Friday, May 4, 2018

ಇಂದಿನ ಇತಿಹಾಸ History Today ಮೇ 03

ಇಂದಿನ ಇತಿಹಾಸ History Today ಮೇ 03
 2018: ನವದೆಹಲಿ: ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮೇ 2ರ ಬುಧವಾರ ಸಂಜೆಯಿಂದೀಚೆಗೆ ಬೀಸಿದ ದೂಳಿನ ಭಾರಿ ಚಂಡಮಾರುತ ಮತ್ತು ಬಿರುಮಳೆಗೆ ೧೦೭ಕ್ಕೂ ಹೆಚ್ಚು ಮಂದಿ ಬಲಿಯಾಗಿ, ಹಲವಾರು ಕಟ್ಟಡಗಳು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದವು. ಮುಂದಿನ ೪೮ ಗಂಟೆಯಲ್ಲಿ ಮತ್ತೊಮ್ಮೆ ಇಂತಹುದೇ ದೂಳಿನ ಚಂಡ ಮಾರುತ ಮಳೆ ಉತ್ತರ ಪ್ರದೇಶ ಮತ್ತು ರಾಜಸ್ಥಾನಕ್ಕೆ ಅಪ್ಪಳಿಸಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಗುರುವಾರ ಎಚ್ಚರಿಕೆ ನೀಡಿದರು. ಬುಧವಾರ ಸಂಜೆ ಭಾರಿ ಮಳೆ ಮತ್ತು ದೂಳಿನ ಚಂಡಮಾರುತ್ಕ ಎರಡೂ ರಾಜ್ಯಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಉತ್ತರ ಪ್ರದೇಶದಲ್ಲಿ ಅತಿ ತೀವ್ರತೆಯ ದೂಳಿನ ಚಂಡಮಾರುತಕ್ಕೆ ೭೩ ಮಂದಿ ಬಲಿಯಾಗಿದ್ದು, ಸುಮಾರು ೧೬೦ ಮಂದಿ ಗಾಯಗೊಂಡರು. ಆಗ್ರಾದಲ್ಲಿ ಅತಿ ಹೆಚ್ಚು ಅಂದರೆ ಹಲವು ಮಕ್ಕಳು ಸೇರಿ ೩೬ ಮಂದಿ ಮೃvರಾಗಿದ್ದಾರೆ. ಬಿಜ್ನೋರ್, ಸಹರಾನ್ಪುರ ಹಾಗೂ ಬರೇಲಿಯಲ್ಲಿ ೯ ಮಂದಿ ಸಾವಿಗೀಡಾದರು. ರಾಜಸ್ಥಾನದ ಬಿಕನೇರ್ನಲ್ಲಿ ದೂಳಿನ ಚಂಡಮಾರುತಕ್ಕೆ ೩೩ ಮಂದಿ ಅಸು ನೀಗಿದ್ದು, ೧೦೦ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡರು. ಆಗ್ರಾ ಜಿಲ್ಲೆಯಲ್ಲಿ  ಹಿಂದಿನ ರಾತ್ರಿ ೮.೪೫ರಿಂದ ರಾತ್ರಿ ೧೧.೩೦ರವರೆಗೆ ಭಾರಿ ಮಳೆ ಸುರಿಯಿತು. ಕೇವಲ ಮೂರು ಗಂಟೆ ಅವಧಿಯಲ್ಲಿ ೪೮.೨ ಮಿಲಿಮೀಟರಿನಷ್ಟು ಮಳೆಯಾಗಿದೆ. ಈ ವೇಳೆಯಲ್ಲಿ ಗಂಟೆಗೆ ೧೨೬ ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತು. ಆಗ್ರಾ ಜಿಲ್ಲೆಯಲ್ಲಿ ಮೃತರಾದವರ ಕುಟುಂಬಕ್ಕೆ ಜಿಲ್ಲಾಡಳಿತ ತಲಾ ೪ ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯಲ್ಲಿ ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  ರಾಜಸ್ಥಾನದಲ್ಲೂ ಭಾರಿ ಬಿರುಗಾಳಿ, ದೂಳಿನ ಚಂಡಮಾರುತಕ್ಕೆ ಕನಿಷ್ಠ ೨೭ ಮಂದಿ ಬಲಿಯಾದರು. ಆಳ್ವಾರ್, ಭರತಪುರ ಹಾಗೂ ಧೋಲ್ಪುರ ಜಿಲ್ಲೆಗಳಲ್ಲಿ ಭಾರಿ ಚಂಡಮಾರುತ ಬೀಸಿದ್ದು, ಹಲವು ಮನೆಗಳು ಕುಸಿದರೆ, ನೂರಕ್ಕೂ ಅಧಿಕ ಮರಗಳು ಧರೆಗುರುಳಿದವು. ಆಳ್ವಾರ್ ಜಿಲ್ಲೆಯಲ್ಲಿ ಅತಿಹೆಚ್ಚು ಬಿರುಗಾಳಿ ಬೀಸಿದ್ದು, ಜಿಲ್ಲೆಯ ಬಹುತೇಕ ಕಡೆ ಸಂಪೂರ್ಣ ಕತ್ತಲಲ್ಲಿ ಮುಳುಗಿತು. ಕಾರಿನ ಮೇಲೆ ಮರ ಬಿದ್ದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದರು, ಕಾರಿನಲ್ಲಿದ್ದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದವು.  ಘಟನೆಯಲ್ಲಿ ಮೃತರಾದವರ ಕುಟುಂಬಗಳಿಗೆ ೪ ಲಕ್ಷ ರೂಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ೨ ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸೂಚಿಸಿದರು.  ಮುಂದಿನ ೪೮ ಗಂಟೆಗಳ ಕಾಲ ಕಟ್ಟೆಚ್ಚರದಿಂದ ಇರುವಂತೆ ಉತ್ತರ ಪ್ರದೇಶ ಸರ್ಕಾರ ಎಚ್ಚರಿಕೆ ನೀಡಿತು. ಬಿಜ್ನೋರ್, ಬರೇಲಿ, ಸಹರಾನ್ಪುರವಲ್ಲದೆ ಪಿಲಿಭಿಟ್, ಫಿರೋಜಾಬಾದ್, ಚಿತ್ರಕೂಟ, ಮುಜಾಫ್ಫರನಗರ, ರಾಯ್ ಬರೇಲಿ ಮತ್ತು ಉನ್ನಾವ್ ಜಿಲ್ಲೆಗಳು ಕೂಡಾ ದೂಳಿನ ಚಂಡಮಾರುತ, ಬಿರುಮಳೆಗೆ ತತ್ತರಗೊಂಡವು. ಸಂತ್ರಸ್ತರಿಗೆ ಸಂಜೆಯ ಒಳಗಾಗಿ ಘೋಷಿತ ಪರಿಹಾರ ತಲುಪಿಸುವಂತೆ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ಆಗ್ರಾ ವಿಭಾಗದ ಕಮೀಷನರ್ ಅವರಿಗೆ ನಿರ್ದೇಶಿಸಿದರು. ಆಸ್ಪತ್ರೆಗಳಿಗೆ ಭೇಟಿ ನೀಡಿ ಸಂತ್ರಸ್ಥರ ಯೋಗಕ್ಷೇಮ ವಿಚಾರಿಸುವಂತೆಯೂ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಿನ್ಸಿಪಲ್ ಸೆಕ್ರೆಟರಿ (ಮಾಹಿತಿ) ಅವನೀಶ್ ಅವಸ್ಥಿ ಹೇಳಿದರು.  ಆಗ್ರಾದಲ್ಲಿ ಬಿರುಗಾಳಿ ಮಳೆಗೆ ಹಲವಾರು ಮನೆಗಳು ಕುಸಿದಿದ್ದು, ವಿದ್ಯುತ್ ಕಂಬಗಳು ಮತ್ತು ಮರಗಳು ಉರುಳಿದವು.

ತೊಂದರೆಗೆ ಈಡಾಗಿರುವ ಜಿಲ್ಲೆಗಳಿಂದ ವಿಸ್ತೃತ ವರದಿ ಸಲ್ಲಿಸುವಂತೆ ನಾವು ಸೂಚಿಸಿದ್ದೇವೆ ಎಂದು ಹೇಳಿದ ಪರಿಹಾರ ಕಮೀಷನರ್ ದುರಂತದಲ್ಲಿ ೧೫೬ಕ್ಕೂ ಹೆಚ್ಚು ಜಾನುವಾರುಗಳೂ ಅಸು ನೀಗಿವೆ ಎಂದು ಹೇಳಿದರು.  ದುರಂತಕ್ಕೆ ಸಂತಾಪ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಕಾರ್ಯದಲ್ಲಿ ಆಯಾ ರಾಜ್ಯ ಸರ್ಕಾರಗಳ ಜೊತೆ ಸಮನ್ವಯ ಸಾಧಿಸುವಂತೆ ಕೇಂದ್ರೀಯ ಅಧಿಕಾರಿಗಳಿಗೆ ಸೂಚಿಸಿದರು.  ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆ ಹೊರಟಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರದ ಮೇಲೆ ವೈಯಕ್ತಿಕ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು. ತೊಂದರೆಗೆ ಒಳಗಾಗಿರುವ ಮೂರು ಜಿಲ್ಲೆಗಳಲ್ಲಿ ಪರಿಸ್ಥಿತಿಯ ಮೇಲೆ ನಿಗಾ ಇಡುವಂತೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮೂವರು ಸಚಿವರಿಗೆ ನಿರ್ದೇಶನ ನೀಡಿದರು.

2018: ನವದೆಹಲಿ: ’ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಸಚಿವರು ಪ್ರವಾಸದಲ್ಲಿ ಇರುವ ಕಾರಣ ಮೇ ೩ರ ಗಡುವಿನ ಒಳಗಾಗಿ ಕಾವೇರಿ ನೀರು ಹಂಚಿಕೆಯ ಕರಡು ರೂಪುರೇಷೆ (ಸ್ಕೀಮ್) ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಸಮಜಾಯಿಷಿ ನೀಡಿತು. ‘ಕರ್ನಾಟಕದ ಚುನಾವಣೆ ಕಾರಣ, ಪ್ರಧಾನಿ ಮತ್ತು ಸಚಿವರೆಲ್ಲರೂ ಕರ್ನಾಟಕ ಪ್ರವಾಸದಲ್ಲಿ ಇದ್ದಾರೆ. ಆದ್ದರಿಂದ ಚುನಾವಣೆ ಬಳಿಕದ ಯಾವುದಾದರೂ ದಿನಕ್ಕೆ ಪ್ರಕರಣವನ್ನು ಮುಂದೂಡಿ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠಕ್ಕೆ ಮನವಿ ಮಾಡಿದರು.
ಮೇ ೩ರ ಒಳಗಾಗಿ ಕಾವೇರಿ ನೀರು ಹಂಚಿಕೆ ಸಂಬಂಧ ಕರಡು ರೂಪುರೇಷೆ ರಚಿಸುವ ಮೂಲಕ ಚುನಾವಣೆ ನಡೆಯಲಿರುವ ಕರ್ನಾಟಕ ಮತ್ತು ತಮಿಳುನಾಡು ನಡುವಣ ೨೦೦ ವರ್ಷಗಳಷ್ಟು ಹಳೆಯದಾದ ಜಲ ವಿವಾದ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿನ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಏಪ್ರಿಲ್ ೯ರಂದು ಖಂಡತುಂಡ ನಿರ್ದೇಶನ ನೀಡಿತ್ತು.  ‘ಅಂದರೆ, ನೀವು ಕರಡು ರೂಪುರೇಷೆ ರಚಿಸುವಂತಿಲ್ಲವೇ?’ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಕೇಳಿದರು. ‘ನಾವು ಕಷ್ಟದ ಸ್ಥಿತಿಯಲ್ಲಿದ್ದೇವೆ. ನಾವು ಕೇವಲ ೧೦ ದಿನಗಳ ಕಾಲಾವಕಾಶ ಕೋರುತ್ತಿದ್ದೇವೆ ಎಂದು ವೇಣುಗೋಪಾಲ್ ಮತ್ತು ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಹೇಳಿದರು.  ತಮಿಳುನಾಡು ಪರ ಹಾಜರಾಗಿದ್ದ ಹಿರಿಯ ವಕೀಲ ಶೇಖರ್ ನಫಡೆ ಅವರು ಕೇಂದ್ರ ಸರ್ಕಾರವು ಆಡಳಿತಕ್ಕೆ ಬದಲಾಗಿ ರಾಜ್ಯದಲ್ಲಿ ಬಿಜೆಪಿ ಅದೃಷ್ಟ ಖುಲಾಯಿಸಲು ರಾಜಕೀಯ ನಡೆಸುತ್ತಿದೆ ಮತ್ತು ಲಜ್ಜೆಗೇಡಿ ವರ್ತನೆಯನ್ನು ತೋರುತ್ತಿದೆ ಎಂದು ವಾಕ್ ಪ್ರಹಾರ ಮಾಡಿದರು. ‘ಕೇಂದ್ರಕ್ಕೆ ರೂಪುರೇಷೆ ರಚಿಸುವ ಹೊಣೆಗಾರಿಕೆ ಇದೆ ಎಂದು ಪದೇ ಪದೇ ಹೇಳಿದ ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ಒಂದು ಹಂತದಲ್ಲಿ  ಕೇಂದ್ರದ ನಿಲುವು ವಾಸ್ತವವೇ ಎಂದೂ ಪ್ರಶ್ನಿಸಿದರು. ಆದರೆ ’ಅವರು (ಕೇಂದ್ರ) ಕರ್ನಾಟಕದಲ್ಲಿನ ತಮ್ಮ ರಾಜಕೀಯ ಹಣೆಬರಹ ಬಗ್ಗೆ ಚಿಂತಿತರಾಗಿದ್ದಾರೆ. ಮೇ ೧೨ರಂದು ನಡೆಯಲಿರುವ ಚುನಾವಣೆಗಳಿಗಿಂತ ಮೊದಲು ಕಾವೇರಿ ನೀರು ಹಂಚಿಕೆ ಕರಡು ರೂಪುರೇಷೆ ತಯಾರಿಸಲು ಕೇಂದ್ರವು ಬಯಸುತ್ತಿಲ್ಲ. ನೀವು (ಸುಪ್ರೀಂಕೋರ್ಟ್) ಹೀಗಾಗಲು ಅವಕಾಶ ನೀಡಿದರೆ, ಕಾನೂನಿನ ಆಳ್ವಿಕೆ ಮತ್ತು ಸಹಕಾರಿ ಒಕ್ಕೂಟ ತತ್ವ ಉಳಿಯುವುದಿಲ್ಲ ಎಂದು ನಫಡೆ ಪ್ರತಿಪಾದಿಸಿದರು. ‘ನಾವು ತಮಿಳುನಾಡಿನ ಜನರಿಗೆ ಏನು ಹೇಳಲಿ? ಸುಪ್ರೀಂಕೋರ್ಟ್ ಫೆಬ್ರುವರಿಯಲ್ಲೇ ತನ್ನ ತೀರ್ಪು ನೀಡಿದೆ ಮತ್ತು ನಾವು ಇನ್ನೂ ನೀರು ಪಡೆಯಲು ಸಫಲರಾಗಿಲ್ಲ ಎನ್ನಬೇಕೆ? ಬಿಸಿಲ ಧಗೆ ಹೆಚ್ಚುತ್ತಿದೆ. ಕುಡಿಯಲು ನೀರಿಲ್ಲ. ಇದೀಗ ನಿಮಗೆ (ಸುಪ್ರೀಂಕೋರ್ಟ್) ಕಟುಭಾಷೆಯಲ್ಲಿ ಹೇಳುವ ಸಮಯ ಎಂದು ನಫಡೆ ಪೀಠವನ್ನು ಒತ್ತಾಯಿಸಿದರು.  ಸುಪ್ರೀಂಕೋರ್ಟಿನ ಫೆಬ್ರುವರಿ ೧೬ರ ತೀರ್ಪಿನ ಪ್ರಕಾರ ರೂಪುರೇಷೆ ರಚಿಸುವಲ್ಲಿ ಕೇಂದ್ರ ವಿಳಂಬ ಮಾಡುತ್ತಿರುವುದರ ವಿರುದ್ಧ ತಮಿಳುನಾಡು ಸುಪ್ರೀಂಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ‘ರೂಪುರೇಷೆಗೆ ಸಂಬಂಧಿಸಿದಂತೆ ಎಲ್ಲವೂ ಸಿದ್ಧವಾಗಿದೆ ಎಂದು ಈ ಹಿಂದೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದನ್ನು  ನಫಡೆ ಅವರು ವೇಣುಗೋಪಾಲ್ ಅವರಿಗೆ ನೆನಪಿಸಿದರು. ‘ಎಜಿ ಅವರು ಹೇಳಿಕೆ ನೀಡಿದ್ದರು. ನಾವು ಈಗ ಅವರನ್ನು ಹೇಗೆ ನಂಬುವುದು? ನಮಗೆ ನೀರು ಸಿಗುವುದಿಲ್ಲವೇ? ನಮ್ಮ ಬಗ್ಗೆ ಈಗ ಇಂತಹ ಮಲತಾಯಿ  ದೋರಣೆ ಏಕೆ? ನಾವು ಕೇಂದ್ರ ಸರ್ಕಾರದ ಕೃಪಾಶ್ರಯದಲ್ಲಿ ಇರಬೇಕಾಗಿಲ್ಲ ಎಂದು ನಫಡೆ ವಾದಿಸಿದರು.  ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ’ತಮಿಳುನಾಡು ನಿಶ್ಚಿತವಾಗಿ ನೀರು ಪಡೆಯುತ್ತದೆ ಎಂದು ಭರವಸೆ ನೀಡಿದರು. ದೃಢ ಸ್ವರದಿಂದ ಕರ್ನಾಟಕ ವಕೀಲರನ್ನು ಉದ್ದೇಶಿಸಿದ ಅವರು ’ರಾಜ್ಯವು ನೀರು ಬಿಡುಗಡೆ ಮಾಡಲೇಬೇಕು ಎಂದು ಹೇಳಿದರು.  ಆದರೆ ಕರ್ನಾಟಕದ ಪರ ವಾದಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಕರ್ನಾಟಕವೂ ಈಗಾಗಲೇ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದೆ ಎಂದು ಪ್ರತಿಪಾದಿಸಿದರು. ಕರ್ನಾಟಕವು ಸೂಚನೆಗಳನ್ನು ಪಡೆದುಕೊಂಡು ತಮಿಳುನಾಡಿಗೆ ಎಷ್ಟು ನೀರನ್ನು ಬಿಡಲು ಸಾಧ್ಯ ಎಂಬುದಾಗಿ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಸಿಜೆಐ ಮಿಶ್ರ ಅವರು ಕರ್ನಾಟಕಕ್ಕೆ ಸೂಚಿಸಿದರು.  ಕಾವೇರಿ ನ್ಯಾಯಾಧಿಕರಣವು ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣವನ್ನು ನಿಗದಿಗೊಳಿಸಿದೆ. ಮಳೆ ಮತ್ತು ನೀರಾವರಿ ಅಗತ್ಯಗಳನ್ನು ಅನುಸರಿಸಿ ೨ ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು. ಆದರೆ ಏಪ್ರಿಲ್ ತಿಂಗಳಲ್ಲಿ ತನಗೆ ಲಭಿಸಿರುವ ನೀರು ೧.೧ ಟಿಎಂಸಿ ಮಾತ್ರ ಎಂದು ತಮಿಳುನಾಡು ಹೇಳಿತು.  ಕಾವೇರಿ ನೀರು ಹಂಚಿಕೆ ರೂಪುರೇಷೆ ರಚಿಸುವ ನಿಟ್ಟಿನಲ್ಲಿ ಕೇಂದ್ರ ಏನು ಕ್ರಮಗಳನ್ನು ಕೈಗೊಂಡಿದೆ ಎಂದು ಮಂಗಳವಾರ ಉತ್ತರಿಸಿ ಎಂದು ಕೋರ್ಟ್ ವೇಣುಗೋಪಾಲ್ ಅವರಿಗೆ ನಿರ್ದೇಶಿಸಿತು. ’ಅವರು (ಕೇಂದ್ರ) ಎಳೆದಾಡುತ್ತಾರೆ. ಇದು ಅತ್ಯಂತ ಗಂಭೀರವಾದ ವಿಷಯ ಎಂದು ನಫಡೆ ಆಗ್ರಹಿಸಿದರು.  ‘ಇರಲಿ, ಮಂಗಳವಾರಕ್ಕೆ ಇನ್ನು ಒಂದೆರಡು ದಿನಗಳಷ್ಟೇ ಇವೆ. ನಾವು ನೋಡುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಉತ್ತರಿಸಿದರು.

2018: ನವದೆಹಲಿ: ಯಾವ ದಲಿತ ವಿರೋಧಿ ದೌರ್ಜನ್ಯ ಪ್ರಕರಣಗಳು ’ಅಸಂಬದ್ಧ ಅಥವಾ ’ಸಂಪೂರ್ಣವಾಗಿ ನಿಷ್ಪ್ರಯೋಜಕ ಅಥವಾ ತಿರುಳಿಲ್ಲದ್ದು ಎಂದು ಅನಿಸುತ್ತದೆಯೋ ಅಂತಹ ದೂರುಗಳಲ್ಲಿ ಮಾತ್ರ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗುವುದಕ್ಕೆ ಮುನ್ನ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಕೆ. ಗೋಯೆಲ್ ಅವರು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ದೌರ್ಜನ್ಯ (ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ಮಾರ್ಚ್ ೨೦ರ ತೀರ್ಪಿನಲ್ಲಿ ಮೌಖಿಕ ಮಾರ್ಪಾಡು ಮಾಡಿದರು.  ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ದೌರ್ಜನ್ಯ (ತಡೆ) (೧೯೮೯) ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ರಾಷ್ಟ್ರಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.  ‘ದಲಿತ ವಿರೋಧಿ ದೌರ್ಜನ್ಯ (ತಡೆ) ಕಾಯ್ದೆಯ ಅಡಿಯಲ್ಲಿ ನೀಡಲಾಗುವ ಪ್ರತಿಯೊಂದು ಪ್ರಕರಣಕ್ಕೂ ಪ್ರಾಥಮಿಕ ತನಿಖೆ ’ಕಡ್ಡಾಯವಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.  ಮಾರ್ಚ್ ೨೦ರ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲಾಗುವ ದೂರಿನ ಅಡಿಯಲ್ಲಿ ಆರೋಪಿಯನ್ನು ತತ್ ಕ್ಷಣ ಬಂಧಿಸದಂತೆ ನಿಷೇಧ ವಿಧಿಸಿತ್ತು. ಇಂತಹ ಬಂಧನಗಳಿಗೆ ಮುನ್ನ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ಕೋರ್ಟ್ ಆದೇಶ ನೀಡಿತ್ತು.  ಶಂಕಿತ ವ್ಯಕ್ತಿ ಸರ್ಕಾರಿ ನೌಕರನಾಗಿದ್ದರೆ ನೇಮಕಾತಿ ಅಧಿಕಾರಿಯಿಂದ ಮತ್ತು ಖಾಸಗಿ ವ್ಯಕ್ತಿಯಾಗಿದ್ದರೆ ಜಿಲ್ಲಾಧಿಕಾರಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕಾದ್ದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ತೀರ್ಪು ಹೇಳಿತ್ತು. ‘ಕೆಲವು ಪ್ರಕರಣಗಳಲ್ಲಿ ಏನಾದರೂ (ತಿರುಳು) ಇರುತ್ತದೆ, ಕೆಲವೊಂದು ಪ್ರಕರಣಗಳಲ್ಲಿ ಸಂಪೂರ್ಣವಾಗಿ ಏನೂ ಇರುವುದಿಲ್ಲ. ಎರಡನೇ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯ ಅಗತ್ಯವಿದೆ. ಕೆಲವು ಪ್ರಕರಣಗಳು ’ಅಸಂಬದ್ಧ ಎಂದು  ಪೊಲೀಸರಿಗೆ ಸ್ವತಃ ಅನ್ನಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯ ಅಗತ್ಯವಿದೆ ॒ಎಲ್ಲ ಪ್ರಕರಣಗಳಲ್ಲಿ ಅಲ್ಲ. ನಾವು ಪೊಲೀಸರು ಪ್ರಾಥಮಿಕ ತನಿಖೆ ನಡೆಸಬಹುದು ಎಂದು ಹೇಳಿದ್ದೇವೆಯೇ ವಿನಃ ಕಡ್ಡಾಯವಾಗಿ ನಡೆಸಬೇಕು ಎಂದು ಹೇಳಿಲ್ಲ ಎಂದು ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಗೋಯೆಲ್ ಹೇಳಿದರು. ನ್ಯಾಯಮೂರ್ತಿ ಯು.ಯು. ಲಲಿತ್ ಅವರನ್ನೂ ಒಳಗೊಂಡ ಪೀಠವು ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಮತ್ತು ಕೇರಳ ಸೇರಿದಂತೆ ಕೆಲವು ರಾಜ್ಯಗಳು  ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿತ್ತು.  ‘ಈಗ ಏನಾಗುತ್ತಿದೆ ಎಂದರೆ ತನಿಖಾಧಿಕಾರಿಗೆ ಸ್ವತಃ ಪ್ರಕರಣದಲ್ಲಿ ತಿರುಳಿಲ್ಲ ಎಂದು ಅನ್ನಿಸಿದ್ದರೂ, ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬನನ್ನೂ ಬಂಧಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಗೋಯೆಲ್ ನುಡಿದರು. ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ದಲಿತರ ವಿರುದ್ಧ ಇನ್ನಷ್ಟು ಅಪರಾಧಗಳನ್ನು ಎಸಗಲು ತೀರ್ಪು ಕಾರಣವಾಗಿದೆ ಎಂದು ಹೇಳಿದರು. ಜನರ ಗುಂಪುಗಳು ಮದುಮಗನನ್ನು ಹೇಗೆ ಕುದುರೆಯಿಂದ ಕೆಳಕ್ಕೆ ಎಳೆದು ಥಳಿಸುತ್ತಿವೆ ಎಂದು ಘಟನೆಗಳನ್ನು ಉಲ್ಲೇಖಿಸಿ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ವಿವರಿಸಿದರು.  ‘ನಮ್ಮ ತೀರ್ಪು ಯಾರಿಗೂ ಅಪರಾಧ ಎಸಗುವಂತೆ ಪ್ರಚೋದನೆ ನೀಡಿಲ್ಲ. ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ಸಮುದಾಯಗಳಿಗೆ ಈ ನ್ಯಾಯಾಲಯದ ಸಂಪೂರ್ಣ ರಕ್ಷಣೆ ಇದೆ. ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳಬಾರದು. ತತ್ ಕ್ಷಣ ಶಿಕ್ಷಿಸುವ ವ್ಯವಸ್ಥೆ  ಇರಬೇಕು. ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು ॒ಸಮುದಾಯಗಳು ಪರಸ್ಪರ ಗೌರವಿಸುವುದನ್ನು ಕಲಿತುಕೊಳ್ಳಬೇಕು ಎಂದು ನ್ಯಾಯಮೂರ್ತಿ ಗೋಯೆಲ್ ಪ್ರತಿಕ್ರಿಯಿಸಿದರು. ಸುಪ್ರೀಂಕೋರ್ಟಿನ ತೀರ್ಪು ಪರಿಶಿಷ್ಟ ಜಾತಿ/ ಪರಿಶಿಷ್ಟ ಸಮುದಾಯಗಳ ನೈತಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಶತಮಾನಗಳಿಂದ ನಡೆಯುತ್ತಿದ್ದ ದೌರ್ಜನ್ಯ ಮತ್ತು ಸಾಮಾಜಿಕ ಕಳಂಕದ ವಿರುದ್ಧದ ರಕ್ಷಣೆಯ ಮೂಲವಾಗಿತ್ತು ಈ ಕಾನೂನು ಎಂದು ವೇಣುಗೋಪಾಲ್ ಹೇಳಿದರು. ಮಾರ್ಚ್ ೨೦ರ ತೀರ್ಪು ’ನ್ಯಾಯಾಂಗ ಸಕ್ರಿಯತೆಯ ಒಂದು ನಿದರ್ಶನ ಎಂದು ನುಡಿದ ವೇಣುಗೋಪಾಲ್ ’ಈ ದೇಶದಲ್ಲಿ ಹಾಲಿ ಕಾನೂನಿಗೆ ವ್ಯತಿರಿಕ್ತವಾದ ಕಾನೂನನ್ನು ನೀವು ಘೋಷಿಸಲು ಸಾಧ್ಯವಿಲ್ಲ ಎಂದು ನುಡಿದರು. ಸುಪ್ರೀಂಕೋರ್ಟ್ ನೀಡಿದ ತೀರ್ಪು ಸಾಮಾನ್ಯ ಸರ್ಕಾರಿ ನೌಕರರಿಗೆ ಬಂಧನದ ಅಧಿಕಾರವನ್ನು ನೀಡಿದೆ. ಈ ಸರ್ಕಾರಿ ಅಧಿಕಾರಿಗಳು ಈಗ ದಲಿತರು ಸಲ್ಲಿಸಿದ ದೂರನ್ನು ಆಧರಿಸಿ ತಮ್ಮ ಕೆಳಗಿನವರನ್ನು ಬಂಧಿಸಿಬೇಕೆ ಅಥವಾ ಬೇಡವೆ ಎಂದು ನಿರ್ಧರಿಸಬಹುದಾಗಿದೆ ಎಂದು ವೇಣುಗೋಪಾಲ್ ಹೇಳಿದರು.  ‘ಒಪ್ಪಿಗೆ ನೀಡುವುದು ಶಾಸಕಾಂಗಕ್ಕೆ ಸೇರಿದ ವಿಚಾರ. ನ್ಯಾಯಾಲಯಕ್ಕೆ ಒಪ್ಪಿಗೆ ನೀಡುವ ಅಧಿಕಾರಗಳಿಲ್ಲ.. ತೀರ್ಪು ಸಹಸ್ರ ಸಹಸ್ರ ಸರ್ಕಾರಿ ನೌಕರರಿಗೆ ಬಂಧಿಸುವ ಅಧಿಕಾರಗಳನ್ನು ನೀಡಿದೆ ಎಂದು ವೇಣುಗೋಪಾಲ್ ಪ್ರತಿಪಾದಿಸಿದರು.  ‘ಇರುವ ಅವಕಾಶದಲ್ಲಿ ದಲಿತರು ನೀಡಿದ ದೂರನ್ನು ಆಧರಿಸಿ ಪೊಲೀಸ್ ಅಧಿಕಾರಿಯೊಬ್ಬರು ಎಫ್ ಐ ಆರ್ ದಾಖಲಿಸುವ ಸಾಧ್ಯತೆಯೇ ಅತ್ಯಂತ ಕಡಿಮೆ. ಈಗ ಪ್ರಾಥಮಿಕ ತನಿಖೆ ನಡೆಸಬೇಕು ಎಂಬ ಶರತ್ತು ದಲಿತರಿಗೆ ನ್ಯಾಯ ಪಡೆಯುವ ಮೂಲಭೂತ ಹಕ್ಕನ್ನು ನಿರಾಕರಿಸಲು ಇನ್ನೊಂದು ನೆಪವಾಗುತ್ತದೆ ಎಂದು ವೇಣುಗೋಪಾಲ್ ಹೇಳಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಲಲಿತ್ ಅವರು ’ನ್ಯಾಯಾಲಯದ ತೀರ್ಪು ಎಫ್ ಐ ಆರ್ ದಾಖಲಿಸದಂತೆ ಪೊಲೀಸರನ್ನು ನಿಷೇಧಿಸಿಲ್ಲ ಮತ್ತು ಆರೋಪಿಯು ತಪ್ಪಿತಸ್ಥನಾಗಿದ್ದರೆ ಶಿಕ್ಷಿಸಬಾರದು ಎಂದೂ ಹೇಳಿಲ್ಲ ಎಂದು ಪ್ರತಿಕ್ರಿಯಿಸಿದರು.  ತತ್ ಕ್ಷಣವೇ, ಯಾಂತ್ರಿಕವಾಗಿ ವ್ಯಕ್ತಿಯನ್ನು ಬಂಧಿಸುವುದರ ವಿರುದ್ಧ ತೀರ್ಪು ಶೋಧಕದಂತೆ ಕೆಲಸ ಮಾಡುತ್ತದೆ ಎಂದು ನ್ಯಾಯಮೂರ್ತಿ ಲಲಿತ್ ನುಡಿದರು.  ನ್ಯಾಯಾಲಯವು ಇಡೀ ದೇಶಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲು ಸಾಧ್ಯವಿಲ್ಲ, ಅದು ಪ್ರಕರಣಕ್ಕೆ ಅನುಗುಣವಾದ ನಿರ್ದಿಷ್ಟ ಮಾರ್ಗದರ್ಶನ ನೀಡಬೇಕು. ಹೆಚ್ಚೆಂದರೆ, ನ್ಯಾಯಾಲಯವು ಹಾಲಿ ಶಾಸನವ್ಯವಸ್ಥೆಯಲ್ಲಿನ ಅಂತರಗಳನ್ನು ತುಂಬುವ ಕೆಲಸ ಮಾಡಬಹುದೇ ಹೊರತು ತಾತ್ಕಾಲಿಕ ನೆಲೆಯಲ್ಲಿ (ಅಡ್ ಹಾಕ್) ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗದು, ವಿಶೇಷವಾಗಿ ಸಂಸದೀಯ ಕಾನೂನಿಗೆ ಹೊಂದಿಕೊಳ್ಳದೇ ಇದ್ದಾಗಲಂತೂ ಇಂತಹ ಮಾರ್ಗದರ್ಶಿ ಸೂತ್ರಗಳನ್ನು ನೀಡಲು ಸಾಧ್ಯವೇ ಇಲ್ಲ ಎಂದು ವೇಣುಗೋಪಾಲ್ ಹೇಳಿದರು.  ಸುಪ್ರೀಂಕೋರ್ಟ್ ತೀರ್ಪು ಅಸಾಮರಸ್ಯವನ್ನು ಹುಟ್ಟುಹಾಕಿ ರಾಷ್ಟ್ರಕ್ಕೆ ’ದೊಡ್ಡ ಹಾನಿಯನ್ನು ಮಾಡಿತು ಎಂದು ಹೇಳಿದ ವೇಣುಗೋಪಾಲ್ ತೀರ್ಪನ್ನು ನ್ಯಾಯಾಲಯ ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
2018: ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ೨೮ರಲ್ಲಿ ಹೊಂಡವೊಂದಕ್ಕೆ ಮಗುಚಿದ ಬಸ್ಸಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ ೨೦ ಮಂದಿ ಮೃತರಾಗಿದ್ದಾರೆ ಎಂದು ಭೀತಿ ಪಡಲಾಯಿತು. ಬಿಹಾರಿನ ಪ್ರಕೋಪ ನಿರ್ವಹಣಾ ಇಲಾಖೆಯ ಸಚಿವ ದಿನೇಶ ಚಂದ್ರ ಯಾದವ್ ಅವರು ಘಟನೆಯನ್ನು ಸಂಜೆ ದೃಢ ಪಡಿಸಿದರು. ನತದೃಷ್ಟ ಬಸ್ಸು ಘಟನೆ ಸಂಭವಿಸಿದಾಗ ಬಿಹಾರಿನ ಮುಜಾಫರ್ ಪುರದಿಂದ ದೆಹಲಿಯತ್ತ ಪ್ರಯಾಣ ಹೊರಟಿತ್ತು. ರಾಷ್ಟ್ರೀಯ ಹೆದ್ದಾರಿ ೨೮ರಲ್ಲಿ ಮೋತಿಹಾರಿಯ ಬೆಲ್ವಾ ಗ್ರಾಮದ ಬಳಿ ಬಸ್ಸು ದುರಂತಕ್ಕೆ ಈಡಾಯಿತು. ಮೂಲಗಳ ಪ್ರಕಾರ ಈ ಬಸ್ಸಿನಲ್ಲಿ ಪ್ರಯಾಣಕ್ಕಾಗಿ ೩೨ ಮಂದಿ ಟಿಕೆಟ್ ಬುಕ್ ಮಾಡಿದ್ದರೂ, ಕೇವಲ ೧೩ ಮಂದಿ ಬಸ್ಸು ಹತ್ತಿದ್ದರು. ದುರ್ಘಟನೆಯಲ್ಲಿ ಮೃತರಾದ ಇತರರು ಬಸ್ಸು ರಸ್ತೆಯಲ್ಲಿ ಮಗುಚಿ ದುರಂತಕ್ಕೆ ಈಡಾದಾಗ ಅದೇ ಸ್ಥಳದಲ್ಲಿ ಇದ್ದ ನೆರೆಹೊರೆಯವರು ಎಂದು ಹೇಳಲಾಯಿತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದುರಂತ ಸಾವುಗಳಿಗಾಗಿ ಶೋಕ ವ್ಯಕ್ತ ಪಡಿಸಿದ್ದು, ಒಂದು ನಿಮಿಷದ ಮೌನ ಆಚರಿಸಿ, ಮೃತರ ಬಂಧುಗಳಿಗೆ ಪರಿಹಾರ ಘೋಷಿಸಿದರು.  ‘ಇದು ನಿಜವಾಗಿಯೂ ಅತ್ಯಂತ ಬೇಸರದ ಘಟನೆ. ಇಂತಹ ಸಂದರ್ಭಗಳಲ್ಲಿ ಮೃತರ ಉತ್ತರಾಧಿಕಾರಿಗಳಿಗೆ ೪ ಲಕ್ಷ ರೂಪಾಯಿಗಳ ಪರಿಹಾರ ನೀಡಲು ಅವಕಾಶವಿದೆ. ಮತ್ತು ಆ ಪರಿಹಾರವನ್ನು ನೀಡಲಾಗುವುದು ಎಂದು ದಿನೇಶ ಚಂದ್ರ ಯಾದವ್ ನುಡಿದರು.
2017: ನವದೆಹಲಿ: ನೆಲದ ಮೇಲಿನ ಗುರಿಗಳ ಮೇಲೆ ದಾಳಿ ನಡೆಸುವ ಸುಧಾರಿತ ಬ್ರಹ್ಮೋಸ್ ಬ್ಲಾಕ್-3 ಮಾದರಿಯ ಕ್ಷಿಪಣಿಯ ಪರೀಕ್ಷೆಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ನಡೆಸಿತು.  ಅಂಡಮಾನ್ ನಿಕೋಬಾರ್ ದ್ವೀಪದ ಪರೀಕ್ಷಾ ಕೇಂದ್ರದಲ್ಲಿ  ಹಿಂದಿನ ದಿನ  ಮತ್ತು ಈದಿನ ಪರೀಕ್ಷೆ ನಡೆಸಲಾಯಿತು. ಸೇನೆಯ  ಸ್ಟ್ರೈಕ್ ಒನ್ ಕಾರ್ಪ್ಸ್ (Strike One corps) ವಿಭಾಗ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಎರಡು ದಿನ  ನಡೆಸಿದ ಪರೀಕ್ಷೆಗಳನ್ನೂ ಸೇರಿಸಿ ಒಟ್ಟು 5 ಬಾರಿ ಈ ಮಾದರಿಯ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿದ್ದು. ಪ್ರತೀ ಬಾರಿ ಈ ಕ್ಷಿಪಣಿ ಅತ್ಯಂತ ನಿಖರವಾಗಿ ಗುರಿಯನ್ನು ತಲುಪಿದೆ. ಈ ಕ್ಷಿಪಣಿಯನ್ನು ಮೊಬೈಲ್ ಅಟೋನಮಸ್ ಲಾಂಚರ್ಸ್​ಗಳ ಸಹಾಯದಿಂದ ದೇಶದ ಯಾವುದೇ ಭಾಗದಿಂದ ಉಡಾವಣೆ ಮಾಡಬಹುದಾಗಿದೆ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿತು. ಇಬ್ಬರು ಭಾರತೀಯ ಯೋಧರನ್ನು ಪಾಕ್ ಸೇನೆ ಅಮಾನುಷವಾಗಿ ಹತ್ಯೆ ಮಾಡಿದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದು ಅತ್ಯಂತ ಮಹತ್ವದ ಬೆಳವಣಿಗೆ.
2017: ನವದೆಹಲಿ: ನಿಯಂತ್ರಣ ರೇಖೆ ದಾಟಿ ಭಾರತದ ಭೂಪ್ರದೇಶಕ್ಕೆ ಬಂದು ಇಬ್ಬರು
ಯೋಧರನ್ನು ಕೊಂದು ಅವರ ಶಿರಚ್ಛೇದ ಮಾಡಲು ಪಾಕಿಸ್ತಾನದ ಸೈನಿಕರಿಗೆ ಆದೇಶಿಸಿದ್ದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್‌ ಜಾವೇದ್ ಬಜ್ವಾ! ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಜ್ವಾ ಇತ್ತೀಚೆಗೆ ಹಾಜಿ ಪೀರ್‍‍ನಲ್ಲಿರುವ ಸೇನಾ ನೆಲೆಗಳಿಗೆ ಭೇಟಿ ನೀಡಿದ್ದರು ಎಂದು ಗುಪ್ತಚರ ಮತ್ತು ಸೇನಾಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿತು. ಏಪ್ರಿಲ್ 17ರಂದು ಪಾಕ್ ಸೇನಾ ನೆಲೆಗಳ ಮೇಲೆ ಭಾರತ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಪಾಕಿಸ್ತಾನ ಏಳು ಸೈನಿಕರು ಹತರಾಗಿದ್ದರು. ಇದರ ಪ್ರತೀಕಾರವಾಗಿ ಪಾಕ್ ಸೇನೆ ಭಾರತದ ಯೋಧರ ಶಿರಚ್ಛೇದ ಮಾಡಿದೆ ಎಂದು ಬಲ್ಲಮೂಲಗಳು ಹೇಳಿದವು. ಏಪ್ರಿಲ್ 17ರಂದು ರಜೌರಿಯ ಜನವಾಸ ಪ್ರದೇಶ ಮತ್ತು ಸೈನಿಕ ನೆಲೆಗಳ ಮೇಲೆ ಪಾಕಿಸ್ತಾನ ಆಕ್ರಮಣ ನಡೆಸಿದ್ದು, ಇದಕ್ಕೆ ತಕ್ಕ ಉತ್ತರವನ್ನು ಭಾರತೀಯ ಸೇನೆ ನೀಡಿತ್ತು. ಈ ಪ್ರತಿದಾಳಿಯಲ್ಲಿ ಪಾಕಿಸ್ತಾನದ 10 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಭಾರತೀಯ ಸೇನೆ ಹೇಳಿತ್ತು. ಇದಾದ ನಂತರ ಏಪ್ರಿಲ್ 30ರಂದು ಹಾಜಿ ಪೀರ್‍‌‍ಗೆ ಭೇಟಿ ನೀಡಿದ ಬಜ್ವಾ, ಭಾರತದ ಮೇಲೆ ದಾಳಿ ನಡೆಸುವಂತೆ ಆದೇಶಿಸಿದ್ದಾರೆ ಎಂದು ಸೇನಾ ಮೂಲಗಳು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಉಲ್ಲೇಖಿಸಿತು. ಬಜ್ವಾ ಅವರು ಭಾರತ ಮತ್ತು ಪಾಕಿಸ್ಥಾನ ನಡುವಣ ಗಡಿ ನಿಯಂತ್ರಣ ರೇಖೆಯ ಕೆಲವೊಂದು ಪ್ರದೇಶಗಳಿಗೆ ಭೇಟಿ ನೀಡಿ ಕಾಶ್ಮೀರಿ ಹೋರಾಟಗಾರರಿಗೆ ಬೆಂಬಲ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಪಾಕಿಸ್ಥಾನಿ ಪಡೆಗಳಿಂದ ಈ ದಾಳಿ ನಡೆಯಿತು. ಕಳೆದೊಂದು ತಿಂಗಳ ಅವಧಿಯಲ್ಲಿ ಪಾಕಿಸ್ತಾನ ಗಡಿಯಲ್ಲಿ ನಡೆಸಿದ ಎಂಟನೇ ಕದನ ವಿರಾಮ ಉಲ್ಲಂಘನೆ ಇದು.
2017: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ
ನಿರ್ಮಾಣವಾಗಲಿದೆ. ಐಫೆಲ್‌ ಟವರ್‌ಗಿಂತ ಎತ್ತರದಲ್ಲಿ  ಚೆನಾಬ್‌ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಯೋಜನೆ ರೂಪುಗೊಂಡಿದೆ. ಐಫೆಲ್‌ ಟವರ್‌(324 ಮೀ.)ಗಿಂತಲೂ  35 ಮೀ. ಎತ್ತರವಿರಲಿದೆ ಎಂದು ಅಂದಾಜಿಸಲಾಗಿದ್ದು, 2019ಕ್ಕೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಯೋಜಿಸಲಾಗಿದೆ.  ರೂ. 1,100 ಕೋಟಿ ವೆಚ್ಚದಲ್ಲಿ ನದಿಯಿಂದ 359 ಮೀಟರ್‌ ಎತ್ತರದಲ್ಲಿ ಕಮಾನಿನ ಸೇತುವೆ ಸಿದ್ಧಗೊಳ್ಳಲಿದೆ. ಇದಕ್ಕಾಗಿ 24 ಸಾವಿರ ಟನ್‌ ಉಕ್ಕು ಬಳಕೆಯಾಗಲಿದೆ. 1.315 ಕಿ.ಮೀ. ಉದ್ದದ ಕೌಶಲಯುತ ವಿನ್ಯಾಸವು ಬಕಲ್‌ ಮತ್ತು ಶ್ರೀನಗರದ ಕೌರಿ ನಡುವೆ ಸಂಪರ್ಕ ಸಾಧಿಸಲಿದ್ದು, ಗಂಟೆಗೆ 260 ಕಿ.ಮಿ. ವೇಗದಲ್ಲಿ ಗಾಳಿ ಬೀಸಿದರೂ ತಡೆಯುವ ಸಾಮರ್ಥ್ಯ ಹೊಂದಿರಲಿದೆ. ಉಧಮ್‌ಪುರ್‌–ಶ್ರೀನಗರ–ಬಾರಾಮುಲ್ಲಾ ರೈಲ್ವೆ ಸಂಪರ್ಕ ಯೋಜನೆಯ ಭಾಗವಾಗಿರುವ ಕಾತ್ರಾ ಮತ್ತು ಬನಿಹಾಲ್‌ ನಡುವಿನ 111 ಕಿ.ಮೀ. ಸಂಪರ್ಕದಲ್ಲಿ ಈ ಸೇತುವೆ ಮಹತ್ವದ್ದಾಗಿದೆ. ಕಾಶ್ಮೀರ ರೈಲ್ವೆ ಯೋಜನೆಯಲ್ಲಿ ಈ ಸೇವೆ ನಿರ್ಮಾಣವೇ ಸವಾಲಿನ ಕೆಲಸ, ಇದು ಯಶಸ್ವಿಯಾದರೆ ಅದ್ಭುತವೇ ಸೃಷ್ಟಿಯಾಗಲಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಚೀನಾದ ಶುಯ್‌ಬೈ ರೈಲ್ವೆ ಸೇತುವೆ(275 ಮೀ.)ಯ ದಾಖಲೆಯನ್ನು ಜಮ್ಮು ಮತ್ತು ಕಾಶ್ಮೀರದ ಈ ಸೇತುವೆ ಮುರಿಯಲಿದೆ.
2017: ನವದೆಹಲಿ: ಇಬ್ಬರು ಭಾರತೀಯ ಯೋಧರನ್ನು ಪಾಕ್ ಸೇನೆ ಅಮಾನುಷವಾಗಿ ಹತ್ಯೆ
ಮಾಡಿದ ಹಿನ್ನೆಲೆಯಲ್ಲಿ ಸ್ವಯಂ ಸೇವಾ ಸಂಸ್ಥಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿದ್ದ 50 ಪಾಕಿಸ್ತಾನಿ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿತು. ದೆಹಲಿಯ Routes2Roots ಎಂಬ ಎನ್​ಜಿಒ ವಿದ್ಯಾರ್ಥಿ ವಿನಿಮಯ ಯೋಜನೆಯನ್ವಯ 50 ಪಾಕ್ ವಿದ್ಯಾರ್ಥಿಗಳನ್ನು ಭಾರತಕ್ಕೆ ಆಹ್ವಾನಿಸಿತ್ತು. ಪಾಕ್ ಸೇನೆ ಭಾರತೀಯ ಯೋಧರನ್ನು ಹತ್ಯೆ ಮಾಡಿದ ದಿನ ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದರು. ಪಾಕ್ ಸೇನೆ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ, ಭಾರತೀಯರ ಭಾವನೆಗಳಿಗೆ ನೋವುಂಟಾಗುವುದನ್ನು ತಪ್ಪಿಸುವ ಸಲುವಾಗಿ ವಿದ್ಯಾರ್ಥಿಗಳನ್ನು ಪಾಕ್​ಗೆ ವಾಪಸ್ ಕಳುಹಿಸುವಂತೆ ಸಚಿವಾಲಯ ಎನ್​ಜಿಒಗೆ ಸಲಹೆ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ತಿಳಿಸಿದರು. ವಿದ್ಯಾರ್ಥಿಗಳು  ಈದಿನ ಆಗ್ರಾ ಪ್ರವಾಸಕ್ಕೆ ತೆರಳಿ ನಂತರ ಪಾಕ್ ರಾಯಭಾರ ಕಚೇರಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಕೇಂದ್ರ ಸರ್ಕಾರದ ಸೂಚನೆ ದೊರೆತ ಹಿನ್ನೆಲೆಯಲ್ಲಿ ಎನ್​ಜಿಒ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಲಾಹೋರ್​ಗೆ ವಾಪಸ್ ಕಳುಹಿಸಿತು. ಕಳೆದ ವರ್ಷ ಅಕ್ಟೋಬರಿ​ನಲ್ಲಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಹಿನ್ನೆಲೆಯಲ್ಲಿ ಎನ್​ಜಿಒ ಪಾಕ್ ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು.
2017: ಲಖನೌ: ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಉಗ್ರ ನಿಗ್ರಹ ದಳದ ಪೊಲೀಸರು ಶಂಕಿತ
ಐಎಸ್​ಐ ಏಜೆಂಟ್​ನನ್ನು ಬಂಧಿಸಿದರು. ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದ ಪೊಲೀಸರು ಮತ್ತು ಸೇನೆಯ ಗುಪ್ತಚರ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಐಎಸ್​ಐ ಏಜೆಂಟ್​ನನ್ನು ಗಾಜಿಯಾಬಾದ್​ನಿಂದ ಸುಮಾರು 120 ಕಿ.ಮೀ. ದೂರವಿರುವ ಫೈಜಾಬಾದ್​ನಲ್ಲಿ ಬಂಧಿಸಿತು. ಬಂಧಿತನನ್ನು ಅಫ್ತಾಬ್ ಅಲಿ ಎಂದು ಗುರುತಿಸಲಾಯಿತು. ಪಾಕಿಸ್ತಾನದ ಐಎಸ್​ಐ ನಿಂದ ತರಬೇತಿ ಪಡೆದಿದ್ದ ಅಫ್ತಾಬ್ ಭಾರತದಲ್ಲಿ ನಿಯೋಜಿತನಾಗಿದ್ದ. ಈತ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಆಫ್ತಾಬ್ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳನ್ನು ಕಲೆ ಹಾಕಲಾಗಿದ್ದು, ಈದಿನ  ಆತನ್ನು ಬಂಧಿಸಲಾಯಿತು. ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಟಿಎಸ್​ನ ಐಜಿ ಅಸೀಮ್ ಅರುಣ್ ತಿಳಿಸಿದರು.

2017: ನವದೆಹಲಿ: ಆಮ್ಆದ್ಮಿ ಪಕ್ಷದಲ್ಲಿ ಭುಗಿಲೆದ್ದಿದ್ದ ಭಿನ್ನಮತ ಕೊನೆಗೂ ಶಮನಗೊಂಡಿತು.
ಪಕ್ಷವನ್ನು ತೊರೆಯುವುದಿಲ್ಲ ಎಂದು ಮುಖಂಡ ಕುಮಾರ್ ವಿಶ್ವಾಸ್ ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ಸತತ ಸೋಲಿನಿಂದ ಕಂಗೆಟ್ಟ ಆಪ್​ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬಂದಿತ್ತು. ಇದು ಬಣರಾಜಕೀಯಕ್ಕೆ ಮುನ್ನುಡಿ ಹಾಕಿತ್ತು. ಈ ನಡುವೆಯೇ ರಾಜೀಸಂಧಾನ ಸಭೆ ನಡೆಸಿದ ಮನೀಶ್ ಸಿಸೋಡಿಯಾ ಕೊನೆಗೂ ಯಶಸ್ವಿಯಾದರು. ಕುಮಾರ್​ವಿಶ್ವಾಸ್ ವಿರುದ್ಧ ಆರೋಪ ಮಾಡಿದ್ದ ಶಾಸಕ ಅಮಾನತುಲ್ಲಾಖಾನ್​ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು. ಮುಂದಿನ ರಾಜಸ್ಥಾನದಲ್ಲಿ ನಡೆಯುವ ಚುನಾವಣೆಯ ಜವಾಬ್ದಾರಿಯನ್ನು ವಿಶ್ವಾಸ್ ತೆಗೆದುಕೊಳ್ಳಲಿದ್ದಾರೆ ಎಂದು ಮನೀಶ್ ಸಿಸೋಡಿಯಾ ಹೇಳಿದರು. ಈದಿನ ಬೆಳಗ್ಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಪಾಲ್ಗೊಂಡಿದ್ದರು.
2009: ನೇಪಾಳೀ ಸರ್ಕಾರದ ಆಜ್ಞೆಯನ್ನು ಪಾಲಿಸದ ಆರೋಪದ ಮೇಲೆ ಸೇನಾ ಪಡೆಯ ಮುಖ್ಯಸ್ಥ ಜನರಲ್ ರುಕ್ಮಾಂಗದ ಕಟ್ವಾಲ್ ಅವರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ಮಾವೋವಾದಿಗಳ ನಿಷ್ಠಾವಂತ ಎನ್ನಲಾದ ಲೆಫ್ಟಿನೆಂಟ್ ಜನರಲ್ ಕೌಲ್ ಬಹದ್ದೂರ್ ಖಾಡ್ಕಾ ಅವರನ್ನು ನೇಮಿಸಲಾಯಿತು. ಸೇನಾ ಮುಖ್ಯಸ್ಥರನ್ನು ವಜಾಗೊಳಿಸಲು ಪ್ರಧಾನಿ ಪ್ರಚಂಡ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಸರ್ಕಾರದ ಪ್ರಮುಖ ಅಂಗಪಕ್ಷಗಳಾದ ನೇಪಾಳ ಕಮ್ಯುನಿಸ್ಟ್ ಪಕ್ಷ ಯುಎಂಎಲ್, ಮಾದೇಶಿ ಪೀಪಲ್ಸ್ ರೈಟ್ಸ್ ಒಕ್ಕೂಟ, ಸದ್ಭಾವನಾ ಪಕ್ಷ ಹಾಗೂ ಸಿಪಿಎನ್-ಯುನೈಟೆಡ್‌ನ ನಾಲ್ಕು ಪ್ರಮುಖ ನಾಯಕರು ಬಹಿಷ್ಕರಿಸಿದ್ದರು. ಅವರ ಬಹಿಷ್ಕಾರದ ನಡುವೆಯೇ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತು. ಸೇನಾ ಮುಖ್ಯಸ್ಥರ ವಜಾ ಕ್ರಮವನ್ನು ನೇಪಾಳದ ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಸೇರಿದಂತೆ 16 ಪಕ್ಷಗಳು ವಿರೋಧಿಸಿದ್ದವು.

2009: ಪ್ಲಾಸ್ಟಿಕ್ ಆಧಾರಿತ ಪರಿಣಾಮಕಾರಿ ವಿದ್ಯುತ್ ಕೋಶವನ್ನು ಕಂಡು ಹಿಡಿಯುವ ಮೂಲಕ
ದಕ್ಷಿಣ ಕೊರಿಯಾದ ವಿಜ್ಞಾನಿಗಳು ಸೌರಶಕ್ತಿಯ ವಾಣಿಜ್ಯ ಬಳಕೆಯ ವೇಗವನ್ನು ಹೆಚ್ಚಿಸುವ ಮಹತ್ವದ ವಿದ್ಯಮಾನವೊಂದಕ್ಕೆ ಮುನ್ನುಡಿ ಬರೆದರು. ಈ ಪ್ಲಾಸ್ಟಿಕ್ ಆಧಾರಿತ ವಿದ್ಯುತ್ ಕೋಶ, ಸಸ್ಯಗಳಲ್ಲಿರುವ ಫೋಟೋ ವೋಲ್ಟಾಯಿಕ್ ಕೋಶದ ಕಾರ್ಯವೈಖರಿಯನ್ನು ಹೋಲುತ್ತದೆ. ದಕ್ಷಿಣ ಕೊರಿಯಾದ ಗ್ವಾಂಗ್ಜು ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿ ಲೀ ಕ್ವಾಂಗ್ ಹೀ ನೇತೃತ್ವದಲ್ಲಿ ವಿಜ್ಞಾನಿಗಳು ಈ ವಿದ್ಯುತ್ ಕೋಶವನ್ನು ಅಭಿವೃದ್ಧಿ ಪಡಿಸಿದರು. ಸಸ್ಯಗಳು ದ್ಯುತಿಸಂಶ್ಲೇಷಣಾ ಕ್ರಿಯೆ ಮೂಲಕ ಆಹಾರ ತಯಾರಿಸಿಕೊಳ್ಳುವ ಹಾಗೆ ಈ ವಿದ್ಯುತ್ ಕೋಶದ ತಯಾರಿಕೆಗೆ ಬಳಸಿರುವ ಪ್ಲಾಸ್ಟಿಕ್ ಹಾಳೆ ಕೂಡ ಸೌರ ಶಕ್ತಿಯನ್ನು ಹೀರಿಕೊಂಡು ವಿದ್ಯುತ್ ತಯಾರಿಸುತ್ತದೆ ಎಂಬುದು ವಿಜ್ಞಾನಿಗಳ ವಿವರಣೆ. ಈ ವಿದ್ಯುತ್ ಕೋಶದ 'ಉತ್ಪಾದನಾ' ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಈ ಪ್ಲಾಸ್ಟಿಕ್ ಹಾಳೆಗೆ ಟಿಟಾನಿಯಮ್ ಆಕ್ಸೈಡ್ ಬಳಸಲಾಗಿತ್ತು. ಪಾಸ್ಲ್ಟಿಕ್ ಆಧಾರಿತ ವಿದ್ಯುತ್ ಕೋಶ ಸಂಪೂರ್ಣ ಅಭಿವೃದ್ಧಿಗೊಂಡರೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು. ಬೇಕಾದ ಹಾಗೆ ಬಾಗಿಸಬಹುದು. ಕೋಟ್, ಬ್ಯಾಗ್ ಅಷ್ಟೇ ಏಕೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ, ಕಟ್ಟಡಗಳ ಕಿಟಕಿಗಳ ಮೇಲೂ ಈ ಕೋಶಗಳನ್ನು ಸಿಕ್ಕಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ವಿಜ್ಞಾನಿ ಲೀ ಪ್ರಕಾರ, ಪ್ಲಾಸ್ಟಿಕ್ ಆಧಾರಿತ ವಿದ್ಯುತ್ ಕೋಶ ಶೇ 17 ರಷ್ಟು ವಿದ್ಯುತ್ ಉತ್ಪಾದನೆ ಮಾಡುವುದು. ಪ್ರಸ್ತುತ ಗೃಹ ಬಳಕೆಯಲ್ಲಿರುವ ಸಾಂಪ್ರದಾಯಿಕ ಅಜೈವಿಕ ಸಿಲಿಕಾನ್ ಆಧಾರಿತ ಸೋಲಾರ್ ವಿದ್ಯುತ್ ಕೋಶದ ತಟ್ಟೆಗಳು ಶೇ 7ರಿಂದ 8 ರಷ್ಟು ವಿದ್ಯುತ್ ಉತ್ಪಾದಿಸುತ್ತಿವೆ. ಇವು ತುಂಬಾ ದುಬಾರಿ ಎನಿಸಿವೆ. ಹೀಗಾಗಿ ಪ್ಲಾಸ್ಟಿಕ್ ಆಧಾರಿತ ವಿದ್ಯುತ್‌ಕೋಶಗಳು ವಾಣಿಜ್ಯಾಧಾರಿತ ವಿದ್ಯುತ್ ಉತ್ಪಾದನೆಗೆ ನೆರವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಈ ಮಹತ್ವದ ವಿದ್ಯಮಾನವನ್ನು ಅಮೆರಿಕದ ರಾಷ್ಟ್ರೀಯ ಪುನರ್ಬಳಕೆ ಇಂಧನ ಪ್ರಯೋಗಾಲಯ ದೃಢಪಡಿಸಿ, ತನ್ನ ಆನ್-ಲೈನ್‌ಪತ್ರಿಕೆ 'ನೇಚರ್ ಫೋಟೊನಿಕ್ಸ್'ನಲ್ಲೂ ಪ್ರಕಟಿಸಿತು.

2009: ಎಲ್‌ಟಿಟಿಇ ಉಗ್ರರ ವಿರುದ್ಧ ಶ್ರೀಲಂಕಾ ಸೇನೆ ನಡೆಸಿದ ಅಂತಿಮ ಹಣಾಹಣಿಯಲ್ಲಿ 21 ಎಲ್‌ಟಿಟಿಇ ಉಗ್ರರು ಸಾವನ್ನಪ್ಪಿದರು. ಮುಲೈತೀವುವಿನ ವಳಯಾನ್‌ಮಠಂ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನೆ ಮತ್ತು ಎಲ್‌ಟಿಟಿಇ ಎರಡೂ ಪಾಳೆಯಗಳಲ್ಲಿ ಸಾವು ನೋವು ಸಂಭವಿಸಿತು.

2009: ಪಾಕಿಸ್ಥಾನದ ಬುನೆರ್ ಜಿಲ್ಲೆಯಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾನುವಾರ 80 ಮಂದಿ ತಾಲಿಬಾನಿಗಳು ಹತರಾದರು. ಪಾಕ್ ಕಮಾಂಡರ್ ಬ್ರಿಗೇಡಿಯರ್ ಫಯಾಜ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಜಿಯೋ ಟಿವಿ ಈ ಮಾಹಿತಿ ನೀಡಿತು.

2008: ಪಾಕಿಸ್ಥಾನದಲ್ಲಿ ಆಡಳಿತತಾರೂಢ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಮುಖಂಡರ ಜತೆ ಹಲವು ಸುತ್ತಿನ ಗೌಪ್ಯ ಮಾತುಕತೆಯ ನಂತರ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಂಸತ್ತನ್ನು ವಿಸರ್ಜಿಸುವ ಹಾಗೂ ಪ್ರಧಾನಿಯನ್ನು ವಜಾ ಮಾಡುವ ಅಧಿಕಾರವನ್ನು ಬಿಟ್ಟುಕೊಡಲು ನಿರ್ಧರಿಸಿದರು. ಸಂವಿಧಾನದ ಅನುಚ್ಛೇದ 58 (2ಬಿ) ಅಡಿಯಲ್ಲಿ ಇರುವ ಅಧಿಕಾರವನ್ನು ಮೊಟಕುಗೊಳಿಸುವ ತಿದ್ದುಪಡಿಗೆ ಸಹಿ ಹಾಕಲು ತಮ್ಮ ಒಪ್ಪಿಗೆ ಇದೆ ಎಂದು ಮುಷರಫ್ ಅವರು ತಮ್ಮ ಸಹಾಯಕನ ಮೂಲಕ ಪಿಪಿಪಿ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರಿಗೆ ತಿಳಿಸಿದರು ಎಂದು ಡಾನ್ ಸುದ್ದಿ ಚಾನೆಲ್ ವರದಿ ಮಾಡಿತು.

2008: ಅನುಪಾತ ಪದ್ಧತಿ ಅಡಿಯಲ್ಲಿ ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಅವರು ನೇಪಾಳ ಸಂವಿಧಾನ ರಚನೆ ಸಭೆಗೆ ಆಯ್ಕೆಯಾದರು. ಈ ಪದ್ಧತಿಯಲ್ಲಿ ಮಾವೋವಾದಿಗಳು ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಗಳಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 25 ಪಕ್ಷಗಳು ತಾವು ಗಳಿಸಿದ ಸ್ಥಾನಗಳ ಆಧಾರದ ಮೇಲೆ ದೊರಕುವ ಅನುಪಾತ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದರು. ಅನುಪಾತ ಪದ್ಧತಿಯಲ್ಲಿ 335 ಅಭ್ಯರ್ಥಿಗಳು, ಚುನಾವಣೆಯ ಮೂಲಕ 240 ಅಭ್ಯರ್ಥಿಗಳು ಆಯ್ಕೆಯಾಗಿದ್ದು 26 ಮಂದಿಯನ್ನು ಪ್ರಧಾನಿ ಅವರು ನಾಮಕರಣ ಮಾಡುವರು.

2008: ಕೊಂಕಣಿ ಲೇಖಕಿ ಗೋದೂಬಾಯಿ ಕೇಳ್ಕರ್ (83) ಅವರು ಪಣಜಿಯಲ್ಲಿ ಹಿಂದಿನ ದಿನ ರಾತ್ರಿ ನಿಧನರಾದರು. ಗೋದೂಬಾಯಿ ಅವರು ಪತಿ ಹೆಸರಾಂತ ಸಾಹಿತಿ, ಪದ್ಮಭೂಷಣ ಪುರಸ್ಕೃತ ರವೀಂದ್ರ ಕೇಳ್ಕರ್ ಮತ್ತು ಪುತ್ರನನ್ನು ಅಗಲಿದರು.

2008: ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಗುಂಟೂರಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಫಸಲು ಸುಟ್ಟು ಭಸ್ಮವಾಯಿತು. ಮಾರುಕಟ್ಟೆಯಲ್ಲಿದ್ದ ಸುಮಾರು 500ಕ್ಕೂ ಹೆಚ್ಚು ದಲ್ಲಾಳಿ ಅಂಗಡಿಗಳು, ಒಂದೂವರೆ ಲಕ್ಷ ಮೆಣಸಿನಕಾಯಿ ಚೀಲಗಳು ಭಸ್ಮವಾದವು. ಬೆಂಕಿ ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು.

2008: ಬೀಜಿಂಗ್ ಒಲಿಂಪಿಕ್ ಕೂಟದ ಜ್ಯೋತಿಯನ್ನು ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ತುತ್ತತುದಿಗೆ ಕೊಂಡೊಯ್ಯುವ ಚೀನಾದ ಪ್ರಯತ್ನಕ್ಕೆ ಹಿಮಪಾತ ಅಡ್ಡಿಯಾಗಿ ಪರಿಣಮಿಸಿತು. ವಿಶೇಷ ಜ್ಯೋತಿಯನ್ನು ಹಿಡಿದ ಚೀನಾದ ಪರ್ವತಾರೋಹಿಗಳ ತಂಡದ ಸದಸ್ಯರು ಹಿಂದಿನ ದಿನ ತಮ್ಮ ಸಾಹಸ ಯಾತ್ರೆಗೆ ಚಾಲನೆ ನೀಡಿದರಾದರೂ ಯಶ ಕಾಣಲಿಲ್ಲ. ಹಿಮಾಲಯ ಪರ್ವತ ಪ್ರದೇಶದಲ್ಲಿ ಬಲವಾದ ಗಾಳಿ ಬೀಸಿ, ಹಿಮಮಪಾತ ಉಂಟಾದ ಕಾರಣ ಪರ್ವತಾರೋಹಿಗಳು ಸುಮಾರು 6,500 ಮೀ. ಕ್ರಮಿಸಿದ ಬಳಿಕ ಯಾತ್ರೆಯನ್ನು ಮೊಟಕುಗೊಳಿಸಲಾಯಿತು.

2008: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಮ್ ಲಾಲಾ ತೆಲಗಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸಲು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ನ್ಯಾಯಾಲಯ ಆದೇಶ ನೀಡಿತು. ಪುಣೆ ಕಾರಾಗೃಹದಲ್ಲಿದ್ದ ತೆಲಗಿ ವಿರುದ್ಧ ಬೆಂಗಳೂರಿನಲ್ಲಿ ದಾಖಲಾದ ದೂರುಗಳ ವಿಚಾರಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನ್ಯಾಯಾಲಯ ಈ ಆದೇಶ ನೀಡಿತು.

2007: ಖ್ಯಾತ ಶಹನಾಯಿ ವಾದಕ ದಿವಂಗತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸಮಾಧಿ ನಿರ್ಮಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದನ್ನು ಪ್ರತಿಭಟಿಸಿ ಅವರ ಕುಟುಂಬದ ಸದಸ್ಯರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದರು. ವಾರಣಾಸಿ ಪಟ್ಟಣದ ದಕ್ಷಿಣ ಭಾಗದ ವಿಧಾನಸಭೆ ಕ್ಷೇತ್ರದ ಸಾರೈ ಹರ್ಹಾ ಪ್ರದೇಶದಲ್ಲಿ ವಾಸಿಸುತ್ತಿರುವ ಬಿಸ್ಮಿಲ್ಲಾ ಖಾನ್ ಕುಟುಂಬದಲ್ಲಿನ ಮತದಾರರ ಸಂಖ್ಯೆ 60. ಇವರ ಪೈಕಿ ಯಾರೊಬ್ಬರೂ ಮತದಾನ ಮಾಡಲು ಬರಲಿಲ್ಲ.

2007: ತಮಿಳುನಾಡಿಗೆ ವರ್ಷಕ್ಕೆ 192 ಟಿಎಂಸಿ ಅಡಿಗಳಷ್ಟು ನೀರು ಬಿಡಬೇಕಾದರೆ ಅಂತಾರಾಜ್ಯ ಗಡಿಯಲ್ಲಿ ಜಲಾಶಯ ನಿರ್ಮಿಸಬೇಕಾಗುತ್ತದೆ ಎಂದು ಕರ್ನಾಟಕವು ಕಾವೇರಿ ನದಿನೀರು ವಿವಾದ ನ್ಯಾಯಮಂಡಳಿಗೆ ತಿಳಿಸಿತು.

2006: ಸೋದರ ಪ್ರವೀಣ್ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು 12 ದಿನಗಳ ಕಾಲ ಮುಂಬೈಯ ಹಿಂದೂಜಾ ಆಸ್ಪತೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮಹಾಜನ್ (56) ಈ ದಿನ ಸಂಜೆ 4.10ಕ್ಕೆ ಕೊನೆ ಉಸಿರೆಳೆದರು. ಆಂಧ್ರಪ್ರದೇಶದ ಮೆಹಬೂಬ್ ನಗರದಲ್ಲಿ 1949ರ ಅಕ್ಟೋಬರ್ 30ರಂದು ಜನಿಸಿದ ಮಹಾಜನ್ 1974ರಲ್ಲಿ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾದರು. 1979ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದ ಅವರು 1983ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾದರು. 1986ರಲ್ಲಿ ರಾಜ್ಯಸಭೆ ಪ್ರವೇಶಿಸಿದರು. 1990ರಲ್ಲಿ ಎಲ್. ಕೆ. ಆಡ್ವಾಣಿ ಅವರ ರಥಯಾತ್ರೆಯ ಹೊಣೆ ಹೊತ್ತಿದ್ದರು. 1996ರಲ್ಲಿ ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾದರು. 2001ರಲ್ಲಿ ದೂರಸಂಪರ್ಕ ಸಚಿವರಾದರು. 2004ರಲ್ಲಿ ಭಾರತ ಪ್ರಕಾಶಿಸುತ್ತಿದೆ ಜಾಹೀರಾತಿನ ರೂವಾರಿ. 2005ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ `ಲಕ್ಷ್ಮಣ' ಬಿರುದು. 2006ರ ಏಪ್ರಿಲ್ 22ರಂದು ಮುಂಬೈಯ ವರ್ಲಿಯ ಸ್ವಂತ ಮನೆಯಲ್ಲಿ ಕಿರಿಯ ಸಹೋದರ ಪ್ರವೀಣ್ ಮಹಾಜನ್ ರಿಂದ ಗುಂಡೇಟು.

2006: ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ ನೀಡಲಾಗುವ ಕೀರಿಕ್ಕಾಡು ಮಾಸ್ಟರ್ ವಿಷ್ಣುಭಟ್ ಪ್ರಶಸ್ತಿಯನ್ನು ಹಿರಿಯ ಕಲಾವಿದ, ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರಿಗೆ ಘೋಷಿಸಲಾಯಿತು.

2006: ರಷ್ಯದ ಕಪ್ಪು ಸಮುದ್ರ ತೀರದಲ್ಲಿ ಈದಿನ ನಸುಕಿನ ವೇಳೆಯಲ್ಲಿ ಆರ್ಮೇನಿಯಾದ ನಾಗರಿಕ ವಿಮಾನವೊಂದು ಅಪಘಾತಕ್ಕೆ ಈಡಾಗಿ ಅದರಲ್ಲಿದ್ದ ಎಲ್ಲ 113 ಮಂದಿ ಪ್ರಯಾಣಿಕರು ಅಸು ನೀಗಿದರು. ಅರ್ಮೇನಿಯಾ ಏರ್ ಲೈನ್ಸ್ ಅರ್ಮೇನಿಯಾಕ್ಕ್ಕೆ ಸೇರಿದ ಏರ್ ಬಸ್-320 ಯೆರವಾನಿನಿಂದ ದಕ್ಷಿಣ ರಷ್ಯದ ಕಪ್ಪು ಸಮುದ್ರದ ಪ್ರವಾಸಿ ನಗರ ಸೋಚಿಗೆ ತೆರಳುತ್ತಿದ್ದಾಗ ಮುಂಜಾನೆ 7ರ ವೇಳೆಗೆ (ಭಾರತೀಯ ಕಾಲಮಾನ 8.30) ಈ ದುರಂತ ಸಂಭವಿಸಿತು.

2006: ಸಾಹಿತ್ಯ ಕೃತಿ ಚೌರ್ಯ ಆರೋಪ ಹೊತ್ತಿರುವ ಭಾರತೀಯ ಮೂಲದ ಕಾವ್ಯಾ ವಿಶ್ವನಾಥನ್ ಅವರ ವಿವಾದಿಕ ಕೃತಿಯನ್ನು ಶಾಶ್ವತವಾಗಿ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಯಿತು. ಕಾವ್ಯಾ ಅವರು ಬರೆದಿರುವ ಇತರ ಎರಡು ಪುಸ್ತಕಗಳ ಪ್ರಕಟಣೆಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನೂ ಪ್ರಕಾಶನ ಸಂಸ್ಥೆ `ಲಿಟಲ್ , ಬ್ರೌನ್ ಅಂಡ್ ಕಂಪೆನಿ' ರದ್ದು ಪಡಿಸಿತು.

2006: ಬೆಂಗಳೂರಿನ ಸಾರ್ವಜನಿಕ ವ್ಯವಹಾರಗಳ ಕೇಂದ್ರದ (ಪಿಎಸಿ) ಸ್ಥಾಪಕ ಅಧ್ಯಕ್ಷ ಡಾ. ಸ್ಯಾಮ್ಯುಯೆಲ್ ಪೌಲ್ ಅವರಿಗೆ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಲಭಿಸಿತು.

1915: ಬೆಂಗಳೂರಿನ ಶಂಕರಪುರಂನ ಪುಟ್ಟ ಬಾಡಿಗೆ ಕೋಣೆಯೊಂದರಲ್ಲಿ ಕನ್ನಡಿಗರ ಬಹುದಿನಗಳ ಆಶಯದ `ಕರ್ನಾಟಕ ಸಾಹಿತ್ಯ ಪರಿಷತ್ತು' (ಈಗಿನ ಕನ್ನಡ ಸಾಹಿತ್ಯ ಪರಿಷತ್ತು) ಆರಂಭಗೊಂಡಿತು. ನಂತರ 1933ರಲ್ಲಿ ಪರಿಷತ್ತು ಚಾಮರಾಜಪೇಟೆಯ ಈಗಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ ದೆಹಲಿ, ಮುಂಬೈ, ಚೆನ್ನೈ ಮತ್ತಿತರ ಕಡೆಗಳಲ್ಲಿಯೂ ಪರಿಷತ್ತು ತನ್ನ ಶಾಖೆಗಳನ್ನು ಹೊಂದಿದ್ದು, ಪ್ರತಿ ಶಾಖೆಗೂ ಪ್ರತ್ಯೇಕ ಕಾರ್ಯಕಾರಿ ಸಮಿತಿಯನ್ನು ಹೊಂದಿರುತ್ತದೆ.

1939: ನೇತಾಜಿ ಸುಭಾಶ್ ಚಂದ್ರ ಬೋಸ್ ಕಾಂಗ್ರೆಸ್ ಪಕ್ಷದಲ್ಲೇ ಹೊಸ ವಿಭಾಗವೊಂದರ ರಚನೆಯನ್ನು ಕಲಕತ್ತಾದಲ್ಲಿ (ಈಗಿನ ಕೋಲ್ಕತ) ಪ್ರಕಟಿಸಿದರು. ಅದನ್ನು `ಫಾರ್ವರ್ಡ್ ಬ್ಲಾಕ್' ಎಂದು ಅವರು ಕರೆದರು. ರಾಷ್ಟ್ರದಲ್ಲಿನ ಎಲ್ಲ ಕ್ರಾಂತಿಕಾರಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಪ್ರಗತಿಪರ ಶಕ್ತಿಗಳನ್ನು ಕನಿಷ್ಠ ಕಾರ್ಯಕ್ರಮದ ಅಡಿಯಲ್ಲಿ ಒಗ್ಗೂಡಿಸುವ ಉದ್ದೇಶ ಇದರದ್ದಾಗಿತ್ತು.

1916: ಐರಿಷ್ ರಾಷ್ಟ್ರೀಯವಾದಿ, ಕವಿ, ಶಿಕ್ಷಣತಜ್ಞ ಪ್ಯಾಟ್ರಿಕ್ ಹೆನ್ರಿ ಪಿಯರ್ಸ್ ಮತ್ತು ಇತರ ಇಬ್ಬರನ್ನು ಬ್ರಿಟಿಷ್ ಸರ್ಕಾರ ಈಸ್ಟರ್ ದಂಗೆಯಲ್ಲಿ ವಹಿಸಿದ ಪಾತ್ರಕ್ಕಾಗಿ ಗಲ್ಲಿಗೇರಿಸಿತು. 1916ರ ಏಪ್ರಿಲ್ 24ರಂದು ಆರಂಭವಾದ ಬ್ರಿಟಿಷ್ ವಿರೋಧಿ ದಂಗೆಯಲ್ಲಿ ಪಿಯರ್ಸ್ ಐರಿಷ್ ಪಡೆಗಳ ಮಹಾದಂಡನಾಯಕನಾಗಿದ್ದ.

1898: ಗೋಲ್ಡಾ ಮೀಯರ್ (1898-1978) ಹುಟ್ಟಿದ ದಿನ. ಈಕೆ ಇಸ್ರೇಲಿನ ನಾಲ್ಕನೇ ಪ್ರಧಾನಿ ಹಾಗೂ ಅಲ್ಲಿನ ಪ್ರಥಮ ಮಹಿಳಾ ಪ್ರಧಾನಿ.

1897: ವಿ.ಕೆ. ಕೃಷ್ಣ ಮೆನನ್ (1897-1974) ಜನ್ಮದಿನ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇವರು 1962ರಲ್ಲಿ ಭಾರತದ ಮೇಲೆ ಚೀನ ದಾಳಿ ನಡೆಸಿದಾಗ ಭಾರತದ ರಕ್ಷಣಾ ಸಚಿವರಾಗಿದ್ದರು.

No comments:

Post a Comment