Tuesday, May 1, 2018

ಇಂದಿನ ಇತಿಹಾಸ History Today ಏಪ್ರಿಲ್ 30

ಇಂದಿನ ಇತಿಹಾಸ History Today ಏಪ್ರಿಲ್ 30
 2018: ನವದೆಹಲಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಜೊತೆಗೆ ನಡೆದ ಘರ್ಷಣೆಯಲ್ಲಿ ಕಾಶ್ಮೀರಿ ಉಗ್ರಗಾಮಿ ಸಂಘಟನೆಯ ಹಿಜ್ಬುಲ್ ಮುಜಾಹಿದೀನ್‌ನ  ’ಪೋಸ್ಟರ್ ಬಾಯ್ ಎಂದೇ ಪರಿಚಿತನಾದ ಸಮೀರ್ ಬಟ್ ಯಾನೆ ಸಮೀರ್ ಟೈಗರ್ ಹತನಾಗಿದ್ದು, ಈತನ ಜೊತೆಗೆ ಇನ್ನೊಬ್ಬ ಹಿಜ್ಬುಲ್ ಉಗ್ರಗಾಮಿ ಆಖ್ವಿಬ್ ಖಾನ್ ಕೂಡಾ ಸಾವನ್ನಪ್ಪಿದ. ಘರ್ಷಣೆ ಕಾಲದಲ್ಲಿ ಹದಿಹರೆಯದ ಶಾಹಿದ್ ಎಂಬ ಯುವಕನೂ ಸಾವನ್ನಪ್ಪಿದ್ದು, ಒಬ್ಬ ಮೇಜರ್ ಸೇರಿದಂತೆ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡರು.  ‘ಕ್ಯಾಮರಾ ಮಿತ್ರ ಸಮೀರ್ ಬಟ್, ಕಾಶ್ಮೀರ ಉಗ್ರವಾದದ ’ಪೋಸ್ಟರ್ ಬಾಯ್ಗಳಲ್ಲಿ ಒಬ್ಬ ಎಂದು ಪರಿಗಣಿತನಾಗಿದ್ದ ವ್ಯಕ್ತಿ. ಈತ ಹಲವಾರು ಛಾಯಾಚಿತ್ರಗಳಿಗೆ ಫೋಸ್ ಕೊಟ್ಟಿದ್ದು ಅದರಲ್ಲಿ ನ್ಯಾಟೋ ನಿರ್ಮಿತ ಎಂ೪ ಕಾರ್ಬೈನ್ ಹಿಡಿದು ನಿಂತುಕೊಂಡಿದ್ದ ಆತನ ಫೊಟೋ ಬಹು ಜನರನ್ನು ಆಕರ್ಷಿಸಿತ್ತು.
ಹಲವಾರು ವಿಡಿಯೋಗಳಲ್ಲೂ ಆತ ಕಾಣಿಸಿಕೊಂಡಿದ್ದ. ಹಿಂದಿನ ದಿನ ಬೆಳಕಿಗೆ ಬಂದ ವಿಡಿಯೋ ಒಂದರಲ್ಲಿ ಈತ ಉಗ್ರಗಾಮಿಗಳ ವಿರುದ್ಧ ಗೂಢಚರ್ಯೆ ನಡೆಸಿದ್ದಕ್ಕಾಗಿ ಕಾಶ್ಮೀರಿ ಸ್ಥಳೀಯ ವ್ಯಕ್ತಿಯೊಬ್ಬನನ್ನು ಪ್ರಶ್ನಿಸುವ ದೃಶ್ಯವಿತ್ತು. ಗುಂಡಿನ ಸಮರಕ್ಕೆ ಬನ್ನಿ ಎಂದು ಈ ವಿಡಿಯೋದಲ್ಲಿ ಭಾರತೀಯ ಸೇನೆಯ ಮೇಜರ್ ಗೆ ಸಮೀರ್ ಸವಾಲು ಹಾಕಿದ್ದ.  ಪುಲ್ವಾಮದ ದ್ರುಬ್ ಗಮ್‌ನಲ್ಲಿ ಸಮೀರ್ ಮತ್ತು ಆತನ ಸಹಚರನಿಗೆ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಭಾರಿ ಸಂಖ್ಯೆಯ ಸ್ಥಳೀಯ ಮಂದಿ ಭದ್ರತಾ ಪಡೆ ಸಿಬ್ಬಂದಿಯತ್ತ ಕಲ್ಲು ತೂರಾಟ ನಡೆಸಿದರು ಎಂದೂ ಮೂಲಗಳು ಹೇಳಿವೆ. ಸಮೀರ ಡ್ರುಬ್ ಗಮ್ ನ ನಿವಾಸಿಯಾಗಿದ್ದು, ೨೦೧೬ರಲ್ಲಿ ಉಗ್ರಗಾಮಿಗಳ ಜೊತೆ ಸೇರಿದ್ದ. ಸೇನೆಯ ೪೪ನೇ ಬೆಟಾಲಿಯನ್, ಸಿಆರ್ ಪಿ ಎಫ್, ಸ್ಥಳೀಯ ಪೊಲೀಸರು ಮತ್ತು ವಿಶೇಷ ಕಾರ್‍ಯಾಚರಣಾ ಸಮೂಹ ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಎನ್ ಕೌಂಟರ್ ಕಾರ್ಯಾಚರಣೆ ನಡೆಸಿತ್ತು.  ಪುಲ್ವಾಮದ ಕೆಳಮಧ್ಯಮ ವರ್ಗಕ್ಕೆ ಸೇರಿದ ಸಮೀರ್, ನಿರಂತರವಾಗಿ ಸೇನೆಯತ್ತ ಕಲ್ಲೆಸೆಯುವ ಕೃತ್ಯಗಳಲ್ಲಿ ಪಾಲ್ಗೊಂಡಿದ್ದು, ಹಲವಾರು ಬಾರಿ ಸ್ಥಳೀಯ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ.  ಸುದೀರ್ಘ ಸೆರೆವಾಸ ಮತ್ತು ಸ್ಥಳೀಯ ಪೊಲೀಸರ ಚಿತ್ರಹಿಂಸೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಮೀರ್ ೨೦೧೬ರ ಏಪ್ರಿಲ್ ೭ರಂದು ಮನೆಯಿಂದ ಪರಾರಿಯಾಗಿದ್ದ ಎಂದು ಆತನ ತಂದೆ ಮೊಹಮ್ಮದ್ ಮಕ್ಬೂಲ್ ಬಟ್ ಸಂದರ್ಶನ ಒಂದರಲ್ಲಿ ತಿಳಿಸಿದ್ದ.  ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆಗಳು ತೀವ್ರವಾಗಿ ಹೆಚ್ಚುತ್ತಿವೆ ಎಂದು ವಿವಿಧ ವರದಿಗಳು ಹೇಳಿದ್ದು, ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಉಗ್ರಗಾಮಿಗಳಿಂದ ಸ್ಥಳೀಯರ ನೇಮಕಾತಿ ಪ್ರಮಾಣ  ೨೦೧೬ರಿಂದ ೨೦೧೭ರ ನಡುವಣ ಅವಧಿಯಲ್ಲಿ ಶೇಕಡಾ ೪೪ರಷ್ಟು ಹೆಚ್ಚಿದೆ. ಇತ್ತೀಚಿನ ಅಂಕಿಸಂಖ್ಯೆಗಳ ಪ್ರಕಾರ ೩೦ ಮಂದಿ ಸ್ಥಳೀಯ ಯುವಕರನ್ನು ಉಗ್ರಗಾಮಿ ಸಂಘಟನೆಗಳು ಸೇರ್ಪಡೆ ಮಾಡಿಕೊಂಡಿದ್ದು, ಸರಾಸರಿ ಮೂರು ದಿನಕ್ಕೆ ಒಮ್ಮೆ ಒಬ್ಬ ಕಾಶ್ಮೀರಿ ಯುವಕ ಬಂದೂಕು ಕೈಗೆತ್ತಿಕೊಳ್ಳುತ್ತಾನೆ ಎಂದು ಹೇಳಲಾಗಿದೆ.  ೨೦೧೫ರಲ್ಲಿ ೬೬, ೨೦೧೬ರಲ್ಲಿ ೮೮, ೨೦೧೭ರಲ್ಲಿ ೧೨೬ ಯುವಕರು ಉಗ್ರಗಾಮಿ ಸಂಘಟನೆಗಳನ್ನು ಸೇರಿದ್ದಾರೆ ಎಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಇತ್ತೀಚೆಗೆ ವಿಧಾನ ಸಭೆಗೆ ತಿಳಿಸಿದ್ದರು.  ಕಳೆದ ಕೆಲವು ವಾರಗಳಲ್ಲಿ ಒಬ್ಬ ಸ್ನಾತಕೋತ್ತರ ಪದವೀಧರ, ಒಬ್ಬ ಬಿಟೆಕ್ ಪದವೀಧರ ಮತ್ತು ಒಬ್ಬ ಎಂಬಿಎ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿದ್ದರು. ಎಂಬಿಎ ಪದವಿಯನ್ನು ಪಡೆದು ಉಗ್ರಗಾಮಿ ಸಂಘಟನೆಯನ್ನು ಸೇರಿದವರಲ್ಲಿ ಒಬ್ಬ ಜುನೈದ್ ಆಶ್ರಫ್ ಖಾನ್ ಆಗಿದ್ದು ಈತ ಹುರಿಯತ್ ನಾಯಕ ಮೊಹಮ್ಮದ್ ಆಶ್ರಫ್ ಸೆಹ್ರೈಯ ಪುತ್ರ. ಆಶ್ರಫ್ ಇತ್ತೀಚೆಗೆ ಎಸ್ ಎಎಸ್ ಗೀಲಾನಿ ಬದಲಿಗೆ ತೆಹ್ರೀಕ್ -ಇ-ಹುರಿಯತ್ ಸಂಘಟನೆಯ ಅಧ್ಯಕ್ಷರಾಗಿದ್ದರು.

 2018: ಜೆಹಾನಾಬಾದ್ (ಬಿಹಾರ): ಹಾಡು ಹಗಲಲ್ಲೇ ನಡು ರಸ್ತೆಯಲ್ಲಿ  ಬಾಲಕಿಯನ್ನು ನಿಂದಿಸುತ್ತಾ ಎಳೆದಾಡಿ, ಆಕೆಯ ಬಟ್ಟೆಯನ್ನು ಹರಿದು, ಕಳಚಿದ ಹಾಗೂ ಈ ಕೃತ್ಯದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ  ಪ್ರಕಟಿಸಿದ ಆಪಾದನೆಯಲ್ಲಿ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದರು.  ೧೬ರಿಂದ ೧೮ರ ಹರೆಯದ ಈ ದುಷ್ಕರ್ಮಿಗಳು ಈ ಕೃತ್ಯಕ್ಕೆ ಬಳಸಿದ ಬೈಕ್ ಒಂದನ್ನೂ ಪೊಲೀಸರು ವಶ ಪಡಿಸಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ೨೪ ಗಂಟೆಗಳ ಒಳಗಾಗಿ ದುಷ್ಕರ್ಮಿಗಳ ಪೈಕಿ ನಾಲ್ವರನ್ನು ನಾವು ಬಂಧಿಸಿದ್ದೇವೆ. ಅವರ ಪೈಕಿ ಒಬ್ಬನ ವಯಸ್ಸು ಕೇವಲ ೧೬ ವರ್ಷ.. ಕೃತ್ಯದಲ್ಲಿ ಬಳಸಿದ ಬೈಕನ್ನು ನಾವು ವಶ ಪಡಿಸಿಕೊಂಡಿದ್ದು, ಬೈಕ್ ಮಾಲೀಕ ತಲೆ ತಪ್ಪಿಸಿಕೊಂಡಿದ್ದಾನೆ, ವಿಡಿಯೊ ಮಾಡಿದ ಮೊಬೈಲ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಪಾಟ್ನಾ ವಲಯದ ಐಜಿಪಿ ನಯ್ಯರ್ ಹಸ್ ನೈನ್ ಖಾನ್ ಹೇಳಿದರು.   ಇದು ಅತ್ಯಂತ ಹೇಯ ಕೃತ್ಯವಾಗಿದ್ದು, ಪ್ರಕರಣದ ಮೇಲೆ ತಾವು ಸ್ವತಃ ನಿಗಾ ಇರಿಸಿರುವುದಾಗಿ ಅವರು ನುಡಿದರು. ’ಕೃತ್ಯದಲ್ಲಿ ಶಾಮೀಲಾಗಿರುವ ಪ್ರಸ್ತುತ ತಲೆತಪ್ಪಿಸಿಕೊಂಡಿರುವ ಎಲ್ಲರನ್ನೂ ಶೀಘ್ರದಲ್ಲೇ ಬಂಧಿಸುತ್ತೇವೆ ಮತ್ತು ಪ್ರಕರಣದ ತ್ವರಿತ ವಿಚಾರಣೆ ನಡೆಯುವಂತೆ ಮಾಡಲು ಯತ್ನಿಸುತ್ತೇವೆ ಎಂದು ಅವರು ಹೇಳಿದರು.  ಬಾಲಕಿಯ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಆದರೆ ಆಕೆ ಅಪ್ರಾಪ್ತ ವಯಸ್ಕಳಂತೆ ಕಾಣುತ್ತಿದೆ ಎಂದು ಅವರು ನುಡಿದರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಸ್ವತಃ ಕಾರ್‍ಯೋನ್ಮುಖರಾಗಿ ದುಷ್ಕರ್ಮಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ. ವಿಡಿಯೋವನ್ನು ವಿನಿಮಯ ಮಾಡಿಕೊಳ್ಳಬೇಡಿ ಅಥವಾ ಅದರ ಲಾಭವನ್ನು ಯಾರೂ ಪಡೆದುಕೊಳ್ಳಬೇಡಿ ಎಂದು ನಾವು ಮನವಿ ಮಾಡಿದ್ದೇವೆ. ಅದರ ಲಾಭ ಪಡೆದುಕೊಳ್ಳಲು ಯಾರಾದರೂ ಯತ್ನಿಸಿದರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಖಾನ್ ಹೇಳಿದರು.

ಮೇ ೨೮ರ ಶನಿವಾರ ರಾತ್ರಿ ವಿಡಿಯೋವನ್ನು ಕೇಂದ್ರ ಬಿಹಾರಿನ ಜೆಹಾನಾಬಾದ್ ಜಿಲ್ಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಹಾಡುಹಗಲೇ ನಡುಬೀದಿಯಲ್ಲಿ ೭-೮ ಹುಡುಗರು, ಅಳುತ್ತಾ ಕೈಮುಗಿದು ತನ್ನನ್ನು ಬಿಟ್ಟುಬಿಡುವಂತೆ ಅಂಗಲಾಚುತ್ತಿದ್ದ ಬಾಲಕಿಯನ್ನು ನಿಂದಿಸುತ್ತಾ ಎಳೆದಾಡಿ, ಬಟ್ಟೆಯನ್ನು ಹರಿದು ಕಳಚಿದ ದೃಶ್ಯಾವಳಿ ವಿಡಿಯೋದಲ್ಲಿ ಇತ್ತು. ದುಷ್ಕರ್ಮಿಗಳ ಗುಂಪಿನಲ್ಲೇ ಇದ್ದವನೊಬ್ಬ ಈ ಕೃತ್ಯದ ಚಿತ್ರೀಕರಣ ಮಾಡುತ್ತಿದ್ದುದೂ ವಿಡಿಯೋದಲ್ಲಿ ದಾಖಲಾಗಿದೆ. ಸುತ್ತ ಮುತ್ತ ಓಡಾಡುತ್ತಿದ್ದ ಜನ, ಆಕೆಯ ಅರಚಾಟ ಕೇಳಿದರೂ ನೆರವಿಗೆ ಬಾರದೆ ತಮ್ಮ ಪಾಡಿಗೆ ತಾವು ನಡೆದು ಹೋಗುತ್ತಿದ್ದುದೂ ವಿಡಿಯೋದಲ್ಲಿ ದಾಖಲಾಗಿತ್ತು. ಯುವಕರ ಆಟಾಟೋಪಗಳಿಗೆ ನಲುಗಿದ ಬಾಲಕಿಯು, ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟಿದ್ದುದು, ಅವಳ ಬಟ್ಟೆಗಳನ್ನು ಹರಿಯುವ, ಕೈ-ಕಾಲುಗಳನ್ನು ಎಳೆದಾಡುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ.  ಸಾವಿರಾರು ಜನರನ್ನು ತಲುಪಿರುವ ದೌರ್ಜನ್ಯದ ವಿಡಿಯೋ ಕುರಿತು ತನಿಖೆ ನಡೆಸಲು ಜೆಹಾನಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಮನಿಶ್ ಕುಮಾರ್ ಅವರು ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದರು.  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಸ್ಕೊ) ಆರೋಪಿಗಳ ಮೇಲೆ ದೂರು ದಾಖಲಿಸಿಕೊಂಡ ಪೊಲೀಸರು, ಉಳಿದಿಬ್ಬರಿಗಾಗಿ ಹುಡುಕಾಟ ನಡೆಸಿದರು.  ಬಾಲಕಿ ಮತ್ತು ಅವಳ ಪೋಷಕರ ಜೊತೆ ಆಪ್ತ ಸಮಾಲೋಚನೆ ನಡೆಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.  ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ದೇಶದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿಯೇ ಈ ಘಟನೆ ಬೆಳಕಿಗೆ ಬಂದಿತು. ೧೨ ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಆದೇಶವನ್ನು ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ಇತ್ತೀಚೆಗೆ ಹೊರಡಿಸಿತ್ತು. ಜೆಹಾನಾಬಾದ್ ಜಿಲ್ಲೆಯ ಚೌರಾ ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಯಿತು. ಏ.29ರ ಭಾನುವಾರ ಬೆಳಗ್ಗೆ ಕೃತ್ಯದಲ್ಲಿ ಶಾಮೀಲಾದ ಕೆಲವು ಯುವಕರನ್ನು ಗುರುತಿಸಿ ಬಳಿಕ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದರು. ಪೊಲೀಸ್ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ಸಿಂಗ್ ಅವರ ಲಿಖಿತ ಹೇಳಿಕೆಯನ್ನು ಆಧರಿಸಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

2018: ಕಾಬೂಲ್: ಆಫ್ಘಾನಿಸ್ಥಾನದಲ್ಲಿ ಮುಂದುವರೆದಿರುವ ಐಸಿಸ್ ಉಗ್ರರ ಅಟ್ಟಹಾಸಕ್ಕೆ ರಾಜಧಾನಿ ಕಾಬೂಲಿನಲ್ಲಿ ೨೫ಕ್ಕೂ ಹೆಚ್ಚು ಮಂದಿ ಬಲಿಯಾಗಿ ೪೫ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ಈದಿನ ಕಾಬೂಲಿನಲ್ಲಿ ನಡೆದ  ಎರಡು ಆತ್ಮಹತ್ಯಾ ದಾಳಿಗಳಲ್ಲಿ ೨೫ಕ್ಕೂ ಹೆಚ್ಚು ಜನರು ಸಾವನ್ನಪ್ಪಿ ೪೫ಕ್ಕೂ ಹೆಚ್ಚು ಮಂದಿ  ಗಾಯಗೊಂಡರು. ಈ ಪೈಕಿ ಈ ಪೈಕಿ ಫ್ರೆಂಚ್ ಸುದ್ದಿ ಸಂಸ್ಥೆ ಎಎಫ್ ಪಿಯ ಛಾಯಾಗ್ರಾಹಕ ಸೇರಿ ೮ ಮಂದಿ ಪತ್ರಕರ್ತರು ಎಂದು ಮೂಲಗಳು ತಿಳಿಸಿದವು. ಮಧ್ಯ ಕಾಬೂಲಿನ ಶಾಶ್ ದರಾಕ್ ಪ್ರದೇಶದಲ್ಲಿ ಉಗ್ರರ ದಾಳಿ ನಡೆದಿದ್ದು, ಆಫ್ಘಾನಿಸ್ತಾನ ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಯಿತು ಎಂದು ಪ್ರಕಟಿಸುವ ಮೂಲಕ ಐಸಿಸ್ ಉಗ್ರರು ದಾಳಿಯ ಹೊಣೆ ಹೊತ್ತುಕೊಂಡರು.  ಇದೇ ಕಚೇರಿ ಬಳಿ ನ್ಯಾಟೋ ಪ್ರಧಾನ ಕಚೇರಿ, ಅನೇಕ ದೇಶಗಳ ರಾಯಭಾರ ಕಚೇರಿಗಳು ಸಹ ಇರುವುದು ಗಮನಾರ್ಹ.   ಬೈಕಿನಲ್ಲಿ ಬಂದ ಒಬ್ಬ ಉಗ್ರ ಒಂದು ಮಾನವ ದಾಳಿ ನಡೆಸಿದ್ದಾನೆ. ಅಲ್ಲದೆ, ದಾಳಿಯ ಬಳಿಕ ಗುಪ್ತಚರ ಕಚೇರಿ ಬಳಿ ಬಲಿಯಾದ ಜನರನ್ನು ನೋಡಲು ಹೋದ ಮತ್ತಷ್ಟು ಜನರ ಮೇಲೆ ಹಾಗೂ ದಾಳಿಯ ಸುದ್ದಿ ಮಾಡಲು ಹೋದ ಪತ್ರಕರ್ತರ ನಡುವೆಯೇ ಇದ್ದ ಮತ್ತೊಬ್ಬ ಉಗ್ರ ಆತ್ಮಾಹುತಿ ದಾಳಿ ನಡೆಸಿದ. ಈ ವೇಳೆ ೮ ಮಂದಿ ಪತ್ರಕರ್ತರು, ನಾಲ್ವರು ಪೊಲೀಸರು ಬಲಿಯಾದರು ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.  ಇದಲ್ಲದೆ ದಾಳಿಯಲ್ಲಿ ೬ ಮಂದಿ ಪತ್ರಕರ್ತರಿಗೆ ಗಂಭೀರ ಗಾಯಗಳಾದವು.  ಐಸಿಸ್ ಉಗ್ರರ ಈ ಅಟ್ಟಹಾಸವನ್ನು ಆಫ್ಘನ್ ಪತ್ರಕರ್ತರ ಸುರಕ್ಷತಾ ಸಮಿತಿ ಖಂಡಿಸಿತು.   ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರು ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಘಟನೆ ನಡೆದ ಸ್ಥಳವನ್ನು ಕಾಬೂಲ್ ಪೊಲೀಸರು ಸುತ್ತುವರಿದಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಕಾಬೂಲ್ ಪೊಲೀಸ್ ಮುಖ್ಯಸ್ಥರು ಹೇ:ಳಿದರು.  ಮತದಾರರ ನೋಂದಣಿ ಕೇಂದ್ರದಲ್ಲಿ ಬಾಂಬ್ ದಾಳಿ ನಡೆದ ಒಂದು ವಾರದ ಅವಧಿಯಲ್ಲಿ ಈದಿನ ದಾಳಿ ನಡೆದಿದೆ. ಮತದಾರರ ನೋಂದಣಿ ಕೇಂದ್ರದಲ್ಲಿ ನಡೆದ ಬಾಂಬ್ ದಾಳಿಗೆ ೬೦ ಜನ ಬಲಿಯಾಗಿದ್ದರು.
 
2018: ನವದೆಹಲಿ: ರಾಷ್ಟ್ರೀಯ ಜನತಾದಳದ (ಆರ್ ಜೆಡಿ) ಮುಖ್ಯಸ್ಥ ಹಾಗೂ ಬಿಹಾರಿನ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಅವರನ್ನು  ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ (ಏಮ್ಸ್) ಬಿಡುಗಡೆ ಮಾಡಲಾಯಿತು.  ಆದರೆ ಲಾಲು ಪ್ರಸಾದ್ ಅವರು ತಾವಿನ್ನೂ ಅಸ್ವಸ್ಥರಾಗಿದ್ದು ತಮ್ಮ ಆರೋಗ್ಯವನ್ನು ಹದಗೆಡಿಸಲು ’ಸಂಚು ರೂಪಿಸಲಾಗಿದೆ ಎಂದು ಆಪಾದಿಸಿದರು.   ’ಮಾರ್ಚ್ ತಿಂಗಳಿನಿಂದ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್ ಅವರ ಆರೋಗ್ಯ ಗಣನೀಯವಾಗಿ ಸುಧಾರಿಸಿದ್ದು, ಅವರನ್ನು ಏಮ್ಸ್ ನಿಂದ ಬಿಡುಗಡೆ ಮಾಡಿ ಮುಂದಿನ ಚಿಕಿತ್ಸೆಗಾಗಿ ರಾಂಚಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವಾಪಸ್ ಕಳುಹಿಸಲಾಗುತ್ತಿದೆ. ಅವರ ಆರೋಗ್ಯ ದೃಢವಾಗಿದ್ದು, ಅವರು ಈಗ ಪ್ರಯಾಣ ಮಾಡಬಹುದು ಎಂದು ಏಮ್ಸ್ ಪ್ರಕಟಣೆ ತಿಳಿಸಿತು. ಶನಿವಾರವೇ ಬಿಡುಗಡೆ ಮಾಡಲಾಗಿದ್ದರೂ, ಲಾಲು ಪ್ರಸಾದ್ ಅವರು ಸೋಮವಾರದವರೆಗೆ ಉಳಿಯ ಬಯಸಿದ್ದರಿಂದ ಮತ್ತು ಸೋಮವಾರ ಪ್ರಯಾಣ ಮಾಡಲು ಬಯಸಿದ್ದರಿಂದ ಈದಿನದವರೆಗೆ ಆಸ್ಪತ್ರೆಯಲ್ಲಿ ಇರಲು ಅವಕಾಶ ನೀಡಲಾಗಿತ್ತು ಎಂದು ಪ್ರಕಟಣೆ ಹೇಳಿತು. ಇನ್ನೂ ಸ್ವಸ್ಥನಾಗಿಲ್ಲ- ಲಾಲೂ: ಏನಿದ್ದರೂ ಲಾಲು ಪ್ರಸಾದ್ ಅವರು ತಾವಿನ್ನೂ ಜಾರ್ಖಂಡಿನ ರಾಂಚಿಗೆ ಹಿಂದಕ್ಕೆ ಕಳುಹಿಸುವಷ್ಟ ಸ್ವಸ್ಥರಾಗಿಲ್ಲ ಎಂದು ಪ್ರತಿಪಾದಿಸಿದರು. ‘ಇದು ಅನ್ಯಾಯ, ಇದು ನನ್ನ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುವ ಸಂಚು. ನನ್ನನ್ನು ಸವಲತ್ತುಗಳೇ ಇಲ್ಲದ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇದು ಕಷ್ಟದ ಕಾಲ, ಆದರೆ ನಾನು ಅದನ್ನು ಎದುರಿಸುವೆ. ನನ್ನ ಆರೋಗ್ಯ ನಿಜವಾಗಿಯೂ ಸುಧಾರಿಸಿಲ್ಲ ಎಂದು ಹೇಳಿದ ಲಾಲೂ, ’ಹೃದಯ, ಕಿಡ್ನಿ ಮತ್ತು ಮಧುಮೇಹ ಸಮಸ್ಯೆಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದು ಹೇಳಿದರು.  ‘ನನ್ನ ಬೆನ್ನು ನೋಯುತ್ತಿದೆ. ತಲೆ ಸುತ್ತು ಬಂದಂತಾಗುತ್ತದೆ. ಸ್ನಾನದ ಮನೆಯಲ್ಲಿ ನಾನು ಹಲವಾರು ಬಾರಿ ಬಿದ್ದಿದ್ದೇನೆ. ನನ್ನ ರಕ್ತದ ಒತ್ತಡ ಮತ್ತು ಮಧುಮೇಹ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಲಾಲೂ ಪ್ರಸಾದ್ ನುಡಿದರು.  ಕಳೆದ ವರ್ಷ ಮೇವು ಹಗರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ನ್ಯಾಯಾಲಯ ಶಿಕ್ಷೆ ವಿಧಿಸಿದ ಬಳಿಕ ಸೆರೆಮನೆ ಸೇರಿದ್ದ ಲಾಲು ಪ್ರಸಾದ್ ಅವರನ್ನು ಕಳೆದ ಮಾರ್ಚ್ ತಿಂಗಳಲ್ಲಿ ರಾಂಚಿ ಸೆರೆಮನೆಯಿಂದ ಏಮ್ಸ್ ಗೆ ಸ್ಥಳಾಂತರಿಸಲಾಗಿತ್ತು. ವಿಶೇಷ ಚಿಕಿತ್ಸೆಗಾಗಿ ೧೬ ಗಂಟೆಗಳ ರೈಲು ಪ್ರಯಾಣ ಮಾಡಿದ ಬಳಿಕ ಅವರು ದೆಹಲಿ ತಲುಪಿದ್ದರು.  ಈದಿನ ಬೆಳಗ್ಗೆ ಪ್ರಸಾದ್ ಅವರನ್ನು ಭೇಟಿ ಮಾಡುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

2018: ನವದೆಹಲಿ: ಲಷ್ಕರ್ -ಇ-ತೊಯ್ಬಾ (ಎಲ್ ಇಟಿ) ಸ್ಥಾಪಕ ಮತ್ತು ೨೦೦೮ರ ಮುಂಬೈ ಭಯೋತ್ಪಾದಕ ದಾಳಿಗಳ ಸಂಚುಕೋರ ಹಫೀಜ್ ಸಯೀದ್ ತನ್ನ ಭಾರತ ವಿರೋಧ ಪ್ರಚಾರಕ್ಕೆ ಸಿಖ್ ಗುರುದ್ವಾರಗಳನ್ನು ಬಳಸಿಕೊಳ್ಳುತ್ತಿದ್ದಾನೆ ಎಂದು ವರದಿಗಳು ತಿಳಿಸಿದವು. ಆತನ ಪ್ರಚಾರದ ಪ್ರಭಾವ ಎಷ್ಟಿದೆ ಎಂದರೆ, ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿ (ಪಿಎಸ್ ಜಿಪಿಸಿ) ಬಹಿರಂಗವಾಗಿ ಸಯೀದನ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಮ್ ಲೀಗ್ (ಎಂಎಂಎಲ್) ಬೆಂಬಲಕ್ಕೆ ಮುಂದಾಗಿದೆ ಎಂದು ವರದಿಗಳು ಹೇಳಿದವು. ಪಿಎಸ್ ಜಿಪಿಸಿಯ ಪ್ರಧಾನ ಕಾರ್‍ಯದರ್ಶಿ ಗೋಪಾಲ್ ಸಿಂಗ್ ಚಾವ್ಲಾ ಅವರು ಎಂಎಂಎಲ್ ಗೆ ಬಹಿರಂಗವಾಗಿ ಬೆಂಬಲ ಘೋಷಿಸಿರುವುದಷ್ಟೇ ಅಲ್ಲ, ಎಂಎಂಎಲ್ ಸಮಾವೇಶವನ್ನು ಮೊದಲ ಸಿಖ್ ಮುಖಂಡ ಗುರು ನಾನಕ್ ದೇವ್ ಅವರ ಪಾಕಿಸ್ತಾನದಲ್ಲಿನ ಜನ್ಮಸ್ಥಳದಲ್ಲಿರುವ ನಾನಖಾನಾ ಸಾಹಿಬ್ ನಲ್ಲಿ  ಶನಿವಾರ ಸಂಜೆ ವ್ಯವಸ್ಥೆ ಮಾಡಿದ್ದರು. ಮೂಲಗಳ ಪ್ರಕಾರ, ಪಿಎಸ್ ಜಿ ಪಿಸಿ ಪ್ರಧಾನ ಕಾರ್‍ಯದರ್ಶಿ ಚಾವ್ಲಾ ಅವರು ನಾನಖಾನಾ ಸಾಹಿಬ್ ನಲ್ಲಿ ಎಂಎಂಎಲ್ ಸಮಾವೇಶ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸಮಾವೇಶದಲ್ಲಿ ಹಫೀಜ್ ಸಯೀದ್ ಮತ್ತು ಎಂಎಂಎಲ್ ಅಧ್ಯಕ್ಷ ಸೈಫುಲಲ್ಲಾ ಖಾಲಿದ್ ಪಾಲ್ಗೊಂಡಿದ್ದರು. ರಾಷ್ಟ್ರದಲ್ಲಿ ಮುಂಬರುವ ಮಹಾಚುನಾವಣೆಯಲ್ಲಿ ಪಾಕಿಸ್ತಾನದಲ್ಲಿನ ಸಿಕ್ಖರ ಬೆಂಬಲ ಗಳಿಸುವ ಸಲುವಾಗಿ ಈ ಸಮಾವೇಶವನ್ನು ಸಂಘಟಿಸಲಾಗಿತ್ತು ಎಂದು ಮೂಲಗಳು ಹೇಳಿವೆ. ’ಚಾವ್ಲಾ, ಸಯೀದ್ ಮತ್ತು ಸೈಫುಲ್ಲಾ ಅವರು ಭಾರತದ ವಿರುದ್ಧ ವಿಷ ಕಾರಿದರು ಮತ್ತು ಕಾಶ್ಮೀರ ಮತ್ತು ಖಲಿಸ್ತಾನದ ಹೆಸರಿನಲ್ಲಿ ಭಾವನೆಗಳನ್ನು ಕೆರಳಿಸಿದರು ಎಂಬ ವರದಿಗಳು ಬಂದಿರುವುದಾಗಿ ಮೂಲಗಳು ಹೇಳಿದವು. ಪಾಕಿಸ್ತಾನದ ಚುನಾವಣಾ ಆಯೋಗವು ಎಂಎಂಎಲ್ ನ್ನು ನೋಂದಣಿ ಮಾಡಲು ನಿರಾಕರಿಸಿರುವುದಷ್ಟೇ ಅಲ್ಲ, ಏಪ್ರಿಲ್ ಮೊದಲ ವಾರದಲ್ಲಿ ವಿಶ್ವಸಂಸ್ಥೆಯು ಎಂಎಂಎಲ್ ನ್ನು ವಿದೇಶೀ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರ್ಪಡೆ ಮಾಡಿತ್ತು.  ಸಮಾವೇಶದಲ್ಲಿ ೧೦ ದಶಲಕ್ಷ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲ್ಪಟ್ಟಿರುವ ಹಫೀಜ್ ಸಯೀದನ ಚಿತ್ರ ಸೆರೆ ಹಿಡಿಯದಂತೆ ಎಚ್ಚರಿಕೆ ವಹಿಸಲಾಗಿತ್ತು ಎಂದು ಮೂಲಗಳು ತಿಳಿಸಿದವು. ಚಾವ್ಲಾ ಅವರು ಭಯೋತ್ಪಾದಕ ಸಂಘಟನೆಗಳ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಷ್ಟೇ ಅಲ್ಲ, ಅವರಿಗೆ ಸಿಖ್ ಸಮುದಾಯದ ಬೆಂಬಲದ ಭರವಸೆಯನ್ನೂ ನೀಡಿದರು ಎಂದು ಮೂಲಗಳು ಹೇಳಿವೆ. ಪಾಕಿಸ್ತಾನದ ಮುಲ್ತಾನ್ ನಲ್ಲಿ ನಡೆದ ರ್‍ಯಾಲಿ ಒಂದರಲ್ಲಿ ಗುರು ನಾನಕ್ ದೇವ್ ಅವರ ವಿರುದ್ಧ ಜಮಾತ್ ಉದ್ ದವಾ (ಜೆಯುಡಿ) ನಾಯಕ ಸಯೀದ್ ಭಾವ ಅಬ್ದುಲ್ ರೆಹಮಾನ್ ಮಕ್ಕಿ ತೀವ್ರ ಆಕ್ಷೇಪಕಾರಿ ಭಾಷೆ ಬಳಸಿ ನಿಂದಿಸಿದ ಕೆಲವೇ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಮೂಲಗಳು ಹೇಳಿದವು. ಸಮಾವೇಶದಲ್ಲಿ ಮಕ್ಕಿಯ ಆಕ್ಷೇಪಣೀಯ ಭಾಷಣದ ವಿರುದ್ಧ ಪಿಎಸ್ ಜಿಪಿಸಿಯ ಒಬ್ಬನೇ ಒಬ್ಬ ನಾಯಕ ಕೂಡಾ ತುಟಿ ಪಿಟಕ್ಕೆನ್ನಲಿಲ್ಲ ಎಂದೂ ವರದಿ ತಿಳಿಸಿತು. ಎಂಎಂಎಲ್ ನ್ನು ಸಯೀದ್ ೨೦೧೭ರಲ್ಲಿ, ನಿಷೇಧಿತ ಎಲ್ ಇಟಿ ಮತ್ತು ಜೆಯುಡಿಗೆ ರಕ್ಷಣೆ ಒದಗಿಸುವ ಸಲುವಾಗಿ ಸ್ಥಾಪಿಸಿದ್ದಾನೆ. ಪಾಕಿಸ್ತಾನ ಸರ್ಕಾರವು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಎಲ್ ಇಟಿ ಮತ್ತು ಜೆಯುಡಿ ಭಯೋತ್ಪಾದಕ ಜಾಲದ ವಿರುದ್ಧ ದಮನ ಕಾರ್‍ಯ ಆರಂಭಿಸಿದಾಗ ಸಯೀದ್ ಎಂಎಂಎಲ್ ನ್ನು ಸ್ಥಾಪಿಸಿದ್ದ.  ಏನಿದ್ದರೂ, ನಾನಖಾನಾ ಸಾಹಿಬ್, ಲಾಹೋರ್ ಮತ್ತಿತರ ಕಡೆಗಳಲ್ಲಿ ವಾಸವಾಗಿರುವ ಹಿಡಿಯಷ್ಟು ಸಿಕ್ಖರು ಮಾತ್ರವೇ ಎಂಎಂಎಲ್ ಪರ ಇದ್ದಾರೆ, ಬಹುತೇಕ ಸಿಕ್ಖರು ಅದನ್ನು ವಿರೋಧಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಪೇಶಾವರದ ಸಿಖ್ ನಾಯಕರು ಹೇಳಿದರು.

2018: ಮೊಂಬಾಸಾ: ಕೀನ್ಯಾದಲ್ಲಿ ಏಪ್ರಿಲ್ ಮೊದಲ ವಾರದಿಂದ ಸುರಿದ ಭಾರೀ ಮಳೆ, ಪ್ರವಾಹ ಭೂಕುಸಿತಗಳಿಗೆ ಕನಿಷ್ಠ ೧೦೦ ಮಂದಿ ಬಲಿಯಾಗಿದ್ದು, ೨ ಲಕ್ಷಕ್ಕೂ ಹೆಚ್ಚು ಮಂದಿ ಮನೆ ಮಾರು ಕಳೆದುಕೊಂಡು ನಿರಾಶ್ರಿತರಾದರು. ಕೀನ್ಯಾದ ಮಳೆ, ಪ್ರವಾಹ ಭಾರಿ ನೈಸರ್ಗಿಕ ಪ್ರಕೋಪವಾಗಿದ್ದು, ಮಾನವೀಯ ನೆರವಿಗಾಗಿ ತುರ್ತು ನಿಧಿ ಒದಗಿಸಬೇಕಾದ ಅಗತ್ಯ ಇದೆ ಎಂದು ಕೀನ್ಯಾದ ರೆಡ್ ಕ್ರಾಸ್ ಸಂಸ್ಥೆ ಹೇಳಿತು.  ‘ನಾನು ೧೨ ಕೋಳಿ, ೪ ಮೇಕೆಗಳನ್ನು ಕಳೆದುಕೊಂಡಿದ್ದೇನೆ. ಮನೆಯೊಳಕ್ಕೆ ಹೋಗೋಣ ಎಂದರೆ ಬಾಗಿಲನ್ನೇ ತೆರೆಯಲಾಗುತ್ತಿಲ್ಲ ಎಂದು ಟಾನಾ ನದಿಯ ಕೆಳಭಾಗದ ಪಟ್ಟಣದಲ್ಲಿ ಪ್ರವಾಹಕ್ಕೆ ಸಿಲುಕಿರುವ ನಾಲ್ಕು ಮಕ್ಕಳ ತಾಯಿ ಹೇಳಿದಳು. ಆಕೆಯ ಹಿರಿಯ ಪುತ್ರಿಯ ಕತ್ತಿನ ವರೆಗೆ ನೀರು ನಿಂತಿದೆ. ಹಲವಾರು ಮನೆ ಅವಶೇಷಗಳು ನೀರಿನಲ್ಲಿ ತೇಲುತ್ತಿವೆ ಎಂದು ವರದಿಗಳು ಹೇಳಿದವು. ಪ್ರವಾಹದಿಂದಾಗಿ ಕೇಂದ್ರ ಮತ್ತು ಉತ್ತರ ಕೀನ್ಯಾ ಹಾಗೂ ಕರಾವಳಿಯ ಪ್ರಮುಖ ರಸ್ತೆಗಳು ಕುಲಗೆಟ್ಟಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರಾಜಧಾನಿ ನೈರೋಬಿಯಿಂದ ಮುಖ್ಯಬಂದರು ಮೊಂಬಾಸಾವರೆಗಿನ ರಸ್ತೆ ಕಳೆದ ಒಂದು ವಾರದಿಂದ ನೀರಿನ ಅಡಿಯಲ್ಲಿ ಮುಳುಗಿದೆ.  ಮುರಂಗಾ ಕೇಂದ್ರ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಮಲಗಿದ್ದಾಗ ಮನೆಗಳ ಮೇಲೆ ಭೂಮಿ ಕುಸಿದು ೮ ಜನ ಸಾವನ್ನಪ್ಪಿದರು ಎಂದು ಕೀನ್ಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಗುಲ್ಲೆಟ್ ಹೇಳಿದರು.


2017: ನವದೆಹಲಿ: ಸಬ್ ಕಾ ಸಾಥ್ - ಸಬ್ ಕಾ ವಿಕಾಸ್ಪರಿಕಲ್ಪನೆಯನ್ನು ವಿಶ್ವ ಮಟ್ಟದಲ್ಲಿ ಅಳವಡಿಸುವ ಪ್ರಯತ್ನವಾಗಿ, ಅದರಲ್ಲೂ ವಿಶೇಷವಾಗಿ ನಮ್ಮ ನೆರೆ ಹೊರೆಯ ದೇಶಗಳಿಗೂ ಅಳವಡಿಸುವ ಯತ್ನವಾಗಿ ಮೇ 5ರಂದು ಭಾರತವು ದಕ್ಷಿಣ ಏಷ್ಯಾ ಪ್ರದೇಶದ 7 ರಾಷ್ಟ್ರಗಳಿಗೆ ಅನುಕೂಲವಾಗುವಂತೆ ದಕ್ಷಿಣ ಏಷಿಯಾ ಉಪಗ್ರಹವನ್ನು ಉಡಾವಣೆ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ತಮ್ಮ “ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ ಪ್ರಕಟಿಸಿದರು. ಉಪಗ್ರಹಕ್ಕಿರುವ ಸಾಮರ್ಥ್ಯ ಮತ್ತು ಸೌಲಭ್ಯಗಳು ದಕ್ಷಿಣ ಏಷಿಯಾದ ಆರ್ಥಿಕ ಮತ್ತು ಅಭಿವೃದ್ಧಿಯ ಆದ್ಯತೆಗಳನ್ನು ಪೂರೈಸಲು ನೆರವಾಗುತ್ತದೆ. ಅದು ನೈಸರ್ಗಿಕ ಸಂಪನ್ಮೂಲಗಳ ಮ್ಯಾಪಿಂಗ್ ಆಗಿರಬಹುದು, ಟೆಲಿ-ಮೆಡಿಸಿನ್ ಇರಬಹುದು, ಶೈಕ್ಷಣಿಕ ಕ್ಷೇತ್ರವಿರಬಹುದು, ಆಳವಾದ ಮಾಹಿತಿ ತಂತ್ರಜ್ಞಾನ ಸಂಪರ್ಕವೇ ಇರಬಹುದು ಅಥವಾ ಜನರಿಂದ ಜನರಿಗೆ ಸಂಪರ್ಕದ ಪ್ರಯತ್ನವಿರಬಹುದು. ದಕ್ಷಿಣ ಏಷಿಯಾದ ಉಪಗ್ರಹ ನಾವು ಎಲ್ಲ ಕ್ಷೇತ್ರಗಳಲ್ಲೂ ಪೂರ್ಣಪ್ರಮಾಣದಲ್ಲಿ ಮುಂದುವರೆಯಲು ಸಹಾಯಕವಾಗಲಿದೆ. ಸಂಪೂರ್ಣ ದಕ್ಷಿಣ ಏಷಿಯಾದೊಂದಿಗೆ ಸಹಕಾರ ಬೆಳೆಸಲು ಇದು ಭಾರತದ ಒಂದು ಮಹತ್ವಪೂರ್ಣ ಹೆಜ್ಜೆಯಾಗಲಿದೆ ಮತ್ತು ಅತ್ಯಮೂಲ್ಯವಾದ ಕೊಡುಗೆಯಾಗಲಿದೆ ಎಂದು ಪ್ರಧಾನಿ ಹೇಳಿದರು. ದಕ್ಷಿಣ ಏಷಿಯಾದ ಬಗ್ಗೆ ನಮಗಿರುವ ಬದ್ಧತೆಯನ್ನು ಸಾರಲು ಇದೊಂದು ಉತ್ತಮ ಉದಾಹರಣೆಯಾಗಿದೆ. ದಕ್ಷಿಣ ಏಷಿಯಾ ಉಪಗ್ರಹದೊಂದಿಗೆ ಸಂಪರ್ಕ ಬೆಳೆಸಿರುವಂಥ ದಕ್ಷಿಣ ಏಷಿಯಾದ ಎಲ್ಲಾ ದೇಶಗಳಿಗೂ ನಾನು ಮಹತ್ವಪೂರ್ಣ ಪ್ರಯತ್ನಕ್ಕೆ ಸ್ವಾಗತ ಕೋರುತ್ತೇನೆ ಮತ್ತು ಶುಭ ಹಾರೈಸುತ್ತೇನೆ ಎಂದು ಮೋದಿ ನುಡಿದರು. ಪಾಕಿಸ್ತಾನವನ್ನು ಹೊರತುಪಡಿಸಿ, ಸಾರ್ಕ್ ಕೂಟದ 7 ರಾಷ್ಟ್ರಗಳಿಗೆ ಈ ಉಪಗ್ರಹದ ಲಾಭ ಲಭಿಸಲಿದೆ.
2017: ಲಾಹೋರ್: ಮುಂಬೈ ದಾಳಿಯ ಪ್ರಮುಖ ಸಂಚುಕೋರ, ಜಮಾತ್ ಉದ್ ದಾವಾ ಮುಖ್ಯಸ್ಥ
ಹಫೀಜ್ ಸಯೀದ್ಗೆ ವಿಧಿಸಲಾಗಿರುವ ಗೃಹ ಬಂಧನದ ಅವಧಿಯನ್ನು 90 ದಿನಗಳ ಕಾಲ ವಿಸ್ತರಿಸಲಾಯಿತು. ಈ ಬಗ್ಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗೃಹ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಭಯೋತ್ಪಾದನೆ ನಿಗ್ರಹ ಕಾಯ್ದೆ ಅನ್ವಯ ಹಫೀಜ್ ಸಯೀದ್ ಮತ್ತು ಆತನ ನಾಲ್ವರು ಸಹಚರರ ಗೃಹಬಂಧನದ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಕುರಿತು ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು. ಪ್ರೊ. ಮಲಿಕ್ ಜಾಫರ್ ಇಕ್ಬಾಲ್, ಅಬ್ದುರ್ ರೆಹಮಾನ್ ಅಬಿದ್, ಖಾಜಿ ಕಾಸಿಫ್ ಹುಸೇನ್ ಮತ್ತು ಅಬ್ದುಲ್ಲಾ ಉಬೈದ್ ಗೃಹ ಬಂಧನಕ್ಕೊಳಗಾಗಿರುವ ಸಯೀದ್ ಸಹಚರರು.  ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುವ ಕೃತ್ಯಗಳಲ್ಲಿ ಶಾಮೀಲಾಗಿದ್ದ ಆರೋಪದಲ್ಲಿ ಸಯೀದ್ ಹಾಗೂ ಆತನ ಸಹಚರರನ್ನು ಜನವರಿ 30ರಿಂದ ಗೃಹ ಬಂಧನದಲ್ಲಿರಿಸಲಾಗಿದೆ. ಸಯೀದ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಿರ್ಬಂಧ ಹೇರುವುದಾಗಿ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ನಂತರ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಕ್ರಮ ಕೈಗೊಂಡಿದ್ದರು.
2017: ಅಂಟಾರ್ಕ್ಟಿಕಾ: ದಕ್ಷಿಣ ಧ್ರುವ ಇರುವ ಅಂಟಾಕ್ಟಿಕಾ ಹಿಮ ಖಂಡದ ಟೇಲರ್
ಹಿಮನದಿಯಲ್ಲಿ ನೂರಾರು ವರ್ಷಗಳಿಂದ ಹರಿಯುತ್ತಿರುವ ರಕ್ತ ವರ್ಣದ ದ್ರವದ ರಹಸ್ಯವನ್ನು ವಿಜ್ಞಾನಿಗಳು ಬಯಲು ಮಾಡಿದರು. ಈ ಬಗ್ಗೆ ಜರ್ನಲ್ಆಫ್ಗ್ಲೇಸಿಯೊಲಜಿ ವರದಿ ಮಾಡಿತು. ಹೇರಳವಾಗಿ ಹರಿಯುತ್ತಿರುವ ರಕ್ತ ವರ್ಣದ್ರವವನ್ನು ಜನ ಅಶುಭ ಸೂಚಕವೆಂದು ನಂಬಿದ್ದರು. ನದಿಯಲ್ಲಿ ಹರಿಯುತ್ತಿರುವ ಕೆಂಪು ದ್ರವದ ಪದರಗಳನ್ನು ರೇಡಾರ್ ಬಳಸಿ ಸ್ಕ್ಯಾನ್ ಮಾಡಲಾಗಿದ್ದು, ಕೆಂಪು ದ್ರವಕ್ಕೆ ನಿಜವಾದ ಕಾರಣವೇನು ಎಂಬುದನ್ನು ಖಚಿತ ಪಡಿಸಲಾಗಿದೆ. ‘ಹಿಮನದಿಯ ತಳದ ಅಧ್ಯಯನವು ರಹಸ್ಯವನ್ನು ತಿಳಿಯಲು ನೆರವಾಗಿದೆ. ನದಿಯಲ್ಲಿ ಕಬ್ಬಿಣದ ಅಂಶದೊಂದಿಗೆ ಉಪ್ಪುನೀರಿನ ಅಂಶ ಹೆಚ್ಚಾಗಿ ಬೆರೆತಿರುವುದರಿಂದ ನೀರು ಕೆಂಪು ಬಣ್ಣಕ್ಕೆ ಬದಲಾಗಿದೆ ಎಂದು ಅಧ್ಯಯನ ನಡೆಸಿದ ವಿಜ್ಞಾನಿಗಳು ತಿಳಿಸಿದರು. ಈ ಸಂಶೋಧನೆಯ ಮೂಲಕ ಹಿಮನದಿಯ ಆಳದಲ್ಲಿ ಮಾತ್ರವೇ ನೀರು ಹರಿಯುವುದಿಲ್ಲ. ಬದಲಾಗಿ ಹಿಮನದಿಯೂ ತನ್ನದೇ ಆದ ನೀರಿನ ಅರಿವಿನ ವ್ಯವಸ್ಥೆಯನ್ನು ಹೊಂದಿದೆ ಎಂಬುದನ್ನೂ ಸಹ ಅಲೆಸ್ಕಾ ಫೈರ್ಬ್ಯಾಂಕ್ಸ್ವಿಶ್ವವಿದ್ಯಾಲಯ ಹಾಗೂ ಕೊಲೊರಾಡೋ ಕಾಲೇಜಿನ ವಿಜ್ಞಾನಿಗಳ ತಂಡ ಗಮನಿಸಿತು. ಟೇಲರ್ಹಿಮನದಿ ಸರಾಸರಿ ಉಷ್ಣತೆಯು 1.4 ಡಿಗ್ರಿ ಫ್ಯಾರನ್ ಹೀಟ್ (-17 ಡಿಗ್ರಿ ಸೆಲ್ಸಿಯಸ್)ಗಳಷ್ಟಿದ್ದು, ಇದನ್ನು ನಿರಂತರವಾಗಿ ಹರಿಯುತ್ತಿರುವ ಅತ್ಯಂತ ತಣ್ಣನೆಯ ನದಿ ಎಂದೂ ಸಹ ಕರೆಯಲಾಗುತ್ತದೆ.

2017: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಖನ್ಯಾರ್ಪೊಲೀಸ್ಠಾಣೆ ಸಮೀಪ ಉಗ್ರರು ನಡೆಸಿದ ಗ್ರೆನೇಡ್ದಾಳಿಯಲ್ಲಿ ಒಬ್ಬ ನಾಗರಿಕ ಮೃತನಾಗಿ ಮೂವರು ಪೊಲೀಸರು ಸೇರಿದಂತೆ ನಾಲ್ಕು ಮಂದಿ ಗಾಯಗೊಂಡರು. ಖನ್ಯಾರ್ಪ್ರದೇಶದ ಎಸ್ಪಿ ಕಚೇರಿ ಸಮೀಪ ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು. ರಸ್ತೆ ಬದಿಯಲ್ಲಿ ನಿಲ್ಲಿಸಿದ ಪೊಲೀಸ್ ಜೀಪ್ಗಳ ಮೇಲೆ ಗ್ರೆನೇಡ್ದಾಳಿ ನಡೆಸಲಾಯಿತು.‌‌ ಘಟನೆಯಲ್ಲಿ ಐವರು ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಗುಲಾಮ್ಮೊಹಮ್ಮದ್ಖಾನ್‌ (65) ಎಂಬುವರು ಮೃತರಾದರು. ಉಳಿದ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
2016: ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಇನ್ನೂ 25 ಕಡತಗಳನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಒಂದು ದಿನದ ಬಳಿಕ, ‘ನೇತಾಜಿ ಕಣ್ಮರೆಗೆ ಸಂಬಂಧಿಸಿದ ಸತ್ಯ ವಿಚಾರಗಳಿದ್ದ ಅತ್ಯಂತ ನಿರ್ಣಾಯಕವಾದ ಕಡತವೊಂದನ್ನು 1972ರಲ್ಲಿ ಕೇಂದ್ರ ಸರ್ಕಾರವು ನಾಶಪಡಿಸಿತ್ತು ಎಂಬುದು ಈದಿನ ಬೆಳಕಿಗೆ ಬಂದಿತು. ಪತ್ರಿಕಾ ವರದಿಗಳ ಪ್ರಕಾರ ಕಡತದ ಸಂಖ್ಯೆ 12(226)56-ಪಿಎಂ ಎಂದು ಹೇಳಲಾಯಿತು. ಹಿಂದಿನ ದಿನ ಬಿಡುಗಡೆ ಮಾಡಲಾಗಿರುವ ಕಡತಗಳಲ್ಲಿ ಕಡತದ ಬಗ್ಗೆ ಪ್ರಸ್ತಾಪವಿದ್ದು, ಕಡತವು ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ ಕಾರಣವಾದ ಸಂದರ್ಭಗಳ ತನಿಖೆಗಳಿಗೆ ಸಂಬಂಧಿಸಿದ್ದು ಎಂದು ಹೇಳಲಾಯಿತು. ನಿರ್ಣಾಯಕ ಕಡತ ಕಾಣೆಯಾಗಿರುವುದು ನ್ಯಾಯಮೂರ್ತಿ ಮುಖರ್ಜಿ ಆಯೋಗದ ಗಮನಕ್ಕೆ ನೇತಾಜಿ ಅವರ ನಿಗೂಢ ಕಣ್ಮರೆ ಬಗ್ಗೆ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಂದಿತ್ತು. 2001ರಲ್ಲಿ ನೇತಾಜಿ ಕಣ್ಮರೆ ಸಂಬಂಧ ತನಿಖೆಗೆ ಕೇಂದ್ರ ಸರ್ಕಾರ ಮುಖರ್ಜಿ ಆಯೋಗಕ್ಕೆ ಸೂಚಿಸಿತ್ತು. ಕಡತದ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಲು ವಿಫಲವಾದ ಪ್ರಧಾನ ಮಂತ್ರಿ ಕಚೇರಿಯು 1972ರಲ್ಲಿ ಇತರ ಕಡತಗಳನ್ನು ಮಾಮೂಲಿಯಾಗಿ ನಾಶಪಡಿಸುವಾಗ ಕಡತವನ್ನೂ ನಾಶಪಡಿಸಲಾಗಿದೆ ಎಂದು ತಿಳಿಸಿತ್ತು. ಏನಿದ್ದರೂ ಕಡತದ ಸಂಕ್ಷಿಪ್ತ ಮಾಹಿತಿ ಸಂಪುಟ ಸಚಿವಾಲಯದಲ್ಲಿ ಲಭ್ಯವಿದೆ ಎಂದು ಪಿಎಂಒ ತಿಳಿಸಿತ್ತು. ಆದರೆ ಸಂಪುಟ ಸಚಿವಾಲಯವು ಕಡತದಲ್ಲಿ ಇದ್ದ ಅಂಶಗಳ ಬಗ್ಗೆ ತನ್ನ ಬಳಿ ಯಾವುದೇ ದಾಖಲೆಯೂ ಇಲ್ಲ, ಏಕೆಂದರೆ ಸಂಪುಟ ಸಚಿವಾಲಯ ರಚನೆಯಾದದ್ದೇ 1968 ಸೆಪ್ಟೆಂಬರ್ 21ರಂದು ಎಂದು ತಿಳಿಸಿತ್ತು. ‘ ಕಡತ ಲಭಿಸಿದ್ದಿದ್ದರೆ ಸತ್ಯ ಕಂಡು ಹಿಡಿಯುವುದು ಸುಲಭವಾಗುತ್ತಿತ್ತುಎಂದು ನ್ಯಾಯಮೂರ್ತಿ ಮುಖರ್ಜಿ ಆಯೋಗ ತನ್ನ ವರದಿಯಲ್ಲಿ ದಾಖಲಿಸಿತ್ತು.

2016: ಮುಂಬೈ: ಮುಂಬೈ ನಗರದಲ್ಲಿ ಮೂರಂತಸ್ತಿನ ಕಟ್ಟಡವೊಂದು ಈದಿನ ಮಧ್ಯಾಹ್ನ ಕುಸಿದ ಪರಿಣಾಮವಾಗಿ 6 ಮಂದಿಗೆ  ಮೃತರಾಗಿ ಹಲವರು ಗಂಭೀರವಾಗಿ ಗಾಯಗೊಂಡರು. ಇತರ ಹಲವರು ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದರು. ಅವಶೇಷಗಳ ಅಡಿಯಿಂದ ಐವರನ್ನು ರಕ್ಷಿಸಲಾಗಿದೆ. ಕಾಮಾಟಿಪುರದ ಗ್ರಾಂಟ್ ರಸ್ತೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಟ್ಟಡ ಕುಸಿತದ ದುರಂತ ಸಂಭವಿಸಿತು ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದರು. ಗಾಯಾಳುಗಳಲ್ಲಿ ಇಬ್ಬರು ಜೆಜೆ ಆಸ್ಪತ್ರೆ ಮತ್ತು ನಾಯರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬಿಎಂಸಿ ವಿಕೋಪ ನಿಯಂತ್ರಣ ಕೊಠಡಿ ಅಧಿಕಾರಿಗಳು ಹೇಳಿದರು. ಕುಸಿದ ಕಟ್ಟಡದಲ್ಲಿ ಒಂದು ಬೀರ್ ಬಾರ್ ಮತ್ತು ಫ್ಯಾಕ್ಟರಿ ಇತ್ತು. ಹೀಗಾಗಿ ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲಕಿಕೊಂಡಿರಬಹುದು ಎಂದು ಶಂಕಿಸಲಾಯಿತು. ಎಂಟು ಅಗ್ನಿಶಾಮಕ ವಾಹನಗಳು ಮತ್ತು ಮೂರು ಆಬುಲೆನ್ಸ್ಗಳನ್ನು ಶೋಧ, ರಕ್ಷಣಾ ಕಾರ್ಯಾಚರಣೆ ನಡೆಸಿದವು.
2016: ನವದೆಹಲಿ: ರಾಷ್ಟ್ರದ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) 2000 ಸಿಸಿ ಸಾಮರ್ಥ್ಯ ಹೊಂದಿದ ಎಂಜಿನ್ಗಳ ಡೀಸೆಲ್ ಕಾರುಗಳ ನೋಂದಣಿ ಮೇಲೆ ವಿಧಿಸಲಾಗಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿತು. ಪ್ರತಿಷ್ಠಿತ ಆಟೋಮೊಬೈಲ್ ಕಂಪೆನಿಗಳಾದ ಮರ್ಸಿಡೆಸ್, ಟಯೋಟಾ, ಮಹೀಂದ್ರಾ ಮತ್ತು ಜನರಲ್ ಮೋಟಾರ್ಸ್ ಸಲ್ಲಿಸಿದ್ದ ಹಾಗೂ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಇತರ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಈದಿನ ನಡೆಸಿದ ನಡೆಸಿತು. ಪ್ರತಿಷ್ಠಿತ ಕಂಪೆನಿಗಳು ತಮ್ಮ ಹೈ-ಎಂಡ್ ಡೀಸೆಲ್ ವಾಹನಗಳ ನೋಂದಣಿಗೆ ಅವಕಾಶ ನೀಡುವಂತೆ ಕೋರಿದ್ದವು. 2000 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಡೀಸೆಲ್ ವಾಹನಗಳ ನೋಂದಣಿಯನ್ನು ನಿಷೇಧಿಸಿದ ಮಧ್ಯಂತರ ಆದೇಶ ಏಪ್ರಿಲ್ 30ಕ್ಕೆ (ಇಂದಿಗೆ) ಮುಗಿಯಲಿತ್ತು. ಸುಪ್ರೀಂಕೋರ್ಟ್ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿತು. ಡೀಸೆಲ್ ಟ್ಯಾಕ್ಸಿಗಳನ್ನು ಸಿಎನ್ಜಿಗೆ ಪರಿವರ್ತಿಸಲು ನೀಡಲಾದ ಗಡುವನ್ನು ವಿಸ್ತರಿಸಲೂ ಕೋರ್ಟ್ ನಿರಾಕರಿಸಿತು. ತಂತ್ರ ಜ್ಞಾನದ ಅಲಭ್ಯತೆ ಕಾರಣ ತಮ್ಮ ಕಾರುಗಳನ್ನು ಸಿಎನ್ಜಿಗೆ ಪರಿವರ್ತಿಸಲು ನೀಡಲಾದ ಗಡುವನ್ನು ವಿಸ್ತರಿಸಬೇಕು ಎಂದು ಟ್ಯಾಕ್ಸಿ ಚಾಲಕರು ಮನವಿ ಮಾಡಿದ್ದರು. ಏನಿದ್ದರೂ ದೆಹಲಿ ಜಲಮಂಡಳಿಗೆ ಹೊಸ ಡೀಸೆಲ್ ಚಾಲಿತ ವಾಟರ್ ಟ್ಯಾಂಕರ್ಗಳನ್ನು ಸಾರಿಗೆ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳಲು ಒಪ್ಪಿಗೆ ನೀಡಿದ ಸುಪ್ರೀಂಕೋರ್ಟ್, ಗ್ರೀನ್ಸೆಸ್ ಪಾವತಿಯಿಂದಲೂ ಜಲಮಂಡಳಿಗೆ ವಿನಾಯ್ತಿ ನೀಡಿತು. ಗೀನ್ ಸೆಸ್ ಪಾವತಿ ಮಾಡಿ 2000 ಸಿಸಿ ಮತ್ತು ಹೆಚ್ಚಿನ ಸಾಮರ್ಥ್ಯ 190 ಡೀಸೆಲ್ ವಾಹನಗಳನ್ನು ತನ್ನ ಇಲಾಖೆಗೆ ನೋಂದಣಿ ಮಾಡಿಕೊಳ್ಳಲು ದೆಹಲಿ ಪೊಲೀಸ್ ಇಲಾಖೆಗೂ ಸುಪ್ರಿಂಕೋರ್ಟ್ ಅನುಮತಿ ನೀಡಿತು.

2016: ಮುಂಬೈ: ಉದ್ಯಮಿ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ಏರ್ಲೈನ್ಸ್ ಲಾಂಛನ ಮತ್ತು ಬ್ರ್ಯಾಂಡ್ಗಳ ಹರಾಜು ವಿಫಲಗೊಂಡಿತು.  ಹರಾಜಿಗೆ ನಿಗದಿ ಪಡಿಸಲಾಗಿದ್ದ ಮೂಲದರ 366.70 ಕೋಟಿ ರೂಪಾಯಿಗಳಿಗಿಂತ ಮೇಲೆ ಬಿಡ್ ಮಾಡಲು ಯಾರೂ ಮುಂದೆ ಬರಲಿಲ್ಲ. ಒಬ್ಬನೇ ಒಬ್ಬ ಬಿಡ್ಡರ್ನನ್ನು ಸೆಳೆಯಲೂ ಸಾಲನೀಡಿಕೆದಾರರಿಗೆ ಸಾಧ್ಯವಾಗಲಿಲ್ಲ. ಕಿಂಗ್ ಫಿಷರ್ ಏರ್ಲೈನ್ಸ್ನಿಂದ ಬರಬೇಕಾದ ಬಾಕಿ ಹಣ ವಸೂಲಿ ಸಲುವಾಗಿ 17 ಬ್ಯಾಂಕುಗಳ ಒಕ್ಕೂಟ ನಡೆಸಿದ ಎರಡನೇ ಸಲದ ಹರಾಜು ಯತ್ನ ಇದಾಗಿದ್ದು, ಹಿಂದಿನ ಸಲವೂ ವಿಮಾನಯಾನ ಸಂಸ್ಥೆಯ ಕೇಂದ್ರ ಕಚೇರಿಯಾದ ಕಿಂಗ್ ಫಿಷರ್ ಹೌಸ್ ಹರಾಜಿಗೆ ನಡೆಸಿದ ಯತ್ನ ವಿಫಲವಾಗಿತ್ತು. ಆಗಲೂ ನಿಗದಿ ಪಡಿಸಿದ ಮೂಲದರಕ್ಕೆ ಬಿಡ್ ಮಾಡಲು ಕೂಡಾ ಯಾರೂ ಮುಂದೆ ಬಂದಿರಲಿಲ್ಲ. ಈದಿನ ಹರಾಜಿಗೆ ಇಡಲಾಗಿದ್ದ ವಸ್ತುಗಳಲ್ಲಿಫ್ಲೈ ದಿ ಗುಡ್ ಟೈಮ್್ಸಬರಹವುಳ್ಳ ಕಿಂಗ್ಫಿಷರ್ ಲಾಂಛನ, ಫ್ಲೈಯಿಂಗ್ ಮಾಡೆಲ್ಗಳು, ಫನ್ಲೈನರ್, ಫ್ಲೈ ಕಿಂಗ್ಫಿಷರ್ ಮತ್ತು ಫ್ಲೈಯಿಂಗ್ ಬರ್ಡ್ ಸಾಧನ ಸೇರಿದ್ದವು. ಹರಾಜಿಗೆ ಮೂಲದರವಾಗಿ 366.70 ಕೋಟಿ ರೂಪಾಯಿ ನಿಗದಿ ಪಡಿಸಲಾಗಿತ್ತು. ಇದು ಬ್ಯಾಂಕುಗಳಿಗೆ ಬರಬೇಕಾಗಿರುವ ಸಾಲದ ಮೊತ್ತದ ಹತ್ತನೇ ಒಂದು ಭಾಗಕ್ಕಿಂತಲೂ ಕಡಿಮೆ.

2016: ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಜವಾಬ್ದಾರಿಯ ಹೊಣೆ ಹೊತ್ತಿದ್ದ ದಕ್ಷ ಪೊಲೀಸ್ ಅಧಿಕಾರಿ ಸೋನಿಯಾ ನಾರಂಗ್ ಅವರನ್ನು ವರ್ಗಾವಣೆ ಮಾಡಿದ ಸರ್ಕಾರ, ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಕೇಂದ್ರದ ಎರವಲು ಸೇವೆಗೆ ತೆರಳುತ್ತಿರುವ ಸೋನಿಯ ನಾರಂಗ್ ಅವರು ಮುಂಬರುವ ದಿನಗಳಲ್ಲಿ ಎನ್ಐಎ ಎಸ್ಪಿ ಆಗಿ ಸೇವೆ ಸಲ್ಲಿಸಲಿದ್ದಾರೆ. ಸದ್ಯ ಚುನಾವಣಾ ಕರ್ತವ್ಯದ ಹಿನ್ನೆಲೆಯಲ್ಲಿ ಪಾಂಡಿಚೇರಿಯಲ್ಲಿರುವ ಸೋನಿಯಾ ನಾರಂಗ್, ಈಗಾಗಲೇ ಲೋಕಾಯುಕ್ತ ಪ್ರಕರಣ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಿಂಚಿನ ತನಿಖೆ ನಡೆಸಿ ತಮ್ಮ ದಕ್ಷತೆ ಮೆರೆದಿದ್ದಾರೆ.

2016: ನವದೆಹಲಿ: ಎಲ್ಲವೂ ಅಷ್ಟೆ, ಅತಿಯಾದರೆ ಅದೇ ವಿಷವಾಗಿ ಪರಿಣಮಿಸುತ್ತದೆ!!  ದೆಹಲಿಯಲ್ಲಿ ನಡೆದಿರುವ ಘಟನೆ ಇದಕ್ಕೊಂದು ಅತ್ಯುತ್ತಮ ಉದಾಹರಣೆ. ದೇಹದ ಬೆಳವಣಿಗೆಗಾಗಿ ವಿಟಮಿನ್ಡಿಸೇವನೆ ಮಾಡುತ್ತಿದ್ದ 10 ವರ್ಷದ ಬಾಲಕ ಮಿತಿಮೀರಿದ ಸೇವನೆಯಿಂದ ಪ್ರಾಣ ಕಳೆದುಕೊಂಡ ಘಟನೆ ಘಟಿಸಿತು. ಅಚ್ಚರಿಯಾದರೂ ಇದು ಸತ್ಯ. ಬಾಲಕನ ದೈಹಿಕ ಬೆಳವಣಿಕೆ ಕುಂಟಿತಗೊಂಡಿದ್ದ ಹಿನ್ನೆಲೆಯಲ್ಲಿ ವೈದ್ಯರು 6ಲಕ್ಷ ಇಂಟರ್ನ್ಯಾಷನಲ್ ಯೂನಿಟ್(ಐಯು)ಗಳನ್ನು ಒಟ್ಟು 21 ದಿನಗಳ ಕಾಲ ಸೇವನೆ ಮಾಡುವಂತೆ ಸೂಚಿಸಿದ್ದರು. ಅದೇ ಪ್ರಕಾರ ಬಾಲಕ ವಿಟಮಿನ್ಡಿಸೇವನೆ ಮಾಡಿದ್ದು, ಇದು ಅಧಿಕ ಪ್ರಮಾಣದ್ದಾಗಿದ್ದರಿಂದ ದೇಹಕ್ಕೆ ಅಲರ್ಜಿಯಾಯಿತು. ಪರಿಣಾಮ ಬಾಲಕನಲ್ಲಿ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿತು. ಗಾಬರಿಯಾದ ಪೋಷಕರು ಏಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ವಿಟಮಿನ್ಡಿಅತಿಯಾದ ಸೇವನೆಯಿಂದ ಅಡ್ಡ ಪರಿಣಾಮ ಆಗಿರುವುದು ಗೊತ್ತಾಯಿತು. ಬಾಲಕ ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವು, ವಾಂತಿಯಿಂದ ಬಳಲುತ್ತಿದ್ದ. ತಕ್ಷಣ ಇದಕ್ಕೆ ಚಿಕಿತ್ಸೆ ನೀಡಲಾಯಿತಾದರೂ, ಪ್ರಯೋಜನವಾಗದೇ ಕೊನೆಯುಸಿರೆಳೆದ. ತುರ್ತು ನಿಗಾ ಘಟಕದಲ್ಲಿಟ್ಟು ಆತನನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಲಾಯಿತಾದರೂ, ಬಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಏಮ್ಸ್ ವೈದ್ಯರು ಮಾಹಿತಿ ನೀಡಿದರು. ವೈದ್ಯರ ಸಲಹೆ ಮಕ್ಕಳ ಸಾಮರ್ಥ್ಯಕ್ಕಿಂತ 30 ಪಟ್ಟು ಜಾಸ್ತಿ ಆಗಿತ್ತು ಎನ್ನುವ ಅಂಶ ಘಟನೆಯ ಬಳಿಕ ಗೊತ್ತಾಯಿತು. ಏಮ್ಸ್ ಹಿರಿಯ ವೈದ್ಯರೊಬ್ಬರ ಮಾಹಿತಿಯ ಪ್ರಕಾರ, ಮಕ್ಕಳಿಗೆ 1000 ಐಯು ನಂತೆ ವಾರಕ್ಕೆ 60,000 ಐಯು ನೀಡಬಹುದಷ್ಟೆ.

2016: ನವದೆಹಲಿ: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ವಿರುದ್ಧ ಯಾವುದೇ ಹೊಸ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿತು.  ತನ್ನ ಆದೇಶವನ್ನು ಮಾರ್ಪಾಡು ಮಾಡಲು ಮತ್ತು ಮೇ 1ರಂದು ನಡೆಯುವ ಪರೀಕ್ಷೆ ಮುಂದೂಡಲೂ ಕೋರ್ಟ್ ನಿರಾಕರಿಸಿತು. ‘ಮೇ 1ರಂದು ನಡೆಯುವ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಿಎಂದು ನೀಟ್ ನಡೆಸಲು ಅನುಮತಿ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ವಿದ್ಯಾಥಿಗಳ ಪರ ವಕೀಲರಿಗೆ ಅರ್ಜಿ ಸಲ್ಲಿಲು ಅನುಮತಿ ನೀಡುತ್ತಾ ನ್ಯಾಯಲಯ ನಿರ್ದೇಶಿಸಿತು. ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಏಕರೂಪದ ರಾಷ್ಟ್ರಮಟ್ಟದ ಪರೀಕ್ಷೆನೀಟ್ನ್ನು ಎರಡು ಹಂತಗಳಲ್ಲಿ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದ್ದು, ಮೊದಲ ಹಂತದ ಪರೀಕ್ಷೆ ಮೇ 1ರಂದು ಮತ್ತು ಎರಡನೇ ಹಂತದ ಪರೀಕ್ಷೆ ಜುಲೈ 24ರಂದು ನಡೆಯಲಿದೆ. ಸಿಬಿಎಸ್ ಮತ್ತು ರಾಜ್ಯ ಮಂಡಳಿಗಳ ಪಾಠಪಟ್ಟಿ ಪ್ರತ್ಯೇಕವಾಗಿದ್ದು ಪರೀಕ್ಷೆಗೆ ಸಿದ್ಧರಾಗಲು ಸಮಯ ಸಾಕಾಗುವುದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಪರೀಕ್ಷೆಗೆ ಸಿದ್ಧರಾಗಲು ನಿಮ್ಮನ್ನು ಯಾವುದೂ ತಡೆಯುವುದಿಲ್ಲ ಎಂದು ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ತಿಳಿಸಿತು.

2016: ವಾಷಿಂಗ್ಟನ್: ಅವಧಿಗೂ ಮುನ್ನ ಜನಿಸಿದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೆ ಬುದ್ದಿಮಾಂದ್ಯತೆ ಸಮಸ್ಯೆ ಉಂಟಾಗುತ್ತದೆ. ಆದರೆ ಅವಧಿಗೂ ಮುನ್ನ ಜನಿಸಿದ ನವಜಾತ ಶಿಶುಗಳಿಗೆ ಮೊದಲ ಕೆಲವು ತಿಂಗಳು ಕೇವಲ ಎದೆಹಾಲನ್ನು ಮಾತ್ರ ಉಣಿಸುವುದರಿಂದ ಮಗುವಿನ ಮೆದುಳು ಸಮರ್ಪಕವಾಗಿ ಬೆಳವಣಿಗೆಯಾಗುತ್ತದೆ ಎಂದು ಸಂಶೋಧನೆಯಿಂದ ಬೆಳಕಿಗೆ ಬಂತು. ಅಮೆರಿಕದ ಸೇಂಟ್ ಲೂಯಿಸ್ ಮಕ್ಕಳ ಆಸ್ಪತ್ರೆ ಅವಧಿಗೂ ಮುನ್ನ ಜನಿಸಿದ ಮಕ್ಕಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಪ್ರಾರಂಭದ ಕೆಲವು ತಿಂಗಳು ನಿಯಮಿತವಾಗಿ ಎದೆಹಾಲು ಸೇವಿಸಿದ ಮಕ್ಕಳಲ್ಲಿ ಎದೆಹಾಲು ಸೇವಿಸಿದ ಮಕ್ಕಳಿಗೆ ಹೋಲಿಸಿದರೆ ಮೆದುಳಿನ ಬೆಳವಣಿಗೆ ಶೇ. 50 ರಷ್ಟು ಹೆಚ್ಚಿರುವುದು ಗೊತ್ತಾಯಿತು. ಅವಧಿಗೂ ಮುನ್ನ ಜನಿಸಿದ ಮಕ್ಕಳಲ್ಲಿ ಮೆದುಳು ಪೂರ್ಣವಾಗಿ ವೃದ್ಧಿಯಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ತಾಯಿಯ ಎದೆ ಹಾಲು ಮಗುವಿನಲ್ಲಿ ಮೆದುಳಿನ ಕೋಶಗಳ ಸಮರ್ಪಕ ಬೆಳವಣಿಗೆಗೆ ನೆರವಾಗುತ್ತದೆ. ಹಲವು ಸಂದರ್ಭದಲ್ಲಿ ಅವಧಿಗೂ ಮುನ್ನ ಜನಿಸಿದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ಪೂರ್ಣವಾಗಿ ಆಗದೆ ಬುದ್ದಿಮಾಂದ್ಯತೆ ಸಮಸ್ಯೆ ಕಾಡುತ್ತದೆ. ಸಮಸ್ಯೆಗೆ ತಾಯಿಯ ಎದೆಹಾಲು ರಾಮಬಾಣ ಎಂದು ಆಸ್ಪತ್ರೆ ವೈದ್ಯೆ ಸೈಂತಿಯಾ ರೋಗ್ರೆಸ್ ಹೇಳಿದರು. ಎದೆಹಾಲು ಸೇವಿಸುವುದರಿಂದ ಮಕ್ಕಳ ಮೆದುಳಿನಲ್ಲಿ ಇರುವ ಕೋರ್ಟೆಕ್ಸ್ ಎಂಬ ಭಾಗ ಹೆಚ್ಚು ವೃದ್ಧಿಯಾಗುತ್ತದೆ. ಭಾಗ ಮಕ್ಕಳಲ್ಲಿ ಸಂವೇದನೆಯನ್ನು ಹೆಚ್ಚಿಸುತ್ತದೆ ಎಂದು ರೋಗ್ರೆಸ್ ನುಡಿದರು.

2009: ಅಕ್ರಮವಾಗಿ 1.50 ಕೋಟಿ ರೂಪಾಯಿಯನ್ನು ಕೊಲ್ಲಿ ರಾಷ್ಟ್ರ ಶಾರ್ಜಾಗೆ ಸಾಗಿಸಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಆದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಇಂಬಿಯಾಜ್ ಮತ್ತು ಖಾಜಾ ಮೊಯಿನ್ದುದೀನ್ ಬಂಧಿತರು. ಆರೋಪಿಗಳಿಬ್ಬರು ಒಯ್ಯುತ್ತಿದ್ದ ಬ್ಯಾಗನ್ನು ತಪಾಸಣೆಗೆ ಒಳಪಡಿಸಿದಾಗ ಹಣ ಪತ್ತೆಯಾಯಿತು. ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ಹಣ ಸಾಗಣೆಯನ್ನು ಡಿಆರ್‌ಐ ಅಧಿಕಾರಿಗಳು ಪತ್ತೆ ಮಾಡಿದರು.

2009: ಇಂಧನ ಕೊರತೆಯಿಂದ ಬಳಲುತ್ತಿರುವ ರಾಜ್ಯಕ್ಕೆ ಮಹಾರಾಷ್ಟ್ರದ 800 ಕಿ.ಮೀಗಳಷ್ಟು ದೂರದ ದಾಬೋಲ್‌ನಿಂದ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡುವ ಮಹತ್ವದ ಯೋಜನೆಗೆ ಅಂಕಿತ ಬಿದ್ದಿತು. ಈ ಮಹತ್ವದ ಒಪ್ಪಂದಕ್ಕೆ ಭಾರತ ಅನಿಲ ಪ್ರಾಧಿಕಾರದ (ಜಿಎಐಎಲ್) ಮಾರುಕಟ್ಟೆ ನಿರ್ದೇಶಕ ಬಿ.ಸಿ.ತ್ರಿಪಾಠಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್ ಸಹಿ ಹಾಕಿದರು. ಪರಿಸರ ಹಾಗೂ ಆರ್ಥಿಕ ಕಾರಣಗಳಿಂದಾಗಿ ನೈಸರ್ಗಿಕ ಅನಿಲವನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಪ್ರಾಧಿಕಾರದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಯು.ಡಿ.ಚೌಬೇ, ದಾಬೋಲ್‌ನಲ್ಲಿ ಇಂಧನ ಘಟಕ ಕಾರ್ಯಾರಂಭ ಮಾಡಿದ ಬಳಿಕ ವರ್ಷಕ್ಕೆ ಕನಿಷ್ಠ 2.9 ದಶಲಕ್ಷ ಟನ್‌ಗಳಷ್ಟು ಅನಿಲ ರಾಜ್ಯಕ್ಕೆ ಲಭ್ಯವಾಗುವುದು ಎಂದರು.

2009: ಭಾರತೀಯ ವಾಯು ಪಡೆಯ ಅತ್ಯಾಧುನಿಕ ಯುದ್ಧವಿಮಾನ ಸುಖೋಯ್-30 ಮೊಟ್ಟಮೊದಲ ಬಾರಿಗೆ ರಾಜಸ್ಥಾನದ ಜೈಸಲ್ಮೇರ್ ಗೆ ಸಮೀಪ ಅಪಘಾತಕ್ಕೆ ಈಡಾಗಿ ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು ಮೃತರಾದರು. ಪುಣೆ ಘಟಕಕ್ಕೆ ಸೇರಿದ ಸುಖೋಯ್ ವಿಮಾನ ಇಲ್ಲಿಗೆ ಸಮೀಪದಲ್ಲಿರುವ ರಾಜಮಾತಾಯಿ ಗ್ರಾಮದ ಬಳಿ ಬೆಳಿಗ್ಗೆ 10.20ಕ್ಕೆ ಅಭ್ಯಾಸ ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತು.

2009: ಎಲ್‌ಟಿಟಿಇ ನಾಯಕರನ್ನು, ಅದರಲ್ಲೂ ಮುಖ್ಯವಾಗಿ ಅದರ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರನ್ನು ಜೀವಂತ ಸೆರೆ ಹಿಡಿಯುವ ತನಕ ಅಥವಾ ಆತನನ್ನು ಕೊಲ್ಲುವವರೆಗೂ ತಮಿಳು ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಿಲ್ಲದು ಎಂದು ಶ್ರೀಲಂಕಾ ಸ್ಪಷ್ಟಪಡಿಸಿತು. ತಮಿಳು ಉಗ್ರರು ಸಂಪೂರ್ಣ ಸೋಲೊಪ್ಪಿಕೊಳ್ಳುವ ಹಂತದಲ್ಲಿರುವ ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಿ ಕದನ ವಿರಾಮಕ್ಕೆ ಆಗ್ರಹಿಸಿದ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಾಂಡ್ ಮತ್ತು ಇತರ ನಿಯೋಗ ಸದಸ್ಯರಿಗೆ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆಯವರ ಸೋದರ ರಕ್ಷಣಾ ಕಾರ್ಯದರ್ಶಿ ಗೊಟಭಯಾ ರಾಜಪಕ್ಸೆ ಈ ಸ್ಪಷ್ಟನೆ ನೀಡಿದರು.

2009: ವಿಶ್ವದ 9 ರಾಷ್ಟ್ರಗಳ 148 ಮಂದಿಯಲ್ಲಿ ಹಂದಿ ಜ್ವರ ದೃಢಪಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತು. ಅಮೆರಿಕವೊಂದರಲ್ಲೇ 91 ಮಂದಿಯಲ್ಲಿ ರೋಗ ಕಾಣಿಸಿಕೊಂಡು, ಒಬ್ಬ ಮೃತನಾಗಿದ್ದಾನೆ. ಮೆಕ್ಸಿಕೊದಲ್ಲಿ 26 ಮಂದಿ ರೋಗಪೀಡಿತರಾಗಿ, 7 ಮಂದಿ ಅಸುನೀಗಿದ್ದಾರೆ. ಆಸ್ಟ್ರಿಯದಲ್ಲಿ ಒಬ್ಬರು, ಕೆನಡಾದಲ್ಲಿ 13 ಮಂದಿ, ಜರ್ಮನಿ, ನ್ಯೂಜಿಲೆಂಡ್‌ನಲ್ಲಿ ತಲಾ ಮೂವರು, ಇಸ್ರೇಲ್‌ನಲ್ಲಿ ಇಬ್ಬರು, ಸ್ಪೇನ್‌ನಲ್ಲಿ ನಾಲ್ವರು ಹಾಗೂ ಬ್ರಿಟನ್‌ನ ಐದು ಮಂದಿಯಲ್ಲಿ ಹಂದಿ ಜ್ವರ ದೃಢಪಟ್ಟಿದೆ ಎಂದು ಸಂಸ್ಥೆ ಹೇಳಿತು. ಆದರೆ ಅನಧಿಕೃತ ವರದಿಗಳ ಪ್ರಕಾರ ಒಟ್ಟು 171 ಜನರು ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ್ದಾರೆ ಎಂದು ಹೇಳಲಾಯಿತು. ಇವರಲ್ಲಿ ಅಮೆರಿಕದ ಒಬ್ಬ ಬಿಟ್ಟರೆ ಉಳಿದವರೆಲ್ಲರೂ ಮೆಕ್ಸಿಕೊದವರು.

2009: ಪಾಕಿಸ್ಥಾನದ ಬಂದರು ನಗರ ಕರಾಚಿಯಲ್ಲಿ ಜನಾಂಗೀಯ ಘರ್ಷಣೆಯಲ್ಲಿ ಕನಿಷ್ಠ 27 ಜನರು ಮೃತರಾಗಿ 36ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಉರ್ದು ಮಾತನಾಡುವ ಮುತ್ತಾಹಿದಾ ಖ್ವಾಮಿ ಚಳವಳಿ (ಎಂಕ್ಯೂಎಂ) ಕಾರ್ಯಕರ್ತರು ಮತ್ತು ಅಲ್ಪಸಂ ಖ್ಯಾತ ಪಸ್ತೂನರ ನಡುವೆ ಜನಾಂಗೀಯ ಸಂಘರ್ಷ ಉಂಟಾಯಿತು. ಖ್ವಾಜಾ ಅಜ್ಮೇರ್ ನಗರದ ಬಳಿ ಬಂದೂಕುಧಾರಿಗಳು ಇಬ್ಬರ ಎಂಕ್ಯೂಎಂ ಬೆಂಬಲಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಕರಾಚಿ ನಗರದಾದ್ಯಂತ ಹಿಂಸಾಚಾರ ಹಬ್ಬಿತು.

2009: ಭಾರತದ ರಕ್ಷಣಾ ನೆಲೆಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ತನ್ನ ರಾಷ್ಟ್ರಕ್ಕೆ ರವಾನಿಸುತ್ತಿದ್ದ ಪಾಕಿಸ್ಥಾನದ ವ್ಯಕ್ತಿಯೊಬ್ಬನಿಗೆ ಹೈದರಾಬಾದಿನ ನ್ಯಾಯಾಲಯ 14 ವರ್ಷಗಳ ಕಠಿಣ ಸಜೆ ವಿಧಿಸಿತು. ಮಲಿಕ್ ಅರ್ಷದ್ ಮಹಮೂದ್ (45) ಶಿಕ್ಷೆಗೆ ಒಳಗಾದವನು. ಅಧಿಕೃತ ದಾಖಲೆಗಳಿಲ್ಲದೆ ರಾಷ್ಟ್ರಕ್ಕೆ ನುಸುಳಿದ್ದ ಈತ ಮುಖ್ಯವಾಗಿ ನಗರದ ಸುತ್ತಮುತ್ತ ಇರುವ ರಕ್ಷಣಾ ನೆಲೆಗಳ ಕುರಿತು ಪಾಕಿಸ್ಥಾನಕ್ಕೆ ಇ-ಮೇಲ್ ಮೂಲಕ ಮಾಹಿತಿ ರವಾನಿಸುತ್ತಿದ್ದ. 2004ರ ಮಾರ್ಚ್ 8ರಂದು ಈತನನ್ನು ಬಂಧಿಸಿದ್ದ ಇಲ್ಲಿನ ಪೊಲೀಸರು ಅಪರಾಧದ ಸಂಚು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದ್ದರು. ವಿಚಾರಣೆ ನಡೆಸಿದ ಮೊದಲನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶರು ತೀರ್ಪು ನೀಡಿದರು. ಮಲಿಕ್‌ಗೆ ಹಣಕಾಸು ಒದಗಿಸಲು ನೆರವಾದ ಆರೋಪ ಹೊತ್ತಿದ್ದ ನಗರದ ಯುವಕ ಮಿಲಿಂದ್ ದತ್ತಾತ್ರೇಯ ಎಂಬಾತನನ್ನು ನ್ಯಾಯಾಲಯ ಇದೇ ಸಂದರ್ಭದಲ್ಲಿ ಖುಲಾಸೆಗೊಳಿಸಿತು.

2008: ಕಳಸಾ-ಬಂಡೂರಿ ನಾಲಾ ಯೋಜನೆಯ ಕಾಮಗಾರಿ ಸ್ಥಗಿತಗೊಳಿಸಲು ಪಣತೊಟ್ಟ ಗೋವಾ ಸರ್ಕಾರದ ಮತ್ತೊಂದು ಪ್ರಯತ್ನ ವಿಫಲವಾಯಿತು. ವಿವಾದ ಇತ್ಯರ್ಥವಾಗುವವರೆಗೆ ನೀರು ಬಳಸುವುದಿಲ್ಲ ಎಂಬುದಾಗಿ ಕರ್ನಾಟಕ ಮಾಡಿದ ಪ್ರಮಾಣವನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್ ಕಾಮಗಾರಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. `ಸದ್ಯಕ್ಕೆ ನೀರನ್ನು ಬಳಸುವ ಉದ್ದೇಶ ಕರ್ನಾಟಕಕ್ಕೆ ಇಲ್ಲದೇ ಇರುವ ಕಾರಣ ಕಾಮಗಾರಿಗೆ ತಡೆಯಾಜ್ಞೆ ನೀಡುವುದು ಸರಿಯಾಗದು. ಆದರೆ ಯೋಜನೆಯ ಅನುಷ್ಠಾನಕ್ಕೆ ಪೂರ್ವದಲ್ಲಿ ಕೇಂದ್ರ ಅರಣ್ಯ ಇಲಾಖೆಯ ಅನುಮತಿಯನ್ನು ಕರ್ನಾಟಕ ಪಡೆಯಬೇಕು' ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿಗಳಾದ ಆರ್.ವಿ. ರವೀಂದ್ರನ್ ಮತ್ತು ಜೆ.ಬಿ.ಪಾಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿತು.

2008: ಇಂಗ್ಲೆಂಡಿನಲ್ಲಿ ವಿಶೇಷವಾಗಿ ಆರೋಗ್ಯ ಇಲಾಖೆಯಲ್ಲಿ ಭಾರತೀಯ ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ಕಾನೂನು ಸಮರದಲ್ಲಿ 'ಹೌಸ್ ಆಫ್ ಲಾರ್ಡ್ಸ್' ಭಾರತೀಯರ ಪರ ಧ್ವನಿ ಎತ್ತಿತು. ಇಂಗ್ಲೆಂಡಿನಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳುವಾಗ ಮೊದಲ ಪ್ರಾಶಸ್ತ್ಯವನ್ನು ಯುರೋಪ್ ಮಂದಿಗೇ ನೀಡಬೇಕು. ಒಂದು ವೇಳೆ ಅಲ್ಲಿ ಅರ್ಹರು ಸಿಗದಿದ್ದರೆ ಮಾತ್ರ್ರ ಏಷ್ಯಾ ಮಂದಿ ಅಥವಾ ಭಾರತೀಯರಿಗೆ ಅವಕಾಶ ನೀಡಬೇಕೆಂದು ಇಂಗ್ಲೆಂಡಿನ ಆರೋಗ್ಯ ಇಲಾಖೆಯು 2006ರ ಏಪ್ರಿಲಿನಲ್ಲಿ ಸುತ್ತೋಲೆ ಕಳುಹಿಸಿತ್ತು. ಆಗ ಭಾರತೀಯ ಮೂಲದ ವೈದ್ಯರ ಬ್ರಿಟನ್ ಸಂಸ್ಥೆಯು ಈ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಲೇರಿತ್ತು. ಕೊನೆಗೆ ಇದು ಇಂಗ್ಲೆಂಡಿನ ಪ್ರತಿಷ್ಠಿತ ಶಾಸನ ಸಭೆಯಲ್ಲಿ ಚರ್ಚೆಗೆ ಬಂದು, ಆರೋಗ್ಯ ಇಲಾಖೆಯ ನಿರ್ಧಾರ ತಪ್ಪು ಎಂಬ ತೀರ್ಮಾನ ಹೊರಬಂದಿತು.

2008: ಶಂಕಿತ ಟಿಬೆಟ್ ಸ್ವಾತಂತ್ರ್ಯ ಹೋರಾಟಗಾರನೊಬ್ಬನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಚೀನಾದ ವಾಯುವ್ಯ ಪ್ರದೇಶದಲ್ಲಿ ನಡೆಯಿತು. ಟಿಬೆಟ್ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಹತ್ಯೆ ಮಾಡಿರುವುದನ್ನು ಇದೇ ಮೊದಲ ಬಾರಿ ಸರ್ಕಾರ ಅಧಿಕೃತವಾಗಿ ಪ್ರಕಟಿಸಿತು.

2008: ಮಲೇರಿಯಾ ರೋಗ ಪತ್ತೆಗೆ ಇನ್ನು ಗಂಟೆಗಟ್ಟಲೆ ಕಾಯಬೇಕಿಲ್ಲ. ಕೇವಲ ಒಂದು ನಿಮಿಷದೊಳಗೇ ಮಲೇರಿಯಾ ಪತ್ತೆ ಮಾಡಬಲ್ಲ ತಂತ್ರಜ್ಞಾನವೊಂದನ್ನು ಸಂಶೋಧಿಸಿರುವುದಾಗಿ ಅಮೆರಿಕದ ವಿಜ್ಞಾನಿಗಳು ಪ್ರಕಟಿಸಿದರು. ಈ ಹೊಸ ತಂತ್ರಜ್ಞಾನವನ್ನು ಬಳಸಿ ಮಾಡಲಾದ ಪರೀಕ್ಷೆಗಳು ಈ ಹಿಂದಿನ `ರೋಗ ಪತ್ತೆ' ಪರೀಕ್ಷೆಯಷ್ಟೇ ಸಮರ್ಥ ಫಲಿತಾಂಶ ನೀಡಿವೆ ಎಂದು `ಬಯೊಫಿಸಿಕಲ್ ಜರ್ನಲ್' ಪ್ರಕಟಿಸಿತು. ಎಕ್ಸ್ಟರ್ ವಿವಿ ಮತ್ತು ಕೊವೆನ್ಟ್ರಿ ವಿವಿಯ ಸಂಶೋಧಕರನ್ನೊಳಗೊಂಡ ಅಂತಾರಾಷ್ಟ್ರೀಯ ತಂಡ ಸಂಶೋಧಿಸಿದ ಈ ತಂತ್ರಜ್ಞಾನದಲ್ಲಿ ರಕ್ತದಲ್ಲಿ ಇರುವ ಮಲೇರಿಯಾದ ಪರಾವಲಂಬಿ ಜೀವಿ `ಹೆಮೊಜೊಯಿನ್' ಪತ್ತೆ ಮಾಡಲು ಮ್ಯಾಗ್ನೆಟೊ -ಆಪ್ಟಿಕ್ ತಂತ್ರಜ್ಞಾನವನ್ನು ಬಳಸಲಾಯಿತು. ಈ ವಿಧಾನದಲ್ಲಿ ಹೆಮೊಜಾಯಿನ್ಗಳು ಬೆಳಕಿನ ಕಿರಣಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಪಡೆದಿವೆ. ಈ ಅಂಶದಿಂದಾಗಿ ರಕ್ತದಲ್ಲಿರುವ ಮಲೇರಿಯಾದ ಪರಾವಲಂಬಿ ಜೀವಿ ಹೆಮಾಜಾಯಿನನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂದು ಸಂಶೋಧನೆ ತಿಳಿಸಿತು. ಇದಿಷ್ಟೇ ಅಲ್ಲದೆ ಮಲೇರಿಯಾವನ್ನು ಕೇವಲ ಒಂದು ನಿಮಿಷದೊಳಗೆ ಪತ್ತೆ ಮಾಡುವ ಸಾಧನವೊಂದನ್ನೂ ಕೂಡಾ ಈ ತಂಡ ಕಂಡುಹಿಡಿದಿದೆ. ಈ ಹೊಸ ಸಲಕರಣೆ ರಕ್ತದಲ್ಲಿರುವ ಮಲೇರಿಯಾದ ಪರೋಪಜೀವಿಯನ್ನು ಪತ್ತೆ ಮಾಡಲು ಉಪಯೋಗಿಸುವ ಆರ್ ಡಿ ಟಿ ಎನ್ನುವ ರಾಸಾಯನಿಕ ವಾಹಕಕ್ಕಿಂತ ವಿಭಿನ್ನವಾಗಿ ಕೆಲಸ ಮಾಡುವುದು.

2008: ಪತ್ನಿಯ ಕೊಲೆ ಆಪಾದನೆ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾದ ಸ್ವಾಮಿ ಶ್ರದ್ಧಾನಂದ ಆಲಿಯಾಸ್ ಮುರಳಿ ಮನೋಹರ ಮಿಶ್ರಾನ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತು. ನ್ಯಾಯಮೂರ್ತಿ ಬಿ.ಎನ್. ಅಗರ ವಾಲ್, ಜಿ.ಎಸ್. ಸಿಂಘ್ವಿ ಹಾಗೂ ಆಫ್ತಾಬ್ ಅವರನ್ನೊಳಗೊಂಡ ಪೀಠವು ಪ್ರಕರಣಕ್ಕೆ ಕುರಿತಂತೆ ಉಭಯತ್ರರ ವಾದ ವಿವಾದಗಳನ್ನು ಆಲಿಸಿತು. ಸ್ವಾಮಿ ಶ್ರದ್ಧಾನಂದನಿಗೆ 2006ರಲ್ಲಿ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 1991ರಲ್ಲಿ ಸ್ವಾಮಿ ಶ್ರದ್ಧಾನಂದ ತನ್ನ ಪತ್ನಿ ಶಕೀರಾಳನ್ನು ಕೊಲೆ ಮಾಡಿ ನೆಲದಲ್ಲಿ ಹೂತು ಹಾಕಿದ್ದ. ಈಕೆಯ ಪುತ್ರಿ ನೀಡಿದ ದೂರಿನ ಅನುಸಾರ ಮೂರು ವರ್ಷಗಳ ನಂತರ ದೇಹವನ್ನು ಪತ್ತೆಹಚ್ಚಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತು.

2008: `ಎಲ್ ಎಸ್ ಡಿ' ಔಷಧಿಯನ್ನು ಕಂಡು ಹಿಡಿದು `ಕುಖ್ಯಾತಿ'ಗೆ ಪಾತ್ರರಾಗಿದ್ದ ಆಲ್ಬರ್ಟ್ ಹಾಫ್ಮನ್ (102) ಸ್ವಿಟ್ಜರ್ಲೆಂಡಿನ ಬಾಸೆಲ್ನಲ್ಲಿ ಹಿಂದಿನ ದಿನ ಹೃದಯಾಘಾತದಿಂದ ನಿಧನರಾದರು. ಇವರು ಕಂಡು ಹಿಡಿದ ಅಮಲು ಬರಿಸುವ ಈ `ಎಲ್ ಎಸ್ ಡಿ' ಮಾದಕ ಮದ್ದನ್ನು ಅರವತ್ತರ ದಶಕದಲ್ಲಿ ಜಗತ್ತಿನಾದ್ಯಂತ ಯುವಜನರು ಬಳಸತೊಡಗಿದ್ದರು. ಹೀಗಾಗಿ ಬಹಳಷ್ಟು ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿತ್ತು.

2008: ಮೇವು ಹಗರಣಕ್ಕೆ ಸಂಬಂಧಿಸಿ 35 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯ, ಇವರಲ್ಲಿ 22 ಮಂದಿಗೆ ಮೂರರಿಂದ ಆರು ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಇದಲ್ಲದೆ, ಈ ಎಲ್ಲ 22 ಆರೋಪಿಗಳಿಗೂ ರೂ 3 ಲಕ್ಷದಿಂದ ರೂ 1.2 ಕೋಟಿ ತನಕ ದಂಡವನ್ನೂ ವಿಧಿಸಿ ಸಿಬಿಐ ನ್ಯಾಯಾಧೀಶ ಮನೋರಂಜನ್ ಕಾವಿ ಅವರು ತೀರ್ಪು ಪ್ರಕಟಿಸಿದರು. ನ್ಯಾಯಾಲಯವು ಹಿಂದಿನ ದಿನವಷ್ಟೇ ಇತರ 11 ಆರೋಪಿಗಳಿಗೆ ಮೂರರಿಂದ ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಿತು. ಇತರ ಇಬ್ಬರು ಆರೋಪಿಗಳಿಗೆ ಜೈಲು ಮತ್ತು ದಂಡ ಶಿಕ್ಷೆ ವಿಧಿಸಿ ಸಿಬಿಐ ನ್ಯಾಯಾಧೀಶರು ಏಪ್ರಿಲ್ 23ರಂದು ತೀರ್ಪು ನೀಡಿದ್ದರು.

2008: ಸಂಸತ್ತಿನಲ್ಲಿ ಲೋಕಸಭಾ ಸದಸ್ಯರ ನಡವಳಿಕೆಗೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ಕೆಲವು ನೀತಿ ಸಂಹಿತೆಗಳನ್ನು ಶಿಫಾರಸು ಮಾಡಿದ್ದು ಸದಸ್ಯರು ಇವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟಿತು. ಈ ಕುರಿತಾದ ತನ್ನ ಎರಡನೇ ವರದಿಯನ್ನು ವಿ. ಕಿಶೋರ್ ಚಂದ್ರ ದೇವ್ ನೇತೃತ್ವದ ಸಮಿತಿಯು ಈದಿನ ಲೋಕಸಭೆಗೆ ಸಲ್ಲಿಸಿತು. ನೀತಿ ಸಂಹಿತೆ ಉಲ್ಲಂಘಿಸಿದವರಿಗೆ ನಾಲ್ಕು ವಿಧವಾದ ಶಿಕ್ಷೆ ನೀಡಬೇಕು ಎಂದು ವರದಿ ಹೇಳಿತು. ನೀತಿ ಸಂಹಿತೆ ಪಾಲನೆ ಮಾಡದೆ ಹೋದ ಸದಸ್ಯರನ್ನು ಕಲಾಪದಿಂದ ಅಮಾನತುಗೊಳಿಸಿ ಅವರನ್ನು ಸದನದಿಂದ ಹೊರಗೆ ಎತ್ತಿಹಾಕುವುದು ಈ ಶಿಕ್ಷೆಯಲ್ಲಿನ ಅತ್ಯುಗ್ರ ಕ್ರಮವಾಗಿದ್ದು, ಎಚ್ಚರಿಕೆ ನೀಡುವುದು, ವಾಗ್ದಂಡನೆ ವಿಧಿಸುವುದು ಮತ್ತು ನಿರ್ದಿಷ್ಟ ಅವಧಿವರೆಗೆ ಅಮಾನತುಗೊಳಿಸುವಂತಹ ಮೂರು ಕ್ರಮಗಳು ಶಿಕ್ಷೆಯ ಮತ್ತಿತರ ಮೂರು ಸ್ವರೂಪದವುಗಳು.

2008: ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ಮಾಜಿ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರು ನಿರ್ದೇಶಕ ರವಿ ಟಂಡನ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪುರಸ್ಕಾರ ಪ್ರದಾನ ಮಾಡಿದರು.

2007: ದೇಶದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ನೌಕರರನ್ನು ರಾತ್ರಿ ವೇಳೆಯಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲು ರಾಜ್ಯ ಸರ್ಕಾರವು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ- 1961ಕ್ಕೆ ತಿದ್ದುಪಡಿ ಮಾಡಿತು. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 2007ನ್ನು ರಾಜ್ಯಪಾಲರ ಒಪ್ಪಿಗೆ ಪಡೆದ ಬಳಿಕ ಈದಿನ ರಾಜ್ಯಪತ್ರದಲ್ಲಿ (ಗೆಜೆಟ್) ಇದನ್ನು ಪ್ರಕಟಿಸಲಾಯಿತು. ಕಾನೂನು 15 ದಿನಗಳಲ್ಲಿ ಜಾರಿಗೆ ಬರುವುದು. ರಾತ್ರಿ ವೇಳೆ ಮಹಿಳೆಯನ್ನು ದುಡಿಸಿಕೊಳ್ಳುವುದು ಅಪರಾಧ ಎಂಬ ಕಾನೂನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಪ್ರಥಮ ರಾಜ್ಯವಾಗಲಿದ್ದು, ಕಾಯ್ದೆ ಜಾರಿಯ ಬಳಿಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯ ಅಡಿಯಲ್ಲಿ ಬರುವ ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಮಹಿಳಾ ನೌಕರರು ರಾತ್ರಿ 8 ಗಂಟೆಯ ಬಳಿಕ ದುಡಿಯವಂತಿಲ್ಲ. ಮುದ್ರಣ ಮಾಧ್ಯಮ, ಖಾಸಗಿ ಸಂಸ್ಥೆಗಳು, ಕಚೇರಿಗಳು, ಹೋಟೆಲುಗಳು ಮತ್ತು ಮನರಂಜನಾ ಸಂಸ್ಥೆಗಳಲ್ಲಿ ರಾತ್ರಿ 8 ಗಂಟೆ ಬಳಿಕ ಮಹಿಳೆಯರನ್ನು ದುಡಿಸಿಕೊಂಡರೆ ಅಪರಾಧವಾಗುತ್ತದೆ. ಕಾನೂನು ಉಲ್ಲಂಘನೆಗೆ 6 ತಿಂಗಳು ಶಿಕ್ಷೆ, 10ರಿಂದ 20ಸಾವಿರ ರೂ ದಂಡ ವಿಧಿಸಬಹುದಾಗಿದೆ. ಐಟಿ ಮತ್ತು ಬಿಟಿ ಕ್ಷೇತ್ರವು 2002ರಲ್ಲೇ ರಿಯಾಯ್ತಿ ಪಡೆದ ಕಾರಣ ಈ ಕ್ಷೇತ್ರವನ್ನು ಕಾಯ್ದೆಯಿಂದ ಹೊರಗಿಡಲಾಯಿತು.

2007: ಕರ್ನಾಟಕದ 10 ಜಿಲ್ಲೆಗಳ 68 ತಾಲ್ಲೂಕುಗಳ ಆಯ್ದ ಹೋಬಳಿಗಳಲ್ಲಿ ಹವಾಮಾನ ಅಧಾರಿತ ಕೃಷಿ ವಿಮೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಕರ್ನಾಟಕವಲ್ಲದೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳ್ಳುವುದು.

2007: ಜಗತ್ತಿನ ಅರ್ಧದಷ್ಟು ಭಾಗಕ್ಕೆ ಪೆಗಾಸಸ್ ಮೈನೈರ್ ಜಿಟಿ 450 ಮೈಕ್ರೋಲೈಟ್ ವಿಮಾನದ ಮೂಲಕ ಸುತ್ತು ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಬ್ರಿಟನ್ನಿನ ಅಂಧ ವಿಮಾನಯಾನಿ ಮೈಲ್ಸ್ ಹಿಲ್ಟನ್ ಬಾರ್ಬರ್ ತನ್ನ ಸಹ ಚಾಲಕ ರಿಚರ್ಡ್ ಮೆರೆಡಿತ್ ಹಾರ್ಡಿ ಜೊತೆಗೆ ಸಿಡ್ನಿಯ ಬ್ಯಾಂಕ್ಸ್ ಟೌನ್ ವಿಮಾನ ನಿಲ್ದಾಣಕ್ಕೆ ವಾಪಸಾದರು. ಮಾರ್ಚ್ 7ರಂದು ಲಂಡನ್ ಸಮೀಪದ ಬ್ರಿಗ್ಗಿನ್ ಹಿಲ್ ಏರ್ ಫೀಲ್ಡ್ ನಿಂದ 55 ದಿನಗಳ ತಮ್ಮ ಯಾನ ಆರಂಭಿಸಿದ್ದ ಅವರು ವಿಶ್ವದ 21 ರಾಷ್ಟ್ರಗಳ ಮೇಲೆ ಹಾರಾಡಿದರು.

2006: ಆಫ್ಘಾನಿಸ್ಥಾನದ ತಾಲೀಬಾನ್ ಉಗ್ರರು ತಾವು ಅಪಹರಿಸಿ ಒತ್ತೆ ಇಟ್ಟುಕೊಂಡಿದ್ದ ಭಾರತದ ಹೈದರಾಬಾದ್ ಮೂಲದ ದೂರಸಂಪರ್ಕ ಎಂಜಿನಿಯರ್ ಕೆ. ಸೂರ್ಯನಾರಾಯಣ (41) ಅವರನ್ನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬರ್ಬರವಾಗಿ ಕೊಂದುಹಾಕಿದರು. ಅಪಹರಣಗೊಂಡಿದ್ದ ಸ್ಥಳಕ್ಕೆ ಅತಿ ಸಮೀಪದಲ್ಲೇ ಈ ಕೃತ್ಯ ನಡೆಯಿತು. ಜಬುಲ್ ಪ್ರಾಂತ್ಯದ ಕ್ವಾಲತ್ ಹಾಗೂ ಘಜ್ನಿ ಮಧ್ಯೆ ಹಳ್ಳವೊಂದರಲ್ಲಿ ಸೂರ್ಯನಾರಾಯಣ ಅವರ ರುಂಡವಿಲ್ಲದ ದೇಹ ಬೆಳಿಗ್ಗೆ ಪತ್ತೆಯಾಗಿ ಅವರ ಹತ್ಯೆ ಘಟನೆ ಬೆಳಕಿಗೆ ಬಂತು. ಸೂರ್ಯನಾರಾಯಣ ಅವರು ಬಹರೇನ್ ಮೂಲದ ಅಲ್- ಮೊಯ್ಡ್ ಕಂಪನಿಗಾಗಿ ಕೆಲಸ ಮಾಡುತಿದ್ದು, ಈ ಕಂಪನಿ ಆಘ್ಘಾನಿಸ್ಥಾನದ ಟೆಲಿಕಾಂ ಕಂಪನಿಗಾಗಿ ಕೆಲಸ ಮಾಡುತ್ತಿತ್ತು. ಉಗ್ರರು ಮೇ 28ರಂದು ಸೂರ್ಯನಾರಾಯಣ ಅವರನ್ನು ಅಪಹರಿಸಿದ್ದರು..

1945: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತು ಆತನ ಪತ್ನಿ ಇವಾ ಬ್ರೌನ್ ಬರ್ಲಿನ್ನಿನ ಚಾನ್ಸಲರಿ ಕಟ್ಟಡದ ತಳಭಾಗದ ಬಂಕರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

1870: ಚಲನಚಿತ್ರ ನಿರ್ದೇಶಕ ಧುಂಡಿರಾಜ್ ಗೋವಿಂದ್ `ದಾದಾಸಾಹೇಬ್' ಫಾಲ್ಕೆ (1870-1944) ಜನ್ಮದಿನ. ಭಾರತೀಯ ಚಿತ್ರೋದ್ಯಮದ ಜನಕ ಎಂದೇ ಖ್ಯಾತರಾದ ಇವರು ಭಾರತದ ಮೊತ್ತ ಮೊದಲ ಮೂಕಿ ಚಿತ್ರ `ರಾಜಾ ಹರಿಶ್ಚಂದ್ರ'ವನ್ನು ನಿರ್ಮಿಸಿದರು.

1927: ಎಂ. ಫಾತಿಮಾ ಬೀವಿ ಜನ್ಮದಿನ. ಇವರು ಭಾರತದ ಸುಪ್ರೀಂಕೋರ್ಟ್ ನ್ಯಾಯಾಧೀಶಕ್ಕೆ ಸ್ಥಾನಕ್ಕೆ ಏರಿದ ಮೊತ್ತ ಮೊದಲ ಭಾರತೀಯ ಮಹಿಳೆ.

1944: ಖ್ಯಾತ ನೃತ್ಯಪಟು ಸೋನಾಲ್ ಮಾನ್ ಸಿಂಗ್ ಹುಟ್ಟಿದ ದಿನ. ಇವರು ಭರತನಾಟ್ಯ, ಕೂಚಿಪುಡಿ ಮತ್ತು ಒಡಿಸ್ಸಿ ನೃತ್ಯಗಳಲ್ಲಿ ಪ್ರಾವೀಣ್ಯ ಪಡೆದಿರುವ ವ್ಯಕ್ತಿ.

1789: ಜಾರ್ಜ್ ವಾಷಿಂಗ್ಟನ್ ಅವರು ಅಮೆರಿಕದ ಪ್ರಪ್ರಥಮ ಅಧ್ಯಕ್ಷರಾದರು.

1993: ಮಹಿಳಾ ಟೆನಿಸ್ ಪಟು ಮೋನಿಕಾ ಸೆಲೆಸ್ ಗೆ ಜರ್ಮನಿಯ ಹ್ಯಾಂಬರ್ಗಿನಲ್ಲಿ ಟೆನಿಸ್ ಪಂದ್ಯ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಹಿಂದಿನಿಂದ ಚೂರಿ ಹಾಕಿದ. ಮೋನಿಕಾ ವಿರುದ್ಧ ಸೆಣಸುತ್ತಿದ್ದ ಸ್ಟೆಫಿ ಗ್ರಾಫ್ ಅಭಿಮಾನಿ ತಾನೆಂದು ಹೇಳಿಕೊಂಡ ಆ ವ್ಯಕ್ತಿಯನ್ನು ನಂತರ ದಂಡನೆಗೆ ಗುರಿಪಡಿಸಲಾಯಿತು.

No comments:

Post a Comment