Friday, May 11, 2018

ಇಂದಿನ ಇತಿಹಾಸ History Today ಮೇ 10

ಇಂದಿನ ಇತಿಹಾಸ History Today  ಮೇ 10
2018: ಬೆಂಗಳೂರು: ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಕರ್ನಾಟಕದ ದಲಿತರು ಮತ್ತು ಇತರ ಹಿಂದುಳಿದವರನ್ನು  ತಲುಪಲು ಯತ್ನಿಸಿದ ಪ್ರಧಾನ ನರೇಂದ್ರ ಮೋದಿ ಅವರು ತಮ್ಮ ಸರ್ಕಾರವು ಡಾ. ಬಿ.ಆರ್. ಅಂಬೇಡ್ಕರ್ ಅವರ ಬಲಾಢ್ಯ ಮತ್ತು ಸಮೃದ್ಧ ರಾಷ್ಟ್ರದ ಕನಸನ್ನು ನನಸು ಮಾಡಲು ಶ್ರಮಿಸುತ್ತಿದೆ ಎಂದು ಹೇಳಿದರು.  ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್ ಪಕ್ಷವು ತಾನು ಅಧಿಕಾರದಲ್ಲಿ ಇದ್ದಾಗ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಲು ವಿಫಲಗೊಂಡಿತು ಎಂದು ಟೀಕಿಸಿದರು. ಕರ್ನಾಟಕ ಬಿಜೆಪಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಸ್ಲಮ್ ಮೋರ್ಚಾ ಕಾರ್ಯಕರ್ತರನ್ನು ಉದ್ದೇಶಿಸಿನರೇಂದ್ರ ಮೋದಿ ಆಪ್ ಮೂಲಕ ಮಾತನಾಡಿದ ಅವರುನಮ್ಮ ಸರ್ಕಾರವು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನು ಹೆಚ್ಚು ಕಠಿಣಗೊಳಿಸಿತು ಎಂದು ಹೇಳಿದರು. ಸಂಸತ್ತಿನಲ್ಲಿ ಬಿಜೆಪಿಯು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಗರಿಷ್ಠ ಸಂಖ್ಯೆಯ ಸದಸ್ಯರನ್ನು ಸಂಸತ್ತಿನಲ್ಲಿ ಹೊಂದಿದೆ ಎಂಬುದನ್ನೂ ಅವರು ಪಕ್ಷದ ಕಾರ್ಯಕರ್ತರಿಗೆ ನೆನಪಿಸಿದರು. ಇತರೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಬದ್ಧ ಸ್ಥಾನಮಾನ ನೀಡುವ ಸರ್ಕಾರದ ಯತ್ನವನ್ನು ವಿಫಲಗೊಳಿಸುವ ಸಲುವಾಗಿ ಕಾಂಗ್ರೆಸ್ ಸಂಸತ್ತನ್ನು ಕಾರ್ಯ ನಿರ್ವಹಿಸಲು ಬಿಡಲಿಲ್ಲ ಎಂದೂ ಅವರು ಹೇಳಿದರು.  ಇದಕ್ಕೆ ಮುನ್ನ ಪ್ರಧಾನಿ ಆಪ್ ಮೂಲಕ ಪಕ್ಷದ ಪದಾಧಿಕಾರಿಗಳು, ಮಹಿಳಾ ಮತ್ತು ಯುವ  ವಿಭಾಗಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.   

2018: ಬೆಂಗಳೂರು:  ತಮ್ಮ ಪ್ರಧಾನ ಮಂತ್ರಿ ಬಯಕೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ದಾಳಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದ್ದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಲ್ಲಿ ಹೇಳಿದರು. ‘ ಚುನಾವಣೆಯು ರಾಹುಲ್ ಗಾಂಧಿ ಕುರಿತದ್ದಲ್ಲ. ನಾನು ಈಗ ಪ್ರಧಾನಿಯವರ ಜೊತೆಗೆ ಹೇಗೆ ವ್ಯವಹರಿಸಬೇಕು ಎಂದು ಕಲಿತುಕೊಂಡಿದ್ದೇನೆ. ಪ್ರತಿಕ್ರಿಯಿಸಲು ಆಗದೇ ಇದ್ದಾಗ ಅವರು ಬೇರೆಡೆಗೆ ಗಮನ ಸೆಳೆಯುತ್ತಾರೆ ಎಂದು ಕರ್ನಾಟಕದಲ್ಲಿ ನಡೆಸಿದ ತಮ್ಮ ವ್ಯಾಪಕ ಪ್ರಚಾರವನ್ನು ಕೊನೆಗೊಳಿಸಿದ ಬಳಿಕ ಅವರು ಬೆಂಗಳೂರಿನಲ್ಲಿ ಹೇಳಿದರು. ಮೇ 9ರ ಬುಧವಾರ ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಮೋದಿ ಅವರು ರಾಷ್ಟ್ರವುಅಪ್ರಬುದ್ಧ ಖ್ಯಾತ (ನಾಮ್ ದಾರ್)’ ನಾಯಕನನ್ನು ಪ್ರಧಾನಿ ಹುದ್ದೆಗೆ ಅಂಗೀಕರಿಸುವುದೇ ಎಂದು ಅಚ್ಚರಿ ವ್ಯಕ್ತ ಪಡಿಸಿದ್ದರು.  ಮೋದಿ ಅವರಿಗೆ ನನ್ನಲ್ಲಿಬೆದರಿಕೆ ಕಾಣಿಸಿದೆ. ಮೋದಿ ಅವರ ಒಳಗೆ ಸಿಟ್ಟು ಕುದಿಯುತ್ತಿದೆ. ಅವರು ಎಲ್ಲರ ಜೊತೆಗೂ ಸಿಟ್ಟಿನಿಂದಿದ್ದಾರೆ, ನನ್ನೊಬ್ಬನ ಮೇಲಷ್ಟೇ ಅಲ್ಲ ಮತ್ತು ಅವರು ನನ್ನಿಂದ ತಮಗೆ ಬೆದರಿಕೆ ಇದೆ ಎಂದು ಕಂಡುಕೊಂಡಿದ್ದಾರೆ ಎಂದು ರಾಹುಲ್ ಹೇಳಿದರು.  ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸುತ್ತದೆ ಎಂಬ ಆತ್ಮವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದರು. ತಾನು ದೇವಾಲಯಗಳಿಗೆ ಭೇಟಿ ನೀಡಿದಾಗ ಬಿಜೆಪಿಗೆ ಇರುಸು ಮುರುಸಾಯಿತು ಎಂದು ಹೇಳಿದ ರಾಹುಲ್, ’ಬಿಜೆಪಿಗೆ ಹಿಂದು ಪದ ಅರ್ಥವಾಗುತ್ತದೆ ಎಂದು ನನಗೆ ಅನಿಸುತ್ತಿಲ್ಲ ಎಂದು ನುಡಿದರು.  ಮೋದಿ ಅವರು ಪರೋಕ್ಷವಾಗಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಇಟೆಲಿ ಮೂಲವನ್ನು  ಉಲ್ಲೇಖಿಸಿದ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ’ನನ್ನ ತಾಯಿ ಇಟಾಲಿಯನ್. ಆದರೆ ಅವರು ತಮ್ಮ ಜೀವನದ ಬಹುತೇಕ ಭಾಗವನ್ನು ಭಾರತದಲ್ಲಿ ಜೀವಿಸಿದರು. ನಾನು ನೋಡುತ್ತಿರುವ ಹಲವಾರು ಜನರಿಗಿಂತ ಹೆಚ್ಚು ನನ್ನ ತಾಯಿ ಭಾರತೀಯರಾಗಿದ್ದಾರೆ ಎಂದು ರಾಹುಲ್ ಹೇಳಿದರು.  ರಾಷ್ಟ್ರದ ವಿದೇಶಾಂಗ ನೀತಿಯು ದುರ್ಬಲಗೊಂಡಿದೆ ಎಂದೂ ಅವರು ಆಪಾದಿಸಿದರು.

2018: ಹೈದರಾಬಾದ್: ಭೂ ದಾಖಲೆಗಳ ತಪ್ಪು ಸರಿಪಡಿಸುವ ಕೆಲಸ ಪೂರ್ಣಗೊಂಡ ಬಳಿಕ, ಈಗ ತೆಲಂಗಾಣ ರಾಜ್ಯ ಸರ್ಕಾರವು ನೋಂದಣಿ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಬಗ್ಗೆ ತನ್ನ ಕಣ್ಣಿಟ್ಟಿದೆ. ಭೂ ಸಂಬಂಧಿ ವಹಿವಾಟುಗಳಲ್ಲಿ ಜನರಿಗೆ ಆಗುತ್ತಿರುವ ಅನಾನುಕೂಲಗಳನ್ನು ನಿವಾರಿಸುವ ಉದ್ದೇಶವನ್ನು ಇದು ಹೊಂದಿದೆ.  ರಾಜ್ಯ ಸ್ಥಾಪನಾ ದಿನವಾದ ಜೂನ್ ೨ರಂದು ಹೊಸ ನೋಂದಣಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಇಲ್ಲಿ ಪ್ರಕಟಿಸಿದರು.  ಹೊಸ ವ್ಯವಸ್ಥೆಯಲ್ಲಿ ಮಂಡಲ ಕಂದಾಯ ಅಧಿಕಾರಿಗಳೇ ಸಬ್ ರಿಜಿಸ್ಟ್ರಾರ್ ಗಳ ಕರ್ತವ್ಯ ನಿರ್ವಹಿಸುವರು. ಎಲ್ಲ ಭೂಮಿಯ ವಿವರಗಳನ್ನು ಹೊಂದಿರುವ ಧರಣಿ ವೆಬ್ ಸೈಟ್ ಆರಂಭದೊಂದಿಗೆ ಭೂ ನೋಂದಣಿ ಪ್ರಕ್ರಿಯೆಯೂ ಸರಳವಾಗಲಿದೆ ಎಂದು ಚಂದ್ರಶೇಖರ ರಾವ್ ನುಡಿದರು. ’ನೀವು ಮಾಡಬೇಕಾದ್ದು ಮಂಡಲ ಕಂದಾಯ ಅಧಿಕಾರಿ (ಎಂಆರ್ ) ಜೊತೆಗೆ ಭೂ ವಹಿವಾಟು ನೋಂದಣಿಗಾಗಿ ಸಮಯ ನಿಗದಿ ಪಡಿಸಿಕೊಳ್ಳುವುದು ಮಾತ್ರ. ನೋಂದಣಿ ಬಳಿಕ ದಾಖಲೆಗಳು ಫಲಾನುಭವಿU ಮನೆಗಳಿಗೇ ಕೊರಿಯರ್ ಮೂಲಕ - ದಿನಗಳ ಒಳಗಾಗಿ ತಲುಪುವುದು ಎಂದು ಮುಖ್ಯಮಂತ್ರಿ ಹೇಳಿದರು. ಕರೀಮ್ ನಗರ ಜಿಲ್ಲೆಯ ಹುಝಾರಾಬಾದಿನಲ್ಲಿ ರೈತರಿಗೆ ಹೂಡಿಕೆಗೆ ಬೆಂಬಲ ನೀಡುವಂತಹರೈತ ಬಂಧು ಯೋಜನೆಯನ್ನು ಔಪಚಾರಿಕವಾಗಿ ಉದ್ಘಾಟಿಸಿದ ಮುಖ್ಯಮಂತ್ರಿ, ಬೃಹತ್ ಸಮಾವೇಶದಲ್ಲೇ ನೋಂದಣಿ ಪ್ರಕ್ರಿಯೆಯಲ್ಲಿ ಆಗಲಿರುವ ಕ್ರಾಂತಿಕಾರಿ ಬದಲಾವಣೆಯ ವಿವರ ಪ್ರಕಟಿಸಿದರು. ಹೊಸ ವ್ಯವಸ್ಥೆಯು ರೈತರು ಸಾಲ ಪಡೆಯಲು ಬ್ಯಾಂಕುಗಳಿಗೆ ಅಡಮಾನಕ್ಕಾಗಿ ಪಟ್ಟಾದಾರ ಪಾಸ್ ಪುಸ್ತಕಗಳನ್ನು ಒಯ್ಯಬೇಕಾಗಿಲ್ಲ. ರೈತರಿಗೆ ವಿತರಿಸಲಾಗುವ ಹೊಸ ಪಾಸ್ ಪುಸ್ತಕಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಅವುಗಳನ್ನು ಶೀಘ್ರದಲ್ಲೇ ವಿತರಣೆ ಮಾಡಲಾಗುವುದು. ಬ್ಯಾಂಕುಗಳು ಸಾಲ ಮಂಜೂರು ಮಾಡಲು ಭೂಮಾಲೀಕರ ವಿವರಗಳನ್ನು ಆನ್ ಲೈನ್ ಮೂಲಕವೇ ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ನುಡಿದರು. .೩೮ ಕೋಟಿ ಎಕರೆ ಭೂಮಿಯಲ್ಲಿ . ಕೋಟಿ ಎಕರೆ ಭೂಮಿ ಕೃಷಿಭೂಮಿಯಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ಪರಿಶೀಲನೆಗಳನ್ನೂ ಸರ್ಕಾರ ಪೂರ್ಣಗೊಳಿಸಿದೆ. ಹಲವಾರು ನೂರು ತಾಸು, ದಿನಗಳ ಆಳವಾದ ಚರ್ಚೆಗಳ ಬಳಿಕ ಸರ್ಕಾರವು ರೈತರಿಗೆ ಹೂಡಿಕೆ ಬೆಂಬಲ ನೀಡಲು ನಿರ್ಧರಿಸಿದೆ. ಕಾಯಂ ಸ್ವರೂಪದ ಯೋಜನೆಯು ರಾಜ್ಯದ ರೈತರ ಪಾಲಿಗೆ ಸುವರ್ಣ ಅಧ್ಯಾಯವನ್ನು ತೆರೆದಿದೆ ಎಂದು ಮುಖ್ಯಮಂತ್ರಿ ಹೇಳಿದರು.  ತೆಲಂಗಾಣ ರಾಜ್ಯ ರಚನೆಯ ಬಳಿಕ ತಮ್ಮ ಸರ್ಕಾರವು ಆರಂಭಿಸಿದ ವಿವಿಧ ಕ್ರಮಗಳನ್ನು ಮುಖ್ಯಮಂತ್ರಿ ಪಟ್ಟಿ ಮಾಡಿದರು. ’ರಾಜ್ಯದ ಸ್ವಂತ ಕಂದಾಯವನ್ನು ಶೇಕಡಾ ೨೦ಕ್ಕಿಂತಲೂ ಹೆಚ್ಚಿಗೆ ಏರಿಸಿದ ಮತ್ತು ಬಂಡವಾಳ ಹೂಡಿಕೆಯನ್ನು ಶೇಕಡಾ ೨೮ಕ್ಕೆ ಏರಿಸಿದ ನಂಬರ್ ಒನ್ ರಾಜ್ಯ ನಮ್ಮದು ಎಂದು ಅವರು ನುಡಿದರು.  ಇದೇ ಸಂದರ್ಭದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಹರಡುತ್ತಿರುವ ಅಪ ಪ್ರಚಾರಗಳ ವಿರುದ್ಧ ಜನರಿಗೆ ಎಚ್ಚರಿಕೆ ನೀಡಿದ ಕೆಸಿಆರ್, ’ನಮ್ಮ ಸರ್ಕಾರವು ಎಲ್ಲ ವರ್ಗಗಳ ಅಭ್ಯುದಯಕ್ಕಾಗಿ ಬಿಡುವು ರಹಿತವಾಗಿ ಕೆಲಸ ಮಾಡುತ್ತಿದೆ. ಆದರೆ ರಾಜ್ಯದ ಜನರ ಸಂಕಷ್ಟಗಳಿಗೆ ಮುಖ್ಯ ಕಾರಣವಾಗಿರುವ ಕಾಂಗ್ರೆಸ್ ಪಕ್ಷವು ನಮ್ಮ ಪ್ರಯತ್ನಗಳ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದು ಆಪಾದಿಸಿದರು.  ಜನರಿಗೆ ಅಗತ್ಯವಾಗಿ ಬೇಕಾಗಿರುವ ವಿದ್ಯುತ್, ನೀರು ಇತ್ಯಾದಿಗಳನ್ನು ಒದಗಿಸಲು ಸರ್ಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈಗ ರೈತರ ಉತ್ಪನ್ನಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಹಾಲಿ ಬೆಲೆಗಿಂತ ಕನಿಷ್ಠ ಶೇಕಡಾ ೨೫ರಷ್ಟಾದರೂ ಹೆಚ್ಚಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಕಾಲ ಬಂದಿದೆ ಎಂದು ಅವರು ನುಡಿದರು.

2018: ನವದೆಹಲಿ: ಆಧಾರ್ ಮತ್ತು ಅದನ್ನು ಸಕ್ರಿಯಗೊಳಿಸುವ ೨೦೧೬ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಹಲವಾರು ಅರ್ಜಿಗಳ ಮೇಲಿನ ತನ್ನ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್  ಕಾಯ್ದಿರಿಸಿತು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಎಲ್ಲ ಕಕ್ಷಿದಾರರಿಗೂ ತಮ್ಮ ಅಹವಾಲು/ ವಾದಗಳನ್ನು ಲಿಖಿತವಾಗಿ ಸಲ್ಲಿಸುವಂತೆ ನಿರ್ದೇಶಿಸಿತು. ನಾಲ್ಕು ತಿಂಗಳುಗಳ ಅವಧಿಯಲ್ಲಿ ೩೮ ದಿನಗಳ ಕಾಲ ನಡೆದ ಸುದೀರ್ಘ ಆಲಿಕೆಯ ಬಳಿಕ ತೀರ್ಪನ್ನು ಕಾಯ್ದಿರಿಸಲಾಯಿತು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಹಿರಿಯ ವಕೀಲರಾದ ಕಪಿಲ್ ಸಿಬಲ್, ಪಿ. ಚಿದಂಬರಂ, ರಾಕೇಶ್ ದ್ವಿವೇದಿ, ಶ್ಯಾಮ್ ದಿವಾನ್, ಅರವಿಂದ ದಾತಾರ್ ಅವರು ವಿವಿಧ ಕಕ್ಷಿದಾರರ ಪರವಾಗಿ ನ್ಯಾಯಾಲಯದಲ್ಲಿ ತಮ್ಮ ಅಹವಾಲು ಮಂಡಿಸಿದ್ದರು.  ನ್ಯಾಯಮೂರ್ತಿಗಳಾದ .ಕೆ. ಸಿಕ್ರಿ, .ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಅಶೋಕ ಭೂಷಣ್ ಅವರು ಸಂವಿಧಾನ ಪೀಠದ ಇತರ ಸದಸ್ಯರಾಗಿದ್ದಾರೆ.  ನಾಲ್ಕು ತಿಂಗಳುಗಳ ಕಾಲ ನಡೆದ ವಾದ -ವಿವಾದದ ವೇಳೆಯಲ್ಲಿ ಕೇಂದ್ರ ಸರ್ಕಾರವು ಆಧಾರ್ ನಂಬರುಗಳನ್ನು ಮೊಬೈಲ್ ಫೋನುಗಳ ಜೊತೆಗೆ ಜೋಡಿಸುವ ತನ್ನ ನಿರ್ಧಾರವನ್ನು ಪ್ರಬಲವಾಗಿ ಸಮರ್ಥಿಸಿತು. ಮೊಬೈಲ್ ಬಳಕೆದಾರರ ಪರಿಶೀಲನೆಯನ್ನು ತಾನು ಕೈಗೊಳ್ಳದೇ ಇದ್ದಿದ್ದರೆ ನ್ಯಾಯಾಲಯ ನಿಂದನೆಗಾಗಿ ಪೀಠದಿಂದ ಛೀಮಾರಿಗೆ ಒಳಗಾಗಬೇಕಾಗುತ್ತಿತ್ತು ಎಂದು ಕೇಂದ್ರ ಹೇಳಿತು. ಏನಿದ್ದರೂ,  ಸರ್ಕಾರವು ತನ್ನ ಆದೇಶವನ್ನು ತಪ್ಪರ್ಥ ಮಾಡಿಕೊಂಡಿತು ಮತ್ತು ಆಧಾರ್ನ್ನು ಮೊಬೈಲ್ ಬಳಕೆದಾರರಿಗೆ ಕಡ್ಡಾಯಗೊಳಿಸಲು ಆದೇಶವನ್ನು ಸಾಧನವನ್ನಾಗಿ ಮಾಡಿಕೊಂಡಿತು ಎಂದು ನ್ಯಾಯಾಲಯ ಹೇಳಿತು.  ಕರ್ನಾಟಕದ ಹಿಂದಿನ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾ,ಮಿ ಮತ್ತು ಇತರ ಅರ್ಜಿದಾರರ ಆಧಾರ್ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದರು. ಭಾರತದ ಸಂಚಿತ ನಿಧಿಯಿಂದ ಬರುವ ಸಬ್ಸಿಡಿಗಳ ವಿತರಣೆಯನ್ನು ಗುರಿಯಾಗಿಟ್ಟಿರುವ ಕಾರಣ ಲೋಕಸಭಾ ಸಭಾಧ್ಯಕ್ಷರು ಆಧಾರ್ ಕಾನೂನನ್ನು ವಿತ್ತ ಮಸೂದೆ ಎಂಬುದಾಗಿ ಸಮರ್ಪಕವಾಗಿಯೇ ವರ್ಣಿಸಿದ್ದಾರೆ ಎಂಬ ಸರ್ಕಾರದ ಪ್ರತಿಪಾದನೆಯನ್ನೂ ನ್ಯಾಯಾಲಯ ಒಪ್ಪಲಿಲ್ಲ.  ಸುಪ್ರೀಂಕೋರ್ಟಿನ ಇತಿಹಾಸದಲ್ಲಿಯೇ ಇದು ಎರಡನೇ ಅತಿ ದೀರ್ಘ ಮೌಖಿಕ ಆಲಿಕೆಯ ಪ್ರಕರಣ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದರು. ಕೇಶವಾನಂದ ಭಾರತಿ ಪ್ರಕರಣವು ಅತಿ ಸುದೀರ್ಘ ಕಾಲ ವಿಚಾರಣೆ ನಡೆದ ಮೊದಲ ಪ್ರಕರಣವಾಗಿದ್ದು, ನ್ಯಾಯಾಲಯವು ೬೮ ದಿನಗಳ ಕಾಲದ ಅದರ ವಿಚಾರಣೆ ನಡೆಸಿತ್ತು.

2018: ನವದೆಹಲಿ: ಸಮರಗ್ರಸ್ಥ ಆಫ್ಘಾನಿಸ್ಥಾನದ ಉತ್ತರ ಬಘ್ಲಾನ್ ಪ್ರಾಂತ್ಯದಲ್ಲಿ ಮೇ ೬ರಂದು ಅಪಹರಣಕ್ಕೆ ಈಡಾಗಿರುವ ಮಂದಿ ಭಾರತೀಯರ ಬಿಡುಗಡೆಗಾಗಿ ಸಂಬಂಧ ಪಟ್ಟ ವ್ಯಕ್ತಿಗಳು ಮತ್ತು ಆಫ್ಘಾನಿಸ್ಥಾನ ಅಧಿಕಾರಿಗಳ ಜೊತೆಗೆ ಸರ್ಕಾರವು ಸತತ ಸಂಪರ್ಕ ಇಟ್ಟುಕೊಂಡಿದೆ ಎಂದು ಸರ್ಕಾರ ತಿಳಿಸಿತು.  ನಾವು ಸಂಬಂಧಪಟ್ಟ ವಿವಿಧ ವ್ಯಕ್ತಿಗಳ ಜೊತೆಗೆ ಸಂಪರ್ಕದಲ್ಲಿದ್ದೇವೆ. ಆಫ್ಘಾನ್ ಸರ್ಕಾರದ ಮೂಲಕವೂ ಸತತ ಸಂಪರ್ಕ ಯತ್ನ ನಡೆಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು. ಏನಿದ್ದರೂ, ಪ್ರಕರಣ ತುಂಬಾ ಸೂಕ್ಷ್ಮ ಸ್ವರೂಪದ್ದಾದ ಕಾರಣ ಯಾವುದೇ ನಿರ್ದಿಷ್ಟ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ನುಡಿದರು. ’ಯಾವ ವ್ಯಕ್ತಿಗಳ ಜೊತೆಗೆ ಮತ್ತು ಯಾವ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದೇವೆ ಎಂಬ ವಿವರಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಅವರು ನುಡಿದರು. ಮೇ ೬ರಂದು ಬಘ್ಲಾನ್ನಲ್ಲಿನ ಚೆಶ್ಮಾ--ಶೇರ್ ಪ್ರದೇಶಕ್ಕೆ ಸಮೀಪದಿಂದ ತಾಲಿಬಾನ್ ಉಗ್ರಗಾಮಿಗಳು ಭಾರತೀಯರನ್ನು ಅಪಹರಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಆಫ್ಘಾನಿಸ್ಥಾನದ ವಿದೇಶಾಂಗ ವ್ಯವಹಾರಗಳ ಸಚಿವ ಸಲಾಹುದ್ದೀನ್ ರಬ್ಬಾನಿ ಅವರ ಜೊತೆಗೆ ಮೇ ೬ರ ಸಂಜೆಯೇ ದೂರವಾಣಿ ಮೂಲಕ ಮಾತನಾಡಿ ಭಾರತೀಯರ ಬಿಡುಗಡೆಗೆ ಸರ್ವನೆರವು ನೀಡುವಂತೆ ಆಫ್ಘಾನಿಸ್ಥಾನಕ್ಕೆ ಮನವಿ ಮಾಡಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೂ ಆಫ್ಘಾನಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹನೀಫ್ ಅತ್ಮಾರ್ ಜೊತೆ ದೂರವಾಣಿ ಮಾತುಕತೆ ನಡೆಸಿದ್ದರು. ‘ಇದು ಅತ್ಯಂತ ಸೂಕ್ಷ್ಮ ವಿಷಯ. ಏಳು ಮಂದಿ ಭಾರತೀಯರ ಪ್ರಾಣಕ್ಕೆ ಸಂಬಂಧ ಪಟ್ಟ ವಿಚಾರ. ಆದ್ದರಿಂದ ನಾನು ಹಂತದಲ್ಲಿ ಯಾವುದೇ ಹೆಚ್ಚಿನ ವಿಷಯವನ್ನು ಹಂಚಿಕೊಳ್ಳಬಯಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಹೇಳಿದರು. ಆಫ್ಘನ್ ಮಾಧ್ಯಮಗಳು ಬಘ್ಲಾನ್ ಗವರ್ನರ್ ಅಬ್ದುಲ್ಲ ನೇಮತಿ ಅವರನ್ನು ಉಲ್ಲೇಖಿಸಿ, ಭಾರತೀಯರ ಅಪಹರಣದ ಹಿಂದೆ ತಾಲಿಬಾನ್ ಉಗ್ರಗಾಮಿಗಳು ಕೈವಾಡ ಇದ್ದು, ಅವರನ್ನು ಪೊಲ್--ಖೊಮ್ರಿ ನಗರದ ದಂಡ್--ಶಹಾಬುದ್ದೀನ್ ಪ್ರದೇಶಕ್ಕೆ ಒಯ್ಯಲಾಗಿದೆ ಎಂದು ವರದಿ ಮಾಡಿದ್ದವು.
ಆರ್ ಪಿಜಿ ಸಮೂಹ ಕಂಪೆನಿಯ ಕೆಇಸಿ ಇಂಟರ್ ನ್ಯಾಷನಲ್ಗೆ ಸಂಬಂಧಪಟ್ಟ ಭಾರತೀಯರು ಆಫ್ಘಾನಿಸ್ಥಾನದ ವಿದ್ಯುತ್ ಸಬ್ ಸ್ಟೇಷನ್ ಒಂದರ ನಿರ್ಮಾಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು.

2018: ನವದೆಹಲಿ: ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ  ೧೭,೦೦೦ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ತೀವ್ರ ಶಂಕೆ, ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸದಂತೆ ಪಶ್ಚಿಮ ಬಂಗಾಳದ ಚುನಾವಣಾ ಆಯೋಗಕ್ಕೆ ಆಜ್ಞಾಪಿಸಿತು. ಮೇ ೧೪ರಂದು ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ನಡೆಯುವುದನ್ನು  ಸುಪ್ರೀಂಕೋರ್ಟ್ ದೃಢಪಡಿಸಿದ್ದು, ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು  ಆಯೋಗಕ್ಕೆ ನಿರ್ದೇಶನ ನೀಡಿತು. -ಮೇಲ್ ಮೂಲಕ ನಾಮಪತ್ರ ಸಲ್ಲಿಸಬಹುದೆಂಬ ಕಲ್ಕತ್ತಾ ಹೈಕೋರ್ಟಿನ ಆದೇಶಕ್ಕೆ ಕೂಡ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ರಾಜ್ಯದಲ್ಲಿನ ಪಂಚಾಯತ್ ಚುನಾವಣೆಗೆ -ಮೇಲ್ ಮೂಲಕ ಸಲ್ಲಿಕೆಯಾಗಿರುವ ನಾಮಪತ್ರಗಳನ್ನು ಸ್ವೀಕರಿಸದಂತೆ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿತು. ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದ್ದ ಏಪ್ರಿಲ್ ೨೩ರ ಮಧ್ಯಾಹ್ನ ಗಂಟೆಗೆ ಮುನ್ನ ಇಮೇಲ್ ಮೂಲಕ ಸಲ್ಲಿಕೆಯಾದ ಸಿಪಿಎಂ ಸೂಚಿತ ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸುವಂತೆ ಕಳೆದ ಮೇ ೮ರಂದು ಕಲ್ಕತ್ತ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.  ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ೧೭,೦೦೦ ಅಭ್ಯರ್ಥಿಗಳು ಜಯಿಸಿದುದನ್ನು   ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಗಂಭೀರವಾಗಿ ಪರಿಗಣಿಸಿತು. ಶೇ.೩೪ರಷ್ಟು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ನಿಜಕ್ಕೂ ಹೆದರಿಕೆ ಹುಟ್ಟಿಸುವಂತಿದೆ ಎಂದು ಪೀಠದ ಇನ್ನಿಬ್ಬರು ನ್ಯಾಯಮೂರ್ತಿಗಳಾದ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಹೇಳಿದರು.

ಇಂದು ಮಾತೆಯರ ದಿನ. ಅಮೆರಿಕನ್ ಅಂತರ್ಯುದ್ಧದ ಬಳಿಕ ಈ `ಮಾತೆಯರ ದಿನ' ಆಚರಣೆ ಬಳಕೆಗೆ ಬಂತು. ಜೂಲಿಯಾ ವಾರ್ಡ್ ಹೋವೆ ಎಂಬ ಸಮಾಜ ಸೇವಕಿ ಯುದ್ಧದ ವಿರುದ್ಧ ಮಹಿಳೆಯರನ್ನು ಒಗ್ಗೂಡಲು ಕರೆ ನೀಡುವುದರೊಂದಿಗೆ ಈ ದಿನದ ಆಚರಣೆ ಆರಂಭವಾಯಿತು. ನಂತರ ಈದಿನ ಮಾತೆಯರಿಗೆ ಧನ್ಯವಾದ ಅರ್ಪಿಸುವ ದಿನವಾಗಿ ಬದಲಾಯಿತು. ಗ್ರೀಕ್ ಇತಿಹಾಸದ ಪ್ರಕಾರ ಮಾತೆಯರನ್ನು ದೇವರೆಂದು ಪೂಜಿಸುವುದರಿಂದ ಈ ಆಚರಣೆ ಬೆಳೆದು ಬಂತು. ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರ ಮಾತೆಯರ ದಿನ ಆಚರಿಸಲಾಗುತ್ತದೆ.

2016: ಡೆಹ್ರಾಡೂನ್: : ಉತ್ತರಾಖಂಡ ವಿಧಾನಸಭೆಯಲ್ಲಿ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಂದ ವಿಶ್ವಾತ ಮತಯಾಚನೆ ಪ್ರಕ್ರಿಯೆ ಈದಿನ ಪೂರ್ಣಗೊಂಡಿದ್ದು, ವಿಶ್ವಾಸ ಮತ ಯಾಚನೆಯ ಫಲಿತಾಂಶವನ್ನು ಸುಪ್ರೀಂಕೋರ್ಟ್ ಮೇ 11ರಂದು ಅಧಿಕೃತವಾಗಿ ಪ್ರಕಟಿಸಲಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ಹೇಳಿಕೆಗಳ ಪ್ರಕಾರ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಅವರು 61 ಸದಸ್ಯ ಬಲದ ವಿಧಾನಸಭೆಯಲ್ಲಿ 34 ಮತಗಳನ್ನು ಗಳಿಸಿದ್ದಾರೆ ಎಂದು ಹೇಳಲಾಯಿತು. ಕಾಂಗ್ರೆಸ್ ಶಾಸಕ ರಾಜೀವ್ ಜೈನ್ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ರಾವತ್ ಅವರು 34 ಮತಗಳನ್ನು ಪಡೆದಿದ್ದಾರೆ ಎಂದು ಪ್ರತಿಪಾದಿಸಿದರು.  ಇದನ್ನು ದೃಢ ಪಡಿಸುವಂತೆ ವಿಶ್ವಾತಮತ ಯಾಚನೆ ಪ್ರಕ್ರಿಯೆಯ ಬಳಿಕ ಬಿಜೆಪಿ ಶಾಸಕರೊಬ್ಬರು ಬಿಜೆಪಿ ಕೇವಲ 28 ಮತಗಳಿಸಿದೆ ಎಂದು ಹೇಳಿದರು, ಬಿಜೆಪಿ ನಾಯಕ ಗಣೇಶ ಜೋಷಿ ಅವರು ಬಲಾಬಲ ಪರೀಕ್ಷೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಾಬಿಜೆಪಿಯು ಸೈದ್ಧಾಂತಿಕವಾಗಿ ವಿಜಯಗಳಿಸಿದೆ. ಆದರೆ ಸಂಖ್ಯಾ ಆಟದಲ್ಲಿ ನಾವು ಹಿಂದೆ ಬಿದ್ದಿದ್ದೇವೆಎಂದು ಹೇಳಿದರು. 12 ಗಂಟೆ ವೇಳೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫಲಿತಾಂಶವನ್ನು ಮೊಹರಾದ ಲಕೋಟೆಯಲ್ಲಿ ನಾಳೆ ಸುಪ್ರಿಂಕೋರ್ಟಿಗೆ ಸಲ್ಲಿಸಲಾಗುವುದು. ಬಳಿಕ ಸುಪ್ರೀಂಕೋರ್ಟ್ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಈದಿನ ಬಲಾಬಲ ಪರೀಕ್ಷೆಯ ಕೊನೆ ಕ್ಷಣದಲ್ಲಿ ಒಬ್ಬ ಶಾಸಕರು ಕಾಂಗ್ರೆಸ್ನತ್ತ ವಾಲಿದರೆ, ಕಾಂಗ್ರೆಸ್ ಒಬ್ಬ ಶಾಸಕಿ ಬಿಜೆಪಿಯತ್ತ ಸರಿದರು. ಬಿಎಸ್ಪಿ ನಾಯಕಿ ಮಾಯಾವತಿ ತಮ್ಮ ಪಕ್ಷದ ಇಬ್ಬರು ಸದಸ್ಯರು ಕಾಂಗ್ರೆಸ್ಗೆ ಮತ ನೀಡುವರು ಎಂದು ಘೋಷಿಸಿದ್ದರು. ವಿಶ್ವಾತ ಮತ ಯಾಚನೆ ಪ್ರಕ್ರಿಯೆ ಸಲುವಾಗಿ ಬೆಳಗ್ಗೆ 11 ಗಂಟೆಗೆ ತಾತ್ಕಾಲಿಕವಾಗಿ ಎರಡು ಗಂಟೆಗಳ ಅವಧಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ತೆರವುಗೊಳಿಸಲಾಯಿತು. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗುವುದಕ್ಕೆ ಸ್ವಲ್ಪ ಮುನ್ನ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ಶಾಸಕ ಭೀಮ್ ಲಾಲ್ ಆರ್ಯ ಅವರು ಕಾಂಗ್ರೆಸ್ ಕಡೆಗೆ ವಾಲಿದರೆ, ಕಾಂಗ್ರೆಸ್ ಸದಸ್ಯೆ ರೇಖಾ ಆರ್ಯ ಅವರು ಬಿಜೆಪಿ ಜೊತೆ ಸೇರಿಕೊಂಡುವಿಚಿಹ್ನೆ ಪ್ರದರ್ಶಿಸಿದರು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ಪಕ್ಷದ ಇಬ್ಬರು ಶಾಸಕರು ಕಾಂಗ್ರೆಸ್ಗೆ ಬೆಂಬಲ ಘೋಷಿಸಿದ ಬಳಿಕ ಬೆಳವಣಿಗೆ ನಡೆಯಿತು. ಬಿಎಸ್ಪಿ ಬೆಂಬಲ ರಾವತ್ ಅವರ ಪಾಲಿಗೆ ದೊಡ್ಡ ವರದಾನವಾಗಿ ಬಂತು

2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರ ಕುರಿತು ಆಮ್ ಆದ್ಮಿ ಪಕ್ಷ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ, ಮೋದಿ ಅವರ ಪದವಿ ಪ್ರಮಾಣ ಪತ್ರ ಅಧಿಕೃತವಾದುದು ಎಂದು ದೆಹಲಿ ವಿವಿ ರಿಜಿಸ್ಟ್ರಾರ್ ತರುಣ್ ದಾಸ್ ಸ್ಪಷ್ಟಪಡಿಸಿದರು. ಮೋದಿ ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳೂ ಇವೆ. ಆದರೆ ಅವರು ಪಾಸಾಗಿರುವ ವರ್ಷವನ್ನು ನಮೂದಿಸುವಾಗ ಮಾತ್ರ ಸ್ವಲ್ಪ ಪ್ರಮಾದವಾಗಿದ್ದು, ಮೋದಿ ಪದವಿ ಪರೀಕ್ಷೆ ಪಾಸಾದ ವರ್ಷವನ್ನು 1978 ಬದಲಾಗಿ 1979 ಎಂದು ನಮೂದಿಸಲಾಗಿದೆ. ಮೋದಿ ಅವರು ಪದವಿ ಪರೀಕ್ಷೆಯನ್ನು 1978ರಲ್ಲಿ ಪೂರ್ಣಗೊಳಿಸಿದ್ದರು, ಆದರೆ 1979ರಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗಿತ್ತು. ನರೇಂದ್ರ ದಾಮೋದರದಾಸ್ ಮೋದಿ ಅವರು ಬಿಎ ಪದವಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ದಾಖಲಾತಿ ಸಂಖ್ಯೆ ಸಿಸಿ 594/94 ಮತ್ತು ಅವರ ಪರೀಕ್ಷಾ ದಾಖಲಾತಿ ಸಂಖ್ಯೆ 16594 ಎಂದು ರಿಜಿಸ್ಟ್ರಾರ್ ಸಮರ್ಥನೆ ನೀಡಿದರು.

2016: ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ನಡೆಸಿದ್ದ 2015 ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು , ದೆಹಲಿ ಮೂಲದ ದೆಹಲಿ ಮೂಲದ 22 ಹರೆಯದ ಟೀನಾ ದಬಿ ಪ್ರಥಮ ಸ್ಥಾನ ಪಡೆದರು. ಜಮ್ಮು ಮತ್ತು ಕಾಶ್ಮೀರದ ಅಖ್ತರ್ ಆಮೀರ್ ಉಲ್ ಶಫಿ ಖಾನ್ 2ನೇ ಸ್ಥಾನ ಮತ್ತು , ಜಸ್ಮೀತ್ ಸಿಂಗ್ ಸಂಧು 3 ನೇ ಸ್ಥಾನ ಪಡೆದಿದರು. ಕನ್ನಡಿಗ ದರ್ಶನ್ ಎಚ್.ವಿ. 48ನೇ ಸ್ಥಾನ ಮತ್ತು ಶ್ರೀನಿವಾಸ ಗೌಡ ಆರ್ ಅವರು 105 ನೇ ಸ್ಥಾನ ಪಡೆದರು. ಕರ್ನಾಟಕದ ಒಟ್ಟು 30 ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, ಮಂಜುನಾಥ ಎಸ್. ಎಸ್.566ನೇ ಸ್ಥಾನ , ಸಂತೋಷ್ ಕುಮಾರ್ 692ನೇ ಸ್ಥಾನ, ಪ್ರಮೋದ್ ನಾಯಕ್ 779ನೇ ಸ್ಥಾನ , ಆನಂದ್ ರಾಜ್ 660ನೇ ಸ್ಥಾನ, ಆಕಾಶ್ ಎಸ್. 959ನೇ ಸ್ಥಾನ, ಯತೀಶ್ ಎನ್. 453ನೇ ಸ್ಥಾನ, ಬಿ.ಜಿ. ಗಗನ್ 665ನೇ ಸ್ಥಾನ, ಎಚ್. ಹನುಮಂತರಾಜು 898ನೇ ಸ್ಥಾನ ಗಳಿಸಿದರು.
2016: ಮುಂಬೈ: ಐಸಿಸಿ ಅಧ್ಯಕ್ಷರಾಗಿರುವವರು 2 ಸ್ಥಾನಗಳಲ್ಲಿ ಮುಂದುವರೆಯಬಾರದು ಎಂದು ಐಸಿಸಿ ಕಾರ್ಯ ನಿರ್ವಾಹಕ ಮಂಡಳಿ ನಿರ್ಣಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜೀನಾಮೆ ನೀಡಿದರು. ಶಶಾಂಕ್ ಮನೋಹರ್ 2015 ಅಕ್ಟೋಬರ್ನಲ್ಲಿ ಜಗಮೋಹನ್ ದಾಲ್ಮಿಯಾ ಅವರ ನಿಧನಾ ನಂತರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದರು. ಮೊದಲು 2008 ಸೆಪ್ಟೆಂಬರ್ನಿಂದ 2011 ಸೆಪ್ಟೆಂಬರ್ವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರುಶಶಾಂಕ್ 2015 ನವೆಂಬರ್ನಿಂದ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಶಾಂಕ್ ಮನೋಹರ್ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ಗೆ ರಾಜೀನಾಮೆ ಪತ್ರ ರವಾನಿಸಿದರು.

2016: ಬೆಂಗಳೂರು: ಉಜ್ಜೈನಿ, ಪಟನಾ, ಗುವಾಹಟಿ, ಅಲಹಾಬಾದ್ ಮತ್ತು ಜೈಪುರ ಸೇರಿದಂತೆ ಒಟ್ಟು ಐದು ರೈಲ್ವೆ ನಿಲ್ದಾಣಗಳಿಗೆ ಶೀಘ್ರವೇ ಉಚಿತ ಹೈಸ್ಪೀಡ್ ಪೈಫೈ ಸೇವೆ ಕಲ್ಪಿಸುವುದಾಗಿ ಗೂಗಲ್ ಸಂಸ್ಥೆ ತಿಳಿಸಿತು.. ರೈಲ್ವೆ ಸಚಿವ ಸುರೇಶ್ ಪ್ರಭು ಶೀಘ್ರವೇ ಸೇವೆಯನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿತು. ಈ ಐದು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಒದಗಿಸುವ ಮೂಲಕ ಒಟ್ಟು ಯೋಜನೆಯಡಿ, 15 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಲಭ್ಯವಾಗಲಿದೆ. ಇದು ವರ್ಷಾಂತ್ಯದಲ್ಲಿ ಭಾರತದ 100 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ಹೈಸ್ಪೀಡ್ ವೈಫೈ ಸೇವೆ ಒದಗಿಸುವ ಗೂಗಲ್ ಸಂಸ್ಥೆಯ ಯೋಜನೆಯ ಭಾಗವಾಗಿದೆ. ಈಗಾಗಲೇ ಮುಂಬೈ ಸೆಂಟ್ರಲ್, ಪುಣೆ, ಭುವನೇಶ್ವರ, ಭೋಪಾಲ್, ರಾಯ್ಪುರ, ರಾಂಚಿ, ಕಾಚಿಗುಡ, ವಿಜಯವಾಡ ಮತ್ತು ಎರ್ನಾಕುಳಂ ಜಂಕ್ಷನ್ ರೈಲ್ವೆ ನಿಲ್ದಾಣಗಳಲ್ಲಿ ಸೇವೆ ಲಭ್ಯವಿದೆ.

2016: ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ನೀಟ್) ಇಂಗ್ಲಿಷ್ ಮತ್ತು ಹಿಂದಿಯ ಜೊತೆಗೆ ತಮಿಳು, ತೆಲುಗು, ಮರಾಠಿ, ಅಸ್ಸಾಮೀ, ಬಂಗಾಳಿ ಮತ್ತು ಗುಜರಾತಿ ಆರು ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ರ್ಟಿಗೆ ಮನವಿ ಮಾಡಿತು. ನ್ಯಾಯಮೂರ್ತಿ ಅನಿಲ್ ಆರ್. ದವೆ ಮತ್ತು ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು, ಕೇಂದ್ರದ ಮನವಿ ವಿಚಾರವಾಗಿ ನ್ಯಾಯಮೂರ್ತಿ ಶಿವಕೀರ್ತಿ ಸಿಂಗ್ ಮತ್ತು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರಿಂದ ಸ್ಪಷ್ಟನೆ ಪಡೆಯುವುದಾಗಿ ಹೇಳಿತು. ನೀಟ್ ಎರಡನೇ ಹಂತದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಹೊರತಾಗಿ 6 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಸಾಧ್ಯವೇ ಎಂದು ಅವರ ಸಮಾಲೋಚನೆ ಮಾಡುವುದಾಗಿ ಪೀಠ ಹೇಳಿತು.

2016: ಇಸ್ಲಾಮಾಬಾದ್: ತಾಲಿಬಾನ್ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರ ಮಗನನ್ನು ಮೂರು ವರ್ಷಗಳ ನಂತರ ಆಫ್ಘಾನಿಸ್ತಾನದಲ್ಲಿ ರಕ್ಷಿಸಲಾಯಿತು. ಅಮೆರಿಕ ಮತ್ತು ಆಫ್ಘನ್ ಸೇನಾ ಪಡೆಗಳು ಜಂಟಿಯಾಗಿ  ನಡೆಸಿದ ಕಾರ್ಯಾಚರಣೆಯಲ್ಲಿ ರಜಾ ಗಿಲಾನಿ ಅವರ ಮಗ ಆಲಿ ಹೈದರ್ ಗಿಲಾನಿಯನ್ನು ತಾಲಿಬಾನ್ ಉಗ್ರರಿಂದ ರಕ್ಷಿಸಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿತು.  ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿದ ನಂತರ ಹೈದರ್ನನ್ನು ಪಾಕಿಸ್ತಾನಕ್ಕೆ ಕರೆ ತರಲಾಗುವುದು ಎಂದು ಸಚಿವಾಲಯ ಹೇಳಿತು. ಆಲಿ ಹೈದರ್ನನ್ನು ಮೇ 9, 2013ರಲ್ಲಿ ಮುಲ್ತಾನ್ನಿಂದ ಅಪಹರಿಸಲಾಗಿತ್ತು. ಸಂದರ್ಭ ಹೈದರ್ ಜತೆಗಿದ್ದ ಇಬ್ಬರನ್ನು ಉಗ್ರರು ಕೊಂದಿದ್ದರು. ಆಲಿ ಹೈದರ್ ರಕ್ಷಣೆಗೆ 2 ತಿಂಗಳು ಮೊದಲು 5 ವರ್ಷಗಳ ಹಿಂದೆ ಉಗ್ರರಿಂದ ಅಪಹರಣಗೊಂಡಿದ್ದ ಪಂಜಾಬ್ ಗವರ್ನರ್ ಸಲ್ಮಾನ್ ತಸೀರ್ ಅವರ ಮಗನನ್ನು ಬಲೂಚಿಸ್ತಾನದ ಕುಚ್ಲಾಕ್ ಪ್ರದೇಶದಲ್ಲಿ ರಕ್ಷಿಸಲಾಗಿತ್ತು. ಸಲ್ಮಾನ್ ತಸೀರ್ನನ್ನು ಆಗಸ್ಟ್ 26, 2011ರಲ್ಲಿ ಗುಲ್ಬರ್ಗ್ ಪ್ರದೇಶದಲ್ಲಿ ಉಗ್ರರು ಅಪಹರಿಸಿದ್ದರು.

2016: ಪಟನಾ: ಬಿಹಾರಿನ ಗಯಾ ಜಿಲ್ಲೆಯಲ್ಲಿ ಈದಿನ ಬೆಳಗ್ಗೆ ಬಂಧಿತನಾದ  ಜೆಡಿ(ಯು) ಶಾಸಕಿಯ ಪುತ್ರ ರಾಕಿ ಯಾದವ್ ಹದಿ ಹರೆಯದ ಬಾಲಕ ಆದಿತ್ಯ ಸಚದೇವ ಕೊಲೆಯಲ್ಲಿ ಷಾಮೀಲಾಗಿದ್ದುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು. ಅಪರಾಧ ಎಸಗಿರುವುದನ್ನು ತನ್ನ ಹೇಳಿಕೆಯಲ್ಲಿ ರಾಕಿ ಯಾದವ್ ಒಪ್ಪಿಕೊಂಡಿದ್ದು, ಅಪರಾಧ ಕೃತ್ಯದಲ್ಲಿ ಷಾಮೀಲಾದ ಇತರರನ್ನೂ ಶೀಘ್ರವೇ ಬಂಧಿಸುವುದಾಗಿ ಗಯಾ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಗರೀಮಾ ಮಲಿಕ್ ಹೇಳಿದರು. ಆದಿತ್ಯ ಸಚದೇವ ಕೊಲೆಗೆ ಬಳಸಿದ ಪಿಸ್ತೂಲನ್ನೂ ವಶ ಪಡಿಸಿಕೊಳ್ಳಲಾಗಿದೆ. ಪಿಸ್ತೂಲಿಗೆ ದೆಹಲಿಯಲ್ಲಿಯೇ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿತ್ತು ಎಂದು ಮಲಿಕ್ ನುಡಿದರು.ಇದಕ್ಕೆ ಮುನ್ನ 30 ಹರೆಯದ ರಾಕಿಯನ್ನು ಬೋಧ್ ಗಯಾದ ಮನೆಯೊಂದರಲ್ಲಿ ಬಂಧಿಸಲಾಗಿತ್ತು19 ವರ್ಷದ ಯುವಕ ತಮ್ಮ ಕಾರನ್ನು ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ ಆತನನ್ನು ಗುಂಡಿಟ್ಟು ಕೊಂದ ಆರೋಪದ ಮೇಲೆ ರಾಕಿ ಯಾದವ್ನನ್ನು ಪೊಲೀಸರು ಬಂಧಿಸಿದ್ದರು. ಈ ಕುರಿತು ಗಯಾ ಪೊಲೀಸ್ ವರಿಷ್ಠಾಧಿಕಾರಿ ಗರಿಮಾ ಮಲಿಕ್ ಪ್ರತಿಕ್ರಿಯಿಸಿ, ಪ್ರಕರಣದ ವಿಚಾರವಾಗಿ ಸಂಬಂಧಪಟ್ಟ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಆರೋಪಿಯನ್ನು ಬಂಧಿಸಿದ್ದೇವೆ ಎಂದು ತಿಳಿಸಿದರು. ಹಿಂದಿನ ದಿನ ಪೊಲೀಸರು ರಾಕಿ ತಾಯಿ ಮನೋರಮಾ ದೇವಿಯನ್ನು ವಿಚಾರಣೆ ನಡೆಸಿ, ರಾಕಿ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಇದರ ಆಧಾರದ ಮೇಲೆ ಶೋಧ ಕಾರ್ಯ ನಡೆಸಿ, ಬೋಧ ಗಯಾದ ಕಾರ್ಖಾನೆಯೊಂದರಲ್ಲಿ ಬಂಧಿಸಿದ್ದರು. ಈ ಪ್ರಕರಣದಲ್ಲಿ ತಂದೆ ಬಿಂದಿಯಾದವ್ ಪುತ್ರನಿಗೆ ಕುಮ್ಮಕ್ಕು ನಿಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು  ಬಂಧಿಸಿದ್ದರು. ಪೊಲೀಸರ ಮೆಲೆ ರಾಜಕೀಯ ಒತ್ತಡ ತರಲಾಗಿದ್ದು, ಆರೋಪಿಯನ್ನು ರಕ್ಷಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿ, ಗಯಾ ನಗರಾದ್ಯಂತ ಸಂಪೂರ್ಣ ಬಂದ್ಗೆ ಕರೆ ನೀಡಿತ್ತು. ವ್ಯಾಪಾರಿಯೊಬ್ಬರ ಪುತ್ರ ಆದಿತ್ಯ ಸಚ್ ದೇವ ಹಾಗೂ ಸ್ನೆಹಿತರನ್ನು ಒಳಗೊಂಡ ಸ್ವಿಪ್ಟ್ ಕಾರು ಸಚಿವರ ಪುತ್ರ ರಾಕಿಯ ಎಸ್ಯುುುವಿ ಕಾರನ್ನು ಓವರ್ ಟೇಕ್ ಮಾಡಿದ ಹಿನ್ನಲೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಆವೇಶಕ್ಕೆ ಒಳಗಾದ ರಾಕಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಆದಿತ್ಯಾಗೆ ಗುಂಡಿಟ್ಟು ಕೊಲೆಗೈದಿದ್ದ.

2016: ನವದೆಹಲಿ: ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡು ದಿನಗಳ ದಕ್ಷಿಣರಾಜ್ಯಗಳ ಪ್ರವಾಸವನ್ನು ಕೈ ಬಿಡಲಾಗಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದರು. ಆದರೆ ಜೀವ ಬೆದರಿಕೆ ಬಂದ ಮರುದಿನವೇ ರೀತಿ ತೀವ್ರ ಜ್ವರ ಕಾಣಿಸಿಕೊಂಡಿದ್ದು ಹಲವು ಊಹೆಗಳಿಗೆ ಎಡೆಮಾಡಿ ಕೊಟ್ಟಿತು. ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ದಕ್ಷಿಣ ರಾಜ್ಯಗಳಾದ ಪುದುಚೇರಿ, ತಮಿಳುನಾಡು ಹಾಗೂ ಕೇರಳಕ್ಕೆ ಭೇಟಿ ನೀಡಬೇಕಿತ್ತು. ಆದರೆ ನಿಗದಿತ ಕಾರ್ಯಕ್ರಮವನ್ನು ಕೈ ಬಿಟ್ಟ ರಾಹುಲ್ ಗಾಂಧಿ, ಟ್ವೀಟ್ ಮಾಡಿ ಜನತೆ ಬಳಿ ಕ್ಷಮೆಯಾಚಿಸಿದರು.
ರಾಹುಲ್ಗೆ ಜೀವ ಬೆದರಿಕೆಯ ಬೇನಾಮಿ ಪತ್ರ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಗೃಹ ಸಚಿವ ರಾಜನಾಥ್ ಸಿಂಗ್ರನ್ನು ಭೇಟಿ ಮಾಡಿ ಹೆಚ್ಚಿನ ಭದ್ರತೆ ನೀಡುವಂತೆ ಮನವಿ ಮಾಡಿದ್ದರು. ಸಕಾರಾತ್ಮಕವಾಗಿ ಸ್ಪಂದಿಸಿದ ಗೃಹ ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಗುಪ್ತದಳ ಮತ್ತು ಭದ್ರತಾ ಸಂಸ್ಥೆಗೆ ಸೂಚಿಸಿದ್ದರು. ಇದರ ಜತೆಗೆ ವಿಶೇಷ ರಕ್ಷಣಾ ಪಡೆಯ ಹೆಚ್ಚಿನ ಕಮಾಂಡೊ ಭದ್ರತೆ ನೀಡಲು ಸೂಚಿಸಿದ್ದರು.
2016: ನವದೆಹಲಿ: ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದ್ದ ಪನಾಮ ಪತ್ರಗಳ ಸಂಪೂರ್ಣ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ(ಐಸಿಐಜೆ) ಪ್ರಕಟಿಸಿತು. ಭಾರತಕ್ಕೆ ಸಂಬಂಧಿಸಿದ ಸಾವಿರಾರು ದಾಖಲೆಗಳು ಇದರಲ್ಲಿ ಬಯಲಾದವು. ಕಡಲಾಚೆಗಿನ ಸುಮಾರು 2,000 ವ್ಯವಹಾರಗಳ ನಂಟು, ಸ್ವತಂತ್ರ ಕಂಪನಿಗಳ ಮಾಹಿತಿ ಹಾಗೂ ಪ್ರಮುಖ ವಿಳಾಸ ಇದರಲ್ಲಿ ಬಹಿರಂಗಗೊಂಡಿತ್ತು. ಒಟ್ಟಾರೆ 22 ಕಡಲಾಚೆಗಿನ ಸ್ವತಂತ್ರ ಭಾರತೀಯ ಕಂಪನಿಗಳು, 1,046 ವೈಯಕ್ತಿಕ ವ್ಯವಹಾರಗಳ ನಂಟು, 42 ಮಧ್ಯವರ್ತಿಗಳ ವ್ಯವಹಾರಗಳು ಸೇರಿದಂತೆ ಸುಮಾರು 828 ವಿಳಾಸಗಳು ಐಸಿಐಜೆ ವರದಿಯಲ್ಲಿ ಸೇರಿವೆ. ಭಾರತದ ದೆಹಲಿ, ಮುಂಬೈ, ಕೋಲ್ಕತ ಮತ್ತು ಚೆನ್ನೈಯಂತಹ ಮೆಟ್ರೋ ಪಾಲಿಟನ್ ನಗರಗಳಿಂದ ಹರಿಯಾಣದ ಸಿರ್ಸಾ, ಬಿಹಾರದ ಮುಜಾಫರಪುರ ಮತ್ತು ಮಧ್ಯಪ್ರದೇಶದ ಮಾಂಡಸೌರ್ ಮತ್ತು ಭೋಪಾಲ್ವರೆಗೆ ಕಡಲಾಚೆಗಿನ ವ್ಯವಹಾರಗಳ ನಂಟು ವಿಸ್ತರಿಸಿರುವುದಾಗಿ ಸಿಐಸಿಜೆ ವರದಿ ತಿಳಿಸಿತು. ನೆವಾಡದಿಂದ ಹಾಂಗ್ಕಾಂಗ್, ಬ್ರಿಟಿಷ್ ವರ್ಜಿನ್ ಐಲೆಂಡ್ಗಳ 21 ಆಡಳಿತ ವ್ಯಾಪ್ತಿಯಲ್ಲಿ ವಿಶ್ವಾದ್ಯಂತ ಸುಮಾರು 214,000 ಮಂದಿ ಖಾತೆ ಹೊಂದಿರುವುದಾಗಿ ಐಸಿಎಐಜೆ ವರದಿ ತಿಳಿಸಿತು.  ಕಳೆದ ತಿಂಗಳು ನಡೆದ ಪನಾಮ ಪತ್ರಗಳ ಸೋರಿಕೆಯಲ್ಲಿ ಭಾರತದ 500 ಹೆಸರುಗಳು ಕೇಳಿಬಂದಿದ್ದವು. ತನಿಖೆಗೆ ಭಾರತ ಎಂಎಜಿಯನ್ನು ನೇಮಿಸಿತ್ತು. ‘ಯಾವುದೇ ಕಂಪೆನಿ ಅಥವಾ ವ್ಯಕ್ತಿಗಳು ಅಕ್ರಮಗಳನ್ನು ಎಸಗಿದ್ದಾರೆ ಅಥವಾ ಯಾವುದಾದರೂ ರೀತಿಯ ತಪ್ಪೆಸಗಿದ್ದಾರೆ ಎಂದೇನೂ ನಾವು ಹೇಳುವುದಿಲ್ಲ. ಶಾಸನಬದ್ಧವಾಗಿ ಕಡಲಾಚೆ ಕಂಪನಿ ನಡೆಸುವ ಅವಕಾಶಗಳನ್ನು ಬಳಸಿಕೊಂಡವರೂ ಇರಬಹುದುಎಂದು ಐಸಿಐಜೆ ಹೇಳಿತು..

2016: ನವದೆಹಲಿ: 70 ಹರೆಯದ ದಲ್ಜಿಂದರ್ ಕೌರ್ ಎಂಬ ಮಹಿಳೆಗೆ ಗಂಡುಮಗು ಜನಿಸಿದ್ದು, ಮಗು ಹಾಗೂ ತಾಯಿ ಆರೋಗ್ಯದಿಂದ್ದಾರೆ.  ಕೌರ್ ಅವರಿಗೆ ಕಳೆದ ಎಪ್ರಿಲ್ 19ರಂದು ಮಗುವಾಗಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿತು. ಇಳಿ ವಯಸ್ಸಿನಲ್ಲಿ ಕೂಡ ಮಗು ಹೊಂದಬೇಕೆಂಬ ಮಹಿಳೆಯ ಬಯಕೆಗೆ ಆಸರೆಯಾದದ್ದು ಪ್ರನಾಳಿಯ ಫಲೀಕರಣ (ಐವಿಎಫ್ ಟೆಸ್ಟ್ ಟ್ಯೂಬ್) ತಂತ್ರಜ್ಞಾನ. ಅಂಡಾಣು ಹಾಗೂ ವೀರ್ಯದ ಮೂಲಕ ಕೃತಕ ಗರ್ಭದಾರಣೆಗಾಗಿ ವೈದ್ಯರು 2013ರಲ್ಲಿ ಐವಿಎಫ್ ತಂತ್ರಜ್ಞಾನ ಪ್ರಯೋಗಿಸಿದರು. ಆದರೆ ಪ್ರಯತ್ನ ಫಲ ನೀಡಲಿಲ್ಲ. ಎರಡನೇ ಸಲ ಕೂಡ ವಿಫಲವಾದಾಗ ಕೌರ್ ಹಾಗೂ 79 ಪತಿ ಮೋಹಿಂದರ್ ಸಿಂಗ್ ನಿರಾಶರಾಗಿದ್ದರು. ಆದರೆ ಮೂರನೇ ಬಾರಿಯ ಫಲಿತಾಂಶ ಕೌರ್ ಮೊಗದಲ್ಲಿ ಎಲ್ಲಿಲ್ಲದ ಸಂತಸ ಮೂಡಿಸಿತು. ಮಗುವಿಗಾಗಿ ಹಂಬಲಿಸುತ್ತಿದ್ದ ದಲ್ಜಿಂದರ್ ಕೌರ್ ಅವರಿಗೆ 2013ರಲ್ಲಿ ಮೋಹಿಂದರ್ ಸಿಂಗ್ ಗಿಲ್ಲ ಹರಿಯಾಣಾದಲ್ಲಿ ಐವಿಎಫ್ ಟೆಸ್ಟ್ ಟ್ಯೂಬ್ ಚಿಕಿತ್ಸೆಯನ್ನು ಕೊಡಿಸಿದರು. ಮೊದಲೆರಡು ಚಿಕಿತೆ ವಿಫಲವಾಗಿದ್ದರಿಂದ ಮೋಹಿಂದರ್ ವೈದ್ಯರ ಮೇಲೆ ಕೂಡ ಮುಗಿಬಿದ್ದಿದ್ದರು. ಆದರೆ ಇದೀಗ ತಂದೆಯಾಗಿರುವುದಕ್ಕೆ ವೈದ್ಯರಿಗೆ ಧನ್ಯವಾದ ಹೇಳಿದರು. ಈ ಚಿಕಿತ್ಸೆ ಕುರಿತು ಪ್ರತಿಕ್ರಿಯಿಸಿದ ವೈದ್ಯರಾದ ಅನುರಾಗ್ ಬಿಷ್ಣೋಯಿ, ರೀತಿಯ ಚಿಕಿತೆಯನ್ನು ಹಿಂದೆ ಸಹ ನೀಡಿ ಯಶಸ್ವಿಯಾಗಿದ್ದೆವು. ಎಲ್ಲಾ ಮಕ್ಕಳಂತೆ ಮಗು ಕೂಡಾ ಬೆಳವಣಿಗೆ ಹೊಂದಲಿದೆ. 2006ರಲ್ಲಿ 70 ಹರೆಯದ ರಾಜೋ ದೇವಿ ಅವರಿಗೆ ಐವಿಎಫ್ ಚಿಕಿತ್ಸೆಯಿಂದಾಗಿ ಹೆಣ್ಣು ಮಗು ಜನಿಸಿತ್ತು. 2008ರಲ್ಲಿ ಮಹಿಳೆಯೊಬ್ಬರು ಚಿಕಿತ್ಸೆಯಿಂದ ಎರಡು ಗಂಡು ಹಾಗೂ ಒಂದು ಹೆಣ್ಣುಮಗು ಸೇರಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಳು ಎಂದು ತಿಳಿಸಿದರು.ಮದುವೆಯಾದ 46 ವರ್ಷ ಬಳಿಕ ಹಾಗೂ ಋತುಸ್ರಾವ ನಿಂತ 20 ವರ್ಷಗಳ ಬಳಿಕ ಮಗುವಿಗೆ ಜನ್ಮ ನೀಡಿದ ಕೀರ್ತಿಗೆ ಕೂಡಾ ದಲ್ಜಿಂದರ್ ಕೌರ್ ಭಾಜನರಾದರು.

2016: ನವದೆಹಲಿ: ವಿಮಾನದಲ್ಲಿ ಸಿಬ್ಬಂದಿ ಧೂಮಪಾನ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ರಾಷ್ಟ್ರ ರಾಜಧಾನಿಯಿಂದ ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮಾರ್ಗ ಮಧ್ಯೆ, ಅಂದರೆ ಭೋಪಾಲ್ನಲ್ಲಿ ಭೂ ಸ್ಪರ್ಶ ಮಾಡಿತು. ಈ ಕುರಿತು ಸ್ಪಷ್ಟನೆ ನೀಡಿದ ಏರ್ ಇಂಡಿಯಾ ವಿಮಾನದಲ್ಲಿ ತುರ್ತು ಗಂಟೆ ಬಾರಿಸಿದ ಪರಿಣಾಮ ನಿರ್ಣಯಕ್ಕೆ ಬರಲಾಯಿತು. ವಿಮಾನದಲ್ಲಿ 100 ಜನ ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. ಆದರೆ ಇದು ಹುಸಿ ಗಂಟೆ ಎಂದು ಬಳಿಕ ತಿಳಿದು ಬಂತು. ಈ ರೀತಿ ಗಂಟೆ ಬಡಿತಕ್ಕೆ ವಿಮಾನ ನೆಲವೂರಿದ್ದು ಇದೇ ಮೊದಲಲ್ಲ. ಐದು ವರ್ಷದ ಹಿಂದೆ ನ್ಯೂಯಾರ್ಕ್ಗೆ ತೆರಳುತ್ತಿದ್ದಾಗ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಏರ್ ಇಂಡಿಯಾ ವಿಮಾನ ಮಾರ್ಗ ಮಧ್ಯದಲ್ಲಿಯೇ ಕೆಳಗಿಳಿದಿತ್ತು.

 2009: ಟ್ಯಾಬ್ಲಾಯ್ಡ್ ಗಳ ಅಚ್ಚುಮೆಚ್ಚಿನ ರೂಪದರ್ಶಿ ಲಿಂಡ್ಸೆ ಲೋಹನ್ ಛಾಯಾಗ್ರಾಹಕರನ್ನು ತನ್ನಿಂದ ದೂರವಿಡಲು ಹೊಸ ಉಪಾಯ ಕಂಡು ಹಿಡಿದರು. ಕ್ಯಾಲಿಫೋರ್ನಿಯಾದಲ್ಲಿನ ಮನೆಯ ಹೊರಗಡೆ ತಮ್ಮನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯಲು ಬಂದ ಛಾಯಾಗ್ರಾಹಕರ ಮೇಲೆ ಹಸಿ ಮೊಟ್ಟೆ ಹಾಗೂ ಪಿಜ್ಜಾಗಳನ್ನು ಎಸೆದು ಸುದ್ದಿ ಮಾಡಿದರು. ಈ ತಿಂಗಳಲ್ಲಿ ಲೋಹನ್ ಛಾಯಾಗ್ರಾಹಕರ ಮೇಲೆ ಮಾಡುತ್ತಿರುವ ಇಂತಹ ಎರಡನೇ ದಾಳಿ ಇದು ಎಂದು ಕಾಂಟಾಕ್ಟ್‌ ಮ್ಯೂಸಿಕ್ ವರದಿ ಮಾಡಿತು.

2009: ಉದ್ಯೋಗಿಯೊಬ್ಬ ತನ್ನ ಸೇವಾ ಅವಧಿಯಲ್ಲಿ ನಿಯಮ ಉಲ್ಲಂಘಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದರೆ, ನಿವೃತ್ತಿ ನಂತರವೂ ಆತನ ವಿರುದ್ಧ ಇಲಾಖಾ ತನಿಖೆ ನಡೆಸಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿತು. ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಹಾಗೂ ಎಚ್.ಎಲ್. ದತ್ತು ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿತು. ಯಾವುದೇ ಸರ್ಕಾರಿ ನೌಕರ ತನ್ನ ಸೇವಾ ಅವಧಿಯಲ್ಲಿ ಲೋಪವೆಸಗಿದ್ದರೆ, 1971ರ ಸೇವಾ ನಿಯಮ 10(1)ರ ಅನುಸಾರ ಆತನ ನಿವೃತ್ತಿ ನಂತರವೂ ತನಿಖೆ ಮುಂದುವರೆಸಬಹುದು ಎಂದು ಅಭಿಪ್ರಾಯಪಟ್ಟಿತು.

2008: ತಮಿಳುನಾಡಿನ ರಾಮನಾಥ ಪುರಂ ಜಿಲ್ಲೆಯ 21 ವರ್ಷದ ಯುವಕ ವೇಲಿಪಟ್ಟಿಣಂ ನಿವಾಸಿ ವಿ. ಶಂಕರನಾರಾಯಣನ್ ಒಂದೇ ಉಸಿರಿಗೆ 151 ಮೇಣದ ಬತ್ತಿಗಳ (ಕ್ಯಾಂಡಲ್) ಜ್ವಾಲೆಯನ್ನು ಆರಿಸಿ ವಿಶ್ವದಾಖಲೆ ನಿರ್ಮಿಸಿದ್ದು ಗಿನ್ನೆಸ್ ದಾಖಲೆಗೆ ಸೇರಿತು. ಕಳೆದ ಜನವರಿ ತಿಂಗಳಲ್ಲಿ ಈ ಸಾಧನೆ ಮಾಡಿದ್ದ ವಿ. ಶಂಕರನಾರಾಯಣನ್ ಅವರಿಗೆ ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದ ಅಧಿಕಾರಿಗಳಿಂದ ಬಂದ ಈ ಸಂಬಂಧಿ ಪ್ರಮಾಣಪತ್ರ ವನ್ನು ಜಿಲ್ಲಾಧಿಕಾರಿ ಎ. ಕಿಶೋರಕುಮಾರ್ ಅವರು ನೀಡಿದರು. ಫ್ರಾನ್ಸಿನ ಡೇವಿಡ್ ಲಾಮೆ ಅವರು 2001ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಶಂಕರನಾರಾಯಣನ್ ಮುರಿದಿದ್ದಾರೆ. ಡೇವಿಡ್ ಲಾಮೆ ಅವರು ಒಂದೇ ಉಸಿರಿಗೆ 117 ಕ್ಯಾಂಡಲ್ಲುಗಳ ಜ್ವಾಲೆಯನ್ನು ಆರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಉಸಿರು ನಿಯಂತ್ರಣದಲ್ಲಿ ತಜ್ಞರೆನಿಸಿಕೊಂಡಿರುವ ಶಂಕರನಾರಾಯಣನ್ ಅವರು ಈ ಕಲೆಯನ್ನು ತಮ್ಮ ಯೋಗ ಗುರುವಿನಿಂದ ಕಲಿತರು.

2008: ಚಂಡಮಾರುತದ ಪರಿಣಾಮವಾಗಿ ಸಹಸ್ರಾರು ಮಂದಿ ಅಸುನೀಗಿ, ಇತರರು ಸಂಕಟದಲ್ಲಿ ನರಳುತ್ತಿರುವಾಗಲೇ, ನೂತನ ಸಂವಿಧಾನಕ್ಕೆ ಅಂಗೀಕಾರ ನೀಡುವ ಸಲುವಾಗಿ ಮ್ಯಾನ್ಮಾರಿನ ಸೇನಾ ಸರ್ಕಾರವು ಸಂತ್ರಸ್ಥ ಪ್ರದೇಶಗಳಲ್ಲಿ ಮತಗಟ್ಟೆಗಳನ್ನು ತೆರೆಯಿತು. `ನರ್ಗಿಸ್' ಚಂಡಮಾರುತದಿಂದ ತೀವ್ರ ತೊಂದರೆಗೊಳಗಾದ ಪ್ರಮುಖ ನಗರ ಹಾಗೂ ಹಿಂದಿನ ರಾಜಧಾನಿ ಯಾಂಗೂನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೇನಾ ಸರ್ಕಾರವು ಮತದಾನವನ್ನು ಎರಡು ವಾರಗಳ ಮಟ್ಟಿಗೆ ಮಾತ್ರ ವಿಳಂಬಿಸಿತು. 1990ರಲ್ಲಿ ಸೇನಾ ಆಡಳಿತವು ಮೊತ್ತ ಮೊದಲ ಮತದಾನ ನಡೆಸಿತ್ತು. ಆ ಚುನಾವಣೆಯಲ್ಲಿ ವಿರೋಧಿ ನಾಯಕಿ ಆಂಗ್ ಸಾನ್ ಸೂ ಕೀ ಅವರ ನೇತೃತ್ವದ ನ್ಯಾಷನಲ್ ಲೀಗ್ ಟು ಡೆಮಾಕ್ರಸಿ (ಎನ್ ಎಲ್ ಡಿ) ಭಾರಿ ವಿಜಯ ಸಾಧಿಸಿತ್ತು. ಆದರೆ ಆ ಫಲಿತಾಂಶವನ್ನು ಸೇನಾ ಆಡಳಿತ ಎಂದೂ ಮಾನ್ಯ ಮಾಡಲೇ ಇಲ್ಲ. ಆ ಬಳಿಕ ಇದೇ ಮೊದಲ ಬಾರಿಗೆ ಜನಮತಗಣನೆಗೆ ವ್ಯವಸ್ಥೆಯಾಯಿತು.

2008: ಶಂಕಿತ ಉಗ್ರರ ವಿಚಾರಣೆ ನಡೆದ ಹುಬ್ಬಳ್ಳಿ ನಗರದ ನ್ಯಾಯಾಲಯದ ಸಭಾಂಗಣದೊಳಗೆ ಈದಿನ ಮಧ್ಯಾಹ್ನ ಶಕ್ತಿಶಾಲಿ ಬಾಂಬ್ ಸ್ಫೋಟಿಸಿತು. ಆದರೆ ಎರಡನೇ ಶನಿವಾರದ ರಜೆ ಇದ್ದ ಕಾರಣ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ನ್ಯಾಯಾಲಯ ಸಂಕೀರ್ಣದ ನೆಲಮಹಡಿಯಲ್ಲಿನ ಒಂದನೇ ಜೆ ಎಂ ಎಫ್ ಸಿ ನ್ಯಾಯಾಲಯದ ಸಭಾಂಗಣದಲ್ಲಿ ಮಧ್ಯಾಹ್ನ 1.25ರ ಸುಮಾರಿಗೆ ಈ ಸ್ಫೋಟ ಸಂಭವಿಸಿತು. ಭಯೋತ್ಪಾದಕರು ಅಥವಾ ದೇಶದ್ರೋಹಿ ಶಕ್ತಿಗಳು ಈ ದುಷ್ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದರು.

2008: ಕರ್ನಾಟಕ ವಿಧಾನಸಭೆಗೆ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು.

2008: ನೀತಿ ಸಂಹಿತೆ ಜಾರಿಯಲ್ಲಿ ಇರುವುದನ್ನೂ ಲೆಕ್ಕಿಸದೆ ಕೇಂದ್ರ ವಿದ್ಯುತ್ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ 4000 ಮೆಗಾವಾಟ್ ಸಾಮರ್ಥ್ಯದ ತದಡಿ ವಿದ್ಯುತ್ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿದರು. ಈ ಆಶ್ವಾಸನೆಯು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಚುನಾವಣಾಧಿಕಾರಿಗಳು ಶಿಂಧೆ ಅವರಿಗೆ ನೋಟಿಸ್ ಜಾರಿ ಮಾಡಿದರು.

2008: ಸಾಂಪ್ರದಾಯಿಕ ರಕ್ತ ಪರೀಕ್ಷೆಯ ಮೂಲಕವಲ್ಲ, ಜೊಲ್ಲುರಸದ ಮೂಲಕವೇ ಏಡ್ಸ್ ಸೋಂಕಿನ ಇರುವಿಕೆಯನ್ನು ಪರೀಕ್ಷಿಸುವ ವಿಧಾನವನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದರು. ಅತ್ಯಂತ ಅಗ್ಗದ ಮತ್ತು ಸುಲಭ ವಿಧಾನದ ಈ ಜೊಲ್ಲುರಸ ಪರೀಕ್ಷೆಯನ್ನು ಯಾವುದೇ ಸಾಮಾನ್ಯ ಆಸ್ಪತ್ರೆಯಲ್ಲೂ ನಡೆಸಬಹುದು. ಗರ್ಭಿಣಿಯರು ಈ ಪರೀಕ್ಷೆ ಮಾಡಿಸಿಕೊಂಡು ಗರ್ಭದಲ್ಲಿ ಇರುವ ಮಗುವಿಗೆ ಅಗತ್ಯದ ಆರೈಕೆ ನೀಡಲು ಸಾಧ್ಯ. ಭಾರತೀಯ ವಿಜ್ಞಾನಿ ನಿಖಿತಾ ಪಂತ್ ಪೈ, ಕೆನಡಾದ ಮೆಕ್ ಗಿಲ್ ವಿಶ್ವವಿದ್ಯಾಲಯದ ಅವರ ಸಹೋದ್ಯೋಗಿಗಳು ಹಾಗೂ ವಾರ್ಧಾದ ಮಹಾತ್ಮಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞರು ಈ ಎಚ್ಐವಿ/ಏಡ್ಸ್ ಪತ್ತೆ ಉಪಕರಣ ಅಭಿವೃದ್ಧಿ ಪಡಿಸಿದರು. ಜೊಲ್ಲುರಸವನ್ನು (ಉಗುಳು) ಕಡ್ಡಿಯೊಂದರಲ್ಲಿ ಸಂಗ್ರಹಿಸಿ (ಗರ್ಭಿಣಿಯೇ ಎಂಬುದನ್ನು ತಿಳಿಯಲು ನಡೆಸುವ ಪರೀಕ್ಷೆಯಂತೆ) ವಿಶೇಷ ದ್ರಾವಣ ಇರುವ ಚಿಕ್ಕ ನಳಿಕೆಯಲ್ಲಿ ಇರಿಸಿದರೆ ಮುಗಿಯಿತು. 20ರಿಂದ 40 ನಿಮಿಷಗಳ ಒಳಗೆ ಕಡ್ಡಿಯ ತುದಿಯಲ್ಲಿ ನೇರಳೆ/ಕಡುಗೆಂಪು ಬಣ್ಣ ಕಾಣಿಸಿಕೊಂಡರೆ ವ್ಯಕ್ತಿಗೆ ಎಚ್ ಐ ವಿ ಸೋಂಕು ತಗುಲಿದೆ ಎಂಬುದು ಸಾಬೀತಾಗುತ್ತದೆ. ವಾರ್ಧಾ ಆಸ್ಪತ್ರೆಯಲ್ಲಿ ಒಟ್ಟು 1,222 ಮಹಿಳೆಯರಿಗೆ ಈ ವಿಧಾನದಲ್ಲಿ ಪರೀಕ್ಷೆ ನಡೆಸಲಾಯಿತು. ಈ ಪೈಕಿ 1003 ಮಂದಿ ಈ ಮೊದಲು ಎಚ್ ಐ ವಿ ಪರೀಕ್ಷೆ ಮಾಡಿಸಿಕೊಂಡೇ ಇರಲಿಲ್ಲ. ಪರೀಕ್ಷೆಯಿಂದ ಅವರ ಎಚ್ ಐ ವಿ/ಏಡ್ಸ್ ಸ್ಥಿತಿಗತಿ ತಿಳಿಯುವಂತಾಯಿತು. `ನಮ್ಮ ಸಂಶೋಧನೆಯಿಂದ ದಿನದ 24 ಗಂಟೆಯೂ ತ್ವರಿತ ಎಚ್ ಐ ವಿ/ಏಡ್ಸ್ ಪರೀಕ್ಷೆ ನಡೆಸುವ ಮತ್ತು ಕೌನ್ಸೆಲಿಂಗ್ ನಡೆಸುವುದು ಸಾಧ್ಯವಾಗಿದೆ. ಭಾರತದ ಗ್ರಾಮೀಣ ಪ್ರದೇಶದ ಹೆರಿಗೆ ಆಸ್ಪತ್ರೆಗಳ ಹೆರಿಗೆ ಕೊಠಡಿಗಳ್ಲಲೂ ಈ ಪರೀಕ್ಷೆ ನಡೆಸುವುದು ಸಾಧ್ಯ' ಎಂದು ಡಾ. ನಿಖಿತಾ ಪೈ ಹೇಳಿದರು.

2008: ಪೋರ್ಟ್ ಬ್ಲೇರಿನಲ್ಲಿ ಹಿಂದಿನ ರಾತ್ರಿ ಭಾರೀ ಮಳೆ ಸುರಿದು ವಿಮಾನ ನಿಲ್ದಾಣ ಜಲಾವೃತಗೊಂಡು, ಸಂಚಾರ ಸೇವೆ ಸ್ಥಗಿತವಾಯಿತು.

2008: ಕಾಂಗ್ರೆಸ್ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಬಿ ಎಸ್ ಪಿ ಗೆ ಸೇರ್ಪಡೆಯಾದರು.

2008: ಉತ್ತರ ಭಾರತೀಯರ ವಿರುದ್ಧ ಮಲತಾಯಿ ಧೋರಣೆ ಹೊಂದಿದ ಶಿವಸೇನಾ ನಿಲುವಿನಿಂದ ರೋಸಿಹೊದ ಉತ್ತರ ಘಟಕದ ಶಿವಸೇನಾ ಮುಖ್ಯಸ್ಥ ಜೈ ಭಗವಾನ್ ಗೋಯಲ್ ಹೊಸ ಪಕ್ಷ ಸ್ಥಾಪಿಸಿದರು. `ರಾಷ್ಟ್ರವಾದಿ ಶಿವಸೇನಾ' ಎಂದು ಕರೆಯಲ್ಪಡುವ ಹೊಸ ಪಕ್ಷಕ್ಕೆ ಉತ್ತರ ಪ್ರದೇಶ, ರಾಜಸ್ತಾನ, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಹಲವಾರು ಶಿವಸೇನಾ ಸದಸ್ಯರು ಶಿವಸೇನೆ ತೊರೆದು ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ' ಎಂದು ಪಕ್ಷ ಹೇಳಿಕೆ ನೀಡಿತು.

2008: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹಿರಿಯ ಗಾಯಕ, ಕಿರಾಣಾ- ಘರಾಣಾ ಸಂಗೀತ ಪ್ರಕಾರದ ಗುರು ಎಂದೇ ಹೆಸರುವಾಸಿಯಾಗಿದ್ದ ಖ್ಯಾತ ಸಂಗೀತಗಾರ ಪಂಡಿತ್ ಫಿರೋಜ್ ದಸ್ತೂರ್ (89) ಹಿಂದಿನ ದಿನ ರಾತ್ರಿ ಮುಂಬೈಯಲ್ಲಿ ನಿಧನರಾದರು. ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಧ್ರುವತಾರೆ ಸವಾಯಿ ಗಂಧರ್ವ ಅವರ ಅನುಯಾಯಿಗಳಲ್ಲಿ ಹಿರಿಯರಾದ ಪಂಡಿತ್ ದಸ್ತೂರ್ ಅವರು ಘರಾಣಾ ಪ್ರಕಾರದಲ್ಲಿ ವಿಖ್ಯಾತಿ ಪಡೆದಿದ್ದರು. ಆರು ದಶಕಗಳಿಂದ ದೇಶ ವಿದೇಶಗಳಲ್ಲಿ ತಮ್ಮ ಮಧುರ ಕಂಠಸಿರಿಯಿಂದ ಸಂಗೀತ ರಸಿಕರ ಮನಸೂರೆಗೊಂಡಿದ್ದ ಪಂಡಿತ್ ಫಿರೋಜ್ ದಸ್ತೂರ್ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಾನ್ಸೇನ್ ಪ್ರಶಸ್ತಿ, ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿ ಲಭಿಸಿವೆ. ತಮ್ಮ 7ನೇ ವಯಸ್ಸಿನಲ್ಲಿ ಸಂಗೀತ ಗುರು ಎ.ಡಿ.ಜಾವ್ಕರ್ ಅವರ ಬಳಿ ಸಂಗೀತಾಭ್ಯಾಸ ಆರಂಭಿಸಿದ ದಸ್ತೂರ್, ಸಂಗೀತ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದರು. ಸಂಗೀತ ಕ್ಷೇತ್ರದಲ್ಲಿ ಪೂರ್ಣಾವಧಿಯಲ್ಲಿ ತೊಡಗಿಸಿಕೊಳ್ಳುವ ಮುನ್ನ ವಾಡಿಯಾ ಮೂವಿಟೋನ್ ಮತ್ತು ಮಿನೆರ್ವಾ ಮೂವಿಟೋನ್ ಲಾಂಛನದ ಸಿನಿಮಾಗಳಲ್ಲಿ ಬಾಲ ನಟರಾಗಿಯೂ ಗುರುತಿಸಿಕೊಂಡಿದ್ದರು. ಕೆಲವು ಸಿನಿಮಾಗಳಿಗೆ ನಟರಿಗೆ ಧ್ವನಿಯೂ ಆಗಿದ್ದರು.

2007: ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಮೃತಧಾರಾ ಗೋಶಾಲೆಯನ್ನು ಸಚಿವ ನಾಗರಾಜ ಶೆಟ್ಟಿ ಲೋಕಾರ್ಪಣೆ ಮಾಡಿದರು.

2007: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಸ್ಮರಣಾರ್ಥ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸಮ್ಮಿಶ್ರ ಯುಗದಲ್ಲಿರುವ ಭಾರತದಲ್ಲಿ ಸುಸ್ಥಿರವಾದ ದ್ವಿಪಕ್ಷ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹಾರೈಸಿದರು.

2007: ಚೆನ್ನೈಯಲ್ಲಿ `ದಿನಕರನ್' ಪತ್ರಿಕಾ ಕಚೇರಿ ಮೇಲೆ ಡಿಎಂಕೆ ಕಾರ್ಯಕರ್ತರ ದಾಳಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿತು.

2007: ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿಯ (ನ್ಯಾಕ್) ಕಾರ್ಯಕಾರಿ ಮಂಡಳಿ ಅಧ್ಯಕ್ಷ ಪ್ರೊ. ಗೋವರ್ಧನ್ ಮೆಹ್ತಾ ಅವರು ರಸಾಯನ ವಿಜ್ಞಾನ ಕ್ಷೇತ್ರದ ಸಾಧನೆಗಾಗಿ 2007ನೇ ಸಾಲಿನ ಪ್ರತಿಷ್ಠಿತ ಟ್ರೈಸ್ಟ್ ಸೈನ್ಸ್ ಪ್ರಶಸ್ತಿಗೆ ಆಯ್ಕೆಯಾದರು. ಪರ್ಯಾಯ ನೊಬೆಲ್ ಪ್ರಶಸ್ತಿ ಎಂದೇ ಬಣ್ಣಿಸಲಾದ ಟ್ರೈಸ್ಟ್ ವಿಜ್ಞಾನ ಪ್ರಶಸ್ತಿಯು 50 ಸಾವಿರ ಅಮೆರಿಕನ್ ಡಾಲರ್ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

2006: ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್ ಹಾಗೂ ಮಾನ್ಯತೆ ಪಡೆದಿರುವ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದು ಭಾಷೆಯಾಗಿ ಕಡ್ಡಾಯ ಕನ್ನಡ ಕಲಿಕೆ ಪ್ರಸ್ತಾವವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮುಂದಿಟ್ಟರು. ಇದರೊಂದಿಗೆ ಪ್ರಾಥಮಿಕ ಹಂತದಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಚರ್ಚೆಗೆ ಮತ್ತೆ ಚಾಲನೆ ದೊರೆಯಿತು.

2006: ನೇಪಾಳದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಸರ್ಕಾರವು ದೊರೆ ಜ್ಞಾನೇಂದ್ರ ಅವರು ತಮ್ಮ 14 ತಿಂಗಳ ಆಡಳಿತಾವದಿಯಲ್ಲಿ ಜಾರಿಗೊಳಿಸಿದ ವಿವಾದಾತ್ಮಕ ಮಾಧ್ಯಮ ಸುಗ್ರೀವಾಜ್ಞೆ ಸೇರಿ ಆರು ಆದೇಶಗಳನ್ನು ಅನೂರ್ಜಿತಗೊಳಿಸಿತು. ಮಾಧ್ಯಮ ಅಥವಾ ಉಗ್ರ ಪತ್ರಿಕಾ ಸುಗ್ರೀವಾಜ್ಞೆಯ ಮೂಲಕ ಪತ್ರಿಕಾ ಸ್ವಾತಂತ್ಯದ ಮೇಲೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿ, ದೊರೆ ಸರ್ಕಾರದ ವಿರುದ್ಧ ಬರೆದ ಪತ್ರಕರ್ತರಿಗೆ ಜೈಲು ಮತ್ತು ದಂಡ ಶಿಕ್ಷೆಯನ್ನು ನೀಡಲು ತೀರ್ಮಾನಿಸಲಾಗಿತ್ತು. ಈ ಕಾನೂನಿನಡಿ, ರಾಜಪ್ರಭುತ್ವ ಕುಟುಂಬವನ್ನು ಟೀಕಿಸುವ ಅಥವಾ ಉಗ್ರಗಾಮಿಗಳ ವರದಿಗಳನ್ನು ಪ್ರಕಟಿಸುವ ಪತ್ರಕರ್ತರಿಗೆ ಒಂದು ವರ್ಷ ಜೈಲು ಮತ್ತು ರೂ 500 ದಂಡಶಿಕ್ಷೆ ನಿರ್ಧರಿಸಲಾಗಿತ್ತು.

2006: ಭಾರತ ಮತು ಇಸ್ರೇಲ್ ಇದೇ ಪ್ರಥಮ ಬಾರಿಗೆ ಕೃಷಿ ಕ್ಷೇತದಲ್ಲಿ ಪರಸ್ಪರ ಸಹಕರಿಸುವ ಸಲುವಾಗಿ ಮೂರು ವರ್ಷಗಳ ಕಾಲ ಮಹತ್ವದ ಕಾರ್ಯ ಯೋಜನೆ ರೂಪಿಸುವ ಐತಿಹಾಸಿಕ ಒಪ್ಪಂದಕ್ಕೆ ಇಸ್ರೇಲಿನ ಟೆಲ್ ಅವೀವಿನಲ್ಲಿ ಸಹಿ ಹಾಕಿದವು. ಭಾರತ ಸರ್ಕಾರದ ಕೃಷಿ ಸಚಿವ ಶರದ್ ಪವಾರ್ ಮತ್ತು ಇಸ್ರೇಲ್ ಸರ್ಕಾರದ ಕೃಷಿ ಸಚಿವ ಶಲಾಮ್ ಸೈಮ್ಹಾನ್ ಅವರು ರಾತ್ರಿ ಇಲ್ಲಿ ಈ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದರು.

2002: ಉರ್ದು ಕವಿ ಕೈಫಿ ಅಜ್ಮಿ ಮುಂಬೈಯಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಇವರು ಬಾಲಿವುಡ್ ನಟಿ ಶಬಾನಾ ಅಜ್ಮಿ ಅವರ ತಂದೆ.

1993: ಭಾರತದ ಸಂತೋಷ ಯಾದವ್ ಎವರೆಸ್ಟ್ ಪರ್ವತವನ್ನು ಎರಡು ಸಲ ಏರಿದ ಜಗತ್ತಿನ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕೆ 1992ರ ಮೇ 12ರಂದು ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದರು.

1977: ಕಲಾವಿದೆ ದಿವ್ಯಾ ರಾಘವನ್ ಜನನ.

1957: ಕಲಾವಿದೆ ಉಮಾಶ್ರೀ ಜನನ.

1949: ಕಲಾವಿದ ದ್ವಾರಕಾನಾಥ್ ಜನನ.

1940: ಬ್ರಿಟಿಷ್ ಪ್ರಧಾನಿ ನೆವಿಲ್ ಚೆಂಬರ್ಲಿನ್ ರಾಜೀನಾಮೆ ನೀಡಿದರು. ಅವರ ಉತ್ತರಾಧಿಕಾರಿಯಾಗಿ ವಿನ್ ಸ್ಟನ್ ಚರ್ಚಿಲ್ ಅಧಿಕಾರಕ್ಕೆ ಏರಿದರು.

1940: ಕಲಾವಿದ ರಾಘವೇಂದ್ರರಾವ್ ಎಸ್ ಜನನ.

1933: ಕರ್ನಾಟಕದ ಜಾನಪದ ಕಲೆಗಳಲ್ಲಿ ನಶಿಸಿ ಹೋಗಿದ್ದ ಸಲಾಕೆ ಗೊಂಬೆ ಕಲೆಗೆ ಮರುಹುಟ್ಟು ನೀಡಿದ ರಂಗನಾಥರಾವ್ ಅವರು ಎಂ. ರಂಗಯ್ಯ- ಪುಟ್ಟ ಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ದೊಡ್ಡ ಮುದಿಗೆರೆಯಲ್ಲಿ ಜನಿಸಿದರು.

1933: `ಚಿ.ಮೂ.' ಎಂದೇ ಖ್ಯಾತರಾದ ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ಈದಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂ ಗ್ರಾಮದಲ್ಲಿ ಕೊಟ್ಟೂರಯ್ಯ- ಪಾರ್ವತವ್ವ ದಂಪತಿಯ ಪುತ್ರರಾಗಿ ಜನಿಸಿದರು. ವಿವಿಧ ಪ್ರಕಾರಗಳಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಚಿ.ಮೂ. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಜನತೆ ಪ್ರೀತಿ ಗೌರವಗಳಿಂದ ಅವರಿಗೆ ಅರ್ಪಿಸಿದ ಗೌರವ ಗ್ರಂಥ `ಸಂಶೋಧನೆ'.

1857: ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೀರತ್ತಿನಲ್ಲಿ ಆರಂಭಗೊಂಡಿತು. ಬ್ರಿಟಿಷರು ಇದನ್ನು ಸಿಪಾಯಿ ದಂಗೆ ಎಂದು ಕರೆದರು. 1844, 1849, 1850 ಹಾಗೂ 1852ರಲ್ಲಿ ಸಣ್ಣ ಪ್ರಮಾಣದ ದಂಗೆಗಳು ನಡೆದರೂ 1857ಕ್ಕೆ ಹೋಲಿಸಿದರೆ ಅವುಗಳಿಗೆ ಲಭಿಸಿದ ಮಹತ್ವ ಅತ್ಯಂತ ಕಡಿಮೆ.

1774: ಹದಿನಾರನೇ ಲೂಯಿ ಫ್ರಾನ್ಸಿನ ಸಿಂಹಾಸನ ಏರಿದ. ಆತನ ಆಡಳಿತಾವಧಿಯಲ್ಲಿ ಫ್ರೆಂಚ್ ಕ್ರಾಂತಿ ಆರಂಭವಾಯಿತು. 1793ರ ಜನವರಿ 21ರಂದು ಪ್ಯಾರಿಸ್ಸಿನಲ್ಲಿ ಆತನನ್ನು ಗಿಲೋಟಿನ್ ಯಂತ್ರದ ಮೂಲಕ ಕೊಲ್ಲಲಾಯಿತು.

No comments:

Post a Comment