ಇಂದಿನ ಇತಿಹಾಸ History Today ಮೇ 01
2018:
ಕೋಲ್ಕತ್ತ: ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಅಶೋಕ್ ಮಿತ್ರ (90) ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಈದಿನ ನಿಧನರಾದರು. ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಏಪ್ರಿಲ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
1997ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಸರ್ಕಾರದ ಮೊದಲ ಹಣಕಾಸು ಸಚಿವರಾಗಿ ಮಿತ್ರ ಕಾರ್ಯನಿರ್ವಹಿಸಿದ್ದರು. ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ
ಅವರು ರಾಜ್ಯಸಭೆಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ವಿಶ್ವಸಂಸ್ಥೆಯ ಆರ್ಥಿಕ ಆಯೋಗದಲ್ಲಿ ಉಪನ್ಯಾಸವನ್ನು ನೀಡಿದ್ದ ಅವರು, ಹಲವು ವರ್ಷಗಳ ಕಾಲ ವಿಶ್ವಬ್ಯಾಂಕ್ನಲ್ಲಿಯೂ ಸೇವೆ ಸಲ್ಲಿಸಿದ್ದರು. ನಂತರ ಆಗಿನ ಮುಖ್ಯಮಂತ್ರಿ ಜ್ಯೋತಿ ಬಸು ಅವರ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ರಾಜೀನಾಮೆ ನೀಡಿದ್ದರು. ಅಂಕಣಕಾರರಾಗಿಯೂ ಕಾರ್ಯನಿರ್ವಹಿಸಿದ್ದ
ಅವರು ಸಮಾಜ ಮತ್ತು ರಾಜಕೀಯದ ಕುರಿತ ವಿಶ್ಲೇಷಣೆಯಿಂದ ಪ್ರಸಿದ್ಧಿಪಡೆದಿದ್ದರು.
2018: ನವದೆಹಲಿ: ದೇಶದ ಪ್ರತಿಷ್ಠಿತ ಐಐಟಿಗಳಿಗೆ ದಾಖಲಾಗಲು ನಡೆಸುವ ಜೆಇಇ(ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್) ಪ್ರವೇಶ ಪರೀಕ್ಷೆಯ ಮೊದಲ ಪತ್ರಿಕೆಯ ಫಲಿತಾಂಶ ಹೊರಬಿದ್ದಿತು.. ಆಂಧ್ರಪ್ರದೇಶದ ಸುರಜ್ ಕೃಷ್ಣ ಭೋಗಿ ಮೊದಲ ರಾಂಕ್ ಗಳಿಸಿದರು. ಆಂಧ್ರಪ್ರದೇಶದವರೇ ಆದ ಕೆ.ವಿ.ಆರ್.ಹೇಮಂತ್ ಕುಮಾರ್ ಚೊಡಿಪಿಲ್ಲಿ ಎರಡನೆ ರಾಂಕ್ ಪಡೆದಿದ್ದರೆ, ರಾಜಸ್ಥಾನದ ಪಾರ್ಥ ಲತುರಿಯಾ ಮೂರನೆ ಸ್ಥಾನ ಗಳಿಸಿದರು. ‘ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದೆ. ಕೀ ಆನ್ಸರ್ಗಳನ್ನು ನೋಡಿದಾಗ ಉತ್ತಮ ಅಂಕಗಳು ಬರುವ ನಿರೀಕ್ಷೆ ಇತ್ತು. ಟಾಪ್ ರಾಂಕ್ ಬರುತ್ತೇನೆ ಅಂದುಕೊಂಡಿರಲಿಲ್ಲ’ ಎಂದು ಫಲಿತಾಂಶದ ಕುರಿತು ಸಂತಸ ಹಂಚಿಕೊಂಡ ಕೃಷ್ಣ ಅವರು ಬಾಂಬೆ ಐಐಟಿ ಸೇರಲು ನಿರ್ಧರಿಸಿದ್ದಾರಂತೆ. ಈ ಪರೀಕ್ಷೆಯನ್ನು ಪಾಸಾಗಲೆಂದು ಸೂರಜ್ ತಮ್ಮ ಇಷ್ಟದ ಆಟವಾದ ಕ್ರಿಕೆಟ್ ಆಡುವುದನ್ನು ಎರಡು ವರ್ಷದಿಂದ ನಿಲ್ಲಿಸಿದ್ದರಂತೆ. ಇವರ ತಂದೆ ಹರಿಕೃಷ್ಣ ಶ್ರಿಕಾಕುಳಂನಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದಾರೆ. ಈ ಬಾರಿ ಒಟ್ಟು 10,43,739 ವಿದ್ಯಾರ್ಥಿಗಳು ದೇಶದ 112 ಪಟ್ಟಣಗಳಲ್ಲಿ ಜೆಇಇ ಪರೀಕ್ಷೆ ಬರೆದಿದ್ದರು. ಅವರಲ್ಲಿ 1,80,331 ವಿದ್ಯಾರ್ಥಿಗಳು ಮತ್ತು 50,693 ವಿದ್ಯಾರ್ಥಿನಿಯರು ಸಫಲರಾಗಿದ್ದಾರೆ. ಇವರಲ್ಲಿ ಐಐಟಿ ಸೇರ ಬಯಸುವ ಆಕಾಂಕ್ಷಿಗಳು ಇದೇ ಮೇ 20ರಂದು ನಡೆಯುವ ‘ಜೆಇಇ ಅಡ್ವಾನ್ಸ್’ ಪರೀಕ್ಷೆ ಪಾಸಾಗಬೇಕು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎನ್ಐಟಿ) ಮತ್ತು ಸೆಂಟ್ರಲಿ ಫಂಡೆಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ಸ್(ಸಿಎಫ್ಟಿಐ)ನಂತಹ ಸಂಸ್ಥೆಗಳಲ್ಲಿ ಅಧ್ಯಯನಕ್ಕೆ ಸೀಟು ಗಿಟ್ಟಿಸಲು ಈ ಪ್ರವೇಶ ಪರೀಕ್ಷೆ ಪಾಸಾಗಬೇಕು. ಇದನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) ನಡೆಸುತ್ತದೆ.
2017: ನವದೆಹಲಿ: ಇಬ್ಬರು ಭಾರತೀಯ ಯೋಧರನ್ನು ಈದಿನ ಬೆಳಗ್ಗೆ ಕೊಂದು ಛಿದ್ರಗೊಳಿಸಿದ ಪಾಕಿಸ್ತಾನದ ಬರ್ಬರ ಕೃತ್ಯಕ್ಕೆ ಪ್ರತಿಯಾಗಿ ರಾತ್ರಿ ಪಾಕಿಸ್ತಾನದ ಎರಡು ಬಂಕರುಗಳನ್ನು ಪುಡಿಗಟ್ಟಿ, 7 ಪಾಕ್ ಸೈನಿಕರನ್ನು ಕೊಲ್ಲುವ ಮೂಲಕ ಭಾರತ ಸೇಡು ತೀರಿಸಿಕೊಂಡಿತು.
ಪ್ರಾಥಮಿಕ ವರ್ತಮಾನದ ಪ್ರಕಾರ ಜಮ್ಮುವಿನ ಮೆಂಧರಿನ ಕೃಷ್ಣ ಘಾಟಿಗೆ ಎದುರಿನಲ್ಲಿರುವ ಕಿರ್ಪಾಣ್ ಮತ್ತು ಪಿಂಪ್ಲ್ ಹೊರಠಾಣೆಗಳನ್ನು ಭಾರತ ಸೇನೆ ಧ್ವಂಸಗೊಳಿಸಿತು.
2018: ನವದೆಹಲಿ: ದೇಶದ ಪ್ರತಿಷ್ಠಿತ ಐಐಟಿಗಳಿಗೆ ದಾಖಲಾಗಲು ನಡೆಸುವ ಜೆಇಇ(ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್) ಪ್ರವೇಶ ಪರೀಕ್ಷೆಯ ಮೊದಲ ಪತ್ರಿಕೆಯ ಫಲಿತಾಂಶ ಹೊರಬಿದ್ದಿತು.. ಆಂಧ್ರಪ್ರದೇಶದ ಸುರಜ್ ಕೃಷ್ಣ ಭೋಗಿ ಮೊದಲ ರಾಂಕ್ ಗಳಿಸಿದರು. ಆಂಧ್ರಪ್ರದೇಶದವರೇ ಆದ ಕೆ.ವಿ.ಆರ್.ಹೇಮಂತ್ ಕುಮಾರ್ ಚೊಡಿಪಿಲ್ಲಿ ಎರಡನೆ ರಾಂಕ್ ಪಡೆದಿದ್ದರೆ, ರಾಜಸ್ಥಾನದ ಪಾರ್ಥ ಲತುರಿಯಾ ಮೂರನೆ ಸ್ಥಾನ ಗಳಿಸಿದರು. ‘ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದೆ. ಕೀ ಆನ್ಸರ್ಗಳನ್ನು ನೋಡಿದಾಗ ಉತ್ತಮ ಅಂಕಗಳು ಬರುವ ನಿರೀಕ್ಷೆ ಇತ್ತು. ಟಾಪ್ ರಾಂಕ್ ಬರುತ್ತೇನೆ ಅಂದುಕೊಂಡಿರಲಿಲ್ಲ’ ಎಂದು ಫಲಿತಾಂಶದ ಕುರಿತು ಸಂತಸ ಹಂಚಿಕೊಂಡ ಕೃಷ್ಣ ಅವರು ಬಾಂಬೆ ಐಐಟಿ ಸೇರಲು ನಿರ್ಧರಿಸಿದ್ದಾರಂತೆ. ಈ ಪರೀಕ್ಷೆಯನ್ನು ಪಾಸಾಗಲೆಂದು ಸೂರಜ್ ತಮ್ಮ ಇಷ್ಟದ ಆಟವಾದ ಕ್ರಿಕೆಟ್ ಆಡುವುದನ್ನು ಎರಡು ವರ್ಷದಿಂದ ನಿಲ್ಲಿಸಿದ್ದರಂತೆ. ಇವರ ತಂದೆ ಹರಿಕೃಷ್ಣ ಶ್ರಿಕಾಕುಳಂನಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದಾರೆ. ಈ ಬಾರಿ ಒಟ್ಟು 10,43,739 ವಿದ್ಯಾರ್ಥಿಗಳು ದೇಶದ 112 ಪಟ್ಟಣಗಳಲ್ಲಿ ಜೆಇಇ ಪರೀಕ್ಷೆ ಬರೆದಿದ್ದರು. ಅವರಲ್ಲಿ 1,80,331 ವಿದ್ಯಾರ್ಥಿಗಳು ಮತ್ತು 50,693 ವಿದ್ಯಾರ್ಥಿನಿಯರು ಸಫಲರಾಗಿದ್ದಾರೆ. ಇವರಲ್ಲಿ ಐಐಟಿ ಸೇರ ಬಯಸುವ ಆಕಾಂಕ್ಷಿಗಳು ಇದೇ ಮೇ 20ರಂದು ನಡೆಯುವ ‘ಜೆಇಇ ಅಡ್ವಾನ್ಸ್’ ಪರೀಕ್ಷೆ ಪಾಸಾಗಬೇಕು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎನ್ಐಟಿ) ಮತ್ತು ಸೆಂಟ್ರಲಿ ಫಂಡೆಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ಸ್(ಸಿಎಫ್ಟಿಐ)ನಂತಹ ಸಂಸ್ಥೆಗಳಲ್ಲಿ ಅಧ್ಯಯನಕ್ಕೆ ಸೀಟು ಗಿಟ್ಟಿಸಲು ಈ ಪ್ರವೇಶ ಪರೀಕ್ಷೆ ಪಾಸಾಗಬೇಕು. ಇದನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) ನಡೆಸುತ್ತದೆ.
2018:
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಯು 2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ರಾಷ್ಟ್ರ ರಾಜಧಾನಿ ದೆಹಲಿ, ವಾರಾಣಾಸಿ ನಗರಗಳ ಹೆಸರು ಸೇರಿತು. ಡಬ್ಲ್ಯೂಎಚ್ಒ ಬಿಡುಗಡೆ ಮಾಡಿದ 20 ನಗರಗಳಲ್ಲಿ ಭಾರತದ 14 ನಗರಗಳ ಹೆಸರು ಪಟ್ಟಿಯಲ್ಲಿರುವುದು
ಆತಂಕಕ್ಕೀಡುಮಾಡಿದ್ದು, 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ (particulate matter) ಪ್ರಮಾಣ ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಿದೆ.
ಮೊದಲ ಸ್ಥಾನದಲ್ಲಿ ದೆಹಲಿ, ಕೈರೋ, ಢಾಕಾ, ಮುಂಬೈ, ಬೀಜಿಂಗ್ ಕ್ರಮವಾಗಿ ಐದು ಸ್ಥಾನಗಳನ್ನು ಪಡೆದಿದೆ. ಭಾರತದ ಕಾನ್ಪುರ, ಫರಿದಾಬಾದ್, ಗಯಾ, ಪಾಟ್ನಾ, ಆಗ್ರಾ, ಮುಜಾಫರ್ನಗರ, ಶ್ರೀನಗರ, ಗುರುಗ್ರಾಮ, ಜೈಪುರ, ಪಟಿಯಾಲ, ಜೋಧಪುರ, ಕುವೈತಿನ ಅಲಿಸುಬಾಹ್–ಅಲಿ ಸಲೀಮ್ ಹಾಗೂ ಚೀನಾ, ಮಂಗೋಲಿಯಾದ ಕೆಲವು ನಗರಗಳು ಹೆಚ್ಚು ಮಾಲಿನ್ಯ ನಗರಗಳು ಎಂಬ ಹಣೆಪಟ್ಟಿ ಪಡೆದುಕೊಂಡಿವೆ. ಈ ಎಲ್ಲಾ ನಗರಗಳ ವಿಷಾನಿಲ ಕಣಗಳ ಮಟ್ಟ 2.5ಕ್ಕೂ ಹೆಚ್ಚಿದೆ ಎಂದು ವರದಿ ತಿಳಿಸಿತು. 2016
ವರದಿಯ ಪ್ರಕಾರ ಭಾರತದ ಒಟ್ಟು 13 ನಗರಗಳಲ್ಲಿ ವಿಷಾನಿಲ ಕಣಗಳ ಮಟ್ಟ 10ಕ್ಕೂ ಹೆಚ್ಚಿದೆ. ಪ್ರಪಂಚದಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು,
ಪ್ರತಿವರ್ಷ 70 ಲಕ್ಷ
ಮಂದಿ ಶ್ವಾಸಕೋಶ ಕ್ಯಾನ್ಸರ್, ಪಾರ್ಶ್ವಾವಾಯು, ಹೃದಯಾಘಾತ ಹೀಗೆ ಅನೇಕ ಕಾಯಿಲೆಗಳಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿತು. ವಾಯುಮಾಲಿನ್ಯ ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಿರುವವ ಪ್ರಮಾಣ ಕೆಳ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಲ್ಲಿ ಹೆಚ್ಚಾಗಿವೆ. ಅದರಲ್ಲೂ ಏಷ್ಯಾದಲ್ಲಿನ ಭಾರತ, ಆಫ್ರಿಕಾ ರಾಷ್ಟ್ರಗಳು ವಾಯುಮಾಲಿನ್ಯದ ದುಷ್ಪಪರಿಣಾಮಗಳನ್ನು
ಎದುರಿಸುತ್ತಿವೆ ಎಂದು ವರದಿ ಹೇಳಿತು.
2017: ನವದೆಹಲಿ: ಇಬ್ಬರು ಭಾರತೀಯ ಯೋಧರನ್ನು ಈದಿನ ಬೆಳಗ್ಗೆ ಕೊಂದು ಛಿದ್ರಗೊಳಿಸಿದ ಪಾಕಿಸ್ತಾನದ ಬರ್ಬರ ಕೃತ್ಯಕ್ಕೆ ಪ್ರತಿಯಾಗಿ ರಾತ್ರಿ ಪಾಕಿಸ್ತಾನದ ಎರಡು ಬಂಕರುಗಳನ್ನು ಪುಡಿಗಟ್ಟಿ, 7 ಪಾಕ್ ಸೈನಿಕರನ್ನು ಕೊಲ್ಲುವ ಮೂಲಕ ಭಾರತ ಸೇಡು ತೀರಿಸಿಕೊಂಡಿತು.
ಪ್ರಾಥಮಿಕ ವರ್ತಮಾನದ ಪ್ರಕಾರ ಜಮ್ಮುವಿನ ಮೆಂಧರಿನ ಕೃಷ್ಣ ಘಾಟಿಗೆ ಎದುರಿನಲ್ಲಿರುವ ಕಿರ್ಪಾಣ್ ಮತ್ತು ಪಿಂಪ್ಲ್ ಹೊರಠಾಣೆಗಳನ್ನು ಭಾರತ ಸೇನೆ ಧ್ವಂಸಗೊಳಿಸಿತು.
2017:
ಜಮ್ಮು: ಗಡಿ ನಿಯಂತ್ರಣ ರೇಖೆಯ ಸಮೀಪ ಪಾಕಿಸ್ತಾನ ಭಾರತೀಯ ಸೇನಾ ಯೋಧರ ಹತ್ಯೆ ಮಾಡಿ, ದೇಹವನ್ನು ತುಂಡರಿಸಿದ್ದಾರೆ ಎಂದು ಸೇನೆಯ ಉತ್ತರ ಕಮಾಂಡ್ ಟ್ವಿಟರ್ ಮೂಲಕ
ಸ್ಪಷ್ಟಪಡಿಸಿತು.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸೇನಾ ಗಸ್ತು ತಂಡದ ಮೇಲೆ ಪಾಕಿಸ್ತಾನದ ಗಡಿ ಕಾರ್ಯ ಪಡೆ (ಬ್ಯಾಟ್) ಅಪ್ರಚೋದಕ ದಾಳಿ ನಡೆಸಿರುವುದಾಗಿ ಸೇನಾ ಪ್ರಕಟಣೆ ತಿಳಿಸಿತು. ಮಾರ್ಟರ್ ಹಾಗೂ ರಾಕೆಟ್ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ ಪರಮ್ಜಿತ್ ಸಿಂಗ್ ಹಾಗೂ ಬಿಎಸ್ಎಫ್ ಹೆಡ್ಕಾನ್ಸ್ಟೆಬಲ್ ಪ್ರೇಮ್ ಸಾಗರ್ ಹುತಾತ್ಮರಾಗಿ,
ಮತ್ತೊಬ್ಬ ಯೋಧ ಗಾಯಗೊಂಡರು. ಇಂಥ ಹೇಯ ಕೃತ್ಯ ನಡೆಸಿರುವ ಪಾಕಿಸ್ತಾನ ಸೇನೆಗೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ ಎಂದು ಸೇನಾ ಪ್ರಕಟಣೆಯಲ್ಲಿ ತಿಳಿಸಿತು. ಬೆಳಗ್ಗೆ 8:30ಕ್ಕೆ ಕೃಷ್ಣಗಾಟಿ ವಲಯದ ಗಡಿ ಭದ್ರತಾ ಕೇಂದ್ರದ ಮೇಲೆ ಆಟೋಮ್ಯಾಟಿಕ್ ಶಸ್ತ್ರಾಸ್ತ್ರಗಳ ಮೂಲಕ ಅಪ್ರಚೋದಿತ ಗುಂಡಿನ ದಾಳಿ ನಡೆಯಿತು ಎಂದು ಅರೆಸೇನಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕೆಳದ ತಿಂಗಳು ಪೂಂಚ್ ಮತ್ತು ರಾಜೌರಿ ವಲಯದಲ್ಲಿ ಪಾಕಿಸ್ತಾನ ಸೇನೆಯು ಏಳು ಬಾರಿ ನಿಯಮ ಉಲ್ಲಂಘಿಸಿ ದಾಳಿ ನಡೆಸಿತ್ತು.
2017: ನವದೆಹಲಿ: ಎನ್ಎಸ್ಜಿ ಸದಸ್ಯತ್ವ ಪಡೆಯಲು ಭಾರತಕ್ಕೆ ಬೆಂಬಲ ನೀಡುವುದಾಗಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ಎರ್ಡೊಗಾನ್ ಸ್ಪಷ್ಟಪಡಿಸಿದರು. ಭಾರತದ ಪ್ರವಾಸದಲ್ಲಿರುವ ಟರ್ಕಿ ರೆಸೆಪ್ ಭಾರತದೊಂದಿಗೆ ಉತ್ತಮ ವ್ಯಾಪಾರ ವಹಿವಾಟು ಸಂಬಂಧವನ್ನು ಟರ್ಕಿ ಬಯಸಲಿದೆ ಎಂದು ಹೇಳಿದರು. ಈ ಮಧ್ಯೆ ಭಾರತದ ಆಂತರಿಕ ವಿಚಾರದ ಬಗ್ಗೆ ಪ್ರಸ್ತಾಪಿಸಿದ ರೆಸೆಪ್, ಜಮ್ಮು-ಕಾಶ್ಮೀರ ಸಮಸ್ಯೆ ಕುರಿತು ಉಭಯ ರಾಷ್ಟ್ರಗಳು ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದರು. ಭಾರತ ಇಬ್ಭಾಗವಾಗಿರುವುದೇ ದೊಡ್ಡ ಆಘಾತಕಾರಿ ಸಂಗತಿ. ಭಾರತದಿಂದ ಮತ್ತೊಂದು ದೇಶ ಬೇರ್ಪಟ್ಟಿರುವುದು ತೀವ್ರ ಬೇಸರದ ಸಂಗತಿಯೂ ಆಗಿದೆ ಎಂದಿರುವ ಅವರು, ಎರಡೂ ರಾಷ್ಟ್ರಗಳು ಸಮಸ್ಯೆ ಬಗೆಹರಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು. ಈ ವಿವಾದವನ್ನು ಹೀಗೆ ಮುಂದುವರಿಸುತ್ತಾ ಹೋದರೆ ಮುಂದಿನ ಪೀಳಿಗೆಗೂ ಈ ಸಮಸ್ಯೆ ಹೀಗೆ ಇರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೈಕೋರ್ಟ್ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ 7 ನ್ಯಾಯಮೂರ್ತಿಗಳ ಪೀಠ ಈ ಆದೇಶ ನೀಡಿತು. ಮೇ 4 ರಂದು ಕೋಲ್ಕತದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ಣನ್ ಅವರ ವೈದ್ಯಕೀಯ ಪರೀಕ್ಷೆ ನಡೆಸಬೇಕು ಮತ್ತು ಪರೀಕ್ಷಾ ವರದಿಯನ್ನು ಮೇ. 8ರೊಳಗೆ ಕೋರ್ಟ್ಗೆ ಸಲ್ಲಿಸಬೇಕು ಎಂದು ಕೋರ್ಟ್ ಆದೇಶ ನೀಡಿತು. ವೈದ್ಯಕೀಯ ಪರೀಕ್ಷೆ ನಡೆಸುವ ತಂಡಕ್ಕೆ ಸಹಕರಿಸಲು ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸುವಂತೆ ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರಿಗೆ ಕೋರ್ಟ್ ಆದೇಶಿಸಿತು.ಇದೇ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದ ಸಂಬಂಧ ನೀಡಿರುವ ನೋಟಿಸ್ಗೆ ಮೇ. 8ರೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಕರ್ಣನ್ ಅವರಿಗೆ ಸೂಚಿಸಿತು. ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಜ.ಕರ್ಣನ್ ಅವರು ಸುಪ್ರೀ ಕೋರ್ಟ್ ಮುಂದೆ ಹಾಜರಾಗಿ ತಮ್ಮ ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಮರಳಿಸುವಂತೆ ಕೋರಿಕೆ ಸಲ್ಲಿಸಿದ್ದರು. ಕರ್ಣನ್ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಸುಪ್ರೀಂ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಜ.ಕರ್ಣನ್ ಅವರು ನಾನು ಮಾನಸಿಕವಾಗಿ ಆರೋಗ್ಯದಿಂದಿದ್ದು, ನನ್ನನ್ನು ಮಾನಸಿಕ ಅಸ್ವಸ್ಥ ಎಂದು ಕರೆಯಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಏನು ಅಧಿಕಾರವಿದೆ. ನನ್ನ ಒಪ್ಪಿಗೆಗೆ ವಿರುದ್ಧವಾಗಿ ವೈದ್ಯಕೀಯ ಪರೀಕ್ಷೆ ನಡೆಸಲು ಡಿಜಿಪಿ ಪ್ರಯತ್ನಿಸಿದರೆ ಅವರ ವಿರುದ್ಧ ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಅವರು ತಮ್ಮ ಮಿತಿಯನ್ನು ಅರಿತಿರಬೇಕು ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಮೂರ್ತಿಗಳ ಮಾನಸಿಕ ಆರೋಗ್ಯ ಪರೀಕ್ಷೆ ನಡೆಸುವಂತೆ ತಾನು ಆದೇಶ ನೀಡಿರುವುದಾಗಿಯೂ ಅವರು ಹೇಳಿದರು.
2009: ಗೋಧ್ರಾ ರೈಲು ಧ್ವಂಸ ಘಟನೆಯ ಬಳಿಕ ನಡೆದ 10 ಗಲಭೆ ಪ್ರಕರಣಗಳ ತನಿಖೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿ, ಗುಜರಾತ್ ರಾಜ್ಯದಲ್ಲೇ ಏಳು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ ಪ್ರತಿ ದಿನವೂ ವಿಚಾರಣೆ ನಡೆಸಲು ಆದೇಶ ನೀಡಿತು. ವಿಚಾರಣೆಯನ್ನು ರಾಜ್ಯದ ಹೊರಗಡೆಗೆ ಸ್ಥಳಾಂತರಿಸಬೇಕು ಎಂಬ ರಾಷ್ಟ್ರೀಯ ಮಾನವ ಹಕ್ಕು ಆಯೋಗದ (ಎನ್‌ಎಚ್‌ಆರ್‌ಸಿ) ಕೋರಿಕೆಯನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಅರಿಜಿತ್ ಪಸಾಯತ್, ಅಶೋಕ್ ಕುಮಾರ್ ಗಂಗೂಲಿ ಅವರಿದ್ದ ಪೀಠ, 2003ರ ನವೆಂಬರ್ 21ರಂದು ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಸುಪ್ರೀಂ ಕೋರ್ಟ್ ಈ ವಾರ ಗೋಧ್ರಾ ಬಳಿಕದ ಹಿಂಸಾಚಾರದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ 50 ಮಂದಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾತ್ರದ ಬಗ್ಗೆ ತನಿಖೆಗೂ ಆದೇಶ ನೀಡಿತ್ತು. ತ್ವರಿತ ನ್ಯಾಯಾಲಯಗಳನ್ನು ಅಹಮದಾಬಾದ್ ನರೋದಾ ಪಾಟಿಯಾ, ನರೋದಾ ಗಾಂ, ಗುಲ್ಬರ್ಗ ಸೊಸೈಟಿ ಮತ್ತು ಸಾಬರಮತಿ ಹಾಗೂ ಮೆಹ್‌ಸಾನಾ, ಸಬರ್‌ಕಾಂತಾ ಮತ್ತು ಆನಂದ್ ಜಿಲ್ಲೆಗಳಲ್ಲಿ ಸ್ಥಾಪಿಸಿ ವಿಚಾರಣೆ ನಡೆಸಬೇಕು, ಪ್ರಕರಣದ ಸಾಕ್ಷಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪೀಠವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು.
2009: ವಿಶ್ವ ಆರೋಗ್ಯ ಸಂಸ್ಥೆಯು ಮನುಷ್ಯನನ್ನು ತೀವ್ರವಾಗಿ ಬಾಧಿಸುತ್ತಿರುವ 'ಹಂದಿಜ್ವರ'ಕ್ಕೆ 'ಇನ್‌ಫುಯ್ಲೆನ್ಜಾ-ಎ' (ಎಚ್1ಎನ್1) ಎಂಬ ಹೊಸ ಹೆಸರು ನೀಡಿತು. ಹಂದಿಜ್ವರ ಎಂದು ಕರೆಯುವುದನ್ನು ನಿಲ್ಲಿಸಲು ಆರೋಗ್ಯ ಭದ್ರತೆ ವಿಭಾಗದ ಕಾರ್ಯದರ್ಶಿ ಕೀಜಿ ಫುಕುದಾ ತಿಳಿಸಿದರು. ಈವರೆಗೆ 257 ಹಂದಿಜ್ವರ ಪ್ರಕರಣಗಳು ದಾಖಲಾಗಿವೆ ಎಂದು ಸಂಸ್ಥೆ ತಿಳಿಸಿತು.
2009: ಮುಲ್ಲೈತೀವು ಜಿಲ್ಲೆಯ ಈಶಾನ್ಯ ಕರಾವಳಿಯಲ್ಲಿ ಈದಿನ ಮುಂಜಾನೆ ಎಲ್‌ಟಿಟಿಇ ಆತ್ಮಾಹುತಿ ದಳದ ಸದಸ್ಯರಿದ್ದ ದೋಣಿಗಳ ಮೇಲೆ ದಾಳಿ ನಡೆಸಿದ ಶ್ರೀಲಂಕಾ ನೌಕಾಪಡೆ, ಕನಿಷ್ಠ 23 ತಮಿಳು ಉಗ್ರರನ್ನು ಕೊಂದು, ದೋಣಿಗಳನ್ನು ನಾಶಪಡಿಸಿತು. ಸಂಘಟನೆಯ ಹಿಂದಿನ ಮುಖ್ಯ ಕೇಂದ್ರವಾಗಿದ್ದ ಕಿಲಿನೊಚ್ಚಿಯಲ್ಲಿ ಚಿಕ್ಕ ವಯಸ್ಸಿನ 58 ಬಂಡುಕೋರರು ಸೇನೆಗೆ ಶರಣಾದರು. 14ರಿಂದ 18 ವರ್ಷದೊಳಗಿನ ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಮೀಪದ ಅಂಬೆಪುಸ್ಸಾದಲ್ಲಿರುವ ಬಾಲಕರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಶ್ರೀಲಂಕಾ ಸೇನೆಯ ಅಧಿಕೃತ ಅಂತರ್ಜಾಲ ತಾಣವನ್ನು ಎಲ್‌ಟಿಟಿಇ ನಾಶ ಮಾಡಿತು. 'ಇದು ಎಲ್‌ಟಿಟಿಇಯ ಹತಾಶ ಕೃತ್ಯ. ಶೀಘ್ರವೇ ತಾಣವನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಸೇನಾಪಡೆಯ ಅಂತರ್ಜಾಲ ವಿಭಾಗದ ಮುಖ್ಯಸ್ಥರು ಹೇಳಿದರು.
2009: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಪ್ರಾಧ್ಯಾಪಕ ಅದಿತಿ ಲಹರಿ ಅವರಿಗೆ ಕೋಲ್ಕತ್ತದ ಏಷ್ಯಾಟಿಕ್ ಸೊಸೈಟಿಯ 'ಪ್ರೊಫೆಸರ್ ಸುಕುಮಾರ್ ಸೇನ್' ಸ್ಮಾರಕ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುವುದು ಎಂದು ವಿವಿ ಮೂಲಗಳು ತಿಳಿಸಿದವು. ಲಹರಿ ಆಕ್ಸ್‌ಫರ್ಡ್ ವಿವಿಯ ಭಾಷಾ ವಿಭಾಗದ ಪ್ರಥಮ ಅಧ್ಯಕ್ಷರಾಗಿದ್ದು, ಸಾಹಿತ್ಯ, ಭಾಷಾಶಾಸ್ತ್ರ ಹಾಗೂ ಧ್ವನಿಶಾಸ್ತ್ರಗಳಲ್ಲಿ ಪರಿಣತರು.
2009: ಬಾಂಗ್ಲಾದೇಶದ ಆಡಳಿತಾರೂಢ ಶೇಕ್ ಹಸೀನಾ ಸರ್ಕಾರವು ಭ್ರಷ್ಟಾಚಾರ ನಿಯಂತ್ರಣ ಆಯೋಗದ (ಎಸಿಸಿ) ಮುಖ್ಯಸ್ಥರಾಗಿ ಮಾಜಿ ಕಾರ್ಯದರ್ಶಿ ಗುಲಾಂ ರೆಹಮಾನ್ ಅವರನ್ನು ನೇಮಕ ಮಾಡಿತು. ಈ ಮೊದಲು ಎಸಿಸಿ ಮುಖ್ಯಸ್ಥರಾಗಿದ್ದ ಮಾಜಿ ಸೇನಾ ಮುಖ್ಯಸ್ಥ ಹಸನ್ ಮಸೂದ್ ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2009: ಅಮೆರಿಕವು ಕ್ಯೂಬಾವನ್ನು ಭಯೋತ್ಪಾದನೆ ಪೋಷಿಸುವ ರಾಷ್ಟ್ರಗಳ ಪಟ್ಟಿಗೆ ಸೇರಿಸಿತು. 'ಕ್ಯೂಬಾ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ' ಎಂದು ಸಚಿವಾಲಯ ಬಿಡುಗಡೆ ಮಾಡಿದ ವಾರ್ಷಿಕ ವರದಿ ತಿಳಿಸಿತು.
2009: ಭಾರತದ ಅರ್ಥ ವ್ಯವಸ್ಥೆಯನ್ನು ಹಾಳುಗೆಡಹುವ ಮತ್ತು ಪಾಕ್ ಜೊತೆಗಿನ ಸಂಬಂಧಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಭಯೋತ್ಪಾದಕರು ಮುಂಬೈ ದಾಳಿ (26/11) ನಡೆಸಿದ್ದರು ಎಂದು ಅಮೆರಿಕ ಸರ್ಕಾರದ ವರದಿಯೊಂದು ತಿಳಿಸಿತು. ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟು ಮಾಡುವುದು, ಕೋಮು ಗಲಭೆ ಸೃಷ್ಟಿ, ಪಾಕ್‌ನೊಂದಿಗಿನ ಸಂಬಂಧ ಕೆಡಿಸುವುದು ಇತ್ಯಾದಿ ಮುಸ್ಲಿಂ ಮೂಲಭೂತವಾದಿಗಳ ಉದ್ದೇಶವಾಗಿತ್ತು ಎಂದು ವರದಿ ಹೇಳಿತು.
2008: ಪ್ರಖ್ಯಾತ ಜಾದೂಗಾರ ಡೇವಿಡ್ ಬ್ಲೇನ್ ಅವರು 17 ನಿಮಿಷಗಳಿಗೂ ಹೆಚ್ಚುಕಾಲ ಉಸಿರಾಟ ಸ್ಥಗಿತಗೊಳಿಸಿ, ಬಳಿಕ ಆರಾಮ ಸ್ಥಿತಿಗೆ ಮರಳುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಡೇವಿಡ್ ಬ್ಲೇನ್ ಅವರ ಪ್ರಸ್ತುತ ದಾಖಲೆ ಕಾರ್ಯಕ್ರಮವನ್ನು ಟಿವಿಯಲ್ಲಿ `ದಿ ಒಪೇರಾ ವಿನ್ ಫ್ರೇ ಶೋ'ದಲ್ಲಿ ನೇರ ಪ್ರಸಾರ ಮಾಡಲಾಯಿತು. ನೀರು ತುಂಬಿದ ಜಾಡಿಯಲ್ಲಿ ಮುಳುಗಿ ಉಸಿರಾಡದೆ ಕುಳಿತಿದ್ದ ಡೇವಿಡ್ 17 ನಿಮಿಷ 4 ಸೆಕೆಂಡುಗಳ ಬಳಿಕ ಹೊರ ಬಂದಾಗ ಅಸ್ವಸ್ಥರಾಗಿರಲಿಲ್ಲ. ಗಿನ್ನೆಸ್ ದಾಖಲೆಯಂತೆ ಈ ಹಿಂದೆ ಸ್ವಿಜರ್ಲ್ಯಾಂಡಿನ ಪೀಟರ್ ಕಾಲ್ಟ್ ಅವರು 16.32 ನಿಮಿಷಗಳ ಕಾಲ ಉಸಿರು ಸ್ಥಗಿತ ಗೊಳಿಸಿ ಜಾಗತಿಕ ದಾಖಲೆ ನಿರ್ಮಿಸಿದ್ದರು. ಡೇವಿಡ್ ಅವರು ಈ ದಾಖಲೆಯನ್ನು ಮೀರಿಸಿ ಹೊಸ ದಾಖಲೆ ನಿರ್ಮಿಸಿದರು.
2008: ಪಶ್ಚಿಮ ಇರಾನಿನಲ್ಲಿ 4.7 ಪ್ರಮಾಣದ ಭೂಕಂಪ ಸಂಭವಿಸಿದ್ದರಿಂದ ನೂರಕ್ಕೂ ಹೆಚ್ಚು ಜನರು ಗಾಯಗೊಂಡರು ಎಂದು ಇರಾನ್ ಟಿವಿ ಹೇಳಿತು.
2008: ಪ್ರಸಿದ್ಧ ಭಾರತೀಯ ಮೂಲದ ನ್ಯಾಯವಾದಿ ಕೆ. ಷಣ್ಮುಗಂ ಅವರು ಸಿಂಗಪುರದ ಕಾನೂನು ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಈ ಹಿಂದೆ, ಭಾರತೀಯ ಮೂಲದ ಉಪಪ್ರಧಾನಿ ಪ್ರೊ. ಎಸ್. ಜಯಕುಮಾರ್ ಅವರು ಈ ಖಾತೆ ನೋಡಿಕೊಂಡಿದ್ದು ಅವರಿಂದ ಷಣ್ಮುಗಂ ಅಧಿಕಾರ ವಹಿಸಿಕೊಂಡರು. 49 ವಯಸ್ಸಿನ ಷಣ್ಮುಗಂ ವಕೀಲ ವೃತ್ತಿಯಲ್ಲಿ 23 ವರ್ಷಗಳ ಅನುಭವ ಹೊಂದಿದ್ದಾರೆ.
2008: ನ್ಯೂಯಾರ್ಕಿನ `ಟೈಮ್ಸ್' ಪತ್ರಿಕೆ ಪ್ರಕಟಿಸಿದ 2008ರ ವಿಶ್ವದ 100 ಅತ್ಯಂತ ಪ್ರಭಾವಿ ಗಣ್ಯರ ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉದ್ಯಮಿ ರತನ್ ಟಾಟಾ ಮತ್ತು ಪೆಪ್ಸಿ ಕಂಪೆನಿಯ ಸಿಇಓ ಇಂದ್ರಾ ನೂಯಿ, ಟಿಬೆಟಿಯನ್ನರ ಧರ್ಮ ಗುರು ದಲೈಲಾಮ, ಚೀನಾ ಅಧ್ಯಕ್ಷ ಹು ಜಿಂಟಾವೊ ಸೇರಿದರು. ರಾಜಕೀಯ ನಾಯಕರ ವಿಭಾಗದಲ್ಲಿ ಸೋನಿಯಾ ಗಾಂಧಿ, ಟಾಟಾ ಮತ್ತು ನೂಯಿ ಅವರನ್ನು ಉದ್ಯಮಿಗಳ ವಿಭಾಗದಲ್ಲಿ ಪಟ್ಟಿ ಮಾಡಲಾಯಿತು. ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳಾದ ಬರಾಕ್ ಒಬಾಮ, ಜಾನ್ ಮೆಕ್ಕೇನ್, ಹಿಲರಿ ಕ್ಲಿಂಟನ್, ಇರಾಕ್ ಶಿಯಾ ಧಾರ್ಮಿಕ ನಾಯಕ ಮುಕ್ತಾದ-ಅಲ್-ಸದ್ರಾ, ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಸೇರಿದಂತೆ ಜಗತ್ತಿನ ವಿವಿಧ ಕ್ಷೇತ್ರಗಳ ನೂರು ಗಣ್ಯರನ್ನು ಪಟ್ಟಿಯಲ್ಲಿ ಸೇರಿಸಲಾಯಿತು.
2008: ಲಂಡನ್ನಿನ `ದಿ ಡೈಲಿ ಟೆಲಿಗ್ರಾಫ್' ದೈನಿಕ ತಯಾರಿಸಿದ ಬ್ರಿಟನ್ನಿನ ಸಾರ್ವಜನಿಕ ವಲಯದ ಪ್ರಭಾವಿ 100 ಗಣ್ಯರ ಪಟ್ಟಿಯಲ್ಲಿ ಭಾರತೀಯ ಮೂಲದ ಶ್ರುತಿ ವಡೇರಾ 20ನೇ ಸ್ಥಾನ ಪಡೆದರು. ಶ್ರುತಿಯವರು ಚಾನ್ಸೆಲರ್ ಗೋರ್ಡಾನ್ ಬ್ರೌನ್ ಅವರ ವಿಶೇಷ ಸಲಹೆಗಾರರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಬ್ರಿಟನ್ ಪ್ರಧಾನಿಯವರ ವೈಟ್ ಹಾಲ್ನ ವಾಣಿಜ್ಯ ಮತ್ತು ಸ್ಪರ್ಧಾತ್ಮಕ ಉದ್ಯಮ ವಿಭಾಗದಲ್ಲಿ ಸಂಸದೀಯ ಅಧೀನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
2008: ಚೀನಾದ ಜಿಯಾಜಿಂಗ್ ಮತ್ತು ಶಾಂಘಾಯ್ ನಗರಗಳ ಸಂಪರ್ಕಕ್ಕಾಗಿ ಸಮುದ್ರದ ಮೇಲೆ ನಿರ್ಮಿಸಿದ ಸೇತುವೆಯು ಸಮುದ್ರದ ಮೇಲಣ ವಿಶ್ವದ ಅತಿ ಉದ್ದದ ಸೇತುವೆಯಾಗಿದ್ದು (36 ಕಿ.ಮೀ) ಈದಿನ ಇದನ್ನು ಉದ್ಘಾಟಿಸಲಾಯಿತು.
2008: `ದೀದಿ' ಎಂದೇ ಎಲ್ಲರ ಬಾಯಲ್ಲೂ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಖ್ಯಾತ ಗಾಂಧಿವಾದಿ ಹಾಗೂ ರಾಜ್ಯಸಭಾ ಸದಸ್ಯೆ ನಿರ್ಮಲಾ ದೇಶಪಾಂಡೆ (79) ಅವರು ಈದಿನ ಬೆಳಗಿನ ಜಾವ ನವದೆಹಲಿಯಲ್ಲಿ ನಿಧನರಾದರು. ಹಿಂದಿನ ದಿನ ಸಂಜೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮನೆಗೆ ಬಂದು ರಾತ್ರಿ ನಿದ್ರೆ ಹೋದ ಅವರು ಮತ್ತೆ ಕಣ್ತೆರೆಯದೆ `ಚಿರನಿದ್ರೆ'ಗೆ ಜಾರಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿದವು. ಅವಿವಾಹಿತರಾಗಿದ್ದ ಅವರು ತಮ್ಮ ಸಹೋದರಿಯನ್ನು ಅಗಲಿದರು. ಅಕ್ಟೋಬರ್ 17, 1929ರಂದು ನಾಗಪುರದಲ್ಲಿ ಜನಿಸಿದ್ದ ನಿರ್ಮಲಾ 1952ರಲ್ಲಿ ವಿನೋಬಾ ಭಾವೆ ಅವರು ಕೈಗೊಂಡ ಭೂದಾನ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿನೋಬಾರ ಜೊತೆ ದೇಶದ್ಯಾಂತ ಸಾವಿರಾರು ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದರು. ಕಟ್ಟಾ ಗಾಂಧಿವಾದಿಯಾಗಿದ್ದ ಅವರು 2006ರಲ್ಲಿ ಪದ್ಮವಿಭೂಷಣ ಪ್ರಶಸ್ತಿ, ರಷ್ಯಾದ `ಆರ್ಡರ್ ಆಫ್ ಫ್ರೆಂಡ್ ಶಿಪ್ ರಷ್ಯಾ' ಪ್ರಶಸ್ತಿ, ರಾಜೀವ್ ಗಾಂಧಿ ಸದ್ಭಾವನಾ ಪುರಸ್ಕಾರ ಹಾಗೂ ಪಾಟಿಯಾಲ, ಅಮರಾವತಿ ಮತ್ತು ಕಾಶಿ ವಿದ್ಯಾಪೀಠಗಳಿಂದ ಮೂರು ಗೌರವ ಡಾಕ್ಟರೇಟ್ ಗಳನ್ನೂ ಪಡೆದಿದ್ದರು ನಿರ್ಮಲಾ ಅವರ ತಂದೆ ಖ್ಯಾತ ಮರಾಠಿ ಲೇಖಕರೂ ಆಗಿದ್ದರು. ನಿರ್ಮಲಾ ಅವರೂ ಹಲವು ಪುಸ್ತಕಗಳನ್ನು ಬರೆದಿದ್ದು, ಅವುಗಳಲ್ಲಿ `ವಿನೋಬಾಕೆ ಸಾಥ್, ಕ್ರಾಂತಿ ಕಿ ರಾಹ್ ಪರ್, ಚಿಂಗ್ಲಿಂಗ್, ಸೀಮಂತ್ ಆಂಡ್ ವಿನೋಬಾ' ಪ್ರಮುಖ ಕೃತಿಗಳು. ಕಳೆದ ಶತಮಾನದ 60ರ ದಶಕದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಅವರು ಅವಿರತವಾಗಿ ಶ್ರಮಿಸಿದ್ದರು. ಪಂಜಾಬ್, ಜಮ್ಮು ಮತ್ತು ಕಾಶ್ಮೀರ, 2002ರಲ್ಲಿ ಗುಜರಾತ್ ಗಲಭೆ, 1999ರಲ್ಲಿ ಒರಿಸ್ಸಾದಲ್ಲಿ ನಡೆದ ಕ್ರೈಸ್ತ ಪಾದ್ರಿ ಗ್ರಹಾಂ ಸ್ಟೇನ್ಸ್ ಹತ್ಯೆ ಖಂಡಿಸಿ ದೇಶದ ವಿವಿಧೆಡೆ ಅವರು ಶಾಂತಿ ಸಂದೇಶ ಸಾರುವ ಮೂಲಕ ಸಾರ್ವಜನಿಕರಲ್ಲಿ ಅನುಕಂಪ ಮತ್ತು ಅಹಿಂಸೆಯ ಮಂತ್ರಗಳನ್ನು ಬೋಧಿಸಿದ್ದರು. ಭಾರತ ಮತ್ತು ಪಾಕ್ ನಡುವಿನ ಬಾಂಧವ್ಯ ವೃದ್ಧಿಗಾಗಿಯೂ ಅವರು ಸಾಕಷ್ಟು ಶ್ರಮಿಸಿದ್ದರು. 2000ದಲ್ಲಿ ನವದೆಹಲಿಯಿಂದ ಲಾಹೋರಿಗೆ ಹೊರಟ ಬಸ್ಸಿನಲ್ಲಿ ಮಹಿಳೆಯರ ತಂಡದ ಶಾಂತಿ ಯಾತ್ರೆಯ ನೇತೃತ್ವ ವಹಿಸಿದ್ದರು. ಭಾರತ ಹಾಗೂ ಪಾಕ್ ದೇಶಗಳ ನಿವೃತ್ತ ಸೇನಾ ಅಧಿಕಾರಿಗಳಿಗೆ ನೆರವು ನೀಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. 1997ರಲ್ಲಿ 2 ವರ್ಷದ ಅವಧಿಗೆ ಹಾಗೂ 2004ರಲ್ಲಿ ನಿರ್ಮಲಾ ರಾಜ್ಯಸಭೆಗೆ ನೇಮಕಗೊಂಡಿದ್ದರು.
2008: ಅಗರ್ತಲ ಜಿಲ್ಲೆಯ ಇಬ್ಬರು ರೈತರನ್ನು ಬಾಂಗ್ಲಾದೇಶ ರೈಫಲ್ಸ್ (ಬಿಡಿಆರ್) ಶಸ್ತ್ರಧಾರಿ ಅಧಿಕಾರಿಗಳು ಅಪಹರಿಸಿದರು. ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಬಾದ್ ವಿಪ್ ದಾಸ್ ಹಾಗೂ ಅವರ ಮಗ ರಂಜಿತ್ ಅವರು ಅಪಹರಣಕ್ಕೆ ಒಳಗಾದವರು. ಭಾರತದ ವ್ಯಾಪ್ತಿಯೊಳಗೆ ಬರುವ ಖೆಡಬರಿ ಪ್ರದೇಶದಲ್ಲಿನ ರಬ್ಬರ್ ಮರಗಳನ್ನು ಕತ್ತರಿಸಿ ತಮ್ಮ ದೇಶಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಬಾಂಗ್ಲಾದೇಶದ ಕೆಲವರು ಬಂಧಿತರಾಗಿದ್ದರು. ಇವರನ್ನು ಬಿಡಿಸಿಕೊಳ್ಳುವ ಉದ್ದೇಶದಿಂದ ಈ ರೈತರನ್ನು ಅಪಹರಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದರು.
2008: ಮುಂಬೈಯಲ್ಲಿ ಹಿಂದಿನ ದಿನ ನಡೆದ ಸಮಾರಂಭದಲ್ಲಿ ಕನ್ನಡದ ಹಿರಿಯ ಚಿತ್ರ ನಿರ್ಮಾಪಕ ಸಿ.ವಿ.ಎಲ್.ಶಾಸ್ತ್ರಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪುರಸ್ಕಾರವನ್ನು ಬಾಲಿವುಡ್ ಮಾಜಿ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಸಾದ್ ಗುಂಪಿನ ಎಂ.ಡಿ. ರಮೇಶ್ ಪ್ರಸಾದ್, ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಅಧ್ಯಕ್ಷ ಸಂತೋಷ್ ಸಿಂಗ್ ಜೈನ್ ಉಪಸ್ಥಿತರ್ದಿದರು.
2008: ಪ್ರಸಾರ ಭಾರತಿಯ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಭಟ್ನಾಗರ್ ಅವರನ್ನು ನೇಮಕ ಮಾಡಲಾಯಿತು. ಮಧ್ಯಪ್ರದೇಶ ಕೇಡರಿನ 1966ರ ತಂಡದ ಐಎಎಸ್ ಅಧಿಕಾರಿಯಾದ ಭಟ್ನಾಗರ್ ಅವರು ಈ ಮೊದಲು ರಾಷ್ಟ್ರೀಯ ಸಲಹಾ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಈವರೆಗೂ ಪ್ರಸಾರ ಭಾರತಿ ಅಧ್ಯಕ್ಷರಾಗಿ ಎಂ.ವಿ.ಕಾಮತ್ ಅಧಿಕಾರದಲ್ಲಿದ್ದರು. ಇವರನ್ನು ಎನ್ ಡಿ ಎ ಸರ್ಕಾರ ನೇಮಕ ಮಾಡಿತ್ತು. ಪ್ರಸಾರ ಭಾರತಿ ಮಸೂದೆಗೆ ತಿದ್ದುಪಡಿ ತಂದ ನಂತರ ಇವರು ಮಾರ್ಚ್ 17ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2008: ಚಲಿಸುವ ರೈಲನ್ನು ಹತ್ತುವ ಸಂದರ್ಭದಲ್ಲಿ ಮೃತರಾದ/ ಗಾಯಗೊಂಡ ವ್ಯಕ್ತಿಯ ಕುಟುಂಬವೂ ಪರಿಹಾರ ಪಡೆಯಲು ಅರ್ಹ ಎಂದು ಸುಪ್ರೀಂಕೋರ್ಟ್ ಹೇಳಿತು. ಚಲಿಸುವ ರೈಲನ್ನು ಹತ್ತುವ ಯತ್ನದಲ್ಲಿ ವ್ಯಕ್ತಿಯು ತನ್ನದೇ ತಪ್ಪಿನಿಂದ ರೈಲಿಗೆ ಸಿಲುಕಿದ್ದರೂ ಆತನ/ ಆಕೆಯ ಕುಟುಂಬ ಪರಿಹಾರ ಪಡೆಯಲು ಅರ್ಹ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಒಂದೇ ವಿಷಯಕ್ಕೆ ಸಂಬಂಧಪಟ್ಟ ಕಾನೂನುಗಳಲ್ಲಿ ವ್ಯತ್ಯಾಸವಿದ್ದರೆ, ಅಂತಹ ಸಂದರ್ಭದಲ್ಲಿ ನ್ಯಾಯಾಲಯಗಳು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾನೂನಿಗೇ ಮಾನ್ಯತೆ ಕೊಡಬೇಕು ಎಂದೂ ನ್ಯಾಯಮೂರ್ತಿಗಳಾದ ಎಚ್.ಕೆ.ಸೇಮ ಮತ್ತು ಮಾರ್ಕಂಡೇಯ ಕಟ್ಜು ಅಭಿಪ್ರಾಯಪಟ್ಟರು. ಚಲಿಸುವ ರೈಲು, ಕಾರು ಮತ್ತಿತರ ಕೆಲವು ಚಾಲನೆಯಲ್ಲಿರುವ ವಸ್ತುಗಳು `ಮೂಲಭೂತ ಅಪಾಯಕಾರಿ ಚಟುವಟಿಕೆಗಳು ವ್ಯಾಪ್ತಿ'ಯಲ್ಲಿ ಬರುವುದರಿಂದ ಸಂತ್ರಸ್ತರಿಗೆ ಪರಿಹಾರ ಸಿಗಬೇಕು ಎಂದು ಪೀಠ ವಿವರಿಸಿತು. ಕೇರಳದಲ್ಲಿ ಚಲಿಸುವ ರೈಲು ಹತ್ತುವ ಯತ್ನದಲ್ಲಿ ಮೃತರಾದ ಮಹಿಳೆಯ ಕುಟುಂಬಕ್ಕೆ ಅಲ್ಲಿನ ಹೈಕೋರ್ಟ್ 2 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ತೀರ್ಪು ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠ ಹೀಗೆ ಹೇಳಿ, ತೀರ್ಪನ್ನು ಕಾದಿರಿಸಿತು.
2008: ಭೂಕುಸಿತದಿಂದ ಸಂಭವಿಸಿದ ಅಪಘಾತದಲ್ಲಿ 12 ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾಗಿ 18 ಕಾರ್ಮಿಕರು ಗಾಯಗೊಂಡ ದುರ್ಘಟನೆ ಜಮ್ಮುವಿನಲ್ಲಿ ಸಂಭವಿಸಿತು.
2008: ಬೆಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ಅ.ನಾ. ಪ್ರಹ್ಲಾದರಾವ್ ಅವರ 'ಬಂಗಾರದ ಮನುಷ್ಯ' ಕೃತಿಯ ಆಂಗ್ಲ ಅನುವಾದ 'ಡಾ. ರಾಜಕುಮಾರ್: ದಿ ಇನ್ ಇಮಿಟೆಬಲ್ ಆಕ್ಟರ್ ವಿತ್ ಎ ಗೋಲ್ಡನ್ ವಾಯ್ಸ್' ಪುಸ್ತಕ ಬಿಡುಗಡೆ ಮಾಡಿದರು. ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಮುಖ್ಯ ಅತಿಥಿಯಾಗಿದ್ದರು. ಅಲ್ಲಾಡಿ ಜಯಶ್ರೀ ಅವರು ಪುಸ್ತಕವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದರು.
2007: ಕರ್ನಾಟಕದಾದ್ಯಂತ ಒಟ್ಟು 1400ಕ್ಕೂ ಹೆಚ್ಚು ಆನ್ ಲೈನ್ ಲಾಟರಿ ಅಂಗಡಿಗಳು ತಮ್ಮ ಆನ್ ಲೈನ್ ಲಾಟರಿ ವಹಿವಾಟು ಪುನರಾರಂಭಿಸಿದವು. ಏಪ್ರಿಲ್ 30ರಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಕೇವಲ 750 ಮಾರಾಟಗಾರರು ತಮ್ಮ ಚಟುವಟಿಕೆ ಪುನರಾರಂಭಿಸಿದ್ದರು. ಈದಿನ ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಆನ್ ಲೈನ್ ಲಾಟರಿ ವಹಿವಾಟು ಪುನರಾರಂಭಗೊಂಡಿತು.
2007: ಐಟಿ, ಬಿಟಿ ಕಂಪೆನಿಗಳನ್ನು ಹೊರತುಪಡಿಸಿ ಉಳಿದ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಜುಲೈ ತಿಂಗಳಿನಿಂದ `ರಾತ್ರಿ ಪಾಳಿ' ನಿರ್ವಹಿಸುವಂತಿಲ್ಲ, ಈ ಸಂಬಂಧ ಜುಲೈ ತಿಂಗಳಿನಲ್ಲಿ ರಾಜ್ಯ ಸರ್ಕಾರವು ಕಾನೂನು ಜಾರಿಗೊಳಿಸುವುದು ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಪ್ರಕಟಿಸಿದರು.
2006: ಪಾಕಿಸ್ಥಾನ ಮೂಲದ ಲಷ್ಕರ್ -ಎ- ತೊಯಿಬಾ ಉಗ್ರಗಾಮಿ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಕಡೆ ನಡೆಸಿದ ಪ್ರತ್ಯೇಕ ಹತ್ಯಾಕಾಂಡಗಳಲ್ಲಿ ಒಟ್ಟು 35 ಜನ ಹಿಂದೂಗಳನ್ನು ಕೊಂದು ಹಾಕಿತು. ದೋಡಾ ಜಿಲ್ಲೆಯ ಕುಲ್ಹುಂಡ್ ಗ್ರಾಮದ ಪಚೋಲಿ ಮತ್ತು ಥಾವಾ ಎಂಬ 2 ಕಾಲೋನಿಗಳಲ್ಲಿ ಬೆಳಗಿನ ಜಾವ 10 ಜನ ಉಗ್ರಗಾಮಿಗಳ ತಂಡವು ವಿಚಾರಣೆಯ ನೆಪದಲ್ಲಿ ಗ್ರಾಮಸ್ಥರನ್ನು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಕೊಂದು ಹಾಕಿತು.
2006: ಖ್ಯಾತ ರಾಸಾಯನಿಕ ವಿಜ್ಞಾನಿ ಸಿ.ಎನ್.ಆರ್. ರಾವ್, ಜೈವಿಕ ವಿಜ್ಞಾನಿ ಒಬೈದ್ ಸಿದ್ದಿಖಿ ಮತ್ತು ಗಣಿತ ತಜ್ಞ ಸಿ.ಎಸ್. ಶೇಷಾದ್ರಿ ಅವರನ್ನು ತಮ್ಮ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ `ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಗಳು' ಎಂಬುದಾಗಿ ಹೆಸರಿಸಿ ಗೌರವಿಸಲಾಯಿತು. ಸಿ.ವಿ. ರಾಮನ್, ಎಸ್.ಎನ್. ಬೋಸ್, ಸತ್ಯಜಿತ್ ರೇ, ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಪಂಡಿತ್ ರವಿಶಂಕರ್, ತೀರಾ ಇತ್ತೀಚೆಗೆ ಮಹಾಶ್ವೇತಾದೇವಿ ಹಾಗೂ ಹಬೀಬ್ ತನ್ವರ್ ಈ ರಾಷ್ಟ್ರೀಯ ಗೌರವಕ್ಕೆ ಪಾತ್ರರಾದ ಪ್ರಮುಖರಲ್ಲಿ ಸೇರಿದ್ದಾರೆ.
1998: ಸುಮಾರು 760 ಕಿ.ಮೀ. ಉದ್ದದ ಕೊಂಕಣ ರೈಲ್ವೇಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದಿನ ಹಸಿರು ನಿಶಾನೆ ತೋರಿಸಿದರು. ಈ ಮಾರ್ಗವು ರತ್ನಗಿರಿಯಿಂದ ಮುಂದಕ್ಕೆ ವಿಸ್ತರಣೆಯಾಗಿದ್ದು, ನಿತ್ಯ ಹರಿದ್ವರ್ಣದ ಕಾಡುಗಳ ಮಧ್ಯೆ ಸಾಗುವುದು.
1960: ಮುಂಬೈ ಪ್ರಾಂತವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಾಗಿ ವಿಂಗಡನೆಗೊಂಡಿತು.
1948: ಕವಯಿತ್ರಿ ಶಶಿಕಲಾ ವೀರಯ್ಯ ಸ್ವಾಮಿ ಹುಟ್ಟಿದ ದಿನ. ವಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಸಿದ್ದಲಿಂಗಯ್ಯ - ಅನ್ನಪೂರ್ಣಾ ದೇವಿ ದಂಪತಿಯ ಪುತ್ರಿಯಾಗಿ ಜನಿಸಿದ ಶಶಿಕಲಾ ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿದವರು.
1933: ಇಂಗ್ಲೆಂಡ್ - ಭಾರತ ದೂರವಾಣಿ ಸೇವೆ ಆರಂಭವಾಯಿತು. ಭಾರತದ ರಾಜ್ಯ ಕಾರ್ಯದರ್ಶಿ ಸರ್ ಸ್ಯಾಮ್ಯುಯೆಲ್ ಹೋರ್ ಮತ್ತು ಮುಂಬೈಯ ಗವರ್ನರ್ ಸರ್ ಫ್ರೆಡರಿಕ್ ಸೈಕ್ಸ್ ಅವರ ಮಧ್ಯೆ ಮೊತ್ತ ಮೊದಲ ದೂರವಾಣಿ ಸಂಭಾಷಣೆ ನಡೆಯಿತು.
1897: ಸ್ವಾಮಿ ವಿವೇಕಾನಂದರು ಕೊಲ್ಕತದಲ್ಲಿ (ಅಂದಿನ ಕಲಕತ್ತ) ರಾಮಕೃಷ್ಣ ಮಿಷನ್ ಸ್ಥಾಪಿಸಿದರು.
1851: ಲಂಡನ್ನಿನ ಹೈಡ್ ಪಾರ್ಕಿನ ಕ್ರಿಸ್ಟಲ್ ಪ್ಯಾಲೇಸಿನಲ್ಲಿ ಎಲ್ಲ ರಾಷ್ಟ್ರಗಳ ಕೈಗಾರಿಕಾ ವಸ್ತುಗಳ ಬೃಹತ್ ಪ್ರದರ್ಶನ ಉದ್ಘಾಟನೆಗೊಂಡಿತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮೊತ್ತ ಮೊದಲ ಪ್ರದರ್ಶನ. ಸಹಸ್ರಾರು ಸಂಶೋಧನೆಗಳಿಗೆ ಪ್ರದರ್ಶನಾವಕಾಶವನ್ನು ಇದು ಕಲ್ಪಿಸಿಕೊಟ್ಟಿತು.
1700: ಇಂಗ್ಲಿಷ್ ಕವಿ, ನಾಟಕಕಾರ ಮತ್ತು ವಿಮರ್ಶಕ ಜಾನ್ ಡ್ರೈಡೆನ್ ಮೃತನಾದ. ಲಾರೇಟ್ ಹುದ್ದೆಗೆ ಅಧಿಕೃತವಾಗಿ ನೇಮಕಗೊಂಡ ಮೊದಲ ಇಂಗ್ಲಿಷ್ ಕವಿ ಈತ. ಆದರೆ ನೂತನ ದೊರೆ ಮೂರನೇ ವಿಲಿಯಂಗೆ ಪ್ರಮಾಣವಚನ ಬೋಧಿಸಲು ನಿರಾಕರಿಸಿದ್ದಕ್ಕಾಗಿ ಈ ಹುದ್ದೆಯಿಂದ ಈತ ವಜಾಗೊಂಡ.
No comments:
Post a Comment