ಇಂದಿನ ಇತಿಹಾಸ History Today ಮೇ 07
2018: ನವದೆಹಲಿ: ಬಿಹಾರ ಮತ್ತು ಜಾರ್ಖಂಡ್
ರಾಜ್ಯಗಳ ಉನ್ನತ ನಕ್ಸಲೀಯ ನಾಯಕರು ತಮ್ಮ ಬಂಧುಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕೆ
ಪ್ರವೇಶ ಪಡೆಯುವ ಸಲುವಾಗಿ ಖಾಸಗಿ ಕಾಲೇಜುಗಳಿಗೆ ಲಕ್ಷಾಂತರ ರೂಪಾಯಿ ಪಾವತಿ ಮಾಡಿರುವುದು ಬೆಳಕಿಗೆ
ಬಂದಿದ್ದು ಇದರೊಂದಿಗೆ ಮಾವೋವಾದಿ ನಕ್ಸಲೀಯರ ’ಮುಖವಾಡ’ ಕಳಚಿದೆ ಎಂದು ಗೃಹ ವ್ಯವಹಾರಗಳ
ಸಚಿವಾಲಯದ ’ಕಡತಕೋಶ’ಗಳು (ಪೂರ್ವಾಪರ ದಾಖಲೆಗಳು) ಬಹಿರಂಗ ಪಡಿಸಿದವು.
ಕಳೆದ ಕೆಲವು ವರ್ಷಗಳಲ್ಲಿ ನಕ್ಸಲೀಯ ನಾಯಕರು ಸಂಗ್ರಹಿಸಿರುವರೆನ್ನಲಾದ ಹಣ, ಆಸ್ತಿಪಾಸ್ತಿಯ ವಿವರಗಳನ್ನು
ಗೃಹ ವ್ಯವಹಾರಗಳ ಸಚಿವಾಲಯವು ಸಿದ್ಧ ಪಡಿಸಿರುವ ಈ ಕಡತಕೋಶದಲ್ಲಿ ಸಂಗ್ರಹಿಸಲಾಗಿದ್ದು ಈ ಆಸ್ತಿಪಾಸ್ತಿಯ
ಅತಿದೊಡ್ಡ ಮೂಲ ’ಸುಲಿಗೆ’ ಎಂದು ಅಧಿಕಾರಿಗಳು ಹೇಳಿದರು. ಜಾರ್ಖಂಡ್
ವಿಶೇಷ ಪ್ರದೇಶ ಸಮಿತಿಯ (ಬಿಜೆಎಎಸ್) ಸದಸ್ಯ ಪ್ರದ್ಯುಮಾನ್ ಶರ್ಮ ತನ್ನ ಸೊಸೆಗೆ ವೈದ್ಯಕೀಯ ಕಾಲೇಜಿನಲ್ಲಿ
ಪ್ರವೇಶ ಪಡೆಯಲು ೨೨ ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿದ್ದರೆ, ಇನ್ನೊಬ್ಬ ಬಿಜೆಎಎಸ್ ಸದಸ್ತ ಸಂದೀಪ
ಯಾದವ್ ತನ್ನ ಮಗ ಮತ್ತು ಮಗಳಿಗೆ ಕ್ರಮವಾಗಿ ಖಾಸಗಿ ಎಂಜಿನಿಯರಿಂಗ್ ಕಾಲೇಜು ಮತ್ತು ಖಾಸಗಿ ಸಂಸ್ಥೆಯೊಂದರಲ್ಲಿ
ಪ್ರವೇಶ ಖಚಿತ ಪಡಿಸಿಕೊಂಡಿದ್ದಾನೆ. ಈ ಮಧ್ಯೆ ಹಿರಿಯ
ನಕ್ಸಲೀಯ ನಾಯಕ ಅರವಿಂದ ಯಾದವ್ ತನ್ನ ಸಹೋದರನಿಗೆ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಲು ಅನುಕೂಲ
ಮಾಡಿಕೊಡಲು ೧೨ ಲಕ್ಷ ರೂಪಾಯಿಗಳ ಶುಲ್ಕ ಪಾವತಿ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು. ಸಂದೀಪ ಯಾದವ್ ನೋಟು ಅಮಾನ್ಯೀಕರಣ ವೇಳೆಯಲ್ಲಿ ೧೫ ಲಕ್ಷ
ರೂಪಾಯಿಗಳನ್ನು ವಿನಿಮಯ ಮಾಡಿಕೊಂಡಿದ್ದ ಅಂಶವೂ ’ಕಡತ ಕೋಶ’ದಲ್ಲಿ ದಾಖಲಾಗಿದೆ.
ನಕ್ಸಲಿಯರು ಈ ಕೆಲಸಕ್ಕಾಗಿ ವರ್ತಕರನ್ನು ಬಳಸಿಕೊಂಡಿದ್ದು, ಹಣ ವರ್ಗಾವಣೆ ಬಗ್ಗೆ ಅವರಿಂದ ಪೊಲೀಸರಿಗೆ
ತನಿಖೆ ಕಾಲದಲ್ಲಿ ಮಾಹಿತಿ ಲಭಿಸಿದೆ ಎಂದು ಅಧಿಕಾರಿಗಳು ಹೇಳಿದರು. ಸಂದೀಪ ಯಾದವ್ ರಾಂಚಿಯಲ್ಲಿ ೩೦
ಲಕ್ಷ ರೂಪಾಯಿ ಮೌಲ್ಯದ ಫ್ಲಾಟ್ ಕೂಡಾ ಹೊಂದಿರುವುದಲ್ಲದೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ೫೦ ಲಕ್ಷ
ರೂಪಾಯಿ ಹೂಡಿಕೆ ಮಾಡಿದ್ದಾನೆ. ’ಜಾರಿ ನಿರ್ದೇಶನಾಲಯವು ೩೨ ಎಕರೆ ವಿಸ್ತಾರದ ಭೂಮಿ ಸೇರಿದಂತೆ ೧.೪೫
ಕೋಟಿ ರೂಪಾಯಿ ನಗದು ಮತ್ತು ಆಸ್ತಿಪಾಸ್ತಿ ಮತ್ತು ಆತನ ಹೆಸರಿನಲ್ಲಿ ಇರುವ ಹಲವಾರು ಕಟ್ಟಡಗಳನ್ನು
ವಶ ಪಡಿಸಿಕೊಂಡಿದೆ. ಎರಡು ಬಸ್ಸುಗಳು, ೧೧ ಕಾರುಗಳು/ ಜೀಪುಗಳು ಮತ್ತು ಎರಡು ಟ್ರಾಕ್ಟರುಗಳನ್ನೂ ಅಕ್ರಮ
ಚಟುವಟಿಕೆಗಳ (ತಡೆ) ಕಾಯ್ದೆ ಅಡಿಯಲ್ಲಿ ವಶ ಪಡಿಸಿಕೊಳ್ಳಲಾಗಿದೆ’ ಎಂದೂ ಗೃಹ ವ್ಯವಹಾರಗಳ
ಸಚಿವಾಲಯವು ಹೇಳಿತು. ೫೧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರದ್ಯುಮಾನ್ ಶರ್ಮ ೩೭ ಲಕ್ಷ ರೂಪಾಯಿ ಮೌಲ್ಯದ
ಭೂಮಿಯನ್ನೂ ಹೊಂದಿದ್ದಾನೆ. ಈ ಎಲ್ಲ ಆಸ್ತಿಗಳ ಮೂಲ
ಸುಲಿಗೆ ಎಂದು ಸಚಿವಾಲಯದ ಉನ್ನತ ಅಧಿಕಾರಿಗಳು ತಿಳಿಸಿದರು. ‘ಖಾಸಗಿ ಗುತ್ತಿಗೆದಾರರು, ಸಾಗಣೆದಾರರು ಮತ್ತು ಸಣ್ಣ ಮತ್ತು
ಮಧ್ಯಮ ಕೈಗಾರಿಕಾ ಮಾಲೀಕರ ಮೇಲೆ ವಿಧಿಸಲಾಗುವ ಶುಲ್ಕವೇ ಈ ಹಣದ ಮೂಲ. ಅಕ್ರಮ ಗಣಿಗಾರಿಕೆ ಮತ್ತು ಕಲ್ಲು
ಪುಡಿಮಾಡುವಿಕೆ ಮತ್ತು ತೆಂಡುಪಟ್ಟಾ ಸಂಗ್ರಹ ಮೂಲಕವೂ ನಕ್ಸಲೀಯರು ಹಣ ಸಂಗ್ರಹಿಸುತ್ತಾರೆ’ ಎಂದು ಅವರು ಹೇಳಿದರು. ಸಿಪಿಐ (ಮಾವೋವಾದಿ) ಸಂಘಟನೆಯು ಮಕ್ಕಳನ್ನು ತಮ್ಮ ದಳಗಳನ್ನು
ಸೇರುವಂತೆ ಬಲಾತ್ಕರಿಸುತ್ತದೆ ಮತ್ತು ರಸ್ತೆ, ನಿರ್ಮಾಣ, ಮೊಬೈಲ್ ಗೋಪುರ ಸ್ಥಾಪನೆ ಇತ್ಯಾದಿ ಯಾವುದೇ
ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಬಲವಾಗಿ ವಿರೋಧಿಸುತ್ತದೆ. ತಮ್ಮ ಮಕ್ಕಳು ಮತ್ತು ಕುಟುಂಬ ಸದಸ್ಯರಿಗೆ
ಉನ್ನತ ಶಿಕ್ಷಣ ಮತ್ತು ಇತರ ಸವಲತ್ತುಗಳನ್ನು ಒದಗಿಸುವ ಈ ಚಟುವಟಿಕೆಗಳಿಂದ ಅವರ ’ಮುಖವಾಡ’ ಹಾಗೂ ದ್ವಿಮುಖ ನೀತಿ ಬಯಲಾಗಿದೆ ಎಂದು ಗೃಹ
ವ್ಯವಹಾರಗಳ ಸಚಿವಾಲಯದ ಉನ್ನತ ಅಧಿಕಾರಿಗಳು ಹೇಳಿದರು.
ನಕ್ಸಲೀಯರ ನಿಧಿಯನ್ನು ’ಮಟ್ಟಹಾಕಲು’ ಕೇಂದ್ರೀಯ ಸಂಸ್ಥೆಗಳು,
ರಾಜ್ಯ ಪೊಲೀಸರು, ಡಿಆರ್ ಐ, ರಾಜ್ಯ ಗುಪ್ತಚರ ಪಡೆ, ಸಿಐಡಿ, ಸಿಬಿಡಿಟಿ, ಎನ್ ಐಎ ಮತ್ತು ಸಿಬಿಐ ಅಧಿಕಾರಿಗಳನ್ನು
ಒಳಗೊಂಡ ಗುಂಪುಗಳನ್ನು ರಚಿಸಲಾಗಿದೆ ಎಂದು ಗೃಹ ವ್ಯವಹಾರಗಳ ಇಲಾಖೆ ಹೇಳಿತು. ಜಾರಿ ನಿರ್ದೇಶನಾಲಯವು
ಸಂದೀಪ ಯಾದವ್, ಪ್ರದ್ಯುಮಾನ್ ಶರ್ಮ, ವಿನಯ್ ಯಾದವ್ ಮತ್ತು ಮುಸಾಫಿರ್ ಸಾಹ್ನಿ ವಿರುದ್ಧ ಹಣ ವರ್ಗಾವಣೆ
ತಡೆ ಕಾಯ್ದೆಯ ಅಡಿಯಲ್ಲಿ ೪ ಪ್ರಕರಣಗಳನ್ನು ದಾಖಲಿಸಿದೆ. ಸಂದೀಪ ಮತ್ತು ಪ್ರದ್ಯುಮಾನ್ ಅವರಿಗೆ ಸೇರಿದ
೧.೫ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
2018: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ
ಕಥುವಾದಲ್ಲಿ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ,
ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಕೊಲೆಗೈಯಲಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪಂಜಾಬಿನ
ಪಠಾಣ್ ಕೋಟ್ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ, ಪ್ರಕರಣದ ವಿಚಾರಣೆಯನ್ನು ದಿನನಿತ್ಯವೂ ಕೈಗೊಳ್ಳುವಂತೆ
ಆದೇಶಿಸಿತು. ಬಾಲಕಿಯ ತಂದೆ ಮಾಡಿದ್ದ್ದ ಮನವಿಯನ್ನು
ಪುರಸ್ಕರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್
ಮತ್ತು ಇಂದು ಮಲ್ಹೋತ್ರ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ವಿಶೇಷ ಪೀಠವು ಕಥುವಾ ಅತ್ಯಾಚಾರ ಮತ್ತು
ಕೊಲೆ ಪ್ರಕರಣವನ್ನು ಪಠಾಣ್ ಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸುವ ಆದೇಶ ಹೊರಡಿಸಿತು. ಬಾಲಕಿಯ ತಂದೆಯು ತನಗೆ, ತನ್ನ ಕುಟುಂಬದವರಿಗೆ ಮತ್ತು ತನ್ನ
ವಕೀಲರಾಗಿರುವ ದೀಪಿಕಾ ಸಿಂಗ್ ರಾಜಾವತ್ ಅವರಿಗೆ ಜೀವ ಬೆದರಿಕೆ ಇದೆ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿದರು. ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿಷ್ಪಕ್ಷಪಾತ,
ನಿರ್ಭೀತ ಮತ್ತು ಕಳಂಕರಹಿತ ವಿಚಾರಣೆಯನ್ನು ಕಾಣುವಲ್ಲಿ ಕಿಂಚಿತ್ ಅನುಮಾನ ಕಂಡು ಬಂದರೂ ತಾನು ಪ್ರಕರಣದ ವಿಚಾರಣೆಯನ್ನು ಬೇರೆ ಕೋರ್ಟಿಗೆ
ವರ್ಗಾಯಿಸುವುದಾಗಿ ಸುಪ್ರೀಂ ಕೋರ್ಟ್ ಈ ಮೊದಲೇ ಹೇಳಿತ್ತು. ಪಠಾಣ್
ಕೋಟ್ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಕ್ಯಾಮೆರಾಗಳ ಮುಂದೆ ನಡೆಸುವಂತೆಯೂ ಸುಪ್ರೀಂ ಕೋರ್ಟ್ ಆದೇಶ
ನೀಡಿತು. ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪಠಾಣ್
ಕೋಟ್ ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರನ್ನು ನೇಮಿಸಬೇಕು; ಸಂತ್ರಸ್ತ ಬಾಲಕಿಯ ಕುಟುಂಬದವರಿಗೆ,
ವಕೀಲರಿಗೆ ಮತ್ತು ಸಾಕ್ಷಿದಾರರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದೂ ಸುಪ್ರೀಂ ಕೋರ್ಟ್ ಆದೇಶಿಸಿತು.
‘ಸಂವಿಧಾನದ ೨೧ನೇ ಪರಿಚ್ಛೇದದ (ಮೂಲಭೂತ ಬದುಕಿನ ಹಕ್ಕು)
ಅಡಿಯಲ್ಲಿ ನ್ಯಾಯೋಚಿತ ವಿಚಾರಣೆಯು ಪರಮಪವಿತ್ರವಾದ ತತ್ವವಾಗಿದೆ’ ಎಂದು ಸುಪ್ರೀಂಕೋರ್ಟ್
ಅಭಿಪ್ರಾಯ ಪಟ್ಟಿತು. ನ್ಯಾಯೋಚಿತ
ವಿಚಾರಣೆ ಮತ್ತು ಭಯ ಪರಸ್ಪರ ವಿರುದ್ಧ ತತ್ವಗಳಾಗಿದ್ದು ಅವು ಒಟ್ಟಿಗೆ ಇರಲು ಅವಕಾಶ ನೀಡಲಾಗದು. ನ್ಯಾಯೋಚಿತ
ತನಿಖೆ ಅಂದರೆ ’ಸಂತ್ರಸ್ಥರು, ಆರೋಪಿಗಳು ಮತ್ತು ಸಾಕ್ಷಿಗಳೂ ಸುರಕ್ಷತೆಯ ಭಾವನೆ ಹೊಂದಿರುವಂತಹ ಪರಿಸರ
ಮತ್ತು ನ್ಯಾಯಾಲಯಕ್ಕೆ ಹಾಜರಾಗುವಲ್ಲಿ ಅವರು ಯಾವುದೇ ರೀತಿಯ ಭಯದಿಂದ ನರಳಬಾರದು’ ಎಂದು ಕೋರ್ಟ್ ಹೇಳಿತು. ನಿರ್ದೇಶನಗಳ ಸರಮಾಲೆಯನ್ನೇ
ಹೊರಡಿಸಿದ ಸುಪ್ರೀಂಕೋರ್ಟ್ ಸಾಕ್ಷಿಗಳು ಮತ್ತು ಆರೋಪಿಗಳಿಗೆ ತಾವು ಸುರಕ್ಷಿತರಾಗಿದ್ದೇವೆ ಎಂಬ ಭಾವನೆ
ಬರುವ ಸಲುವಾಗಿ ವಿಚಾರಣೆ ಕ್ಯಾಮರಾದ ಮುಂದೆ ನಡೆಯಬೇಕು ಎಂದು ಹೇಳಿತು. ಪಠಾಣ್
ಕೋಟ್ ಜಿಲ್ಲಾ ನ್ಯಾಯಾಧೀಶರಿಗೆ ಸ್ವತಃ ವಿಚಾರಣೆ ನಡೆಸುವಂತೆ ಮತ್ತು ಅದನ್ನು ಬೇರೆ ನ್ಯಾಯಾಲಯಕ್ಕೆ
ವರ್ಗಾಯಿಸದಂತೆಯೂ ಸುಪ್ರೀಂಕೋರ್ಟ್ ಆದೇಶಿಸಿತು. ಎಲ್ಲ
ದಾಖಲೆಗಳನ್ನೂ ಉರ್ದುವಿನಿಂದ ಇಂಗ್ಲಿಷಿಗೆ ಭಾಷಾಂತರಿಸಬೇಕು ಎಂದು ಹೇಳಿದ ಸುಪ್ರೀಂಕೋರ್ಟ್, ತನಿಖೆಯನ್ನು
ಸಿಬಿಐಗೆ ಒಪ್ಪಿಸಬೇಕು ಎಂಬುದಾಗಿ ಮಾಡಲಾದ ಪ್ರತ್ಯೇಕ ಮನವಿಯನ್ನು ನಿರಾಕರಿಸಿತು. ತಾನು ನ್ಯಾಯೋಚಿತ
ತನಿಖೆಗಾಗಿ ಪ್ರಕರಣವನ್ನು ವರ್ಗಾಯಿಸಬೇಕು ಎಂಬುದಾಗಿ ಕೋರಿದ ಒಂದೇ ಅರ್ಜಿಯ ವಿಚಾರಣೆ ನಡೆಸುತ್ತಿರುವುದಾಗಿ
ನ್ಯಾಯಾಲಯ ಹೇಳಿತು. ಜಮ್ಮು ಮತ್ತು ಕಾಶ್ಮೀರದ ಅಪರಾಧ
ವಿಭಾಗದಿಂದ ತನಿಖೆ ನಡೆಸಿ ಏಪ್ರಿಲ್ ೯ರಂದು ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಲಾಗಿದೆ. ಅಗತ್ಯ
ಬಿದ್ದಲ್ಲಿ ಪೂರಕ ತನಿಖೆ ನಡೆಸಲು ಮುಕ್ತ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿತು. ಯಾವಾಗ
ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ? ಇನ್ನೊಂದು ಸಂಸ್ಥೆಯ ತನಿಖೆಯನ್ನು ನಾವು ಯಾಕೆ ಬಯಸಬೇಕು? ಎಂದು
ನ್ಯಾಯಮೂರ್ತಿ ಮಿಶ್ರ ಪ್ರಶ್ನಿಸಿದರು. ವಿಚಾರಣೆಯ
ಮೇಲೆ ತಾನು ನಿಗಾ ಇರಿಸುವುದನ್ನು ಮುಂದುವರೆಸುವುದಾಗಿ ಹೇಳಿದ ಸುಪ್ರೀಂಕೋಟ್, ಪಠಾಣ ಕೋಟ್ ಜಿಲ್ಲಾ
ನ್ಯಾಯಾಧೀಶರ ಆದೇಶದ ಮೇಲಿನ ದೂರು, ಮೇಲ್ಮನವಿಗಳ ವಿಚಾರಣೆ ನಡೆಸುವ ವ್ಯಾಪ್ತಿಯನ್ನು ರಾಷ್ಟ್ರದ ಬೇರೆ
ಯಾವುದೇ ನ್ಯಾಯಾಲಯವೂ ಹೊಂದಿರುವುದಿಲ್ಲ ಎಂದು ಹೇಳಿತು.
ಯಾವುದೇ ಮುಂದೂಡಿಕೆ ರಹಿತವಾಗಿ ಅನುದಿನ ತ್ವರಿತ ವಿಚಾರಣೆ ನಡೆಯಬೇಕು. ಸಾಕ್ಷಿಗಳ ವಿಚಾರಣೆ,
ಪಾಟೀ ಸವಾಲು ಯಾವುದೇ ಅಡೆತಡೆ ಇಲ್ಲದೆ ನಡೆಯಬೇಕು ಎಂದು ಕೋರ್ಟ್ ಹೇಳಿತು. ಪ್ರಕರಣದಲ್ಲಿ ಒಟ್ಟು ೨೨೧
ಸಾಕ್ಷಿಗಳು ಇದ್ದಾರೆ. ಪ್ರಕರಣದ ಮುಂದಿನ ವಿಚಾರಣೆಗೆ
ಸುಪ್ರೀಂಕೋರ್ಟ್ ಜುಲೈ ೯ರ ದಿನಾಂಕವನ್ನು ನಿಗದಿಪಡಿಸಿತು.
2018: ನವದೆಹಲಿ: ಕಾವೇರಿ ಜಲ ವಿವಾದ
ಪ್ರಕರಣವು ವಿಚಾರಣೆಗೆ ಬರುವುದಕ್ಕೆ ಒಂದು ದಿನ ಮೊದಲೇ, ತಮಿಳುನಾಡಿಗೆ ನ್ಯಾಯಾಧಿಕರಣವು ಹೇಳಿದ್ದಕ್ಕಿಂತ
ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಸುಪ್ರೀಂಕೋರ್ಟಿಗೆ ತಿಳಿಸಿತು. ವಿಚಾರಣೆಗಿಂತ ಒಂದು ದಿನ ಮೊದಲು ತಮಿಳುನಾಡು ಸುಪ್ರೀಂಕೋರ್ಟಿಗೆ
ಸಲ್ಲಿಸಿದ್ದ ಅರ್ಜಿಯಲ್ಲಿ ಕರ್ನಾಟಕವು ಮೇ ತಿಂಗಳಿನಲ್ಲಿ ೪ ಟಿಎಂಸಿ ಹೆಚ್ಚುವರಿ ನೀರನ್ನು ಸುಲಭವಾಗಿ
ತಮಿಳುನಾಡಿಗೆ ಬಿಡುಗಡೆ ಮಾಡಬಹುದು ಎಂದು ತಿಳಿಸಿತ್ತು. ತಮಿಳುನಾಡಿನ ಅರ್ಜಿಗೆ ಕೆಲವೇ ಗಂಟೆಗಳ ಒಳಗಾಗಿ
ಪ್ರತಿ ಅರ್ಜಿ ಸಲ್ಲಿಸಿದ ಕರ್ನಾಟಕ ರಾಜ್ಯವು ಸತತ ಮೂರನೇ ವರ್ಷ ನೀರಿನ ಸಂಕಷ್ಟ ಎದುರಿಸುತ್ತಿದ್ದರೂ, ಈಗಾಗಲೇ ೧೧೬.೬೯೭ ಟಿಎಂಸಿ ಅಡಿ ನೀರನ್ನು ಬಿಳಿಗುಂಡ್ಲು
ಗಡಿಯಲ್ಲಿ ತಮಿಳುನಾಡಿಗೆ ಬಿಡುಗಡೆ ಮಾಡಿದೆ ಎಂದು ಸುಪ್ರೀಂಕೋರ್ಟಿಗೆ ತಿಳಿಸಿತು. ತಮಿಳುನಾಡು
೧೬.೬೬ ಟಿಎಂಸಿಗಳಷ್ಟು ಹೆಚ್ಚುವರಿ ನೀರನ್ನು ಪಡೆದಿದೆ. ನೀರನ್ನು ಕೇಂದ್ರೀಯ ಜಲ ಆಯೋಗದ ನೀರಿನ
ಅಳತೆಗಳಿಗೆ ಅನುಗುಣವಾಗಿ ಬಿಡುಗಡೆ ಬಿಡುಗಡೆ ಮಾಡಲಾಗಿದೆ. ಅಂತರರಾಜ್ಯ ಗಡಿಯಿಂದ ಏಪ್ರಿಲ್ ೨೦೧೮ರ
ಅಂತ್ಯದ ವೇಳೆಗೆ ತಮಿಳುನಾಡಿಗೆ ಬಿಡಬೇಕಾದ ನೀರಿನ ಪಾಲು ೧೦೦.೦೪ ಟಿಂಎಸಿ ಮಾತ್ರ ಎಂದು ಕರ್ನಾಟಕ ತನ್ನ
ಉತ್ತರದಲ್ಲಿ ತಿಳಿಸಿತು. ‘ಕರ್ನಾಟಕವು ಮೇ ೪ರವರೆಗಿನ ದಾಖಲೆಗಳ ಪ್ರಕಾರ ತನ್ನ ನಾಲ್ಕು ಜಲಾಶಯಗಳಲ್ಲಿ
೧೯.೮೩೪ ಟಿಎಂಸಿ ಅಡಿ ನೀರನ್ನು ಹೊಂದಿದೆ. ಪರಿಣಾಮಕಾರಿ ಸಂಗ್ರಹ ಸಾಮರ್ಥ್ಯ ೯.೮೩೪ ಟಿಎಂಸಿ ಅಡಿ.
ಮೆಟ್ಟೂರು ಅಣೆಕಟ್ಟಿನ ಸಂಗ್ರಹ ಸಾಮರ್ಥ್ಯ ೯.೫೦೨ ಟಿಎಂಸಿ ಅಡಿ. ಅದರ ಬಳಸಬಹುದಾದ ಸಂಗ್ರಹ ೪.೫೦೨
ಟಿಎಂಸಿ ಮಾತ್ರ’ ಎಂದು ತಮಿಳು ನಾಡು ಹೇಳಿದೆ. ’ಹೀಗಾಗಿ ಕರ್ನಾಟಕವು ಉತ್ತಮ ಸ್ಥಿತಿಯಲ್ಲಿದೆ ಮತ್ತು
ಸುಲಭವಾಗಿಯೇ ಉಪಯೋಗಕ್ಕೆ ಬೇಕಿಲ್ಲದ ೪ ಟಿಎಂಸಿ ಅಡಿ ನೀರನ್ನು ಸುಪ್ರೀಂಕೋರ್ಟ್ ಅಭಿಪ್ರಾಯದಂತೆ ಬಿಡಬಹುದು.
೨೦೧೮ರ ಮೇ ತಿಂಗಳ ಅವಧಿಗಾಗಿ ೧.೬ ಟಿಎಂಸಿ ಅಡಿ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಿಕೊಂಡ ಬಳಿಕವೂ
ಇಷ್ಟು ನೀರನ್ನು ಬಿಡುಗಡೆ ಮಾಡಬಹುದು’ ಎಂದು ತಮಿಳುನಾಡು ಹೇಳಿತು.
‘ಕೊರತೆಯನ್ನು ನೀಗಿಸಲು ೪ ಟಿಎಂಸಿ ಅಡಿ ನೀರು ಬಿಡುಗಡೆ
ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕು’ ಎಂದು ತಮಿಳುನಾಡು ಸುಪ್ರೀಂಕೋರ್ಟಿಗೆ
ಮನವಿ ಮಾಡಿತು. ‘ಕಾವೇರಿ ಜಲಾನಯನ ಪ್ರದೇಶದಲ್ಲಿ ೨೦೧೭-೧೮ರ ವರ್ಷ ಸಂಕಷ್ಟದ ವರ್ಷವಾಗಿದ್ದು, ಅದೂ
ನಿರಂತರ ಮೂರನೇ ವರ್ಷ ಸಂಕಷ್ಟವನ್ನು ಎದುರಿಸುತ್ತಿದೆ’ ಎಂದು ಕರ್ನಾಟಕ ತನ್ನ
ಪ್ರತಿ ಅರ್ಜಿಯಲ್ಲಿ ಪ್ರತಿಪಾದಿಸಿತು. ೨೦೧೮ರ ಫೆಬ್ರುವರಿ ೧೬ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ
ಪ್ರಕಾರ ಕಾವೇರಿ ಸ್ಕೀಮ್ (ರೂಪುರೇಷೆ) ರೂಪಿಸಿ, ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು
ನಿಯಂತ್ರಣ ಸಮಿತಿ ರಚಿಸುವ ಮೂಲಕ ಕೋರ್ಟ್ ತೀರ್ಪನ್ನು
ಅನುಷ್ಠಾನಗೊಳಿಸಬೇಕಾದ ಕರ್ತವ್ಯ ಬದ್ಧತೆ ಕೇಂದ್ರಕ್ಕೆ ಇದೆ ಎಂದು ತಮಿಳುನಾಡು ಹೇಳಿತು. ಇನ್ನಷ್ಟು ವಿಳಂಬವಿಲ್ಲದೆ ಇದನ್ನು ಅನುಷ್ಠಾನಗೊಳಿಸುವ ಮೂಲಕ
೨೦೧೮ರ ಜೂನ್ ೧ರಂದು ಆರಂಭವಾಗುವನೀರಾವರಿ ವರ್ಷದಲ್ಲಿ ಸಕಾಲಕ್ಕೆ ನೀರು ಬಿಡುಗಡೆಯ ಖಾತರಿ ನೀಡಬೇಕಾಗಿದೆ
ಮತ್ತು ನೀರಾವರಿ ಪ್ರದೇಶದಲ್ಲಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ದೃಢ ಪಡಿಸಿರುವ ನ್ಯಾಯಾಧಿಕರಣದ
ಇತರ ನಿರ್ದೇಶನಗಳನ್ನು ಅಕ್ಷರಶಃ ಪಾಲಿಸಬೇಕಾಗಿದೆ
ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ತಿಳಿಸಿತು.
2018: ನವದೆಹಲಿ: ಕರ್ನಾಟಕ ವಿಧಾನಸಭಾ
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಎಬಿಪಿ ನಡೆಸಿರುವ ಇನ್ನೊಂದು ಚುನಾವಣಾ ಸಮೀಕ್ಷೆಯೂ ಬಹಿರಂಗಗೊಂಡಿದ್ದು
ಮತ್ತೆ ಅತಂತ್ರ ವಿಧಾನಸಭೆಯ ಭವಿಷ್ಯ ನುಡಿಯಿತು. ಆಡಳಿತಾರೂಢ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ
ಉದಯಿಸಲಿದ್ದು, ಬಿಜೆಪಿ ಎರಡನೇ ಸ್ಥಾನವನ್ನು ಪಡೆಯಲಿದೆ ಎಂದು ಅದು ಹೇಳಿತು. ಜೆಡಿಎಸ್ ’ಕಿಂಗ್ ಮೇಕರ್’ ಪಾತ್ರ ವಹಿಸುವುದು ಖಚಿತ ಎಂದು ಸಮೀಕ್ಷೆ
ಹೇಳಿತು. ಚುನಾವಣಾ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಶೇಕಡಾ ೩೮ರಷ್ಟು ಮತಪಾಲು ಪಡೆದರೆ, ಬಿಜೆಪಿ ಶೇಕಡಾ
೩೩ರಷ್ಟು ಮತ್ತು ಜನತಾದಳ (ಜಾತ್ಯತೀತ) ಶೇಕಡಾ ೨೨ರಷ್ಟು ಮತಪಾಲು ಪಡೆಯಲಿದೆ. ಹೀಗಾಗಿ ಯಾವುದೇ ಪಕ್ಷಕ್ಕೆ
೧೧೨ ಸ್ಥಾನಗಳ ಮ್ಯಾಜಿಕ್ ಸಂಖ್ಯೆ ತಲುಪಿ, ಸ್ವಂತ ಬಲದಲ್ಲಿ ಸರ್ಕಾರ ರಚಿಸುವುದು ಸಾಧ್ಯವಾಗದು ಎಂದು
ಅದು ಹೇಳಿತು. ಸಮೀಕ್ಷೆ ಹೇಳುವಂತೆ ೨೨೫ ಸದಸ್ಯ ಬಲದ
ವಿಧಾನಸಭೆಯಲ್ಲಿ ಕಾಂಗ್ರೆಸ್ ೯೭ ಸ್ಥಾನ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ೮೪ ಸ್ಥಾನ ಗಳಿಸಲಿವೆ.
ಜನತಾದಳ (ಎಸ್) ೩೭ ಸ್ಥಾನ ಪಡೆಯಲಿದೆ. ಶೇಕಡಾ ೩೮ರಷ್ಟು ಜನ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್
ಉತ್ತಮ ಎಂದು ನಂಬಿದರೆ, ಶೇಕಡಾ ೩೨ರಷ್ಟು ಮಂದಿ ಬಿಜೆಪಿ, ಶೇಕಡಾ ೨೪ರಷ್ಟು ಮಂದಿ ಜನತಾದಳ (ಎಸ್) ಒಳ್ಳೆಯದು
ಎಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ ೩೯
ಮಂದಿ ಕಾಂಗ್ರೆಸ್ಸಿಗೆ ಮತ ನೀಡುವುದಾಗಿಯೂ, ಶೇಕಡಾ ೩೨ ಮಂದಿ ಬಿಜೆಪಿಗೆ ಮತ ನೀಡುವುದಾಗಿಯೂ, ಶೇಕಡಾ
೨೩ರಷ್ಟು ಮಂದಿ ಜೆಡಿಎಸ್ ಗೆ ಮತ ನೀಡುವುದಾಗಿಯೂ ಹೇಳಿದ್ದಾರೆ. ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ
ಸವಲತ್ತು ಕಲ್ಪಿಸಿದ್ದರೂ, ಲಿಂಗಾಯತರು ಸಿದ್ದರಾಮಯ್ಯ ಪರ ನಿಂತಿಲ್ಲ. ಶೇಕಡಾ ೬೧ರಷ್ಟು ಲಿಂಗಾಯತರು
ಬಿಜೆಪಿ ಪರವಾಗಿಯೇ ಮತ ನೀಡುವ ಸಾಧ್ಯತೆಗಳಿವೆ. ಶೇಕಡಾ
೪೩ರಷ್ಟು ಮಂದಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ಉತ್ತಮವಾಗಿತ್ತು ಎಂದು ಅಭಿಪ್ರಾಯ
ಪಟ್ಟಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಪರವಾಗಿ ಶೇಕಡಾ ೩೩ ಮಂದಿ ಮತ ನೀಡಿದ್ದರೆ, ಬಿಜೆಪಿಯ
ಸಿಎಂ ಅಭ್ಯರ್ಥಿ ಯಡಿಯೂರಪ್ಪ ಅವರಿಗೆ ಶೇಕಡಾ ೨೭ ಮಂದಿ ಮತ ನೀಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರಿಗೆ
ಶೇಕಡಾ ೨೨ ಮಂದಿಯ ಬೆಂಬಲ ಲಭಿಸಿದೆ. ಇದಕ್ಕೆ ಮುನ್ನ
ಇಂಡಿಯಾ ಟುಡೆ ಸಮೀಕ್ಷೆಯು ಬಿಜೆಪಿಯ ಮತಪಾಲು ಹೆಚ್ಚುವ ನಿರೀಕ್ಷೆಯಿದೆ, ಆದರೆ ಆಡಳಿತಾರೂಢ ಕಾಂಗ್ರೆಸ್
ಪಕ್ಷವನ್ನು ಮೂಲೆಪಾಲು ಮಾಡುವಷ್ಟು ಅಲ್ಲ ಎಂದು ತಿಳಿಸಿತ್ತು. ಇಂಡಿಯಾ ಟುಡೆ- ಕಾರ್ವಿ ಇನ್ ಸೈಟ್ಸ್
ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ೯೦ರಿಂದ ೧೦೧ ಸ್ಥಾನ, ಬಿಜೆಪಿ ೭೮-೮೬ ಮತ್ತು ಜೆಡಿಎಸ್ ೩೪-೪೩ ಸ್ಥಾನ
ಗೆಲ್ಲಬಹುದು ಎಂದು ಹೇಳಲಾಗಿತ್ತು.
2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ
ದೀಪಕ್ ಮಿಶ್ರ ಅವರನ್ನು ವಾಗ್ದಂಡನೆಗೆ ಗುರಿಪಡಿಸಿ ಹುದ್ದೆಯಿಂದ ಕಿತ್ತುಹಾಕಲು ಸಲ್ಲಿಸಲಾಗಿದ್ದ ನಿರ್ಣಯದ
ನೋಟಿಸನ್ನು ವಜಾಗೊಳಿಸಿದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರ ಆದೇಶವನ್ನು
ಪ್ರಶ್ನಿಸಿ ರಾಜ್ಯಸಭೆಯ ವಿರೋಧಿ ಸಂಸದರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಕೆ.
ಸಿಕ್ರಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಮೇ 8ರ ಮಂಗಳವಾರ ನಡೆಸಲಿದೆ. ವಾಗ್ದಂಡನಾ ನೋಟಿಸನ್ನು ನಿರಾಕರಿಸುವ ಮೂಲಕ ನಾಯ್ಡು ಅವರು
ಅಧಿಕಾರದ ದುರುಪಯೋಗ ಮಾಡಿದ್ದಾರೆ ಎಂದು ಆಪಾದಿಸಿ ಸಂಸದರಿಬ್ಬರು ಸುಪ್ರೀಂಕೋರ್ಟಿನಲ್ಲಿ ಸೋಮವಾರ ಅರ್ಜಿ
ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ
ಎಸ್.ಎ. ಬೊಬ್ಡೆ, ಎನ್.ವಿ. ರಮಣ, ಅರುಣ್ ಮಿಶ್ರ ಮತ್ತು ಆದರ್ಶ ಕುಮಾರ್ ಗೋಯೆಲ್ ಅವರು ಸಂವಿಧಾನ ಪೀಠದ
ಇತರ ನಾಲ್ಕು ಮಂದಿ ಸದಸ್ಯರಾಗಿದ್ದಾರೆ.
ನಾಲ್ವರು
ಹಿರಿಯ ನ್ಯಾಯಮೂರ್ತಿಗಳಾದ ಜಸ್ಟಿ ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಬಿ. ಲೋಕುರ್ ಮತ್ತು ಕುರಿಯನ್
ಜೋಸೆಫ್ ಅವರು ಸಂವಿಧಾನ ಪೀಠದ ಸದಸ್ಯರಾಗಿಲ್ಲ. ನ್ಯಾಯಮೂರ್ತಿ ಸಿಕ್ರಿ ಅವರು ಸುಪ್ರೀಂಕೋರ್ಟಿನಲ್ಲಿ
೬ನೇ ಸ್ಥಾನದಲ್ಲಿರುವ ನ್ಯಾಯಮೂರ್ತಿಯಾಗಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಯವರು ಮಾಸ್ಟರ್ ಆಫ್
ರೋಸ್ಟರ್ ಆಗಿ ತಮ್ಮ ಆಡಳಿತಾತ್ಮಕ ಸಾಮರ್ಥ್ಯದಿಂದ ಸಂವಿಧಾನ ಪೀಠವನ್ನು ರಚಿಸಿದ್ದಾರೆ.
ಭಾರತದ
ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಅವರ ವಿರುದ್ಧ ವಿರೋಧಿ ಸಂಸತ್ ಸದಸ್ಯರು ಮಂಡಿಸಿದ್ದ
ವಾಗ್ದಂಡನಾ ನಿರ್ಣಯದ ನೋಟಿಸನ್ನು ವಜಾಗೊಳಿಸಿದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ
ನಾಯ್ಡು ಅವರ ಏಪ್ರಿಲ್ ೨೩ರ ನಿರ್ಣಯವನ್ನು ರಾಜ್ಯಸಭೆಯ ಇಬ್ಬರು ವಿರೋಧಿ ಸಂಸತ್ ಸದಸ್ಯರು ಸೋಮವಾರ
ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು. ‘ನಾಯ್ಡು ಅವರು ೫೦ಕ್ಕೂ ಹೆಚ್ಚು ಸಂಸದರು ಸಹಿ ಮಾಡಿದ್ದ
ವಾಗ್ದಂಡನಾ ನಿರ್ಣಯದ ನೋಟಿಸನ್ನು ತಿರಸ್ಕರಿಸುವ ಮೂಲಕ ಅಧಿಕಾರದ ದುರುಪಯೋಗ ಮಾಡಿದ್ದಾರೆ’ ಎಂದು ಸಂಸದರಾದ ಪ್ರತಾಪ್ ಸಿಂಗ್ ಬಜ್ವಾ ಮತ್ತು
ಡಆ. ಅಮೀ ಹರ್ಷದ್ರಯ್ ಯಾಜ್ಞಿಕ್ ಆಪಾದಿಸಿದ್ದರು. ವಕೀಲ ಸುನಿಲ್ ಫರ್ನಾಂಡಿಸ್ ಅವರ ಮೂಲಕ ಅರ್ಜಿಯನ್ನು
ಸಲ್ಲಿಸಲಾಗಿತ್ತು. ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್ ಮತ್ತು ಎಸ್.ಕೆ. ಕೌಲ್ ಅವರ
ಪೀಠದ ಮುಂದೆ ಪ್ರಸ್ತಾಪಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ
ಎತ್ತಿಕೊಳ್ಳಬೇಕು ಎಂದು ಕೋರಿದರು. ಅರ್ಜಿಯು ಪಕ್ಕದ
ಕೊಠಡಿಯಲ್ಲಿ ವಿಚಾರಣೆ ನಡೆಸುತ್ತಿದ್ದ ಸಿಜೆಐ ಅವರನ್ನು ಕಿತ್ತುಹಾಕುವುದಕ್ಕೆ ಸಂಬಂಧಿಸಿದ ವಿಷಯವಾಗಿದ್ದುದರಿಂದ
ಅರ್ಜಿಯನ್ನು ನ್ಯಾಯಮೂರ್ತಿ ಚೆಲಮೇಶ್ವರ ಪೀಠದ ಮುಂದೆ ಪ್ರಸ್ತಾಪಿಸಲಾಯಿತು. ಸಮಾಲೋಚನೆಯ ಬಳಿಕ ಅರ್ಜಿಯನ್ನು ಪರಿಗಣಿಸುವುದಾಗಿ ಪೀಠ ಹೇಳಿತು. ನಾಯ್ಡು
ಅವರು ಅರೆ ನ್ಯಾಯಾಂಗ ಅಧಿಕಾರಿಯಂತೆ ವರ್ತಿಸಿ, ತನಿಖಾ ಸಮಿತಿಯ ಅಧಿಕಾರವನ್ನು ತಾನೇ ವಹಿಸಿಕೊಂಡು ಅರ್ಹತೆಯ ನೆಲೆಯಲ್ಲಿ ಅರ್ಜಿಯನ್ನು ವಜಾ ಮಾಡುವಂತಿಲ್ಲ ಎಂದು
ಅರ್ಜಿ ಹೇಳಿತು. ನಿರ್ಣಯದ ನೋಟಿಸಿಗೆ ಸಹಿ ಮಾಡಿದವರಲ್ಲಿ ಇಬ್ಬರಾದ ಸಂಸತ್ ಸದಸ್ಯರು ’ನಾಯ್ಡು ಅವರು
ಅಕ್ರಮ, ನಿರಂಕುಶವಾಗಿ ವರ್ತಿಸಿದ್ದಲ್ಲದೆ, ಸಂವಿಧಾನದ ೧೪ನೇ ಪರಿಚ್ಛೇದವನ್ನೂ ಉಲ್ಲಂಘಿಸಿದ್ದಾರೆ’ ಎಂದು ದೂರಿದರು. ರಾಜ್ಯಸಭಾ ಸಭಾಪತಿಯವರ ಆದೇಶವು
ಸಂವಿಧಾನದ ೧೨೪(೪) ಮತ್ತು ೧೨೪(೫) ಹಾಗೂ ನ್ಯಾಯಾಧೀಶರ ತನಿಖಾ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ.
ಸಭಾಪತಿಯವರು ಕೊಟ್ಟಿರುವ ಯಾವುದೇ ಕಾರಣಗಳೂ ಯಾವುದೇ ತೂಕವನ್ನು ಹೊಂದಿಲ್ಲ ಮತ್ತು ಕಾನೂನುಬದ್ಧವಾಗಿಲ್ಲ.
ಅದು ಭಾರತದ ಸಂವಿಧಾನ ಮತ್ತು ತನಿಖಾ ಕಾಯ್ದೆಯ ವಿಧಿಗಳನ್ನು ಉಲ್ಲಂಘಿಸಿರುವುದರಿಂದ ರದ್ದು ಪಡಿಸಲು
ಯೋಗ್ಯ’ ಎಂದು ಅರ್ಜಿ ಹೇಳಿತು.
2017: ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿರುವ ‘ಬಾಹುಬಲಿ 2’
2017: ನವದೆಹಲಿ: ದೆಹಲಿ ಆಪ್ ಸರ್ಕಾರದಿಂದ ವಜಾಗೊಂಡ ಜಲ ಖಾತೆ ಸಚಿವ ಕಪಿಲ್ ಮಿಶ್ರ
ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ದವೇ ಭ್ರಷ್ಟಾಚಾರದ ಆರೋಪ ಮಾಡಿದರು. ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ 2 ಕೋಟಿ ರೂಪಾಯಿ ನೀಡಿದ್ದನ್ನು ಸ್ವತಃ ಕಂಡಿದ್ದೇನೆ. ಈಬಗ್ಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ತಿಳಿಸಿದ್ದೇನೆ ಎಂದು ಕಪಿಲ್ ನುಡಿದರು.
2016: ನವದೆಹಲಿ: ಅಗಸ್ತಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಪೂರ್ವಕವಾಗಿ ಮೃದು ನಿಲುವು ತಾಳಿದ್ದಾರೆ, ಎಂದು ಆಪಾದಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ಕಾರ್ಯಕರ್ತರು ದೆಹಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜಂತರ್ ಮಂತರ್ನಲ್ಲಿ ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿದ ಅರವಿಂದ ಕೇಜ್ರಿವಾಲ್ ಅವರು ಅಗಸ್ತಾ ವೆಸ್ಟ್ಲ್ಯಾಂಡ್ ಹಗರಣದ ತನಿಖೆಯನ್ನು ಕೇಂದ್ರ ಸರ್ಕಾರ ಗಂಭಿರವಾಗಿ ಪರಿಗಣಿಸಿಲ್ಲ, ಸೋನಿಯಾ ಅವರನ್ನು ಬಂಧಿಸಲು ಮೋದಿ ಅವರಿಗೆ ಭಯ ಎಂದು ಆಪಾದಿಸಿದರು. ಕೇಂದ್ರವು ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿದರೆ ಇಂತಹ ಪ್ರಕರಣಗಳ ತನಿಖೆಯನ್ನು ಹೇಗೆ ನಡೆಸಬೇಕು ಎಂದು ದೆಹಲಿ ಸರ್ಕಾರವು ತೋರಿಸಿಕೊಡುತ್ತದೆ ಎಂದು ಅವರು ಹೇಳಿದರು. 3600 ಕೋಟಿ ರೂಪಾಯಿಗಳ ಅಗಸ್ತಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಮತ್ತು ಇತರ ನಾಯಕರನ್ನು ಬಂಧಿಸುವಂತೆಯೂ ಭಾರತೀಯ ಜನತಾ ಪಕ್ಷಕ್ಕೆ ಕೇಜ್ರಿವಾಲ್ ಸವಾಲು ಎಸೆದರು. ‘ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೇವಲ ‘ಧರಣ ಪಕ್ಷಗಳು’, ಆಮ್ ಆದ್ಮಿ ಪಕ್ಷ ಮಾತ್ರವೇ ಸಮರ್ಪಕವಾಗಿ ಆಡಳಿತ ನಡೆಸುತ್ತಿದೆ’ ಎಂದು ಕೇಜ್ರಿವಾಲ್ ಹಿಂದಿನ ದಿನ ಹೇಳಿದ್ದರು.
2016: ನವದೆಹಲಿ: ಮೇ 29ರಂದು ಬಿಡುಗಡೆಯಾದ ‘ಫ್ಯಾನ್’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಶಾರುಖ್ ಖಾನ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಈದಿನ ಸ್ವೀಟ್ ಅಂಗಡಿ ಮಾಲೀಕರೊಬ್ಬರು ಶಾರುಖ್ ಹಾಗೂ ಚಿತ್ರದ ನಿರ್ಮಾಪಕರಿಗೆ ಲೀಗಲ್ ನೋಟಿಸ್ ನೀಡಿದರು. ಫ್ಯಾನ್ ಚಿತ್ರದಲ್ಲಿ ಘಂಟೆವಾಲಾ ಎಂಬ ಪದ ಬಳಕೆ ಮಾಡಲಾಗಿದೆ. ಈ ಹೆಸರು ನಮ್ಮ ಸಿಹಿ ಉತ್ಪನ್ನದ ಬ್ರಾಂಡ್ ನೇಮ್ ಆಗಿದ್ದು, ನಮ್ಮ ಪೂರ್ವಾನುಮತಿ ಇಲ್ಲದೆ ಚಿತ್ರದಲ್ಲಿ ಬಳಕೆ ಮಾಡಿದ್ದಾರೆ ಎಂದು ಅಂಗಡಿ ಮಾಲೀಕ ಸುಶಾಂತ್ ಜೈನ್ ಆರೋಪ ಮಾಡಿದರು. ಚಿತ್ರದಲ್ಲಿ ಶಾರುಖ್ ದ್ವಿಪಾತ್ರಾಭಿನಯ ಮಾಡಿದ್ದು, ಇದರಲ್ಲಿ ತನ್ನ ನೆಚ್ಚಿನ ನಟ ಆರ್ಯನ್ ಖನ್ನಾ ಅವರಿಗಾಗಿ ಘಂಟೆವಾಲಾ ಸ್ವೀಟ್ ಬಾಕ್ಸ್ನ್ನು ತೆಗೆದುಕೊಂಡು ಹೋಗುವ ದೃಶ್ಯವಿದೆ. ನಮ್ಮ ಅಂಗಡಿಯ ಟ್ರೇಡ್ ಮಾರ್ಕ್ ಅನ್ನು ಕಾನೂನು ಬಾಹಿರ ಉಲ್ಲಂಘನೆ ಮಾಡಲಾಗಿದೆ. 1790ರಿಂದ ಹಳೆ ದೆಹಲಿಯಲ್ಲಿ ನಮ್ಮ ಅಂಗಡಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಅಪ್ಪಣೆ ಪಡೆಯದಿರುವುದರಿಂದ ಚಿತ್ರದಲ್ಲಿ ಬಳಕೆ ಮಾಡಿರುವ ನಮ್ಮ ಬ್ರಾಂಡಿನ ಹೆಸರನ್ನು ಹಿಂದಕ್ಕೆ ಪಡೆಯಿರಿ ಎಂದು ಜೈನ್ ಆಗ್ರಹಿಸಿದರು..
2016: ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ನಡೆದಿರುವ ಶಂಕಿತ ಐಸಿಸ್ ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯ ಸೂಫಿ ಮುಸ್ಲಿಮ್ ನಾಯಕನನ್ನು ಕೊಲೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದರು. ಉದಾರವಾದಿ ಪ್ರೊಫೆಸರ್ ಒಬ್ಬರನ್ನು ಇದೇ ವಾಯವ್ಯ ಜಿಲ್ಲೆಯಲ್ಲಿ ಐಸಿಸ್ ದಾಳಿಯಲ್ಲಿ ಕೊಲೆಗೈದ ಎರಡು ವಾರಗಳ ಬಳಿಕ ಈ ಕೃತ್ಯ ಘಟಿಸಿತು. ‘ಅವರು ಖ್ಯಾತ ಸೂಫಿ ಏನೂ ಆಗಿರಲಿಲ್ಲ. ಆದರೆ ಇಸ್ಲಾಮಿ ಉಗ್ರಗಾಮಿಗಳು ಅವರನ್ನು ಕೊಲೆಗೈದಿರುವ ಶಂಕೆ ಇದೆ’ ಎಂದು ರಾಜ್ಶಾಹಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ನಿಶಹರುಲ್ ಆರಿಫ್ ಹೇಳಿದರು. ಇತ್ತೀಚೆಗೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೊಲ್ಲಲಾಗುತ್ತಿರುವ ಮಾದರಿಯಲ್ಲೇ ಈ ಕೊಲೆಯೂ ನಡೆದಿದೆ ಎಂದು ಅವರು ಹೇಳಿದರು.
2016: ನವದೆಹಲಿ: ಪೊಲೀಸರ ವಿರುದ್ಧ ಅವಹೇಳನಕಾರಿ ಶಬ್ಧ ಬಳಸಿದ್ದಕ್ಕಾಗಿ ದೆಹಲಿಯ ನ್ಯಾಯಾಲಯವೊಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿತು. ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 14ರಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಆಮ್ ಆದ್ಮಿ ಪಕ್ಷದ ನಾಯಕನಿಗೆ ನ್ಯಾಯಾಲಯ ಆಜ್ಞಾಪಿಸಿತು. ಪೊಲೀಸರ ಬಗ್ಗೆ ‘ತುಲ್ಲಾ’ ಪದ ಬಳಸಿದ್ದಕ್ಕಾಗಿ ನ್ಯಾಯಾಲಯವು ಕೇಜ್ರಿವಾಲ್ಗೆ ಸಮನ್ಸ್ ಕಳುಹಿಸಿತು.
2016: ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಜೊತೆಗೆ ಉತ್ತರ ಪ್ರದೇಶದ ಬರ ಪರಿಸ್ಥಿತಿ ಬಗ್ಗೆ ಪರಾಮರ್ಶಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ಹಿಂದೆಯೇ ರಾಜ್ಯ ಸಲ್ಲಿಸಿದ ಮನವಿಗೆ ಅನುಗುಣವಾಗಿ ತತ್ಕ್ಷಣವೇ ಅಗತ್ಯ ನೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನೀರಿನ ಅಭಾವ ಸೇರಿದಂತೆ ವಿವಿಧ ವಿಚಾರಗಳನ್ನು ಚರ್ಚಿಸಿದ ಮೋದಿ ‘ಬರದಿಂದ ಉದ್ಭವಿಸಿರುವ ಜನರ ಸಮಸ್ಯೆಗಳ ನಿವಾರಣೆಗೆ ಕೇಂದ್ರ ಮತ್ತು ರಾಜ್ಯ ಒಗ್ಗೂಡಿ ಶ್ರಮಿಸಬೇಕು’ ಎಂದು ಹೇಳಿದರು. ಬರಸಮಸ್ಯೆಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿಯ ಪರಿಹಾರಗಳಿಗೆ ಒತ್ತು ನೀಡುವಂತೆ ಪ್ರಧಾನಿ ಸಲಹೆ ಮಾಡಿದರು. ಬುಂದೇಲ್ಖಂಡ್ ಪ್ರದೇಶ ಸೇರಿದಂತೆ ರಾಜ್ಯದಲ್ಲಿನ ಬರ ಪರಿಸ್ಥಿತಿಯಿಂದ ಉದ್ಭವಿಸಿದ ಸಮಸ್ಯೆಗಳ ನಿವಾರಣೆಗೆ ಕೈಗೊಳ್ಳಲಾದ ಕ್ರಮಗಳನ್ನು ಯಾದವ್ ವಿವರಿಸಿದರು. ಬರ ಪರಿಸ್ಥಿತಿ ಬಗ್ಗೆ ಎರಡು ದಿನಗಳ ಹಿಂದೆಯೇ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಯಾದವ್ ಗಮನ ಸೆಳೆದಾಗ ಪ್ರಧಾನಿ ವಿಳಂಬವಿಲ್ಲದಂತೆ ತುರ್ತು ಪರಿಹಾರ ಕಲ್ಪಿಸಲು ನಿರ್ದೇಶನ ನೀಡಿದರು. ಕರ್ನಾಟಕ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರೂ ಪ್ರಧಾನಿಯವರನ್ನು ಭೇಟಿ ಮಾಡಿ ರಾಜ್ಯದ ಬರ ಸ್ಥಿತಿ ಬಗ್ಗೆ ವಿವರಿಸಿದರು.
2016: ನೈನಿತಾಲ್: ಉತ್ತರಾಖಂಡ ವಿಧಾನಸಭೆಯಿಂದ ಅನರ್ಹಗೊಳಿಸಲಾದ 9 ಮಂದಿ ಕಾಂಗ್ರೆಸ್ ಬಂಡಾಯ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಹೈಕೋರ್ಟ್ ತನ್ನ ತೀರ್ಪನ್ನು ಮೇ 9ಕ್ಕೆ ಕಾಯ್ದಿರಿಸಿತು. ಇದರೊಂದಿಗೆ ಈ ಬಂಡಾಯ ಕಾಂಗ್ರೆಸ್ ಶಾಸಕರ ಹಣೆಬರಹ ಕುರಿತ ನಿಗೂಢತೆ ಇನ್ನಷ್ಟು ಹೆಚ್ಚಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಮೇ 10ರಂದು ಉತ್ತರಾಖಂಡ ವಿಧಾನಸಭೆಯಲ್ಲಿ ಹರೀಶ್ ರಾವತ್ ಅವರು ವಿಶ್ವಾಸ ಮತ ಯಾಚನೆ ಮಾಡಲಿದ್ದು, ಬಂಡಾಯ ಶಾಸಕರು ಮತದಾನದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈ ಮಧ್ಯೆ ತಮ್ಮನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಕ್ರಮದ ವಿರುದ್ಧ 9 ಮಂದಿ ಬಂಡಾಯ ಶಾಸಕರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ‘ಈ ಅರ್ಜಿಗೆ ಸಂಬಂಧಿಸಿದಂತೆ ಅಹವಾಲುಗಳನ್ನು ಸಮಾಪ್ತಿಗೊಳಿಸಲಾಗಿದೆ. ಮೇ 9ರಂದು ಬೆಳಗ್ಗೆ 10.15ಕ್ಕೆ ತೀರ್ಪು ಪ್ರಕಟಿಸಲಿದ್ದೇನೆ’ ಎಂದ ನ್ಯಾಯಮೂರ್ತಿ ಯು.ಸಿ. ಧ್ಯಾನಿ ಈದಿನ ಪ್ರಕಟಿಸಿದರು.
2016: ನವದೆಹಲಿ: ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ಕುಸ್ತಿಪಟು ವಿನೇಶ್ ಪೊಗತ್ (48ಕೆಜಿ) ಅಗತ್ಯಕ್ಕಿಂತ ಜಾಸ್ತಿ ದೇಹ ತೂಕ ಹೊಂದಿರುವ ಹಿನ್ನೆಲೆಯಲ್ಲಿ ರಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡ ಬೆನ್ನಿಗೇ ಈಗ ಗ್ರೀಕೊ – ರೋಮನ್ ಗ್ರ್ಯಾಪ್ಲರ್ ಗುರುಪ್ರೀತ್ ಸಿಂಗ್ ಕೂಡ ಇದೇ ಕಾರಣಕ್ಕಾಗಿ ಪ್ರತಿಷ್ಠಿತ ಕ್ರೀಡಾ ಕೂಟದಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡರು. ರಿಯೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಕನಸು ಹೊತ್ತು ಅರ್ಹತೆ ಗಿಟ್ಟಿಸಿಕೊಳ್ಳಲು 75ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪಂಜಾಬ್ನ ಗುರುಪ್ರೀತ್ ಸಿಂಗ್ಗೆ ಇಸ್ತಾನ್ಬುಲ್ನಲ್ಲಿ ನಡೆದ ಅರ್ಹಾತಾ ಸ್ಪರ್ಧೆ ಕಡೆಯದಾಗಿತ್ತು. ಇದರಲ್ಲಿ 500 ಗ್ರಾಂ ಹೆಚ್ಚು ತೂಕ ಹೊಂದಿರುವುದು ಗಮನಕ್ಕೆ ಬಂದಿದೆ. ಇದಕ್ಕೂ ಮೊದಲು ಮಂಗೋಲಿಯಾದ ಉಲ್ಲಾನ್ಬಾತರ್ನಲ್ಲಿ ನಡೆದ ವಿಶ್ವ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ವಿನೀಶ್ ಕೂಡ 400 ಗ್ರಾಂ ಹೆಚ್ಚಿರುವ ಹಿನ್ನೆಲೆಯಲ್ಲಿ ಅವಕಾಶ ಕಳೆದುಕೊಂಡಿದ್ದರು. ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆಯ ಅಧಿಕಾರಗಳ ಎದುರಲ್ಲಿ ದೇಶದ ಮಾನ ಹರಾಜಾದ ಹಿನ್ನೆಲೆಯಲ್ಲಿ ಕೆಂಡಾಮಂಲಗೊಂಡಿರುವ ಭಾರತೀಯ ಕುಸ್ತಿ ಫೇಡರೇಷನ್ ಈಗ ಗುರುಪ್ರೀತ್ ಸಿಂಗ್ಗೆ ಶೋಕಾಸ್ ನೋಟಿಸ್ ನೀಡಿತು.
2016: ಬಾಗ್ಪತ್: ಚಹಾ ಮಾರುವ ಹುಡುಗ ದೇಶದ ಪ್ರಧಾನಿಯಾಗಿರುವಾಗ ತಂದೆ ಚಹಾ ಮಾರುತ್ತಾರೆ ಎಂದು ಬಾಲಕನೊಬ್ಬನನ್ನು ಶಾಲೆಯಿಂದ ಹೊರ ಹಾಕಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಘಟಿಸಿತು. ‘ಟೀ’ ಮಾರಾಟ ಮಾಡುವವರ ಮಗನಿಗೆ ಶಾಲೆಯಲ್ಲಿ ಓದಲು ಅವಕಾಶ ನೀಡುವುದಿಲ್ಲ ಎಂದು ಕಾರಣ ನೀಡಿ ಬಾಗ್ಪತ್ನ ‘ಲಾರ್ಡ್ ಮಹಾವೀರ ಅಕಾಡೆಮಿ’ ಬಾಲಕನನ್ನು ಹೊರಹಾಕಿತು. ಈ ಅನಾಗರೀಕ ಪ್ರಕರಣ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾದ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಾಲಕನ ಸಹಾಯಕ್ಕೆ ಧಾವಿಸಿದರು. ಬಾಲಕನನ್ನು ಮತ್ತೆ ಶಾಲೆಗೆ ದಾಖಲಿಸುವುದಾಗಿ ತಿಳಿಸಿದರು. ನಾವು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಬಾಲಕನನ್ನು ಮತ್ತೆ ಶಾಲೆಗೆ ದಾಖಲಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಎಚ್.ಎಸ್.ತಿವಾರಿ ತಿಳಿಸಿದರು.
2016: ಚೆನ್ನೈ: ತಮ್ಮ ವಿಭಿನ್ನ ದೈಹಿಕ ಭಾಷಾ ಶೈಲಿ ಹಾಗೂ ಪಂಚಿಂಗ್ ಡೈಲಾಗ್ಗಳಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಜನಪ್ರಿಯ ತಮಿಳು ನಟ ಸೆಂಥಿಲ್ ನಿಧನ ಸುದ್ದಿ ಸ್ವತಃ ಅವರನ್ನೇ ಗಾಬರಿಬೀಳಿಸುವಂತೆ ಮಾಡಿತು.! ತಮಿಳು ಚಿತ್ರರಂಗದ ಶ್ರೇಷ್ಠ ಹಾಸ್ಯ ನಟರಾದ ‘ಸೆಂಥಿಲ್ ಇನ್ನಿಲ್ಲ’ ಎನ್ನುವ ಸುದ್ದಿ ಅಂತರ್ಜಾಲಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಗೊತ್ತಾದ ಬೆನ್ನಿಗೆ 65 ವರ್ಷ ಪ್ರಾಯದ ನಟ ಸೆಂಥಿಲ್ ಅವರು ಪ್ರತಿಕ್ರಿಯಿಸಿ, ‘ನಾನಿನ್ನು ಬದುಕಿದ್ದೇನೆ. ಆರೋಗ್ಯವಾಗಿದ್ದೇನೆ. ಈ ಸುಳ್ಳು ಸುದ್ದಿಯಿಂದ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಗಾಬರಿಗೊಳ್ಳಬೇಕಾದ ಅಗತ್ಯವಿಲ್ಲ’ ಎಂದು ಸ್ಪಷ್ಟ
ಪಡಿಸಿದರು. 500ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿರುವ ಸೆಂಥಿಲ್ ಕಳೆದ ಕೆಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಮುಂಬರುವ ಚುನಾವಣೆಗೂ ಎಐಎಡಿಎಂಕೆ ಬೆಂಬಲಿಗರಾಗಿ ಗುರುತಿಸಿಕೊಂಡವರು..
2016: ಕಠ್ಮಂಡು: ಭಾರತದ ನೇಪಾಳ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ ಅವರನ್ನು ನೇಪಾಳ ಸರ್ಕಾರ ವಾಪಸ್ ಕರೆಸಿಕೊಂಡಿತು. ಸರ್ಕಾರದೊಂದಿಗೆ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೇಪಾಳ ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದರು. ನೇಪಾಳದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಬಿಂದ್ಯಾ ಬಂಡಾರಿ ಅವರ ಭಾರತ ಭೇಟಿಯನ್ನು ಮುಂದೂಡಲು ಅವರು ವಿರೋಧ ವ್ಯಕ್ತಪಡಿಸಿದ್ದರು. ನೇಪಾಳದ ಕೆ.ಪಿ. ಒಲಿ ನೇತೃತ್ವದ ಸರ್ಕಾರವನ್ನು ಅಸ್ತಿರಗೊಳಿಸಲು ಯತ್ನಿಸಿರುವ ಆರೋಪಕ್ಕೀಡಾಗಿದ್ದರು. ಅನುಮತಿ ಇಲ್ಲದೇ ಮಧೇಸಿ ಹೋರಾಟಗಾರರ ಜತೆ ಮಾತುಕತೆ ನಡೆಸಿದ್ದರು ಎನ್ನಲಾಗಿತ್ತು. ಅಧ್ಯಕ್ಷೆ ಭಾರತ ಭೇಟಿ ರದ್ದು: ನೇಪಾಳದಲ್ಲೆದ್ದಿರುವ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಅಧ್ಯಕ್ಷೆ ಬಿಂದ್ಯಾ ದೇವಿ ಭಂಡಾರಿ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದರು.. ಮೇ 9ರಂದು ಭಾರತಕ್ಕೆ ಆಗಮಿಸಲಿದ್ದ ಬಿಂದ್ಯಾ ಮೇ 14ರಂದು ಉಜ್ಜಯಿನಿಯ ಸಿಂಹಸ್ಥ ಕುಂಭದಲ್ಲಿ ಶಾಹಿ ಸ್ನಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದರು. ನೆರವು ತಿರಸ್ಕಾರ: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಣಕ್ಕೆ ನೆರವು ನೀಡಲು ಮುಂದೆ ಬಂದಿದ್ದ ಭಾರತದ ಸಹಾಯವನ್ನು ನೇಪಾಳ ತಿರಸ್ಕರಿಸಿತು.
2016: ಲಂಡನ್: ಸಾಧಿಸುವ ಛಲವೊಂದಿದ್ದರೆ ಎಂತಹ ಸಾಧನೆಯನ್ನೂ ಸಹ ಮಾಡಬಹುದು ಎಂಬುದನ್ನು ಹಲವರು ಪದೇ ಪದೇ ನಿರೂಪಿಸುತ್ತಿರುತ್ತಾರೆ. ಅಂತಹ ಒಂದು ಅಪರೂಪದ ಸಾಧನೆಯನ್ನು ಪಾಕಿಸ್ತಾನ ಮೂಲದ ಬಸ್ ಚಾಲಕನ ಮಗನೊಬ್ಬ ಮಾಡಿದ್ದಾರೆ. ಅವರು ಲಂಡನ್ ಮಹಾನಗರದ ಮೇಯರ್ ಸ್ಥಾನ ಅಲಂಕರಿಸುವ ಮೂಲಕ ಲಂಡನ್ ಮೇಯರ್ ಆದ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾದರು. ಲೇಬರ್ ಪಕ್ಷದ 45 ವರ್ಷದ ಸಾದಿಕ್ ಖಾನ್ ಈದಿನ ನಡೆದ ಚುನಾವಣೆಯಲ್ಲಿ ತಮ್ಮ ಸಮೀಪದ ಸ್ಪರ್ಧಿ ಜಾಕ್ ಗೋಲ್ಡ್ಸ್ಮಿತ್ ಅವರನ್ನು ಸೋಲಿಸಿದರು. 1,310,143 ವೋಟು ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದು ಮೇಯರ್ ಸ್ಥಾನಕ್ಕೇರಿದರು. ಈ ಮೂಲಕ 8 ವರ್ಷಗಳ ನಂತರ ಲೇಬರ್ ಪಕ್ಷ ಲಂಡನ್ನಲ್ಲಿ ಅಧಿಕಾರಕ್ಕೆ ಬಂದಿತು. ಸಾದಿಕ್ ಖಾನ್ ಮಾನವ ಹಕ್ಕುಗಳ ವಕೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜತೆಗೆ 2005ರಿಂದ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು, ಟೋಟಿಂಗ್ ಮತ್ತು ಈಸ್ಟ್ ಲಂಡನ್ನಿಂದ ಸಂಸದರಾಗಿ ಆಯ್ಕೆಯಾಗಿದ್ದರು.
2016: ಶ್ರೀನಗರ: ಮೂವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಕಾಶ್ಮೀರದ ದಕ್ಷಿಣ ಪುಲ್ವಾಮ ಜಿಲ್ಲೆಯಲ್ಲಿ ಬೆಳಗ್ಗೆ ಭದ್ರತಾ ಪಡೆ ಹೊಡೆದುರುಳಿಸಿತು. ಉಗ್ರರು ನುಸುಳಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಮತ್ತು ಭದ್ರತಾ ಪಡೆ ಜಂಟಿಯಾಗಿ ಪುಲ್ವಾಮ ಜಿಲ್ಲೆಯ ಪಂಜ್ಗಾಮ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದವು. ಬೆಳಗ್ಗೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದು, ಅಂತಿಮವಾಗಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಸ್ಥಳೀಯ ಮೂವರನ್ನು ಕೊಂದು ಹಾಕುವಲ್ಲಿ ಪಡೆಗಳು ಯಶಸ್ವಿಯಾದವು.ಸತ್ತ ಉಗ್ರರು ಡೋಗಿಪುರದ ಅಶ್ಪಕ್ ಅಹ್ಮದ್ ದಾರ್, ತಹಾಬ್ನ ಇಶ್ಪಕ್ ಅಹ್ಮದ್ ಬಾಬಾ, ಬ್ರಾವ್ ಬಂದ್ಯುನ್ನ ಹಸೀಬ್ ಅಹ್ಮದ್ ಎಂದು ಪತ್ತೆ ಹಚ್ಚಲಾಯಿತು. ಘಟನಾ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು.
2009: ಎಲ್‌ಟಿಟಿಇ ವಿರುದ್ಧ ಕಾದಾಟವನ್ನು ತೀವ್ರಗೊಳಿಸಿದ ಶ್ರೀಲಂಕಾ ಸೇನಾ ಪಡೆಗಳು ಅದರ ನಾಯಕ ವಿ.ಪ್ರಭಾಕರನ್ ಅಡಗಿರುವ ಸ್ಥಳದಿಂದ ಕೇವಲ 800 ಮೀಟರ್‌ಗಳಷ್ಟು ದೂರ ತಲುಪಿದವು. ದಾಳಿಯಲ್ಲಿ ಹತ್ತಾರು ಬಂಡುಕೋರರು ಹತರಾದರು. ಮೂವರ ಶವಗಳು ಲಭಿಸಿದವು. ಸಂಘರ್ಷ ವಲಯದಲ್ಲಿ 10ರಿಂದ 15 ಸಾವಿರ ನಾಗರಿಕರು ಸಿಲುಕಿ ಅತಂತ್ರರಾದರು.
2009: ನಮಕ್ಕಲ್ ಜಿಲ್ಲೆಯ ಖಾದ್ಯ ತೈಲ ಗಿರಣಿಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಬಾಲ ಕಾರ್ಮಿಕರೂ ಸೇರಿದಂತೆ 14 ಮಂದಿ ಕಾರ್ಮಿಕರು ಸಜೀವ ದಹನಗೊಂಡ ದಾರುಣ ಘಟನೆ ಸಂಭವಿಸಿತು. ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡರು. ವಲಯಪಟ್ಟಿಯಲ್ಲಿ ಭತ್ತದ ತೌಡಿನಿಂದ ಖಾದ್ಯತೈಲ ತಯಾರಿಸುತ್ತಿದ್ದ ಗೋದಾಮಿನಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಿತು.
2009: ಹಿರಿಯ ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅವರ ಹೆಸರಿನಲ್ಲಿ ನೀಡುವ 'ಚಿದಾನಂದ ಪ್ರಶಸ್ತಿ'ಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರ ಆಯ್ಕೆಯಾದರು.
2009: ಧಾರವಾಡದ ವ್ಯಂಗ್ಯಚಿತ್ರ ಕಲಾವಿದ ಪ್ರಭಾಕರ ರಾವ್ ಬೈಲ್ ಅವರಿಗೆ ಬೆಂಗಳೂರಿನ ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆ ನೀಡುವ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಲಭಿಸಿತು. ದೇಶದ ಏಳು ಪ್ರಸಿದ್ಧ ವ್ಯಂಗ್ಯಚಿತ್ರಕಾರರಿಗೆ ಈ ಪ್ರಶಸ್ತಿ ದೊರೆತಿದ್ದು, ರಾಜ್ಯದಿಂದ ರಾವ್ ಬೈಲ್ ಒಬ್ಬರು ಈ ಪ್ರಶಸ್ತಿಗೆ ಪಾತ್ರರಾದರು. ಮೂಲತಃ ಕೇರಳದವರಾದ ರಾವ್ ಬೈಲ್, ಭಾರತೀಯ ಜೀವ ವಿಮಾ ನಿಗಮದ ಮುಂಬೈಯ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿ, ನಂತರ 1989ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಧಾರವಾಡಕ್ಕೆ ಬಂದು ನೆಲೆಸಿದ್ದರು. 'ಪ್ರಜಾವಾಣಿ', 'ಮಯೂರ' ಸೇರಿದಂತೆ ರಾಷ್ಟ್ರದ ಅನೇಕ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡಿವೆ.
2009: ವಿಪ್ರೊ ಟೆಕ್ನಾಲಾಜಿಸ್‌ನ ನೂತನ 'ತರಂಗ್' ಪ್ರಯೋಗಾಲಯವನ್ನು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಬೆಂಗಳೂರಿನಲ್ಲಿ ಉದ್ಘಾಟಿಸಿದರು.
2008: ಭೂ ಮೇಲ್ಮೈಯಿಂದ ಮೇಲ್ಮೈಗೆ 3000 ಕಿ.ಮೀ. ದೂರದವರೆಗೆ ಅಣ್ವಸ್ತ್ರ ಸಾಗಣೆ ಸಾಮರ್ಥ್ಯ ಉಳ್ಳ ಅಗ್ನಿ- 3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ಭಾರತವು ಒರಿಸ್ಸಾ ಕರಾವಳಿಯ ವ್ಹೀಲರ್ಸ್ ದ್ವೀಪದಿಂದ ಈದಿನ ನಡೆಸಿತು. ಮಧ್ಯಂತರಗಾಮೀ ಖಂಡಾಂತರ ಕ್ಷಿಪಣಿಯನ್ನು (ಐ ಆರ್ ಬಿ ಎಂ) ಸಮಗ್ರ ಪರೀಕ್ಷಾ ವಲಯದ ಉಡಾವಣಾ ಸಮುಚ್ಚಯದ ಸಂಚಾರಿ ಉಡಾವಣಾ ವಾಹನದಿಂದ ಬೆಳಗ್ಗೆ 9.56ರ ವೇಳೆಗೆ ಉಡಾಯಿಸಲಾಯಿತು. 16 ಮೀಟರ್ ಉದ್ದ, 1.8 ಮೀಟರ್ ಅಗಲದ ಕ್ಷಿಪಣಿಯು ಲಂಬವಾಗಿ ಮೇಲಕ್ಕೇರಿ ಸ್ವಲ್ಪ ಬಾಗಿದ ಸ್ಥಿತಿಯಲ್ಲಿ ದಟ್ಟವಾದ ಕಿತ್ತಳೆ ಹಾಗೂ ಬಿಳಿ ಬಣ್ಣದ ಧೂಮದ ಕಂಭವನ್ನು ಹಿಂದಿನಿಂದ ಸೃಷ್ಟಿಸುತ್ತಾ ಗಗನಕ್ಕೆ ಚಿಮ್ಮಿತು. ಕೆಲವೇ ಸೆಕೆಂಡುಗಳಲ್ಲಿ ಬರಿಗಣ್ಣಿಗೆ ಕಾಣದಷ್ಟು ದೂರಕ್ಕೆ ಅದು ಚಲಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಅಗ್ನಿ-3 ಕ್ಷಿಪಣಿಯ ಒಳಗೆ ಅದರ ಮಾರ್ಗದರ್ಶನಕ್ಕಾಗಿ ಕಂಪ್ಯೂಟರ್ ಒಂದನ್ನು ಇರಿಸಲಾಗಿತ್ತು. ಮುಖ್ಯ ಉಡಾವಣಾ ಸ್ಥಳವಲ್ಲದೆ, ನೌಕಾಪಡೆಯ ಇತರ ಎರಡು ಸಮರ ನೌಕೆಗಳು ಅತ್ಯಾಧುನಿಕ ಬ್ಯಾಟರಿ ಚಾಲಿತ ರೇಡಾರ್, ಎಲೆಕ್ಟ್ರೋ- ಆಪ್ಟಿಕ್ ಪತ್ತೆ ವ್ಯವಸ್ಥೆಗಳು, ಟೆಲಿಮೆಟ್ರಿಕ್ ಮಾಹಿತಿ ಕೇಂದ್ರಗಳೊಂದಿಗೆ ಕ್ಷಿಪಣಿಯ ಚಲನೆಯನ್ನು ಗಮನಿಸುತ್ತವೆ. ಹಾರಾಟದ ಮಾಹಿತಿ ಲಭಿಸಿದ ಬಳಿಕ ಪರೀಕ್ಷಾ ಫಲಿತಾಂಶ ತಿಳಿಯುತ್ತದೆ ಎಂದು ರಕ್ಷಣಾ ಮೂಲಗಳು ಹೇಳಿದವು. 48 ಟನ್ ತೂಕದ ಅಗ್ನಿ-3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು 2006ರ ಜುಲೈ 9ರಂದು ಮೊದಲ ಬಾರಿಗೆ ನಡೆಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಗಳ ಕಾರಣ ಅದು ವಿಫಲಗೊಂಡಿತ್ತು. 2007ರ ಏಪ್ರಿಲ್ 12ರಂದು ನಡೆಸಲಾದ ಎರಡನೇ ಪರೀಕ್ಷಾ ಹಾರಾಟವು ಯಶಸ್ವಿಯಾಗಿ ಉದ್ದೇಶವನ್ನು ಈಡೇರಿಸಿತ್ತು. ಅಗ್ನಿ-3 ರಾಷ್ಟ್ರದ ಮೊತ್ತ ಮೊದಲ ಘನ ಇಂಧನ ಕ್ಷಿಪಣಿಯಾಗಿದ್ದು, ಸುಲಲಿತವಾಗಿ ಬಳಸಲು ಸಾಧ್ಯವಿರುವಂತಹ ಕ್ಷಿಪಣಿ. ಈ ಪ್ರಯೋಗದಲ್ಲಿ ಯಶಸ್ವಿಯಾಗಿರುವ ಭಾರತ ಇದೀಗ ದೇಶಾಂತರ್ಗಾಮಿ ಕ್ಷಿಪಣಿಗಳನ್ನು (ಐ ಆರ್ ಬಿ ಎಂ) ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದಂತಾಯಿತು. 3,500ಕಿ.ಮೀ. ವ್ಯಾಪ್ತಿಯುಳ್ಳ ಈ ಕ್ಷಿಪಣಿ ಭಾರತದಿಂದ ಚೀನಾದ ಬೀಜಿಂಗ್ ಅಥವಾ ಶಾಂಘೈ ನಗರಕ್ಕೆ ಕೆಲವೇ ಕ್ಷಣಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿರುವುದು ವಿಶೇಷ.
2008: ಬಾಂಗ್ಲಾದೇಶದ ಭ್ರಷ್ಟಾಚಾರ ವಿರೋಧಿ ಸಮಿತಿಯು ವರ್ಷದ ಹಿಂದೆ ಬಂಧಿಸಲಾದ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರಹಮಾನ್ ವಿರುದ್ಧ, ಕೊಲೆ ಪ್ರಕರಣವೊಂದನ್ನು ಮುಚ್ಚಿಹಾಕಲು 12.6 ಕೋಟಿ ರೂಪಾಯಿ ಲಂಚ ಪಡೆದಿರುವುದಾಗಿ ಆಪಾದಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು. ರಹಮಾನ್, ಮಾಜಿ ಬಿ ಎನ್ ಪಿ ಸಚಿವ ಲುಫ್ತುಜಾಮನ್ ಬಾಬರ್ ಮತ್ತು ಇತರ ಆರು ಮಂದಿ ವಿರುದ್ಧ 2006ರಲ್ಲಿ ನಡೆದ ಬಶುಂಧರಾ ಬಿಸಿನೆಸ್ ಗ್ರೂಪಿನ ನಿರ್ದೇಶಕ ಹುಮಾಯೂನ್ ಕಬೀರ ಸಬ್ಬೀರ್ ಕೊಲೆ ಪ್ರಕರಣದ ತನಿಖೆಗೆ ಅಡ್ಡಿ ಒಡ್ಡಲು ಅಧಿಕಾರ ದುರುಪಯೋಗಿಸಿದ ಆಪಾದನೆ ಹೊರಿಸಲಾಯಿತು. ಆರೋಪಿಗಳು 21 ಕೋಟಿ ಟಾಕಾವನ್ನು ಕಂಪೆನಿ ಅಧ್ಯಕ್ಷ ಅಹ್ಮದ್ ಅಕ್ಬರ್ ಸೋಭನ್ ಅವರಿಂದ ಲಂಚ ಪಡೆದಿದ್ದರು. ಸಬ್ಬೀರನನ್ನು ಕೊಲೆಗೈದ ಆರೋಪಕ್ಕೆ ಒಳಗಾಗಿರುವ ಸೋಭನ್ ಪುತ್ರ ಷಫಿಯತ್ ಸೋಭನ್ ಸನ್ವೀರನ ಹೆಸರನ್ನು ಪ್ರಕರಣದಿಂದ ಕೈಬಿಡಲು ಈ ಲಂಚ ಸ್ವೀಕರಿಸಲಾಗಿತ್ತು ಎಂದು ಸಮಿತಿ ಹೇಳಿತು.
2008: ರಷ್ಯಾದ ನೂತನ ಅಧ್ಯಕ್ಷರಾಗಿ ದಿಮಿತ್ರಿ ಮೆಡ್ವೆಡೆವ್ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಸ್ವಲ್ಪ ಹೊತ್ತಿನ ಬಳಿಕ ಮೆಡ್ವೆಡೆವ್, ವ್ಲಾದಿಮೀರ್ ಪುಟಿನ್ ಅವರನ್ನು ಮತ್ತೆ ರಷ್ಯ ಪ್ರಧಾನಿಯಾಗಿ ನೇಮಿಸಿದರು. ಮಾಸ್ಕೊ ನಗರದ ದಿ ಗ್ರಾಂಡ್ ಕ್ರೆಮ್ಲಿನ್ ಅರಮನೆಯಲ್ಲಿ ನಡೆದ ಅಭೂತಪೂರ್ವ ಸಮಾರಂಭದಲ್ಲಿ ಎರಡು ಸಾವಿರ ಆಹ್ವಾನಿತ ಪ್ರತಿನಿಧಿಗಳು ಹಾಜರಿದ್ದರು. ಮಾಜಿ ಕಾರ್ಪೊರೇಟ್, ವಕೀಲರಾಗಿದ್ದ ಮೆಡ್ವೆಡೆವ್, ಪುಟಿನ್ ಅವರ ಬಹಳ ಹಳೆಯ ಒಡನಾಡಿ. ಪ್ರಧಾನಿ ವಿಕ್ಟೋರ್ ಝುಬ್ಕೊವ್ ಅವರು ರಾಜೀನಾಮೆ ಸಲ್ಲಿಸಿದ್ದರಿಂದ ಅವರ ಸ್ಥಾನಕ್ಕೆ ಮೆಡ್ವೆಡೆವ್ ಅವರು ಪುಟಿನ್ ಅವರನ್ನು ನೇಮಕ ಮಾಡಿದರು.
2008: ಮ್ಯಾನ್ಮಾರಿನಲ್ಲಿ ನರ್ಗೀಸ್ ಚಂಡಮಾರುತದ ಹಾವಳಿಯಲ್ಲಿ ಬದುಕುಳಿದವರ ನೆರವಿಗಾಗಿ ಭಾರತ `ಸಹಾಯ ಕಾರ್ಯಾಚರಣೆ' ಆರಂಭಿಸಿತು. ಈ ಚಂಡಮಾರುತದಿಂದ ಮ್ಯಾನ್ಮಾರಿನಲ್ಲಿ ಸುಮಾರು 22.500 ಜನರು ಸತ್ತಿದ್ದು ಇತರ 41 ಸಾವಿರ ಜನರು ನಾಪತ್ತೆಯಾದರು. ಮೇ 2 ಮತ್ತು 3ರಂದು ಮ್ಯಾನ್ಮಾರ್ ಕಡಲ ತೀರವನ್ನು ಅಪ್ಪಳಿಸಿದ್ದ ಈ ಚಂಡಮಾರುತವು ಅನೇಕ ಹಳ್ಳಿಗಳನ್ನು ನೆಲಸಮ ಮಾಡಿತ್ತು. ಲಕ್ಷಾಂತರ ಜನರು ಮನೆಮಠ ಕಳೆದುಕೊಂಡು ನಿರಾಶ್ರಿತರಾದರು.
2008: ಫಾರ್ವರ್ಡ್ ಬ್ಲಾಕ್ ಸದಸ್ಯ ಬರುನ್ ಮುಖರ್ಜಿ ಅವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಧ್ಯಕ್ಷ ಹಮೀದ್ ಅನ್ಸಾರಿ ಮಾನ್ಯ ಮಾಡಿದರು. ಎಡರಂಗವು ರಾಜ್ಯಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಪಿಐಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪಿಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
2008: ದಶಕದ ಬಳಿಕ ಚೀನಾ ಹಾಗೂ ಜಪಾನ್ ದೇಶಗಳ ನಡುವೆ ಮೊದಲ ಶೃಂಗ ಸಭೆ ಟೋಕಿಯೋದಲ್ಲಿ ಆರಂಭವಾಯಿತು.
2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಅವರು ಮೊದಲ `ವಿಶ್ವ ಆರ್ಥಿಕ ಪ್ರಶಸ್ತಿ'ಗೆ ಆಯ್ಕೆಯಾದರು. ಅರ್ಥ ವ್ಯವಸ್ಥೆ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿನ ಮೂಲಭೂತ ಸಮಸ್ಯೆಗಳ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜರ್ಮನ್ ಮಾಜಿ ಚಾನ್ಸಲರ್ ಹೆಲ್ಮಂಡ್ ಶ್ಮಿಂಡ್ ಅವರೊಂದಿಗೆ ಸೇನ್ ಅವರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2007: ಮೊದಲ ಸ್ವಾತಂತ್ರ್ಯ ಸಂಗ್ರಾಮದ 150ನೇ ವಾರ್ಷಿಕೋತ್ಸವದ ಅಂಗವಾಗಿ ಮೀರತ್ತಿನಿಂದ ದೆಹಲಿಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಹೊರಟ 10,000ಕ್ಕೂ ಹೆಚ್ಚು ಯುವಕರ `ಯಾತ್ರೆ'ಗೆ ಮೀರತ್ತಿನಲ್ಲಿ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಮಣಿ ಶಂಕರ ಅಯ್ಯರ್ ಚಾಲನೆ ನೀಡಿದರು.
2007: ಕಾವೇರಿ ನ್ಯಾಯಮಂಡಳಿ ನೀಡಿದ್ದ ಅಂತಿಮ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ಕೇರಳ, ಮತ್ತು ತಮಿಳುನಾಡು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳನ್ನು ಅಂಗೀಕರಿಸಿ ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನಿರ್ಧರಿಸುವ ಮೂಲಕ ಸುಪ್ರೀಂಕೋರ್ಟ್ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಇನ್ನೊಂದು ಸುತ್ತಿನ ಕಾನೂನು ಸಮರಕ್ಕೆ ಹಸಿರು ನಿಶಾನೆ ತೋರಿತು.
2007: ಢಾಕ್ಕಾಕ್ಕೆ ಮರಳುವುದಕ್ಕೆ ಕೊನೆ ಕ್ಷಣದಲ್ಲಿ ವಿಮಾನ ಏರಲು ಅವಕಾಶ ನಿರಾಕರಿಸಲಾದ 15 ದಿನಗಳ ನಂತರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (60) ಅವರು ಲಂಡನ್ನಿನಿಂದ ಸ್ವದೇಶಕ್ಕೆ ಪ್ರಯಾಣ ಬೆಳೆಸಿದರು.
2007: ತೀವ್ರ ಹಣಾಹಣಿಯಿಂದ ಕೂಡಿದ್ದ ಫ್ರಾನ್ಸಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥೀಯ ಅಭ್ಯರ್ಥಿ ನಿಕೋಲಾಸ್ ಸರ್ಕೋಜಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಹಿಂಸಾಚಾರ ಭುಗಿಲೆದ್ದಿತು.
2006: ಇರಾನಿನ ದಕ್ಷಿಣಕ್ಕಿರುವ ಜರಾಂದ್ ಪಟ್ಟಣ ಹಾಗೂ ತೈವಾನಿನ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 5.2ರಷ್ಟು ಪ್ರಮಾಣದ ಭಾರಿ ಭೂಕಂಪ ಸಂಭವಿಸಿತು. 74 ಮಂದಿ ಗಾಯಗೊಂಡು, ಬಹುತೇಕ ಮನೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಂಡವು.
2006: ಗ್ರಾಮೀಣ ಉನ್ನತೀಕರಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ `ಅಸ್ತ್ರ' ಸಂಸ್ಥೆಯ ಸ್ಥಾಪಕ ಎಕೆಎನ್ ಎಂದೇ ಖ್ಯಾತರಾಗಿದ್ದ ಪ್ರೊ. ಅಮೂಲ್ಯ ಕುಮಾರ ನಾರಾಯಣ ರೆಡ್ಡಿ (75) ಮೂತ್ರಪಿಂಡದ ವೈಫಲ್ಯದ ಪರಿಣಾಮವಾಗಿ ಬೆಂಗಳೂರಿನಲ್ಲಿ ಅಸು ನೀಗಿದರು. ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರೀಸರ್ಚ್ ಇನ್ಸ್ಟಿಟ್ಯೂಟಿನಲ್ಲಿ ಸಂಶೋಧನಾ ಅಧಿಕಾರಿಯಾಗಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಭೌತ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರೆಡ್ಡಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ `ಅಸ್ತ್ರ' ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಎನರ್ಜಿ ಫಾರ್ ಸಸ್ಟೈನೇಬಲ್ ವರ್ಲ್ಡ್ಡ್ ಸಂಸ್ಥೆಯು ಇವರಿಗೆ 2000ದಲ್ಲಿ ವೋಲ್ವೊ ಪ್ರಶಸ್ತಿ ನೀಡಿ ಗೌರವಿಸಿತ್ತು. 2002ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಕೂಡಾ ಇವರಿಗೆ ಲಭಿಸಿತ್ತು.
2006: ಮಧ್ಯಪ್ರದೇಶ ಸರ್ಕಾರದ ಸಂಸ್ಕೃತಿ ಇಲಾಖೆಯು ಲಘು ಸಂಗೀತದಲ್ಲಿ ಮಾಡಿದ ಸಾಧನೆಗೆ ನೀಡುವ ಲತಾ ಮಂಗೇಶ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಹಿನ್ನಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.
1978: ಇಟಲಿಯ ರೀನ್ ಹೋಲ್ಡ್ ಮೆಸ್ನರ್ ಮತ್ತು ಆಸ್ಟ್ರಿಯಾದ ಪೀಟರ್ ಹಬ್ಲೆರರ್ ಆಮ್ಲಜನಕ ಇಲ್ಲದೆಯೇ ಮೊತ್ತ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರಿದರು.
1956: ಕಲಾವಿದ ವಲ್ಲೀಶ್ ವಿ. ಜನನ.
1955: ಕಲಾವಿದ ರಮೇಶ ಟಿ.ಎನ್. ಜನನ.
1949: ಸಂಗೀತ ಹಾಗೂ ಶಿಕ್ಷಣ ತಜ್ಞ ಡಾ. ಎಸ್.ವಿ. ರಮಣಕುಮಾರ್ ಅವರು ಜಿ.ಎಲ್. ಸೂರಪ್ಪ- ಕಮಲಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಜನಿಸಿದರು.
1945: ಕಲಾವಿದ ಶೆಲ್ವ ನಾರಾಯಣ ಜನನ.
1915: ಜರ್ಮನಿಯ ಯು-139 ಜಲಾಂತರ್ಗಾಮಿ ಮೂಲಕ ಸಿಡಿಸಿದ ಜಲಕ್ಷಿಪಣಿ (ಟಾರ್ಪೆಡೊ) ಐರಿಷ್ ಕರಾವಳಿಯ ಬಳಿ ಇದ್ದ ಬ್ರಿಟಿಷ್ ನೌಕೆ ಲುಸಿಟಾನಿಯಾವನ್ನು ಮುಳುಗಿಸಿತು. ಅದರಲ್ಲಿದ್ದ ಸುಮಾರು 1200 ಜನ ಮೃತರಾದರು.
1888: ಜಾರ್ಜ್ ಈಸ್ಟ್ ಮನ್ ಮೊದಲ ಬಾರಿಗೆ ಅಮೆರಿಕನ್ ಮಾರುಕಟ್ಟೆಗೆ ಕೊಡಕ್ ಕ್ಯಾಮರಾವನ್ನು ಪರಿಚಯಿಸಿದ. `ನೀವು ಬಟನ್ ಒತ್ತಿರಿ, ಉಳಿದದ್ದನ್ನೆಲ್ಲ ನಾವು ಮಾಡುತ್ತೇವೆ' ಎಂಬ ಘೋಷಣೆಯೊಂದಿಗೆ ಆತ ಈ ಕ್ಯಾಮರಾವನ್ನು ಮಾರುಕಟ್ಟೆಗೆ ಬಿಟ್ಟ. ಕೈಯಲ್ಲಿ ಹಿಡಿದುಕೊಳ್ಳಬಹುದಾದ ಈ ಸರಳ ಬಾಕ್ಸ್ ಕ್ಯಾಮರಾದಿಂದ 100 ಫ್ರೇಮುಗಳ ರೋಲ್ ಹಾಕಿ ಫೋಟೋ ತೆಗೆಯಬಹುದಿತ್ತು. ಫಿಲ್ಮ್ ಮುಗಿದ ಬಳಿಕ ಡೆವಲಪ್ಪಿಂಗ್, ಪ್ರಿಂಟಿಂಗ್, ರಿಲೋಡಿಂಗಿಗೆ ಕ್ಯಾಮರಾವನ್ನೇ ಉತ್ಪಾದಕರಿಗೆ ಕಳುಹಿಸಬಹುದಾಗಿತ್ತು.
1861: ರಬೀಂದ್ರನಾಥ್ ಟ್ಯಾಗೋರ್ (1861-1941) ಜನ್ಮದಿನ. ಬಂಗಾಳಿ ಕವಿ, ಸಾಹಿತಿಯಾದ ಇವರು 1913ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷಿಯನ್ನರೆಂಬ ಹೆಗ್ಗಳಿಕೆ ಪಡೆದವರು. ಗಾಂಧೀಜಿಯವರನ್ನು ಮೊತ್ತ ಮೊದಲ ಬಾರಿಗೆ `ಮಹಾತ್ಮ' ಎಂಬುದಾಗಿ ಕರೆದದ್ದು ರಬೀಂದ್ರನಾಥ್ ಟ್ಯಾಗೋರ್ ಅವರೇ.
No comments:
Post a Comment