ನಾನು ಮೆಚ್ಚಿದ ವಾಟ್ಸಪ್

Saturday, May 5, 2018

ಇಂದಿನ ಇತಿಹಾಸ History Today ಮೇ 04

ಇಂದಿನ ಇತಿಹಾಸ History Today ಮೇ 04
2018: ಹೈದರಾಬಾದ್: ಆಶಕ್ತರಿಗೆ ಶಕ್ತಿ ನೀಡಲು ಆಸ್ಪತ್ರೆಗಳಲ್ಲಿ ’ಸಲೈನ್ ಡ್ರಿಪ್ (ಜನಸಾಮಾನ್ಯರ
ಭಾಷೆಯಲ್ಲಿ ಗ್ಲೂಕೋಸ್) ನೀಡುವುದು ಎಲ್ಲರಿಗೂ ಗೊತ್ತು. ಆದರೆ ಜೀವನ್ಮರಣ ಹೋರಾಟ ನಡೆಸುತ್ತಿರುವ ಪುರಾತನ ಮರಗಳಿಗೆ ಈ ರೀತಿಯ ಚಿಕಿತ್ಸೆ ನೀಡಿ ಪುನಶ್ಚೇತನ ನೀಡಬಹುದೇ?  ತೆಲಂಗಾಣ ರಾಜ್ಯದ ಮೆಹಬೂಬನಗರ ಜಿಲ್ಲೆಯಲ್ಲಿನ ಸುಮಾರು ೭೦೦ ವರ್ಷಗಳಷ್ಟು ಹಳೆಯದಾದ, ಜಗತ್ತಿನ ಎರಡನೇ ಅತಿದೊಡ್ಡ ಆಲದ ಮರವನ್ನು ಈ ರೀತಿ ’ಸಲೈನ್ ಡ್ರಿಪ್ ನೀಡಿ ಪುನಶ್ಚೇತನಗೊಳಿಸುವ ಯತ್ನ ನಡೆಯುತ್ತಿದೆ. ತೆಲುಗಿನಲ್ಲಿ ಪಿಲ್ಲಲಮರ್ರಿ ಎಂಬುದಾಗಿ ಕರೆಯಲಾಗುವ ಈ ಆಲದ ಮರ ಚಿಕಿತ್ಸೆ ಬಳಿಕ ಪುನಶ್ಚೇತನದ ಲಕ್ಷಣಗಳನ್ನು ತೋರುತ್ತಿದೆ.  ಜನಪ್ರಿಯ ಪ್ರವಾಸೀ ತಾಣವಾಗಿರುವ ಪಿಲ್ಲಲಮರ್ರಿಯ ಬಹುಭಾಗಗಳನ್ನು ಗೆದ್ದಲುಗಳು ತಿನ್ನುತ್ತಿದ್ದು, ಕೆಲ ಸಮಯದ ಹಿಂದೆ ಕೊಂಬೆಯೊಂದು ಮುರಿದು ಬಿದ್ದ ಬಳಿಕ ಈ ಮರದ ವೀಕ್ಷಣೆಯನ್ನು ನಿಷೇಧಿಸಲಾಗಿದೆ.

ಮರದ ತುಂಬ ತೆಳುಗೊಳಿಸಿದ ಕೀಟನಾಶಕಗಳ ಬಾಟಲಿಗಳಿರುವ ’ಡ್ರಿಪ್ ಚಿಕಿತ್ಸೆ ಪಡೆಯುತ್ತಿರುವ ಪಿಲ್ಲಲಮರ್ರಿಯ ಚಿತ್ರಗಳು ಕಳೆದ ತಿಂಗಳು ಟ್ವಿಟ್ಟರಿನಲ್ಲಿ ವೈರಲ್ ಆಗಿತ್ತು. ಆ ಬಳಿಕ ಮರದ ಪುನಶ್ಚೇತನಕ್ಕಾಗಿ ವ್ಯಾಪಕ ಪ್ರಾರ್ಥನೆಗಳ ಮಹಾಪೂರ ಹರಿದು ಬಂದಿದೆ. ಸುಮಾರು ಮೂರು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ವಿಶ್ವದ ಎರಡನೇ ಬೃಹತ್ ಆಲದ ಮರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಿಲ್ಲಲಮರ್ರಿಯನ್ನು ’ಪೀರ್ಲಮರ್ರಿ ಎಂದೂ ಕರೆಯುತ್ತಾರೆ.  ಮೂರು ತಿಂಗಳ ಹಿಂದೆ ಗೆದ್ದಲ ದಾಳಿಯಿಂದಾಗಿ ಮರದ ಟೊಂಗೆಯೊಂದು ಮುರಿದು ಬಿದ್ದ ಬಳಿಕ ಅರಣ್ಯಾಧಿಕಾರಿಗಳು ಮರಕ್ಕೆ ’ಕ್ಲೋರ್ ಪೈರಿಫೋಸ್ ರಾಸಾಯನಿಕವನ್ನು ಚುಚ್ಚುಮದ್ದಿನ ಮೂಲಕ ನೀಡಿ ಅದನ್ನು ಪುನಶ್ಚೇತನಗೊಳಿಸುವ ಬಗ್ಗೆ ಯೋಚಿಸಿದರು. ಅದಕ್ಕಾಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡುವಂತೆಯೇ ’ಸಲೈನ್ ಬಾಟಲಿಗಳನ್ನು ಅವರು ಬಳಸಿದರು. ನಿವೃತ್ತ ಐಎಫ್‌ಎಸ್ ಅಧಿಕಾರಿ ಮನೋರಂಜನ್ ಭಂಜಾ ಅವರ ಸಲಹೆ ಮೇರೆಗೆ ಮೂರು ರೀತಿಯಲ್ಲಿ ಮರಕ್ಕೆ ಚಿಕಿತ್ಸೆ ನೀಡಲಾಯಿತು. ಮೊದಲಿಗೆ ಬೇರುಗಳಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಭಾರಿ ಗಾತ್ರದ ಮರದಲ್ಲಿ ಪುನಶ್ಚೇತನದ ಲಕ್ಷಣ ಕಾಣಿಸಲಿಲ್ಲ. ಬಳಿಕ ನೇರವಾಗಿ ಕಾಂಡಕ್ಕೇ ಈ ಚಿಕಿತ್ಸೆ ನೀಡಲು ಆರಂಭಿಸಿದರು.  ಮರದ ಕಾಂಡಕ್ಕೆ ರಂಧ್ರ ಮಾಡಿ ಸೆಲೈನ್ ಬೆರೆಸಿದ ಕ್ಲೋರೋಪೈರಿಫೋಸ್ ರಾಸಾಯನಿಕವನ್ನು ಮರಕ್ಕೆ ನೀಡಲಾಯಿತು. ಆದರೆ ಅದು ಹಾಗೆಯೇ ಹೊರಗೆ ಬರುತ್ತಿತ್ತು. ಹಾಗಾಗಿ ಸೈಲೈನ್ ಡ್ರಿಪ್ ಹಾಕಿ ನೀಡಲಾಯಿತು. ಈ ತಂತ್ರ ಪರಿಣಾಮಕಾರಿಯಾಯಿತು.   ಗೆದ್ದಲು ತಿಂದು ದುರ್ಬಲಗೊಂಡ ರೆಂಬೆಗಳು ಮುರಿದು ಬೀಳದಂತೆ ಕಾಂಕ್ರೀಟ್ ಸ್ಥಂಭಗಳನ್ನು ನಿರ್ಮಿಸಲಾಯಿತು. ಹಲವು ವಾರಗಳ ಚಿಕಿತ್ಸೆ ಫಲ ನೀಡತೊಡಗಿತು. ಮರದಲ್ಲಿ ಅಲ್ಲಲ್ಲಿ ಎಲೆಗಳು ಚಿಗುರಲು ಆರಂಭವಾದವು. ಇದೀಗ ಹೊಸ ಚಿಗುರುಗಳೊಂದಿಗೆ ಮರ ಮತ್ತೆ ನಳ ನಳಿಸಲು ಸಜ್ಜಾಗುತ್ತದೆ. ಶೀಘ್ರದಲ್ಲೇ ಮರ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಈಗ ಹೇಳುತ್ತಿದ್ದಾರೆ.

2018: ಲಕ್ನೋ : ’ದಲಿತರ ಮನೆಗಳಲ್ಲಿ ಸೊಳ್ಳೆಗಳಿಂದ ಕಡಿಸಿಕೊಂಡರೂ ಉತ್ತರ ಪ್ರದೇಶದ ಸಚಿವರು ಹಗಲು ರಾತ್ರಿ ಎನ್ನದೇ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅವುಗಳು ಜನರಿಗೆ ತಲುಪಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಮೂಲ ಶಿಕ್ಷಣ ಸಚಿವೆ ಅನುಪಮಾ ಜೈಸ್ವಾಲ್ ಅವರು ವಿವಾದಕ್ಕೆ ಗುರಿಯಾದರು. ತಮ್ಮ ಸರ್ಕಾರದ  ಬೆನ್ನನ್ನು ತಾವೇ ತಟ್ಟಿಕೊಂಡ ಸಚಿವೆಯ ಈ ಮಾತುಗಳನ್ನು ವಿರೋಧ ಪಕ್ಷಗಳು ಗೇಲಿ ಮಾಡಿದವು. ಉತ್ತರ ಪ್ರದೇಶದ ಸಚಿವರು ಸರ್ಕಾರದ ಜನ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಹಗಲಿರುಳೂ ಶ್ರಮಿಸುತ್ತಿದ್ದಾರೆಂಬ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವೆ ಅನುಪಮಾ ಅವರು, ’ಮೊದಲ ಬಾರಿಗೆ ಸರ್ಕಾರವೊಂದು ಯುವಕರು, ಮಹಿಳೆಯರು ಮತ್ತು ಸಾಮಾನ್ಯ ಜನರಿಗಾಗಿ ರೂಪಿಸಲ್ಪಟ್ಟಿದೆ. ಸಮಾಜದ ಎಲ್ಲ ವರ್ಗಗಳ ಅಭ್ಯುದಯಕ್ಕಾಗಿಯೇ ಸರ್ಕಾರ ವಿವಿಧ ಬಗೆಯ ಯೋಜನೆಗಳನ್ನು ರೂಪಿಸಿದೆ. ಅಂತೆಯೇ ಯುವಕರು ಅಡ್ಡದಾರಿ ಹಿಡಿಯದೇ ಇರಲು ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವುದು ಬಹಳ ಮುಖ್ಯ. ಆ ಕೆಲಸವನ್ನು ರಾಜ್ಯದ ಸಚಿವರು ಅತ್ಯಾಸಕ್ತಿಯಿಂದ ನಿರ್ವಹಿಸುತ್ತಿದ್ದಾರೆ. ಯಾವುದೇ ಬಗೆಯ ನಿರ್ಲಕ್ಷ್ಯ ತೋರುತ್ತಿಲ್ಲ; ದಲಿತರ ಮನೆಗಳಲ್ಲಿ ಸೊಳ್ಳೆಗಳಿಂದ ಕಡಿಸಿಕೊಂಡರೂ ಸಚಿವರೆಲ್ಲರೂ ಅಹರ್ನಿಶಿ ಜನರ ಒಳಿತಿಗಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.  "ಯಾರೇ ಸಚಿವರು ತಮ್ಮ ಕಾರ್ಯಭಾರ ಜಾಸ್ತಿಯಾಯಿತೆಂದು ಗೊಣಗುತ್ತಿಲ್ಲ; ದೂರುತ್ತಿಲ್ಲ. ಎರಡು ಚೌಪಾಲ್‌ಗಳಲ್ಲಿ ದುಡಿಯುವ ಹೊಣೆ ಹೊತ್ತ ಸಚಿವರು ನಾಲ್ಕು ಚೌಪಾಲ್ ಗಳನ್ನು ತಮಗೆ ಕೊಟ್ಟರೂ ನಾವು ದುಡಿಯುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಆನೆ ಬಲ ಬಂದಂತಾಗಿದೆ ಎಂದು ಸಚಿವೆ ಅನುಪಮಾ ಹೇಳಿದರು.  ಸಚಿವೆ ಜೈಸ್ವಾಲ್ ಅವರನ್ನು ಅವರ ಈ ಹೇಳಿಕೆಗಾಗಿ ತರಾಟೆಗೆ ತೆಗೆದುಕೊಂಡ ಸಮಾಜವಾದಿ ಪಕ್ಷದ ನಾಯಕ ಸಿಪಿ ರೈ ಅವರು ’ನಾವು ಅವರ (ಬಿಜೆಪಿ) ನಾಟಕವನ್ನು ದೀರ್ಘ ಕಾಲದಿಂದ ನೋಡುತ್ತಿದ್ದೇವೆ. ದಲಿತರ ಮನೆಯಲ್ಲಿ ಅವರು ನೀಡುವ ಊಟ ಉಣ್ಣುವ ಬದಲು ಪೌಷ್ಟಿಕರ ಆಹಾರವನ್ನು ತರಿಸಿಕೊಂಡು ಊಟ ಮಾಡುತ್ತಾರೆ. ಅವರು ಗುಣಮಟ್ಟದ ಶಿಕ್ಷಣ ಮತ್ತು ಜೀವನವನ್ನು ನಡೆಸುತ್ತಾರೆ. ಆದರೆ ಬಿಜೆಪಿ ಕೇವಲ ನಾಟಕದಲ್ಲಿ ಆಸಕ್ತವಾಗಿದೆ ಎಂದು ಟೀಕಿಸಿದರು.  ಇದಕ್ಕೆ ಮುನ್ನ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಬಿಜೆಪಿಯನ್ನು ದಲಿತರನ್ನು ತಲುಪುವ ಯತ್ನಗಳನ್ನು ಟೀಕಿಸಿದ್ದರು. ದೆಹಲಿಯಲ್ಲಿ ಆರೆಸ್ಸೆಸ್ ಮತ್ತು ವಿಎಚ್ ಪಿ ನಾಯಕರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಭಾಗ್ವತ್ ಅವರು ’ನಾಟಕಗಳಿಂದ ದೂರವಿರಿ ಮತ್ತು ಜಾತಿ ವ್ಯವಸ್ಥೆಯಿಂದ ಹೊರಬರಲು ದುರ್ಬಲ ವರ್ಗಗಳ ಸದಸ್ಯರ ಜೊತೆಗೆ ನಿಯಮಿತ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡಿ ಎಂದು ಸಲಹೆ ಮಾಡಿದ್ದರು.  ಉತ್ತರ ಪ್ರದೇಶದ ಸಂಪುಟ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅವರು ’ಬಿಜೆಪಿ ನಾಯಕರು ದಲಿತರ ಮನೆಗಳಿಗೆ ಹೋಗುವ ಮೂಲಕ ಅವರನ್ನು ಆಶೀರ್ವದಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ಸಚಿವೆ ಅನುಪಮಾ ಹೇಳಿಕೆ ಬಂದಿದೆ. ಈ ಮಧ್ಯೆ ಕೇಂದ್ರ ಸಚಿವೆ ಉಮಾ ಭಾರತಿ ಅವರು ’ದಲಿತರನ್ನು ಶುದ್ಧೀಕರಿಸಲು ನನ್ನನ್ನು ನಾನು  ಶ್ರೀರಾಮ ಎಂದು ಪರಿಗಣಿಸುವುದಿಲ್ಲ ಎಂದಿದ್ದರು.  ಇನ್ನೊಬ್ಬ ಉತ್ತರ ಪ್ರದೇಶ ಸಚಿವ ಸುರೇಶ್ ರಾಣಾ ಅವರು ತಮ್ಮ ಮನೆಯಿಂದಲೇ ಊಟ ಮತ್ತು ನೀರು ತರಿಸಿಕೊಂಡು ಅಲಿಗಢದ ದಲಿತರ ಮನೆಯಲ್ಲಿ ಉಂಡಿದ್ದರು ಎಂದು ಹೇಳಲಾಗಿತ್ತು. ಏನಿದ್ದರೂ ಈ ಆರೋಪವನ್ನು ನಿರಾಕರಿಸಿದ ಅವರು ’ಆಹಾರವನ್ನು ಗ್ರಾಮಸ್ಥರು ತಮ್ಮ ಗ್ರಾಮದಲ್ಲೇ ತಯಾರಿಸಿದ್ದರು ಎಂದು ಪ್ರತಿಪಾದಿಸಿದ್ದರು.

2018: ನವದೆಹಲಿ: ಮೇ ೧೨ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಕಿರಿಯ ಸಹೋದರ ಸ್ಪರ್ಧಿಸಿರುವ ಬಳ್ಳಾರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಲು ಅವಕಾಶ ಕೋರಿ ಗಣಿಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು.  ಇದರಿಂದಾಗಿ ರೆಡ್ಡಿ ಅವರ ಚುನಾವಣಾ ಪ್ರಚಾರ ಮತ್ತು ತವರಿಗೆ ಕಾಲಿಡುವ ಆಸೆಗೆ ತಣ್ಣೀರು ಎರಚಿದಂತಾಯಿತು. ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠವು ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಬಂದಿರುವ ರೆಡ್ಡಿ ಅವರ ಮನವಿಯನ್ನು ತಿರಸ್ಕರಿಸಿತು. ನ್ಯಾಯಮೂರ್ತಿ ಅಶೋಕ ಭೂಷಣ್ ಅವರು ಪೀಠದ ಇನ್ನೊಬ್ಬ ಸದಸ್ಯರಾಗಿದ್ದರು.  ಮೇ ೮ ಮತ್ತು ೯ರಂದು ಎರಡು ದಿನಗಳಕಾಲ ತಮ್ಮ ಕಿರಿಯ ಸಹೋದರ ಸೋಮಶೇಖರ ರೆಡ್ಡಿ ಅವರ ಸ್ಪರ್ಧಿಸಿರುವ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ನಡೆಸಲು ಜನಾರ್ದನ ರೆಡ್ಡಿ ಬಯಸಿದ್ದರು. ಮತದಾನದ ದಿನ ಬಳ್ಳಾರಿಯಲ್ಲೇ ತಮ್ಮ ಮತ ಚಲಾಯಿಸಲೂ ಅವರು ಅನುಮತಿ ಕೋರಿದ್ದರು.  ೧೦ ದಿನಗಳ ಕಾಲ ಬಳ್ಳಾರಿಯಲ್ಲಿ ಉಳಿದುಕೊಳ್ಳಲು ಮತ್ತು ೨ ದಿನ ಚುನಾವಣಾ ಪ್ರಚಾರ ಕೈಗೊಳ್ಳಲು ಅವಕಾಶ ನೀಡಬೇಕು ಮತ್ತು ಬಳ್ಳಾರಿಯಲ್ಲಿಯೇ ಮತದಾನಕ್ಕೆ ಅನುಮತಿ ನೀಡಬೇಕು ಎಂದು ರೆಡ್ಡಿ ಮನವಿ ಮಾಡಿದ್ದರು. ಮನವಿ ತಿರಸ್ಕರಿಸಿದ ಕೋರ್ಟ್, ಮತದಾನ ಮಾಡಲು ಬದಲಿ ವ್ಯವಸ್ಥೆಗಳಿವೆ ಆ ಮೂಲಕ ಮತದಾನ ಮಾಡಿ, ನೀವು ಭೇಟಿ ನೀಡಿದರೆ ರಾಜಕೀಯದ ಮೇಲೆ ಪರಿಣಾಮವಾಗುತ್ತದೆ ಎಂದು ಹೇಳಿ ಅವಕಾಶ ನಿರಾಕರಿಸಿತು.  ಬಳ್ಳಾರಿ,ಆಂಧ್ರದ ಅನಂತಪುರಂ ಮತ್ತು ಕರ್ನೂಲಿಗೆ ಭೇಟಿ ನೀಡಬಾರದು ಎಂದು ಬಂಧನಕ್ಕೊಳಗಾಗಿದ್ದ ರೆಡ್ಡಿ ಅವರಿಗೆ ೨೦೧೫ ರಲ್ಲಿ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿತ್ತು, ಆದರೆ ಮಗಳು ಬ್ರಹ್ಮಿಣಿಯ ಮದುವೆಯ ವೇಳೆ ಬಳ್ಳಾರಿ ಪ್ರವೇಶಕ್ಕೆ ಅವಕಾಶ ನೀಡಿತ್ತು. 
2018: ನವದೆಹಲಿ: ಚೀನಾದ ವುಹಾನ್ ನಗರದಲ್ಲಿ ಇತ್ತೀಚೆಗೆ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರ ಜೊತೆಗೆ ಅನೌಪಚಾರಿಕ ಶೃಂಗಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ’ವುಹಾನ್ ಗೆ ಮೊದಲೇ ಭೇಟಿ ನೀಡಿದ್ದೆ ಎಂದು ಹೇಳಿ ಚೀನೀ ಅಧಿಕಾರಿಗಳನ್ನು ಚಕಿತಗೊಳಿಸಿದ್ದರು.
ಭಾರತದಲ್ಲಿನ ಚೀನಾ ರಾಯಭಾರಿ ಲುವೊ ಝವೊಹುಯಿ ಅವರು ಈ ವಿಚಾರವನ್ನು ಇಲ್ಲಿ ಬಹಿರಂಗ ಗೊಳಿಸಿದರು. ಹುಬೆಯಿ ಪ್ರಾಂತೀಯ ಮ್ಯೂಸಿಯಂನಲ್ಲಿ ಕ್ಷಿ ಅವರ ಜೊತೆಗೆ ತಮ್ಮ ಮೊದಲ ಮುಖಾಮುಖಿ ಕಾಲದಲ್ಲಿ ಮೋದಿ ಅವರು ತಮ್ಮ ಅತಿಥೇಯರಿಗೆ ಹುಬೆಯಿ ಪ್ರಾಂತಕ್ಕೆ ಇದು ತಮ್ಮ ಎರಡನೇ ಭೇಟಿ ಎಂದು ಹೇಳಿದ್ದರು. ಎಲ್ಲ ದ್ವಿಪಕ್ಷೀಯ ಮತ್ತು ಅಧಿಕೃತ ಭೇಟಿಗಳ ಸಂಪೂರ್ಣ ವಿವರಗಳನ್ನು ಇಟ್ಟುಕೊಂಡಿದ್ದ ಅಧಿಕಾರಿಗಳು ಪ್ರಧಾನಿ ಮೋದಿ ಮಾತಿನಿಂದ ಚಕಿತರಾಗಿದ್ದರು.  ‘ಪ್ರಧಾನಿ ಮೋದಿಯವರು ಈ ಮುನ್ನ ವುಹಾನ್ ಗೆ ಭೇಟಿ ನೀಡಿದ್ದರು ಎಂಬುದು ನಮಗೆ ಗೊತ್ತೇ ಇರಲಿಲ್ಲ ಎಂದು ಲುವೋ ಅವರು ಏಪ್ರಿಲ್ ೨೭ರಿಂದ ವುಹಾನ್ ನಗರದಲ್ಲಿ ನಡೆದ ಭಾರತ ಮತ್ತು ಚೀನೀ ನಾಯಕರು ನಡುವಣ ಎರಡು ದಿನಗಳ ಅನೌಪಚಾರಿಕ ಶೃಂಗದ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದವರಿಗೆ ತಿಳಿಸಿದ್ದರು.
ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಚೀನಾದ ಹುಬೆಯಿ ಪ್ರಾಂತಕ್ಕೆ ಬೃಹತ್ ತ್ರಿ ಜಾರ್ಜಸ್ ಅಣೆಕಟ್ಟಿನ ಬಗ್ಗೆ ತಿಳಿಯಲು ಅಧ್ಯಯನ ಪ್ರವಾಸದಲ್ಲಿ ಬಂದಿದ್ದುದಾಗಿ ಮೋದಿ ಅವರು ಚೀನೀ ಅಧ್ಯಕ್ಷ ಕ್ಷಿ ಅವರಿಗೆ ಹೇಳಿದ್ದರು. ಮೋದಿ ಅವರು ೨೦೦೧ರ ಅಕ್ಟೋಬರಿನಿಂದ ೨೦೧೪ರ ಮೇವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ‘ಅಣೆಕಟ್ಟನ್ನು ನೀವು ನಿರ್ಮಿಸಿದ ವೇಗ ಮತ್ತು ಅದರ ಬೃಹತ್ ಪ್ರಮಾಣ ನನಗೆ ಸ್ಫೂರ್ತಿ ನೀಡಿತ್ತು. ಹೀಗಾಗಿ ನಾನು ಅಧ್ಯಯನಕ್ಕಾಗಿ ಬಂದೆ ಮತ್ತು ಅಣೆಕಟ್ಟು ಪ್ರದೇಶದಲ್ಲಿ ಒಂದು ದಿನವನ್ನು ಕಳೆದೆ ಎಂದು ಕ್ಷಿ ಅವರಿಗೆ ಮೋದಿ ವಿವರಿಸಿದ್ದರು.  ಜಗತ್ತಿನ ಅತ್ಯಂತ ದೊಡ್ಡದಾದ ಜಲವಿದ್ಯುತ್ ಯೋಜನೆಯಾದ ತ್ರಿ ಜಾರ್ಜಸ್ ಯೋಜನೆಯು ವಿವಿಧೋದ್ದೇಶ ಜಲ ನಿಯಂತ್ರಣ ವ್ಯವಸ್ಥೆಯಾಗಿದ್ದು, ಈ ಅಣೆಕಟ್ಟನ್ನು ಬೃಹತ್ ಯಾಂಗ್ಟ್ ಝೆ ನದಿಯಲ್ಲಿ ನಿರ್ಮಿಸಲಾಗಿದೆ. ಯೋಜನೆಯು ೨,೩೦೯ ಮೀಟರ್ ಉದ್ದ ಮತ್ತು ೧೮೫ ಮೀಟರ್ ಎತ್ತರದ ಅಣೆಕಟ್ಟು, ೩೨ ಜಲವಿದ್ಯುತ್ ಟರ್ಬೊ ಜನರೇಟರುಗಳು, ಫೈವ್ -ಟಯರ ಶಿಪ್ ಲಾಕ್ ಲಿಫ್ಟ್ ವ್ಯವಸ್ಥೆಯನ್ನು ಹೊಂದಿದೆ.  ವುಹಾನ್ ನಗರದಲ್ಲಿ ಪ್ರಧಾನಿ ಮೋದಿ ಅವರಿಗೆ ಅತ್ಯಂತ ಅನುಕೂಲಕರವಾದ ಪರಿಸರವನ್ನು ಒದಗಿಸಲು ಚೀನಾವು ವಿಶೇಷ ಕಾಳಜಿ ವಹಿಸಿತ್ತು. ಅವರಿಗಾಗಿ ಗುಜರಾತಿನಿಂದ ಟೇಬಲ್ ಕ್ಲಾತ್ಗಳು ಮತ್ತು ಅಸ್ಸಾಂ ಚಹಾವನ್ನು ರಾಯಭಾರಿಯವರು ಸ್ವತಃ ಒಯ್ದಿದ್ದರು ಎಂದು ಲುವೋ ನುಡಿದರು.  ಬೀಜಿಂಗ್ ನಿಂದ ೧೦೦೦ ಕಿಮೀ ದೂರದಲ್ಲನ ಕೇಂದ್ರ ಚೀನೀ ನಗರದಲ್ಲಿ ಪ್ರಧಾನಿ ಮೋದಿ ಅವರಿಗೆ ತಾಯ್ನಾಡಿನ ಅನುಭವವನ್ನು ದೊರಕಿಸಲು ಚೀನೀ ನಾಯಕತ್ವ ಯತ್ನಿಸಿತ್ತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಅಧ್ಯಕ್ಷ ಕ್ಷಿ ಅವರು ಭಾರತದ ಪ್ರಧಾನಿಯನ್ನು ೧೩ ಬಾರಿ ಭೇಟಿ ಮಾಡಿದ್ದಾರೆ ಎಂದು ಲುವೋ ಹೇಳಿದರು.  ಪ್ರಧಾನಿ ಮೋದಿ ಅವರಿಗೆ ಗುಜರಾತಿನ ಟೇಬಲ್ ಕ್ಲಾತ್ ಗಳು ಬಹು ಇಷ್ಟ ಎಂಬುದು ನಮ್ಮ ಗಮನಕ್ಕೆ ಬಂತು. ಆದ್ದರಿಂದ ಅನೌಪಚಾರಿಕ ಶೃಂಗದ ವೇಳೆಯಲ್ಲಿ ಅವುಗಳನ್ನೇ ಬಳಸಲು ನಾವು ತೀರ್ಮಾನಿಸಿದೆವು. ಹಾಗೆಯೇ ಪ್ರಧಾನಿ ಮೋದಿ ಅವರಿಗೆ ಚೀನೀ ಚಹಾದ ಬದಲಿಗೆ ಅಸ್ಸಾಂ ಚಹಾವನ್ನೇ ನೀಡಿದೆವು ಎಂದು ಲುವೋ ನುಡಿದರು.

2018: ಕೋಲ್ಕತ: ಪಶ್ಚಿಮ ಬಂಗಾಳದ ಕೋಲ್ಕತ ಮತ್ತು ಇತರ ನಗರಗಳ  ರೆಸ್ಟೋರೆಂಟ್ ಗಳಿಗೆ ಸರಬರಾಜು ಮಾಡಲಾಗುವ ಪ್ರಾಣಿಗಳ ಮಾಂಸದಲ್ಲಿ ನರಸಂಬಂಧಿ ರೋಗಗಳಿಗೆ ಕಾರಣವಾಗುವ ಅಪಾಯಕಾರಿ ವಿಷ (ನಂಜು) ಇರುವುದು ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ವಿಧಿ ವಿಜ್ಞಾನ ಪರೀಕ್ಷೆಗಳಿಂದ ಬೆಳಕಿಗೆ ಬಂದಿತು. ಪ್ರಾಥಮಿಕ ಪರೀಕ್ಷೆಗಳಿಂದ ಈ ಮಾಂಸದ ಮಾದರಿಗಳಲ್ಲಿ ಅಮೋನಿಯಾ, ಕ್ಲೋರೀನ್ ಮತ್ತು ಕ್ಲೊಸ್ಟ್ರಿಡಿಯಮ್ ಬೊಟುಲಿನಮ್, ಲಿಸ್ಟೇರಿಯಾ ಮೊನೊಸೈಟೊಜೆನ್ಸ್ ಮತ್ತು ಇ.ಕೊಲಿ ಇತ್ಯಾದಿ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕ್ಲೊಸ್ಟ್ರಿಡಿಯಮ್ ಬೊಟುಲಿನಮ್ ಮನುಷ್ಟರಲ್ಲಿ ನ್ಯೂರೋಟಾಕ್ಸಿನ್ ಬೊಟುಲಿನಮ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು ಇದು ಮನುಷ್ಯರು ಮತ್ತು ಇತರ ಪ್ರಾಣಿಗಳಲ್ಲಿ ಮಾರಕ ಪಾರ್ಶ್ವವಾಯು ರೋಗಕ್ಕೆ ಕಾರಣವಾಗಬಹುದು.  ಲಿಸ್ಟೀರಿಯಾ ಮೊನಸೈಟೋಜೆನ್ಸ್ ಆಹಾರದಿಂದ ಹುಟ್ಟುವ ಅಪಾಯಕಾರಿ ನಂಜುಗಳಲ್ಲಿ ಒಂದಾಗಿದೆ. ಈ ನಂಜಿನ ಶೇಕಡಾ ೨೦ರಿಂದ ೩೦ರಷ್ಟ ಪ್ರಮಾಣ ದೇಹಕ್ಕೆ ಸೇರಿದರೆ ಅದು ಪ್ರಾಣಕ್ಕೇ ಅಪಾಯ ತಂದೊಡ್ಡಬಲ್ಲಷ್ಟು ಮಾರಕ ವಿಷವಾಗಿದೆ.  ಬಂಗಾಳದ ಹೂಗ್ಲಿ, ಹೌರಾ, ಕೋಲ್ಕತ, ಉತ್ತರ ೨೪ ಪರಗಣ ಮತ್ತು ದಕ್ಷಿಣ ೨೪ ಪರಗಣ ಜಿಲ್ಲೆಗಳಿಂದ ಈ ಮಾಂಸದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.  ಈ ಮಾಂಸವನ್ನು ಬಂಗಾಳ ಮಾತ್ರವಲ್ಲದೆ ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಿಗೂ ಸರಬರಾಜು ಮಾಡಲಾಗುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಅದನ್ನು ನೇಪಾಳ ಮತ್ತು ಬಾಂಗ್ಲಾದೇಶಗಳಿಗೂ ಮಾರಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.  ಜಾಲದಲ್ಲಿ ಶಾಮೀಲಾದ ಇಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ. ಮೊಹಮ್ಮದ್ ಅಖ್ಲಖ್ ಮತ್ತು ಸಿಕಂದರ ಶೇಖ್ ಅವರನ್ನು ದಕ್ಷಿಣ ೨೪ ಪರಗಣ ಜಿಲ್ಲೆಯ ಬಜ್ ಬಜ್ ಎಂಬಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. ಬಂಧಿತರಿಬ್ಬರೂ ಜಾಲದ ಸೂತ್ರಧಾರಿ ಬಿಸ್ವನಾಥ್ ಘೊರುಯಿಯ ನಿಕಟವರ್ತಿಗಳು ಎನ್ನಲಾಗಿದೆ. ಘೊರುಯಿ ಕೋಲ್ಕತದ ರಾಜಬಜಾರ್ ಪ್ರದೇಶದಲ್ಲಿ ಶೈತ್ಯಾಗಾರವನ್ನು ಹೊಂದಿದ್ದು ಅಲ್ಲಿಂದ ಸತ್ತ ಪ್ರಾಣಿಗಳ ಮಾಂಸವನ್ನು ವಶ ಪಡಿಸಿಕೊಳ್ಳಲಾಗಿದೆ.  ಈವರೆಗೆ ಜಾಲಕ್ಕೆ ಸಂಬಂಧಿಸಿದ ೧೩ ಜನರನ್ನು ಬಂಧಿಸಲಾಗಿದೆ. ಇದು ಭಾರಿ ಜಾಲವಾಗಿದ್ದು, ನಾವು ಪ್ರಕರಣದ ಎಲ್ಲ ಆಯಾಮಗಳನ್ನೂ ಪರಿಶೀಲಿಸುತ್ತಿದ್ದೇವೆ. ಶೀಘ್ರದಲ್ಲೇ ನಮಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ವರದಿ ಲಭಿಸಲಿದೆ ಎಂದು ದಕ್ಷಿಣ ೨೪ ಪರಗಣದ ಪೊಲೀಸ್ ವರಿಷ್ಠಾಧಿಕಾರಿ ಕೋಟೇಶ್ವರ ರಾವ್ ನುಡಿದರು.  ‘ಇದು ಅತ್ಯಂತ ಸೂಕ್ಷ್ಮ ಪ್ರಕರಣ ಮತ್ತು ನಾವು ಅನಗತ್ಯ ಭೀತಿ ಸೃಷ್ಟಿಸಲು ಇಚ್ಛಿಸುವುದಿಲ್ಲ. ಅಧಿಕಾರಿಗಳು ತನಿಖೆ ಪೂರ್ಣ ಗೊಳಿಸಲಿ ಮತ್ತು ಕೇಂದ್ರೀಯ ವಿಧಿ ವಿಜ್ಞಾನ ವರದಿ ಬರಲಿ. ನಾವು ಎಲ್ಲವನ್ನೂ ಅಧಿಕೃತವಾಗಿಯೇ ತಿಳಿಸುತ್ತೇವೆ ಎಂದು ಅವರು ನುಡಿದರು.


 2017: ವಾಷಿಂಗ್ಟನ್​: ಹವಾಮಾನ ವೈಪರಿತ್ಯ ಮಿತಿ ಮೀರಿದ್ದು ಇನ್ನು 100 ವರ್ಷಗಳ ನಂತರ ಮಾನವ ಕುಲಕ್ಕೆ ಮತ್ತೊಂದು ಭೂಮಿಯ ಅವಶ್ಯಕತೆ ಇದೆ ಎಂದು ವಿಶ್ವದ ಖ್ಯಾತ ವಿಜ್ಞಾನಿ ಸ್ಫೀಫನ್​ ಹಾಕಿಂಗ್ಸ್  ಎಚ್ಚರಿಕೆ ನೀಡಿದರು. ಮನುಷ್ಯ ಜೀವಿಸಲು ಮತ್ತೊಂದು ಭೂಮಿಯನ್ನು ಅನ್ವೇಷಿಸಬೇಕಾಗಿದೆ. ಮಿತಿಮೀರಿದ ಹವಾಮಾನ, ಅತಿಹೆಚ್ಚು ಜನಸಂಖ್ಯೆ, ಸಾಂಕ್ರಾಮಿಕ ರೋಗಗಳು ಹಾಗೂ ಕ್ಷುದ್ರ ಗ್ರಹಗಳ ದಾಳಿ ಭೂಮಿಯ ನಾಶಕ್ಕೆ ಕಾರಣವಾಗುವುದರಿಂದ ಭೂಮಿ ಮೇಲೆ ಇನ್ನು 100 ವರ್ಷವಷ್ಟೇ ಮನುಷ್ಯ ವಾಸಿಸಬಹುದು ಎಂದು ಸ್ಟೀಫನ್ ಹಾಕಿಂಗ್ಸ್ ಭವಿಷ್ಯ ನುಡಿದಿರುವುದಾಗಿ ಬಿಬಿಸಿ ವರದಿ ಮಾಡಿತು. ಅಭಿವೃದ್ಧಿ ಹೆಸರಲ್ಲಿ ಭೂಮಿಯ ಮೇಲೆ ಮಾನವನ ಆಕ್ರಮಣ ಹೆಚ್ಚಾಗಿದೆ. ಭೂಮಿಯ ನಾಶಕ್ಕೂ ಇದೇ ಕಾರಣವಾಗಲಿದೆ ಎಂದು ಹಾಕಿನ್ಸ್​ ಹೇಳಿದರು.
2017: ನವದೆಹಲಿ: 1ರಿಂದ 8ನೇ ತರಗತಿವರೆಗೆ ದೇಶಾದ್ಯಂತ ಹಿಂದಿ ಕಲಿಕೆ ಕಡ್ಡಾಯವಲ್ಲ ಎಂದು
ಸುಪ್ರೀಂಕೋರ್ಟ್​ ತಿಳಿಸಿತು. ಹಿಂದಿ ಕಡ್ಡಾಯಗೊಳಿಸಲು ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇ​ಶಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ದೆಹಲಿ ಬಿಜೆಪಿ ವಕ್ತಾರ ಅಶ್ವಿನಿ ಉಪಾಧ್ಯಾಯ  ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತು. ಉಪಾಧ್ಯಾಯ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್, ನಾಳೆ ಬೇರೊಬ್ಬರು ಬಂದು ಸಂಸ್ಕೃತವನ್ನು ಕಡ್ಡಾಯ ಮಾಡಿ ಎಂದು ಹೇಳುತ್ತಾರೆ. ಇನ್ನೊಬ್ಬರು ಪಂಜಾಬಿ ಭಾಷೆಯನ್ನು ಕಡ್ಡಾಯ ಮಾಡಿ ಎಂದು ಹೇಳುತ್ತಾರೆ. ಹೀಗಿರುವಾಗ ಹಿಂದಿ ಕಡ್ಡಾಯ ಮಾಡಬೇಕೆಂಬ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
2017: ನವದೆಹಲಿ: ಬರೋಬ್ಬರಿ ಎರಡು ದಶಕಗಳ ನಂತರ ಭಾರತ ಫುಟ್‌ಬಾಲ್‌ ತಂಡ
ಅಂತಾರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ(ಫಿಫಾ)ದ ರಾಂಕಿಂಗ್ ಪಟ್ಟಿಯಲ್ಲಿ ನೂರನೇ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಸದ್ಯ ಭಾರತ ತಂಡ ಫಿಫಾ ರಾಕಂಗಿನಲ್ಲಿ 100ನೇಸ್ಥಾನದಲ್ಲಿದ್ದು, 1996ರ ನಂತರ ಪಡೆದುಕೊಂಡಿರುವ ಅತ್ಯುತ್ತಮ ರಾಂಕಿಂಗ್ ಇದು.  1996ರಲ್ಲಿ 94ನೇ ಸ್ಥಾನ ಗಳಿಸಿದ್ದು ಭಾರತ ಫುಟ್‌ಬಾಲ್‌ ತಂಡದ ಇದುವರೆಗಿನ ಸಾಧನೆಯಾಗಿತ್ತು. ‘ಸದ್ಯ ನಾವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದೇವೆ. ಮುಂದೆ ಬಹಳ ಮುಖ್ಯವಾದ ಸರಣಿಗಳಲ್ಲಿ ಪಾಲ್ಗೊಳ್ಳಲಿದ್ದು, ಯಾವುದನ್ನೂ ಹಗುರವಾಗಿ ಪರಿಗಣಿಸುವುದಿಲ್ಲ’ ಎಂದು ತಂಡದ ತರಬೇತುದಾರ ಸ್ಟೀಫನ್‌ ಕಾನ್ಸ್ಟಂಟೈನ್‌ ಹೇಳಿದರು. ಅಖಿಲ ಭಾರತ ಫುಟ್‌ಬಾಲ್‌ ಒಕ್ಕೂಟದ ಕಾರ್ಯದರ್ಶಿ ಕುಶಾಲ್‌ ದಾಸ್‌ ಅವರು, ‘ನಾವೀಗ 100ನೇ ಸ್ಥಾದಲ್ಲಿದ್ದೇವೆ. ತಂಡಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ತಂಡದಿಂದ ಮತ್ತಷ್ಟು ಸಾಧನೆಯನ್ನು ನಿರಿಕ್ಷಿಸುತ್ತೇವೆ’ ಎಂದು ಹೇಳಿದರು. ಬ್ರೆಜಿಲ್‌, ಅರ್ಜೆಂಟೀನಾ, ಜರ್ಮನಿ, ಚಿಲಿ ಹಾಗೂ ಕೊಲಂಬಿಯಾ ತಂಡಗಳು ಕ್ರಮವಾಗಿ ಅಗ್ರ ಐದು ಸ್ಥಾನಗಳಲ್ಲಿ ಕಾಣಿಸಿಕೊಂಡವು.
2017: ಕೊಲ್ಕತ್ತ: ಸುಪ್ರೀಂಕೋರ್ಟ್‌ ತಮ್ಮ ವೈದ್ಯಕೀಯ ತಪಾಸಣೆ ನಡೆಸುವಂತೆ ಹೊರಡಿಸಿದ್ದ
ಆದೇಶವನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರು ‘ನನ್ನ ದೃಷ್ಟಿಯಲ್ಲಿ ಸುಪ್ರೀಂಕೋರ್ಟ್‌ ಹೊರಡಿಸಿರುವ ಈ ಆದೇಶವು ನ್ಯಾಯಮೂರ್ತಿ(ತಮಗೆ)ಗೆ ಮಾಡಿದ ಅವಮಾನ ಮತ್ತು ನಮ್ಮ ಮೇಲೆ ನಡೆಸುತ್ತಿರುವ ದೌರ್ಜನ್ಯ’ ಎಂದು ಹೇಳಿದರು. ವೈದ್ಯಕೀಯ ತಪಾಸಣೆಗೆ ಒಳಗಾಗಲು ನಿರಾಕರಿಸಿದ ಕೋಲ್ಕತ ಹೈಕೋರ್ಟ್‌ ನ್ಯಾಯಮೂರ್ತಿ, ‘ನಾನು ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದು, ಈಗಲೂ ಸ್ವಸ್ಥ ಮತ್ತು ಅಚಲವಾದ ಮನಸ್ಥಿತಿಯನ್ನು ಹೊಂದಿದ್ದೇನೆ’ ಎಂದು ವೈದ್ಯರ ಸಮಿತಿಗೆ ಪತ್ರದ ಮೂಲಕ ತಿಳಿಸಿದರು. ಜತೆಗೆ ‘ಯಾವುದೇಮಾದರಿಯ ವೈದ್ಯಕೀಯ ತಪಾಸಣೆಗಳನ್ನು ನಡೆಸಲು ಪೋಷಕರ ಉಪಸ್ಥಿತಿ ಅಗತ್ಯವಿದ್ದು, ಸದ್ಯ ನನ್ನ ಕುಟುಂಬದ ಯಾರೊಬ್ಬರೂ ಮನೆಯಲ್ಲಿಲ್ಲ. ನನ್ನ ಹೆಂಡತಿ ಮತ್ತು ಒಬ್ಬ ಮಗ ಚೆನ್ನೈನಲ್ಲಿದ್ದು, ಮತ್ತೊಬ್ಬ ಮಗ ಫ್ರಾನ್ಸ್‌ನಲ್ಲಿ ಕೆಲಸಮಾಡುತ್ತಿದ್ದಾನೆ. ಹಾಗಾಗಿ ತಾವು ತಪಾಸಣೆ ನಡೆಸಲು ಸಾಧ್ಯವಿಲ್ಲ’ ಎಂದು ಕರ್ಣನ್‌ ಅವರು ವೈದ್ಯರಿಗೆ ತಿಳಿಸಿದರು. ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಏಳು ಮಂದಿ ನ್ಯಾಯಾಧೀಶರನ್ನೊಳಗೊಂಡ ಪೀಠ ಮೇ 1ರಂದು ಕರ್ಣನ್‌ ಅವರಿಗೆ ವೈದ್ಯಕೀಯ ತಪಾಸಣೆ ನಡೆಸುವಂತೆ ಆದೇಶ ಹೊರಡಿಸಿತ್ತು. ಮೇ 4ರ ಒಳಗೆ ತಪಾಸಣೆ ನಡೆಯಬೇಕು ಎಂದು ಹೇಳಿದ್ದ ಪೀಠ, ಪಶ್ಚಿಮ ಬಂಗಾಳ ಪೊಲೀಸ್‌ ಮಹಾನಿರ್ದೇಶಕರಿಗೆ ವೈದ್ಯರ ಸಮಿತಿಗೆ ನೆರವು ನೀಡಬೇಕೆಂದು ಸೂಚಿಸಿತ್ತು. ಅದರಂತೆ ನಾಲ್ಕು ಜನರಿದ್ದ ವೈದ್ಯರ ತಂಡ ಪೊಲೀಸರ ಜತೆಗೆ ಕರ್ಣನ್‌ ಉಳಿದುಕೊಂಡಿರುವ ಕೋಲ್ಕತ್ತದ ನವನಗರದಲ್ಲಿರುವ ರೆಸಿಡೆನ್ಸಿಗೆ ಈದಿನ ಬೆಳಿಗ್ಗೆ ತಪಾಸಣೆ ನಡೆಸಲು ತೆರಳಿತ್ತು.
2017: ಮುಂಬೈ: ಜಗತ್ತಿನ ‘ಅತೀ ತೂಕದ ಮಹಿಳೆ’ ಎಂದೇ ಹೇಳಲಾಗಿದ್ದ 500 ಕೆ.ಜಿ ತೂಕವಿದ್ದ
ಈಜಿಪ್ಟ್ ಮೂಲದ 37 ಹರೆಯದ ಮಹಿಳೆ ಇಮಾನ್ ಅಹ್ಮದ್ ಸತತ ಮೂರು ತಿಂಗಳ ಚಿಕಿತ್ಸೆ ಬಳಿಕ 328 ಕೆ.ಜಿ ತೂಕ ಕಳೆದುಕೊಂಡು ಈದಿನ ಹೆಚ್ಚಿನ ಚಿಕಿತ್ಸೆಗಾಗಿ ಸರಕು ಸಾಗಣೆ (ಕಾರ್ಗೊ) ವಿಮಾನದಲ್ಲಿ ಅಬುಧಾಬಿಗೆ ತೆರಳಿದರು. ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಇಮಾನ್ ಅವರ ಆರೋಗ್ಯ ಸ್ಥಿತಿ ಪರಿಶೀಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಅಬುಧಾಬಿಯ ವಿಪಿಎಸ್‌ ಆಸ್ಪತ್ರೆಗೆ ಕರೆದೊಯ್ಯುವುದಾಗಿ ವೈದ್ಯರು ತಿಳಿಸಿದರು. ಭಾರತದಿಂದ ಅಬುಧಾಬಿಗೆ ಪ್ರಯಾಣಿಸಲು 6 ಗಂಟೆ ಸಮಯ ತಗುಲಲಿದ್ದು, ಇಮಾನ್ ಜತೆಗೆ ಆಸ್ಪತ್ರೆಯ 9 ಜನ ವೈದ್ಯರು ಕೂಡ ತೆರಳಿದರು. ಭಾರತದಲ್ಲಿ ಚಿಕಿತ್ಸೆ ಕೈಗೊಳ್ಳುವುದಕ್ಕೂ ಮುನ್ನ ಇಮಾನ್ ಅವರ ದೇಹದಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದು, ಆಕೆಯ ದೇಹ ಊದಿಕೊಂಡಿತ್ತು. ದೇಹದ ಗ್ರಂಥಿಗಳಲ್ಲಿನ ತೊಂದರೆಯಿಂದಾಗಿ ಆಕೆಯ ದೇಹದ ತೂಕ ವಿಪರೀತವಾಗಿ ಏರಿಕೆಯಾಗಿತ್ತು ಎಂದು ವೈದ್ಯರು ತಿಳಿಸಿದ್ದರು.
 2017: ಅಲಪ್ಪುಳ: ಮಾಲಿನ್ಯ ಹಾಗೂ ಮರಳು ಗಣಿಗಾರಿಕೆ ಎಂಬ ಮಾನವನ ದುರಾಸೆಯಿಂದ
ದಶಕದ ಕಾಲ ‘ನಿರ್ಜೀವ‘ ಸ್ಥಿತಿ ತಲುಪಿದ್ದ ನದಿಯೊಂದು ಮತ್ತೆ ಪರಿಶುದ್ಧವಾಗಿ ಮೈದುಂಬಿ ಹರಿಯುತ್ತಿದೆ. ಪುನರ್‌ ‘ಜೀವ’ ಪಡೆದ ನದಿ ಜನರ ‘ಜೀವ ನದಿ’ಯಾಗಿದೆ.  ಇದು ಕೇರಳದ ಗ್ರಾಮ ಪಂಚಾಯ್ತಿಯೊಂದರ ಸಾಧನೆ. ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಕೈ ಜೋಡಿಸಿದ್ದರಿಂದ ಕುಟ್ಟೆಂಪೆರೂರ್‌ ನದಿ ಪುನರುಜ್ಜೀವನಗೊಂಡು, ಮತ್ತೆ ಪೂರ್ಣ ಮೈದುಂಬಿ ಹರಿಯುತ್ತಿದೆ. ಈ ಸಾಧನೆ ನಡೆದಿರುವುದು ಅಲಪ್ಪುಳ ಜಿಲ್ಲೆಯ ಬುಧನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ. ಪಂಚಾಯ್ತಿ ಜತೆ ಸೇರಿ ನದಿಗೆ ಮರು ಜೀವ ನೀಡಿರುವ ಜನರ ಕಾರ್ಯದ ಕುರಿತು ವಿಕಿಮೀಡಿಯಾ ವಿಶೇಷ ವರದಿ ಮಾಡಿತು. ವಿಪರೀತ ಮಾಲಿನ್ಯ ಮತ್ತು ಅಕ್ರಮ ಮರಳು ಗಣಿಗಾರಿಕೆಗೆ ಒಳಗಾದ ನಂತರ ಕುಟ್ಟೆಪೇರುರ್ ನದಿ ಊಹಿಸಲಾಗದ, ಬಹುತೇಕ ಅಸ್ಪಷ್ಟತೆಗೆ ಸರಿದಿತ್ತು. ಪಂಬಾ ಮತ್ತು ಅಚಾಂಕೋವಿಲ್ ನದಿಗಳಿಗೆ ಉಪ ನದಿಯಾಗಿರುವ ಈ ನದಿ 12 ಕಿ.ಮೀ. ಉದ್ದ ಮತ್ತು 100 ಮೀಟರ್‌ಗಳಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. ಬುಧನೂರಿನ ನಿವಾಸಿಗಳಿಗೆ ಕುಡಿಯುವ ನೀರಿನ ಮೂಲವಾಗಿತ್ತು. ನೂರಾರು ಎಕರೆ ಪ್ರದೇಶದಲ್ಲಿನ ಭತ್ತದ ಬೆಳೆಗೆ ನೀರಾವರಿಯನ್ನೂ ಒದಗಿಸುತ್ತು. ಇದರ ಹೊರತಾಗಿ, ನದಿ ಸ್ಥಳೀಯ ವ್ಯಾಪಾರಿಗಳಿಗೆ ಸರಕು ಸಾಗಣೆಗೆ ಒಳನಾಡು ಜಲ ಸಾರಿಗೆ ಮಾರ್ಗವೂ ಆಗಿತ್ತು. ‘ನದಿ ಪುನರುಜ್ಜೀವನಕ್ಕಾಗಿ ಯೋಜನೆ ಅನೇಕ ವರ್ಷಗಳಿಂದ ಇದ್ದು, ಕಾರ್ಯರೂಪಕ್ಕೆ ಬಂದಿರಲಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ನದಿ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಯಿತು ಎಂದು ಮಾಹಿತಿ ನೀಡುತ್ತಾರೆ ಬುಧನೂರು ಗ್ರಾಮ ಪಂಚಾಯ್ತಿ ಮುಖ್ಯ ಸಹಾಯಕಿ ರಶ್ಮೀ ಪ್ರಿಯಾ. ಪಂಚಾಯ್ತಿ ಅಧ್ಯಕ್ಷ ವಿಶ್ವಭಾರ ಪಣಿಕರ್ ಅವರು ಹೇಳುವಂತೆ, ನದಿಯ ಪುನರುಜ್ಜೀವನಕ್ಕೂ ಮೊದಲು ಅದರ ಸ್ಥಿತಿ ಕರುಣಾಜನಕವಾಗಿತ್ತು. ನದಿ ಮಾಲಿನ್ಯ ಮತ್ತು ಕಳೆಗಳಿಂದ ಮುಕ್ತವಾಗಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಜತೆಗೆ, ನದಿಯಲ್ಲಿನ ಕಳೆಯಿಂದಾಗಿ ಈ ಹಿಂದೆ ಸಂಭವಿಸಿದ ದುರ್ಘಟನೆಯಲ್ಲಿ ಪ್ರಯಾಣಿಕರನ್ನು ರಕ್ಷಿಸಲು ಅಗ್ನಿ ಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಯನ್ನು ಕರೆಸಿಕೊಳ್ಳಬೇಕಾಗಿ ಬಂದಿತ್ತು ಎಂದು ಹಳೆಯ ಘಟನೆಯನ್ನು ಮೆಲುಕುಹಾಕಿದರು. ನದಿಯನ್ನು ಪಂಚಾಯ್ತಿ ಕಾರ್ಯಕ್ರಮದ ಪಟ್ಟಿಯಲ್ಲಿ ಎಂ ನರೇಗ ಯೋಜನೆ ಅಡಿ ಸ್ವಚ್ಛಗೊಳಿಸಲಾಗಿದ್ದು, 14 ವಾರ್ಡ್‌ಗಳ 700 ಪುರುಷ ಹಾಗೂ ಮಹಿಳಾ ಕೆಲಸಗಾರರು 70 ದಿನಗಳ ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇವರು ಕೇವಲ ಶ್ರಮ ವಿನಿಯೋಗ ಮಾಡಲಿಲ್ಲ. ಬದಲಿಗೆ, ತಮ್ಮ ನದಿಯನ್ನು ರಕ್ಷಿಸಿಕೊಳ್ಳಲು ಹೃದಯಪೂರ್ವಕವಾಗಿ ಆತ್ಮ ಸಂತೋಷದಿಂದ ಕೆಲಸ ಮಾಡಿದರು. ನದಿಯಲ್ಲಿ ಕಳೆ ಸಸ್ಯಗಳನ್ನು ತೆಗೆಯುವ ಮೂಲಕ ಸ್ವಚ್ಛತಾ ಅಭಿಯಾನ ಆರಂಭಿಸಲಾಯಿತು. ಬಳಿಕ, ದಡದಲ್ಲಿನ ಕಳೆಗಳನ್ನೂ ತೆಗೆಯಲಾಯಿತು. ನಂತರದಲ್ಲಿ ನದಿಯಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹೆಕ್ಕಿ ಹೊರ ಹಾಕಲಾಯಿತು.  ಅಂತಿಮವಾಗಿ, ನದಿಯ ಕೆಳಭಾಗವನ್ನು ತಲುಪಿ, ಅಲ್ಲಿ ವರ್ಷಗಳಿಂದ ದಪ್ಪವಾಗಿದ್ದ ಸಂಗ್ರಹಿಸಲ್ಪಟ್ಟಿದ್ದ ಘನ ತ್ಯಾಜ್ಯವನ್ನು ತೆಗೆಯವ ಕಾರ್ಯಕ್ಕೆ ಕೈ ಹಾಕಲಾಯಿತು. ‘ಹಲವು ವರ್ವಗಳಿಂದ ಸಂಗ್ರಹವಾಗಿದ್ದ ಘನ ತ್ಯಾಜ್ಯವನ್ನು ಹೊರ ತೆಗೆಯುವುದು ಸುಲಭದ ಕೆಲಸವಲ್ಲ ಮತ್ತು ಅಪಾಯಕಾರಿಯೂ ಆಗಿತ್ತು. ಕೊಳಚೆ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮಣ್ಣಿನ ಸಂಚಯಗಳನ್ನು ಒಳಗೊಂಡಿರುವ ವರ್ಷಗಳ ತ್ಯಾಜ್ಯವನ್ನು ತೆರವುಗೊಳಿಸುವು ಇದು ಮಹತ್ತರವಾದ ಕಾರ್ಯವಾಗಿತ್ತು. ಈ ಎಲ್ಲಾ ಕಾರ್ಯಗಳ ನಂತರ ನದಿಯು ನೀರಿನ ನಿಲುಗಡೆಗೆ ದಾರಿ ಮಾಡಿಕೊಂಡಿತ್ತು. ನಿಧಾನವಾಗಿ ಹೊಸ ನೀರು ಬರಲಾರಂಭಿಸಿತು. ಈ ಪ್ರಕ್ರಿಯೆ ಮುಂದುವರಿದು ಒಂದು ತಿಂಗಳೊಳಗೆ ಅರ್ಧದಷ್ಟು ನೀರು ಬಂತು. ‘ನದಿಯ ಪುನರುಜ್ಜೀವನದ ನಂತರ ಜನ ದೋಣಿಗಳಲ್ಲಿ ಕುಳಿದು ವಿಹರಿಸಿದರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ‘ನಿರ್ಜೀವ’ವಾದದ್ದು ಎಂಬ ಹೆಸರಿನಿಂದ ಕರೆಯಲ್ಪಡುವ, ಸಾಕಷ್ಟು ನೀರು ಕೂಡ ಇಲ್ಲದಿರುವ ಒಂದು ನದಿ ಮರು ಜೀವ ಪಡೆದು ಅಸಾಧ್ಯವಾದ ಕನಸು ವಾಸ್ತವದಲ್ಲಿ ನನಸಾಗಿ ರೂಪಾಂತರಗೊಂಡಿತು ಎಂದು ರಶ್ಮಿ ಹೇಳಿದರು. ಪ್ರಸಕ್ತ ವರ್ಷ ಮಾರ್ಚ್ 20ರಂದು ಕಾರ್ಯ ಅಂತ್ಯಗೊಂಡಿತು. ಅಂತಿಮವಾಗಿ ನೀರಿನ ಸರಿಯಾದ ಹರಿವು ಸ್ಪಷ್ಟವಾಯಿತು. ಯೋಜನೆಯು ಪೂರ್ಣಗೊಂಡ ನಂತರ ಈ ಪ್ರದೇಶದಲ್ಲಿನ ನೀರಿನ ಮಟ್ಟ ಏರಿಕೆ ಕಂಡಿದೆ. ಬಾವಿಗಳಲ್ಲಿ ಹಿಂದಿಗಿಂತ ನೀರು ಹೆಚ್ಚಿತು.  ಹಿಂದಿನಿಂದಲೂ ಕುಡಿಯುವ ನೀರಿಗೆ ನದಿಯೇ ಮೂಲವಾಗಿತ್ತು. ಬುದ್ಧನೂರಿನ ಜನರು ಈಗಲೂ ಅದನ್ನು ಉಪಯೋಗಿಸುವುದರ ಬಗ್ಗೆ ಮತ್ತಷ್ಟು ಜಾಗರೂಕರಾಗಿದ್ದಾರೆ. ಹೇಗಾದರೂ ಸರಿ, ನದಿಯ ಪುನರುಜ್ಜೀವನ ಕಾರ್ಯ ಯಶಸ್ವಿಯಾಗಿದೆ. ಜನ ನದಿ ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂಬ ಖಾತ್ರಿಯಿದೆ! ಎಂದು ವಿಶ್ವಾಸ ವ್ಯಕ್ತಪಡಿಸಿದರು.
2017: ಕಾನ್ಪುರ: ಕಾಶ್ಮೀರದಲ್ಲಿ ಕರ್ತವ್ಯ ನಿರತರಾಗಿರುವ ಯೋಧರಿಗೆ ಮತ್ತು ಅರೆ ಸೇನಾಪಡೆಗಳಿಗೆ
ಸ್ಥೈರ್ಯ ತುಂಬಲು ಮತ್ತು ಕಲ್ಲು ತೂರಾಟ ಮಾಡುವ ಕಿಡಿಗೇಡಿಗಳಿಂದ ಯೋಧರಿಗೆ ರಕ್ಷಣೆ ನೀಡಲು ಕಾನ್ಪುರದ ಧಾರ್ಮಿಕ ಸಂಘಟನೆ 'ಜನ್ ಸೇನಾ'ದ 1000 ಸನ್ಯಾಸಿಗಳು ಕಾಶ್ಮೀರಕ್ಕೆ ತೆರಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿತು. ಆ ಸನ್ಯಾಸಿಗಳ ದಂಡು ಮೇ 7 ರಂದು ಜಮ್ಮು ಕಾಶ್ಮೀರ ತಲುಪಲಿದೆ. ಅಗತ್ಯ ಬಂದರೆ ಇನ್ನಷ್ಟು ಸನ್ಯಾಸಿಗಳನ್ನು ಕಾಶ್ಮೀರಕ್ಕೆ ಕಳುಹಿಸಲಾಗುವುದು ಎಂದು ಜನ್ ಸೇನಾ ಸಂಸ್ಥಾಪಕ ಬಾಲಯೋಗಿ ಅರುಣ್ ಪುರಿ ಚೈತನ್ಯ ಮಹಾರಾಜ್ ಹೇಳಿದರು. ಪುರಿ ಅವರು ಜಂಜ್‌ಮಾವುನಲ್ಲಿರುವ ಸಿದ್ಧಾಂತ್ ದೇವಾಲಯದ ಪ್ರಧಾನ ಅರ್ಚಕರು. ಕಾಶ್ಮೀರದಲ್ಲಿರುವ ಸೇನಾ ಪಡೆಗಳಿಗೆ ಸಹಾಯ ಮಾಡಲು ನಾವು ಹೊರಟಿದ್ದೇವೆ. ನಮ್ಮ ಈ ಕಾರ್ಯಕ್ಕೆ ಯುದ್ಧ ವಿಜಯ್ ಯಜ್ಞ ಎಂದು ಹೆಸರಿಡಲಾಗಿದೆ. ಕಾಶ್ಮೀರದಲ್ಲಿರುವ ಸೈನಿಕರಿಗೆ ಧೈರ್ಯ ತುಂಬಲು ಮತ್ತು ಕಲ್ಲುತೂರಾಟ ಮಾಡುವ ಕಿಡಿಗೇಡಿಗಳ ವಿರುದ್ದ ಹೋರಾಡಲು ನಮಗೆ ಅವಕಾಶ ಕೊಡಿ ಎಂದು ನಾವು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಅನುಮತಿ ಕೇಳಿದ್ದೆವು. ಆದರೆ ನಮಗೆ ಅನುಮತಿ ಸಿಕ್ಕಿಲ್ಲ. ಜಿಲ್ಲಾ ಆಡಳಿತಾಧಿಕಾರಿಯವರಲ್ಲಿಯೂ ನಾವು ಅನುಮತಿ ಕೇಳಿದ್ದು, ಅವರೂ ನಿರಾಕರಿಸಿದ್ದರು. ಆದರೆ ನಾವು ಇಟ್ಟ ಹೆಜ್ಜೆಯನ್ನು ಹಿಂದಿಡದೆ ಮುಂದೆ ಸಾಗಲು ತೀರ್ಮಾನಿಸಿದ್ದೇವೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿಯೇ ಹೊರಟಿದ್ದೇವೆ. ಒಂದು ವೇಳೆ ನಮ್ಮ ಸದಸ್ಯರ ಗುಂಪನ್ನು ತಡೆದರೆ, ಎಲ್ಲರೂ ಬೇರೆ ಬೇರೆ ವಾಹನದಲ್ಲಿ ಹೋಗಿ ಜಮ್ಮು ಕಾಶ್ಮೀರದಲ್ಲಿ ಒಂದಾಗುತ್ತೇವೆ ಎಂದು ಅವರು ಹೇಳಿದರು. ಹಿಂದಿನ ದಿನ ಮೇ 3ರಂದು ತಮ್ಮ ಆಶ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪುರಿ, ಎಲ್ಲ ಸನ್ಯಾಸಿಗಳು ಭಾನುವಾರ ಬೆಳಗ್ಗೆ ನಾನಾರಾವ್  ಪಾರ್ಕ್ ನಲ್ಲಿರುವ ಶಹೀದ್ ಸ್ಮಾರಕ ಬಳಿ ಸೇರಲಿದ್ದಾರೆ. ಅಲ್ಲಿಂದ 100 ಕಾರು ಮತ್ತು 3 ಬಸ್‍ಗಳ ಮೂಲಕ ಕಾಶ್ಮೀರ ಕಣಿವೆಯತ್ತ ಪ್ರಯಾಣ ಬೆಳೆಸಲಿದ್ದಾರೆ. ಇನ್ನುಳಿದ ಸನ್ಯಾಸಿಗಳು ರೈಲು ಮೂಲಕ ಮೇ.14ರಂದು ಕಾಶ್ಮೀರ ತಲುಪಲಿದ್ದಾರೆ ಎಂದು ವಿವರಿಸಿದರು.
2009: ಸೇನಾ ಮುಖ್ಯಸ್ಥನನ್ನು ವಜಾ ಮಾಡುವ ಮಾವೋವಾದಿ ಸರ್ಕಾರದ ನಿರ್ಧಾರವನ್ನು ಅಧ್ಯಕ್ಷರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ನೇಪಾಳದ ಪ್ರಧಾನಿ ಪ್ರಚಂಡ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಿತು. ಅಧ್ಯಕ್ಷ ರಾಮ್ ಬರನ್ ಯಾದವ್ ಅವರು ಸೇನಾ ದಂಡ ನಾಯಕ ರುಕ್ಮಾಂಗದ ಕಟ್ವಾಲ್ ಅವರಿಗೆ ಹುದ್ದೆಯಲ್ಲಿ ಮುಂದುವರೆಯುವಂತೆ ನಿರ್ದೇಶಿಸಿದ ಬೆನ್ನಲ್ಲೇ ಪ್ರಚಂಡ ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು.

2009: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ರಾಕೇಶ್ ಮೋಹನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವ ವಿದ್ಯಾಲಯದಲ್ಲಿರುವ ಅಂತಾರಾಷ್ಟ್ರೀಯ ಅಭಿವೃದ್ಧಿ ಕೇಂದ್ರದಲ್ಲಿ ಸಲಹಾ ಪ್ರೊಫೆಸರ್ ಆಗಿ ಅವರು ನಿಯೋಜಿತರಾದ ಹಿನ್ನೆಲೆಯಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದರು ಎಂದು ಆರ್‌ಬಿ ಐ ತಿಳಿಸಿತು.

2009: ಭಾರತ ರಾಷ್ಟ್ರೀಯ ವಿಮಾನಯಾನ ಕಂಪೆನಿ ಲಿಮಿಟೆಡ್ (ಎನ್‌ಎಸಿಐಎಲ್- ಏರ್‌ಇಂಡಿಯಾ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಅರವಿಂದ್ ಜಾಧವ್ ಅಧಿಕಾರ ವಹಿಸಿಕೊಂಡರು. ಜಾಧವ್ ಅವರು ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. 1978ರಲ್ಲಿ ಭಾರತೀಯ ಆಡಳಿತ ಸೇವೆಗೆ (ಐಎಎಸ್) ಸೇರಿದ ಜಾಧವ್ ಅವರು ಕರ್ನಾಟಕ ಕೇಡರ್‌ಗೆ ಸೇರಿದವರು.

2008: ಪಾನಮತ್ತನಾಗಿದ್ದ ಕಾರು ಚಾಲಕನೊಬ್ಬ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃತನಾಗಿ ಇತರ ಎಂಟು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಶಾಂಪುರ ಮುಖ್ಯ ರಸ್ತೆಯ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಬಳಿ ನಡೆಯಿತು. ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಚಾಲಕ ಅಕ್ಬರ್ ಖಾನನನ್ನು ಹಿಗ್ಗಾಮುಗ್ಗಾ ಥಳಿಸಿ ಕಾರನ್ನು ಜಖಂಗೊಳಿಸಿದರು.

2008: ಒರಿಸ್ಸಾದಲ್ಲಿ ಬಿಸಿಲ ಧಗೆ ಅಸಹನೀಯವಾಗಿ, ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ಸಿಗೆ ಏರಿತು. ಬಿಸಿಲ ಝಳಕ್ಕೆ ಇಬ್ಬರು ಸಾವನ್ನಪ್ಪಿದರು. ಇದರೊಂದಿಗೆ ಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿತು.

2008: ಹಿಮಾಲಯದ ತಪ್ಪಲಿನ `ತಂಪು' ಊರೆಂದೇ ಹೆಸರಾಗಿರುವ ಶಿಮ್ಲಾದಲ್ಲಿ ಉಷ್ಣಾಂಶ 28.7 ಸೆಲ್ಸಿಯಸ್ಸಿಗೆ ಏರಿತು. ಈ ಋತುವಿನಲ್ಲಿ ಇಲ್ಲಿ ಕಂಡು ಬಂದ ಅತ್ಯಧಿಕ ಉಷ್ಣಾಂಶ ಇದು.

2008: ಬೆಂಗಳೂರಿನ ಎಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೆಕೊಳಲಿನ ಮಂಜುನಾಥ ಲೇಔಟ್ ಸಮೀಪ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಆರೆಸ್ಸೆಸ್ ಕಾರ್ಯಕರ್ತರು ಮಾಂಸದ ಮಳಿಗೆಯೊಂದಕ್ಕೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. ನಂತರ ಸ್ಥಳಕ್ಕೆ ಬಂದ ಪೊಲೀಸರು ಪರವಾನಗಿ ಇಲ್ಲದೆ ಮಾಂಸದ ಅಂಗಡಿ ನಡೆಸುತ್ತಿದ್ದ ವೈಟ್ ಫೀಲ್ಡಿನ ನಾಲ್ವರನ್ನು ಬಂಧಿಸಿದರು.

2008: ಬ್ರಿಟನ್ನಿನಲ್ಲಿ ರೆಸ್ಟೋರೆಂಟ್ ಒಂದರ ಮಾಲೀಕರಾದ ಭಾರತೀಯ ಮೂಲದ ರಾಜ್ ರಾಣಾ ಅವರಿಗೆ ಲಂಡನ್ನಿನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆಯುವ ಸತ್ಕಾರಕೂಟಕ್ಕೆ ಇಂಗ್ಲೆಂಡಿನ ರಾಣಿ ಆಹ್ವಾನಿಸಿದರು. `ಇತಿಹಾಸ್' ಎಂಬ ರೆಸ್ಟೋರೆಂಟಿನ ಮಾಲೀಕ ರಾಣಾ ಅವರು ಸಮಕಾಲೀನ ಬ್ರಿಟನ್-ಭಾರತೀಯ ರೆಸ್ಟೋರೆಂಟ್ ಉದ್ಯಮಕ್ಕೆ 3.2 ಬಿಲಿಯನ್ ಪೌಂಡ್ ಹಣವನ್ನು ದೇಣಿಗೆ ನೀಡಿದ್ದರು. ಅವರ `ಇತಿಹಾಸ್' ರೆಸ್ಟೋರೆಂಟ್ ಬ್ರಿಟನ್ನಿನ ಉತ್ತಮ ರೆಸ್ಟೋರೆಂಟಿಗಾಗಿ ನೀಡಲಾಗುವ 2007-08ರ ಸಾಲಿನ `ಕೊಬ್ರಾ ಗುಡ್ ಕರ್ರಿ ಪ್ರಶಸ್ತಿ'ಯನ್ನೂ ಗೆದ್ದುಕೊಂಡಿತ್ತು. ಈ ಅವಿಸ್ಮರಣೀಯ ಘಟನೆಯನ್ನು ನೆನಪಿಟ್ಟುಕೊಳ್ಳಲು ರಾಣಾ ಒಡೆತನದ `ಇತಿಹಾಸ್' ಅಂದು `ಕುಂಭ್ ಮಲಾಯಿ' ಎಂಬ ವಿಶೇಷ ಖಾದ್ಯ ತಯಾರಿಸುವುದಾಗಿ ಪ್ರಕಟಿಸಿತು.

2008: ಪೂರ್ವ ಜರ್ಮನಿಯ ಅತಿ ಭಯಾನಕ ಸ್ಟಾಸಿ ಪೊಲೀಸ್ ಗುಪ್ತ ದಳದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವುದು ನೋವಿನ ವಿಚಾರವಾದರೂ 9 ಮಂದಿ ತಜ್ಞರು ಎರಡು ದಶಕಗಳ ಕಾಲ ಅತ್ಯಂತ ಶ್ರಮಪಟ್ಟು ಲಕ್ಷಾಂತರ ಕಾಗದದ ತುಂಡುಗಳನ್ನು ಜೋಡಿಸಿ ಮಾಹಿತಿ ಸಂಗ್ರಹಿಸಿದರು. 1989ರಲ್ಲಿ ಬರ್ಲಿನ್ ಗೋಡೆ ಉರುಳಿತು. ನಂತರವೂ ಕಮ್ಯೂನಿಸ್ಟ್ ಸರ್ಕಾರ ನಡೆಸಿದ ದೌರ್ಜನ್ಯ ಜನರ ಎದೆ ನಡುಗಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಟಾಸಿ ಪೊಲೀಸ್ ಗುಪ್ತ ದಳದ ಸಿಬ್ಬಂದಿ ಗೌಪ್ಯ ಕಡತಗಳನ್ನು ನಾಶಪಡಿಸಲು ಆರಂಭಿಸಿದರು. ಆದರೆ ನಾಗರಿಕರ ಸಮಿತಿ ಸದಸ್ಯರು ಈ ಪೊಲೀಸ್ ಕಚೇರಿಗೆ ನುಗ್ಗಿ ಎಲ್ಲ ಕಡತಗಳು ನಾಶವಾಗದಂತೆ ನೋಡಿಕೊಂಡರು. ಹರಿದು ಚೂರು ಮಾಡಲಾಗಿದ್ದ ಕಾಗದಗಳ ತುಣುಕಿನ 15,500 ಚೀಲಗಳನ್ನು ವಶಪಡಿಸಿಕೊಂಡಿದ್ದರು. 1995ರಿಂದ ಬವೇರಿಯಾದ ನ್ಯೂರೆಂಬರ್ಗಿನಲ್ಲಿ ತಜ್ಞರು ಹರಿದ ಕಾಗದದ ಚೂರುಗಳನ್ನು ಸರಿಯಾಗಿ ಜೋಡಿಸಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಮಗ್ನರಾದರು.

2007: ಮಂಡ್ಯ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ ಅವರ `ತತ್ರಾಣಿ' ಕವನ ಸಂಕಲನಕ್ಕೆ 2007ರ ಸಾಲಿನ ಕಡೆಂಗೋಡ್ಲು ಸ್ಮಾರಕ ಪ್ರಶಸ್ತಿ ಲಭಿಸಿತು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರತಿವರ್ಷ ಒಬ್ಬ ಕವಿಗೆ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತದೆ.

2007: ಅಮೆರಿಕದ `ಟೈಮ್' ನಿಯತಕಾಲಿಕವು ಪ್ರಕಟಿಸಿದ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಭಾರತೀಯರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಹಾಗೂ ಪೆಪ್ಸಿ ಕಂಪೆನಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಸೇರ್ಪಡೆಯಾದರು. ಪಟ್ಟಿಯಲ್ಲಿ ಅಲ್ ಖೈದಾ ನಾಯಕ ಬಿನ್ ಲಾಡೆನ್ ಹೆಸರಿದ್ದು, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರನ್ನು ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೈಬಿಡಲಾಯಿತು.

2007: ಗೋಕಾಕ ನಗರ ಹೊರವಲಯದ ರಿದ್ದಿ-ಸಿದ್ದಿ ಕಾರ್ಖಾನೆಯಲ್ಲಿ ರಾತ್ರಿ ಬಾಯ್ಲರ್ ಸ್ಫೋಟಿಸಿದ ಪರಿಣಾಮವಾಗಿ ಇಬ್ಬರು ಮೃತರಾಗಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ವಿರೋಧಿಸಿ 89 ದಿನಗಳಿಂದ ನಡೆಸುತ್ತಿದ್ದ ಚಳವಳಿಯನ್ನು ಸ್ಥಗಿತಗೊಳಿಸಲು ಮಂಡ್ಯ ಜಿಲ್ಲೆ ರೈತರು ತೀರ್ಮಾನಿಸಿದರು. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ವಿರೋಧಿಸಿ ಕರ್ನಾಟಕದ ವಿವಿಧ ಕನ್ನಡಪರ ಸಂಘಟನೆಗಳು ನವದೆಹಲಿಯ ಜಂತರ್- ಮಂತರ್ ಎದುರು ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದವು.

2007: ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯ ಅಭಿವೃದ್ಧಿ ಸಲುವಾಗಿ ಬೆಂಗಳೂರು ಮಹಾನಗರಾಭಿವೃದ್ಧಿ ಪ್ರಾಧಿಕಾರವು `ಮಾಸ್ಟರ್ ಪ್ಲಾನ್' ಸಿದ್ಧಪಡಿಸಿತು.

2007: ಭೂಮಿಯ ತಾಪ ಏರಿಕೆ ಹಾಗೂ ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಒಮ್ಮತದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಬ್ಯಾಂಕಾಕಿನಲ್ಲಿ ನಡೆದ ವಿಶ್ವಸಂಸ್ಥೆ ಸಮ್ಮೇಳನ ನಿರ್ಧರಿಸಿತು. ವಿಶ್ವಸಂಸ್ಥೆಯು ಮುಂದಿಟ್ಟ ವರದಿಯನ್ನು 120ಕ್ಕೂ ಹೆಚ್ಚು ರಾಷ್ಟ್ರಗಳ 2000ಕ್ಕೂ ಹೆಚ್ಚು ಮಂದಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಒಪ್ಪಿಕೊಂಡರು.

2006: ದೇಶದ ಭರವಸೆಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ, ಬಿಜೆಪಿಯ ಸಂಘಟನಾ ಚತುರ ಮತ್ತು ಕಾರ್ಯತಂತ್ರ ನಿಪುಣ ಪ್ರಮೋದ ಮಹಾಜನ್ (56) ಅವರ ಅಂತ್ಯಕ್ರಿಯೆ ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

2006: ಮಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಕಸ್ಟಮ್ಸ್ ಇಲಾಖೆ ಅನುಮತಿ ನೀಡಿತು. ಇದರೊಂದಿಗೆ ಮಂಗಳೂರು ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು ಎಂಬ ಬಹುಕಾಲದ ಕನಸು ನನಸಾಗುವ ಕಾಲ ಸನ್ನಿಹಿತವಾಯಿತು.

2006: ಅಮೆರಿಕದಲ್ಲಿ 3000ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ 2001 ಸೆಪ್ಟೆಂಬರ 11ರ ಭಯೋತ್ಪಾದನಾ ದಾಳಿಯ ಸಂಚುಕೋರ ಮೊರಾಕ್ಕೋ ಮೂಲದ ಅಲ್ ಖೈದಾ ಸಂಘಟನೆಗೆ ಸೇರಿದ ಝಕ್ರಿಯಾಸ್ ಮೌಸಾವಿಗೆ ಮರಣದಂಡನೆಯ ಬದಲು ಜೀವಾವಧಿ ಶಿಕ್ಷೆ ವಿಧಿಸಲು ಅಮೆರಿಕ ನ್ಯಾಯಮೂರ್ತಿಗಳ ಪೀಠ ನಿರ್ಧರಿಸಿತು.

2006: ಸಾನ್ ಸಾಲ್ವಡೋರಿನ ಹಣ್ಣು ಹಣ್ಣು ಮುದುಕಿ ಕ್ರೂಜ್ ಹೆರ್ನಾಂಡೆಸ್ ರಿವಾಸ್ ತನ್ನ 128ನೇ ಜನ್ಮದಿನವನ್ನು ಆಚರಿಸಿದರು. 1878ರಲ್ಲಿ ಜನಿಸಿದ ಈಕೆಗೆ 13 ಮಕ್ಕಳು, 60 ಮೊಮ್ಮಕ್ಕಳು. ಮಕ್ಕಳ ಪೈಕಿ ಬದುಕಿ ಉಳಿದವರು ಐವರು ಮಾತ್ರ.

2006: ಭಾರತದ ಗಗನಯಾನಿ ಕಲ್ಪನಾ ಚಾವ್ಲಾ ಅವರು ಗಗನಯಾನ ದುರಂತದಲ್ಲಿ ಮಡಿದ ಮೂರು ವರ್ಷಗಳ ಬಳಿಕ, ಭಾರತೀಯ ಮೂಲದ ಇನ್ನೊಬ್ಬ ಅಮೆರಿಕನ್ ಮಹಿಳಾ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಫ್ಲೈಟ್ ಎಂಜಿನಿಯರ್ ಆಗಿ ತನ್ನ ಚೊಚ್ಚಲ ಪಯಣ ಮಾಡುವರು ಎಂದು ನಾಸಾ ಪ್ರಕಟಿಸಿತು.

2006: ಆದಾಯ ಮೂಲ ಮೀರಿದ ಆಸ್ತಿ, ಪಾಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಹಾಗೂ ಸಂಸತ್ ಸದಸ್ಯರಾಗಿರುವ ಅವರ ಪುತ್ರ ಅಜಯ್ ಚೌಟಾಲಾ ಅವರಿಗೆ ಸೇರಿದ 6 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 24 ನಿವಾಸಗಳು ಹಾಗೂ ಇತರ ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ಚೌಟಾಲಾ ಮತ್ತು ಅವರ ಕುಟುಂಬಕ್ಕೆ ಸೇರಿದ 1467 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿದ್ದು, ಆದಾಯ ಮೂಲ ಮೀರಿದ ಆಸ್ತಿಪಾಸ್ತಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಪತ್ತೆಯಾದವು. ದೆಹಲಿ, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಉತ್ತರಾಂಚಲ ಹಾಗೂ ಚಂಡೀಗಢದಲ್ಲಿರುವ ಚೌತಾಲಾ ಅವರ ನಿವಾಸ ಹಾಗೂ ತೋಟದ ಮನೆಗಳ ಮೇಲೆ ದಾಳಿ ನಡೆಯಿತು. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅವ್ಯವಹಾರದ ಕುರಿತು ತನಿಖೆ ನಡೆಸುವ ಸಂದರ್ಭದಲ್ಲಿ ಸಿಬಿಐಗೆ ಅಕ್ರಮ ಆಸ್ತಿ ಕುರಿತು ಮಾಹಿತಿ ದೊರಕಿತ್ತು.

2006: ವೋಲ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ 1.50 ಕೋಟಿ ರೂಪಾಯಿ ಲಂಚವನ್ನು ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ಅವರ ಪುತ್ರ ಜಗತ್ ಸಿಂಗ್ ಅವರಿಗೆ ಪಾವತಿ ಮಾಡಲಾಗಿದೆ ಎಂಬುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎನ್ ಡಿಟಿವಿ ವರದಿ ಮಾಡಿತು.

1935: ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ಡಾ. ಸುಮತೀಂದ್ರ ನಾಡಿಗ್ ಅವರು ರಾಘವೇಂದ್ರರಾವ್- ಸುಬ್ಬಮ್ಮ ದಂಪತಿಯ ಮಗನಾಗಿ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಈದಿನ ಜನಿಸಿದರು.

1913: ಭಾರತದ ಮೊತ್ತ ಮೊದಲ ಸಂಪೂರ್ಣ ದೇಸೀ ಚಲನಚಿತ್ರ `ರಾಜಾ ಹರಿಶ್ಚಂದ್ರ' ಮುಂಬೈಯ ಕೊರೊನೇಷನ್ ಸಿನಿಮಾದಲ್ಲಿ ಬಿಡುಗಡೆಯಾಯಿತು. ಭಾರತೀಯ ಚಿತ್ರೋದ್ಯಮದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರು ಈ ಚಿತ್ರವನ್ನು ನಿರ್ಮಿಸಿದವರು.

1854: ಭಾರತದ ಮೊತ್ತ ಮೊದಲ ಅಂಚೆಚೀಟಿಯನ್ನು ಕಲಕತ್ತಾದಲ್ಲಿ (ಇಂದಿನ ಕೊಲ್ಕತ) ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಅರ್ಧ `ಆಣೆ' ಬೆಲೆಯ ಈ ಅಂಚೆಚೀಟಿಯಲ್ಲಿ ರಾಣಿ ವಿಕ್ಟೋರಿಯಾ ಚಿತ್ರವನ್ನು ಮುದ್ರಿಸಲಾಗಿತ್ತು.

1799: ಮೈಸೂರಿನ ದೊರೆ ಟಿಪ್ಪುಸುಲ್ತಾನ್ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ಜೊತೆಗೆ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಅಸುನೀಗಿದರು. ಈ ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ನೇತೃತ್ವವನ್ನು ಲಾರ್ಡ್ ಮೋರಿಂಗ್ಟನ್ ವಹಿಸಿದ್ದ.

1555: ಕಾಲಜ್ಞಾನಿ ನಾಸ್ಟ್ರಡಾಮಸ್ ತನ್ನ `ಸೆಂಚುರೀಸ್' ಕೃತಿಯನ್ನು ಪ್ರಕಟಿಸಿದ. ಈ ಕೃತಿ 350 ಚೌಪದಿಗಳನ್ನು ಒಳಗೊಂಡಿದ್ದು ವಿಶ್ವ ವಿಖ್ಯಾತಿ ಪಡೆದಿದೆ. ಈ ಗ್ರಂಥದ ಎರಡನೇ ಆವೃತ್ತಿಯನ್ನು ನಾಸ್ಟ್ರಡಾಮಸ್ ಎರಡನೇ ಹೆನ್ರಿಗೆ ಅರ್ಪಿಸಿದ. ಹೆನ್ರಿಯ ಸಾವಿನ ಬಗ್ಗೆ ಈ ಪುಸ್ತಕದಲ್ಲಿ ಆತ ಸ್ಪಷ್ಟವಾಗಿ ಭವಿಷ್ಯ ನುಡಿದಿದ್ದ.

1494: ಕ್ರಿಸ್ಟೋಫರ್ ಕೊಲಂಬಸ್ ಜಮೈಕಾ ದ್ವೀಪವನ್ನು ಪತ್ತೆಹಚ್ಚಿದ.

No comments:

Post a Comment