಸ್ಥಳದಲ್ಲೇ ಮೂವರನ್ನು ಬಲಿತೆಗೆದುಕೊಂಡು ನಂತರ ಪಕ್ಕದ ಭತ್ತದ ಗದ್ದೆಗೆ ಬಿದ್ದಿತು. ಈ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 112 ಮಂದಿ ಪ್ರಯಾಣಿಸುತ್ತಿದ್ದರು.
2009: ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಸ್ವಯಂಘೋಷಿತ ದೇವಮಾನವ ಸಂತೋಷ್ ಮಾಧವನ್‌ಗೆ ಕೇರಳ ನ್ಯಾಯಾಲಯ 16 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ 376 (ಅತ್ಯಾಚಾರ) ಮತ್ತು 342ನೇ (ಅಕ್ರಮ ಬಂಧನ) ವಿಧಿಗಳಡಿ ಆರೋಪಿಗೆ ತಲಾ ಎಂಟು ವರ್ಷಗಳ ಶಿಕ್ಷೆ ವಿಧಿಸಿ ಕೋಚಿಯ (ಕೊಚ್ಚಿಯ) ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ ಹರಿಪಾಲ್ ತೀರ್ಪು ನೀಡಿದರು.
2009: ಪರಿಸರದ ಬಗ್ಗೆ ಹೊಂದಿರುವ ಕಾಳಜಿಗಾಗಿ ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿ ನೀಡುವ 'ವಿಕ್ಟೋರಿಯ ಪ್ರಶಸ್ತಿ' ರಾಜಕುಮಾರ ಚಾರ್ಲ್ಸ್ ಅವರಿಗೆ ಲಭಿಸಿತು.
2008: ಹುಬ್ಬಳ್ಳಿ ನಗರದ ತಿಮ್ಮಸಾಗರ ಗುಡಿ ಮುಖ್ಯರಸ್ತೆ ಲಿಮ್ಕಾ ವಿಶ್ವದಾಖಲೆಗೆ ಸೇರಿತು. ನಾಗರಿಕರು ವಿಮೆ ಮಾಡಿಸಿದ
ಪ್ರಥಮ ರಸ್ತೆ ಎಂಬ ಹೆಗ್ಗಳಿಕೆ ಈ ರಸ್ತೆಯದ್ದು. ಈ ಭಾಗದ ನಿವಾಸಿಗಳು ರಸ್ತೆಗೆ 2 ಲಕ್ಷ ರೂ. ವಿಮೆ ಮಾಡಿಸಿದ್ದು, ಲಿಮ್ಕಾ ದಾಖಲೆ ಪುಸ್ತಕದಲ್ಲಿ ಈ ರಸ್ತೆ ಸ್ಥಾನ ಪಡೆಯಿತು. ಮೇ 20ರಂದು ಪ್ರಕಟವಾದ 2008ರ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಈ ರಸ್ತೆಯ ಚಿತ್ರ ಹಾಗೂ ವಿಮೆ ಬಗೆಗಿನ ವಿವರ ಪ್ರಕಟಿಸಲಾಯಿತು. ಪಾಲಿಕೆ ಆಯುಕ್ತ ಪಿ.ಮಣಿವಣ್ಣನ್ ಅವರ ಅನುಮತಿ ಪಡೆದು, 2007ರ ಆಗಸ್ಟ್ ತಿಂಗಳಲ್ಲಿ ಡಾ.ಮೃತ್ಯುಂಜಯ ಸಿ.ಸಿಂಧೂರ ನೇತೃತ್ವದಲ್ಲಿ ನಾಗರಿಕರು ವಿಮೆ ಮಾಡಿಸಿದ್ದರು. 385 ಮೀಟರ್ ಉದ್ದದ ರಸ್ತೆಗೆ ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ವಾರ್ಷಿಕ 303 ರೂ. ವಾರ್ಷಿಕ ವಿಮಾ ಕಂತು ತುಂಬಿಸಿಕೊಂಡು 2 ಲಕ್ಷ ರೂ ವಿಮೆ ಮಾಡಿತ್ತು. 2007ರ ಆಗಸ್ಟ್ ಎರಡರಿಂದ 2008ರ ಆ. 1ರವರೆಗೆ ವಿಮೆ ಮಾಡಿಸಲಾಗಿತ್ತು. ಈ ರಸ್ತೆಯ ದುರಸ್ತಿಗೆ ತಗುಲುವ ನಿರ್ವಹಣಾ ವೆಚ್ಚವನ್ನು ವಿಮಾ ಕಂಪೆನಿ ಪಾಲಿಕೆಗೆ ಭರಿಸುವುದಾಗಿ ಒಪ್ಪಂದವಾಗಿತ್ತು. ವಿಮಾ ಕಂಪೆನಿಗೆ ಪಾಲಿಕೆ ವತಿಯಿಂದ ಆಯುಕ್ತರು ನಿರಾಕ್ಷೇಪಣಾ ಪತ್ರ ನೀಡಿದ್ದರು
2008: ಕಳ್ಳಬಟ್ಟಿ ಕುಡಿದು ವಿವಿಧ ಕಡೆ ಆಸ್ಪತ್ರೆಗಳಿಗೆ ದಾಖಲಾಗಿದ್ದ ಬೆಂಗಳೂರು, ಕೋಲಾರ, ಹೊಸೂರು, ಕೃಷ್ಣಗಿರಿ, ಆನೇಕಲ್ ನ 56 ಮಂದಿ ಮೃತರಾದರು. ಇದರೊಂದಿಗೆ ಮೃತರ ಸಂಖ್ಯೆ 149ಕ್ಕೆ ಏರಿತು.
2008: ಕಪ್ಪೆಗಳು ಸಾಮೂಹಿಕವಾಗಿ ತಮ್ಮ ವಾಸಸ್ಥಾನಗಳಿಂದ ಹೊರಬಂದ ಕಾರಣ ನೈಋತ್ಯ ಚೀನಾದ ಝುನೈ ಪಟ್ಟಣದಲ್ಲಿ ಸಾವಿರಾರು ಜನ ಈದಿನ ರಾತ್ರಿಯಿಡೀ ತಮ್ಮ ಮನೆಯಿಂದ ಹೊರಗೆ ಬಯಲು ಪ್ರದೇಶದಲ್ಲಿ ಕಾಲ ಕಳೆದರು. ಕಪ್ಪೆಗಳು ಈ ರೀತಿ ಸಾವಿರಾರು ಸಂಖ್ಯೆಯಲ್ಲಿ ಚಲಿಸಿದ್ದರಿಂದ ಭೂಕಂಪವಾಗುವ ಸಾಧ್ಯತೆಯಿದೆ ಎಂದು ಜನ ಭಯಗ್ರಸ್ತರಾಗಿದ್ದರು. 71,000 ಜನರನ್ನು ಬಲಿ ತೆಗೆದುಕೊಂಡ ಮೇ 12ರ ಭೂಕಂಪಕ್ಕೂ ಮುನ್ನ ಕಪ್ಪೆಗಳು ಹೀಗೆ ಸಾಮೂಹಿಕವಾಗಿ ಹೊರಗೆ ಕಾಣಿಸಿಕೊಂಡಿದ್ದವು ಎನ್ನಲಾಗಿದೆ.
2008: ಭಾರತದಲ್ಲಿ ಪ್ರನಾಳ ಶಿಶು ತಂತ್ರಜ್ಞಾನ (ಕೃತಕ ಗರ್ಭಧಾರಣೆ) ರೂಪುಗೊಂಡ ಮೂರು ದಶಕದ ಬಳಿಕ ಮೇಲೆ ವೈದ್ಯಕೀಯ ಬಳಗ ಇದೀಗ ಎಚ್ಚೆತ್ತುಕೊಂಡಿತು. ಅದನ್ನು ಅನ್ವೇಷಿಸಿದ ಡಾ.ಸುಭಾಶ್ ಮುಖರ್ಜಿ ಅವರಿಗೆ ರಾಷ್ಟ್ರೀಯ ಮಾನ್ಯತೆ ನೀಡಬೇಕೆಂದು ವೈದ್ಯಕೀಯ ಬಳಗ ಒತ್ತಾಯಿಸಿತು. 30 ವರ್ಷಗಳ ಹಿಂದೆ ತಾವು ಸಂಶೋಧನೆಯಲ್ಲಿ ತೊಡಗಿದ್ದಾಗ ತಮ್ಮದೇ ವೈದ್ಯಕೀಯ ಕ್ಷೇತ್ರದ ಪರಿಣಿತರು ಹಾಗೂ ಸರ್ಕಾರದಿಂದ ಸಾಕಷ್ಟು ತಾತ್ಸಾರಕ್ಕೆ ಗುರಿಯಾಗಿದ್ದ ಸುಭಾಶ್, ಕಡೆಗೆ ಇದೇ ಕಾರಣದಿಂದ ಬೇಸತ್ತು 1981ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರನಾಳ ಶಿಶು ತಂತ್ರಜ್ಞಾನ ಅನ್ವೇಷಿಸಿದ ಪ್ರಪಂಚದ ಎರಡನೇ ಸಂಶೋಧಕ ಎನ್ನುವ ಹೆಗ್ಗಳಿಕೆ ಕೂಡ ಸುಭಾಶ್ ಮುಖರ್ಜಿ ಅವರದ್ದು. ಇಂಗ್ಲೆಂಡಿನ ಓಲ್ಧಮ್ ಆಸ್ಪತ್ರೆಯಲ್ಲಿ ಡಾ.ಪ್ಯಾಟ್ರಿಕ್ ಸ್ಟೆಪ್ಟೋ ಮತ್ತು ಡಾ.ರಾಬರ್ಟ್ ಎಡ್ವರ್ಡ್ಸ್ ಜಗತ್ತಿನ ಪ್ರಪ್ರಥಮ ಪ್ರನಾಳ ಶಿಶು ಜನಿಸಲು ಕಾರಣವಾದ ನಾಲ್ಕೇ ತಿಂಗಳಲ್ಲಿ ಸುಭಾಶ್ ರೂಪಿಸಿದ್ದ ತಂತ್ರಜ್ಞಾನ ಕೂಡ ಫಲ ನೀಡಿತ್ತು! ಅವರ ಸಂಶೋಧನೆಯ ಫಲವಾಗಿ 1978ರಲ್ಲಿ ಜನಿಸಿದ ಕನುಪ್ರಿಯಾ ಅಗರ್ ವಾಲ್ ಗೆ ಈಗ 30ರ ಪ್ರಾಯ. ಮುಖರ್ಜಿ ಅವರ ಕೊಡುಗೆಯನ್ನು ಗುರುತಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) 2005-06ರಲ್ಲಿ ಮರಣೋತ್ತರ ಪುರಸ್ಕಾರ ನೀಡಿದ್ದರೂ ಅದು ಸಾಲದು; ತಮ್ಮ ಕಾಲದ ಇತರರಿಗಿಂತ ಹೆಚ್ಚು ದೂರದೃಷ್ಟಿಯ ವಿಜ್ಞಾನಿಯಾಗಿದ್ದ ಅವರ ಹೆಸರಿನಲ್ಲಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಬೇಕು ಎಂಬುದು ವೈದ್ಯಕೀಯ ಬಳಗದ ಆಗ್ರಹ.
2008: ಸಾಂಪ್ರದಾಯಿಕ ತೊಗಲುಗೊಂಬೆ ಆಟದಲ್ಲಿ ಬಸವ, ಗಾಂಧಿ, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಂತಹ ಹೊಸ ಹೊಸ ವಿಷಯ-ವಸ್ತುಗಳ ಪ್ರಯೋಗಗಳನ್ನು ಮಾಡಿ ರಾಷ್ಟ್ರದ ಗಮನ ಸೆಳೆದ ಹಿರಿಯ ರಂಗ ಕಲಾವಿದ ಬಳ್ಳಾರಿಯ ಬೆಳಗಲ್ ವೀರಣ್ಣ (73) ಅವರನ್ನು 2007ರ ಪ್ರತಿಷ್ಠಿತ ಜಾನಪದಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2008: ಮೆದುಳಿಗೆ ತೆರೆದ ಶಸ್ತ್ರಚಿಕಿತ್ಸೆಗೆ ಬದಲಾಗಿ ಲೇಸರ್ ಚಾಕುವನ್ನು ಬಳಸಿ ಅತ್ಯಾಧುನಿಕ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡುವ ವಿಧಾನವನ್ನು ವಿಜ್ಞಾನಿಗಳು ಸಂಶೋಧಿಸಿದರು. ವೈದ್ಯರು ರೇಡಿಯೋ ತರಂಗಗಳ ಮೂಲಕ ಗಾಮಾ ಕಿರಣದ ಚಾಕುವನ್ನು ಬಳಸಿ ಮೆದುಳಿನ ಗೆಡ್ಡೆಯ ಶಸ್ತ್ರಚಿಕಿತ್ಸೆಯನ್ನು ಮಾಡಬಹುದು. ನೋವಿರದ ಈ ಶಸ್ತ್ರಚಿಕಿತ್ಸೆಗೆ ಕೇವಲ ಎರಡು ಗಂಟೆ ಸಾಕು ಎಂಬುದು ವಿಜ್ಞಾನಿಗಳ ವಿವರಣೆ. ಮೆದುಳಿನಲ್ಲಿ ಆದ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಲು ಈ ಶಸ್ತ್ರಚಿಕಿತ್ಸೆಯ ಮೂಲಕ ಆಗದಿದ್ದರೂ ರೋಗವನ್ನು ನಿಯಂತ್ರಿಸಿ ರೋಗಿಯು ಹೆಚ್ಚು ಕಾಲ ಬದುಕುವಂತೆ ಮಾಡಬಹುದು. ಮೆದುಳನ್ನು ಸ್ಕ್ಯಾನ್ ಮಾಡಿದ ನಂತರ ತಲೆಯ ಸುತ್ತ ಲೋಹದ ಪಟ್ಟಿಯನ್ನು ಕಟ್ಟಿ ಗೆಡ್ಡೆ ಇರುವ ಜಾಗಕ್ಕೆ ಗಾಮಾ ಕಿರಣದ ಚಾಕುವನ್ನು ಹಾಯಿಸಲಾಗುತ್ತದೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.
2008: ಮುಸ್ಲಿಂ ಯುವಕರು ಭಯೋತ್ಪಾದನಾ ಕೃತ್ಯಗಳತ್ತ ವಾಲದಂತೆ ಅವರಿಗೆ ಪ್ರತಿ ಶುಕ್ರವಾರದ ನಮಾಜ್ ನಂತರ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನೀಡಲು ಉತ್ತರ ಪ್ರದೇಶದ ಇಮಾಮರು ನಿರ್ಧರಿಸಿದರು. ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಯಾವುದೇ ಭಯೋತ್ಪಾದಕ ಚಟುವಟಿಕೆಗಳನ್ನು ಒಪ್ಪುವುದಿಲ್ಲ. ನಿಷೇಧಿತ ಉಗ್ರಗಾಮಿ ಸಂಘಟನೆಗಳು ತಮ್ಮ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಸ್ಲಾಮ್ ಹೆಸರಿನಲ್ಲಿ ಅವರನ್ನು ಶೋಷಣೆ ಮಾಡುತ್ತಿವೆ. ಈ ವಿಷಯವನ್ನು ಅವರಿಗೆ ಮನದಟ್ಟು ಮಾಡಲು ಈ ತರಗತಿಗಳು ಶ್ರಮಿಸಲಿವೆ ಎಂದು ಮುಸ್ಲಿಂ ಧರ್ಮ ಗುರುಗಳು ತಿಳಿಸಿದರು. `ಭಯೋತ್ಪಾದನೆ ವಿರುದ್ಧ ಚಳವಳಿ' ಎಂಬ ಅಭಿಯಾನದ ಹೆಸರಿನಲ್ಲಿ ಲಖನೌನ ಉಲೇಮಾ (ಮುಸ್ಲಿಂ ಪಂಡಿತರು) ಗಳು ಫೆಬ್ರುವರಿ ತಿಂಗಳಲ್ಲಿ ಸಭೆಯೊಂದನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ರಾಜ್ಯದ ಎಲ್ಲ ಇಮಾಮರಿಗೂ ಪತ್ರ ಬರೆದು ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಮನವಿ ಮಾಡಿದ್ದರು.
2008: ಆಂಧ್ರ ಪ್ರದೇಶದ ವಾರಂಗಲ್ ಜಿಲ್ಲೆಯ ಕೋಡಿಶಾಲಾ ಗ್ರಾಮದಲ್ಲಿ ನಸುಕಿನಲ್ಲಿ ಪೊಲೀಸರ ಜೊತೆಗೆ ಸಂಭವಿಸಿದ ಘರ್ಷಣೆಯಲ್ಲಿ ಪ್ರಜಾ ಪ್ರತಿಘಟನ ಸಂಘಟನೆಗೆ ಸೇರಿದ ಇಬ್ಬರು ನಕ್ಸಲೀಯರು ಹತರಾದರು.
2008: ಆರು ತಿಂಗಳುಗಳ ಬಳಿಕ ಭಾರತ ಮತ್ತು ಪಾಕಿಸ್ಥಾನ ಇಸ್ಲಾಮಾಬಾದಿನಲ್ಲಿ ಮಾತುಕತೆ ಪುನರಾರಂಭ ಮಾಡಿದವು. ಭಯೋತ್ಪಾದನೆ, ಕಾಶ್ಮೀರ ವಿಚಾರ ಹಾಗೂ ವಿಶ್ವಾಸ ಮೂಡಿಸುವ ಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಲು ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳು ಈದಿನ ಇಲ್ಲಿ ಸಭೆ ಸೇರಿದರು.
2008: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಅವರ ಭೇಟಿಯ ಸಂದರ್ಭದಲ್ಲಿ ಸದ್ಭಾವನೆಯ ದ್ಯೋತಕವಾಗಿ 99 ಮಂದಿ ಭಾರತೀಯರು ಅವರಲ್ಲೂ ಬಹುತೇಕ ಮಂದಿ ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ಥಾನವು ಪ್ರಕಟಿಸಿತು. ಒಳಾಡಳಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿಯ ಸಲಹೆಗಾರರಾಗಿರುವ ರಹಮಾನ್ ಮಲಿಕ್ ಅವರು ಭಾರತ- ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಆರಂಭಕ್ಕೆ ಸ್ವಲ್ಪ ಮೊದಲು ಈ ಪ್ರಕಟಣೆ ಮಾಡಿದರು.
2007: ವೇದಾಂತ ಭಾರತಿ ಸಂಸ್ಥೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಘಟಿಸಿದ ಅಭೂತಪೂರ್ವ `ಸೌಂದರ್ಯ ಲಹರಿ ಸ್ತೋತ್ರ ಸಮರ್ಪಣ' ಕಾರ್ಯಕ್ರಮದಲ್ಲಿ ಸಹಸ್ರಾರು ಮಹಿಳೆಯರು ಶಂಕರ ಭಗವತ್ಪಾದ ವಿರಚಿತ ಸೌಂದರ್ಯ ಲಹರಿ ಸ್ತೋತ್ರಗಳನ್ನು ಪಠಿಸಿ ಇತಿಹಾಸ ನಿರ್ಮಿಸಿದರು.
2007: ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾ ಕಂಪೆನಿಯ ಸಣ್ಣ ಕಾರುಗಳ ಉತ್ಪಾದನಾ ಘಟಕಕ್ಕೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಮತ್ತೆ ಜನರ ವಶಕ್ಕೆ ತೆಗೆದುಕೊಳ್ಳಲು ಕೃಷಿ ಜಮೀನು ರಕ್ಷಾ ಸಮಿತಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
2007: ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗಾಗಿ ರಕ್ತದಲ್ಲಿ ಸೋಡಿಯಂ ಕ್ಲೋರೈಡ್ ಅಂಶವನ್ನು ನಿಯಂತ್ರಿಸುವ `ಸಲೋನಿ-ಕೆ' ಎಂಬ ಹೆಸರಿನ ಸಸ್ಯಜನ್ಯ ಉಪ್ಪು ತಯಾರಿಸಿರುವುದಾಗಿ ಗುಜರಾತಿನ ಭಾವನಗರದ ಕೇಂದ್ರ ಉಪ್ಪು ಮತ್ತು ಸಮುದ್ರ ರಾಸಾಯನಿಕ ಸಂಶೋಧನಾ ಸಂಸ್ಥೆ ಪ್ರಕಟಿಸಿತು. ಸಮುದ್ರ ಕಳೆ ಮತ್ತು ಸಲಿಕೋರ್ನಿಯಾ ಬ್ರಚಿಟಾ ಎಂಬ ಸಸ್ಯವನ್ನು ಈ ಉಪ್ಪು ತಯಾರಿಸಲು ಇದೇ ಮೊದಲ ಬಾರಿಗೆ ಬಳಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪಿ.ಕೆ. ಘೋಷ್ ಪ್ರಕಟಿಸಿದರು.
2007: ಹವಾಮಾನ ವೈಪರೀತ್ಯದಿಂದ ಭಾರತದಲ್ಲಿ ಅತಿವೃಷ್ಟಿ ಹಾಗೂ ಭಾರಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಕೆಲವೊಮ್ಮೆ ವಿಕೋಪದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಅಧ್ಯಯನವೊಂದು ಎಚ್ಚರಿಕೆ ನೀಡಿತು.
2006: ರಾಷ್ಟ್ರದ ಅತ್ಯಂತ ಹಿರಿಯ ವ್ಯಕ್ತಿ ಎಂದು ನಂಬಲಾದ ರಾಜಸ್ತಾನದ ಜೈಪುರದ ಹಿರಿಯಜ್ಜ ಬಡೇ ಮಿಯಾ 130ನೇ ಜನ್ಮದಿನ ಆಚರಿಸಿಕೊಂಡು ಗಿನ್ನೆಸ್ ಪುಸ್ತಕದಲ್ಲಿ ಅತೀ ಹೆಚ್ಚು ವರ್ಷ ಬದುಕಿದ ವ್ಯಕ್ತಿ ಎಂಬುದಾಗಿ ಹೆಸರು ದಾಖಲುಸುವ ಇಚ್ಛೆ ವ್ಯಕ್ತಪಡಿಸಿದರು. ಪಿಂಚಣಿ ಕಾರ್ಡ್ ಪ್ರಕಾರ ಅವರು ಹುಟ್ಟಿದ್ದು 1878ರ ಮೇ 20ರಂದು. ಆದರೆ ತಾನು ಇನ್ನೂ ಹಿಂದೆಯೇ ಹುಟ್ಟಿರುವುದಾಗಿ ಈ ಅಜ್ಜನ ವಾದ.
2006: ದಕ್ಷಿಣ ಚೀನಾ ಸಮುದ್ರದಲ್ಲಿ ಬೀಸಿದ ಭಾರಿ ಚಂಡಮಾರುತಕ್ಕೆ ಸಿಲುಕಿ 160ಕ್ಕೂ ಹೆಚ್ಚು ಮೀನುಗಾರರು ಮೃತರಾದರು.
1983: ಭಾರತದ ಶ್ರೇಷ್ಠ ಹಾಕಿ ಆಟಗಾರರಲ್ಲಿ ಒಬ್ಬರಾದ ಪ್ರಿಥಿಪಾಲ್ ಸಿಂಗ್ ಅವರು ಈದಿನ ಬೆಳಗ್ಗೆ ಲೂಧಿಯಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಗುಂಡೇಟಿಗೆ ಬಲಿಯಾದರು. ಪಂಜಾಬ್ ಕೃಷಿ ವಿವಿ ಕ್ಯಾಂಪಸ್ಸಿನಲ್ಲಿ ಈ ದುರ್ಘಟನೆ ಸಂಭವಿಸಿತು.
1982: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಐ) ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗವು 77 ಸ್ಥಾನಗಳನ್ನು ಗೆದ್ದುಕೊಂಡು 140 ಸ್ಥಾನಬಲದ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಗಳಿಸಿಕೊಂಡಿತು.
1975: ಸರ್ ಸೈಯದ್ ಅಹಮದ್ ಖಾನ್ ಮತ್ತು ಅವರ ಮಗ ಸೈಯದ್ ಮಹಮೂದ್ ಆಲಿಗಢದಲ್ಲಿ ಮಹಮ್ಮಡನ್ ಆಂಗ್ಲೋ - ಓರಿಯಂಟಲ್ ಸ್ಕೂಲ್ ಸ್ಥಾಪಿಸಿದರು. 1920ರಲ್ಲಿ ಅದು ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯವಾಯಿತು.
1957: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಖ್ಯಾತ ಕಾಂಗ್ರೆಸ್ ಧುರೀಣ ಟಿ. ಪ್ರಕಾಶಂ ಅವರು ಹೈದರಾಬಾದಿನಲ್ಲಿ ನಿಧನರಾದರು.
1941: ಜರ್ಮನ್ ಸಮರನೌಕೆ ಬಿಸ್ಮಾರ್ಕ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಗ್ರೀನ್ ಲ್ಯಾಂಡ್ ಕರಾವಳಿ ಸಮೀಪ ಬ್ರಿಟಿಷರ ಎಚ್ ಎಂ ಎಸ್ ಹೂಡ್ ನೌಕೆಯನ್ನು ಮುಳುಗಿಸಿತು. ನೌಕೆಯಲ್ಲಿದ್ದ 1421 ಮಂದಿಯ ಪೈಕಿ ಕೇವಲ 3 ಮಂದಿಯನ್ನು ರಕ್ಷಿಸಲು ಸಾಧ್ಯವಾಯಿತು.
1819: ರಾಣಿ ವಿಕ್ಟೋರಿಯಾ ಜನ್ಮದಿನ. ವಿಕ್ಟೋರಿಯಾ (1819-1901) ಇಂಗ್ಲೆಂಡಿನ ಅತ್ಯಂತ ದೀರ್ಘ ಅವಧಿಯ ರಾಣಿ ಎಂಬುದಾಗಿ ಖ್ಯಾತಿ ಪಡೆದ ವ್ಯಕ್ತಿ.
1844: ಸ್ಯಾಮ್ಯುಯೆಲ್ ಮೋರ್ಸ್, ಬಾಲ್ಟಿಮೋರಿನಿಂದ ವಾಷಿಂಗ್ಟನ್ನಿಗೆ ಟೆಲಿಗ್ರಾಫ್ ಸಂದೇಶವನ್ನು ಕಳುಹಿಸುವ ಮೂಲಕ ಅಮೆರಿಕದ ಮೊತ್ತ ಮೊದಲ ಟೆಲಿಗ್ರಾಫ್ ಲೈನ್ ಉದ್ಘಾಟಿಸಿದ.
1686: ಡೇನಿಯಲ್ ಗ್ಯಾಬ್ರಿಯಲ್ ಫ್ಯಾರನ್ ಹೀಟ್ (1686-1736) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಆಲ್ಕೋಹಾಲ್ ಥರ್ಮಾಮೀಟರ್, ಮರ್ಕ್ಯುರಿ ಥರ್ಮಾಮೀಟರ್ ಹಾಗೂ ಉಷ್ಣಮಾಪಕವನ್ನು ಸಂಶೋಧಿಸಿದ. ಈತ ಸಂಶೋಧಿಸಿದ ಉಷ್ಣಮಾಪಕಕ್ಕೆ ಈತನ ಹೆಸರನ್ನೇ ಇಟ್ಟು ಗೌರವಿಸಲಾಯಿತು.
No comments:
Post a Comment