Saturday, May 12, 2018

ಇಂದಿನ ಇತಿಹಾಸ History Today ಮೇ 11

ಇಂದಿನ ಇತಿಹಾಸ History Today ಮೇ 11

2018: ಮುಂಬೈ: ಮಹಾರಾಷ್ಟ್ರದ ಹಿಂದಿನ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಹಿಮಾಂಶು ರಾಯ್ ಅವರು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ರಾಯ್ ಅವರು ತಮ್ಮ ಮುಂಬೈ ನಿವಾಸದಲ್ಲಿ ಮಧ್ಯಾಹ್ನ ೧.೪೦ರ ಸುಮಾರಿಗೆ ಸ್ವತಃ ಗುಂಡು ಹಾರಿಸಿಕೊಂಡರು.  ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪೊಲೀಸರು ತಿಳಿಸಿದರು. ಕ್ಯಾನ್ಸರಿನಿಂದ ಬಳಲುತ್ತಿದ್ದ ರಾಯ್ ಅವರು ದೀರ್ಘ ಕಾಲದಿಂದ ವೈದ್ಯಕೀಯ ರಜೆಯಲ್ಲಿದ್ದರು. ರಾಯ್ ಅವರು ಪ್ರಸ್ತುತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿ (ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್) ಸೇವೆ ಸಲ್ಲಿಸುತಿದ್ದರು. ಈ ಹಿಂದೆ ಅವರು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ ಮುಖ್ಯಸ್ಥರಾಗಿದ್ದರು. ೧೯೮೮ರ ತಂಡದ ಅಖಿಲ ಭಾರತ ಪೊಲೀಸ್ ಸೇವಾ ಅಧಿಕಾರಿಯಾಗಿರುವ ರಾಯ್ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿದ್ದರು.
೨೦೧೨-೧೪ರ ಅವಧಿಯಲ್ಲಿ ಜಂಟಿ ಪೊಲೀಸ್ ಕಮೀಷನರ್ (ಅಪರಾಧ) ಆಗಿದ್ದ ರಾಯ್ ಐಪಿಎಲ್ ಬೆಟ್ಟಿಂಗ್ ಹಗರಣದ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.  ಎಟಿಎಸ್ ಮುಖ್ಯಸ್ಥರಾಗಿ, ಅವರು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಅಮೆರಿಕನ್ ಸ್ಕೂಲ್ ಸ್ಫೋಟಕ್ಕೆ ಸಂಚು ಹೆಣೆದಿದ್ದ ಆಪಾದನೆಯಲ್ಲಿ ಸಾಫ್ಟವೇರ್ ಎಂಜಿನಿಯರ್ ಅನೀಸ್ ಅನ್ಸಾರಿಯನ್ನು ಬಂಧಿಸಿದ್ದರು.  ಇನ್ನೂ ಏಳು ವರ್ಷಗಳ ಸೇವಾವಧಿ ಇದ್ದ ರಾಯ್ ಅವರು ಮುಂಬೈಯ ಮೊತ್ತ ಮೊದಲ ಸೈಬರ್ ಕ್ರೈಮ್ ಸೆಲ್ ಸ್ಥಾಪಿಸಿದ, ಗ್ರಾಮೀಣ ಮಹಾರಾಷ್ಟ್ರದಲ್ಲಿ ಪರಿಣಾಮಕಾರಿ ಡಕಾಯತಿ ನಿಗ್ರಹ ಕ್ರಮಗಳನ್ನು ಕೈಗೊಂಡ ಹಾಗೂ ಮಹಿಳೆಯರಿಗೆ ಸಂಬಂಧಪಟ್ಟ ಅಪರಾಧಗಳ ಜೊತೆ ವ್ಯವಹರಿಸಲು ವಿಶೇಷ ಸೆಲ್ ರಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2018: ಜನಕಪುರ (ನೇಪಾಳ): ಭಾರತದ ’ಮೊದಲು ನೆರೆಹೊರೆ ನೀತಿಯಲ್ಲಿ ನೇಪಾಳಕ್ಕೆ ಅಗ್ರಗಣ್ಯ ಸ್ಥಾನವನ್ನು ನೀಡುವ ಭರವಸೆಯನ್ನು ಇಲ್ಲಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಗಳ ಪವಿತ್ರ ನಗರವಾದ ಜನಕರಪುರ ಅಭಿವೃದ್ಧಿಗೆ ೧೦೦ ಕೋಟಿ ರೂಪಾಯಿಗಳ ಕೊಡುಗೆ ಘೋಷಿಸಿದರು. ಜನಕಪುರ-ಅಯೋಧ್ಯೆ ನಡುವಣ ನೇರ ಬಸ್ಸು ಸಂಚಾರಕ್ಕೂ ಚಾಲನೆ ನೀಡಿದರು.  ಜನಕಪುರ ಸಬ್-ಮೆಟ್ರೋಪಾಲಿಟನ್ ಸಿಟಿಯು ಬರ್‍ಹಾಬಿಘ ಮೈದಾನದಲ್ಲಿ ಏರ್ಪಡಿಸಿದ್ದ ನಾಗರಿಕ ಸತ್ಕಾರ ಸಮಾರಂಭದಲ್ಲಿ ಮೋದಿ ನೇಪಾಳಿ ಮತ್ತು ಮೈಥಿಲಿ ಭಾಷೆಯಲ್ಲಿ ಸಂಕ್ಷಿಪ್ತವಾಗಿ ಮಾತನಾಡಿ ಉಭಯ ರಾಷ್ಟ್ರಗಳ ನಡುವಣ ಪೌರಾಣಿಕ ಸಂಬಂಧಗಳನ್ನು ನೆನಪಿಸಿದರು.  ಮೂರು ಬಾರಿ ’ಜಯ್ ಸಿಯಾರಾಮ್ ಘೋಷಣೆಯೊಂದಿಗೆ ತಮ್ಮ ಭಾಷಣ ಆರಂಭಿಸಿದ ಮೋದಿ ಪೌರಾಣಿಕ ಉಲ್ಲೇಖಗಳು ಮತ್ತು ಸಂಕೇತಗಳನ್ನು ಪ್ರಸ್ತಾಪಿಸಿದರು. ತಾವು ಜನಕಪುರಕ್ಕೆ ಪ್ರಧಾನಿಯಾಗಿ ಬಂದಿಲ್ಲ, ಬದಲು ಒಬ್ಬ ಯಾತ್ರಾರ್ಥಿಯಾಗಿ ಬಂದಿದ್ದೇನೆ ಎಂದು ಹರ್ಷೋದ್ಘಾರಗಳ ಮಧ್ಯೆ ಮೋದಿ ನುಡಿದರು.  ೨೦೧೪ರಲ್ಲಿ ಅಧಿಕಾರ ವಹಿಸಿಕೊಂಡಂದಿನಿಂದ ನೇಪಾಳಕ್ಕೆ ಮೂರನೇ ಭೇಟಿ ನೀಡಿರುವ ಮೋದಿ ’ಯಾರೇ ಒಬ್ಬ ವ್ಯಕ್ತಿ ಗೆಳೆಯ ನರಳುತ್ತಿದ್ದಾಗ ನಿರ್ಲಿಪ್ತನಾಗಿ ಇರಲು ಸಾಧ್ಯವಿಲ್ಲ. ನಿಜವಾದ ಗೆಳೆಯ ಯಾವಾಗಲೂ ತನ್ನ ಗೆಳೆಯ ತೊಂದರೆಯಲ್ಲಿದ್ದಾಗ ನೆರವಾಗುತ್ತಾನೆ ಎಂಬ ಅರ್ಥವನ್ನು ನೀಡುವ ರಾಮಚರಿತ ಮಾನಸದ ಶ್ಲೋಕವನ್ನು ಓದಿ ಹೇಳಿದರು.  ‘ಸಮಸ್ಯೆ ಎದುರಾದಾಗಲೆಲ್ಲ, ಭಾರತ ಮತ್ತು ನೇಪಾಳ ಒಟ್ಟಾಗಿ ನಿಂತಿವೆ. ಅತ್ಯಂತ ಕಷ್ಟದ ದಿನಗಳಲ್ಲಿ ನಾವು ಪರಸ್ಪರ ನೆರವಾಗಿದ್ದೇವೆ ಎಂದು ನುಡಿದ ಅವರು ’ಭಾರತದ ಮೊದಲು ನೆರೆಹೊರೆ ನೀತಿಯ ಅಡಿಯಲ್ಲಿ ನೇಪಾಳಕ್ಕೆ ಅಗ್ರಸ್ಥಾನವಿದೆ ಎಂದು ಹೇಳಿ, ಶ್ರೀರಾಮನ ಪತ್ನಿ ಸೀತೆಯ ಜನ್ಮಸ್ಥಳ ಎಂಬುದಾಗಿ ಪರಿಚಿತವಾಗಿರುವ  ಜನಕಪುರ ಮತ್ತು ನೆರೆಹೊರೆಯ ಅಭಿವೃದ್ಧಿಗೆ ೧೦೦ ಕೋಟಿ ರೂಪಾಯಿಗಳ ಕೊಡುಗೆಯನ್ನು ಘೋಷಿಸಿದರು. ಈ ಹಣವನ್ನು ಕೇಂದ್ರ ಸರ್ಕಾರ ಮತ್ತು ೨ನೆ ಪ್ರಾಂತ್ಯದ ಸ್ಥಳೀಯ ಸರ್ಕಾರ ಜಂಟಿ ಸಹಯೋಗದೊಂದಿಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಿವೆ. ಜನಕಪುರ-ಅಯೋಧ್ಯಾ ಬಸ್ ಸೇವೆ: ಇದಕ್ಕೆ ಮುನ್ನ ಮೋದಿ ಮತ್ತು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ಅವರು ಜಂಟಿಯಾಗಿ ಹಿಂದುಗಳ ಪವಿತ್ರ ನಗರಗಳಾದ ಜನಕಪುರ ಮತ್ತು ಅಯೋಧ್ಯಾ ನಡುವಣ ನೇರ ಬಸ್ಸು ಸೇವೆಯನ್ನು ಉದ್ಘಾಟಿಸಿದರು. ಜನಕಪುರವನ್ನು ರಾಮಾಯಣ ಸರ್ಕಿಟ್ ಜೊತೆಗೆ ಜೋಡಿಸಲು ತಮಗೆ ಅತೀವ ಸಂತಸವಾಗುತ್ತಿದೆ ಎಂದು ಮೋದಿ ನುಡಿದರು.  ಈ ಸರ್ಕಿಟ್ ಧಾರ್ಮಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಿದೆ. ಇದು ಉಭಯ ರಾಷ್ಟ್ರಗಳ ನಡುವಣ ಸಂಪರ್ಕವನ್ನೂ ಬಲ ಪಡಿಸಲಿದೆ ಎಂದು ಪ್ರಧಾನಿ ಹೇಳಿದರು.  ಎರಡೂ ಸರ್ಕಿಟ್ ಗಳು ನೇಪಾಳ ಮತ್ತು ಭಾರತದಲ್ಲಿನ ಬೌದ್ಧಮತ  ಮತ್ತು ಜೈನ ಮತಗಳಿಗೆ ಸಂಬಂಧಿಸಿದ ಪ್ರದೇಶಗಳ ಅಭಿವೃದ್ಧಿಗೂ ನೆರವಾಗಲಿವೆ. ಯುವಕರಿಗೆ ಉದ್ಯೋಗಗಳನ್ನೂ ಸೃಷ್ಟಿಸಲಿವೆ ಎಂದು ಅವರು ಪ್ರಕಟಿಸಿದರು.  ಭಾರತ ಮತ್ತು ನೇಪಾಳ ಜೊತೆಯಾಗಿ ಐದು ’ಟಿಗಳ: ಟ್ರೆಡಿಷನ್, ಟ್ರೇಡ್, ಟೂರಿಸಂ, ಟೆಕ್ನಾಲಜಿ ಮತ್ತು ಟ್ರಾನ್ಸ್ ಪೋರ್ಟ್ (ಪರಂಪರೆ, ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಸಾಗಣೆ) ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಪರಸ್ಪರ ಜೊತೆಯಾಗಿ ಕೆಲಸ ಮಾಡಿದರೆ ಉಭಯ ರಾಷ್ಟ್ರಗಳಿಗೂ ಅದರಿಂದ ಅನುಕೂಲವಿದೆ ಎಂದು ಮೋದಿ ಹೇಳಿದರು.  ನೇಪಾಳ ಮತ್ತು ಭಾರತವನ್ನು ಐ-ವೇ ಅಥವಾ ಮಾಹಿತಿ, ರೈಲ್ವೇ, ಟ್ರಾನ್ಸ್ ವೇ ಅಥವಾ ಎಲೆಕ್ಟ್ರಿಕ್ ಸಂಪರ್ಕ, ವಾಟರ್ ವೇ (ಜಲಮಾರ್ಗ) ಮತ್ತು ಏರ್ ವೇ (ವಾಯಮಾರ್ಗ) ಈ  ಹೆದ್ದಾರಿ ಮೂಲಕ ಜೋಡಿಸಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನುಡಿದರು.  ನೇಪಾಳವನ್ನು ಜಲಮಾರ್ಗಗಳ ಮೂಲಕವೂ ಸಂಪರ್ಕಿಸಲು ನಾವು ತೀವ್ರ ಪ್ರಯತ್ನ ನಡೆಸುತ್ತಿದ್ದೇವೆ. ಇದರಿಂದ ನೇಪಾಳಕ್ಕೆ ತನ್ನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗಲಿದೆ. ಹೀಗಾದಲ್ಲಿ ನೇಪಾಳವು ಅಂತಾರಾಷ್ಟ್ರೀಯ ವ್ಯಾಪಾರದ ಅನುಕೂಲಗಳನ್ನು ಪಡೆದುಕೊಳ್ಳಲಿದೆ ಎಂದು ಮೋದಿ ಹೇಳಿದರು. ಸೀತಾ ಮಾತೆಯ ಕೃಪೆಯಿಂದ ಜನಕಪುರಕ್ಕೆ ಬೇಟಿ ನೀಡಬೇಕೆಂಬ ತಮ್ಮ ದೀರ್ಘ ಕಾಲದ ಕನಸು ನನಸಾಯಿತು ಎಂದೂ ಮೋದಿ ನುಡಿದರು.

2018: ಚೆನ್ನೈ: ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪತ್ನಿ ಶ್ರೀಮತಿ ನಳಿನಿ, ಪುತ್ರ ಕಾರ್ತಿ ಚಿದಂಬರಂ ಮತ್ತು ಸೊಸೆ ಡಾ. ಶ್ರೀನಿಧಿ ಅವರ ವಿರುದ್ಧ ಕಾಳಧನ ಕಾಯ್ದೆಯ ಅಡಿಯಲ್ಲಿ ವಿದೇಶೀ ಆಸ್ತಿಯನ್ನು ಘೋಷಿಸದೇ ಇದ್ದುದಕ್ಕಾಗಿ ಆದಾಯ ತೆರಿಗೆ ಇಲಾಖೆಯು ನಾಲ್ಕು ಆರೋಪ ಪಟ್ಟಿಗಳನ್ನು (ಚಾರ್ಜ್ ಶೀಟ್) ಸಲ್ಲಿಸಿತು.  ಚಾರ್ಜ್‌ಶೀಟ್ ಅಥವಾ ಪ್ರಾಸೆಕ್ಯೂಷನ್ ದೂರುಗಳನ್ನು ಇಲಾಖೆಯು ಚೆನ್ನೈಯ ವಿಶೇಷ ನ್ಯಾಯಾಲಯದಲ್ಲಿ ಕಾಳ ಧನ (ವಿದೇಶೀ ಆದಾಯ ಮತ್ತು ಆಸ್ತಿಗಳನ್ನು ಘೋಷಿಸದ) ಮತ್ತು ತೆರಿಗೆ ಹೇರಿಕೆ ಕಾಯ್ದೆ ೨೦೧೫ ರ ಅಡಿಯಲ್ಲಿ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಶ್ರೀಮತಿ ನಳಿನಿ, ಕಾರ್ತಿ ಮತ್ತು ಡಾ. ಶ್ರೀನಿಧಿ ಅವರ ವಿರುದ್ಧ ಇಂಗ್ಲೆಂಡಿನ ಕೇಂಬ್ರಿಜ್ ನಲ್ಲಿ ಇರುವ ೫.೩೭ ಕೋಟಿ ರೂಪಾಯಿ ಮೌಲ್ಯದ ಒಂದು ಆಸ್ತಿ ಮತ್ತು ಅದೇ ರಾಷ್ಟ್ರದಲ್ಲಿರುವ ೮೦ ಲಕ್ಷ ರೂಪಾಯಿ ಮೌಲ್ಯದ ಇನ್ನೊಂದು ಆಸ್ತಿ ಹಾಗೂ ಅಮೆರಿಕದಲ್ಲಿನ ೩.೨೮ ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಘೋಷಿಸದೇ ಇದ್ದ ಆರೋಪವನ್ನು ಹೊರಿಸಲಾಗಿದೆ ಎಂದು ಅವರು ಹೇಳಿದರು.  ಚಿದಂಬರಂ ಕುಟುಂಬ ಸದಸ್ಯರು ತೆರಿಗೆ ಅಧಿಕಾರಿಗಳಿಗೆ ಈ ಹೂಡಿಕೆಗಳನ್ನು ತಿಳಿಸಿಲ್ಲ, ಹಾಗೆಯೇ ಕಾರ್ತಿ ಅವರ ಸಹ ಮಾಲೀಕತ್ವದ ಚೆಸ್ ಗ್ಲೋಬಲ್ ಅಡ್ವೈಸರಿ ಕಂಪೆನಿಯಲ್ಲಿನ ಹೂಡಿಕೆ ಬಗೆಗೂ ತಿಳಿಸಿಲ್ಲ. ಇದು ಕಾಳಧನ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರೋಪ ಪಟ್ಟಿಗಳು ಪ್ರತಿಪಾದಿಸಿದವು.  ವಿದೇಶಗಳಲ್ಲಿ ಅಕ್ರಮವಾಗಿ ರಹಸ್ಯ ಸಂಪತ್ತು ಶೇಖರಿಸಿದ ಭಾರತೀಯರನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಮತ್ತು ಕಾಳಧನ ವಿರುದ್ಧದ ತನ್ನ ಕ್ರಮದ ಭಾಗವಾಗಿ ಮೋದಿ ಸರ್ಕಾರವು ೨೦೧೫ರಲ್ಲಿ ಕಾನೂನನ್ನು ಜಾರಿಗೆ ತಂದಿತ್ತು.  ಇಲಾಖೆಯು ಇತ್ತೀಚೆಗೆ ಕಾರ್ತಿ ಮತ್ತು ಕುಟುಂಬಕ್ಕೆ ಪ್ರಕರಣ ಸಂಬಂಧಿತ ನೋಟಿಸುಗಳನ್ನು ಜಾರಿ ಮಾಡಿತ್ತು. ಕಾರ್ತಿ ಅವರು ಈ ನೋಟಿಸುಗಳನ್ನು ಮದ್ರಾಸ್ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.  ಕಾರ್ತಿಯವರು ತನಿಖೆಗೆ ಸಹಕರಿಸಲು ನಿರಾಕರಿಸಿದ್ದರು ಮತ್ತು ಆಸ್ತಿಯ ವಿವರಗಳನ್ನು ಮತ್ತು ಕಳೆದ ವರ್ಷ ಕೈಗೊಂಡ ವಹಿವಾಟಿನ ವಿವರಗಳನ್ನು ಇನ್ನೊಂದು ತೆರಿಗೆ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪ್ರತಿಪಾದಿಸಿದ್ದರು. ಒಬ್ಬ ವ್ಯಕ್ತಿಯ ವಿರುದ್ಧ ಒಂದೇ ಕಾನೂನಿನ ಅಡಿಯಲ್ಲಿ ಪರ್ಯಾಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅವರು ವಾದಿಸಿದ್ದರು. ಕಾರ್ತಿ ಅವರು ಸಲ್ಲಿಸಿದ್ದ ಈ ರಿಟ್ ಅರ್ಜಿಯನ್ನು ಬಳಿಕ ಹೈಕೋರ್ಟ್ ವಜಾಗೊಳಿಸಿತ್ತು.  ಪ್ರಕರಣದ ತನಿಖೆಯು ಮುಕ್ತಾಯದ ಹಂತಕ್ಕೆ ತಲುಪಿರುವುದರಿಂದ ಮತ್ತು ನ್ಯಾಯಾಲಯದ ಮುಂದೆ ಅದನ್ನು ಹಾಜರು ಪಡಿಸಲು ಸಾಧ್ಯವಾಗುವಂತೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ನುಡಿದರು.  ವಿದೇಶದಲ್ಲಿ ಕಾರ್ತಿ ಅವರು ಸಂಪಾದಿಸಿರುವ ಆಸ್ತಿ ಕಾನೂನಿಗೆ ವಿರುದ್ಧವಾಗಿದೆ ಎಂಬುದಾಗಿ ಕಂಡು ಬಂದ ಬಳಿಕ ಕಳೆದ ವರ್ಷ ಇಲಾಖೆ ಅವರ ವಿರುದ್ಧ ಕಾಳಧನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಸಾಗರದಾಚೆಯ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಳಧನ ನಿಗ್ರಹ ಕಾಯ್ದೆಯು ವ್ಯವಹರಿಸುತ್ತದೆ. ಇತ್ತೀಚಿನವರೆಗೂ ಈ ಪ್ರಕರಣಗಳ ತನಿಖೆಯನ್ನು ೧೯೬೧ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ನಡೆಸಲಾಗುತ್ತಿತ್ತು.  ಕಾಳಧನ ಕಾಯ್ದೆಯ ವಿಧಿಗಳು ಅಘೋಷಿತ ವಿದೇಶೀ ಆಸ್ತಿ ಮತ್ತು ಆದಾಯದ ಮೇಲೆ ಶೇಕಡಾ ೧೨೦ರಷ್ಟ ತೆರಿಗೆ ಮತ್ತು ದಂಡ ವಿಧಿಸಲು ಅವಕಾಶ ನೀಡಿದ್ದು, ಜೊತೆಗೆ ೧೦ ವರ್ಷಗಳವರೆಗೆ ಸೆರೆವಾಸದ ಶಿಕ್ಷೆಯನ್ನೂ ವಿಧಿಸಬಹುದಾಗಿದೆ.

2018: ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯ ಹಲವೆಡೆಗಳಲ್ಲಿ ಕೈಮುಗಿದ, ನಗುಮೊಗದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಭಿತ್ತಿಚಿತ್ರಗಳನ್ನು (ಪೋಸ್ಟರ್) ಅಂಟಿಸಲಾಗಿದ್ದು, ಇವುಗಳ ಮೇಲೆ ’ದಿ ಲೈ ಲಾಮಾ ಎಂಬ ಲೇವಡಿಯ ಶೀರ್ಷಿಕೆ ಕಂಡು ಬಂದಿತು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಭಿತ್ತಿಚಿತ್ರಗಳು ವೈರಲ್ ಆದ ಬಳಿಕ ಎಚ್ಚೆತ್ತ ದೆಹಲಿ ಪೊಲೀಸರು ಕೂಡಲೇ ಅವುಗಳನ್ನು ಕೀಳಿಸಿದರು.  ’ದಲೈ ಲಾಮಾ ಅವರ ಹೆಸರಿಗೆ ನಿಕಟವಾದ ಪದಗಳನ್ನು ಬಳಸಿಕೊಂಡು "ದಿ ಲೈ ಲಾಮಾ (ಸುಳ್ಳು ಲಾಮಾ) ಎಂಬ ಕೀಳು ಅರ್ಥದಲ್ಲಿ ಈ ಭಿತ್ತಿಚಿತ್ರ ಪದಗಳನ್ನು ಸೃಷ್ಟಿಸಲಾಗಿತ್ತು.  ಪ್ರಧಾನಿ ಮೋದಿ ಅವರನ್ನು  "ದಿ ಲೈ ಲಾಮಾ ಎಂದು ಲೇವಡಿ ಮಾಡುವ ಈ ಭಿತ್ತಿಚಿತ್ರಗಳು ದೆಹಲಿಯ ಮಂದಿರ್ ಮಾರ್ಗದ ಜೆ ಬ್ಲಾಕ್ ಪ್ರದೇಶ, ಎನ್ಡಿಎಂಸಿ ಪ್ರದೇಶ, ಮಧ್ಯ ದೆಹಲಿಯ ಪಟೇಲ್ ನಗರ ಮತ್ತು ಶಂಕರ್ ರೋಡ್ ಪ್ರದೇಶಗಳಲ್ಲಿನ ಗೋಡೆಗಳಲ್ಲಿ ಕಂಡು ಬಂದವು.  ಕೀಳು ಅಭಿರುಚಿಯ ಈ ಭಿತ್ತಿಚಿತ್ರಗಳನ್ನು ಕಂಡ ಬಿಜೆಪಿ ನಾಯಕರು, ಸದಸ್ಯರು ಈ ಕೃತ್ಯವನ್ನು ಆಕ್ಷೇಪಿಸಿ ಪ್ರತಿಭಟಿಸಿದರು.  ಬೆಳಗ್ಗೆ ಸುಮಾರು ೧೦.೧೫ರ ಹೊತ್ತಿಗೆ ದೆಹಲಿ ಪೊಲೀಸರು ಮಂದಿರ ಮಾರ್ಗದಲ್ಲಿನ ಗೋಡೆಗಳಲ್ಲಿದ್ದ ಭಿತ್ತಿಚಿತ್ರಗಳನ್ನು ಅವುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.  ಈ ಭಿತ್ತಿಚಿತ್ರಗಳಲ್ಲಿ ಮುದ್ರಕರ ಅಥವಾ ಮುದ್ರಣಾಲಯದ ಹೆಸರು ಪ್ರಕಟವಾಗಿಲ. ಹೀಗಾಗಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ  "ದೆಹಲಿ ಸಾರ್ವಜನಿಕ ಸೊತ್ತು ವಿರೂಪ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡರು.  ಈ ಭಿತ್ತಿಚಿತ್ರಗಳನ್ನು ಅಂಟಿಸಿದವರು ಯಾರೆಂದು ಪತ್ತೆ ಹಚ್ಚುವ ಪ್ರಯತ್ನದ ಭಾಗವಾಗಿ ಪೊಲೀಸರು ಆಯಾ ಪ್ರದೇಶಗಳ ಸ್ಥಳೀಯರನ್ನು ಪ್ರಶ್ನಿಸಿದರು ಮತ್ತು ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿದವು.  ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಮೇಠಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ ಎಂಬ ಭಿತ್ತಿಚಿತ್ರ ಕಂಡು ಬಂದಿತ್ತು; ಒಂದು ವಾರದ ಬಳಿಕ ರಾಯ್ ಬರೇಲಿಯಲ್ಲಿ  ಸೋನಿಯಾ ಗಾಂಧಿ ನಾಪತ್ತೆಯಾಗಿದ್ದಾರೆ ಎಂಬ ಭಿತ್ತಿಚಿತ್ರ ಕಂಡು ಬಂದಿತ್ತು.

2018: ನವದೆಹಲಿ: ಉತ್ತರಾಖಂಡದ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸುವಂತೆ ಮಾಡಿದ್ದ ತನ್ನ ಶಿಫಾರಸನ್ನು ಪುನರುಚ್ಚರಿಸಲು ಸುಪ್ರೀಂಕೋರ್ಟ್ ಕೊಲಿಜಿಯಂ ನಿರ್ಧರಿಸಿತು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಎಂ.ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರನ್ನು ಒಳಗೊಂಡ ಕೊಲಿಜಿಯಂ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ಹೆಸರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸುವಂತೆ ಇತರ ಹೆಸರುಗಳ ಜೊತೆಗೆ ಪುನಃ ಕಳುಹಿಸಲು ತೀರ್ಮಾನಿಸಿತು ಎಂದು ತಿಳಿದು ಬಂದಿತು.  ಕೊಲಿಜಿಯಂನ ಮುಂದಿನ ಸಭೆ ಮೇ ೧೬ರಂದು ಸಂಜೆ ೪.೧೫ಕ್ಕೆ ನಡೆಯಲಿದೆ.  ಕೊಲಿಜಿಯಂ ಸಭೆ ನಡೆಸಲು ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ಮೇ 10ರ  ಗುರುವಾರ ತಡವಾಗಿ ನಿರ್ಧರಿಸಿದ್ದರು. ಸುಪ್ರಿಂಕೋರ್ಟಿನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಜೆ. ಚೆಲಮೇಶ್ವರ್ ಅವರು ಮೇ ೯ರಂದು ನ್ಯಾಯಮೂರ್ತಿ ಜೋಸೆಫ್ ಅವರ ಹೆಸರನ್ನು ಕೇಂದ್ರಕ್ಕೆ ಕಳುಹಿಸಿಕೊಡುವ ಸಲುವಾಗಿ ಕೊಲಿಜಿಯಂ ಸಭೆಯನ್ನು ತುರ್ತಾಗಿ ಕರೆಯುವಂತೆ ಸಿಜೆಐ ಅವರನ್ನು ಆಗ್ರಹಿಸಿ ಪತ್ರ ಬರೆದಿದ್ದರು. ನ್ಯಾಯಮೂರ್ತಿ ಜೋಸೆಫ್ ಅವರಿಗೆ ಬಡ್ತಿ ನೀಡುವಂತೆ ಮಾಡಿದ ಕೊಲಿಜಿಯಂ ಶಿಫಾರಸನ್ನು ಸರ್ಕಾರವು ಏಪ್ರಿಲ್ ೨೬ರಂದು ಮರುಪರಿಶೀಲಿಸುವಂತೆ ಕೋರಿ ಹಿಂತಿರುಗಿಸಿತ್ತು. ಪ್ರಸ್ತಾಪವು ಸುಪ್ರೀಂಕೋರ್ಟಿನ ಮಾನದಂಡಗಳಿಗೆ ಅನುಗುಣವಾಗಿಲ್ಲ ಮತ್ತು ಸುಪ್ರೀಂಕೋರ್ಟಿನಲ್ಲಿ ನ್ಯಾಯಮೂರ್ತಿ ಜೋಸೆಫ್ ಅವರ ರಾಜ್ಯವಾದ ಕೇರಳಕ್ಕೆ ಸಾಕಷ್ಟು ಪ್ರಾತಿನಿಧ್ಯವಿದೆ ಎಂದು ಕೇಂದ್ರ ಹೇಳಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ಹಿರಿತನವನ್ನೂ ಪ್ರಶ್ನಿಸಿದ್ದ ಕೇಂದ್ರವು ಅವರಿಗಿಂತ ಹಿರಿಯರು ಸಾಕಷ್ಟು ಇದ್ದಾರೆ ಎಂದು ಹೇಳಿತ್ತು.

2016: ನಿತಾಲ್ಡೆಹ್ರಾಡೂನ್ ಉತ್ತರಾಖಂಡದಲ್ಲಿ ಹರೀಶ್ ರಾವತ್ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುಪ್ರೀಂಕೋರ್ಟಿಗೆ ಈದಿನ ತಿಳಿಸಿದ ಕೇಂದ್ರ ಸರ್ಕಾರವು ಬಳಿಕ ರಾಷ್ಟ್ರಪತಿ ಆಳ್ವಿಕೆಯನ್ನೂ ರದ್ದು ಪಡಿಸಿತು. ಸುಪ್ರೀಂಕೋರ್ಟ್ ವಿಧಾನಸಭೆಯಲ್ಲಿ ಮೇ 10ರಂದು ನಡೆದ ವಿಶ್ವಾಸಮತ ಪ್ರಕ್ರಿಯೆಗೆ ತನ್ನ ಅಂಗೀಕಾರ ಮುದ್ರೆಯನ್ನು ಒತ್ತಿ, ಮುಖ್ಯಮಂತ್ರಿಯಾಗಿ ಮುಂದುವರೆಯಲು ರಾವತ್ ಅವರಿಗೆ ಅನುಮತಿ ನೀಡಿತು. ವಿಶ್ವಾಸಮತ ಪ್ರಕ್ರಿಯೆಯಲ್ಲಿ ಪದಚ್ಯುತ ಸಿಎಂ ಹರೀಶ್ ರಾವತ್ ಪರ 33 ಮತಗಳು ಚಲಾವಣೆಗೊಂಡಿದ್ದು,. ಹರೀಶ್ ರಾವತ್ ವಿರುದ್ಧ 28 ಮತಗಳು ಚಲಾವಣೆಗೊಂಡಿವ ಎಂದು ಸುಪ್ರೀಂಕೋರ್ಟಿಗೆ ತಿಳಿಸಲಾಯಿತು. ಅನರ್ಹ ಶಾಸಕರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದರಿಂದ ಬಹುತೇಕ ಹರೀಶ್ ರಾವತ್ ಅವರಿಗೆ ಜಯ ಲಭಿಸುವುದು ಖಚಿತವಾಗಿತ್ತು. ವಿಶ್ವಾಸ ಮತದಾನ ಪ್ರಕ್ರಿಯೆ ನಂತರ ಕಾಂಗ್ರೆಸ್ ವಿಜಯೋತ್ಸವ ಆಚರಿಸಿತ್ತು.  ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತನ್ನ ಅಂಕಿತ ಹಾಕಿದ ಬಳಿಕ, ಮತ್ತೆ ಉತ್ತರಾಖಂಡದ ಮುಖ್ಯಮಂತ್ರಿಯಾಗಲು ಸನ್ನದ್ಧರಾಗಿರುವ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಕೇಂದ್ರದ ವಿರುದ್ಧ ತಮಗೆ ತೀಕ್ಷ್ಣ ಕಹಿ ಭಾವವೇನೂ ಇಲ್ಲ, ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಬೆಂಬಲ ಬೇಕುಎಂದು ಹೇಳಿದರು. ಉತ್ತರಾಖಂಡ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯಲಾಗುವುದು ಎಂದು ಕೇಂದ್ರವು ಸುಪ್ರೀಂಕೋರ್ಟಿಗೆ ತಿಳಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾವತ್, ‘ಅದು ಬಿಕ್ಕಟ್ಟು, ಉದ್ವಿಗ್ನತೆ, ಅನಿಶ್ಚಿತತೆಯ ಅವಧಿಯಾಗಿತ್ತು, ಇದರಿಂದಾಗಿ ರಾಜ್ಯ ಹಲವಾರು ನಷ್ಟಗಳನ್ನೂ ಅನುಭವಿಸಿತು. ಆದರೆ ಎಲ್ಲವೂ ಸುಖಾಂತ್ಯಗೊಂಡಿದ.’ ಎಂದು ಹೇಳಿದರು. ಮಾರ್ಚ್ 27ರಂದು ಕೇಂದ್ರ ಸರ್ಕಾರವು ತನ್ನ ಸರ್ಕಾರವನ್ನು ಸಾಂವಿಧಾನಿಕ ಆಡಳಿತ ಕುಸಿದಿದೆ ಎಂಬ ನೆಲೆಯಲ್ಲಿ ವಜಾ ಗೊಳಿಸಿದಂದಿನಿಂದ ನಡೆದ ಘಟನೆಗಳ ಬಗ್ಗೆ ಪ್ರಸ್ತಾಪಿಸಿದ ಅವರುಈಗ ಅದು ಮುಗಿದ ಅಧ್ಯಾಯಎಂದು ನುಡಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ರಾಷ್ಟ್ರಪತಿ ಆಳ್ವಿಕೆ ಕೊನೆಗೊಳಿಸಿ, ತಮ್ಮ ಸರ್ಕಾರವನ್ನು ಪುನಃಸ್ಥಾಪಿಸುವುದಾಗಿ ಸುಪ್ರೀಂಕೋರ್ಟಿಗೆ ತಿಳಿಸುವ ಮೂಲಕಹೃದಯ ವೈಶಾಲ್ಯಮೆರೆದಿದ್ದಾರೆ ಎಂದು ರಾವತ್ ಶ್ಲಾಘಿಸಿದರು. ಮಧ್ಯೆ ಕೇಂದ್ರ ಸಚಿವ ಸಂಪುಟವು ಈದಿನ ಸಭೆ ಸೇರಿ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯುವ ನಿರ್ಣಯವನ್ನು ತೆಗೆದುಕೊಂಡಿತು,

2016: ನವದೆಹಲಿ: ಎನ್ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ನದಿಗಳ ಜೋಡಣೆ ಯೋಜನೆ ದೊಡ್ಡ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗುವಂತಹುದಲ್ಲ ಎಂದು ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಇಲ್ಲಿ ಹೇಳಿದರು. ಗಂಗಾ ಪುನರುಜ್ಜೀವನ ವಿಷಯದ ಬಗ್ಗೆ ಪರಿಶೀಲಿಸಿದ ಸಂಸದೀಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರುನದಿಗಳನ್ನು ಸಣ್ಣ ಪ್ರಮಾಣದಲ್ಲಿ ಪರಸ್ಪರ ಜೋಡಿಸಬಹುದು. ಆದರೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ನದಿಗಳನ್ನು ಪರಸ್ಪರ ಜೋಡಿಸುವುದುಪ್ರಾಯೋಗಿಕಅಲ್ಲ ಎಂದು ಎಂದು ಅವರು ನುಡಿದರು. ಗಂಗಾ ಪುನರುಜ್ಜೀವನ ಕುರಿತ ಅಂದಾಜು ಸಮಿತಿಯ ವರದಿಯನ್ನು ಮಂಡಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಜೋಷಿ, ಒಂದು ತುದಿಯಿಂದ ಇನ್ನೊಂದು ತುದಿಗೆ ನೀರನ್ನು ಎತ್ತಿ ಹರಿಸಲು ಬಳಸಬೇಕಾದ ಪಂಪ್ ಸೆಟ್ಗಳಿಗೆ ಸಹಸ್ರಾರು ಕಿಲೋವ್ಯಾಟ್ ವಿದ್ಯುತ್ ಬೇಕು. ಯೋಜನೆ ಜಾರಿಗೆ ವಿದ್ಯುತ್ ಮತ್ತು ಹಣ ಎರಡೂ ಬೇಕು. ನಾವು ಈಗಲೇ ವಿದ್ಯುತ್ ಅಭಾವ ಅನುಭವಿಸುತ್ತಿದ್ದೇವೆ. ಮಾಲ್ವಾ ಪ್ರಸ್ಥಭೂಮಿಯನ್ನು ಏರಿ ನೀರು ಮುಂದಕ್ಕೆ ಸಾಗುವುದು ಹೇಗೆ? ಎಷ್ಟು ಪಂಪ್ ಸೆಟ್ಗಳು ಬೇಕಾಗಬಹುದು ಎಂದು ಕಲ್ಪಿಸಿಕೊಳ್ಳಿ ಎಂದು ಹೇಳಿದರು. ಏನಿದ್ದರೂ ಅಂದಾಜು ಸಮಿತಿಯ ಮುಂದೆ ನದಿ ಜೋಡಣೆಯ ವಿಷಯ ಇರಲಿಲ್ಲ ಎಂದು ಅವರು ನುಡಿದರು.

2016: ಉಜ್ಜಯಿನಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಶತ್ ಇದೇ ವರ್ಷ ಡಿಸೆಂಬರ್ 31 ವರೆಗೆ ಗಡುವು ನೀಡಿತು. ಉಜ್ಜಯಿನಿಯಲ್ಲಿ ನಡೆಯುತ್ತಿರುವ ಸಿಂಹಸ್ತ ಮಹಾಕುಂಭದ ವೇಳೆ ನೆರೆದಿದ್ದ ಸಂತರು ಮತ್ತು ತರುಣರನ್ನುದ್ದೇಶಿಸಿ  ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಚಂಪತ್ರಾಯ್ ಅವರು ‘‘ಸದ್ಯ ನಾವು ಸಹನೆಯಿಂದ ಸುಪ್ರೀಂ ಕೋರ್ಟ್ ವರದಿಗೆ ಕಾಯುತ್ತಿತ್ದೇವೆ. ಆದರೆ ಡಿಸೆಂಬರ್ 31 ನಂತರ ಕೋರ್ಟ್ ವರದಿಗೆ ಕಾಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ರಾಮ ಮಂದಿರಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಸಂಘಟನೆಗಳು ಅನಗತ್ಯವಾಗಿ ವದಂತಿಗಳನ್ನು ಸೃಷ್ಟಿಸುತ್ತಿದ್ದು ಅಶಾಂತಿಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದೆ ಎಂದು ರಾಯ್ ಹೇಳಿದರು. ಮಂದಿರದ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ.90ರಷ್ಟು ಕೆಲಸಗಳು ಪೂರ್ಣಗೊಂಡಿದ್ದು ಇನ್ನು ಉಳಿದಿರುವ ಶೇ.10ರಷ್ಟು ಕೆಲಸವನ್ನು ಸಾಧು ಸಂತರನ್ನು ಬಳಸಿಕೊಂಡು ಮಾಡಲಾಗುವುದು ಎಂದು ಅವರು ಹೇಳಿದರು.

2016: ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಯ ಮಾಜಿ ಕಾರು ಚಾಲಕ ಶ್ಯಾಮ್ರ್ ರೈ ಮಾಫಿ ಸಾಕ್ಷಿಯಾಗಲು ಕೋರುವುದರೊಂದಿಗೆ ಕುತೂಹಲ ಕೆರಳಿಸಿರುವ ಕೊಲೆ ಪ್ರಕರಣಕ್ಕೆ ಹೊಸ ತಿರುವು ಲಭಿಸಿತು. ನಾನು ಮಾಫಿ ಸಾಕ್ಷಿಯಾಗಲು ಬಯಸಿದ್ದೇನೆ.ಅಪರಾಧಕ್ಕೆ ಸಂಬಂಧಿಸಿದ ಕೆಲವು ಸತ್ಯಗಳನ್ನು ಬಹಿರಂಗ ಪಡಿಸಲು ಇಚ್ಛಿಸಿದ್ದೇನೆಎಂದು ರೈ ಈದಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ. ಪ್ರಕರಣದಲ್ಲಿ ತನಗೆ ಕ್ಷಮೆ ಲಭಿಸುವುದಾದಲ್ಲಿ ಅಪರಾಧಕ್ಕೆ ಸಂಬಂಧಿಸಿದಂತೆ ಕೆಲವು ಸತ್ಯಗಳನ್ನು ಹೇಳಬಯಸಿದ್ದೇನೆ ಎಂದು ರೈ ಕಳೆದ ವಾರ ಎರಡು ಪುಟಗಳ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ. ವಿಶೇಷ ನ್ಯಾಯಾಧೀಶ ಎಚ್.ಎಸ್. ಮಹಾಜನ್ ಪ್ರಶ್ನೆಗೆ ಕಟಕಟೆಯಲ್ಲಿ ನಿಂತು ಉತ್ತರಿಸಿದ ರೈಕೊಲೆ ಅಪರಾಧಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿಗಳು ನನಗೆ ಗೊತ್ತು. ಕೃತ್ಯದಲ್ಲಿ ನಾನೂ ಭಾಗಿ. ಆಕೆಯನ್ನು (ಶೀನಾ) ಕತ್ತು ಬಿಗಿದು ಕೊಲ್ಲಲಾಯಿತು. ನಾನು ಯಾವುದೇ ಒತ್ತಡಕ್ಕೆ ಮಣಿದು ಇದನ್ನು ಹೇಳುತ್ತಿಲ್ಲ. ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಸತ್ಯ ಹೇಳಬಯಸಿದ್ದೇನೆಎಂದು ಉತ್ತರಿಸಿದ. ರೈ ಕೋರಿಕೆ ಬಗ್ಗೆ ಮೇ 17ರಂದು ತನ್ನ ಉತ್ತರ ದಾಖಲಿಸುವಂತೆ ನ್ಯಾಯಾಲಯ, ಸಿಬಿಐಗೆ ಸೂಚಿಸಿತು. ರೈಯನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2015 ಆಗಸ್ಟ್ನಲ್ಲಿ ಬಂಧಿಸಲಾಗಿತ್ತು.

2016: ನವದೆಹಲಿ: ಕಾಲ್ ಡ್ರಾಪ್ಗಳಿಗೆ ಟೆಲಿಕಾಮ್ ಕಂಪೆನಿಗಳು ಗ್ರಾಹಕರಿಗೆ ಪರಿಹಾರ ನೀಡಬೇಕಾಗಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಕರೆ ತೊಂದರೆಗಳಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿ ರಾಷ್ಟ್ರದ ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು.  ದಿನದಲ್ಲಿ ಗರಿಷ್ಠ ಮೂರಕ್ಕಿಂತ ಹೆಚ್ಚು ಕರೆಗಳು ಕಾಲ್ ಡ್ರಾಪ್ ಆದಲ್ಲಿ ಕಾಲ್ ಡ್ರಾಪ್ಗಳಿಗೆ ಪ್ರತಿ ಕಾಲ್ ಡ್ರಾಪ್ಗೆ 1 ರೂಪಾಯಿಯಂತೆ ಗ್ರಾಹಕರಿಗೆ ಪರಿಹಾರ ನೀಡುವಂತೆ ಆದೇಶಿಸಿ ಟ್ರಾಯ್ ಕಳೆದ ವರ್ಷ ಮಾಡಿದ್ದ ಪ್ರಕಟಣೆಯ ವಿರುದ್ಧ ಟೆಲಿಕಾಮ್ ಆಪರೇಟರ್ಗಳು ಸಲ್ಲಿಸಿದ ದೂರುಗಳ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ತೀರ್ಪು ನೀಡಿತು. ‘ ಆದೇಶ ಅಕ್ರಮ, ನಿರಂಕುಶ, ಪಾರದರ್ಶಕವಲ್ಲ ಹಾಗೂ ನ್ಯಾಯೋಚಿತವಾದುದಲ್ಲಎಂದು ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಆರ್.ಎಫ್. ನಾರಿಮನ್ ಅವರ ಪೀಠ ಹೇಳಿತುಟ್ರಾಯ್ ಪ್ರಕಟಣೆಯನ್ನು ಎತ್ತಿ ಹಿಡಿದು ದೆಹಲಿ ಹೈಕೋರ್ಟ್ ಫೆಬ್ರುವರಿ 29ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ದಿ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ಮತ್ತು ಅಸೋಸಿಯೇಶನ್ ಆಫ್ ಯುನಿಫೈಡ್ ಸರ್ವೀಸ್ ಪ್ರೊವೈಡರ್ ಆಫ್ ಇಂಡಿಯಾ (ಯುಎಸ್ಪಿಎಐ) ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು.
2016: ಬಾಗ್ದಾದ್: ಇರಾಕ್ ಬಾಗ್ದಾದ್ ಮೇಲೆ ಇಸ್ಲಾಮಿಕ್ ಸ್ಟೇಟ್ ನಡೆಸಿದ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 50 ಮಂದಿ ಸಾವನಪ್ಪಿದರು.  ಸುಮಾರು 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ಹೆಚ್ಚಿನ ಶಿಯಾ ಸಮುದಾಯವಿರುವ ಜಿಲ್ಲೆ ಬಾಗ್ದಾದ್ ಸರ್ದಾರ್ ನಗರದ ಮಾರ್ಕೆಟ್ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಪೋಟಿಸಲಾಯಿತು. ಸತ್ತವರಲ್ಲಿ ಹೆಚ್ಚಿನ ಸಂಖ್ಯೆ ಮಹಿಳೆಯರು. ಶಿಯಾ ಯೋಧರನ್ನು ಗುರಿಯಾಗಿಸಿಕೊಂಡು ಐಸಿಸ್ ಆತ್ಮಾಹುತಿ ದಾಳಿ ನಡೆಸಿದೆ ಎಂದು ಹೇಳಲಾಯಿತು.
 2016: ನವದೆಹಲಿ: ಬಾಲಿವುಡ್ ಹಿರಿಯ ಚಿತ್ರನಟ ಅಮಿತಾಭ್ ಬಚ್ಚನ್ ವಿರುದ್ಧ 2001 ಆದಾಯ ತೆರಿಗೆ ಪ್ರಕರಣವನ್ನು ಮತ್ತೆ ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ಆದಾಯ ತೆರಿಗೆ ಇಲಾಖೆಗೆ ಅನುಮತಿ ನೀಡಿತು. ತೆರಿಗೆ ವಿವಾದದಲ್ಲಿ ಬಚ್ಚನ್ ಅವರಿಗೆ ನಿರಾಳತೆ ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತುಆದರೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ಎಂದು ಬಚ್ಚನ್ ಕಾನೂನು ಸಲಹೆಗಾರರು ರಾತ್ರಿ ತಿಳಿಸಿದರು. 2001-02ನೇ ಸಾಲಿನಲ್ಲಿ ಬಚ್ಚನ್ ಅವರು 1.66 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು. ‘ಕೌನ್ ಬನೇಗಾ ಕರೋಡಪತಿಟಿವಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬಚ್ಚನ್ ಅವರು ತೆರಿಗೆ ಪಾವತಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಪ್ರತಿಪಾದಿಸಿತ್ತು. 2012 ಜುಲೈ ತಿಂಗಳಲ್ಲಿ ಆದಾಯ ತೆರಿಗೆ ಕಮೀಷನರ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿತ್ತು. ಆದಾಯ ತೆರಿಗೆ ಕಮೀಷನರ್ ಅವರು ಬಚ್ಚನ್ ಅವರಿಗೆ ಸಂಬಂಧಿಸಿದ 2001-02 ತೆರಿಗೆ ಅಂದಾಜು ಕ್ರಮಗಳನ್ನು ಪುನಾರಂಭಿಸಿದ್ದರು. ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. 2002 ಅಕ್ಟೋಬರ್ 13ರಂದು ಇಲಾಖೆಗೆ ಸಲ್ಲಿಸಿದ ಆದಾಯ ತೆರಿಗೆ ವಿವರಗಳಲ್ಲಿ (ಐಟಿಆರ್) ಬಚ್ಚನ್ ಅವರು 2001-02 ಸಾಲಿನ ತಮ್ಮ ಆದಾಯ 14.99 ಕೋಟಿ ಎಂದು ಘೊಷಿಸಿದ್ದರು. 2002 ಮಾರ್ಚ್ 31ರಂದು ಪರಿಷ್ಕೃತ ಐಟಿಆರ್ ಸಲ್ಲಿಸಿದ ಚಿತ್ರನಟ, 2001-02 ಸಾಲಿನ ತಮ್ಮ ಆದಾಯ 8.11 ಕೋಟಿ ರೂಪಾಯಿ ಎಂದು ತಿಳಿಸಿದ್ದರು. ಆದರೆ, ಅಂದಾಜು ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಅವರು ಪರಿಷ್ಕೃತ ಐಟಿಆರ್ನ್ನು ಹಿಂತೆಗೆದುಕೊಂಡಿದ್ದರು.
 2016: ನವದೆಹಲಿ: ಸಮರ್ಪಕ ಸಂಚಾರ ನಿಯಂತ್ರಣ ವ್ಯವಸ್ಥೆ ಇಲ್ಲದೇ ಇದ್ದ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಬರೆದ ಪತ್ರವನ್ನು ಆಧರಿಸಿ ದೆಹಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಜಿ. ರೋಹಿಣಿ ಅವರು ಆಪತ್ತಿನ ಕರೆಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಖಟ್ಲೆ ದಾಖಲಿಸಿದರು.. ಸ್ವತಃ ಸಮಸ್ಯೆಗೆ ಸಿಲುಕಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿಪಿನ್ ಸಿಂಘಾನಿ ಅವರು ತುರ್ತು ಸಂಖ್ಯೆ 100ಕ್ಕೆ ಕರೆ ಮಾಡಿದ್ದರು. ಆದರೆ ಕರೆಯನ್ನು ಯಾರೂ ಸ್ವೀಕರಿಸಲಿಲ್ಲ. ಕಳಪೆ ವ್ಯವಸ್ಥೆಯ ಬಗ್ಗೆ ಕೋಪಗೊಂಡ ನ್ಯಾಯಮೂರ್ತಿಗಳು ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್ ವರ್ವರಿಗೆ ಪತ್ರ ಬರೆಯುವುದರ ಜೊತೆಗೆ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆದು ಸಾರ್ವಜನಿಕ ಹಿತಾಸಕ್ತಿ ಖಟ್ಲೆ ದಾಖಲಿಸುವಂತೆ ಮನವಿ ಮಾಡಿದ್ದರು. ನ್ಯಾಯಮೂರ್ತಿ ವಿಪಿನ್ ಸಿಂಘಾನಿ ಅವರು ಎಪ್ರಿಲ್ 29ರಂದು ಮದುವೆ ಸಮಾರಂಭಕ್ಕಾಗಿ ವಸಂತ್ ಕುಂಜಾಕ್ಕೆ ತೆರಳುತ್ತಿದ್ದರು. ಸಂದರ್ಭ ಮಾರ್ಗದಲ್ಲಿ ಅಧಿಕ ಟ್ರಾಫಿಕ್ ಜಾಮ್ ಆಗಿದ್ದು, ಸಮರ್ಪಕವಾಗಿವಾಗಿ ಟ್ರಾಫಿಕ್ ನಿಯಂತ್ರಿಸಲು ಸ್ಥಳದ ಅಧಿಕಾರಿ ಇರಲಿಲ್ಲ. ಆದ್ದರಿಂದ ಸಿಂಘಾನಿ ಅವರು ತುರ್ತು ಸಂಖ್ಯೆಗೆ ಮೊರೆ ಹೋದರು. ಆದರೆ ಕರೆಯನ್ನು ಮಾತ್ರ ಯಾರೂ ಸ್ವೀಕರಿಸಲಿಲ್ಲ. ಹತಾಶರಾದ ನ್ಯಾಯಮೂರ್ತಿಗಳು ವರ್ವ ಅವರ ವೈಯಕ್ತಿಕ ನಂಬರ್ಗೆ ಕೂಡ ಕಾಲ್ ಮಾಡಿದರು. ಆದರೆ ಕಮಿಷನರ್ ಕೂಡ ಪೋನ್ ತೆಗೆಯಲಿಲ್ಲ. ಘಟನೆಯ ಸಂಪೂರ್ಣ ವಿವರವನ್ನು ನ್ಯಾಯಾಧೀಶರು ತಮ್ಮ ಪತ್ರದಲ್ಲಿ ದಾಖಲಿಸಿದ್ದು, ವ್ಯವಸ್ಥೆಯಲ್ಲಿನ ದೋಷದ ಬಗ್ಗೆ ಪೊಲೀಸ್ ಆಯುಕ್ತರಿಗೆ ಬಿಸಿ ಮುಟ್ಟಿಸಿದ್ದರು. ಪತ್ರದ ಇನ್ನೊಂದು ಪ್ರತಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರೋಹಿಣಿ ಅವರಿಗೆ ಕಳುಹಿಸಿದ್ದು, ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಮಾನ್ಯ ಮಾಡುವಂತೆ ವಿನಂತಿಸಿಕೊಂಡಿದ್ದರು.

2016: ನವದೆಹಲಿ: ಬರಗಾಲದಂತಹ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಕೋಪ ಉಪಶಮನ ನಿಧಿಯನ್ನು ಸರ್ಕಾರ ಸ್ಥಾಪಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ಬರಗಾಲ ಪ್ರದೇಶಗಳಲ್ಲಿ ಕಂಗೆಟ್ಟ  ರೈತರಿಗೆ ಪರಿಣಾಮಕಾರಿ ಪರಿಹಾರ ಒದಗಿಸಲು ಬರ ನಿರ್ವಹಣಾ ನಿಯಮಾವಳಿಗಳನ್ನು ಪರಿಷ್ಕರಿಸಬೇಕು ಎಂದೂ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಬರಸಂತ್ರಸ್ಥ ಪ್ರದೇಶ ಎಂಬುದಾಗಿ ಘೋಷಿಸಲು ಕಾಲಮಿತಿಯನ್ನೂ ಕೇಂದ್ರ ಸರ್ಕಾರವು ವಿವರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ಬರ ಪರಿಸ್ಥಿತಿ ಅಂದಾಜು ಮಾಡುವ ಸಲುವಾಗಿ ಬಿಹಾರ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ಒಂದು ವಾರದ ಒಳಗಾಗಿ ನಡೆಸುವಂತೆ ಕೃಷಿ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿತು.

2016: ನವದೆಹಲಿ: ಭಾರತದಿಂದ ವಿದೇಶಕ್ಕೆ ಹಾರಿ ಬ್ರಿಟನ್ನಲ್ಲಿ ನೆಲೆಸಿರುವ ಸಾಲಗಾರ ಉದ್ಯಮಿ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದು ಬ್ರಿಟನ್ ಸರ್ಕಾರ ಹೇಳಿತು.  ಆದರೆ ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸುವ ಮನವಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿತು. ಮಲ್ಯ ವಿರುದ್ಧ ಹಣ ಲೇವಾದೇವಿ ಪ್ರತಿಬಂಧ ಕಾಯ್ದೆಯಡಿ ತನಿಖೆ ನಡೆಸಲು ಪಾಸ್ಪೋರ್ಟ್ ರದ್ದುಗೊಳಿಸಿ, ಬ್ರಿಟನ್ನಿಂದ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ಭಾರತ ಮನವಿ ಮಾಡಿತ್ತು. ಈಗಾಗಲೇ ಮಲ್ಯ ವಿರುದ್ಧ  ಜಾಮೀನು ರಹಿತ ವಾರೆಂಟ್ ಕೂಡಾ ಜಾರಿಯಾಗಿದೆ. 1971 ವಲಸೆ ಕಾಯ್ದೆ ಅನ್ವಯ, ಬ್ರಿಟನ್ಗೆ ಆಗಮಿಸುವ ಸಂದರ್ಭ ಸಲ್ಲಿಸಿದ ಅಧಿಕೃತ ಪಾಸ್ಪೋರ್ಟ್ ದೇಶ ತೊರೆಯುವವರೆಗೆ ಮುಂದುವರೆಯುತ್ತದೆ. ಹಾಗಾಗಿ ಮಧ್ಯಂತರ ಪಾಸ್ಪೋರ್ಟ್ ರದ್ದಾದರೂ ಬ್ರಿಟನ್ನಲ್ಲಿ ನೆಲೆಸಲು ತೊಡಕು ಉಂಟಾಗುವುದಿಲ್ಲ. ಅವಧಿಯನ್ನು ಮತ್ತಷ್ಟು ದಿನಗಳ ವರೆಗೆ ಮುಂದೂಡಿ ಅಲ್ಲಿಯೇ ನೆಲೆಸಬಹುದಾಗಿದೆ.

2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದ ರಾಜ್ವಾರ್ ಅರಣ್ಯ ಪ್ರದೇಶದಲ್ಲಿ ಮತ್ತೆ ಉಗ್ರಗಾಮಿಗಳು ಅಟ್ಟಹಾಸ ಮೆರೆದರು. ಉಗ್ರಗಾಮಿಗಳು ಹಾಗೂ ಯೋಧರ ನಡುವೆ ಪರಸ್ಪರ ಗುಂಡಿನ ಕಾಳಗೆ ನಡೆದು,ಓರ್ವ ಯೋಧ ಸಾವನ್ನಪ್ಪಿದ್ದಾನೆ. ಹಿಂದಿನ ದಿನ ತಡರಾತ್ರಿಯಿಂದಲೇ ಉಗ್ರಗಾಮಿಗಳ ಜಾಡನ್ನು ಭೇದಿಸಲು ಯೋಧರು ಕಾರ್ಯಾಚರಣೆ ನಡೆಸಿದರು. ಇಂದು ಮುಂಜಾನೆ ಕುಪ್ವಾರ ಅರಣ್ಯ ಪ್ರದೇಶದಲ್ಲಿ ಗುಂಡಿನ ಸದ್ದು ಮೊಳಗಿತು. ಕಾರ್ಯಾಚರಣೆ ಮುಂದುವರೆದು,ಹಲವು ಯೋಧರು ಗಂಭೀರವಾಗಿ  ಗಾಯಗೊಂಡರು.

2016: ಡಾಕಾ: ಇಸ್ಲಾಮಿಕ್ ನಾಯಕ ಮೊತಿಯುರ್ ರಹ್ಮಾನ್ ನಿಜಾಮಿಯನ್ನು ಬಾಂಗ್ಲಾದೇಶ ಈದಿನ ಬೆಳಗ್ಗೆ ನೇಣಿಗೆ ಏರಿಸಿದೆ. 1971 ಪಾಕಿಸ್ತಾನದ ವಿರುದ್ಧದ ಬಾಂಗ್ಲಾ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನಡೆಸಿದ ಅಪರಾಧಕ್ಕೆ ನಿಜಾಮಿ ಅವರಿಗೆ ಮರಣದಂಡನೆ ಶಿಕ್ಷೆ ನೀಡಲಾಗಿತ್ತು.
ಬಾಂಗ್ಲಾದೇಶದಲ್ಲಿ ಜನಾಂಗೀಯ ಹತ್ಯೆ, ಅತ್ಯಾಚಾರ ಮತ್ತು ಹಿಂಸೆಯ ಅಪರಾಧಗಳಿಗೆ ನಿಷೇದಿತ ಇಸ್ಲಾಮಿಕ್ ಪಕ್ಷ ಜಮತ್- - ಇಸ್ಲಾಮಿ ನಾಯಕ ರಹ್ಮಾನ್ ನಿಜಾಮಿ ಅವರನ್ನು ಗಲ್ಲಿಗೆ ಏರಿಸಿದ್ದಾಗಿ ಕಾನೂನು ಸಚಿವ ಅನಿಸುಲ್ ಹಕ್ ಸ್ಪಷ್ಟನೆ ನೀಡಿದರು.. 1971 ಬಾಂಗ್ಲಾ ಸ್ವಾತಂತ್ರ್ಯ ಹೋರಾಟದ ಸಂದರ್ಭ ಜಮಾತ್- - ಇಸ್ಲಾಮಿ ಸೇರಿದಂತೆ ಇತರ ಇಸ್ಲಾಮಿಕ್ ಸಂಘಟನೆಗಳು ಪಾಕಿಸ್ತಾನದಿಂದ ಬೇರ್ಪಡುವುದನ್ನು ವಿರೋಧಿಸಿ ದೇಶದಲ್ಲಿ ಹಿಂಸಾಕೃತ್ಯಕ್ಕೆ ಇಳಿದಿದ್ದರು. ಹಿಂಸೆಯಲ್ಲಿ ಸುಮಾರು 30 ಲಕ್ಷ ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ, ಹಿಂಸೆ ನಡೆದಿತ್ತು.

 2009: ಟೋಕಿಯೊದಲ್ಲಿ ನಡೆದ 'ಜಪಾನ್ ಸುಂದರಿ' ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಎಮಿರಿ ಮಿಯಾಸಾಕಾ ಅವರು 'ಮಿಸ್ ಯುನಿವರ್ಸ್ ಜಪಾನ್' ಪ್ರಶಸ್ತಿ ಗೆದ್ದುಕೊಂಡರು.

2009: ಅಂತಿಮ ಹಾಗೂ ಐದನೇ ಹಂತದ ಲೋಕಸಭಾ ಚುನಾವಣೆ ನಡೆಯುವ ಒಂಬತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈದಿನ ಸಂಜೆ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿತು.

2009: ಎಲ್‌ಟಿಟಿಇ ಪ್ರಮುಖ ನಾಯಕ ಮತ್ತು ವಕ್ತಾರರಾಗಿದ್ದ ರಾಸಯ್ಯ ಲಾಂತ್ರಿಯನ್ ಅವರನ್ನು ಶ್ರೀಲಂಕಾ ಸೇನಾಪಡೆ ಹತ್ಯೆ ಮಾಡಿದೆ ಎಂದು ಹೇಳಲಾಯಿತು.

2009: ಛತ್ತೀಸ್‌ಗಢ ಧಮ್ತಾರಿ ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ರಿಸ್‌ಗಾಂವ್ ಗ್ರಾಮದಲ್ಲಿ 150 ಜನ ಶಸ್ತ್ರಧಾರಿ ಮಾವೊವಾದಿ ಗೆರಿಲ್ಲಾಗಳ ತಂಡ 41 ಸದಸ್ಯ ಪೊಲೀಸ್ ಬೆಂಗಾವಲು ಪಡೆಯ ಆಕ್ರಮಣ ನಡೆಸಿದ ಪರಿಣಾಮ 12 ಪೊಲೀಸರು ಹಾಗೂ ಒಬ್ಬ ನಾಗರಿಕ ಮೃತರಾಗಿ, ಆರು ಜನ ಗಾಯಗೊಂಡರು. ಮಾವೊವಾದಿ ಉಗ್ರರು ಸಭೆ ಸೇರಲಿದ್ದಾರೆ ಎಂಬ ಗುಪ್ತಚರ ಮಾಹಿತಿ ಅನುಸರಿಸಿ ಅಲ್ಲಿಗೆ ತೆರಳಿದ ಪೊಲೀಸರು ಉಗ್ರರ ಬಲೆಗೆ ಸಿಲುಕಿ ಈ ದುರಂತ ಸಾವನ್ನು ಅಪ್ಪಬೇಕಾಯಿತು. ಈ ಪ್ರದೇಶದಲ್ಲಿ ಮೊದಲ ಬಾರಿ ನಡೆದ ಉಗ್ರರ ದಾಳಿ ಇದು.

2009: ವಿಮಾನದ ಸಹ ಪ್ರಯಾಣಿಕ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆರೋಪ ಎದುರಿಸುತ್ತಿದ್ದ ಕೇರಳದ ಮಾಜಿ ಸಚಿವರೊಬ್ಬರನ್ನು ನಿರ್ದೋಷಿ ಎಂದು ತಮಿಳುನಾಡಿನ ಕೊಟ್ಟಾಯಂ ನ್ಯಾಯಾಲಯ ತೀರ್ಪು ನೀಡಿತು. ಕೇರಳದ ಲೋಕೋಪಯೋಗಿ ಇಲಾಖೆಯ ಮಾಜಿ ಸಚಿವ ಪಿ.ಜೆ. ಜೋಸೆಫ್ 2006ರಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕಿರುತೆರೆ ಕಾರ್ಯಕ್ರಮ ನಿರೂಪಕಿ ಲಕ್ಷ್ಮಿ ಗೋಪಕುಮಾರ್ ಎಂಬುವರಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಸರ್ಕಾರ ಅವರ ರಾಜೀನಾಮೆ ಪಡೆದಿತ್ತು.

2009: 2008ರ ನವೆಂಬರಿನಲ್ಲಿ ನಡೆದ ಮುಂಬೈ ಮೇಲಿನ ಭಯೋತ್ಪಾದಕರ ದಾಳಿಯಲ್ಲಿ (26/11) ಇನ್ಸ್‌ಪೆಕ್ಟರ್ ತುಕಾರಾಂ ಓಂಬ್ಳೆ ಅವರನ್ನು ಕೊಲ್ಲಲು ಉಗ್ರ ಮೊಹಮ್ಮದ್ ಅಜ್ಮಲ್ ಕಸಾಬ್ ಬಳಸಿದ್ದ ಏ ಕೆ 47 ರೈಫಲನ್ನು ಸಾಕ್ಷಿ ಭಾಸ್ಕರ್ ಕದಂ ವಿಚಾರಣೆ ವೇಳೆ ಗುರುತಿಸಿದರು. ದಾಳಿಯಲ್ಲಿ ಸೆರೆ ಸಿಕ್ಕಿದ ಏಕೈಕ ಉಗ್ರ ಕಸಾಬ್‌ಗೆ ಈ ರೈಫಲ್ ತೋರಿಸಿದಾಗ ಆತ ಕೆರಳಿದ. ಅಲ್ಲದೇ ಗೊಣಗುತ್ತ ಮಾಧ್ಯಮ ಪ್ರತಿನಿಧಿಗಳನ್ನು ನೋಡಿ ನಗಲು ಶುರುಮಾಡಿದ.

2009: ಪಾಕಿಸ್ಥಾನ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಗಳಾದ ಐಎಸ್‌ಐ ಮತ್ತು ಸಿಐಎಗಳಿಂದಾಗಿಯೇ ತಾಲಿಬಾನ್ ಹುಟ್ಟಿಕೊಂಡಿದೆ ಎಂಬುದನ್ನು ಕೊನೆಗೂ ಒಪ್ಪಿಕೊಂಡ ಪಾಕಿಸ್ಥಾನ ಅಧ್ಯಕ್ಷ ಅಸೀಫ್ ಆಲಿ ಜರ್ದಾರಿ, ತಮ್ಮ ದೇಶ ಇದೀಗ ತಾಲಿಬಾನ್ ವಿರುದ್ಧ ಯುದ್ಧ ಮಾಡುತ್ತಿದೆ ಎಂದು ಹೇಳಿದರು. 'ಎನ್‌ಬಿಸಿ ನ್ಯೂಸ್ ಚಾನೆಲ್'ಗೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ದೇಶ ಮತ್ತು ಅಮೆರಿಕ ಮಾಡಿದ ಈ ಬಹುದೊಡ್ಡ ತಪ್ಪನ್ನು ಒಪ್ಪಿಕೊಂಡರು. 'ನಾವೇ ಸೃಷ್ಟಿಸಿದ ಈ ಪೆಡಂಭೂತದಿಂದ ಪಾರಾಗುವ ದಾರಿಯನ್ನು ಕಂಡುಕೊಳ್ಳಲು ನಾವು ಮರೆತುಬಿಟ್ಟಿದ್ದೆವು' ಎಂದು ಅವರು ನುಡಿದರು.

2009: ಪಾಕಿಸ್ಥಾನದ ವಾಯವ್ಯ ಪ್ರಾಂತ್ಯದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಪ್ರಮುಖ ಸೇನಾ ಕಾರ್ಯಾಚರಣೆಯಲ್ಲಿ 700 ತಾಲಿಬಾನ್ ಉಗ್ರರು ಹತರಾಗಿದ್ದು, ಎಲ್ಲಾ ಉಗ್ರರ ದಮನದವರೆಗೂ ಈ ಕಾರ್ಯಾಚರಣೆ ಮುಂದುವರಿಯುವುದು ಎಂದು ಎಂದು ಪಾಕಿಸ್ಥಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಹೇಳಿದರು.

2008: ಹುಬ್ಬಳ್ಳಿ ನಗರದ ಒಂದನೇ ಜೆಎಂಎಫ್ಸಿ ನ್ಯಾಯಾಲಯದ ಸಭಾಭವನದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಅಥವಾ ಸಿಮಿಯ ಕೈವಾಡ ಇರುವ ಶಂಕೆ ಇದ್ದು, ಸ್ಫೋಟಕ್ಕೆ ಬಳಸಲಾದ ಮೊಬೈಲ್ ಫೋನ್ ಸಿಮ್ ಕಾರ್ಡ್ ಸೇರಿದಂತೆ ಅನೇಕ ಮಹತ್ವದ ಸಾಕ್ಷ್ಯಾಧಾರಗಳು ಲಭ್ಯವಾದವು. ದೆಹಲಿಯಿಂದ ಆಗಮಿಸಿದ ರಾಷ್ಟ್ರೀಯ ಭದ್ರತಾ ದಳದ ಮೇಜರ್ ಪಾರಿತೋಷ ಉಪಾಧ್ಯಾಯ ನೇತೃತ್ವದ ನಾಲ್ವರು ಸದಸ್ಯರ ತಂಡ, ಬೆಂಗಳೂರಿನಿಂದ ಆಗಮಿಸಿದ ವಿಧಿವಿಜ್ಞಾನ ಸಂಸ್ಥೆಯ ಪ್ರಯೋಗಾಲಯದ ಉಪನಿರ್ದೇಶಕ ಜಯರಾಮ ನೇತೃತ್ವದ ನಾಲ್ವರು ಸದಸ್ಯರ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಫೋಟದ ಸ್ವರೂಪ ಕುರಿತು ಅಧ್ಯಯನ ನಡೆಸಿತು.

2008: ಅಮೆರಿಕದ ಮಿಸ್ಸೌರಿ ಹಾಗೂ ಒಕ್ಲಹಾಮಾ ಸಿಟಿಯಲ್ಲಿ ಚಂಡಮಾರುತದಿಂದ ಕನಿಷ್ಠ 18 ಮಂದಿ ಸತ್ತಿರುವುದಾಗಿ ಅಧಿಕಾರಿಗಳು ಹೇಳಿದರು. ಮಿಸ್ಸೌರಿಯಲ್ಲಿ ಕನಿಷ್ಠ 12 ಮಂದಿ ಸತ್ತಿದ್ದು, ಇವರಲ್ಲಿ 10 ಮಂದಿ ಒಕ್ಲಹಾಮಾ ಗಡಿಯಲ್ಲಿನ ನ್ಯೂಟೌನ್ ಕೌಂಟಿಯವರು. ವಾಯವ್ಯ ಒಕ್ಲಹಾಮಾದ ಪಿಚರಿನಲ್ಲಿ 6 ಮಂದಿ ಸತ್ತರು ಎಂದು ಮಿಸ್ಸೌರಿಯ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿ ಸೂಸಿ ಸ್ಟೋನರ್ ತಿಳಿಸಿದರು.

2008: ಶ್ರೀಲಂಕಾದ ಆಡಳಿತಾರೂಢ ಮೈತ್ರಿಕೂಟವು (ಯುಪಿಎಫ್ಎ) ಹಿಂಸೆ ಪೀಡಿತ ಪೂರ್ವ ಪ್ರಾಂತ್ಯದಲ್ಲಿ ನಡೆದ ನಿರ್ಣಾಯಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು.

2008: ಮ್ಯಾನ್ಮಾರಿನಲ್ಲಿ ಹಿಂದಿನ ದಿನ ನಡೆದ ಜನಮತಗಣನೆಯಲ್ಲಿ `ಭಾರಿ ಸಂಖ್ಯೆಯಲ್ಲಿ' ಜನರು ತಮ್ಮ ಮತ ಚಲಾಯಿಸಿದ್ದಾರೆ' ಎಂದು ಸೇನಾಡಳಿತ ಹೇಳಿಕೊಂಡಿತು. ಆದರೆ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಪರಿಹಾರ ವಿತರಿಸುವಲ್ಲಿ ಮಾತ್ರ ಅದು ಘೋರ ವೈಫಲ್ಯ ಕಂಡಿತು. ಮೇ 3ರಂದು ಅಪ್ಪಳಿಸಿದ ಭೀಕರ ಚಂಡಮಾರುತ 60 ಸಾವಿರಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡರೂ ಅದರ ಬಗ್ಗೆ ಅಂತಹ ಉಲ್ಲೇಖ ಮಾಡದ ಸರ್ಕಾರ, ನೂತನ ಸಂವಿಧಾನ ರಚನೆಗೆ ಅವಕಾಶ ನೀಡುವ ಈ ಜನಮತಗಣನೆಗೇ ಬಹಳ ಪ್ರಾಮುಖ್ಯತೆ ನೀಡಿತು. ಸರ್ಕಾರದ `ನ್ಯೂ ಲೈಟ್ ಆಫ್ ಮ್ಯಾನ್ಮಾರ್' ದೈನಿಕ ಜನಮತಗಣನೆಯ ಬಗ್ಗೆ ದೊಡ್ಡದಾಗಿ ವಿವರಣೆ ನೀಡಿತು.

2008: ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯ ಮತದಾನದ ಸಂದರ್ಭದಲ್ಲಿ ಹಲವೆಡೆ ಹಿಂಸಾಚಾರ ನಡೆಯಿತು. ಬರ್ಧಮನ್ ಜಿಲ್ಲೆಯಲ್ಲಿ ಮತಗಟ್ಟೆಯೊಂದರಲ್ಲಿ ಸಿಪಿಐ (ಎಂ) ಕಾರ್ಯಕರ್ತರು ನೂಕುನುಗ್ಗಲು ಉಂಟುಮಾಡಿದ್ದನ್ನು ವಿರೋಧಿಸಿದ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತನನ್ನು ಹತ್ಯೆ ಮಾಡಲಾಯಿತು. ಘಟನೆಯಲ್ಲಿ ಮತ್ತೊಬ್ಬ ಗಾಯಗೊಂಡ.

2008: ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯನ್ನು ಭೇಟಿ ಮಾಡುವಾಗ ವಕೀಲರು ಕಪ್ಪು ಕೋಟು ಧರಿಸುವ ಅಗತ್ಯವಿಲ್ಲ. ಬಾರ್ ಕೌನ್ಸಿಲಿನಿಂದ ಪಡೆದ ಗುರುತಿನ ಪತ್ರವನ್ನು ತೋರಿಸಿದರೆ ಸಾಕಾಗುತ್ತದೆ ಎಂದು ಮುಂಬೈ ನಗರದ ವಕೀಲರೊಬ್ಬರು ಹೈಕೋರ್ಟ್ ತೀರ್ಪೊಂದನ್ನು ಉದ್ಧರಿಸಿ ಸ್ಪಷ್ಟಪಡಿಸಿದರು. ಜೈಲಿನಲ್ಲಿ ವಿಚಾರಣಾಧೀನ ಕೈದಿಯನ್ನು ಭೇಟಿಯಾಗುವಾಗ ವಕೀಲರು ವಸ್ತ್ರಸಂಹಿತೆಯನ್ನು ಪಾಲಿಸಬೇಕೆಂಬ ನಿಯಮವನ್ನು 1992ರಲ್ಲಿ ಹೈಕೋರ್ಟ್ ರದ್ದು ಮಾಡಿದೆ. ಹಾಗಾಗಿ ಜೈಲು ಅಧಿಕಾರಿಗಳು ವಕೀಲರ ಮೇಲೆ ಈ ನಿಯಮ ಹೇರುವಂತಿಲ್ಲ ಎಂದು ವಕೀಲ ಠಾಕೂರ್ ತೇಜ್ ಬಹ್ದಾದೂರ್ ಸಿಂಗ್ ಅವರು ಮುಂಬೈ ಕೇಂದ್ರ ಕಾರಾಗೃಹಕ್ಕೆ ಬರೆದ ಪತ್ರದಲ್ಲಿ ತಿಳಿಸಿದರು. ವಿಚಾರಣಾಧೀನ ಕೈದಿಯನ್ನು ಭೇಟಿಯಾಗುವಾಗ ವಕೀಲರು ಕಪ್ಪು ಕೋಟು ಧರಿಸಬೇಕೆಂದು ಜೈಲು ಅಧಿಕಾರಿಗಳು ಯಾವ ನಿಯಮದ ಪ್ರಕಾರ ಸೂಚಿಸುತ್ತಾರೆ ಎಂದು ವಿವರ ಕೇಳಿ ಠಾಕೂರ್ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಮಹಾರಾಷ್ಟ್ರ ಜೈಲು ಕೈಪಿಡಿ ಅನ್ವಯ ಮುನ್ನೆಚ್ಚರಿಕಾ ಕ್ರಮವಾಗಿ ಕೈದಿಗಳ ಸಂಬಂಧಿಕರು ಹಾಗೂ ವಕೀಲರನ್ನು ಗುರುತಿಸುವ ಉದ್ದೇಶದಿಂದ ಈ ನಿಯಮ ಅನುಸರಿಸಲಾಗುತ್ತಿದೆ ಎಂದು ಮಾಹಿತಿ ಅಧಿಕಾರಿಗಳು ಠಾಕೂರ್ ಅವರಿಗೆ ಉತ್ತರಿಸಿದ್ದರು.

2008: ಪರಿಸರ ಮಾಲಿನ್ಯ ತಡೆಗಟ್ಟಲು ಶ್ರಮಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರು `ಸ್ವರ್ಣ ಮಯೂರ ಪ್ರಶಸ್ತಿ'ಗೆ ಆಯ್ಕೆಯಾದರು. ಕಾರ್ಖಾನೆಗಳಿಂದ ಆಗುವ ಪರಿಸರ ಹಾನಿಯನ್ನು ತಡೆಗಟ್ಟಲು ಮತ್ತು ಪಾಲಿಥೀನ್ ಚೀಲದ ಬಳಕೆಯನ್ನು ರದ್ದುಪಡಿಸಿ ಪರಿಸರ ಕಾಪಾಡಲು ಹಿಮಾಚಲ ಪ್ರದೇಶ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿತ್ತು. ಇದಕ್ಕಾಗಿ ಮುಖ್ಯಮಂತ್ರಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2008: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಚೆನಾಬ್ ನದಿಗೆ ಸೇನಾ ವಾಹನವೊಂದು ಉರುಳಿ ಬಿದ್ದ ಪರಿಣಾಮವಾಗಿ ಎಂಟು ಮಂದಿ ಸೈನಿಕರು ಮೃತರಾದರು. ರಾಷ್ಟ್ರೀಯ ರೈಫಲ್ಸಿಗೆ ಸೇರಿದ ವಾಹನ ದೋಡಾ ಪಟ್ಟಣಕ್ಕೆ ತೆರಳುತ್ತಿದ್ದಾಗ ಘಟ್ಟ ಪ್ರದೇಶದಲ್ಲಿ ಆಯತಪ್ಪಿ ನದಿಗೆ ಉರುಳಿತು.

2008: ಆಶಾ ರಾವತ್ (97 ರನ್) ಅವರ ಸೊಗಸಾದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡದವರು ಕೊಲಂಬೋದಲ್ಲಿ ಅಂತ್ಯಗೊಂಡ ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಫೈನಲ್ ಪಂದ್ಯದಲ್ಲಿ ಮಿಥಾಲಿ ರಾಜ್ ಸಾರಥ್ಯದ ಭಾರತ ತಂಡದವರು 177 ರನ್ನುಗಳಿಂದ ಶ್ರೀಲಂಕಾ ಎದುರು ಗೆದ್ದರು. ಭಾರತ ನೀಡಿದ 261 ರನ್ನುಗಳ ಗುರಿಗೆ ಉತ್ತರವಾಗಿ ಶ್ರೀಲಂಕಾ 35.2 ಓವರುಗಳಲ್ಲಿ 83 ರನ್ನುಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.

2008: ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಿದ್ದ ಅಮೆರಿಕದ ಪ್ರಮುಖ ವಾಣಿಜ್ಯ ನಿಯತಕಾಲಿಕೆ `ಟೈಮ್', ವಿಶ್ವದ ಚತುರ ವ್ಯವಹಾರಿಗಳ ಪಟ್ಟಿಯಲ್ಲಿ ಭಾರತದ ಬೃಹತ್ ಟಾಟಾ ಸಮೂಹದ ರೂವಾರಿ ರತನ್ ಟಾಟಾ ಅವರನ್ನು ಸೇರ್ಪಡೆ ಮಾಡಿತು. `73 ಬಿಗ್ಗೆಸ್ಟ್ ಬ್ರೈನ್ ಇನ್ ಬಿಸಿನೆಸ್' ಪಟ್ಟಿಯನ್ನು ಪ್ರಕಟಿಸಿದ ಟೈಮ್ ಒಂದು ಲಕ್ಷ ರೂ ಕಾರು ನಿರ್ಮಿಸಿದ ರತನ್ ಟಾಟಾ ಅವರ ಕುರಿತು ವಿಶೇಷ ವರದಿಯನ್ನು ನೀಡಿತು.

2008: ಬನ್ನೇರುಘಟ್ಟ ರಸ್ತೆಯ ಡೇರಿ ವೃತ್ತದ ಸಮೀಪ ಶೋಭಾ ಡೆವಲಪರ್ಸ್ ನಿರ್ಮಿಸುತ್ತಿದ್ದ ಅಪಾರ್ಟ್ ಮೆಂಟಿನ 17ನೇ ಮಹಡಿಯಿಂದ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಮೃತರಾಗಿ ಏಳು ಮಂದಿ ಗಂಭೀರವಾಗಿ ಗಾಯಗೊಂಡರು.

2008: ನಯಾಗರ ಜಲಪಾತವನ್ನು ವೀಕ್ಷಿಸಲು ಹೊರಟಿದ್ದ ಭಾರತೀಯರಿದ್ದ ವ್ಯಾನ್ ನಿಯಂತ್ರಣ ತಪ್ಪಿ ಪೆನ್ಸಿಲ್ವೇನಿಯ ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಮೃತರಾದರು.

2007: ದಲಿತರು, ಮುಸ್ಲಿಮರ ಜೊತೆಗೆ ಮೇಲ್ಜಾತಿಯ ಮಂದಿಯನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದ ಮಾಯಾವತಿ ಅವರು ಆಳುವ ಸಮಾಜವಾದಿ ಪಕ್ಷ ಮತ್ತು ಉತ್ತರ ಪ್ರದೇಶವನ್ನು ತನ್ನ ಭದ್ರ ನೆಲೆಯನ್ನಾಗಿ ಮಾಡಿಕೊಂಡಿದ್ದ ಭಾರತೀಯ ಜನತಾ ಪಕ್ಷವನ್ನು ಬದಿಗೆ ಸರಿಸಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರದತ್ತ ತರುವಲ್ಲಿ ಯಶಸ್ವಿಯಾದರು. ರಾಷ್ಟ್ರದ ರಾಜಕೀಯದ ದಿಕ್ಸೂಚಿಯಾಗಿರುವ ಈ ಬೃಹತ್ ರಾಜ್ಯಕ್ಕೆ ಮಾಯಾವತಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗುವಂತಾಯಿತು. 403 ಬಲದ ವಿಧಾನಸಭೆಯಲ್ಲಿ 208 ಸ್ಥಾನ ಗೆದ್ದು ಅವರು ಪ್ರಚಂಡ ಬಹುಮತದ ಸಾಧನೆ ಮಾಡಿದರು. ಸಮಾಜವಾದಿ ಪಕ್ಷಕ್ಕೆ 97, ಬಿಜೆಪಿಗೆ 50, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ 21 ಸ್ಥಾನಗಳು ಲಭಿಸಿದರೆ 26 ಸ್ಥಾನಗಳೂ ಪಕ್ಷೇತರರು ಮತ್ತಿತರರ ಪಾಲಾದವು.

2007: ಸಚಿವರಾದ ಶರಣಬಸಪ್ಪ ದರ್ಶನಾಪೂರ ಮತ್ತು ಅಲ್ಕೋಡ್ ಹನುಮಂತಪ್ಪ ಅವರು ನಿಗದಿತ ಅವಧಿಯಲ್ಲಿ ಆಸ್ತಿ ವಿವರಗಳನ್ನು ಸಲ್ಲಿಸಲು ವಿಫಲರಾಗಿರುವ ಆರೋಪ ಸಾಬೀತಾಗಿದ್ದು, ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಇವರ ವಿರುದ್ಧ ಕ್ರಮ ಜರುಗಿಸುವಂತೆ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಅವರು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದರು.

2007: 2007ನೇ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಪತ್ರಕರ್ತೆ ಆರ್. ಪೂರ್ಣಿಮಾ ಆಯ್ಕೆಯಾದರು.

2006: ಫಿಜಿಯಲ್ಲಿ 2000 ಇಸವಿಯಲ್ಲಿ ರಕ್ತಪಾತಕ್ಕೆ ಕಾರಣವಾದ ಸೇನಾ ದಂಗೆಗೆ ಮಾಜಿ ಪ್ರಧಾನಿ ಸಿತವೇನಿ ರಬೂಕ ಕಾರಣ ಎಂದು ದೋಷಾರೋಪ ಹೊರಿಸಲಾಯಿತು. ಸೇನೆಯ ಮಾಜಿ ಮುಖ್ಯಸ್ಥ ಸಹ ಆಗಿದ್ದ ರಬೂಕ 1967 ಸೇರಿದಂತೆ ಎರಡು ಸಲ ಸೇನಾ ದಂಗೆಗೆ ಕಾರಣರಾಗಿದ್ದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿದ್ದ ಭಾರತೀಯ ಮೂಲದ ಮಹೇಂದ್ರ ಚೌಧರಿ ನೇತೃತ್ವದ ಸರ್ಕಾರವನ್ನು ರಚನೆಯಾದ ಆರು ತಿಂಗಳಲ್ಲೇ ಕೆಡವಲಾಗಿತ್ತು.

2006: ನಿವೃತ್ತ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಫ್ಲಾಯ್ಡ್ ಪ್ಯಾಟರ್ಸನ್ (71) ನ್ಯೂಯಾರ್ಕಿನ ನ್ಯೂಪಾಲ್ಟ್ಜಿನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. 1956ರಲ್ಲಿ ಆರ್ಕಿ ಮೂರೆ ಅವರನ್ನು ಪರಾಭವಗೊಳಿಸುವ ಮೂಲಕ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಡೆದ ಅತ್ಯಂತ ಕಿರಿಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪ್ಯಾಟರ್ಸನ್ ಪಾತ್ರರಾಗಿದ್ದರು. 1959ರಲ್ಲಿ ಸ್ವೀಡನ್ನಿನ ಇಂಗೆಮರ್ ಜೋಹಾನ್ಸನ್ ಎದುರು ನ್ಯೂಯಾರ್ಕಿನಲ್ಲಿ ಪರಾಭವಗೊಂಡಾಗ ಚಾಂಪಿಯನ್ ಶಿಪ್ ಕಳೆದುಕೊಂಡಿದ್ದ ಪ್ಯಾಟರ್ಸನ್ ಒಂದು ವರ್ಷದ ಬಳಿಕ ಪೋಲೋಗ್ರೌಂಡ್ಸಿನಲ್ಲಿ ಜೋಹಾನ್ಸನ್ ಅವರನ್ನು ಪರಾಭವಗೊಳಿಸಿ ಪುನಃ ಚಾಂಪಿಯನ್ ಷಿಪ್ ದಕ್ಕಿಸಿಕೊಂಡ ಮೊದಲ ಹೆವಿ ವೇಯ್ಟ್ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 1972ರಲ್ಲಿ ತಮ್ಮ 37ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದರು.

2006: ನ್ಯೂಯಾರ್ಕ್ ಟೈಮ್ಸ್ ನ ನಿರ್ವಾಹಕ ಸಂಪಾದಕ, ಪುಲಿಟ್ಜರ್ ಪ್ರಶಸ್ತಿ ವಿಜೇತ ವರದಿಗಾರ ಎ.ಎಂ. ರೋಸೆಂಥಾಲ್ (84) ನ್ಯೂಯಾರ್ಕಿನಲ್ಲಿ ನಿಧನರಾದರು. ಅವರು ಭಾರತದಲ್ಲೂ ಪತ್ರಿಕೆಯ ವಿದೇಶೀ ಬಾತ್ಮೀದಾರರಾಗಿ ದುಡಿದಿದ್ದರು.

2006: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸತತ ಏಳನೇ ಬಾರಿಗೆ ಗೆದ್ದು ಅಧಿಕಾರ ಪಡೆಯುವ ಮೂಲಕ ಎಡರಂಗವು ವಿಶ್ವದಾಖಲೆ ನಿರ್ಮಾಣ ಮಾಡಿತು. ಜ್ಯೋತಿ ಬಸು ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಬುದ್ಧದೇವ ಭಟ್ಟಾಚಾರ್ಯರಿಗೆ ರಾಜ್ಯದ ಮತದಾರರು ಮತ್ತೆ ಮಣೆ ಹಾಕಿದರು. ಕೇರಳದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವನ್ನು ಸಿಪಿಎಂ ನೇತೃತ್ವದ ಎಡರಂಗ ಮೈತ್ರಿಕೂಟ ಅಧಿಕಾರದಿಂದ ಕೆಳಗಿಳಿಸಿತು. ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆಯನ್ನು ಸೋಲಿಸಿದ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಅಸ್ಸಾಮಿನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ, ಪುದುಚೆರಿಯಲ್ಲಿ ಕಾಂಗ್ರೆಸ್ ಮೈತ್ರ್ರಿಕೂಟ ವಿಜಯ ಸಾಧಿಸಿತು. ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 4 ಲಕ್ಷಗಳಿಗೂ ಅಧಿಕ ಮತಗಳ ಅಂತರದಿಂದ ವಿಜಯಿಯಾದರು.

1944: ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಜನಪ್ರಿಯರಾದ ಬಾಬು ಕೃಷ್ಣಮೂರ್ತಿ ಅವರು ವೆಂಕಟೇಶ ಶಾಸ್ತ್ರಿ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. `ಮಂಗಳ' ಪತ್ರಿಕಾ ಸಂಪಾದಕರಾದ ಬಾಬು ನೇತೃತ್ವದಲ್ಲಿ ಬಾಲಮಂಗಳ, ಬಾಲ ಮಂಗಳ ಚಿತ್ರಕಥಾ, ಗಿಳಿವಿಂಡು ಪತ್ರಿಕೆಗಳು ಹೊರಬಂದವು. ಸ್ವಾತ್ರಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಕುರಿತು ಸಂಶೋಧನೆ ನಡೆಸಿ ರಚಿಸಿದ `ಅಜೇಯ' ಬಾಬುಗೆ ಅಪಾರ ಖ್ಯಾತಿ ತಂದು ಕೊಟ್ಟಿತು. `ಅದಮ್ಯ', 'ಸಿಡಿಮದ್ದು', 'ನೆತ್ತರು', 'ನೇಣುಗಂಬ', `ರುಧಿರಾಭಿಷೇಕ' ಇತ್ಯಾದಿ ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣ ನೀಡುವ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಕ್ರಾಂತಿಕಾರಿಗಳ ಬಗ್ಗೆ ಬೆಳಕು ಚೆಲ್ಲುವ ಗ್ರಂಥಗಳು. ಪ್ರಸ್ತುತ ಕರ್ಮವೀರ ಸಾಪ್ತಾಹಿಕದ ಸಂಪಾದಕತ್ವದ ಹೊಣೆಗಾರಿಕೆ. ರಾಜ್ಯ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಬಂದಿವೆ.

1998: ಭಾರತವು ರಾಜಸ್ಥಾನದ ಪೋಖ್ರಾನಿನಲ್ಲಿ ಮೂರು ಅಣ್ವಸ್ತ್ರಗಳ ಪರೀಕ್ಷಾ ಸ್ಫೋಟ ನಡೆಸಿತು. 1998ರ ಮೇ 13ರಂದು ಇನ್ನೆರಡು ಅಣ್ವಸ್ತ್ರಗಳನ್ನು ಸ್ಫೋಟಿಸಲಾಯಿತು. `ಆಪರೇಷನ್ ಶಕ್ತಿ' ಎಂಬುದಾಗಿ ಈ ಸ್ಫೋಟಗಳನ್ನು ಕರೆಯಲಾಯಿತು.

1997: ಮನುಷ್ಯ ಮತ್ತು ಯಂತ್ರದ ನಡುವೆ ನಡೆದ ಆರು ಆಟಗಳ ಚೆಸ್ ಪಂದ್ಯದಲ್ಲಿ ಐಬಿಎಂ ಕಂಪ್ಯೂಟರ್ `ಡೀಪ್ ಬ್ಲೂ' ಗ್ಯಾರಿ ಕ್ಯಾಸ್ಪರೋವ್ ಅವರನ್ನು ಸೋಲಿಸಿತು. ನ್ಯೂಯಾರ್ಕಿನಲ್ಲಿ ನಡೆದ ಈ ಪಂದ್ಯ ಮಾರ್ಚ್ 15ರಂದು ಆರಂಭವಾಗಿ, ಕ್ಯಾಸ್ಪರೋವ್ ಸೋಲಿನೊಂದಿಗೆ ಪರ್ಯವಸಾನಗೊಂಡಿತು. ಕ್ಯಾಸ್ಪರೋವ್ ಎರಡು ಆಟಗಳಲ್ಲಿ ಸೋತು ಒಂದನ್ನು ಗೆದ್ದರು. ಉಳಿದ ಮೂರು ಆಟಗಳು ಡ್ರಾ ಆದವು.

1944: ಕಲಾವಿದ ವಜ್ರಮುನಿ ಜನನ.

1935: ಕಲಾವಿದೆ ವಾಸಂತಿ ಕದಿರೆ ಜನನ.

1934: ಕಲಾವಿದ ಗುಂಡಾಭಟ್ಟ ಜೋಶಿ ಜನನ.

1857: ಮೇ 10ರಂದು ಐರೋಪ್ಯ ಅಧಿಕಾರಿಗಳನ್ನು ಕೊಂದ ಮೀರತ್ತಿನ ಸಿಪಾಯಿಗಳ ದಂಡೊಂದು ದೆಹಲಿಯನ್ನು ವಶಪಡಿಸಿಕೊಂಡು ಕೆಂಪುಕೋಟೆಯಿಂದ ಕೊನೆಯ ಮೊಘಲ್ ದೊರೆ ಬಹಾದುರ್ ಶಹಾರನ್ನು `ಶಹೆನ್ ಶಾಹ್-ಎ- ಹಿಂದುಸ್ತಾನ್' (ಚಕ್ರವರ್ತಿ) ಎಂದು ಘೋಷಿಸಿತು. ಈ ಘಟನೆ ಸಿಪಾಯಿಗಳ ದಂಗೆಗೆ ರಚನಾತ್ಮಕ ರಾಜಕೀಯ ಅರ್ಥವನ್ನು ನೀಡಿತು. ಬ್ರಿಟಿಷರ ವಿರುದ್ಧ ಬಂಡ್ದೆದವರಿಗೆ ಸ್ಫೂರ್ತಿಯನ್ನೂ ನೀಡಿತು.

ಕ್ರಿ.ಪೂ. 330: ರೋಮನ್ ದೊರೆ ಕಾನ್ ಸ್ಟಾಂಟಿನ್ ರೋಮ್ ಸಾಮ್ರಾಜ್ಯದ ರಾಜಧಾನಿ ಬೈಝಾಂಟಿಯಮ್ ನ್ನು ಸ್ಥಾಪಿಸಿದ. ಆತನ ಗೌರವಾರ್ಥ ಈ ನಗರಕ್ಕೆ ಕಾನ್ ಸ್ಟಾಂಟಿನೋಪಲ್ ಎಂದು ಹೆಸರಿಡಲಾಯಿತು.

No comments:

Post a Comment