Monday, May 14, 2018

ಇಂದಿನ ಇತಿಹಾಸ History Today ಮೇ 13

ಇಂದಿನ ಇತಿಹಾಸ History Today ಮೇ 13
 2018: ನವದೆಹಲಿ: ಸಂಜೆ ದಿಢೀರನೆ ಬೀಸಿದ ದೂಳು ಮಿಶ್ರಿತ ಬಿರುಗಾಳಿ, ಗುಡುಗು, ಸಿಡಿಲು ಸಹಿತವಾದ ಭಾರಿ ಮಳೆಗೆ ದೆಹಲಿ- ಎನ್ ಸಿ ಆರ್, ನೊಯಿಡಾ, ಗುರುಗ್ರಾಮ, ಫರೀದಾಬಾದ್, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಒಟ್ಟು ೩೨ ಮಂದಿ ಸಾವನ್ನಪ್ಪಿದರು. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೭೦ಕ್ಕೂ ಹೆಚ್ಚು ವಿಮಾನಗಳನ್ನು ಬೇರೆ ಮಾರ್ಗಗಳಿಗೆ ಕಳುಹಿಸಲಾಯಿತು. ಮೆಟ್ರೋ ಸೇರಿದಂತೆ ರಾಜಧಾನಿಯ ಸಂಚಾರ ಅಸ್ತವ್ಯಸ್ತಗೊಂಡಿತು. ಈದಿನ  ಸಂಜೆ ದಿಢೀರನೆ ಬೀಸಿದ ದೂಳು ಮಿಶ್ರಿತ ಬಿರುಗಾಳಿ, ಗುಡುಗು, ಸಿಡಿಲು ಮಳೆಯಿಂದ ದೆಹಲಿ-ಎನ್ ಸಿಆರ್ ನಿವಾಸಿಗಳು ಅಚ್ಚರಿಗೊಂಡರು. ಬಿರುಗಾಳಿ, ಗುಡುಗು, ಮಳೆಯ ಪರಿಣಾಮವಾಗಿ ವಿಮಾನ, ಮೆಟ್ರೋ ಪಯಣ ಸೇರಿದಂತೆ ಸಂಚಾರ ಅಸ್ತವ್ಯಸ್ತಗೊಂಡಿತು. ದೆಹಲಿ ವಿಮಾನ ನಿಲ್ದಾಣದಿಂದ ೭೦ ವಿಮಾನಗಳನ್ನು ಬೇರೆ ಕಡೆಗೆ ತಿರುಗಿಸಿದರೆ, ೩ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗೆ ಅಡಚಣೆಯಾಯಿತು. ದೆಹಲಿ, ಗುರುಗ್ರಾಮ ಮತ್ತು ಫರೀದಾಬಾದ್ ಪ್ರಬಲ ದೂಳು ಮಿಶ್ರಿತ ಬಿರುಗಾಳಿ, ಗುಡುಗು, ಸಿಡಿಲು ಸಹಿತವಾದ ಮಳೆಯನ್ನು ಕಂಡವು. ಪರಿಣಾಮವಾಗಿ ನಗರದ ತಾಪಮಾನ ಹಲವು ಡಿಗ್ರಿಗಳಷ್ಟು ತಗ್ಗಿತು. ಸಂಜೆ ೪.೩೦ರ ಸುಮಾರಿಗೆ ನಗರದಲ್ಲಿ ಹವಾಮಾನ ದಿಢೀರನೆ ಬದಲಾಗಿ, ದೂಳು ಮಿಶ್ರಿತ ಬಿರುಗಾಳಿ ಇಡೀ ನಗರವನ್ನು ಆವರಿಸಿತು. ದಿಢೀರ್ ಗಾಳಿ ಮಳೆಯ ಪರಿಣಾಮವಾಗಿ ಬ್ಲೂ, ವಯೋಲೆಟ್ ಮತ್ತು ಮಗೆಂಟಾ ಮಾರ್ಗಗಳಲ್ಲಿ ಮೆಟ್ರೋ ರೈಲು ಓಡಾಟ ಸ್ಥಗಿತಗೊಂಡಿತು. ಆದರೆ ಭೂಗತ ಮಾರ್ಗಗಳಲ್ಲಿ ಮೆಟ್ರೋ ಸಂಚಾರ ನಿಧಾನವಾಗಿ ನಡೆದಿದೆ ಎಂದು ಡಿಎಂಆರ್ ಸಿ ಹೇಳಿತು. ಬಿರುಗಾಳಿಯಿಂದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪಾಲ್ಗೊಂಡಿದ್ದ ಐಪಿ ವಿಸ್ತರಣಾ ಸಮಾರಂಭ ಸ್ಥಗಿತಗೊಂಡಿತು. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅಡಚಣೆಯಾಯಿತು. ೫೦ ವಿಮಾನಗಳನ್ನು ಬೇರೆ ಕಡೆಗಳಿಗೆ ತಿರುಗಿಸಲಾಯಿತು. ದೆಹಲಿಯಲ್ಲಿ ವಿಮಾನಗಳಿಗೆ ಕೆಳಗಿಳಿಯಲು ಅನುಮತಿ ನಿರಾಕರಿಸಲಾಯಿತು ಎಂದು ದೆಹಲಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಡಿಐಎಎಲ್) ತಿಳಿಸಿತು. ಶ್ರೀನಗರ-ದೆಹಲಿ ವಿಮಾನವನ್ನು ಅಮೃತಸರಕ್ಕೆ, ಅದರ ಲಕ್ನೋ-ದೆಹಲಿ ವಿಮಾನವನ್ನು ಲಕ್ನೋಕ್ಕೆ ವಾಪಸ್ ಕಳುಹಿಸಲಾಯಿತು.  ದಿಡೀರ್ ಹವಾಮಾನ ಬದಲಾವಣೆಯ ಪರಿಣಾಮವಾಗಿ ದೆಹಲಿಯ ತಾಪಮಾನ ೩೦.೬ ಡಿಗ್ರಿ ಸೆಲ್ಸಿಯಸ್ ಗೆ ಕುಸಿಯಿತು ಎಂದು ಹವಾಮಾನ ಇಲಾಖೆ ಅಧಿಕಾರಿ ತಿಳಿಸಿದರು. ಇದಕ್ಕೆ ಮುನ್ನ ಉತ್ತರ ಪ್ರದೇಶದ ೨೬ ಜಿಲ್ಲೆಗಳಲ್ಲಿ ಗಂಟೆಗೆ ೭೦ ಕಿಮೀ ವೇಗದಲ್ಲಿ ದೂಳು ಮಿಶ್ರಿತ ಬಿರುಗಾಳಿ, ಗುಡುಗು ಮಳೆ ಬೀಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿಯೂ ಮಳೆ, ಬಿರುಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿತ್ತು. ರಾಜಸ್ಥಾನದಲ್ಲೂ ದೂಳು ಬಿರುಗಾಳಿ ಬೀಸುವ ಸೂಚನೆಯನ್ನು ಅದು ನೀಡಿತ್ತು.  ಮೇ ೯ರಂದು ಉತ್ತರ ಪ್ರದೇಶದಲ್ಲಿ ದೂಳು ಮಿಶ್ರಿತ ಚಂಡಮಾರುತ, ಮಳೆಯಿಂದ ೧೮ ಜನ ಮೃತರಾಗಿ ೨೭ ಮಂದಿ ಗಾಯಗೊಂಡಿದ್ದರು. ಉತ್ತರ ಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ ಮತ್ತು ಪಂಜಾಬಿನಲ್ಲಿ ಮೇ ೨ ಮತ್ತು ೩ರಂದು ಬೀಸಿದ ದೂಳು ಮಿಶ್ರಿತ ಚಂಡಮಾರುತ, ಗುಡುಗು, ಸಿಡಿಲ ಮಳೆಗೆ ೧೩೪ ಜನರು ಬಲಿಯಾಗಿ ೪೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಉತ್ತರ ಪ್ರದೇಶ ಒಂದರಲ್ಲೇ ೮೦ ಜನ ಸಾವನ್ನಪ್ಪಿದ್ದರು.


2018: ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಪುತ್ರ ತೇಜ್ ಪ್ರತಾಪ್ ಮತ್ತು
ಐಶ್ವರ್‍ಯ ರೈ ಅವರ ಮದುವೆಯ ವೇಳೆಯಲ್ಲಿ ’ವದಂತಿ ಒಂದರ ಪರಿಣಾಮವಾಗಿ ಬಂದಿದ್ದ ಅತಿಥಿಗಳು ಸಹನೆ ಕಳೆದುಕೊಂಡು ಊಟದ ಮನೆಯಲ್ಲಿ ದೊಂಬಿ ನಡೆಸಿದ ಘಟನೆ ಘಟಿಸಿತು. ಮದುವೆ ಸಮಾರಂಭ ಯೋಜಿಸಿದ್ದಂತೆಯೇ ವ್ಯವಸ್ಥಿತವಾಗಿಯೇ ನಡೆದಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಸಮಾರಂಭಕ್ಕೆ ಆಗಮಿಸಿ ವಧೂವರರಿಗೆ ಶುಭ ಹಾರೈಸಿದ್ದರು.  ಈ ಮಧ್ಯೆ ’ನಿಮಗೆ ಗೊತ್ತೆ? ಅತಿಗಣ್ಯ ವ್ಯಕ್ತಿಗಳೆಲ್ಲರೂ (ವಿಐಪಿ) ಇದಕ್ಕಿಂತಲೂ ರುಚಿಕರವಾದ ಭಕ್ಷ್ಯಗಳನ್ನು ಸವಿಯುತ್ತಿದ್ದಾರೆ ಎಂದು ಯಾರೋ ಒಬ್ಬರು ಹೇಳಿದರು. ಸಾಮಾನ್ಯ ಜನರಿಗಾಗಿ ಸುಮಾರು ೨೦೦ ಕಡೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮೇಲಿನ ವದಂತಿ ಕಿವಿಗೆ ಬಿದ್ದ ತತ್ ಕ್ಷಣವೇ ’ಸಾಮಾನ್ಯ ಜನರ ಆಹಾರ ತಾಣಗಳಲ್ಲಿ ಜನ ಸಿಟ್ಟಿಗೆದ್ದರು.  ಭ್ರಮನಿರಸನಗೊಂಡ ಅತಿಥಿಗಳು, ಬಹುತೇಕ ಮಂದಿ ಆರ್ ಜೆಡಿ ಬೆಂಬಲಿಗರು, ಅಡ್ಡಗಟ್ಟೆಗಳನ್ನು ಮುರಿದು ವಿಐಪಿಗಳಿಗೆ ಆಹಾರ ನೀಡಲಾಗುತ್ತಿದ್ದ ಪ್ರದೇಶಕ್ಕೆ ನುಗ್ಗಿ, ಅಲ್ಲಿದ್ದ ಆಹಾರ ಮತ್ತು ಅಲಂಕಾರದ ವಸ್ತುಗಳನ್ನು  ಲೂಟಿ ಮಾಡಿದರು. ಸ್ವಲ್ಪವೇ ಹೊತ್ತಿನಲ್ಲಿ ಚೂರು ಚೂರಾದ ತಟ್ಟೆ, ಲೋಟಗಳು, ಚೆಲ್ಲಾಚೆದರಾಗಿ ಬಿದ್ದ ಮೇಜು ಮತು ಕುರ್ಚಿಗಳಿಂದ ಪ್ರದೇಶ ರಣಾಂಗಣದಂತಾಯಿತು. ಪಕ್ಷದ ಹಲವಾರು ನಾಯಕರು ಬೆತ್ತ ಬೀಸುತ್ತಾ ಒಳನುಗ್ಗಿದವರನ್ನು ಅಟ್ಟಿಸಿಕೊಂಡು ಹೋಗಲು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಾಣಿಸಿದವು.  ನಿಯಂತ್ರಿಸಲಾಗದ ಗುಂಪು ಸುಮಾರು ೨೦೦೦ ತಟ್ಟೆಗಳನ್ನು ಒಡೆದು ಹಾಕಿ ಹಲವಾರು ಅಡುಗೆ ಪಾತ್ರೆಗಳು ಮತ್ತು ಇತರ ವಸ್ತುಗಳನ್ನು ಲೂಟಿ ಮಾಡಿದೆ ಎಂದು ಅಡುಗೆ ಸರಬರಾಜುದಾರರು ನುಡಿದರು. ಮದುವೆಗೆ ಒಂದು ದಿನ ಮೊದಲು ಅಡುಗೆ ಸರಬರಾಜು ವ್ಯವಸ್ಥೆಯ ಹೊಣೆ ಹೊತ್ತಿದ್ದ ಕಾನ್ಪುರದ ಭಾಟಿಯ  ಕ್ಯಾಟರರ್‍ಸ್ ತಮಗೆ ೧೦,೦೦೦ ಜನರಿಗೆ ಊಟದ ವ್ಯವಸ್ಥೆ ಮಾಡಲು ತಿಳಿಸಲಾಗಿತ್ತು, ಆದರೆ ಈದಿನ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಆರ್ ಜೆಡಿ ಕಾರ್‍ಯಕರ್ತರಿಂದ ತಾಣವು ಕಿಕ್ಕಿರಿಯಿತು ಎಂದು ಅವರು ನುಡಿದರು. ಕ್ಯಾಟರರ್‍ಸ್ ಮಾಹಿತಿಗೆ ವ್ಯತಿರಿಕ್ತವಾಗಿ ಆರ್ ಜೆಡಿ ನಾಯಕ ಶಕ್ತಿ ಯಾದವ್ ಅವರು ಸಮಾರಂಭಕ್ಕೆ ಸಂಜೆ ಸುಮಾರು ೫೦,೦೦೦ ಅತಿಥಿಗಳು ಹಾಜರಾಗುವ ನಿರೀಕ್ಷೆ ಇತ್ತು ಎಂದು ಹೇಳಿದರು.  ದೊಂಬಿ ನಿರತರು ಬಿಹಾರಿನ ಹಲವಾರು ಮಾಧ್ಯಮ ಮಂದಿಯ ಮೇಲೆ ಕೈ ಮಾಡಿದ್ದಲ್ಲದೆ, ಕೆಲವರ ಕ್ಯಾಮರಾ ಮತ್ತಿತರ ಸಾಧನಗಳನ್ನೂ ಹಾನಿಗೊಳಿಸಿದರು.    ಮಧ್ಯೆ, ಲಾಲು ಪ್ರಸಾದ್ ಪುತ್ರ ಮತ್ತು ಶಾಸಕಿ ಚಂದ್ರಿಕಾ ರೈ ಪುತ್ರಿಯ ಮದುವೆ ಮುಗಿಸಿಕೊಂಡು ವಾಪಸ್ ಹೊರಟಿದ್ದ ಎಸ್ ಯುವಿ ವಾಹನವೊಂದು ಅಪಘಾತಕ್ಕೆ ಈಡಾದ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದರು ಎಂದು ವರದಿಗಳು ಹೇಳಿದವು. ಮೇವು ಹಗರಣದಲ್ಲಿ ಶಿಕ್ಷೆಯಾಗಿ ಸೆರೆವಾಸ ಅನುಭವಿಸುತ್ತಿದ್ದ ಲಾಲು ಪ್ರಸಾದ್ ಅವರು ಪುತ್ರನ ವಿವಾಹದ ಸಲುವಾಗಿ ಸಂಕ್ಷಿಪ್ತ ಅವಧಿಯ ಪೆರೋಲ್ ಮೇಲೆ ಮನೆಗೆ ಬಂದಿದ್ದರು.

2018: ನವದೆಹಲಿ: ರಾಷ್ಟಾದ್ಯಂತ ಸೆರೆಮನೆಗಳಲ್ಲಿ ಮಿತಿ ಮೀರಿ ಕೈದಿಗಳನ್ನು ತುಂಬಿಸುವುದಕ್ಕೆ ಆಕ್ಷೇಪ ವ್ಯಕ್ತ
ಪಡಿಸಿದ ಸುಪ್ರೀಂಕೋರ್ಟ್ ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿತು. ಕೆಲವೆಡೆ ಸೆರೆಮನೆಗಳಲ್ಲಿ ಸಾಮರ್ಥ್ಯದ ಶೇಕಡಾ ೧೫೦ರಷ್ಟು ಪ್ರಮಾಣದಲ್ಲೂ ಕೈದಿಗಳನ್ನು ತುಂಬಲಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿರುವ ಸುಪ್ರೀಂಕೋರ್ಟ್ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದರಿಂದ ಈ ವಿಷಯವನ್ನು ರಿಗಣಿಸಿ ಎಂದು ಎಲ್ಲ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿತು. ವಿಷಯವನ್ನು ಸ್ವ ಇಚ್ಛೆಯ ರಿಟ್ ಅರ್ಜಿಯಾಗಿ ಕೈಗೆತ್ತಿಕೊಳ್ಳುವಂತೆ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಿದ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಕೋರ್ಟ್ ಸಹಾಯಕರಾಗಿ (ಅಮಿಕಸ್ ಕ್ಯೂರಿ) ಪೀಠಕ್ಕೆ ನೆರವಾದ ವಕೀಲರು ಕೊಟ್ಟ ಟಿಪ್ಪಣಿಯನ್ನು ಉಲ್ಲೇಖಿಸಿದರು. ಅಮಿಕಸ್ ಕ್ಯೂರಿ ಅವರು ಕೊಟ್ಟಿರುವ ಟಿಪ್ಪಣಿಯಿಂದ ಸೆರೆಮನೆಗಳಲ್ಲಿ ಮಿತಿಮೀರಿ ಕೈದಿಗಳನ್ನು ತುಂಬುವ ವಿಚಾರವನ್ನು ಸೆರೆಮನೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಶೇಕಡಾ ೧೦೦ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೈದಿಗಳಿರುವ ಹಲವಾರು ಸೆರೆಮನೆಗಳಿವೆ, ಕೆಲವು ಕಡೆ ಕೈದಿಗಳ ಸಂಖ್ಯೆ ಶೇಕಡಾ ೧೫೦ನ್ನು  ಮೀರಿದೆ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ದೀಪಕ್ ಗುಪ್ತ ಅವರ ಪೀಠ ಹೇಳಿತು.  ‘ನಮ್ಮ ಅಭಿಪ್ರಾಯದಂತೆ ಈ ವಿಷಯವನ್ನು ಪ್ರತಿಯೊಂದು ಹೈಕೋರ್ಟ್ ಕೂಡಾ ಸ್ವತಂತ್ರವಾಗಿ ಪರಿಗಣಿಸಬೇಕು. ಇದಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ/ ಹೈಕೋರ್ಟ್ ಕಾನೂನು ಸೇವಾ ಸಮಿತಿಯ ನೆರವು ಪಡೆದುಕೊಳ್ಳಬೇಕು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗುವುದರಿಂದ ಸೆರೆಮನೆಗಳಲ್ಲಿ ಕಿಕ್ಕಿರಿದು ಕೈದಿಗಳನ್ನು ತುಂಬುವ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕು
ಎಂದು ಪೀಠ ಹೇಳಿತು.  ತನ್ನ ಆದೇಶದ ಪ್ರತಿಯನ್ನು ಪ್ರತಿಯೊಂದು ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರಿಗೆ ಕಳುಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ, ಬಳಿಕ ಕೈಗೊಂಡ ಕ್ರಮದ ಬಗ್ಗೆ ವರದಿ ಕಳುಹಿಸುವಂತೆಯೂ ಸೂಚಿಸಬೇಕು ಸುಪ್ರೀಂಕೋರ್ಟಿನ ಸೆಕ್ರೆಟರಿ ಜನರಲ್ ಅವರಿಗೆ ಪೀಠ ಸೂಚಿಸಿತು.  ಸಿಬ್ಬಂದಿ ಕೊರತೆ: ಸೆರೆಮನೆಗಳಲ್ಲಿ ಸಿಬ್ಬಂದಿ ಕೊರತೆಯ ವಿಷಯವನ್ನೂ ಸುಪ್ರೀಂಕೋರ್ಟ್ ಪ್ರಸ್ತಾಪಿಸಿತು. ಸೆರೆಮನೆಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ನೇಮಿಸುವಲ್ಲಿ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು ಕಡಿಮೆ ಆಸಕ್ತಿ ತೋರಿಸುತ್ತಿವೆ ಎಂದು ಪೀಠ ಹೇಳಿತು. ಈ ವಿಷಯವನ್ನು ಕೂಡಾ ಸ್ವ ಇಚ್ಛೆಯ ಅರ್ಜಿಯಾಗಿ ಪರಿಗಣಿಸಿ ಕೈಗೆತ್ತಿಕೊಳ್ಳುವಂತೆಯೂ ಪ್ರತಿಯೊಂದು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಪೀಠ ಸೂಚಿಸಿತು. ಈ ಮಧ್ಯೆ ಮಹಿಳೆಯರ ರಾಷ್ಟ್ರೀಯ ಆಯೋಗ ಮತ್ತು ರಾಷ್ಟ್ರೀಯ ಕಾನೂನು ವಿಶ್ವ ವಿದ್ಯಾಲಯದ ಮೂಲಕ ಮಹಿಳಾ ಕೈದಿಗಳು ಮತ್ತು ಅವರ ಮಕ್ಕಳ ಬಗ್ಗೆ ತಾನು ಅಧ್ಯಯನ ನಡೆಸುತ್ತಿದ್ದು, ಜೂನ್ ೩೦ರ ವೇಳೆಗೆ ಈ ಅಧ್ಯಯನ ಪೂರ್ಣ ಗೊಳ್ಳಲಿದೆ ಎಂದು ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಪೀಠಕ್ಕೆ ತಿಳಿಸಿತು. ಸಚಿವಾಲಯವು ಅಧ್ಯಯನವನ್ನು ಪರಿಶೀಲಿಸಲಿದೆ ಮತ್ತು ಮೂರು ವಾರಗಳ ಒಳಗಾಗಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದೂ ಸರ್ಕಾರ ಹೇಳಿತು.  ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ ೨ಕ್ಕೆ ನಿಗದಿ ಪಡಿಸಿತು. ಬಯಲು ಬಂದೀಖಾನೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಮತ್ತು ಸಂಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಆಡಳಿತಕ್ಕಾಗಿ ಮಾದರಿ ಏಕರೂಪ ನಿಯಮಗಳನ್ನು ಈಗಾಗಲೇ ರೂಪಿಸಲಾಗಿದೆ ಎಂದೂ ಕೇಂದ್ರವು ಪೀಠಕ್ಕೆ ತಿಳಿಸಿತು.


2018: ನವದೆಹಲಿ: ವಿದೇಶದಲ್ಲಿನ ಅಕ್ರಮ ಆಸ್ತಿ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಮತ್ತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿದಾಳಿ ನಡೆಸಿರುವ ಕಾಂಗ್ರೆಸ್ ’ರಫೇಲ್ ವ್ಯವಹಾರದ ಕಥೆ ಹೇಳಿ ಎಂದು ಬಿಜೆಪಿಯನ್ನು ಚುಚ್ಚಿತು.  ಕಾಳಧನ ಕಾಯ್ದೆಯ ಅಡಿಯಲ್ಲಿ, ಪಿ. ಚಿದಂಬರಂ ಕುಟುಂಬದ ವಿರುದ್ಧ ವಿದೇಶಗಳಲ್ಲಿ ಹಲವಾರು ಖಾತೆ ಮತ್ತು ಅಕ್ರಮ ಆಸ್ತಿಗಳನ್ನು ಹೊಂದಿರುವುದಕ್ಕಾಗಿ ನಾಲ್ಕು ಆರೋಪ ಪಟ್ಟಿಗಳನ್ನು (ಚಾರ್ಜ್‌ಶೀಟ್) ಸಲ್ಲಿಸಲಾಗಿತ್ತು.  ಆದಾಯ ತೆರಿಗೆ ಇಲಾಖೆಯು ಯುಪಿಎಯ ಹಣಕಾಸು ಸಚಿವರ ಅಕ್ರಮ ಆಸ್ತಿಯ ಪ್ರಮಾಣ ಅಂದಾಜು ೩ ಬಿಲಿಯನ್ (೩೦೦ ಕೋಟಿ) ಡಾಲರುಗಳು ಎಂದು ಅಂದಾಜು ಮಾಡಿದೆ ಎಂದು ಶಾ ಟ್ವಿಟ್ಟರಿನಲ್ಲಿ ಬರೆದರು. ‘ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆಗಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ವಿಶೇಷ ತನಿಖಾ ತಂಡ ರಚಿಸದಂತೆ ಕಾಲೆಳೆದದ್ದು ಏಕೆ ಎಂಬುದನ್ನು ಇದು ವಿವರಿಸುತ್ತದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದರು. ಮೋದಿ ಸರ್ಕಾರವು ಕಪ್ಪು ಹಣ ವಿರೋಧಿ ಹೋರಾಟದಲ್ಲಿ ಕೈಗೊಂಡ ಮೊತ್ತ ಮೊದಲಿನ ನಿರ್ಧಾರಗಳಲ್ಲಿ ಎಸ್ ಐ ಟಿ ರಚನೆಯೂ ಒಂದಾಗಿತ್ತು ಎಂದು ನೆನಪಿಸಿದ ಅಮಿತ್ ಶಾ ’ಅವರು (ಯುಪಿಎ ನಾಯಕರು) ತಮ್ಮನ್ನು ತಾವೇ ದೋಷಿಗಳನ್ನಾಗಿ ಹೇಗೆ ಮಾಡಿಕೊಂಡಾರು?’ ಎಂದು ಪ್ರಶ್ನಿಸಿದರು. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಕಾಂಗ್ರೆಸ್ ನಾಯಕನನ್ನು ತರಾಟೆಗೆ ತೆಗೆದುಕೊಂಡು ಅವರನ್ನು ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನವಾಜ್ ಶರೀಫ್ ಅವರಿಗೆ ಹೋಲಿಸಿದರು. ವಿದೇಶೀ ಆಸ್ತಿಯನ್ನು ಬಹಿರಂಗಗೊಳಿಸಲು ವಿಫಲರಾದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವಿರುದ್ಧ ಯಾವುದೇ ಕ್ರಮವನ್ನೂ ಕಾಂಗ್ರೆಸ್ ಪಕ್ಷವು ಕೈಗೊಳ್ಳುತ್ತಿಲ್ಲ ಎಂದು ಅವರು ಟೀಕಿಸಿದರು. ಮಾಧ್ಯಮ ಮಂದಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸೀತಾರಾಮನ್ ಅವರು ’ಹಣಕಾಸು ವಿಷಯದಲ್ಲಿ ಸ್ವತಃ ಜಾಮೀನು ಪಡೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚಿದಂಬರಂ ಅವರು ವಿದೇಶೀ ಆದಾಯವನ್ನು ಘೋಷಿಸದೇ ಇದ್ದುದಕ್ಕಾಗಿ ಅವರ ವಿರುದ್ಧ ತಾವು ತನಿಖೆ ನಡೆಸಲಿದ್ದಾರೆಯೇ ಎಂದು ಭಾರತದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಈಗಿನದ್ದು ನವಾಜ್ ಶರೀಫ್ ಕ್ಷಣ ಎಂದು ಬಣ್ಣಿಸಿದ ಸೀತಾರಾಮನ್ ಅವರು ಪಕ್ಷವು ಹಣಕಾಸು ಲೋಪದೋಷಗಳನ್ನು ನಿರ್ಲಕ್ಷಿಸಲಾಗದು ಎಂದು ಹೇಳಿದರು.  ಕೆಲಸಮಯದಿಂದ ನಾವು ಆದಾಯ ತೆರಿಗೆ ಅಧಿಕಾರಿಗಳು ಮಾಜಿ ವಿತ್ತ ಸಚಿವ ಪಿ. ಚಿದಂಬರಂ, ಅವರ ಕುಟುಂಬದ ವಿರುದ್ಧ ಹಲವಾರು ಕ್ರಮಗಳನ್ನು ಕೈಗೊಂಡ ಬಗ್ಗೆ ನಾವು ಮಾಧ್ಯಮಗಳ ಮೂಲಕ ತಿಳಿದಿದ್ದೇವೆ. ನಾವು ಮಾಧ್ಯಮದ ಮೂಲಕ ನಿಮ್ಮ ಗಮನ ಭಾರತದ ಜನರ ಗಮನವನ್ನು ಸೆಳೆಯಬಯಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದ ನಿಮ್ಮ ಮುಂದಿರುವ ವಾಸ್ತವಾಂಶಗಳು ಭಾರತದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನವಾಜ್ ಶರೀಫ್ ಕ್ಷಣವಾಗಿದೆ ಎಂದು ನಿಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ಸೀತಾರಾಮನ್ ಹೇಳಿದರು. ವಿದೇಶದಲ್ಲಿ ತಾವು ಹೊಂದಿದ್ದ ಆಸ್ತಿ ಮತ್ತು ಅಲ್ಲಿಂದ ಗಳಿಸಿದ ವರಮಾನವನ್ನು ಘೋಷಿಸದೇ ಇದ್ದುದಕ್ಕಾಗಿ ನವಾಜ್ ಶರೀಫ್ ಅವರನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಪ್ರಧಾನಿ ಪದದಿಂದ ಅನರ್ಹರನ್ನಾಗಿ ಮಾಡಿತು ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಈ ಪ್ರಕರಣಗಳಲ್ಲಿನ ಸಾಮ್ಯತೆಯನ್ನು ನಾವು ಮರೆಯಲಾಗದು ಎಂದು ಅವರು ನುಡಿದರು.  ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಪ್ರತಿದಾಳಿ ನಡೆಸಿ, ಎಲ್ಲ ಆರೋಪಗಳನ್ನೂ ನಿರಾಕರಿಸಿದರು. ರಫೇಲ್ ವ್ಯವಹಾರದ ಬಗ್ಗೆ ರಕ್ಷಣಾ ಸಚಿವರು ಮೌನವಾಗಿರುವುದೇಕೆ ಎಂದು ಅವರು ಪ್ರಶ್ನಿಸಿದರು. ರಫೇಲ್ ೩೬ನ್ನು ಯಾವ ದರದಲ್ಲಿ ಖರೀದಿಸಲಾಗಿದೆ ಎಂದು ಬಹಿರಂಗ ಪಡಿಸುವಂತೆ ರಕ್ಷಣಾ ಕಾರ್‍ಯದರ್ಶಿಯವರಿಗೆ ರಕ್ಷಣಾ ಸಚಿವೆ ಸೂಚಿಸಿದ್ದರು, ಆದರೆ ಬಳಿಕ ಉಲ್ಟಾ ಹೊಡೆದ ಅವರು ’ಇದು ರಕ್ಷಣೆಗೆ ಸಂಬಂಧಿಸಿದ ರಹಸ್ಯ ವಿಷಯ ಎಂದು ಪ್ರಕಟಿಸಿದರು ಎಂದು ಖೇರಾ ನುಡಿದರು. ೫೮,೦೦೦ ಕೋಟಿ ರೂಪಾಯಿಗಳ ರಫೇಲ್ ವ್ಯವಹಾರ ಬಗ್ಗೆ ಪ್ರಧಾನಿಯವರೇಕೆ ಮೌನ ತಾಳಿದ್ದಾರೆ ಎಂದು ಅವರು ಪ್ರಶ್ನಿಸಿದರು.  ೨೦೧೮ರ ಮಾರ್ಚ್ ತಿಂಗಳಲ್ಲಿ ಭಾರತೀಯ ಸೇನೆಯು, ಸಂಸದೀಯ ಸಮಿತಿ ಒಂದಕ್ಕೆ ತಮ್ಮ ಬಳಿ ಇರುವ ಸಾಧನಗಳ ಪೈಕಿ ಶೇಕಡಾ ೮ರಷ್ಟು ಮಾತ್ರವೇ ಆಧುನಿಕವಾಗಿದ್ದು, ಉಳಿದವೆಲ್ಲ ಹಳೆಯ ಕಾಲದವು ಎಂದು ಹೇಳಿತ್ತು ಎಂದು ಖೇರಾ ನುಡಿದರು. ಸೀತಾರಾಮನ್ ಅವರು ರಕ್ಷಣಾ ಸಚಿವೆಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ನುಡಿದ ಖೇರಾ, ತನ್ನ ಬಳಿ ಸಂಪನ್ಮೂಲದ ಕೊರತೆ ಇದೆ ಎಂಬುದಾಗಿಯೂ  ಭಾರತೀಯ ಸೇನೆ ಸಂಸದೀಯ ಸಮಿತಿಗೆ ಹೇಳಿತ್ತು. ಆ ಬಳಿಕ ಈ ನಿಟ್ಟಿನಲ್ಲಿ ಸರ್ಕಾರ ಏನು ಕ್ರಮ ಕೈಗೊಂಡಿದೆ. ನೀವು ಜಿಡಿಪಿಯ ಶೇಕಡಾ ೧.೮ರಷ್ಟನ್ನು ಮಾತ್ರವೇ ರಕ್ಷಣಾ ಖಾತೆಗೆ ಒದಗಿಸಿದ್ದೀರಿ. ಇದು ೧೯೬೨ರಿಂದ ನೀಡಿರುವ ಹಣಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದು ಖೇರಾ ಹೇಳಿದರು.

2018: ನವದೆಹಲಿ: ತಮ್ಮ ರಾಷ್ಟ್ರದಲ್ಲಿ ಉಗ್ರಗಾಮಿ ಕಾರ್ಯಾಚರಣೆಗಳು ನಡೆಯುತ್ತಿರುವುದನ್ನು ಒಪ್ಪಿಕೊಂಡ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಬಹಿರಂಗ ಹೇಳಿಕೆ ’ಅತ್ಯಂತ ಗಂಭೀರವಾದ ಹೇಳಿಕೆ ಎಂಬುದಾಗಿ ಪ್ರತಿಕ್ರಿಯಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ’ಇದು ೨೬/೧೧ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ರೂಪಿಸಿದವರು ಪಾಕಿಸ್ತಾನದಲ್ಲೇ ಇದ್ದಾರೆ ಎಂಬ ಭಾರತದ ನಿಲುವನ್ನು ಸಾಬೀತು ಪಡಿಸಿದೆ ಎಂದು ಹೇಳಿದರು.  ಇದೇ ಮೊತ್ತ ಮೊದಲ ಬಾರಿಗೆ ಶರೀಫ್ ಅವರು ’ದೇಶ ರಹಿತ ವ್ಯಕ್ತಿಗಳಿಗೆ ಗಡಿ ದಾಟಿ ಮುಂಬೈಯಲ್ಲಿ ಜನರನ್ನು ಕೊಲ್ಲಲು ಅನುಮತಿ ನೀಡಿದ ಪಾಕಿಸ್ತಾನದ ನೀತಿಯನ್ನು ಕೂಡಾ ಪ್ರಶ್ನಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿತು. ‘ಒಳ್ಳೆಯದು, ಇದು ಅತ್ಯಂತ ಗಂಭೀರವಾದ ಪ್ರಕಟಣೆ. ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಪಾಕಿಸ್ತಾನದಿಂದಲೇ ಕಾರ್ಯಾಚರಿಸಿದ್ದಾನೆ ಎಂಬ ಭಾರತದ ನಿಲುವನ್ನು ಇದು ಸಾಬೀತು ಪಡಿಸಿದೆ. ದಾಳಿಯ ಸಂಚುಕೋರರು ಪಾಕಿಸ್ತಾನದಲ್ಲೇ ಇದ್ದಾರೆ ಎಂಬುದು ನಮ್ಮ ಪ್ರಬಲ ನಂಬಿಕೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಸೀತಾರಾಮನ್ ಉತ್ತರಿಸಿದರು. ‘ಅದು (ಶರೀಫ್ ಹೇಳಿಕೆ) ಭಾರತದ ನಿಲುವು ಸರಿಯಾಗಿಯೇ ಇದೆ ಎಂಬುದನ್ನು ಸಾಬೀತು ಪಡಿಸಿದೆ ಅಷ್ಟೆ ಎಂದು ನಿರ್ಮಲಾ ಹೇಳಿದರು.  ಪನಾಮಾ ಪೇಪರ್ಸ್ ಪ್ರಕರಣದಲ್ಲಿ ತಪ್ಪಿತಸ್ಥ ಎಂಬುದಾಗಿ ಸಾಬೀತಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಶರೀಫ್ ಅವರನ್ನು ಪ್ರಧಾನಿ ಸ್ಥಾನದಿಂದ ಅನರ್ಹಗೊಳಿಸಿದ್ದಲ್ಲದೆ, ಆಜೀವ ಪರ್ಯಂತ ಯಾವುದೇ ಸಾರ್ವಜನಿಕ ಹುದ್ದೆ ಹೊಂದದಂತೆಯೂ ನಿಷೇಧಿಸಿತ್ತು. ‘ನಮ್ಮನ್ನು ನಾವು ಪ್ರತ್ಯೇಕಿಸಿಕೊಂಡಿದ್ದೇವೆ. ಬಲಿದಾನಗಳನ್ನು ಮಾಡಿದ್ದರ ಹೊರತಾಗಿಯೂ ನಮ್ಮ ವಿವರಣೆಗಳನ್ನು ಅಂಗೀಕರಿಸಲಾಗುತ್ತಿಲ್ಲ. ಆಫ್ಘಾನಿಸ್ಥಾನದ ವಿವರಣೆಯನ್ನು ಅಂಗೀಕರಿಸಲಾಗುತ್ತಿದೆ. ಆದರೆ ನಮ್ಮ ವಿವರಣೆಯನ್ನು ಯಾರೂ ಕೇಳುತ್ತಿಲ್ಲ. ಈ ಬಗ್ಗೆ ನಾವು ಪರಿಶೀಲಿಸಬೇಕು ಎಂದು ಡಾನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಶರೀಫ್ ಹೇಳಿದ್ದರು.  ರಾಷ್ಟ್ರದಲ್ಲಿ ಕಾರ್ಯಾಚರಿಸುತ್ತಿರುವ ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಮತ್ತು ಮೌಲಾನಾ ಮಸೂದ್ ಅಜರ್ ಉಗ್ರಗಾಮಿ ಸಂಘಟನೆಗಳಾದ - ಜಮಾತ್-ಉದ್- ದವಾ ಮತ್ತು ಜೈಶ್ -ಇ-ಮೊಹಮ್ಮದ್ ಸಂಘಟನೆಯ ಹೆಸರು ಪ್ರಸ್ತಾಪಿಸದೆಯೇ ಮಾತನಾಡಿದ ಶರೀಫ್ ’ಉಗ್ರಗಾಮಿ ಸಂಘಟನೆಗಳು ಪಾಕಿಸ್ತಾನದಲ್ಲಿ ಸಕ್ರಿಯವಾಗಿವೆ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಅವರು ’ಕಾಂಗ್ರೆಸ್ ಪರಾಭವ ಅನುಭವಿಸಲಿದ್ದು, ಬಿಜೆಪಿಯು ಸರ್ಕಾರ ರಚಿಸುವುದು ಎಂದು ಹೇಳಿದರು. ಕಾಂಗ್ರೆಸ್ ನಾಯಕತ್ವ ಬಯಸಿದರೆ ದಲಿತ ಮುಖ್ಯಮಂತ್ರಿಗೆ ದಾರಿ ಮಾಡಿಕೊಡಲು ತಾವು ಸಿದ್ಧ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸೀತಾರಾಮನ್ ಅವರು ’ಚುನಾವಣಾ ಪ್ರಚಾರ ಕಾಲದಲ್ಲಿ ಈ ಮಾತನ್ನು ನಾನು ಎಂದೂ ಕೇಳಿಲ್ಲ ಎಂದು ಹೇಳಿದರು.


2017: ಜಮ್ಮು: ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 7 ಮಂದಿ ಉಗ್ರರನ್ನು ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಪೊಲೀಸರು ಬಂಧಿಸಿದರು. ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಪಾಕಿಸ್ತಾನದ ಲಷ್ಕರ್​-ಇ-ತೋಯ್ಬಾ ಸಂಘಟನೆಯ ಉಗ್ರರನ್ನು ಬಂಧಿಸಿದರು. ಏಳು ಮಂದಿ ಉಗ್ರರನ್ನು ಬಂಧಿಸಿ, ಮೂರು ಎಕೆ47 ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮುವಿನ ಐಜಿಪಿ ಎಸ್​ ಡಿ ಎಸ್​ ಜಮ್ವಾಲ್​ ಮಾಹಿತಿ ನೀಡಿದರು.  ಇನ್ನು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದರು. ಈ ಮಧ್ಯೆ ಈದಿನ ಬೆಳಗ್ಗೆ ಪಾಕ್​​ ಸೇನೆ ರಾಜೌರಿಯ ನೌಶೇರಾ ವಿಭಾಗದಲ್ಲಿ ಗುಂಡಿನ ದಾಳಿ ನಡೆಸಿದ, ಪರಿಣಾಮ 14 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಸೈನಿಕರು ಸೇರಿ ಮೂವರು ಗಾಯಗೊಂಡರು. ಅತ್ತ ಕದನ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಪುಲ್ವಾಮದಲ್ಲಿ ಗಸ್ತು ತಿರುಗುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದರು.  ಸದ್ಯ ಜಮ್ಮು-ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ಘೋಷಿಸಲಾಯಿತು. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.
2017: ಸಿಯಾಟಲ್: ಭಾರತ ಸೇರಿದಂತೆ 100ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ
ಸಾಮೂಹಿಕವಾಗಿ ಸೈಬರ್‌ ದಾಳಿ ನಡೆದಿದ್ದು, ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯಿಂದ ಕದಿಯಲ್ಪಟ್ಟಿರುವ ‘ಸೈಬರ್‌ ಅಸ್ತ್ರ’ಗಳನ್ನು ಬಳಸಿ ಈ ದಾಳಿ ನಡೆಸಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು. ಸ್ವೀಡನ್‌, ಬ್ರಿಟನ್‌ ಮತ್ತು ಫ್ರಾನ್ಸ್‌ನಲ್ಲಿ ಮೊದಲು ಸೈಬರ್‌ ದಾಳಿ ನಡೆದ ಬಗ್ಗೆ ಅಮೆರಿಕದ ಮಾಧ್ಯಮ ಸಂಸ್ಥೆಗಳು ವರದಿ ಮಾಡಿದವು. ಕುತಂತ್ರ ತಂತ್ರಾಂಶಗಳ(ವೈರಸ್‌) ಚಟುವಟಿಕೆ ಹೆಚ್ಚಾಗಿರುವುದು ಗುರುವಾರ ಮೇ 11ರಂದು ಗಮನಕ್ಕೆ ಬಂದಿದ್ದು, ಇದು ಅತ್ಯಂತ ತ್ವರಿತವಾಗಿ ಹರಡಿತು ಎಂದು ಭದ್ರತಾ ಸಾಫ್ಟ್‌ವೇರ್‌ ಕಂಪೆನಿ ಅವಾಸ್ಟ್‌ ಹೇಳಿತು. ಕೆಲವೇ ಗಂಟೆಗಳಲ್ಲಿ ವಿಶ್ವದಾದ್ಯಂತ 75 ಸಾವಿರಕ್ಕೂ ಹೆಚ್ಚು ದಾಳಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅವಾಸ್ಟ ಹೇಳಿತು. ಏತನ್ಮಧ್ಯೆ, ಈ ಕುತಂತ್ರಾಂಶ ಕಳೆದ 24ಗಂಟೆಗಳ ಅವಧಿಯಲ್ಲಿ ಒಂದು ಲಕ್ಷ ಕಂಪ್ಯೂಟರ್‌ಗಳ ಮೇಲೆ ದಾಳಿ ಮಾಡಿರುವುದನ್ನು ಪತ್ತೆಹಚ್ಚಲಾಯಿತು.  ಬ್ರಿಟನ್‌, ರಷ್ಯಾ, ಉಕ್ರೇನ್‌, ಭಾರತ, ಚೀನಾ, ಇಟಲಿ ಮತ್ತು ಈಜಿಪ್ಟ್ ಸೇರಿದಂತೆ 99 ದೇಶಗಳಲ್ಲಿ 45 ಸಾವಿರಕ್ಕಿಂತ ಹೆಚ್ಚು ದಾಳಿಗಳನ್ನು ಕ್ಯಾಸ್ಪರ್ಸ್ಕಿ ಲ್ಯಾಬ್‌ನ ಭದ್ರತಾ ಸಂಶೋಧಕರು ದಾಖಲಿಸಿದರು.  ಸ್ಪೇನ್‌ನಲ್ಲಿ ದೂರಸಂಪರ್ಕ ಸಂಸ್ಥೆಗಳಾದ ‘ಟೆಲಿಫೋನಿಕಾ’ ಸೇರಿದಂತೆ ಪ್ರಮುಖ ಕಂಪೆನಿಗಳು ದಾಳಿಗೆ ಒಳಗಾಗಿದ್ದವು ಎಂದು ವರದಿ ಹೇಳಿತು. ಬ್ರಿಟನ್‌ನಲ್ಲಿ ಅತ್ಯಂತ ವಿಚ್ಛಿದ್ರಕಾರಿ ದಾಳಿಗಳು ನಡೆದ ಬಗ್ಗೆ ವರದಿಯಾಗಿದ್ದು, ಅಲ್ಲಿನ ವೈದ್ಯಕೀಯ ಸೇವೆಯ ಆಸ್ಪತ್ರೆಗಳು ಹಾಗೂ ಚಿಕಿತ್ಸಾಲಯಗಳ ಕಂಪ್ಯೂಟರ್‌ ಮಾನಿಟರ್‌ಗಳು ತೆರೆದುಕೊಳ್ಳದೆ ಆ್ಯಕ್‌ ಆಗಿದ್ದು, ರೋಗಿಗಳನ್ನು ಬೇರೆಡೆಗೆ ಸ್ಥಳಾತರಿಸಿ ಚಿಕಿತ್ಸೆ ಕೊಡಿಸಲಾಯಿತು. ವಿಶ್ವಾದ್ಯಂತ ಅನೇಕ ದೇಶಗಳಲ್ಲಿ ಕುತಂತ್ರಾಂಶ ದಾಳಿಯ ವರದಿಯಾಗಿದೆ ಎಂದು ಅಮೆರಿಕದ ಸ್ಥಳೀಯ ಭದ್ರತಾ ಇಲಾಖೆಯ ಅಡಿ ಕಾರ್ಯ ನಿರ್ವಹಿಸುವ ಅಮೆರಿಕ ಕಂಪ್ಯೂಟರ್‌ ಎಮರ್ಜೆನ್ಸಿ ರೆಡಿನ್ಸಸ್‌ ಟೀಮ್‌(ಯುಎಸ್‌ಸಿಆರ್‌ಟಿ) ಹೇಳಿತು.

2017: ನವದೆಹಲಿ: ನಕ್ಸಲ್‌ ದಾಳಿಯ ವೇಳೆ ಕರ್ತವ್ಯ ನಿರತರಾಗಿ ಹುತಾತ್ಮರಾದ ಸಿಆರ್‌ಪಿಎಫ್‌ನ
ಯೋಧರ ಕುಟುಂಬಗಳಿಗೆ 25 ವಸತಿಗೃಹಗಳನ್ನು(ಫ್ಲಾಟ್‌) ಉಚಿತವಾಗಿ ನೀಡುವುದಾಗಿ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಹೇಳಿದರು.  ‘ಮಹಾರಾಷ್ಟ್ರದ ಥಾಣೆ ಪ್ರದೇಶದ ತಮ್ಮ ಜಮೀನಿನಲ್ಲಿ ವಸತಿಗೃಹಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಮೃತ ಯೋಧರ ಕುಟುಂಬಗಳಿಗೆ ವಿತರಿಸಲಾಗಿದೆ’ ಎಂದು ವಿವೇಕ್‌ ಒಬೆರಾಯ್‌ ತಿಳಿಸಿದರು. ಮಾರ್ಚ್‌ 11ರಂದು ಸುಕ್ಮಾದಲ್ಲಿ ನಡೆದ ನಕ್ಸಲ್‌ ದಾಳಿ ವೇಳೆ ಕರ್ತವ್ಯ ನಿರತ 12 ಯೋಧರು ಮೃತಪಟ್ಟಿದ್ದರು. ಅದರಲ್ಲಿ ಮೂರು ಕುಟುಂಬಗಳಿಗೆ ಈಗಾಗಲೇ 4 ವಸತಿ ಗೃಹಗಳನ್ನು ನಿಗದಿಪಡಿಸಲಾಗಿದ್ದು, ಉಳಿದ 21 ವಸತಿಗೃಹಗಳನ್ನು ಅರೆ ಸೈನಿಕ ಪಡೆ ಯೋಧರಿಗೆ ಹಂಚಲಾಗುವುದು ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ‘ಯೋಧರ ಕುಟುಂಬಗಳಿಗೆ 25 ವಸತಿಗೃಹಗಳನ್ನು ದಾನ ಮಾಡಿದ ನಟ ವಿವೇಕ್‌ ಒಬೆರಾಯ್‌ ಅವರಿಗೆ ಸಿಆರ್‌ಪಿಎಫ್‌ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಧನ್ಯವಾದ ತಿಳಿಸಿತು. ‘ಮಹಾರಾಷ್ಟ್ರದ ಕರ್ಮ್ ರೆಸಿಡೆನ್ಸಿ ಹಾಗೂ ಕಾರ್ಮ್ ಪಂಚತಾವ ಪ್ರದೇಶದಲ್ಲಿ ವಿವೇಕ್‌ ಒಬೆರಾಯ್‌ ಒಡೆತನಕ್ಕೆ ಸೇರಿದ 25 ವಸತಿಗೃಹಗಳನ್ನು ಎರಡು ಕಟ್ಟಡಗಳಲ್ಲಿ ನಿಗದಿ ಪಡಿಸಲಾಗಿದೆ’ ಎಂದರು. ನಕಲ್ಸ್‌ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಗಳಿಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತಲಾ 9 ಲಕ್ಷದಂತೆ ಧನ ಸಹಾಯ ಮಾಡಿದರು. ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್‌ (ಬ್ಯಾಡ್ಮಿಂಟನ್‌) ಅವರೂ ಸಹ ನಕ್ಸಲ್‌ ದಾಳಿಯಲ್ಲಿ ಮೃತಪಟ್ಟ ಯೋಧರ ಕುಟುಂಬಗಳಿಗೆ ತಲಾ 50 ಸಾವಿರ ಧನ ಸಹಾಯ ಮಾಡಿದರು.
2016: ಮುಂಬೈ: 2008 ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಹೊಸ ದೋಷಾರೋಪ ಪಟ್ಟಿಯನ್ನು (ಚಾರ್ಜ್ಶೀಟ್) ಸಲ್ಲಿಸಿ, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಇತರ ಐವರನ್ನು ಅದರಿಂದ ಕೈ ಬಿಟ್ಟಿತು. ಪರಿಷ್ಕೃತ ದೋಷಾರೋಪ ಪಟ್ಟಿಯಿಂದ ಸಾಧ್ವಿ ಪ್ರಗ್ಯಾಸಿಂಗ್ ಮತ್ತು ಇತರ ಐವರು ಆರೋಪಿಗಳಹೆಸರುಗಳನ್ನು ಕೈಬಿಡಲಾಗಿದೆ. ವರದಿಗಳ ಪ್ರಕಾರ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಮಾಜಿ ಸೇನಾ ಕರ್ನಲ್ ಶ್ರೀಕಾಂತ ಪುರೋಹಿತ ಮತ್ತು ಇತರ ಹಲವು ಆರೋಪಿಗಳ ವಿರುದ್ಧದ ಆರೋಪಗಳನ್ನು ದೋಷಾರೋಪ ಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ಹೇಳಲಾಯಿತು. ಅವರ ವಿರುದ್ಧ ಅಕ್ರಮ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿತ್ತು. ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ನಮಗೆ ಇಷ್ಟರಲ್ಲೇ ಪ್ರತಿಗಳು ಲಭಿಸಬಹುದು. ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸೇರಿದಂತೆ ನಾಲ್ವರನ್ನು ಆರೋಪ ಮುಕ್ತರನ್ನಾಗಿ ಮಾಡಲು ಅವರು ಶಿಫಾರಸು ಮಾಡಿದ್ದಾರೆಎಂದು ಆರೋಪಿಗಳ ಪರ ವಕೀಲ ಸಂಜೀವ ಪುನಾಲೇಕರ್ ಹೇಳಿದರು. ತನಿಖೆಯಲ್ಲಿ ಕೆಳಗೆ ತಿಳಿಸಿದ ವ್ಯಕ್ತಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಲಭಿಸಿಲ್ಲ. ಹೀಗಾಗಿ ಪ್ರಗ್ಯಾ ಸಿಂಗ್ ಠಾಕೂರ್, ಶಿವ ನಾರಾಯಣ ಕಲ್ಸಂಗ್ರಾ, ಶ್ಯಾಮ್ ಭವರಲಾಲ್ ಸಾಹು, ಪ್ರವೀಣ್ ತಕ್ಕಲ್ಕಿ, ಲೋಕೇಶ ಶರ್ಮಾ ಮತ್ತು ಧನಸಿಂಗ್ ಚೌಧರಿ ವಿರುದ್ಧ ಖಟ್ಲೆ ಮುಂದುವರೆಸಲಾಗದು ಎಂದು ಎನ್ಐಎ ಅಂತಿಮ ವರದಿ ಸಲ್ಲಿಸಿದೆ ಎಂದು ತನ್ನ ಚಾಜ್ಶೀಟ್ನಲ್ಲಿ ಎನ್ಐಎ ತಿಳಿಸಿತು.

2016: ನವದೆಹಲಿ: ಸೃಜನಶೀಲತೆ, ಅವಿಷ್ಕಾರದಲ್ಲಿ ನಾವೀನ್ಯತೆೆ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳು (ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ -ಐಪಿಆರ್) ನೀತಿಗೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ ಅನುಮೋದನೆ ನೀಡಿತುಸಮಾಜದ ಎಲ್ಲಾ ವರ್ಗಗಳಲ್ಲೂ ಬೌದ್ಧಿಕ ಆಸ್ತಿ ಹಕ್ಕುಗಳ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಲಾಭಗಳ ಬಗ್ಗೆ ಜಾಗೃತಿ ಮೂಡಿಸುವುದು ನೀತಿಯ ಗುರಿ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಲ್ಲಿ ಮೇ 12ರ ಸಂಪುಟ ಸಭೆಯ ನಿರ್ಧಾರಗಳನ್ನು ವರದಿಗಾರರಿಗೆ ವಿವರಿಸುತ್ತಾ ಹೇಳಿದರು. 2017ರಿಂದ ಲಾಂಛನ ನೋಂದಣಿ ಪ್ರಕ್ರಿಯೆಯು ಒಂದು ತಿಂಗಳ ಒಳಗೆ ಮುಗಿಯಲಿದೆ. ಇದಕ್ಕಾಗಿ ವರ್ಷಾನುಗಟ್ಟಲೆ ಕಾಯಬೇಕಾಗಿಲ್ಲ ಎಂದು ವಿತ್ತ ಸಚಿವರು ನುಡಿದರು. ಸಾರ್ವಜನಿಕ ಅರಿವು, ಆಡಳಿತ, ಜಾರಿ ಮತ್ತು ತೀರ್ಪು ಸೇರಿದಂತೆ ಏಳು ಗುರಿಗಳನ್ನು ಐಪಿಆರ್ ಹೊಂದಿದೆ ಎಂದು ಜೇಟ್ಲಿ ಹೇಳಿದರು.

2016: ಕೆನಡಾ: ಧಾರ್ವಿುಕ ಮುಖಂಡ ಹಾಗೂ ಸಂತ ನಿರಂಕಾರಿ ಮಿಷನ್ ಮುಖ್ಯಸ್ಥ ಬಾಬಾ ಹರದೇವ್ ಸಿಂಗ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಬಿಜೆಪಿ ಮುಖಂಡ ಶಾನವಾಜ್ ಹುಸೇನ್ ಅವರು ಬಾಬಾ ಅವರ ಸಾವಿನ ಕುರಿತು ಟ್ವೀಟ್ ಮಾಡಿ, ಕೆನಡಾದ ಮಾಂಟ್ರಿಯಲ್ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಾಬಾ ಹರದೇವ್ ಸಿಂಗ್ ಸಾವನ್ನಪ್ಪಿದ್ದಾರೆ. ಬಾಬಾ ಅವರು ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಜಗತ್ತಿಗೆ ಪರಿಚಿತರಾಗಿದ್ದರು. ಇಂಥಹ ಮಹಾನ್ ಸಂತರ ಸಾವಿನಿಂದ ದೇಶಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ತಿಳಿಸಿದರು. 62 ವರ್ಷದ ಹರದೇವ್ ಸಿಂಗ್ 1980ರಿಂದ ಸಂತ ನಿರಂಕಾರಿ ಮಿಷನ್ ಮುಖ್ಯಸ್ಥರಾಗಿ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

2016: ನವದೆಹಲಿ: ಮಹತ್ವಾಕಾಂಕ್ಷೆಯ ವಸ್ತುಗಳು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಸೂದೆಯ ಅಂಗೀಕಾರ ಇಲ್ಲದೇ ಸಂಸತ್ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ರಾಜ್ಯಸಭೆಯು ಮಹತ್ವದ ಮಸೂದೆಯನ್ನು ಅಂಗೀಕರಿಸದೇ ಇದ್ದುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಷಾದ ವ್ಯಕ್ತ ಪಡಿಸಿದರು. ಸ್ವಾತಂತ್ರ್ಯಾನಂತರದ ವರ್ಷಗಳಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಪರೋಕ್ಷ ತೆರಿಗೆ ಸುಧಾರಣೆ ಕ್ರಮ ಇದಾಗಿದ್ದು, ಇದನ್ನು ಅಂಗೀಕರಿಸುವುದರಿಂದ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗುತ್ತಿತ್ತು ಎಂದು ಪ್ರಧಾನಿ ಹೇಳಿದರು. ನಿವೃತ್ತರಾಗುತ್ತಿರುವ 53 ಮಂದಿ ರಾಜ್ಯಸಭಾ ಸದಸ್ಯರಿಗೆ ವಿದಾಯಕೋರಿ ಮೇಲ್ಮನೆಯಲ್ಲಿ ಮಾತನಾಡಿದ ಪ್ರಧಾನಿ, ರಾಜ್ಯಸಭಾ ಸದಸ್ಯರು ರಾಜ್ಯಗಳ ಪ್ರತಿನಿಧಿಗಳು ಮತ್ತು ತಮ್ಮ ರಾಜ್ಯದ ಹಿತಾಸಕ್ತಿ ಅವರಿಗೆ ಆದ್ಯತೆಯ ವಿಷಯವಾಗಬೇಕು ಎಂದು ನುಡಿದರು. ‘ಹಲವಾರು ಪ್ರಮುಖ ಸುಧಾರಣಾ ಕ್ರಮಗಳಿಗೆ ಸದನ ಒಪ್ಪಿಗೆ ನೀಡಿದೆ. ಆದರೆ ಎರಡು ನಿರ್ಣಾಯಕ ನಿರ್ಧಾರಗಳಿಗೂ ಸದನ ಮಂಜೂರಾತಿ ನೀಡಿದ್ದರೆ ಉತ್ತಮವಾಗಿತ್ತುಎಂದು ವಸ್ತುಗಳು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಸೂದೆ ಮತ್ತು ಅರಣ್ಯ ನಿರ್ಮಾಣ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಸಿಎಎಂಪಿಎ) ಮಸೂದೆಗಳನ್ನು ಉಲ್ಲೇಖಿಸುತ್ತಾ ಪ್ರಧಾನಿ ನುಡಿದರು. ಜಿಎಸ್ಟಿ ಮಸೂದೆಯಿಂದ ಬಿಹಾರಕ್ಕೆ ಅನುಕೂಲವಾಗುತ್ತಿತ್ತು, ಉತ್ತರ ಪ್ರದೇಶಕ್ಕೆ ಅನುಕೂಲವಾಗುತ್ತಿತ್ತು. ಒಂದೆರಡು ರಾಜ್ಯಗಳನ್ನು ಹೊರತು ಪಡಿಸಿ ಎಲ್ಲಾ ರಾಜ್ಯಗಳಿಗೂ ಜಿಎಸ್ಟಿಯಿಂದ ಅನುಕೂಲವಾಗುತ್ತಿತ್ತು. ಎಂದು ಮೋದಿ ಹೇಳಿದರು. 2016 ಏಪ್ರಿಲ್ 1ರಿಂದ ಜಾರಿಗೊಳ್ಳಬೇಕಾದ ಜಿಎಸ್ಟಿ ಮಸೂದೆಗೆ ಲೋಕಸಭೆಯು ಈಗಾಗಲೇ ಅನುಮೋದನೆ ನೀಡಿದ್ದು, ರಾಜ್ಯಸಭೆಯಲ್ಲಿ ಎನ್ಡಿಎ ಸರ್ಕಾರಕ್ಕೆ ಬಹುಮತ ಇಲ್ಲದೇ ಇರುವುದರಿಂದ ಅನುಮೋದನೆ ಲಭಿಸದೆ ನನೆಗುದಿಗೆ ಬಿದ್ದಿತ್ತು. ಮಸೂದೆ ಜಾರಿಗೆ ಬಂದರೆ ಅಬಕಾರಿ ಸುಂಕ, ಸೇವಾ ತೆರಿಗೆ ಇತ್ಯಾದಿಯದ ಹಲವಾರು ಪರೋಕ್ಷ ತೆರಿಗೆಗಳು ಒಂದೇ ಜಿಎಸ್ಟಿ ದರವನ್ನು ಹೊಂದುತ್ತವೆ.

2016: ನವದೆಹಲಿ: ಬರ ಪರಿಸ್ಥಿತಿ ನಿಭಾಯಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್, ಬರನಿಭಾವಣೆ ದೃಷ್ಟಿಯಿಂದ ಆಹಾರ ಕಮೀಷನರ್ಗಳ ನೇಮಕ, ಬೇಸಿಗೆ ಪೂರ್ತಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಿಕೆ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತು. ಪಡಿತರ ವ್ಯವಸ್ಥೆಯ ಪರಿಣಾಮಕಾರಿ ಜಾರಿಯ ಉಸ್ತುವಾರಿ ನೋಡಿಕೊಳ್ಳಲು ಆಹಾರ ಕಮೀಷನರ್ಗಳನ್ನು ನೇಮಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದ ಸುಪ್ರೀಂಕೋರ್ಟ್, ಬರ ಸಂತ್ರಸ್ಥ ಪ್ರದೇಶಗಳಲ್ಲಿ ಬೇಸಿಗೆ ಕಾಲ ಪೂರ್ತಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಒದಗಿಸುವಂತೆ ಆಜ್ಞಾಪಿಸಿತು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗಾಗಿ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆಜ್ಞಾಪಿಸಿತು. ಕಾನೂನಿನಲ್ಲಿ ಇರುವ ಅವಕಾಶದಂತೆ ಕೇಂದ್ರೀಯ ಉದ್ಯೋಗ ಖಾತರಿ ಮಂಡಳಿ ರಚಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತು. ತನ್ನ ನಿರ್ದೇಶನಗಳ ಜಾರಿಗಾಗಿ ಕೋರ್ಟ್ ಕಮೀಷನರ್ಗಳನ್ನು ನೇಮಿಸಲು ಸುಪ್ರೀಂಕೋರ್ಟ್ ನಿರಾಕರಿಸಿತು.

2016: ಲಂಡನ್: ಭೌತಶಾಸ್ತ್ರಕ್ಕೆ ಅಡಿಪಾಯ ಹಾಕಿಕೊಟ್ಟ ಅಲ್ಬರ್ಟ್ ಐನ್ಸ್ಟಿನ್ ಅವರ ಸಾಪೇಕ್ಷತಾ ಸಿದ್ಧಾಂತ(ಥಿಯರಿ ಆಫ್ ರಿಲೇಟಿವಿಟಿ) ಕೇವಲ ಭೂಮಂಡಲದಲ್ಲಿ ಮಾತ್ರವಲ್ಲ, ಭೂಮಿಯಿಂದ 13 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ಅಂತರದಲ್ಲಿರುವ ಸುಮಾರು 3,000 ತಾರಾಪುಂಜಗಳಿಗೂ (ಗ್ಯಾಲಕ್ಸಿ) ಅನ್ವಯವಾಗುತ್ತದೆ! ಜಪಾನ್ ಕವ್ಲಿ ಐಪಿಎಂಯು ಮತ್ತು ಟೋಕಿಯೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭೂಮಿಯಿಂದ 13 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ಅಂತರದಲ್ಲಿರುವ 3,000 ತಾರಾಪುಂಜಗಳ 3ಡಿ ಮ್ಯಾಪ್ಅನ್ನು ಸಿದ್ಧಪಡಿಸಿದ್ದಾರೆ. ತಾರಾಪುಂಜಗಳ ಚಲಿಸುತ್ತಿರುವ ನಿರ್ದಿಷ್ಟ ದಿಕ್ಕಿನ ವೇಗ ಮತ್ತು ಗ್ರಹಗಳ ಸಮೂಹದ ಮಾಹಿತಿ ಸಹಾಯದಿಂದ ಮ್ಯಾಪ್ ಸಿದ್ಧಗೊಳಿಸಿದ್ದಾರೆ. ಇದು ಐನ್ಸ್ಟಿನ್ ಸಿದ್ಧಾಂತ ಭೂಮಂಡಲವನ್ನು ಹೊರತು ಪಡಿಸಿದ ಸಾವಿರಾರು ತಾರಾಪುಂಜಗಳಿಗೂ ಅನ್ವಯ ಎಂಬುದನ್ನು ಸಾಬೀತುಪಡಿಸಿದೆ. ಸಂಶೋಧನೆಯಲ್ಲಿ 12.4ರಿಂದ 14.7 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದ ತಾರಾಪುಂಜಗಳ ಮಾಹಿತಿ ಕಲೆಹಾಕುವ ಸಾಮರ್ಥ್ಯದ ಸುಬಾರು ದೂರದರ್ಶಕವನ್ನು ಬಳಸಿಕೊಂಡಿದ್ದರು. 1990 ನಂತರ ಭೂಮಂಡಲದ ವೇಗೋತ್ಕರ್ಷದ ಪ್ರಮಾಣ ವ್ಯತ್ಯಾಸಗೊಳ್ಳುತ್ತಿರುವುದನ್ನು ವಿಜ್ಞಾನಿಗಳು ಮನದಟ್ಟು ಮಾಡಿಕೊಂಡಿದ್ದರು. ವೇಗೋತ್ಕರ್ಷವನ್ನು ನಿಭಾಯಿಸುತ್ತಿರುವುದು ವಿಸ್ಮಿತ ಕೃಷ್ಣ ಶಕ್ತಿ ಅಂದರೆ ಡಾರ್ಕ್ ಎನರ್ಜಿ. ಐನ್ಸ್ಟಿನ್ ಅವರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಗುರುತ್ವದಿಂದ ಸ್ಪೇಸ್ ಮತ್ತು ಸಮಯ ವ್ಯತ್ಯಾಸಗೊಳ್ಳುತ್ತದೆ. ಇದು ವಸ್ತುವೊಂದರ ಪತನಕ್ಕೆ ಅಂದರೆ ಕೆಳಗೆ ಸರಿಯುವುದಕ್ಕೆ ಕಾರಣ ಎನ್ನುತ್ತದೆ.

2016: ನವದೆಹಲಿ: ಕ್ರಿಮಿನಲ್ ಮಾನನಷ್ಟ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂಕೋರ್ಟ್  ಎತ್ತಿ ಹಿಡಿಯಿತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತಿತರರು ಕ್ರಿಮಿನಲ್ ಮಾನನಷ್ಟಕ್ಕೆ ಅವಕಾಶ ಕಲ್ಪಿಸಿರುವ ಭಾರತೀಯ ದಂಡ ಸಂಹಿತೆಯ 499 ಮತ್ತು 500ನೇ ವಿಧಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಿತು. ಬಾಕಿ ಇರುವ ಕ್ರಿಮಿನಲ್ ಮಾನನಷ್ಟ ಖಟ್ಲೆಗಳನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿಲು ರಾಹುಲ್ ಗಾಂಧಿ, ಕೇಜ್ರಿವಾಲ್ ಮತ್ತು ಸುಬ್ರಮಣಿಯನ್ ಸ್ವಾಮಿ ಅವರಿಗೆ ಸುಪ್ರೀಂಕೋರ್ಟ್ 8 ವಾರಗಳ ಕಾಲಾವಕಾಶ ನೀಡಿತು. ಇಲ್ಲದೇ ಇದ್ದಲ್ಲಿ ವಿಚಾರಣೆಗೆ ಎದುರಿಸುವಂತೆ ಆಜ್ಞಾಪಿಸಿತು. ‘ಅಭಿವ್ಯಕ್ತಿ ಸ್ವಾತಂತ್ರ್ಯ ನಿರಂಕುಶವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಇನ್ನೊಬ್ಬರ ಘನತೆಗೆ ಧಕ್ಕೆ ಉಂಟು ಮಾಡಬಹುದು ಎಂದಲ್ಲ. ವ್ಯಕ್ತಿಗಳ ಘನತೆಗೆ ಸಂವಿಧಾನದ 21ನೇ ವಿಧಿ ರಕ್ಷಣೆ ನೀಡಿದೆಎಂದು ಸುಪ್ರೀಂಕೋರ್ಟ್ ಹೇಳಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲೆ ನ್ಯಾಯೋಚಿತ ನಿಯಂತ್ರಣಗಳನ್ನು ವಿಧಿಸುವ ಸಂವಿಧಾನದ 19(2)ನೇ ವಿಧಿಯ ಮಿತಿಗಳನ್ನು ಕ್ರಿಮಿನಲ್ ಮಾನನಷ್ಟ ಕಾಯ್ದೆಯ ವಿಧಿಗಳು ಮೀರುತ್ತವೆ ಎಂದು ಅರ್ಜಿದಾರರು ವಾದಿಸಿದ್ದರು. ಭಾರತೀಯ ದಂಡ ಸಂಹಿತೆಯ ವಿಧಿಗಳುನಿರೋಧಕವಾಗಿ ಮಾತ್ರವೇ ಕೆಲಸ ಮಾಡುತ್ತವೆ ಎಂದು ವಾದಿಸಿದ ಕೇಂದ್ರ ಸರ್ಕಾರವು ಇತರ ರಾಷ್ಟ್ರಗಳಲ್ಲಿ ಮಾನನಷ್ಟ ಖಟ್ಲೆಗಳು ಬಲು ಬೇಗನೇ ಇತ್ಯರ್ಥವಾಗುತ್ತವೆ, ಭಾರತದಲ್ಲಿ ವರ್ಷಗಳು ಇಲ್ಲವೇ ದಶಕಗಳನ್ನೂ ತೆಗೆದುಕೊಳ್ಳುತ್ತವೆ, ಹಿನ್ನೆಲೆಯಲ್ಲಿ ವಿಧಿಗಳನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿತ್ತು.

2016: ನವದೆಹಲಿ: ವಿಶ್ವದ ಅತೀ ದೊಡ್ದ ಸರಕು ವಿಮಾನ ಅಂಟೊನೊವ್ ಎನ್ -225  ಈದಿನ ಮುಂಜಾನೆ ತುರ್ಕ್ವೆುನಿಸ್ಥಾನದಿಂದ ಹೈದರಾಬಾದಿನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಹಲವು ವಿಶೇಷತೆ ಹೊಂದಿರುವ ವಿಮಾನ ಬೃಹದಾಕಾರದ ಮೇಲ್ಮೈ ಹೊಂದಿದೆ. ಇದಕ್ಕೆ ಆರು ಟಬೋ ಫ್ಯಾನ್ಗಳನ್ನು ಅಳವಡಿಸಲಾಗಿದ್ದು, ವಿಮಾನ ಬರೋಬ್ಬರಿ 640 ಟನ್ ಭಾರವಿದೆ. ಸುಲಭವಾದ ಕಾರ್ಯಾಚರಣೆಗಾಗಿ ಅಗಲವಾದ ಪಂಕಗಳನ್ನು ಅಳವಡಿಸಿದೆ. 180ರಿಂದ 200 ಟನ್ವರೆಗೆ ಭಾರವನ್ನು ಹೊತ್ತೊಯ್ಯಬಹುದಾದ ಸಾಮರ್ಥ್ಯ ಹೊಂದಿದೆಭಾರತದಲ್ಲಿ ರಕ್ಷಣಾ ಚಟುವಟಿಕೆ ಸಂಬಂಧಿಸಿದ ಉಪಕರಣಗಳನ್ನು ಸಿದ್ಧಪಡಿಸಲು ಅಗತ್ಯವಾದ ಸಾಮಗ್ರಿಗಳಿಗಾಗಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಪೆನ್ಸ್ ವಿಭಾಗ ಉಕ್ರೇನ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಿನ್ನೆಲೆಯಲ್ಲಿ ಅತೀ ದೊಡ್ಡ ಸರಕು ವಿಮಾನ ಭಾರತಕ್ಕೆ ಬಂದಿಳಿಯಿತು. ರಕ್ಷಣಾ ಇಲಾಖೆ ಬಲಪಡಿಸಲು ಸರ್ಕಾರ 200 ಮಧ್ಯಮ ಟಬೋಫ್ಯಾನ್ ಖರೀದಿಸಲು ಚಿಂತಿಸಿದ್ದು, ಇದಕ್ಕಾಗಿ 35,000 ಕೋಟಿ ಹಣವನ್ನು ಮೀಸಲಿಟ್ಟಿದೆ.
2016: ಬ್ಯಾಂಕಾಕ್: ಒಗ್ಗಟ್ಟಿನಲ್ಲಿ ಬಲವಿದೆ, ಜನರು ಒಟ್ಟಿಗೆ ಸೇರಿದಾಗ ಎಂತಹ ಕೆಲಸವನ್ನೂ ಸಹ ಸುಲಭವಾಗಿ ಸಾಧಿಸಬಹುದು ಎಂಬುದು ಹಲವಾರು ನಿದರ್ಶನಗಳಲ್ಲಿ ಸಾಬೀತಾಗಿದೆ. ಇದಕ್ಕೆ ತಾಜಾ ನಿದರ್ಶನವಾಗಿ ಥಾಯ್ಲೆಂಡ್ ಗ್ರಾಮವೊಂದರಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಮನೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರಿಸಿದರು. ಥಾಯ್ಲೆಂಡ್ನಲ್ಲಿ ಮರದ ಮನೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಯಾವುದೇ ಯಾಂತ್ರಿಕ ಬಲವಿಲ್ಲದೆ ಗ್ರಾಮಸ್ಥರೆಲ್ಲಾ ಒಟ್ಟಿಗೆ ಸೇರಿ ಸಾಗಿಸಿದರು. ಇದಕ್ಕಾಗಿ ಹತ್ತಾರು ಜನರು ಒಟ್ಟಿಗೆ ಶ್ರಮಿಸಿದ್ದು, ಕರಾರುವಾಕ್ಕಾಗಿ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿದರು. ಇವರ ಸಂಘಟಿತ ಶ್ರಮದಿಂದ ಮನೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಗೊಂಡಿತು. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಜೋರಾಗಿ ಓಡುತ್ತಿದೆ.

2016: ನ್ಯೂಯಾರ್ಕ್ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದ 116 ವರ್ಷ ಪ್ರಾಯದ ಸೂಸನ್ನ ಮುಶಟ್ ಜೋನ್ಸ್ ಈದಿನ ನ್ಯೂಯಾರ್ಕ್ನಲ್ಲಿ ನಿಧನರಾದರು. ಸೂಸನ್ನ ನಿಧನದ ಪರಿಣಾಮವಾಗಿ 116 ವರ್ಷದ ಇಟಲಿಯ ಎಮ್ಮ ಮೊರಾನೊ ಮರ್ತಿನುಝಿ ಎಂಬ ಮಹಿಳೆ ವಿಶ್ವದ ಹಿರಿಯ ವ್ಯಕ್ತಿ ಎಂದೆನೆಸಿಕೊಂಡರು. ಸೂಸನ್ನ ಮುಶಟ್ ಜಾನ್ 1899ರಲ್ಲಿ ಅಮೆರಿಕದ ಅಲಬಾಮದಲ್ಲಿ ಜನಿಸಿದ್ದರು.

2016: ಬೆಂಗಳೂರು: ಬಸವೇಶ್ವರನಗರ ಸಂಚಾರ ಠಾಣೆ ಮುಖ್ಯಪೇದೆ ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಂಬಂಧ ನಟಿ ಮೈತ್ರಿಯಾ ಗೌಡ ಮತ್ತು ಆಕೆಯ ಸಹೋದರಿ ಸೇರಿ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತೀರ್ಪು ನೀಡಿದೆ. ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು, ನಟಿ ಮೈತ್ರಿಯಾ ಗೌಡ ಅವರಿಗೆ 2 ವರ್ಷ ಜೈಲು ಮತ್ತು ಆಕೆಯ ಸಹೋದರಿ ಸುಪ್ರಿಯಾ, ಸಂಬಂಧಿಗಳಾದ ರೂಪಾ ಮತ್ತು ರೇಖಾಗೆ ತಲಾ 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾದರು. 2011 ಮೇ ತಿಂಗಳಲ್ಲಿ ಕಾರು ಚಲಾಯಿಸುವಾಗ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದನ್ನು ಪ್ರಶ್ನಿಸಿದ ಶಿವಕುಮಾರ್ ಮೇಲೆ ಮೈತ್ರಿಯಾ ಗೌಡ ಮತ್ತು ಆಕೆಯ ಸಂಗಡಿಗರು ಹಲ್ಲೆ ನಡೆಸಿದ್ದರು. ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಮೈತ್ರಿಯಾ ಗೌಡ ಕಾನೂನು ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಮೇಲೆ ವಂಚನೆ ಆರೋಪ ಮಾಡಿ ಸುದ್ದಿಯಾಗಿದ್ದರು.

2016: ಜೋಧಪುರ: ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಒತ್ತು ನೀಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಸಂಪೂರ್ಣವಾಗಿ ಸೌರ ಶಕ್ತಿಯಿಂದ ಸಂಚರಿಸುವ ದೇಶದ ಮೊದಲ ರೈಲನ್ನು ರೈಲ್ವೆ ಇಲಾಖೆ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ಪೂರ್ಣಗೊಳಿಸಿದೆ. ರೈಲ್ವೆ ಬೋಗಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಅದರಿಂದ ರೈಲಿಗೆ ಅಗತ್ಯವಿರುವ ಶಕ್ತಿ ಉತ್ಪಾದನೆಯಾಗಲಿದೆ. ರೈಲನ್ನು ಮೇ ತಿಂಗಳ ಕೊನೆಯ ಭಾಗದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುವುದು. ಪ್ರಾಯೋಗಿಕ ಪರೀಕ್ಷೆಯ ನಂತರ ರೈಲು ಸಂಚಾರದ ಮಾರ್ಗವನ್ನು ನಿರ್ಧರಿಸಲಾಗುವುದು ಎಂದು ವಾಯವ್ಯ ರೈಲ್ವೆಯ ಪಿಆರ್ ಗೋಪಾಲ್ ಶರ್ಮಾ ತಿಳಿಸಿದರು. ಪ್ರಾಯೋಗಿಕ ಸಂಚಾರದಲ್ಲಿ ಸೋಲಾರ್ ರೈಲನ್ನು ಸಾಂಪ್ರದಾಯಿಕ ಡೀಸೆಲ್ ಇಂಜಿನ್ಗಳ ಸಹಾಯದಿಂದ ಚಲಾಯಿಸಲಾಗುವುದು. ಆದರೆ ರೈಲಿನ ಹವಾನಿಯಂತ್ರಣ ವ್ಯವಸ್ಥೆ, ಲೈಟ್ಗಳು, ಫ್ಯಾನ್ಗಳು ಸೌರ ಶಕ್ತಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸಲಿವೆ. ಸೌರಶಕ್ತಿ ಬಳಕೆ ಮಾಡಿಕೊಳ್ಳುವುದರಿಂದ ವಾರ್ಷಿಕ ಸುಮಾರು 90 ಸಾವಿರ ಲೀಟರ್ ಡೀಸೆಲ್ ಉಳಿತಾಯವಾಗಲಿದೆ. ಇದರಿಂದ ಸುಮಾರು 200 ಟನ್ ಕಾರ್ಬನ್ ಡೈಆಕ್ಸೈಡ್ ಬಿಡುಗಡೆ ಆಗುವುದನ್ನು ತಡೆಯಬಹುದು ಎಂದು ಶರ್ಮಾ ಹೇಳಿದರು. ರೈಲ್ವೆ ಇಲಾಖೆ ಸೌರ ಶಕ್ತಿಯ ಜತೆಗೆ ಸಿಎನ್ಜಿ, ಬಯೋ ಡೀಸೆಲ್ ಮತ್ತು ನೈಸರ್ಗಿಕ ಅನಿಲ ಬಳಕೆ ಮಾಡುವ ಕುರಿತೂ ಸಹ ಚಿಂತಿಸುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ರೋಹ್ಟಕ್-ರೀವರಿ ಮಾರ್ಗದಲ್ಲಿ ಸಿಎನ್ಜಿ ಚಾಲಿತ ಇಂಜಿನ್ ಬಳಕೆ ಮಾಡುತ್ತಿರುವುದರಿಂದ ಇಂಧನ ಉಳಿತಾಯವಾಗುತ್ತಿದೆ.

2009: ಕಠ್ಮಂಡುವಿನ ಪ್ರಸಿದ್ಧ ಪಶುಪತಿನಾಥ ದೇವಸ್ಥಾನದಲ್ಲಿ ನೇಪಾಳಿ ಪ್ರಜೆಗಳ ಸಹಿತ ಯಾರು ಬೇಕಿದ್ದರೂ ಅರ್ಚಕ ವೃತ್ತಿ ನಡೆಸುವುದಕ್ಕೆ ಸರ್ಕಾರ ಹೊಸದಾಗಿ ನಿಯಮ ರೂಪಿಸಿರುವುದರೊಂದಿಗೆ ಶತಮಾನಗಳ ಕಾಲದಿಂದ ಇಲ್ಲಿನ ಪೂಜಾ ಕಾರ್ಯಗಳಲ್ಲಿ ಇದ್ದ ದಕ್ಷಿಣ ಭಾರತದ ಬ್ರಾಹ್ಮಣರ ಏಕಸ್ವಾಮ್ಯ ಕೊನೆಗೊಂಡಿತು. ಸಂಸ್ಕೃತಿ ಮತ್ತು ರಾಜ್ಯ ಪುನರ್ರಚನೆ ಸಚಿವಾಲಯ ರೂಪಿಸಿದ ಹೊಸ ನಿಯಮಾವಳಿ ಪ್ರಕಾರ, ಅರ್ಹತೆ ಇರುವ ಯಾರೊಬ್ಬರೂ ಅರ್ಚಕರಾಗಬಹುದು ಎಂದು ಪಶುಪತಿ ಪ್ರದೇಶ ಅಭಿವೃದ್ಧಿ ಟ್ರಸ್ಟ್ (ಪಿಎಡಿಪಿ) ಮೂಲಗಳು ತಿಳಿಸಿದವು.

2009: ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಪಾನಮತ್ತ ಸ್ಥಿತಿಯಲ್ಲಿ ಪ್ರಜ್ಞಾಹೀನರಾಗಿ ಪತ್ತೆಯಾಗಿದ್ದ, ಅದ್ವಿತೀಯ ಗಾಯಕ ಕುಮಾರ ಗಂಧರ್ವ ಅವರ ಪುತ್ರ ಹಾಗೂ ಸ್ವತಃ ಗಾಯಕರೂ ಆದ ಮುಕುಲ್ ಶಿವಪುತ್ರ ಚಿಕಿತ್ಸೆಗಾಗಿ ಸೇರಿಸಲಾಗಿದ್ದ ಆಸ್ಪತ್ರೆಯಿಂದ ನಾಪತ್ತೆಯಾದರು. ಮೇ 7ರಿಂದ ನಾಪತ್ತೆಯಾಗಿದ್ದ ಅವರನ್ನು ಭೋಪಾಲ್‌ನಿಂದ 80 ಕಿ.ಮೀ. ದೂರದ ಹೊಶಂಗಾಬಾದಿನ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಪಾನಮತ್ತಸ್ಥಿತಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದಾಗ ಪತ್ತೆಹಚ್ಚಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಆದರೆ ಅದೇ ಮಧ್ಯರಾತ್ರಿ ಅವರು ಪುನಃ ನಾಪತ್ತೆಯಾದರು ಎಂದು ರಾಜ್ಯ ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

2009: ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ, ವೃತ್ತಿ ರಂಗಭೂಮಿ ನಾಟಕಕಾರ ಹುಚ್ಚಪ್ಪ ನಾಗಪ್ಪ ಹೂಗಾರ (ಎಚ್.ಎನ್. ಹೂಗಾರ) (77) ಗದಗದಲ್ಲಿ ಹೃದಯಾಘಾತದಿಂದ ನಿಧನರಾದರು. ಸಾಮಾಜಿಕ ನಾಟಕಗಳನ್ನು ರಚಿಸಿ ಉತ್ತರ ಕರ್ನಾಟಕದಾದ್ಯಂತ ಮನೆಮಾತಾಗಿದ್ದ ಹೂಗಾರ ಅವರ ಅನೇಕ ನಾಟಕಗಳು ಚಲನ ಚಿತ್ರಗಳಾಗಿವೆ. ಅವುಗಳಲ್ಲಿ 'ಪಟ್ಟಣಕ್ಕೆ ಬಂದ ಪತ್ನಿಯರು' ಚಿತ್ರ ಪ್ರಮುಖ. ಡಾ.ರಾಜಕುಮಾರ್, ಬಿ.ಸರೋಜಾ ದೇವಿ ಅಭಿನಯದ 'ಕಿತ್ತೂರು ಚೆನ್ನಮ್ಮ' ಚಿತ್ರಕ್ಕೆ ಹೂಗಾರ ಸಂಭಾಷಣೆ ಬರೆದಿದ್ದರು. 2000ನೇ ಸಾಲಿನಲ್ಲಿ ರಾಜ್ಯ ಸರಕಾರ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಿ ಗೌರವಿಸಿತ್ತು ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಟಕ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಅವರು ಪಾತ್ರರಾಗಿದ್ದರು. 1932ರ ಮಾರ್ಚ್ 30ರಂದು ಕಡುಬಡತನದ ಕುಟುಂಬದಲ್ಲಿ ಜನಿಸಿದ್ದ ಅವರು ಹಾಸ್ಯನಟರಾಗಿ, ನಿರ್ದೇಶಕರಾಗಿ ಹೆಸರು ಮಾಡಿದ್ದರು.

2009: ಹತ್ತು ವರ್ಷಗಳಲ್ಲಿ 10 ಸರ್ಕಾರಗಳು ಹಾಗೂ 8 ಮುಖ್ಯಮಂತ್ರಿಗಳನ್ನು ಕಂಡ ಈಶಾನ್ಯ ಗಡಿಯ ಪುಟ್ಟ ರಾಜ್ಯ, 'ಮೇಘಾಲಯ'ದ ಹೊಸ ಮುಖ್ಯಮಂತ್ರಿಯಾಗಿ ಶಿಲ್ಲಾಂಗಿನಲ್ಲಿ ಕಾಂಗ್ರೆಸ್ ನಾಯಕ ಡಿ.ಡಿ.ಲಪಾಂಗ್ ಪ್ರಮಾಣ ವಚನ ಸ್ವೀಕರಿಸಿದರು.ಯುಡಿಪಿ ಜತೆಗಿನ ಮೈತ್ರಿಯ ಫಲವಾಗಿ ರಚನೆಯಾದ 'ಮೇಘಾಲಯ ಸಂಯುಕ್ತ ಮೈತ್ರಿಕೂಟ'ದ ಚುಕ್ಕಾಣಿಯನ್ನು ಲಪಾಂಗ್ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ ಇತರ ಆರು ಜನ ಸಹೋದ್ಯೋಗಿಗಳು ಪ್ರಮಾಣ ವಚನ ಸ್ವೀಕರಿಸಿದರು.

2009: ಸಂಶೋಧಕ ಬನ್ನಂಜೆ ಬಾಬು ಅಮೀನ್, ತುಳು ಚಿತ್ರನಟ ಸದಾಶಿವ ಸಾಲಿಯಾನ್ ಮತ್ತು ಭೂತಾರಾಧನೆಯ ಕಲಾವಿದ ದಾಸು ಬಂಗೇರ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಪಾತ್ರರಾದರು. ಬೋಳ ಚಿತ್ತರಂಜನ್ ದಾಸ ಶೆಟ್ಟಿ ಅವರ 'ಬಿನ್ನೆದಿ' (ತುಳು ಕಾವ್ಯ), ನಾಗರಾಜ ಗುರುಪುರ ಅವರ 'ತಂಬಿಲ' (ನಾಟಕ) ಮತ್ತು ಮಹಮ್ಮದ್ ಕುಳಾಯಿ ಅವರ 'ಮಿತ್ತಬೈಲ್ ಯಮುನಕ್ಕ' (ಅನುವಾದ) ಕೃತಿಗಳು ಅಕಾಡೆಮಿಯ 2008ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದವು.

2008: ಜೈಪುರದ ಜನನಿಬಿಡ ಮಾರುಕಟ್ಟೆ ಪ್ರದೇಶದ ಎಂಟು ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಸುಮಾರು 80 ಮಂದಿ ಸತ್ತು ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಉಗ್ರಗಾಮಿಗಳ ಕೃತ್ಯ ಇದು ಎಂದು ಶಂಕಿಸಲಾಗಿದ್ದು, ಮಾರುಕಟ್ಟೆಯ ಎಂಟು ಸ್ಥಳಗಳಲ್ಲಿ ಒಂದರ ನಂತರ ಒಂದು ಬಾಂಬುಗಳು ಸ್ಫೋಟಗೊಂಡವು. ತ್ರಿಪೋಲಿಯ ಬಜಾರ್ ಬಳಿ ಇರುವ ಹನುಮಾನ್ ಗುಡಿಯ ಎದುರು ರಾತ್ರಿ 7.45ರ ಸುಮಾರಿಗೆ ಜನ ಕಿಕ್ಕಿರಿದಿದ್ದರು. ಆಗ ಅಲ್ಲಿ ಮೊದಲ ಸ್ಫೋಟ ಸಂಭವಿಸಿತು. ನಂತರ 12 ನಿಮಿಷದೊಳಗೆ ಅಲ್ಲಿಗೆ ಸಮೀಪದ ಮಾನಸ ಚೌಕ, ಬಡಿ ಚೌಪಾಲ್, ಚೋಟಿ ಚೌಪಾಲ್ ಮತ್ತು ಜೋಹರಿ ಬಜಾರ್ ಗಳಲ್ಲಿ ಸ್ಫೋಟದ ಭೀಕರ ಶಬ್ದ ಕೇಳಿಬಂದಿತು.

2008: ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತರಾದವರ ಸಂಖ್ಯೆ 12 ಸಾವಿರಕ್ಕೆ ಏರಿತು. 32 ವರ್ಷಗಳ ಇತಿಹಾಸದಲ್ಲಿ ಚೀನಾ ಕಂಡರಿಯದ ಭೀಕರ ಭೂಕಂಪ ಇದು.

2008: ಪಾಕಿಸ್ಥಾನ ಮುಸ್ಲಿಂ ಲೀಗ್-ನವಾಜ್ ಷರೀಫ್ ಬಣದ (ಪಿಎಂಎಲ್-ಎನ್) 9 ಸಚಿವರು ಈದಿನ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು. ಅವರು ಪ್ರಧಾನಿ ಯೂಸುಫ್ ರಾಜಾ ಜಿಲಾನಿ ಅವರಿಗೆ ಈ ರಾಜೀನಾಮೆ ಪತ್ರಗಳನ್ನು ನೀಡಿದರು. ಆದರೆ ತಮ್ಮ ಸಂಪುಟಕ್ಕೆ ಪಿಎಂಎಲ್-ಎನ್ ಸಚಿವರು ನೀಡಿರುವ ರಾಜೀನಾಮೆ ಅಂಗೀಕರಿಸಲು ಪ್ರಧಾನಿ ಜಿಲಾನಿ ನಿರಾಕರಿಸಿದರು. ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಆಸಿಫ್ ಆಲಿ ಜರ್ದಾರಿ ಅವರು ವಿದೇಶ ಪ್ರವಾಸ ಮುಗಿಸಿ ಸ್ವದೇಶಕ್ಕೆ ಮರಳುವ ತನಕ ಈ ರಾಜೀನಾಮೆ ಪತ್ರಗಳನ್ನು ಅಂಗೀಕರಿಸದೆ ಹಾಗೆಯೇ ಉಳಿಸಿಕೊಳ್ಳುವುದಾಗಿ ಪಿಎಂಎಲ್-ಎನ್ ಸಚಿವರಿಗೆ ಅವರು ತಿಳಿಸಿದರು.

2008: ಪ್ರಾಚೀನ ಕಲಾಕೃತಿ ಹಾಗೂ ಇತರ ಅಪರೂಪದ ವಸ್ತುಗಳನ್ನು ಬ್ರಿಟನ್ನಿಗೆ ಕಳ್ಳ ಸಾಗಾಣಿಕೆ ಮಾಡಿದ ಆರೋಪದಿಂದ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಕರಾಚಿಯ ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿತು. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಬ್ರಿಟನ್ನಿನ ಮಾಜಿ ರಾಯಭಾರಿ ವಾಜಿದ್ ಹಸನ್ ಅವರನ್ನೂ ಸಿಂಧ್ ಹೈಕೋರ್ಟ್ ಆರೋಪ ಮುಕ್ತಗೊಳಿಸಿತು. 1997ರಲ್ಲಿ ಲಂಡನ್ ವಿಮಾನ ನಿಲ್ದಾಣದಲ್ಲಿ ಪ್ರಾಚೀನ ಕಲಾಕೃತಿಗಳು ಹಾಗೂ ಅಪರೂಪದ ವಸ್ತುಗಳನ್ನು ಹೊಂದಿದ್ದ ಎಂಟು ಡಬ್ಬಿಗಳು ದೊರೆತಾಗ ಪ್ರಕರಣ ಬಯಲಿಗೆ ಬಂದಿತ್ತು. ಜರ್ದಾರಿ ಹಾಗೂ ಹಸನ್ ಸೇರಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಹತ್ಯೆಗೀಡಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಪತಿಯಾದ ಜರ್ದಾರಿ ವಿರುದ್ಧ ದಾಖಲಾಗಿದ್ದ ಇತರ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಕಳೆದ ವರ್ಷ ವಜಾಗೊಳಿಸಿದ್ದರು.

2008: ಈಶಾನ್ಯ ಬಾಂಗ್ಲಾದ ಕಿಶೋರಗಂಜ್ ಜಿಲ್ಲೆಯ ನಿಕ್ಲಿಯುಪ ಸಮೀಪದ ಘೋರೌತ್ರ ನದಿಯಲ್ಲಿ ಮೋಟಾರು ದೋಣಿ (ಲಾಂಚ್) ಬಿರುಗಾಳಿಗೆ ಸಿಲುಕಿ ಮುಳುಗಿದ ಪರಿಣಾಮವಾಗಿ ಅದರಲ್ಲಿದ್ದ 40 ಜನರು ಮೃತರಾದರು.

2008: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರು ವೇಗಿ ಎಸ್. ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಪ್ರಕರಣದ 14 ಪುಟಗಳ ವರದಿಯನ್ನು ವಿಚಾರಣಾ ಆಯುಕ್ತ ಸುಧೀರ್ ನಾನಾವತಿ ಅವರು ಮುಂಬೈಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ನೀಡಿದರು.

2007: ತಾಲಿಬಾನಿನ ಪ್ರಮುಖ ಸೇನಾ ಕಮಾಂಡರ್ ಮುಲ್ಲಾ ದಾದುಲ್ಲಾನನ್ನು ಹತ್ಯೆ ಮಾಡಲಾಗಿದೆ ಎಂದು ಆಫ್ಘಾನಿಸ್ಥಾನ ಸರ್ಕಾರ ಪ್ರಕಟಿಸಿತು. ಸಹಸ್ರಾರು ಉಗ್ರರ ನೇತೃತ್ವ ವಹಿಸಿಕೊಂಡು ದಾಳಿ ಇಡುತ್ತಿದ್ದ ದಾದುಲ್ಲಾನಿಗಾಗಿ 2001ರಲ್ಲಿ ಅಮೆರಿಕ ಮತ್ತು ಆಫ್ಘಾನಿಸ್ಥಾನ ಸರ್ಕಾರ ತಾಲಿಬಾನ್ ವಿರುದ್ಧ ಜಂಟಿ ದಾಳಿ ಆರಂಭಿಸಿದಂದಿನಿಂದ ಹುಡುಕಾಟ ನಡೆಸಲಾಗುತ್ತಿತ್ತು.

2007: ಕೇಂದ್ರ ಸರ್ಕಾರವು ಜಾಹೀರಾತು ಸಲುವಾಗಿ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಆದರೆ ನೇತಾಜಿ ಸುಭಾಶ್ ಚಂದ್ರ ಬೋಸ್ ಜನ್ಮದಿನ ಹಿನ್ನೆಲೆಯಲ್ಲಿ ಅವರ ಸಂದೇಶವನ್ನು ಜನರಿಗೆ ತಲುಪಿಸುವಂತಹ ಯಾವುದೇ ಜಾಹೀರಾತನ್ನು ಅದು ಪ್ರಕಟಿಸಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಬಹಿರಂಗಪಡಿಸಿತು. ದಿಲ್ಲಿಯ ನಿವಾಸಿ ದೇವ್ ಆಶೀಷ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ಸರ್ಕಾರ ಈ ಮಾಹಿತಿ ನೀಡಿತು.

2007: ಕೇಂದ್ರ ಮಾಹಿತಿ ಮತ್ತು ಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಪ್ರಧಾನಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ಈದಿನ ಚೆನ್ನೈಯಲ್ಲಿ ಸಭೆ ಸೇರಿದ್ದ ಡಿಎಂಕೆ ಆಡಳಿತ ಸಮಿತಿಯು ಮುಖ್ಯಮಂತ್ರಿ ಕರುಣಾನಿಧಿ ಕುಟುಂಬದ ಆಂತರಿಕ ಕಲಹವನ್ನು ಬೀದಿಗೆಳೆದು ತೀವ್ರ ಇರುಸು ಮುರುಸು ಉಂಟುಮಾಡಿದ್ದಕ್ಕಾಗಿ ಮಾರನ್ ಅವರನ್ನು ಕೇಂದ್ರ ಸಂಪುಟದಿಂದ ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತ್ತು.

2007: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಲಖನೌದಲ್ಲಿ ಉತ್ತರ ಪ್ರದೇಶದ 33ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಟಿ.ವಿ. ರಾಜೇಶ್ವರ್ ಅವರು ಪ್ರಮಾಣವಚನ ಬೋಧಿಸಿದರು. 49 ಮಂದಿ ಸದಸ್ಯರ ಸಚಿವ ಸಂಪುಟವೂ ಮಾಯಾವತಿ ಜೊತೆಗೆ ಇದೇ ದಿನ ಪ್ರಮಾಣ ವಚನ ಸ್ವೀಕರಿಸಿತು. ಇದರೊಂದಿಗೆ ಉತ್ತರಪ್ರದೇಶದಲ್ಲಿ 14 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರಗಳ ಯುಗ ಅಂತ್ಯಗೊಂಡಿತು. 1993ರಲ್ಲಿ ರಾಷ್ಟ್ರದಲ್ಲೇ ಮೊತ್ತ ಮೊದಲ ದಲಿತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮಾಯಾವತಿ ಈ ಸಲ 4ನೇ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು.

2007: ಜ್ಞಾನಪೀಠ ಮಾದರಿಯ ಪ್ರಶಸ್ತಿಯೊಂದನ್ನು ಕನ್ನಡದಲ್ಲಿ ಮುಂದಿನ ವರ್ಷದಿಂದ ಅಸ್ತಿತ್ವಕ್ಕೆ ತರಲಾಗುವುದು. ಈ ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿ ಇರುತ್ತದೆ ಎಂದು ನಿರ್ಮಾಣ್ ಶೆಲ್ಟರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ವಿ. ಲಕ್ಷ್ಮೀನಾರಾಯಣ್ ಬೆಂಗಳೂರಿನಲ್ಲಿ ಪ್ರಕಟಿಸಿದರು. ಹಿರಿಯ ಸಾಹಿತಿ ಡಾ. ಚನ್ನವೀರ ಕಣವಿ ಅವರಿಗೆ `ಅನಕೃ - ನಿರ್ಮಾಣ್' ಪ್ರಶಸ್ತಿ ಪ್ರದಾನ ಮಾಡಿದ ಸಮಾರಂಭದಲ್ಲಿ ಈ ವಿಚಾರನ್ನು ಲಕ್ಷ್ಮೀನಾರಾಯಣ್ ಬಹಿರಂಗಪಡಿಸಿದರು.

2007: ಚೆನ್ನೈಯ ಪ್ರಸಿದ್ಧ ಜವಳಿ ಸಂಸ್ಥೆ ಕುಮಾರನ್ ಸಿಲ್ಕ್ಸ್ ಸಂಸ್ಥೆಯು ತಮಿಳುನಾಡಿನ ಕೃಷ್ಣಗಿರಿಯ ಪಾರ್ವತಿ ಪದ್ಮಾವತಿ ಜೈನ ದೇವಾಲಯದ ಪದ್ಮಾವತಿ ದೇವಿಗಾಗಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಸೀರೆ ತಯಾರಿಸಿರುವುದನ್ನು ಬಹಿರಂಗ ಪಡಿಸಿತು. ಸತತ 18 ದಿನಗಳ ಶ್ರಮದ ಫಲವಾಗಿ ರೂಪುಗೊಂಡಿರುವ ಈ ಸೀರೆಯ ಉದ್ದ 2007 ಅಡಿಗಳು. ಅಂದರೆ 685 ಮೀಟರ್. (ಸಾಮಾನ್ಯ ಸೀರೆಯ ಉದ್ದ 5-6 ಮೀಟರ್ ಮಾತ್ರ). ಕುಂಕುಮ ಬಣ್ಣದ ಈ ಸೀರೆಯನ್ನು ಗಿನ್ನೆಸ್ ದಾಖಲೆ ಪುಸ್ತಕ ಸಂಸ್ಥೆಯು `ವಿಶ್ವದ ಅತಿ ದೊಡ್ಡ ಸೀರೆ' ಎಂದು ತನ್ನ ದಾಖಲೆಗಳ ಪುಸ್ತಕದಲ್ಲಿ ದಾಖಲು ಮಾಡಿದೆ.

2007: ಮೂವತ್ತು ವರ್ಷಗಳ ಹಿಂದೆ ತನ್ನ ಅಪ್ಪ ಮಾಡಿದ್ದ ಜಾದೂ ದಾಖಲೆಯನ್ನು ಮಗ ಆಕಾಶ್ ಈದಿನ ಹೈದರಾಬಾದಿನಲ್ಲಿ ಮುರಿದ. ಈತನ ಅಪ್ಪ ವಿಶ್ವವಿಖ್ಯಾತ ಜಾದೂಗಾರ ಆನಂದ್ 1970ರಲ್ಲಿ ಮರದ ಪೆಟ್ಟಿಗೆಯೊಂದರಲ್ಲಿ ಬಂಧಿತರಾಗಿ ಜಬಲ್ ಪುರದ ನರ್ಮದಾ ನದಿಯಲ್ಲಿ ಮುಳುಗಿ ಕೇವಲ 40 ಸೆಕೆಂಡುಗಳಲ್ಲಿ ಬಂಧ ಮುಕ್ತರಾಗಿ ನೀರಿನಿಂದ ಮೇಲೆ ಬಂದಿದ್ದರು. ಆ ಮೂಲಕ ಅವರು ವಿಶ್ವ ವಿಖ್ಯಾತ ಹ್ಯಾರಿ ಹೌಡಿನಿ 1912ರಲ್ಲಿ ಸೃಷ್ಟಿಸಿದ್ದ ನೀರಿನಿಂದ ಪಾರಾಗುವ ಜಾದೂ ವಿದ್ಯೆ ಪ್ರದರ್ಶನ ದಾಖಲೆಯನ್ನು ಮುರಿದಿದ್ದರು. ಈದಿನ ಆನಂದ್ ಪುತ್ರ ಆಕಾಶ್ ಕೇವಲ 15 ಸೆಕೆಂಡುಗಳಲ್ಲಿ ಈ ಜಾದೂ ಸಾಹಸ ಮೆರೆದು ಅಪ್ಪನ ದಾಖಲೆ ಮುರಿದ. ಕೈಕಾಲನ್ನು ಸರಪಳಿಯಿಂದ ಬಿಗಿದು ಮರದ ಪೆಟ್ಟಿಗೆಯಲ್ಲಿ ಬಂಧಿಸಿ ಆಕಾಶನನ್ನು ಹೈದರಾಬಾದಿನ ಕೇಂದ್ರ ಭಾಗದ ಹುಸೇನ್ ಸಾಗರ ಸರೋವರದ ನೀರಿನ ಆಳಕ್ಕೆ ಎಸೆಯಲಾಗಿತ್ತು. ಆತ ಈ ಬಂಧನದಿಂದ ಮುಕ್ತನಾಗಿ ಕೇವಲ 15 ಸೆಕೆಂಡುಗಳಲ್ಲೇ ನೀರಿನ ಮೇಲೆ ಗೋಚರಿಸಿ ಹೊಸ ವಿಶ್ವದಾಖಲೆ ನಿರ್ಮಿಸಿದ.

2006: ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಒಂದು ತಿಂಗಳ ಸಾದಾ ಶಿಕ್ಷೆಗೆ ಗುರಿಯಾದ ಮಹಾರಾಷ್ಟ್ರದ ಸಾರಿಗೆ ಸಚಿವ ಸ್ವರೂಪಸಿಂಗ್ ನಾಯಕ್ ಈ ದಿನ ನಸುಕಿನ 4.30ರ ವೇಳೆಗೆ ಮುಂಬೈಯ ಮಲಬಾರ್ ಹಿಲ್ ಠಾಣೆಯಲ್ಲಿ ಪೊಲೀಸರಿಗೆ ಶರಣಾದರು. ನಂತರ ಅವರನ್ನು ಠಾಣೆ ಸೆರೆಮನೆಗೆ ಕಳುಹಿಸಲಾಯಿತು. 2002ರಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿದ್ದ ನಾಯಕ್ ಹಾಗೂ ಇಲಾಖೆಯ ಆಗಿನ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಖೋತ್ ಅವರು ಸುಪ್ರೀಂಕೋರ್ಟ್ ನಿಷೇಧ ಉಲ್ಲಂಘಿಸಿ ಮಹಾರಾಷ್ಟ್ರ ರಾಜ್ಯದಲ್ಲಿ ಆರು ಕಟ್ಟಿಗೆ ಕೊರೆಯುವ ಮಿಲ್ಲುಗಳಿಗೆ ಪರವಾನಗಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ಇಬ್ಬರಿಗೂ ಒಂದು ತಿಂಗಳ ಸಾದಾ ಸಜೆ ವಿಧಿಸಿತ್ತು.

1981: ಪೋಪ್ ಜಾನ್ ಪಾಲ್ (ದ್ವಿತೀಯ) ಅವರನ್ನು ಸೇಂಟ್ ಪೀಟರ್ಸ್ ಚೌಕದಲ್ಲಿ ಟರ್ಕಿಯ ಮೆಹ್ಮೆಟ್ ಅಲಿ ಆಗ್ಕಾ ಎಂಬ ವ್ಯಕ್ತಿ ಗುಂಡು ಹೊಡೆದು ತೀವ್ರವಾಗಿ ಗಾಯಗೊಳಿಸಿದ.

1967: ಝಕೀರ್ ಹುಸೇನ್ ಅವರು ಭಾರತದ ಮೂರನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1962: ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ಎರಡನೇ ರಾಷ್ಟ್ರಪತಿಯಾದರು.

1960: ಹಾಸ್ಯ ಲೇಖಕಿ, ಕವಯಿತ್ರಿ ಸುಕನ್ಯಾ ಕಳಸ ಅವರು ಎಚ್. ಪುಟ್ಟದೇವರಯ್ಯ - ನಾಗಮ್ಮ ದಂಪತಿಯ ಮಗಳಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದಲ್ಲಿ ಹುಟ್ಟಿದರು. ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿಗಳನ್ನು ಪಡೆದಿರುವ ಸುಕನ್ಯಾ ಅವರ ಅವರ ಕಥೆ, ಕವನ, ಲೇಖನ, ಹಾಸ್ಯ ಬರಹಗಳು ಪ್ರಜಾವಾಣಿ, ಸುಧಾ, ತುಷಾರ, ತರಂಗ, ವನಿತ, ಕರ್ಮವೀರ, ಉದಯವಾಣಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

1940: ಬ್ರಿಟನ್ನಿನ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಹೌಸ್ ಆಫ್ ಕಾಮನ್ಸನ್ನು ಉದ್ದೇಶಿಸಿ ಪ್ರಥಮ ಭಾಷಣ ಮಾಡಿದರು. `ನೆತ್ತರು, ಕಣ್ಣೀರು, ಬೆವರಿನ ಹೊರತಾಗಿ ನಿಮಗೆ ನೀಡಲು ನನ್ನ ಬಳಿ ಬೇರೇನೂ ಇಲ್ಲ' ಎಂದು ಅವರು ಹೇಳಿದರು.

1905: ಫಕ್ರುದ್ದೀನ್ ಅಲಿ ಅಹ್ಮದ್ (1905-77) ಜನ್ಮದಿನ. ಇವರು 1974ರಿಂದ 1977ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು.

1857: ಬ್ರಿಟಿಷ್ ಬ್ಯಾಕ್ಟೀರಿಯಾ ತಜ್ಞ ಸರ್ ರೊನಾಲ್ಡ್ ರಾಸ್ (1857-1932) ಜನ್ಮದಿನ. ಮಲೇರಿಯಾ ರೋಗ ನಿಯಂತ್ರಣಕ್ಕೆ ಔಷಧಿ ಕಂಡು ಹಿಡಿಯುವಲ್ಲಿ ಮಾಡಿದ ಸಾಧನೆಗಾಗಿ ಇವರಿಗೆ 1902ರಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಲಭಿಸಿತು.

No comments:

Post a Comment