ಇಂದಿನ ಇತಿಹಾಸ History Today ಮೇ 14
2018: ನವದೆಹಲಿ: ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳಿಗೆ
ಒತ್ತು ನೀಡುವ ಸಲುವಾಗಿ ಅವುಗಳಿಗೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ.
ವಿದ್ಯುತ್ ಮತ್ತು ಹೈಬ್ರಿಡ್ ವಾಹನಗಳಿಗೆ ಸಬ್ಸಿಡಿ ಒದಗಿಸುವ ೯೪೦೦ ಕೋಟಿ ರೂಪಾಯಿಗಳ ಪ್ಯಾಕೇಜನ್ನು
ಸರ್ಕಾರ ರೂಪಿಸಿದ್ದು, ಹಳೆಯ ಪೆಟ್ರೋಲ್/ಡೀಸೆಲ್ ವಾಹನಗಳನ್ನು ಗುಜರಿಗೆ ಹಾಕಿ ಹೊಸ ಪರಿಸರ ಸ್ನೇಹಿ
ವಾಹನ ಖರೀದಿಸುವವರಿಗೆ ೨.೫ ಲಕ್ಷ ರೂಪಾಯಿಗಳ ವರೆಗೆ ಸಬ್ಸಿಡಿ ನೀಡಲು ಕೇಂದ್ರ ಯೋಜಿಸಿತು. ೧.೫ ಲಕ್ಷ ರೂ. ವರೆಗಿನ ದ್ವಿಚಕ್ರ ವಾಹನ ಖರೀದಿಗೆ ಕೇಂದ್ರ
ಸರ್ಕಾರ ೩೦ ಸಾವಿರ ರೂ. ಸಬ್ಸಿಡಿ ನೀಡಲಿದ್ದು, ಟ್ಯಾಕ್ಸಿ ಕ್ಯಾಬ್ ಆಗಿ ಬಳಸುವ ೧೫ ಲಕ್ಷ ರೂ. ಬೆಲೆಯ
ವಿದ್ಯುತ್ ಚಾಲಿತ ಕಾರುಗಳಿಗೆ ೧.೫ ರಿಂದ ೨.೫ ಲಕ್ಷ ರೂ. ವರೆಗೆ ಸಬ್ಸಿಡಿ ನೀಡುವಂತೆ ಯೋಜನೆ ರೂಪಿಸಿತು.
ಮುಂದಿನ ೫ ವರ್ಷಗಳಲ್ಲಿ ೧೫೦೦ ಕೋಟಿ ರೂಪಾಯಿ ಮೌಲ್ಯದ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ದ್ವಿಚಕ್ರ
ಹಾಗೂ ಇತರ ವಾಹನಗಳನ್ನು ತಯಾರಿಸಲು ಉದ್ದೇಶಿಸಲಾಗಿದ್ದು, ೧೦೦೦ ಕೋಟಿ ರೂ. ಮೊತ್ತವನ್ನು ಇಂಧನ ಭರ್ತಿ
ಕೇಂದ್ರಗಳನ್ನು (ಚಾರ್ಜಿಂಗ್ ಸ್ಟೇಷನ್) ದೇಶಾದ್ಯಂತ ಸ್ಥಾಪಿಸಲು ಯೋಜನೆ ರೂಪಿಸಲಾಯಿತು. ಮೆಟ್ರೋ ಸಿಟಿಗಳಲ್ಲಿ
ಪ್ರತಿ ೯ ಚದರ ಕಿ.ಮೀಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ ೨೫ಕಿ.ಮೀಗೆ ಒಂದು ಚಾರ್ಜಿಂಗ್
ಸ್ಟೇಷನ್ ಸ್ಥಾಪಿಸಲು ಬೃಹತ್ ಕೈಗಾರಿಕಾ ಇಲಾಖೆ ಪ್ರಸ್ತಾವನೆ ಸಲ್ಲಿಸಿತು. ಬೆಂಗಳೂರು - ಚೆನ್ನೈ,
ನವದೆಹಲಿ-ಜೈಪುರ, ನವದೆಹಲಿ-ಚಂಡೀಗಢ ಹಾಗೂ ಮುಂಬಯಿ-ಪುಣೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್
ಸ್ಟೇಷನ್ ಗಳನ್ನು ಸ್ಥಾಪಿಸಲಾಗುವುದು. ಮೊದಲಿಗೆ ಸಾರ್ವಜನಿಕ
ಸಾರಿಗೆ ವಾಹನಗಳನ್ನು ವಿದ್ಯುತ್ ಚಾಲಿತ ವಾಹನಗಳಿಗೆ ಬದಲಾಯಿಸುವ ವಿಚಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ವಿದ್ಯುತ್ ಚಾಲಿತ ವಾಹನಗಳ ತಯಾರಿಗೆ ಅಗತ್ಯವಾದ ಸಂಸ್ಥೆಗಳ ಸ್ಥಾಪನೆಗಾಗಿ ಶೇ.೨೫ರಷ್ಟು ಬಂಡವಾಳ ಹೂಡಿಕೆ
ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿದವು. ಸರ್ಕಾರದ ಯೋಜನೆಯಡಿಯಲ್ಲಿ
ವಿದ್ಯುತ್ ಚಾಲಿತ ಬಸ್ಸುಗಳಿಗೆ ಗರಿಷ್ಠ ಸಬ್ಸಿಡಿ ಲಭಿಸಲಿದೆ. ಸರ್ಕಾರದ ಯೋಜನೆ ಪ್ರಕಾರ ೧.೫ ಲಕ್ಷ
ರೂಪಾಯಿ ಫ್ಯಾಕ್ಟರಿ ಬೆಲೆಯ ೧.೫ ಲಕ್ಷ ಹೈಸ್ಪೀಡ್ ದ್ವಿಚಕ್ರ ವಾಹನಗಳಿಗೆ ತಲಾ ೩೦,೦೦೦ ರೂ, ೧ ಲಕ್ಷ
ರೂಪಾಯಿ ಫ್ಯಾಕ್ಟರಿ ಬೆಲೆಯ ೧.೫ ಲಕ್ಷ ಲೋ ಸ್ಪೀಡ್ ದ್ವಿಚಕ್ರವಾಹನಗಳಿಗೆ ತಲಾ ೨೦,೦೦೦ ರೂಪಾಯಿ, ೫
ಲಕ್ಷ ರೂಪಾಯಿ ಫ್ಯಾಕ್ಟರಿ ಬೆಲೆಯ ೧ ಲಕ್ಷ ಹೈಸ್ಪೀಡ್ ತ್ರಿಚಕ್ರವಾಹನಗಳಿಗೆ ತಲಾ ೭೫,೦೦೦ ರೂ., ೩
ಲಕ್ಷ ರೂಪಾಯಿ ಫ್ಯಾಕ್ಟರಿ ಬೆಲೆಯ ೧ ಲಕ್ಷ ಲೋ ಸ್ಪೀಡ್ ತ್ರಿಚಕ್ರವಾಹನಗಳಿಗೆ ತಲಾ ೩೫,೦೦೦ ರೂ, ೧೫
ಲಕ್ಷ ರೂಪಾಯಿ ಫ್ಯಾಕ್ಟರಿ ಬೆಲೆಯ ೫೦,೦೦೦ ಕಾರುಗಳಿಗೆ ತಲಾ ೨ ಲಕ್ಷ ರೂಪಾಯಿ, ೧೦ ಲಕ್ಷ ರೂಪಾಯಿ ಫ್ಯಾಕ್ಟರಿ
ಬೆಲೆಯ ೪೦೦೦ ಲಘು ವಾಣಿಜ್ಯ ವಾಹನಗಳಿಗೆ ತಲಾ ೨.೫ ಲಕ್ಷ ರೂಪಾಯಿ, ೩ ಕೋಟಿ ರೂಪಾಯಿ ಫ್ಯಾಕ್ಟರಿ ಬೆಲೆಯ
೫೦೦೦ ಬಸ್ಸುಗಳಿಗೆ ತಲಾ ೫೦ ಲಕ್ಷ ರೂಪಾಯಿ ಮತ್ತು ೨ ಕೋಟಿ ರೂ. ಫ್ಯಾಕ್ಟರಿ ಬೆಲೆಯ ೨೦೦ ಟ್ರಕ್/ ಎಚ್
ಡಿವಿಗಳಿಗೆ ತಲಾ ೫೦ ಲಕ್ಷ ರೂಪಾಯಿ ಸಬ್ಸಿಡಿ ಲಭಿಸಲಿದೆ.
ಇದೇ ಸಬ್ಸಿಡಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ವ್ಯಕ್ತಿಗಳಿಗಳಿಗೂ ಲಭಿಸಲಿದೆ. ಆದರೆ
ಆದರೆ ಅವರು ತಮ್ಮ ಹಿಂದಿನ ಬಿಎಸ್೩ ಪೂರ್ವ ವಾಹನವನ್ನು ಅನುಮೋದಿತ ಸ್ಕ್ರಾಪಿಂಗ್ ಸೆಂಟರಿಗೆ ಹಾಕಿ
ಅಲ್ಲಿಂದ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು ಎಂದು ಮೂಲಗಳು ಹೇಳಿದವು.
2018: ನವದೆಹಲಿ: ಕೇಂದ್ರ ಸರ್ಕಾರವು ಕಾವೇರಿ ಕರಡು ಜಲ ನಿರ್ವಹಣಾ
ರೂಪುರೇಷೆಯನ್ನು (ಸ್ಕೀಮ್) ಮೇ ೧೨ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ
ಒಂದು ದಿನ ಮೊದಲು ಸುಪ್ರೀಂಕೋರ್ಟಿಗೆ ಸಲ್ಲಿಸಿತು. ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಯು.ಪಿ. ಸಿಂಗ್
ಅವರು ಮೇ ೮ರಂದು ಸುಪ್ರೀಂಕೋರ್ಟ್ ಜಾರಿ ಮಾಡಿದ್ದ
ಸಮನ್ಸ್ ಪ್ರಕಾರ ಈದಿನ ಕೋರ್ಟಿಗೆ ಕರಡು ರೂಪುರೇಷೆಯ ಪ್ರತಿಗಳೊಂದಿಗೆ ಖುದ್ದು ಹಾಜರಾಗಿದ್ದರು. ಭಾರತದ
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠವು ಪ್ರತಿಗಳನ್ನು ಪಡೆಯುತ್ತಾ ನ್ಯಾಯಾಲಯವು ರೂಪುರೇಷೆಯ
ಪ್ರಾಮಾಣಿಕತೆಯನ್ನಾಗಲೀ, ಕಾನೂನು ಬದ್ಧತೆಯನ್ನಾಗಲೀ ಪರಿಶೀಲಿಸುವುದಿಲ್ಲ ಮತ್ತು ಕರ್ನಾಟಕ, ತಮಿಳುನಾಡು,
ಪುದುಚೆರಿ ಮತ್ತು ಕೇರಳ ನಡುವಣ ಎರಡನೇ ಸುತ್ತಿನ ಸುದೀರ್ಘ ಖಟ್ಲೆಯನ್ನು ಬಯಸುವುದಿಲ್ಲ ಎಂದು ಸ್ಪಷ್ಟ
ಪಡಿಸಿತು. ಕಾವೇರಿ ಜಲ ನಿರ್ವಹಣಾ ರೂಪುರೇಷೆ, ೨೦೧೮ರ
ಅಡಿಯಲ್ಲಿ ರಚಿಸಲಾಗುವ ಅನುಷ್ಠಾನ ಪ್ರಾಧಿಕಾರಕ್ಕೆ ಯಾವುದೇ ಹೆಸರು ಇಡುವ ಬಗ್ಗೆ ಕೇಂದ್ರವು ಮುಕ್ತ
ಮನಸ್ಸು ಹೊಂದಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದರು. ’ಮಂಡಳಿ, ಪ್ರಾಧಿಕಾರ ಅಥವಾ
ಸಮಿತಿ’ ಯಾವುದಾದರೂ ಸರಿ. ಪ್ರಾಧಿಕಾರವು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುತ್ತದೆ ಎಂದು ಅವರು
ನುಡಿದರು. ನದೀ ತೀರದ ರಾಜ್ಯಗಳಿಗೆ ರೂಪುರೇಷೆಯ ಪ್ರತಿಗಳನ್ನು
ನೀಡಬಹುದು ಅಥವಾ ಸದನದಲ್ಲಿ ಚರ್ಚೆಗೆ ಅದು ಮುಕ್ತವಾಗಿರುತ್ತದೆ, ಅಥವಾ ಕೋರ್ಟ್ ನಿರ್ದೇಶಿಸಿದರೆ ಕೇಂದ್ರ
ಸಚಿವ ಸಂಪುಟವು ಕರಡು ರೂಪುರೇಷೆಯನ್ನು ಅಂತರ-ರಾಜ್ಯ ನದಿವಿವಾದಗಳ ಕಾಯ್ದೆಯ ಸೆಕ್ಷನ್ ೬ಎ ಅಡಿಯಲ್ಲಿ
ಅಂತಿಮಗೊಳಿಸಬಹುದು ಎಂದು ವೇಣುಗೋಪಾಲ್ ಹೇಳಿದರು.
ಪ್ರಾಧಿಕಾರದ ಅಧ್ಯಕ್ಷನನ್ನು ಕೇಂದ್ರವು ನೇಮಿಸಬೇಕು, ಅವರಿಗೆ ೫ ವರ್ಷಗಳ ಅಥವಾ ನಿವೃತ್ತಿಯಾಗುವವರೆಗೆ
(೬೫ ವರ್ಷ) ಅಧಿಕಾರಾವಧಿಯ ಪ್ರಸ್ತಾಪ ಮಾಡಲಾಗಿದೆ. ಅವರು ಅತ್ಯಂತ ಹಿರಿಯ ತಜ್ಞ ಅನುಭವಿ ಎಂಜಿನಿಯರ್
ಆಗಿರಬೇಕು ಅಥವಾ ಐಎಎಸ್ ಅಧಿಕಾರಿ ಆಗಿರಬೇಕು ಎಂದು ಕರಡು ಹೇಳಿತು. ಪ್ರಾಧಿಕಾರವು ನಾಲ್ಕು ರಾಜ್ಯಗಳ
ಜಲ ಸಂಪನ್ಮೂಲ ಇಲಾಖೆಯ ನಾಲ್ವರು ಆಡಳಿತಾತ್ಮಕ ಕಾರ್‍ಯದರ್ಶಿಗಳನ್ನು ಪಾರ್ಟ್ ಟೈಮ್ ಸದಸ್ಯರಾಗಿ ಹೊಂದಿರಬೇಕು.
ಜಲಾಶಯಗಳನ್ನು ಪ್ರಾಧಿಕಾರದ ಒಟ್ಟಾರೆ ಮಾರ್ಗದರ್ಶನದಂತೆ ಸಮಗ್ರವಾಗಿ ನಿರ್ವಹಿಸಬೇಕು. ಪ್ರತಿ ವರ್ಷ
ಜೂನ್ ತಿಂಗಳಲ್ಲಿ ಪ್ರಾಧಿಕಾರವು ಜಲಾಶಯಗಳ ನೀರಿನ ಉಳಿಕೆ ಸಾಮರ್ಥ್ಯವನ್ನು ಪರಿಶೀಲಿಸಬೇಕು ಎಂದು ಕರಡು
ರೂಪುರೇಷೆ ಹೇಳಿದೆ. ಆಡಳಿತಾತ್ಮಕ ವೆಚ್ಚ ರಾಜ್ಯಗಳಿಗೆ: ಪ್ರಾಧಿಕಾರದ ಅಧ್ಯಕ್ಷರು ಮತ್ತು
ಸದಸ್ಯರ ಆಡಳಿತಾತ್ಮಕ ವೆಚ್ಚದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಈ ಎರಡೂ ರಾಜ್ಯಗಳು ತಲಾ ಶೇಕಡಾ ೪೦ರಷ್ಟನ್ನು
ಭರಿಸಬೇಕು. ಕೇರಳವು ಶೇಕಡಾ ೧೫ರಷ್ಟು ಮತ್ತು ಪುದುಚೆರಿ ಶೇಕಡಾ ೫ರಷ್ಟನ್ನು ಭರಿಸಬೇಕು ಎಂದು ರೂಪುರೇಷೆ
ತಿಳಿಸಿತು. ಪ್ರಾಧಿಕಾರವು ಕಾವೇರಿ ನೀರಿನ ದಾಸ್ತಾನು, ಹಂಚಿಕೆ, ನಿಯಂತ್ರಣದ ನಿಗಾ ವಹಿಸುವುದು. ಜಲಾಶಯಗಳ
ಕಾರ್‍ಯನಿರ್ವಹಣೆ, ನೀರು ಬಿಡುಗಡೆಯ ನಿಯಂತ್ರಣದ ಉಸ್ತುವಾರಿಯನ್ನು ನಿಯಂತ್ರಣ ಸಮಿತಿಯ ನೆರವಿನೊಂದಿಗೆ
ಪ್ರಾಧಿಕಾರ ನೋಡಿಕೊಳ್ಳಬೇಕು ಎಂದೂ ಅದು ಹೇಳಿತು. ಬಿಳಿಗುಂಡ್ಲು ಎಂಬುದಾಗಿ ಗುರುತಿಸಲಾಗಿರುವ ಅಂತರ
ರಾಜ್ಯ ಸಂಪರ್ಕ ಸ್ಥಳದಿಂದ ಕರ್ನಾಟಕವು ನಿಯಂತ್ರಿತ ನೀರನ್ನು ಬಿಡುಗಡೆ ಮಾಡುವುದು. ಯಾವುದಾದರೂ ರಾಜ್ಯ
ಕಾವೇರಿ ನ್ಯಾಯಾಧಿಕರಣ ಅಥವಾ ಸುಪ್ರೀಂಕೋರ್ಟಿನ ಫೆಬ್ರುವರಿ ೧೬ರ ತೀರ್ಪಿನ ಪ್ರಕಾರ ನಡೆದುಕೊಳ್ಳುವಲ್ಲಿ
ಸಹಕರಿಸದೇ ಇದ್ದಲ್ಲಿ ಪ್ರಾಧಿಕಾರವು ಕೇಂದ್ರ ಸರ್ಕಾರಕ್ಕೆ ದೂರು ನೀಡಬಹುದು. ಕೇಂದ್ರದ ನಿರ್ಧಾರವು
ಅಂತಿಮ ಹಾಗೂ ರಾಜ್ಯಗಳಿಗೆ ಬಂಧನಕಾರಿಯಾಗಿರುತ್ತದೆ ಎಂದು ಕರಡು ರೂಪುರೇಷೆ ಹೇಳಿತು. ಪ್ರಾಧಿಕಾರವು
ನೀರು ಹಂಚಿಕೆಯಲ್ಲಿನ ’ಸಂಕಷ್ಟ ಸೂತ್ರ’ವನ್ನೂ ನಿರ್ಧರಿಸುವುದು. ಕರಡು ರೂಪುರೇಷೆಯ ಪ್ರತಿಗಳನ್ನು
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿಗೆ ಒದಗಿಸಿ ಅದು ಫೆಬ್ರುವರಿ ೧೬ರ ತೀರ್ಪಿಗೆ ಅನುಗುಣವಾಗಿದೆಯೇ
ಎಂಬುದಾಗಿ ಪರಿಶೀಲಿಸುವ ಸಲುವಾಗಿ ಒದಗಿಸಬೇಕು ಎಂದೂ ಕೋರ್ಟ್ ಆಜ್ಞಾಪಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ ೧೬ಕ್ಕೆ
ಮುಂದೂಡಲಾಯಿತು.
2018: ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ
ಸುನಂದಾ ಪುಷ್ಕರ್ ಅವರ ಸಾವಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರಆರೋಪ ಪಟ್ಟಿಯನ್ನು (ಚಾರ್ಜ್‌ಶೀಟ್)
ನ್ಯಾಯಾಲಯಕ್ಕೆ ಸಲ್ಲಿಸಿದರು. ಆರೋಪ ಪಟ್ಟಿಯಲ್ಲಿ
ಶಶಿ ತರೂರ್ ಒಬ್ಬರನ್ನು ಮಾತ್ರವೇ ಆರೋಪಿಯಾಗಿ ಹೆಸರಿಸಲಾಗಿದೆ. ೩೦೦೦ ಪುಟಗಳ ಚಾಜ್‌ಶೀಟಿನಲ್ಲಿ ತರೂರ್
ಅವರು ತಮ್ಮ ಪತ್ನಿಯನ್ನು ಕ್ರೌರ್‍ಯಕ್ಕೆ ಗುರಿಪಡಿಸಿದ್ದರು ಎಂದು ಪೊಲೀಸರು ಆಪಾದಿಸಿದರು. ಮೆಟ್ರೋಪಾಲಿಟನ್
ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಸಿಂಗ್ ಅವರ ನ್ಯಾಯಾಲಯದಲ್ಲಿ ಶಶಿ ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆಯ
ಸೆಕ್ಷನ್ ೪೯೮ಎ (ಪತಿ ಅಥವಾ ಆತನ ಬಂಧು ಮಹಿಳೆಯನ್ನು ಕ್ರೌರ್‍ಯಕ್ಕೆ ಗುರಿಪಡಿಸುವುದು) ಮತ್ತು ಸೆಕ್ಷನ್
೩೦೬ (ಆತ್ಮಹತ್ಯೆಗೆ ಕುಮ್ಮಕ್ಕು) ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಚಾರ್ಜ್‌ಶೀಟ್ ಅಸಂಬದ್ಧ:
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ದೆಹಲಿ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟನ್ನು ’ಅಸಂಬದ್ದ’ ಎಂದು
ಬಣ್ಣಿಸಿ ತಾವು ಅದನ್ನು ’ಪ್ರಬಲವಾಗಿ’ ವಿರೋಧಿಸುವುದಾಗಿ ಹೇಳಿದರು. ‘ಈ ಅಸಂಬದ್ಧ ಚಾರ್ಜ್‌ಶೀಟ್ ಸಲ್ಲಿಸಿರುವುದನ್ನು ನಾನು ಗಮನಿಸಿದ್ದೇನೆ
ಮತ್ತು ಅದನ್ನು ಪ್ರಬಲವಾಗಿ ವಿರೋಧಿಸಿಲು ಉದ್ದೇಶಿಸಿದ್ದೇನೆ. ನಾನು ಕುಮ್ಮಕ್ಕು ನೀಡುವುದು ಬಿಡಿ,
ಸುನಂದಾ ಅವರನ್ನು ಬಲ್ಲ ಯಾರೇ ವ್ಯಕ್ತಿ ಅವರು ಆತ್ಮಹತ್ಯೆ ಮಾಡಿಕೊಂಡಾರು ಎಂದು ನಂಬಲಾರರು’ ಎಂದು
ತರೂರ್ ಟ್ವೀಟ್ ಮಾಡಿದರು. ’ಇದು ವಿಧಾನಗಳು ಅಥವಾ ಪೊಲೀಸರ ಪ್ರೇರಣೆಗಳ ಬಗ್ಗೆ ಹೇಳುವುದಿಲ್ಲ.
ಅಕ್ಟೋಬರ್ ೧೭ರಂದು ಕಾನೂನು ಅಧಿಕಾರಿಯವರು ದೆಹಲಿ ಹೈಕೋರ್ಟಿನಲ್ಲಿ ತಮಗೆ ಯಾರ ವಿರುದ್ಧವೂ ಏನೂ ಲಭಿಸಿಲ್ಲ
ಎಂದು ಹೇಳಿಕೆ ನೀಡಿದ್ದರು. ಈಗ ಕೇವಲ ೬ ತಿಂಗಳಲ್ಲಿ ಅವರು ನಾನು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದೇನೆ
ಎಂದಿದ್ದಾರೆ, ನಂಬಲಸಾಧ್ಯ’ ಎಂದೂ ತರೂರ್ ಹೇಳಿದರು. ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ
ಸಿಂಗ್ ಅವರು ಮೇ ೨೪ರಂದು ಆರೋಪ ಪಟ್ಟಿಯನ್ನು ಪರಿಗಣಿಸಲಿದ್ದಾರೆ. ತರೂರ್ ಅವರನ್ನು ಆರೋಪಿಯಾಗಿ ಪರಿಗಣಿಸಿ ಸಮನ್ಸ್ ಕಳುಹಿಸಬೇಕು
ಎಂದೂ ಚಾರ್ಜ್‌ಶೀಟ್ ನ್ಯಾಯಾಲಯವನ್ನು ಆಗ್ರಹಿಸಿತು. ಸುನಂದಾ ಪುಷ್ಕರ್ ಅವರು ೨೦೧೪ರ ಜನವರಿ ೧೭ರಂದು
ದೆಹಲಿಯ ಐಷಾರಾಮೀ ಹೊಟೇಲ್ ಕೊಠಡಿಯೊಂದರಲ್ಲಿ ಸತ್ತು ಬಿದ್ದಿದ್ದುದು ಪತ್ತೆಯಾಗಿತ್ತು.
2018: ನವದೆಹಲಿ: ತಮ್ಮ ವಿರುದ್ಧ ’ಬೆದರಿಕೆಯ ಭಾಷೆ’ ಬಳಸುವುದರಿಂದ
ದೂರ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆ ನೀಡಲು ಆಗ್ರಹಿಸಿ ರಾಷ್ಟ್ರಪತಿ ರಾಮನಾಥ
ಕೋವಿಂದ್ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಪತ್ರ ಬರೆದರು. ’ಪ್ರಧಾನಿಯವರ ಹುದ್ದೆಗೆ ಉಚಿತವಲ್ಲದ ಇಂತಹ ಅಸಮರ್ಥನೀಯವಾದ
ಮತ್ತು ಬೆದರಿಸುವ ರೀತಿಯ ಭಾಷೆಯನ್ನು ಕಾಂಗ್ರೆಸ್ ಪಕ್ಷ ಅಥವಾ ಯಾವುದೇ ಪಕ್ಷ ಇಲ್ಲವೇ ವ್ಯಕ್ತಿಗಳ
ವಿರುದ್ಧ ಬಳಸದಂತೆ ರಾಷ್ಟ್ರಪತಿಯವರು ಪ್ರಧಾನಮಂತ್ರಿಯವರಿಗೆ ಎಚ್ಚರಿಸಬೇಕು’ ಎಂದು ಮೇ ೧೩ರ ದಿನಾಂಕ
ನಮೂದಿಸಿದ ಕಾಂಗ್ರೆಸ್ ಪಕ್ಷದ ಪತ್ರ ಕೋರಿದ್ದು ಪತ್ರಕ್ಕೆ ಡಾ. ಮನಮೋಹನ್ ಸಿಂಗ್ ಮತ್ತು ಇತರ ಸಹೋದ್ಯೋಗಿಗಳು
ಸಹಿ ಹಾಕಿದರು. ಪ್ರಧಾನಿ ಮೋದಿ ಅವರು ಮೇ ೬ರಂದು ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಡಿದ
ಭಾಷಣವನ್ನು ಪತ್ರ ಉಲ್ಲೇಖಿಸಿತು. ಈ ಭಾಷಣದಲ್ಲಿ ಮೋದಿ ಅವರು ಕಾಂಗ್ರೆಸ್ ನಾಯಕತ್ವಕ್ಕೆ ತನ್ನ ಎಲ್ಲೆ
ಮೀರದಂತೆ ಎಚ್ಚರಿಕೆ ನೀಡಿದ್ದರು ಎಂದು ರಾಷ್ಟ್ರಪತಿ ಕೋವಿಂದ್ ಅವರಿಗೆ ಬರೆದ ಪತ್ರ ಹೇಳಿತು. ’ಪ್ರಧಾನಿಯವರು ಸರ್ಕಾರದ ಮುಖ್ಯಸ್ಥರಾಗಿ ಬೆದರಿಕೆ ಸ್ವರೂಪದ
ಶಬ್ದಗಳನ್ನು ಆಡುತ್ತಾರೆ ಮತ್ತು ಮುಖ್ಯ ವಿರೋಧ ಪಕ್ಷವಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ನಾಯಕರು
ಮತ್ತು ಸದಸ್ಯರಿಗೆ ಬಹಿರಂಗ ಎಚ್ಚರಿಕೆ ನೀಡುತ್ತಾರೆ ಎಂಬುದನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಯೋಚಿಸಲೂ ಸಾಧ್ಯವಿಲ್ಲ’ ಎಂದು ಪತ್ರ ಹೇಳಿತು. ಪ್ರಧಾನಿಯವರು ಹುಬ್ಬಳ್ಳಿಯಲ್ಲಿ ನಡೆಸಿದ ಪಕ್ಷದ ಚುನಾವಣಾ
ಪ್ರಚಾರದ ವಿಡಿಯೋವನ್ನು ನೀಡುವುದರ ಜೊತೆಗೆ, ಕಾಂಗ್ರೆಸ್ ಪಕ್ಷವು ತನ್ನ ಪತ್ರದಲ್ಲಿ ಪ್ರಧಾನಿಯವರ
ಭಾಷಣದ ಆಕ್ಷೇಪಾರ್ಹ ಭಾಷಣವನ್ನು ನಮೂದಿಸಿದೆ: ’ಕಾಂಗ್ರೆಸ್ ಕೆ ನೇತಾ ಕಾನ್ ಖೋಲ್ಕರ್ ಸುನ್ ಲೀಜಿಯೇ,
ಅಗರ್ ಸೀಮಾವೋಂ ಕೊ ಪಾರ್ ಕರೋಗೆ ತೊ ಯೆಹ್ ಮೋದಿ ಹೈ, ಲೇನೆ ಕೆ ದೇನೆ ಪಡ್ ಜಾಯೇಂಗೆ (ಕಾಂಗ್ರೆಸ್
ನಾಯಕರೇ ಕಿವಿಗೊಟು ಕೇಳಿ. ಮಿತಿಗಳನ್ನು ಮೀರಿದರೆ, ಇದು ಮೋದಿ, ನೆನಪಿಡಿ ನೀವು ಬೆಲೆ ತೆರಬೇಕಾಗುತ್ತದೆ).
ಚುನಾವಣಾ ಪ್ರಚಾರಗಳಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ಕೂಗಾಡುವುದು ಅಸಾಮಾನ್ಯವಲ್ಲದಿದ್ದರೂ, ಕಾಂಗ್ರೆಸ್
ಪಕ್ಷವು ಇಂತಹ ’ಬೆದರಿಕೆ ಹಾಕುವ ಭಾಷೆಯನ್ನು ಚುನಾವಣಾ ಪ್ರಚಾರದಲ್ಲಿ ಬಳಸುವುದು, ವೈಯಕ್ತಿಕ ಮತ್ತು
ರಾಜಕೀಯ ಜಿದ್ದು ತೀರಿಸಲು ಪ್ರಧಾನಿಯಾಗಿ ತಮ್ಮ ಅಧಿಕಾರವನ್ನು ಬಳಸಿಕೊಳ್ಳುವುದಕ್ಕೆ ಸಮವಾಗುತ್ತದೆ’
ಎಂದು ಹೇಳಿತು. ’ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಾಯಕತ್ವಕ್ಕೆ ಪ್ರಧಾನಿ ಹಾಕಿರುವ ಬೆದರಿಕೆ ಖಂಡನೆಗೆ
ಅರ್ಹವಾದದು. ದೇಶದ ೧೩೦ ಕೋಟಿ ಜನರನ್ನು ಆಳುವ ಸಂವಿಧಾನಬದ್ಧ ಸರ್ಕಾರದ ಪ್ರಧಾನಿಯ ಭಾಷೆ ಇದಾಗಲು ಸಾಧ್ಯವಿಲ್ಲ’
ಎಂದು ಪತ್ರ ತಿಳಿಸಿತು. ’ಇಂತಹ ಭಾಷಣ ಬಹಿರಂಗವಾಗಿಯಾಗಲೀ,
ಖಾಸಗಿಯಾಗಿ ಆಗಲಿ ಸ್ವೀಕಾರಾರ್ಹ ಅಲ್ಲ. ಬಳಸಲಾಗಿರುವ ಪದಗಳು ಅವಮಾನ ಮಾಡಲು ಮತ್ತು ಶಾಂತಿಯನ್ನು ಹಾಳುಗೆಡವಲು
ಪ್ರಚೋದನೆ ನೀಡುವ ಉದ್ದೇಶದ ಬೆದರಿಕೆ ಸ್ವರೂಪದ ಪದಗಳಾಗಿವೆ’ ಎಂದು ಹೇಳಿದ ಪತ್ರ ’ಹಿಂದಿನ ಪ್ರಧಾನ
ಮಂತ್ರಿಗಳು ಪ್ರಧಾನಿಪದದ ಘನತೆ ಗೌರವವನ್ನು ಉಳಿಸಿಕೊಂಡು ಬಂದಿದ್ದರು’ ಎಂದು ಹೇಳಿತು. ಸಿಂಗ್ ಅವರ ಹೊರತಾಗಿ ಇತರ ಕಾಂಗ್ರೆಸ್ ನಾಯಕರಾದ ಗುಲಾಂ
ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಎ.ಕೆ. ಆಂಟನಿ, ಅಹ್ಮದ್ ಪಟೇಲ್, ಪಿ. ಚಿದಂಬರಂ, ಅಶೋಕ್ ಗೆಹ್ಲೋಟ್,
ಕಮಲನಾಥ್, ಆನಂದ ಶರ್ಮ, ಮೋತಿಲಾಲ್ ವೋರಾ, ದಿಗ್ವಿಜಯ್ ಸಿಂಗ್ ಮತ್ತಿತರರು ಪತ್ರಕ್ಕೆ ಸಹಿ ಮಾಡಿದ್ದರು.
2018: ನವದೆಹಲಿ: ಆಸ್ಪತ್ರೆಗಳು ತಮ್ಮ ಫಾರ್ಮಸಿಗಳಿಂದಲೇ
ಔಷಧ ಖರೀದಿಸುವಂತೆ ರೋಗಿಗಳ ಮೇಲೆ ಒತ್ತಡ ಹೇರುವುದನ್ನು ಏಕೆ ನಿಷೇಧಿಸಬಾರದು ಎಂದು ತಿಳಿಸುವಂತೆ ಸುಪ್ರೀಂಕೋರ್ಟ್
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತು. ನ್ಯಾಯಮೂರ್ತಿ ಎಸ್ ಎ ಬೊಬ್ಡೆ
ನೇತೃತ್ವದ ಪೀಠವು ಈ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಹತ್ವದ ವಿಚಾರ ಎಂಬುದಾಗಿ
ಅಂಗೀಕರಿಸಿ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ನೋಟಿಸ್ ಕಳುಹಿಸಿತು. ರೋಗಿಗಳು,
ರೋಗಿಗಳ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಾಗುವ ಸಂದರ್ಭಗಳಲ್ಲಿ ಅನುಭವಿಸುವ ಸಮಸ್ಯೆಯನ್ನು ಉಲ್ಲೇಖಿಸಿ
ಕಾನೂನು ವಿದ್ಯಾರ್ಥಿ ಸಿದ್ಧಾರ್ಥ ದಾಲ್ಮಿಯಾ ಅವರು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ
ಅರ್ಜಿ ಸಲ್ಲಿಸಿದ್ದರು. ತಮ್ಮ ತಾಯಿ ಸ್ತನ ಕ್ಯಾನ್ಸರ್ ಸಲುವಾಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಬೇಕಾಗಿ
ಬಂದ ಹಾಗೂ ಚಿಕಿತ್ಸೆ ಪಡೆಯಬೇಕಾಗಿ ಬಂದ ಸನ್ನಿವೇಶವನ್ನು ವಿವರಿಸಿದ ದಾಲ್ಮಿಯಾ ಅವರು ತಮ್ಮ ಕುಟುಂಬ
ಚಿಕಿತ್ಸೆಗಾಗಿ ಈಗಾಗಲೇ ೧೫ ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದೆ ಎಂದು ತಿಳಿಸಿದರು. ತನ್ನ ತಾಯಿಯ
ಚಿಕಿತ್ಸೆ ವೇಳೆಯಲ್ಲಿ ಅರ್ಜಿದಾರರು (ದಾಲ್ಮಿಯ ಮತ್ತು ಅವರ ತಂದೆ) ಮೊತ್ತ ಮೊದಲ ಬಾರಿಗೆ ಆಸ್ಪತ್ರೆಗಳು,
ನರ್ಸಿಂಗ್ ಹೋಮ್ ಗಳು ಹಾಗೂ ಹೆಲ್ತ್ ಕೇರ್ ಸೇವೆ ಒದಗಿಸುವ ಸಂಸ್ಥೆಗಳು ರೋಗಿಗಳು ಹಾಗೂ ಅವರ ಬಂಧುಗಳನ್ನು
ಆಸ್ಪತ್ರೆಗಳ ಫಾರ್ಮಸಿಗಳಿಂದಲೇ ದುಬಾರಿ ಬೆಲೆಯ ಔಷಧ ಖರೀದಿಸುವಂತೆ ಒತ್ತಡ ಹಾಕುವ ಸಂಘಟಿತ ವಿಧಾನದ
ಬಗ್ಗೆ ಅರಿತುಕೊಂಡರು ಎಂದು ಅರ್ಜಿ ತಿಳಿಸಿತು. ಔಷಧ ತಯಾರಕರ ಜೊತೆಗೆ ಸಹಯೋಗ ಮತ್ತು ಇದು ಗೊತ್ತಿದ್ದರೂ
ಸರ್ಕಾರ ಅನುಸರಿಸುವ ಔದಾಸೀನ್ಯದ ಲಾಭ ಪಡೆದುಕೊಂಡೇ ಆಸ್ಪತ್ರೆಗಳು ಈ ವಿಧಾನ ಅನುಸರಿಸುತ್ತಿವೆ, ಪರಿಣಾಮವಾಗಿ
ಭಾರತದ ಜನರು ಆಸ್ಪತ್ರೆಗಳ ಕೃಪಾಶ್ರಯದಲ್ಲೇ ಅನಿವಾರ್‍ಯವಾಗಿ ಇರಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
ತಮ್ಮ ಪ್ರಕರಣವನ್ನೇ ಉಲ್ಲೇಖಿಸಿದ ಅರ್ಜಿದಾರರು, ತನ್ನ ತಾಯಿಗೆ ಆಸ್ಪತ್ರೆಯಲ್ಲಿ ನೀಡಲಾದ ಔಷಧಗಳು
ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಿದ್ದರೂ, ಕಡ್ಡಾಯವಾಗಿ ಆಸ್ಪತ್ರೆಯ ಫಾರ್ಮಸಿಯಲ್ಲೇ
ಖರೀದಿಸುವಂತೆ ಒತ್ತಡ ಹಾಕಲಾಯಿತು. ಕೇವಲ ಒಂದು ಇಂಜೆಕ್ಷನ್ ಬೆಲೆಯ ವ್ಯತ್ಯಾಸ ೨೧,೦೦೦ ರೂಪಾಯಿಗಳಷ್ಟು
ಇದ್ದುದೂ ತಮ್ಮ ಗಮನಕ್ಕೆ ಬಂತು ಎಂದು ತಿಳಿಸಿದರು. ಬಹುತೇಕ ಆಸ್ಪತ್ರೆಗಳು ಹಲವಾರು ನೆಪಹೇಳಿ, ಆಸ್ಪತ್ರೆಯ
ಫಾರ್ಮಸಿಯಿಂದಲೇ ಕಡ್ಡಾಯವಾಗಿ ದುಬಾರಿ ಬೆಲೆಯ ಔಷಧ ಖರೀದಿಸುವಂತೆ ಒತ್ತಡ ಹಾಕುತ್ತವೆ. ಅವುಗಳು ರೋಗಿಗಳಿಗಾಗಲೀ,
ಅವರನ್ನು ನೋಡಿಕೊಳ್ಳುವವರಿಗಾಗಲೀ ರಿಯಾಯ್ತಿ ದರದಲ್ಲಿ ಔಷಧ ಮಾರುವ ಅಧಿಕೃತ ಔಷಧಾಲಯಗಳಿಂದ ಔಷಧ ಖರೀದಿಸಲು
ಆಯ್ಕೆಯನ್ನೇ ಕೊಡುವುದಿಲ್ಲ ಎಂದು ಅರ್ಜಿದಾರರು ತಿಳಿಸಿದರು. ಆಸ್ಪತ್ರೆಗಳ ಈ ದುರುಪಯೋಗ, ಒತ್ತಡ ಮತ್ತು
ಲೂಟಿಯನ್ನು ತಡೆಯಲು ಪ್ರಸ್ತುತ ಯಾವುದೇ ಕಾನೂನು ಅಥವಾ ನೀತಿ ಚೌಕಟ್ಟು ಇಲ್ಲ. ಸರ್ಕಾರಗಳು ಭಾರತದ
ಜನರನ್ನು ಇಂತಹ ಆಸ್ಪತ್ರೆಗಳನ್ನು ನಡೆಸುವ ನಿರ್ಲಜ್ಜ ವ್ಯಕ್ತಿಗಳ ಕೈಯಲ್ಲಿ ಬಿಟ್ಟಿದೆ. ಇದು ಭಾರತದ
ಜನರನ್ನು ರಕ್ಷಿಸಬೇಕಾದ ಮತ್ತು ಅವರ ಕಲ್ಯಾಣದ ಖಾತರಿ ನೀಡಬೇಕಾದ ಸರ್ಕಾರಗಳ ಸಂಪೂರ್ಣ ವೈಫಲ್ಯವಾಗಿದೆ
ಎಂದು ಅರ್ಜಿ ಹೇಳಿದೆ.
ತಮ್ಮ ಫಾರ್ಮಸಿಗಳಿಂದಲೇ ಔಷಧಗಳನ್ನು ಕಡ್ಡಾಯವಾಗಿ ಖರೀದಿಸುವಂತೆ
ರೋಗಿಗಳನ್ನು ಒತ್ತಾಯಿಸದಂತೆ ಆಸ್ಪತ್ರೆಗಳನ್ನು ನಿಷೇಧಿಸಲು ಮತ್ತು ಇಂತಹ ಆದೇಶಗಳನ್ನು ಉಲ್ಲಂಘಿಸುವವರ
ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಅರ್ಜಿ
ಸುಪ್ರೀಂಕೋರ್ಟನ್ನು ಕೋರಿತು. ಆಸ್ಪತ್ರೆಯ ಮತ್ತು ಫಾರ್ಮಸಿಯ ಪ್ರಮುಖ ಸ್ಥಳಗಳಲ್ಲಿ ಔಷಧಗಳು, ವೈದ್ಯಕೀಯ
ಉಪಕರಣಗಳನ್ನು ಆಸ್ಪತ್ರೆಯ ಫಾರ್ಮಸಿಯೂ ಸೇರಿದಂತೆ ತಮ್ಮ ಆಯ್ಕೆಯ ಸ್ಥಳಗಳಿಂದ ಖರೀದಿಸಲು ರೋಗಿಗಳು,
ಅವರನ್ನು ನೋಡಿಕೊಳ್ಳುವವರು ಮುಕ್ತರಾಗಿದ್ದಾರೆ ಎಂಬ ನೋಟಿಸುಗಳನ್ನು ಪ್ರದರ್ಶಿಸುವಂತೆ ನಿರ್ದೇಶನ
ನೀಡಬೇಕು ಎಂದೂ ಅರ್ಜಿ ನ್ಯಾಯಾಲಯವನ್ನು ಕೋರಿತು.
2017: ಕೊಯಮತ್ತೂರು: ವಿಶ್ವದ ಮೊದಲ112 ಅಡಿ
ಎತ್ತರದ ಆದಿಯೋಗಿ ಶಿವ ಪ್ರತಿಮೆ ಗಿನ್ನಿಸ್ ದಾಖಲೆಗೆ ಸೇರಿತು. ಕೇರಳದ ಕೊಯಮತ್ತೂರಿನಲ್ಲಿ ಈಶಾ ಯೋಗ
ಸಂಸ್ಥೆಯಿಂದ ನಿರ್ಮಾಣಗೊಂಡಿರುವ 112 ಅಡಿ ಉದ್ದದ ಶಿವ ಪ್ರತಿಮೆ ಗಿನ್ನಿಸ್ ದಾಖಲೆ ಪುಟ್ಟಕ್ಕೆ ಸೇರ್ಪಡೆಯಾಯಿತು.
ಇದು ವಿಶ್ವದ ಮೊದಲ ಬೃಹತ್ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಫೆಬ್ರುವರಿ 24 ರಂದು
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು. ಈ ಶಿವಪ್ರತಿಮೆಗೆ ಆದಿಯೋಗಿ
ಎಂಬ ಹೆಸರನ್ನು ಇಡಲಾಗಿತ್ತು. ಈ ಮೂಲಕ ಯೋಗಕ್ಕೆ ಉತ್ತೇಜನ ನೀಡುವುದು ಸಂಸ್ಥೆಯ ಉದ್ದೇಶ. ಬೆಟ್ಟ-ಗುಡ್ಡದ
ನಡುವೆ ಪ್ರಶಾಂತ ಸ್ಥಳದಲ್ಲಿರುವ ಈ ಆದಿಯೋಗಿ ಶಿವ ಪ್ರತಿಮೆ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು
ಆಕರ್ಷಿಸುತ್ತಿದೆ. ಪ್ರತಿಮೆಯನ್ನು ವಿನ್ಯಾಸಗೊಳಿಸಲು
9 ತಿಂಗಳು ತಗುಲಿತ್ತು.
2017: ದಿಸ್ಪುರ: ಅಸ್ಸಾಂನ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಿಸಲಾಗಿರುವ ಭಾರತದ ಅತ್ಯಂತ ಉದ್ದದ ಸೇತುವೆ ಧೋಲಾ-ಸಾದಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 26ರಂದು ಉದ್ಘಾಟಿಸಲಿದ್ದಾರೆ. ಮೇ 26ಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಲಿದ್ದು ಸೇತುವೆ ಉದ್ಘಾಟನೆ ಮೂಲಕ ಪ್ರಧಾನಿ ಮೋದಿ ಸಡಗರಕ್ಕೆ ಚಾಲನೆ ನೀಡಲಿದ್ದಾರೆ. ಈ ಸೇತುವೆಯ ಉದ್ಧ 9.15 ಕಿ.ಮೀ ಉದ್ಧವಿದ್ದು ಈ ಸೇತುವೆ ಮುಂಬೈನ ಬಾಂದ್ರಾ-ವರ್ಲಿ ಸೀಲಿಂಕ್ ಗಿಂತ 3.55 ಕಿ.ಮೀ ಹೆಚ್ಚು ಉದ್ದವಾಗಿದೆ. ಈ ಸೇತುವೆಯು ಚೀನಾದ ಗಡಿಗೆ ಹತ್ತಿರವಿರುವುದರಿಂದ ಸಂಘರ್ಷದ ಸಮಯಗಳಲ್ಲಿ ಸೇನೆಯ ತ್ವರಿತ ಚಲನವಲನಗಳಿಗೆ ನೆರವಾಗಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ತಿಳಿಸಿದರು. 2011ರಲ್ಲಿ ಆರಂಭಗೊಂಡಿದ್ದ ಈ ಸೇತುವೆ ನಿರ್ಮಾಣಕ್ಕೆ 950 ಕೋಟಿ ರುಪಾಯಿ ವೆಚ್ಚವಾಗಿದ್ದು ಈ ಸೇತುವೆ ಮಿಲಿಟರಿ ಟ್ಯಾಂಕ್ ಗಳ ಓಡಾಟವನ್ನು ತಾಳಿಕೊಳ್ಳುವಂತೆ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿತ್ತು.
2017:
ಮುಂಬೈ: ತಮಿಳುನಾಡಿನ 18 ವರ್ಷದ
ವಿದ್ಯಾರ್ಥಿ ರಿಫತ್ ಷರೂಕ್ ವಿನ್ಯಾಸಗೊಳಿಸಿದ
ಜಗತ್ತಿನ ಅತಿ ಹಗುರ ಉಪಗ್ರಹವು ಉಡಾವಣೆಗೆ
ಸಿದ್ಧವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದವು. ಕೇವಲ 64 ಗ್ರಾಂ ತೂಕದ ಉಪಗ್ರಹವು ನಾಸಾ ಸಂಸ್ಥೆಯ
ರಾಕೆಟ್ ಮೂಲಕ ಜೂನ್ 21ರಂದು ಉಡಾವಣೆಯಾಗಲಿದೆ. ಭಾರತೀಯ ವಿದ್ಯಾರ್ಥಿ ಸಿದ್ಧಪಡಿಸಿರುವ ‘ಕಲಾಂಸ್ಯಾಟ್’
ಹೆಸರಿನ ಉಪಗ್ರಹವು ಉಡಾವಣೆಯಾಗುತ್ತಿರುವ ಅತಿ ಹಗುರ ಉಪಗ್ರಹವಾಗಿದೆ. ಕಲಾಂಸ್ಯಾಟ್ ಮಿಷನ್ ಒಟ್ಟು
ಅವಧಿ 240 ನಿಮಿಷಗಳಾಗಿದ್ದು, ಉಪಗ್ರಹವು ಉಪ–ಕಕ್ಷೆಯಲ್ಲಿ 12 ನಿಮಿಷಗಳ ವರೆಗೂ ಕಾರ್ಯನಿರ್ವಹಿಸಲಿದೆ.
ಕಾರ್ಬನ್ ಫೈಬರ್ 3ಡಿ ಪ್ರಿಂಟ್ ಮೂಲಕ ರೂಪಿಸಲಾಗಿರುವ ಉಪಗ್ರಹದ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು
ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಪಲ್ಲಪಟ್ಟಿಯ ರಿಫತ್ ವಿವರಿಸಿರುವುದಾಗಿ ವರದಿ
ತಿಳಿಸಿತು. ನಾಸಾ ಮತ್ತು ಐ ಡೂಡಲ್ ಲರ್ನಿಂಗ್ ಸಂಸ್ಥೆಗಳ ‘ಕ್ಯೂಬ್ಸ್ ಇನ್ ಸ್ಪೇಸ್’ ಸ್ಪರ್ಧೆಯ
ಮೂಲಕ ರಿಫತ್ ಅವರ 64 ಗ್ರಾಂ ಉಪಗ್ರಹ ಆಯ್ಕೆಯಾಗಿತ್ತು.
2017: ಲಾಹೋರ್: ಮುಂಬೈ ದಾಳಿಯ ಪ್ರಮುಖ ಸಂಚುಕೋರ, ಜಮಾತ್ ಉದ್ ದಾವಾ ಮುಖ್ಯಸ್ಥ
ಹಫೀಜ್ ಸಯೀದ್ ಜಿಹಾದ್ ಹೆಸರಿನಲ್ಲಿ ಭಯೋತ್ದಾದನೆ ಹರಡುತ್ತಿದ್ದಾನೆ’ ಎಂದು ಪಾಕಿಸ್ತಾನ
ತಿಳಿಸಿತು. ಹಫೀಜ್ ಸಯೀದ್ ಸೇರಿದಂತೆ ಆತನ ನಾಲ್ವರು ಸಹಚರರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದು,
ಸಯೀದ್ ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆ ಹರಡುತ್ತಿದ್ದಾನೆ ಎಂಬುದನ್ನು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿತು. ಭಯೋತ್ಪಾದನೆ
ಹರಡುವ ಆರೋಪದಡಿಯಲ್ಲಿ ಸಯೀದ್‌ನನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಗೃಹ ಸಚಿವಾಲಯ ತಿಳಿಸಿತು.
ಹಿಂದಿನ ದಿನ ಪಾಕ್ ನ್ಯಾಯಾಂಗ ಮಂಡಳಿಗೆ ಹಾಜರಾದ ಸಯೀದ್ , ಕಾಶ್ಮೀರಿಗಳ ಪರ ದನಿ ಎತ್ತಿದ
ಕಾರಣ ಬಂಧಿಸಲಾಗಿದೆ ಎಂದು ಹೇಳಿದ್ದರು. ಆದರೆ ಗೃಹ ಸಚಿವಾಲಯ ಸಯೀದ್ ವಾದವನ್ನು ತಳ್ಳಿಹಾಕಿದ್ದು,
ಜಿಹಾದೀ ಹೆಸರಿನಲ್ಲಿ ಭಯೋತ್ಪಾದನೆ ಹರಡುತ್ತಿದ್ದಾನೆ ಎಂದು ಹೇಳಿತ್ತು. ಇವರ ವಾದವನ್ನು ಆಲಿಸಿದ
ಮೂವರು ನ್ಯಾಯಾಧೀಶರ ಪೀಠವು ಈ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶನ
ನೀಡಿತು.
2017:
ಲಂಡನ್/ ನವದೆಹಲಿ: ಹ್ಯಾಕರ್‌ಗಳ ದಾಳಿಯಿಂದ ಭಾರತವೂ ಸೇರಿ ವಿಶ್ವದ 150
ದೇಶಗಳಲ್ಲಿನ 2 ಲಕ್ಷ
ಕಂಪ್ಯೂಟರ್‌ಗಳಿಗೆ ಹಾನಿಯಾಯಿತು. ವನ್ನಾಕ್ರೈ’ ಎಂಬ ಕುತಂತ್ರಾಂಶ ಮೂಲಕ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳನ್ನು
ಸಂಕೇತಾಕ್ಷರಗಳಾಗಿ ಹ್ಯಾಕರ್‌ಗಳು ಮಾರ್ಪಡಿಸಿದ್ದಾರೆ. ಇದರಿಂದಾಗಿ ದಾಳಿಗೆ ಒಳಗಾಗಿರುವ ಸುಮಾರು
2 ಲಕ್ಷ ಕಂಪ್ಯೂಟರ್‌ಗಳಲ್ಲಿನ ಕಡತಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ಹಾನಿಗೊಳಗಾದ ಕಂಪ್ಯೂಟರ್‌ಗಳಮ್ಮು
ಸರಿಪಡಿಸುವ ಕೆಲಸ ನಡೆಯುತ್ತಿದ್ದು ಸೋಮವಾರ ಮೇ 15ರಿಂದ ಎಂದಿನಂತೆ ಕೆಲಸ ನಡೆಯಲಿದೆ ಎಂದು ಯುರೋಪ್
ವಿಭಾಗದ ಪೊಲೀಸ್ ಏಜೆನ್ಸಿ ತಿಳಿಸಿತು.
2017: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರ
ಜಿಲ್ಲೆಯಲ್ಲಿ ಭಾರತೀಯ ಸೇನೆಯು ಇಬ್ಬರು
ಉಗ್ರರನ್ನು ಹತ್ಯೆ ಮಾಡಿತು. ಹತರಾದ ಉಗ್ರರು ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದವರು ಎಂದು
ವರದಿ ತಿಳಿಸಿತು. ಈದಿನ ಕಾರ್ಯಾಚರಣೆ ನಡೆಸಿದ ಭಾರತೀಯ
ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತು. ಹಂದ್ವಾರದ ವಾರ್ಪೊರಾ ಅರಣ್ಯ ವಲಯದಲ್ಲಿ ಕಾರ್ಯಾಚರಣೆ
ನಡೆಸುತ್ತಿದ್ದ ವೇಳೆ ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಮತ್ತಷ್ಟು ಉಗ್ರರಿರುವ
ಶಂಕೆ ವ್ಯಕ್ತವಾಗಿದ್ದು, ಸೇನೆ ತೀವ್ರ ಶೋಧ ಮುಂದುವರೆಸಿತು. ಇತ್ತೀಚೆಗೆ ಉಗ್ರರ ನುಸುಳುವಿಕೆ ಹೆಚ್ಚಾಗುತ್ತಿದ್ದು,
ಇದಕ್ಕೆ ಕಡಿವಾಣ ಹಾಕಲು ಭಾರತೀಯ ಸೇನೆ ಪ್ರತಿತಂತ್ರ ರೂಪಿಸಿದೆ. ಕಳೆದ ವಾರದಿಂದ ಶೋಧ ಕಾರ್ಯ ಕೂಡ
ಆರಂಭಿಸಿತ್ತು. ಇತ್ತ ಪಾಕ್ ಸೇನೆಯಿಂದ ನಡೆಯುತ್ತಿರುವ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಯೋಧರು
ಪ್ರತ್ಯುತ್ತರ ನೀಡಿದರು. ಪಾಕಿಸ್ತಾನ ಸೈನಿಕರಿಂದ
ಅಪ್ರಚೋದಿತ ದಾಳಿ ಹಿನ್ನೆಲೆಯಲ್ಲಿ ಈ ಭಾಗದ ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಯಿತು. ರಜೌರಿ ಜಿಲ್ಲೆಯ ಚಿಟಿ ಬಕ್ರಿ ವಲಯದಲ್ಲಿ ಸಾವಿರಕ್ಕೂ ಅಧಿಕ
ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನು ಭಾರತೀಯ ಸೇನೆಯಿಂದಲೂ ಪಾಕ್ ಸೈನಿಕರಿಗೆ ಎಚ್ಚರಿಕೆ ನೀಡಲಾಗಿದೆ
ಎಂದು ಭದ್ರತಾ ಅಧಿಕಾರಿಗಳು ತಿಳಿಸಿದರು. ಪಾಕ್ ಸೇನೆಯಿಂದ ಶೆಲ್ ದಾಳಿ ಮುಂದುವರೆದಿದೆ. ಮನೆಗಳ
ಮೇಲೆ ಶೆಲ್ ದಾಳಿ ನಡೆಸಲಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ರಕ್ಷಣ ಸಚಿವಾಲಯದ
ವಕ್ತಾರ ಲೆಫ್ಟಿನೆಂಟ್ ಮನೀಶ್ ಮೆಹ್ತಾ ತಿಳಿಸಿದರು. ಈದಿನ ಬೆಳಗ್ಗೆ ಸುಮಾರು 6.45 ರ ಸಮಯದಲ್ಲಿ ಪಾಕ್ ಸೇನೆ
ದಾಳಿ ನಡೆಸಿತು. ಇದರಿಂದ 200 ಕ್ಕೂ ಹೆಚ್ಚು ಮನೆಗಳು ಹಾನಿಗೀಡಾದವು. ಮಹಿಳೆಯರು ಮಕ್ಕಳು ಸೇರಿ ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಯಿತು
ಎಂದು ನೌಶೇರಾ ವಲಯದ ಉಪವಿಭಾಗಾಧಿಕಾರಿ ಹರ್ಬಲ್ ಲಾಲ್
ಶರ್ಮಾ ತಿಳಿಸಿದರು. ಹಿಂದಿನ ದಿನ ಪಾಕ್ ನಡೆಸಿದ್ದ
ಅಪ್ರಚೋದಿತ ದಾಳಿಗೆ ಇಬ್ಬರು ನಾಗರಿಕರು ಬಲಿಯಾಗಿದ್ದರು. ಈ ಬೆನ್ನಲ್ಲೇ ಇಂದೂ ಕೂಡ ಪಾಕ್ ಉಪಟಳ ಮುಂದುವರೆಯಿತು.2017: ಬೆಂಗಳೂರು: ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ (85) ಬೆಳಗ್ಗೆ ನಿಧನರಾದರು. ಅವರು ಪತ್ನಿ, ಪುತ್ರಿ ಹಾಗೂ ಪುತ್ರರನ್ನು ಅಗಲಿದರು. ಗರುಡನಗಿರಿ ನಾಗರಾಜ ಅವರು ಜನವಾಣಿ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿದ್ದರು. ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿಯೂ ನಾಗರಾಜ ಅವರು ಸೇವೆ ಸಲ್ಲಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಮತ್ತು ಟಿಯೆಸ್ಸಾರ್ ಪ್ರಶಸ್ತಿಗಳಲ್ಲದೆ ಸೇರಿದಂತೆ ಹಲವು ಪ್ರಶಸ್ತಿಗಳು ನಾಗರಾಜ ಅವರಿಗೆ ಸಂದಿದ್ದವು.
2016: ಲಂಡನ್: ಪಾಕಿಸ್ತಾನದ ಬಸ್ ಚಾಲಕನ ಮಗನಾದ ಸಾದಿಕ್ ಖಾನ್ ಲಂಡನ್ ನಗರದ ಪ್ರಥಮ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾಗಿರುವುದು ಗೊತ್ತಿರುವ ಸಂಗತಿ. ಅವರು ಅಧಿಕಾರ ಸ್ವೀಕರಿಸಿದ ಬಳಿಕ ಈದಿನ
ತಮ್ಮ ಅಚ್ಚುಮೆಚ್ಚಿನ ದೇವಾಲಯ ನಿಯಾಸ್ಡೆನ್ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ಮಂದಿರಕ್ಕೆ ತೆರಳಿ ಭಕ್ತಿಯಿಂದ ನಮಿಸುವ ಮೂಲಕ ತಮ್ಮ ಕಾರ್ಯ ಆರಂಭಿಸಿದರು.
ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳನ್ನು ಪೂರೈಸಿದ ಸಾದಿಕ್, ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳ ಬಳಿ ಕುಶಲೋಪರಿ ವಿಚಾರಿಸಿದರು. ಈ ಭೇಟಿ ಕುರಿತು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡ ಸಾದಿಕ್ ಅವರು, ನನ್ನ ನೆಚ್ಚಿನ ದೇವಾಲಯಕ್ಕೆ ವಾರಾಂತ್ಯದಲ್ಲಿ ಭೇಟಿ ನೀಡಿರುವುದು ಮನಸ್ಸಿಗೆ ಅತೀವ ಆನಂದ ನೀಡಿದೆ.
ಲಂಡನ್ ಭಾರತೀಯರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿ, ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ನನ್ನ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಭಾರತದೊಂದಿಗಿನ ವ್ಯಾಪಾರ ವಹಿವಾಟು ಅಧಿಕವಾಗಿಲಿದೆ ಎಂದು ತಿಳಿಸಿದರು.
ಮೇಯರ್ ಆಗಿ ನನ್ನ ಮೊದಲ ಆದ್ಯತೆ ಲಂಡನ್ ಜನತೆಗೆ ಸೂಕ್ತವಾದ ಭದ್ರತೆ ಒದಗಿಸುವುದು ಹಾಗೂ ಭಯೋತ್ಪಾದನೆ ಚಟುವಟಿಕೆಗಳನ್ನು ನಿಮೂಲನೆ ಮಾಡುವುದು.. ಹಾಗೇ ನಗರದಲ್ಲಿನ ಉದ್ಯಮಗಳ ಬೆಳವಣಿಗೆ ಜತೆಗೆ ಸಂಶೋಧನೆಗಳಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ಅವರು ಹೇಳಿದರು..
2016: ವಾಷಿಂಗ್ಟನ್: ಪರಮಾಣು ವಹಿವಾಟು ರಾಷ್ಟ್ರಗಳನ್ನು ಒಳಗೊಂಡ ಪರಮಾಣು ಸರಬರಾಜುದಾರರ ಗುಂಪಿಗೆ (ಎನ್ಎಸ್ಜಿ) ಭಾರತದ ಪ್ರವೇಶವನ್ನು ತಡೆಯುವ ಯತ್ನಕ್ಕೆ ಹಲವಾರು ಸದಸ್ಯರ ಬೆಂಬಲ ಲಭಿಸಿದೆ ಎಂಬುದಾಗಿ ಚೀನಾ ಪ್ರತಿಪಾದಿಸುತ್ತಿರುವುದರ ಮಧ್ಯೆಯೇ, ಗುಂಪಿಗೆ ಭಾರತದ ಪ್ರವೇಶವನ್ನು ಅಮೆರಿಕ ಬೆಂಬಲಿಸಿತು.
‘2015ರಲ್ಲಿ ಭಾರತ ಭೇಟಿ ಕಾಲದಲ್ಲಿ ಅಧ್ಯಕ್ಷರು ಏನು ಹೇಳಿದ್ದರು ಎಂಬುದನ್ನು ನಿಮಗೆ ನೆನಪಿಸುತ್ತೇನೆ. ಎನ್ಎಸ್ಜಿ ಸದಸ್ಯತ್ವಕ್ಕೆ ಬೇಕಾದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಅಗತ್ಯಗಳನ್ನು ಭಾರತ ಪೂರೈಸಿದೆ ಎಂಬುದು ಅಮೆರಿಕದ ಅಭಿಪ್ರಾಯ ಎಂದು ಅಧ್ಯಕ್ಷರು ದೃಢಪಡಿಸಿದ್ದರು’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ರ್ಕಿಬಿ ಅವರು ತಮ್ಮ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ನೀಡುವುದನ್ನು ವಿರೋಧಿಸುವ ನಿಟ್ಟಿನಲ್ಲಿ ಚೀನಾ ಮತ್ತು ಪಾಕಿಸ್ತಾನ ಕೈಜೋಡಿಸಿವೆಯಲ್ಲ ಎಂಬುದಾಗಿ ಕೇಳಲಾದ ನಿರ್ದಿಷ್ಟ ಪ್ರಶ್ನೆಗೆ ಜಾನ್ ಅವರು ಈ ಉತ್ತರ ನೀಡಿದರು. ಎನ್ಎಸ್ಜಿ ಗುಂಪಿಗೆ ಭಾರತದ ಪ್ರವೇಶವನ್ನು ವಿರೋಧಿಸುವಲ್ಲಿ ಇನ್ನಷ್ಟು ಮಂದಿ ಕೈಜೋಡಿಸಿದ್ದಾರೆ ಎಂದು ಹೇಳಿರುವ ಚೀನಾ ತನ್ನ ವಿರೋಧಕ್ಕೆ ಭಾರತವು ಅಣ್ವಸ್ತ್ರ ಪ್ರಸರಣ ಒಪ್ಪಂದಕ್ಕೆ ಸಹಿಹಾಕಿಲ್ಲ ಎಂಬ ಕಾರಣವನ್ನು ನೀಡುತ್ತಿದೆ. ಆದರೆ ಚೀನಾ ಕೆಂಗಣ್ಣನ್ನು ನಿರ್ಲಕ್ಷಿಸಿರುವ ಅಮೆರಿಕವು ಪರಮಾಣು ಸರಬರಾಜುದಾರರ ಗುಂಪು ಸೇರಲು ಬೇಕಾದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಅಗತ್ಯಗಳನ್ನು ಭಾರತ ಪೂರೈಸಿದೆ ಎಂದು ಪ್ರತಿಪಾದಿಸಿತು.
2016: ನವದೆಹಲಿ: ಭಿಕ್ಷೆ ನೀಡಿದವನಿಗೆ ಒಳಿತಾಗಲಿ ಮತ್ತು ಭಿಕ್ಷೆ ನೀಡದವನಿಗೂ ಒಳಿತಾಗಲಿ ಎಂದು ಒಬ್ಬ ಭಿಕ್ಷುಕನೂ ಆಶಿಸುವ ಸಂಪ್ರದಾಯ ನಮ್ಮದು. ಎಲ್ಲರಿಗೂ ಒಳಿತನ್ನೇ ಆಶಿಸುವ ಸುಸಂಸ್ಕೃತ ಸಮಾಜ ನಮ್ಮದು ಎಂದು ಪ್ರಧಾನಿ ನರೇಂದ್ರ ಮೋದಿ ಉಜ್ಜಯಿನಿಯಲ್ಲಿ ನಡೆಯುತ್ತಿರುವ ‘ವೈಚಾರಿಕ ಮಹಾಕುಂಭ’ದಲ್ಲಿ ಹೇಳಿದರು.
ಭಾರತೀಯ ಸಂಪ್ರದಾಯದಲ್ಲಿ ಕುಂಭದ ಪ್ರಾಮುಖ್ಯತೆಯ ಕುರಿತಾದ ಮಹತ್ವಾಂಶಗಳನ್ನು ವೈಚಾರಿಕ ಮಹಾಕುಂಭ ಸಾರುತ್ತದೆ. ಇಲ್ಲಿ ಸೇರಿರುವ ಎಲ್ಲ ಸನ್ಯಾಸಿಗಳಿಗೆ ನಮಸ್ಕರಿಸುತ್ತೇನೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಹೊಸತೊಂದು ಪ್ರಯತ್ನದ ಹುಟ್ಟು ಸಂಭವಿಸಿದೆ. ಸಮಾಜಕ್ಕೆ ಕುಂಭ ಹೊಸ ದಿಕ್ಕನ್ನು ತೋರಿಸುತ್ತಿದೆ. ಇದು ನಮ್ಮ ಪುರಾತನ ಸಂಪ್ರದಾಯ ಮತ್ತು ಸಂಸ್ಕೃತಿ ಎಂದು
ಮೋದಿ ನುಡಿದರು. ಉಜ್ಜಯಿನಿಯಲ್ಲಿ ನಡೆದ ಕುಂಭ ಮೇಳದ ‘ವೈಚಾರಿಕ ಮಹಾಕುಂಭ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ವೇದಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸಗಢದ ಸಿಎಂ ರಮನ್ ಸಿಂಗ್ ಮತ್ತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಆಗಮಿಸಿದ್ದರು.
2016: ವಾಷಿಂಗ್ಟನ್: ಭಾರತದ ಗಡಿ ಪ್ರದೇಶದಲ್ಲಿ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದು, ಹೆಚ್ಚಿನ ಸೇನಾ ಪಡೆಯನ್ನು ನಿಯೋಜನೆಗೊಳಿಸಿದೆ ಎಂದು ಪೆಂಟಗಾನ್ ತಿಳಿಸಿತು. ಮುಖ್ಯವಾಗಿ ಪಾಕಿಸ್ತಾನ ಸೇರಿದಂತೆ ವಿಶ್ವದೆಲ್ಲೆಡೆ ಚೀನಾ ಸೇನೆ ನೆಲೆಯೂರುತ್ತಿದೆ ಎಂದು ಅದು ಎಚ್ಚರಿಸಿತು.
ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಚೀನಾದ ಸೇನೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಹೆಚ್ಚಿನ ಸೇನೆಯನ್ನು ನಿಯೋಜನೆಗೊಳಿಸಿರುವುದನ್ನು ಗಮನಿಸಿರುವುದಾಗಿ ಪೂರ್ವ ಏಷ್ಯಾ ರಕ್ಷಣಾ ನಿಯೋಗದ ಸಹಾಯಕ ಕಾರ್ಯದರ್ಶಿ ಅಬ್ರಹಾಂ ಎಂ ಡೆನ್ಮಾರ್ಕ್ ತಿಳಿಸಿದರು. ಚೀನಾದ ಸೇನೆ ಮತ್ತು ರಕ್ಷಣಾ ಅಭಿವೃದ್ಧಿ 2016ರ ವರದಿಯನ್ನು ಪೆಂಟಗಾನ್ ಅಮೆರಿಕ ಸರ್ಕಾರಕ್ಕೆ ಹಸ್ತಾಂತರಿಸುವ ಸಂದರ್ಭ ಭಾರತದ ಗಡಿಯಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದರು.
ಭಾರತ ಗಡಿಯಲ್ಲಿ ಚೀನಾ ಸೇನಾ ಸಾಮರ್ಥ್ಯ ಹೆಚ್ಚಿಸಿಕೊಂಡಿರುವುದಕ್ಕೆ ನಿಖರವಾದ ಕಾರಣ ಏನು ಎಂಬುದನ್ನು ತಿಳಿಯುವುದು ಕಷ್ಟ ಎಂದು ಅಬ್ರಹಾಂ ನುಡಿದರು.
2016: ನವದೆಹಲಿ: ಕಾರ್ ಓವರ್ಟೇಕ್ ಪ್ರಕರಣಕ್ಕೆ
ಸಂಬಂಧಿಸಿದ ವಿಧಿವಿಜ್ಞಾನ ವರದಿಯಲ್ಲಿ ರಾಕಿ ಯಾದವ್ ಗನ್ನಿಂದ ಹಾರಿದ ಬುಲೆಟ್ನಿಂದ ಆದಿತ್ಯ ಸಚ್ದೇವ್ ಸಾವು ಸಂಭವಿಸಿದೆ ಎಂಬುದು ಬಹಿರಂಗಗೊಂಡಿದ್ದು, ತಾನೇ ಗುಂಡು ಹಾರಿಸಿ ಸಚ್ದೇವ್ ಕೊಲೆ ಮಾಡಿರುವುದಾಗಿ ರಾಕಿ ಯಾದವ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು.
ಈ ಮೊದಲು ನಾನು ಯಾವುದೇ ರೀತಿಯ ಗುಂಡಿನ ದಾಳಿ ನಡೆಸಿಲ್ಲ ಎಂದು ಹೇಳುತ್ತಿದ್ದ ರಾಕಿ ಈದಿನ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿದವು.
ಗಯಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಈ ಘಟನೆಯಲ್ಲಿ ಹಲವರ ಕೈವಾಡವಿದೆ. ತನಿಖೆಯ ನಂತರ ಇದು ತಿಳಿಯಲಿದ್ದು, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಪ್ರಕರಣದಲ್ಲಿ ತಂದೆ ಬಿಂದಿಯಾದವ್ ಅವರನ್ನು ಪುತ್ರನಿಗೆ ಕುಮ್ಮಕ್ಕು ನೀಡಿರುವ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ತಾಯಿ ಮನೋರಮಾ ದೇವಿ ಮನೆಯಲ್ಲಿ ಅಕ್ರಮ ಮದ್ಯ ತಯಾರಿಸಿದ ಆರೋಪದ ಮೇಲೆ ತಲೆ ಮರೆಸಿಕೊಂಡಿದ್ದರು.
ವ್ಯಾಪಾರಿಯೊಬ್ಬರ ಪುತ್ರ ಆದಿತ್ಯ ಸಚ್ದೇವ್ ಹಾಗೂ ಸ್ನೆಹಿತರನ್ನು ಒಳಗೊಂಡ ಸ್ವಿಪ್ಟ್ ಕಾರು ಶಾಸಕಿಯ ಪುತ್ರ ರಾಕಿಯ ಎಸ್ಯುವಿ ಕಾರನ್ನು ಓವರ್ ಟೇಕ್ ಮಾಡಿದ ಹಿನ್ನೆಲೆಯಲ್ಲಿ ಉಭಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಆವೇಶಕ್ಕೆ ಒಳಗಾದ ರಾಕಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಆದಿತ್ಯಾಗೆ ಗುಂಡಿಟ್ಟು ಕೊಲೆಗೈದಿರುವುದಾಗಿ ಆಪಾದಿಸಲಾಗಿತ್ತು.
2016: ಕೊಯಮತ್ತೂರು (ತಮಿಳುನಾಡು): ತಮಿಳುನಾಡಿನ ತಿರುಪೂರ್ ಜಿಲ್ಲೆಯಲ್ಲಿ ತಪಾಸಣೆ ನಿರತರಾಗಿದ್ದ ಚುನಾವಣಾ ಅಧಿಕಾರಿಗಳು ಈದಿನ ಅಟ್ಟಿಸಿಕೊಂಡು ಹೋಗಿ ಮೂರು ವಾಹನಗಳಲ್ಲಿ ಇದ್ದ 570 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡರು.
ವಾಹನಗಳಲ್ಲಿ ಇದ್ದವರು ಹಣವನ್ನು ಬ್ಯಾಂಕಿನಿಂದ ಅದೇ ಬ್ಯಾಂಕಿನ ಬೇರೆ ಶಾಖೆಗೆ ವರ್ಗಾವಣೆ ಮಾಡಲಾಗುತ್ತಿತ್ತು ಎಂದು ಪ್ರತಿಪಾದಿಸಿದರು.
ಕೊಯಮತ್ತೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿಶಾಖಪಟ್ಟಣ ಶಾಖೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು ಎಂದು ವಾಹನಗಳಲ್ಲಿ ಇದ್ದ ಸಿಬ್ಬಂದಿ ತಮಗೆ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದರು.
ಆದರೆ ಅವರ ಬಳಿ ಹಣ ವರ್ಗಾವಣೆಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳು ಇರಲಿಲ್ಲ. ಅವರ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ತಿಳಿಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಚುನಾವಣಾ ಇಲಾಖೆಯ ಸಂಚಾರಿ ದಳವು ಅರೆಸೇನಾ ಪಡೆ ಸಿಬ್ಬಂದಿಯೊಂದಿಗೆ ಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ ಈ ಹಣವನ್ನು ವಶ ಪಡಿಸಿಕೊಂಡಿತು.
ಪೆರುಮನಲ್ಲೂರ್ ಬೈಪಾಸ್ನಲ್ಲಿ ಮಾಮೂಲಿ ತಪಾಸಣೆ ನಡೆಸುತ್ತಿದ್ದಾಗ ಮೂರು ವಾಹನಗಳು ಪರಾರಿಯಾಗಲು ಯತ್ನಿಸಿದವು. ತತ್ ಕ್ಷಣವೇ ಅಟ್ಟಿಸಿಕೊಂಡು ಹೋದ ಸಂಚಾರಿ ದಳದ ಸಿಬ್ಬಂದಿ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿ ಇದ್ದ ಹಣವನ್ನು ಪತ್ತೆ ಹಚ್ಚಿದರು ಎಂದು ಪೊಲೀಸರು ತಿಳಿಸಿದರು.
2016: ಢಾಕಾ: ಅಪರಿಚಿತ ದುಷ್ಕರ್ವಿುಗಳು 70ರ ಹರೆಯದ ಬೌದ್ಧ ಭಿಕ್ಷು ಒಬ್ಬರನ್ನು ದಕ್ಷಿಣ ಬಾಂಗ್ಲಾದೇಶದ ಬೌದ್ಧ ವಿಹಾರದಲ್ಲಿ ಕೊಲೆಗೈದಿರುವುದು
ಈದಿನ ಬೆಳಕಿಗೆ ಬಂತು. ವಾರದ ಹಿಂದೆ ಮುಸ್ಲಿಮ್ ಸೂಫಿ ಸಂತನನ್ನು ಕೊಲೆಗೈದ ಮಾದರಿಯಲ್ಲೇ ಈ ದಾಳಿಯೂ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದವು.
ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದ ಬಂದರ್ಬನ್ನ ನೈಖ್ಯೋಂಗ್ಚಾರಿ ಉಪಜಿಲ್ಲೆಯ ಬೌದ್ಧ ವಿಹಾರದ ಮುಖ್ಯಸ್ಥ ಮೌಂಗ್ ಶೊಯಿ ವೂ ಅವರ ಶವ ಬೌದ್ಧ ವಿಹಾರದ ಒಳಗೆ ಈದಿನ ಬೆಳಗ್ಗೆ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಬೌದ್ಧ ಭಿಕ್ಷುವನ್ನು ಕಳೆದ ರಾತ್ರಿ ಕತ್ತು ಸೀಳಿ ಕೊಲೆಗೈಯಲಾಗಿದ್ದು, ಅವರು ಸತ್ತು ಬಿದ್ದಿರುವುದನ್ನು ಕೆಲಸಗಾರನೊಬ್ಬ ಗಮನಿಸಿ ಪೊಲೀಸರಿಗೆ ತಿಳಿಸಿದ ಎಂದು ಮೂಲಗಳು ಹೇಳಿದವು.
ಬಾಂಗ್ಲಾದೇಶದಲ್ಲಿ ಐಸಿಸ್ ಉಗ್ರಗಾಮಿಗಳು ಬುದ್ಧಿ ಜೀವಿಗಳು, ಬ್ಲಾಗರ್ಗಳು ಮತ್ತು ಅಲ್ಪಸಂಖ್ಯಾತರ ಮೇಲೆ ಹಲವಾರು ದಾಳಿಗಳನ್ನು ನಡೆಸಿದ್ದು ಅಂತಹ ದಾಳಿಗಳಲ್ಲಿ ಇದು ಇತ್ತೀಚಿನದು. ವಾರದ ಹಿಂದೆ 65ರ ಹರೆಯ ಮುಸ್ಲಿಮ್ ಸೂಫಿ ಸಂತನನ್ನು ಬಾಂಗ್ಲಾದೇಶದ ರಾಜ್ಶಾಹಿನಗರದಲ್ಲಿ ಮಚ್ಚು ಹಿಡಿದ ಅಪರಿಚಿತ ದಾಳಿಕೋರರು ಕಗ್ಗೊಲೆಗೈದಿದ್ದರು. ಅದಕ್ಕೂ ಮುನ್ನ ಒಬ್ಬ ಉದಾರವಾದಿ ಪ್ರೊಫೆಸರ್, ಮ್ಯಾಗಸಿನ್ ಸಂಪಾದಕ ಮತ್ತು ಹಿಂದೂ ಟೈಲರ್ ಹತ್ಯೆ ನಡೆದಿತ್ತು. ಬೌದ್ಧ ಭಿಕ್ಷುವಿನ ಹತ್ಯೆಯ ಹೊಣೆಯನ್ನು ಈವರೆಗೆ ಯಾರೂ ಪ್ರತಿಪಾದಿಸಿಲ್ಲ.
2016: ನವದೆಹಲಿ: ಮುಸ್ಲಿಮರಿಗೆ ತಾನು ನೌಕರಿ ನಿರಾಕರಿಸಿವುದಾಗಿ ಆಯುಷ್ ಸಚಿವಾಲಯು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ನೀಡಿದ ಉತ್ತರದಲ್ಲಿ ತಿಳಿಸಿರುವುದಾಗಿ ಪ್ರತಿಪಾದಿಸಿ ವರದಿ ಬರೆದ ಪುಷ್ಪ ಶರ್ಮಾ ಎಂಬ ಪತ್ರಕರ್ತರೊಬ್ಬರನ್ನು ನಗರ ಪೊಲೀಸರು ಫೋರ್ಜರಿ ಆರೋಪದಲ್ಲಿ ಬಂಧಿಸಿದರು.
ಆರ್ಟಿಐ ಉತ್ತರವನ್ನೇ ‘ಸೃಷ್ಟಿಸಿದ್ದಾರೆ’ ಎಂಬ ಆರೋಪದಲ್ಲಿ ಪತ್ರಕರ್ತರನ್ನು ಬಂಧಿಸಲಾಯಿತು. ಆದರೆ ಪತ್ರಕರ್ತ ತನಗೆ ಆರ್ಟಿಐ ಉತ್ತರ ಆಯುಷ್ ಸಚಿವಾಲಯದಿಂದಲೇ ಬಂದಿದೆ ಎಂದು ಪ್ರತಿಪಾದಿಸಿದರು.
ಆರ್ಟಿಐ ಉತ್ತರದಲ್ಲಿ ಸಚಿವಾಲಯವು ಕೆಲಸಕ್ಕೆ ಮುಸ್ಲಿಮರನ್ನು ತಾನು ನೇಮಿಸಿಕೊಳ್ಳುವುದಿಲ್ಲ ಎಂದು ತಿಳಿಸಿದೆ ಎಂದು ಹೇಳಲಾಗಿತ್ತು. ಮಿಲ್ಲಿ ಗಜೆಟ್ ಪತ್ರಿಕೆಯ ಮಾರ್ಚ್ 16-31ರ ಸಂಚಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.
ವರದಿ ಪ್ರಕಟವಾದ ಬಳಿಕ ಕೋಟ್ಲಾ ಮುಬಾರಕ್ಪುರ ಪೊಲೀಸರು ಕೆಲವು ದಿನಗಳವರೆಗೆ ಶರ್ಮಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಆರ್ಟಿಐ ಉತ್ತರಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ದೆಹಲಿ ಪೊಲೀಸರ ಅನುಮತಿ ಇಲ್ಲದೆ ರಾಷ್ಟ್ರ ಅಥವಾ ದೆಹಲಿ ಬಿಟ್ಟು ಹೋಗಬಾರದು ಎಂಬ ಷರತ್ತಿನಲ್ಲಿ ಬಿಡುಗಡೆ ಮಾಡಲಾಗಿತ್ತು. ನಿಯತಕಾಲಿಕದ ಸಂಪಾದಕ ಡಾ. ಜಫರುಲ್-ಇಸ್ಲಾಂ ಖಾನ್ ಅವರನ್ನೂ ಪೊಲೀಸರು ಏಪ್ರಿಲ್ 11ರಂದು ಸಾಕ್ಷಿಯಾಗಿ ಪ್ರಶ್ನಿಸಿದ್ದರು. ಯೋಗ ಶಿಕ್ಷಕರ ನೇಮಕಾತಿ ಸಂಬಂಧಿತ ‘ನಕಲಿ’ ಆರ್ಟಿಐ ಉತ್ತರದ ಬಗ್ಗೆ ತನಿಖೆ ನಡೆಸುವಂತೆ ಆಯುಷ್ ಸಚಿವಾಲಯವು ದಾಖಲಿಸಿದ ದೂರಿನ ಅನ್ವಯ ಪೊಲೀಸರು ಈದಿನ ಪುಷ್ಪ ಶರ್ಮಾ ಅವರನ್ನು ಬಂಧಿಸಿದರು
ಎನ್ನಲಾಯಿತು.
2016: ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬರ ಮನೆಯಲ್ಲಿ ಕಂಡು ಬಂದ ಸ್ಫೋಟಕಗಳನ್ನು ಮೊದಲು ತನಿಖೆ ನಡೆಸಿದ ಮುಂಬೈ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಯೊಬ್ಬರು ‘ಇಟ್ಟಿದ್ದಿರಬಹುದು’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೇಳಿತು.
ಪೊಲೀಸ್ ತನಿಖೆಗೆ ಭಾರಿ ಹೊಡೆತ ನೀಡಬಹುದಾದಂತಹ ಪ್ರತಿಪಾದನೆಯನ್ನು ಎನ್ಐಎ ತನ್ನ ಹೊಸ ದೋಷಾರೋಪ ಪಟ್ಟಿಯಲ್ಲಿ (ಚಾಜ್ಷೀಟ್) ನಮೂದಿಸಿದೆ. ಇಬ್ಬರು ಸೇನಾ ಅಧಿಕಾರಿಗಳು ಮುಖ್ಯ ಆರೋಪಿಗಳಲ್ಲಿ ಒಬ್ಬರಾದ ಸೇನಾ ಗುಪ್ತಚರ ಅಧಿಕಾರಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ವಿರುದ್ಧ ನಡೆದ ಸೇನಾ ಕೋರ್ಟ್ ತನಿಖೆ ಕಾಲದಲ್ಲಿ ದಾಖಲಿಸಿದ ಹೇಳಿಕೆಗಳಿಂದ ಈ ಅಂಶ ಬೆಳಕಿಗೆ ಬಂದಿದೆ ಎಂದು ಎನ್ಐಎ ತಿಳಿಸಿತು.
ತನಿಖೆಗೆ ಒಳಪಟ್ಟಿದ್ದ ಉಭಯ ಅಧಿಕಾರಿಗಳೂ 2008ರ ನವೆಂಬರ್ 3ರಂದು ಎಟಿಎಸ್ನ ಎಪಿಐ ಬಾಗ್ಡೆ ಅವರು ಆರೋಪಿ ಸುಧಾಕರ ಚತುರ್ವೇದಿ ಮನೆಯಲ್ಲಿ ಚತುರ್ವೆದಿ ಇಲ್ಲದೇ ಇದ್ದ ವೇಳೆಯಲ್ಲಿ ಸಂಶಯಾಸ್ಪದವಾಗಿ ಇದ್ದುದು ತಮ್ಮ ಗಮನಕ್ಕೆ ಬಂದಿತ್ತು ಎಂದು ಹೇಳಿದ್ದಾರೆ. ಆರೋಪಿಯ ಗೈರುಹಾಜರಿಯಲ್ಲಿ ಬಾಗ್ಡೆ ಆರೋಪಿಯ ಮನೆಗೆ ಬಂದಿದ್ದುದು ಏಕೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ದೋಷಾರೋಪ ಪಟ್ಟಿ ಹೇಳಿದೆ. ತಾನು ಬಂದಿದ್ದ ಬಗ್ಗೆ ಯಾರಿಗೂ ಏನೂ ಹೇಳಬೇಡಿ ಎಂದು ಎಟಿಎಸ್ ಅಧಿಕಾರಿ ಸೇನಾ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಎಂದೂ ಎನ್ಐಎ ತಿಳಿಸಿದೆ. ಮೂರು ವಾರಗಳ ಬಳಿಕ 2008ರ ನವೆಂಬರ್ 25ರಂದು ಎಟಿಎಸ್ ಚತುರ್ವೆದಿ ಮನೆಯಲ್ಲಿ ಶೋಧ ನಡೆಸಿದ ಎಟಿಎಸ್ ಸಿಬ್ಬಂದಿ, ಆರ್ಡಿಎಕ್ಸ್ ಪೊಟ್ಟಣ ಸಂಗ್ರಹಿಸಿದರು. ಈ ಆರ್ಡಿಎಕ್ಸ್ ಸ್ಫೋಟ ಸ್ಥಳದಲ್ಲಿ ಲಭಿಸಿದ್ದ ಆರ್ಡಿಎಕ್ಸ್ ಜೊತೆಗೆ ತಾಳೆಯಾಯಿತು ಎಂದು ಎನ್ಐಎ ತಿಳಿಸಿತು.
2016: ಸ್ಯಾನ್ ಫ್ರಾನ್ಸಿಸ್ಕೊ (ಅಮೆರಿಕ): ಚೀನಾದ ಶ್ರೀಮಂತ ಹಾಗೂ ಬಲಾಢ್ಯ ವ್ಯಕ್ತಿಗಳ ವೈಯಕ್ತಿಕ ಮಾಹಿತಿಗಳೆಲ್ಲವೂ ಟ್ವಿಟರ್ ಖಾತೆಯೊಂದರಲ್ಲಿ ಬಹಿರಂಗಗೊಂಡಿದೆ ಎಂದು ಟೆಕ್ ಇನ್ ಏಷ್ಯಾ ವರದಿ ಮಾಡಿತು. ಶೆನ್ಫೆನ್ ಝೆಂಗ್
(@shenfenzheng) ಎಂಬ ಟ್ವಿಟರ್ ಖಾತೆಯಲ್ಲಿ ಚೀನಾದ ಶ್ರೀಮಂತರ ಹಾಗೂ ಬಲಾಢ್ಯ ವ್ಯಕ್ತಿಗಳ ವೈಯಕ್ತಿಕ ಮಾಹಿತಿಗಳು ಪ್ರಕಟಗೊಂಡಿವೆ. ಶೆನ್ಫೆನ್ ಝೆಂಗ್ ಅಂದರೆ ಚೀನೀ ಭಾಷೆಯಲ್ಲಿ ‘ವೈಯಕ್ತಿಕ ಗುರುತಿಸುವಿಕೆ’ ಎಂದು ಅರ್ಥ. ಈ ಮಾಹಿತಿಯಲ್ಲಿ ರಾಷ್ಟ್ರೀಯ ಗುರುತಿನ ಸಂಖ್ಯೆಗಳು, ಜನ್ಮದಿನಗಳು, ವಿಳಾಸಗಳು, ಶೈಕ್ಷಣಿಕ ಮಾಹಿತಿ, ವೈವಾಹಿಕ ಸ್ಥಿತಿಗತಿ ಸೇರಿದಂತೆ ತೀರಾ ವೈಯಕ್ತಿಕವಾದ ಮಾಹಿತಿಗಳು ಸೇರಿವೆ. ವೈಯಕ್ತಿಕ ಮಾಹಿತಿ ಸೋರಿಕೆ ದಾಳಿಗೆ ಚೀನಾದ ಇಬ್ಬರು ಅತ್ಯಂತ ಶ್ರೀಮಂತ ವ್ಯಾಪಾರೋದ್ಯಮಿಗಳಾದ ಅಲಿಬಾಬಾ ಸ್ಥಾಪಕ ಮತ್ತು ಅಧ್ಯಕ್ಷ ಜಾಕ್ ಮಾ ಮತ್ತು ವಾಂಗ್ ಜಿಯಾನ್ಲಿನ್, ರಿಯಲ್ ಎಸ್ಟೇಟ್ ಕಂಪೆನಿಯ ದಲಿಯನ್ ವಾನ್ ಗ್ರೂಪ್ ಬಲಿಯಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್
ವರದಿ ಮಾಡಿತು. ಜಿಯಾನ್ಲಿನ್ ಅವರ ಪತ್ನಿ ಮತ್ತು ಪುತ್ರನ ಗುರುತಿನ ಸಂಖ್ಯೆಗಳು ಕೂಡಾ ಬಹಿರಂಗಗೊಂಡಿವೆ. ಅತ್ಯಂತ ಅಚ್ಚರಿ ಎಂದರೆ ಚೀನಾದಲ್ಲಿ ಟ್ವಿಟರ್ನನ್ನು ನಿರ್ಬಂಧಿಸಿರುವ ಪ್ರದೇಶದಲ್ಲಿರುವ, ರಾಷ್ಟ್ರದ ‘ಗ್ರೇಟ್ ಫೈರ್ವಾಲ್’ ಶಿಲ್ಪಿ ಫಾಂಗ್ ಬಿನ್ಕ್ಷಿಂಗ್ ಅವರ ವೈಯಕ್ತಿಕ ಮಾಹಿತಿಯನ್ನು ಕೂಡಾ ಈ ಟ್ವಿಟರ್ ಖಾತೆ ಮುಟ್ಟದೆ ಬಿಟ್ಟಿಲ್ಲ. ‘ಚೀನಾದಲ್ಲಿ ವೈಯಕ್ತಿಕ ಮಾಹಿತಿಗೆ ಯಾವ ಬೆಲೆಯೂ ಇಲ್ಲ, ಕ್ಯಾಬೀಜ್ ಖರೀದಿಸುವಂತೆ ವೈಯಕ್ತಿಕ ಮಾಹಿತಿಗಳನ್ನೂ ಪಡೆದುಕೊಳ್ಳಬಹುದು’ ತಮ್ಮ ಹೆಸರು ಪರಿಚಯದ ಗುಟ್ಟು ಬಿಟ್ಟುಕೊಡದ ಟ್ವಿಟರ್ ಖಾತೆದಾರ ಮಾಹಿತಿ ಬಹಿರಂಗ ಪಡಿಸುತ್ತಾ ಲೇವಡಿ ಮಾಡಿದ್ದಾನೆ!
2009: ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು
ಕಡಿಮೆ ಮಾಡುವುದಕ್ಕೆ ಶ್ರಮಿಸಿದ ಕನ್ನಡಿಗ ವನ್ಯಜೀವಿ ತಜ್ಞ ಮೈಸೂರಿನ ನಿಸರ್ಗ ಸಂರಕ್ಷಣಾ ಪ್ರತಿಷ್ಠಾನದ ನಿರ್ದೇಶಕ ಡಾ. ಎಂ. ಡಿ. ಮಧುಸೂಧನ್ ಅವರಿಗೆ 'ಹಸಿರು ಆಸ್ಕರ್' ಎಂದೇ ಖ್ಯಾತಿ ಪಡೆದಿರುವ ಪ್ರತಿಷ್ಠಿತ ವೈಟ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಲಂಡನ್ ರಾಯಲ್ ಜಿಯಾಗ್ರಫಿಕಲ್ ಸೊಸೈಟಿಯಲ್ಲಿ ನಡೆದ ಸಮಾರಂಭದಲ್ಲಿ ಯುವರಾಣಿ ಅನ್ನೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 30 ಸಾವಿರ ಪೌಂಡ್ ನಗದು ಮತ್ತು ಟ್ರೋಫಿಯನ್ನು ಒಳಗೊಂಡಿದೆ. ಮಧುಸೂಧನ್ ಅವರ ಜತೆ ಭಾರತದ ಇನ್ನಿಬ್ಬರು ಪರಿಸರ ಸಂರಕ್ಷರಾದ ಸುದಿಪ್ತೊ ಚಟರ್ಜಿ ಮತ್ತು ಸುಪ್ರಜಾ ಧರಿಣಿ ಅವರು 'ಸಹ ಪ್ರಶಸ್ತಿ'ಯನ್ನು ಪಡೆದುಕೊಂಡರು. ಪೂರ್ವ ಹಿಮಾಲಯದಲ್ಲಿ ಕಂಡುಬರುವ ದೊಡ್ಡದಾದ ಗುಲ್ಮ ಹೂವನ್ನು ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ರೂಪಿಸಿದ ಕ್ರಿಯಾ ಯೋಜನೆಗೆ ಸುದಿಪ್ತೊ ಚಟರ್ಜಿ ಅವರು ಪ್ರಶಸ್ತಿ ಪಡೆದರು. ತಮಿಳುನಾಡಿನ ಕಂಚಿಪುರಂನ ಕಡಲಾಮೆ ಮತ್ತು ಡಾಲ್ಫಿನ್ ಮೀನುಗಳ ಸಂರಕ್ಷಣೆಗೆ ಸಾಮುದಾಯಿಕ ಕ್ರಮ ತೆಗೆದುಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ ಸುಪ್ರಜಾ ಧರಿಣಿ ಅವರು 'ಸಹ ಪ್ರಶಸ್ತಿ'ಗೆ ಭಾಜನರಾದರು. ಮೈಸೂರಿನ ಯುವರಾಜ ಕಾಲೇಜಿನ ವಿಜ್ಞಾನ ಪದವೀಧರರಾದ ಮಧುಸೂಧನ್ ನಂತರ ಡೆಹ್ರಾಡೂನಿನ ಭಾರತೀಯ ವನ್ಯಜೀವಿ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪಡೆದವರು. ಕಾಡು ಪ್ರಾಣಿಗಳು ಮತ್ತು ಸ್ಥಳೀಯರ ನಡುವಿನ ಸಂಘರ್ಷ ತಪ್ಪಿಸಲು ಮಧುಸೂಧನ್ ಮತ್ತು ಅವರ ತಂಡ ಬಂಡೀಪುರ ಹುಲಿ ಸಂರಕ್ಷಿತ ಕಾಡಿನ ಸುತ್ತಮುತ್ತ ಶ್ರಮಿಸಿದೆ. ಕಾಡಂಚಿನ ರೈತರ ಜತೆ ಸೇರಿಕೊಂಡು ಸಂಘರ್ಷ ಶಮನ ಯೋಜನೆಯನ್ನು ಜಾರಿಗೊಳಿಸಿದೆ. ಮಧುಸೂಧನ್ ನೇತೃತ್ವದ ತಂಡವು ಬೆಳೆಗಳ ರಕ್ಷಣೆಗಾಗಿ ಸೌರ ಶಕ್ತಿ ಬೇಲಿಯನ್ನು ಸಂಶೋಧನೆ ಮಾಡಿ ಅಳವಡಿಸಿದೆ. ಈ ಬೇಲಿಯನ್ನು ಅಳವಡಿಸುವ ಮೊದಲು ಆನೆ ಹಾವಳಿಯಿಂದಾಗಿ ರೈತರು ತಮ್ಮ ಫಸಲಿನ ನಾಲ್ಕನೇ ಒಂದರಷ್ಟು ಭಾಗವನ್ನು ಕಳೆದುಕೊಳ್ಳುತ್ತಿದ್ದರು. ಮಧುಸೂದನ್ ಪ್ರಯತ್ನದ ಬಳಿಕ ಬೆಳೆನಾಶ ತಪ್ಪಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವಿಷಯವನ್ನು ತಿಳಿಸಿದ ಮಧುಸೂಧನ್ ಅವರು, ಕಾಡಾನೆ ಮತ್ತು ಇತರ ಕಾಡು ಪ್ರಾಣಿಗಳ ಹಾವಳಿಯಿಂದ ವೃದ್ಧ ದಂಪತಿ ಸಂಪೂರ್ಣ ಬೆಳೆಯನ್ನು ಕಳೆದುಕೊಂಡು ಕಂಗಾಲಾಗಿ ಕುಳಿತಿದ್ದ ದೃಶ್ಯವೇ ತಮಗೆ ಸೌರ ಶಕ್ತಿ ಬೇಲಿಯನ್ನು ಸಂಶೋಧಿಸಲು ಪ್ರೇರಣೆಯಾಯಿತು ಎಂದು ವಿವರಿಸಿದರು.
2009: ಬಿಜೆಪಿ ನಾಯಕ ವರುಣ್ ಗಾಂಧಿ ಅವರ ವಿರುದ್ಧ ಬಳಸಲಾಗಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್‌ಎಸ್‌ಎ) ಸುಪ್ರೀಂಕೋರ್ಟ್ ರದ್ದು ಪಡಿಸಿತು. ಆದರೆ, ವರುಣ್ ಕೇಳಿಕೊಂಡಿದ್ದ ಅಕ್ರಮ ಬಂಧನಕ್ಕೆ ಪರಿಹಾರ ರೂಪದಲ್ಲಿ ಉತ್ತರ ಪ್ರದೇಶ ಸರ್ಕಾರ ರೂ 10 ಲಕ್ಷ ನೀಡಬೇಕೆಂಬ ಬೇಡಿಕೆಯನ್ನು ಕೋರ್ಟ್ ತಳ್ಳಿ ಹಾಕಿತು. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ವರುಣ್ ವಿರುದ್ಧದ 'ಎನ್‌ಎಸ್‌ಎ'ಯನ್ನು ವಾಪಸ್ ತೆಗೆದುಕೊಂಡಿತು.
2009: ಲೋಕಾಯುಕ್ತ ದಾಳಿಗೆ ತುತ್ತಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ ಎಂ. ನಿಂಬಾಳ್ಕರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಭಯೋತ್ಪಾದನೆ ನಿಗ್ರಹ ದಳದ ಎಸ್ಪಿ ಹೇಮಂತ ನಿಂಬಾಳ್ಕರ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
2009: ಆಸ್ಕರ್ ಪ್ರಶಸ್ತಿ ಪಡೆದ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದಲ್ಲಿ ಅಭಿನಯಿಸಿದ ಸುಮಾರು 20 ಮಕ್ಕಳು ಬೀದಿ ಪಾಲಾದರು. ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಕಾರಣ ನೀಡಿ ಈ ಮಕ್ಕಳ ಪಾಲಕರು ವಾಸಿಸುತ್ತಿದ ಕೊಳೆಗೇರಿಯಲ್ಲಿನ 50 ಗುಡಿಸಲುಗಳನ್ನು ಮುಂಬೈ ಮಹಾನಗರ ಪಾಲಿಕೆ ನೆಲಸಮಗೊಳಿಸಿದ್ದರಿಂದ ಈ ಪರಿಸ್ಥಿತಿ ಉಂಟಾಯಿತು. ಈದಿನ ಬೆಳಿಗ್ಗೆ ಪಶ್ಚಿಮ ಬಾಂದ್ರಾದ ಗರೀಬ್‌ನಗರದ ಕೊಳೆಗೇರಿಗೆ ಆಗಮಿಸಿದ ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಗುಡಿಸಲುಗಳನ್ನು ಖಾಲಿ ಮಾಡುವಂತೆ ಆದೇಶಿಸಿದರು. 'ಈಗ ಇದ್ದಕ್ಕಿದ್ದಂತೆ ಗುಡಿಸಲುಗಳನ್ನು ಖಾಲಿ ಮಾಡಿ ಹೋಗಿ ಎಂದರೆ ನಾವು ಎಲ್ಲಿಗೆ ಹೋಗಬೇಕು. ಅಡುಗೆ ಮಾಡಿಕೊಳ್ಳಲೂ ನಮಗೆ ಆಗಿಲ್ಲ' ಎಂದು ಬೀದಿಯಲ್ಲಿ ಕುಳಿತಿದ್ದ 'ಸ್ಲಮ್' ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಅಜರುದ್ದೀನ್ ಇಸ್ಮಾಯಿಲ್ ಅಳಲು ತೋಡಿಕೊಂಡ.
2008: ಕನ್ನಡದಲ್ಲೇ ಅನಿಸಿಕೆ, ಭಾವನೆಗಳನ್ನು ಹಂಚಿಕೊಳ್ಳಲು ಬಯಸುವ ಮತ್ತು ಇಂಗ್ಲಿಷಿನಲ್ಲಿ ಬರೆಯಲು ಹಿಂಜರಿಯುವ ಕನ್ನಡಿಗರಿಗೆ ಸಂತಸಪಡಿಸಲೆಂದೇ ಟಕಾಯನ್ ಟೆಕ್ನಲಾಜಿಸ್ ಸಂಸ್ಥೆಯು `ಕ್ವಿಲ್ಪ್ಯಾಡ್' ಎಂಬ ನೂತನ ಸಾಫ್ಟ್ ವೇರ್ ಮತ್ತು ವೆಬ್ಸೈಟ್ ರೂಪಿಸಿದ್ದನ್ನು ಬಹಿರಂಗಪಡಿಸಿತು. `ಕ್ವಿಲ್ ಪ್ಯಾಡ್'ನಿಂದ ಕನ್ನಡದಲ್ಲಿ ಟೈಪ್ ಮಾಡಬಹುದು, ಬರಹವನ್ನು ಇ-ಮೇಲ್ ಮೂಲಕ ಕಳುಹಿಸಬಹುದು. ಕಂಪ್ಯೂಟರ್ ಕೀಬೋರ್ಡಿನ `ಕಂಟ್ರೋಲ್-ಶಿಫ್ಟ್' ಕೀಗಳನ್ನು ಬಳಸಿ ಕನ್ನಡದಲ್ಲಿ ಟೈಪ್ ಮಾಡುವ ಹರಸಾಹಸ ಸಹ ಪಡಬೇಕಿಲ್ಲ. ಬರೆಯಬೇಕಾದದ್ದನ್ನು ಕೀಬೋರ್ಡಿನಲ್ಲಿ ಇಂಗ್ಲಿಷ್ ಮಾದರಿಯಲ್ಲಿ ಟೈಪ್ ಮಾಡುತ್ತ ಮುಂದುವರೆದರೆ ಸಾಕು, ಕಂಪ್ಯೂಟರ್ ಸ್ಕ್ರೀನ್ ಮೇಲೆ ಕನ್ನಡ ಪದಗಳು ಮೂಡುತ್ತವೆ. ಸಣ್ಣಪುಟ್ಟ ತಪ್ಪು ಮೂಡಿದರೂ ಕಂಪ್ಯೂಟರ್ ತನ್ನಿಂದ ತಾನೇ ಸರಿಪಡಿಸಿಕೊಳ್ಳುತ್ತದೆ ಅಥವಾ ಬರಹಗಾರರೇ ತಪ್ಪುಗಳನ್ನು ಸರಿಪಡಿಸಬಹುದು. ಕನ್ನಡದಲ್ಲಿ ಇ-ಮೇಲ್ ಮಾಡಲು ಬಯಸುವವರು www.quillpad.com ವೆಬ್ಸೈಟಿಗೆ ಭೇಟಿ ನೀಡಿದರೆ ಸಾಕು, ಅಲ್ಲಿ ಕನ್ನಡದಲ್ಲಿ ಟೈಪ್ ಮಾಡಬಹುದು. ಸರಳವಾದ ರೀತಿಯಲ್ಲಿ ಕನ್ನಡ ಪದಗಳು ಕಂಪ್ಯೂಟರ್ ಸ್ಕ್ರೀನ್ ಮೇಲೆ ಮೂಡತೊಡಗುತ್ತದೆ.
2008: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ವಿಚಕ್ಷಣಾ ಅಧಿಕಾರಿಯೊಬ್ಬರ ಸಂಬಂಧಿಗೆ `ಸಹಾಯ' ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾದ ತಮಿಳುನಾಡಿನ ಸಮಾಜ ಕಲ್ಯಾಣ ಇಲಾಖೆ ಸಚಿವೆ ಪೂಂಗೊಥಾಯ್ ಅಲಾಡಿ ಅರುಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ವಿಚಕ್ಷಣಾ ದಳ ಮತ್ತು ಭ್ರಷ್ಟಾಚಾರ ನಿಗ್ರಹದ ದಳ ನಿರ್ದೇಶಕ ಎಸ್. ಕೆ. ಉಪಾಧ್ಯಾಯ ಅವರ ಸಂಬಂಧಿಯೊಬ್ಬರಿಗೆ ಸಚಿವೆ ಪೂಂಗೊಥಾಯ್ `ಸಹಾಯ' ಮಾಡುವ ಸಂಬಂಧ ನಡೆಸಿದ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿ ಧ್ವನಿಮುದ್ರಿಸಲಾಗಿದ್ದ `ಸಿಡಿ'ಯನ್ನು ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿ ಬಿಡುಗಡೆ ಮಾಡಿದ್ದರು. `ದೂರವಾಣಿಯಲ್ಲಿ ಮಾತನಾಡಿರುವ ಧ್ವನಿ ನನ್ನದೇ. ಆದರೆ ನಾನು ಈ ಪ್ರಕರಣ ಯಾವ ಹಂತದವರೆಗೆ ಮುಂದುವರಿದಿದೆ ಎಂದು ವಿಚಾರಿಸಲು ಕರೆ ಮಾಡಿದ್ದಾಗಿ' ಪೂಂಗೋಥಾಯ್ ಮಾಧ್ಯಮದವರ ಮುಂದೆ ಹೇಳಿದ್ದರು. ಪೂಂಗೋಥಾಯ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಸ್ವಾಮಿ ಆಗ್ರಹಿಸಿದ್ದರು.
2008: ವಿಶ್ವದ ಅಗ್ರ ರ್ಯಾಂಕಿಂಗಿನ ಟೆನಿಸ್ ಆಟಗಾರ್ತಿ ಜಸ್ಟಿನ್ ಹೆನಿನ್ ಅವರು ವೃತ್ತಿಪರ ಟೆನಿಸ್ಸಿಗೆ ವಿದಾಯ ಹೇಳಿದರು. ಈದಿನ ಬ್ರಸ್ಸೆಲ್ಸಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ನಿರ್ಧಾರ ಪ್ರಕಟಿಸಿದರು.
2008: ಹರಭಜನ್ ಸಿಂಗ್ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ `ದಂಡಾಸ್ತ್ರ'ವನ್ನು ಪ್ರಯೋಗಿಸಿತು. ಐದು ಏಕದಿನ ಪಂದ್ಯಗಳ ನಿಷೇಧ ಹೇರಿದ್ದಲ್ಲದೆ ತಪ್ಪು ಮರುಕಳಿಸಿದರೆ ಆಜೀವ ನಿಷೇಧ ಶಿಕ್ಷೆ ವಿಧಿಸುವ ಬೆದರಿಕೆಯನ್ನೂ ಹಾಕಿತು.
2008: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಕೆನಡಾದ ಒಂಟಾರಿಯೊದಲ್ಲಿರುವ ವಿಂಡ್ಸರ್ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದರು. ಚಿತ್ರರಂಗಕ್ಕೆ ಅಕ್ಷಯ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ವಿವಿ ಹೇಳಿತು.
2008: ವಿಶ್ವದ ನಂ.1 ಉಕ್ಕು ಉತ್ಪಾದನಾ ಕಂಪೆನಿ ಆರ್ಸೆಲರ್ ಮಿತ್ತಲ್ ಭಾರತದಲ್ಲಿನ ತನ್ನ ಕಾರ್ಯ ನಿರ್ವಹಣೆಗಾಗಿ ವಿಜಯ್ ಭಟ್ನಾಗರ್ ಅವರನ್ನು ನೂತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿತು.
2008: ರಾಜಧಾನಿ ದೆಹಲಿ ಸಹಿತ ಉತ್ತರ ಭಾರತದ ಹಲವು ಕಡೆಗಳಲ್ಲಿ ಗಾಳಿಯಿಂದ ಕೂಡಿದ ಮಳೆ ಸುರಿಯಿತು. ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿತ ಅನಾಹುತಗಳಿಗೆ ಸಿಕ್ಕಿ 40 ಮಂದಿ ಮೃತರಾದರು.
2007: ಸುಮಾರು 45 ವರ್ಷಗಳಿಂದ ಜಾರಿಯಲ್ಲಿರುವ ಮಹಿಳಾ ನೌಕರರ ರಾತ್ರಿ ಪಾಳಿ ನಿಷೇಧ ಕಾನೂನನ್ನು ರದ್ದು ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಮಹಿಳಾ ನೌಕರರಿಗೆ ರಾತ್ರಿ ಪಾಳಿ ನಿಷೇಧಿಸುವ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯನ್ನು (1961) ರದ್ದು ಪಡಿಸುವ ಸಲುವಾಗಿ ಶೀಘ್ರ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ತೀರ್ಮಾನಿಸಿತು.
2007: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಆಂಧ್ರಪ್ರದೇಶ ಮೂಲದ ಮುತ್ಯಾಲರಾಜ ರೇವು ಅವರು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ ಸಿ) ನಡೆಸಿದ 2006ರ ನಾಗರಿಕ ಸೇವಾ (ಮುಖ್ಯ) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು.
2007: ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸುವಂತೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶಿಫಾರಸು ಮಾಡಿದರು.
2007: ರಸ್ತೆ ಅಪಘಾತದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ 27 ಮಂದಿ ಸಜೀವವಾಗಿ ದಹನಗೊಂಡ ಘಟನೆ ಆನಂದ್ ಬಳಿ ಘಟಿಸಿತು. ವಡೋದರ ಜಿಲ್ಲೆಯ ಮೆಹಸಾನದಿಂದ ರಮೇಶರಕ್ಕೆ ಹೊರಟಿದ್ದ ಸಿಎನ್ಜಿ ಬಸ್ ಎಲ್ಪಿಜಿ ಟ್ಯಾಂಕರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರಂತ ಸಂಭವಿಸಿತು.
2007: ಆಂಧ್ರ ಪ್ರದೇಶದ ಅದಿಲಾಬಾದ್ ಜಿಲ್ಲೆಯ ನೆರೆದುಗುಂಡ ಬಳಿ ವ್ಯಾನ್ ಮತ್ತು ಟ್ರಕ್ ಪರಸ್ಪರ ಡಿಕ್ಕಿಯಾಗಿ ಕನಿಷ್ಠ 18 ಜನ ಮೃತರಾದರು.
2007: ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಅಮಾನತು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಫಲೆಕ್ ಶೇರ್ ಪೀಠಕ್ಕೆ ರಾಜೀನಾಮೆ ಸಲ್ಲಿಸಿದರು. ಆ ಬಳಿಕ ಮುಖ್ಯನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಅವರು 14 ಸದಸ್ಯರ ಪೂರ್ಣಪೀಠವನ್ನು ಮರುಸ್ಥಾಪಿಸಿದರು.
2006: ಖ್ಯಾತ ಪಿಟೀಲುವಾದಕ ಲಾಲ್ಗುಡಿ ಜಯರಾಮನ್ ಅವರಿಗೆ ಬೆಂಗಳೂರಿನ ಶ್ರೀರಾಮ ಸೇವಾ ಮಂಡಳಿಯು 2006ನೇ ಸಾಲಿನ `ಎಸ್.ವಿ. ನಾರಾಯಣಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಿತು. 68ನೇ ರಾಮನವಮಿ ಸಂಗೀತೋತ್ಸವದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು.
2006: ಅಸ್ಸಾಂ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ತರುಣ್ ಗೊಗೋಯ್ ಅವರು ಪ್ರಮಾಣವಚನ ಸ್ವೀಕರಿಸಿದರು. ಅಸ್ಸಾಂ ರಾಜ್ಯ ರಚನೆಯಾದ ಬಳಿಕ ಗೊಗೋಯ್ ಈಗ 16ನೇ ಅವಧಿಯ ಮುಖ್ಯಮಂತ್ರಿ.
2006: ಅಮೆರಿಕದ ಮಾಂಟ್ ಗೊಮೆರಿ ಕೌಂಟಿಯ ಮುಂಚೂಣಿಯ ಹೈಸ್ಕೂಲುಗಳಲ್ಲಿ ಒಂದಾದ ಮೇರಿಲ್ಯಾಂಡಿನ ಬೆಥೆಸ್ಡಾ ಚೆವಿ ಚೇಸ್ ಹೈಸ್ಕೂಲಿನ (ಬಿಸಿಸಿ) ವಿದ್ಯಾರ್ಥಿನಿ ಭಾರತೀಯ ಮೂಲದ ಶ್ರೀಮತಿ ಶ್ರೀಧರ್ ಅವರನ್ನು ಹೈಸ್ಕೂಲ್ ತಾನು ಪ್ರಕಟಿಸುತ್ತಿರುವ `ಟಟ್ಲೇರ್' ಪತ್ರಿಕೆಯ ಆನ್ ಲೈನ್ ಆವೃತ್ತಿಯ ಮುಖ್ಯ ಸಂಪಾದಕಿಯನ್ನಾಗಿ ನೇಮಕ ಮಾಡಿತು. ಈ ವಿದ್ಯಾರ್ಥಿನಿ ಈ ವೃತ್ತ ಪತ್ರಿಕೆಯ ಸಿಬ್ಬಂದಿ ಬರಹಗಾರ್ತಿ.
2006: ಕೇಂದ್ರ ದೆಹಲಿಯ ರಾಜಾಜಿ ಮಾರ್ಗದಲ್ಲಿ ನಿವೇಶನ ಮಂಜೂರಾದ ಎಂಟು ವರ್ಷಗಳ ಒಳಗಾಗಿ ನಿರ್ಮಾಣಗೊಂಡ ಡಿ ಆರ್ ಡಿ ಓ ಕೇಂದ್ರ ಕಚೇರಿಯನ್ನು ಪ್ರಧಾನಿ ಡಾ. ಮನಮೋಹನ್ ಸಿಂಗ್ ಉದ್ಘಾಟಿಸಿದರು. ಇದು ಕೆಂಪು ಮರಳುಕಲ್ಲಿನ ಸುಂದರ ಕಟ್ಟಡ. ರಾಷ್ಟ್ರಪತಿ ಭವನ, ನಾರ್ಥ್ ಬ್ಲಾಕ್, ಸೌತ್ ಬ್ಲಾಕ್ ಮತ್ತು ಸಂಸತ್ ಕಟ್ಟಡಗಳು ಇರುವ ಸುಂದರ ಪ್ರದೇಶಕ್ಕೆ ಈ ಡಿ ಆರ್ ಡಿ ಓ ಕೇಂದ್ರ ಕಚೇರಿ ಇನ್ನಷ್ಟು ಶೋಭೆ ನೀಡಿತು. ಎ.ಪಿ.ಜೆ. ಅಬ್ದುಲ್ ಕಲಾಂ, ವಿ.ಕೆ. ಅತ್ರೆ ಮತ್ತು ಎಂ. ನಟರಾಜನ್ ಈ ಮೂವರು ಕಳೆದ 8 ವರ್ಷಗಳಲ್ಲಿ ಈ ಯೋಜನೆಯ ಜಾರಿಗೆ ಶ್ರಮವಹಿಸಿದ ಪ್ರಮುಖರು.
1973: ಸಿ. ಹೊನ್ನಪ್ಪ ಹುಟ್ಟಿದ ದಿನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕರ್ನಾಟಕದ ಅತ್ಯುತ್ತಮ ಕಬಡ್ಡಿ ಆಟಗಾರರಲ್ಲಿ ಇವರು ಒಬ್ಬರು. ಏಕಲವ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.
1973: ತನ್ನ ಪ್ರಪ್ರಥಮ `ಸ್ಕೈಲ್ಯಾಬ್-1' ಮಾನವ ಸಹಿತ ಅಂತರಿಕ್ಷ ನಿಲ್ದಾಣವನ್ನು ಅಮೆರಿಕ ಅಂತರಿಕ್ಷಕ್ಕೆ ಉಡಾವಣೆ ಮಾಡಿತು. 34,981 ಪ್ರದಕ್ಷಿಣೆಗಳ ಬಳಿಕ 1979ರ ಜುಲೈ 11ರಂದು ಅದು ಉರಿದು ಸಮುದ್ರಕ್ಕೆ ಬಿತ್ತು.
1963: ಕಲಾವಿದೆ ರತ್ನ ಸುಪ್ರಿಯ ರಾಮಮೋಹನ್ ಜನನ.
1956: ಕಲಾವಿದ ಎಂ.ಜಿ. ವೆಂಕಟರಾಘವನ್ ಜನನ.
1955: ಕಲಾವಿದೆ ಎಂ.ಕೆ. ಜಯಶ್ರೀ ಜನನ.
1948: ಇಸ್ರೇಲಿನ ಪ್ರಥಮ ಪ್ರಧಾನಿ ಹಾಗೂ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಡೇವಿಡ್ ಬೆನ್-ಗ್ಯುರಿಯನ್ ಹೊಸ ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಘೋಷಣೆಯನ್ನು ಸಂಜೆ 4 ಗಂಟೆಗೆ ಮಾಡಿದರು.
1934: ಖ್ಯಾತ ಸಂಗೀತಗಾರ ಎಚ್. ಕೆ. ನಾರಾಯಣ ಅವರು ಸಂಗೀತಗಾರ ಕೇಶವಯ್ಯ- ಸಣ್ಣಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.
1924: ಕಲಾವಿದ ಮಾಧವರಾವ್ ಕೆ.ಬಿ. ಜನನ.
1923: ಭಾರತದ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಜನ್ಮ ದಿನ.
1796: ಎಡ್ವರ್ಡ್ ಜೆನ್ನರ್ ಹಾಲು ಮಾರಾಟಗಾರ್ತಿಯೊಬ್ಬಳ ಕೈಗೆ ತಗುಲಿದ್ದ ದನದ ಸಿಡುಬಿನ ಕೀವನ್ನು ತೆಗೆದು 8 ವರ್ಷದ ಆರೋಗ್ಯಶಾಲಿ ಬಾಲಕ ಜೇಮ್ಸ್ ಫಿಪ್ಸ್ ನ ಕೈಗೆ ಸೇರಿಸಿದ. ಫಿಪ್ಸ್ ನಲ್ಲಿ ಸಿಡುಬಿನ ದುಷ್ಪರಿಣಾಮ ಕಾಣಲಿಲ್ಲ. ಆರು ವಾರಗಳ ನಂತರ ಸಿಡುಬು ಪೀಡಿತ ವ್ಯಕ್ತಿಯೊಬ್ಬನ ಕೀವನ್ನು ಜೆನ್ನರ್ ಅದೇ ಬಾಲಕನಿಗೆ ಸೇರಿಸಿದ. ಬಾಲಕನಿಗೆ ಸಿಡುಬು ತಟ್ಟಲಿಲ್ಲ.. ಜೆನ್ನರನ ಈ ಪ್ರಯೋಗ `ಲಸಿಕೆಯ' (ವ್ಯಾಕ್ಸಿನೇಷನ್) ಹುಟ್ಟಿಗೆ ನಾಂದಿಯಾಯಿತು.
1643: ಫ್ರಾನ್ಸಿನ ದೊರೆ 8ನೇ ಲೂಯಿ ಮೃತನಾದ್ದದರಿಂದ ಆತನ 4 ವರ್ಷ ವಯಸ್ಸಿನ ಮಗ 9ನೇ ಲೂಯಿ ಫ್ರಾನ್ಸಿನ ರಾಜನಾದ. 9ನೇ ಲೂಯಿ 72 ವರ್ಷಗಳ ಕಾಲ ರಾಜ್ಯಭಾರ ನಡೆಸಿದ.
No comments:
Post a Comment